ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬೆವರಿನ ಜಯ

ಪಿ.ಆರ್.ವೆಂಕಟೇಶ್

Revolution: Russian Art review – from utopia to the gulag, via teacups | Art  | The Guardian

ಸೊಕ್ಕಿದೆದೆ ಸೀಳಿದ
ನೇಗಿಲ ಕುಳದ ಕರುಳ ಹಾಡು
ಇತಿಹಾಸದ ಪುಟಕ್ಕೆ
ವಸಂತನ ಧಿರಿಸು.
ದೆಹಲಿಯ ಗಡಿಯಲ್ಲಿ ಹಾಡಿವೆ
ಗುಲಾಬಿಗಳ ಕೊರಳು.
ತೋಟತುಂಡಾಗಿಸಲು
ಎಸೆದೆಲ್ಲ ಬೇಲಿ ಕರಗಿಸಿದ
ರಸಗೊಬ್ಬರದಲಿ ಅರಳಿ.

ಮುಗಿಲಿಗೆ
ಕೆಂಪೋಕುಳಿಯ ಚೆಲವು
ಬೆವರೂದಿದ ಕಹಳೆಗೆ
ಹೊಸ ಉಸಿರಿನ ಕಸುವು.
ಅಧಿಕಾರದಮಲುಂಡು
ಮಲಗಿದವನ ಸುತ್ತ
ಹೋರಾಟದ ಹುತ್ತ

ಕುರ್ಚಿಯ ಕಾಲಿಗೆ ಕುಷ್ಟದ ಬೇನೆ
ದೇಶಭಕ್ತನ ವೇಷ ಕರಗಿ
ಬೆತ್ತಲಾಗಿದೆ ಕೋಟೆ.
ಲಾಠಿ ಬೂಟುಗಳು
ಜಲಫಿರಂಗಿ ಆಟಗಳು
ಮುಳ್ಳಿನ ಕೂಟಗಳು
ಅನ್ನ ಕೆಣಕಿ ಮಣ್ಣುತಿಂದು
ಸುಕ್ಕಾದ ಬಾಳೆಯಂತೆ ಬಾಗಿವೆ
ನೇಗಿಲದ ಹಾಡಿಗೆ.

ಆದರೂ ಗೆಳೆಯ
ಇನ್ನೂ ಉಳಿದಿದೆ ಮಥನ
ಮಲಗಿದವ ಕಣ್ಣುಜ್ಜಿದಾನಷ್ಟೆ
ಎಚ್ಚರಗೊಂಡಿಲ್ಲ.
ತಾ ಕಕ್ಕಿದ ಪಾಪ ಹಿಂಪಡೆವ ಮಾತಲ್ಲಿ
ಎದೆಯ ವಿಷ ವಾಸನೆಯ ಘಮುಟು
ನಗುವ ಕಣ್ಣಲ್ಲಿ ವಿಕೃತಿಯ ಉರಿನಗೆ
ಕುರ್ಚಿಕಾಲಿನ ಕುಷ್ಟದ ಸಾವಿಗೆ
ಅನ್ನದ ಪ್ರಾಣವ ಹಿಂಡಿ
ಔಷಧಿ ತೇಯುವ ತವಕ.

ಬೆವರ ಜಯ ದಾಖಲಿಸುತ್ತೇನೆ
ನೀಲಿದಂಗೆಯ ಬಟ್ಟೆಯೊಂದಿಗೆ
ಎಚ್ಚರದೊಂದಿಗೆ
ನನ್ನೆದೆಗೆ ಹೊಲೆದುಕೊಳ್ಳುತ್ತೇನೆ.
ಬಸಿವ ರಕ್ತದಲಿ
ಬೆತ್ತಲಾದ ಕೋಟೆ ಗೋಡೆಗೆ
ಸಾವಿನ ಚಿತ್ರಗಳ ಮುದ್ರಿಸುತ್ತೇನೆ.
ನೆಡುತ್ತೇನೆ ಶ್ರದ್ಧಾಂಜಲಿ ಬಾವುಟ
ನೆತ್ತಿಯ ಗೋರಿಗೆ.

ನೆಪ್ಪಿಟ್ಟುಕೊ ದೊರೆಯೆ
ಬೆವರ ಜಯ ಅರಳಿಸುವುದು ರಕ್ತವನ್ನಲ್ಲ
ಹಸಿದ ಕರುಳಿನ ಅನ್ನವನ್ನ.
ನೇಗಿಲು ಸರಕಲ್ಲ,
ಬೆವರೂ ಸರಕಲ್ಲ ದೊರೆ
ಸುರಸುರನೆ ಸುಡುವ ಅಗ್ನಿ ಸಿಲುಬೆ.
ಬೇಕಾದಾಗ ಮುದ್ರಿಸುವ
ಬೇಡಾದಾಗ ಮುರಿವ
ನೋಟಲ್ಲ ದೊರೆ
ಎಂದೂ ಮುಕ್ಕಾಗದ ರೊಟ್ಟಿ.


About The Author

Leave a Reply

You cannot copy content of this page

Scroll to Top