ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
ʼನನ್ನ ಪದಗಳುʼ


ನಾ ಬರೆಯುವ ಒಂದೊಂದು
ಪದವೂ ನನ್ನದೇ ,
ಅಂತರಂಗದ ಕದವ ತೆರೆಯುವ
ಕೀಲಿಯೇ , ನನ್ನ ಪದಗಳು …..
ನಾ ಬರೆಯುವೆ ನನಗಾಗಿ,
ಒಮ್ಮೆ ಸಂತಸಕೆ , ಮತ್ತೂಮ್ಮೆ ದುಗುಡಕೆ …..
ಬದುಕು ಬಳುಕುವ ದಿಬ್ಬಣವಾದರೆ ,
ಪದಗಳೆಲ್ಲ ಸಿಹಿ ಸಕ್ಕರೆಯ ಪಾಕದಂತೆ…..
ಬಾಳ ಪಯಣದಲ್ಲಿ ಆಘಾತವಾದಾರೆ ,
ಪದಗಳೆಲ್ಲವೂ ಬಿಸಿ ಕಂಬನಿಯ ಧಾರೆ ….
ಬಾಳು ಹೂ ಬನವಾದರೆ ,
ಪದಗಳೆಲ್ಲವೂ ಪರಿಮಳ ಬೀರುವ ಪುಷ್ಪಗಳು ……
ಬದುಕ ಕೈ ತೋಟ ಮುಳ್ಳಿನಿಂದ ತುಂಬಿದರೆ ,
ಬರೆಯುವ ಪದಗಳು
ರಕ್ತ ಸಿಕ್ತ……
ಅಳು , ನಗು , ಏನೇ ಇರಲಿ ,
ಅದಕ್ಕೊಂದು ಭಾವವಿದೆ ,
ಪ್ರತಿ ಭಾವಕ್ಕೂ ಒಂದೊಂದು ಪದವಿದೆ …….
ಪರವಿನ ಬಾನು ಯಲಿಗಾರ



