ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎದುರೇ ಪ್ರೀತಿ ಇರುವಾಗ

ನಾಗರಾಜ್ ಹರಪನಹಳ್ಳಿ -೧-ಎದುರೆ ಪ್ರೀತಿ ಇರುವಾಗಎಲ್ಲಿ ಹೊರಡಲಿಅಲೆಯಲು -೨-ಇಳೆಗೆ ಮಳೆಯ ಧ್ಯಾನನನಗೆ ಅವಳ ಹೆರಳಪರಿಮಳದ ಧ್ಯಾನ. -೩-ಅವಳ ತುಟಿಗಳು ಮಾತಾಡಿದವುಕವಿತೆ ಹುಟ್ಟಿತು -೪- ತುಟಿಗೆ ತುಟಿ ಇಟ್ಟೆಜನ್ಮ ಜನ್ಮದಬಂಧನ ನೆನಪಾಯಿತು -೫-ಅವಳು ಅಂಗೈಗೆಮುತ್ತಿಟ್ಟಳುಪ್ರೇಮದ ಉದಯವಾಯಿತು -೬-ಅವಳ ಅಂಗೈಗೆಅದ್ಭುತ ಶಕ್ತಿಅದಕೆಬೆಸುಗೆಗೆ ಬಿಸಿ -೭-ನನ್ನ ಬಲ ಅಂಗೈ ನೋಡಿಕೊಂಡಾಗಲೆಲ್ಲಾಅವಳ ಮುಖದ್ದೇ ನೆನಪುಕಾರಣಮೊದಲು‌ ಅವಳ ತುಟಿ ತಾಗಿದ್ದುಅಂಗೈಗೆ* -೮-ಆಕೆ‌ ಹೇಳುವುದುಒಂದೇಉಸಿರಾಟದ ಏರಿಳಿತಎದೆ‌ ಬಡಿತ ನೀನು‌ -೯-ಎದೆಯ ಮೇಲೆ‌ ಕೈಯಿಟ್ಟರೆಅವಳ ಹೆಸರುಕಿವಿಗೆ ಅಪ್ಪಳಿಸಿತ -೧೦-ಕುಡಿಯುತ್ತಿದ್ದೆ ಅಲೆಯುತ್ತಿದ್ದೆಅವಳ ದರ್ಶನವಾಯಿತುಎದೆಗೆ ಪ್ರೀತಿಯ ಬೀಜಹಾಕಿದಳುಅದೀಗ ಹೆಮ್ಮರವಾಗಿದೆ**********

ಎದುರೇ ಪ್ರೀತಿ ಇರುವಾಗ Read Post »

ಕಾವ್ಯಯಾನ

ಸಂಮಿಶ್ರಣ

ಡಾ.ಪ್ರತಿಭಾ ಅಬ್ಬರಿಸುವ ಕಡಲಿಗೆಯಾವತ್ತೂ ಶಾಂತವಾಗಿಹರಿಯುವ ನದಿಗಳು ಸಾಕ್ಷಿ ಖಾಲಿಯಾಯಿತೆ ಸಿಹಿನೀರಿನ ಒರತೆಹಾಕಿಕೊಂಡು ತನಗೆತಾನೇ ಪ್ರಶ್ನೆಗಳ ಸ್ವಂತಿಕೆಯ ಕಳೆದುಕೊಳ್ಳುವಅಪಾಯ ಇದ್ದರೂಒಂದು ನೆಮ್ಮದಿ ಯ ಭಾವ. ಅಬ್ಬರದ ಅಲೆಗಳುಸದ್ದು ಮಾಡಿ ಸುಮ್ಮನಾಗಲುಮೂಡಿತು ನೆಮ್ಮದಿಯಭಾವ ಶಾಶ್ವತವೇನಲ್ಕ ಈ ಬದುಕುನೋವು, ನಲಿವುಸುಖ,ದುಃಖಗಳ ಸಂಮ್ಮಿಶ್ರಣ ********

ಸಂಮಿಶ್ರಣ Read Post »

ಕಥಾಗುಚ್ಛ

ಕಡಲಲೆಗಳ ಲೆಕ್ಕ

ಕಥೆ ಸುಧಾ ಹೆಚ್.ಎನ್ ರುಕ್ಮಿಣಮ್ಮ  ಕಡಲಿನ ಮಗಳು.  ಹುಟ್ಟಿದ್ದು, ಬೆಳೆದದ್ದು, ಪ್ರತಿ ಬೆಳಗು, ಪ್ರತಿರಾತ್ರಿ  ಕಳೆದದ್ದು  ಸಮುದ್ರದ ಜೊತೆಗೇ. ಮೀನುಗಳ ವ್ಯಾಪಾರ ಮಾಡುತ್ತಿದ್ದ ತಂದೆಯ, ಜೀವನದ ಜೊತೆಗಾರನಾದ  ಪಾಂಡುರಂಗನ ಮನೆಯಿದ್ದದ್ದು ಕಡಲತೀರದಲ್ಲೇ.  ತಮ್ಮ ಸುಮಾರು ಎಂಬತ್ತು ವರ್ಷದ ಜೀವಮಾನವನ್ನು     ಕಣ್ಣಳತೆಯಲ್ಲಿದ್ದ  ಅಗಾಧ ಸಮುದ್ರ,  ಅವಿರತವಾಗಿ  ಕೇಳಿಬರುತ್ತಿದ್ದ ಅಲೆಗಳ ಮೊರೆತ,  ಮೀನು….ಇತರೆ    ವಾಸನೆಯ ಜೊತೆಗೆ ಜೀವನ  ಸವೆಸಿದ್ದರು  ರುಕ್ಮಿಣಮ್ಮ.   ರುಕ್ಮಿಣಮ್ಮ ಮತ್ತು ಪಾಂಡುರಂಗಪ್ಪ   ಐವರು ಮಕ್ಕಳಿಗೆ ತಮ್ಮ ಕೈಲಾದ ಮಟ್ಟಿಗೆ ವಿದ್ಯಾಭ್ಯಾಸ ಕೊಡಿಸಿ, ಮದುವೆ ಮಾಡಿದ್ದರು. ಎಲ್ಲಾ ಮಕ್ಕಳು ದೂರ ದೂರದ ಊರುಗಳಲ್ಲಿ   ತಮ್ಮ,  ತಮ್ಮ ನೆಲೆ  ಕಂಡುಕೊಂಡಿದ್ದರು.      ಎಂಟು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ,  ದೇಹದ ಒಂದು ಭಾಗದ  ಸ್ವಾಧೀನ ಕಳೆದುಕೊಂಡಿದ್ದರು  ಪಾಂಡುರಂಗಪ್ಪ.   ಗಂಡನ ಅನಾರೋಗ್ಯದ  ಸಮಯದಲ್ಲಿ  ಅನಾವರಣಗೊಂಡ ಮಕ್ಕಳ   ನಡವಳಿಕೆ,  ಅಸಹಕಾರ, ಅಸಹನೆ,  ಲೆಕ್ಕಾಚಾರಗಳಿಂದ  ಬಹಳವಾಗಿ  ನೊಂದಿದ್ದರು ರುಕ್ಮಿಣಮ್ಮ.  ತಂದೆ-ತಾಯಿಯರ  ಕಷ್ಟಕಾಲದಲ್ಲಿ  ಹಡೆದ ಮಕ್ಕಳು ತಮ್ಮ  ಕರ್ತವ್ಯ ನಿರ್ವಹಿಸುವಾಗ ತಮ್ಮತಮ್ಮಲ್ಲೆ   ಸ್ಪರ್ಧೆ, ಜಿದ್ದಿಗೆ ಬಿದ್ದು ತೋರಿಸಿದ ಅನಾದರ, ಮಾಡಿದ ಅವಮಾನ   ರುಕ್ಮಿಣಮ್ಮನವರಿಗೆ ಜೀವನ ಕಲಿಸಿದ ಹೊಸ ಪಾಠವಾಗಿತ್ತು.       ಹಾಗೂ,  ಹೀಗೂ  ಪರಿಪಾಟಲು ಪಟ್ಟು ಆಸ್ಪತ್ರೆಯಿಂದ ಗಂಡನನ್ನು  ಮನೆಗೆ ಕರೆತಂದಿದ್ದರು  ರುಕ್ಮಿಣಮ್ಮ. ನಂತರ ವೈದ್ಯರ ಸಲಹೆಯಂತೆ ಪ್ರತಿ ದಿನ  ಮುಂಜಾನೆ , ಸಂಜೆ ಗಂಡನ  ಕೈ ಹಿಡಿದು  , ಸಮುದ್ರದ  ದಂಡೆಗೆ  ಕರೆದೊಯ್ದು ಬೆಚ್ಚಗಿನ ಮರಳಿನಲ್ಲಿ  ಮಲಗಿಸಿ, ಹಿತವಾಗಿ ಕೈ ಕಾಲು  ತಿಕ್ಕಿ , ಕಡಲ ಅಲೆಗಳಿಂದ ಸ್ನಾನ ಮಾಡಿಸುತ್ತಿದ್ದರು.   ಗಂಡನ ಬಗಲಲ್ಲಿ ಕುಳಿತು  ಸಮುದ್ರದಲೆಗಳ  ಲೆಕ್ಕ ಹಾಕುತ್ತಿದ್ದಾಗ,  ಪಾಂಡುರಂಗಪ್ಪ  ನಗುತ್ತಾ ” ಹುಚ್ಚು ರುಕ್ಮಿ”   ಎಂದು   ಪ್ರೀತಿಯಿಂದ ತಲೆಗೆ  ಮೊಟಕುತ್ತಿದ್ದರು.     ಮಕ್ಕಳೆಲ್ಲಾ   ಕಳುಹಿಸುತ್ತಿದ್ದ  ಅಷ್ಟಿಷ್ಟು ಹಣದಿಂದ  ಎಂಟು ವರ್ಷಗಳು ಜೀವನ ದೂಡಿದ್ದ  ಪಾಂಡುರಂಗಪ್ಪನವರು ತೀರಿಕೊಂಡಿದ್ದರು.       ಪಾಂಡುರಂಗಪ್ಪ ಸತ್ತು ಹನ್ನೊಂದು  ದಿನಗಳು  ಕಳೆದಿದ್ದವು.  ಐವರು ಮಕ್ಕಳು, ಹನ್ನೆರಡು  ಮೊಮ್ಮಕ್ಕಳು ಒಟ್ಟಿಗೆ ಕುಳಿತು ಎಂಟು  ವರ್ಷಗಳಿಂದ , ತಂದೆಯ  ಆಸ್ಪತ್ರೆ ಖರ್ಚು ,  ಇದುವರೆಗೆ  ತಾಯಿಗೆ ನೀಡಿದ ಹಣ,    ತಂದೆಯ ಮಣ್ಣು ,  ಶ್ರಾದ್ಧ,  ಮಾಡುವವರೆಗೆ ಆದ ಖರ್ಚುವೆಚ್ಚಗಳನ್ನು ಲೆಕ್ಕ ಹಾಕುತ್ತಾ ಕುಳಿತಿದ್ದರು.   ಪ್ರತಿಯೊಬ್ಬರು ತಾವು  ಮಾಡಿದ ವೆಚ್ಚಕ್ಕೆ ಸಾಕ್ಷಿಗಳನ್ನು  ನೀಡುತ್ತಿದ್ದರು.  ತಾಯಿಯಾದ ರುಕ್ಮಿಣಮ್ಮ   ಮಕ್ಕಳಿಗೆ   ತಾನೇನು ನೀಡಿದ್ದೇನೆ  ಎಂಬುದಕ್ಕೆ ಯಾವ ಲೆಕ್ಕ , ಸಾಕ್ಷಿ ನೀಡಲಾಗದೆ ಕುಳಿತಿದ್ದರು.      ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದ ರುಕ್ಮಿಣಮ್ಮನನ್ನು ಯಾರ್ಯಾರು ಎಷ್ಟೆಷ್ಟು ದಿವಸ ಯಾರ್ಯಾರ ಮನೆಗಳಲ್ಲಿ ಇಟ್ಟುಕೊಳ್ಳಬೇಕು ಎಂಬುದರ  ಕುರಿತು   ಚರ್ಚೆಯಾಗತೊಡಗಿತ್ತು.  ಅವರುಗಳೆಲ್ಲಾ ವೇಳಾಪಟ್ಟಿಯನ್ನು ತಯಾರಿಸುತ್ತಾ ಪರಸ್ಪರರ ಅನುಕೂಲ, ಅನಾನುಕೂಲಗಳನ್ನು    ಹೇಳಿ ಕೊಳ್ಳತೊಡಗಿದ್ದರು.  ರುಕ್ಮಿಣಮ್ಮ ಬದುಕಿರುವ  ಜೀವಿ ಎಂದು ಅವರ್ಯಾರೂ ಭಾವಿಸಿದಂತೆ ಕಾಣಲಿಲ್ಲ.       ರುಕ್ಮಿಣಮ್ಮನವರಿಗೆ ಆ ಕ್ಷಣದಲ್ಲಿ ಅಗಾಧವಾದ , ಆಳವಾದ ,  ಲೆಕ್ಕ ಮಾಡಲಾಗದ   ಅಲೆಗಳ  ಕಡಲು ನೆನಪಾಯಿತು.   ಕುಳಿತಲ್ಲಿಂದ ಮೆಲ್ಲನೆ ಎದ್ದು  ಮನೆಯಿಂದ  ಹೊರಬಂದು ಕಡಲ ಕಡೆ ಹೆಜ್ಜೆ ಹಾಕಿದರು. ಕಡಲ ಮರಳು ತನ್ನ  ಆತ್ಮೀಯತೆಯ  ಸ್ಪರ್ಶದಿಂದ   ನೊಂದ ಮನಸ್ಸನ್ನು  ಸಂತೈಸಿತು. ರುಕ್ಮಿಣಮ್ಮ  ಕಡಲ ಅಲೆಗಳ ಲೆಕ್ಕ ಹಾಕುತ್ತಾ…… ಹಾಕುತ್ತಾ ………ಕಡಲೆಡೆಗೆ ಹೆಜ್ಜೆ ಹಾಕತೊಡಗಿದ್ದರು. *********   

ಕಡಲಲೆಗಳ ಲೆಕ್ಕ Read Post »

ಕಾವ್ಯಯಾನ, ಗಝಲ್

ಗಝಲ್

ಎ ಎಸ್. ಮಕಾನದಾರ ನೀನು ಹೋದ ಅರೆಗಳಿಗೆಗೆ ಬಾಗಿಲ ಕಿಟಕಿಗಳು ಬೋರಾಡಿ ಅಳುತಿವೆಇಂದಲ್ಲ ನಾಳೆ ಬರುತ್ತೀಯೆಂದು ಹೊಸ್ತಿಲ ಭರವಸೆಯಿಂದ ಕಾಯುತಿವೆ ಅಂಗಾಲಿಗೆ ಮುತ್ತಿಕ್ಕಿದ ಮಣ್ಣು ಹಿಮ್ಮಡಿಯಲಿ ಹಿಮ್ಮೇಳಹಾಕಿವೆ ಸಾಕಿದಣಿದ ದೇಹಕೆ ಖಬರಸ್ತಾನಿನ ಹೂಗಳು ಸದಾ ಸಾಂತ್ವನ ಹೇಳುತಿವೆ ಬೀದಿ ದೀಪಗಳು ಕಣ್ಣುಗಳನ್ನು ಪಿಳುಕಿಸಿ ಮಿಂಚುಹುಳು ವಾಗಿಸುತ್ತಿವೆನೆನಪುಗಳು ಮಗ್ಗುಲು ಬದಲಿಸಿ ನೇಸರನಿಗೆ ಕರೆದು ಸಾವು ತರಿಸುತಿವೆ ಹರಿದ ಅಂಗಿಗೆ ಬೆವರ ಉಣಿಸಿ ಬೆಂದ ಹಾಲಿಗೆ ನೆಮ್ಮದಿ ಬೇಡುತ್ತಿವೆತುಕ್ಕು ಹಿಡಿದ ತೊಟ್ಟಿಲಲಿ ಜೋಗುಳ ತೂಗಿ ಹರತಾಳವನು ಹೂಡುತಿವೆ ಸಾಹೇಬನ ಹಸಿವು ಕಂಡು ಹರಿದು ತಿನ್ನುವ ಹದ್ದು ಮೌನವಾಗಿಸುತ್ತಿವೆರಟ್ಟೆ ತಟ್ಟಿದ ತವೆಯಲಿ ಕರಕಲು ರೊಟ್ಟಿಗಳು ಹೊಟ್ಟಿಗೆ ಪ್ರಶ್ನಿಸುತಿವೆ *********

ಗಝಲ್ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಆಲದ ನೆರಳು ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಕತೆಗೆ ಬೇಕಾದ ವಸ್ತು, ಅದರಲ್ಲಿ ತುಂಬಿಕೊಳ್ಳುವ ಪಾತ್ರಗಳು, ಪ್ರಾದೇಶಿಕ ಭಾಷೆಯ ಸೊಗಡು,ಅದರ ನಿರ್ವಹಣೆ, ಅನಿರೀಕ್ಷಿತ ತಿರುವುಗಳು, ಕಾಡುವ ಪಾತ್ರಗಳ ಹೆಣಿಗೆ, ಕೃತಕತೆಯಲ್ಲೂ ಮೈಮರೆಯದ ವಾಸ್ತವೀಕತೆ… ಇವುಗಳಿಂದ ಮಧುರಾ ಅವರು ಕತೆಗಳ ಮೂಲಕ ನಮ್ಮನ್ನು ಬಂಧಿಸಿಡುವಲ್ಲಿ ಯಶಸ್ವಿ ಆಗಿದ್ದಾರೆ. ಆಲದ ನೆರಳು – ಪುರುಷ ಪ್ರಧಾನ ಸಮಾಜದಲ್ಲಿ ಎರಡು ಹೆಣ್ಣು ಜೀವಗಳು ಸಾಂಸ್ಕೃತಿಕವಾಗಿ ನಲುಗಿ,ಕೊರಗಿ ಹೋಗುವ ಕಥಾ ಹಂದರ ಹೊಂದಿದೆ. ‘ ಬರೀ ನೆರಳಿದ್ರೆ ಉಳಕಿ ಗಿಡಗೋಳು ಬೆಳ್ಯೋದೆ ಇಲ್ಲ. ಸ್ವಲ್ಪ ಬೆಳಕು, ಬಿಸಿಲು ಬರ್ಲಿ. ಅಂದ್ರ ಬ್ಯಾರೇ ಗಿಡಗೋಳು ಬೆಳಿತಾವ’.ಇದು ಇಡೀ ಕಥೆಯ ಧ್ವನಿ ಹಾಗೂ ಸತ್ವಯುತವಾದ ಭಾಗ. ಅನಾವರಣ – ಕೇದಾರನಾಥ ಯಾತ್ರೆಗೆ ಹೋದ ದಂಪತಿಗಳು ಪ್ರಕೃತಿ ಅವಘಡಕ್ಕೆ ಸಿಲುಕುವುದು. ಆಗ ಅವರ ಢೋಲಿ ಹೊತ್ತವನು, ಅವನ ಪುಟ್ಟ ಡೇರೆ ಮನೆಯಲ್ಲಿ ಉಳಿಸಿಕೊಂಡು ಉಪಚರಿಸುವುದು. ಬಡತನದ ಆ ಕುಟುಂಬ ಇವರನ್ನು ಆದರಿಸುವ ರೀತಿ. ಗಂಡ, ತಾವು ಉಳಿಯುವುದು ಕಷ್ಟ ಎಂದಾಗ ಮಾಡುವ ವರ್ತನೆ. ಬದುಕಿ ಮರಳಿ ಹೊರಟಾಗ ಬದಲಾಗುವ ಅವನ ಚರ್ಯೆ. ಎಲ್ಲಕ್ಕಿಂತ ಮುಖ್ಯವಾಗಿ ಕೊನೆಯಲ್ಲಿ ಲೇಖಕಿ ಕಥೆಯನ್ನು ನಿಭಾಯಿಸಿದ ರೀತಿ ಗಮನ ಸೆಳೆಯುತ್ತದೆ. ಅಕ್ಕಮ್ಮ – ಕತೆಯೊಳಗೊಂದು ಕತೆ, ಅದರಲ್ಲಿ ಉಪಕಥೆ ಅನ್ನುವಂತೆ ತಿರುವು ಪಡೆಯುವ ಕತೆಯಿದು. ಕತೆ ಹೇಳುವವನೇ ಇಲ್ಲಿ ದುರಂತ ನಾಯಕ. ಅವನೇ ಅವನಜ್ಜ ಅಮ್ಮನ ಮೇಲೆ ಬಲಾತ್ಕಾರ ಮಾಡಿ ಹುಟ್ಟಿದ ಮಗ. ನೈತಿಕತೆ ಮಾಯವಾಗಿ, ನಂಬಲಸಾಧ್ಯ ಅನ್ನಿಸುವ ಕಥೆಗೆ ಓದುಗರೂ ಸಾಕ್ಷಿಯಾಗುವುದರ ಜೊತೆಗೆ ಕಸಿವಿಸಿಗೂ ಒಳಗಾಗುವುದು ಖಚಿತ. ನೆಲದ ಅಂಚು – ಗ್ರಾಮ ಮತ್ತು ನಗರದ ಬದುಕನ್ನು ಒಟ್ಟುಗೂಡಿಸುತ್ತಲೇ ಮಧ್ಯಮ ವರ್ಗದ ಆಸೆ, ದುರಾಸೆ, ಕನಸನ್ನು ಹೊರಹಾಕುವ ಈ ಕಥೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಸಂದೇಶವನ್ನು ನೀಡುತ್ತದೆ. ಪಲಾಯನ- ಬದಲಾದ ಕಾಲಘಟ್ಟದಲ್ಲಿ ಮತ್ತು ನಗರೀಕರಣದ ಪರಿಣಾಮವಾಗಿ ಎಲ್ಲವೂ ಕೃತಕ.ಹಳ್ಳಿಯ ಸೊಗಡಿನ ವಸ್ತು, ರೈತರ ಕಷ್ಟ, ಆರ್ಥಿಕ ಸ್ಥಿತಿಯನ್ನು, ಮಾನಸಿಕ ತೊಳಲಾಟವನ್ನು ಗ್ರಾಮೀಣ ಹಿನ್ನೆಲೆಯಲ್ಲಿ ಸಹಜವಾಗಿ ಮಧುರಾ ಅವರು ಕಟ್ಟಿಕೊಟ್ಟಿದ್ದಾರೆ. ಇವುಗಳ ಜೊತೆಗೆ ಇತರ ಕಥೆಗಳೂ ಸಹ ಮಹತ್ವದ ಕಥೆಗಳು. ಆದರೆ ಇಲ್ಲಿನ ಮಿತಿಯಲ್ಲಿ ಇಷ್ಟನ್ನು ಹೇಳಿದ್ದೇನೆ.ಆಲದ ನೆರಳು ಕೃತಿಯನ್ನು ಒಮ್ಮೆ ಓದಿ.**** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಅಂಕಣ ಸಂಗಾತಿ, ಸ್ವಾತ್ಮಗತ

ಸ್ವಾತ್ಮಗತ

ಮರಗಳ ಮಹಾತಾಯಿ ನಾನು ಎಕೋ ಇಷ್ಟು ಬರಹವನ್ನು ಬರೆದರೂ ಅದ್ಯಾಕೋ ಈ ‘ಸಾಲು ಮರಗಳ ತಿಮ್ಮಕ್ಕ’ನ ಬಗೆಗೆ ಬರೆಯಲಾಗಿರಲಿಲ್ಲ. ಈ ತಿಮ್ಮಕ್ಕನ ಬಗೆಗೆ ಟಿಪ್ಪಣಿ ಬರೆದಿಟ್ಟುಕೊಂಡು ಬಹಳ ದಿನಗಳಾದವು. ಈಗ ಸಾಲು ಮರದ ಈ ತಿಮ್ಮನ ಬಗೆಗೆ ಬರೆಯಬೇಕು ಎಂಬ ತವಕ ಅದ್ಯಾಕೋ ಹೇಚ್ಚಾಯಿತು. ಅದಕ್ಕಾಗಿ ಇಂದು ಈ ಬರಹ ಬರೆದನು.ಅದೋ ಈ ಲೇಖನ ‘ಮರಗಳ ತಾಯಿ ತಿಮ್ಮಕ್ಕ’..! ಮರ ಎಂದಾಕ್ಷಣ ನಮ್ಮ ಮನದಲ್ಲಿ ಮೂಡಿ ಬರುವವರೇ ತಿಮ್ಮಕ್ಕನರವರು. ಬರೀ ತಿಮ್ಮಕ್ಕನೆಂದರೆ ಬಹುಶಃ ಯಾರಿಗೂ ಗೊತ್ತಾಗಲಾರದು. ಸಾಲು ಮರದ ತಿಮ್ಮಕ್ಕನೆಂದೇ ಕರೆಯಬೇಕು.ಇವರ ಬಗ್ಗೆ ತಿಳಿದೇ ಇಲ್ಲ ಅನ್ನೋ ಜನ ಬಹಳ ಕಡಿಮೆ. ನಮಗೆ ತಿಳಿದ ಪ್ರಕಾರ, ಸಾಲು ಮರದ ತಿಮ್ಮಕ್ಕ ಎಂದರೆ ನಾಲ್ಕು ಕಿಲೋಮೀಟರ್ ಉದ್ದಕ್ಕೂ ಮರ ನೆಟ್ಡಿದ್ದಾರೆ. ಪೃಕೃತಿ ಮಾತೆಯನ್ನೇ ಬೆಳೆಸಿ ಪೋಷಿಸುವ ಮಹತ್ಕಾರ್ಯ ಮಾಡಿರುವ ಸಾಲು ಮರದ ತಿಮಕ್ಕ. ಅವರು ನಮ್ಮೆಲ್ಲರ ಹೆಮ್ಮೆ ಹಾಗೂ ಆದರ್ಶವಾದ ಪರಿಸರವಾದಿ. ತಿಮ್ಮಕ್ಕ ಮೂಲತಃ ಬೆಂಗಳೂರು ಹತ್ತಿರದ, ಮಾಗಡಿ ತಾಲ್ಲೂಕಿನ ಹುಳಿಕಲ್ ಗ್ರಾಮದವರು. ತಿಮಕ್ಕನರವರು ಹೆಚ್ಚು ಓದಿಲ್ಲದ ಕಾರಣ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾಗಿದ್ದರು. ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಮಕ್ಕಳಾಗದಿದ್ದರೆ ಎಂತವರಿಗೂ ಬೇಸರವಾಗುತ್ತದೆ. ಹಾಗೆಯೇ ತಿಮ್ಮಕ್ಕನವರಿಗೂ ಈ ಕೊರತೆ ಕಾಡುತ್ತಲೇ ಇತ್ತು. ಆದರೆ ತಿಮ್ಮಕ್ಕ ಕುಗ್ಗಲಿಲ್ಲ. ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು. ಮರಗಳನ್ನೇ ಮಕ್ಕಳಂತೆ ಪ್ರೀತಿಯಿಂದ ಬೆಳೆಸಿದರು ಅವರ ಈ ಮಹಾನ್ ಕೆಲಸಕ್ಕೆ, ಪತಿ ಚಿಕ್ಕಯ್ಯ ಅವರೂ ಸಹ ಕೈ ಜೋಡಿಸಿದರು. ತಿಮ್ಮಕ್ಕ ಹುಟ್ಟುತ್ತಲೇ ಬಡತನವನ್ನು ಹಾಸಿ ಹೊದ್ದು ಬಂದವರು. ಬಡತನದ ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ ಅವರದು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4 ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಡಲಾಯಿತು. ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು. ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ‘ನೆರಳು ನೀಡುವ ಮರಗಳೆ ನನ್ನ ಮಕ್ಕಳು, ಅವುಗಳನ್ನು ಬೆಳೆಸಿ ಪೋಷಿಸುವುದೇ ನನ್ನ ಜೀವನದ ಗುರಿ’ ಎಂದು ನಂಬಿ ನಡೆದ ಈ ವೃಕ್ಷ ಮಹಿಳೆ ತಿಮ್ಮಕ್ಕರವರಿಗೆ 100 ವರ್ಷ ತುಂಬಿದೆ. ತಮ್ಮ ಸಾಧನೆಗಾಗಿ ತಿಮ್ಮಕ್ಕ ಅವರಿಗೆ ಹಲವು ಸನ್ಮಾನಗಳು ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಇವರಿಗೆ, ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆರವರಿಂದ ಮಾನ್ಯತೆಯ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಕಡೆಯಿಂದ ಶ್ಲಾಘನೆಯ ಪ್ರಮಾಣ ಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ನ್ಯಾಷನಲ್ ಸಿಟಿಜನ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಟ ಆಫ ಲೀವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, 2010 ರ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿಗಳು ಲಭಿಸಿವೆ. ಸಾಲು ಮರದ ತಿಮ್ಮಕ್ಕ ಅವರ ಸಾಧನೆಯಿಂದ ಸ್ಪೂರ್ತಿ ಪಡೆದಾದರೂ ನಾವು ಪರಿಸರವನ್ನು ಉಳಿಸುವಲ್ಲಿ ನಮ್ಮ ಕಾರ್ಯ ನಿರ್ವಹಿಸಬೇಕು. ಗಿಡ ಮರಗಳನ್ನು ನಮ್ಮ ಮನೆ ಸುತ್ತ ಬೆಳೆಸೋಣ. ಕಸ-ಕಡ್ಡಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಾಕೋದನ್ನು ನಿಲ್ಲಿಸೋಣ. ಶಬ್ದ ಮಾಲಿನ್ಯ ಕಡಿಮೆ ಮಾಡೋಣ. ಜಲಮಾಲಿನ್ಯ ಆದಷ್ಟು ತಡೆಯೋಣ. ನದಿ, ಭಾವಿ, ಕೆರೆ, ಕೊಳ್ಳಗಳನ್ನು ಉಳಿಸಿ ಮಾಲಿನ್ಯದಿಂದ ತಡೆಗಟ್ಟೋಣ. ನಮ್ಮ ಪರಿಸರವನ್ನು ಶುದ್ಧಿಯಾಗಿ ಉಳಿಸಲು ಇನ್ನು ಏನೇನು ಸಾಧ್ಯವೋ ಅದನ್ನು ಮಾಡೋಣ. ಇದೇ ನಾವು ಈ ಅಜ್ಜಿಗೆ ಸಲ್ಲಿಸುವ ಸನ್ಮಾನ- ಗೌರವ. ಸಾಲುಮರದ ತಿಮ್ಮಕ್ಕ ನಮಗೆಲ್ಲ ಮಾದರಿಯಾಗಲಿ. ********* ಕೆ.ಶಿವು.ಲಕ್ಕಣ್ಣವರ

ಸ್ವಾತ್ಮಗತ Read Post »

ಕಾವ್ಯಯಾನ

ಕುಟುಕು

ಲಕ್ಷ್ಮೀ ಪಾಟೀಲ್ ನರ‍್ವಾತ ವಲಯದಿಂದಪೋನಾಯಿಸಿದಾತನೊಬ್ಬ”ಹಲೋ ನಿಮ್ಮಮನೆಯಲ್ಲಿ ದೀಪಾ ಇದ್ದಾರೆಯೇ? “ಎಂದುಮಾತಿಗೆ ಪೀಠಿಕೆಯಾದಕೆಂಪಾದ ನಾನು “ಈ ಮನೆಯಲ್ಲಿದೀಪವಾಗಿ ಉರಿಯುವವಳು ನಾನೇ”ಎಂದು ಕುಕ್ಕಿದೆ ಪಾಪ ಆತನ ಬದುಕುಕತ್ತಲಲ್ಲಿ ಕೂತಿರುವುದಕ್ಕೆ ಕೊರಗಿದೆನನ್ನ ಕಣ್ಣ ಕೆಳಗಿನ ಕಪ್ಪಿಗೂ ಬೆದರಿದೆ ಆಗಂತುಕನೊಬ್ಬ ಫೋನಾಯಿಸಿಏರು ದನಿಯಲ್ಲಿ ಭಾವ ಬಣ್ಣ ಬದಲಿಸಿ” ನಾಗಮ್ಮನವರು ಇದ್ದಾರಾ? “ಎಂದಅವನ ಕುಟುಕುವ ದನಿಗೆ ಕಟಕಿ ಬೆರಸಿ“ಮೊಬೈಲ್ ನಾಗಪ್ಪಗಳೆಲ್ಲಭೂಮಿಯ ತುಂಬಾ ಹರಡಿವಿಷ ಬಿಡುತ್ತಿರುವಾಗ ಮನೆಯನಾಗಮ್ಮನವರೆಲ್ಲ ರಸಾತಳ ಸೇರಿನಾಗನೃತ್ಯಕ್ಕೆ ಅಣಿಯಾಗಿದ್ದಾರೆ” ಎಂದೆಹಿಡಿದ ಫೊನೀಗ ನೆಗೆದು ಬಿದ್ದುಸೂತಕ ಹರಡಿದೆ ಈ ಮೊಬೈಲ್ ವಿಚಿತ್ರ ರೀತಿಯಚಕ್ರವ್ಯೂಹಗಳನ್ನು ಕಟ್ಟುತ್ತದೆಒಂದನ್ನು ಭೇದಿಸಿದರೆಮತ್ತೊಂದು ತೆರೆಯುತ್ತದೆಎದುರಿಸಿ ಕಲಿಯಾಗದೇಎಗರಿಸಿ ಕವಿಯಾದೆಕಲಿಯಾಗಿದ್ದರೆ ಯುಗದ ಭಾರ ಹರ‍್ತಿದ್ದೆಕವಿಯಾಗಿ ಹೊತ್ತ ಭಾರಯುಗಕ್ಕೆ ರ‍್ಗಾಯಿಸಿದೆಮೊಬೈಲ್ ಯುಗಭಾರ ಹೊತ್ಕೊಂಡು ನೇತಾಡುತ್ತಿದೆ

ಕುಟುಕು Read Post »

ಕಾವ್ಯಯಾನ

ಶರಣಾಗಿ ಬಿಡಲೆ

ವಸುಂಧರಾ ಕದಲೂರು ನಿನ್ನ ಕಂಗಳ ಪ್ರಾಮಾಣಿಕತೆನನ್ನನು ಹಿಂಬಾಲಿಸುತ್ತಿದೆ.ಭದ್ರ ಕೋಟೆ ಗಟ್ಟಿ ಬೇಲಿಛಿದ್ರಗೊಳಿಸಿ ಎದೆ ತಟ್ಟುತ್ತಿದೆ. ನೀನು ಮಂಡಿಯೂರಿ ಬಿಡುನೀನೂ ಮಂಡಿಯೂರಿ ಬಿಡು ಮಾರ್ದನಿಸುವ ಮಾತುಗಳಿಗೆಇನ್ನೆಷ್ಟು ಕಾಲ ಕಿವುಡಾಗಿರಲಿಹಾದಿ ಮರೆವ ಮುನ್ನ ನಾಕುಹೆಜ್ಜೆ ನಡೆದು ಬರಲೆ ಹನಿಮುತ್ತು ಜಲಗರ್ಭದಚಿಪ್ಪೊಳಗೆ ಕಾಣೆಯಾಗಲುಬಿಡಬೇಡ ಮುಳುಗಿ ತೆಗೆಪಿಸುಮಾತು ಕೇಳುತ್ತಿದೆ ಪ್ರತಿಧ್ವನಿ ತರಂಗವಾಗಿಹೃದಯದಲಿ ನಯವಾಗಿನವುರಾಗಿ ಲಯವಾಗಿಕಂಪನ ಎಬ್ಬಿಸುತ್ತಿವೆ. ******* ಕಾಲ ದುಬಾರಿ ತಾನೆಂದುಸಾಬೀತು ಪಡಿಸುತ್ತಿದೆಜಾರಿಹೋದ ನೆನಪುಗಳಈಟಿಯಿಂದ ಇರಿಯುತ್ತಾ. ನಾನು ಶರಣಾಗಿ ಬಿಡಲೆನಾನೂ ಶರಣಾಗಿ ಬಿಡಲೆ

ಶರಣಾಗಿ ಬಿಡಲೆ Read Post »

ಇತರೆ, ಶಿಕ್ಷಣ

ಶಿಕ್ಷಣ ಆನ್ ಲೈನ್!

ವಿನುತಾ ಹಂಚಿನಮನಿ ವಿಕಾಸ ವಾದ (Evolution theory) ದ ಪ್ರಕಾರ ಜೀವಿಗಳ ಅಳಿವು ಉಳಿವು ಯಾವುದರ ಮೇಲೆ ಅವಲಂಬಿಸಿದೆ? ಯಾರು ಬದಲಾಗುತ್ತಿರುವ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಂಡರೋ ಅವರು ಗೆದ್ದವರು. ಬಲವಾನರು, ಬುದ್ಧಿವಂತರು ಇದರಲ್ಲಿ ಸೋತರು. ಪ್ರಾಣಿ ಇರಲಿ ಮನುಷ್ಯನಿರಲಿ ಪರಿಸರಕ್ಕೆ, ಪರಿಸ್ಥಿತಿಗೆ ಹೊಂದಿಕೊಂಡು ಜೀವಿಸುವದನ್ನು ಕಲಿತರಷ್ಟೇ ಬದುಕಬಹುದು. ಅದೇ ಸೂಕ್ತರು ಬದುಕುವರು ಸಶಕ್ತರಲ್ಲ ಅನ್ನುವುದು (survival of the fittest). ಈ ಬದಲಾಗುವ ಕ್ರಮ ಪ್ರಕೃತಿಯಲ್ಲಿ ಅನಿವಾರ್ಯ. ಪರಿವರ್ತನೆ ಜಗದ ನಿಯಮ. ಇದು ಎಲ್ಲ ಕ್ರಾಂತಿಗಳಿಗೂ ಅನ್ವಯಿಸುವುದು. ಹಿಂದೆ ಎಷ್ಟೋ ಆಗಿವೆ, ಮುಂದೆ ಆಗಲಿವೆ. ಕೋವಿಡ್ ೧೯ ರ ದಾಳಿಯಿಂದ, ವಿಶ್ವ ಒಂದು ಅನಿವಾರ್ಯ ಬದಲಾವಣೆ ಮಾಡಲೇ ಕೊಳ್ಳಬೇಕಾದ ಪರಿಸ್ಥಿತಿಯ ಅಂಚಿಗೆ ಬಂದು ನಿಂತಿದೆ. ಎಲ್ಲ ಕ್ಷೇತ್ರಗಳಲ್ಲಿ ಈಗ ಬದಲಾವಣೆ ಅನಿವಾರ್ಯ. ಅದರಲ್ಲಿ ಒಂದು ಮಹತ್ವದ ಕ್ಷೇತ್ರ ಶಿಕ್ಷಣ. ಕೊರೊನಾ ರೋಗ ಹಬ್ಬುವ ವೇಗ ಮತ್ತು ವ್ಯಾಪ್ತಿಯನ್ನು ನೋಡಿದರೆ ಆನ್ ಲೈನ್ ಶಿಕ್ಷಣವೇ ಸೂಕ್ತ ಸಧ್ಯದ ಪರಿಸ್ಥಿತಿಯಲ್ಲಿ. ಸಾಂಕ್ರಾಮಿಕ ರೋಗದ ಉಡಿಯಲ್ಲಿ ಭವಿಷ್ಯದ ಆಸ್ತಿಯಾಗಿರುವ ಮಕ್ಕಳನ್ನು ಹಾಕುವ ರಿಸ್ಕ್ ತೆಗೆದುಕೊಳ್ಳಲಾಗದು. ಶಾಲೆಗಳನ್ನು ಪ್ರಾರಂಭಿಸುವದನ್ನು ಅನಿಶ್ಚಿತ ಅವಧಿಗೆ ತಳ್ಳಲಾಗಿದೆ. ಹೀಗಿರುವಾಗ ಎಲ್ಲರನ್ನೂ ಕಾಡುವ ಪ್ರಶ್ನೆ – ಮುಂದೇನು? ಆನ್ ಲೈನ್ ಶಿಕ್ಷಣಕ್ಕೆ ಅದರದೇ ಆದ ಸಾಧಕ ಭಾದಕಗಳಿವೆ (Bright side and dark side). ಏನೇ ಆದರೂ ಸಧ್ಯಕ್ಕಂತೂ ಕಂಪ್ಯೂಟರ್ ಮುಖಾಂತರ ವಿದ್ಯೆಗೆ ಮಣೆ ಹಾಕಬೇಕು. ಆದರೆ ಯಾವ ವಯಸ್ಸಿನವರಿಗೆ? ದೊಡ್ಡವರು ಈಗಾಗಲೇ ಕಂಪ್ಯೂಟರ್ ಗೆ ಸ್ವಲ್ಪ ಮಟ್ಟಿಗೆ ಪರಿಚಿತರು. ಆದರೆ ಪ್ರಾಥಮಿಕ ಶಿಕ್ಷಣ ಪಡೆಯಬೇಕಾದ ಎಳೆಯರು! ಅವರಿಗೂ ಕೂಡ ಪರಿಚಯಿಸಬೇಕಾದ ಸಂದರ್ಭ. ಇದರ ಪರಿಣಾಮ ಎಲ್ಲ ಪಾಲಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಸರಕಾರಕ್ಕೆ ಅಲ್ಲದೆ ಭವಿಷ್ಯಕ್ಕೆ ಆಗಲಿದೆ. ಮೊದಲು ಅನುಕೂಲ ಅನಾನುಕೂಲಗಳನ್ನು ನೋಡೋಣ. *ಬಾಧಕಗಳು *:೧. ಮನೆಯಲ್ಲಿ ಕುಳಿತು ಶಿಕ್ಷಣ ಪಡೆಯಲು ಇಂಟರ್ನೆಟ್ ಸೌಲಭ್ಯ ಬೇಕು. ಬಡವರಿಗೆ ಅಷ್ಟೇ ಯಾಕೆ ಮಧ್ಯಮ ವರ್ಗದವರಿಗೆ ಇದು ಕಷ್ಟ ಸಾಧ್ಯ.೨. ಸಹಾಯ ಮಾಡಲು ತಂದೆ, ತಾಯಿ ಮತ್ತಾರೋ ಮಗುವಿನ ಒಟ್ಟಿಗೆ ಕೊಡಬೇಕು. ಅವರಿಗೂ ಶಿಕ್ಷಕರಿಗೆ ಇರಬೇಕಾದ ತಿಳುವಳಿಕೆ ಇರಬೇಕು. ಇದು ಎಷ್ಟರಮಟ್ಟಿಗೆ ಸಾಧ್ಯ. ಅಲ್ಲದೆ ದುಡಿಯಲು ಹೊರಗೆ ಹೋಗುವವರು ಇದಕ್ಕೆ ಒಪ್ಪಿಯಾರೇ?೩. ಪೋಷಕರು ಮನೆಯಿಂದ ಹೊರಗೆ ಹೋದರೆ ಚಿಕ್ಕ ಮಕ್ಕಳು ಮನೆಯಲ್ಲಿ ಒಂಟಿಯಾಗಿರಬೇಕಾದ ಸಮಸ್ಯೆ.೪. ಇದೆಲ್ಲಾ ಕೂಡಿ ಬಂದರೂ ಮಗುವಿನ ಮನಸ್ಸು ಮತ್ತು ಬುದ್ಧಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಶಾಲೆಯಲ್ಲಿ ಸ್ನೇಹಿತರೊಂದಿಗೆ ಗುರುವಿನೊಂದಿಗೆ ಇರುವ ತೆರೆದ ವಾತಾವರಣ ಇಲ್ಲಿರುವದಿಲ್ಲ. ಏಕತಾನತೆ ಬೇಸರಕ್ಕೆ ಎಡೆಮಾಡಿಕೊಡುತ್ತದೆ.೫. ತಿಳಿಯದ ವಿಷಯ ಮತ್ತೆ ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳುವಂತಿಲ್ಲ.೬. ಸಣ್ಣ ಊರುಗಳಲ್ಲಿ ಬಡ ಮಕ್ಕಳು ಮಧ್ಯಾಹ್ನ ಸಿಗುವ ಬಿಸಿಊಟ ತಪ್ಪಿಸಿಕೊಂಡರೆ ಆಸಕ್ತಿ ಕಡಿಮೆಯಾಗಬಹುದು. ಸರಕಾರ ಮನೆಗೆ ಧಾನ್ಯ ಒದಗಿಸುವ ಯೋಜನೆ ಇಟ್ಟುಕೊಂಡಿದೆ. ಆದರೆ ಅದರ ಸದುಪಯೋಗದ ಭರವಸೆ ಕೊಡುವವರು ಯಾರು? ೭. ಜನಸಂಖ್ಯೆ ನಿಯಂತ್ರಿಸುತ್ತಿರುವ ಹೊಸ ಪೀಳಿಗೆಯ ಈ ಕಾಲಮಾನದಲ್ಲಿ ಮಕ್ಕಳಿಗೆ ಸಹಜೀವನ ಇಲ್ಲದೆ ಹಂಚಿಕೊಳ್ಳುವ ಗುಣಕ್ಕೆ ಎರವಾಗಬಹುದು.೮. ಹಳ್ಳಿಗಳಲ್ಲಿ ಮಕ್ಕಳನ್ನು ಓದಿಸುವದರ ಬದಲು ಕೆಲಸಕ್ಕೆ ಕಳಿಸಬಹುದು.೯. ಬರೆಯುವಿಕೆ ಕಡಿಮೆಯಾಗಿ ಲಿಪಿಗಳು ಕಣ್ಮರೆಯಾಗಿ ಹೋಗಬಹುದು.೧೦. ಹೆಚ್ಚು ಸಮಯ ಕಂಪ್ಯೂಟರ್ ಪರದೆ ವೀಕ್ಷಿಸಿ ಮಕ್ಕಳ ಆರೋಗ್ಯದಲ್ಲಿ ದುಷ್ಪರಿಣಾಮ ತಲೆದೋರಬಹುದು.೧೧. ಹೆಣ್ಣು ಹುಡುಗಿಯರಿಗೆ ಶಿಕ್ಷಣ ದುರ್ಲಭವಾಗಬಹುದು. ಅವರನ್ನು ಕೆಲಸಕ್ಕೆ ಹಚ್ಚಬಹುದು ನಂತರ ಆದಷ್ಟು ಬೇಗ ಮದುವೆ ಮಾಡಬಹುದು. ಇದರಿಂದ ಬಾಲ್ಯವಿವಾಹ ಮತ್ತೆ ತಲೆದೋರಬಹುದು.೧೨. ಅಶಿಕ್ಷಿತ ಎಳೆಯ ಹುಡುಗಿಯರನ್ನು ದೈಹಿಕ ಮಾನಸಿಕ ಸಮಸ್ಯೆಗಳ ಒಟ್ಟಿಗೆ ಲೈಂಗಿಕ ಶೋಷಣೆ ಕಾಡಬಹುದು.೧೩. ಸಮಾಜದಲ್ಲಿ ಸಾಕ್ಷರತೆ ಕಡಿಮೆಯಾಗುವ ಭಯ.೧೪. ಮಕ್ಕಳಲ್ಲಿ ಶಿಸ್ತು ಕಡಿಮೆಯಾಗುವ ಸಾಧ್ಯತೆ ಇದೆ. ಶಿಕ್ಷಕರ ಮಾತನ್ನು ಕೇಳಿದಂತೆ ಪಾಲಕರ ಹಿತನುಡಿಯನ್ನು ಕೇಳುವುದಿಲ್ಲ.೧೫. ಪೂರ್ವಭಾವಿ ತಯಾರಿಗೆ ಹಣ ಒದಗಿಸುವುದು ಎಲ್ಲರಿಗೂ ಆಗಲಿಕ್ಕಿಲ್ಲ. ಇನ್ನು ಅನುಕೂಲಗಳನ್ನು ನೋಡಿದರೆ,೧. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಉತ್ಕರ್ಷಣದಲ್ಲಿರುವ ಆನ್ ಲೈನ್ ಕಲಿಯುವಿಕೆ ಮತ್ತು ಕಲಿಸುವಿಕೆಯ ಓಟದಲ್ಲಿ ನಮ್ಮ ದೇಶ ಕೂಡ ಸೇರಿಕೊಂಡು, ಆಧುನಿಕತೆಯ ಸ್ಪರ್ಧೆಯಲ್ಲಿ ಪಾಲುಗೊಳ್ಳಬಹುದು.೨. ಉನ್ನತ ಶಿಕ್ಷಣ ಇ ಫೀಲ್ಡ್ ನಲ್ಲಿ ದೊರೆಯುವ ಸಾಧ್ಯತೆ ಹೆಚ್ಚಿರುವದರಿಂದ ಮುಂದಿನ ಶಿಕ್ಷಣಕ್ಕೆ ಇದು ನಾಂದಿಯಾಗಬಹುದು, ದೊರಕಿಸಿಕೊಳ್ಳುವುದು ಸುಲಭ ಸಾಧ್ಯ.೩. ಮನೆಯಲ್ಲಿಯೇ ಪಾಠ ಇರುವದರಿಂದ ತಮಗೆ ಬೇಕಾದ ವೇಳೆ ಆರಿಸಿಕೊಂಡು ಓದುವುದು ಸಾಧ್ಯ. ೪. ಪುನರ್ಮನನ ಸುಲಭ.೫. ಶಾಲೆ, ಕಾಲೇಜ್ ಗೆ ಹೋಗುವುದು ಇಲ್ಲದ್ದರಿಂದ ವಾಹನಗಳಲ್ಲಿ ಅಡ್ಡಾಡುವುದು ಕಡಿಮೆಯಾಗಿ, ಪ್ರಯಾಣದ ರಿಸ್ಕ್ ಇಲ್ಲ, ಖರ್ಚು ಇಲ್ಲ. ಸುರಕ್ಷತೆ ಹೆಚ್ಚಿದ್ದು ಮನಸ್ಸಿನ ಕಿರಿಕಿರಿ ಕಡಿಮೆಯಾಗಬಹುದು.೬. ಕೆಲವೊಂದು ಖರ್ಚು ಕಡಿಮೆಯಾಗುವ ಸಂಭವ. ಉದಾಹರಣೆಗೆ ಸ್ಕೂಲ್ ಯುನಿಫಾರ್ಮ ಇತ್ಯಾದಿ. ಪುರಾತನ ಸಂಸ್ಕೃತಿಯ ಗುರುಕುಲ ಪದ್ಧತಿ ನಮಗೆ ಶ್ರೇಷ್ಟವೆನಿಸಿದರೂ ಮತ್ತೆ ಅದರಿಂದ ಬದಲಾವಣೆಗೆ ಹೊಂದಿಕೊಂಡಂತೆ ಮುಂದೆ ಕೂಡ ಹೊಸ ಶಿಕ್ಷಣ ಪದ್ಧತಿಗೆ ಜನ ಹೊಂದಿಕೊಳ್ಳಬೇಕಾದೀತು. ಯಾವುದೇ ಹೊಸತನಕ್ಕೆ ವಿರೋಧ ಬರುವುದು ಸಾಮಾನ್ಯ. ಆದರೆ ಅದು ಅನಿವಾರ್ಯವಾಗಿದ್ದಲ್ಲಿ ಬೇರೆ ಆಯ್ಕೆ ಎಲ್ಲಿದೆ? ಸಧ್ಯಕ್ಕಂತೂ ಕೊರೊನಾದಿಂದ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗ. ಹಾಗಿದ್ದರೆ ಸಂತೋಷದಿಂದ ಒಪ್ಪಿ ಅನುಸರಿಸಿದರೆ ಜೀವವಿದೆ, ಜೀವನವಿದೆ ಅಲ್ಲವೇ? **************

ಶಿಕ್ಷಣ ಆನ್ ಲೈನ್! Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಪ್ರಯೋಗ?

ಅರ್ಪಣಾ ಮೂರ್ತಿ ಪ್ರಸ್ತುತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭವೇ ಗೊಂದಲಗಳಿಂದ ಕೂಡಿರುವ ಈ ಸಂದರ್ಭದಲ್ಲಿ, ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಾಗಲೇ ಕಂಡುಕೊಂಡಿರುವ ಶಿಕ್ಷಣದ ಪರ್ಯಾಯ ಮಾರ್ಗದ ಹೆಸರೇ ಈ ಆನ್ಲೈನ್ ಶಿಕ್ಷಣ, ಈ ಪರ್ಯಾಯ ಮಾರ್ಗದ ಶಿಕ್ಷಣಕ್ಕೆ ಸರ್ಕಾರವು ಸಹ ಸಮ್ಮತಿಯ ಮುದ್ರೆ ಒತ್ತಿದೆ. ಈಗಿರುವ ಪ್ರಶ್ನೆಯೆಂದರೆ ಈ ಆನ್ಲೈನ್ ಶಿಕ್ಷಣ ಎಷ್ಟು ಪರಿಣಾಮಾತ್ಮಕವಾಗಿದೆ, ಮಕ್ಕಳ ಕಲಿಕೆಯ ಮಟ್ಟಕ್ಕೆ ಅದೆಷ್ಟು ಪೂರಕವಾಗಿದೆ ಅನ್ನುವುದು. ಮೊದಲಿಗೆ ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡುವುದರ ಕುರಿತು ಹೇಳೋದಾದ್ರೆ ಒಂದರಿಂದ ಐದನೆಯ ತರಗತಿಯವರೆಗೂ ಮಕ್ಕಳು ಸಂಪೂರ್ಣವಾಗಿ ಶಿಕ್ಷಕರ ಮೇಲೆ ಅವಲಂಬಿತವಾಗಿರುವಂತವರು, ಎದುರು ನಿಂತು ತರಗತಿಯಲ್ಲಿ ಬೋಧನೆ ಮಾಡುವುದಕ್ಕೂ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ ಪಾಠ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ, ಹಾಗೆಯೇ ಸುಮಾರು ಎರಡರಿಂದ ಮೂರುಗಂಟೆಗಳ ಕಾಲ ಮೊಬೈಲ್ ಪರದೆಯನ್ನ ನೋಡುವ ಪುಟ್ಟ ಮಕ್ಕಳ ಕಣ್ಣುಗಳು ಮುಂದೊಂದು ದಿನ ಹಾನಿಗೊಳಗಾಗುವುದರಲ್ಲಿ ಸಂಶಯವೇ ಇಲ್ಲ, ಇದರ ಜೊತೆಗೆ ಮಕ್ಕಳ ಮೆದುಳಿನ ವಿಕಸನದ ಮೇಲೆ ಪರಿಣಾಮ ಉಂಟಾಗಬಹುದು, ನರಗಳ ಸಮಸ್ಯೆ ಉಂಟಾಗಬಹುದು, ಪುಟ್ಟ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆನ್ಲೈನ್ ಶಿಕ್ಷಣ ಸೂಕ್ತವಲ್ಲ, ಇನ್ನು ಈ ಚಿಕ್ಕ ಮಕ್ಕಳನ್ನು ಹೊರತು ಪಡಿಸಿ ಪ್ರೌಡ ಮಕ್ಕಳ ಕುರಿತು ಹೇಳುವುದಾದರೆ ಪರಿಣಾಮಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ, ಹಾಗಾದರೆ ಕಾಲೇಜು ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪೂರಕತೆ ಒದಗಿಸಬಹುದಾ ಅಂತ ನೋಡೋದಾದ್ರೆ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಹಳ್ಳಿಗಾಡಿಗೆ ಸೇರಿದವರು, ಮೊದಲ ಸಮಸ್ಯೆಯೇ ಎಲ್ಲರೂ ಮೊಬೈಲ್ ಫೋನ್ಗಳನ್ನ ಹೊಂದುವಂತದ್ದು, ಈ ಕರೋನಾ ಕಾಲದಲ್ಲಿ ಈಗಾಗಲೇ ಹಳ್ಳಿಗಾಡಿನ ಜನ ಅತಿ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಮಕ್ಕಳಿಗೆ ಮೊಬೈಲ್ ಒದಗಿಸೋದು ಕಷ್ಟದ ವಿಷಯ, ಮನೆಯಲ್ಲಿ ಓದುತ್ತಿರುವ ಎರಡು ಮೂರು ಮಕ್ಕಳಿರುವ ಸಂದರ್ಭದಲ್ಲಿ ಎಲ್ಲರಿಗೂ ಮೊಬೈಲ್ ಕೊಡಿಸುವುದು ಆಗದ ವಿಷಯ, ಒಂದೊಮ್ಮೆ ಕೊಡಿಸಿದರೂ ಸಹ ಹಳ್ಳಿಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ವರ್ಕ್ ಅದೆಷ್ಟು ಸುಲಭವಾಗಿ ಸಿಗುತ್ತದೆ ಎನ್ನುವುದು ಹಳ್ಳಿಯ ವಾಸಿಗಳಿಗಷ್ಟೇ ಗೊತ್ತು, ನೆಟ್ವರ್ಕ್ ಕಾರಣದಿಂದಾಗಿ ಶೇಕಡಾ ಅರ್ಧದಷ್ಟು ಮಕ್ಕಳಿಗೆ ಹೆಚ್ಚಿನ ಮಾಹಿತಿ ತಲುಪಲಾರದು ಹಾಗೂ ಹಾಜರಾತಿ ಕೂಡ ನಿರೀಕ್ಷಿಸಲಾಗದು, ಒಂದೊಮ್ಮೆ ನೆಟ್ವರ್ಕ್ ದೊರೆಯುವ ಸ್ಥಳವಾದರೂ ಕೂಡ ದಿನಕ್ಕೆ ಮೂರರಿಂದ ನಾಲ್ಕು ತರಗತಿಗಳಿಗೆ ಸರಿಯಾಗುವಷ್ಟು ಮೊಬೈಲ್ ಡೇಟಾ ಹಾಕಿಸುವಷ್ಟು ಪೋಷಕರು ಶಕ್ತರಿದ್ದಾರಾ ಎನ್ನುವುದು ಯೋಚಿಸಬೇಕಾದ ವಿಷಯ, ಆನ್ಲೈನ್ ಶಿಕ್ಷಣ ಎನ್ನುವುದು ನಗರವಾಸಿಗಳ ಹಾಗೂ ಉಳ್ಳವರ ಮಕ್ಕಳಿಗಷ್ಟೇ ಒಂದಿಷ್ಟು ಉತ್ತಮ ಅನಿಸಬಹುದಾದರೂ ಹಳ್ಳಿಗಾಡಿನ ಮಕ್ಕಳು ಈ ಶಿಕ್ಷಣದಿಂದ ವಂಚಿತರಾಗುವುದೇ ಹೆಚ್ಚು, ವೈಜ್ಞಾನಿಕ ತಳಹದಿಯ ಮೇಲೆ ಹೇಳುವುದಾದರೆ ಸಣ್ಣ ಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದ ಆನ್ಲೈನ್ ಶಿಕ್ಷಣ ಮಾರಕವೇ ಹೊರತು ಪೂರಕವಲ್ಲ, ಕಾಲೇಜು ಹಂತದ ಮಕ್ಕಳ ಆನ್ಲೈನ್ ಶಿಕ್ಷಣದ ಕುರಿತು ಹೇಳುವುದಾದರೆ ಇದು ನಗರವಾಸಿ ಜನ ಹಾಗೂ ಉಳ್ಳವರಿಗಷ್ಟೆ ಒಂದಿಷ್ಟು ಪೂರಕವಾಗಬಹುದು ಹೊರತು ಹಳ್ಳಿಗಾಡಿನ ಜನರಿಗೆ ಆರ್ಥಿಕ ಹೊರೆಯಷ್ಟೆ.. ಒಟ್ಟಾರೆಯಾಗಿ ಸರ್ಕಾರಿ ಶಾಲಾಕಾಲೇಜಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಎನ್ನುವುದು ಹೊರೆಯಾಗದಿರಲಿ. *********

ಆನ್ಲೈನ್ ಶಿಕ್ಷಣ – ಪ್ರಯೋಗ? Read Post »

You cannot copy content of this page

Scroll to Top