ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನಸ್ಸಿನ ಮುಖ್ಯ ಅತಿಥಿ
ನಗುವಿನ ಆಪ್ತ ಗೆಳತಿ
ಪ್ರತಿ ಕನಸಿನ ಒಡತಿ
ಅದೇ ಪ್ರೀತಿ

ಕಣ್ಣ ರೆಪ್ಪೆಯ ಶಬ್ದ
ಮುಖದ ಮರೆಯದ ನೆರಳು
ಮನಸ್ಸಿನ ನಂಬಿಕೆಯ ಭಾವ

ಮಾತುಗಳ ಹಿಡಿತವಿಲ್ಲದ ಆತುರ ಹೀಗೆ ಎಲ್ಲರೂ ಸೇರಿ ಹುಡುಕಿದಾಗ ಕಣ್ಣಿಗೆ ಬಿದ್ದಿದ್ದು ನಿನ್ನ ಕಪ್ಪು ಕೂದಲು ಕೇವಲ ಸಂದೇಹದ ಹೆಳೆ ಎಲ್ಲರ ಕಣ್ಣು ತಪ್ಪಿಸಿ ಕಂಡಿತ್ತು ನಿನ್ನ ಮುದ್ದು ಮುಖದ ಛಾಯೆ

ಹೀಗೆ ಎಷ್ಟೋ ಸಾಲುಗಳನ್ನು ಗೀಚಿ ಹೋಗಿದೆ ,ಪುಸ್ತಕದ ಕೊನೆಯ ಪುಟಗಳಲ್ಲಿ .ನನ್ನ ಮನಸ್ಸಿನ ತೊಳಲಾಟ ಕ್ಕೆಲ್ಲಾ ಅಕ್ಷರ ರೂಪ ಕೊಟ್ಟಿದ್ದೇನೆ .ಅದೆಲ್ಲದಕ್ಕೂ ಹೊಣೆಗಾರ ನೀನೇ.
ನಾವಿಬ್ಬರೂ ಎಂದಿಗೂ ಪರಸ್ಪರ ಮಾತಡಿಲ್ಲ .ಆದರೂ ನಮ್ಮ ಕಣ್ಣ ನೋಟಗಳು ,ತುಟಿಯಂಚಿನ ನಗು ,ಎಲ್ಲವನ್ನೂ ಹೇಳುತ್ತಿತ್ತು ,ನಾವಿಬ್ಬರೂ ಪ್ರೀತಿಯ ಕೈ ಗೊಂಬೆಗಳೆಂದು. ಮೂರು ಸಂವತ್ಸರಗಳು ಕಳೆದಿವೆ ಹಾಗೆಯೇ ,ಆದರೂ ಕಣ್ಣಂಚಿನ ಭಾಷೆಗಿನ್ನು ಮಾತು ಬಂದಿಲ್ಲ ,ತುಟಿಯಂಚಿನ ನಗೆ ಇನ್ನೂ ಅರ್ಥ ಸಿಕ್ಕಿಲ್ಲ .ಹೇಳಿಬಿಡು, ಎಲ್ಲವನ್ನೂ ನಾ ನಿನ್ನವಳೆಂದು. ನಮ್ಮ ಈ ಪದವಿ  ಮುಗಿಯುವುದರೊಳಗೆ ,ನಮ್ಮ ಬದುಕ ದಾರಿಗಳು ಕವಲೊಡೆದು ಬೇರೆ ಆಗುವುದರೊಳಗೆ, ಹುಡುಗರೇ ಮೊದಲು ಪ್ರೇಮ ನಿವೇದನೆ ಮಾಡಬೇಕೆಂಬ ಅಲಿಖಿತ ಕರಾರಿಗೆ ಬದ್ದಾಳಾಗಿ ಕಾದು ಕುಳಿತಿರುವೆ ನಿನ್ನ ನಿರೀಕ್ಷೆಯಲ್ಲಿ , ಹುಸಿಯಾಗಿಸಿದರು ನನ್ನ ಕನಸನ್ನು ಉತ್ತೀರ್ಣಗೊಳಿಸಿ ನನ್ನನ್ನು ಈ ಪ್ರೇಮ ಪರೀಕ್ಷೆಯಲ್ಲಿ. ಅಂತೂ ಬಂದಿತೊಂದು ಸುದಿನ ಪ್ರೇಮ ನಿವೇದನೆಯನ್ನು ನಿನ್ನ ಬಾಯಿಯಿಂದಲೇ ಕೇಳುವ ಆ ದಿನ, ಎಷ್ಟೋ ದೇವರುಗಳಿಗೆ ನಾ ಕಟ್ಟಿದ್ದ ಹರಕೆಯ ಫಲವಾಗಿ .

ಏನು ಉತ್ತರಿಸಬೇಕೆಂದು ತಿಳಿಯದೆ ಗೊಂದಲದ ಗೂಡಾಗಿದ್ದ ನನ್ನ ಪರಿಸ್ಥಿತಿಯನ್ನು ಅರಿತು ,ನನ್ನ ಉತ್ತರಕ್ಕೂ ಕಾಯದೇ ಮೌನವೆ ಸಮ್ಮತಿ ಎಂದು ತಿಳಿದಿದ್ದೇ. ಆದರೂ ಎಲ್ಲರೆದುರು ಬೀಗುತ್ತಿದ್ದೆ ನಾ ನಿನ್ನವಳೆಂದು ಹೇಳಿಕೊಂಡು .ಆ ನಿನ್ನ ದೃಢ ನಂಬಿಕೆಯೇ ಹೆಚ್ಚು ಮೆಚ್ಚುಗೆಯಾಗಿತ್ತು ನನಗೆ.
ಅಸಲಿಗೆ ನಾನೆಂದೊ ಸೋತಿದ್ದೇ ನಿನ್ನ ಕಣ್ಣ ಕಾಂತಿಗೆ ,ನಗುವ ಚೆಲುವಿಗೆ ,ನಿನ್ನೊಲವ ಜಿಡಿ ಮಳೆಗೆ, ಆದರೆ ಪ್ರೀತಿ ಎಂಬ ಭಾವ ನಮ್ಮನ್ನು ಆವರಿಸಿ ನಾವಿಬ್ಬರೂ ಮದುವೆ ಎಂಬ ಬಂಧನದಲ್ಲಿ ಬಂಧಿಯಾಗ ವುದರೊಳಗೆ, ಬೇಸಿನಯಬೇಕಿದೆ ನಮ್ಮಿಬ್ಬರ ಮನದ ದಾರಿಯನ್ನು.
ಅರಿಯಬೇಕಿದೆ ನಮ್ಮಿಬ್ಬರ ಬದುಕ ರೀತಿಯನ್ನು. ಅದಾಗಲೇ ತಾನೇ ನಮ್ಮಿಬ್ಬರ ಮದುವೆಯ ಸಂಭ್ರಮಗಳು ನೂರು ವರ್ಷದ ಆಚೆಗಿನ ಗಟ್ಟಿತನ ಪಡೆದುಕೊಳ್ಳುವುದು.

ನಿನ್ನ ನಗುವಿನ ಕಾರಣ ನಾನಾಗ ಬಲ್ಲೆ, ನಿನ್ನ ಪ್ರತಿ ಕಂಬನಿ ಒರೆಸುವ ಕೈ ನಾನಾಗ ಬಲ್ಲೆ ,ನಿನ್ನ ಯಶಸ್ಸಿನ ಮೆಟ್ಟಿಲಾಗ ಬಲ್ಲೆ ,ನಿನ್ನ ಪ್ರತಿ ದಿನದ ಮೂರು ಹೊತ್ತಿನ ತುತ್ತಿನ ರುಚಿಯಾಗಿ ಬಲ್ಲೆ, ನಿನ್ನ ಬಟ್ಟೆಯ ಹೊಳಪಾಗಬಲ್ಲೆ,ನಿನ್ನೆಲ್ಲ ನೋವಿಗೆ ಔಷಧಿ ಆಗಬಲ್ಲೆ ,ನಿನ್ನೆಲ್ಲಾ ಹಸಿವನ್ನು ನೀಗಿಸಬಲ್ಲೆ, ನನ್ನೆಲ್ಲ ಆಯುಷ್ಯದ ಪ್ರತಿ ಕ್ಷಣವನ್ನು ನಿನಗಾಗಿ ಮೀಸಲಿಡ ಬಲ್ಲೆ, ನಿನ್ನ ಕರುಳ ಬಳ್ಳಿಗೆ ತಾಯಾಗ ಬಲ್ಲೆ ,ನಿನ್ನ ಎಲ್ಲಾ ಏಳು ಬೀಳುಗಳಲ್ಲಿ ಜೊತೆ ನಡೆಯಬಲ್ಲೆ ,ನಿನ್ನ ಬದುಕಿನ ಅರ್ಧ ಭಾಗವನ್ನು ಆವರಿಸಿ ನಾ ನಿನ್ನ ನೆಚ್ಚಿನ ಅರ್ಧಾಂಗಿಯಾಗಿ ಬಲ್ಲೆ ,

ಹಾಗಿದ್ದರೆ ಹೇಳು ನೀ ನನ್ನ ಎಲ್ಲಾ ಆಸೆ ಕನಸುಗಳ ನಿಭಾಯಿಸಬಲ್ಲೆಯ? ನನ್ನೆಲ್ಲ ಕಷ್ಟ ಸುಖಗಳ ಪಾಲುದಾರನಾಗಬಲ್ಲೆಯಾ ?ನನ್ನ ಹೆತ್ತವರ ಇನ್ನೊಬ್ಬ ಮಗ ನಾಗಬಲ್ಲೆಯ? ನನ್ನ ಕರುಳ ಕುಡಿಗೆ ಮೆಚ್ಚಿನ ಅಪ್ಪನಾಗ ಬಲ್ಲೆಯಾ ?  ಬದುಕಿನ ಎಲ್ಲ ಸಂದರ್ಭಗಳಲ್ಲೂ ನನ್ನ ಅತಿ ದೊಡ್ಡ ಭರವಸೆಯ ಆಗಬಲ್ಲೆಯ?

ಇದೆಲ್ಲದಕ್ಕೂ ಒಪ್ಪುವುದಾದರೆ ಹೇಳು, ಈಗಲೇ ರೇಷ್ಮೆ ಸೀರೆ ಉಟ್ಟು ,ಮಲ್ಲಿಗೆ ಮೊಗ್ಗಿನ ಜಡೆ ಇಟ್ಟು , ಹಣೆಗೆ ಬಾಸಿಂಗ ತೊಟ್ಟು, ಬಂದು ನಿಲ್ಲುವೆ ಮದುಮಗಳಂತೆ ನಿನ್ನ ಬದಿಗೆ .ಎಲ್ಲ ಅಡೆತಡೆಗಳನ್ನು ಧಿಕ್ಕರಿಸಿ, ಬರೆಯುತ್ತಿರುವೆ ನನ್ನ ಮೊದಲನೇ ಪ್ರೇಮ ಪತ್ರ ನಿನ್ನೆಲ್ಲಾ ಪ್ರಶ್ನೆಗಳಿಗೆ
ಉತ್ತರಿಸಿ.

ಇಂತಿ ನಿನ್ನ ಶ್ರೀಮತಿಯಾಗ ಬಯಸುವವಳು




About The Author

Leave a Reply

You cannot copy content of this page

Scroll to Top