ಪುಸ್ತಕ ಸಂಗಾತಿ
ಸಂತೆಬೆನ್ನೂರು ಫೈಜ್ನಟ್ರಾಜ್
ಕಂಚುಗಾರನಹಳ್ಳಿ ಸತೀಶ್ ಅವರ ಕೃತಿ
ಪೆಪ್ಪರ್ಮೆಂಟ್
(ಮಕ್ಕಳ ಪದ್ಯಗಳು)


ಸವೆದರೂ ನಾಲಗೆಯಲುಳಿಯುವ ಸವಿ ಅಂಟು.. ಪೆಪ್ಪರ್ಮೆಂಟು
ಮಕ್ಕಳು ಬರೆಯುವುದು ಮತ್ತು ಮಕ್ಕಳಿಗೆ ಬರೆಯುವುದು ಎರಡೂ ಕಷ್ಟದ ಕೆಲಸ. ಮಕ್ಕಳ ಸಾಹಿತ್ಯ ಮಕ್ಕಳು ಬರೆಯಬೇಕೋ, ಮಕ್ಕಳಿಗಾಗಿ ದೊಡ್ಡವರು ಬರೆಯಬೇಕೋ ಎಂಬ ಜಿಜ್ಞಾಸೆ ಕಾಡುತ್ತಲೇ ಇರುವ ದಿನಮಾನಗಳಲ್ಲಿ ಮಕ್ಕಳ ಸಾಹಿತ್ಯ ವಿಫುಲವಾಗಿ ಕಾಣಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಇದಕ್ಕೆ ಹೊಸ ಸೇರ್ಪಡೆ ಕಂಚುಗಾರನಹಳ್ಳಿ ಸತೀಶ್ ಅವರ ಈ ಮಕ್ಕಳ ಕವಿತೆಗಳ ಪೆಪ್ಪರ್ಮೆಂಟು.
ನೂರಾರು ನಿರೀಕ್ಷೆಗಳು ಒಮ್ಮೊಮ್ಮೆ ಒಂದೂ ಕೈಗೂಡದೇ ಹೋಗಬಹುದು. ಆದರೆ ಸತತ ಯತ್ನ ಮತ್ತು ನಾಳಿನ ಭರವಸೆಯ ಕೋಟೆಯನ್ನು ಕವಿ ಮಾತ್ರ ಕಟ್ಟಬಲ್ಲ. ಮಕ್ಕಳ ಮನಸ್ಸನ್ನು ಅರಿತವ, ಮಕ್ಕಳ ಒಡನಾಡಿಯಾದವನು ಮಾತ್ರ ಮಕ್ಕಳ ಸಾಹಿತ್ಯವನ್ನು ಸೂಕ್ಷ್ಮ ಸಂವೇದನೆಯೊಂದಿಗೆ ಬರೆಯಬಲ್ಲ.
ಮಣ್ಣು ಸದಾ ಜೀವ ಕೊಡುವ ಜೀವದಾಯಿನಿ. ಅದೆಂದೂ ರಕ್ತ ಸುರಿಸಲಾರದು. ಅದನ್ನು ಕೆಂಪು ಮಾಡುವವರೇನಿದ್ದರೂ ನಾವು. ಆ ಮಣ್ಣಿನಲ್ಲಿ ಎಂತಹ ಬೀಜ ಚೆಲ್ಲಿದರೂ ನಾಳಿನ ಫಸಲು ಕಾಣಲು ಸಾಧ್ಯ. ಪೆಪ್ಪರ್ಮೆಂಟಿನ ಈ ಸವಿ ಮಕ್ಕಳಿಗೆ ರುಚಿಸುವ ಸವಿ ಕಾಣುತ್ತದೆ.
ಒಬ್ಬ ಕವಿ ಸಮಾಜ ಸುಧಾರಕನಾಗುವ ದರ್ದಿಲ್ಲ, ಲೋಕ ಬದಲಾಯಿಸುವ ಉಮ್ಮೇದಿ ಇಲ್ಲ, ಜಗದ ಜನರ ಮನ ಗೆಲ್ಲುವ ಕಳಕಳಿ ಇಲ್ಲವೇ ಇಲ್ಲ. ಮುಂದಿನ ಪ್ರಜೆಗಳಾಗುವ ಮಕ್ಕಳಿಗೆ ಒಳ್ಳೆಯದನ್ನು ಓದಿಸುವ ಜವಾಬ್ದಾರಿಯಿದೆ. ಅದೂ ಕವಿತೆಯ ಮೂಲಕ.
ಇದಕ್ಕಿಂತ ಕವಿ ಬೇರೆ ಉದ್ಧಾರದ ಕೆಲಸ ಮಾಡಲಿಕ್ಕಾದರೂ ಏನಿದೆ? ಮಕ್ಕಳ ಪದ್ಯಗಳ ಮೂಲಕ ಹೊಸ ಲೋಕ ತೆರೆಯುವ ಪ್ರಾಮಾಣಿಕ ಯತ್ನ ಇಲ್ಲಿ ಸಫಲವಾಗಿದೆ.
ಜಗತ್ತು ಎಷ್ಟು ಸುಂದರ ಇದೆಯೋ ಅಷ್ಟೇ ಪ್ರಮಾಣದಲ್ಲಿ ಕುರೂಪವೂ ಇದೆ. ಹಾಗೆಂದ ಕೂಡಲೇ ಸುಂದರವಾಗಿದ್ದ ಎಲ್ಲವೂ ನಮ್ಮದೆನ್ನಲು ಸಾಧ್ಯವೇ? ಮನಸಿಗೆ ತಾಕಿದ್ದು ಮಾತ್ರ ನಮ್ಮದಾಗಲು ಸಾಧ್ಯ. ಅಂತಹ ಸುಂದರವಾದ ಮಕ್ಕಳ ಪದ್ಯಗಳು ಓದುಗ ಮಕ್ಕಳಿಗೆ ಈ ಪೆಪ್ಪರ್ಮೆಂಟಿನಲ್ಲಿ ದಕ್ಕುತ್ತವೆ.
ಓದಿದ ಪ್ರತಿ ಸಾಲು ಓದಿದ ತಕ್ಷಣ ಇದು ನಮ್ಮದೇ ಸಾಲು ಅಂತನ್ನಿಸಿದಾಗ ಆ ಕವಿತೆ ಗೆಲ್ಲುತ್ತದೆ. ಅಂತಹ ಕವಿತೆಗಳು ಈ ಸಂಕಲನದಲ್ಲಿ ಸಹೃದಯನಿಗೆ ಅಲ್ಲಲ್ಲಿ ಮುಖಾಮುಖಿಯಾಗುತ್ತಲೇ ಹೋಗುತ್ತವೆ! ಕಾವ್ಯ ಎದೆಯ ಹಾಡದು, ಮನ ಮೈ ಹದವಾದಾಗ ಅದಾಗಿಯೇ ಹೊಮ್ಮಿ ಹೊರ ಬರುತ್ತದೆ ಎನ್ನುತ್ತಾರೆ ಅಡಿಗರು. ಅನುಭವ ಮತ್ತು ಹೃದಯದ ಭಾವಗಳ ಬೆಸುಗೆಯ ಅನುಸಂಧಾನವೂ ಹೌದು! ಇದು ಮಕ್ಕಳ ಸಾಹಿತ್ಯಕ್ಕೂ ಅನ್ವಯ. ಭಿನ್ನ ವಸ್ತು, ಭಿನ್ನ ದನಿ ಮೂಲಕ ಕವಿ ಮಕ್ಕಳ ಎದುರು ನಿಂತಾಗ ಚಿಂತನೆಗೆ ದಾರಿಯಾಗುತ್ತದೆ.
ಬೆಳೆ ಬೆಳೆಯುತ್ತಾ ಸಾಗುವ ಮಕ್ಕಳ ಲೋಕದಲ್ಲಿ ಸತ್ವಯುತ ಸಾಲು ಕೊಟ್ಟಾಗ ಅಪರೂಪದ ಸಂಸ್ಕಾರ ಮಕ್ಕಳಲ್ಲಿ ಮೈಗೂಡಲು ಸಾಧ್ಯ. ಅಂತಹ ಸಂಸ್ಕಾರದ ಕೆಲ ರಚನೆಗಳು ಇಲ್ಲಿ ನಮಗೆ ಮುಖಾಮುಖಿಯಾಗುತ್ತವೆ,
ಕನ್ನಡ ನಾಡಿನ ಮಕ್ಕಳು ಈ ಪೆಪ್ಪರ್ಮೆಂಟಿನ ಸ್ವಾದ ಸವಿಯಲಿ, ಅದರ ಆಹ್ಲಾದದ ಘಮ ಇತರರಿಗೂ ದಾಟಿಸಲಿ
ಶುಭವಾಗಲಿ….
ಸಂತೆಬೆನ್ನೂರು ಫೈಜ್ನಟ್ರಾಜ್




