ಲಹರಿ ಸಂಗಾತಿ
ರಾಜು ಪವಾರ್
́ಶುಚಿ-ರುಚಿಯಾದ ಜಗತ್ತಾಗಲು…!́


ನನ್ನವಳು ಇವತ್ತಿನ ತಿಂಡಿಗೆ ಭಾನುವಾರದ ವಿಶೇಷ ಉಪ್ಪಿಟ್ಟು ಮಾಡ್ತೀನಿ ಅಂದಳು. ನನ್ನವಳು ಮಾಡುವ ಬನಸಿ ರವೆಯ ಉಪ್ಪಿಟ್ಟು ನನಗಿಷ್ಟ. ಬಿಸಿ ಬಿಸಿ ಹಬೆಯಾಡುತ್ತಿರುವಾಗಲೇ ತಿಂದರೆ ಅದರ ರುಚಿ ನಾಲಗೆಗೆ ನಾದ ಹೊರಡಿಸುತ್ತದೆ. ಉಪ್ಪಿಟ್ಟು ಮಾಡಲು ಡಬದಲ್ಲಿದ್ದ ರವೆ ತೆಗೆದು ತನ್ನದೇ ಅಳತೆಯ ಮಾಪನದ ಬಟ್ಟಲಿಗೆ ಹಾಕಿ ನೋಡಿದರೆ ಮುಕ್ಕಾಲು ಬಟ್ಟಲು ಮಾತ್ರ. ನಾವು ನಾಲ್ವರಿಗೂ ಒಂದು ಬಟ್ಟಲು ರವೆ ಸಾಕು, ಇದು ನನ್ನವಳ “ಅಳತೆಗೋಲು.” ಸರಿ ಅಂತ ಬೇರೊಂದು ಪ್ಯಾಕೆಟಿನಿಂದ ರವೆ ತೆಗೆದಾಗಲೇ ಗೊತ್ತಾಗಿದ್ದು ರವೆಯಲ್ಲಿ ಹುಳುಗಳಾಗಿ ಕೆಟ್ಟಿದೆಯೆಂದು. ಅದರಲ್ಲಿನ ಎಕ್ಸಪೈರಿ ಡೇಟ್ ನೋಡಿದರೆ ಇನ್ನೂ ಒಂದು ತಿಂದಳು ಇದೆ. “ಎಕ್ಸಪೈರಿ” ಡೇಟ್ ಗಿಂತ ಒಂದು ತಿಂಗಳು ಮುಂಚೆಯೇ “ಎಕ್ಸಪೈರಿ ” ಆಗಿದೆಯಲ್ಲ ಅಂತ ನನ್ನವಳು ತಮಾಷೆ ಮಾಡಿದಳು. ನಾನು ಅದು “ಅಕಾಲ ಮರಣವೆಂದೆ”. ಅದನ್ನು ಹಾಗೆಯೇ ಕಟ್ಟಿ ವಾಪಸ್ಸು ಅಂಗಡಿಗೆ ಕೊಟ್ಟು ಬೇರೊಂದು ತನ್ನು ಎಂದು ನನ್ನ ಕೈಗಿತ್ತಳು. ನಾನು ತರಾತುರಿಯಲ್ಲಿ ಹೋದರೂ ಅಂಗಡಿಯಲ್ಲಿನ ಜನ ಸಂದಣಿಯಲ್ಲಿ ನಿಂತು ಕೆಟ್ಟಿರುವ ರವೆ ಕೊಟ್ಟು ಹೊಸದೊಂದು ಪಡೆದು, ಜೊತೆಗೆ ಇತರ ಸಾಮಗ್ರಿ ಪಡೆದು ಬರುವವರೆಗೂ ಸುಮಾರು ಹೊತ್ತಾಗಿತ್ತು. ನನ್ನ ದಾರಿ ಕಾದ ನನ್ನವಳು, ಬೇರೆ ದಾರಿ ಕಾಣದೇ ಬನಸಿ ರವೆಯ ಜೊತೆಗೆ ಕೇಸರಿ ಬಾತಿನ ರವೆ (ಚಿರೋಟಿ ರವೆ) ಹಾಕಿ ಉಪ್ಪಿಟ್ಟು ಮಾಡಿದ್ದಳು. ನಾನು ಬಂದೊಡನೆ ” ಬನ್ನಿ, ಬಿಸಿ ಬಿಸಿ ಉಪ್ಪಿಟ್ಟು ತಗೊಳ್ಳಿ ” ಅಂತ ಕೊಟ್ಟಳು. ಇಬ್ಬರೂ ತಿನ್ನಲು ಕುಳಿತೇವು. ಆದರೆ ಉಪ್ಪಿಟ್ಟು ಎಂದಿನಂತಿರಲಿಲ್ಲ. ಗರಿ ಗರಿಯಾಗಿರದೆ ಸ್ವಲ್ಪ ಮುದ್ದೆ ಮುದ್ದೆಯಾಗಿತ್ತು.” ಬನಸಿ ರವೆ ಜೊತೆ ಚಿರೋಟಿ ರವಿ ಹಾಕಿದ್ದರ ಮಹಿಮೆ ಇದು ” ಎಂದು ನನ್ನವಳು ನನ್ನ ಮುಖ ನೋಡಿದಳು. ಇದೆಲ್ಲ ಪೀಠಿಕೆ ಯಾಕೆ ಅಂತ ಕೇಳ್ತೀರಾ? ಹೌದು ಕೇಳಲೇಬೇಕು!!
ಮುಕ್ಕಾಲು ಬಟ್ಟಲು ಬನಸಿ ರವೆಯ ಜೊತೆ ಸೇರಿದ್ದು ಕೇವಲ ಕಾಲು ಭಾಗಕ್ಕಿಂತಲೂ ಕಡಿಮೆ ಚಿರೋಟಿ ರವೆ. ಆದರೂ ಅದು ಮುಕ್ಕಾಲು ಭಾಗ ಬನಸಿ ರವೆಯ ಗುಣವನ್ನು ಅಳಿಸಿ, ಅಲ್ಲಿ ತನ್ನ ಮುದ್ದೆಯಾಗುವ ಗುಣವನ್ನು ಎತ್ತಿ ತೋರಿಸುತ್ತಿದೆ. ಅಂದರೆ ನಮ್ಮ ಸುತ್ತ ಮುತ್ತ ಎಷ್ಟೇ ಒಳ್ಳೆಯ ಜನರಿದ್ದರೂ ಅವರಲ್ಲೊಬ್ಬ ಅನಾಗರಿಕ ಸೇರಿದೊಡೆ ಅವನು ತಾನೇ ತನ್ನ ಅನಾಗರಿಕ ಗುಣಗಳನ್ನು ತೋರಿಸಲು ಶುರು ಮಾಡುತ್ತಾನೆ. ಅವನ ಆರ್ಭಟದ ಮುಂದೆ ಸಜ್ಜನರ ಗುಣಗಳು ಗೌಣವಾಗುತ್ತದೆ.
ನಾವೆಲ್ಲ ಕೇಳಿದ್ದೇವೆ, ಚೆನ್ನಾಗಿರುವ ಹಣ್ಣುಗಳ ಬುಟ್ಟಿಯಲ್ಲಿ ಒಂದು ಕೆಟ್ಟಿರುವ ಹಣ್ಣು ಸೇರಿದರೆ ಅದರಿಂದ ಎಲ್ಲ ಹಣ್ಣುಗಳು ಕೆಡುತ್ತವೆ ಎಂದು. ಹಾಗೆ ಸಮಾಜದಲ್ಲಿನ ಕೆಲ ಕೆಟ್ಟ ಹಣ್ಣುಗಳು ಚೆನ್ನಾಗಿರುವ ಹಣ್ಣುಗಳನ್ನು ಕೆಡಿಸುತ್ತದೆ ಅಲ್ಲವೇ? ಸಮಾಜ ಎಚ್ಚೆತ್ತು ಕೆಟ್ಟಿರುವ ಹಣ್ಣನ್ನು ತೆಗೆದು ಹಾಕಬೇಕು. ಆಗ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ.
ಶಾಲೆಯಲ್ಲಿ ಶಿಕ್ಷಕರು ಹೇಳುತ್ತಿದ್ದರು, ಒಳ್ಳೆಯ ಬೆಳೆ ಬರಬೇಕಾದರೆ ಹೊಲದಲ್ಲಿರುವ ಕಳೆಯನ್ನು ಕಿತ್ತೊಗೆಯಬೇಕೆಂದು. ಆಗ ಒಂದು ಮಗು ಕೇಳುತ್ತೆ ” ಯಾಕೆ?” ಎಂದು. ಆಗ ಶಿಕ್ಷಕರು, “ಬೆಳೆಗೆ ಬೇಕಾದ ಪೋಷಕಾಂಶಗಳನ್ನು ಆ ಕಳೆ ಹೀರಿಕೊಂಡು ತಾನು ಹುಲುಸಾಗಿ ಬೆಳೆಯುತ್ತದೆ ಎಂದು. ಆಗ ಮತ್ತೆ ಆ ಮಗು ಪ್ರಶ್ನಿಸುತ್ತೆ ” ಪೋಷಕಾಂಶಗಳನ್ನು ಕಳೆ ಹೀರಿ ಕೊಳ್ಳುವ ಮುಂಚೆಯೇ ಯಾಕೆ ಬೆಳೆ ಹೀರಿ ಕೊಳ್ಳಬಾರದು?” ಎಂದು. ಆಗ ಶಿಕ್ಷಕರು ನಿಟ್ಟುಸಿರು ಬಿಟ್ಟು ” ತುಂಬಾ ಒಳ್ಳೆಯ ಪ್ರಶ್ನೆ” ಎಂದು ಹೇಳಿ ತಮ್ಮ ಉತ್ತರವನ್ನು ಹೇಳುತ್ತಾರೆ. ” ಕಳೆಗಳ ಹುಟ್ಟುಗುಣವೇ ಅಂತಹುದು, ಏನೇ ಸಿಕ್ಕರೂ ತನಗೇ ಬೇಕೆಂದು ಹಪ ಹಪಿಸಿ ಕಸಿದುಕೊಳ್ಳುವುದು, ಹಾಗೂ ತನ್ನ ಸಂತತಿಯನ್ನು ದ್ವಿಗುಣ ಗೊಳಿಸುವುದು. ಒಂದು ಬೆಳೆಯ ಅಕ್ಕ ಪಕ್ಕ ಹಲವಾರು ಕಳೆ ಗಿಡಗಳಿರುತ್ತವೆ, ಆದರೆ ಬೆಳೆ ಒಂದೇ ಒಂದು. ಅದು ತನಗೆ ಆ ಕ್ಷಣಕ್ಕೆ ಎಷ್ಟು ಪೋಷಕಾಂಶಗಳು ಬೇಕೋ ಅಷ್ಟನ್ನು ಮಾತ್ರ ಹೀರಿಕೊಳ್ಳುತ್ತದೆ. ಆದರೆ ಕಳೆ ಹಾಗಲ್ಲ. ಎಲ್ಲವೂ ತನಗೆ ತನ್ನವರಿಗಾಗಿ ಎಂದು ಹೆಪ ಹಪಿಸುತ್ತದೆ. ಒಂದು ಕಳೆ ಗಿಡ ಟಿಸಿಲೊಡೆದು ಬೆಳೆಯುತ್ತದೆ, ಆದರೆ ಬೆಳೆ ಒಂಟಿಯೇ.” ಶಿಕ್ಷಕರ ಮಾತು ಕೇಳಿ ಆ ಮಗು ತಲೆದೂಗುತ್ತದೆ. ಸಮಾಜದಲ್ಲಿ ಆಗುವುದು ಹೀಗೆಯೇ. ಸಜ್ಜನ ತಾನು,ತನ್ನ ಪರಿಸರ, ನೀತಿ-ನಿಯಮ, ಕಟ್ಟು ಪಾಡು, ಒಡಕು-ಕೆಡುಕು ಹೀಗೆ ಲೆಕ್ಕಾಚಾರ ಹಾಕಿ ಬಹು ಸೂಕ್ಷ್ಮವಾಗಿ ಬದುಕು ನಡೆಸುತ್ತಾನೆ. ಆದರೆ ದಾನವರಿಗೆ ಇದ್ಯಾವುದರ ಹಂಗಿಲ್ಲ. ತಾವು ನಡೆದದ್ದೇ ದಾರಿ. ಸಜ್ಜನರ ನಡೆ – ನುಡಿ ಒಂದಾದರೆ, ದುರ್ಜನರ ನಡೆ, ನುಡಿಗೆ ತಾಳ ಮೇಳವೆ ಇರುವುದಿಲ್ಲ. ಸವಿ ನುಡಿಯಿಂದ ನಂಬಿಸಿ ಕತ್ತು ಕುಯ್ದು ರಕ್ತ ಹೀರುವ ನಡೆ.
ಗರಿ ಗರಿಯಾದ, ರುಚಿಯಾದ ಉಪ್ಪಿಟ್ಟಾಗಲು ಹೇಗೆ ಒಂದೇ ತೆರನಾದ ರವೆ ಬೇಕೋ ಹಾಗೆ ಸಮ ಸಮಾಜವಾಗಲು ಒಂದೇ ತೆರನಾದ ಶುದ್ಧ ಮನಸ್ಸಿರಬೇಕು. ಆಗಲೇ ಒಂದು ಶುಚಿ – ರುಚಿಯಾದ ಜಗ ನಿರ್ಮಾಣವಾಗಲು ಸಾಧ್ಯ.
ರಾಜು ಪವಾರ್




Thank you
ಉಪ್ಮಾ ಕತೆ ಚೆನ್ನಾಗಿದೆ.
ತುಂಬಾ ಒಳ್ಳೆಯ ಬರಹ ನಮಸ್ಕಾರ
Super Anna
ತುಂಬಾ ಚೆನ್ನಾಗಿದೆ ಸ್ವಾಮಿ.
ಸುನಿಲ್.