ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ದಾರಿಯಲ್ಲಿ ಸಿಕ್ಕವರು

ಜಯಂತಿ ಸುನಿಲ್

ಅರೆ! ಬಹಳ ಕಾಲ ಜೊತೆಗಿದ್ದವರಲ್ಲಾ ನಾವು
ಇಗೋ..ಇಲ್ಲೇ ರಸ್ತೆಯ ಕೊನೆಯ ತಿರುವಿನಲ್ಲಿ ಎದುರಾದವರು
ನಿಮ್ಮ ಭಾಷೆಯಲ್ಲಿ ಹೇಳುವುದಾದರೆ ದಾರಿಯಲ್ಲಿ ಸಿಕ್ಕವರು..

ಎದುರಾದಾಗ ಮನದುಂಬಿ ನಗಲು ನಮಗಿದ್ದ ಕಾರಣಗಳು ಆಪ್ತವಲ್ಲಾ…
ನೋವುಗಳನ್ನು ಹಂಚಿಕೊಂಡಿಲ್ಲಾ
ಕೇವಲ ಒಂದು ಮೋಹಕನಗು
ತುಟಿ ತೆರೆದು ಒಂದು ಮಾತು ಅಷ್ಟೇ…

ಆದರೂ ನಮ್ಮ ಭೇಟಿ..
ಯಾವುದೋ ಜನ್ಮದ ಅಪೂರ್ಣಗೊಂಡ ಪ್ರಯಾಣಕ್ಕೆ ಜೊತೆಯಾದವರಂತೆ ಎದುರಾದೆವು…
ನಾವು ಹೆಜ್ಜೆ ಹಾಕಿದ ಹಾದಿಗೆ ಆಯಸ್ಸು ಕಡಿಮೆಯಿರಬೇಕು
ಇಷ್ಟು ಬೇಗ ಮಗದೊಂದು ತಿರುವು ಸಿಗಬೇಕೇ..?

ಒಂದೆರಡು ತಾಸು ಜೊತೆಗಿದ್ದ ಮಾತ್ರಕ್ಕೆ ನಾವು ಸಹಪಯಣಿಗರೇ..?
ಕೇವಲ ದಾರಿಯಲ್ಲಿ ಎದುರಾದವರು ಅಷ್ಟೇ…
ನಮಗೆ ಸಿಕ್ಕ ಸಮಯವಾದರೂ ಎಷ್ಟು..?

ಒಬ್ಬರಿಗೊಬ್ಬರು ಒಂದು ನೋಟ ಬೀರುವಷ್ಟು..
ಒಂದು ಕಿರುನಗೆ ಎಸೆಯುವಷ್ಟು
ಕೈ ಕೈ ಕುಲುಕಿಸಿ ಕುಶಲೋಪರಿ ವಿನಿಮಯ ಮಾಡಿಕೊಳ್ಳುವಷ್ಟು

ಅರೆ! ಯೋಚಿಸಿಯೇ ಇರಲಿಲ್ಲ
ಮನಸುಗಳು ಬೆರೆಯಲಿಕ್ಕೆ ಒಂದು ನಿಮಿಷ ಸಾಕು
ಇನ್ನೇನು ಹೊರಡಬೇಕೆಂದಾಗ
ಬುದ್ಧಿ ಸ್ಥಿಮಿತತೆ ,ಹುಚ್ಚುತನದ ಗೆರೆ ದಾಟಲು ಬಿಡಬಹುದೇ..?

ನಾವ್ಯಾರೋ ಭೇಟಿಯಾದೆವು
ನಮ್ಮ ಸಂಬಂಧ ಕೇವಲ ಆ ರಸ್ತೆಯ ಕೊನೆಯ ತಿರುವಿನವರೆಗೆ ಮಾತ್ರ
ನಾವು ಆಕಸ್ಮಿಕ ಭೇಟಿಗೆ ರುಜುವಾದವರು..

ನಮ್ಮ ಕಾಮನ್ ಸೆನ್ಸ್ ಎಲ್ಲೆ ಮೀರಬಾರದಲ್ಲವೇ..?
ಕಾಯುವಿಕೆ ಗೆ ಆಸ್ಪದ ಕೊಡದೆ ಮುಂದೆ ಮುಂದೆ ಸಾಗಬೇಕಷ್ಟೇ
ಹಿಂದೆ ನೀವೋ?
ಇಲ್ಲಾ ನಾನೋ..?
ನಡೆಯಲೇಬೇಕು ಮತ್ತೊಂದು ತಿರುವಿನ ಹಾದಿಗೆ..!!

ಅದೆಷ್ಟು ಗಂಭೀರ ಭೇಟಿ ಆ ಕ್ಷಣದ್ದು..
ಏನೋ ತುಟಿ ಬಿಚ್ಚಿ ಹೇಳಬೇಕೆನಿಸಿತು ಹೇಳಲಾಗಲಿಲ್ಲಾ..
ಮನಬಿಚ್ಚಿ ಅಳಬೇಕೆನಿಸಿತು ಅಳಲಾಗಲಿಲ್ಲಾ..
ಅದೇಕೋ ಭುಜದ ಮೇಲೆ ಒರಗಿ ಒಂದಿಷ್ಟು ನೆಮ್ಮದಿ ಕೇಳಬೇಕೆನಿಸಿತು ಕೇಳಲಾಗಲಿಲ್ಲಾ…
ಕೊನೆಗೆ ಮನದ ಸಂದೇಶಗಳು ವಿನಿಮಯವಾಗಲೇ ಇಲ್ಲಾ…

ಕಥೆಯೊಂದು ಅಪೂರ್ಣಗೊಂಡಂತೆ
ನಮ್ಮ ಪಯಣವು ಕೂಡ…
ಬಹುಶಃ ಕಾಲವೇ ವಿರಾಮ ಕೊಟ್ಟು ಕಳುಹಿಸಿರಬೇಕು ಮುಂದೆ
ಪೂರ್ಣ ವಿರಾಮ ಇಡುವುದನ್ನು ಮರೆತಿರಬೇಕು…

ಬದುಕಿನ ಸಂತೆಗೆ ಬಂದ ನಾವು
ಮತ್ತದೇ ಹಾದಿಯಲಿ ಸಂಧಿಸಬಹುದೇ…?
ಆ ರಸ್ತೆಯ ಕೊನೆಯ ತಿರುವಿನಲ್ಲಿ ಮತ್ತೆ ನಮ್ಮ ಭೇಟಿಯಾಗಬಹುದೇ..?
ಈ ಬಾರಿ ದಾರಿಗಷ್ಟೇ ಸೀಮತವಾಗದೆ ನಮ್ಮ ಗೋರಿಯ ತನಕ ಸಾಗುವುದೇ..?
ಕಾದು ನೋಡಬೇಕಿದೆ


ಜಯಂತಿ ಸುನಿಲ್

About The Author

Leave a Reply

You cannot copy content of this page

Scroll to Top