ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನು ಬಡವಳಲ್ಲ
ನಿನ್ನ ಒಲವು ಇದೆ
ನಾನು ಅಬಲೆಯಲ್ಲ
ನಿನ್ನ ಬಲವು ಇದೆ

ನಿನ್ನ ಪ್ರೀತಿ ಇಲ್ಲದ
ದಿನ ತುಂಬಿದೆ ನಿಶೆ
ನಿನ್ನಪ್ಪುಗೆ ಚುಂಬನ
ತಂದಿದೆ ಬರೀ ನಶೆ

ಕಡಲಿಗೂ ಮಿಗಿಲು
ನಿನ್ನೊಲವ ಹರವು
ಅಳೆಯಲು ಆಗದು
ಅದರೊಳ ಹರಿವು

ಹೆಚ್ಚಿಸುತ್ತಲೇ ಇದೆ
ಸರ್ಕಾರ ತುಟ್ಟಿಭತ್ಯೆ
ನಲ್ಲ ನೀನೂ ಹೆಚ್ಚಿಸು
ನಿನ್ನಯ ತುಟಿಭತ್ಯೆ

ಪ್ರೇಮಿಗಳ ದಿನವು
ಮಾತ್ರ ಸಾಲದೆಮಗೆ
ಪ್ರೇಮಿಸುವ ಕಾಯಕ
ನಿತ್ಯ ಇದೆ ನಮಗೆ

ಉರಿಯುತ್ತಲಿರಲಿ
ನಿನ್ನೊಲವ ಕಂದೀಲು
ಇಡುವೆ ನನ್ನ ಬಾಳ
ನಿನಗಾಗಿ ಮೀಸಲು

ನಿನ್ನನು ಪ್ರೀತಿಸಲು
ಜೀವಮಾನ ಸಾಲದು
ಹಾಗೆಯೇ ನಿನ್ನಿಂದ ನಾ
ದೂರ ಬಾಳಲಾಗದು

ನೀನು ಇಲ್ಲದ ಮೇಲೆ
ಏನಿದ್ದರೇನು ನಲ್ಲ
ನೀರಿಂದ ಹೊರಬಿದ್ದ
ಮೀನೇ ಆಗಿಹೆನಲ್ಲ !

ಪ್ರತಿದಿನ ನಮಗೆ
ಪ್ರೇಮಿಗಳ ದಿನವೇ
ಹೃದಯದಲ್ಲಿ ಪ್ರತಿ
ಕ್ಷಣ ಪ್ರೇಮಗಾನವೇ

ಬಾಳು ಬರಡಾಗದು
ನೀನಿರುವವರೆಗೂ
ಬಯಕೆ ಮಣ್ಣಾಗದು
ಪ್ರೀತಿಸುವವರೆಗೂ


About The Author

1 thought on “ಎ. ಹೇಮಗಂಗಾ ಅವರ ಪ್ರೇಮ ತನಗಗಳು.”

Leave a Reply

You cannot copy content of this page

Scroll to Top