ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಾಯಾ ಮೋಹದ ಬೆನ್ನೇರಿ “
ಲೇಖಕರು: ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ.
ಮೊಬೈಲ್: 91483 47205
ಪ್ರಕಾಶಕರು: ಸೋನಲ್ ಪಬ್ಲಿಕೇಶನ್ಸ್. ಮಂಡ್ಯ.
ಬೆಲೆ: 150 ರೂ. ಗಳು.

” ನೀ..ಮಾಯೆಯೊಳಗೋ, ಮಾಯೆ ನಿನ್ನೊಳಗೋ ” ಎಂಬ ತಾತ್ವಿಕ ಸಾಹಿತ್ಯದ ಕನಕದಾಸರ ತತ್ವಪದ ಪುಂಜದ ಅರ್ಥವನ್ನು ಹುಡುಕುತ್ತಾ ಹೊರಟಾಗ ಆಸೆ , ಪ್ರೀತಿ , ಬಯಕೆಗಳು, ಮನದ ಕಾಮನೆಗಳು ಮನುಜನನ್ನು ಆವರಿಸಿ ಜೀವನದ ಯಾತ್ರೆ ಸಾಗಿಸಲು ಅವುಗಳು ಸ್ಪೂರ್ತಿ ಸೆಲೆಯ ಹುಟ್ಟುಗೋಲಾಗಿವೆ.  ರವಿ ಕಾಣದನ್ನು , ಕವಿ ಕಂಡ. ಎಂಬ ಲೋಕೋಕ್ತಿಯಂತೆ ಈ ಸುಂದರ ಸಾಹಿತ್ಯವು ಸಂಪ್ರದಾಯಿತ್ವ , ಸಾಂಸ್ಕೃತಿಕ ಲೋಕದ ಓರೆ ಕೋರೆಗಳನ್ನು ತಿದ್ದಿ-ತೀಡಿ ಸಮಾಜದಲ್ಲಿ ಇರುವ ಮೌಢ್ಯವನ್ನು ತೊಲಗಿಸಿ , ಸಹಬಾಳ್ವೆ ಸಹೋದರತ್ವ ಸೌಹಾರ್ದತೆಯನ್ನು ಮೂಡಿಸಿ ಸಾಮಾಜಿಕ ವ್ಯವಸ್ಥೆಯನ್ನು ಸುಂದರಗೊಳಿಸುವ ಅದ್ಭುತ ಶಕ್ತಿ ಕಲೆಯಂದ್ರೆ ಬರೆವಣಿಗೆ ಕಲೆ. ಬಂದೂಕಿಗಿಂತ ಬರಹದ ಸಾಧನವಾದ ಲೇಖನಿ ಅಥವಾ ಪೆನ್ನಿನ ಶಕ್ತಿ , ಮೇಲಾಗಿದೆ ಎಂಬುದು ಎಲ್ಲರೂ ತಿಳಿದ ವಿಷಯವಾಗಿದೆ.

ಸಾಹಿತ್ಯದ ವಿವಿಧ ಮಜಲುಗಳು,ಮುಖಗಳಲ್ಲಿ ಕಾವ್ಯ ಪ್ರಕಾರಕ್ಕೆ ಅನುಪಮವಾದ ಸ್ಥಾನವಿದೆ. ಇಂತಹ ಕಾವ್ಯ ಪ್ರಕಾರದ ಹೃದಯಗೀತೆ ಎಂದರೆ ಅದು ಗಜಲ್ ಸಾಹಿತ್ಯ.  ಈ ಗಜಲ್ ಇಂದಿನ ಸಾಹಿತ್ಯ ಲೋಕದಲ್ಲಿ ಒಂದು ಹೊಸ ಅಲೆಯ ಟ್ರೆಂಡ್ ಆಗಿ ಹೊರಹೊಮ್ಮುತ್ತಿದೆ.

ಗಜಲ್  ಕಾವ್ಯ ಪ್ರಕಾರವು ಮೂಲದಲ್ಲಿ ಉರ್ದು , ಪಾರ್ಸಿ , ಅಥವಾ ಅರೇಬಿಕ್ ಭಾಷೆಯ ಪ್ರಕಾರದಾಗಿದೆ. ಗಜಲನ್ನು ಕನ್ನಡದಲ್ಲಿ ಮೊಟ್ಟಮೊದಲು ರಚಿಸಿದ ಜನಪ್ರಿಯಗೊಳಿಸಿದ ಕೀರ್ತಿ ಹಿರಿಯ ಕವಿಗಳಾದ ಶ್ರೀಯುತ ಶಾಂತ ಅರಸ್ ಅವರಿಗೆ ಸಲ್ಲುತ್ತದೆ. ಗಜಲ್ ಕಾವ್ಯ ಪ್ರಕಾರವು ಹಾಡಿನ ರೂಪದ್ದಾಗಿದ್ದು. ಅರಬಿಕ್ ಭಾಷೆಯಲ್ಲಿ ಗಜಲ್ ಎಂದರೆ ಎರಡು ಅರ್ಥ , ಒಂದು ದಾರವನ್ನು ಅಥವಾ ವಸ್ತ್ರವನ್ನು ತಿರುಗಿಸುವ ಬೌದ್ಧಿಕ ಕ್ರಿಯೆಯನ್ನು ಉಲ್ಲೇಖಿಸುತ್ತದೆ. ಇನ್ನೊಂದು ಅರ್ಥದಲ್ಲಿ ಸಂಭಾಷಣೆಯ ಹೆಚ್ಚು ಅಮೂರ್ತ ಪರಿಕಲ್ಪನೆಯನ್ನು ಸೂಚಿಸುತ್ತದೆ. ಈ ಗಜಲ್ ಸಾಹಿತ್ಯವು ವಿಭಿನ್ನ ಭಾವಗಳಾದ ಪ್ರೀತಿ ಪ್ರೇಮ ಪ್ರಣಯ ವಿರಹ ವೇದನೆ ನಂಬಿಕೆ ದ್ರೋಹ ವ್ಯಂಗ್ಯ ವಿಡಂಬನೆ ಸರಸ ಸಲ್ಲಾಪ ಮೋಸ ಹಾಗೂ ಸಾಮಾಜಿಕ ಕಳಕಳಿಯ ಭಾವಗಳನ್ನು ಅಭಿವ್ಯಕ್ತಿಸುವ ಕಾವ್ಯ ಪ್ರಕಾರವಾಗಿದೆ.

ಗಜಲ್ ಕಾವ್ಯವು ತನ್ನದೇ ಆದ ಕೆಲವು ನಿಯಮಗಳನ್ನು ಗುಣಲಕ್ಷಣಗಳನ್ನು ಹೊಂದಿದ್ದು ಅದರ ಚೌಕಟ್ಟಿನಲ್ಲಿಯೇ ಈ ಕಾವ್ಯವನ್ನು ರಚಿಸ ಬೇಕಾಗಿರುತ್ತದೆ. ಈ ಗಜಲ್ ಕಾವ್ಯ ಪ್ರಕಾರ 5 ಅಥವಾ 7 ಶೇರುಗಳನ್ನು ಹೊಂದಿರುತ್ತದೆ. ಶೇರ್ ಎಂದರೆ ಇಲ್ಲಿ ಪದ್ಯದ ಜೋಡಿ ವಾಕ್ಯಗಳು ಅಥವಾದ್ವಿಪದಿಗಳು. ಅದರ ಜೊತೆಗೆ ಈ ಕಾವ್ಯವು ಮತ್ಲಾ ಕಾಫಿಯಾ ರದೀಪ್  ರವಿ ಮಕ್ತಾ , ತಖಲ್ಲುಸನಾಮ ಹೀಗೆ ವಿವಿಧ ಗುಣಲಕ್ಷಣಗಳ ನಿಯಮಗಳನ್ನು ಹೊಂದಿರುತ್ತದೆ . ಅದರ ಪ್ರಕಾರವೇ ಗಜಲ್ ಅನ್ನು ರಚಿಸಿದಾಗ ಮಾತ್ರ ಆ ಗಜಲ್ ಗೇಯಮಯವಾಗಿ ಅಥವಾ ಗಮಕ ಯೋಗ್ಯವಾಗಿ ಹೊರಹೊಮ್ಮುತ್ತದೆ. ಗಜಲ್ ರಚನೆ ಎಂದರೆ  ಅಷ್ಟು ಸುಲಭದ ಮಾತಲ್ಲ. ಅದು ಶಿಸ್ತುಬದ್ಧ ನಿಯಮಗಳ ಚೌಕಟ್ಟಿನ ಒಳಗೆ , ಅದರ ವ್ಯಾಪ್ತಿಯೊಳಗೆ ಕ್ರಮಬದ್ಧವಾಗಿ ರಚಿಸಬಹುದಾದ ಸಾಹಿತ್ಯ ಪ್ರಕಾರವಾಗಿದೆ. ಇಂತಹ ಗಜಲ್ ಸಾಹಿತ್ಯಕ್ಕೆ “ಮಾಯ ಮೋಹದ ಬೆನ್ನೇರಿ” ಎಂಬ ಗಜಲ್ ಕೃತಿಯನ್ನು ರಚಿಸಿ ಓದುಗರ ಮಡಿಲಿಗೆ ಹಾಕಲು ಮುಂದಾಗಿರುವ ಮತ್ತು ಗಜಲ್ ಸಾಹಿತ್ಯ ಲೋಕಕ್ಕೆ ಪಾದರ್ಪಣೆ ಮಾಡಲಿರುವ ಕೊಪ್ಪಳದ ಹಿರಿಯಣ್ಣ , ಆತ್ಮೀಯರೂ ಮತ್ತು ಸಹೋದರರಾದ ಶ್ರೀಯುತ ಯಲ್ಲಪ್ಪ ಮಲ್ಲಪ್ಪ ಹರನಾಳಗಿಯವರು. ಯಮಹಾ ಎಂಬ ಕಾವ್ಯನಾಮದಿಂದ ನಾಡಿನಾದ್ಯಂತ ಈಗಾಗಲೇ ಚಿರಪರಿಚಿತರಾಗಿದ್ದಾರೆ. “ಮಾಯಾ ಮೋಹದ ಬೆನ್ನೇರಿ ” ಎಂಬ ಗಜಲ್ ಕೃತಿಯು ಇದೇ ತಿಂಗಳಲ್ಲಿ ಜುಲೈ 27ನೇ ತಾರೀಕಿನಂದು ಲೋಕಾರ್ಪಣೆಗೊಳಲಿದೆ. ಈ ಸುಂದರ ಗಜಲ್ ಸಂಕಲನಕ್ಕೆ ಜಬಿವುಲ್ಲ ಅಸದ್ ಅವರ ಆಕರ್ಷಕ ಮುಖಪುಟವಿದೆ ಹಾಗೆ ಈ ಕೃತಿಗೆ ಡಾ:ಮಲ್ಲಿನಾಥ್ ತಳವಾರ್ ಅವರ ಮುನ್ನುಡಿ ಇದೆ. ಅದರ ಜೊತೆಜೊತೆಗೆ ಸವದತ್ತಿಯ ಪ್ರಸಿದ್ಧ ಕವಿಗಳು ಮತ್ತು ವಿಮರ್ಶಕರು ಆದ ಶ್ರೀಯುತ ನಾಗೇಶ್. ಜೆ. ನಾಯಕ್ ಅವರು ಬೆನ್ನುಡಿ ಬರೆದು ಬೆನ್ನುತಟ್ಟುತ್ತಾ ಪ್ರೋತ್ಸಾಹಿಸಿದ್ದಾರೆ.

   ಈ ಸುಂದರ ಗಜಲ್ ಕೃತಿಯಲ್ಲಿ ಒಟ್ಟಾರೆ 108 ಗಜಲ್ ಪದ್ಯಗಳಿವೆ . ಪ್ರತಿಯೊಂದು ಗಜಲ್ ಗಳು ವಿಭಿನ್ನವಾದ ವೈವಿಧ್ಯಮಯವಾದ ಭಾವಗಳನ್ನು ಒಳಗೊಂಡಿವೆ . ಪ್ರತಿಯೊಂದು ಗಜಲನ್ನು ಓದುತ್ತಾ ಹೋದಾಗೆಲ್ಲ ಓದುಗರ ಮನಸ್ಸು ಭಾವನಾಲೋಕದಲ್ಲಿ ತೇಲುತ್ತಾ ಮನಸೂರೆಗೊಳ್ಳುತ್ತದೆ. ಯಲ್ಲಪ್ಪ ಹರ್ನಾಳಗಿ ಅವರು ಅತ್ಯಂತ ಸತ್ವಯುತವಾದ ಗಜಲ್ ಗಳನ್ನು ರಚಿಸುವಲ್ಲಿ ಪ್ರವೀಣರು ಮತ್ತು ಅವರ ಸಾಹಿತ್ಯ ಪ್ರೌಢಿಮೆಗೆ ಈ ಗಜಲ್ ಕೃತಿ ಸಾಕ್ಷಿಯಾಗಿರುತ್ತದೆ

ಮನದ ದೇವರಿಗೂ ಧಿಕ್ಕಾರ ಹಾಕಿದ್ದೇನೆ ನೀನು ಹೋದ ಮೇಲೆ
ಎಂದೆನಂತೆ ಬೇಡುವುದನ್ನು ಬಿಟ್ಟಿದ್ದೇನೆ ನೀನು ಹೋದ ಮೇಲೆ |
|

ಇಲ್ಲಿ ಕವಿಗಳು ತಾವು ಪ್ರೀತಿಸಿದ ಹೃದಯ ಅಥವಾ ಜೀವವು ತಮ್ಮಿಂದ ದೂರವಾದ ಮೇಲೆ ಸರ್ವವನ್ನು ಧಿಕ್ಕರಿಸುತ್ತಾ ಸರ್ವವನ್ನು ತ್ಯಾಗ ಮಾಡುತ್ತಾ , ಕಳೆದು ಹೋದ ಪ್ರೀತಿಯನ್ನು ನೆನೆ ನೆನೆದು ಅದರ ವೇದನೆಯನ್ನು ಪರಿಪರಿಯಾಗಿ ಅಭಿವ್ಯಕ್ತಿಸಿದ್ದಾರೆ. ಮತ್ತೆ ಮುಂದುವರೆದು ಕವಿಗಳು

ನನ್ನೆದೆಯ ನೋವಿಗೆ ಮುಲಾಮು ಹಚ್ಚಿದ್ದು ನೀನೆ ನನ್ನೊಳಗಿನ ಭಾವಗಳಿಗೆ ಬಣ್ಣ ಬಳದದ್ದು ನೀನೆ ||

ಈ ಒಂದು ಗಜಲಿನಲ್ಲಿ ಕವಿಗಳು ತಮ್ಮ ಒಡಲಾಳದ ನೋವಿಗೆ ಆರದ ಗಾಯಕ್ಕೆ ಚಿಕಿತ್ಸೆ , ಔಷಧಿ ನೀಡಿದವರು ತಾವು ಬಯಸಿದ ಪ್ರೇಯಸಿ , ಮನದೊಡತಿಯಾದ ಸಂಗಾತಿ ಎಂಬುದನ್ನು ವಿಧವಿಧವಾಗಿ ಬಣ್ಣಿಸಿದ್ದಾರೆ. ಹೌದು ಮನದ ನೋವಿಗೆ ಪ್ರೀತಿಯೇ ದಿವ್ಯ ಔಷದ , ಸಂಜೀವಿನಿ ಎಂಬುದನ್ನು ನಾವೆಲ್ಲರೂ ಇಲ್ಲಿ ಸ್ಮರಿಸಬಹುದು.

ಉಸಿರು ಕೊಡುವೆ ಹೆಸರು ಹೇಳಲಾರೆ ಕಡಿಯದಿರು
ನೆರಳು ಕೊಡುವೆ ಬಿಂಕ ತೋರಲಾರೆ ಕಡೆಯದಿರು ||

ಈ ಗಜಲಿನಲ್ಲಿ ಕವಿಗಳು ಮರಗಳ ಮೇಲಿನ ಪ್ರೀತಿ ಪರಿಸರದ ಬಗ್ಗೆ ಇರುವ ಕಾಳಜಿ ವ್ಯಕ್ತಪಡಿಸುತ್ತ ಇಲ್ಲಿ ಗಿಡಮರಗಳು ತಮ್ಮ ಉಪಕಾರವನ್ನು ಮನುಜನಿಗೆ ತಿಳಿಸುತ್ತಾ ತಮ್ಮ ಜೀವದ  ಉಳುವಿಗಾಗಿ ಕೋರಿಕೆಯನ್ನು ಮಾಡಿಕೊಳ್ಳುತ್ತವೆ ಇಲ್ಲಿನ ಪದ ಬಳಕೆ ಮತ್ತು ಉಪಮಾನಗಳು, ಉಪಮೇಯಗಳು ಉಲ್ಲೇಖಾರ್ಹವಾಗಿವೆ.

ಉಡಲು ಬಟ್ಟೆ ಇಲ್ಲದೆ ಬದುಕುವ ಜೀವಗಳು ನಲಗುತ್ತಿವೆ ಇಲ್ಲಿ
ಬೆತ್ತಲಾದ ದೇವರಿಗೆ ರೇಷ್ಮೆಯನ್ನು ತೊಡೆಸುತ್ತಿದ್ದಾರೆ ಇವರು ||

ಮುಖಕ್ಕಿಂತ ಮುಖವಾಡ ಹೆಚ್ಚು ಹೊಳೆಯುತ್ತಿದೆ ಇಲ್ಲಿ, ಸುಳ್ಳಿನ ಪರದೆ ಮುಂದೆ ಸತ್ಯ ನಿತ್ಯ ಕೊಳೆಯುತ್ತಿದೆ ಇಲ್ಲಿ ||

ಈ ಮೇಲಿನ ಗಜಲ್ ಗಳ ಶೇರ್ ಗಳು ಮಾನವನ ನಿತ್ಯ ಬದುಕಿನ ವಾಸ್ತವಿಕ ಜೀವನದ ವಿಡಂಬನೆ ಮಾಡಿ ಸಮಾಜದ ರೀತಿ ರಿವಾಜುಗಳನ್ನು ಆಚಾರ ವಿಚಾರಗಳನ್ನು ಸೌಮ್ಯವಾಗಿ ಪ್ರತಿಭಟಿಸುವಂತೆ ತೋರುತ್ತಿವೆ. ಕವಿಗಳ ಈ  ಶೇರ್ ಗಳ ಬಳಕೆ ಮತ್ತು ಜಾಣ್ಮೆಯನ್ನು ಮೆಚ್ಚಲೇಬೇಕು.

ನೀ ಬರೆದ ಪ್ರೀತಿ ನಾಟಕ ಬಹಳ ಪ್ರದರ್ಶನ ಕಂಡಿದೆ ನೀ ಕೊಟ್ಟ ಪಾತ್ರ ಮಾಡಿ ದುಃಖಾಂತ್ಯದಲ್ಲಿ ನರಳುತ್ತಿರುವೆ ||

ಈ ಗಜಲ್ ನಲ್ಲಿ ಕವಿಗಳು ಪ್ರೀತಿ ಎಂಬುದು ಒಂದು ಪವಿತ್ರವಾದ ಭಾವನೆ . ಅದೊಂದು ಪವಿತ್ರ ಮತ್ತು ಪೂಜ್ಯನೀಯ ಬಂಧನ. ನಂಬಿಕೆಗೆ ಮತ್ತೊಂದು ಹೆಸರೇ ಪ್ರೀತಿ. ಆ ಪ್ರೀತಿಯು ತಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಮೋಸದ ಬಲೆಯಲ್ಲಿ ತಮ್ಮನ್ನು ಮುಳುಗಿಸಿ ಅಸಹನೀಯವಾದ ಪರಿಣಾಮಗಳನ್ನು ಉಂಟು ಮಾಡಿದ ಬಗೆಯನ್ನು ತುಂಬಾ ಚೆನ್ನಾಗಿ ಬಣ್ಣಿಸಿದ್ದಾರೆ.

ಭಾವನೆಗಳಿಗೆ ಬೆಂಕಿ ಹಚ್ಚಿ ನಗುವವರೇ ಹೆಚ್ಚು
ಗಾಳಿ ಬಂದತ್ತ ತೂರಿ ಕೊಳ್ಳುವವರೇ ಹೆಚ್ಚು ||

ದಿಂಬಿನ ಒಳಗೆ ನಲುಗಿ ಹೋದ ನೋವುಗಳು ಎಷ್ಟೋ
ಎದೆಯೊಳಗೆ ಕಮರಿ ಹೋದ ಕನಸುಗಳು ಎಷ್ಟೋ||

ಒಲಿದು ಬಂದ ಜೀವಕೆಂದು ಮೋಸ ಮಾಡಬಾರದು ಸಾಕಿ
ಕನಸು ಕೊಂದ ಮೇಲೆ ಮತ್ತೆ ಮತ್ತೆ ಕನಸು ಕಾಣಬಾರದು ಸಾಕಿ ||

ಹೀಗೆ ಕವಿಗಳು ರಚಿಸಿದ ಈ ಮೇಲಿನ  ಗಜಲ್ ಗಳು  ಸಮಾಜದಲ್ಲಿ ಪ್ರೀತಿ ಎಂಬ ಮಾಯೆಯ ಬಲೆಯೊಳಗೆ ಮುಳುಗಿ ಈಜಿ ದಡ  ಸೇರಿದವರು ತುಂಬಾ ವಿರಳ ಅದಕ್ಕೆ ದಾಸರು ಹೇಳಿದ ಒಂದು ಹಿತೋಕ್ತಿ ಈ ಸಂದರ್ಭದಲ್ಲಿ ನಾವು ಸ್ಮರಿಸಬಹುದು ಈಜ ಬೇಕು ಇದ್ದು ಜೈಸ ಬೇಕು ಎಂಬ ಮಾತು ಇಲ್ಲಿ ಉಲ್ಲೇಖಾರ್ಹವಾಗಿದೆ. ಪ್ರೀತಿಯ ಮೋಹದ ಬಲೆಯಲ್ಲಿ ಸಿಲುಕಿ ಕೊನೆಗೆ ಸಾಧಿಸುವ ಗುರಿ ಮುಟ್ಟುವ ಹೃದಯಗಳ ವೇದನೆ ರೋಧನೆ ಅದ್ಭುತವಾಗಿ ಈ ಗಜಲ್ ಗಳಲ್ಲಿ ಚಿತ್ರಿಸಿದ್ದಾರೆ. ಇನ್ನು ಹತ್ತು ಹಲವಾರು ಅರ್ಥಪೂರ್ಣವಾದ ಗಜಲ್ ಗಳು ಈ ಕೃತಿಯಲ್ಲಿ ನೂರಾರು ಇವೆ. ಪ್ರತಿಯೊಂದು ಸರಳವಾಗಿ ಸರಾಗವಾಗಿ ಓದಿಸಿಕೊಂಡು ಹೋಗುವಂತ ಗಜಲ್ ಗಳಾಗಿವೆ . ಈ ಕೃತಿಯಲ್ಲಿರುವ ಒಟ್ಟಾರೆ 108 ಗಜಲ್ ಗಳಲ್ಲಿ ಕೆಲವು ಮುರದಪ್ಪ ಗಜಲ್ ಗಳು ಕಾಫಿಯಾನ ಗಜಲ್ ಗಳು ಚೋಟಿ ಬೆಹರ ಗಜಲ್ ಗಳು ಇವೆ.  ಕವಿಗಳು ರದೀಪ್ ಬಳಕೆಯಲ್ಲಿ ಸಮಾನ ಪದಗಳನ್ನು ಕಾಪಾಡಿಕೊಂಡು ಬಂದಿದ್ದರೆ , ಮತ್ತು ಒಮ್ಮೆ ಬಳಸಿದ ಪದಗಳನ್ನು ಪುನರ್ ಬಳಕೆ ಮಾಡದಿದ್ದರೆ ಇನ್ನೂ ಈ ಗಜಲ್ ಗಳು ಅತ್ಯಂತ ಅದ್ಭುತವಾಗಿ ಮೂಡಿ ಬರುತ್ತಿದ್ದವು ಎಂಬುದು ನನ್ನ ಭಾವನೆ . ಒಟ್ಟಾರೆಯಾಗಿ ಗಜಲ್ ಪ್ರಿಯರಿಗೆ ಇದೊಂದು ಅತ್ಯಂತ ಸಂಗ್ರಹ ಯೋಗ್ಯವಾದ ಕೃತಿಯಾಗಿದೆ. ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸೊಗಸಾದ ರಸಭರಿತವಾದ ಅದ್ಭುತವಾದ ಗಜಲ್ ಕೃತಿಗಳನ್ನು ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಯಲ್ಲಪ್ಪ ಹಾರ್ನಳಾಗಿ ಸಹೋದರರು ಅರ್ಪಿಸಲಿ ಎಂದು ಹೇಳುತ್ತಾ , “ಮಾಯ ಮೋಹದ ಬೆನ್ನೇರಿ ಗಜಲ್ ಕೃತಿ ಓದುಗರ ಮನೆ ಮನ ಮುಟ್ಟಲಿ , ಓದುಗರ ಮನದಲ್ಲಿ ಸದಾ ನೆಲೆಸಿರಲಿ ಎಂದು ಆಶಿಸುತ್ತಾ. ಇಂಥ ಕೃತಿಯನ್ನು ಓದಲು ನೀಡಿದಂತ ಕವಿಗಳಿಗೆ ಮತ್ತೊಮ್ಮೆ ಅಭಿನಂದಿಸುತ್ತ , ಹರ್ನಾಳಗಿ ಅವರಿಗೆ ಶುಭವಾಗಲೆಂದು ಶುಭ ಕೋರುತ್ತೇನೆ.


About The Author

Leave a Reply

You cannot copy content of this page

Scroll to Top