ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬತ್ತದಿರಲಿ ಸ್ಪೂರ್ತಿ

ಸುಲೋಚನಾ ಮಾಲಿಪಾಟೀಲ

ಚಿಮ್ಮುವ ಚಿಲುಮೆಯಂತಿರಲಿ ಜೀವನ
ಹೊತ್ತ ದೃಡಸಂಕಲ್ಪದ ಬದುಕಿನ ಪಯಣದಲಿ
ಬಾಲ್ಯದಿಂದ ಕಳೆಯುವ ವೃದ್ಧಾಪ್ಯದ ತನಕ
ಬತ್ತದಿರಲಿ ದಕ್ಕಿದ ಯಶ ವಿಶಾದಗಳ ನಿಟ್ಟಿನಲಿ

ಕೈಯಿಂದ ಜಾರದಂತೆ ಅವಕಾಶಗಳ ಸದ್ಬಳಕೆಯಲಿ
ನೊಯಿಸದಂತಿರಲಿ ಹಾರೈಸಿ ಹರಸುವ ಮನಗಳಿಗೆ
ಜೀವನದ ಅನುಭವಗಳ ಸರಮಾಲೆಯೇ ಪಣವಾಗಿ
ಬತ್ತದಿರಲಿ ಸ್ಪೂರ್ತಿ ಪ್ರತಿಹೆಜ್ಜೆಯ ನಡೆಯಲ್ಲಿ

ಏಳು ಬೀಳು ಕಷ್ಟ ನಷ್ಟ ಒಳಗೊಂಡಾದ ಪಯಣವು
ಬಾಳಿನಲಿ ಎದುರಿಸಿ ಕಲಿತು ಕಲಿಸುವ ಅಧ್ಯಯನವು
ಬತ್ತದಿರಲಿ ಸ್ಪೂರ್ತಿ ಕಂಡರಿಯದಕ್ಕಿಂತ ಅರಿತದಾರಿಯಲಿ
ಸುಗಮವಲ್ಲವೇ ಹಿಡಿದ ಛಲ ಬಿಡದೇ ಸಾಧಿಸುವಲ್ಲಿ.

ಕಾಣುವ ಆಧುನಿಕ ಯುಗದ ವಿಭಿನ್ನತೆಯಲಿ
ಎಷ್ಟು ಕಷ್ಟದ ಬದುಕು ಈ ನಾಲ್ಕು ದಿನಗಳಲ್ಲಿ
ಕಾಲೆಳೆಯಲು ಹೊಂಚುಹಾಕುವ ದುಷ್ಟಶಕ್ತಿಗಳ ಮಧ್ಯೆ
ಬತ್ತದ ಚಿಲುಮೆಯ ಬುಗ್ಗೆಯಂತಿರಲಿ ಸ್ಪೂರ್ತಿ

ಮೆಟ್ಟಿನಿಂತಿರುವ ಸತ್ಯದ ದಾರಿಯಲಿ ಈ ಧೇಯ
ಕಾಯಕವೇ ಕೈಲಾಸವೆಂಬ ಅರಿವಿನ ಅಂತರಾತ್ಮ
ಬತ್ತದಿರಲಿ ಸ್ಪೂರ್ತಿ ಬೆಳಗುವ ಆಶಾಕಿರಣದೊಂದಿಗೆ
ಹರಿವ ನದಿಯ ನೀರೊಳು ಹೊಸತನದ ಹರಿವಂತೆ

ಸೃಷ್ಟಿಯ ಮಾಯೆಯಲಿ ರಮಿಸುವ ಛಾಯೆಯಲಿ
ಚೈತನ್ಯತುಂಬುವ ಭೂಮಾತೆಯೇ ತಬ್ಬಿಕೊಂಡಿಹಳು
ಚಿಗುರೊಡೆಸಿ ಬೆಳಸುವ ಪರಿಸರ ಸಂಕುಲ ಬತ್ತದಂತೆ
ಬದುಕಿಸುವ ಕಲೆಯಲ್ಲಿ ಸ್ಪೂರ್ತಿಯ ಸೆಲೆಯಲ್ಲಿ


About The Author

Leave a Reply

You cannot copy content of this page

Scroll to Top