ಅಂಕಣ ಬರಹ-01 ಆತ್ಮಕತೆಯ ಮೊದಲ ಕಂತು.. ಅಸ್ತಿತ್ವವಿಲ್ಲದ ಅವ್ವನ ಹೆಜ್ಜೆಗಳು ಅಕ್ಟೋಬರ್, ೧, ೨೦೦೮ ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲನಾಗಿ ಕರ್ತವ್ಯಕ್ಕೆ ಹಾಜರಾದೆ. ಕಳೆದ ಮೂವತ್ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿರುವಾಗಿನ ಸಿಹಿ ಕಹಿ ನೆನಪುಗಳ ಚಿಪ್ಪಿನಿಂದ ಪೂರ್ತಿಯಾಗಿ ಹೊರಬರುವುದು ಇನ್ನೂ ಸಾಧ್ಯವಾಗಿರಲಿಲ್ಲ. ಮುಂದಿನ ವೃತ್ತಿನಿರತ ಬದುಕಿನ ನಾಲ್ಕು ವರ್ಷಗಳನ್ನು ಕಾರವಾರದ ಹೊಸ ಪರಿಸರದಲ್ಲಿ ಹೇಗೆ ಹೊಂದಿಸಿಕೊಳ್ಳಬೇಕೆಂಬ ಆಲೋಚನೆ ಒಂದುಕಡೆ ಮನಸ್ಸನ್ನು ಕೊರೆಯುತ್ತಿತ್ತು. ಕಾಲೇಜ್ ಕ್ಯಾಂಪಸ್ಸಿನ ಆವರಣದಲ್ಲಿಯೇ ಪ್ರಾಚಾರ್ಯರ ವಸತಿ ಗ್ರಹದ ಅನುಕೂಲತೆಯಿದೆ. ಅಗತ್ಯವೆನಿಸುವ ಎಲ್ಲ ಮೂಲಭೂತ ಸೌಲಭ್ಯಗಳೂ ಇದ್ದವು. ಸಮುದ್ರ ತೀರದ ನಿಸರ್ಗದ ಸಹಜ ಸುಂದರ ವಾತಾವರಣವೂ ಇದೆ. ಕೇವಲ ನಮ್ಮ ಮನಸ್ಸುಗಳನ್ನು ಇಲ್ಲಿಯ ಪರಿಸರ ಮತ್ತು ಮನುಷ್ಯ ಸಂಬಂಧ ಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಸಜ್ಜಾಗುತ್ತಿದ್ದೆವು. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಹಿರಿಯ ಮಗ ಸಚಿನ್, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಇಂಜಿನಿಯಿಂಗ್ ಓದುತ್ತಿರುವ ಎರಡನೆಯ ಮಗ ಅಭಿಷೇಕ್ ನಮ್ಮ ವಸತಿಗ್ರಹ ಮತ್ತು ಕಾಲೇಜ್ ಕ್ಯಾಂಪಸ್ ನೋಡುವುದಕ್ಕಾಗಿಯೇ ಕಾರವಾರಕ್ಕೆ ಬಂದಿದ್ದರು. ಒಂದು ರಾತ್ರಿ ಊಟ ಮುಗಿಸಿ ಕಾಲೇಜು ಮೈದಾನದಲ್ಲಿ ಹೆಂಡತಿ ಮಕ್ಕಳೊಡನೆ ಹೀಗೆ ಹರಟುತ್ತಾ ತಿರುಗಾಡುತ್ತಿದ್ದೆ. ಮೈದಾನದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಹದಿನೇಳರ ಆಚೆ ಸ್ಮಶಾನದ ಕಂಪೌಂಡಿನ ಹೆಬ್ಬಾಗಿಲು ಸರಿಯಾಗಿ ಗೋಚರಿಸುತ್ತಿತ್ತು. ಐದಾರು ದಶಕಗಳ ಹಿಂದೆ ಬರಿಯ ಸಮುದ್ರದ ಬೇಲೆಯಾಗಿದ್ದ ಇದೇ ಸ್ಮಶಾನ ಭೂಮಿಯಲ್ಲಿ ಅಜ್ಜಿಯನ್ನು ಮಣ್ಣುಮಾಡಿದ ಘಟನೆಯನ್ನು ಅವ್ವನ ಬಾಯಿಂದ ಕೇಳಿದ್ದು ನೆನಪಾಯಿತು. ಮಕ್ಕಳಿಗೆ ಹೇಳಿದೆ, “ಐವತ್ತಾರು ವರ್ಷಗಳ ಹಿಂದೆ ನಿಮ್ಮ ಮುತ್ತಜ್ಜಿ ಇದೇ ಸ್ಮಶಾನದಲ್ಲಿ ಮಣ್ಣಾಗಿದ್ದಾಳೆ. ನಾನಾವಾಗ ಎರಡು ತಿಂಗಳ ತೊಟ್ಟಿಲ ಮಗುವಾಗಿದ್ದೆ. ಈಗ ಇಷ್ಟು ವರ್ಷಗಳ ಬಳಿಕ ಈ ಸ್ಥಿತಿಯಲ್ಲಿ ಇಲ್ಲಿಗೆ ಬಂದು ಅಜ್ಜಿಯ ಸಮಾಧಿ ಸ್ಥಳ ನೋಡಬಹುದೆಂದು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಜೀವನ ಅಂದ್ರೆ ಹೀಗೆಯೇ ಚಿತ್ರವಿಚಿತ್ರ ತಿರುವುಗಳು ನೋಡಿ,” ಎಂದು ಮಾತು ಮುಗಿಸುವಾಗ ನಾನು ಅನಪೇಕ್ಷಿತವಾಗಿ ಭಾವುಕನಾಗಿದ್ದೆ. ಹೆಂಡತಿ ಮಕ್ಕಳಿಗೆ ಸಖೇದಾಶ್ಚರ್ಯ!. ಕುಟುಂಬದವರಿಲ್ಲ. ಜಾತಿ ಬಾಂಧವರಿಲ್ಲ. ಇಂಥಲ್ಲಿ ಅಜ್ಜಿಯ ಹೆಣ ಮಣ್ಣು ಮಾಡಿದ್ದಾರೆ ಅಂದರೆ ನಂಬುವುದಕ್ಕೆ ಆಗದ ಸ್ಥಿತಿಯಲ್ಲಿದ್ದರು. ಅವರಿಗೆ ಆರು ದಶಕಗಳ ಹಿಂದಿನ ಇತಿಹಾಸದ ತುಣುಕೊಂದನ್ನು ಕಥೆಯಾಗಿಸಿ ಹೇಳಬೇಕಾಯಿತು. ಮೈದಾನದ ಕಲ್ಲು ಬೆಂಚಿನ ಮೇಲೆ ಅವರನ್ನು ಕೂಡ್ರಿಸಿಕೊಂಡು ನಮ್ಮ ಅವ್ವನ ನತದ್ರಷ್ಟ ತಾಯಿ ನಾಗಮ್ಮಜ್ಜಿಯ ಪುರಾಣ ಬಿಚ್ಚಿದೆ…. ಕುಮಟಾ ತಾಲೂಕಿನ ನಾಡುಮಾಸ್ಕೇರಿ ಎಂಬ ಪುಟ್ಟ ಗ್ರಾಮದ ಕೃಷಿಕೂಲಿಕಾರ ದಂಪತಿಗಳಾದ ಕೃಷ್ಣ-ನಾಗಮ್ಮ ನಮ್ಮ ಅವ್ವ ತುಳಸಿಯ ತಂದೆ ತಾಯಿಯರು. ತಂದೆ ಕೃಷ್ಣ ಆಗೇರ ನಿರಕ್ಷರಿಯಾದರೂ ಉತ್ತಮ ಯಕ್ಷಗಾನ ಕಲಾವಿದನಾಗಿದ್ದ. ಶೃಂಗಾರ ಪಾತ್ರಗಳಿಗೆ ಹೇಳಿ ಮಾಡಿಸಿದಂತ ವ್ಯಕ್ತಿತ್ವ ಅವನದ್ದಾಗಿತ್ತೆಂದು ಅವ್ವ ಆಗಾಗ ನೆನಪಿಸಿಕೊಳ್ಳುತ್ತಿದ್ದಳು. ತಮ್ಮ ಒಬ್ಬಳೇ ಮಗಳು ತುಳಸಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದೇ ಕನಸು ಕಟ್ಟಿಕೊಂಡು ತಾಯಿ ತಂದೆಯರಿಬ್ಬರೂ ಮಗಳನ್ನು ಶಾಲೆಗೆ ಸೇರಿಸಿದ್ದರು. ಆದರೆ ದೈವೇಚ್ಛೆ ಹಾಗಿರಲಿಲ್ಲ. ದುರ್ದೈವದಿಂದ ತಂದೆ ಕೃಷ್ಣ ಆಗೇರ ಖಚದೇವಯಾನಿ’ ಯಕ್ಷಗಾನ ಬಯಲಾಟದಲ್ಲಿ ಖಚನ ಪಾತ್ರ ಮಾಡುತ್ತಿದ್ದಾಗ ರಂಗದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ. ನಾಲ್ವತ್ತರ ಹರೆಯದ ತಂದೆ ತೀರಿಕೊಂಡಾಗ ಮಗಳು ತುಳಸಿ ಇನ್ನೂ ಮೂರನೆಯ ತರಗತಿಯ ಮುಗ್ಧ ಬಾಲಕಿ. ಊರಿನ ಕೆಲವು ದಲಿತರಿಗೆ ಅಂಕೋಲಾ ತಾಲೂಕಿನ ಹಿಲ್ಲೂರಿನ ಅರಣ್ಯಭೂಮಿಯನ್ನು ಬೇಸಾಯಕ್ಕಾಗಿ ಸರಕಾರ ಮಂಜೂರಿ ನೀಡಿತು. ನಾಡುಮಾಸ್ಕೇರಿಯಲ್ಲದೆ ಸುತ್ತಲಿನ ಹೆಗ್ರೆ, ಅಗ್ರಗೋಣ ಮುಂತಾದ ಗ್ರಾಮಗಳಲ್ಲಿ ಕೂಲಿಮಾಡಿಕೊಂಡಿದ್ದ ಆರೆಂಟು ದಲಿತ ಕುಟುಂಬಗಳು ಸ್ವಂತ ಜಮೀನು ಹೊಂದುವ ಉತ್ಸಾಹದಲ್ಲಿ ಹಿಲ್ಲೂರಿಗೆ ಹೊರಟು ನಿಂತವು. ವಿಧವೆ ನಾಗಮ್ಮಜ್ಜಿ ತನ್ನ ಮಗಳನ್ನು ಕಟ್ಟಿಕೊಂಡು ತಾನೂ ಹಿಲ್ಲೂರಿನೆಡೆಗೆ ಮುಖ ಮಾಡಿದಳು. ಅಲ್ಲಿಗೆ ಅವ್ವನ ಓದುವ ಕನಸು ಭಗ್ನವಾಯಿತು. ನಾಗಮ್ಮಜ್ಜಿ ತಾನೂ ಸ್ವಂತ ಜಮೀನು ಹೊಂದುವ ಆಸೆಯಿಂದ ತನ್ನ ಮಗಳೊಂದಿಗೆ ಹಿಲ್ಲೂರಿಗೆ ಬಂದಳಾದರೂ ಅವಳಿಗೆ ಜಮೀನು ಮಂಜೂರಿಯಾಗಲಿಲ್ಲ. ಸಂಬಂಧಿಕರ ಇದ್ದುಕೊಂಡು ಜಮೀನು ಪಡೆದವರ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ಕೂಲಿಯಾಗಿ ದುಡಿದಳು. ಗಟ್ಟಿಗಿಟ್ಟಿಯಾದ ನಾಗಮ್ಮಜ್ಜಿ ಬೆಟ್ಟದ ಭೂಮಿಯ ಬಿದಿರು ಹಿಂಡುಗಳನ್ನು ಕಡಿದು ಬೆಂಕಿಯಿಟ್ಟು ಬಯಲು ಮಾಡಿ, ಕುಠಾರಿ ಹಿಡಿದು ನೆಲ ಅಗೆಯುವ ಕಾಯಕ ನಿಷ್ಠೆಯನ್ನು ಕಂಡ ಬ್ರಿಟಿಷ್ ಅಧಿಕಾರಿಯೊಬ್ಬರು “ನಾಗಮ್ಮನಿಗೆ ಲ್ಯಾಂಡ್ ಸ್ಯಾಂಕ್ಶನ್ ಮಾಡಲೇಬೇಕು” ಎಂದು ಹಠ ಹಿಡಿದು ಅವಳ ಹೆಸರಿಗೂ ಹತ್ತು ಎಕರೆ ಅರಣ್ಯ ಭೂಮಿ ಮಂಜೂರಿ ಮಾಡಿಸಿದರು. ತನ್ನದೇ ಎಂಬ ಭೂಮಿ ದೊರೆತ ಬಳಿಕ ಇನ್ನಷು ಕಷ್ಟಪಟ್ಟು ದುಡಿದ ನಾಗಮ್ಮಜ್ಜಿ ಭೂಮಿಯನ್ನು ಹದಗೊಳಿಸಿಕೊಂಡು ಬೇಸಾಯಕ್ಕೆ ಅಣಿಗೊಳಿಸಿದಳು. ಆದರೆ ಪಟ್ಟಾ ಬರೆಯುವ ಸ್ವಜಾತಿ ಬಂಧು ಶಾನುಭೋಗನೊಬ್ಬ ದಾಖಲೆಗಳಲ್ಲಿ ಈ ಎಲ್ಲ ಜಮೀನನ್ನು ನಾಗಮ್ಮ ಎಂಬ ತನ್ನ ಹೆಂಡತಿಯ ಹೆಸರಿಗೆ ದಾಖಲಿಸಿದ್ದ: ಆರೆಂಟು ವರ್ಷಗಳು ಕಳೆದ ಮೇಲೆಯೇ ತನಗೆ ವಂಚನೆಯಾದ ಸಂಗತಿ ನಾಗಮ್ಮಜ್ಜಿಯ ಅರಿವಿಗೆ ಬಂತಾದರೂ ತನ್ನ ಭೂಮಿಗಾಗಿ ಕಾನೂನು ಇತ್ಯಾದಿ ಬಳಸಿಕೊಂಡು ಹೋರಾಟ ಮಾಡಲು ಅವಳ ಬೆಂಬಲಕ್ಕೆ ಯಾರೂ ಇರಲಿಲ್ಲ. ಬೇರೆದಾರಿಯಿಲ್ಲದೆ ನಾಗಮ್ಮಜ್ಜಿ ತನ್ನ ಮಗಳೊಂದಿಗೆ ಸ್ವಂತ ಊರು ನಾಡುಮಾಸ್ಕೇರಿಗೆ ಮರಳಿದಳು. ***************************************************** ಡಾ.ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ…
ಗಜಲ್
ಗಜಲ್ ರತ್ನರಾಯ ಮಲ್ಲ ನಿನ್ನ ಬೆಳದಿಂಗಳಿನಂಥ ಕಂಗಳ ನೋಟದಲ್ಲಿ ಕಳೆದು ಹೋಗುತ್ತಿರುವೆನಿನ್ನ ಕಣ್ರೆಪ್ಪೆಯ ಪ್ರೇಮದ ಜೋಕಾಲಿಯಲ್ಲಿ ಸಂಭ್ರಮ ಪಡುತ್ತಿರುವೆ ಚಂದ್ರಬಿಂಬದಂಥ ನಿನ್ನ ಮುಖ ಕಂಡು ನೇಸರನು ಗೂಡು ಸೇರಿಹನುನಿನ್ನ ವದನವನ್ನು ಹತ್ತಿರದಿಂದ ಕಾಣುತ್ತ ಪ್ರೀತಿಯಲ್ಲಿ ಮುಳುಗುತ್ತಿರುವೆ ಕಾಮನಬಿಲ್ಲಿನಂತ ಆಭರಣಗಳ ಕಾಂತಿ ನಿನ್ನ ಅಂದವನ್ನು ಹೆಚ್ಚಿಸುತ್ತಿವೆನಿನ್ನ ಸಾನಿಧ್ಯದಿ ಒಲವಿನ ಪುತ್ಥಳಿಯನ್ನು ಚುಂಬಿಸುತ್ತ ನಲಿಯುತ್ತಿರುವೆ ರಸದೌತಣಕೆ ಆಮಂತ್ರಿಸುತಿವೆ ನಿನ್ನ ವೈಯ್ಯಾರದ ಮೈ ಮಾಟಗಳುಕಲ್ಪವೃಕ್ಷದ ಕೊಂಬೆಗಳಂಥ ಆ ನಿನ್ನ ತೋಳುಗಳನ್ನು ಬಯಸುತ್ತಿರುವೆ ಸುಗಂಧದಂತ ನಿನ್ನ ಉಸಿರಿನಲ್ಲಿ ‘ಮಲ್ಲಿ’ ಬೆರೆತು ಹೋಗುತಿರುವನುಮೆದುವಾದ ನಿನ್ನ ಮಡಿಲಲ್ಲಿ ಹಗಲು-ರಾತ್ರಿಗಳನ್ನು ಎಣಿಸುತ್ತಿರುವೆ **********************************************
ಬಾಲಂಗೋಚಿ
ಪುಸ್ತಕ ಸಂಗಾತಿ ಬಾಲಂಗೋಚಿ ಮಕ್ಕಳ ಕವನ ಸಂಕಲನ ‘ಬಾಲಂಗೋಚಿ’ ಮಕ್ಕಳ ಕವನ ಸಂಕಲನ.ಪ್ರಕಟಣೆ: 2019ಪುಟಗಳು: 96ಬೆಲೆ: 90ರೂ.ಪ್ರಕಾಶಕರು: ಗೋಮಿನಿ ಪ್ರಕಾಶನಶಾಂತಿ ನಗರ, ತುಮಕೂರು-2 ದೂರವಾಣಿ: 9986692342 ಮಕ್ಕಳ ಮನವನ್ನು ಅರಳಿಸುವ ಪದ್ಯಗಳು ಅರಳ ಬೇಕು ಚಿಣ್ಣರ ಮನಸು ಮೊಲ್ಲೆ ಹೂವಿನಂತಯೇ ಸಲ್ಲಬೇಕು ಮನುಜ ಕುಲಕೆ ಅದರ ಸೇವೆಯಂತೆಯೇ ಬಾಲ್ಯದ ನೆನಪುಗಳೇ ಎಲ್ಲರಿಗೂ ಒಂದು ರೀತಿಯ ಪ್ರೀತಿ ಹಾಗೂ ಚೈತನ್ಯ ಬಾಲ್ಯ ನೆನಪಾಗುತ್ತಲೇ ನಮ್ಮ ಬದುಕಿನ ಬಹುದೂರದ ಪಯಣವೆಲ್ಲ ಮರೆತಂತಾಗಿ ನಾವೂ ಒಂದು ರೀತಿಯ ಬಾಲ್ಯದ ಖುಷಿಯಲ್ಲಿ ತೇಲತೊಡಗುತ್ತೇವೆ. ಆಗ ಅಲ್ಲಿ ಆಡಿದ ಆಟಗಳು, ಸುತ್ತಾಡಿದ ಜಾಗಗಳು, ಗುಡ್ಡ ಬಯಲುಗಳು, ಹಳ್ಳ ಪ್ರಪಾತಗಳು, ಎತ್ತರದ ಬಂಡೆ, ಕ್ರಿಕೆಟ್ ಚಂಡು, ಪ್ರೀತಿಯ ನಾಯಿಮರಿ, ಬೆಕ್ಕಿನ ಮರಿಗಳಿದ್ದ ಬುಟ್ಟಿ, ಬೀಳುವ ಮಳೆ, ನೀರಿನ ಆಟ, ಶಿಕ್ಷಕರ ಪಾಠ, ಅಮ್ಮನ ಪ್ರೀತಿ ಹಾಗೂ ಸಿಟ್ಟು ಹೀಗೆ ಏನೇನೋ ಕಾಣಲು ತೊಡಗುತ್ತದೆ. ಆಗ ನಾವು ನಮ್ಮ ವಯಸ್ಸನ್ನು ಮರೆತು ಅಲ್ಲಿಯ ದೃಶ್ಯ ಚಿತ್ರಗಳಲ್ಲಿ ಒಂದಾಗುತ್ತ ಆ ಭಾವಕ್ಕೆ ಇಳಿಯಲು ಸಾಧ್ಯವಾಗುವುದು. ಇದನ್ನು ಬಳಸಿಕೊಂಡು ನಾವು ಅಭ್ಯಸಿಸಿದ, ಓದಿದ, ಕಂಡ, ಉಂಡ ಇತರ ಸಂಗತಿಗಳನ್ನು ಸೇರಿಸಿ ಮಕ್ಕಳ ಪ್ರೀತಿಗಾಗಿ ಅವರ ಖುಷಿಗಾಗಿ ಬರೆಯುವುದು ಮಕ್ಕಳ ಒಲುಮೆಯ ಸಾಹಿತ್ಯವಾಗಿ ರೂಪುಗೊಳ್ಳುತ್ತದೆ. ಇದೆಲ್ಲವನ್ನು ನಮ್ಮಲ್ಲಿರುವ ಬರೆಯುವ ತುಡಿತ ಹಾಗೂ ಶೃದ್ಧೆ ಆಗುಮಾಡುತ್ತದೆ. ಅಂತಹ ತುಡಿತ ಹಾಗೂ ಶೃದ್ಧೆ ಇರದಿದ್ದಲ್ಲಿ ಬಾಲ್ಯಕ್ಕೆ ಮರಳುವ ಭಾವವೇ ಬರದು. ಆದರೂ ತಾನು ಮಕ್ಕಳಿಗೆ ಬರೆಯಬೇಕೆಂಬ ಒತ್ತಡದಲ್ಲಿ ಹೊರಟರೆ ಅದು ನೈಸರ್ಗಿಕ ಕಲಾತ್ಮಕ ರಚನೆ ಆಗದು. ಮೇಲಿನ ಪದ್ಯದ ಸಾಲುಗಳು ಡಾ.ಕೆ.ಬಿ. ರಂಗಸ್ವಾಮಿಯವರದು. ಅವರು “ಬಾಲಂಗೋಚಿ” ಎನ್ನುವ ಮಕ್ಕಳ ಕವನಸಂಕಲನ ರೂಪಿಸಿದ್ದಾರೆ. ವೃತ್ತಿಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿದ್ದಾರೆ. ರಂಗಸ್ವಾಮಿಯವರಲ್ಲಿ ಇರುವ ಬಾಲ್ಯ ಉಳಿಸಿಕೊಳ್ಳುವ ಹಂಬಲ ಪ್ರೀತಿ ಶೃದ್ಧೆಗಳೇ ಈ ಸಂಕಲನ ರೂಪಿಸಲು ಪ್ರೇರಣೆ ಹಾಗೂ ಯಶಸ್ಸು ಆಗಿದೆ. ‘ಅರಳ ಬೇಕು ಚಿಣ್ಣರ ಮನಸು ಮೊಲ್ಲೆ ಹೂವಿನಂತಯೇ’ ಎನ್ನುವ ಇವರ ಸಾಲು ಎಲ್ಲರ ಆಶಯವೂ ಆಗುತ್ತದೆ. ಮಕ್ಕಳ ಪ್ರೀತಿಯಲ್ಲಿ ನಾವು ಸಮಾಜದ ಒಳಿತನ್ನು ಕಾಣುತ್ತೇವೆ. ಕಾಣ ಬೇಕು. ಅವರ ಮನಸ್ಸು ಅರಳುವುದು ಬಹಳ ಮುಖ್ಯ ಅಂತಹ ಅರಳುವಿಕೆ ನೈಸರ್ಗಿಕವಾಗಿರುವಂತಹ ಪರಿಸರ ನಾವು ಉಂಟುಮಾಡಬೇಕು. ನಾವೆಲ್ಲ ಮಕ್ಕಳಾಗಿದ್ದಾಗ ಹಾವಾಡಿಗನ ಬೆನ್ನು ಹತ್ತಿದವರೇ. ಸುಡುಗಾಡು ಸಿದ್ಧನ ಜಾದು, ತಂಬೂರಿಯೊಂದಿಗೆ ಪದ ಹೇಳುವವನ ಪದ್ಯ, ಸುಗ್ಗಿಯ ಕುಣಿತ ಎಲ್ಲದರಲ್ಲೂ ಖುಷಿಪಡುತ್ತ ಅವರೊಂದಿಗೆ ಮನೆಯಿಂದ ಮನೆಗೆ ಸುತ್ತಾಡಿದ್ದೂ ಇದೆ. ಈ ರೀತಿಯ ಭಾವ ಎಲ್ಲ ಮಕ್ಕಳಲ್ಲೂ ಇರುತ್ತದೆ. ಆದರೆ ಚಿತ್ರ ಬದಲಾಗಬಹುದು ಅಷ್ಟೇ. ಇಲ್ಲಿ ರಂಗಸ್ವಾಮಿಯವರು ಬರೆದುದನ್ನು ನೋಡಿ. ಬೀದಿಗೆ ಬಂದಿತು ದೊಡ್ಡದೊಂದು ಒಂಟೆ ಓಡಿದ ಸುಬ್ಬನು ನಿಲ್ಲಿಸಿ ತಂಟೆ ಮೇಲಿನ ಸಾಲು ಸಹಜವಾಗಿ ಬಂದಿದೆ. ಅದೇ ಪದ್ಯ ಮುಂದುವರಿದು ಕುಳಿತನು ಸುಬ್ಬ ಓಂಟೆಯ ಮೇಲೆ ತೇಲುವ ಅನುಭವ ಅಂಬರದಲ್ಲೇ ಎನ್ನುವ ಸಾಲೂ ಇದೆ. ಹೌದು ಮಕ್ಕಳ ಕಲ್ಪನಾ ವಿಸ್ತಾರ ಅಧಿಕವಾಗಿರುತ್ತದೆ. ದೊಡ್ಡವರಾದ ನಾವು ಬಹಳಸಾರಿ ನಮ್ಮ ಕಲ್ಪನೆಯನ್ನು ತರ್ಕದಿಂದ ಕಟ್ಟಿಹಾಕುತ್ತೇವೆ ಅನಿಸುತ್ತದೆ. ಮಕ್ಕಳು ಅಂಬರದಲ್ಲಿ ತೇಲುತ್ತಾರೆ, ಸಮುದ್ರದಲ್ಲು ಮುಳುಗುತ್ತಾರೆ ಹಾಗೂ ನಕ್ಷತ್ರಗಳನ್ನು ಚೀಲದಲ್ಲಿ ತುಂಬುತ್ತಾರೆ. ಇದೆಲ್ಲಾ ಅವರ ಕಲ್ಪನಾ ವಿಸ್ತಾರ. ಇಂತಹುದೇ ಕಲ್ಪನೆ ಇದೇ ಪುಸ್ತಕದ ಪ್ರಾಣಿ ಪಕ್ಷಿಗಳ ಸಂಗೀತ, ತರಕಾರಿ ಮದುವೆ, ಮುಂತಾದ ಪದ್ಯಗಳಲ್ಲೂ ಇದೆ. ‘ಬದನೆ ತಂದೆ ಸೋರೆ ಕಾಯಿ ತೋರಣ ಕಟ್ಟಿತು ತುಪ್ಪೀರೆ’ ಎಂದೆಲ್ಲ ಬರೆದುದು ಸೊಗಸಾಗಿದೆ. ‘ಪುಟ್ಟೇನಳ್ಳಿ ಪುಟ್ಟ ಭಾರೀ ಭಾರೀ ತುಂಟ ಕುದಿಯುವ ಹಾಲು ಕುಡಿಕೇಲಿಟ್ಟು ಬೆಕ್ಕಿನ ಮೂತಿ ಸುಟ್ಟ.’ ಮಕ್ಕಳು ತುಂಟರೆನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವರ ತುಂಟತನವನ್ನು, ಮಕ್ಕಳಿಗೆ ಖುಷಿಯ ಓದನ್ನು ಒಟ್ಟಿಗೆ ತಂದಿರುವ ಸಾಲು ಎಲ್ಲಕರಿಗೂ ಹಿತವಾಗುತ್ತದೆ. ಇರುವೆಯನ್ನು ಕಾಣದೇ ತುಳಿದು ಅದನ್ನು ಅಳಬೇಡ ಎಂದು ಸಂತೈಸುವ ಮಕ್ಕಳ ನಿರ್ಮಲ ಜೀವ ಪ್ರೀತಿ, ಸುಮತಿ ಪದ್ಯದಲ್ಲಿ ಮಕ್ಕಳದೇ ಉದಾಹರಣೆಯ ಮೂಲಕ ಒಳಗಿನ ಸೌಂದರ್ಯವೇ ಬಹಳ ಮುಖ್ಯ ಎಂದು ಹೇಳುವ ರೀತಿ ಎಲ್ಲ ಚಿಂತನೆಗೆ ಹಚ್ಚುವಂತಿವೆ. ಹಸು ಕರು, ಹೊಟ್ಟೆಬಾಕ, ಕಂಬಳಿ ಹುಳು, ಹಕ್ಕಿ ಮತ್ತು ಮರ, ಬೆಳ್ಳಕ್ಕಿ ಮುಂತಾದ ಪದ್ಯಗಳೆಲ್ಲ ತುಂಬಾ ಇಷ್ಟವಾಗುವಂತಿವೆ. ಕುಕ್ಕರಳ್ಳಿ ಕೆರೆಯ ತುಂಬಾ ಸಾಲು ಸಾಲು ಕೊಕ್ಕರೆ ಒಂದೇ ಒಂದು ಹಲ್ಲು ಇಲ್ಲ ಬಾಯಿ ತೆರೆದು ನಕ್ಕರೆ ಕೆರೆಯಲ್ಲಿರುವ ಪಕ್ಷಿಗಳನ್ನು ನೋಡುತ್ತ ನಾವು ಮೈಮರೆತು ಬಿಡುತ್ತೇವೆ. ಅವುಗಳ ಈಜು, ನೀರಲ್ಲಿ ಮುಳುಗುವ ರೀತಿ, ದೋಣಿಯಂತಹ ಚಲನೆ, ಎಷ್ಟೇ ಈಜಿದರೂ ಅವುಗಳ ಮೈ ಒದ್ದೆ ಆಗದೇ ಇರುವುದು, ಅವು ಮೀನು ಮುಂತಾದವನ್ನು ಬೇಟೆಯಾಡುವ ರೀತಿ ಎಲ್ಲ ಮಕ್ಕಳಿಗೆ ಬೆರಗೆ. ಅದೇ ರೀತಿಯ ಬೆರಗನ್ನೇ ಇಲ್ಲಿ ಒಂದು ಹೊಸ ನೋಟದೊಂದಿಗೆ ರಂಗಸ್ವಾಮಿಯವರು ಪದ್ಯವಾಗಿಸಿದ ರೀತಿ ಖುಷಿಕೊಡುತ್ತದೆ. ಒಂದೇ ಒಂದು ಹಲ್ಲು ಇಲ್ಲ ಬಾಯಿತೆರೆದು ನಕ್ಕರೆ ಇದು ಸಹಜವಾದರೂ ಅದು ಉಂಟುಮಾಡುವ ಆನಂದ ಬಹಳ ಮಹತ್ವದ್ದು. ‘ಕೊಕ್ಕರೆ ಇರುವ ಕೆರೆಯ ನೋಟ ತಂಪು ತಂಪು ಕಣ್ಣಿಗೆ ನೀರಿನಲ್ಲಿ ಪುತ ಪುತನೆ ಅರಳಿದಂತೆ ಮಲ್ಲಿಗೆ’ ಹೌದು ಮಲ್ಲಿಗೆ ಅರಳಿದ ನೋಟಕ್ಕಿಂತಲೂ ಮಿಗಿಲಾದ ಸಂತಸ ಕೆರೆಯ ತುಂಬಾ ಕೊಕ್ಕರೆಗಳನ್ನು ನೋಡಿದಾಗ ಅಗದೇ ಇರದು. ಮನಕೆ ಮುದ ನೀಡುವ ಮುದ್ದು ಮುದ್ದು ಕೊಕ್ಕರೆ ಅಮ್ಮನಂತೆ ಮುದ್ದಿಸುವೆ ನೀನು ಕೈಗೆ ಸಿಕ್ಕರೆ. ಅಮ್ಮನನ್ನು ಹೇಗೆ ಪ್ರೀತಿಯಿಂದ ಮುದ್ದಿಸುವೆನೋ ಹಾಗೆ ಮುದ್ದಿಸುವೆ ಎನ್ನುತ್ತ ಮಕ್ಕಳನ್ನು ಖುಷಿಯಲ್ಲಿ ಮೀಯಿಸಿದ್ದಾರೆ. ಇಂತಹ ಗೆಲುವಾದ ಪದ್ಯಗಳ ಸಂಕಲನದ ಮೂಲಕ ರಂಗಸ್ವಾಮಿಯವರು ಮಕ್ಕಳ ಮನಸ್ಸನ್ನು ಅರಳಿಸಲು ಪ್ರಯತ್ನಿಸಿದ್ದಾರೆ. ಅವರೇ ಹೇಳಿರುವಂತೆ ಅವರು ತಮ್ಮ ಅನುಭವದ ಮೂಲಕ ಇದನ್ನು ರೂಪಿಸಿದ್ದಾರೆ. ಇನ್ನಷ್ಟು ಹೊಸ ಓದು ಹಾಗೂ ಒಳ್ಳೆಯ ಪದ್ಯಗಳ ಮಾದರಿಗಳನ್ನು ಕಣ್ಣ ಮುಂದೆ ತಂದುಕೊಂಡು ಅವರು ಮತ್ತಷ್ಟು ಗೆಲುವಿನ ಪದ್ಯಗಳೊಂದಿಗೆ ಬರುತ್ತಾರೆ ಎನ್ನುವುದು ನನ್ನ ಆತ್ಮೀಯ ಅನಿಸಿಕೆ. ಈ ಪದ್ಯಗಳನ್ನು ಕನ್ನಡದ ಮಕ್ಕಳು ಓದಬೇಕು, ಅದಕ್ಕೆ ಹಿರಿಯರು ಸಹಕರಿಸಬೇಕು ಎನ್ನುತ್ತ ಉತ್ತಮ ಕೃತಿಗಾಗಿ ರಂಗಸ್ವಾಮಿಯವರನ್ನು ಅಭಿನಂದಿಸುತ್ತೇನೆ. ************************************************************************ ತಮ್ಮಣ್ಣ ಬೀಗಾರ.
ಯುವ ಗಜಲ್ ಕವಿ ರೇಖಾ ಭಟ್ ಹೆಸರು: ರೇಖಾ ಭಟ್ ಹೊನ್ನಗದ್ದೆಪ್ರಕಟಿತ ಕೃತಿ : ‘ಮಡಿಲ ನಕ್ಷತ್ರ’ ಗಜಲ್ ಸಂಕಲನವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕಿಊರು: ಬಾಳೆಗದ್ದೆ. ಶಿರಸಿ ಆಯ್ಕೆಗಳ ಅರಿವಿದ್ದರೆ ಕಸಗಳು ಬೊಗಸೆ ಸೇರುವುದಿಲ್ಲಇಷ್ಟಗಳು ನಿರ್ದಿಷ್ಟವಿದ್ದರೆ ಕಷ್ಟಗಳು ಮೀಸೆ ತಿರುವುದಿಲ್ಲ ಎಲ್ಲ ಕಡೆ ಸುಳಿವ ಗಾಳಿ ಗಂಧ ದುರ್ಗಂಧಗಳ ಉಡಲೇಬೇಕುಬದುಕು ಹಗುರಾಗಿ ತೇಲಿದರೆ ಯಾವುದೂ ಅಂಟಿಕೊಳ್ಳುವುದಿಲ್ಲ ಕುಂದುಕೊರತೆಗಳು ದಾರಿಯ ನಡುವಿನ ಕೊರಕಲಿನಂತಲ್ಲವೇಗಮ್ಯದತ್ತಣ ಸಲೀಸು ನಡಿಗೆ ಎಂದಿಗೂ ಖುಷಿ ನೀಡುವುದಿಲ್ಲ ಎಲ್ಲೋ ಬೇರೂರಿದ ಬಳ್ಳಿ ಹಬ್ಬಿ ಹರಡಿ ಇಲ್ಲಿ ನೆಲೆ ನಿಲ್ಲಬಹುದುಕುತೂಹಲದ ಇಣುಕುನೋಟ ಎಂದೂ ಜೊತೆ ಬರುವುದಿಲ್ಲ ಕತ್ತಲೆಯ ಒಪ್ಪದವಗೆ ಬೆಳಕಿನ ‘ರೇಖೆ ‘ಯದು ದಕ್ಕಿತೇನುಕೊರಗುಗಳ ನುಂಗದೇ ಇಲ್ಲಿ ಕನಸುಗಳು ಅರಳುವುದಿಲ್ಲ *********************************
ಕನಸಿನ ಕೊನೆ
ಕವಿತೆ ಕನಸಿನ ಕೊನೆ ನೀ.ಶ್ರೀಶೈಲ ಹುಲ್ಲೂರು ಬೇಗುದಿಯ ಬೆಂಗೊಡದಕರಿಕಾಯದೀ ಕಥೆಗೆನೂರೆಂಟು ಕನಸು…ಅವಳ ಮುಡಿಗೆ ಚಿನ್ನದ ಹೂಕೊರಳಿಗೆ ಮುತ್ತಿನ ಹಾರಮೈಗೆ ಅಂದದ ರೇಷ್ಮೆ ಸೀರೆಬತ್ತಿದೆದೆಗೊಂದು ಚೆಂದದ ರವಿಕೆ! ಮಕ್ಕಳಾಟಕೆ ಬುಗುರಿ ಪೀಪಿತೂಗುಕುದುರೆ ಓಡಲೊಂದುಕಬ್ಬಿಣದ ಗಾಲಿಪಡೆವಾತುರಕೋ ಒಡಲ ತುಂಬಆಸೆಗಳ ನೂರು ಕಟ್ಟು!ಅಂದವಾದ ಈ ಮೈಕಟ್ಟಿನೊಡೆಯನ ತುಡಿತಕೆಯಾವಾಗಲೂ ಚಿಗುರು! ಧಣಿಯ ದಪ್ಪ ಚರ್ಮದಮೇಲೂ ಅದೆಂಥದೋ ಮಮತೆಬಿಡಿಗಾಸು ನೀಡದವನಅಡಿದಾಸನಾಗಿ ಹರೆಯಸವೆಸುವ ಅಪೂರ್ವ ಸಂತಸಅವಳಿತ್ತ ಬೇಡಿಕೆಯಅಕ್ಷಯಾಂಬರಕೆ ಬೆನ್ನು ತಿರುಗಿಸಿದುಡಿಯುವ ನಗ್ನ ಸತ್ಯ! ಸಂಜೆ ಮನೆಯ ದಾರಿಯಲಿಕಸುವು ಕಳೆದುಕೊಂಡ ದೇಹದಜೊತೆಗೆ ಅದೇ ಖಾಲಿ ಕೈಜೋಮುಗೊಂಡ ಕಾಲಿಗೆ ಬುದ್ಧಿಹೇಳಿ ಹೊಡೆಯುತ್ತಾನೆ ಜೋಲಿಓಣಿಯ ತುಂಬಾ ಕೊಳೆತುಸೀತು ಹೋದ ಚರ್ಮದ ದುರ್ನಾತತಿಪ್ಪೆಗುಂಡಿಯ ಸಂಗ ಮಾಡಿದನೀರು ನಿಂತು ಮಲೆತ ಕೆಸರ ಕುಂಡ! ಎಲುಬೆಣಿಸುವ ತನ್ನ ಪ್ರೀತಿ ನಾಯಿಯಮೈತುಂಬಾ ಕಜ್ಜಿ ಗಾಯ ಕೀವುಅರಿಷಿಣ ಸವರಲು ಬಿಡದ ಅದರರೋಷಕೆ ಇವನು ತಬ್ಬಿಬ್ಬುಮಕ್ಕಳ ರೆಪ್ಪೆ ತುಂಬಾ ಪಿಚ್ಚುಸೋರುತಿಹ ಕಟಬಾಯಿ ಜೊಲ್ಲುಗುಂಡು ಹಾಕಲು ಅಂಗಡಿಯವನಜೊತೆ ಮಾಡಿದ ಗಿಲೀಟು ಠುಸ್! ಝಗಮಗಿಸುವ ಈ ಕಾಲದಲೂಮನೆ ಕತ್ತಲೆಯ ಕೂಪಎಣ್ಣೆಯನ್ನು ಬಿಡದೆ ಬಾಟಲಿಯಚಿಮಣಿಯನ್ನೂ ನುಂಗಿದ ಬೆಂಕಿ ಬತ್ತಿಇಲ್ಲಗಳನೆಲ್ಲ ಎದೆಯ ಮೇಲೇಹೇರಿಕೊಂಡು ನಡೆದವನ ಹಿಂದೆಹೊರಟರು ಕೇರಿಯ ಜನ ಅನ್ನುತ್ತಿದ್ದರುಏನೋ ಮಣಮಣ!ಉಳಿದ ಅವಳೆದೆ ಮಾತ್ರಈಗಲೂ ಭಣಭಣ!! *******************************************
ಮುಗಿಲ ಮಲ್ಲಿಗೆ
ಕಥೆ ಮುಗಿಲ ಮಲ್ಲಿಗೆ ರೂಪಕಲಾ ಕೆ.ಎಂ. ಕತ್ತಲೆಯ ಸೆರಗನ್ನು ಹೊದ್ದು ಮಲಗಿದ್ದ ರಸ್ತೆಯಲ್ಲಿ, ವೇಗವಾಗಿ ಚಲಿಸುತ್ತಿದ್ದ ಬಸ್ಸು.. ಅದಕ್ಕಿಂತಲೂ ವೇಗದಲ್ಲಿ ಓಡುತ್ತಿತ್ತು ಹರೀಶನ ಮನಸ್ಸು. ಆಗಾಗ ಎದುರಾಗುವ ವಾಹನಗಳ ಬೆಳಕು ಬಂದು ಕಣ್ಣಿಗೆ ಹೊಡೆದರೂ, ಮನಸ್ಸು ಮಾತ್ರ ಕತ್ತಲೆಯ ಗೂಡಾಗಿತ್ತು.. ಪಕ್ಕದ ಸೀಟಿನಲ್ಲಿ ರಾಧಿಕ ಗಾಢವಾದ ನಿದ್ರೆಯಲ್ಲಿದ್ದಳು.. ಬಸ್ಸಿನ ಪ್ರಯಾಣದಲ್ಲಿಯೂ ಗೊರಕೆ ಹೊಡೆಯುತ್ತ ಮಲಗಿದ್ದ ಸಹ ಪ್ರಯಾಣಕರನ್ನು ನೋಡಿ, ‘ಚಿಂತೆಯಿಲ್ಲದವರೆಗೆ ಸಂತೆಯಲ್ಲೂ ನಿದ್ರೆಯಂತೆ’ ಅನ್ನೊ ಮಾತು ಅವನಿಗೆ ನೆನಪಾಯಿತು.. ಅವನ ಮನ ಪದೇ ಪದೆ ಪ್ರದೀಪನನ್ನೇ ಮೆಲಕು ಹಾಕುತ್ತಿತ್ತು. ‘ಈಗ ಅವನಿಗೆ ಎಷ್ಟು ಖೂಷಿಯಾಗುತ್ತೋ!?, ಪ್ರತಿ ಬಾರಿಯು ಊರಲ್ಲಿದ್ದಾಗ “ನಮ್ಮ ಊರಿಗೆ ಒಂದು ಬಾರಿ ಬಾರೋ, ಆಗ ಗೊತ್ತಾಗುತ್ತೆ.. ಹಳ್ಳಿಯ ಸೊಬಗು ಹೇಗಿರುತ್ತೆ ಅಂತ. ಸಿಟಿಯಲ್ಲಿ ಜೀವನ ಮಾಡೋರಿಗೆ ಪ್ರಕೃತಿಯ ಸೌಂದರ್ಯ ಹೇಗೆ ಗೊತ್ತಾಗುತ್ತೆ ಹೇಳು” ಎಂದಿದ್ದ.. ಈಗ ಊರಿಗೆ ಬರ್ತಿದಿವಿ ಅನ್ನೋ ಪತ್ರ ಕೈ ಸೇರುವಷ್ಟರಲ್ಲಿಯೇ ನಾವೂ ಊರಲ್ಲಿ ಇರ್ತೀವಿ..ಅಬ್ಬಾ ಅವನ ಖುಷಿ ನಮ್ಮ ಕಣ್ಣಾರೇ ನೋಡಬೇಕು’… ಯೋಚನೆಗೆ ಭಂಗ ತರುವಂತೆ ಸಡನ್ ಬ್ರೇಕ್ ಹೊಡೆದಾಗ ಗಾಢವಾದ ನಿದ್ರೆಯಲ್ಲಿದ್ದವರೂ ಕೂಡ ಬೆಚ್ಚಿ ಬಿದ್ದು,ಏನಾಯಿತು ಎಂದು ಸುತ್ತ ಮುತ್ತ ಕತ್ತಲಿನಲ್ಲಿಯೇ ಕಣ್ಹಾಯಿಸಿ ಹುಡುಕುತ್ತಿದ್ದರು. “ಅಬ್ಬಾ, ಏನಾಯ್ತು ಹರೀಶ್!?,” ಮುಂದಿನ ಸೀಟು ಹಣೆಗೆ ತಾಗಿ ನೋವಾದ ಕಡೆ ಒತ್ತುತ್ತ ಕೇಳಿದಳು ರಾಧಿಕ. ಎದ್ದು ನೋಡುವನಿದ್ದ ಅಷ್ಟರಲ್ಲಿಯೇ ಕಂಡೆಕ್ಟರ್ ಬಂದು ” ಏನಾಗಿಲ್ಲ ಹಸು ಅಡ್ಡ ಬಂತು” ” ನೋಡಿ ನಡ್ಸೋಕ್ಕಾಗಲ್ವಾ?, ತಲೆಗೆಷ್ಟು? ಪೆಟ್ಟು ಬಿತ್ತು” ಹಿಂದೆ ಸೀಟಲ್ಲಿದ್ದವರ ಮಾತಿಗೆ.. ” ನೋಡಿ ನಡೆಸ್ತಾ ಇರೋದಕ್ಕೆ ಅಪಾಯ ತಪ್ಪಿದ್ದು ಸರ್. ಇಲ್ಲವಾಗಿದ್ರೆ ಬಸ್ಸು ಪಲ್ಟಿ ಹೊಡಿತಿತ್ತೋ ಅಥವಾ….” ಗುಣುಗುತ್ತಾ ಮುಖ ನೋಡಿ ಹೋದ ಕಂಡೆಕ್ಟರ್ ಮಾತಿಗೆ ಹರೀಶ್ ಹೌದು ಎನ್ನುವಂತೆ ತಲೆ ಆಡಿಸಿದನು. ಹಿಂದೆಯಿಂದ ಮಾತುಗಳು ಕೇಳುತ್ತಲೇ ಇದ್ದವು. ಯಾವುದನ್ನು ತಲೆಗೆ ಹಾಕಿಕೊಳ್ಳದೇ ತನ್ನಷ್ಟಕ್ಕೆ ತಾನು ರಸ್ತೆ ಕಡೆ ದೃಷ್ಟಿ ಇಟ್ಟಿದ್ದ ಡ್ರೈವರ್ ಹತ್ತಿರ ಹೋಗಿ “ಇವುರ್ಗಳಿಗೆ ಬಸ್ಸಲ್ಲು ಹ್ಯಾಂಗ್ ನಿದ್ರೆ ಬತ್ತದೆ ಅಂತ..ದಿನಾ ಓಡಾಡೋ ನಮಗೆ ನಿದ್ದೆ ಇಲ್ಲದಿದ್ದರೂ ನಿದ್ದೆ ಬರಲ್ಲ. ಇನ್ನು ಮೇಲಾಗಿ ಸಲಹೆ ಕೊಡ್ತಾವ್ರೆ”..ಗೊಣಗಿದ ಕಂಡೆಕ್ಟರಿಗೆ.. ” ಏನೋ ನಿಂದು?, ಯಾಕೆ ಗೊಣಗ್ತಿಯಾ.. ಯಾರು ಏನಂದ್ರು ಈಗ?..ಅವರನ್ನು ಬಂದು ಇಲ್ಲಿ ಕೂರಲು ಹೇಳು” ” ಸಾಯ್ಲಿ ಬಿಡಣ್ಣೋ.. ಜೀವ ಹೋದ್ರೂ ನಿದ್ದೆ ಬೇಕು ಅನ್ನೋ ಜನ್ಗಳು”.. ಹರೀಶ ಅವರಿಬ್ಬರ ಮಾತು ಕೇಳಿ ರಾಧಿಕಳ ಕಡೆ ತಿರುಗಿ ನೋಡಿ ನಕ್ಕಾಗ ” ಅವ್ರು ನಂಗಲ್ಲ ಹೇಳಿದ್ದು ಆಯ್ತಾ.. ನೀನೇನೋ ನನ್ನ ನೋಡಿ ನಗ್ಲಿಕ್ಕೆ?,.. ” ಅಯ್ಯೋ ರಾಮ. ನಾನೇನೇ ಅಂದೇ ಈಗ!?,. ” ಏನಿಲ್ಲ ಬಿಡು” ಎನ್ನುತ ರಗ್ಗನ್ನು ಸರಿ ಮಾಡಿಕೊಂಡು ಮುದುರಿ ಮಲಗಿದಳು. ———— ಸೂರ್ಯ ಇನ್ನು ನಿದ್ರೆಯಿಂದ ಎದ್ದಿರಲಿಲ್ಲ ಆಗಲೇ ಹಕ್ಕಿಗಳಿಗೆ ಬೆಳಗಾಗಿತ್ತು.. ಅಲ್ಲಲ್ಲಿ ತಂಬಿಗೆ ಹಿಡಿದು ಹೋಗುವ ಜನರನ್ನು ಕಂಡು… “ಅಬ್ಬಾ ರಸ್ತೆ ಬದಿಯಲ್ಲೇ?…ಕರ್ಮ. ಮರ್ಯಾದೆ ಸಹ ಇರಲ್ವಾ ಇವರಿಗೆಲ್ಲಾ?” ಮೂಗು ಮುಚ್ಚಿಕೊಂಡು ರಾಧಿಕ ಸಿಟ್ಟಿನಲ್ಲಿ ಹೇಳಿದಾಗ.. ” ಇದೆಲ್ಲಾ ಹಳ್ಳಿ ಕಡೆ ಕಾಮನ್ ರಾಧಿಕ, ಇಲ್ಲಿ ಇಷ್ಟೆ.. ಇನ್ನೂ ಕೆಲವು ಕಡೆ ಮಹಿಳೆಯರು ಕೂಡ!”… ” ಬೇಡ ಬಿಡು ಆ ಮಾತು.. ಇವರನ್ನೆಲ್ಲಾ ತಿದ್ದಲು ಆ ಬ್ರಹ್ಮನೇ ಬರಬೇಕೇನೋ… ಅದಿರಲಿ ಈಗ ಪ್ರದೀಪನ ಮನೆ ಎಲ್ಲಿ ಅಂತ ನಿಂಗೆ ಗೊತ್ತಾ?” ” ಇಲ್ಲ,..ಇರು.., ಅಲ್ಲಿ ಯಾರಾನ್ನಾದರೂ ಕೇಳೋಣ” ಎನ್ನುತ್ತ ಸ್ವಲ್ಪ ಮುಂದೆ ನಡೆದರು. ಅಲ್ಲಿಯೇ ಇದ್ದ ಸಣ್ಣ ಗೂಡಂಗಡಿಯಲ್ಲಿ ಇಬ್ಬರು ಟೀ ಕುಡಿದು ವಿಚಾರಿಸಿದಾಗ… ಅವರು ಹೋಗಬೇಕಾದ ಊರು ಇನ್ನು ಒಂದು ಕಿಲೋ ಮೀಟರ್ ದೂರವಿರುವುದಾಗಿಯು ” ಇಲ್ಲೇ ಒಂದು ಆಟೋ ಬತ್ತದೆ ಈಗ. ಅದು ಆ ಊರಿಗೆ ಹೋಗತ್ತೆ ಅದರಲ್ಲಿ ಹೋಗಿ” ಅಂಗಡಿಯವರು ಹೇಳಿದಾಗ ಸರಿಯೆಂದು ಆಟೋಕ್ಕಾಗಿ ಕಾದು ನಿಂತರು. —– ರಾಧಿಕ ಮತ್ತು ಹರೀಶ್ ಮಾರನ ಹಳ್ಳಿ ಪ್ರವೇಶಿಸಿದ ಕೂಡಲೆ ಅಲ್ಲಿ ಯಾರನ್ನಾದರೂ ಕೇಳಿದರೆ ಪ್ರದೀಪನ ಬಗ್ಗೆ ತಿಳಿಯುತ್ತದೆಂದು ಯೋಚಿಸಿದ್ದರು.ಆದರೆ ಅಲ್ಲಿಯೇ ಆಡುತಿದ್ದ ಮಕ್ಕಳನ್ನು ಕೇಳಿದಾಗ ಇವರಿಬ್ಬರ ಕಡೆ ವಿಚಿತ್ರವಾಗಿ ನೋಡಿದರು.ಅದಕ್ಕು ಕಾರಣವಿತ್ತು. ರಾಧಿಕಳ ಉಡುಗೆ ಹರೀಶನ ಉಡುಗೆಯು ಒಂದೇ ತೆರನಾಗಿದ್ದವು. ಮುಂದೆ ಹೋಗಿ ಅಲ್ಲಿಯೇ ಹಲಸಿನ ಮರದ ಕಟ್ಟೆಯಲ್ಲಿ ಕುಳಿತ ಹಿರಿಯರನ್ನು ಕೇಳಿದರು. ಅವರಲ್ಲಿ ಹಿರಿಯರಾದ ಒಬ್ಬರು ಅವರಿಬ್ಬರನ್ನು ತೀಕ್ಷ್ಣವಾಗಿ ನೋಡಿ ” ಅವ , ನಿಮಗ್ ಹ್ಯಾಗ್ ಗೊತ್ತು?” ಎಂದರು. ಅವರ ಮಾತು ಅರ್ಥವಾಗದೆ ಇಬ್ಬರು ಒಬ್ಬರನ್ನೊಬ್ಬರು ಮುಖ ನೋಡಿಕೊಂಡರು.ಅದನ್ನರಿತ ಹಿರಿಯರು ” ಎಲ್ಲಿಂದ ಬಂದ್ರಿ” ” ಸಿಟಿಯಿಂದ, ಪ್ರದೀಪನನ್ನು ಕಾಣಬೇಕಿತ್ತು. ನಾವೆಲ್ಲ ಒಟ್ಟಿಗೆ ಓದಿದವರು” ” ಈಗ ನಿಮಗಾ ಅವ ಸಿಗಂಗಿಲ್ರಿ” ” ಅಂದ್ರೆ!!?” ” ಬನ್ರಿ, ಅವರ ಮನೆಯಾಗ ಬಿಡ್ತೀನಿ” ಎಂದವರೇ ಆ ಹಿರಿಯರು ಎದ್ದು ಮುಂದೆ ಹೆಜ್ಜೆ ಹಾಕಿದರು. ಅವರಿಬ್ಬರೂ ಹಿಂಬಾಲಿಸಿದರು. ಊರಿನ ಹಲವಾರು ಮನೆಗಳನ್ನು ದಾಟಿ ದೊಡ್ಡದೊಂದು ಮನೆಯ ಮುಂದೆ ಬಂದು ನಿಂತು!,. ” ಅದೇ ಅವ್ರ ಮನೆ” ಎಂದರು. ” ಥ್ಯಾಂಕ್ಸ್ ಸರ್” ಎಂದವರೇ ಮನೆಯ ಮುಂದೆ ಹೋಗಿ ಬಾಗಿಲ ಬಳಿ ನಿಂತು ಹರೀಶ ಒಳ ನೋಡುತ್ತ ಕರೆದನು. ” ಪ್ರದೀಪ್,ಪ್ರದೀಪ್” ಇವರ ಸ್ವರ ಕೇಳಿ ಒಳಗಿನಿಂದ ಬಂದ ವ್ಯಕ್ತಿಯನ್ನು ” ಸರ್,ಪ್ರದೀಪ ಇಲ್ವಾ?” ” ನೀವ್ಯಾರು?” “ನಾವು ಅವನ ಫ್ರೆಂಡ್ಸ್. ಕಾಲೇಜಲ್ಲಿ ಒಟ್ಟಿಗೆ ಓದುತ್ತಿದ್ದೆವು, ತುಂಬಾ ತಿಂಗಳಿಂದ ಅವನಿಂದ ಯಾವುದೇ ಸಂಪರ್ಕ ಸಿಗುತ್ತಿಲ್ಲ.ಹಾಗಾಗಿ ನಾವೇ ಬಂದ್ವಿ”. ” ಹೋ, ಹೌದಾ!!,. ಬನ್ನಿ ಒಳಗ, ಪ್ರದೀಪನು ನನ್ನ ಮಗನೇ.ನನ್ನ ಹೆಸರು ಶಿವಪ್ಪ ಅಂತ” ” ನಮಸ್ತೆ ಸರ್,ನಾನು ಹರೀಶ ಅಂತ,ಇವರು ರಾಧಿಕ.ನಾವು ಮೂವರು ಬೆಸ್ಟ್ ಫ್ರೆಂಡ್ಸ್”, “ಹೌದ,ಬನ್ನಿ ಕೂತ್ಕಳ್ಳಿ,ಈಗ ಬಂದೆ” ಎಂದು ಒಳ ಹೋಗಿ ಕುಡಿಯಲು ನೀರು ತಂದರು. ದೂರದಿಂದ ಬಂದವರಿಗೆ ಊಟೋಪಚಾರದ ವ್ಯವಸ್ಥೆಯು ಆದ ನಂತರ ನಿಧಾನವಾಗಿ ಮಾತಿಗೆ ಇಳಿದರು. “ಸರ್, ಈಗ ಅವನೆಲ್ಲಿದ್ದಾನೆ?”. ” ಪ್ರದೀಪ,!? ಈಗ ಎಲ್ಲಿದ್ದಾನೆ ಅಂತ ಹೇಳದು,ನಮಗಾ ಗೊತ್ತಿದ್ದರ ಮನೆಯಲ್ಲಿಯೆ ಇರ್ತಿದ್ದ.ಆದ್ರ ದೇವರು ನಮಗಾ ಅನ್ಯಾಯ ಮಾಡ್ದ” ಎಂದು ನಿಟ್ಟುಸಿರು ಬಿಟ್ಟರು.ಕಣ್ಣಿನಿಂದ ನೀರು ಹೊರ ಬಂದಿತ್ತು .ಇಬ್ಬರಿಗೂ ಗಾಬರಿ .ಅವನಿಗೆ ಏನಾಗಿರ ಬಹುದು?. ಒಳಗಿನಿಂದ ಅಳುವ ಶಬ್ದ ಕೇಳಿ ಬಂತು. ” ಸರ್, ದಯವಿಟ್ಟು ಹೇಳಿ ,ಪ್ರದೀಪನಿಗೆ ಏನಾಯ್ತು?,ಈಗ ಎಲ್ಲಿದ್ದಾನೆ?.” ಕಣ್ಣು ಒರೆಸಿಕೊಂಡು ಹೇಳಲು ಶುರು ಮಾಡಿದರು. ” ಅವನಿಗೆ ಹುಚ್ಚು ಹಿಡಿತಪ್ಪಾ,ಈಗ ಎಲ್ಲಿದ್ದಾನಂತ ಗೊತ್ತಿಲ್ಲ.ಯಾರಾದರು ಅವನನ್ನ ನೋಡಿದೊರು ಬಂದು ಹೇಳ್ತಾರ! ನಾವು ಹೋಗೋದ್ರೊಳಗ ಅವ ಅಲ್ಲಿರಲ್ಲ.ಇದೇ ಆಗದೇಪ್ಪ ಆರು ತಿಂಗಳಿಂದ”, ಬಿಕ್ಕಿದರು. ಹರೀಶ್ ಕುಳಿತಲ್ಲಿಂದ ಎದ್ದು ಬಂದು ಅವರ ಕೈ ಹಿಡಿದು ಸಮಾಧಾನ ಮಾಡುತ್ತ ಕೇಳಿದ. ” ಇದೆಲ್ಲ ಹೇಗಾಯ್ತು ಸರ್”, ” ಪಿರುತಿ ಮಾಡಿದ್ದನಪ್ಪ..ಆ ಮಗ ಸತ್ತು ಹೋದ್ಲು,ಅದರ ನೋವು ತಡಿಲಾರ್ದೆ ಇವ ಹುಚ್ಚ ಆದ.ಸ್ವಲ್ಪ ದಿನ ತಡಿದಿದ್ರೆ ಇಬ್ಬರ ಮದುವೆ ನಾವೇ ಮಾಡೋರು.ಆದ್ರ ದೇವ್ರಿಗ ನಮ್ಮ ಮೇಲ ಕರುಣೆ ಇಲ್ಲ ನೋಡಿ.ಇದ್ದ ಒಬ್ಬ ಮಗನ್ನ ಹೀಗಾ ಮಾಡ್ಬಿಟ್ಟ”, ಮತ್ತೆ ಅಳಲು ಶುರು ಮಾಡಿದ್ರು.ರಾಧಿಕಳ ಕಣ್ಣಲ್ಲಿ ಆಗಲೆ ನೀರು ಇಳಿಯುತಿತ್ತು.ಮನೆಯ ಒಳಗಿನ ಅಳು ಸ್ವಲ್ಪ ಕಡಿಮೆ ಆಗಿತ್ತು.ಶಿವಪ್ಪನವರ ದುಃಖ ನೋಡಲಾಗದೆ ಹರೀಶ್ ನಿಧಾನವಾಗಿ ಎದ್ದು ಹೊರ ಬಂದ.ರಾಧಿಕ ಕೂಡ ಅವನ ಹಿಂದೆಯೆ ಬಂದಳು. ಏನೋ ಯೋಚಿಸಿದವರಂತೆ ಮತ್ತೆ ಒಳಗಡೆ ಬಂದವರು ಕುರ್ಚಿಯಲ್ಲಿ ಕುಳಿತರು. ” ಸರ್ ನಮಗೆ ಪ್ರದೀಪನ ಪೂರ್ಣ ಮಾಹಿತಿ ಬೇಕು.ಕಾಲೇಜು ಬಿಟ್ಟು ಬಂದಲ್ಲಿಂದ ಇಲ್ಲಿ ಏನಾಯಿತು ಅಂತ ತಿಳಿಸಲು ಆಗತ್ತ.ನಮಗೆ ನಮ್ಮ ಮೆಚ್ಚಿನ ಗೆಳೆಯನ ಜೀವನ ಹೀಗೆ ಆಗಿದ್ದು ನಂಬಲು ಆಗುತ್ತಿಲ್ಲ.ದಯವಿಟ್ಟು ವಿವರವಾಗಿ ತಿಳಿಸಿ ಸರ್”, ಅವರಿಬ್ಬರನ್ನು ಒಮ್ಮೆ ನೋಡಿದರು.’ಪ್ರದೀಪನ ವಯಸ್ಸಿನವರೆ’ ಅನ್ನಿಸಿತು.ಹರೀಶನನ್ನು ನೋಡಿ ಮಗನ ನೆನಪಾಗಿ ಕಣ್ತುಂಬಿ ಬಂದವು. ನಡೆದ ಕಥೆ ಹೇಳಲು ಶುರು ಮಾಡಿದರು. “ನಂಗಾ ಇಬ್ರು ಮಕ್ಳು.ಮಗಳ ಮದ್ವಿ ಆಗದೆ. ಇವ ಓದು ಮುಗ್ಸಿ ಊರಿಗೆ ಬಂದ.ನಾವು ಅವ್ನ ಕೆಲ್ಸದ ವಿಷಯ ಏನೂ ಹೇಳಿಲ್ಲ.ಮನೇಲಿ ಮೂರು ತಲೆಮಾರಿಗೂ ಕೂತು ಉಣ್ಣೊಷ್ಟು ಇರುವಾಗ ಅವ ಕೆಲಸಕ್ಕೆ ಹೋಗೂ ಅಗತ್ಯ ನಂಗಿರ್ಲಿಲ್ಲ”, ಮಾತು ನಿಲ್ಲಿಸಿ ಒಳಗೆ ನೋಡಿದರು. ಹೆಂಡತಿಗೆ ತನ್ನ ಮಾತು ಕೇಳಿದರೆ?. ” ನಿಮ್ಗೆ ದಣಿವಿಲ್ಲಾಂದ್ರಾ ತೋಟಕ್ ಹೋಗುಣಾ?”, ಮೂವರು ಎದ್ದು ಹೊರ ಹೋಗುವಾಗ ಲಕ್ಷ್ಮಮ್ಮನವರು ಹೊರ ಬಂದರು.ಅವರಿಗೆ ತೋಟಕ್ಕೆ ಹೋಗಿ ಬರುತ್ತೆವೆಂದು ಹೇಳಿ ಹೊರಟರು. *** ಊರ ಹೊರಗಿನ ಹೊಲದ ಮಧ್ಯದಲ್ಲಿ ಒಂದು ಪುಟ್ಟ ಮನೆ. ಸುತ್ತಲೂ ಹಚ್ಚ ಹಸಿರಾದ ಪೈರು.ಹೂ ಬಿಟ್ಟು ಭತ್ತದ ತೆನೆ ಬಿಡುವ ಸಮಯ.ಗಾಳಿ ಬಂದರೆ ಪೈರಿನ ಪರಿಮಳ ಮೂಗಿಗೆ ತಾಗಲು, ‘ಅಹ್ಹಾ’,ಎಷ್ಟೊಂದು ಅಹ್ಲಾದಕರ. ಗದ್ದೆ ಅಂಚಿನ ಮೇಲೆ ಮೆಲ್ಲನೆ ಹೆಜ್ಜೆ ಹಾಕುತ್ತ ನಡೆಯುತಿದ್ದಳು ಮಲ್ಲಿ. “ಯಾರಲ್ಲಿ?”. ಕೂಗಿಗೆ ಹೆದರಿ ನಿಂತಳು.ತಿರುಗಿ ನೋಡಿದರೆ ತನಗೆ ಸ್ವಲ್ಪ ದೂರದಲ್ಲಿಯೆ ಒಬ್ಬರು ದ್ವಿಚಕ್ರ ವಾಹನದಲ್ಲಿ ನಿಂತಿದ್ದರು. ಅವರನ್ನು ಎಂದೂ ನೋಡಿರಲಿಲ್ಲ .’ಯಾರಿರ ಬಹುದು?’ಎಂದು ಕುತೂಹಲದಲ್ಲಿರುವಾಗಲೆ ಮತ್ತದೇ ದ್ವನಿ. “ನಿನ್ನನ್ನೆ ಕೇಳಿದ್ದು, ಯಾರು ನೀನು?.ಎಲ್ಲಿಯೂ ನೋಡಿದ ನೆನಪಿಲ್ಲ.ಹೊಸ ಮುಖದ ಹಾಗೆ ಕಾಣುತ್ತಿಯ!?” “ನಾನು ಮಲ್ಲಿ,ಸುಬ್ಬಣ್ಣನ ಮಗಳು” “ಹೌದಾ!!?.ನಮ್ಮ ಸುಬ್ಬಣ್ಣನ ಮಗಳಾ?.ಇಷ್ಟು ದಿನ ಎಲ್ಲಿದ್ದೆ?.ಒಂದು ದಿನವು ಕಾಣಲಿಲ್ಲ!!?” ” ನಾನು ಸಿಟಿಯಲ್ಲಿನ ಚಿಕ್ಕಪ್ಪನ ಮನೆಯಲ್ಲಿದ್ದು ಕಲಿತಿದ್ದೆ” “ಎಷ್ಟನೆ ಕ್ಲಾಸಿನವರೆಗೆ ಓದಿದ್ದಿಯಾ” “ಹತ್ತು, ಪಾಸು”. “ಮುಂದೆ!?” ಅವರ ಮಾತನ್ನು ತಡೆಯುವಂತೆ “ನೀವ್ಯಾರು!?”ಎಂದು ಕೇಳಿ ನಾಲಿಗೆ ಕಚ್ತಿಕೊಂಡಳು. “ಹೋ, ನೋಡಿದ್ಯಾ ನಿನ್ನ ಬಗ್ಗೆ ಕೇಳುವ ಆತುರದಲ್ಲಿ ನಾನು ಯಾರು? ಅಂತ ಹೇಳಲೆ ಇಲ್ಲ ಅಲ್ವಾ?.ನಾನು ಈ ಊರಿನ ಗೌಡರ ಮಗ ಪ್ರದೀಪ. ನಿನ್ನ ತಂದೆ ನಮ್ಮ ಮನೆಯಲ್ಲೆ ಕೆಲಸ ಮಾಡೋದು.ನಿನ್ನ ಹಾಗೆಯೆ ಸಿಟಿಯಲ್ಲಿ ಓದುತಿದ್ದೆ.ಈಗ ಸಧ್ಯಕ್ಕೆ ಓದು ಮುಗಿಯಿತು.ಕೆಲಸಕ್ಕೆ ಪ್ರಯತ್ನ ನಡೆಸಬೇಕು.” ಸಾಕ? ಎನ್ನುವಂತೆ ಅವಳ ಕಡೆ ನೋಡಿದನು. ಒಂದೇ ಉಸಿರಲ್ಲಿ ಮಾತನಾಡಿ ಮುಗಿಸಿದ ಅವನನ್ನೇ ತದೇಕ ಚಿತ್ತದಿಂದ ನೋಡುತಿದ್ದಳು.ಅವನೂ ಸಹ ಮಾತು ನಿಲ್ಲಿಸಿ ಮಲ್ಲಿಯ ಕಡೆ ನೋಡಲು ಇಬ್ಬರ ಕಣ್ಣುಗಳ ಮಿಲನವಾಯಿತು.ಮಲ್ಲಿ ಅವನ ನೋಟಕ್ಕೆ ನಾಚಿ ತಲೆ ತಗ್ಗಿಸಿದಳು.ಪ್ರದೀಪ ಮಾತ್ರ ಮಲ್ಲಿಯ ಅಂದವನ್ನು ಸವಿಯುವದರಲ್ಲೆ ಮಗ್ನನಾದ. ಹಾಲು ಕೆನ್ನೆಯ ದುಂಡನೆಯ ಮುಖದಲ್ಲಿ ಕಾಡಿಗೆಯ ಅಗತ್ಯವೇ ಇಲ್ಲದಂತೆ ಹೊಳೆಯುವ ಕಣ್ಗಳು..ನೀಳವಾಗಿ ಉದ್ದವಾದ ಕೂದಲನ್ನು ಎಣ್ಣೆ ಹಾಕಿ ಬಲವಂತವಾಗಿ ಬಾಚಿದಂತೆ ಕಂಡರು, ಅವಳಿಗದು ಅಂದ ತಂದಿತ್ತು.ಬಲ ಕಿವಿಯ ಹತ್ತಿರ ಇಳಿ ಬಿದ್ದ ಗುಂಗುರು ಕೂದಲು. ಕಿವಿಯಲ್ಲಿ ಸಣ್ಣದೊಂದು ಓಲೆ. ಎರಡೂ ಕೈಯಲ್ಲಿ ನಾಲ್ಕೇ ನಾಲ್ಕು ಮಣ್ಣಿನ ಕೆಂಪು ಬಳೆಗಳು ಅವಳ ಬಿಳಿ ಕೈಗಳಿಗೆ ಮುದ್ದಾಗಿದ್ದವು. ಹೆಚ್ಚೇನು ಎತ್ತರವಿಲ್ಲದ ಅತಿ ದಪ್ಪವು ಅಲ್ಲದ ಅವಳು, ಒಮ್ಮೆ ನೋಡಿದರೆ ಮತ್ತೆ ತಿರುಗಿ ನೋಡಬೇಕೆನ್ನಿಸುವ ಶರೀರ,ಅದರಲ್ಲೂ ಮೈಯನ್ನಪ್ಪಿದ ಲಂಗ ರವಿಕೆಯಲ್ಲಿನ ದೇಹದ ಸಿರಿ, ಪ್ರದೀಪನಿಗೆ ಸಿಟಿಯ ವೈಯ್ಯಾರಿಯರ ಮಧ್ಯೆ ಕೂಡ ಮಲ್ಲಿಯೇ ಅಂದವಾಗಿ ಕಂಡಿದ್ದಳು. ಪ್ರದೀಪನ ಕಣ್ಣು ತನ್ನ ಮೇಲಿರುವುದು ಅರಿತ ಮಲ್ಲಿ, ಮೆಲ್ಲನೆ ನಾಚಿ ಜಿಂಕೆಯಂತೆ ಓಡುವ ಸನ್ನಾಹ ಪ್ರದೀಪನ ಅರಿವಿಗೆ ಬಂದದ್ದೆ ತಡ ಅವಳನ್ನು ತಡೆಯುತ್ತಾ ”
ಕಾಗೆ…
ಲೇಖನ ಕಾಗೆ… ಡಾ. ಅರಕಲಗೂಡು ನೀಲಕಂಠ ಮೂರ್ತಿ ನಾನೊಂದು ಕಾಗೆ, ನಿಜ. ಅಪ್ಪಟ ಕಪ್ಪು, ನಿಜ. ನನ್ನ ‘ಮಧುರ’ ಧ್ವನಿ ನಿಮಗೆ ಕರ್ಕಷ! ಬಹುಶಃ ಅದೂ ಕೂಡ ನಿಜ! (ನಿಮ್ಮದೇ ಕಣ್ಣು ಕಾಣುವ ಕೋನದಿಂದ ಮಾತ್ರ). ನಿಮ್ಮ ಹಾಗೆ ನಮ್ಮ ಪಕ್ಷಿ ಲೋಕದ ಲ್ಲಿ, ಕಪ್ಪು ಅಂದಾಕ್ಷಣ ಅಸಹ್ಯವಿಲ್ಲ. ನಿಮ್ಮಲ್ಲೋ ಎಂಥೆಂತಹ ಅಸಹ್ಯ ಭಾವನೆಗಳಿಲ್ಲ ಹೇಳಿ – ಒಬ್ಬನನ್ನೊಬ್ಬ ಕಂಡಾಗ ನಿಮ್ಮ ನಿಮ್ಮ ನಡುವೆ! ನಾವು ವೈವಿಧ್ಯಮಯ ಜಗತ್ತನ್ನು ನಮ್ಮ ಉಗಮದಿಂದಲೇ ಗೌರವದಿಂದ ಭಾವಿಸಿಕೊಂಡು ಬಂದವರು; ಇಂದಿಗೂ ಹಾಗೇ, ಸ್ವಲ್ಪವೂ ಲೋಪವಿಲ್ಲದ ಹಾಗೆ ಗೌರವಿಸುವವರು! ಯಾವ ಹಕ್ಕಿಯೂ ಇತರರ ಬಣ್ಣದ ಬಗ್ಗೆ, ಬಾಳಿನ ಬಗ್ಗೆ, ಧ್ವನಿಯ ಬಗ್ಗೆ, ನಿಮ್ಮನಿಮ್ಮಲ್ಲೇ ನೀವು ಮೂಗು ಮುರಿಯುವ ಹಾಗೆ, ನಾವು ನಮ್ಮ ನಮ್ಮ ಕೊಕ್ಕು ಮುರಿದವರಲ್ಲ ಎಂದೆಂದೂ, ಮುಂದೂ ಕೂಡ. ಕಾಗೆ ದೂರವಿರು ಎಂದು ಕೋಗಿಲೆಯಾಗಲೀ, ಮುದ್ದು ಗಿಣಿಯಾಗಲೀ ಅಥವಾ ಇನ್ನೊಂದು ಪಕ್ಷಿಯಾಗಲೀ ಎಂದೂ ಕೂಗಿದ್ದು, ರಂಪ ಮಾಡಿದ್ದು ಕಂಡಿಲ್ಲ! ನೀವೋ ‘ಓದು-ಬರೆಹ’ ಅನ್ನುವುದನ್ನು ತಿಳಿಯದವರೂ ಅಲ್ಲ – ನಮ್ಮ ಹಾಗೆ (ಹಾರುವ ಹಕ್ಕಿಗೆ ಎಲ್ಲಿಯ, ಅದೆಂಥ ಓದು, ಎಂತಹ ಶಾಲೆ – ಹಾರುವ ಪಾಠ ಅಲ್ಲದೆ)! ಬಹಳ ತಿಳಿದವರೂ ಸಹ, ಹೌದಲ್ಲವೇ; ಬುದ್ಧಿ ಇರುವವರು. ವಾಸ್ತವವಾಗಿ ವಿಪರೀತ ಬುದ್ಧಿ ಇರುವವರು. ಬಹುಶಃ ವಿನಾಶೀ ಬುದ್ಧಿ ಇರುವವರೂ, ಹೌದು… ನೀವು ಎಂತಹವರೇ ಆದರೂ ಕೂಡ, ನೀವು ಸತ್ತು ಬಿದ್ದಾಗ, ನಿಮ್ಮ ಬಾಯಿಂದ ನಮ್ಮದೇ ಸ್ತುತಿ! ನಾವೇ ದೇವರೋ ಎಂಬಂತೆ, ಕಾಗೆಗಳದ್ದೇ ಜಪ…ನಿಜ ಅಲ್ಲವೇ; ನೀವೇ ಕೊಟ್ಟು ಕೂರಿಸಿದ್ದೀರಲ್ಲವೇ, ನಮಗೆ ಶನಿ ಮಹಾತ್ಮನ ವಾಹನದ ಪಟ್ಟ! ಮತ್ತೆ, ಭಯವಲ್ಲವೇ… ಆಹಾ…ಅದೇನು ಬಾಯಿ ಬಿಡುವಿರೋ; ನಮಗಾಗಿ ಕಾಯುತ್ತ, ಕಾಯತ್ತ ಕೂರುವಿರೋ, ನಿಮಗೇ ಪ್ರೀತಿ… ಅಷ್ಟೇ ಅಲ್ಲ! ನೀವು ಹರಿಶ್ಚಂದ್ರನಂಥ ಮಹಾತ್ಮನನ್ನೇ ಬಿಟ್ಟಿಲ್ಲ. ಅವನನ್ನೂ ಕೂಡ ‘ಸ್ಮಶಾನ’ದ ‘ವಾಚ್ಮನ್’ ಕೆಲಸಕ್ಕೆ ಅಂತ ಇಟ್ಟಿಬಿಟ್ಟಿದ್ದೀರಲ್ಲವೇ! ಅಲ್ಲದೆ, ಅದೇ ಸ್ಥಳದಲ್ಲಿ ನಾವು ಕೂಡ ಅತಿಥಿಗಳು, ನಿಮ್ಮವರು ಸತ್ತುಬಿದ್ದಾಗ…ನಮಗೆ ಕೂಳು, ಹರಿಶ್ಚಂದ್ರನಿಗೆ ಕೈತುಂಬಾ ಕಾಯಕ! ಎಂಥ ಭಾಗ್ಯ… ಹೌದು, ನಾವು ಅಕಸ್ಮಾತ್, ನೀವು ಭಯದಿಂದ ನೀಡುವ ‘ಕೂಳು’ ತಿನ್ನದೇ ಹಾಗೆಯೇ ಮೂಸಿ ಹಾರಿಹೋದರೆ, ನಿಮ್ಮ ನಿಮ್ಮಲ್ಲೇ ಆ ಸಂದರ್ಭದಲ್ಲಿ ಎಂಥೆಂಥಾ ಚಿಂತೆಗಳು ಆರಂಭವಾಗಿ ಎಷ್ಟು ಹಿಂಸೆ ಅಲ್ಲವೇ. ಎಲ್ಲ ಪಾಪಗಳು, ಪ್ರಾಯಶ್ಚಿತ್ತಗಳು ಒಟ್ಟೊಟ್ಟಿಗೆ ಕಾಣುತ್ತವೆ! ನಮ್ಮ ಪ್ರಾಣಿ ಪಕ್ಷಿಗಳು ಸತ್ತರೆ, ನಮಗೆ ಅಂಥ ಯಾವ ಚಿಂತೆಯೂ ಇಲ್ಲ; ಬದಲಿಗೆ, ರಣಹದ್ದಿಗೆ ಅಹಾರವಾಗಿ ‘ಪುಣ್ಯ’ ಪಡೆಯುತ್ತೇವೆ! ಅಂತಹ ಸಂದರ್ಭದಲ್ಲಿ, ನಾವು ನಿಮ್ಮ ಕೂಳು ತಿನ್ನದ ಹೊತ್ತಿನಲ್ಲಿ, ಸತ್ತವರ ಗತಿ! ಸ್ವರ್ಗವಂತೂ ಖಂಡಿತ ಇಲ್ಲ; ಹಾಗಾದರೆ, ನರಕವೋ ಅಥವಾ ತ್ರಿಶಂಕುವೋ, ಇನ್ನೆಲ್ಲೋ ಎಂಬ ಜಿಜ್ಞಾಸೆ, ಅಲ್ಲವೇ? ಅಲ್ಲ ರೀ, ನೀವೇ ಇಲ್ಲದೆ, ಜಡವಾಗಿ, ಉಸಿರೇ ನಿಂತು, ಇನ್ನೇನು ಹಾಗೇ ಬಿಟ್ಟರೆ ಗಬ್ಬು ನಾತ ಅನ್ನುವ ಪರಿಸ್ಥಿತಿ ಯಲ್ಲೂ, ಅಯ್ಯೋ, ಇನ್ನೇನು ಗತಿಯೋ ಅನ್ನುವ ಹಾಸ್ಯಾಸ್ಪದ ಚಿಂತನೆ… ಅದಿರಲಿ ಈ ರೀತಿಯ ಯೋಚನೆ, ಹೊರಟು ಹೋದವರ ಮುಂದಿನ ಗತಿಯ ಬಗ್ಗೆಯೋ ಅಥವ ಹೋದವರು ಬಂದು ಇರುವವರಿಗೆ ಪೀಡನೆ ಉಂಟು ಮಾಡಿ, ಅವರ ಬಾಳನ್ನೇ ನರಕಕ್ಕೆ ನೂಕಿಬಿಡುವರು ಎಂಬ ಗಾಢ ನಂಬಿಕೆಯ, ಸ್ವಾರ್ಥವೋ…! ಎಂಥಹವರಯ್ಯ ನೀವು, ಮನುಷ್ಯರು, ಯಾವ ಪ್ರಾಣಿಪಕ್ಷಿ ಬೇಕಾದರೂ ತಿಂದು ತೇಗಿಬಿಡುವವರು, ಅಥವ ಅವುಗಳ ಇರುವನ್ನೇ ಇಲ್ಲವಾಗಿಸಿ ಧೂಳೀಪಟ ಮಾಡುವವರು; ಈಗಾಗಲೇ ಅರ್ಧಂಬರ್ದಕ್ಕೂ ಮಿಗಿಲಾಗಿ ನಾಶ ಮಾಡಿರುವವರು, ಒಂದು ಯಕಃಶ್ಚಿತ್ ಕಾಗೆಗಾಗಿ ಬಾಯಿಬಿಡುತ್ತೀರಿ ನಿಮ್ಮ ಸಾವಿನ ಸಮಯದಲ್ಲಿ! ಮತ್ತು, ಅದೇ ಕಾಗೆ ಅಂದರೆ ದೂರವೋ ದೂರ ಇದ್ದುಬಿಡುವಿರಿ, ಹೆದರಿ! ಶನಿದೇವರ ವಾಹನವೆಂದೋ; ಅಥವ ಶನಿಯೇ ನಿಮ್ಮ ಹೆಗಲೇರಿಬಿಡುವನೋ ಎಂಬಂತೆ; ಅಥವಾ ನೀವೂ ಸತ್ತೇಹೋಗುವ ಭಯವೋ. ಎಲ್ಲಿ, ಈ ಕರಿಕಾಗೆಯ ಕಪ್ಪು ಶಾಪ ಕೂಡ ಹೆಗಲೇರುವುದೋ ಎಂಬ ಭಯವೋ? ಇರಬಹುದು, ಅದಕ್ಕಾಗಿಯೇ ಅಲ್ಲವೇ, ನೀವು ಕಾಗೆಗಳನ್ನೇ ತಿನ್ನದೇ ಇನ್ನೂ ಉಳಿಸಿರುವುದು! ಎಲೈ, ಜ್ಞಾನ-ವಿಜ್ಞಾನಗಳೆಲ್ಲದರ ಪ್ರಭೃತಿಗಳಾಗಿರುವ ಮಾನವರೇ, ಇಂತಹ ಅನನ್ಯ ತಿಳಿವು ತುಂಬಿರುವ ತಲೆಯಲ್ಲಿ ಮತ್ತು ನಿಮ್ಮೆದೆಯಲ್ಲಿ ಒಂದೇ ಒಂದಿಷ್ಟಾದರೂ ಕರುಣೆ ಬೇಡವೇ–ಪ್ರಾಣಿ ಪಕ್ಷಿಗಳ ಬಗ್ಗೆ! ಕೇವಲ ಸ್ವಾರ್ಥಕ್ಕೆ ಮಾತ್ರ ಅವುಗಳ ಉಪಯೋಗವೇ? ನಿಮ್ಮ ಮೃಗಾಲಯಗಳು ಕೂಡ ಅದೇ ರೀತಿಯ ಮೋಜಿನ ಸ್ವಾರ್ಥಕ್ಕಾಗಿ ಅಲ್ಲವೇ… ಹಾಗಂತ, ನೀವು ಪ್ರಪ್ರಥಮ ಬಾರಿಗೆ ಈ ಭುವಿಯ ಮೇಲೆ ಜೀವ ತಳೆದು, ನಿಮ್ಮ ನಿಮ್ಮ ಸಂತಾನವನ್ನೇ ಬೆಳೆಯತೊಡಗಿದಾಗ, ಈ ಜಗದೊಳು ಇದ್ದ ಪ್ರಾಣಿ ಪಕ್ಷಿಗಳ ಸಂಖ್ಯೆಯಾದರೂ ಎಷ್ಟೆಂದು ನಿಮಗೆ ಅರಿವಿಲ್ಲದೆ ಇಲ್ಲ ಅಲ್ಲವೇ? ಇದೆ, ಹೌದು ತಾನೆ? ಅಂದಮೇಲೆ ನಿಮಗೇ ತಿಳಿದಿರಬೇಕಲ್ಲವೇ “ಈ ಜಗದ ನೆಲದಮೇಲೆ ನೀವು ಫ್ರಥಮರೋ ಅಥವಾ ನಾವೋ…!” ನಮ್ಮ ಪಕ್ಷಿಗಳ ಸಮಾಚಾರ ಬಂದಾಗ, ಹ್ಞಾ, ಇನ್ನೊಂದು ಮುಖ್ಯ ವಿಷಯ! ನೀವು ನಿಮ್ಮ ‘ಬೆಳೆ’ಯನ್ನೇ ವೃದ್ಧಿಪಡಿಸುವ ಕ್ರಾಂತಿಯಲ್ಲಿ, ಇಡೀ ಭೂಮಿಯನ್ನೇ ಒಂದಿಷ್ಟೂ ಜಾಗವಿರದ ಹಾಗೆ ತುಂಬಿಕೊಂಡರೂ ಕೂಡ, ನಮಗೇನೂ ಚಿಟಕಿಯಷ್ಟೂ ಚಿಂತೆಯಿರದು! ಆಗಲೂ ನೀವೇ ನೋಡುವಿರಿ: ನಮಗೆ ದಷ್ಟ ಪುಷ್ಟ ವೃಕ್ಷಗಳಿರುತ್ತವೆ ಗೂಡು ಕಟ್ಟಲು, ಅನಂತ ನೀಲಿ ನಭವಿರುತ್ತದೆ ಸ್ವಚ್ಛಂದದ ಹಾರಾಡಲು ಮತ್ತು ನಿರಂಬಳ ಉಸಿರಾಡಲು…ಆದರೆ.. . ನಿಮ್ಮ ಮುಂದಿನ ವಂಶಜರು ಈ ವಸುಂಧರೆಯ ಹವಾಮಾನದಲ್ಲಿ ಏರುಪೇರಾಗದ ಹಾಗೆ, ಇನ್ನೂ ಒಂದಿಷ್ಟು ಗಾಳಿ ಮುಂತಾಗಿ ಉಳಿಸಿದ್ದರೆ…ಮಾತ್ರ! ನಿಮ್ಮ ನಭೋಮಂಡಲವನೆ ಭೇದಿಸಿರುವ ತಿಳಿವಿಗೆ, ಕ್ಷುಲ್ಲಕ ಕಾಗೆ- ಯಂತಹ, ಕಗ್ಗತ್ತಲೆಯಲೂ ಕಾಣದ ಈ ಕರಿಜೀವಿಯ ಇಷ್ಟು ಸಣ್ಣ ಅಹವಾಲು ಸಾಕಲ್ಲವೇ, ಗ್ರಹಿಕೆಗೆ: ನೀವು ಪೂಜಿಸುವ ಭಗವಂತನ ಅನುಗ್ರಹದಿಂದಲಾದರೂ, ಭಾರವಾಗುವತ್ತ ನಡೆದಿರುವ ಈ ಭುವನದಲ್ಲಿ, ನಮ್ಮಂತಹ ಪ್ರಾಣಿ ಪಕ್ಷಿಗಳಿಗಾಗಿ ಕಿಂಚಿತ್ತಾದರೂ ಇರಲಿ ಜಾಗ…ಮತ್ತು ಕರುಣೆ… ********************************************************** .
ಅಂಕಣ ಬರಹ-01 ನಾಂದಿ ಪದ್ಯ ತೆಂಗಿನ ಮಡಲಿನಿಂದ ನೇಯ್ದ ತಟ್ಟಿ ಆ ಮನೆಯ ಹೊರ ಆವರಣದ ತಡೆ ಗೋಡೆ. ಮಣ್ಣಿನ ನೆಲಕ್ಕೆ ಮಣ್ಣಿನದ್ದೇ ಪರಿಮಳ. ಮಳೆಗಾಲದಲ್ಲಿ ಆ ಮನೆಯ ನೆಲವು ನೀರ ಒಸರಿಗೆ ಹಸಿ ಹಸಿಯಾಗುತ್ತದೆ. ಹೊರಗೆ ಧೋ ಎನ್ನುವ, ಹನಿಹನಿ ಟಪಟಪ ಹನಿಸಿ ಮರ್ಮರಿಸುವ, ಗುನುಗುವ, ಆರ್ಭಟಿಸುವ ಹಠಮಾರಿ ಮಳೆ. ಚಾಪೆಯಂತೆ ಹೆಣೆದ ಆ ತಟ್ಟಿಯನ್ನು ನನ್ನ ಪುಟ್ಟ ಬೆರಳಿನಲ್ಲಿ ಅಗಲಿಸಿ ಒಂದು ಕಣ್ಣನ್ನು ಆ ಖಾಲಿಗೆ ಹೊಂದಿಸಿ..ಇನ್ನೊಂದು ಕಣ್ಣ ಮುಚ್ಚಿ ಹೊರಗೆ ಸುಯ್ಯುತ್ತಿದ್ದ ಮಳೆಯೊಂದಿಗೆ ಮುಗ್ಧ ಮನಸ್ಸಿನ ಅವ್ಯಕ್ತ ಅನುಸಂಧಾನ ನಡೆಯುತ್ತಿತ್ತು. ಎದೆಗೆ ಹೊಯ್ಯತ್ತಿದ್ದ ಭಾವಗಳಿಗೆ ಅಕ್ಷರದ ರೂಪವಿಲ್ಲ. ಆದರೆ ಕಣ್ಣುಗಳಲ್ಲಿ ಚುಕ್ಕಿಗಳ ಹೊಳಪು. ಸ್ಪಷ್ಟವಾಗದ ಅವರ್ಣನೀಯ ಮಾತುಗಳು ಗಿರಕಿ ಹೊಡೆಯುತ್ತಿದ್ದವು. ಅದೇ ಭಾವವನ್ನು ಹೊತ್ತು ಮುಖ ತಿರುಗಿಸುತ್ತಿದ್ದೆ. ಮಗ್ಗದ ಸೀರೆ ಉಟ್ಟ, ಉದ್ದದ ಮೂಗುತಿ, ನತ್ತು ಮೂಗಿಗೇರಿಸಿಕೊಂಡು, ಹಣೆಯಲ್ಲಿ ದೊಡ್ಡದಾಗಿ ಹುಣ್ಣಿಮೆಯ ಚಂದ್ರನಂತ ಕುಂಕುಮ ತಂಪಾಗಿ ನಗುತ್ತಿದ್ದರೆ ..ಅದರದೇ ಬೆಳಕು ಹೊದ್ದಂತೆ ಕಣ್ಣು ಮುಖದಲ್ಲಿ ಮಿಂಚಿನಂತಹ ಬೆಳಕು ಹಾರಿಸಿ ಎದುರಿನ ಕೆಳತುಟಿ ಕಚ್ಚಿ ಕೂತ ಎರಡು ಹಲ್ಲು ಬಿಡುತ್ತಿದ್ದಳು ನನ್ನಜ್ಜಿ. ನಾನು ಮತ್ತೆ ಕಣ್ಣನ್ನು ಹೊರಗಿನ ಮಳೆಗೆ ಸಿಲುಕಿಸುತ್ತಿದ್ದೆ. “ಇನ್ನು ಸ್ವಲ್ಪ ದಿನ ಆಮೇಲೆ ಆಟ ಶುರು..ಈ ಮಳೆ ನಿಲ್ಲುತ್ತಲೇ ಒಂದೊಂದೇ ಮೇಳ ಹೊರಡಲು ಶುರುವಾಗುತ್ತದೆ”. ಒಂದೇ ನೆಗೆತಕ್ಕೆ ಆಕೆಯ ತೆಕ್ಕೆಗೆ ಜೋತು ಬೀಳುತ್ತಿದ್ದೆ. ಮಳೆಯ ಸದ್ದಿನಾಚೆ ಅದನ್ನೂ ಮೀರಿಸುವಂತೆ ಚಂಡೆಯ ಸದ್ದು ಕಿವಿಯೊಳಗೆ ಅನುರಣಿಸಿದಂತೆ ತೊನೆಯುತ್ತಿದ್ದೆ. ಬಣ್ಣಬಣ್ಣದ ವಸ್ತೃ, ಕಿರೀಟ. ಅಬ್ಬಾ!ಆ ಶಕರನ ಮುಖ, ತೆರೆದುಕೊಂಡ ಕಣ್ಣು. ಅದರ ಸುತ್ತ.ಬಣ್ಣದ ರೇಖೆಗಳು. ಅದು ರಾಕ್ಷಸ ವೇಷ. ಎದೆಯಲ್ಲಿ ಬಂದು ಕೂತ ಉರೂಟು ಭಯ..ಶಕಾರ ಎದ್ದ. ಹೋಓಓಓಒ…ಥೈ ಥೈಥೈ… “ಎಲ್ಲೀ…ಆ ವಶಂತ ಶೇನೆ” ದೇಹದೊಳಗೆ ತುಂಬಿಕೊಳ್ಳುವ ಅದು ಯಾವುದೋ ಆವೇಶ. ನಾಯಿ ಓಡಿಸಲು ಮೂಲೆಯಲ್ಲಿ ಕೂತ ಕೋಲು ಬಿಲ್ಲು ಬಾಣವಾಗಿ ಮನಸಿನೊಳಗಿನ ಆ ಪುರುಷಾಕೃತಿ ಮುಖಕ್ಕೆ ಕಟ್ಟಿದ ಕಂಗಿನ ಹಾಳೆಯ ತುಂಡಿನ ಮುಖವಾಡದಿಂದ ಅನಾವರಣಗೊಳ್ಳುತ್ತಿತ್ತು. ನನ್ನ ಪುಟ್ಟ ದೇಹವನ್ನು ತನ್ನ ಆಧೀನಕ್ಕೆ ತಂದು ಕುಣಿಸುತ್ತಿತ್ತು. “ಶಕರ” ಹೂಂಕರಿಸುತ್ತಿದ್ದ. “ಹ್ಹೇ…ವಶಂತಶೇನೆ..ಎಲ್ಲಿರುವೆ. ಬಂದೆ ನಾನು… “ ಕೇವಲ ಎರಡು ಹಲ್ಲಿನ ಬೊಜ್ಜುಬಾಯಿ ಅಗಲಿಸಿ ಈ ಸೂತ್ರಧಾರಿ ನನ್ನಜ್ಜಿ ನಗುತ್ತಿದ್ದಳು…ನಗು ನಗು.. ” ಅಬ್ಬಬ್ಬಾ..ಈ ಶಕರನ ಧಾಳಿ ತಡಕೊಳ್ಳುವುದು ಕಷ್ಟ. ಏ.. ನಿಲ್ಲಿಸು..ನಿನ್ನ ವಶಂತ..ಶೇನೆ ಬರುತ್ತಾಳೆ..ಇಲ್ಲದಿದ್ರೆ ಈಗ ಕೋಲು ಬರ್ತದೆ.” ಮತ್ತೆ ನಗು. ಆ ನಗುವಿನಿಂದ ಮತ್ತಷ್ಟು ಹುಮ್ಮಸ್ಸು ಏರಿ ತೆಂಗಿನ ಕಾಯಿಯ ತುದಿ ಸಿಪ್ಪೆ ಸಮೇತ ( ಅದು ವಸಂತಸೇನೆಯ ಮುಡಿ) ಹಿಡಿದು ಎಳೆತರುತ್ತಿದ್ದೆ. ಕುಣಿತ..ಸುತ್ತುಸುತ್ತಿ ಸುತ್ತಿ ಗಿರ್ ಗಿಟಿ ಹಾಕಿ ಒದ್ದೆ ನೆಲದಲ್ಲಿ ಕುಸಿಯುತ್ತಿದ್ದೆ. ನನ್ನೊಳಗೆ ಚಂಡೆಯ ಅಬ್ಬರ ಏರುತ್ತಲೇ ಇತ್ತು. ವಸಂತಸೇನೆ ಆರ್ತಳಾಗಿ ಅಜ್ಜಿಯತ್ತ ನೋಡುವಂತೆ ಭಾಸವಾಗುತ್ತಿತ್ತು. “ರಕ್ಷಿಸಿ..ಎಲ್ಲಿ ನನ್ನ ಚಾರುದತ್ತ..” “ತರ್ತೇನೆ ಈಗ ಕೋಲು..ನಿನ್ನ ಪಾಠ ಪುಸ್ತಕ ಎಲ್ಲುಂಟು. ಅದು ಚೀಲದಿಂದ ಹೊರ ಬರಲಿಕ್ಕೆ ಉಂಟಾ.. ಆಟದ ಸುದ್ದಿ ತೆಗೆದದ್ದೇ ದೊಡ್ಡ ತಪ್ಪಾಯ್ತು. ನೋಡ್ತೇನೆ ನಿನ್ನ ಮಾರ್ಕು.ಕುಂಡೆಗೆ ಬಿಸಿ ಬರೆ ಹಾಕಲಿಕ್ಕುಂಟು..ಆಮೇಲೆ ಶಕಾರ,ವಸಂತಸೇನೆ.” ಅವಳ ಜೋರು ಕಿವಿಯ ಬದಿಯಿಂದ ಹಾದುಹೋದರೆ ಒಳಗಿಳಿದು ಸದ್ದು ಮಾಡುವುದು ಯಕ್ಷಗಾನದ ಆ ಪಾತ್ರಗಳು. ಶುರುವಾಗುತ್ತಿತ್ತು. ಪುಟ್ಟ ಮನಸ್ಸಿನೊಳಗೆ ರಂಗಿನಾಟ..ಬಣ್ಣ ಗಾಢವಾಗುತ್ತಲೇ ಹೋಗುತ್ತಿತ್ತು. ಕಲ್ಪನಾಲೋಕದೊಳಗಿನ ಒಡ್ಡೋಲಗ. ರಾಜ, ರಾಣಿ ರಾಜಕುಮಾರ, ರಾಕ್ಷಸ ಅವತರಿಸಿ ನನ್ನಲ್ಲಿ ನಶೆ ಏರಿಸುತ್ತಿದ್ದ ಪರಿ. ಹನಿದ ಮಳೆ ಕ್ಷೀಣವಾಗುತ್ತಾ,ಆಗುತ್ತಾ, ಮಾಯಾ ಲೋಕದೆಡೆಗೆ ಸರಿದು ಹೋದರೆ..ಬಿಳಿಬಿಳಿ ಚಳಿ ಧರೆಗಿಳಿಯುತ್ತಿತ್ತು. ಪೆಟ್ಟಿಗೆ ಸೇರಿದ್ದ ಪುರಾಣದ ಪಾತ್ರಗಳ ರಂಗಸಜ್ಜಿಕೆ ಮೈ ಕೊಡವಿ ಎದ್ದು..ಮೇಳಗಳು ಸಂಚಾರಕ್ಕೆ ಹೊರಡುತ್ತಿದ್ದವು. ಇರುಳು ಕವಿಯುತ್ತಲೇ ಯುಗ ಬದಲಾಗಿ ತ್ರೇತಾ ,ದ್ವಾಪರ ತೆರೆದುಕೊಂಡು ರಾಮ,ಕೃಷ್ಣ ಎಲ್ಲರೂ ಧರೆಗಿಳಿಯುತ್ತಿದ್ದರು. ಅಜ್ಜಿಯ ಸೊಂಟದಲ್ಲಿ ಕೂತು ಆರಂಭವಾದ ನನ್ನ ಅವಳ ಈ ಯಕ್ಷಲೋಕದೆಡೆಗಿನ ಪಯಣ ಅವಳ ಕೈ ಹಿಡಿದು ನಾನು ನಡೆಸುವವರೆಗೂ ಸಾಗಿತ್ತು. ರಾತ್ರಿ ಬಯಲಾಟದ ವೀಕ್ಷಣೆ.. ಹಗಲಿಗೆ ಅರೆಮಂಪರಿನಲ್ಲಿ ಒಳಗಡೆಯ ಚಂಡೆಯ ಸದ್ದಿಗೆ ಸಿಕ್ಕಿದ ಕೋಲು ಹಿಡಿದು ಕುಣಿತ..ಅಮ್ಮನ ಹಳೆಯ ಸೀರೆ ತುಂಡು, ಸೋದರ ಮಾವನ ಲುಂಗಿಗಳು..ಒಡ್ಡೋಲಗದ ಪರದೆ, ಬಗೆಬಗೆಯ ವಸ್ತ್ರಗಳಾಗಿ ಕಲ್ಪನಾಲೋಕದ ಭ್ರಮರವು ಮನಸೋ ಇಚ್ಛೆ ಹಾರುತ್ತಲೇ ಇತ್ತು. ಶಾಲೆಗೆ ಹೋಗಿ ಕೂತರೂ ವೇಷ ಎದುರುಬಂದಂತೆ.. “ಬಂದಳು..ಚೆಲು..ವೆ ಚಿತ್ರಾಂಗದೆ.” ಅದೆಷ್ಟು ಹೊಸ ಹೊಸ ಪಾತ್ರಗಳು ಮನಃಪಟಲದಲ್ಲಿ ಅರಳಿ ನಾನೇ ಅದಾಗಿ ರೂಪುಗೊಳ್ಳುವ ಚೆಂದವೆಂತಹುದು…ಆಹಾ..ನನಗೋ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಹೊರತರಬೇಕಾದ ತುರ್ತು. ಪಕ್ಕದಲ್ಲಿ ಕೂತ ಗೆಳತಿಯರಿಗೆ ಸ್ಲೇಟಿನಲ್ಲಿ ಟೀಚರ್ ಕೊಟ್ಟ ಲೆಕ್ಕ ಬಿಡಿಸಿ, ಮಗ್ಗಿ ಬರೆದು ಆಮಿಷ ಹುಟ್ಟಿಸುತ್ತಿದ್ದೆ. ಆಮೇಲೆ ನಾನು ಕಥೆ ಹೇಳುವುದನ್ನು ನೀನು ಕೇಳಬೇಕು. ಮನೆಗೆ ಓಡಬಾರದು ಹೀಗೆ ಹಲವು ಒಳ ಒಪ್ಪಂದಗಳು. ಹೊಸ ಹೊಸ ಪಾತ್ರಗಳು ನನ್ನಲ್ಲಿ ಬಣ್ಣ ಹಚ್ಚಿಕೊಳ್ಳುತ್ತಿದ್ದವು. ರಾತ್ರಿ ಎದೆಗಿಳಿದ ಅವುಗಳ ಮಾತುಗಳು ಚೂರು ಪಾರು ಮಾರ್ಪಾಡು ಹೊಂದಿ ಬಣ್ಣದ ಚಿತ್ತಾರದ ಗ್ಲಾಸಿನಲ್ಲಿ ತುಂಬಿದ ಶರಭತ್ತಿನ ರುಚಿಯಂತೆ ವ್ಯಕ್ತವಾಗುತ್ತಿದ್ದವು. ಮತ್ತೆ ಆ ಪಾತ್ರಗಳಿಗೆ ಹೆಸರು ಹುಡುಕುವ ಪರದಾಟ. ಸೌದಾಮಿನಿ, ಧಾರಿಣಿ, ಮೈತ್ರೇಯಿ, ವೈದೇಹಿ..ಎಲ್ಲರೂ ಬಿಂಕ ಲಾಸ್ಯದಿಂದ ಗೆಜ್ಜೆ ಕಟ್ಟಿ ಮನೆ ಕದ ತೆರೆದು ಹೊರಗಡೆ ಹಾರುತ್ತಿದ್ದರು. ಅದೊಂದು ಅದ್ಭುತ ಲೋಕ. ಅರಿವಿನ ಜಗತ್ತು ಮೊಳಕೆಗೊಳ್ಳುವ ಮುನ್ನವೇ ಅಜ್ಜಿಯೆಂಬ ಅಚ್ಚರಿಯ ಮಾಂತ್ರಿಕಳು ನನ್ನೊಳಗೆ ಕಲ್ಪನೆಯ ಪ್ರಪಂಚ ತೆರೆದು ತೋರಿಸಿ ನನ್ನನ್ನು ಅಲ್ಲಿ ಕೂರಿಸಿದ್ದಳು. ತನ್ನ ಚಿರಿಟಿ ಹೋದಂತಹ ಸೊಂಟದಲ್ಲಿ ನನ್ನ ಕೂರಿಸಿ ಥಂಡಿ ಗಾಳಿಯ ಒರೆಸುತ್ತ ದೇವಾಲಯದ ಎದುರಿನ ಗದ್ದೆ, ಶಾಲೆಯ ಎದುರಿನ ಬಯಲು, ಯಾರದೋ ಮನೆಯಂಗಳದಲ್ಲಿ ನಡೆವ ಹರಕೆಯ ಬಯಲಾಟ ಒಂದನ್ನೂ ಬಿಡದೆ ರಾತ್ರಿ ತೆಂಗಿನೆಣ್ಣೆ, ಉಪ್ಪು ಬೆರೆಸಿದ ಕುಚುಲಕ್ಕಿ ಗಂಜಿ ಉಣಿಸಿ ಕಂಡೊಯ್ಯುತ್ತಿದ್ದಳು. ಅಲ್ಲೇ ಆ ಮಣ್ಣಿನ ನೆಲದಲ್ಲಿ ಕಣ್ಣು ಬಾಯಿ ಕಿವಿ,ಮೂಗು, ಮೈಯೆಲ್ಲ ಅರಳಿಸಿ ಕೂತು ಆಟ ನೋಡುತ್ತಿದ್ದೆ. ಈ ಜಗದ ತಂತು ಕಡಿದು ಅಲ್ಲೆಲ್ಲೋ ಸೇರಿದಂತೆ..ಎಂತಹ ವಿಸ್ಮಯ ಪ್ರಪಂಚವದು. ದೇವತೆಗಳು ಬರುತ್ತಿದ್ದರು. ಸುಂದರ ಉದ್ಯಾನವನ, ಅತಿ ಸುಂದರ ರಾಜಕುಮಾರಿ, ಆ ರಾಜ..ಈ ರಾಕ್ಷಸ.. ಮತ್ತೆ ಯುದ್ದ..ಆರ್ಭಟ. ಅತ್ಯಂತ ಮನೋಜ್ಞವಾಗಿ, ಚಾಕಚಕ್ಕತೆಯಿಂದ ,ಕೌಶಲ್ಯದ ಮಾತುಗಳ ಕೊಂಡಿಗಳು ಕ್ಕೋ ಕೊಟ್ಟಂತೆ,ಅರಳು ಅರಳಿದಂತೆ ಹರಡಿಕೊಳ್ಳುತ್ತಿದ್ದವು. ರಾಜಕುಮಾರಿಯ ಜೊತೆಗಿನ ಸಖಿಯಾಗಿ, ಆ ರಾಜಕುಮಾರಿಯೇ ನಾನಾಗಿ ಅಲೆದಾಟ,ನಗು,ಅಳು, ವಿರಹದ ಅರ್ಥವೇ ಇಣುಕದ ವಯಸ್ಸಿನಲ್ಲಿ ವಿರಹ ಶೃಂಗಾರ ಎಲ್ಲವೂ ತಣ್ಣಗೆ ಮುಗ್ಧ ಮನಸ್ಸಿನ ಒಳಗಿಳಿಯುತ್ತಿತ್ತು. ಆಗೆಲ್ಲ ರಾಮಾಯಣ, ಮಹಾಭಾರತದ ಕಥೆಗಳು ಹಾಗೂ ಅಲ್ಲಿ ಸಿಗುವ ಉಪಕಥೆಗಳು ಬಯಲಾಟದ ಪ್ರಸಂಗಗಳಾಗಿರುತ್ತಿದ್ದವು. ಭಕ್ತಿಪ್ರಧಾನ,ನೀತಿಭೋದಕ ಕಥೆಗಳು. ಇಂತಹ ಸಂದರ್ಭದಲ್ಲೇ ಆ ಪುಟ್ಟ ವಯಸ್ಸಿನಲ್ಲಿ ನೋಡಿದ ವಸಂತಸೇನೆ ಎಂಬ ಪ್ರಸಂಗ ಬಹಳ ಆಳಕ್ಕಿಳಿದು ನನ್ನ ಕುಣಿಸುತ್ತಿತ್ತು. ನಿಜವೆಂದರೆ ನಂತರದ ದಿನಗಳಲ್ಲಿ ಕಥೆ ಮಾಸಿದರೂ, ಅದರಲ್ಲಿ ಬರುವ ವಸಂತಸೇನೆಯ ಪ್ರೀತಿ ಹಾಗೂ ಖಳನಾಯಕ ಶಕರನ ಗಟ್ಟಿ ಸೀಳುಧ್ವನಿಯ ಮಾತು ಉಳಿದುಬಿಟ್ಟಿತು. ಶಕರ ಬಂದ ಎಂದರೆ ಹೆದರಿಬಿಡುತ್ತಿದ್ದೆ. ಮತ್ತೆ ನಾನೇ ಶಕರನಾಗಿ ಕುಣಿಕುಣಿದು.. ‘ಎಲ್ಲಿ ಆ ವಶಂತ ಶೇನೆ ‘ ಎನ್ನುತ ಅದೇ ಶೈಲಿಯಲ್ಲಿ ದೊಡ್ಡ ಹೆಜ್ಜೆ ಇರಿಸಿ ಸಂಭ್ರಮಿಸುತ್ತಿದ್ದೆ. ಹಗಲಲ್ಲಿ ಶಕರನಾಗಿ ಬದಲಾಗುವ ನಾನು ರಾತ್ರಿ ಊಟದ ಸಮಯ ಬಂದು ಶಕರ ಎಂದರೆ ಹೆದರಿ ಗಬಗಬ ಉಣ್ಣುತ್ತಿದ್ದೆ. ರಾತ್ರೆಯಾದರೆ ನಾನು ಥೇಟು ವಸಂತಸೇನೆ!. ರಂಗ ಏರುವ ಆಸೆ,ನಶೆ..ತೀರದ ಹುಚ್ಚಿಗೆ ಈ ಬಯಲಾಟಗಳೇ ಮೊದಲ ಸಜ್ಜಿಕೆ. ನಿಂತಲ್ಲಿ, ಕೂತಲ್ಲಿ ಶಕರ, ವಸಂತಸೇನೆ, ಶ್ವೇತಕುಮಾರ, ದ್ರೌಪದಿ, ದಮಯಂತಿ,..ಸಾಲು ಸಾಲು ಪಾತ್ರಗಳು ನನ್ನನ್ನು ಗಟ್ಟಿಯಾಗಿ ಆವರಿಸಿಕೊಳ್ಳತೊಡಗಿದವು. ಎಲ್ಲೋ ಒಂದಿನಿತು ಮರೆಗೆ ಹೋಗಲು ಯತ್ನಿಸಿದರೆ ಈ ಜಾದೂಗಾರಿಣಿ ಅಜ್ಜಿ ಮತ್ತೆ ಮತ್ತೆ ತುತ್ತು ಇಡುವಾಗ, ತಲೆಗೆ ನೀರು ಹೊಯ್ಯುವಾಗ, ಎಣ್ಣೆಯಿಟ್ಟು ಜಡೆ ಹೆಣೆಯುವಾಗ, ಬೇಸರದ ಕ್ಷಣಗಳಲ್ಲಿ ಮುದ್ದಿಸುವಾಗ ಕಥೆಯ ಮಾಲೆ ಹೊರತೆಗೆದು ಒಂದೊಂದಾಗಿ ಬಿಡಿಸುತ್ತಿದ್ದಳು. ಓಹ್..ಎಂತಹ ಶ್ರೀಮಂತ ದಿನಗಳವು. ಆ ದಿನಗಳು ನನ್ನ ನಾಟಕ ಬದುಕಿನ ಮೊದಲ ಪುಟಗಳು ಅನ್ನಲೇ,ಅಥವಾ ಮುನ್ನುಡಿ ಬರಹ ಅನ್ನಲೇ. ************************************************************************ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.







