ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಧೃಡ ಚಿತ್ತ

ಕಥೆ ಧೃಡ ಚಿತ್ತ ವಾಣಿ ಸುರೇಶ್ ರಾತ್ರಿ ಎಲ್ಲಾ ಕೆಲಸ ಮುಗಿಸಿ ರೂಮಿಗೆ ಹೋದ ಹರಿಣಿ ಬಾಲ್ಕನಿಯಲ್ಲಿ ಆಕಾಶ ನೋಡುತ್ತಾ ಸುಮ್ಮನೆ ನಿಂತಳು.ಧಾತ್ರಿ ಹೇಳಿದ ಮಾತು ಇನ್ನೂ ಅವಳ ಕಿವಿಯಲ್ಲಿ ಗುಣಗುಣಿಸುತ್ತಿತ್ತು.ನನಗ್ಯಾಕೆ ಅವಳಂತೆ ಮನೆಯಲ್ಲಿ ಹೇಳಕ್ಕಾಗಲ್ಲ ಎಂದು ಯೋಚಿಸುತ್ತಿರುವಾಗ ಗಂಡ ವಿಜಯ್ ಬಂದು ಪಕ್ಕದಲ್ಲಿ ನಿಂತನು.” ಇನ್ನು ಕೂಡ ಆ ನೆಟ್ ಫ್ಲಿಕ್ಸ್ ಬಗ್ಗೆ ಯೋಚನೆ ಮಾಡುತ್ತಿದ್ಯಾ? ಈಗಿನ ಮಕ್ಕಳು ಗೊತ್ತಲ್ವಾ ಹರಿಣಿ? ನಾವು ನೆಟ್ ಫ್ಲಿಕ್ಸ್ ಸಬ್ಸ್ಕ್ರೈಬ್ ಮಾಡದಿದ್ರೆ ಅವ್ಳು ಯಾರದ್ದೋ ಅಕೌಂಟ್ ಶೇರ್ ಮಾಡಿ ತನಗೆ ಬೇಕಾದ್ದನ್ನು ನೋಡುತ್ತಾಳೆ.ಅವ್ರೆಲ್ಲಾ ಹಿಂದಿ ನಿಂದ ಆಡ್ಕೊಳ್ತಾರೆ ಆಮೇಲೆ! ಅದ್ರ ಬದ್ಲು ಟ್ಯೂಷನ್ ಆದ ಮೇಲೆ ಒಂದೇ ಗಂಟೆ ಸೀರೀಸ್ ನೋಡು ಅಂತ ಸ್ಟ್ರಿಕ್ಟ್ ಆಗಿ ಹೇಳೋಣ. ಅದೇನು ನೋಡ್ತಾಳೆ ಅಂತ ನಮ್ಗೂ ಕಣ್ಣಿಡಬಹುದು” ಅಂದಾಗ ಹರಿಣಿಗೂ ಸರಿಯೆನಿಸಿ ತಲೆಯಾಡಿಸಿದಳು. ” ನಿನ್ನ ಮಗರಾಯನಿಗೂ ಸ್ವಲ್ಪ ಬುದ್ದಿ ಹೇಳು! ಇನ್ನೂ ಎಳೇಮಗೂ ತರ ಆಡ್ತಾನೆ.ನಾನು ನಾಳೆ ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಮಂಗಳೂರಿಗೆ ಹೊರಡುತ್ತೇನೆ.ರವಿ ಬರ್ತಾನೆ ನಂಜೊತೆ.ನಾಡಿದ್ದು ಮದ್ವೆ ಊಟ ಮುಗಿಸಿಕೊಂಡು ಹೊರಟ್ರೆ ರಾತ್ರಿ ಇಲ್ಲಿ ತಲುಪ್ತೇವೆ.” ” ನಿನ್ನ ಮಗರಾಯ” ಎಂದು ಗಂಡ ಹೇಳಿದ್ದಕ್ಕೆ ಸಿಟ್ಟು ಬಂದರೂ ತಡೆದುಕೊಂಡು , ” ಸರಿ ಹಾಗೇ ಮಾಡಿ” ಅಂದಳು.       ಮದುವೆಯಾಗಿ ಐದು ವರ್ಷಗಳ ನಂತರ, ಜನರ ಕೊಂಕು ಮಾತುಗಳನ್ನು ಕೇಳಿ ಹೈರಾಣಾಗಿ ಹೋದವಳಿಗೆ, ಮಗ ಹುಟ್ಟಿದಾಗ ಆದ ಸಂಭ್ರಮ ಹೇಳತೀರದು! ಮಗನಿಗೆ ಐದು ವರ್ಷ ತುಂಬುವವರೆಗೆ ಕೆಲಸಕ್ಕೆ ಹೋಗದೆ ಅವನ ಆಟಪಾಠಗಳಲ್ಲಿ ಮಗ್ನಳಾಗಿ ತಾಯ್ತನದ ಸುಖ ಅನುಭವಿಸಿದ್ದಳು ಅವಳು.ಅಜ್ಜಿ, ತಾತ ,ಅಮ್ಮನ ಅತಿಯಾದ ಮುದ್ದಿನಿಂದಾಗಿ ಅವನು ಸೋಮಾರಿಯಾಗಿ ಬೆಳೆದಿದ್ದ.ಆರು ವರ್ಷದ ನಂತರ ಹುಟ್ಟಿದ ಮಗಳನ್ನು ಕೂಡ ಮುದ್ದಾಗಿ ಬೆಳೆಸಿದರೂ ಮಗನಷ್ಟಲ್ಲ.ಅದಕ್ಕೇನೇ ಆವಾಗಾವಾಗ ” ನಿನ್ನ ಮಗ” ಎಂದು ಗಂಡ ಹೇಳುವಾಗ ಸಿಟ್ಟು ಬರುವುದು ಹರಿಣಿಗೆ. **”****** ನಾಳೆಯ ಸ್ವಾತಂತ್ರ್ಯ ದಿನಾಚರಣೆಗೆ ಸ್ಟೇಜ್ ಪ್ರ್ಯಾಕ್ಟೀಸ್ ಮಾಡಿಸುತ್ತಿರುವಾಗ  ಓಡೋಡಿ ಬಂದ ಆಯಾ ಹರಿಣಿ ಗೆ ಫೋನ್ ಕೊಟ್ಟು,  “ನಾಲ್ಕೈದು ಸಲ ನಿಮ್ಮತ್ತೆ ಫೋನ್ ಮಾಡಿದ್ರಂತ ಗೀತಾ ಮೇಡಂ ನಿಮ್ಮತ್ತೆ ಜತೆ ಮಾತಾಡಿದ್ರಂತೆ. ಏನೋ ಅರ್ಜೆಂಟಂತೆ, ನೀವು ಈವಾಗ್ಲೇ ಫೋನ್ ಮಾಡ್ಬೇಕಂತೆ” ಅಂದಳು. ಹರಿಣಿಗೆ ಭಯದಿಂದ ಎದೆ ಧಸಕ್ಕೆಂದಿತು!! ಗಂಡ ಕೂಡ ಇಲ್ಲಿಲ್ಲವಲ್ಲ ಅಂದುಕೊಳ್ಳುತ್ತಾ ಫೋನ್ ಮಾಡಿದಾಗ , ಮಾತಾಡಿದ್ದು ಪಕ್ಕದ ಮನೆಯ ಸೋಮು ಅಂಕಲ್. ” ನಿನ್ನ ಮಾವನಿಗೆ ಆಗಾಗ ಆಗೋವಂತೆ  ಶುಗರ್ ಜಾಸ್ತಿಯಾಗಿ ತಲೆಸುತ್ತು ಬರ್ತಿದೆ, ಜೊತೆಗೆ ವಿಪರೀತ ಸುಸ್ತು. ಗಾಬ್ರಿ ಮಾಡ್ಕೊಳ್ದೆ ಆರಾಮವಾಗಿ ಸ್ಕೂಟರ್ ನಲ್ಲಿ ಬಾಮ್ಮ ನೀನು. ನಾವಿದ್ದೀವಲ್ಲಾ ಇಲ್ಲಿ” ಅಂದಾಗ ಅವರ ಕಾಳಜಿಯ ಮಾತಿಗೆ ಹರಿಣಿಯ ಕಣ್ಣು ತುಂಬಿ ಬಂತು! ಮಾವನದೇ ವಯಸ್ಸಿನವರಾದರೂ ಆರೋಗ್ಯದ ಬಗ್ಗೆ ಎಷ್ಟು ಗಮನಕೊಡುತ್ತಾರೆ ಅವರು!!  “ಅರ್ಧ ಗಂಟೆಯಲ್ಲಿ ಅಲ್ಲಿರ್ತೇನೆ ಅಂಕಲ್” ಎಂದು ಫೋನಿಟ್ಟಳು. ಶಾಲೆಯ ಸಮಯ ಮುಗಿದಿದ್ದರಿಂದ ಸೀದಾ ಮನೆಗೆ ಬಂದು , ಅತ್ತೆ ಮಾವನನ್ನು ಆಸ್ಪತ್ರೆಗೆ ಕರೆದೊಯ್ದಳು. ಇವರ ಕತೆ ಮೊದಲೇ ಗೊತ್ತಿದ್ದ ಡಾಕ್ಟರ್, ಹರಿಣಿಯ ಅತ್ತೆ ಮಾವನ ಮೇಲೆ ಹರಿಹಾಯ್ದರು.” ಪ್ರತಿ ತಿಂಗಳೂ ಈ ತರ ಸಮಸ್ಯೆ ತಗೊಂಡು ಬರ್ತೀರಲ್ವಾ ನೀವು?ಸ್ವಲ್ಪ ನಾದ್ರೂ ಆರೋಗ್ಯದ ಕಡೆಗೆ ಗಮನ ಕೊಡಬಾರ್ದಾ? ಇವತ್ತು ಅಡ್ಮಿಟ್ ಮಾಡ್ಬೇಕಾಗತ್ತೆ ಇವ್ರನ್ನು” ಅಂದಾಗ ಹರಿಣಿ ಚಿಂತಾಕ್ರಾಂತಳಾದಳು. ನಾಳೆ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆ ವಹಿಸಿರುವ ತನಗೆ ರಜೆ ಸಿಗುವುದು ಸಾಧ್ಯವೇ ಇಲ್ಲ. ಏನಾದರೂ ಉಪಾಯ ಮಾಡೋಣ ಅಂದುಕೊಳ್ಳುತ್ತಾ ಕೌಂಟರ್ ಕಡೆಗೆ ನಡೆದಳು.       ಮಾವನನ್ನು ರೂಮಿಗೆ ಕರೆದೊಯ್ದು ಟ್ರೀಟ್ಮೆಂಟ್ ಶುರು ಮಾಡಿದ ನಂತರ ಮಗನಿಗೆ ಫೋನ್ ಮಾಡಿ ” ತಾತನನ್ನು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿದ್ದಾರೆ. ಸ್ವಲ್ಪ ಹೊತ್ತಲ್ಲಿ ನೀನು ಇಲ್ಲಿಗೆ ಬಾ.ಇವತ್ತು ರಾತ್ರಿ ನೀನು ತಾತನ ಜೊತೆಗಿರು” ಅಂದಳು. ಮಗ ಅಚ್ಚರಿಯಿಂದ ” ನಾನಾ? ” ಎಂದಾಗ  , ” ಹೌದು ನೀನೇ. ನಂಗೆ ನಾಳೆ ಬೆಳಗ್ಗೆ ಆರು ಗಂಟೆಗೆ ಶಾಲೆಯಲ್ಲಿರ್ಬೇಕು.ರಾತ್ರಿ ಹೊತ್ತು ಅಜ್ಜಿ ಇಲ್ಲಿರೋದು ಸರಿಯಲ್ಲ. ಬೇಗ ಬಾ” ಅಂದಳು. ” ನೀನು ರಜೆ ಹಾಕಲ್ವಾ? ” ಎಂದು ಅಚ್ಚರಿಯಿಂದ ಕೇಳಿದ ಅತ್ತೆಗೆ ಶಾಂತವಾಗಿಯೇ ” ಈ ತರದ ಪರಿಸ್ಥಿತಿಯನ್ನು ನೀವಾಗೇ ತಂದುಕೊಂಡದ್ದಲ್ವಾ ಅತ್ತೆ? ನಾನು ಎಷ್ಟಂತ ರಜೆ ಹಾಕ್ಲಿ? ಮಕ್ಳು ಹೆಲ್ಪ್ ಮಾಡ್ತಾರೆ ” ಅಂದಳು. ತಪ್ಪು ತಮ್ಮದಿರುವಾಗ ಸೊಸೆಯ ಹತ್ತಿರ ಮಾತನಾಡಿದರೆ ಕಷ್ಟ ಎಂದು ಅವರೂ ಸುಮ್ಮನಾದರು. ಮಗನನ್ನು ಮಾವನ ಬಳಿ ಬಿಟ್ಟು ಅತ್ತೆಯ ಜೊತೆ ಹರಿಣಿ ಮನೆಗೆ ಹೋದಳು. ಟಿವಿ ನೋಡುತ್ತಾ ಕುಳಿತ ಮಗಳನ್ನು ಕರೆದು,  “ನಾನು ನಾಳೆ ಶಾಲೆಗೆ ಹೋಗುತ್ತೇನೆ. ನೀನು ಕ್ಯಾಬ್ ಬುಕ್ ಮಾಡಿ ಅಜ್ಜಿಯ ಜೊತೆ ಆಸ್ಪತ್ರೆಗೆ ಹೋಗು” ಅಂದಳು. ” ನಾನಾ?” ಎಂದು ಪ್ರಶ್ನಿಸಿದ ಮಗಳಿಗೆ , ” ಹೌದು ನೀನೇ. ನಾಳೆ ಬೆಳಗ್ಗೆ ಬೇಗ ಎದ್ದು ಅಜ್ಜಿಗೆ ಅಡುಗೆಮನೆಯಲ್ಲಿ ಹೆಲ್ಪ್ ಮಾಡು” ಎಂದು ಹೇಳುತ್ತಾ ನಾಳೆಯ ಕಾರ್ಯಕ್ರಮಕ್ಕೆ ಬೇಕಾದ ತಯಾರಿಗೆ ತೊಡಗಿದಳು. ********* ಮಾರನೇ ದಿನ ಬೆಳಗ್ಗೆ ಶಾಲೆಗೆ ಹೊರಟ ಹರಿಣಿಗೆ ಈ ಸೂರ್ಯೋದಯ ಹೊಸತೆಂಬಂತೆ ಕಂಡಿತು.ಮಗನಿಗೆ ಫೋನ್ ಮಾಡಿದಾಗ ಮಾವ ಚೇತರಿಸುತ್ತಿದ್ದಾರೆಂದು ಕೇಳಿ ಇನ್ನಷ್ಟು ಸಮಾಧಾನವಾಯಿತು. ಶಾಲೆಯ ಕಾರ್ಯಕ್ರಮ ಸುಸೂತ್ರವಾಗಿ ನಡೆದು ಊಟಕ್ಕೆ ಕುಳಿತು, ಧಾತ್ರಿಗೆ ಮನೆಯ ಕತೆ ಹೇಳಿದಾಗ ಅವಳಿಗೆ ಅಚ್ಚರಿಯೋ ಅಚ್ಚರಿ!! ಅವಳು  “ನಿಜಾನಾ ? ನಂಬಕ್ಕಾಗ್ತಿಲ್ಲ ನಂಗೆ!!!” ಎಂದು ಕೇಳಿದಾಗ ಹರಿಣಿ ನಗುತ್ತಾ  “ಹೌದಮ್ಮಾ..ಜವಾಬ್ದಾರಿ ಯನ್ನು ನಾವಾಗೇ ವಹಿಸಿಕೊಡೋವರ್ಗೂ ಎಲ್ರೂ ಸುಮ್ನಿರ್ತಾರೆ. ಇದೊಂದು ಪಾಠ, ಕಲ್ತು ಕೋ ” ಅಂದಳು. *************************************

ಧೃಡ ಚಿತ್ತ Read Post »

ಇತರೆ, ಪುಸ್ತಕ ಸಂಗಾತಿ

ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..!

ಲೇಖನ ವಿಮರ್ಶಾ ಲೋಕದ ದಿಗ್ಗಜ ಜಿ.ಎಸ್. ಆಮೂರ..! ಜಿ.ಎಸ್. ಅಮೂರರು ನಮನಗಲಿದ್ದಾರೆ ಈಗ. ಆದರೆ ಅವರ ಸಾಹಿತ್ಯ ಕೃತಿಗಳು ಮತ್ತು ಮಾಡಿದ ಪಿ.ಎಚ್.ಡಿಯ ಸಾಹಿತ್ಯ ಸೌರಭ ನಮ್ಮ ಜೊತೆಯಲ್ಲಿ ಇದೆ. ಆಗಲಿ, ಜಿ.ಎಸ್.ಅಮೂರರಿಗೆ ಅನಂತಾನಂತ ನಮನಗಳು… ೦೮.೦೫.೧೯೨೫ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ೪-೫ ದಶಕಗಳಿಂದಲೂ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೧೯೨೫ ರ ಮೇ ೮ ರಂದು. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಮನೆಗೆ ತರುತ್ತಿದ್ದ ಸದ್ಭೋಧ ಚಂದ್ರಿಕಾ, ಕರ್ಮವೀರ ಮುಂತಾದ ಪತ್ರಿಕೆಗಳ ಸಂಗ್ರಹವೇ ಇದ್ದು ಇದನ್ನೂ ಓದುತ್ತಾ ಬಂದಂತೆಲ್ಲಾ ಆಮೂರರಿಗೆ ಸಾಹಿತ್ಯದಲ್ಲಿ ಆಸ್ಥೆ ಬೆಳೆಯ ತೊಡಗಿತು. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ ಆಯಿತು. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪಡೆದ ಬಿ.ಎ.ಆನರ್ಸ್ ಪದವಿ (೧೯೪೭) ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಎಂ.ಎ. ಪದವಿ (೧೯೪೯) ಪ್ರತಿ ವರ್ಷವೂ ರ‍್ಯಾಂಕ್‌ ಪಡೆದ ವಿದ್ಯಾರ್ಥಿ ಜಿ.ಎಸ್‌ ಅಮೂರರು. ೧೯೬೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ `THE CONCEPT OF COMEDY’ ಮಹಾ ಪ್ರಬಂಧ ಮಂಡಿಸಿ ಪಡೆದ ಪಿ.ಹೆಚ್‌.ಡಿ. ಪದವಿ ಪಡೆದರು. ಗದುಗಿನ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿ (೧೮೬೪-೬೮) ಸೇರಿ ನಂತರ ೧೯೬೮ರಲ್ಲಿ ಔರಂಗಾಬಾದ್‌ನ ಮರಾಠವಾಡ ವಿದ್ಯಾಪೀಠದಲ್ಲಿ ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿಯೂ ನಿವೃತ್ತರಾಗುವವರೆವಿಗೂ (೧೯೮೫) ಕಾರ್ಯ ನಿರ್ವಹಿಸಿದರು..! ಮುರಾಡವಾಡ ವಿದ್ಯಾಪೀಠದಲ್ಲಿದ್ದಾಗಲೇ ೧೯೭೨-೭೩ರಲ್ಲಿ ಫುಲ್‌ಬ್ರೈಟ್‌ ಫೆಲಿಶಿಪ್‌ ಪಡೆದು ಅಮೆರಿಕದ ಕೆಲಫೋರ್ನಿಯಾ (ಸಾಂಟಾಬಾರ್ಬರ) ಹಾಗೂ ಯೇಲ್ಸ್‌ ವಿಶ್ವವಿದ್ಯಾಲಯಗಳಲ್ಲಿ ಮತ್ತು ೧೯೭೩ರಲ್ಲಿ ಬ್ರಿಟಿಷ್‌ ಕೌನ್ಸಿಲ್‌ ಸಹಾಯದಿಂದ ಇಂಗ್ಲೆಂಡ್‌ನಲ್ಲಿ – ಹೀಗೆ ಎರಡುಬಾರಿ ಸಂಶೋಧನೆಯಲ್ಲಿ ನಿರತರಾಗಿದ್ದರು. ಇವರು ಪ್ರಾಧ್ಯಾಪಕರಾಗಿದ್ದಾಗ ೧೪ ವಿದ್ಯಾರ್ಥಿಗಳು ಪಿ.ಹೆಚ್‌.ಡಿ. ಹಾಗೂ ೩ ಎಂ.ಫಿಲ್‌. ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಿಂದ ಪದವಿ ಪಡೆದಿದ್ದಾರೆ. ಇವರ ಕನ್ನಡದ ಮೊದಲ ಕೃತಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾದುದು ಮಿಲ್ಟನ್‌ ಕವಿಯ ಮೇಲೆ ಬರೆದ ‘ಮಹಾಕವಿ ಮಿಲ್ಟನ್‌’ (೧೯೬೬). ನಂತರ ಮೊದಲ ವಿಮರ್ಶಾ ಪ್ರಬಂದಗಳ ಕೃತಿ ‘ಕೃತಿ ಪರೀಕ್ಷೆ’ಯಲ್ಲಿ ಕನ್ನಡದ ಪ್ರಮುಖ ಕಾದಂಬರಿಗಳಾದ ರಾವಬಹದ್ದೂರರ ‘ಗ್ರಾಮಾಯಣ’. ಅನಂತಮೂರ್ತಿಯವರ ಸಂಸ್ಕಾರ, ಶೌರಿ; ರಾಮಾನುಜನ್‌ರವರ ‘ಹಳದಿಮೀನು’, ಶಿವರಾಮ ಕಾರಂತರರ ಬೆಟ್ಟದ ಜೀವ ಮತ್ತು ಮರಳಿಮಣ್ಣಿಗೆ ಮುಂತಾದವುಗಳ ವಿಶ್ಲೇಶಣಾತ್ಮಾಕ ಲೇಖನಗಳಿಂದ ಕೂಡಿದೆ. ಇದಲ್ಲದೆ ಹಾಸನ ರಾಜಾರಾಯರು, ಶ್ರೀರಂಗರ ಕೃತಿಗಳ ಬಗ್ಗೆ, ಕೈಲಾಸಂರವರ ಇಂಗ್ಲಿಷ್‌ ನಾಟಕಗಳ ಬಗ್ಗೆಯೂ ಇದರಲ್ಲಿ ಲೇಖನಗಳಿವೆ. ಸಮಕಾಲೀನ ಕಥೆ-ಕಾದಂಬರಿ, ಕನ್ನಡ ಕಾದಂಬರಿಯ ಬೆಳವಣಿಗೆ, ಅ.ನ. ಕೃಷ್ಣರಾಯ, ಅರ್ಥಲೋಕ ಮುಂತಾದ ಕೃತಿಗಳಲ್ಲದೇ ಬೇಂದ್ರೆಯವರ ಗಂಗಾವತರಣವನ್ನೂ ಮಧ್ಯಬಿಂದುವಾಗಿಟ್ಟುಕೊಂಡು ಕಾವ್ಯ ಹಾಗೂ ಕಾವ್ಯೇತರ ಬರಹಗಳನ್ನೂ ವಿವೇಜಿಸುವ ‘ಭುವನದ ಭಾಗ್ಯ’ ಕೃತಿ, ವ್ಯವಸಾಯ, ಕನ್ನಡ ಕಥನ ಸಾಹಿತ್ಯ: ಕಾದಂಬರಿ, ವಿರಾಟಪುರುಷ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮುಂತಾದ ೩೯ ಕೃತಿಗಳಲ್ಲದೇ ಚಿತ್ತಾಲರ ಆಯ್ದ ಕಥೆಗಳು, ಕೆ ಸದಾಶಿವ ಅವರ ಕಥಾ ಸಾಹಿತ್ಯ, ಅವಳ ಕಥೆಗಳು, ಬೇಂದ್ರೆ ಕಾವ್ಯ, ಕನ್ನಡ ಕಥಾಲೋಕ, ಶ್ರೀರಂಗ ಸಾರಸ್ವತ, ಹುಯಿಲಗೋಳ ನಾರಾಯಣರಾಯರ ಸಮಗ್ರ ಸಾಹಿತ್ಯ ಮುಂತಾದವುಗಳನ್ನು ಸಂಪಾದಿಸಿದ್ದಾರೆ. ಇಂಗ್ಲಿಷ್‌ನಲ್ಲಿ ರಚಿಸಿರುವ ಕೃತಿಗಳು– ದಿ ಕಾನ್ಸೆಪ್ಟ್‌ ಆಫ್‌ ಕಾಮಿಡಿ, ಮನೋಹರ ಮಳಗಾಂವ್‌ಕರ್, ಆದ್ಯರಂಗಾಚಾಯ್, ದಿ ಕ್ರಿಟಿಕಲ್‌ ಸ್ಪೆಕ್ಟ್ರಮ್‌, ಇಮೇಜಸ್‌ ಅಂಡ್‌ ಇಂಪ್ರೆಷನ್ಸ್‌, ಎ.ಎನ್‌. ಕೃಷ್ಣರಾವ್‌, ಕ್ರಿಯೇಷನ್ಸ್‌ ಅಂಡ್‌ ಟ್ರಾನ್ಸ್‌ ಕ್ರಿಯೇಷನ್ಸ್‌, ದತ್ತಾತ್ರೇಯ ರಾಮಚಂದ್ರಬೇಂದ್ರೆ, ಪರ್ಸೆಷನ್ಸ್‌ ಆಫ್‌ ಮಾಡರ್ನ್ ಲಿಟರೇಚರ್, ಮೊದಲಾದ ೧೪ ಕೃತಿಗಳ ಜೊತೆಗೇ ಕ್ರಿಟಿಕಲ್‌ ಎಸ್ಸೆಸ್‌ ಹ್ಯಾನ್‌ ಇಂಡಿಯನ್‌ ರೈಟಿಂಗ್‌ ಇನ್‌ ಇಂಗ್ಲಿಷ್‌, ಕಾಲೊನಿಯಲ್‌ ಕೌನ್ಷಿಯಸ್ ನೆಸ್‌ ಇನ್‌ ಕಾಮನ್‌ವೆಲ್ತ್ ಲಿಟರೇಚರ್ ಮುಂತಾದ ಆರು ಕೃತಿಗಳನ್ನೂ ಸಂಪಾದಿಸಿದ್ದಾರೆ. ಹೀಗೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿರುವುದಲ್ಲದೇ ಬೆಂಗಳೂರು, ಕರ್ನಾಟಕ ವಿಶ್ವವಿದ್ಯಾಲಯ, ಬೆನಾರಸ್‌ ಹಿಂದೂ ವಿಶ್ವವಿದ್ಯಾಲಯ, ಮೈಸೂರಿನ ಧ್ವನ್ಯಾಲೋಕ ಮುಂತಾದೆಡೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ..! ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಗೌರವಗಳಿಸಿದ್ದಾರೆ. ಇವರ ‘ಅರ್ಥಲೋಕ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಸ.ಸ.ಮಾಳವಾಡ ಪ್ರಶಸ್ತಿ; ಭುವನದ ಭಾಗ್ಯ ಕೃತಿಗೆ ಭಾರತೀಯ ಭಾಷಾ ಪರಿಷತ್‌-ಕೊಲ್ಕತ್ತಾ, ಪ್ರೊ.ವಿ.ಎಂ. ಇನಾಂದಾರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ; ಕನ್ನಡ ಕಥನ ಸಾಹಿತ್ಯ: ಕಾದಂಬರಿ ಕೃತಿಗೆ ಬಿ.ಎಚ್‌. ಶ್ರೀಧರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಇವರಿಗೆ ಸಂದಿವೆ. ಇವಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ವಿಮರ್ಶಕ ರತ್ನ ಪ್ರಶಸ್ತಿ, ಅಖಿಲ ಭಾರತ ಮಾಧ್ವ ಮಹಾ ಮಂಡಲದಿಂದ ಕನ್ನಡ ಭಾಷಾ ಭೂಷಣ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ಸಂದೇಶ್‌ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಪಂಪ್ರಶಸ್ತಿ, ಮಾಸ್ತಿ ಪ್ರಶಸ್ತಿಗಳು ದೊರೆತಿವೆ. ಒಂದು ಕೃತಿಯನ್ನೂ ವಿಮರ್ಶಿಸುವಾಗ ಕೃತಿಯಲ್ಲಿ ಏನಿದೆ? ಏಕಿದೆ? ಎಂದು ವಿಮರ್ಶಿಸಬೇಕೇ ವಿನಃ ಏನಿಲ್ಲ, ಏನಿರಬೇಕಿತ್ತು ಎಂದು ಹುಡುಕುವುದು ವಿಮರ್ಶಕನ  ಕೆಲಸವಾಗಬಾರದು ಮತ್ತು ವಿಮರ್ಶಕನಾದವನು ಅಂತಃ ಚಕ್ಷುಗಳನ್ನೂ ತೆರೆದು ಪೂರ್ವಾಗ್ರಹ ಪೀಡಿತನಾಗದೇ ಕೃತಿಯೊಡನೆ ಅನುಸಂಧಾನ ಮಾಡಬೇಕೆನ್ನುವುದೇ ಇವರ ಖಚಿತ ಅಭಿಪ್ರಾಯವಾಗಿದ್ದು, ವಿಮರ್ಶೆಯ ಕ್ಷೇತ್ರದಲ್ಲಿ ಹೊಸಹೊಸ ಅನ್ವೇಷಣೆಗಳನ್ನು ಮಾಡಿ ಹೊಸಹೊಸ ವಿಸ್ತೃತ ವಿಮರ್ಶಾ ವಿಧಾನಗಳನ್ನೂ ರೂಪಿಸತೊಡಗಿದ್ದರು..! ಇಂತಹ ಜಿ.ಎಸ್. ಅಮೂರ ಈಗ ನಮ್ಮನ್ನು ಅಗಲಿದ್ದಾರೆ. ಅವರಿಗಿದೋ ‘ನಮನ’ಗಳು… ************************************* ಕೆ.ಶಿವು.ಲಕ್ಕಣ್ಣವರ ***************************************************

ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..! Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಸಂತೆಯ ಗೌಜು ತರೀಕೆರೆಯಲ್ಲಿ ಸಂತೆ ಸೇರುವ ಜಾಗಕ್ಕೆ ಸಮೀಪದಲ್ಲಿ ನಮ್ಮ ಮನೆಯಿತ್ತು. ಪ್ರತಿ ಶುಕ್ರವಾರ ಎಬ್ಬಿಸುತ್ತಿದ್ದುದು ಮಸೀದಿಯ ಬಾಂಗಲ್ಲ, ಗುಡಿಯ ಸುಪ್ರಭಾತವಲ್ಲ, ಸಂತೆಗೌಜು. ಇಂಪಾದ ಆ ಗುಜುಗುಜು ನಾದ ಭಾವಕೋಶದಲ್ಲಿ ಈಗಲೂ ಉಳಿದಿದೆ. ಎಂತಲೇ ನನಗೆ ‘ಸಂತೆಯೊಳಗೊಂದು ಮನೆಯ ಮಾಡಿ’ ವಚನ ಓದುವಾಗ ಕೆಣಕಿದಂತಾಗುತ್ತದೆ. ಅಕ್ಕ ‘ಶಬ್ದಕ್ಕೆ ನಾಚಿದೊಡೆ ಎಂತಯ್ಯಾ?’ ಎಂದು ಪ್ರಶ್ನಿಸುತ್ತಾಳೆ. ಉತ್ತರ ಪ್ರಶ್ನೆಯೊಳಗೇ ಇದೆ-ನಾವು ಬದುಕುವ ಲೋಕಪರಿಸರ ಸಂತೆಯಂತಿದೆ; ಅಲ್ಲಿ ಸದ್ದಿರುವುದು ಸಹಜವೆಂದು. ಹಾಗಾದರೆ ಈ ಕಿರಿಕಿರಿಗೆ ಪರಿಹಾರ, ಸದ್ದಿರದ ಕಡೆ ಮನೆ ಮಾಡುವುದೊ ಅಥವಾ ಸದ್ದನ್ನೇ ಇಲ್ಲವಾಗಿಸುವುದೊ? ಅಕ್ಕನ ಪ್ರಕಾರ ಇವೆರಡೂ ಅಲ್ಲ. ಅದನ್ನು ಸಹಿಸಿಕೊಂಡೇ ಬದುಕುವುದು. `ಲೋಕದಲ್ಲಿ ಹುಟ್ಟಿರ್ದ ಬಳಿಕ ಸ್ತುತಿನಿಂದೆಗಳು ಬಂದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂಬ ತತ್ವವು ಒಂದರ್ಥದಲ್ಲಿ ವಾಸ್ತವವಾದಿ. ಅನಗತ್ಯ ಆದರ್ಶವಾದಿ ಆಗಿರಬಾರದು, ಸ್ಥಿತಪ್ರಜ್ಞರಾಗಿರಬೇಕು ಎಂಬ ದನಿಯಿಲ್ಲಿದೆ. ವೈಯಕ್ತಿಕವಾಗಿ ಅಕ್ಕನ ಬಾಳೂ ಈ ನಿಲುವಿಗೆ ಕಾರಣವಿದ್ದೀತು. ಆಕೆ ಮನೆ ಗಂಡ ಸಂಸಾರ ಊರು ಬಿಟ್ಟು, ಒಂಟಿಯಾಗಿ ದೂರದ ಶ್ರೀಶೈಲಕ್ಕೆ ಅಲೌಕಿಕ ಗಂಡ ಮಲ್ಲಿಕಾರ್ಜುನನ್ನು ಹುಡುಕಿಕೊಂಡು ನಡೆದವಳು; ಬತ್ತಲೆಯಾಗದೆ ಬಯಲು ಸಿಕ್ಕದು ಎಂದು ಕೇಶಾಂಬರೆಯಾದವಳು; ಆಕೆ ಹಾದಿಯಲ್ಲಿ ಎದುರಿಸಿರಬಹುದಾದ ಕಿರುಕುಳವನ್ನು ಸುಲಭವಾಗಿ ಊಹಿಸಬಹುದು. ‘ಸಂತೆ’ಯನ್ನು ಒಂದು ರೂಪಕವಾಗಿ ನೋಡುತ್ತಿದ್ದರೆ, ಮೂರು ಆಯಾಮ ಹೊಳೆಯುತ್ತವೆ. ಒಂದು: ನಾವು ಸುತ್ತಲ ಪರಿಸರವನ್ನು ಬದಲಿಸಲು ಸಾಧ್ಯವಿಲ್ಲ. ಹೊಂದಿಕೊಂಡು ಅದರೊಟ್ಟಿಗೆ ಬದುಕಬೇಕು ಎಂಬ ಅಕ್ಕನ ಅರ್ಥ. ಬದುಕುವ ಪರಿಸರ ಚೆನ್ನಾಗಿದ್ದಾಗ ಈ ಯಥಾರ್ಥವಾದ ಸಮಸ್ಯೆಯಲ್ಲ. ಪರಿಸರ ಅಸಹನೀಯ ಎನಿಸುವಷ್ಟು ಕೆಟ್ಟಿದ್ದರೆ? ಹೊಂದಾಣಿಸಿ ಬದುಕಬೇಕು ಎನ್ನುವುದು ಬದಲಾವಣೆಯ ಮತ್ತು ಪರ್ಯಾಯ ಹುಡುಕಾಟದ ಸಾಧ್ಯತೆಯನ್ನೇ ನಿರಾಕರಿಸಿಕೊಂಡಂತೆ. ಈ ನಿಲುವನ್ನು ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎನ್ನುತ್ತಿದ್ದ ಬಸವಣ್ಣ ತಾಳಿದ್ದರೆ ಏನಾಗಿರುತ್ತಿತ್ತು? ಬಹುಶಃ ಶರಣ ಚಳುವಳಿಯೇ ಇರುತ್ತಿರಲಿಲ್ಲ. ಎರಡು: ಇದು ರೋಮಿನಲ್ಲಿರುವಾಗ ರೋಮನನಂತಿರು ಎಂಬ ಬದುಕುವ ಉಪಾಯದ ಅರ್ಥ. ಈ ತಂತ್ರಗಾರಿಕೆ ಅವಕಾಶವಾದಿತನಕ್ಕೆ ಹಾದಿಕೊಡಬಲ್ಲ ಸಾಧ್ಯತೆಯೂ ಇದೆ. ನನ್ನ ನಿಲುವನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಿಸಲಾರೆ ಎಂಬ ಜಿಗುಟುತನಕ್ಕೆ ಬದಲು, ಲೋಕಸ್ವಭಾವವೇ ಹೀಗಿದೆ, ನಾನೊಬ್ಬ ಚಡಪಡಿಸಿ ಏನು ಮಾಡಲಿ ಎಂಬ ರಾಜಿಯತ್ತ ಇದು ಕರೆದೊಯ್ಯಬಹುದು. ಮೂರು: ಲೋಕರಚನೆಯಲ್ಲಿ ಕೆಲವು ಮೂಲಭೂತ ಸಂಗತಿಗಳನ್ನು ಬದಲಿಸಲಾಗದು. ಉದಾ: ಮುಪ್ಪು, ಸಾವು. ಮನುಷ್ಯರಾಗಿ ಜನಿಸಿದ ಮೇಲೆ ಇವನ್ನು ಮುಖಾಬಿಲೆ ಮಾಡಲೇಬೇಕು ಎಂಬರ್ಥ. ಇದು ಈ ಕಠೋರ ವಾಸ್ತವಕ್ಕೆ ಒಮ್ಮೆ ಡಿಕ್ಕಿ ಹೊಡೆಯಲೇಬೇಕಿದ್ದು, ಹೋರಾಟದ ಬದುಕು ವ್ಯರ್ಥ ಎಂಬ ನಿರಾಶೆಯನ್ನೂ ಹುಟ್ಟಿಸಬಹುದು. ಕೆಲವರಲ್ಲಿ ಕಂತೆ ಒಗೆವ ಮುನ್ನ ಅರ್ಥಪೂರ್ಣವಾಗಿ ಬದುಕಬೇಕು ಎಂಬ ಛಲವಾಗಿ ಪಲ್ಲಟವಾಗಲೂಬಹುದು. ಸಾವಿನ ಘೋರಸತ್ಯದ ಧ್ಯಾನವೂ ಇತ್ಯಾತ್ಮಕ ಪರಿವರ್ತನೆಗಳನ್ನು ಕೆಲವರ ಬದುಕಿನಲ್ಲಿ ತಂದಿರುವುದುಂಟು. ಪರಿಸ್ಥಿತಿಗೆ ಹೊಂದಿಕೊಂಡು ಹೋದವರು ಜೀವನದಲ್ಲಿ ದೊಡ್ಡದನ್ನೇನೂ ಸಾಧಿಸಿಲ್ಲ. ಲೋಕ ಬದಲಿಸಬೇಕೆಂದಿದ್ದ ಆದರ್ಶವಾದಿಗಳು ಸೋತಿರಬಹುದು. ಆದರೆ ಅವರ ಸೆಣಸಾಟ-ಸೋಲು ಲೋಕದೆದುರು ಆದರ್ಶವಾಗಿ ನಿಂತಿದೆ ತಾನೇ? ಎಷ್ಟೆಲ್ಲ ಚಿಂತಿಸಿದರೂ ‘ಸಂತೆ’ಗಿರುವ ಅನಿಷ್ಟಾರ್ಥವನ್ನು ಒಪ್ಪಲು ಕಷ್ಟವಾಗುತ್ತಿದೆ. ಚಿಕ್ಕಂದಿನಲ್ಲಿ ಈಗ ಬಂದೆ ಎಂದು ಲೆಕ್ಕಕೊಟ್ಟು ಹೊರ ಹೋದ ಮೇಷ್ಟರು ಅರ್ಧ ತಾಸಾದರೂ ಬಾರದಿದ್ದಾಗ, ನಾವು ಅಭೂತಪೂರ್ವ ಗಲಭೆ ಹುಟ್ಟುಹಾಕುತ್ತಿದ್ದೆವು. ಮೇಷ್ಟರು ಓಡಿ ಬಂದವರೇ ‘ಲೋಫರ್‍ಗಳಾ, ಇದೇನು ಸ್ಕೂಲೊ ಮೀನುಸಂತೆಯೋ’ ಎಂದು ಅಬ್ಬರಿಸುತ್ತಿದ್ದರು. ಪಕ್ಕದ ಕ್ಲಾಸಿನಲ್ಲಿದ್ದ ಮನೋರಮಾ ಮೇಡಂ ಜತೆ ನಡೆಯುತ್ತಿದ್ದ ಮುದ್ದಣ ಸಲ್ಲಾಪವನ್ನು ಅರ್ಧಕ್ಕೆ ನಿಲ್ಲಿಸಿ ಧಾವಿಸಿದಾಗಲಂತೂ ಅವರಿಗೆ ಪ್ರಚಂಡ ಸಿಟ್ಟು. ‘ಥೂ ಸಂತೆ ನನ್ನಮಕ್ಕಳಾ’ ಎಂದು ಹರಸುತ್ತಿದ್ದರು. ಅಪ್ಪ ಕೂಡ ಮನೆಯ ವಸ್ತುಗಳು ಅಲ್ಲಲ್ಲೇ ಬಿದ್ದುದನ್ನು ಕಂಡಾಗ ‘ಏನೇ! ಮನೇನ ಸಂತೆ ಮಾಡಿದಿಯಲ್ಲೇ’ ಎಂದು ಅಮ್ಮನಿಗೆ ಚುಚ್ಚುತ್ತಿದ್ದ. ಕರಾವಳಿಯ ಮಿತ್ರರೊಬ್ಬರು ತಮಗಾಗದವರ ಸುದ್ದಿ ಬಂದಾಗ ‘ಛೀ! ಅದೊಂದು ಸಂತೆ’ ಎನ್ನುತ್ತಿದ್ದರು. ‘ಚಿಂತಿಲ್ಲದೋಳಿಗೆ ಸಂತೇಲಿ ನಿದ್ದೆ ಬಂತಂತೆ’- ಗಾದೆಯಲ್ಲೂ ಸಂತೆ ಬಗ್ಗೆ ಸದಭಿಪ್ರಾಯವಿಲ್ಲ. ಅರಾಜಕತೆ, ಏಕಾಂತಿಗಳಿಗೆ ಸಲ್ಲದ ಸ್ಥಳ ಎಂಬರ್ಥವೇ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ಇದೇ ‘ಸಂತೆ’, ಬೆಳೆದದ್ದನ್ನೊ ಸಾಕಿದ್ದನ್ನೊ ಮಾರುವ ರೈತರ ಮತ್ತು ಪಶುಗಾಹಿಗಳ ಅಥವಾ ತಮ್ಮಲ್ಲಿಲ್ಲದ ವಸ್ತು ಖರೀದಿಸಲು ಹೋಗುವ ಗಿರಾಕಿಗಳ ಪಾಲಿಗೆ’ ಅನಿಷ್ಟವಲ್ಲ. ಬಟವಾಡೆ ಮಾಡಿಕೊಂಡ ಕೂಲಿಯವರು ಸಂತೆದಿನ ಖುಶಿಪಡುತ್ತಾರೆ. ಸಂತೆಗೆ ಬಂದವರು ಕೇವಲ ಮಾರು-ಕೊಳ್ಳು ಮಾಡುವುದಿಲ್ಲ. ಮಸಾಲೆದೋಸೆ ತಿನ್ನುತ್ತಾರೆ; ಸಿನಿಮಾ ನೋಡುತ್ತಾರೆ; ಕದ್ದು ಪ್ರೇಮಿಯನ್ನು ಭೇಟಿಸುತ್ತಾರೆ; ಪರಿಚಿತರು ಸಿಕ್ಕರೆ ಕಷ್ಟ ಸುಖ ಹಂಚಿಕೊಳ್ಳುತ್ತಾರೆ; ಹುರಿದ ಮೀನು ನಂಚಿಕೊಂಡು ಕಳ್ಳು ಕುಡಿಯುತ್ತಾರೆ. ಮನೆಗೆ ಹೋಗುವಾಗ ಮಕ್ಕಳಿಗೆ ಪುರಿ, ಬಟ್ಟೆಬರೆ ಖರೀದಿಸುತ್ತಾರೆ. ನಮಗಂತೂ ಶುಕ್ರವಾರ ಸಂತೆಯ ಸಂಜೆ ಮಂಡಕ್ಕಿ ಕಾರ ಕಲಸಿಕೊಂಡು ನೀರುಳ್ಳಿ ತುಂಡಿನೊಡನೆ ತಿಂದು, ಮೇಲೆ ಟೀ ಇಳಿಸುವುದು ಹಬ್ಬವಾಗಿತ್ತು. ಉರುಸು ಜಾತ್ರೆಗಳೂ ಒಂದರ್ಥದಲ್ಲಿ ಧಾರ್ಮಿಕ ಆಯಾಮವಿರುವ ಸಂತೆಗಳು ತಾನೆ? ಜನಜಂಗುಳಿಯೇ ಅಲ್ಲಿನ ವಿಶಿಷ್ಟತೆ ಮತ್ತು ಸಂಭ್ರಮಕ್ಕೆ ಕಾರಣ. ಸಂತೆಯಿಲ್ಲದ ದಿನಗಳಲ್ಲಿ ಖಾಲಿಅಂಗಡಿ, ನಿಂತಕಂಬ, ಜನರಿಲ್ಲದ ಕಟ್ಟೆಗಳು ಮದುವೆ ಮುಗಿದ ಚಪ್ಪರವನ್ನೊ ಹೆಣದ ಮುಖವನ್ನೊ ನೋಡಿದಂತೆ ನಿರಾಶಾಭಾವ ಕವಿಸುತ್ತವೆ; ಹಾರುಹೊಡೆದ ಮನೆಯಂತೆ ಬಿಕೊ ಎನ್ನುತ್ತಿದ್ದ ಶೆಡ್ಡುಗಳೆಲ್ಲ, ಸಂತೆದಿನ ದವಸ ಹಣ್ಣು ತರಕಾರಿ ತಿಂಡಿ ಜೋಡಿಸಿಕೊಂಡಾಗ ಹರೆಯದವರಂತೆ ಕಂಗೊಳಿಸುತ್ತವೆ. ಸುತ್ತಲಿನ ಮೂವತ್ತು ಹಳ್ಳಿಯ ಜನ ಬರುವ ನಮ್ಮೂರ ಸಂತೆ, ಬೆಳಗಿನ ಜಾವದಿಂದಲೇ ಸಂಚಲನ ಪಡೆದುಕೊಳ್ಳುತ್ತಿತ್ತು. ತಿಂಡಿ ಅಂಗಡಿ ಹಾಕುವುದು; ವರ್ಣರಂಜಿತ ಗ್ಲಾಸುಗಳಲ್ಲಿ ಶರಬತ್ತು ಜೋಡಿಸುವುದು; ಹಾವಾಡಿಗರು ಆಟ ಹೂಡುವುದು; ರೈತರು ತರಕಾರಿ ಚೀಲಬಿಚ್ಚಿ ನಿಂತು ಗಿರಾಕಿಗಳಿಗೆ ಕಾತರದಿ ಕಾಯುವುದು; ಹಣೆತುಂಬ ಭಂಡಾರ ಲೇಪಿಸಿಕೊಂಡು ಗಂಟೆ ಬಾರಿಸಿಕೊಂಡು ಬಾಯಲ್ಲಿ ಜಾಕುವನ್ನು ಕಚ್ಚಿ, ಚಾಟಿಯಲ್ಲಿ ಬಾರಿಸಿಕೊಳ್ಳುತ್ತ ಊರಮಾರಿಯವನು ತಟ್ಟೆಹಿಡಿದು ಭಿಕ್ಷೆ ಬೇಡುವುದು; ಹಣ್ಣಿನವ ಸೀಳಿದ ಬನಾಸ್ಪತ್ರಿ ಹೋಳನ್ನು `ಹ್ಞಾ! ಇಲ್ಲಿ ಸಕ್ರೇರಿ ಸಕ್ರೆ’ ಎಂದು ಬಾಯಿ ಮುಂದೆ ಹಿಡಿಯುವುದು; ಕೊಳಕಾದ ಪಟಾಪಟಿ ಲುಂಗಿಯುಟ್ಟ ಮಲೆಯಾಳಿ ಕಾಕಾ, `ಹರೀರ ಹರೀರಾ’ ಎನ್ನುತ್ತ ಕೆಂಡದ ಮೇಲಿಟ್ಟ ಕೆಟಲಿನಲ್ಲಿ ಸಿಹಿಗಂಜಿ ತುಂಬಿಕೊಂಡು ಸುತ್ತುವುದು; ಅಜ್ಜಿಯೊಂದು ಕುದಿವ ಎಣ್ಣೆಯಲ್ಲಿ ನಡುಗುವ ಕೈಯಿಂದ ಕಡಲೆಹಿಟ್ಟನ್ನು ಇಳಿಬಿಟ್ಟು ಹೊಂಬಣ್ಣಕ್ಕೆ ತಿರುಗಿದ ಅತ್ತಿಕಾಯನ್ನು ಜರಡಿಯಿಂದ ಬಾಚಿ ಪುಟ್ಟಿಗೆ ಹಾಕುವುದು-ಒಂದೇ ಎರಡೇ. ಕೊಳ್ಳುವವರಿಗೂ ಮಾರುವವರಿಗೂ ನಡೆಯುವ ಚೌಕಾಸಿಯಾಟ ನಿಜಕ್ಕೂ ನಾಟಕೀಯ. ನಿನ್ನ ಮಾಲು ಇಷ್ಟವಿಲ್ಲ ಎಂಬ ಭಾವದಲ್ಲಿ ಮುನ್ನಡೆಯುವ ಗಿರಾಕಿ. ಬೇಡವಾದರೆ ಹೋಗು ಎಂದು ನಟಿಸುತ್ತ ಅವನನ್ನು ಸೆಳೆಯಲು ಹೊಸ ಕುಣಿಕೆಯೆಸೆದು ಬಂಧಿಸುವ ವರ್ತಕ; ‘ಸರಿಯಾಗಿ ಅಳೆಯಮ್ಮ’ ಎಂದು ಅಸಹನೆ ತೋರುವ ಗಿರಾಕಿ. ‘ಹ್ಞೂಂ ಕಣಪ್ಪ, ಅದರ ಮ್ಯಾಲೆ ನಾನೇ ಕುತ್ಕತೀನಿ’ ಎಂದು ಎದುರೇಟು ಕೊಡುವ ಮಾರುಗಾರ್ತಿ; ತೀರ ಕಡಿಮೆ ಬೆಲೆಗೆ ಕೇಳುವ ಗಿರಾಕಿ. ‘ಬ್ಯಾಡ. ಹಂಗೇ ತಗಂಡು ಹೋಗ್ ಬಿಡು ಅತ್ಲಾಗೆ’ ಎಂದು ವ್ಯಂಗ್ಯದ ಬಾಣವೆಸೆವ ವ್ಯಾಪಾರಿ; ಮಾವಿನಹಣ್ಣಿನ ಬುಟ್ಟಿಯ ಮುಂದೆ ತೀರ ಕಡಿಮೆ ಬೆಲೆಗೆ ಕೇಳುವ ಗ್ರಾಹಕ. ವ್ಯಗ್ರವಾಗಿ `ಎತ್ತಯ್ಯ ನಿನ್ನ ತಳಾನ’ ಎನ್ನುವ ಹಣ್ಣಾಕೆ-ಎಲ್ಲರೂ ನಟರೇ. ಹೊಸ ಊರಿಗೆ ಹೋದರೆ, ಸಂತೆಯಲ್ಲಿ ತಿರುಗುವ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ. ಮೀನು ಸಂತೆಯಲ್ಲಿ ಎಷ್ಟೆಲ್ಲ ಜಲಚರಗಳು ಮೀನುಗಾರ್ತಿಯ ಮುಂದಣ ಹಲಗೆಯ ಮೇಲೆ ವಿವಿಧ ಭಂಗಿಗಳಲ್ಲಿ ಪವಡಿಸಿರುತ್ತವೆ? ಒಂದು ಸಂತೆಯಲ್ಲಿ ಒಬ್ಬ ಕುರಿಗಳನ್ನು ಹಿಡಿದು ನಿಂತಿದ್ದ ರೀತಿ, ಸೂರ್ಯನ ಸಾರಥಿ ಸಪ್ತಾಶ್ವಗಳ ಲಗಾಮನ್ನು ಹಿಡಿದುಕೊಂಡಂತಿತ್ತು. ನಮ್ಮೂರ ಸಂತೆಯ ಮೂಲೆಯಲ್ಲಿ ಮಾರಾಟವಾಗುತ್ತಿದ್ದ ಮಡಕೆಗಳು ನೆನಪಾಗುತ್ತಿವೆ. ಕೆರೆಯಂಗಳದ ಮಣ್ಣು ಕಾಲಲ್ಲಿ ತುಳಿಸಿಕೊಂಡು, ಕುಲಾಲಚಕ್ರದಲ್ಲಿ ತಿರುಗಿ, ಹಲಗೆಯಿಂದ ತಟ್ಟಿಸಿಕೊಂಡು, ಆವಿಗೆಯಲ್ಲಿ ಬೆಂದು, ಗಾಡಿಯಲ್ಲಿ ಹುಶಾರಾಗಿ ಪಯಣಿಸಿ, ಕೊಳ್ಳುವವರ ಕೈ ಕಂಠಕ್ಕೆ ಬೀಳಲೆಂದು ಬಾಯ್ತೆರೆದು ಕಾಯುತ್ತಿದ್ದವು. ಮುಂದೆಯೂ ಸುಟ್ಟುಕೊಳ್ಳುವ ವಿಧಿ ಅವಕ್ಕೆ ತಪ್ಪಿದ್ದಲ್ಲ. ಕಂತುಗಳಲ್ಲಿ ಸುಟ್ಟುಕೊಳ್ಳುವ ಅವು ನಮ್ಮ ಜಠರಾಗ್ನಿಯನ್ನು ತಣಿಸುತ್ತಿದ್ದವು. ಎಷ್ಟೊಂದು ಸಂಗತಿಗಳಿಗೆ ಕೊಂಡಿ-ವೇದಿಕೆ ಈ ಸಂತೆ! ಮನೆಯನ್ನು ಏಕಾಂತದ ನೆಮ್ಮದಿಯ ಅಂತರಂಗದ ಮತ್ತು ಬಜಾರು ಬೀದಿಗಳನ್ನು ಏಕಾಂತ ಸಾಧ್ಯವಿಲ್ಲದ ಲೋಕಾಂತದ ಸಂಕೇತವೆಂದು ಗಣಿಸಲಾಗುತ್ತದೆ. ಆದರೆ ಮನೆಯು ಅನುಭವ ವಂಚಿಸುವ ಮತ್ತು ವ್ಯಕ್ತಿತ್ವ ಬಂಧಿಸುವ ತಾಣವಾಗಿ ತಳಮಳ ಹುಟ್ಟಿಸಬಲ್ಲದು. ಬುದ್ಧನ ಪಾಲಿಗೆ ಅರಮನೆ ಮತ್ತು ಏಕಾಂತಗಳು ಲೋಕಸತ್ಯ ಮುಚ್ಚಿಡುವ ಸೆರೆಮನೆಯಾಗಿದ್ದವೆಂದೇ, ಆತ ಲೋಕದ ಸಂತೆಯಲ್ಲಿ ಬೆರೆತು ಬಾಳಿನ ದಿಟವನ್ನು ಹುಡುಕಲು ಹೊರಬಿದ್ದನು. ಪೇಟೆಯ ಗಲಭೆಯಿಂದ ತಪ್ಪಿಸಿಕೊಂಡು ಹೋಗುವವರಿಗೆ ಹಳ್ಳಿ ಕಾಡು ನಿರುಮ್ಮಳ ತಾಣವೆನಿಸಬಹುದು. ವಾರಾಂತ್ಯದಲ್ಲಿ ನಗರ ಬಿಡುವವರು ಇದಕ್ಕೆ ಸಾಕ್ಷಿ. ಆದರೆ ಹಳ್ಳಿಯಲ್ಲಿ ಬಸವಳಿದ ಬದುಕು ಪೇಟೆಗೆ ಹೋದರೆ ಚಿಗುರೀತು ಎಂದು ಹಂಬಲಿಸಿ ರೈಲು ಹತ್ತುವವರೂ ಇದ್ದಾರೆ. ಮಾರುಕಟ್ಟೆಯ ಆರ್ಥಿಕತೆಯಲ್ಲಿ ಮನೆಮಾಡಿ ಬದುಕುವುದಕ್ಕೆ ಬೇಕಾದ ವಿದ್ಯೆ ಪಡೆದ ಹೊಸತಲೆಮಾರೇ ಸಿದ್ಧವಾಗಿದೆ. ಇಲ್ಲಿ ಶಬ್ದಕ್ಕೆ ನಾಚುವ ಪ್ರಶ್ನೆಯೇ ಇಲ್ಲ. ಧಾವಿಸುವ ಜನಪ್ರವಾಹಕ್ಕೆ ಪೇಟೆಯೇ ನಾಚಬೇಕು. ಇಲ್ಲಿ ಸದ್ದೇ ಇಂಪಾದ ಜೋಗುಳವಾಗುತ್ತದೆ.ಒಂದೇ ವಸ್ತು ಬದಲಾದ ಕಾಲದೇಶದಲ್ಲಿ ಕರ್ಕಶ-ಮಧುರ, ನಂಜು-ಅಮೃತ ಆಗಬಲ್ಲದು. ಪ್ರತಿ ಸಂಗತಿಯಲ್ಲೂ ವಿರುದ್ಧ ಆಯಾಮ ಇರುತ್ತವೆ. ಅದರೊಟ್ಟಿಗೆ ಬದುಕುವವರು ಅವನ್ನು ತಮಗನುವಾಗುವಂತೆ ಬದಲಿಸಿಕೊಳ್ಳುವರು. ಮರಳುಗಾಡು ಹಿಮಪ್ರದೇಶದ ಜನ -ಪ್ರಾಣಿ-ಗಿಡ-ಪಕ್ಷಿಗಳು ಮಾಡಿಕೊಂಡಿರುವ ಉಪಾಯಗಳೇ ಇದಕ್ಕೆ ಪುರಾವೆ. ದುರ್ಭರ ಪರಿಸರವು ಕಲಿಸುವ ಪಾಠಗಳಲ್ಲಿ, ವೈರುಧ್ಯಗಳನ್ನು ಪೋಷಕ ದ್ರವ್ಯವನ್ನಾಗಿ ಮಾಡಿಕೊಳ್ಳುವುದೂ ಒಂದು. ಅಕ್ಕನಿಗೆ ಬಹುಶಃ ಈ ದಿಟವೂ ಗೊತ್ತಿತ್ತು. ************************************ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಕಾವ್ಯಯಾನ

ಉಳಿವಿಗಾಗಿ ಹೋರಾಟ

ಕವಿತೆ ಉಳಿವಿಗಾಗಿ ಹೋರಾಟ ಲಕ್ಷ್ಮೀದೇವಿ ಕಮ್ಮಾರ ಇತಿಮಿತಿಗಳ ಪರದೆ ಹರಿದುಬಯಲಲಿ ಒಂದಾಗಲುನಿಂತಲ್ಲೇ ನಿಂತು ಕೋಳೆಯುವ ಮೋದಲುಸಾಗಬೇಕು ನಾವು ಮುಂದು ಮುಂದುಹೋಸ ದಾರಿ ಕಂಡುಕೊಂಡು ಅವರ ಜೀವನ ಅವರಿಗೆನಮ್ಮ ಜೀವನದ ದಾರಿ ನಮಗೆನಾವೆ ಸವಿಸಬೇಕುಹೊಟ್ಟೆ, ಬಟ್ಟೆಗೆ ಗಟ್ಟಿ ನೆಲೆ ಕಂಡುಕೊಳ್ಳಲುನಾವು ಹೆಣಗಾಡಬೇಕು ಹುಚ್ಚು ಮನದ ಹಂಬಲಕೊಯಾರ ಮೇಲಿನ ರೊಚ್ಚಿಗೊಭಂಡಾಯದ ಕಿಚ್ಚಿಗೊಹಾಕಿಕೊಂಡ ಕಗ್ಗಂಟುಗಳ ಬಿಚ್ಚುಕೊಂಡು ನಮ್ಮಳುವಿಗಾಗಿ ಗೊಡ್ಡುಸಂಪ್ರದಾಯ,ಮರ್ಯಾದೆಗಳ ಮಡುವಿನಿಂದ ಮೇಲೆ ಬಂದುಗಟ್ಟಿನೆಲೆ ಕಾಣಬೇಕುನಮ್ಮೋಳಗಿನ ಶಕ್ತಿ ಅನಾವರಣಗೊಳ್ಳಬೇಕು ಕತ್ತಲೆಯಲಿ ಭೂಗತ ವಾಗುವ ಬದಲುಬೆಳಕಿಗೆ ಬಿದ್ದು,ಬಾಳು ಬೆಳಗಬೇಕುಕತ್ತಲಲಿದ್ದವರಿಗೆ ದೀಪದುಡಗರೆನಾವು ನೀಡಬೇಕು *******************************

ಉಳಿವಿಗಾಗಿ ಹೋರಾಟ Read Post »

ಕಾವ್ಯಯಾನ

ನಿನ್ನ ಪ್ರೀತಿಗೆ ಅದರ ರೀತಿಗೆ

ಕವಿತೆ ನಿನ್ನ ಪ್ರೀತಿಗೆ ಅದರ ರೀತಿಗೆ ಜಯಶ್ರೀ ಭ.ಭಂಡಾರಿ. ಎಲ್ಲಿಯೋ ಇದ್ದ ನೀನುನನ್ನಲ್ಲಿ ಪ್ರೀತಿ ಮೂಡಿಸಿದೆನಿನ್ನ ತಿರಸ್ಕರಿಸುತಲಿದ್ದ ನಾಒಲವಿನ ಸಿರಿಯಾದೆ ನಿನ್ನಲಿ ಸೆರೆಯಾದೆ ನೀ ಕವಿಯಾದೆ ನಾ ಕವಿತೆಯಾದೆನೀ ಗೀತೆಯಾದೆ ನಾ ಭಾವವಾದೆನಿನ್ನ ರಾಗವಾದರೆ ನಾ ಪಲ್ಲವಿಯಾದೆನೀ ಹೆಜ್ಜೆಯಾದರೆ ನಾ ಗೆಜ್ಜೆಯಾದೆ ಬಿಟ್ಟಿರಲಾರದ ನೆರಳಾದೆವುಜೀವಕೆ ಜೀವ ನಂಟಾದೆವುಬಿಡಿಸಲಾರದ ಬಂಧಿಗಳಾದೆವುಎಂದೆಂದಿಗೂ ಒಲವ ಜೇನಾದೆವು ಮೌನಿ ಅವನಿಗೆ ಮಾತಾದೆನಗುವಿಗೆ ಅಮೃತಧಾರೆಯಾದೆಕಂಗಳಕಾಂತಿಗೆ ಜ್ಯೋತಿಯಾದೆಉಸಿರಿಗೆ ಚೈತನ್ಯದ ಚಿಲುಮೆಯಾದೆ ದೂರದಲಿ ಇರುವವ ಬಂಗಾರದಂತವಬಾಳದಾರಿಗೆ ಗುರಿ ತೋರಿದವಮನದನ್ನೆಗೆ ಕನಸತೋರಣವಾಗಿಸಿದವಬೆವರಗುಳಿಕೆನ್ನೆಯವ ನನ್ನವನವ ಕಣ್ಣಮಿಂಚಿಗೆ ಸೋತುಬಂದವಮುತ್ತುಗಳ ಮಾಲೆ ತೊಡಿಸಿದವಕೊರಳ ತುಂಬ ಜೇನಹರಿಸಿದವಹೆರಳಿಗೆ ಮಲ್ಲೆಮಾಲೆ ಮುಡಿಸಿದವ ಮರೆಯಲೆ ಹೆಂಗ ಮರೆತು ಇರಲಿ ಹೆಂಗಅವ ಏನಂದರೂ ನನಗ ಚಂದವೈಯಾರಿ ನೀ ಒಲಿದದ್ದು ಸೊಗಸೆಂದಮುನಸಿನರಾಯ ಬಿರುನುಡಿದರು ಆನಂದ. ಬಾಳದಾರಿಯಲಿ ಬಿಂಕ ಬಿಟ್ಟವಹೂಪಲ್ಲಕ್ಕಿಯಲಿ ಹೊತ್ತುತಂದವಅವನೆ ಎಲ್ಲ ಅವನಿಲ್ಲದೆ ಏನಿಲ್ಲಅವನೆ ನನ್ನ ನಲ್ಲ ನಗುವಿನಲೆ ಸೆಳೆವನಲ್ಲ *******************************

ನಿನ್ನ ಪ್ರೀತಿಗೆ ಅದರ ರೀತಿಗೆ Read Post »

ಕಾವ್ಯಯಾನ

ಅತೀತ

ಕವಿತೆ ಅತೀತ ಪವಿತ್ರಾ ಕಾಯುತಿಹರಲವರಲ್ಲಿನಿನ್ನಾಗಮಕೆ…ಇಹದ ಜಂಜಡದ ಜಾತ್ರೆಯಜಯಿಸದಲವರುಕೆಲವರದು ಪಲಾಯನಪರದ ಸುಖವನರಸಿ. ಸೋಲಿನಲು ಗೆಲುವುಗೆಲುವಿನಲಿ ನಗೆ ಬುಗ್ಗೆಎನಮೀರಿಪರೆ ಶಾಂತಿ ನೆಮ್ಮದಿಯಲಿಕೇಕೆ ಕಿಲಕಿಲ ಕೇಳರಿತ ನಗುವ ಮೊಗಸೊಗದ ಸೋಗೆಯಲೆ ಹಲವರಹೊಟ್ಟೆಗೆ ಕಿಚ್ಚಿಡುವ ಕಾಯಕವುಸಾಗುತಲಿ ಬೀಗುತಲಿ ಬಿಡದೆ ಎಲ್ಲರನೂ ತನ್ನಾಲಿಂಗನದತೆಕ್ಕೆಯೊಳು ಆಹುತಿಗೈವ ವಿಧಿಕೂಟಮಾಟ ತಪ್ಪಿಪರೆ ಅವರುಇವರಿಂದು ನಾಳೆ ಅವರುಎಲ್ಲರದೊಂದೊಂದು ನಿಗಧಿ ದಿನದಿನಪನಿಗೆ ಭೇದವಿರದೆ ಬಿಡುವಿರದೆನಡೆದುದೇ ಹಾದಿ. ಮಕ್ಕಳದು ಬೇಡ ಇರಲಿನ್ನಷ್ಟು ದಿನಈಗ ತಾನೆ ಮದುವೆನಡೆ ನಾಳೆ ಬರುವೆಹಂಬಲಿಪ ಯುವಕನೋರ್ವನ ಮನವಿಗೆಮಣಿವನೇ ಅವನುಧೈತ ಧೂತ ಹೆಸರೆಂದರೆ ಭಯ ಅದಕೇನೋ ಅದರನುಭವಸಾಧುವಾಗದು ನಿಲುಕದೂ ಬಣ್ಣನೆಗೆಗಳಿಗೆ ಗಳಿಗೆಗೆ ಕರೆಗಂಟೆನಿನಾದ ಎಚ್ಚರದ ಸಪ್ಪಳವೊಮಧುರವೊ ಆ ದಿನದ ಸಾಮಿಪ್ಯತನು ತೇಯ್ದು ಉಸಿರು ನಿಲುವ ದಿನ. ***********************************************

ಅತೀತ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ.-13 ಗಗನ ಚುಂಬಿ ಮತ್ತು ಲಿಫ್ಟು ಸರ್ಗೇಯಿ ಬೂಬ್ಕಾ ,ಎಂಬ ಸೋವಿಯತ್ ಯುನಿಯನ್ ನ ಹುಡುಗ ಉದ್ದ ಕೋಲು ಹಿಡಿದು ಪೋಲ್ ವಾಲ್ಟ್ ಹಾರಲು ಸಿದ್ಧನಾಗಿದ್ದ.  ಇದೊಂದು ಥರದ ಹೈ ಜಂಪ್ ಸ್ಪರ್ಧೆ. ಈ ಆಟದಲ್ಲಿ ಒಂದು ಕೋಲಿನ ಸಹಾಯದಿಂದ ಜಿಗಿಯಲಾಗುತ್ತೆ, ಆ ಕೋಲನ್ನು ಹಾರುಗೋಲು ಎಂದು ಕರೆಯೋಣ. ಹೈಜಂಪ್ ಮಾಡೋವಾಗ ಮೊದಲೇ ನಿರ್ಧರಿಸಿದ ಎತ್ತರದಲ್ಲಿ ನೆಲಕ್ಕೆ ಸಮಾನಾಂತರವಾಗಿ ಒಂದು ಕೋಲು ( ಅಳೆಗೋಲು) ಇಟ್ಟಿರುತ್ತಾರೆ. ಉದ್ದದ ಹಾರುಗೋಲು ಹಿಡಿದು, ಓಡುತ್ತಾ ಬಂದು, ಕೋಲನ್ನು ಹೈ ಜಂಪ್ ನ ಎತ್ತರದ ಅಳೆಗೋಲಿನ ಹತ್ತಿರ ಬಂದಾಗ ನೆಲಕ್ಕೂರಿ, ಹಾರುಕೋಲಿನ ಸಹಾಯದಿಂದ  ಎತ್ತರಕ್ಕೆ ಜಿಗಿದು,ಅಳೆಗೋಲಿನ ಆಚೆಗೆ ಧುಮುಕುವ ಆಟ ಅದು. ಸಾಧಾರಣವಾಗಿ, ಕೋಲನ್ನೆತ್ತಿ ಓಡಿ ಬರುವಾಗ,  ವೇಗದಿಂದ ಉತ್ಪನ್ನವಾದ  ಶಕ್ತಿಯನ್ನೆಲ್ಲಾ ಮೊಣಕಾಲು ಮತ್ತು ತೊಡೆಗಳ ಸ್ನಾಯುಗಳಿಗೆ ನೀಡಿ,  ದೇಹವನ್ನು ಆಕಾಶದತ್ತ ಚಿಮ್ಮಿಸಬೇಕು. ಅಷ್ಟಾದರೆ ಸಾಕೇ?. ಆಕಾಶದಲ್ಲಿದ್ದಾಗಲೇ ಊರಿದ ಏರುಕೋಲನ್ನು ಗಟ್ಟಿಯಾಗಿ ಹಿಡಿದು, ಹೈಜಂಪ್ ನ ಅಳೆಗೋಲಿನ ಹತ್ತಿರ ದೇಹ ತಲಪಿದಾಗ, ಎದೆಯುಬ್ಬಿಸಿ ಬಿಗಿದ ರಟ್ಟೆಯ ಸಹಾಯದಿಂದ ದೇಹವನ್ನು ನೆಲಕ್ಕೆ ಸಮಾನಾಂತರವಾಗಿ  (parallel) ಬ್ಯಾಲೆನ್ಸ್ ಮಾಡಿ ಅಳೆಗೋಲನ್ನು ಸ್ಪರ್ಷಿಸದೆಯೇ ಮುಂದಕ್ಕೆ ಹೊರಳಿ ಅಳೆಗೋಲನ್ನು ದಾಟಿ ಆಚೆಕಡೆಯ ಮರಳು ಹಾಸಿಗೆ ಮೇಲೆ ಬೀಳಬೇಕು. ಬುಬ್ಕಾ ಹಾರಲು ಆರಂಭದ ಬಿಂದುವಿನಲ್ಲಿ ನಿಂತಾಗ ಅಮ್ಮನ ಮಾತುಗಳು ಕಿವಿಯೊಳಗೆ ಅನುರಣಿಸುತ್ತಿದ್ದವು. ಶಾಲೆಯಲ್ಲಿದ್ದಾಗ ಹೈಜಂಪ್ ಸ್ಪರ್ಧೆಯಲ್ಲಿ ಸೋತಾಗ ಆಕೆ ಹೇಳಿದ ಮಾತುಗಳವು. ” ಮಗನೇ! ನೀನು ಸೋತಿಲ್ಲ! ನೀನು ಜಿಗಿದ ಮಟ್ಟ ಕಡಿಮೆಯಿತ್ತಷ್ಟೇ..ಜಿಗಿಯುವ ಎತ್ತರವನ್ನು ದಿನಕ್ಕೆ ಕೂದಲೆಳೆಯಷ್ಟೆತ್ತರ ಹೆಚ್ಚು ಮಾಡುತ್ತಾ ಹೋಗು! ಜಗತ್ತು ಕಾಯುತ್ತೆ ನಿನ್ನ ಗೆಲುವಿಗಾಗಿ!” ಹಾಗೆ ಎತ್ತರದಿಂದ ಎತ್ತರಕ್ಕೆ ಹಾರಿದ ಹುಡುಗ ಬುಬ್ಕಾ, ತನ್ನ ಮೊದಲ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಜಿಗಿಯಲು ನಿಂತಿದ್ದ. ಕ್ರಿ.ಶ. 1983 ನೇ ಇಸವಿ, ಹೆಲ್ಸಿಂಕಿಯಲ್ಲಿ ನಡೆದ ಸ್ಪರ್ಧೆ ಅದು. ಸ್ಟಾರ್ಟ್!… ಹಾರಲು ಸಿಕ್ಕಿದ ಗ್ರೀನ್ ಸಿಗ್ನಲ್! ಬ್ಯುಗಿಲ್ ಮೊಳಗಿತ್ತು! ಬೂಬ್ಕಾ ಹಾರು ಕೋಲನ್ನು ಎತ್ತಿ ಹಿಡಿದು ಓಡ ತೊಡಗಿದ. ಆ ಹೆಜ್ಜೆಗಳಲ್ಲಿ ಚಿರತೆಯ ಧೃಡತೆ. ಕಣ್ಣುಗಳು ಹಾರಬೇಕಾದ ಅಳೆಗೋಲನ್ನು ನೋಟದಲ್ಲೇ ಸೆರೆಹಿಡಿದು ಗುರಿ ಸಮೀಪಿಸಿದ ಬೂಬ್ಕಾ.  ಕೋಲನ್ನು ನೆಲಕ್ಕೂರಿ ನೆಲಕ್ಕೆ ಎರಡೂಪಾದಗಳ ಸಂಯೋಜಿತ ಜಿಗಿತುಳಿತಕ್ಕೆ ರಾಕೆಟ್ಟಿನಂತೆ ಆತನ ದೇಹ ಆಗಸಕ್ಕೆ ಚಿಮ್ಮಿತ್ತು. ಬೂಬ್ಕಾ ಕೊನೆಯ ಕ್ಷಣದಲ್ಲಿ ಒಂದು ಅದ್ಭುತ ತಂತ್ರ ಉಪಯೋಗಿಸಿದ್ದು ಇಂದಿಗೂ ಮನೆಮಾತು. ಸಾಧಾರಣವಾಗಿ ನೆಲಕ್ಕೆ ದೇಹದುದ್ದವನ್ನು ಸಮಾನಾಂತರ ಮಾಡಿ ಅಳೆಗೋಲಿನ ಅತ್ತಕಡೆ ಹೊರಳುವ ಬದಲು,ಈ ಕನಸುಗಾರ, ಬಿದಿರ ಕೋಲಿನ ತುದಿಯಲ್ಲಿ ಅಂಗೈ ಊರಿ, ತಲೆ ಕೆಳಗೆ ಕಾಲು ಮೇಲೆ ಮಾಡಿದ ಪೋಸ್ಚರ್ ನಲ್ಲಿ ರಟ್ಟೆಯಲ್ಲಿ ಇದ್ದ ಅಷ್ಟೂ ಬಲ ಸೇರಿಸಿ ದೇಹವನ್ನು ಎರಡನೇ ಬಾರಿ ಎತ್ತರಕ್ಕೆ ಚಿಮ್ಮಿಸಿದ್ದ. ಅಂದು ಆತ ಹಾರಿದ ಎತ್ತರ ವಿಶ್ವ ದಾಖಲೆಯನ್ನು ಮುರಿದು ಹೊಸತು ಬರೆದಿತ್ತು. ಆ ನಂತರದ ಎರಡು ದಶಕಗಳಲ್ಲಿ ಆತ 34 ಬಾರಿ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದ!. ಆರು ಬಾರಿ ವಿಶ್ವ ಚಾಂಪಿಯನ್, ಒಂದು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಆತನ ಕೊರಳೇರಿದ್ದವು ಮನುಷ್ಯ ಚೇತನವೇ ಊರ್ಧ್ವ ಮುಖಿ. ಸಾಧನೆಯ ಶಿಖರದ ಎತ್ತರ ಏರಿಸುತ್ತಲೇ ಇರುವ ಹಟಮಾರಿ ಪ್ರಜ್ಞೆ. ಹೀಗೇ ಏರುವಾಗ, ಏರುವ ವಿಧಾನ, ಏರುವ ಎತ್ತರ, ಗುರಿ, ಇವುಗಳ ಜತೆಗೆ,  ಬದುಕಿಗೆ ಮತ್ತು ಸಮಾಜಕ್ಕೆ, ಈ ಚಾರಣ ಧಮಾತ್ಮಕವೇ, ಋಣಾತ್ಮಕವೇ ಎಂಬ ಜಿಜ್ಞಾಸೆ ಹುಟ್ಟುತ್ತೆ. ದಿನಕ್ಕೊಂದು ದಾಖಲೆ ಮಾಡುವ, ಮರುದಿನ ಇನ್ನಾರೋ ಮುರಿಯುವ ಓಟ. ವಿಜ್ಞಾನ, ತಂತ್ರಜ್ಞಾನವೂ ಅಷ್ಟೇ. ಗಗನಕ್ಕೆ ಸವಾಲೆಸೆಯುವ ಗಗನ ಚುಂಬೀ ಕಟ್ಟಡಗಳು, ಸಮುದ್ರದಾಳದಲ್ಲಿ ಓಡುವ ರೈಲು, ಜಾಣ ಫೋನ್ ಮೂಲಕ ಭೂಮಿಯ ಆ ಭಾಗದ ಅಮೆರಿಕಾದ ಮೊಮ್ಮಗುವಿಗೆ  ಹೈದರಾಬಾದ್ ನಿಂದ ಹ್ಯಾಪ್ಪೀ ಬರ್ತ್ ಡೇ ಹಾಡುವ   ಅಜ್ಜಿ, ಇತ್ಯಾದಿ ನಮ್ಮ ವಿಕಸನ? ದ ಕಹಾನಿಗಳು. ಅನವರತ ಪ್ರಯತ್ನದಲ್ಲಿ ಫಲಿಸಿದ ಅವಿಷ್ಕಾರಗಳು ನಮ್ಮನ್ನು ಮಂಗಳನ ಅಂಗಳಕ್ಕೆ ತಲಪಿಸಿದೆ. ಅದೇ ಹೊತ್ತಿಗೆ ಓಟದಲ್ಲಿ ನೋಟ ನೆಟ್ಟ ಕನ್ನಡಕದ ಹಿಂದಿನ ಕಣ್ಣುಗಳಿಗೆ ಪಕ್ಕದಲ್ಲಿ ಹಸಿವಿನಿಂದ ಅಳುವ ಮಗುವಿನ ಮುಖ ಕಾಣಿಸುತ್ತಿಲ್ಲವೇ?. ವೃದ್ಧಾಶ್ರಮದಲ್ಲಿ ಹಣ ಕಟ್ಟಿ ಬಿಟ್ಟು ಬಂದ ವಯಸ್ಸಾದ ತಂದೆತಾಯಂದಿರ ಒಬ್ಬಂಟಿತನದಿಂದ ಸುಕ್ಕಿದ ಕೆನ್ನೆಗಳಲ್ಲಿ ಜಾರಿ, ಆರಿ ಹೋಗುವ ಕಣ್ಣೀರ ಬಿಂದುಗಳ ಅರಿವಿಲ್ಲವೇ?. ಹೀಗೇ ಬನ್ನಿ, ಇಲ್ಲಿದೆ ಸುಬ್ರಾಯ ಚೊಕ್ಕಾಡಿಯವರ ಕವಿತೆ. ***      ***       *** ಲಿಫ್ಟು ಏರುತ್ತ ಹೋದರು ಗಗನ ಚುಂಬಿಯ ತುದಿಗೆ ನೆಲದ ಸಂಪರ್ಕವನೆ ಕಡಿದುಕೊಂಡು ಪಿರೆಮಿಡ್ಡಿನಾಕೃತಿಯ ತುದಿಯಲೇಕಾಂತದಲಿ ತನ್ನ ತಾನೇ ಧ್ಯಾನ ಮಾಡಿಕೊಂಡು. ಯಾವುದೇ ಗಜಿಬಿಜಿಯ ಸದ್ದುಗದ್ದಲವಿಲ್ಲ ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ ಸಂಬಂಧಗಳ ಬಂಧ ಕಡಿದುಮುನ್ನಡೆದಾಯ್ತು ಸ್ವರ್ಗ ಸೀಮೆಗೆ ಈಗ ಮೆಟ್ಟಿಲೊಂದೆ. ಹಳೆಯ ಮೌಲ್ಯಗಳೆಲ್ಲ ಅಪಮೌಲ್ಯಗೊಂಡೀಗ ತಳದಲ್ಲಿ ಬಿದ್ದಿವೆ ಅನಾಥವಾಗಿ ತಾನು ತನ್ನದು ಎಂಬ ಸಸಿಯ ಊರಿದ್ದಾಯ್ತು ಕುಂಡದಲಿ ಇಲ್ಲಿ ತುದಿಹಂತದಲ್ಲಿ. ಒಂದೊಂದೆ ಮೆಟ್ಟಿಲನು ಹತ್ತಿ ಬಂದರು ಕೂಡಾ ಬೇಡ ಅವು ಇನ್ನು ಲಿಫ್ಟೊಂದೆ ಸಾಕು ನಡೆದ ದಾರಿಯ ಮತ್ತೆ ನೋಡದೇ ನಡೆವವಗೆ ಕಾಂಚಾಣದೇಕಾಂತವಷ್ಟೆ ಸಾಕು. ಅರಿವಿರದ ಯಾವುದೋ ಬಂದು ‌ಹೊಡೆದರೆ ಢಿಕ್ಕಿ ತುದಿಯಲುಗಿ,ಒಂದೊಂದೆ ಹಂತ ಕುಸಿದು ಎದ್ದ ಬೆಂಕಿಯ ನಡುವೆ,ಕೆಟ್ಟಿರುವ ಲಿಫ್ಟೊಂದು ನಿಂತಿದೆ ಅನಾಥ–ನೆಲಬಾನ ನಡುವೆ. ***      ***       *** ಕವಿತೆಯ ಹೆಸರು ಲಿಫ್ಟು. ಈ ಪದ ಆಂಗ್ಲಪದ. ಮೆಟ್ಟಿಲು ಹತ್ತುವ ಬದಲು, ನಿಂತಲ್ಲಿಯೇ ಮೇಲೆತ್ತುವ ಯಂತ್ರ! ಎಂದಾಗ ಇದು ನಾಮ ಪದ. ಮೇಲಕ್ಕೆತ್ತುವ ಕ್ತಿಯಾಸೂಚಕವಾಗಿ ಇದು ಕ್ರಿಯಾ ಪದವೂ ಹೌದು. ತಂತ್ರಜ್ಞಾನ, ಮನುಷ್ಯನ ಹತ್ತುವ ಇಳಿಯಿವ, ತೊಳೆಯುವ, ನಡೆಯುವ, ಓಡುವ ಇತ್ಯಾದಿ ಹಲವು ಕ್ತಿಯೆಗಳನ್ನು ಸುಲಭ ಮಾಡಲು, ಯಂತ್ರಾವಿಷ್ಕಾರ ಮಾಡಿದೆ. ಎಷ್ಟೆಂದರೆ, ಯಂತ್ರಗಳಿಲ್ಲದೆ ಬದುಕು ಅಸಾಧ್ಯ ಎನ್ನುವಷ್ಟು. ಮನುಷ್ಯನ, ವಿಕಸನದ ಹಲವು ಘಟ್ಟಗಳನ್ನು ವರ್ಗೀಕರಿಸುವಾಗ, ಶಿಲಾಯುಗ, ಲೋಹಯುಗ, ಹೀಗೆಯೇ ಮುಂದುವರೆದರೆ, ಈ ಯಂತ್ರಯುಗವೂ ಒಂದು ಮಹಾ ಲಂಘನವೇ. ಹಾಗಾಗಿ, ಈ ಕವಿತೆಯ ಶೀರ್ಷಿಕೆ, ಯಂತ್ರಯುಗದ ಅಷ್ಟೂ ಅಂಶಗಳ ಅಭಿವ್ಯಕ್ತಿ. ಕವಿತೆ ಓದುತ್ತಾ ಹೋದಂತೆ, ಈ ಶೀರ್ಷಿಕೆ, ಯಂತ್ರಯುಗದ ಮೊದಲು ಮತ್ತು ನಂತರದ ಸಾಮಾಜಿಕ ಪ್ರಕ್ರಿಯೆಗಳ ಮತ್ತು ಸಮಗ್ರಪ್ರಜ್ಞೆಗಳ ತಾಕಲಾಟವನ್ನೂ ಚಿತ್ರಿಸುತ್ತೆ. “ಏರುತ್ತ ಹೋದರು ಗಗನ ಚುಂಬಿಯ ತುದಿಗೆ ನೆಲದ ಸಂಪರ್ಕವನೆ ಕಡಿದುಕೊಂಡು ಪಿರೆಮಿಡ್ಡಿನಾಕೃತಿಯ ತುದಿಯಲೇಕಾಂತದಲಿ ತನ್ನ ತಾನೇ ಧ್ಯಾನ ಮಾಡಿಕೊಂಡು.” ಮನುಷ್ಯ ತನ್ನ ಪ್ರಯತ್ನದಿಂದ ಏರುತ್ತಲೇ ಹೋದ. ಗಗನ ಚುಂಬಿ ಎನ್ನುವುದು ಆಗಸಕ್ಕೆ ಮುತ್ತಿಡುವ ಎತ್ತರದ ಕಟ್ಟಡ. ಹತ್ತಲು ಉಪಯೋಗಿಸಿದ್ದು ಲಿಫ್ಟ್ ಎಂಬ ಯಂತ್ರ. ಎರುತ್ತಾ ಹೋದಂತೆ, ನೆಲ ಕಾಣಿಸಲ್ಲ. ನೆಲ ಎಂಬುದು, ಮೂಲ, ಆಧಾರಕ್ಕೆ ಪ್ರತಿಮೆ. ಏರುತ್ತಾ ಹೋದಂತೆ ತನ್ನ ಅಡಿಪಾಯವೇ ಮರೆತುಹೋಗಿ,ಅದರ ಸಂಪರ್ಕ ಕಡಿದುಹೋಯಿತು. ಗಗನಚುಂಬಿ ಕಟ್ಟಡದ ತುದಿಯಲ್ಲಿ ಪಿರಮಿಡ್ ಆಕೃತಿ ಇದೆ. ಈ ಪದವನ್ನು ಕವಿ ಉಪಯೋಗಿಸಿ ಕವಿತೆಗೆ ಅಚಾನಕ್ ಆಗಿ ಹೊಸ ದಿಕ್ಕು ಕೊಡುತ್ತಾರೆ. ಈಜಿಪ್ಟ್‌ನಲ್ಲಿ ಪಿರಮಿಡ್ ಒಳಗೆ ಮೃತದೇಹವನ್ನು ” ಮಮ್ಮಿ” ಮಾಡಿ ಸಮಾಧಿ ಮಾಡುತ್ತಿದ್ದರು. ಅಂದರೆ ಈ ಗಗನಚುಂಬಿ ಕಟ್ಟಡದ ತುದಿಯಲ್ಲಿ ಪಿರಮಿಡ್ ಇದ್ದರೆ, ಈ ಕಟ್ಟಡದ ನೆಲತಲದಿಂದ ಹತ್ತಿದ್ದು,ಬದುಕಿನ ಆದಿ ಮತ್ತು ಪಿರಮಿಡ್ ನಲ್ಲಿ, ಏಕಾಂತದಲ್ಲಿ, ತನ್ನ ತಾನೇ ಏಕಾಂತದಲ್ಲಿ ಸಮಾಧಿಯಾದ ಬದುಕಿನ ಅಂತ್ಯವೇ. ಹತ್ತುತ್ತಾ, ಕೊನೆಗೆ ನೆಲದ ಸಂಪರ್ಕ ಕಸಿದುಕೊಳ್ಳುವುದು ಎಂದರೆ, ಭೌತಿಕ ಜಗತ್ತಿನ ಸಂಪರ್ಕವಾದ,ದೇಹ ತೊರೆಯುವ ಕ್ರಿಯೆಯೇ?. ಪಿರಮಿಡ್ ಆಕೃತಿಯೊಳಗೆ ಜೀವಿಸುವ ದೇಹ, ಜೀವವಿದ್ದೂ ಸತ್ತಂತೆ,ಎಂಬ ಅರ್ಥವನ್ನೂ ಈ ಸಾಲುಗಳು ಪಡೆಯಬಹುದು ತಾನು ಏರಲು ಆರಂಭಿಸಿದ ಮೂಲ ಆಧಾರ, ತಂದೆ,ತಾಯಿ, ಶಾಲೆ,ಗುರುಗಳು, ಸಮಾಜ ಇವುಗಳ ಸೂತ್ರಗಳನ್ನು ಕಡಿದುಕೊಂಡು, ಏರಿದ ದಾರಿಯನ್ನು ಮರೆತು ಡಿಸ್ಕನೆಕ್ಟ್ ಆಗಿ ಬದುಕುವ ಜೀವನ, ಜೀವಮುಖೀ ಜೀವನವೇ? ಅಲ್ಲಾ,ಪಿರಮಿಡ್ ಒಳಗಿನ “ಮಮ್ಮಿ”   ಬದುಕೇ?. ಇನ್ನೊಂದು ರೀತಿ ಅರ್ಥೈಸುವುದಿದ್ದರೆ, ಭೌತಿಕ ಬದುಕನ್ನು ತ್ಯಜಿಸಿ, ಧ್ಯಾನಮಾರ್ಗದತ್ತ ಏರಿದ ಸಂತನ ಅನುಭವಕ್ಕೆ, ತುದಿಯಲೇಕಾಂತದಲಿ, ಧ್ಯಾನಕ್ಕೆ ಅಣಿಯಾಗುವ ಪ್ರಯತ್ನ ಇದು. ಈ ಅರ್ಥಕ್ಕೆ ಕವಿತೆಯ ಉಳಿದ ಸಾಲುಗಳ ಸಮರ್ಥನೆ ದೊರಕುವುದಿಲ್ಲ. “ಯಾವುದೇ ಗಜಿಬಿಜಿಯ ಸದ್ದುಗದ್ದಲವಿಲ್ಲ ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ ಸಂಬಂಧಗಳ ಬಂಧ ಕಡಿದು ಮುನ್ನಡೆದಾಯ್ತು ಸ್ವರ್ಗ ಸೀಮೆಗೆ ಈಗ ಮೆಟ್ಟಿಲೊಂದೆ.” ಈ ಗಗನಚುಂಬಿಯ ಮೇಲೆ ನೆಲದಲ್ಲಿ ನಡೆಯುವ ಅಷ್ಟೂ ಸಮಾಜಮುಖೀ ಶಬ್ಧಗಳು ಇಲ್ಲ. ಸ್ಪಂದನೆಯಿಲ್ಲ, ಬಂಧು ಬಳಗಗಳ,ಸಮಾಜದ ಕಟ್ಟುಪಾಡುಗಳಿಲ್ಲ. ಸಂಬಂಧಗಳ ಕಡಿದು ಮುನ್ನಡೆದಾಯ್ತು ಅಂತ ಕವಿವಾಣಿ. ಸಂಬಂಧ ಅದರಷ್ಟಕ್ಕೇ ಕಡಿದು ಹೋದದ್ದಲ್ಲ. ಎತ್ತರಕ್ಕೆ ಏರುವ ಭರದಲ್ಲಿ,ಆರೋಹಿಯೇ ಕಡಿದದ್ದು. ಇಲ್ಲೊಂದು ಧರ್ಮ ಸೂಕ್ಷ್ಮ ಇದೆ!. ಸಂಬಂಧಗಳ ಬಂಧ ಕಡಿಯದಿದ್ದರೆ ಹತ್ತಲು ಬಹುಷಃ ಕಷ್ಟವಾಗುತ್ತಿತ್ತು. ಆ ಸೂತ್ರಗಳು ಕೈ ಕಾಲುಗಳನ್ನು ಕಟ್ಟಿ ಹಾಕುತ್ತಿದ್ದವು. ಬಿಂದಾಸ್ ಆಗಿ ಅಷ್ಟೆತ್ತರ ಏರಲು ಸಂಪೂರ್ಣ ಸ್ವಾತಂತ್ರ್ಯ ಬೇಕಿತ್ತು. ಆದರೆ ಪ್ರಶ್ನೆ, ಏರಿದ ಎತ್ತರಕ್ಕೆ ಅರ್ಥ ಇದೆಯೇ?. ಬಹುಜನಬಳಗದ ಬಂಧನದಿಂದ, ಕಸಿದುಕೊಂಡು ತನ್ನದೇ ಆದ ಚಿಕ್ಕ ಕುಟುಂಬಕ್ಕೆ ಸೀಮಿತವಾದ, ತಾನು,ತನ್ನ ಸಾಧನೆ ಮತ್ತು ತನ್ನ ಬದುಕಿನ ಮಿತಿಯೊಳಗೆ ಸ್ವರ್ಗ ಹುಡುಕುವ ಪ್ರಯತ್ನ ಇದು. “ಹಳೆಯ ಮೌಲ್ಯಗಳೆಲ್ಲ ಅಪಮೌಲ್ಯಗೊಂಡೀಗ ತಳದಲ್ಲಿ ಬಿದ್ದಿವೆ ಅನಾಥವಾಗಿ ತಾನು ತನ್ನದು ಎಂಬ ಸಸಿಯ ಊರಿದ್ದಾಯ್ತು ಕುಂಡದಲಿ ಇಲ್ಲಿ ತುದಿಹಂತದಲ್ಲಿ” ಈ ಗಗನಚುಂಬಿ ಕಟ್ಟಡದ ತುದಿಗೆ ತಲಪಿದ ವ್ಯಕ್ತಿಗೆ, ಕಟ್ಟಡದ ತಳಪಾಯವಾದ ಹಳೆಯ ಮೌಲ್ಯಗಳು ಅಪಮೌಲ್ಯವಾಗಿವೆ. ಇಲ್ಲಿ ಅಪಮೌಲ್ಯ ಎಂಬ ಪದ ವ್ಯಾಪಾರೀ ಜಗತ್ತಿನ ಕರೆನ್ಸಿಯನ್ನು ಡಿವೇಲ್ಯುವೇಷನ್ ಅನ್ನೋ ಶಬ್ಧ. ಲಿಫ್ಟ್ ಎಂಬ ಯಾಂತ್ರಿಕ ವ್ಯವಸ್ಥೆಯಲ್ಲಿ ಮೇಲೇರುತ್ತಾ ಹೋದಂತೆ, ಕುರುಡು ಕಾಂಚಾಣ ಮುಖ್ಯವಾಗಿ, ಮೌಲ್ಯಗಳು ತಳದಲ್ಲಿ ಬಿದ್ದಿವೆ ಅನಾಥವಾಗಿ. ತುದಿಯಲ್ಲಿ ತಾನು,ತನ್ನದು ಎಂಬ ಸ್ವಾರ್ಥವೇ ಮುಖ್ಯವಾಗಿ, ಆರ್ಟಿಫಿಶಿಯಲ್ ಆದ ಹಸಿರಿನ ವ್ಯವಸ್ಥೆ, ಹೂ ಕುಂಡದಲ್ಲಿ ಸಸಿ ಊರಿ ನಿರ್ಮಿಸಿ, ಅದನ್ನೇ ನೆಲದ ಮರಗಳಾಗಿ ಕಾಣುವ ಅವಸ್ಥೆ ಇದು. ಕವಿ ರೂಪಕವಾಗಿ,’ತಾನು ತನ್ನದು ಎಂಬ ಸಸಿ’ ಎನ್ನುತ್ತಾರೆ!. ತುದಿಹಂತದಲ್ಲಿ ಅಂತ ಕವಿ ಸೂಕ್ಷ್ಮವಾಗಿ ಹೇಳುವುದೇನು?. ಇಂತಹ ಬೆಳವಣಿಗೆಗೆ ಅಂತ್ಯವಿದೆ. ಇಂತಹ ಬೆಳವಣಿಗೆ ಕೊನೆಯಾಗುವುದು,ತಾನು ಮತ್ತು ತನ್ನದು ಎಂಬ “ಸಿಂಗ್ಯುಲಾರಿಟಿ” ಯಲ್ಲಿ ಎಂದೇ? “ಒಂದೊಂದೆ ಮೆಟ್ಟಿಲನು ಹತ್ತಿ ಬಂದರು ಕೂಡಾ ಬೇಡ ಅವು ಇನ್ನು ಲಿಫ್ಟೊಂದೆ ಸಾಕು ನಡೆದ ದಾರಿಯ ಮತ್ತೆ ನೋಡದೇ ನಡೆವವಗೆ ಕಾಂಚಾಣದೇಕಾಂತವಷ್ಟೆ ಸಾಕು.” ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿ ಗಗನ ಚುಂಬಿ ಎತ್ತರಕ್ಕೆ ಏರಿದರೂ ಆ ಹತ್ತಿದ ದಾರಿ ಮರೆತು, ಯಾಂತ್ರೀಕೃತ, ಯಾಂತ್ರಿಕ ಬದುಕಿಗೆ ಮನುಷ್ಯ ಒಗ್ಗಿಕೊಳ್ಳುವ, ಒಪ್ಪಿಸಿಕೊಳ್ಳುವ, ಅವಸ್ಥೆಯ ಚಿತ್ರಣ. ಕಾಂಚಾಣದೇಕಾಂತ! ಇದಕ್ಕೆ ವಿವರಣೆ ಬೇಕೇ?! “ಅರಿವಿರದ ಯಾವುದೋ ಬಂದು ‌ಹೊಡೆದರೆ ಢಿಕ್ಕಿ ತುದಿಯಲುಗಿ,ಒಂದೊಂದೆ ಹಂತ ಕುಸಿದು ಎದ್ದ ಬೆಂಕಿಯ ನಡುವೆ,ಕೆಟ್ಟಿರುವ ಲಿಫ್ಟೊಂದು ನಿಂತಿದೆ ಅನಾಥ–ನೆಲಬಾನ ನಡುವೆ.” ಈ ಪ್ಯಾರಾ ಓದುವಾಗ, ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ನ ಗಗನಚುಂಬಿ ಅವಳಿ ಟವರ್ ಮೇಲೆ ಆದ ಅಟ್ಯಾಕ್ ನ ನೆನಪು ಬರುತ್ತೆ. ಗಗನಚುಂಬಿ ಕಟ್ಟಡ ಅದರ ಎತ್ತರದಲ್ಲಿ ಏರಿ ವಾಸವಾದವರು ಒಪ್ಪಲಿ ಬಿಡಲಿ, ಅದು ನಿಂತಿರುವುದಂತೂ ನೆಲದ ಮೇಲೆ. ಅರಿವಿರದ ಯಾವುದೇ ಹೊಡೆತಕ್ಕೆ, ಕಟ್ಟಡ ತುದಿಯಲುಗಿ ಕುಸಿಯುತ್ತೆ. ಈ ಅರಿವಿರದ ಹೊಡೆತ, ಭೂಕಂಪವೂ ಆಗಬಹುದು. ಕುಸಿಯುವುದೂ ಒಂದು ಕ್ರಾಂತಿಯೇ. ಆ ಹಠಾತ್ ಬದಲಾವಣೆಯ

Read Post »

ಇತರೆ, ಜೀವನ

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ

ಅನುಭವ ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ             ಪ್ರತಿ ಡಿಸೆಂಬರ್ ೨೨ಕ್ಕೆ ನಮ್ಮ ಶಾಲೆಯ ವಾರ್ಷಿಕೋತ್ಸವ, ಯಾವಾಗಲು ವಾರ್ಷಿಕೋತ್ಸವ ಮುಗಿದ ಬಳಿಕ ನಮಗೆ ಕ್ರಿಸ್ಮಸ್ರಜೆ. ರಜೆ ಕಳೆಯಲೆಂದೇ ಅಜ್ಜನ ಮನೆಗೆ ಹೋದೆವು. ನಮ್ಮ ಹಾಗೆ ಕ್ರಿಸ್ಮಸ್ ರಜೆ ಕಳೆಯಲು ನಮ್ಮಜ್ಜನ ದಾಯಾದಿಗಳ ಮನೆಮಕ್ಕಳೂ ಬಂದಿದ್ದರು. ಒಂದು ರೀತಿ ಮಕ್ಕಳ ಸೈನ್ಯವೇ ಸರಿ. ನಿಮ್ಮ ಶಾಲೆ ಹೇಗೆ? ನಿಮ್ಮ ಶಾಲೆಯಲ್ಲಿ ಏನೇನು ಕಲಿಸುತ್ತಾರೆ? ನಿಮಗೆ ಯಾವ ಟೀಚರ್ ಇಷ್ಟ? ಯಾರು ಹೇಗೆ ಬಯ್ಯುತ್ತಾರೆ? ಇತ್ಯಾದಿಗಳ ಚರ್ಚೆ ಮಾಡುತ್ತಿದ್ದೆವು. ರಜೆಗೆಂದು ಹೋದ ದಿನ ನಮಗೆ ಅಲ್ಲಿ ಭರ್ಜರಿ ಸ್ವಾಗತ. ನಮ್ಮಜ್ಜ ಅಜ್ಜಿಯಂತೂ ಬಸ್ ಬಳಿಯೇ ಬಂದು ನಮ್ಮ ಹೆಗಲ ಮೇಲೆ ಕೈಹಾಕಿ, ತಲೆನೇವರಿಸಿ ಕರೆದುಕೊಂಡು ಹೋದರು. ಇಂದು ನೆನಪಿಸಿಕೊಂಡರೆ ಕಣ್ಣಂಚಿನಲ್ಲಿ ನೀರು ತುಳುಕುತ್ತದೆ. ಅಣ್ಣನ ಮಕ್ಕಳು ಬರುತ್ತಾರೆಂಬ ಖುಷಿಯಲ್ಲಿ ನಮ್ಮತ್ತೆ (ಆಗಿನ್ನು ಲಗ್ನವಾಗಿರಲಿಲ್ಲ) ಗಸಗಸೆ ಪಾಯಸ ಮಾಡಿ ತಣಿಸಿ ನಮಗಾಗಿ ಕಾಯುತ್ತಿದ್ದರು. ಭರ್ಜರಿ ತಿಂಡಿತಿನಿಸುಗಳು ಅವುಗಳನ್ನು ತಿಂದ ನಮಗೆ ಊಟ ಬೇಡ ಅನ್ನಿಸಿ ಹಾಗೆ ಮಲಗಿಕೊಂಡೆವು. ನನ್ನಜ್ಜಿ ನಾವೆಲ್ಲ ಮಲಗಿದ ಮೇಲೆ ಬಂದು ಸರಿಯಾಗಿ ಹೊದಿಸಿ ತಾನೂ ಪಕ್ಕದಲ್ಲೆ ಕುಳಿತುಕೊಂಡು ಹೂ ಕಟ್ಟುತ್ತಾ “ಇವತ್ತೇನೊ ಹೊಸದು ಏನು ಗಲಾಟೆಯಿಲ್ಲ, ನಾಳೆಯಿಂದ ಇವರ ಜಗಳ ಬಿಡಿಸುವುದೇ ನನಗೊಂದು ಕೆಲಸ” ಎಂದರು. ಅದಕ್ಕೆ ಪ್ರತಿಯಾಗಿ “ಅವರು ಹೇಳಿದ್ದಕ್ಕೆಲ್ಲ ನಾನು ಹೂ ಅನ್ನಬೇಕು ಅದೊಂದು ನನಗೆ ತಾಪತ್ರಯ” ಎಂದು ಅತ್ತೆ ನಗುತ್ತಿದ್ದರು.              ಡಿಸೆಂಬರ್ ಅಂದರೆ ಚಳಿಗಾಲ ಜೊತೆಗೆ ಸುಗ್ಗಿಯ ಕಾಲವೂ ಹೌದು, ಭತ್ತ ಕೊಯ್ದು ಹೊರೆ ಕಟ್ಟಿ ಬಣವೆಗಳನ್ನು ಒಟ್ಟುತ್ತಿದ್ದ ಸೀಸನ್ ಅದು. ನಮಗೆ ಅದನ್ನು ಹೇಗೆ ಜೋಡಿಸುತ್ತಾರೆ ಎಂಬ ಕುತೂಹಲ, ಅಜ್ಜನ ಬಳಿಗೆ ಹೋಗಿ ಮೆಲ್ಲನೆ “ನಾವೂ ಬರ್ತೀವಿ ನಿಮ್ಮ ಜೊತೆಗೆ ಗದ್ದೆಹತ್ರ” ಅಂದೆವು ಒಂದೇ ಬಾರಿಗೆ “ಬನ್ನಿ ಅದಕ್ಕೇನಂತೆ” ಎಂದರು. ಆದರೆ ಅಜ್ಜಿ “ನೀವುಗಳು ಬಂದು ಅಲ್ಲೇನು ಮಾಡ್ತೀರಿ ಮನೆಲ್ಲೇ ಇರಿ” ಎಂದರು. ಪುರುಸೊತ್ತಿಲ್ಲದ ಕೆಲಸದ ನಡುವೆ ಈ ಮಕ್ಕಳ ತುಂಟಾಟ ತಡೆಯಲಾಗದು ಎಂಬ ಭಾವ ಆಕೆಯದ್ದು. ನಾವು ಅವರ ಬಳಿ ಇವರ ಬಳಿ ಹೇಳಿಸಿ ಶಿಫಾರಸ್ಸು ಮಾಡಿಸಿ ಕಡೆಗೆ ಗದ್ದೆ ಬಯಲಿಗೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಹೋಗುವಾಗ ನಮ್ಮ ಕೂಗಾಟ ಸ್ವಲ್ಪ ಹೆಚ್ಚೇ ಇತ್ತು ಅಜ್ಜಿ  ಆ ಕೂಗಾಟವನ್ನು ತನ್ನ ಕಣ್ಣುಗಳಿಂದಲೇ ನಿಯಂತ್ರಿಸುತ್ತಿದ್ದರು. ಭತ್ತವನ್ನು ಕಟಾವು ಮಾಡಿದ್ದರಿಂದ ಆ ಗದ್ದೆ ಬಯಲಿನಲ್ಲಿ ಬರಿಗಾಲಲ್ಲಿ ಹೋಗಲಿ ಚಪ್ಪಲಿ ಧರಿಸಿದ ಕಾಲುಗಳಿಂದಲೂ ಆಗುತ್ತಿರಲಿಲ್ಲ.             ಸ್ವಲ್ಪ ಹೊತ್ತು ನೋಡಿ ಪಕ್ಕದವರ ತೋಟಕ್ಕೆ ನಮ್ಮ ಪ್ರವೇಶವಾಯಿತು. ರಜೆಗೆ ಮಕ್ಕಳು ಬಂದಿದ್ದಾರೆ ಎಂದು ಎಳನೀರು, ಸೀಬೆಕಾಯಿ, ಗಣಿಕೆ ಹಣ್ಣು ಇತ್ಯಾದಿಗಳನ್ನು ಕೊಟ್ಟರು. ಹೆಣ್ಣುಮಕ್ಕಳಿಗೆಲ್ಲ ಆ ಪಕ್ಕದ ತೋಟದ ಅಜ್ಜಿ “ಕಾಕಡ, ಕನಕಾಂಬರ, ದವನ, ಮರುಗ ಎಲ್ಲಾ ಇವೆ ಎಲ್ಲಾ ಕೊಯ್ದುಕೊಂಡು ಕಟ್ಟಿ ಮುಡಿದುಕೊಳ್ಳಿ” ಎಂದು ಎಲ್ಲೊ ಸಿಕ್ಕಿಸಿ ಇಟ್ಟಿದ ದಾರವನ್ನು ನಮ್ಮೆಡೆಗೆ ಎಸೆದರು. ಅಭ್ಯಾಸವಿಲ್ಲದ ನಮಗೆ ಹೂ ಬಿಡಿಸಲು ಗೊತ್ತಾಗುತ್ತಿರಲಿಲ್ಲ ತರಚಿ ಹಾಳು ಮಾಡುತ್ತಿದ್ದೆವು ಅದನ್ನು ಕಂಡ ಅವರು “ಉಪಯೊಗಕ್ಕೆ ಬಾರದ್ಹಾಗೆ ಮಾಡ್ತೀರಲ್ಲ”  “ಓದೋ ಮಕ್ಕಳೇ ಹಿಂಗೆ ಹೂ ಬಿಡಿಸೋಕ್ಕು ಬರಲ್ವೆ?” ಎಂದು ಅವರೆ ಬಿಡಿಸಿ ಅಲ್ಲೆ ಒಂದು ಮುತ್ತುಗದ ಎಲೆ ಕೊಯ್ದು ಪೊಟ್ಟಣಕಟ್ಟಿ ನಯವಾಗಿ ಬೀಳ್ಕೊಟ್ಟರು ಇನ್ನು ಹೆಚ್ಚಿನ ನಷ್ಟವಾಗಬಾರದೆಂದು.             ನನ್ನಜ್ಜನಿಗೆ ಮೊಮ್ಮಕ್ಕಳನ್ನು ಪರಿಚಯ ಮಾಡಿಕೊಳ್ಳುವುದೇ ಖುಷಿ. ಆದರೆ ನಮ್ಮಜ್ಜಿಗೆ ಬೇರೆಯವರ ಬಳಿ ದೂರು ಹೇಳಿ ಬಯ್ಯವುದರಲ್ಲೆ ಖುಷಿ. ಅಜ್ಜ ನನ್ನನ್ನು ತೋರಿಸಿ “ಇವಳು ಕಾನ್ವೆಂಟ್ ಶಾಲೆಗೆ ಹೋಗ್ತಾಳೆ ಅಕ್ಷರವಂತೂ ಮುತ್ತು ಪೋಣಿಸಿದ ಹಾಗೆ ಬರಿತಾಳೆ” ಅಂದರೆ ಅಜ್ಜಿ ಮಧ್ಯೆ ಪ್ರವೇಶಿಸಿ “ಹೌದು ಮನೆಯಲ್ಲಿ ಒಂದೇ ಒಂದು ಕೆಲಸ ಮಾಡಲ್ಲ ಲಕ್ಷಣವಾಗಿ ಉದ್ದಲಂಗ ಹಾಕ್ಕೋಳದ್ ಬಿಟ್ಟು ಎನೋ ಹಿಜಾರ ಸಿಕ್ಕಿಸಿಕೊಂಡಿದ್ದಾರೆ ನೋಡಿ ಮೆರೆಯೋ ದೇವರುಗಳು ಇದ್ದ ಹಂಗೆ” ಎಂದರು. ನಮಗೆ ಆ ಮಾತುಗಳನ್ನು ಕೇಳಿ ನಗುಬಂತು, ತಕ್ಷಣ ಪಕ್ಕದ ಮನೆಯ ನೆಂಟರ ಹುಡುಗಿ “ ಇಲ್ಲ ನಿನ್ನ ತರ ಉದ್ದನೆ ಪಂಚೆ ಸುತ್ತೊಕಬೇಕ ಅಜ್ಜಿ” ನಮ್ಮ ಹಾಗೆ  ನೀವೂ ಹಾಕೊಳಿ ಎಷ್ಟು ಆರಾಮ್ ಫೀಲ್ ಆಗುತ್ತೆ ಗೊತ್ತ” ಎಂದೆ ಬಿಟ್ಟಳು ಎಲ್ಲರು ನಕ್ಕುಬಿಟ್ಟರು ಪಾಪ ಅಜ್ಜಿ ಬೇಜಾರು ಮಾಡಿಕೊಳ್ಳಲಿಲ್ಲ ನಕ್ಕು ಸುಮ್ಮನಾದರು. ಹೊತ್ತು ಕಳೆದ್ದು ಗೊತ್ತಾಗಲಿಲ್ಲ.             ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ಊಟ ಮನೆಯಿಂದ ಬಂತು. ಗದ್ದೆ ಕೆಲಸಕ್ಕೆ ಬಂದವರೊಬ್ಬರು ಸೈಕಲ್ ಮೇಲೆ ಊಟ ಇರಿಸಿಕೊಂಡು ಬಂದರು ಅವರ ಜೋತೆಗೆ ಅತ್ತೆಯೂ ಬಂದರು. ಗದ್ದೆ ಬಯಲಿನಲ್ಲಿ ಕುಳಿತು ಊಟ ಮಾಡುವ ಖುಷಿಯೇ ಬೇರೆ ಎಲ್ಲಾ ಸೇರಿ ಊಟ ಮಾಡಿದೆವು. ನನ್ನಜ್ಜನಿಗೆ ಎಲೆಯಲ್ಲಿ ಊಟ ಬಿಡುವಂತಿರಲಿಲ್ಲ ಹಾಗೆ ಉಳಿಸಿದರೆ ಬಹಳ ಕೋಪಮಾಡಿಕೊಂಡು ಬಡಿಸಿದವರಿಗೂ, ಊಟಕ್ಕೆ ಕುಳಿತವರಿಗೂ ಬಯ್ದುಬಿಡುತ್ತಿದ್ದರು. ಗದ್ದೆ ಕೆಲಸಕ್ಕೆಂದು ಬಂದಿದ್ದ ಅಳು ಸೈಕಲ್ನಲ್ಲಿ ಊಟ ತಂದಿದ್ದರಲ್ಲ ಅದಕ್ಕೆ ಪ್ರತಿಫಲವೆಂಬಂತೆ “ಇಲ್ಲೇ ಒಂದು ನಿಮಿಷ” ಎಂದು ಹೋದವರು ಒಂದು ಗಂಟೆಯಾದರು ಪತ್ತೆಯಿರಲಿಲ್ಲ. ಕೆಲಸ ಸಾಗುತ್ತಿಲ್ಲ ಎಂದು ಅಜ್ಜ ಸಿಟ್ಟು ಮಾಡಿಕೊಂಡು ನಾವಿದ್ದ ಜಾಗ ಬಿಟ್ಟು ಮುಂದೆ ಹೋದರು. ಹಾಗೆ ಮುಂದೆ ಹೋದರು. ಹಾಗೆ ಮುಂದೆ ಹೋಗುತ್ತಾ ಹೋಗುತ್ತಾ ಇದ್ದಂತೆ ಏನೋ ಸದ್ದಾಯಿತು. ಅದನ್ನು ಗಮನಿಸಿದ ನಮ್ಮ ಸೋದರ ಅತ್ತೆ “ಅದೇನೂ ಅಲ್ಲ ಸಮಯ ಬಂದರೆ ಇರಲಿ ಅಂತ ಒಂದು ಮಡಚುವ ಚಾಕು, ಅರ, ಬೀಗದ ಕೀ ಇತ್ಯಾದಿಗಳನ್ನು ಇಟ್ಟುಕೊಂಡಿದ್ದಾರೆ”. “ಹಾಗಿದ್ದರೆ ಅಜ್ಜಿ” ಎಂದರೆ ಅವರು  “ಚಿಮ್ಮಟ, ಹೂಕಟ್ಟುವ ನೂಲು, ಸೇಪ್ಟಿಪಿನ್, ಹರಶಿಣ ಕೊಂಬು, ಅರ್ಚನೆ ಪ್ರಸಾದ ಇತ್ಯಾದಿ ಇತ್ಯಾದಿ ಅಂದರು ಅದೆಲ್ಲ ಸರಿ ನೀವು………….” ಎಂದಾಗ ಅತ್ತೆಗೆ ಕೋಪ ಬಂದು ಕೈ ಎತ್ತಿದಾಗ ನಾವೆಲ್ಲ ಚೆಲ್ಲಾಪಿಲ್ಲಿಯಾದೆವು.             ಸ್ವಲ್ಪ ಹೊತ್ತಿನ ಬಳಿಕ ನಮ್ಮಜ್ಜಿ ಮತ್ತು ಅತ್ತೆ ಹೂಕಟ್ಟುತ್ತಾ ಕುಳಿತರು ನಾವು ಹೋಗಿ ಕುಳಿತುಕೊಂಡು ಅದೇನು ಮ್ಯಾಜಿಕ್ ಎಂಬಂತೆ ಕಣ್ಣುಬಾಯಿ ಬಿಟ್ಟು ನೋಡುತ್ತಿದ್ದೆವು. ಏನೋ ದೂರಕ್ಕೆ ಕಣ್ಣು ಹಾಯಿಸಿದರೆ ಎದರೊಂದು ಬೆಟ್ಟ ಅದರ ಮೇಲೊಂದು ಗುಡಿಕಾಣಿಸುತ್ತಿತ್ತು. ಕುತುಹಲ ತಡೆಯಲಾಗಲಿಲ್ಲ ಏನು?ಏನು?  ಎಂದು ಕೇಳಿದೆವು “ಇರಿ ಸ್ವಲ್ಪ ಪಕ್ಕದ ತೋಟದವರು ನಾವು ಕೇಳಿದ್ರೆ ಇಷ್ಟೊಂದು ಹೂ ಕೊಡ್ತಾ ಇರಲಿಲ್ಲ ಎನೋ ನೀವು ಹೋಗಿದಿರ ಅಂತ ಅಪ್ಪಿ ತಪ್ಪಿ ಕೊಟ್ಟಿದ್ದಾರೆ, ಬಾಡಿ ಹೋಗುತ್ತವೆ ಹೂಗಳು ಕಟ್ಟಣ ಇರಿ ಎಂದರು” ನಾವು ಬಿಡಲಿಲ್ಲ ನಮ್ಮ ಬಲವಂತಕ್ಕೆ “ಅದು ರಂಗನಾಥಸ್ವಾಮಿ ಬೆಟ್ಟ” ಅಂದೇ ಬಿಟ್ಟರು. ಹೋಗೋಣ!  ಹೋಗೋಣ! ಅಂದೆವು.             ಅತ್ತೆ “ಈಗ ………..” ಎಂದರೆ ನಾವು “ಹೌದು ಈಗ್ಲೆ………… ಈ ಕ್ಷಣವೇ” ಎಂದು ಅತ್ತೆಗೆ ಬಲವಂತ ಮಾಡಿದೆವು. ಇವರುಗಳು ಸುಮ್ನೆ ಇರಲ್ಲ ಎಂದು ಅಜ್ಜಿಯ ಕಡೆಗೆ ಕಣ್ಸನ್ನೆ ಮಾಡಿದರು. ಹೊ………. ಇರಲಿ ಇರಲಿ ಬನ್ನಿ ಎಂದೆವು. ನಾವು ಇನ್ಯಾವಾಗ  ಬರ್ತೀವೋ ?ಬಂದರೂ ನೀವು ಮದುವೆಯಾಗಿ ಹೋಗಿರ್ತೀರ ಬನ್ನಿ! ಬನ್ನಿ!  ಪ್ಲೀಸ್! ಪ್ಲೀಸ್! ಅಂದೆವು ಕಡೆಗೂ ಒಪ್ಪಿಗೆ ಕೊಟ್ಟೇ ಬಿಟ್ಟರು. ನಾವುಗಳು ಉತ್ಸಾಹದಿಂದ ಹೊರೆಟೆವೂ. ಹಾಗೆ ಬೆಟ್ಟದ ಕಡೆಗೆ ಹೋಗುವಾಗ ನಾವು ನಮ್ಮ ದೊಡ್ಡಜ್ಜನ ಗದ್ದೆಬಯಲು ಧಾಟಿಕೊಂಡು ಹೋಗಬೇಕಾಗಿತ್ತು ಏನೋ ಮರ ಅದರ  ಹೆಸರು ಗೊತ್ತಿಲ್ಲ  ಆ ಮರದ ಕೆಳಗೆ ಪಾರ್ಕಲ್ಲಿ ವೃತ್ತಾಕಾರದಲ್ಲಿ ಬೆಳೆದ ಸಸ್ಯಗಳಂತೆ ಪೊದೆಪೊದೆಯಾಗಿ ಕಡ್ಡಿಕಡ್ಡಿಯಾಗಿ ಕೆಲವು ಸಸ್ಯಗಳು ಬೆಳೆದಿದ್ದವು. ಅ ಗಿಡಗಳನ್ನು ನೋಡುತ್ತಲೇ “ನನಗೆ ಈ ಗ್ರೀನ್ಶೇಡ್ ಎಂದರೆ ಬಹಳ ಇಷ್ಟ” ಎಂದೆ ಇನ್ನೊಬಳು “ನನಗೆ ಆ ಡೀಪ್ ಗ್ರೀನ್” ಎಂದಳು. ಅತ್ತೆ ನಮ್ಮನ್ನು ಕರೆದು “ಇಂಗ್ಲೀಷ್ ಇಲ್ಲಲ್ಲ ಯಾವ ಗಿಡ? ಅಂತ ಹೇಳಿ” ಎಂದರು ನಮಗೆ ಗೊತ್ತಿದ್ರೆ ಅಲ್ವೆ! ಹೇಳೋದು? ಗೊತ್ತಾಗಲಿಲ್ಲ ಸ್ವಲ್ಪ ಪೊದೆಯಾಗಿ  ತಿಳಿ ಹಸಿರಿನಿಂದ ಇದ್ದ ಸಸ್ಯ ತೋರಿ ಇದು ಹರಿಶಿಣ ಎಂದರು. ಚೂಪಾದ ಗಾಡ ಹಸಿರಿನ ಚೂಪಾದ ಎಲೆ ತೋರಿಸಿ ಇದು ಶುಂಠಿ ಎಂದರು.             ಅಷ್ಟರಲ್ಲಿ ಅತ್ತೆಗೆ ನಾವು ಅದನ್ನು ನೋಡುತ್ತಿರುವ ಕ್ರಮ ಕಂಡು ಅದನ್ನು ಕಿತ್ತು ತೋರಿಸಬೇಕೆನಿಸಿತು. ಕೀಳಲು ಮುಂದಾದರೆ ಬುಡ ಗಟ್ಟಿಯಾಗಿತ್ತು. ಆಗವರು “ನಿಮ್ಮಜ್ಜಿ ಹತ್ತಿರ ಹೋಗಿ ಕೂಡುಗೋಲು ತೆಗೆದುಕೊಂಡು ಬನ್ನಿ” ಎಂದರು. ಕಣ್ಣು ಮುಚ್ಚಿ ಬಿಡುವುದರಲ್ಲಿ ತಂದು ಕೊಟ್ಟೆವು. ಅತ್ತೆ ಚೂಪಾದ ಕೂಡಗೋಲಿನಿಂದ ನಯವಾಗಿ ಗಿಡಗಳಿಗೆ ಹಾನಿಯಾಗದಂತೆ ಹರಿಶಿಣ, ಶುಂಠಿಯನ್ನು ತೆಗೆದು ತೋರಿಸಿದರು. “ಇನ್ನು ಸ್ವಲ್ಪ ತೋರಿಸಿ” ಎಂದಾಗ “ನಿಮ್ಮ ದೊಡ್ಡಜ್ಜಿ ಬಂದರೆ ಕೋಲಲ್ಲೇ ತೋರಿಸ್ತಾರೆ” ಅಂದರು. ಆದರೆ ಯಾಕೋ ಏನೋ ಅವರ ಮನಸ್ಸಿನಲ್ಲಿ ಎನನ್ನಿಸಿತೋ ಊಟ ಖಾಲಿಯಾಗಿ ತೊಳೆದು ಇಟ್ಟಿದ್ದೀವಲ್ಲ ಆ ಬಾಕ್ಸ್ ತೆಗೆದುಕೊಂಡು ಬನ್ನಿ ಎಂದರು. ನಾವೆಲ್ಲ ಹೊರೆಟೆವು. ಅತ್ತೆ ನಮ್ಮನ್ನು ಕಂಡು “ಈ ಮೆರವಣಿಗೆ ಬೇಕಾ ಯಾರದರು ಒಬ್ಬರು ಹೋಗಿ” ಅಂದರು. ಆ ಮಾತಿನ ಧಾಟಿಗೆ ಅದರಿ ಅಲ್ಲಾಡಿದಂತೆ ನಾವಿದ್ದರೂ ನಮಗೆ ಮನಸ್ಸಿನಲ್ಲಿ ತಡೆಯಲಾಗದ ನಗು ನಗು. ಅತ್ತೆ ಹರಿಶಿಣವನ್ನು, ಶುಂಠಿಯನ್ನು ಬಗೆದು ಬಗೆದು ಬಾಕ್ಸ್ನಲ್ಲಿ ತುಂಬಿಸುತ್ತಿದ್ದರೆ  ನಮಗೆ ನಗು ಮತ್ತು ಹೆದರಿಕೆ ಒಟ್ಟೊಟ್ಟಿಗೆ ಆಗುತ್ತಿತ್ತು. ಮರು ಮಾತನಾಡದೆ ಅತ್ತೆ ಬಾಕ್ಸ್ ತುಂಬಿದ ಮೇಲೆ ಎತ್ಲಾರದಂತೆ ತೆಗೆದುಕೊಂಡು ಹೋಗಿ ಅಜ್ಜಿಯ ಬಳಿ ಕುಕ್ಕರಿಸಿ ಬಂದರು.             ಹಾಗೆ ನಮ್ಮ ಬಳಿಗೆ ಬಂದವರೆ “ಹರಿಶಿಣ ಫ್ರೆಶ್ ಆಗಿದೆ ಹಾಲಲ್ಲಿ ಅರೆದು ಹಚ್ಚಿಕೊಂಡರೆ ಮುಖ  glove ಆಗುತ್ತೆ  ಗೊತ್ತ” ಎಂದರು. “ಶುಂಠಿನೂ ಹಾಗೆ ಮಾಡಬೇಕ?” ಎಂದು ಇನ್ನೊಬ್ಬರಿಂದ ಮರು ಪ್ರಶ್ನೆ ಬಂತು. ಅತ್ತೆ ಅದೆಲ್ಲ ಇರಲಿ ಬೆಟ್ಟಕ್ಕೆ ಹೋಗ್ಬೇಕೋ ಬೇಡ್ವೋ ಎಂದರು. ಹೂ ಸರಿ ಸರಿ ಎಂದು ಬೇಗನೆಹೆಜ್ಜೆ ಹಾಕಿದೆವು. ನಮಗೆ  ಆ ಗದ್ದೆ ಬಯಲಿನಲ್ಲಿ ತೆಂಗಿನ ಅಡಿಕೆ ತೋಟಗಳ ನಡುವೆ ಅಜ್ಜನ ಮನೆಗೆ ಬಂದ ಕಾರಣಕ್ಕೆ ಹಾಕಿಕೊಂಡಿರುವ ಕಾಲುಗೆಜ್ಜೆ, ಪುಟ್ಟ ಹ್ಯಾಂಗಿಗ್ಸೆಗಳನ್ನು ಕುಣಿಸಿಕೊಂಡು ಅಲುಗಾಡಿಸಿಕೊಂಡು ವೇಲ್ಗಳನ್ನು ಮತ್ತೆ ಮತ್ತೆ ಸರಿಮಡಿಕೊಂಡು ಹೋಗುವುದೇ ಸಂಭ್ರಮವಾಗಿತ್ತು. ದೂರಕ್ಕೆ ಚಿಕ್ಕದಾಗಿ ಕಾಣುತ್ತಿದ್ದ ಅ ಬೆಟ್ಟ ಹತ್ತಿರ ಹೋದಂತೆ ದೊಡ್ಡದು, ದೊಡ್ಡದು ಅನ್ನಿಸುತ್ತಿತ್ತು.             ಬೇಗ ಬೇಗ ಹತ್ತಿ ಮನಗೆ ಹೋಗಿ ಮತ್ತೆ ಕೆಲಸ ಇದೆ ಧನುರ್ಮಾಸದ ಪೂಜೆ ಬೇರೆ ಬನ್ನಿ ಎಂದರು. ಹೊರಟಾಗ ಇದ್ದ ಖುಷಿ ಬೆಟ್ಟ ಹತ್ತುವಾಗ ಇರಲಿಲ್ಲ. ಆದರೂ ಹೇಗೊ ಸಾಹಸದ ದಂಡಯಾತ್ರೆ ಎಂಬಂತೆ ಗುಡಿಯ ಮುಂಭಾಗ ತಲುಪಿದೆವು. ಬಾಗಿಲು ಕಡೆ ನೋಡಿದರೆ ಎರಡೆರಡು ಬೀಗ ಹಾಕಿದ್ದರು. ಅತ್ತೆ ಇದೇ ಬೆಟ್ಟ  ರಂಗನಾಥಸ್ವಾಮಿ ಬೆಟ್ಟ ನೋಡಿದ್ರಾ ಇಳಿರಿ ಎಂದರು. ನಮಗೆ ಕುತೂಹಲ ಗರ್ಭಗುಡಿಯ ಸುತ್ತು ಬಂದರೆ ಗುಡಿಯ ಪೂರ್ವಕ್ಕೆ ನಮ್ಮ ಹಳ್ಳಿ ಹುಲಿಕಲ್ ಕಾಣುತ್ತಿತ್ತು. ಜೊತೆಗೆ ಶ್ರೀನಿವಾಸ ದೇವಾಲಯದ ರಾಜ ಗೋಪುರ. ಸುಮ್ಮನೆ ಎಲ್ಲಿ? ಎಲ್ಲಿ? ಹುಡುಕೋಣ! ಎಂದು ನಿಂತೆವು. ಅತ್ತೆ ಬಿಡಲಿಲ್ಲ ಈಗ ಕೋಲು ತೆಗೆದುಕೊಂಡು ತೋರಿಸುತ್ತೇನೆ ಎಂದರು. ನಮ್ಮಗಲ್ಲಿ ಕಂಡಿದ್ದು ಕಾಗೆಗಳು ತಿನ್ನಲಾರದ ಮೆಣಸಿನ ಕಾಯಿ, ಕರೀಬೇವು, ಕಡಲೇಬೀಜ, ಉದ್ದನೆಯ ಕೊಬ್ಬರಿ ತುರಿ ಇತ್ಯಾದಿ ಎಲ್ಲ ಪುಳಿಯೋಗರೆಯ ಅವಶೇಷ.             ಹತ್ತುವಾಗ ಆದ ಕಷ್ಟ ಇಳಿಯುವಾಗ ಆಗಲಿಲ್ಲ. ಬೇಗನೆ ಬಂದರೂ ಮುಸ್ಸಂಜೆ ಅವರಿಸಿದ ಕಾರಣ ಅಜ್ಜಿ ನಮಗಲ್ಲ ಅತ್ತೆಯನ್ನು ಬಯ್ಯಲು ಪ್ರಾರಂಭಿಸಿದರು. “ನೀನು ಅವರುಗಳ ಜೊತೆ ಕುಣಿಯುತ್ತಾ ಇದ್ದೀಯಲ್ಲ”

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ Read Post »

ಅನುವಾದ

ಕಣ್ಣ ಕಸ

ಅನುವಾದಿತ ಕವಿತೆ ಕಣ್ಣ ಕಸ ಕನ್ನಡ ಮೂಲ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ಈ ಕಸ ಹೇಗೆಬಿತ್ತೋ ಗೊತ್ತಿಲ್ಲಕಣ್ಣಿಂದ ಇಳಿವಒಂದೊಂದೇ ಹನಿಗಾಗಿಕಾಯುತಿರುವೆಕರವಸ್ತ್ರದ ತುದಿಸೆರಗಿನ ಚುಂಗುಉಫ್..ಅಂತಊದಿದ ಮಗಳ ಉಸಿರುಯಾವುದಕ್ಕೂ ಸಿಗದೆಅವಿತು ಕಾಡಿಸುತಿದೆ ತುಂಬಿದ ಕಣ್ಣುಗಳಲ್ಲಿಜಗತ್ತನ್ನು ನೋಡುವುದೂಒಂದು ಅನುಭವ ತಾನೇಹೀಗಂದುಕೊಳ್ಳುತ್ತಲೇಕನ್ನಡಿಯ ಮುಂದೆ ಬಂದುಮನಸ ಓಲೈಸಲುಹೆಣಗುತಿರುವೆ ಈ ನಶ್ವರ ಬದುಕಲ್ಲಿಪ್ರತಿ ಘಳಿಗೆಯನಿರಿಯುತಿದೆಕಣ್ಣ ತುಂಬ ಬಾವುಕಣ್ಣೊಳಗೆ ಬಿದ್ದ ನೋವು I just don’t knowHow this speck of dustGot in to the eyeAnd haunting me hiding inside.And kept me waiting forevery drop dripping. Corner of a hand kerchiefEdge of my saree,“Uff” the air blown by my kid,Nothing could get rid of this. To see the world with filled eyes,Is also an experience,Thinking so,Stood before the mirrorStruggling hard to console the soul. In this immortal life,Eye swelled and the pain filledAre stabbing each moment.

ಕಣ್ಣ ಕಸ Read Post »

ಕಾವ್ಯಯಾನ

ಕವಾಟಗಳ ಮಧ್ಯೆ ಬೆಳಕಿಂಡಿ

ಕವಿತೆ ಕವಾಟಗಳ ಮಧ್ಯೆ ಬೆಳಕಿಂಡಿ ಸುತ್ತು ಗೋಡೆಗಳ ಕಟ್ಟಿತೆರೆಯದ ಕವಾಟಗಳ ಮಧ್ಯೆನಾನೆಂಬ ನಾನು ಬೇಧವಳಿದುಒಂದಾಗಲಿಜೀವ ಪರಮಾತ್ಮಸಂತ ಶರಣರ ಅಹವಾಲು ನೋವಿರದ ಹಸಿದ ಸ್ವಾರ್ಥಬರಡಾದ ಎದೆಯ ಅಮೃತಬರಿದೆ ಬಡಿಯುವ ಮಿಡಿತ ಕಳೆದು ಹೋಗಿಹ ನಾವುಕದ ತಟ್ಟಿ ಕರೆಯೋಣಇಂದಲ್ಲ ನಾಳೆ ತೆರೆದೀತುತಟ್ಟಿದ ಕೈಗಳ ತಬ್ಬೀತುಸಂತ ಶರಣರು ನಕ್ಕಾರು. ***************************

ಕವಾಟಗಳ ಮಧ್ಯೆ ಬೆಳಕಿಂಡಿ Read Post »

You cannot copy content of this page

Scroll to Top