ಸ್ಫೂರ್ತಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
ʼನಿಮ್ಮಲ್ಲಿ ನಿಮಗೆ ಶ್ರದ್ಧೆಯಿರಲಿ
ಸರ್ವ ಶಕ್ತರು ನೀವುʼ


ನೀವು ಯಾವಾಗ ‘ನಾನೊಬ್ಬ ಸಾಮಾನ್ಯ ವ್ಯಕ್ತಿ.’ ಎನ್ನುತ್ತಿರೋ ನೀವು ಸತ್ಯವನ್ನು ನುಡಿಯುತ್ತಿಲ್ಲ. ನಿಮಗೆ ನೀವೇ ಕೆಡುಕರಾಗಲು ದುರ್ಬಲರಾಗಲು ವಶೀಕರಣವನನ್ನು ಮಾಡುತ್ತಿದ್ದೀರಿ. “ನೀವು ಏನನ್ನು ಯೋಚಿಸುತ್ತಿದ್ದೀರೋ ಅದೇ ಆಗುತ್ತೀರಿ.” ನಿಮ್ಮನ್ನು ನೀವು ದುರ್ಬಲರೆಂದು ಭಾವಿಸಿದರೆ, ನೀವು ದುರ್ಬಲರಾಗುತ್ತೀರಿ.
ಬಲಿಷ್ಠರೆಂದು ಭಾವಿಸಿದರೆ ಬಲಿಷ್ಠರಾಗುತ್ತೀರಿ. ಅಪವಿತ್ರರೆಂದು ಭಾವಿಸಿದರೆ ಅಪವಿತ್ರರಾಗುತ್ತೀರಿ. ಪವಿತ್ರರೆಂದು ಭಾವಿಸಿದರೆ ಪವಿತ್ರರಾಗುತ್ತೀರಿ. ಇದು ನಮಗೆ ನಮ್ಮನ್ನು ನಾವು ದುರ್ಬಲರೆಂದು ಭಾವಿಸಬಾರದೆಂದು ಬದಲಾಗಿ ಬಲಿಷ್ಠರು ಮತ್ತು ಸರ್ವ ಶಕ್ತರೆಂದು ಕಲಿಸಿಕೊಡುತ್ತದೆ.
ಯಾರು ಹಗಲಿರುಳು ನಾನು ಏನೂ ಅಲ್ಲ ಎಂದು ಭಾವಿಸುತ್ತಾರೋ ಅವನಿಂದ ಯಾವ ಒಳಿತನ್ನೂ ಸಾಧಿಸಲಾಗದು.
ಹಳೆಯ ಧರ್ಮಗಳು ಹೇಳಿದವು ಯಾರು ದೇವರನ್ನು ನಂಬುವುದಿಲ್ಲವೋ ಅವರು ನಾಸ್ತಿಕರು ಎಂದು ಆದರೆ ಹೊಸ ಧರ್ಮ ಹೇಳುತ್ತದೆ.ಯಾರು ತನ್ನನ್ನು ತಾನು ನಂಬುವುದಿಲ್ಲವೋ ಅವರು ನಾಸ್ತಿಕರು. ಜಗತ್ತಿನ ಇತಿಹಾಸವೆಂದರೆ ಅದು ಕೆಲವೇ ಕೆಲವು ಆತ್ಮವಿಶ್ವಾಸವುಳ್ಳ ವ್ಯಕ್ತಿಗಳ ಜೀವನ ಚರಿತ್ರೆ. ಆ ಪ್ರಚಂಡ ಶ್ರದ್ಧೆ ಒಳಗಿರುವ ದೈವತ್ವವನ್ನು ಬಡೆದೆಬ್ಬಿಸುತ್ತದೆ. ನೀವು ಏನನ್ನು ಬೇಕಿದ್ದರೂ ಸಾಧಿಸಬಲ್ಲಿರಿ.
“ನಿಮ್ಮೊಳಗಿರುವ ಆ ಅನಂತ ಶಕ್ತಿಯನ್ನು ಅಭಿವ್ಯಕ್ತಿಗೊಳಿಸಲು ಸಾಕಷ್ಟು ಪ್ರಯತ್ನವನ್ನು ಮಾಡದಿದ್ದಾಗ ಮಾತ್ರ ನೀವು ವಿಫಲರಾಗುವಿರಿ.” ಇವು ಸ್ವಾಮಿ ವಿವೇಕಾನಂದರ ಆತ್ಮ ಶ್ರದ್ಧೆಯ ನುಡಿಗಳು. ಶ್ರದ್ಧಾನಿರತರಾಗಬಯಸುವವರಿಗೆ ಸ್ವಾಮಿಜಿ ಮಹಾನ ಆದರ್ಶ.
ಶಕ್ತಿಯ ಕುರಿತು ಚಿಂತಿಸಿ
ಮನುಷ್ಯನ ದೌರ್ಬಲ್ಯಕ್ಕೆ ದೌರ್ಬಲ್ಯದ ಕುರಿತು ಚಿಂತಿಸುವುದೇ ಔಷಧಿಯಲ್ಲ. ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರೋಪಾಯ ಎಂದಿದ್ದಾರೆ.
ಎಂಥ ಅದ್ಭುತ ಯಂತ್ರ ನಮ್ಮ ದೇಹ! ಎಂಥ ಅದ್ಭುತ ಶಕ್ತಿ ಹುದುಗಿದೆ ನಮ್ಮಲ್ಲಿ ಆದರೂ ಕಣ್ಣನ್ನು ಮುಚ್ಚಿಕೊಂಡು ಕತ್ತಲೆ ಎಂದು ಅಳುವವರು ನಾವು. ತೀವ್ರ ಹಂಬಲ ತೀವ್ರ ಅಭೀಪ್ಸೆಗಳೆ ಗುರಿ ಸಾಧಿಸಲು ಯೋಗ್ಯವಾದ ವಾತಾವರಣದೆಡೆ ನಿಮ್ಮನ್ನು ಸೆಳೆಯುವವು. ನಿಮಗೇನು ಬೇಕು ಎಂಬುದನ್ನು ಸ್ಥಿರ ಚಿತ್ತರಾಗಿ ಯೋಚಿಸಿ ಅವು ವಾಸ್ತವವು ಸಾದ್ಯವೂ ಆಗುವ ಬೇಕುಗಳಾಗಿರಲಿ.
ಜಗಲಿ ಹಾರದೇ ಗಗನ ಹಾರುವ ಕಲ್ಪನೆಯ ಗಾಳಿ ಗೋಪುರ ಬೇಕುಗಳಾಗದಿರಲಿ.
‘ನೀವು ಏನಾಗಬಯಸುತ್ತೀರಿ ಮೊದಲು ನೀವು ತಿಳಿದುಕೊಳ್ಳಿರಿ. ಬಳಿಕ ನೀವು ಮಾಡಬೇಕಾದ್ದನ್ನು ಮಾಡಿರಿ.’ ಎಂದಿದ್ದಾನೆ. ಗ್ರೀಕ್ ಋಷಿ ಸ್ಟೋಯಿಕ್ ತತ್ವಜ್ಞಾನಿ ಇಪಿಕ್ವೆಟಸ್.
ಜಗತ್ತು ಪೂಜಿಸುವುದು ಶಕ್ತಿಯನ್ನು ದುರ್ಬಲತೆಯನ್ನಲ್ಲ. ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು.
ಪುರಂದರ ದಾಸರು ಹೇಳಿದಂತೆ ಶಕ್ತನಾದರೆ ನೆಂಟರೆಲ್ಲ ಹಿತರು ಅಶಕ್ತನಾದರೆ ಆಪ್ತ ಜನರೇ ವೈರಿಗಳು.’ ಶಕ್ತಿಯನ್ನು ಎಲ್ಲರೂ ಭಕ್ತಿ ಗೌರವದಿಂದ ನೋಡುತ್ತಾರೆ. ಕುದುರೆಯನ್ನು ಬಲಿ ಕೊಡುವುದಿಲ್ಲ. ಆನೆಯನ್ನು ಬಲಿ ಕೊಡುವುದಿಲ್ಲ. ಹುಲಿಯನ್ನಂತೂ ಇಲ್ಲವೇ ಇಲ್ಲ. ಆದರೆ ಮೇಕೆಯನ್ನು ಹಿಡಿದು ಬಲಿ ಕೊಡುತ್ತಾರೆ. ಅಯ್ಯೋ! ವಿಧಿಯು ದುರ್ಬಲರನ್ನು ನಾಶಗೊಳಿಸುತ್ತದೆ!
ಶಕ್ತಿಯ ಹಿರಿಮೆ ಗರಿಮೆಯೇ ಇಲ್ಲಿ ಧ್ವನಿತವಾಗಿದೆ.
ಪ್ರಗತಿಗೆ ಪ್ರಬಲ ಅಸ್ತ್ರ ಶ್ರದ್ಧೆ
ಶ್ರದ್ಧೆಹೀನರಾಗಿ ಜೀವನ ನಡೆಸುವದೆಂದರೆ ತಾನು ಕುಳಿತ ಕೊಂಬೆಯನ್ನು ತಾನೇ ಕತ್ತರಿಸಿದಂತೆ. ಯಾರಿಗೆ ಶ್ರದ್ಧೆಯಿಲ್ಲವೋ ಅಂಥವರು ತಮ್ಮ ಜೀವನದ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಾರೆ. ಶ್ರದ್ಧೆಯುಳ್ಳ ವ್ಯಕ್ತಿ ಇತರರ ಜೊತೆಗೆ ಆರ್ಥಪೂರ್ಣ ಸಂಬಂಧವನ್ನು ಹೊಂದಿರುತ್ತಾನೆ. ನಿರ್ಮಲವಾದ ಮನದಲ್ಲಿ ಶ್ರದ್ಧೆ ನೆಲೆಗೊಳ್ಳುತ್ತದೆ.
ಶ್ರದ್ಧೆ ದುಷ್ಟರ ಮನಸ್ಸಿಗೆ ಹಿಡಿಸುವುದೇ ಇಲ್ಲ. ಶ್ರದ್ಧೆಯೊಂದಿದ್ದರೆ ಜಗದ ಇನ್ನಿತರೆ ಯಾವ ಶಕ್ತಿಯು ನಿಮ್ಮನ್ನು ನೀವಂದುಕೊಂಡದ್ದನ್ನು ಮಾಡುವುದರಿಂದ ತಡೆಯಲು ಸಾಧ್ಯವೇ ಇಲ್ಲ. ಜೀವನದಲ್ಲಿ ನೋವು ನಲಿವು ಸುಖ ದುಃಖ ಗೆಲುವು ಸೋಲು ಸಾಮಾನ್ಯ. ಜಗತ್ತಿನಲ್ಲಿ ಶ್ರೇಷ್ಠ ಎಂದು ಕರೆಯಿಸಿಕೊಂಡವರೆಲ್ಲ
ಶ್ರದ್ಧೆಯನ್ನು ತಮ್ಮ ಪ್ರಬಲ ಅಸ್ತ್ರವಾಗಿಸಿಕೊಂಡವರು.
ಯಾವ ವ್ಯಕ್ತಿಯೇ ಆಗಲಿ ತನ್ನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಶ್ರದ್ಧೆ ಬಹು ಮುಖ್ಯ. ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ದೃಢ ನಿರ್ಧಾರವೇ ಬಲಿಷ್ಟನಿಗೂ ದುರ್ಬಲನಿಗೂ ಇರುವ ವ್ಯತ್ಯಾಸವನ್ನು ಸೂಚಿಸುತ್ತದೆ.’ ಎನ್ನುತ್ತಾನೆ ಕಾರ್ಲೈಲ್. ತದೇಕ ನಿಷ್ಟೆಯಿಂದ ನಿಶ್ಚಿಂತೆಯಿಂದ ಮುನ್ನಡೆಯುವುದಷ್ಟೇ ನಮ್ಮ ಕರ್ತವ್ಯವಾಗಬೇಕು. ನಿಧಾನವಾದರೂ ಸರಿ ಸಮರ್ಪಕ ದಾರಿಯಲ್ಲಿಯೇ ಹೆಜ್ಜೆಯಿಟ್ಟು ಮುನ್ನಡೆಯುವುದರಿಂದ ಗುರಿ ಸೇರುವುದಂತೂ ಸರಿ.
ಶಕ್ತಿ ವೃದ್ಧಿಗೆ ಶ್ರದ್ಧೆ ಮುಖ್ಯ.
ಹಾಕಿಕೊಂಡ ನಿಯಮಗಳನ್ನು ನಿತ್ಯ ನಿಯಮಿತ ಪಾಲಿಸುವುದೇ ನಿಷ್ಟೆ. ನಿಷ್ಟೆ ಇಲ್ಲದೇ ಯಾವ ಪ್ರಗತಿಯೂ ಇಲ್ಲ. ಅನಿಯಮಿತ ಜೀವನದಿಂದ ಯಾವ ಕಾರ್ಯದಲ್ಲೂ ಯಶಸ್ವಿಯಾಗಲಾರೆವು. ಶಕ್ತಿ ವೃದ್ಧಿಸಬೇಕಾದರೆ ಶ್ರದ್ಧೆ ಮುಖ್ಯ. ಆಧ್ಯಾತ್ಮಿಕ ಸತ್ಸಂಗದಲ್ಲಿರುವವರು ಶ್ರದ್ಧೆ ನಿಷ್ಟೆಯನ್ನು ಹೊಂದಿ ಜೀವನದ ಗುಣಮಟ್ಟ ಉನ್ನತೀಕರಿಸಿಕೊಳ್ಳುತ್ತಾರೆ.ಶ್ರದ್ಧೆ ಎನ್ನುವುದು ಒಮ್ಮೊಮ್ಮೆ ಮಾತ್ರ ಗಮನಕ್ಕೆ ಬರುವಂಥದ್ದು. ಶ್ರದ್ಧೆ ಇಲ್ಲದೇ ಹೋದಲ್ಲಿ ಗಮನಕ್ಕೆ ಬಂದೇ ಬರುತ್ತದೆ.
ಅರಳಿದ ಮೊಗ್ಗು ಹೂವೇ ಆದರೂ ಅದಕ್ಕೆ ಪರಿಮಳವಿಲ್ಲದೇ ಹೋದರೆ ವ್ಯತ್ಯಾಸ ಬೇಗ ಗೋಚರವಾಗುತ್ತದೆ. ಮೋಹನ್ ದಾಸ್ ಕರಮಚಂದ ಗಾಂಧಿ ಮಹಾತ್ಮರಾಗಿದ್ದು ನರೇಂದ್ರ ಸ್ವಾಮಿ ವಿವೇಕಾನಂದರಾದದ್ದು ಈ ಶ್ರದ್ಧೆಯ ಬಲದಿಂದಲೇ ನಿಮ್ಮ ಬದುಕನ್ನು ಯಾವ ಬಗೆಯಲ್ಲಿ ಜೀವಿಸುತ್ತೀರಿ ಎನ್ನುವುದನ್ನು ನಿಮ್ಮಲ್ಲಿರುವ ಆತ್ಮಶ್ರದ್ಧೆ ನಿರ್ಧರಿಸುತ್ತದೆ.
ಶ್ರದ್ಧೆ ನಮ್ಮ ಭವಿಷ್ಯದ ಜೀವನಕ್ಕೆ ಚೌಕಟ್ಟು ಒದಗಿಸುತ್ತದೆ. ಬದುಕು ಮಹಾನತೆಯ ಹಂತಕ್ಕೆ ಸಾಗಬೇಕಾದರೆ ಶ್ರದ್ದೆ ಬೇಕೇ ಬೇಕು. ಶ್ರದ್ದೆಯಿಂದ ಅತ್ಯುತ್ತಮವಾದುದನ್ನು ಮಾಡಿ ನಂತರ ಮಿಕ್ಕಿದ್ದನ್ನು ಬದುಕಿಗೆ ಮಾಡಲು ಬಿಡಿ.
ನಿಮ್ಮೊಳಗಿನ ಅಂತಃಶಕ್ತಿಯನ್ನು ನಂಬಿದರೆ ಜೀವನದಲ್ಲಿ ಅಕ್ಷರಶಃ ಪವಾಡ ಸದೃಶ ಘಟನೆಗಳು ಖಂಡಿತ ನಡೆಯುತ್ತವೆ.
ಆರಾಧನೆಯ ಮೂರ್ತಿಯಾಗಿ
ಆಧುನಿಕತೆಯಲ್ಲಿ ಶ್ರದ್ಧಾರಹಿತರಾಗಿ, ಜಂಜಡದಲ್ಲಿ ಸಿಲುಕಿ ಪರಿಹಾರಕ್ಕಾಗಿ ಹಾತೊರೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಜೀವನದ ಮುನ್ನಡೆಗೆ ಅತ್ಯಂತ ಅನಿವಾರ್ಯ ಯೋಗ್ಯತೆ ಎಂದರೆ ಶ್ರದ್ಧೆ. ಮೂಢರು ಜ್ಞಾನಿಗಳು ಒಂದೇ ವಿಷಯ ಮಾಡುತ್ತಾರೆ ಆದರೆ ಅದರಲ್ಲಿ ಶ್ರದ್ಧೆಯ ಅಂತರವಿರುತ್ತದೆ. ಶ್ರದ್ಧೆಹೀನ ಬದುಕು ಎಲ್ಲ ಮಾನಸಿಕ ಒತ್ತಡ ಹಾಗೂ ಉದ್ವೇಗಗಳ ಸಾರ ಸಂಗ್ರಹಕ್ಕೆ ಕಾರಣವಾಗಿರುತ್ತದೆ. ಜೀವನದ ಸಾರ್ಥಕತೆ ಪಡೆದುಕೊಳ್ಳಬೇಕೆ?
ಹಾಗಾದರೆ ಶ್ರದ್ಧೆ ನಿಮ್ಮ ಆಯ್ಕೆ ಆಗಿರಲಿ. ಆಗ ಸರ್ವ ಶಕ್ತರಾಗಿ ಆರಾಧನೆಗೆ ಯೋಗ್ಯವಾದ ಮೂರ್ತಿಯಾಗುತ್ತೀರಿ.
ಜಯಶ್ರೀ.ಜೆ. ಅಬ್ಬಿಗೇರಿ




ಲೇಖನ ಚೆನ್ನಾಗಿ ಮೂಡಿಬಂದಿದೆ, ನಿಜ ಸಂಗತಿ ಬಿಚ್ಚಿ ಇಟ್ಟಿದ್ದಾರೆ..
ಭಾವದೊಡಲಿನ ಶರಣು ತಮಗೆ