ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೊನ್ನೆ ನಡೆದ ‘ಅರಿವೆಂಬುದು ಬಿಡುಗಡೆ’ ಘೋಷವಾಕ್ಯದಡಿ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ. ಆಶ್ರಯ: ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು. ಲೇಖಕಿಯರ ಕವಿಗೋಷ್ಟಿಯಲ್ಲಿ ವಾಚಿಸಲ್ಪಟ್ಟ ಕವಿತೆಗಳು ಸಮೂಹ ಮಾಧ್ಯಮಗಳಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಯಿತು. ಆ ಲೇಖಕಿಯರ ಮತ್ತು ಕವಿತೆಗಳ ಕುರಿತಾಗಿ ಫೇಸ್ಬುಕ್ನಲ್ಲಿ ಮಹಾಶಯರುಗಳು ನೀಡಿದ ಕೀಳುಮಟ್ಟದ ಪ್ರತಿಕ್ರಿಯೆ[ಕಾಮೆಂಟ್ಸ್]ಗಳು ನಾಗರಿಕ ಪ್ರಜ್ಷೆಯನ್ನು ನಾಚಿಸುವಂತಿದ್ದವು. ಅವು ಈ ಲೇಖನಕ್ಕೆ ಭೂಮಿಕೆಯನ್ನು ಒದಗಿಸಿದವು.

ನಾನು ಯಾರು? ಎಲ್ಲಿಂದ ಬಂದೆ? ಯಾಕಾಗಿ ಬಂದೆ? ಸತ್ತ ನಂತರ ಮುಂದೇನು? ಹುಟ್ಟಿ-ಸಾಯುವ ನಡುವಿನ ಈ ಮೂರುದಿನದ ಬಾಳಿಗೆ ಗೊತ್ತು-ಗುರಿ ಇದೆಯೇ? ಎಲ್ಲಿಗೆ ಪಯಣ, ಯಾವುದೋ ದಾರಿ? ಏಕಾಂಗಿ ಸಂಚಾರಿ ಎಂಬ ಕವಿಭಾವದಂತೆ ; ಈ ರೀತಿಯ ತರ್ಕಕ್ಕೆ ನಿಲುಕದ ಅರ್ಥಕ್ಕೆ ಸಿಲುಕದ ಅನೇಕ ಪ್ರಶ್ನೆಗಳನ್ನು ಸಂತ-ಮಹಾಂತರುಗಳನ್ನು ಬಹುವಾಗಿ ಕಾಡಿದ್ದಿದೆ! ಇಂತಹ ಪ್ರಶೆಗಳಿಗೆ ಉತ್ತರ ಅರಸಿಕೊಂಡು ಸಿದ್ಧಾರ್ಥ ಹೆಂಡತಿ ಮಕ್ಕಳು ಅರಮನೆಯ ಹಂಗನ್ನು ತೊರೆದು ರಾತ್ರೋರಾತ್ರಿ ಎದ್ದು ನಡೆದದ್ದು ಮುಂದೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯ ವಾಗಿ ಬುದ್ಧನಾಗಿ ಲೋಕಕಲ್ಯಾಣಗೈದುದು ಇಂದಿನ ಇತಿಹಾಸ.

ನಾನು ಯಾರು ಎಂಬ ಪ್ರಶ್ನೆಯನ್ನು ಕೈಗೆತ್ತಿಕೊಂಡಾಗ ; ಸ್ವರ್ಗಕ್ಕೆ ಯಾರು ಹೋಗ್ತೀರಿ? ಎಂಬ ಗುರುಗಳ ಪ್ರಶ್ನೆಗೆ ನಾನು ಹೋದರೆ ಹೋದೇನು ಎಂದು ಕನಕದಾಸರು ನೀಡಿದ ಉತರ! ಸ್ಮರಣೆಗೆ ಬಂತು ಮುಂದುವರೆದು  ವಿಜಯಪುರ ಶ್ರೀಸಿದ್ಧೇಶ್ವರ ಸ್ವಾಮಿಗಳ ಪ್ರವಚನವೊಂದರಲ್ಲಿ ಹೇಳಿದ ನೈಜಘಟನೆ – ಮಹಾಕವಿ ಕಾಳಿದಾಸ, ಕವಿ ಬೋಜರಾಜ ಮತ್ತು ಮುದುಕಿ ನಡುವಿನ ಸಂಭಾಷಣೆಯ ಸಾರವನ್ನು ಉಲ್ಲೇಖಿಸುತ್ತ ಮುಂದಡಿಯಿಡುತ್ತೇನೆ..,

ಬೇಟೆಯ ಸಮಯದಿ ನಾಡಹಾದಿ ತಪ್ಪಿ ಕಾಡಿನ ತುಂಬೆಲ್ಲ ಅಂಡಲೆದು ತುಂಬು ಆಯಾಸ ಬಳಲಿಕೆಯಿಂದ  ಬಟ್ಟೆಗೆಟ್ಟು ನಿಂತಾಗ ಅನತಿ ದೂರದಲ್ಲಿ ಒಂದು ಗುಡಿಸಲು ಕಂಡು ಧಾವಿಸಿ ಅಲ್ಲಿಗೆ ಬಂದು ಕೂಗಲು ಒಳಗಿಂದ ಮುದುಕಿ ಬಂದು ಅವರಿಗೆ ಕುಡಿಯಲು ನೀರು ಕೊಟ್ಟು ತಿನ್ನಲು ಹಣ್ಣುಗಳನ್ನು ನೀಡಿದ ಅವರು ಸುಧಾರಿಸಿಕೊಂಡ ಬಳಿಕ ಕೇಳಿದ ಪ್ರಶ್ನೋತ್ತರದ ಸಂಭಾಷಣೆ :

ಮುದುಕಿ ಕೇಳಿದ್ದು ನೀವು ಯಾರು? ನಾವು ರಾಜರು [ಮೇಘರಾಜ ಮತ್ತು ಯಮರಾಜ], ಶ್ರೀಮಂತರು [ಮಹಾಪರ್ವತ ಮತ್ತು ಮಹಾಸಾಗರ], ಮಹಾಕವಿಗಳು [ನಿಸರ್ಗ], ಲೋಕಪ್ರಿಯರು [ಅನ್ನ ಮತ್ತು ನೀರು], ಅತಿಥಿಗಳು [ಯೌವ್ವನ], ಯಾತ್ರಿಕರು [ಸೂರ್ಯ ಮತ್ತು ಚಂದ್ರ], ಸಂನ್ಯಾಸಿಗಳು [ಸತ್ಯ ಮತ್ತು ಶಾಂತಿ], ಪರದೇಶಿಗಳು [ಆತ್ಮ], ಸಹನಶೀಲರು [ಹೆತ್ತತಾಯಿ ಮತ್ತು ಹೊತ್ತ ಭೂತಾಯಿ], ದುರ್ಬಲರು [ಮನುಷ್ಯನ ಕೈಗೆ ಸಿಕ್ಕ ಪ್ರಾಣಿಗಳು], ಸೋತವರು [ಯಾರು ಯಾರಿಗೆ ಬಡವರೋ ಎಂಟು ಹೆಣ್ಣಮಕ್ಕಳ ತಂದೆ], ಬುದ್ಧಿಗೇಡಿಗಳು [ಸಾಲಾ ಮಾಡ್ತಾರ ತೀರಿಸೋ ಸಾಮರ್ಥ್ಯವಿಲ್ಲದೆ! ಸಾಲದ ಚಕ್ರದೊಳಗೆ ಹೋಗೋದು ಗೊತ್ತಿದೆ ಹೊರಗೆ ಬರೋದು ಗೊತ್ತಿಲ್ಲದೆ ಸಾಲದ ಸುಳಿಯಲ್ಲಿ ಸಿಕ್ಕಿ ಸಾಯ್ತಾನ], ಮಹಾನುಭಾವರೆ ಈಗ ಹೇಳಿ ನೀವು ಯಾರು? ಅವರಲ್ಲಿನ ನಾನು ಎಂಬ ಅಹಮಿಕೆಯು ಸರ್ರನೇ ಇಳಿದುಹೋದಮೇಲೆ ನಾವು ಏನೂ ಅಲ್ಲ ಎಂದು ಉತ್ತರಿಸುತ್ತಾರೆ ಆಗ ಮುದುಕಿ ನೀವು, ನೀವು ಜಾಣರು ಎಂದು ಪ್ರಂಶಸಿಸುತ್ತಾಳೆ.

ಬದುಕಿನ ಯತಾರ್ಥವನ್ನು ಅರಿತುಕೊಳ್ಳದೇ ನಾನು ನಾನು ಎಂದು ಮೆರೆದಾಡುವ ಮನುಷ್ಯನಿಗೆ ನೀತಿಪಾಠದಂತಿರುವ ಈ ಶ್ಲೋಕವನ್ನು ನೋಡುವುದಾದರೆ..,

“ಅರಸನೊಡೆಯನು ದಂಡನಾಥನು |
ಗುರು ಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು
ಪರಿಪರಿಯ ನಾಮಂಗಳಲಹಂ
ಕರಿಸುವರು ಜೀವಾತ್ಮ ತೊಲಗಿದ
ಮರುದಿವಸ ಹೆಣನೆನ್ನರೇ ಹೇಳೆಂದನಾ ಮುನಿಪಾ” ||

-ಉದ್ಯೋ, ಸಂ. ೪ – ಪು.೨೬, ಕರ್ಣಾಟ ಭಾರತ ಕಥಾಮಂಜರಿ

ಇದ್ದಾಗ ನಾನು ಏನೆಲ್ಲಾ ಆಗಿದ್ದೆ ಸತ್ತಮೇಲೆ ಹೆಣವೇ ತಾನೇ? ಅತ್ತು ಕರದರೆ ಸತ್ತವನು ಎದ್ದು ಬಂದಾನೆಯೇ? ಮುಂದಾಗೋದು ನೋಡರಿ, ಮುಂದೆ ದೂರದೂರಿಗೆ ಹೋಗೋರಿಗೆ ಹೊತ್ತಾಗುತ್ತೆ ಎಂದು ಹೊತ್ತುಮುಳುಗುತ್ತಲೇ ಹೆಣ ಎತ್ತಿ ಮನೆ ಸಾರಿಸಿ, ಮೈತೊಳೆದುಕೊಂಡು ಬಿಡ್ತಾರೆ. ಉಂಗುಟ ಕಿತ್ತೋದ ಚಪ್ಪಲಿಗಿರುವಷ್ಟು ಬೆಲೆ ಸತ್ತವ್ಯಕ್ತಿಗೆ ಇಲ್ಲ.

ನಾನು ಯಾರು ಎಂಬ ಪ್ರಶ್ನೆಗೆ ಈ  ಬಗೆಯ ಎಲ್ಲ ಭ್ರಮೆಗಳನ್ನು ಕಳಚಿದ ಕವಯಿತ್ರಿ ನಾಲ್ಕು ಸಾಲಿನ ಕವಿತೆಯಲ್ಲಿ ತನ್ನರಿವಿನ ಪರಿಧಿಯಲ್ಲಿಯೇ ʼನಾನು, ನಾನು ಅಂದರೆ.., .., .., .., .., .., ಕತ್ತಲೆಯ ಜೀವಕೋಶʼವೆಂಬುದನ್ನು ನಿರ್ಭೀತಿ, ನಿರ್ಭೀಡೆಯಿಂದ ಜಗತ್ತಿಗೆ ಸಾರುತ್ತಾಳೆ.  ಇದೇ ಸಮ್ಮೇಳನದಿ ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿಯವರು ʼಮಹಿಳೆಗಿರುವ ದೊಡ್ಡ ಸವಾಲು ಆಳುವ ಮತ್ತು ಆಲಿಸಿಕೊಳ್ಳುವ ಭಾಷೆʼ  ಎಂಬ ಉಪನ್ಯಾಸದಲ್ಲಿ ಭಾಷೆಯನ್ನು ಬಳಸಿಕೊಳ್ಳುವುದೇ ಒಂದು ದೊಡ್ಡ ಸವಾಲು ಎಂಬುದನ್ನು ಅರ್ಥಪೂರ್ಣವಾಗಿ ವಿವೇಚಿಸಿದ್ದಾರೆ. ಭಾಷೆ ಬಳಕೆಯಲ್ಲಿ ಗಂಡಿಗಿಲ್ಲದ ಮಡಿ-ಮೈಲಿಗೆ ಹೆಣ್ಣಿಗೆ ಯಾಕೆ ಎಂಬುದು ಮೂಲಭೂತವಾಗಿ ಕಾಡುವ ಸಮಸ್ಯೆಯಾಗಿದೆ.

ಬುದ್ಧ ಪೌರ್ಣಿಮೆಯ ದಿನ, ಹನ್ನೆರಡನೆಯ ಮೇ-೨೦೨೫


About The Author

Leave a Reply

You cannot copy content of this page

Scroll to Top