ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನು ಬರೆಯ ಹೊರಟದ್ದು
ಬಿಸಲಿಲ ಹಾಡು
ಏಕೆಂದರೆ ಬಾಲ್ಯದಲಿ
ಬಿಸಿಲೇ ಹಾಸಿ ಹೊದ್ದ
ನನಗೆ
ಬಿಸಿಲೇ ಜೋಗುಳ ಹಾಡಿದ್ದು

ಅಪ್ಪನ ಬೆವರು
ಕಾಲ ಕೆಳಗಿನ ಮಣ್ಣು
ಹದವಾಗಿ ಬೀಜಕ್ಕೆ
ತವರಾಗಿತ್ತು

ಅವ್ವ ಒಲೆಯ
ಮುಂದೆ ಕುಳಿತು ಸುಡುವ
ರೊಟ್ಟಿ ಬೇಯಿಸುತ್ತಲೇ
ಹಾಡಾದಳು

ಅಣ್ಣ ತಮ್ಮ ಬಿಸಿಲಲ್ಲೆ
ಅವರಿವರ ಮನೆಯ
ಮುಂದೆ ನಿಂತು
ಬಿಕ್ಕೆ ಬೇಡಿದರು
ಅಕ್ಕ ತಂಗಿಯರು
ಬಿಸಿಲಲ್ಲೆ  ಹಡದಿ
ಹಾಸಿದ ಹಾಡು

ಆಗ
ರಾತ್ರಿ ಮೂಡಿದ ತಂಪಲ್ಲು
ನನಗೆ ಬಿಸಿಲಿನದೆ
ನೆನಪು
ಪ್ರತಿ ಬೇಸಿಗೆಯು
ನನ್ನೊಳಗೆ  ಹೊಸ
ಆಸೆಗಳ ಹುಟ್ಟಿಸಿ
ಫಲವ ಚಿಗುರೊಡೆಯುತ್ತಿತ್ತು

ಹೌದು ಈಗ…
ತಂಪು ತಾರಸಿಯ ಕೆಳಗೆ
ವಾತಾನುಕೂಲಿತ ಗಾಳಿ
ಕುಡಿಯುತ್ತಾ ನೆರಳಲ್ಲಿ
ಕೂತ ನನಗೆ ಬಿಸಿಲ
ಬಗ್ಗೆ  ಹಾಡ ಬರೆಯಲು
ಅಧಿಕಾರವಿಲ್ಲ

ಐದು ಆರಂಕಿ ಸಂಬಳ
ಕಿಸೆಗೆ ಹಾಕಿಕೊಳ್ಳುವ
ನಾನು ನನ್ನಂಥವರು
ಈ ತಂಪುಗಾಳಿಯಲ್ಲಿ ಕೂತು
ಬಿಸಿಲಿನ ಬಗ್ಗೆ  ಹಾಡು
ಬರೆಯುವದು ನಗೆ
ತರಿಸುತ್ತದೆ

ಆ ಬಿಸಿಲ ದಾರಿಯಲ್ಲಿ
ನಾನೂ ಕೆಂಡದಂತಹ ಕಲ್ಲು
ತುಳಿದು ಬೆಳೆದಿದ್ದೇನೆ..ನಿಜ
ವಿಷಾದದ ಮಾತೆಂದರೆ
ಅ ಬಿಸಿಲ ಮರೆತಿದ್ದೇನೆ..

ಖಂಡಿತ ಹೇಳುವೆ
ಈ ಬಿಸಿಲ ಅನುಭವ
ನನ್ನವಳಿಗಿಲ್ಲ
ನನ್ನ ವಾರಸುದಾರರಿಗಂತು
ಬಿಸಿಲಿನ ಝಳ ಬಡಿಯಲು
ಸಾಧ್ಯವೇ ಇಲ್ಲ
ಆದರೂ
ಬಿಸಲಿ ವಾರಸುದಾರರೆಂದೆ
ಹೇಳುವದು
ತುಸುವಾದರೂ
ನಾಚಿಕೆ ತರಿಸಬೇಕಿದೆ

ಗೆಳೆಯರೆ,
ಬಿಸಿಲೀಗ ನೆನಪು ಅಷ್ಟೇ
ಅಲ್ಕಿ  ಸುಡುವ ಉರಿಯಲ್ಲಿ
ಉರಿವ ಅಣ್ಣ ತಮ್ಮರ
ನೆನಪು ಈ ಹಾಡು ಮೂಡಿಸಿದೆ

ಮೂಡಿದ ಹಾಡಿಗೂ
ನೆನಪಿಸಿದ ನಿಮಗೂ
ನಮಸ್ಕಾರ

——————-

About The Author

1 thought on “ವೈ.ಎಂ.ಯಾಕೊಳ್ಳಿಯವರ ಕವಿತೆ-ಬಿಸಿಲಿಗೂ ನಿಮಗೂ ನಮಸ್ಕಾರ”

  1. ಬಸವರಾಜ್ ಪಾಟೀಲ್

    ಯಾಕೋಳ್ಳಿ ಸರ್, ತಮ್ಮ ವಿಚಾರ ಲಹರಿ ಚಿಂತನಾ ಚಿಗುರು ವಿಶಿಷ್ಟವಾದುದು ಉಂಡ ಹಸಿ ಹಸಿ ಅನುಭವಗಳು ಕವಿತೆಗೆ ಪ್ರತಿಮೆಗಳಾಗಿವೆ ನಿಮ್ಮ ಮಾತುಗಳು ಕೂಡ ಅಷ್ಟೇ ಹದಬದ್ಧವಾಗಿರುತ್ತವೆ ಕನಕ ಸಲ ಚಿಂತನೆಗಳನ್ನು ತಮ್ಮಿಂದ ಕೇಳಿದ ನನಗೆ ನಿಮ್ಮ ಅನೇಕ ಮಾತುಗಳು ಸ್ಪೂರ್ತಿದಾಯಕ

Leave a Reply

You cannot copy content of this page

Scroll to Top