ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಝಲ್

ಗಝಲ್ ರತ್ನರಾಯ ಮಲ್ಲ ಅಕ್ಕಸಾಲಿಗನಲ್ಲಿ ಕಾಲ್ಗೆಜ್ಜೆ ತಂದಿರುವೆನು ಪ್ರೀತಿಯಿಂದಬಲಗಾಲು ಮುಂದೆಯಿಡು ತೊಡಿಸುವೆನು ಪ್ರೀತಿಯಿಂದ ಮಯೂರವು ವಿಹರಿಸಿದಂತಾಗುತಿದೆ ಈ ಹೃದಯದಲ್ಲಿಹಂಸದ ನಡಿಗೆಯನು ಪ್ರೀತಿಸುತಿರುವೆನು ಪ್ರೀತಿಯಿಂದ ಹಕ್ಕಿಗಳ ಕಲರವವು ಆಲಂಗಿಸುತಿದೆ ಈ ಮೈ-ಮನಗಳನ್ನುಶಕುಂತಲೆಯ ನಾಟ್ಯದಿ ಮೈ ಮರೆತಿರುವೆನು ಪ್ರೀತಿಯಿಂದ ಗೆಜ್ಜೆ ಎದೆ ಬಡಿತದೊಂದಿಗೆ ಪ್ರೇಮ ರಾಗವ ನುಡಿಸುತಿದೆನಿದ್ದೆ ಮರೆತು ನಿನ್ನನ್ನೆ ಕನವರಿಸುತಿರುವೆನು ಪ್ರೀತಿಯಿಂದ ‘ಮಲ್ಲಿ’ ನಿನ್ನ ಹೆಜ್ಜೆಯಲ್ಲಿ ಗೆಜ್ಜೆಯನು ಹುಡುಕುತಿರುವನುನಿನ್ನ ಪಾದಗಳನ್ನು ಅಲಂಕರಿಸುತಿರುವೆನು ಪ್ರೀತಿಯಿಂದ **********************************

ಗಝಲ್ Read Post »

ಕಾವ್ಯಯಾನ

ಬಾಲ್ಯ

ಕವಿತೆ ಬಾಲ್ಯ ತಿಲಕ ನಾಗರಾಜ್ ಹಿರಿಯಡಕ ಅರೆ! ಎಷ್ಟು ಚೆನ್ನಾಗಿತ್ತಲ್ಲ?ಅಲ್ಲಿ ಯಾವ ನೋವಿನಹಂಗಿರಲಿಲ್ಲ….ಚಿಂತೆಗಳ ಬರೆಯಿರಲಿಲ್ಲಮುದವೀಯುತ್ತಿದ್ದವಲ್ಲಕಾಡು ಮೇಡುಗಳ ಅಲೆದಾಟಗದ್ದೆ ಬಯಲುಗಳ ಓಡಾಟ…ಲಗೋರಿ ಕಣ್ಣಾಮುಚ್ಚಾಲೆಚಿನ್ನಿದಾಂಡು ಉಯ್ಯಾಲೆಕ್ರಿಕೇಟು ಕುಂಟೆಬಿಲ್ಲೆಆಟಗಳಾಡಿ ರಾತ್ರಿಯಲ್ಲಿಕಾಲಿಗೆ ಚುಚ್ಚಿದ ಮುಳ್ಳುಗಳನೋವಿನ ಜೊತೆಹಿರಿಯರ ಬೈಗುಳದ ಜೋಗುಳಒಂದಷ್ಟು ಹಾಯಾದ ನಿದ್ದೆಮರವೇರಿ ಕೊಯ್ದಮಾವಿನ ಕಾಯಿಗಳಬಚ್ಚಿಟ್ಟು ಹಣ್ಣಾಗಿಸಿ ತಿಂದಸ್ವಾದ ನಾಲಗೆಯಲ್ಲಿ ಸದಾ ಅಮರಹಚ್ಚಿಟ್ಟ ಚಿಮಣಿ ದೀಪದಆಚೆಗೆ ಬೀಡಿ ಎಲೆಗಳ ಸುರುಳಿಸುತ್ತುತ್ತಿದ್ದ ಅಮ್ಮನ ಬೆರಳುಗಳುಈಚೆಗೆ ಪುಸ್ತಕಗಳ ಮೇಲೆಕಣ್ಣಾಡಿಸುತ್ತಿದ್ದ ನಾವುಗಳುಒಮ್ಮೊಮ್ಮೆ ಬೇಸರೆನಿಸಿದಾಗಪಠ್ಯ ಪುಸ್ತಕಗಳ ನಡುವೆಇರಿಸಿ ಓದುತ್ತಿದ್ದ ಕತೆ ಪುಸ್ತಕಗಳಮುಖಾಂತರ ಕಲ್ಪನಾ ಲೋಕದಲ್ಲಿಒಂದು ಸಣ್ಣ ವಿಹಾರ..ಮರೆಯಲಾಗದ್ದು, ಮರಳಿ ಬಾರದ್ದುಎಷ್ಟು ಚೆನ್ನಾಗಿತ್ತಲ್ಲ ಬಾಲ್ಯ? ***********************

ಬಾಲ್ಯ Read Post »

ಇತರೆ, ಲಹರಿ

ಪ್ರತಿಮೆಯೂ ಕನ್ನಡಿಯೂ..

ಸ್ವಗತ ಪ್ರತಿಮೆಯೂ ಕನ್ನಡಿಯೂ.. ಚಂದ್ರಪ್ರಭ.ಬಿ. ಪ್ರತಿಮೆಯೂ ಕನ್ನಡಿಯೂ “ತೋರಾ ಮನ ದರಪನ ಕೆಹಲಾಯೆಭಲೆ ಬುರೆ ಸಾರೆ ಕರಮೊಂ ಕೊ ದೇಖೆ ಔರ ದಿಖಾಯೆ..………….. ………… ……….. …………… ………… ಸುಖ ಕಿ ಕಲಿಯಾಂ ದುಃಖ ಕಿ ಕಾಟೇಂ ಮನ ಸಬ್ ಕಾ ಆಧಾರ / ಮನ ಸೆ ಕೋಯಿ ಬಾತ ಛುಪೆ ನಾ ಮನ ಕೆ ನೈನ ಹಜಾರ/ ಜಗ ಸೆ ಚಾಹೆ ಭಾಗ ಲೆ ಕೋಯಿ ಮನ ಸೆ ಭಾಗ ನ ಪಾಯೆ…..” “ಕಾಜಲ್” ಹಿಂದಿ ಸಿನಿಮಾ(೧೯೬೫) ದಲ್ಲಿ ಆಶಾ ಭೋಸ್ಲೆ ಹಾಡಿದ ಕೃಷ್ಣ ಭಜನೆ ಸಾಗುವುದು ಹೀಗೆ, ಸಾಹಿತ್ಯ ಸಾಹಿರ್ ಲುಧಿಯಾನ್ವಿ.ಮೀನಾಕುಮಾರಿ ಎಂಬ ಅಮರ ತಾರೆಯ ನಟನೆಯಲ್ಲಿ ಮೂಡಿ ಬಂದ ಅದ್ಭುತ..ಅಮರ ಗೀತೆ.‘ಮನುಜ ತನ್ನ ಮನಸ್ಸಿನಿಂದ ತಾನು ಓಡಿ ಹೋಗಲಾರ.. ಹೋಗಲಾಗದು’ ಎಂಬುದು ಕಟುವಾಸ್ತವ, ಮತ್ತದು ತುಂಬ ದೊಡ್ಡ ಸಂಗತಿ. ಚಲನಚಿತ್ರ ಗೀತೆಯೊಂದರಲ್ಲಿ ಇಂಥ ಲೋಕೋತ್ತರ ಸತ್ಯವನ್ನು ಹಿಡಿದಿಟ್ಟ ರೀತಿ ಕೂಡಾ ಅನನ್ಯ. ಕನ್ನಡದ ಸಂತ ಕವಿ ಸರ್ಪಭೂಷಣ ಶಿವಯೋಗಿ ಯ ಒಂದು ಜನಪ್ರಿಯ ತತ್ವ ಪದವೊಂದು ಇದನ್ನೇ ಇನ್ನೂ ವಿವರವಾಗಿ ಬಣ್ಣಿಸುತ್ತ ಸಾಗುತ್ತದೆ. “ಬಿಡು ಬಾಹ್ಯದೊಳು ಡಂಭವಮಾನಸದೊಳು ಎಡೆ ಬಿಡದಿರು ಶಂಭುವ/ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯಪಡೆದರೆ ಶಿವ ನಿನಗೊಲಿಯನು ಮರುಳೇ// ಜನಕಂಜಿ ನಡಕೊಂಡರೇನುಂಟು ಲೋಕದಿಮನಕಂಜಿ ನಡಕೊಂಬುದೇ ಚಂದ/ಜನರೇನು ಬಲ್ಲರು ಒಳಗಾಗೊ ಕೃತ್ಯವಮನವರಿಯದ ಕಳ್ಳತನವಿಲ್ಲವಲ್ಲ// ಮನದಲಿ ಶಿವ ತಾ ಮನೆ ಮಾಡಿಕೊಂಡಿಹಮನ ಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ/ಮನಕಂಜಿ ನಡೆಯದೆ ಜನಕಂಜಿ ನಡೆದರೆಮನದಾಣ್ಮ ಗುರುಸಿದ್ಧ ಮರೆಯಾಗೊನಲ್ಲ// ‘ಮುಖ ಮನಸ್ಸಿನ ಕನ್ನಡಿ’ ಇದು ಕನ್ನಡದ ಬಲು ಜನಪ್ರಿಯ ನುಡಿಗಟ್ಟು. ದೇಶ, ಭಾಷೆಗಳ ಹಂಗು ಮೀರಿ ಮುಖ, ಮನಸ್ಸು, ಕನ್ನಡಿ – ಈ ಮೂರೂ ಪದಗಳಿಗಿರುವ ನಂಟನ್ನು ಶೋಧಿಸತೊಡಗಿದರೆ ಬಹು ಆಯಾಮಗಳ, ಮಾನವೀಯ ನೆಲೆಗಟ್ಟಿನ ಅನುಪಮ ಸಂಗತಿಯೊಂದು ಪದರುಪದರಾಗಿ ಬಿಚ್ಚಿಕೊಳ್ಳತೊಡಗುತ್ತದೆ. ಮನದ ಕನ್ನಡಿಯಲ್ಲಿ ತನ್ನ ತಾ ನೋಡಿಕೊಳ್ಳಲು ಅರಿತ ಜೀವಿಯಲ್ಲಿ ಒಂದು ಎಚ್ಚರ, ಒಂದು ಪ್ರಜ್ಞೆ ಸದಾವಕಾಲವೂ ಮೌನವಾಗಿ ಅಷ್ಟೇ ಸಹಜವಾಗಿ ಮೊರೆಯುತ್ತಿರುತ್ತದೆ. ಕನ್ನಡಿಯೆದುರು ಪರದೆ ಎಳೆದಿರುವಲ್ಲಿ ಅವಲೋಕನಕ್ಕೆ ಅವಕಾಶವೆಲ್ಲಿ!? ವೈಯಕ್ತಿಕ ನೆಲೆಯಲ್ಲೇ ಆಗಿರಲಿ ಸಮುದಾಯದ ನೆಲೆಯಲ್ಲೇ ಆಗಿರಲಿ ಪಾರದರ್ಶಕತೆ ಬೀರುವ ಪ್ರಭಾವ ಗಮನಾರ್ಹ. ತತ್ಪರಿಣಾಮವಾಗಿ ಅದರಿಂದ ದೊರಕುವ ಅಂತಿಮ ಫಲಿತಾಂಶವೂ ಅಷ್ಟೇ ಪರಿಣಾಮಕಾರಿ. ಹೀಗಿದ್ದೂ ಪ್ರತಿ ದಿನದ ಪ್ರತಿ ಹೆಜ್ಜೆಯಲ್ಲಿ ಮುಖವಾಡಗಳನ್ನು ಬದಲಾಯಿಸುತ್ತಲೇ ಸಾಗುವುದು ತೀರ ಸಹಜ ಎನ್ನುವ ರೀತಿಯಲ್ಲಿ ಬದುಕು ಸಾಗುವುದು. ನಿಜಕ್ಕೂ ಇದು ವಿಸ್ಮಯದ ಸಂಗತಿ. ನೈಜೀರಿಯನ್ ಕವಿ ಗೇಬ್ರಿಯಲ್ ಒಕಾರ ತನ್ನ “ಒಂದಾನೊಂದು ಕಾಲದಲ್ಲಿ” ಕವಿತೆಯಲ್ಲಿ ಹೇಳುವಂತೆ ಮನೆ, ಆಫೀಸು, ಬೀದಿ, ಸಭೆ ಸಮಾರಂಭ – ಹೀಗೆ ಯಾವುದಕ್ಕೆ ಎಂಥದು ಸೂಕ್ತವೊ ಅಂಥದೊಂದು ಮುಖವಾಡ ಧರಿಸಿ ಮುಗುಳ್ನಗುವೊಂದರಲ್ಲಿ ಅದನ್ನು ಅದ್ದಿ ತೆಗೆದು ಕಾರ್ಯ ಸಾಧಿಸಿಬಿಡುವುದು ನಮಗೆಲ್ಲ ರೂಢಿಯಾಗಿಬಿಟ್ಟಿದೆ. ಹೀಗಾಗಿ ನೈಜವಾದ ನಮ್ಮ ಮೂಲ ಮುಖದ ಅಸ್ತಿತ್ವವೇ ಕಳೆದುಹೋಗುತ್ತಿದೆ. ಇದು ತುಂಬ ಅಪಾಯಕಾರಿ. ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಎಲ್ಲಾ ಬಗೆಯ ಅರಾಜಕತೆಗೂ ದಾರಿ ಮಾಡಿಕೊಡುವಂಥದು. ಯಾರನ್ನೊ ಮೆಚ್ಚಿಸುವುದಕ್ಕಾಗಿ ಅಲ್ಲ, ಯಾರಿಗೊ ವರದಿ ಒಪ್ಪಿಸುವುದಕಾಗಿ ಅಲ್ಲ. ತನ್ನ ಆತ್ಮಸಾಕ್ಷಿ ಎದುರು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಆತ್ಮಸಾಕ್ಷಿ ಎದುರು ಸ್ವತಃ ಕುಬ್ಜನಾಗದಿರಲು ಮನದ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಸಾಗುವ ಅಗತ್ಯ ಮನಸ್ಸನ್ನು ಎಡೆಬಿಡದೆ ಸತಾಯಿಸಿದಲ್ಲಿ ಸ್ವಾಸ್ಥ್ಯ ತಂತಾನೇ ಪಸರಿಸತೊಡಗುತ್ತದೆ. ಇದು ಆಮೆ ಗತಿಯಲ್ಲಿ ಸಂಭವಿಸುವ ಬಲು ನಿಧಾನವಾದ ಪ್ರಕ್ರಿಯೆ. ವ್ಯಕ್ತಿಯಿಂದ ಸಮಷ್ಟಿ ವರೆಗೆ ಸಾಗುವ ಸುದೀರ್ಘ ಪಯಣ. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆಯಲ್ಲವೇ! ************************************

ಪ್ರತಿಮೆಯೂ ಕನ್ನಡಿಯೂ.. Read Post »

ಕಾವ್ಯಯಾನ

ಆಹುತಿ

ಕವಿತೆ ಆಹುತಿ ಅನಿಲ ಕಾಮತ ದೇಹ ಹಿಂಡಿಹಿಪ್ಪೆಯಾಗಿಸಿದೆಕಾರಿನಲ್ಲಿ ಬಸ್ಸಿನಲ್ಲಿಹಗಲಲ್ಲಿ ನಸುಕಿನಲ್ಲಿಕಾನನದಲ್ಲಿನೀರವ ಅಹನಿಯಲ್ಲಿ ಬೆಳಕು ಸೀಳುವ ಮುನ್ನಬ್ರೇಕಿಂಗ್ ನ್ಯೂಸ್‌ಗಳಿಗೆಆಹಾರಭುವನ ಸುಂದರಿಸ್ಪರ್ಧೆಯಲ್ಲಿದೇಹ ಸೌಂದರ್ಯದ ಬಗ್ಗೆತೀರ್ಪುಗಾರರತಾರೀಪು ಹೆಣ್ಣು ಭ್ರೂಣಪತ್ತೆ ಮಾಡುವತವಕದಲ್ಲಿಸ್ಕೆನ್ನಿಂಗ್ಮಿಷನ್ ಗಳಿಗೆಪುರುಸೊತ್ತಿಲ್ಲ ನದಿಯ ತಟದಲ್ಲಿರೇಲ್ವೆ ಸೇತುವೆಯಕೆಳಗೆಅರೆಬೆಂದ ಶವವಾಗಿಖಾಕಿಗಳಿಗೆ ಮಹಜರುಮಾಡಲು…. ****************

ಆಹುತಿ Read Post »

ಇತರೆ, ಜೀವನ

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ

ಅನುಭವ ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ ಮಮತಾ ಅರಸೀಕೆರೆ ಬಯಸಿ ಬಂದದ್ದಲ್ಲ. ಹಂಬಲಿಸಿ ಪಡೆದದ್ದಲ್ಲ. ಒಂದು ಬಗೆಯ ಓರೆ ನೋಟದ ಕಸಿವಿಸಿಯ ಬಿಗುವಿನೊಡನೆ ಅನಿಚ್ಛಾಪೂರ್ವಕವಾಗಿ ಇಲಾಖೆಗೆ ಕಾಲಿಟ್ಟದ್ದು. ನಂತರ ಜರುಗಿದ್ದು ಬರೋಬ್ಬರಿ ಇಪ್ಪತ್ತು ವರ್ಷಗಳ ಅನಿಯಮಿತ ಅಡೆತಡೆಯಿಲ್ಲದ ಪ್ರಯಾಣ. ಇದೇ ಅಕ್ಟೋಬರ್ ೨೫ ಕ್ಕೆ ನಾನು ಶಿಕ್ಷಣ ಇಲಾಖೆಯ ಸದಸ್ಯಳಾಗಿ ಎರಡು ದಶಕಗಳೇ ಆಗುತ್ತಿದೆ. ನನ್ನಮ್ಮ ಕೂಡ ಇದೇ ಇಲಾಖೆಯಲ್ಲಿದ್ದವರು.ಅಪ್ಪ ಅಂಚೆ ಇಲಾಖೆ ಉದ್ಯೋಗಿ.ಅದೇಕೋ ತನ್ನ ಇಲಾಖೆ ಬಗ್ಗೆ ಅಸಡ್ಡೆಯಿದ್ದಬಅಪ್ಪನ ಉದ್ಯೋಗಕ್ಕಿಂತ ಸುಲಭವಾಗಿ ಸರಳವಾಗಿ ನಿರ್ವಹಿಸಬಹುದಾದ ಶಿಕ್ಷಕ ವೃತ್ತಿಯನ್ನೇ ನಾನೂ ಪಡೆಯಲಿ ಅಂತ ಅಮ್ಮ ಹಂಬಲಿಸಿದ್ದು ಅದರಂತೆಯೇ ಆದದ್ದು ಈಗ ಭೂತಕಾಲ. ಇಬ್ಬರಿಗೂ ದೊಡ್ಡ ದೊಡ್ಡ ಆಸೆ ಹಂಬಲಗಳಿಲ್ಲ. ಆದರೆ ನನ್ನ ಆಲೋಚನೆ ಸರಳವಾಗಿರಲಿಲ್ಲ. ಪೂರ್ಣವಾಗಿ ಗ್ರಾಮೀಣ ಪ್ರದೇಶದಲ್ಲಿಯೇ ಓದಿದ ನನಗೆ ಯಾರೂ ಮಾರ್ಗದರ್ಶಕರಿಲ್ಲದ್ದು, ಮುಂದಿನ ಹಂತದ ವಿದ್ಯೆ, ಉದ್ಯೋಗಗಳ ಪರಿಚಯವಿಲ್ಲದ್ದು ಹಿನ್ನಡೆ. ಸಣ್ಣಪುಟ್ಟ ಅವಕಾಶದಲ್ಲಿಯೇ ತುಂಬಾ ಪುಸ್ತಕಗಳನ್ನು ಓದುತ್ತಿದ್ದ ನನಗೆ ಪ್ರಾಥಮಿಕ ಪ್ರೌಢ ಹಂತ ಮುಗಿಯುತ್ತಿದ್ದಂತೆ ಶಿಕ್ಷಣ ಕ್ಷೇತ್ರ ಬೇಡವೆನಿಸತೊಡಗಿ ಬೇರೆ ಬೇರೆ ಸಾಧ್ಯತೆಗಳ ಕ್ಷೀಣ ಪರಿಚಯವಾಗತೊಡಗಿತ್ತು. ಶತಾಯ ನಿರಾಕರಿಸಿದರೂ ಮನೆಯ ಬಲವಂತಕ್ಕೆ ಕಡೆಗೂ ತರಬೇತಿಗೆ ಸೇರಿದ ಎರಡು ವರ್ಷಗಳು ಪಟ್ಟ ಹಿಂಸೆ ಮತ್ತು ಅಲ್ಲಿನ ಪರಿಸರ, ಸ್ನೇಹಿತರ ಒಲವಿನ ದಿನಗಳು ನನ್ನ ಮೇಲೆ ಅಧ್ಯಾಪಕರ ಕರುಣೆ, ಮೆಚ್ಚುಗೆ ಪ್ರೋತ್ಸಾಹ ಎಲ್ಲವೂ ನೆನಪಿನಲ್ಲಿವೆ. ಸದಾ ಚಡಪಡಿಸುತ್ತಿದ್ದ ನನ್ನ ಅಳಲಾಟವನ್ನು ಮನೆಯವರು ಕೇಳಿಸಿಕೊಳ್ಳದಿದ್ದರೂ ನನ್ನ ಅಧ್ಯಾಪಕರೂ ಸಹಿಸಿದ್ದು ಈಗಲೂ ಸೋಜಿಗ ನನಗೆ. ಶಿಕ್ಷಕ ವೃತ್ತಿ ಬೇಡವೆನಿಸದಿರಲೂ ಕಾರಣವಿತ್ತು. ಶೈಕ್ಷಣಿಕ ಸಾಮಾನ್ಯಜ್ಞಾನವನ್ನ  ಗಳಿಸಲು ತುಂಬಾ ಪ್ರಯತ್ನ ಪಡುತ್ತಿದ್ದ ನನಗೆ ಯಾವುದೇ ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಯಾವತ್ತೂ ಪ್ರಥಮ ಸ್ಥಾನ. ಸ್ಥಳೀಯ, ಜಿಲ್ಲೆ, ರಾಜ್ಯ ಮಟ್ಟದ ಬಹಳಷ್ಟು ಸ್ಪರ್ಧೆಗಳಲ್ಲಿ ಬಹುಮಾನಗಳನ್ನ ಗಿಟ್ಟಿಸಿದ್ದರಿಂದಲೂ ತುಂಬಾ ಓದುತ್ತಿದ್ದುದರಿಂದಲೂ ಕೆ.ಎ.ಎಸ್‌ ಅಥವಾಐ.ಎ.ಎಸ್. ಮಾಡಬೇಕೆಂಬ ಹುಚ್ಚು ಹತ್ತಿತ್ತು. ಅದಾವುದೂ ಸಾಧ್ಯವಾಗದೇ ಖಿನ್ನತೆಗೆ ಬಿದ್ದೆ.ಖಿನ್ನತೆಯ ಪರ್ವ ಆರಂಭವಾದದ್ದು ಅಲ್ಲಿಂದಲೇ.ಕೆಲಸ ಸಿಕ್ಕ ಮೇಲೆ ಒಂದೆರಡು ಸಲ ಕೆ.ಎ.ಎಸ್. ಪರೀಕ್ಷೆ ಬರೆದು ಒಮ್ಮೆ ಮಾತ್ರ ಪ್ರಿಲಿಮಿನರಿಯಲ್ಲಿ ಯಶಸ್ವಿಯಾಗಿ ನಂತರ ಸಾಧ್ಯವಾಗದೇ ಪ್ರಯತ್ನವನ್ನೇ ಬಿಟ್ಟುಬಿಟ್ಟೆ. ಉದ್ಯೋಗವದಕ್ಕಿದ ಆಲಸ್ಯ ಜೊತೆಗೆತಿ ರುಗಾಟ, ಸಂಘಟನೆಯ ರುಚಿಯೂ ಕಾರಣ. ಇಷ್ಟವಿಲ್ಲದೇ ಬಹಳವೆಂದರೆ ಬಹಳ ಚಿಕ್ಕ ವಯಸ್ಸಿನಲ್ಲೇ ಉದ್ಯೋಗ ಹಿಡಿದು ನಂತರ ಓದುವುದು ಮುಂದುವರೆಸಿ ಬಿ.ಎ.  ಬಿ.ಎಡ್. ಎಂ.ಎ. ಮಾಡುವ ವೇಳೆಗೆ ಓದುವುದು ಸಾಕೆನಿಸಿತ್ತು.ರಂಗಭೂಮಿ, ಸಾಹಿತ್ಯ, ವಿಜ್ಞಾನ ಪರಿಷತ್ ಗೀಳು ಹಿಡಿದಿತ್ತು. ಒಂದಂತೂ ನಿಜ ನನ್ನ ಬೇರೆ ಬೇರೆ ಚಟುವಟಿಕೆಗೆ ನನ್ನ ಉದ್ಯೋಗ ಆತ್ಮವಿಶ್ವಾಸದ ದೀವಿಗೆ ಹಿಡಿದಿತ್ತು.ಸ್ವಾವಲಂಬನೆ ಬದುಕಿಗೆ ದಾರಿಯಾಗಿಯೂ, ಮನೆಯ ಆರ್ಥಿಕತೆಗೆ ಸಹಕಾರಿಯಾಗಿಯೂ ಒದಗಿಬಂತು. ಸತತ ೧೫ ಕ್ಕೂ ಹೆಚ್ಚು ವರ್ಷ ನನ್ನ ಓಡಾಟ, ರಂಗಭೂಮಿ ಚಟುವಟಿಕೆ, ಮೊದಲ ಬಾರಿಗೆ ಒಂದು ತಿಂಗಳು ರಜೆ ಪಡೆದು ನಾಟಕದಲ್ಲಿ ಅಭಿನಯಿಸಿದ್ದು, ಆ ಮೂಲಕ  ಶಿಕ್ಷಣದಲ್ಲಿ ರಂಗಕಲೆಯೆಂಬ ಎನ್.ಎಸ್.ಡಿ.ಯ ಮೂರು ತಿಂಗಳ ತರಬೇತಿ, ನಾಟಕ ನಿರ್ಮಾಣ, ಅಭಿನಯ, ಕಾಲೇಜುಗಳಲ್ಲಿ ಸತತವಾಗಿ ಸೆಮಿನಾರ್‌ಗಳು, ವಿಜ್ಞಾನ ಜಾಥಾಗಳು ಮೊದಲಾದ ಕ್ರಿಯಾತ್ಮಕತೆಗೆ ರಹದಾರಿಯೂ ಆಯಿತು.ಸುಮಾರು ಮೂರು ನಾಲ್ಕು ಬಾರಿ ಕರ್ನಾಟಕ ಸುತ್ತಿದ ಓಡಾಟದ ಹುಚ್ಚನ್ನ ಬೆಂಬಲಿಸಿದ್ದು ಇದೇ ಉದ್ಯೋಗ.ಯಾವುದೇ ಕೆಲಸಕ್ಕೂ ದಿಟ್ಟತನದಿಂದ ಮುನ್ನುಗ್ಗುವ ಪ್ರಕ್ರಿಯೆಯಿಂದ ಆರ್ಥಿಕ ಸ್ವಾವಲಂಬನೆ ಹೆಣ್ಣುಮಕ್ಕಳಿಗೆ ಅದೆಷ್ಟು ಮುಖ್ಯವೆಂಬುದನ್ನೂ ತಿಳಿಸಿಕೊಟ್ಟಿತ್ತು. ಇನ್ನು ನನ್ನ ನೌಕರಿಯ ಸ್ವರೂಪ ಸಹಜವಾಗಿ ವಯಸ್ಸಿನಲ್ಲಿ ಚಿಕ್ಕ ಮಕ್ಕಳೊಂದಿಗೆ ಒಡನಾಡುವುದು.ಅಷ್ಟೊತ್ತಿಗಾಗಲೇ ಈ ಹುದ್ದೆಗೂ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಜಿಲ್ಲೆಗೆ ಆರನೇ ಸ್ಥಾನ ಪಡೆದು ಶಾಲೆಯೊಂದನ್ನು ಆರಿಸಿಕೊಂಡು ತಾಲೂಕು ಕೇಂದ್ರದಿಂದ ೫ ಕಿ.ಮೀ. ಇದ್ದ ನಾಗತೀಹಳ್ಳಿ ಎಂಬ ಆ ಗ್ರಾಮವನ್ನು ತಲುಪಿದಾಗ ನಿಜಕ್ಕೂ ಖುಷಿಯಾಗಿತ್ತು.ಒಂದಿಷ್ಟು ಒಳ ಪ್ರದೇಶ, ಸುತ್ತ ತೋಟ, ಹಸಿರಿನ ನಡುವಿನ ಹೆಂಚಿನದಾದರೂ ಸುಸಜ್ಜಿತ ಕಟ್ಟಡ.ಸೊಗಸೋ ಸೊಗಸು. ಮತ್ತು ಆ ಕಾಲಕ್ಕೆ ಆಧುನಿಕವೇ ಆಗಿದ್ದಂತಹ ಶಾಲೆಯದು ಸ್ಥಾಪನೆಯಾಗಿ ಸರಿಯಾಗಿ ೫೦ ವರ್ಷವಾಗಿತ್ತು.ಆಶ್ಚರ್ಯವೆಂದರೆ ಆ ಶಾಲೆಯಲ್ಲಿ ಎಲ್ಲಾ ಬಗೆಯ ಸೌಲಭ್ಯಗಳಿದ್ದವು. ಮೂರು ಕೊಠಡಿಗಳು, ಅಡುಗೆಮನೆ, ಶೌಚಾಲಯ, ಆಟದ ಮೈದಾನ, ಪೀಠೋಪಕರಣ, ನೀರಿನ ವ್ಯವಸ್ಥೆ, ಕಲಿಕೋಪಕರಣಗಳು, ಸಂಗೀತೋಪಕರಣಗಳು, ಆಟದ ಸಾಮಗ್ರಿಗಳು, ಮತ್ತೂ ವಿಸ್ಮಯವೆಂದರೆ ವಿಜ್ಞಾನದ ಉಪಕರಣಗಳು ಇದ್ದವು..ಉದಾ. ಟೆಲಿಸ್ಕೋಪ್, ಮೈಕ್ರೋಸ್ಕೋಪ್, ಪ್ರಯೋಗಾಲಯದಲ್ಲಿ ಉಪಯೋಗಿಸುವ ಸಾಮಗ್ರಿಗಳು, ಎಲ್ಲವೂ..ಏನುಂಟು ಏನಿಲ್ಲ.. ಅದು ಗ್ರಾಮವಾದರೂ ಇಡೀ ಗ್ರಾಮ ಒಂದೇ ಜನಾಂಗದವರು ಮತ್ತು ಎಲ್ಲರೂ ವಿದ್ಯಾವಂತರು, ಆರ್ಥಿಕವಾಗಿ ಸಬಲರು.ಅಷ್ಟರಲ್ಲಾಗಲೇ ಅಲ್ಲಿಗೂ “ಕಾನ್ವೆಂಟ್ ಶಿಕ್ಷಣದ ಬಿಸಿಗಾಳಿ ಸೋಕಿತ್ತು. ಕೆಲವರು ಇಂಗ್ಲೀಷ್ ಮಾಧ್ಯಮ ಆರಿಸಿಕೊಂಡು ಸಮೀಪದ ಆಂಗ್ಲ ಮಾಧ್ಯಮ ಶಾಲೆಗೆ ಆಟೋಗಳಲ್ಲಿ ಓಡಾಡುತ್ತಿದ್ದರೆ ಅಷ್ಟೇ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗೂ ಬರುತ್ತಿದ್ದರು.ಸ್ವಚ್ಛವಾಗಿ, ಮುದ್ದಾಗಿ ಕಾಣುತ್ತಿದ್ದ ಬುದ್ದಿವಂತ ಮಕ್ಕಳವರು.ವೈವಿಧ್ಯ ಆಚರಣೆಗಳೂ ಆ ಗ್ರಾಮದಲ್ಲಿದ್ದವು. ವರ್ಷಕ್ಕೊಮ್ಮೆಕೆಂಡ ತುಳಿಯುವ ಅದ್ದೂರಿ ಜಾತ್ರೆ, ಹುಣ್ಣಿಮೆ ಅಮಾವಾಸ್ಯೆಗೆ ಕಟ್ಲೆಗಳು, ಮಾದೇಶ್ವರ ಮೊದಲಾದವು.ಶ್ರಾವಣದಲ್ಲಿ ಪ್ರತಿ ಸೋಮವಾರ ಮನೆಮನೆಗೆ ಹೋಗಿ ಕಂತೆಭಿಕ್ಷೆ ಎತ್ತಿ ಒಟ್ಟಿಗೆ ಊಟ ಮಾಡುವುದು ಮತ್ತು ಆ ಸಮಯದಲ್ಲಿ ಯಾವುದೇ ಅನ್ಯಜಾತಿಯವರಿಗೆ ಊರಿನೊಳಗೆ ಪ್ರವೇಶವಿಲ್ಲ. ಮರುಳಸಿದ್ದೇಶ್ವರ ಗ್ರಾಮದೇವರಾದ್ದರಿಂದ ಅನ್ಯರ ಪ್ರವೇಶ ನಿಷಿದ್ಧ.ಊರಿನೊಳಗೆ ಮಾಂಸ, ಮದ್ಯ ಕೂಡ ತರುವಂತಿರಲಿಲ್ಲ ಮಾತ್ರವಲ್ಲ ಸೇವಿಸಿಯೂ ಬರುವಂತಿರಲಿಲ್ಲ.ನಮ್ಮಲ್ಲಿದ್ದ ಒಬ್ಬ ಮುಸ್ಲಿಂ ಮೇಷ್ಟಿಗೆ ಆ ದಿನ ಅಲಿಖಿತ ರಜೆ. ಮಾದೇಶ್ವರ ಹಾಗೂ ಕಟ್ಲೆಗಳಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಹೀಗೆ ಸಣ್ಣಪುಟ್ಟ ನಿರ್ಬಂಧಗಳಿದ್ದ ಊರದು.ಮುಖ್ಯವಾಗಿ ಆ ಊರಿನ ಮಂದಿ ವೀರಗಾಸೆಯಲ್ಲಿ ಪರಿಣತರು. ಕಾರ್ಯಕ್ರಮಗಳಿಗಾಗಿ ದೇಶ ವಿದೇಶ ಸುತ್ತಿದ್ದರು.ಈ ಎಲ್ಲವನ್ನೂ ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಲು ಕಲಿಯಲು ಸಾಧ್ಯವಾಯಿತು. ಒಂದಿಷ್ಟು ಮುನಿಸಿನಲ್ಲಿಯೇ ನವಂಬರ್ ೧ ರಂದು ಹುದ್ದೆ ಸ್ವೀಕರಿಸಲು ತೆರಳಿದೆ.ಅಲ್ಲಿನ ವಾತಾವರಣಕಂಡು ಮನಸ್ಸಾಗಲೇ ಅರಳಿತ್ತು.ಅಮ್ಮನ ಶ್ರಮದ ಫಲ ಈ ನೌಕರಿ.ಅವರಿಗಂತೂ ಹಿಗ್ಗು. ಆ ದಿನ ಅವರೂ ಜೊತೆಗಿದ್ದರು.ಅಕ್ಟೋಬರ್ ೨೫ ರಂದು ಆದೇಶ ಸ್ವೀಕರಿಸಿದರೂ ೫ ದಿನಗಳ ತರಬೇತಿ ಮುಗಿಸಿ ಶಾಲೆಗೆ ಪಾದವಿಟ್ಟದ್ದು ನವಂಬರ್ ೧ ನೇ ತಾರೀಕು.ಏಳನೇ ತರಗತಿಯವರೆಗೆ, ನಾಲ್ಕು ಮಂದಿ ಶಿಕ್ಷಕರಿದ್ದ ಶಾಲೆ. ವಿದ್ಯಾರ್ಥಿಗಳ ಸಂಖ್ಯೆಯೂ ಪರವಾಗಿಲ್ಲ ಎನ್ನುವಷ್ಟು.ಏಳನೇ ತರಗತಿಯವರಂತೂ ನನ್ನ ಎತ್ತರವೇ ಇದ್ದರು.ನಂತರ ಗೆಳೆಯರಾದರು.ಸಹೋದ್ಯೋಗಿಗಳ ಸಹಕಾರವಂತೂ ಬಹಳ ಸ್ಮರಣೀಯ.ಪರಸ್ಪರ ಸಹಕಾರ.ಪ್ರಬುದ್ಧ ನಡೆ, ಏನೇ ಕೆಲಸ ಮಾಡಬೇಕಿದ್ದರೂ ಮಾತನಾಡಿಕೊಂಡು ಆಚರಣೆಗೆ ತರುವುದು, ಸುಖ-ದುಃಖಗಳಲ್ಲಿ ಪಾಲ್ಗೊಳ್ಳುವಿಕೆ ಮೊದಲಾದ ಸ್ನೇಹ ಸೌಹಾರ್ದತೆಯಿತ್ತು.ಊರಿನ ಮಂದಿಯೂ ಅಷ್ಟೆ,  ಆ ಊರಲ್ಲಿದ್ದಷ್ಟೂ ದಿನ ಸಂಪರ್ಕ-ಸಹಕಾರಕ್ಕೇನೂ ಕೊರತೆಯಿರಲಿಲ್ಲ. ಬರೋಬ್ಬರಿ ೧೯ ವರ್ಷಗಳು ಒಂದೇ ಶಾಲೆಯಲ್ಲಿ ಸೇವೆ ನಿರ್ವಹಿಸಿದರೂ ಒಂದೇ ಒಂದು ಕಪ್ಪುಚುಕ್ಕಿಯಿಲ್ಲದೇ ಕೆಲಸ ಮಾಡಿದೆ. ಇವತ್ತಿಗೂ ಅಲ್ಲಿನ ಮನೆಮಗಳು ನಾನು.೧೫೦ ಮನೆಗಳಿರುವ ಗ್ರಾಮದಲ್ಲಿ ಯಾರ ಮನೆಗೆ ಕಾಲಿಟ್ಟರೂ ಆತಿಥ್ಯಕ್ಕೇನೂ ಬರವಿಲ್ಲ. ಕಾಲಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಇಬ್ಬರು ಶಿಕ್ಷಕರಾಗಿ ತರಗತಿಗಳೂ ಕಡಿಮೆಯಾದವು.ಊರೊಳಗೆ ನಾಲ್ಕೈದು “ಕಾನ್ವೆಂಟ್” ಬಸ್ಸುಗಳು ಕಾಲಿಟ್ಟವು. ನಾವು ಏನೇ ಆಶ್ವಾಸನೆಕೊಟ್ಟರೂ ಪೋಷಕರ ಅಕ್ಕ ಪಕ್ಕದ ಮನೆಗಳ ಮಕ್ಕಳೊಡನೆ  ಹೋಲಿಕೆ ಪ್ರಾರಂಭವಾಗಿ ನಮ್ಮ ಮಕ್ಕಳೆಲ್ಲರೂ ಆಂಗ್ಲಮಾಧ್ಯಮ ಆರಿಸಿಕೊಂಡು ಸರ್ಕಾರಿ ಶಾಲೆಯ ಕೊಠಡಿಗಳಿಗೆ ಬೀಗ ಹಾಕಿಸಿಯಾಯಿತು. ಅದಕ್ಕೂ ಮೊದಲು ಅಲ್ಲಿನ ಕರ್ತವ್ಯದ ಅವಧಿ ನಿಜಕಕೂ ಮರೆಯಲಾರದಂತದ್ದು.ವಿದ್ಯಾರ್ಥಿಗಳೊಂದಿಗೆ ಸಾಕಷ್ಟು ಪ್ರಯೋಗ ಮಾಡಿದೆ.ಪಠ್ಯಕ್ರಮವಲ್ಲದೇ ಬೇರೆ ಬೇರೆ ವಿಷಯಗಳನ್ನು ತಿಳಿಸಿ ಹೇಳುತ್ತಿದ್ದುದೇ ಹೆಚ್ಚು.ನನ್ನ ವಿಜ್ಞಾನ,ರಂಗಭೂಮಿಯ ಸಂಪರ್ಕ ಬಳಸಿಕೊಂಡು ಸಾಕಷ್ಟು ಕೆಲಸ ಮಾಡಿದೆ.ಪಠ್ಯಗಳನ್ನೆಲ್ಲ ರಂಗಕಲೆಯ ಮೂಲಕವೇ ಬೋಧನೆ ಮಾಡುತ್ತಿದ್ದುದು.ವಿಜ್ಞಾನ ಯೋಜನೆಗಳನ್ನು ತಯಾರಿಸಿಕೊಂಡು ಮಕ್ಕಳು ಬೇರೆ ಬೇರೆ ಕಡೆ ಪ್ರದರ್ಶನ ಕೊಟ್ಟವು. ವಿಜ್ಞಾನ ನಾಟಕಗಳನ್ನು ಮಾಡಿಸಿದೆ. ಪಠ್ಯೇತರ ಪರೀಕ್ಷೆಗಳನ್ನು ಕಟ್ಟಿಸಿದೆ.ಶಾಲೆಯಲ್ಲಿದ್ದ ವಿಜ್ಞಾನದ ಸಾಮಗ್ರಿಗಳನ್ನು ಬಳಸಿ ಪ್ರಯೋಗಗಳನ್ನು ಕೈಗೊಂಡೆವು.ಆಟದ ವಸ್ತುಗಳು, ಸಂಗೀತೋಪಕರಣಗಳು, ಗಣಿತ ಕಿಟ್‌ಗಳನ್ನು ಸಮರ್ಥವಾಗಿ ಬಳಸಿದೆವು.ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ಸತತವಾಗಿ ೫-೬ ವರ್ಷ ಬಹುಮಾನ ಗಳಿಸಿದರು.ಪ್ರತಿಭಾಕಾರಂಜಿಯಲ್ಲಿ ಪ್ರಶಂಸೆ ಗಿಟ್ಟಿಸಿದರು.ವಾರಕ್ಕೊಮ್ಮೆ ಪರಿಸರದೆಡೆಗೆ ಯಾತ್ರೆ ಸಾಗುತ್ತಿತ್ತು.ಅನೇಕ ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳೇ ಬೆಳೆಸಿದರು. ವಿಜ್ಞಾನ ಪರಿಷತ್ ಸಹಯೋಗದಲ್ಲಿ ಶಾಲೆಯ ಪಕ್ಕದಲ್ಲಿದ್ದ ಬಯಲಿನಲ್ಲಿ ನೂರಾರುಗಿಡ ನೆಟ್ಟೆವು. ಕೈತೋಟ ಮಾಡಿದೆವು.ಜನಗಳಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆವು.ಮಕ್ಕಳೊಂದಿಗೆ ಸಿನೆಮಾ ನೋಡಿದೆವು.ಪಿಕ್‌ನಿಕ್ ಹೋದೆವು.ಪಠ್ಯ ಹಾಗೂ ಪಠ್ಯೇತರ ವಿಷಯಗಳೆರಡೂ ಯಶಸ್ವಿಯಾಗಿ ಜತೆಜತೆಗೇ ಸಾಗಿತ್ತು.ಅಕ್ಷರದಾಸೋಹ ಆರಂಭವಾದಾಗ ಶುಚಿ ರುಚಿ ಆಹಾರ ಪೂರೈಸಿದೆವು.ಮಕ್ಕಳ ಆರೋಗ್ಯತಪಾಸಣೆ ಮಾಡಿಸಿದೆವು.ಬಡ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿದೆವು. ಎರಡು ಬಾರಿ ಬೇಸಿಗೆಯಲ್ಲಿ ಶಿಬಿರವನ್ನೂ ಏರ್ಪಡಿಸಿ ಊರಿನ ಮಕ್ಕಳನ್ನು ಸೇರಿಸಿ ರಂಗತರಬೇತಿಯನ್ನೂ ಕೊಡಿಸಿದ್ದಾಗಿತ್ತು.ವಿದ್ಯಾರ್ಥಿಗಳು ಅದ್ಭುತವಾಗಿ ಪ್ರದರ್ಶನ ನೀಡಿದ್ದರು.ಅಷ್ಟೇ ಅಲ್ಲದೇ ತೀರಾ ಇತ್ತೀಚೆಗೆ ಶಾಲೆಯನ್ನು ಮುಚ್ಚುವ ಮುನ್ನ ಹೊರಗಿನ ರಂಗ ತಂಡಗಳನ್ನು ಕರೆಸಿ ನಾಟಕೋತ್ಸವವನ್ನೂ ಆಯೋಜಿಸಿದ್ದೆವು.  ಈ ಎಲ್ಲಾ  ಚಟುವಟಿಕೆಗಳಿಗೂ ನಮ್ಮ ಮೇಷ್ಟುಗಳ  ಸಹಕಾರವಿತ್ತು. ಮಹತ್ವದ ವಿಷಯವೆಂದರೆ ಬಹಳಷ್ಟು ಮಂದಿ ಖ್ಯಾತನಾಮರು ಶಾಲೆಗೆ ಕಾಲಿಟ್ಟದ್ದು.ಅರಸೀಕೆರೆ ಮೂಲಕ ಹಾದು ಹೋಗುವ ಗೆಳೆಯರು, ಹಿರಿಯ ಲೇಖಕರು.ಸಾಹಿತಿಗಳು, ರಂಗಕರ್ಮಿಗಳು, ಸಂಗೀತಗಾರರು, ಅಧಿಕಾರಿಗಳು ನನ್ನನ್ನು ಸಂಪರ್ಕಿಸಿ ಕರೆ ಮಾಡಿ ಶಾಲೆಗೆ ಭೇಟಿಕೊಟ್ಟು ಹೋಗುತ್ತಿದ್ದದು ಸ್ಮರಣೀಯ ಸಂಗತಿ. ಹೆಸರು ಪಟ್ಟಿ ಮಾಡಿದರೆ ಅನೇಕವಾದೀತು. ಅವರಿಗೆಲ್ಲಾ ಶಾಲೆಯ ಆತಿಥ್ಯದಕ್ಕುತ್ತಿತ್ತು.ಸರಳ ಸಾಮಾನ್ಯರಂತೆ ಅವರೂ ಮಕ್ಕಳೊಂದಿಗೆ ಬೆರೆಯುತ್ತಿದ್ದaರು. ಧನಾತ್ಮಕ ಅಂಶಗಳನ್ನಷ್ಟೇ ದಾಖಲಿಸಿದೆನೇನೋ. ಋಣಾತ್ಮಕವಾಗಿ ವಿಷಯಗಳು ಸಾಕಷ್ಟು ಕಾಡಿದರೂ ಸಂತೋಷದ ಸಂಗತಿಗಳೆದುರು ಅವು ಕಾಲಕ್ರಮೆಣ ಮಾಸಿಹೋಗುವಂತವು.ಕೆಲವು ಕಿರಿಕಿರಿಗಳಾದವು. ನಾನೂ ಸಹ ಈ ಕೆಲಸದ ವಿಷಯಕ್ಕೆ ಕೆಲವೊಮ್ಮೆ ಉದಾಸೀನ ಮಾಡಿದ್ದಿದೆ.ಚಿಕ್ಕ ಪ್ರಾಯದಲ್ಲಿ ಕೆಲವು ತಪ್ಪು ಮಾಡಿದ್ದಿದೆ. ನೂರಕ್ಕೆ ನೂರಷ್ಟೇನೂ ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೂ ವಿದ್ಯಾರ್ಥಿಗಳ ವಿಷಯದಲ್ಲಿ ಮಾತ್ರ ಯಾವುದೇ ತಾರತಮ್ಯಅಥವಾ ಅಸಡ್ಡೆ ಮಾಡಿದ್ದಿಲ್ಲ. ನನ್ನ ಕನಸುಗಳನ್ನು ಕೊಂದು ಹಾಕಿದ ಉದ್ಯೋಗವಿದೆಂದು ಅನೇಕ ಬಾರಿ ತೀರಾ ಖಿನ್ನತೆಗೆ ಬಿದ್ದು ಕೆಲಸ ಬಿಟ್ಟುಬಿಡುತ್ತೇನೆಂದಿದ್ದು ಅದೆಷ್ಟು ಸಲವೋ.ಅಸಾಧ್ಯ ನೆನಪಿನ ಶಕ್ತಿ ಕುಂದಿತೆಂದು ಪರಿತಾಪ ಪಟ್ಟಿದದೆಷ್ಟೋ.ಉದ್ವೇಗಕ್ಕೊಳಗಾಗಿ ಸಂಘಟನೆಯೆಡೆ ತೀವ್ರ ತೊಡಗಿಸಿಕೊಂಡು ತಾತ್ಕಾಲಿಕವಾಗಿ ಮರೆತದ್ದಿದೆ.ಸ್ವಾಭಿಮಾನಿತನವನ್ನು ದಕ್ಕಿಸಿದ ಉದ್ಯೋಗವೆಂದು ಸಮಾಧಾನ ಪಟ್ಟಿದ್ದಿದೆ.ಈಗಂತೂ ನಿರ್ಲಿಪ್ತ. ಶಾಲೆ ಮುಚ್ಚಿದ್ದು ನನ್ನ ಪಾಲಿಗೆ ಹಿನ್ನಡೆ.ಕನ್ನಡ ಮಾಧ್ಯಮದಲ್ಲಿ ಭವಿಷ್ಯವಿಲ್ಲವೆಂದು ಆಂಗ್ಲ ಮಾಧ್ಯಮ ಅರಸಿ ಹೋದ ಪೋಷಕರನ್ನು ಮನವೊಲಿಸಲು ಪ್ರಯತ್ನಿಸಿದರೂ ನನ್ನ ಮನೆ ಮಕ್ಕಳು ಅದೇ ಆಂಗ್ಲ ಮಾಧ್ಯಮದಲ್ಲಿ ಭವಿಷ್ಯ ಅರಸುವಾಗ, ಪೋಷಕರು ಆ ಕುರಿತು ಪ್ರಶ್ನಿಸುವಾಗ ಉತ್ತರ ತೋಚದೇ ಸುಮ್ಮನಾಗಿದ್ದೇನೆ. ಇಂಗ್ಲೀಷ್‌ನ ಪ್ರಭಾವಕ್ಕೆ ಸಿಲುಕಿದ ಮತ್ತು ಅಲ್ಲಿಯೇ ಮಕ್ಕಳ ಉಜ್ವಲ ಬೆಳಗನ್ನು ನಿರೀಕ್ಷಿಸುವ ತಂದೆತಾಯಿಗಳ ಮಹತ್ವಾಕಾಂಕ್ಷೆಯೂ ತಪ್ಪೆಂದು ಹೇಳಲಾಗದು. ಸತತ ಇಪ್ಪತ್ತು ವರ್ಷಗಳ ಶಿಕ್ಷಣ ಇಲಾಖೆ ನೀಡಿದ ಅಪಾರ ಅನುಭವದ ಅನೇಕ ದಿನಾಂಕ ಹಾಗೂ ದಿನಗಳು ಇಲ್ಲಿ ಸಂಕ್ಷಿಪ್ತವಾಗಿ ದಿನಚರಿಯಂತೆ ಮಾಹಿತಿ ದಾಖಲಿಸಿವೆ. ಸದ್ಯಕ್ಕೆ ಸಿ.ಆರ್.ಪಿ.ಯಾಗಿ ನನ್ನ ವಲಯಕ್ಕೆ ಸೇರಿರುವ  ಸರ್ಕಾರಿ ಶಾಲೆಗಳಲ್ಲಿ  ಬಹಳಷ್ಟು ಕೆಲಸ ಮಾಡಬೇಕೆಂಬ ಆಶಯವಿದೆ.ಇಲ್ಲೀವರೆಗಿನ ಸಹಾಯ ಸಹಕಾರಕ್ಕಾಗಿ ಗ್ರಾಮಸ್ಥರಿಗೂ, ಇಲಾಖೆಯ ಸಹದ್ಯೋಗಿಗಳಿಗೂ, ಸಹೃದಯ ಅಧಿಕಾರಿಗಳಿಗೂ, ಶಿಕ್ಞಣ ಇಲಾಖೆಗೂ ಆಭಾರಿ. **************************************

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ Read Post »

You cannot copy content of this page

Scroll to Top