ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಖಲೀಲ್ ಗಿಬ್ರಾನರ ದೃಷ್ಟಿಯಲ್ಲಿ ಪಾಲಕರ ಮನೆ

ಖಲೀಲ್ ಗಿಬ್ರಾನರ ದೃಷ್ಟಿಯಲ್ಲಿ ಪಾಲಕರ ಮನೆ
ಮಕ್ಕಳು ತಮ್ಮ ಜೀವನದಲ್ಲಿ ಹತ್ತು ಹಲವಾರು ಬಾರಿ ಯಾವುದೇ ರೀತಿಯ ಆಹ್ವಾನವಿಲ್ಲದೆ ಬರಬಹುದಾದ ಏಕೈಕ ಮನೆ ಅವರ ಪಾಲಕರದ್ದು. ತಾವೇ ಆ ಮನೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ತೆರೆದು ಒಳಗೆ ಪ್ರವೇಶಿಸಬಹುದು.
ಆ ಮನೆಯ ಒಳಗೆ ಅವರು ಪ್ರವೇಶಿಸುವಾಗ ಅವರ ಆಗಮನಕ್ಕಾಗಿ ಕಾಯುತ್ತಾ ಬಾಗಿಲನ್ನು ನಿಟ್ಟಿಸಿ ನೋಡುತ್ತಿರುವ ಜೋಡಿ ಕಣ್ಣುಗಳನ್ನು ನಾವು ಕಾಣಬಹುದು.
ಯಾವುದೇ ರೀತಿಯ ಚಿಂತೆ, ದುಗುಡಗಳಿಲ್ಲದ ಬಾಲ್ಯದ ದಿನಗಳನ್ನು ಕಳೆದ ಆ ಮನೆಯಲ್ಲಿ ತಾವು ನೆಮ್ಮದಿಯ ಬದುಕು ಮತ್ತು ಸಂತೋಷದಿಂದ ಇದ್ದ ನೆನಪು ಅವರನ್ನು ಚೇತೋಹಾರಿಯನ್ನಾಗಿಸುತ್ತದೆ.
ಆ ಮನೆಯಲ್ಲಿ ತಾವು ಕಳೆದ ಪ್ರತಿಯೊಂದು ಗಳಿಗೆಯೂ ಬಹುಮೂಲ್ಯವಾದದು. ಅವರೊಂದಿಗೆ ಮಾತನಾಡುವಾಗ ತಂದೆಯ ಆಶೀರ್ವಾದ ಭಾವ ಮತ್ತು ತಾಯಿಯ ಮುಖದಲ್ಲಿರುವ ತೃಪ್ತಿ ಇವೆರಡೂ ತಮಗೆ ಬದುಕಿನಲ್ಲಿ ಸಿಕ್ಕ ಅತಿ ದೊಡ್ಡ ಕಾಣಿಕೆ ಆಗಿರಬಹುದು. ತಮ್ಮ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿರುವ ಆ ಮನೆಯ ಮಾಲೀಕರಿಗೆ ತಮ್ಮ ಮಕ್ಕಳು ಬರದೇ ಹೋದರೆ ನೋವಾಗಬಹುದು, ಮನಸ್ಸು ಮುದುಡಬಹುದು.
ಎರಡು ಜೋಡಿ ಜೀವಿಗಳು ತಮ್ಮ ಬದುಕನ್ನು ಬೆಳಗಲು ಹಚ್ಚಿದ ದೀಪ ಅವರ ಮಕ್ಕಳು.ತಮ್ಮ ಮಕ್ಕಳ ಬದುಕು ಸಂತೋಷ ಮತ್ತು ಪ್ರೀತಿಯಿಂದ ತುಂಬಿರಲಿ ಎಂದು ಆಶಿಸುವ ಜೀವಿಗಳೇ ಈ ಪಾಲಕರು.
ಪಾಲಕರ ಮನೆಯ ಊಟದ ಮೇಜು ಅತ್ಯಂತ ಶುದ್ಧವಾದದ್ದು. ಅಲ್ಲಿ ಯಾವುದೇ ನಾಟಕೀಯತೆಯಾಗಲಿ, ಬೂಟಾಟಿಕೆಗಾಗಲಿ ಅವಕಾಶವಿಲ್ಲದ ಮನೆ ಪಾಲಕರದು. ಆ ಮನೆಯ ಊಟದ ಮೇಜಿನ ಮೇಲೆ ಆಹಾರಕ್ಕೆ ಎಂದೂ ಕೊರತೆಯಾಗದು… ಆದರೆ ಮಕ್ಕಳಾದ ತಮಗೆ ಹಸಿವೆಯೂ ಆಗದು.ತಮ್ಮ ಮಕ್ಕಳು ಉಣ್ಣದೆ ಹೋದರೆ ಆ ಮನೆಯ ಮಾಲಕರ ಹೃದಯ ಒಡೆದು ಹೋಗಬಹುದು ಮತ್ತು ಅವರು ಸಿಟ್ಟಿಗೇಳಲೂಬಹುದು.
ಆ ಮನೆಯು ಮಕ್ಕಳಿಗೆ ಖುಷಿ ಮತ್ತು ಸಂತಸವನ್ನು ತಂದುಕೊಡುತ್ತದೆ…. ಆದ್ದರಿಂದ ಓ ಮಕ್ಕಳೇ! ತಡವಾಗುವ ಮುನ್ನವೇ ಇಂತಹ ಮನೆಗಳ ಮೌಲ್ಯವನ್ನು ಅರಿಯಿರಿ.
ಈಗಲೂ ತಮ್ಮ ಪಾಲಕರ ಮನೆಗೆ ಹೋಗುವ ಅದೃಷ್ಟವಿದ್ದವರು ನಿಜವಾಗಿಯೂ ಅದೃಷ್ಟ ಶಾಲಿಗಳು
ಖಲೀಲ್ ಗಿಬ್ರಾನ್ ಬರೆದಿರುವ ಭಾವನಾತ್ಮಕ ಕವನಗಳು ನಮ್ಮೆಲ್ಲರ ಮನಸ್ಸಿನ ಭಾವಗಳನ್ನು ಪ್ರತಿನಿಧಿಸುತ್ತದೆ.
ಅದೆಷ್ಟು ನಿಜವಲ್ಲವೇ ಸ್ನೇಹಿತರೆ? ಯಾವುದೇ ರೀತಿಯ ಬಂಧನಗಳಿಲ್ಲದ ಸಂಬಂಧಗಳು ಪಾಲಕರು ಮತ್ತು ಮಕ್ಕಳದ್ದು. ಅಲ್ಲಿರುವುದು ಕೇವಲ ಪ್ರೀತಿಯ ಬಂಧನ.
ಎಲ್ಲರೂ ತಮ್ಮ ಬದುಕಿನ ಕೊನೆಯವರೆಗೂ ಪಾಲಕರನ್ನು ಹೊಂದಿರಲು ಸಾಧ್ಯವಿಲ್ಲ..,.. ಕೆಲವರು ತಮ್ಮ ಬದುಕಿನಲ್ಲಿ ಇನ್ನೂ ಇರುವ ಪಾಲಕರ ಮಹತ್ವ ವನ್ನು ಮಹತ್ವವನ್ನು ಅರಿತಿರುವುದಿಲ್ಲ.ಇರುವಾಗ ಗೌರವ, ಆದರ, ಪ್ರೀತಿ ತೋರದೆ ಸತ್ತ ಮೇಲೆ ನೊಂದು ಹಾಡಾಡಿಕೊಂಡು ಅತ್ತು ಕರೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಅಲ್ಲವೇ ಸ್ನೇಹಿತರೆ?
ವೀಣಾ ಹೇಮಂತ್ ಗೌಡ ಪಾಟೀಲ್,




