ಅಂಕಣ ಸಂಗಾತಿ=91
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮೊಮ್ಮಗನ ಆರೈಕೆಯಲ್ಲಿ

ಲೇಡಿ ಡಾಕ್ಟರ್ ನೀಡಿದ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿದ್ದರಿಂದ ಹಿರಿಯ ಮಗಳು ಮತ್ತೊಮ್ಮೆ ಗರ್ಭಿಣಿಯಾದಳು. ಅಳಿಯ ಮಗಳು ಇಬ್ಬರೂ ಬಹಳ ಸಂತೋಷ ಪಟ್ಟರು. ಅವಳ ಸಹಾಯಕ್ಕಾಗಿ ಎರಡನೇ ಮಗಳು ಜೊತೆಗೆ ಇದ್ದಳು. ಶಾಲೆಗೆ ಹೊರಡುವ ಮುನ್ನ ಮತ್ತು ಶಾಲೆಯಿಂದ ಬಂದ ನಂತರ ಅಕ್ಕನಿಗೆ ಬೇಕಾದ ಎಲ್ಲಾ ಸಹಾಯವನ್ನು ಮಾಡುತ್ತಿದ್ದಳು. ವೈದ್ಯರ ನಿಯಮಿತ ಸಲಹೆ ಹಾಗೂ ತಪಾಸಣೆಯಿಂದಾಗಿ ಈ ಬಾರಿ 9 ತಿಂಗಳು ತುಂಬುವವರೆಗೂ ಯಾವುದೇ ತೊಂದರೆಯೂ ಕಾಣಿಸಿಕೊಳ್ಳಲಿಲ್ಲ. ತಿಂಗಳು ತುಂಬಿದ ಕೂಡಲೇ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾದಳು. ಹಿರಿಯ ಮಗಳಿಗೆ ಸುಖಪ್ರಸವವಾಯಿತು. ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು. ಮೂರು ದಿನ ಆಸ್ಪತ್ರೆಯಲ್ಲಿದ್ದು ಮೊದಲೇ ತೀರ್ಮಾನ ಮಾಡಿದಂತೆ ಅಲ್ಲಿಂದ ನೇರವಾಗಿ ಸುಮತಿಯ ಮನೆಗೆ ಕಾರಿನಲ್ಲಿ ಮಗಳು ಅಳಿಯ ಮೊಮ್ಮಗಳು ಹಾಗೂ ಎರಡನೇ ಮಗಳು ಪ್ರಯಾಣ ಬೆಳೆಸಿದರು. ಮೊಮ್ಮಗನನ್ನು ಕಂಡ ಸುಮತಿಗೆ ತನ್ನ ಹಿರಿಯ ಮಗ ವಿಶ್ವನನ್ನು ಕಂಡಂತೆ ಅನಿಸಿತು. ಸಡಗರ ಹಾಗೂ ಪ್ರೀತಿಯಿಂದ ಮಗಳು ಅಳಿಯ ಹಾಗೂ ಮೊಮ್ಮಗನನ್ನು ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಂಡಳು. ಮಗಳ ಬಾಣಂತನಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಳು. ಈಗ ಸುಮತಿಗೆ ತನ್ನ ಅನಾರೋಗ್ಯದ ಬಗ್ಗೆ ಗಮನವೇ ಇರಲಿಲ್ಲ. ಅವಳ ಪ್ರಪಂಚವೇ ಈಗ ಮೊಮ್ಮಗನ ಜೊತೆಗೆ ಬೆರೆತು ಹೋಗಿತ್ತು. ಮೊಮ್ಮಗನನ್ನು ಎಷ್ಟು ಮುದ್ದಾಡಿದರೂ ಸಾಲದು ಎಂಬಂತಾಗಿತ್ತು ಸುಮತಿಗೆ. ಬೆಳಗ್ಗೆ ಬೇಗನೆ ಎದ್ದು ಬಾಣಂತಿಗೆ ಬೇಕಾದ ಆರೈಕೆಯನ್ನು ಮಾಡಿ ಮೊಮ್ಮಗನ್ನು ಸ್ನಾನ ಮಾಡಿಸಿ ಬೆಚ್ಚಗೆ ಮಗಳ ಬಳಿ ಮಲಗಿಸಿ, ತನ್ನ ಉಳಿದ ಕೆಲಸವನ್ನೆಲ್ಲ ಮುಗಿಸುತ್ತಿದ್ದಳು. ಜೊತೆಗೆ ಈಗ ಎರಡನೇ ಮಗಳು ಇದ್ದ ಕಾರಣ ಮಗಳ ಆರೈಕೆ ಹಾಗೂ ಮನೆ ಕೆಲಸವು ಸ್ವಲ್ಪ ಸುಲಭವಾಗಿತ್ತು. ಈಗ ತನ್ನ ಮಕ್ಕಳೆಲ್ಲರೂ ತನ್ನ ಜೊತೆಗೆ ಇರುವುದರಿಂದ ಸುಮತಿ ಬಹಳ ಸಂತುಷ್ಟಳಾಗಿದ್ದಳು.
ತನ್ನ ಎಲ್ಲಾ ಮಕ್ಕಳು ಹಾಗೂ ಅಳಿಯ ಮತ್ತು ಮೊಮ್ಮಗ ಜೊತೆ ಇರುವುದರಿಂದ ತನ್ನ ಕುಟುಂಬವೀಗ ಪರಿಪೂರ್ಣವಾದಂತೆ ಸುಮತಿಗೆ ಅನಿಸಿತು. ಬಾಣಂತನದ ಎಲ್ಲಾ ಖರ್ಚನ್ನು ಹಾಗೂ ಮನೆಯ ಖರ್ಚು ವೆಚ್ಚಗಳನ್ನು ಅಳಿಯ ನೋಡಿಕೊಳ್ಳುತ್ತಿದ್ದಿದ್ದು ಸುಮತಿಗೆ ಅತ್ಯಂತ ಸಮಾಧಾನಕರ ವಿಷಯವಾಗಿತ್ತು. ಮೊಮ್ಮಗ ಸುಮತಿಯನ್ನು ಬಹಳ ಹಚ್ಚಿಕೊಂಡಿದ್ದನು. ಅಜ್ಜಿಯ ಮಡಿಲಲ್ಲಿ ಮಲಗುವುದು ಎಂದರೆ ಅವನಿಗೆ ಬಹಳ ಇಷ್ಟವಾಗಿತ್ತು. ಅಜ್ಜಿಯ ಮಡಿಲು ಸೇರಿದ ಕೂಡಲೇ ಬೆಚ್ಚಗೆ ಮಲಗಿ ನಿದ್ರಿಸಿಬಿಡುತ್ತಿದ್ದ. ಮಗುವಿನ ತೊಟ್ಟಿಲು ಶಾಸ್ತ್ರ ನಾಮಕರಣ ಎಲ್ಲವನ್ನು ಸರಳವಾಗಿ ಮಾಡಿದಳು. ಕೆಲವು ತಿಂಗಳ ಬಾಣಂತನದ ನಂತರ ಮಗಳು ಅಳಿಯ ಮೊಮ್ಮಗನೊಂದಿಗೆ ಅವರ ಮನೆಗೆ ಹೊರಟು ನಿಂತಾಗ ಸುಮತಿಗೆ ಅತೀವ ದುಃಖವಾಯಿತು. ಮೊಮ್ಮಗನ ಆರೈಕೆಯಲ್ಲಿ ಅವನ ಬಾಲಲೀಲೆಗಳನ್ನು ನೋಡುತ್ತಾ ತನ್ನೆಲ್ಲ ನೋವುಗಳನ್ನು ಸುಮತಿ ಮರೆತಿದ್ದಳು. ಈಗ ಅವರು ಹೊರಟು ನಿಂತಾಗ ಮನೆಯೆಲ್ಲ ಖಾಲಿ ಎಂಬಂತೆ ಸುಮತಿಗೆ ಅನಿಸಿತು. ಮನಸ್ಸಲ್ಲಿ ಬೇಸರವಿದ್ದರೂ ಸಂತೋಷದಿಂದ ಮಗಳು ಅಳಿಯ ಹಾಗೂ ಮೊಮ್ಮಗನನ್ನು ಬೀಳ್ಕೊಟ್ಟಳು. ಸುಮತಿಯ ಮನೆಯಿಂದ ತಮ್ಮ ಮನೆಗೆ ಹೋದ ನಂತರ ಹಿರಿಯ ಮಗಳು ಅಳಿಯ ಮೊಮ್ಮಗ ಹಾಗೂ ಎರಡನೆಯ ಮಗಳು ಕೇರಳಕ್ಕೆ ಹೋಗಿ ಬಂದರು. ಅಳಿಯನ ಊರು ಕೇರಳದಲ್ಲಿ ಇದ್ದಿದರಿಂದ ಆಗಾಗ ಕುಟುಂಬ ಸಮೇತವಾಗಿ ಕೇರಳಕ್ಕೆ ಹೋಗಿ ಬರುತ್ತಿದ್ದರು. ಹಿರಿಯ ಮಗಳು ತನ್ನ ಗಂಡನ ಕುಟುಂಬದವರೊಂದಿಗೆ ಅನ್ಯೋನ್ಯವಾಗಿ ಇರುವುದನ್ನು ಅರಿತು ಸುಮತಿಗೆ ನೆಮ್ಮದಿ ಎನಿಸಿತು. ಎರಡನೇ ಮಗಳು ಅಕ್ಕನ ಮನೆಯಲ್ಲಿ ಹೆಚ್ಚಾಗಿ ಇರುತ್ತಿದ್ದಳು. ಅವಳು ಆಗತಾನೆ 9ನೇ ತರಗತಿಯಿಂದ ಹತ್ತನೇ ತರಗತಿಗೆ ತೇರ್ಗಡೆ ಹೊಂದಿದ್ದಳು.
ರಜೆಯಲ್ಲಿ ಕೆಲವು ದಿನ ಅಮ್ಮ ಮತ್ತು ತಂಗಿಯರ ಜೊತೆ ಇರುತ್ತಿದ್ದಳು. ಶಾಲೆ ಪ್ರಾರಂಭವಾಗುವ ಸಮಯಕ್ಕೆ ಅಕ್ಕನ ಮನೆಗೆ ಹೋಗುತ್ತಿದ್ದಳು. ಸುಮತಿಯ ಆರೋಗ್ಯ ಆಗಾಗ ಕ್ಷೀಣಿಸುತ್ತಿತ್ತು. ಮಧುಮೇಹ ಕೆಲವೊಮ್ಮೆ ಉಲ್ಬಣಗೊಳ್ಳುತ್ತಿತ್ತು. ಹಾಗಾದಾಗೆಲ್ಲ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಳು. ಮೂರನೇ ಮತ್ತು ಕೊನೆಯ ಮಗಳು ಅವಳ ಜೊತೆಗಿರುತ್ತಿದ್ದ ಕಾರಣ ಸಣ್ಣಪುಟ್ಟ ಸಹಾಯಗಳು ಅವಳಿಗಾಗುತ್ತಿತ್ತು. ಎರಡನೇ ಮಗಳು 10ನೇ ತರಗತಿಯಲ್ಲಿ ತೇರ್ಗಡೆ ಹೊಂದಿದಳು. ಅಷ್ಟೊತ್ತಿಗೆಲ್ಲ ಸುಮತಿಯ ಮೊಮ್ಮಗನು ಸ್ವಲ್ಪ ದೊಡ್ಡವನಾಗಿದ್ದರಿಂದ ಎರಡನೇ ಮಗಳು ಅಮ್ಮನ ಜೊತೆ ಇರುತ್ತೇನೆ ಎಂದು ಅಲ್ಲಿಂದ ಬಂದುಬಿಟ್ಟಳು. ಈಗ ಮೂವರು ಮಕ್ಕಳು ಸುಮತಿಯ ಜೊತೆಯಲ್ಲಿಯೇ ಇರುತ್ತಿದ್ದರು. ಇದರ ನಡುವೆ ಎರಡನೇ ಮಗಳಿಗೆ ಒಬ್ಬ ಒಳ್ಳೆಯ ವರನನ್ನು ಹುಡುಕಿ ಅವಳ ಅಕ್ಕ ಭಾವ ಮದುವೆ ಮಾಡಲು ತೀರ್ಮಾನಿಸಿದರು. ಆದರೆ ಅದು ಆ ಹುಡುಗಿಗೆ ಇಷ್ಟವಿರಲಿಲ್ಲ ತಾನು ಓದಬೇಕು ಓದಿ ಒಳ್ಳೆಯ ಕೆಲಸಕ್ಕೆ ಸೇರಿ ಸಂಪಾದಿಸಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಮಹಾದಾಸೆ ಹೊಂದಿದ್ದಳು. ಆಗ ಅವಳಿಗಿನ್ನೂ 16 ವರ್ಷ ಹಾಗಾಗಿ ತನಗೆ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಳು. ತಾನು ಕಾಲೇಜಿಗೆ ಸೇರಿ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಎನ್ನುವ ಮನದ ಆಸೆಯನ್ನು ತಾಯಿಗೆ ತಿಳಿಸಿದಳು. ಸುಮತಿ ಇಕ್ಕಟ್ಟಿನಲ್ಲಿ ಸಿಲುಕಿದಳು. ಕೊನೆಗೆ ಎರಡನೇ ಮಗಳ ಆಸೆಯಂತೆ ಮದುವೆ ಬೇಡವೆಂದು ಎಲ್ಲರೂ ತೀರ್ಮಾನಿಸಿದರು. ಇದರಿಂದ ಅವಳಿಗೆ ಬಹಳ ಸಂತೋಷವಾಯಿತು. ಆದರೆ ಅಷ್ಟು ಹೊತ್ತಿಗೆಲ್ಲ ಕಾಲೇಜಿನ ಅಡ್ಮಿಶನ್ ಮುಗಿದಿದ್ದ ಕಾರಣ ಕಾಲೇಜಿಗೆ ಹೋಗಲು ಅವಳಿಂದ ಸಾಧ್ಯವಾಗಲಿಲ್ಲ. ಹಾಗಾಗಿ ಒಂದು ವರ್ಷವನ್ನು ಸುಮ್ಮನೆ ಕುಳಿತು ಕಳೆಯದೆ ಟೈಪಿಂಗ್ ಕಲಿಯಬೇಕು ಎನ್ನುವ ಹಂಬಲವನ್ನು ತಾಯಿಯ ಮುಂದೆ ವ್ಯಕ್ತಪಡಿಸಿದಳು.
ಮೂರನೇ ಮಗಳು 8ನೇ ತರಗತಿಗೆ ತೇರ್ಗಡೆ ಹೊಂದಿದಳು. ಅಲ್ಲಿ ಹತ್ತಿರದಲ್ಲಿದ್ದ ಶಾಲೆಯಲ್ಲಿ ಏಳನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಸಾಧ್ಯವಿತ್ತು. ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರಿಸಬೇಕೆಂದರೆ ಅಲ್ಲಿಂದ ಸಕಲೇಶಪುರಕ್ಕೆ ಹೋಗಬೇಕಿತ್ತು. ಹಾಗಾಗಿ ಸುಮತಿ ಮೂರನೇ ಮಗಳನ್ನು ಸಕಲೇಶಪುರದ ಸರ್ಕಾರಿ ಶಾಲೆಗೆ ಸೇರಿಸಿದಳು. ಒಂದು ದಿನ ಸಂಜೆ ಶಾಲೆ ಮುಗಿದ ನಂತರ ಸುಮತಿ ತನ್ನ ಎರಡನೇ ಮಗಳನ್ನು ಜೊತೆಗೆ ಕರೆದುಕೊಂಡು ಸ್ವಲ್ಪ ದೂರದಲ್ಲಿದ್ದ ತೋಟದ ಬಂಗಲೆಗೆ ಅಮ್ಮನನ್ನು ನೋಡಲೆಂದು ಹೋದಳು. ದೊಡ್ಡ ಸಾಹುಕಾರರ ಮರಣದ ನಂತರ ಸಣ್ಣ ಸಾಹುಕಾರರು ಪತ್ನಿ ಸಮೇತರಾಗಿ ತಮ್ಮ ತಾಯಿಯವರ ಜೊತೆ ತೋಟದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಬೆಂಗಳೂರಿನಿಂದ ಅಮ್ಮ ಬಂದು ಇಲ್ಲಿ ನೆಲೆಸಿದ್ದಾರೆ ಎನ್ನುವುದು ಸುಮತಿಗೆ ತಿಳಿದಿತ್ತು. ಅಮ್ಮನನ್ನು ನೋಡಿ ಬರಲೆಂದು ಮಗಳ ಜೊತೆ ಸುಮತಿ ಹೊರಟಿದ್ದಳು. ಸುಮತಿಯನ್ನು ಕಂಡ ಅಮ್ಮ ಖುಷಿಯಿಂದಲೇ ಕರೆದು ಮಾತನಾಡಿಸಿದರು. ಸುಮತಿಗೆ ಸೀರೆಗಳನ್ನು ಹಾಗೂ ಮಕ್ಕಳಿಗೆ ಬಟ್ಟೆಗಳನ್ನು ಕೊಟ್ಟರು.
ಸುಮತಿಯ ಜೊತೆಗೆ ಬಂದಿದ್ದ ಮಗಳನ್ನು ನೋಡಿ….”ಇವಳೇನು ಮಾಡುತ್ತಿದ್ದಾಳೆ”… ಎಂದು ಕೇಳಿದರು. ಆಗ ಸುಮತಿ…”ಇವಳು 10ನೇ ತರಗತಿಯಲ್ಲಿ ತೇರ್ಗಡೆ ಹೊಂದಿ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದು ಇಚ್ಛಿಸುತ್ತಿದ್ದಾಳೆ…ಆದರೆ ಅವಳನ್ನು ಹೆಚ್ಚಿನ ವ್ಯಾಸಂಗಕ್ಕಾಗಿ ಕಾಲೇಜ್ ಸೇರಿಸುವ ಶಕ್ತಿ ನನಗಿಲ್ಲ…. ಏನು ಮಾಡಲಿ ಎಂದು ತೋಚುತ್ತಿಲ್ಲ”…. ಎಂದಳು. ಅದನ್ನು ಕೇಳಿದ ಅಮ್ಮ… “ಈಗಾಗಲೇ ಕಾಲೇಜು ಅಡ್ಮಿಷನ್ ಅವಧಿ ಮುಗಿದಿರಬೇಕಲ್ಲವೇ?… ಮತ್ತೆ ಇನ್ನೇನು ಮಾಡುತ್ತಿಯ?…. ಎಂದು ಕೇಳಿದಾಗ…. “ಅಮ್ಮ ನನಗೆ ಟೈಪಿಂಗ್ ಕಲಿಯುವ ಇಚ್ಛೆ ಇದೆ”…. ಎಂದು ಸುಮತಿಯ ಮಗಳು ಹೇಳಿದಾಗ ಮುಗುಳ್ನಗುತ್ತಾ ಅವಳನ್ನೊಮ್ಮೆ ನೋಡಿದ ಅಮ್ಮ…. “ಹಾಗಾದರೆ ನೀನು ಈಗ ಟೈಪಿಂಗ್ ಕಲಿಯಬಹುದಲ್ಲವೇ?”…. ಎಂದರು




