ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತನ್ನನ್ನು ವರಿಸಲು ತಯಾರಾಗಿರುವ ವರ ಯಾರು ಅಂತಲೂ ಸುಮತಿಗೆ ತಿಳಿಯದು. ಅಪ್ಪನೇ ಎಲ್ಲವನ್ನೂ ತೀರ್ಮಾನ ಮಾಡಿದ್ದರು.  ಯಾರು ಎತ್ತ ಏನು ಎಂದು ಒಂದೂ ಕೇಳಿ ತಿಳಿದುಕೊಳ್ಳುವಂತೆಯೂ ಇರಲಿಲ್ಲ. ಆಗಿನ ಕಾಲದಲ್ಲಿ ಹಾಗೆ  ಧೈರ್ಯವಾಗಿ ಕೇಳುವುದು ಸಾಧ್ಯವಿರಲಿಲ್ಲ.  ಪಕ್ಕದ ಮನೆಯ ಹಿರಿಯ ಗೆಳತಿ ಹೇಳಿದ್ದು ಮಾತ್ರ ಗೊತ್ತು. ತನ್ನ ಜೀವನ ಸಂಗಾತಿ ಆಗುವವರು ಮಿಲಿಟರಿಯಲ್ಲಿ ಕೆಲಸ ಮಾಡಿದ್ದರು. ಹೆಸರು ವೇಲಾಯುಧನ್ ನಾಯರ್ ಎಂಬುದು ಅಪ್ಪ ಹೇಳುತ್ತಾ ಇದ್ದದ್ದು ಕೇಳಿದ್ದಳು. ತನ್ನ ಮನದಲ್ಲಿ ಮದುವೆಯ ಬಗೆಗಿನ ಕನಸುಗಳು ಚಿಗುರುವ ಮುನ್ನವೇ ಅಪ್ಪ ಮದುವೆಯ ತಯಾರಿಯಲ್ಲಿ ಇದ್ದರು. ಅಮ್ಮ ಬೇರೆ ಜೊತೆಗೆ ಇಲ್ಲದೇ ಇರುವಾಗ ಈ ತರಾತುರಿಯ ಮದುವೆ ಬಗ್ಗೆ ಯೋಚಿಸಿ ಸುಮತಿಗೆ ಬಹಳ ದುಃಖವಾಯಿತು. ಮದುವೆಯ ದಿನವೂ ಬಂದಿತು. ಎಲ್ಲರೂ ಬೆಳಗ್ಗೆ ಬೇಗ ಎದ್ದು ಪೂಜೆ ಮುಗಿಸಿ ತಯಾರಾಗಿ ಸಕಲೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಹೋದರು. ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆಯಿತು. ಅಲ್ಲಿಯವರೆಗೂ ತನ್ನ ಪತಿಯಾಗುವವರನ್ನು ನೋಡಿರದ ಸುಮತಿ ತಾಳಿ ಕಟ್ಟಿದ ನಂತರ ಸ್ವಲ್ಪ  ಧೈರ್ಯ ತಂದುಕೊಂಡು ತನ್ನ ಪತಿಯನ್ನು ನೋಡಿದಳು. ಅವರನ್ನು ನೋಡಿದ ಅವಳು ಆಶ್ಚರ್ಯ ಚಕಿತಳಾದಳು. ನೋಡುವುದಕ್ಕೆ ತನಗಿಂತ ಸುಮಾರು ವರ್ಷ ದೊಡ್ಡವರು ಎನಿಸಿತು. ಮುಖದಲ್ಲಿ ಮುಗುಳು ನಗು ಕೂಡಾ ಇಲ್ಲದ ಗಂಭೀರವಾದ ಅವರನ್ನು ಕಂಡು ಮನಸ್ಸಲ್ಲಿ ಒಂಥರಾ ಅಳುಕು ಭಯ ಸುಮತಿಗೆ ಮೂಡಿತು. ತನ್ನ ಹಿರಿಯ ಗೆಳತಿಯ ಮುಖವನ್ನೊಮ್ಮೆ ನೋಡಿದಳು. ಅವಳ ಮುಖ ಕೂಡಾ ತನ್ನ ಈ ಅವಸ್ಥೆ ನೋಡಿ ಕಳೆಗುಂದಿದಂತೆ ಅವಳಿಗೆ ಕಂಡಿತು. ಕಣ್ಸನ್ನೆಯಲ್ಲೇ ತನಗೆ ಎಲ್ಲವೂ ಅರ್ಥವಾಯಿತು ಎಂದು ಸೂಚಿಸಿದಳು ಅವಳ ಗೆಳತಿ.

ಅಕ್ಕನ ಮುಖವನ್ನು ಒಮ್ಮೆ ಗಮನಿಸಿದಳು. ಅವಳು ಕೂಡಾ ಈ ಮದುವೆಯ ಬಗ್ಗೆ ಸಂತೋಷ ಪಟ್ಟಂತೆ ಕಾಣಲಿಲ್ಲ. ಅಪ್ಪ ಮಾತ್ರ ಎರಡನೇ ಮಗಳ ಮದುವೆಯನ್ನು ಮಾಡಿ ಮುಗಿಸಿ ತನ್ನ ಜವಾಬ್ದಾರಿಯನ್ನು ಕಳೆದುಕೊಂಡ ನೆಮ್ಮದಿಯಲ್ಲಿ ಇದ್ದಂತೆ ಕಂಡಿತು.  ತನ್ನ ಕನಸಿಗೆ ತನ್ನ ಆಸೆಗೆ ಸಂಪೂರ್ಣ ತೆರೆ ಎಳೆದಂತೆ ಅವಳಿಗೆ ಭಾಸವಾಯಿತು.

 

ಮದುವೆಯ ಎಲ್ಲಾ ಶಾಸ್ತ್ರಗಳು ಮುಗಿದವು. ಸಕಲೇಶ್ವರ ಸ್ವಾಮಿಯ ಮುಂದೆ ತಲೆ ಬಾಗಿ ನಿಂತು ದಂಪತಿಗಳು ಒಟ್ಟಾಗಿ ಹೊಸ ಜೀವನಕ್ಕೆ ಹೆಜ್ಜೆ ಹಾಕಿದರು. ಸುಮತಿ ಮನದಲ್ಲಿಯೇ ಅಮ್ಮನನ್ನು ಸ್ಮರಿಸುತ್ತಾ ಪರಶಿವನನ್ನು ಮನಸಾರೆ ಬೇಡಿಕೊಂಡಳು…. “ತಂದೇ ನಿನ್ನ ತೀರ್ಮಾನವನ್ನು ಶಿರಸಾ ವಹಿಸಿ ಸ್ವೀಕರಿಸಿದ್ದೇನೆ…. ನಮ್ಮನ್ನು ಕಾಪಾಡುವುದು ಇನ್ನು ನಿನ್ನ ಕೈಲಿದೆ…. ನಿನ್ನ ಇಚ್ಛೆ ಅದೇನಿದೆಯೂ ನಡೆಯಲಿ…. ಊರು ಬಿಟ್ಟು ಬಂದಾಯ್ತು ಅನಿರೀಕ್ಷಿತವಾದ ಹಲವಾರು ಘಟನೆ ನಮ್ಮೆಲ್ಲರ ಜೀವನದಲ್ಲಿ ನಡೆದಿದೆ. ತಾಯಿಯಿಂದ ದೂರಾದೆವು…. ಯಾವ ಜನ್ಮದ ಕರ್ಮ ಫಲವೋ ನಾಕಾಣೆ….ಇಂದು ಈ ಪರಿಸ್ಥಿತಿಯಲ್ಲಿ ಬಂದು ನಿಂತಿದೆ ನಮ್ಮ ಜೀವನ….ಎಲ್ಲವನ್ನೂ ಬಂದಂತೆ ಸ್ವೀಕರಿಸುತ್ತಾ ಇರುವೆ…. ಮುಂದಿನ ದಾರಿಯಲ್ಲಿ ನನ್ನ ಕೈ ಹಿಡಿದು ನಡೆಸು…. ಇನ್ನು ಏನೇ ಬಂದರೂ ಎಲ್ಲವನ್ನೂ ಸಹಿಸುವ ತಾಳ್ಮೆ ಧೈರ್ಯ ನನಗೆ ಕರುಣಿಸು…. ಅಮ್ಮನ ಅನುಪಸ್ಥಿತಿಯಲ್ಲಿ ನನ್ನ ಮತ್ತು ಅಕ್ಕನ ಮದುವೆ ನಡೆದಿದೆ…. ಅಮ್ಮನ ಆಶೀರ್ವಾದದಿಂದ ನಮ್ಮನ್ನು ವಂಚಿತರನ್ನಾಗಿ ಮಾಡಿದೆ.

ನಿನ್ನ ಲೀಲೆ ನಾನೇನು ಬಲ್ಲೆ?…. ಮದುವೆ ಎನ್ನುವ ಸಂಬಂಧದ ಅರ್ಥವೂ ನನಗೆ ತಿಳಿಯದು…. ಅಪ್ಪ ಅಮ್ಮನ ಜೀವನ ನೋಡಿರುವೆ…. ಆದರೂ ಹೇಗೆ ಬಾಳುವುದು ಎಂದು ತಿಳಿಯದು…. ಅಮ್ಮ ಇದ್ದಿದ್ದರೆ ನನ್ನ ಮನದ ದುಗುಡವನ್ನು ಅರಿತು ತಕ್ಕ ಸಮಾಧಾನ ಹೇಳುತ್ತಿದ್ದರು…. ವೈವಾಹಿಕ ಜೀವನದ ಬಗ್ಗೆ ಅರಿವನ್ನು ಕೊಡುತ್ತಿದ್ದರು….

ನನ್ನ ಸಂಶಯ ಆಶಂಕೆಗಳನ್ನು ಯಾರಲ್ಲಿ ಹೇಳಿಕೊಳ್ಳಲಿ?…ದೇವರೇ ಎಂಥಹಾ ಪರಿಸ್ಥಿತಿಯಲ್ಲಿ ನನ್ನನ್ನು ತಂದು ನಿಲ್ಲಿಸಿದೆ? …. ಇನ್ನು ನನ್ನ ಜೊತೆ ಯಾರು ಇರುವರು?…. ಅಮ್ಮಾ ಎಲ್ಲಿರುವೆ ಅಮ್ಮಾ…. ನನ್ನ ಮನದ ಅಳಲು ನಿನಗೆ ತಲುಪದೇ?…. ನಾನು ಈಗ ಇಲ್ಲಿ ಒಂಟಿ ಎನ್ನುವ ಭಾವನೆ ಮನವನ್ನು ಹಿಂಡಿದೆ…. ನಿನ್ನ ಮುಖ ದರ್ಶನ ಒಮ್ಮೆ ಕೊಡು ಅಮ್ಮಾ…. ಎಂದು ಕಣ್ಣು ಮುಚ್ಚಿ ಸಕಲೇಶ್ವರ ಸ್ವಾಮಿಯ ಮುಂದೆ ನಿಂತು ಅಮ್ಮನನ್ನು ಮನದಲ್ಲಿ ಧ್ಯಾನಿಸಿದಳು.

ಅಮ್ಮನ ನಗು ಮುಖ ಅವಳ ಮನದ ಪರದೆಯ ಮೇಲೆ ಮೂಡಿ ಮಾಯವಾಯ್ತು. ಕಣ್ಣು ಮುಚ್ಚಿ ನಿಂತಿದ್ದ ಸುಮತಿಯನ್ನು ಹಿರಿಯ ಗೆಳತಿ ಬಂದು ಭುಜ ಹಿಡಿದು ಅಲುಗಿಸಿದಾಗಲೇ ಅವಳು ವಾಸ್ತವ ಜಗತ್ತಿಗೆ ಬಂದಿದ್ದು. 

ಕಣ್ಣು ತೆರೆದಾಗ ಅಮ್ಮನ ಆಶೀರ್ವಾದ ಪಡೆದಷ್ಟೇ ಸಂತಸಗೊಂಡಳು. ” ಎಲ್ಲರೂ ಮನೆಗೆ ಹೊರಟು ನಿಂತಿದ್ದಾರೆ… ನೀನು ಇನ್ನೂ ದೇವರ ಧ್ಯಾನದಲ್ಲಿ ಇದ್ದೀಯಾ? ಬಾ ಎಂದು ಕೈ ಹಿಡಿದು ಕರೆದು ಕೊಂಡು ಹೋದಳು. ಸುಮತಿಗೆ ತನ್ನ ಪತಿಯ ಬಗ್ಗೆ ತಿಳಿಯುವ ಜಿಜ್ಞಾಸೆ ಇತ್ತು. ಹಾಗಾಗಿ ಹಿರಿಯ ಗೆಳತಿಯನ್ನು ಕೇಳಿದಳು.

“ನಮ್ಮ ಅಪ್ಪ ನಿಮ್ಮ ಅಪ್ಪನವರ ಜೊತೆ ಮಾತನಾಡುವಾಗ ನನ್ನ ಪತಿಯ ಬಗ್ಗೆ ಏನಾದರೂ ವಿವರವನ್ನು ಹೇಳಿದ್ದರೇ? 

ಅವರ ವಯಸ್ಸು, ಯಾವ ಊರು, ಅವರ ತಂದೆ ತಾಯಿ, ಅವರ ಕೆಲಸ ಹೀಗೆ ತನ್ನ ಮನದಲ್ಲಿ ಮೂಡಿದ ವಿಷಯಗಳ ಬಗ್ಗೆ ಕೇಳಿದಳು. ಸುಮತಿಯ ಪ್ರಶ್ನೆಗಳಿಗೆ ತನಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ನಿನಗಿಂತ 22 ವರ್ಷಕ್ಕೆ ಹಿರಿಯರು ಎಂದು ಮಾತ್ರ ಹೇಳಿದರು ಅಪ್ಪ ಎಂದಳು. ಗೆಳತಿಯ ಮಾತನ್ನು ಕೇಳಿದ ಸುಮತಿಯ ಮುಖ ಬಾಡಿದ ತಾವರೆಯಂತೆ ಮುದುಡಿತು. ಹಾಗಾದರೆ ತನಗೆ ಅನಿಸಿದ್ದು ನಿಜವೇ!!..ನಿಡಿದಾದ ಉಸಿರನ್ನು ಹೊರಚೆಲ್ಲುವ ಮೂಲಕ ತನ್ನ ಮನದ ಭಾರವನ್ನು ಹೊರ ಹಾಕಿದಳು. ಭಾರವಾದ ಹೆಜ್ಜೆಯನ್ನು ಇಡುತ್ತಾ ನವವಧು ಸುಮತಿ ಗೆಳತಿಯ ಹಿಂದೆ ನಡೆದಳು. ಸುಮತಿ ಬರುವುದನ್ನೇ ಕಾಯುತ್ತ ದೇವಸ್ಥಾನದ ಬಲಗಡೆ ಸಂಪಿಗೆ ಮರದ ನೆರಳಲ್ಲಿ ನಿಂತಿದ್ದ ಎಲ್ಲರೂ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಹಾಕಿ ನವ ವಧು ವರನ ಸಮೇತ ಹೊರ ನಡೆದರು. ಸುಮತಿ ಮತ್ತೊಮ್ಮೆ ಹಿಂದೆ ತಿರುಗಿ ಸಕಲೇಶ್ವರ ಸ್ವಾಮಿಗೆ ಮನದಲ್ಲೇ ವಂದಿಸಿ ತಲೆ ಬಾಗಿಸಿ ಎಲ್ಲರ ಜೊತೆ ನಡೆದಳು. ಮನೆಯಲ್ಲಿ ಮದುವೆಯ ಊಟ ತಯಾರಾಗಿತ್ತು. ಎಲ್ಲರೂ ವಿಶೇಷವಾದ ವಿವಾಹ ಭೋಜನ ಒಟ್ಟಿಗೇ ಕುಳಿತು ಮಾಡಿದರು. 

ಸುಮತಿಯನ್ನು ಬೀಳ್ಕೊಡುವ ಸಮಯ ಬಂದಿತು. ಇಲ್ಲಿಯವರೆಗೂ ಅಪ್ಪ ಅಮ್ಮ ಅಕ್ಕ ತಮ್ಮಂದಿರನ್ನು ಬಿಟ್ಟು ಯಾರ ಜೊತೆಯೂ ಇದ್ದವಳೇ ಅಲ್ಲ. ಈಗ ಊರು ಬಿಟ್ಟು 

ತನ್ನ ಪ್ರೀತಿಯ ಅಮ್ಮನನ್ನು ಬಿಟ್ಟು ಬಂದಾಯ್ತು. ಇನ್ನೂ ಅದರ ಕಹಿ ಅನುಭವ ವಿಷಾದ ಮನಸ್ಸಿಂದ ಮಾಸಿಲ್ಲ. ಹೊಸ ಜಾಗ, ಪರಿಸರ, ಪರಸ್ಥಿತಿ  ಎಲ್ಲದಕ್ಕೂ ಒಗ್ಗಿಕೊಂಡು ಬರುತ್ತಾ ಇರುವಾಗಲೇ ದಿಢೀರನೆ ಈ ಮದುವೆ ಎನ್ನುವ ಮತ್ತೊಂದು ಹೊಸ ಬದಲಾವಣೆ. ಏನು ಮಾಡಲೂ ತೋಚದಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸುಮತಿ ಸಿಲುಕಿದಂತಾಯಿತು. ವೈವಾಹಿಕ ಜೀವನ, ದಾಂಪತ್ಯ ಇದರ ಬಗ್ಗೆ ಕಲ್ಪನೆಯೂ ಇರದ ಅವಳಿಗೆ ತಾನು ಇನ್ನು ಮುಂದಿನ ಹೊಸ ಜೀವನಕ್ಕೆ ಒಗ್ಗಿಕೊಳ್ಳುವುದು ಹೇಗೆ ಎನ್ನುವುದು ಅರ್ಥ ಆಗಲಿಲ್ಲ. ಅಕ್ಕ ತಮ್ಮಂದಿರ ಜೊತೆ ಗೆಳತಿಯರ ಜೊತೆ ಆಡಿ ಬೆಳೆದ ಸುಮತಿ, ಅವರಿಂದ ಬೇರೆಯಾಗಿ ಬದುಕುವ ಬಗ್ಗೆ ಯೋಚಿಸಿಯೇ ಇಷ್ಟು ದಿನವೂ ಏನು ಮಾಡಬೇಕು ಎಂದು ತಿಳಿಯದೇ ದಿನ ದೂಡುತ್ತಿದ್ದಳು. ಆದರೆ ಈಗ ತಾನು ತನ್ನ ಪತಿ ಇಬ್ಬರೇ ಒಂದೆಡೆ ವಾಸಿಸುವುದು. ಅದೂ ಒಮ್ಮೆಯೂ  ತನ್ನ ಪತಿಯ ಜೊತೆ ಇದಕ್ಕೆ ಮೊದಲು ಮಾತನಾಡಿದ್ದು ಕೂಡಾ ಇಲ್ಲ. ಅವರು ಹೇಗೆ ಏನು ಎಂದು ಕೂಡಾ ತಿಳಿದಿಲ್ಲ. ಎಲ್ಲಿ ಮನೆ ಎಂದೂ ತಿಳಿದಿಲ್ಲ. ಅವರ ಪೂರ್ವಾಪರ, ಕುಟುಂಬ ಯಾವುದರ ಬಗ್ಗೆಯೂ ತನಗೆ ತಿಳಿದಿಲ್ಲ. ಮದುವೆಗೆ ಅವರ ಕಡೆಯಿಂದ ಹೆಚ್ಚು ಜನರೂ ಇರಲಿಲ್ಲ. ಅವರ ಅಪ್ಪ ಅಮ್ಮನ ಬಗೆಗಿನ ಯಾವುದೇ ವಿವರ ತನಗೆ ತಿಳಿದಿಲ್ಲ. ಅವರ ಮನೆ ಎಲ್ಲಿ? ತಾವಿಬ್ಬರೂ ಈಗ ಎಲ್ಲಿ ವಾಸಿಸುವುದು? ಅಲ್ಲಿ ನನ್ನ ಜೊತೆ ಯಾರೂ ಬರುವುದಿಲ್ಲವೇ? ಎಂದು ಯೋಚಿಸುತ್ತಾ ಇದ್ದ ಸುಮತಿಗೆ ಅಮ್ಮನ ನೆನಪಾಗಿ ಕಣ್ಣಲ್ಲಿ ನೀರು ತುಂಬಿತು.


About The Author

Leave a Reply

You cannot copy content of this page

Scroll to Top