ಕಾವ್ಯ ಸಂಗಾತಿ
ವಿಶಾಲಾ ಆರಾಧ್ಯ
ʼಬುದ್ದಿಮತ್ತುಭಕ್ತಿʼ

ಜ್ಞಾನ ಅಥವಾ ಬುದ್ದಿ ಪಡೆದವನು ಎಲ್ಲರಿಂದ ಗೌರವ ಪಡೆದುಕೊಳ್ಳುವುದು ಸಹಜ. ಬುದ್ದಿ ಅಥವಾ ಜ್ಞಾನವಿದ್ದರೆ ಸಾಲದು ಅದರ ಉಪಯೋಗ ಆದಾಗಲೇ ಅದಕ್ಕೆ ಬೆಲೆ. ‘ಜ್ಞಾನವಿಲ್ಲದ ಕ್ರಿಯೆ- ಕ್ರಿಯೆಯಿಲ್ಲದ ಜ್ಞಾನ ಎರಡೂ ವ್ಯರ್ಥ’ ಎಂದಿದ್ದಾರೆ ಹಿರಿಯರು.
ಜ್ಞಾನದ ಬಗ್ಗೆ ಅಲ್ಲಮ ಪ್ರಭುಗಳು ಹೀಗೆಂದಿದ್ದಾರೆ
ಜ್ಞಾನದ ಉಬ್ಬು ಕೊಬ್ಬಿನಲ್ಲಿ
ನುಡಿಯುತ್ತಿಪ್ಪರೆಲ್ಲರ
ನಾಮ ನಾಸ್ತಿಯಾಗದು
ತಮಗುಣ ನಾಸ್ತಿಯಾಗದು
ಕರುಣಾದಿ ಗುಣಂಗಳು
ನಾಸ್ತಿಯಾಗವು
ಇದೆತ್ತಣ ಉಲುಹೋ ಗುಹೇಶ್ವರಾ!
ಜ್ಞಾನಿ ಎಂಬ ಪದಕ್ಕೆ ಋಷಿ, ಗುರು ಎಂಬರ್ಥವನ್ನು ನಾವು ಬಳಸುತ್ತೇವೆ. ಇಂತಹ ಗುರುಗಳು ತಮಗೆ ಜ್ಣಾನವಿದೆ ಎಂಬ ಉಬ್ಬಿನ ನಡೆಯಲ್ಲಿ ನಡೆಯುತ್ತಿದ್ದಾರೆ. ತಾನೇ ಹೆಚ್ಚು ತಿಳಿದವರೆಂಬ ಗರ್ವದಿಂದಿರುತ್ತಾರೆ. ಕೆಲವರು ಜ್ಞಾನ ಇಲ್ಲದಿದ್ದರೂ ಇದೆಯೆಂಬಂತೆ ನಟಿಸುತ್ತಾರೆ. ಬೇರೆಯವರು ಹೇಳಿದಾಗ “ಅದು ನನಗೆ ಮೊದಲೇ ಗೊತ್ತಿತ್ತು” ಎನ್ನುತ್ತಾರೆ. ಜ್ಞಾನಿಯಾದವನು ಇನ್ನೊಬ್ಬರಿಗೆ ಅಜ್ಞಾನ ಕಳೆದು ಸುಜ್ಞಾನ ನೀಡುವವನಾಗಿರಬೇಕು. ಜ್ಞಾನದ ಅಹಂ ಏರಿ ಉಬ್ಬಿ ನಡೆಯುವರ ನಾಮ ನಾಸ್ತಿಯಾಗದು ಅಂದರೆ ಜ್ಞಾನದ ಉಬ್ಬುಕಿಬ್ಬಿನಕಿ ನಡೆಯುವವರು ಹೆಸರು ಗಳಿಸಿಕೊಳ್ಳುವರು . ತಮಗುಣ ಅಂದರೆ ಅವರಲ್ಲಿ ಅಡಗಿದ ಅಜ್ಞಾನದ ಕತ್ತಲೆಯೂ ಹೋಗುವುದಿಲ್ಲಾ..ಅವರಲ್ಲಿನ ಕರುಣಾದಿಗುಣಗಳೂ ಹೋಗುವುದಲಿಲ್ಲಾ ಇದೆತ್ತಣ ಉಲುಹೋ ಅಂದರೆ ಇದೆಂತಹ ಮಾತು ಗುಹೇಶ್ವರಾ! ಎನ್ನುತ್ತಾರೆ ಗುರು ಅಲ್ಲಮಪ್ರಭು.
ಉಪಚಾರದ ಗುರುವಿಂಗೆ
ಉಪಚಾರದ ಶಿಷ್ಯ
ಉಪಚಾರದ ಲಿಂಗ
ಉಪಚಾರದ ಜಂಗಮ
ಉಪಚಾರದ ಪ್ರಸಾದವ ಕೊಂಡು
ಗುರುವಿಂಗೆ ಭವದ ಲೆಂಕನಾಗಿ
ಅಂಧಕನ ಕೈಯ್ಯ ಅಂಧಕನು ಹಿಡಿದಂತೆ
ಇವರಿಬ್ಬರೂ ಹೊಲಬುಗೆಟ್ಟರು ಕಾಣಾ ಗುಹೇಶ್ವರಾ!
ನಿಜವಾಗಿಯೂ ದೇವನಿಗೆ / ಲಿಂಗಸ್ವರೂಪಿ ಶಿವನಿಗೆ ಬೇಕಿರುವುದು ಮನದ ಭಕ್ತಿಯಷ್ಟೇ. ಆದರೆ ಇಲ್ಲಿ ಉಪಚಾರ ಪ್ರಿಯನಾಗಿ, ಶಿಷ್ಯ ಉಪಚಾರಿಯಾಗಿ,ಲಿಂಗಕ್ಕೆ ಉಪಚಾರಮಾಡಿ, ಜಂಗಮನ ಪ್ರಸಾದವನ್ನು ತೆಗೆದುಕೊಂಡು ಗುರುವನ್ನು ಭವಿಯ (ಲೋಕದ) ಲೆಕ್ಕದಲ್ಲಿಯೇ ನೋಡುವ ಪರಿ ಹೇಗಿದೆಯೆಂದರೆ “ಒಬ್ಬ ಕುರುಡ ಇನ್ನೊಬ್ಬ ಕುರುಡನ ಕೈಹಿಡಿದು ನಡೆಸುತ್ತೇನೆ” ಎಂಬ ಭರವಸೆಯಂತೇ ಸುಳ್ಳಾಗಿದೆ. ಇಂತಹ ಗುರು ಶಿಷ್ಯ ಇವರಿಬ್ಬರೂ ದಾರಿ ತಪ್ಪಿದ/ ದಿಕ್ಕುಗಾಣದವರೇ ಎಂದಿದ್ದಾರೆ ಅಲ್ಲಮ ಪ್ರಭುಗಳು.
ಮಜ್ಜನಕ್ಕೆರೆವಡೆ, ನೀನು ಶುದ್ಧ ನಿರ್ಮಲದೇಹಿ. ಪೂಜೆಯ ಮಾಡುವಡೆ, ನಿನಗೆ ಗಗನಕಮಲಕುಸುಮದ ಅಖಂಡಿತಪೂಜೆ. ಧೂಪದೀಪಾರತಿಗಳ ಬೆಳಗುವಡೆ, ನೀನು ಸ್ವಯಂ ಜ್ಯೋತಿಪ್ರಕಾಶನು. ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು. ಅಷ್ಟವಿಧಾರ್ಚನೆಗಳ ಮಾಡುವಡೆ, ನೀನು ಮುಟ್ಟಬಾರದ ಘನವೇದ್ಯನು. ನಿತ್ಯನೇಮಗಳ ಮಾಡುವಡೆ; ನಿನಗೆ ಅನಂತನಾಮಂಗಳಾದವು ಗುಹೇಶ್ವರಾ
ಸ್ನಾನವಮಾಡಿಸಬೇಕೆಂದರೆ ನೀನು ಶುದ್ಧ ದೇಹಿಯಾಗಿರುವೆ, ಪೂಜೆಯ ಮಾಡಬೇಕೆಂದುಕೊಂಡರೆ ನೀನು ಗಗನವೆಂಬ ಕಮಲಪುಷ್ಪದಿಂದ ನಿರಂತರ ಪೂಜೆಗೊಂಡಿರುವೆ..ಧೂಪದೀಪದಾರತಿ ಬೆಳಗೋಣವೆಂದರೆ ನೀನು ಸ್ವಯಂಪ್ರಕಾಶಿತನು..ಅಷ್ಟವಿಧಾರ್ಚನೆ ಮಾಡಬೇಕೆಂದರೆ ಅಂದರೆ ಜಲಾಭಿಷೇಕ, ಗಂಧಧಾರಣೆ, ಅಕ್ಷತಾರ್ಪಣೆ, ಪತ್ರಪುಷ್ಪಾರ್ಚನೆ,ಧೂಪ ಸಮರ್ಪಣೆ, ದೀಪ ಸಮರ್ಪಣೆ,ನೈವೇದ್ಯ ಮತ್ತು ತಾಂಬೂಲ ಅರ್ಪಣೆ ಮಾಡಲು ನಿನ್ನ ಮುಟ್ಟಲಿಕ್ಕಾಗದ ಘನವೇದ್ಯನು ನೀನು..ನಿನ್ನ ಒಂದು ನಾಮವನ್ನಿಡಿದು ನಿತ್ಯನೇಮವ ಮಾಡಿದರೆ ಸಾಕು ನಿನಗೆ ಅದೇ ಅನಂತ ನಾಮಗಳಾದವು ಗುಹೇಶ್ವರಾ!
ಎಂದು ಅಲ್ಲಮಪ್ರಭು ಗಳು ಈ ವಚನದಲ್ಲಿ ಭಕ್ತಿಯ ಬಗ್ಗೆ ಭಕ್ತಿಯ ವಿವರಗಳನ್ನು ನೀಡಿದ್ದಾರೆ.
—————
ವಿಶಾಲಾ ಆರಾಧ್ಯ




