ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ʼಬದುಕು ಲೆಕ್ಕಾಚಾರʼ

ಬದುಕು ಕಂಡವರ ಕಣ್ಣಿಗೆ ಕಂಡಂತೆ
ಹಲವರಿಗೆ ಕೂಡು -ಕಳೆಯೋ ಆಟ
ಮತ್ತೆ ಕೆಲವರಿಗೆ ಉಂಡುಟ್ಟು ಮೆರೆಯೋ ಮಾಟ
ಬದುಕು ಲೆಕ್ಕಾಚಾರಗಳ ಕೂಟ
ಒಂದಾಣೆಗೆ ಇನ್ನೊಂದಾಣೆ ಕೂಡಿ
ಕಾಪಿಟ್ಟು ಕನಸು ಕಾಣುವ ಸಂಕಲನ
ಬದುಕಿನ ಏರಿಳಿತದೆ ಗುಣಿತಗೊಳುತ್ತ
ಬೆಸೆದಿರುವ ಸಂಬಂಧಗಳ ಆಚೆ ಮಾಡುವ ಭಾಗಕಾರ
ಬದುಕು ಸರಳ ರೇಖೆ ಯಲ್ಲ
ರೇಖಾಚಿತ್ರಗಳ ಬಣ್ಣದ ರಂಗೋಲಿ
ಕೆಲವೊಮ್ಮೆ ಸಂಕೀರ್ಣ ಗಂಟು ರಂಗೋಲಿ
ಅರಿತವರು ಬಿಡಿಸುವರು ಚಿತ್ತಾರದ ಕುಂಡಲಿ
ಕಾಲ ಸರಿದಂತೆಲ್ಲ ಮಾಗಿದ ಆಟ
ಸರಿ ಬೆಸಗಳ ಆಯವ್ಯಯದಿ ಹೂಡೋ ಹೂಟ
ಸೂತ್ರವಿರದೆ ಮಾಡುವ ಬಾಳಿನ ಲೆಕ್ಕ
ತಪ್ಪಿಸುವುದು ಸುಂದರ ಬದುಕಿನ ದಿಕ್ಕ
ಎಲ್ಲರಿಗೂ ಅವರದೇ ಅಂದಾಜಿನ ಲೆಕ್ಕ
ಅಂದಾಗಲೇ ಬಾಳಿಗೆ ನೆಮ್ಮದಿಯು ಪಕ್ಕ
—————————-
ಡಾ. ಮೀನಾಕ್ಷಿ ಪಾಟೀಲ್




