ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ 7
ಹೊಸ ಕೆಲಸ
ಹೊಸ ವಾತಾವರಣ

ಹೊಸ ಕೆಲಸ ಹೊಸ ವಾತಾವರಣ
1989ರ ಜನವರಿ ….ತಾರೀಕು ಸರಿಯಾಗಿ ನೆನಪಿಲ್ಲ. ಅಂತೂ ಅಂದು ಬುಧವಾರ ನಾನು ಜೀವವಿಮಾ ನಿಗಮ ಶಾಖೆ ಎರಡಕ್ಕೆ ತಾತ್ಕಾಲಿಕ ಸಹಾಯಕಿಯಾಗಿ ಕೆಲಸ ನಿರ್ವಹಿಸಲು ಹೊರಟೆ. ನಮ್ಮ ಮನೆಯ ಕಡೆಯಿಂದ ಸಬರ್ಬನ್ ಬಸ್ ಸ್ಟ್ಯಾಂಡ್ ಗೆ ಮೂರನೇ ನಂಬರ್ ಬಸ್ ಇತ್ತು. 10.30 ಗೆ ಕಚೇರಿ ಆರಂಭವಾಗುತ್ತಿದ್ದದ್ದು .9:30 ಬಸ್ಗೆ ಹತ್ತಿದೆ .ಅಲ್ಲಿಯೇ ಅದೇ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಫುಲ್ಲ ಹಾಗೂ ಸಂಧ್ಯಾವಳಿ ಇಬ್ಬರ ಭೇಟಿಯು ಆಯಿತು. ಇಳಿದ ನಂತರ ಪೈಲೆಟ್ ಸರ್ಕಲ್ ನಲ್ಲಿದ್ದ ಶಾಖೆಗೆ ಐದು ನಿಮಿಷದ ನಡಿಗೆ. ಹೋದ ನಂತರ ಕಚೇರಿ ವ್ಯವಹಾರ ವಿಭಾಗದಲ್ಲಿ ರಿಪೋರ್ಟ್ ಲೆಟರ್ ಬರೆದುಕೊಡಲು ಹೇಳಿದರು. ನಂತರ ಶಾಖಾಧಿಕಾರಿಗಳ ಕೋಣೆಗೆ ಕಚೇರಿ ವ್ಯವಹಾರಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಎ ನಾಗರಾಜ ಅವರು ಕರೆದುಕೊಂಡು ಹೋದರು. ಅಲ್ಲಿ ನನ್ನ ಬಗ್ಗೆ ವಿವರ ತಿಳಿದು ಸೌಹಾರ್ದಯುತವಾಗಿ ಮಾತನಾಡಿದ ಶಾಖಾಧಿಕಾರಿಯವರು ಈಗ ಸದ್ಯದಲ್ಲಿ ಇಬ್ಬರು ಸಹಾಯಕರು ಹೆರಿಗೆ ರಜೆ ಹೋಗುತ್ತಿರುವುದರಿಂದ ವೇತನ ಉಳಿತಾಯ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಉಂಟಾಗುತ್ತಿದೆ. ಅಲ್ಲಿ ಕಾರ್ಯ ನಿರ್ವಹಿಸಿ ಎಂದು ಹೇಳಿದರು. ನನ್ನ ಹಾಗೆಯೇ ಮತ್ತೊಬ್ಬರು ಶುಭ ಎನ್ನುವವರು ಬಂದಿದ್ದರು. ಅವರು ಮದುವೆಯಾಗಿ ಬೆಂಗಳೂರಿನಲ್ಲಿ ಇದ್ದರು. ಆದರೂ ಅವರಿಗೆ ಮೈಸೂರಿನ ಕಚೇರಿಗೆ ನೇಮಕಾತಿ ಕೊಟ್ಟಿದ್ದರು .ತಾಯಿಯ ಮನೆ ಇಲ್ಲೇ ಆದ್ದರಿಂದ ಅವರು ಒಪ್ಪಿ ಬಂದಿದ್ದರು. ಅಲ್ಲದೆ ಅವರ ತಂದೆ ಅದೇ ಶಾಖೆಯ ಹಿರಿಯ ಪ್ರತಿನಿಧಿಯಾಗಿದ್ದರಿಂದ ಅವರಿಗೆ ಮತ್ತಷ್ಟು ಸುಲಭ ಎಂದೆನಿಸಿತ್ತು.
ಆ ಶಾಖೆ ಪ್ರವೇಶಿಸಿದೊಡನೆ ಒಂದು ದೊಡ್ಡ ಹಾಲ್. ಒಂದು ಪಕ್ಕದಲ್ಲಿ ಮಹಡಿಯ ಮೆಟ್ಟಲು . ಅರ್ಧ ಭಾಗ ಮಾತ್ರ ಮಹಡಿ ಇದ್ದದು. ಛತ್ರಗಳಲ್ಲಿ ಸುತ್ತ ಕೋಣೆಗಳು ಇರುತ್ತಲ್ಲ ಹಾಗೆ. ಪ್ರವೇಶಿಸಿದ ನಂತರ ಬಾಗಿಲ ಪಕ್ಕದಲ್ಲಿ ಮೆಟ್ಟಲುಗಳು. ಅಲ್ಲದೆ ಈ ಕಡೆಯ ತುದಿ ಹಾಲಿನ ತುದಿಯಲ್ಲೂ ಸಹ ಮತ್ತೊಂದು ಮೆಟ್ಟಲುಗಳು ಇತ್ತು. ಎರಡು ಕಡೆಯಿಂದಲೂ ಹತ್ತಿ ಇಳಿಯಲು ಸಾಧ್ಯವಾಗುವಂತೆ. ನಮಗೆ ಕೊಟ್ಟಿದ್ದ ಸಂಬಳ ವೇತನ ಉಳಿತಾಯ ಇಲಾಖೆ ಆ ಬಾಲ್ಕನಿಯಲ್ಲಿ ಇತ್ತು. ಅಲ್ಲದೆ ಕಚೇರಿ ವ್ಯವಹಾರಗಳ ವಿಭಾಗವು ಸಹ ಅಲ್ಲಿಯೇ ಇದ್ದದು. ಮಿಕ್ಕ ವಿಭಾಗಗಳು ಕೆಳಗಿನ ಹಾಲಿನಲ್ಲಿ ಇದ್ದವು.
ಮಹಡಿ ಹತ್ತಿ ಬಂದ ತಕ್ಷಣವೇ ದಪ್ಪದಪ್ಪ ಬೈಂಡ್ ಆದ ಲೆಡ್ಜರ್ ಪುಸ್ತಕಗಳು. ಎಲ್ಲರ ಟೇಬಲ್ ಮೇಲೆಯೂ, ಪಕ್ಕದ ಸಂಗ್ರಹಿಸಿ ಇಡುವ ಸ್ಥಳಗಳು ಎಲ್ಲೆಲ್ಲೂ ಈ ಲೆಡ್ಜರ್ಗಳದೇ ರಾಜ್ಯಭಾರ. ಅಬ್ಬಾ! ಎಷ್ಟೊಂದು ಕಡತಗಳು ಎನಿಸಿ ಒಂದು ಕ್ಷಣ ಭಯವಾಯಿತು . ಆಗ ಅಲ್ಲಿ ಉನ್ನತ ದರ್ಜೆ ಸಹಾಯಕರಾಗಿ ಇದ್ದವರು ರಾಮಚಂದ್ರ ಶಾಸ್ತ್ರಿ ಹಾಗೂ ಅನಸೂಯ ಮೇಡಂ ಅವರು. ಅವರೇ ನಮಗೆ ಕೆಲಸ ಕಲಿಸುವ ಜವಾಬ್ದಾರಿ ವಹಿಸಿಕೊಂಡರು.
ವೇತನ ಉಳಿತಾಯ ವಿಭಾಗದ ಕೆಲಸ ಬೇರೆ ಬೇರೆ ಕಚೇರಿಗಳಿಂದ ವೇತನದಲ್ಲಿ ಹಿಡಿದು ಕಳುಹಿಸಿದ ಹಣವನ್ನು ಆಯಾ ಉದ್ಯೋಗಿಗಳ ವೈಯುಕ್ತಿಕ ಪಾಲಿಸಿ ನಂಬರ್ ಗಳಿಗೆ ಜಮಾ ಮಾಡಿ ಲೆಡ್ಜರ್ ನಲ್ಲಿ ಒಂದು ಎಂಟ್ರಿ ಮಾಡುವುದು .ನಂತರ ಬಂದ ಹಣಕ್ಕೆ ಸರಿಯಾಗಿ ಎಲ್ಲಾ ಪಾಲಿಸಿಗಳಿಗೂ ಹಣ ವಿನಿಯೋಗ ಆಗಿದೆಯೇ ಎಂದು ಒಂದು ವಿವರಣೆ ಬರೆಯುವುದು. ನಂತರ ಇದನ್ನು ಡಾಟಾ ಪ್ರೊಸೆಸಿಂಗ್ ಎಂಬ ಕಂಪ್ಯೂಟರ್ ವಿಭಾಗಕ್ಕೆ ಕಳುಹಿಸಿದರೆ ಈ ಮಾಹಿತಿಯ ಮೇಲೆ ಅವರು ವಿವರಗಳನ್ನು ಕಂಪ್ಯೂಟರ್ನಲ್ಲಿ ದಾಖಲಿಸುತ್ತಾರೆ. ಈ ಇಷ್ಟು ಕೆಲಸಕ್ಕೆ ರಿಕಂಸಿಲಿಯೇಷನ್ ಎಂದು ಕರೆಯುತ್ತಿದ್ದರು. ಹೀಗೆ ವೇತನ ಹಿಡಿದು ಕಳಿಸುವ ಸಂಸ್ಥೆಗಳಿಗೆ ಪೇಯಿಂಗ್ ಅಥಾರಿಟಿ ಎಂದು ಹೆಸರು. ಈ ರೀತಿಯ ಪೇಯಿಂಗ್ ಅಥಾರಿಟಿಗಳು ಕೆಎಸ್ಆರ್ಟಿಸಿ ಕೆಇಬಿ ನಂತಹ ಬೃಹತ್ ಸಂಸ್ಥೆಗಳು ಬ್ಯಾಂಕುಗಳು ಶಾಲೆಗಳು ಹೀಗೆ ವಿವಿಧ ಬಗೆಯವು. ಮೊದಲಿಗೆ ನಮಗೆ ಶಾಲೆಗಳ ಚಿಕ್ಕ ಚಿಕ್ಕ ಕಡತಗಳನ್ನು ಕೊಟ್ಟು ಮಾಡಲು ಹೇಳಿ ಕೊಟ್ಟರು.
ಸಂಸ್ಥೆಯಿಂದ ಬಂದ ವೇತನ ಕಡಿತದ ಪಟ್ಟಿಗಳ ಜೊತೆಗೆ ನಮ್ಮಲ್ಲಿ ಈಗಾಗಲೇ ಇರುವ ಹಿಂದಿನ ತಿಂಗಳ ಪಟ್ಟಿ ಅಥವಾ ಬೈಂಡ್ ಮಾಡಿಸಿಟ್ಟ ಲೆಡ್ಜರ್ ನಲ್ಲಿ ಆಯಾ ತಿಂಗಳಿಗೆ ಆಯಾ ಪಾಲಿಸಿ ಸಂಖ್ಯೆ ಹೆಸರುಗಳ ಮುಂದೆ ಇರುವ ಬಾಕ್ಸ್ನ್ಗಲಿ ಒಂದು ಸಣ್ಣ ರೈಟ್ ಮಾರ್ಕ್ ಹಾಕುವುದು ಅಂದರೆ ಟಿಕ್ ಮಾಡುವುದು. ಹೀಗೆ ಟಿಕ್ ಮಾಡಿದ ಮೇಲೆ ಹಿಂದಿನ ಬಾರಿಯ ಅಥವಾ ನಮ್ಮ ಲೆಡ್ಜರ್ ನ ಅನುಸಾರದ ಹಣಕ್ಕೂ ಅವರು ಕಳುಹಿಸಿದ ಪಟ್ಟಿಯಲ್ಲಿನ ಹಣಕ್ಕೂ ತಾಳೆ ಆಗಬೇಕು. ಹಾಗೆ ಆಗದಿದ್ದಲ್ಲಿ ಯಾವುದನ್ನು ಬಂದಿಲ್ಲವೋ ಅದನ್ನು ವ್ಯವಕಲನ ಮಾಡಿ ಹೆಚ್ಚಿಗೆ ಯಾವುದಾದರೂ ಸೇರಿಕೊಂಡಿದ್ದರೆ ಅದನ್ನು ಸಂಕಲನ ಮಾಡಿ ಒಟ್ಟಿನಲ್ಲಿ ಹಿಂದಿನ ಬಾರಿಯ ಹಣಕ್ಕೂ ಈ ಬಾರಿಯ ಪಟ್ಟಿಗೂ ತಾಳೆ ಮಾಡಿ ಇಡುವ ಕೆಲಸ.
ಮೊದಲಿಗೆ ಕಲಿತ ಈ ರಿಕನ್ಸಿಲಿಯೇಷನ್ ಕೆಲಸ ನನಗಂತೂ ತುಂಬಾ ಇಷ್ಟದ ಕೆಲಸ. ನಂತರ ಬೇರೆ ಬೇರೆ ವಿಭಾಗಗಳಲ್ಲಿ ಬೇರೆ ಬೇರೆ ರೀತಿಯ ರಿಕನ್ಸಿಲಿಯೇಷನ್ ಮಾಡುವುದೆಂದರೆ ನನಗೆ ಖುಷಿಯೋ ಖುಷಿ. ಸಿಗದ ಹಣ ಹುಡುಕುತ್ತಾ ಆ ಮೊತ್ತ ಏನಾಗಿರಬಹುದು ಎಂದು ಯೋಚಿಸುತ್ತಾ ಇರುವ ಕೆಲಸಗಳು ತಲೆಯಲ್ಲಿ ಸದಾ ಗುಂಯ್ ಗುಡುತ್ತಿತ್ತು .ಈಗಲೂ ಸಹ ಹಾಗೆಯೇ ರಾತ್ರಿ ಮಲಗಿದರೃ ಅದರ ಯೋಚನೆ ಇದ್ದೇ ಇರುತ್ತದೆ. ಇದು ಅತೀ ಅತೀ ಎಂದು ನಿಮಗೆ ಅನಿಸಬಹುದು. ಆಗಲೂ ಈಗಲೂ ಆ ಬಗ್ಗೆ ನನ್ನ ಮೇಲೆ ಆಕ್ಷೇಪಣೆ ಇದೆ. ಆದರೆ ಅದು ನನ್ನ ಹುಟ್ಟುಗುಣ. ಸುಟ್ಟರೂ ಹೋಗುವುದಿಲ್ಲ.
ಇರಲಿ ಈ ರೀತಿಯ ಒಂದು ಎರಡು ತಿಂಗಳ ರಿಕನ್ಷಿಲೇಷನ್ ಹೇಳಿಕೊಟ್ಟು ಒಂದನ್ನು ನೀವೇ ಮಾಡಿ ಎಂದು ಕೊಟ್ಟರು. ತುಂಬಾ ಆಸಕ್ತಿದಾಯಕವಾಗಿತ್ತು ಅವರು ಹೇಳಿಕೊಟ್ಟ ಹಾಗೆಯೇ ಮಾಡಿದೆವು. ಆಗ ಡಾಟಾ ಪ್ರೊಸೆಸಿಂಗ್ ವಿಭಾಗದಲ್ಲಿ ಇದ್ದ ಪುರುಷೋತ್ತಮ್ ಅವರು ಹೇಗೆ ನಡೆಯುತ್ತಿದೆ ನಮ್ಮ ಕೆಲಸ ಎಂದು ನೋಡಲು ಬಂದರು .ನಾನು ಮಾಡಿದ ರಿಕನ್ಶಿಲೇಷನ್ ಮೊದಲು ಅವರಿಗೆ ತೋರಿಸಿದೆ .ವೆರಿ ಗುಡ್ ಎಂದು ಹೇಳಿ ಎಷ್ಟು ಬೇಗ ಕಲಿತಿರಿ ಎಂದರು .ಅದು ಮತ್ತಷ್ಟು ಹೆಚ್ಚು ಕೆಲಸ ಮಾಡಲು ಉತ್ಸಾಹ ತುಂಬಿತು ಒಂದು ರೀತಿಯ ಚೈಲ್ಡ್ ಇಗೋ ಅಂತಾನೆ ಅಂದುಕೊಳ್ಳಿ.
ಆ ವಿಭಾಗದಲ್ಲಿ ಆಗಲೇ ಇಬ್ಬರು ಹೆರಿಗೆ ರಜೆಯ ಮೇಲೆ ಹೋಗಿದ್ದರಿಂದ ಬಹಳಷ್ಟು ಕೆಲಸಗಳು ಬಾಕಿ ಉಳಿದಿದ್ದವು. ಹಾಗಾಗಿ ಅವುಗಳನ್ನು ನಮ್ಮ ಕೈಲಿ ಮಾಡಿಸಿದರು. ನಮಗೂ ಹೆಚ್ಚು ಕೆಲಸ ಮಾಡುವ ಉತ್ಸಾಹ ಹಾಗಾಗಿ ದಿನವೂ ಖುಷಿಯಿಂದಲೇ ಮಾಡುತ್ತಾ ಹೋದೆವು. 15 ದಿನ ಕೆಲಸ ಆದ ನಂತರ ಮಾಸಾಂತ್ಯ ಬಂತು .15 ದಿನದ ಸಂಬಳ ಸುಮಾರು 750 ಇರಬಹುದು ಕೈಗೆ ಬಂತು ಬಹಳ ಖುಷಿಯಾಯಿತು.
ಇದು ಕೆಲಸದ ವಿಚಾರವಾದರೆ ಮೊಟ್ಟಮೊದಲಿಗೆ ಕಚೇರಿ ವಾತಾವರಣ ಹೇಗೋ ಎಂಬ ಅಳುಕಿದ್ದ ನನಗೆ ಅಲ್ಲಿನ ವಾತಾವರಣ ಒಂದು ರೀತಿಯ ಕಾಲೇಜಿನ ವಾತಾವರಣದಂತೆಯೇ ಎನ್ನಿಸಿ ಆಪ್ತವಾಯಿತು. ಅಲ್ಲಿ ಮೊದಲಿಂದ ಇದ್ದ ಸಹೋದ್ಯೋಗಿಗಳು ಏಕವಚನದಲ್ಲಿಯೇ ಮಾತನಾಡಿಕೊಂಡು ಗರ್ಭಿಣಿಯರಾಗಿದ್ದ ಸಹೋದ್ಯೋಗಿಗಳಿಗೆ ತಿಂಡಿ ಹಣ್ಣು ಹೂವುಗಳನ್ನು ತಂದು ಕೊಡುವುದು ಯೋಗ ಕ್ಷೇಮ ವಿಚಾರಿಸುವುದು ಇವೆಲ್ಲವೂ ಅಲ್ಲಿದ್ದ ಆತ್ಮೀಯತೆಗೆ ಸಾಕ್ಷಿ ಎಂದೆನಿಸಿತು. ಆಗ ನಾವು ಚಿಕ್ಕವರಲ್ಲವೇ ಯಾಕೆ ಒಂದೇ ಸಮ ಕೆಲಸ ಮಾಡುತ್ತೀರಾ ಕಾಫಿ ಕುಡಿಯಲು ಬನ್ನಿ ಎಂದು ಕರೆಯುವುದು ಬಹುವಚನ ಉಪಯೋಗಿಸದೆ ಆತ್ಮೀಯವಾಗಿ ಹೋಗು ಬಾ ಎಂದು ಮಾತನಾಡಿಸುವುದು ಇವೆಲ್ಲವುಗಳಿಂದ ಅವರೆಲ್ಲ ನಮ್ಮ ಹಿರಿಯಕ್ಕನ ಹಾಗೆ ಎಂದೆನಿಸಿ ನನಗಂತೂ ತುಂಬಾ ಆತ್ಮೀಯತೆ ಬೆಳೆಯುತ್ತಿತ್ತು. ಇನ್ನು ನಮ್ಮ ಬಾಸ್ ಗಳಾಗಿದ್ದ ಅನಸೂಯ ಮೇಡಂ ಹಾಗೂ ಶಾಸ್ತ್ರಿ ಸರ್ ಅವರು ಅಷ್ಟೇ ತುಂಬಾ ಚೆನ್ನಾಗಿ ಕೆಲಸ ಹೇಳಿಕೊಡುವುದಷ್ಟೇ ಅಲ್ಲದೆ ಪ್ರತಿಯೊಂದು ಮುಗಿಸಿದ ಕೆಲಸದ ಬಗ್ಗೆ ನಮ್ಮ ಎದುರಿಗೆ ಅಲ್ಲದೆ ಬೇರೆ ಸಹೋದ್ಯೋಗಿಗಳ ಜೊತೆಗೂ ತುಂಬಾ ಬೇಗ ಮಾಡುತ್ತಾರೆ ಪಕ್ಕಾ ಕೆಲಸ ಮಾಡುತ್ತಾರೆ .ಇಂತಹವರು ನಿಗಮಕ್ಕೆ ಕಾಯಂ ಆಗಿ ಸೇರಿದರೆ ಎಷ್ಟು ಚೆನ್ನ ಎಂದೆಲ್ಲಾ ಹೇಳುವಾಗ ನನಗೆ ಮನಸ್ಸು ತುಂಬಿ ಬರುತ್ತಿತ್ತು ಮತ್ತಷ್ಟು ಮಗದಷ್ಟು ಕೆಲಸ ಮಾಡುವ ಆಸಕ್ತಿ ಬರುತ್ತಿತ್ತು. ಅಂದಿನ ಅದೇ ಆಸಕ್ತಿ ಈಗ ಇನ್ನೇನು ನಿವೃತ್ತಿಗೆ ಕೆಲವೇ ತಿಂಗಳು ಬಾಕಿ ಇದ್ದಾಗಲೂ ಉಳಿಸಿಕೊಂಡು ಬಂದಿರುವುದು ಆ ದೇವರು ನನಗೆ ನೀಡಿರುವ ಸೌಭಾಗ್ಯ ಎಂದೇ ಭಾವಿಸುತ್ತೇನೆ.
ಆಗಾಗ ಕಚೇರಿಯಲ್ಲಿ ಏನಾದರೂ ಸಂತಸದ ಸುದ್ದಿ ಇದ್ದರೆ ಸಿಹಿ ತಿಂಡಿ ಹಂಚುತ್ತಿದ್ದು ಇಲ್ಲ ಬಾರಿ ದೊಡ್ಡ ವಿಷಯಗಳಾದರೆ ಮಧ್ಯಾಹ್ನದ ಊಟದ ವಿರಾಮದಲ್ಲಿಯೇ ಕಚೇರಿಯಲ್ಲಿಯೇ ಊಟ ಹಾಕಿಸುವುದು ಇದೆಲ್ಲವೂ ಒಂದು ರೀತಿ ನಮಗೆ ಹೊಸ ವಿಷಯವೇ. ಬೆರಗುಗಣ್ಣಿನಿಂದ ನೋಡುತ್ತಿದ್ದೆವು. ಅದೇ ಸಂದರ್ಭದಲ್ಲಿ ಒಂದಿಬ್ಬರು ಸಹೋದ್ಯೋಗಿಗಳ ಮನೆಯ ಗೃಹಪ್ರವೇಶಗಳು ನಡೆದು ಕಚೇರಿಯಿಂದ ನಮ್ಮನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ಅದು ಸಹ ಮರೆಯಲಾಗದ ಅನುಭವವೇ. ಗಾಯತ್ರಿ ನಾಗಮಣಿ ಸ್ವಲ್ಪ ದಿನದಲ್ಲೇ ಹೆರಿಗೆಯ ರಜೆ ಮೇಲೆ ಹೊರಟು ಹೋದರು. ನಂತರ ಅಲ್ಲಿಯೇ ಇದ್ದ ಜಯಶ್ರೀ ಪ್ರಫುಲ್ಲ ಸಂಧ್ಯಾವಳಿ ಫಿಲೋಮಿನಾ ಇವರೆಲ್ಲ ನನಗೆ ಎಲ್ಐಸಿಯ ವಾತಾವರಣ ತುಂಬಾ ಖುಷಿ ಉಂಟಾಗುವಂತೆ ಮಾಡಲು ಪ್ರೇರಣೆಯಾದವರು. ಆದರೆ ನನ್ನೊಂದಿಗೆ ಸೇರಿದ್ದ ಶುಭ ಸ್ವಲ್ಪ ದೊಡ್ಡಸ್ತಿಕೆ ತೋರಿಸುತ್ತಿದ್ದು ತುಂಬಾ ಒಡನಾಟ ಬೆಳೆಯಲಿಲ್ಲ.
ಅಲ್ಲಿನ ಮತ್ತೊಂದು ಹೊಸ ಅನುಭವ ನನಗದು ಎಂದರೆ ಕನ್ನಡ ಮಾಸ ವಾರಪತ್ರಿಕೆಗಳ ಗ್ರಂಥಾಲಯ. ಶಾಖೆಯ ಮಟ್ಟದಲ್ಲಿ ಒಂದು ಸಾಂಸ್ಕೃತಿಕ ಸಂಘವನ್ನು ರಚಿಸಿಕೊಂಡು ಅದರ ಮೂಲಕ ಅನೇಕ ಪತ್ರಿಕೆಗಳನ್ನು ತರಿಸುತ್ತಿದ್ದರು. ಅವುಗಳನ್ನು ಉದ್ಯೋಗಿಗಳು ತಮ್ಮ ತಮ್ಮಲ್ಲಿ ವಿತರಿಸಿಕೊಂಡು ಓದುತ್ತಿದ್ದರು. ಅದಕ್ಕಾಗಿ ಒಂದು ಸಣ್ಣ ಮೊತ್ತ ಸಂಬಳದಿಂದ ಕಟಾವಣೆ ಆಗುತ್ತಿತ್ತು ಇಂದಿಗೂ ಇದೆ ಅಭ್ಯಾಸ ನಡೆದು ಬಂದಿದೆ. ಆದರೆ ನಾವು ತಾತ್ಕಾಲಿಕ ಆದ್ದರಿಂದ ಈ ರೀತಿಯ ಯಾವ ಕಟಾವಣೆಗಳು ಇರಲಿಲ್ಲ .ಹಾಗಾಗಿ ನನಗೆ ಪತ್ರಿಕೆಗಳನ್ನು ಓದುವ ಆಸೆ ಇದ್ದರೂ ಕೇಳಲು ಸಂಕೋಚ .ವಿತರಣೆ ಜವಾಬ್ದಾರಿ ಆಗವಹಿಸಿಕೊಂಡಿದ್ದು ಜಿಎ ನಾಗರಾಜ ಅವರು ಅವರಿಗೆ ಈ ವಿಷಯ ಏನೋ ಮಾತು ಬಂದಾಗ ಸಂಕೋಚದಿಂದಲೇ ಹೇಳಿದಾಗ, ಅದೆಲ್ಲ ಏನೂ ಇಲ್ಲ ಖಂಡಿತ ತೆಗೆದುಕೊಂಡು ಹೋಗಿ ಓದಿ ಎಂದು ಹೇಳಿ ಆ ಸಲ ಅಷ್ಟೇ ಅಲ್ಲದೆ ಮುಂದಿನ ಬಾರಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸಲು ಹೋದಾಗಲೂ ಪತ್ರಿಕೆಗಳನ್ನು ಓದಲು ಕೊಡುತ್ತಿದ್ದರು . ಓದಲು ಏನಾದರೂ ಸಿಕ್ಕೀತೇ ಎಂದು ಬಕಪಕ್ಷಿಯಂತೆ ಕಾಯುತ್ತಿದ್ದ ನನಗೆ ನಿಜಕ್ಕೂ ಇದು ತುಂಬಾ ದೊಡ್ಡ ವರದಾನವೇ ಆಯಿತು. ಆಗಲೇ ಅಂದುಕೊಂಡೆ ಸದ್ಯ ನನಗೆ ನಿಗಮದಲ್ಲೇ ಖಾಯಂ ಮಾಡಿಸಪ್ಪ. ಪುಸ್ತಕಗಳು ಹೆಚ್ಚು ಓದಲು ಸಿಗುತ್ತದೆ ಎಂದು ಅದಕ್ಕೆ ಆ ದೇವರು ನಂತರ ನನಗೆ ಅಲ್ಲೇ ನೌಕರಿ ದೊರೆಯುವಂತೆ ಮಾಡಿರಬಹುದು .ಅಂದು ವಿತರಣೆಯಲ್ಲಿ ತೆಗೆದುಕೊಳ್ಳುತ್ತಿದ್ದದ್ದು ಕಾಯಂ ಆದ ನಂತರ ಪುಸ್ತಕವಿತರಣೆಯ ಜವಾಬ್ದಾರಿ ಅದು ಹೇಗೋ ನನ್ನ ಹೆಗಲಿಗೆ ವರ್ಗಾಯಿಸಿ ಇಂದಿನವರೆಗೂ ಯಾವ ಶಾಖೆ ಯಾವ ಊರಿಗೆ ವರ್ಗಾವಣೆಯಾಗಿ ಹೋದರು ಅದು ನನಗೇ ಬರುತ್ತದೆ. ಹಾಗೆಯೇ ಅಷ್ಟೇ ಖುಷಿಯಿಂದ ಅದನ್ನು ನಿರ್ವಹಿಸುತ್ತಿದ್ದೇನೆ.
ಕಾರ್ಮಿಕರ ಕಾಯಿದೆಯ ಅನುಸಾರ ಒಂದು ತಿಂಗಳು ಕೆಲಸ ಮಾಡಿದ ನಂತರ ಒಂದು ದಿನ ರಜೆ ತೆಗೆದುಕೊಳ್ಳಬಹುದು. ನನ್ನ ಜೊತೆಯಲ್ಲೇ ಸೇರಿದ್ದ ಶುಭ ಒಂದು ರಜೆ ಜೊತೆಗೆ ಅದನ್ನು ಸೇರಿಸಿ ತೆಗೆದುಕೊಂಡಿದ್ದರು. ಆದರೆ ಇದ್ದ ಊರಿನಲ್ಲಿಯೇ ಇದ್ದ ನನಗೆ ಆಗ ರಜೆಯ ಅವಶ್ಯಕತೆ ಕಂಡು ಬಂದಿರಲಿಲ್ಲ ಹಾಗಾಗಿ ಅದನ್ನು ಉಪಯೋಗಿಸಿಕೊಳ್ಳಲೂ ಇಲ್ಲ.
ಸಂಜೆ ಬರಲು ಸಹ ಅದೇ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಂದರೆ ಮೂರನೆಯ ನಂಬರ್ ಬಸ್ ಸಿಕ್ಕುತ್ತಿತ್ತು ಆದರೆ ಆಗ ಹೆಚ್ಚು ರಶ್ ಇದ್ದು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಾಗ ಸೀಟ್ ದೊರೆಯುತ್ತಿತ್ತು. ದಾರಿ ಉದ್ದಕ್ಕೂ ಕೈಲಿ ಇದ್ದ ಮ್ಯಾಗ್ಜಿನ್ ಓದಿ ಮುಗಿಸಿ ಬಿಟ್ಟಿರುತ್ತಿದ್ದೆ.
ನಿಜವಾಗಿಯೂ ನಿಗಮ ಎಂದರೆ ಏನು ನೌಕರಿ ಬಗ್ಗೆ ಜ್ಞಾನ ಇದೆಲ್ಲ ದೊರೆತದ್ದು ಸಮಯದಲ್ಲಿಯೇ. ಇದು ಬೇಗ ನೌಕರಿ ಸಿಗಲಿ ಎಂಬ ನನ್ನ ಹಂಬಲಕ್ಕೆ ಮತ್ತಷ್ಟು ನೀರೆಯುತ್ತಿತ್ತು. 45 ದಿನಗಳ ಕಾಲ ಹೇಗೆ ಉರುಳಿತೋ ತಿಳಿಯಲೇ ಇಲ್ಲ ಕಡೆಗೆ ನನ್ನ ಕೈಗೆ ರಿಲೀವಿಂಗ್ ಆರ್ಡರ್ ಬಂದಿತ್ತು ನಿಜಕ್ಕೂ ಭಾರವಾದ ಮನಸ್ಸಿನಿಂದಲೇ ರಿಲೀವ್ ಆದೆ.
ಮತ್ತೆ ಒಂದುವರೆ ತಿಂಗಳ ಕಾಲ ಕಳೆದ ಮೇಲೆ ಮತ್ತೊಂದು ಪತ್ರ ಬಂದಿತು ಈ ಬಾರಿ 40 ದಿನಗಳ ಕಾಲ ಶಾಖೆ ಎರಡರಲ್ಲಿ ಕೆಲಸ ಮಾಡುವಂತೆ ಆದೇಶ. ಈ ಬಾರಿ ಶುಭ ಬದಲು ಇನ್ನೊಬ್ಬ ಗೆಳತಿ ಸರ್ವ ಮಂಗಳ ಎಂದು ನನ್ನೊಂದಿಗೆ ತಾತ್ಕಾಲಿಕವಾಗಿ ಕೆಲಸ ಮಾಡಲು ಬಂದಿದ್ದಳು ಮೊದಲ ಬಾರಿ ಅವಳಿಗೆ ಶಾಖೆ ಒಂದರಲ್ಲಿ ಪಾಲಿಕ ನೇಮಕಾತಿ ಆಗಿದ್ದು ಈ ಬಾರಿ ಶಾಖೆ 2 ಸಿಕ್ಕಿತ್ತು ಶುಭಳಿಗೆ ಎರಡನೆಯ ಬಾರಿ ಬೆಂಗಳೂರಿನಲ್ಲಿಯೇ ಕೆಲಸ ಮಾಡಲು ಅವಕಾಶ ದೊರೆಯಿತು ಎಂದು ತಿಳಿಯಲ್ಪಟ್ಟಿತು. ಸರ್ವ ಮಂಗಳ ನಮ್ಮದೇ ಬ್ಯಾಚ್ನ ಬೇರೆ ಕಾಲೇಜಿನ ಹುಡುಗಿ. ಸುಮಾರು ಜನ ಕಾಮನ್ ಗೆಳತಿಯರು ಇದ್ದರು ಮೊದಲ ಸಲದಲ್ಲೇ ಏಕವಚನ ಆರಂಭಿಸಿ ತುಂಬಾ ಆತ್ಮೀಯರಾದೆವು ಅವಳ ಅಕ್ಕ ಈಗಾಗಲೇ ಹಾಸನ ಶಾಖೆಯಲ್ಲಿ ಭಾರತೀಯ ಜೀವವಿಮ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಜೊತೆ ಜೊತೆಯಾಗಿ ಬೇಗ ಬೇಗ ಕೆಲಸ ನಿರ್ವಹಿಸಿ ಈ ಬಾರಿಯೂ ನಾವು ಎಲ್ಲರ ಮೆಚ್ಚುಗೆ ಗಳಿಸಿದೆವು 40 ದಿನ ಕಳೆದದ್ದು ಗೊತ್ತಾಗಲೇ ಇಲ್ಲ. ನಂತರ ಖಾಯಂ ನೌಕರಿ ಸಿಕ್ಕ ನಂತರವೂ ಪತ್ರ ಮುಖೇನ ನಮ್ಮ ಒಡನಾಟ ನಡೆದೇ ಇತ್ತು .ಈಗಲೂ ನನ್ನ ಮೆಚ್ಚಿನ ಗೆಳತಿ ಅವಳು. ಎರಡು ಬಾರಿ ಕರ್ತವ್ಯ ನಿರ್ವಹಿಸಿದ ದಿನಗಳಿಗೆ ವೇತನ ಬಂದದ್ದು ಅಷ್ಟೇ ಅಲ್ಲದೆ ಆ ವೇತನದ ಮೇಲೆ ಬೋನಸ್ ಸಹ ಆನಂತರ ಬಂದಿತ್ತು.
ನೆನ್ನೆ ಮತ್ತೆ ಒಬ್ಬ ಗೆಳತಿ ನಿವೃತ್ತಿ ಆಗುತ್ತೇನೆಂದು ಒಂದು ಸತ್ಕಾರ ಕೂಟ ಇಟ್ಟುಕೊಂಡಿದ್ದಾಗ ಸರ್ವಮಂಗಳ ಮತ್ತೆ ಸಿಕ್ಕಿದ್ದಳು. ಹಳೆಯ ವಿಷಯಗಳನ್ನೆಲ್ಲ ಮಾತನಾಡಿದೆವು .ಮೊದಲಿಗೆ ತಾತ್ಕಾಲಿಕ ವೃತ್ತಿ ನಿರ್ವಹಿಸಿದ ಶಾಖೆಯಲ್ಲೇ ಮುಂದಿನ ವರ್ಷ ತಾನು ನಿವೃತ್ತಿಯಾಗುತ್ತೇನೆಂದು ಅವಳು ಹೇಳಿದಾಗ ಒಂದು ಜೀವನಚಕ್ರ ಎಷ್ಟು ಬೇಗ ಉರುಳಿತಲ್ಲವಾ ಎಂದು ಅನಿಸಿತು. ಇಷ್ಟೊಂದು ಅನುಕೂಲಗಳನ್ನು ಮಾಡಿಕೊಟ್ಟ ನಮ್ಮ ನಿಗಮಕ್ಕೆ ಅದೆಷ್ಟು ಕೃತಜ್ಞತೆಗಳನ್ನು ಅರ್ಪಿಸಿದರು ಸಾಲದು. ಅದಕ್ಕೆ ನಿಷ್ಠವಾಗಿ ನಮ್ಮ ಅಂತರಾತ್ಮಕ್ಕೆ ಮೋಸವೆಸಗದಂತೆ ನಮ್ಮ ಕರ್ತವ್ಯ ನಿರ್ವಹಿಸಿದೆವು ಎಂಬ ಹೆಮ್ಮೆಯು ನಮಗಿದೆ.
(ಮುಂದಿನವಾರ ಮುಂದುವರೆಯಲಿದೆ)ಕೆಲಸ ಸಿಕ್ಕಿಯೇ ಬಿಟ್ಟಿತು.
ಸುಜಾತಾ ರವೀಶ್





ವಾವ್… ಚೆನ್ನಾಗಿದೆ..!
ಹೃನ್ಮನಪೂರ್ವಕ ವಂದನೆಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು..!
ಪ್ರೋತ್ಸಾಹದ ನುಡಿಗಳಿಗೆ ನಾನು ಆಭಾರಿ ಸರ್.ಧನ್ಯವಾದಗಳು.
Super suji continue without break
ಧನ್ಯವಾದಹಳು
ಹೌದು, ನಿಗಮದ ಆತ್ಮೀಯ ವಾತಾವರಣ ಎಲ್ಲರಿಗೂ ಇಷ್ಟ. ನಮ್ಮ ಜೀವನದ ಎಲ್ಲವನ್ನು ಕೊಟ್ಟ ನಿಗಮಕ್ಕೆ ಎಂದೆಂದೂ ಚಿರಋಣಿ.
ತುಂಬಾ ಚೆನ್ನಾಗಿ ಬರುತ್ತಿದೆ ಲೇಖನ. ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ.
ಧನ್ಯವಾದಗಳು ಉಮಾ. ನಿಜ ಪಸಲಿಸಿದಾರರಂತೆ ಉದ್ಯೋಗಿಗಳ ಯೋಗಕ್ಷೇಮದ ಹೊಣೆಯನ್ನೂ ನಿಗಮ ಚೆನ್ನಾಗಿ ನಿರ್ವಹಿಸಿದೆ.
ಸುಜಾತಾ ರವೀಶ್
ಓದಿನ ಬಗ್ಗೆ ಮಾಹಿತಿ ಚೆನ್ನಾಗಿದೆ ಧನ್ಯವಾದಗಳು
ಧನ್ಯವಾದಗಳು
ಸುಜಾತಾ ರವೀಶ್
ಮೊದಲಿಂದಲೂ ಓದುತ್ತಾ ಬಂದಿರುವ ಈ ಅಂಕಣ ಅಚ್ಚುಕಟ್ಟಾಗಿ ಮೂಡಿಬರುತ್ತಿದೆ.
ಮುರಳೀಧರ ಅದು.
ಚೆಂದದ ಬರಹ . ಸೂಕ್ಷ್ಮವಾಗಿ ಓದಿಸಿಕೊಂಡು ಹೋಯಿತು . ಮತ್ತೊಮ್ಮೆ ಪರಿಶೀಲಿಸಿ
ಹೊಸದೊಂದು ಪುಸ್ತಕ ಬರಲಿ ಎಂದು ಆಶಿಸುವೆ.
. ….. ಪ್ರಕಾಶ ಕಡಮೆ
ಧನ್ಯವಾದಗಳು ಸರ್. ನಿವೃತ್ತಿ ಸಮಯಕ್ಕೆ ಪುಸ್ತಕ ಮಾಡುವೆ.
ಸುಜಾತಾ ರವೀಶ್
ವೃತ್ತಿ ಜೀವನದ ಅನುಭವಗಳನ್ನು ಸೊಗಸಾಗಿ ಮುಂದಿಟ್ಟಿದ್ದೀರ ಸುಜಾತಾ. ಅಭಿನಂದನೆಗಳು
ಮಾಲತಿಶ್ರೀನಿವಾಸನ್
ಧನ್ಯವಾದಗಳು ಮೇಡಂ
ಸುಜಾತಾ ರವೀಶ್
ಬಹಳ ಚೆನ್ನಾಗಿ ತಿಳಿಸಿದ್ದೀರಿ
ಧನ್ಯವಾದಗಳು.
ಸುಜಾತಾ ರವೀಶ್
ಧನ್ಯವಾದಗಳು
ಸುಜಾತಾ ರವೀಶ್
ನೆನಪುಗಳ ಮಾತು ಮಧುರ…..ಅಲ್ಲವೇ ಸುಜಾತಾ ?……..ಎ. ಹೇಮಗಂಗಾ
ಖಂಡಿತಾ ಹೌದು ಹೇಮಾ….ಸವಿ ಸ್ಪಂದನೆಗಾಗಿ ಧನ್ಯವಾದಗಳು.
ಸುಜಾತಾ ರವೀಶ್
“ಅಂತರಾತ್ಮಕ್ಕೆ ಮೋಸವೆಸಗದಂತೆ” ಇದು ನಿಜವಾದ ಆಂತರ್ಯದ ಸಾಲು. ಧನ್ಯತೆ, ಹೃದ್ಯತೆ ಮತ್ತು ಸಾರ್ಥಕತೆಗಳ ಸಂಗಮಶಕ್ತಿ ಎಂದರೆ ಇವುಗಳೇ. ಹಂತಹಂತವಾಗಿ ಕಾಣುವ ಪಯಣ ಸಾಗುವ, ಮಾಗುವ ಹಾದಿಯನ್ನು ಕ್ರಮಿಸಿದ ವಿಧಾನ ಮನಮುಟ್ಟುತ್ತದೆ. ಜೊತೆಗೆ ನಿಮ್ಮ ದಾರಿ ಮನದಟ್ಟಾಗುತ್ತದೆ. ಇದೊಂದು ರೀತಿಯ ಮನಸಖರಾಯ ಉಂಟು ಮಾಡಿದ ಪುನರನುಭವಗಳ ಮೆಲುಕು. ಮುದದ ಮೋದದ ಹೆಜ್ಜೆ ಛಾಪು.
ವಾವ್ ಎಂತಹ ಸೊಗಸಾದ ಆತ್ಮೀಯ ಪ್ರತಿಕ್ರಿಯೆ. ನಿಜ ಬೇರೆಯವರಿಗೆ ಮೋಸ ಮಾಡಬಹುದು. ಆದರೆ ಅಂತರಾತ್ಮವನ್ನು ವಂಚಿಸಲು ಅಸಾಧ್ಯ. ನಿಮ್ಮ ಸ್ಪಂದನೆ ತುಂಬಾ ಮನ ಮುಟ್ಟಿತು, ಹೃದಯ ತಟ್ಟಿತು. ಧನ್ಯವಾದಗಳು ಎಂದರೆ ತುಂಬಾ ಕಡಿಮೆ.
ಸುಜಾತಾ ರವೀಶ್