ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪ ಗೋಡೆ ಹಿಡಿದುಕೊಂಡು ಹೋಗುತ್ತಿದ್ದರು. ಅಪ್ಪ ಕೈಯಿಟ್ಟಲ್ಲೆಲ್ಲ ಗೋಡೆಯ ಬಣ್ಣ ಸ್ವಲ್ಪ ಸ್ವಲ್ಪವೇ ಮಸುಕಾಗುತ್ತಿತ್ತು.ಇದನ್ನು ಕಂಡು ಹೆಂಡತಿಯ ಮುಖಭಾವ ಬದಲಾಗುತ್ತಿದ್ದುದನ್ನು ನಾನು ಗಮನಿಸಿದೆ.ಅದೊಂದು ದಿನ ಅಪ್ಪ ಎಂದಿನಂತೆಯೇ ಗೋಡೆಯ ಮೇಲೆ ಕೈ ಇಟ್ಟಿದ್ದರು.ಮಂಡಿ ನೋವಿಗೆ ಎಣ್ಣೆ ಹಚ್ಚಿದ್ದರೋ ಏನೋ ಕೈ ಗುರುತು ಗೋಡೆ ಮೇಲೆ ಗಾಢವಾಗಿ ಅಂಟಿಕೊಂಡಿತು.ಹೆಂಡತಿ ಒಳಗೆ ಬಂದು ನನ್ನೊಡನೆ ರೇಗಿಯೇ ಬಿಟ್ಟಳು. ನನಗೂ ಅಂದು ಏನಾಯಿತೋ ಏನೋ.ಅಪ್ಪನ ರೂಮಿಗೆ ಹೋದೆ.”ಅಪ್ಪಾ  ನಡೆಯುವಾಗ ಗೋಡೆ ಹಿಡಿಯದೆ ನಡೆಯಲು ಪ್ರಯತ್ನಿಸಬಾರದೇ” ಎಂದೆ..ಧ್ವನಿಯಲ್ಲಿದ್ದ ಅಸಹನೆ ಅತಿಯಾಯಿತೇನೋ ಅನಿಸಿತು.ಅಪ್ಪ ನನ್ನೆಡೆಗೆ ನೋಡಿದರು.80 ವರ್ಷದ ಅಪ್ಪನ ಮುಖ ಚಿಕ್ಕ ಮಗು ತಪ್ಪು ಮಾಡಿದಂತಿತ್ತು.ಅಪ್ಪ ಮೌನವಾಗಿ ತಲೆತಗ್ಗಿಸಿದರು.…ಛೇ ನಾನು ಹಾಗನ್ನಬಾರದಿತ್ತು ಎಂದೆನಿಸಿತು.ಸ್ವಾಭಿಮಾನಿಯಾಗಿದ್ದ ಅಪ್ಪ ಮುಂದೆ ಮೌನಿಯಾದರು. ಆ ಮೇಲೆ ಗೋಡೆ ಹಿಡಿದು ನಡೆಯಲಿಲ್ಲ.ಅದೊಂದು ದಿನ ಅಪ್ಪ ಆಯತಪ್ಪಿ ಬಿದ್ದು ಹಾಸಿಗೆ ಹಿಡಿದರು.ಮತ್ತೆರಡು ದಿನದಲ್ಲಿ ಇಹಲೋಕವನ್ನು ತ್ಯಜಿಸಿದರು.ಗೋಡೆಯಲ್ಲಿ ಮೂಡಿದ್ದ ಅಪ್ಪನ ಕೈ ಗುರುತು ಕಾಣುವಾಗ ಎದೆಯೊಳಗೆ ಏನೋ ಸಿಕ್ಕಿದಂತಾಗುತ್ತಿತ್ತು.

ದಿನಗಳು ಉರುಳುತ್ತಿತ್ತು.ಅದೊಂದು ದಿನ ಹೆಂಡತಿ ಎಲ್ಲಾ ಗೋಡೆಗಳಿಗೆ ಬಣ್ಣ ಹೊಡೆಯಬೇಕೆಂದಳು.ಬಣ್ಣ ಹೊಡೆಯುವವರೂ ಬಂದರು.ನನ್ನ ಐದು ವರ್ಷದ ಮಗ ಜೀತ್ ಗೆ ತಾತನೆಂದರೆ ಪ್ರಾಣ.ಏನು ಮಾಡಿದರೂ ತಾತನ ಕೈಯ ಗುರುತನ್ನು ಅಳಿಸಲು ಅವನು ಬಿಡಲೇ ಇಲ್ಲ.ಅವನ ರಂಪಾಟ ಕಂಡು ಬಣ್ಣ ಬಳಿಯುವವರು, ‘ಸರ್ ಆ ಕೈ ಗುರುತಿನ ಸುತ್ತ ಪೇಂಟ್ ಮೂಲಕ ಡಿಸೈನ್ ಮಾಡಿ ಸುಂದರವಾಗಿ ಮಾಡಿ ಕೊಡುತ್ತೇವೆ.ನೀವೂ ಇಷ್ಟ ಪಡುತ್ತೀರಿ’ ಎಂದರು. ಮಗನ ಹಟಕ್ಕೆ ಮಣಿಯಬೇಕಾಯಿತು.ನಿಜವಾಗಿಯೂ ಬಣ್ಣ ಬಳಿಯುವವರು ಅದಕ್ಕೊಂದು ಹೊಸ ರೂಪ ನೀಡಿದ್ದರು.

ಅದು ಮನೆಗೆ ಬಂದವರ ಗಮನ ಸೆಳೆಯುತ್ತಿತ್ತು. ಎಲ್ಲರೂ ಅದರ ಬಗ್ಗೆ  ಸಂತಸ ವ್ಯಕ್ತಪಡಿಸುತ್ತಿದ್ದರು. ಮುಂದೆ ಪ್ರತಿ ಬಾರಿ ಬಣ್ಣ ಬಳಿಯುವಾಗಲೂ ಆ ಜಾಗವನ್ನು ಮಾತ್ರಾ ವಿಶೇಷವಾಗಿ‌ ಪೆಯಿಂಟ್ ಮಾಡಲಾಗುತ್ತಿತ್ತುಮೊದಮೊದಲು ಮಗನ ಒತ್ತಾಯಕ್ಕಾಗಿದ್ದರೂ ಈಗೀಗ ಅದರ ಮೇಲೆ
ವ್ಯಾಮೋಹ ಬೆಳೆದಿತ್ತು.

ವರುಷಗಳುರುಳುತ್ತಿದ್ದವು.ಮಗನಿಗೆ ಮದುವೆಯಾಗಿದೆ. ಅಂದು ಅಪ್ಪ ಇದ್ದ ಸ್ಥಾನದಲ್ಲಿ ಈಗ ನಾನಿದ್ದೆ.ಅವರಷ್ಟು ವಯಸ್ಸಾಗಿರದಿದ್ದರೂ 70ರ ಆಸುಪಾಸಿನಲ್ಲಿದ್ದ ನನಗೆ ಆಗಲೇ ನಡೆಯುವಾಗ ಗೋಡೆಗೊಂದು ಕೈಕೊಟ್ಟು ನಡೆಯಬೇಕೆನಿಸುತ್ತಿತ್ತು.ಆದರೂ ನಾನು ಅಂದು ಸಿಡಿಮಿಡಿಗೊಂಡಿದ್ದು ನೆನಪಾಗುತ್ತಿತ್ತು.ಗೋಡೆಗೆಲ್ಲಿ ಕೈತಾಗುವುದೋ ಎಂದು ಗೋಡೆ ಬಿಟ್ಟು ದೂರದಲ್ಲೇ ನಡೆಯುತ್ತಿದ್ದೆ.ಅದೊಂದು ದಿನ ನನ್ನ ರೂಮಿನಿಂದ ಹೊರಗೆ ಬಂದು ಎರಡು ಹೆಜ್ಜೆ ಇಡುವಷ್ಟರಲ್ಲಿ ಮೈವಾಲಿತ್ತು.ಆಧಾರಕ್ಕಾಗಿ ಕೈಚಾಚಿದ್ದಷ್ಟೇ.ನಿಮಿಷದಲ್ಲಿ ಓಡಿ ಬಂದ ಮಗನ ತೋಳಿನಲ್ಲಿ ನಾನಿದ್ದೆ.’ಅಪ್ಪಾ ಹೊರಗೆ ಬರುವಾಗ ಗೋಡೆ ಹಿಡಿದುಕೊಂಡು ಮೆಲ್ಲನೆ ಬರಬಾರದೇ ನೋಡಿ ಈಗ ಬಿದ್ದು ಬಿಡ್ತಾ ಇದ್ರಿ’ ಎಂದು ನುಡಿದಾಗ ಅಚ್ಚರಿಯಿಂದ ಅವನ ಮುಖ ನೋಡಿದೆ. ಅವನ ಮುಖದಲ್ಲಿ ಆತಂಕ ವಿತ್ತು.ಸ್ವಲ್ಪವೂ ಅಸಹನೆಯಿರಲಿಲ್ಲ.ಅಪ್ಪನ ಕೈ ಗುರುತು ಅಲ್ಲೇ ಸ್ವಲ್ಪ ದೂರದ ಗೋಡೆಯಲ್ಲಿತ್ತು.ನೋಡಿದೆ.ಅಪ್ಪನ ಮುಖ ಕಣ್ಣಮುಂದೆ ಬಂತು.ನಾನು ಅಪ್ಪನಿಗೆ ಅಂದು ಗದರದೆ ಇದ್ದಿದ್ದರೆ ಅಪ್ಪ ಇನ್ನೂ ಸ್ವಲ್ಪ ದಿನ ಬದುಕುತ್ತಿದ್ದರೇನೋ ಅನಿಸಿತು.ಕಣ್ಣು ತುಂಬುತ್ತಿತ್ತು.ಓಡಿ ಬಂದ 8 ವರ್ಷದ  ಮೊಮ್ಮಗಳು ತಾತ ನನ್ನ ಹೆಗಲು ಹಿಡ್ಕೊಂಡು ನಡೆಯಿರಿ ಎಂದು ನನ್ನ ಕೈಯನ್ನು ಅವಳ ಹೆಗಲ ಮೇಲೆ ಇರಿಸಿಕೊಂಡು ಮುದ್ದಾಗಿ ನಕ್ಕಳು.

ಹಾಲ್ ನಲ್ಲಿ ಸೋಫಾ ಮೇಲೆ ಕುಳಿತೆ.ಮೊಮ್ಮಗಳು ಅವಳ ಡ್ರಾಯಿಂಗ್ ಪುಸ್ತಕ ತಂದು ತಾತ ಇವತ್ತು ಕ್ಲಾಸಲ್ಲಿ ಡ್ರಾಯಿಂಗ್ ಅಲ್ಲಿ ನಂಗೆ ಫಸ್ಟ್ ಪ್ರೈಸ್ ಬಂತು. ಎಂದಳು.ಹೌದಾ.ಯಾವ ಚಿತ್ರ ಬರೆದೆ ತೋರಿಸು.. ಎಂದೆ…ತೆರೆದು ತೋರಿಸಿದಳು.ಗೋಡೆಯ ಮೇಲೆ ಅಪ್ಪನ ಕೈ ಗುರುತಿಗೆ ಸುಂದರವಾಗಿ ಡಿಸೈನ್ ಮಾಡಿದ ಚಿತ್ರವನ್ನು ಮೊಮ್ಮಗಳು ಗೋಡೆಯಲಿದ್ದಂತೆ ಬರೆದಿದ್ದಳು.ಮೊಮ್ಮಗಳು ಮತ್ತೆ ಹೇಳಿದಳು, ‘ತಾತ, ಮಿಸ್ ಕೇಳಿದ್ರು ಇದು ಏನು ಅಂತ.ಅದಕ್ಕೆ ನಾನಂದೆ ಇದು ನನ್ನ  ತಾತನ ಕೈ ಗುರುತು ಅಂತ’. ನಮ್ಮ ಮನೆ ಗೋಡೆ ಮೇಲೆ ಈಗಲೂ ಇದೆ ಎಂದೆ.ಅದಕ್ಕೆ ಮಿಸ್, ‘ಮಕ್ಕಳು ಚಿಕ್ಕವರಿರುವಾಗ ಮನೆಯ ಗೋಡೆಯಲ್ಲೆಲ್ಲಾ ಗೀಚಿದ ಗೆರೆಗಳು, ಚಿತ್ರಗಳು, ಹೆಜ್ಜೆ ಗುರುತು, ಕೈ ಗುರುತು.ಇವುಗಳನ್ನೆಲ್ಲಾ ನೋಡಿ ನಮ್ಮ ಅಪ್ಪ-ಅಮ್ಮ ಪ್ರೀತಿಯಿಂದ ಸಂಭ್ರಮ ಪಡುತ್ತಾರೆ.ಹಾಗೆಯೇ ನಾವು ಅವರಿಗೆ ವಯಸ್ಸಾದ ನಂತರ ಅವರನ್ನು ಅದೇ ರೀತಿ ಪ್ರೀತಿಸಬೇಕು.ಎಂದು ಎಲ್ಲಾ ಮಕ್ಕಳಿಗೆ ಹೇಳಿಕೊಟ್ಟರು. ನಂಗೆ ವೆರಿ ಗುಡ್ ಶ್ರೇಯಾ ಎಂದರು.ಎಂದು ಮುದ್ದು ಮುದ್ದಾಗಿ ನುಡಿದಳು. ಮಗ ಮೊಮ್ಮಗಳ ಮುಂದೆ ತೀರ ಚಿಕ್ಕವನಾದಂತೆ ಎನಿಸಿತು

ರೂಮಿಗೆ ಬಂದೆ. ಬಾಗಿಲು‌ಮುಚ್ಚಿ ‘ಅಪ್ಪಾ ನನ್ನ ಕ್ಷಮಿಸಿ ಬಿಡಿ ಅಪ್ಪಾ’ ಎಂದು ಮನಸ್ಸು ಹಗುರಾಗುವವರೆಗೂ ಅತ್ತೆ. ನೆನಪಾದಾಗಲೆಲ್ಲಾ ಅಳುತ್ತಿರುತ್ತೇನೆ.

———————————————————–

About The Author

Leave a Reply

You cannot copy content of this page

Scroll to Top