ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸ್ವರ್ಗ

ಆದಪ್ಪ ಹೆಂಬಾ ಮಸ್ಕಿ

ಅದೋ….
ಕೆಂಪು ಗುಲಾಬಿಗಳ
ಸಾಲು ಸಾಲು
ಆ ಜಗವೇ ಬಗೆ ಬಗೆಯ
ಹೂತೋಟವು
ಹಳದಿ ಬಿಳಿ ತಿಳಿ ನೀಲಿ
ಹೂಗೊಂಚಲು
ನಡುವೆ ಬಂಗಾರಪುಷ್ಪಗಳ
ಹೊಯ್ದಾಟವು ||

ಚೆಲುವ ಚಿಟ್ಟೆಗಳೂ
ಬೆರಗಾಗಿ ನಿಂತಿವೆ
ಹಕ್ಕಿಮರಿಗಳ ರೆಕ್ಕೆಯ
ರಂಗು ಕಂಡು
ತಾಯಿಹಕ್ಕಿಯು ತುತ್ತನಿಕ್ಕುತಿದೆ
ಪುಟ್ಟ ಹಕ್ಕಿಗಳ ಪಟಪಟವಕಂಡು ||

ರಣಹದ್ದುಗಳ ರೆಕ್ಕೆಗೆ
ಬಣ್ಣ ಬಳಿದವರಾರೋ
ಬಾತುಕೋಳಿಗೆ ಅರಿಷಿಣದ
ಶಾಸ್ತ್ರ ಮಾಡಿದವರಾರೋ
ಶರಣು ಅವರಿಗೆ
ಅವರ ಕೌಶಲಕೆ
ಸ್ವರ್ಗವಾಗಿಹುದು ಭೂಮಿ
ಆ ಹಕ್ಕಿಗಳ ಅಂದದಿಂದ
ಅವಕ್ಕೆ ಬಣ್ಣ ಬಳಿದ
ಪರಿಯೇ ಚೆಂದ ಚೆಂದ ||

ಚಿಮ್ಮುತಿಹ ಕಾರಂಜಿ
ಧುಮ್ಮಿಕ್ಕುತಿಹ ಜಲಪಾತ
ಹಸಿರು ಹಾಸಿನ ಮೇಲೆ
ಇಬ್ಬನಿ ಹಿಮಪಾತ
ಯಾರು ಹೂಡಿ ಮಾಡಿಟ್ಟಿಹರೋ ಇಲ್ಲಿ
ಸ್ವರ್ಗವೆ ಧರೆಗಿಳಿದು ಬಂದಿಹುದು ಇಲ್ಲಿ ||

ಇಂತಿಪ್ಪ ಸ್ವರ್ಗ ತೋಟದಲಿ
ವಿಹರಿಸುತಿದ್ದಾ ದೊರೆಯ
ಮುಖದ ಮೇಲಿನಿತು
ನಗುವೆ ಇಲ್ಲ
ಕಾರಣ ಅಲ್ಲೆಲ್ಲೂ
ಅವನ ರಾಧೆಯ
ಸುಳಿವೆ ಇಲ್ಲ ||

——————————————

ಅತ್ತ ನೋಡಿದ ದೊರೆಯು
ಬಯಲು ಬಯಲು
ಗಿಡಮರಗಳಿಲ್ಲ
ಮಕರಂದವಿಲ್ಲ
ಹಕ್ಕಿಗಳಿಂಚರವು
ಮೊದಲೆ ಇಲ್ಲ ||

ಬರುತಲಿಹಳು ರಾಧೆ
ಬಸಿರು ಭತ್ತದ
ಹಸಿರು ಸಿರಿ ಗದ್ದೆಯಲಿ
ಬಿಡು ಸಾಕು
ಬೇರೆ ಏನದು ಏತಕ್ಕೆ ಬೇಕು
ನನ್ನ ದೊರೆಸಾನಿ ಅವಳು ಬರುತಿಲ್ಲವೇ
ಅಷ್ಟೇ ನನ್ ಜೀವಕ್ಕೆ ಸಾಕಲ್ಲವೇ
ಎಂತಪ್ಪ ದೊರೆಯು
ಅವಸರದಿ ನಡೆದನು
ಬಯಲು ಭೂಮಿಯ ಕಡೆಗೆ
ಚಿತ್ತವೀಗವನದು ಅವಳ
ನಗುವಿನೆಡೆಗೆ
ಸ್ವರ್ಗವನೆ ಧರೆಗಿಳಿಸೋ
ಅವಳಪ್ಪುಗೆಯ ಕಡೆಗೆ ||


About The Author

1 thought on “ಆದಪ್ಪ ಹೆಂಬಾ ಮಸ್ಕಿಕವಿತೆ-ಸ್ವರ್ಗ”

Leave a Reply

You cannot copy content of this page

Scroll to Top