ಅಂಕಪಟ್ಟಿ ಬಾಲ್ಯ ಪುಸ್ತಕ-ಅಂಕಪಟ್ಟಿ ಬಾಲ್ಯಕವಿ- ರವಿರಾಜ ಸಾಗರಪ್ರಕಾಶನ- ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಟಾನ, ಕಮಲಾಪುರಬೆಲೆ-೧೩೦/- ಸ್ಪರ್ಧಾಲೋಕದಿ ಬೇಕೇ ಬೇಕಂತೆತರತರ ಪ್ರಮಾಣ ಪತ್ರಗಳುಕಷ್ಟವಾದರೂ ಮಾಡಲೇ ಬೇಕಂತೆನಾವು ಬಯಸದ ಪಾತ್ರಗಳು ಇದು ಇಂದಿನ ದಿನಮಾನದ ಎಲ್ಲಾ ಮಕ್ಕಳ ಸಮಸ್ಯೆ. ಮಕ್ಕಳ ಮನಸ್ಸನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ ಹೇಳಿ? ನಮಗೆ ಹೆಚ್ಚು ಅಂಕಕೊಡುವ ರೋಬೋಟ್ ಬೇಕಿದೆಯೇ ಹೊರತು, ನಮ್ಮಿಂದ ಮುದ್ದಿಸಲ್ಪಟ್ಟು, ನಮ್ಮನ್ನೂ ಪ್ರೀತಿಸುವ ಮಗು ಬೇಕಾಗಿಲ್ಲ. ಎಲ್ಲ ಅಪ್ಪ ಅಮ್ಮಂದಿರಿಂದ ಹಿಡಿದು, ಶಿಕ್ಷಣ ಇಲಾಖೆಯಿಂದ ಹಿಡಿದು ಸಮಾಜದ ಎಲ್ಲರಿಗೂ ಮಗುವಿನ ಅಂಕವೇ ಆ ಮಗುವನ್ನು ಅಳೆಯುವ ಮಾನದಂಡವಾಗಿದೆಯೇ ಹೊರತೂ ಮಗುವಿನ ಮನಃಸ್ಥಿತಿ ಹೇಗಿದೆ? ಅದಕ್ಕೆ ಏನು ಪ್ರೀಯ? ಅದರ ಇಷ್ಟ ಕಷ್ಟಗಳೇನು ಎಂದು ತಿಳಿಯುವ ಒಂದಿಷ್ಟು ಪ್ರಯತ್ನವನ್ನಾದರೂ ನಾವು ಮಾಡಿದ್ದೇವೆಯೇ? ಖಂಡಿತಾ ಇಲ್ಲ. ಇಂದಿನ ಮಕ್ಕಳ ಬಾಲ್ಯ ಅಂಕಪಟ್ಟಿಯ ಮಾರ್ಕುಗಳಲ್ಲಿ ಕಳೆದು ಹೋಗಿದೆ. ಚಿಕ್ಕವನಿನ್ನೂ ಆಟವ ಆಡುಎಂದು ಯಾರೂ ಹೇಳರುಶಾಲೆಗೆ ಫಷ್ಟು ಬರಲೇಬೇಕುಎನ್ನುತ ಒತ್ತಡ ಹೇರುವರು ಕಾಡು ಬೆಟ್ಟ ಅಲೆದು, ಕಾಡಿನಲ್ಲಿ ಆಯಾ ಸಿಜನ್ನಿನಲ್ಲಿ ಆಗುವ ಹಣ್ಣನ್ನು ಕೊಯ್ದುಕೊಂಡು ತಿನ್ನುವ ನಮ್ಮ ಬಾಲ್ಯ ಈ ಮಕ್ಕಳಿಗೆ ದೊರಕೀತೇ? ಕಾಡಿನ ಹಣ್ಣುಗಳನ್ನೇ ನೋಡಿರದ ಅವು ಏನಾದರೂ ಹಣ್ಣಿಗೆ ಕೈ ಹಚ್ಚಿದರೆ ಸಾಕು, ಹೈಜಿನ್ನಿನ ಪಾಠ ಹೇಳುವ ಮಮ್ಮಿ ಡ್ಯಾಡಿಗಳು ಹೌಹಾರಿ ಬಿಟ್ಟಾರು. ಆದರೆ ನಮ್ಮ ಅಪ್ಪ ಅಮ್ಮಂದಿರಿಗೆ ಮಕ್ಕಳು ಕಾಡಿನ ಯಾವ ಹಣ್ಣು ತಿಂದರೂ ಯಾವ ಅಭ್ಯಂತರವೂ ಇರಲಿಲ್ಲ. ನಾನು ಹಯಸ್ಕೂಲಿಗೆ ಹೋಗುವವರೆಗೂ ನನ್ನ ಶಾಲೆಯ ಬ್ಯಾಗ್ ತುಂಬಾ ಮಳೆಗಾಲದಲ್ಲಿ ಬಿಕ್ಕೆ ಹಣ್ಣು, ಅದರ ಒಡೆದ ಸಿಪ್ಪೆಗಳಿಮದಲೇ ತುಂಬಿರುತ್ತಿತ್ತು. ಅದೇ ಶಾಲೆಯ ಶಿಕ್ಷಕಿಯಾದ ಅಮ್ಮ ಏನಾದರೂ ನನ್ನ ಬ್ಯಾಗ್ ತೆರೆದರೆ ಈ ಟೀಚರ್ರು ಮಗಳಿಗೆ ಹೊಟ್ಟೆಗೇ ಹಾಕೂದಿಲ್ಲ ಅನ್ನೂರು, ಅದೇನ್ ಆ ಚೊಗರು ಕಾಯಿ, ಗಟ್ಟಿ ಹಣ್ಣು ತಿಂತೀಯೇ? ಎಂದು ಬೈಯ್ಯುತ್ತ ಇಡೀ ಚೀಲ ಸ್ವಚ್ಛ ಮಾಡುತ್ತಿದ್ದರು. ಪಿಳ್ಳೆ ಹಣ್ಣು ತಿಂದು ನೀಲಿಗಟ್ಟಿದ ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳಲು ಪಿಳ್ಳೆ ಹಣ್ಣು ಸುಲಭವಾಗಿ ಸಿಗುತ್ತಿತ್ತು. ಮಳೆಗಾಲ ಮುಗಿದ ತಕ್ಷಣ ಚಳಿಗಾಲದಲ್ಲಿ ಸಂಪಿಗೆ ಹಣ್ಣು, ಮಜ್ಜಿಗೆ ಹಣ್ಣು, ಕೊನೆಗೆ ರಂಜಲು ಹಣ್ಣು ಹೀಗೆ ಎಲ್ಲ ಹಣ್ಣುಗಳು ಆಯಾ ಕಾಲಕ್ಕೆ ತಕ್ಕಂತೆ ನಮ್ಮ ಬ್ಯಾಗ್‌ನಲ್ಲಿ ಜಾಗ ಪಡೆದಿರುತ್ತಿದ್ದವು. ಪರೀಕ್ಷೆ ಮುಗಿಯುತ್ತಿದ್ದಂತೆ ಮಾವಿನ ಮಿಡಿಗಳು ನಮ್ಮಿಂದ ಉಪ್ಪು ಖಾರಾ ಹಾಕಿ ನಾಲಿಗೆಗೆ ಚುರುಕು ಮುಟ್ಟಿಸಲು ಕಾಯುತ್ತಿದ್ದವು. ಹಸಿ ಗೇರು ಬೀಜ ಸುಲಿದು ಕೈಯ್ಯ ಚರ್ಮವೆಲ್ಲ ಸುಲಿದು ಹೋಗುವುದು ಮಾಮೂಲಾಗಿತ್ತು. ಹಾಗೆ ಹಣ್ಣು ಕೊಯ್ಯಲು ಮರ ಹತ್ತಿ, ಕೆಳಗಿರುವ ಗಾಜಿನ ಚೂರಿನ ಮೇಲೆ ಬಿದ್ದು ಆದ ಗಾಯ ಇಂದಿಗೂ ನನ್ನ ಕಾಲಿನ ಮೇಲೆ ಸವಿನೆನಪನ್ನು ಉಳಿಸಿಕೊಂಡಿದೆ. ಆದರೆ ನಮ್ಮ ಮಕ್ಕಳನ್ನು ಹಾಗೆ ಕಾಡು ಸುತ್ತಲು ಬಿಟ್ಟೇವೆಯೇ? ಅವರ ಕಾಲಿಗೊಂದು ಸೊಳ್ಳೆ ಕಚ್ಚಿದರೂ ಜಗತ್ತೇ ತಲೆಕೆಳಗಾದಂತೆ ವರ್ತಿಸುವ ನಮಗೆ ಮಕ್ಕಳ ಬಾಲ್ಯವನ್ನು ಜೈಲಿನಲ್ಲಿಡುತ್ತಿರುವ ಅರಿವೂ ಆಗದಿರುವುದು ವಿಷಾದನೀಯ. ಆದರೆ ರವಿರಾಜ್ ಸಾಗರ ಮಕ್ಕಳ ಮಾತಿಗೆ ಜೀವ ತುಂಬಿದ್ದಾರೆ. ಹೀಗಾಗಿಯೇ ಈ ಸಂಕಲನದಲ್ಲಿಯಾರು ಕೇಳೋರು ನಮ್ಮ ತಲೆಬಿಸಿಯಾಲೈಪಲ್ಲಿ ಗೆಲ್ಲೋಕೆ ರ್‍ಯಾಂಕೇ ಯಾಕ್ರಯ್ಯಾ?ಎಂದು ಮಕ್ಕಳು ಕೇಳುತ್ತಿದ್ದಾರೆ. ಹೇಳಿ, ಬದುಕನ್ನು ಗೆಲ್ಲಲು ರ್‍ಯಾಂಕ ಒಂದೇ ಆಧಾರವೇ? ವಿಚಿತ್ರ ಎಂದರೆ ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಐಎಎಸ್, ಕೆಎಎಸ್ ಪಾಸು ಮಾಡಿದ ಹಲವರು ಚಿಕ್ಕಂದಿನಲ್ಲಿ ರ್‍ಯಾಂಕ್ ಬಂದವರಲ್ಲ. ನಂತರ ಓದಿನ ಮಹತ್ವವನ್ನು ಅರಿತು ತಮ್ಮ ಮಾರ್ಗವನ್ನು ತಾವೇ ನಿರ್ಮಿಸಿಕೊಂಡವರು ಎಂಬುದನ್ನು ಗಮನಿಸಬೇಕಿದೆ.ನಮ್ಮ ಶಾಲೆಯ ಪುಸ್ತಕದಲ್ಲಿಮಕ್ಕಳ ಹಕ್ಕು ಪಾಠವಿದೆಆ ಪಾಠದ ಪ್ರಶ್ನೆಗೆ ಉತ್ತರಿಸದೆ ಇದ್ದರೆಹೊಡೆಯಲು ಕೋಲು ಕಾಯುತಿದೆಮಕ್ಕಳ ಹಕ್ಕುಗಳು ಕೇವಲ ಓದಿ ಅಂಕಗಳಿಸಲಷ್ಟೇ ಇರುವ ಪಾಠಗಳೇ ಹೊರತೂ ಅದರಿಂದೇನೂ ಆಗುವುದಿಲ್ಲ ಎಂಬುದನ್ನು ಈ ಸಾಲುಗಳು ಚಂದವಾಗಿ ನಿರೂಪಿಸುತ್ತವೆ. ಮೊದಲೆಲ್ಲ ಮಕ್ಕಳಿಗಾಗಿ ಗ್ರಾಮ ಸಭೆ ನಡೆಸುತ್ತಿದ್ದೆವು. ಆಗಲೆಲ್ಲ ಮಕ್ಕಳು ಗಲಾಟೆ ಮಾಡದೇ ಮಾತೆ ಆಡದಂತೆ ಕುಳಿತಿರಬೇಕೆಂದು ಶಾಲೆಯಿಂದ ಗ್ರಾಮ ಪಂಚಾಯತ್‌ಗೆ ಹೊರಡುವ ಮೊದಲೇ ಮಕ್ಕಳಿಗೆ ಎಚ್ಚರಿಕೆ ನೀಡಿ ಕರೆದುಕೊಂಡು ಹೋಗುತ್ತಿದ್ದೆವು. ಎಂಟನೇ ತರಗತಿಯ ಮೊದಲ ಪಾಠವೇ ಎ ಡೇ ಇನ್ ಆಶ್ರಮ’ ರವೀಂದ್ರನಾಥ ಟಾಗೋರರ ಶಾಂತಿನಿಕೇತನದ ಕುರಿತಾಗಿ ಇರುವ ಪಾಠ. ಫಾರ್ಮಲ್ ಹಾಗೂ ಇನ್‌ಫಾರ್ಮಲ್ ಶಿಕ್ಷಣದ ಬಗ್ಗೆ ಚರ್ಚಿಸಿ ಮಕ್ಕಳೆಲ್ಲ ಇನ್‌ಫಾರ್ಮಲ್ ಶಿಕ್ಷಣವೇ ಹೆಚ್ಚು ಅನುಕೂಲ ಎಂದು ತಮ್ಮ ಅಭಿಪ್ರಾಯ ದಾಖಲಿಸಿದ ನಂತರ ‘ಎಲ್ಲರೂ ನಾಳೆ ಕಂಪಲ್ಸರಿ ಪ್ರಶ್ನೋತ್ತರ ಬರೆದು ತನ್ನಿ’ ಎಂದು ದೊಡ್ಡ ಕಣ್ಣು ಬಿಟ್ಟು ಹೇಳಿ, ‘ಗೊತ್ತಲ್ಲ, ನಾಳೆ ನಿಮ್ಮ ಪ್ರಶ್ನೋತ್ತರ ಪಟ್ಟಿ ಕಂಪ್ಲೀಟ್ ಆಗಲಿಲ್ಲ ಎಂದರೆ….’ ಎನ್ನುತ್ತ ಕೈಯ್ಯಲ್ಲಿರುವ ಕೋಲನ್ನು ಅರ್ಥಗರ್ಭಿತವಾಗಿ ನೋಡುತ್ತ ಪಾಠ ಮುಗಿಸುತ್ತೇವೆ. ಅಲ್ಲಿಗೆ ಆ ಪಾಠದ ಉದ್ದೇಶ ಸಫಲವಾದಂತೆ. ಹಾಗಾದರೆ ಪಾಠದ ಪ್ರಶ್ನೋತ್ತರಗಳನ್ನು ನೀಟಾಗಿ ಬರೆದು ಮುಗಿಸಿ ಹೆಚ್ಚು ಅಂಕ ಗಳಿಸೋದು ಮಾತ್ರವೇ ನದುಕಿನ ಸಾರ್ಥಕ್ಯವೇ?ಪರೀಕ್ಷೆಲಿ ಸೋತರೂ ಬದುಕಲ್ಲಿ ಗೆದ್ದೋರುಂಟುಗೆಲ್ಲಬೇಕೆನ್ನುವ ಕನಸು ಎಲ್ಲರಂತೆ ನಮಗುಂಟುನಿಜ. ಮಕ್ಕಳಲ್ಲಿ ತಾವೂ ಗೆಲ್ಲಬೇಕು ಎನ್ನುವ ಹಠ ಇರುತ್ತದೆ. ಕೆಲವರು ಅದಕ್ಕಾಗಿ ಹೆಚ್ಚು ಶ್ರಮ ಹಾಕುತ್ತಾರೆ. ಕೆಲವರು ಶ್ರಮ ಹಾಕದಿದ್ದರೂ ಅವರ ಬುದ್ಧಿಮತ್ತೆಗೆ ಅನುಸಾರವಾಗಿ ಗೆಲ್ಲುತ್ತಾರೆ. ಓದಿದವರು ಮಾತ್ರ ಗೆಲ್ಲುತ್ತಾರೆ ಎನ್ನುವುದು ಎನ್ನುವುದು ನಿಜವಲ್ಲ. ಓದಿ ಓದಿ ಹೆಚ್ಚು ಅಂಕ ಗಳಿಸಿಯೂ ಜೀವನದಲ್ಲಿ ಗೆಲ್ಲಲಾಗದ ಅನೇಕರನ್ನು ನಾವು ಈಗಾಗಲೇ ಕಂಡಿದ್ದೇವೆ. ಹೆಚ್ಚು ಅಂಕ ಗಳಿಸು ಎಂದು ನಮ್ಮ ಮುಂದಿನ ತಲೆಮಾರನ್ನು ಪೀಡಿಸುವ ನಾವು ನಮ್ಮ ಮುಂದಿನ ಜನಾಂಗಕ್ಕಾಗಿ ಏನು ಬಿಟ್ಟಿದ್ದೇವೆ?ಧರೆಯನ್ನೆಲ್ಲ ಅಗೆದು ಬಗೆದುಸಂಪತ್ತನ್ನೆಲ್ಲ ತಿಂದು ತೇಗಿನಮ್ಮಯ ನಾಳೆಗೆ ಉಳಿಸುವಿರೇನನು?ಹೇಳಿ ಇಲ್ಲಿನ ಮಗು ಕೇಳುತ್ತಿದೆ. ನಮ್ಮ ಮುಂದಿನ ಜನಾಂಗಕ್ಕೆ ನಾವು ಏನನ್ನು ಉಳಿಸಿದ್ದೇವೆ? ಭೂಮಿಯ ಮೇಲಿರುವ ಎಲ್ಲವನ್ನೂ ಕಲುಷಿತಗೊಳಿಸಿದ್ದೇವೆ. ಮರಕಡಿದು, ಕಾಡನ್ನು ನಾಡಾಗಿಸಿದ್ದೇವೆ. ಎಲ್ಲೆಂದರಲ್ಲಿ ವಿಷಯುಕ್ತ ತ್ಯಾಜ್ಯವನ್ನು ಕಾರ್ಖಾನೆಗಳಿಂದಲೂ ಹೊರಬಿಟ್ಟು ಭೂಮಿಯನ್ನು ವಿಷಯುಕ್ತವಾಗಿಸಿದ್ದೇವೆ. ಇಷ್ಟಾದ ನಂತರವೂ ಮಗುವಿನ ಕುರಿತಾದ ಜವಾಬ್ಧಾರಿಯೂ ಇಲ್ಲದೇ ನಮ್ಮದೇ ಲೋಕದಲ್ಲಿ ಮುಳುಗಿ ಹೋಗಿರುವ ತಾಯಿ ತಂದೆಯರಿಗೆ ಮಗು ಕೇಳುವ ಪ್ರಶ್ನೆ ಇದುಅಪ್ಪ ಮೊಬೈಲ್‌ನಲ್ಲಿ, ಅಮ್ಮ ಧಾರಾವಾಹಿಯಲ್ಲಿ ಮುಳುಗಿರುವ ಕುರಿತು ಮಗುವಿಗೆ ಬೇಸರವಿದೆ. ಅಜ್ಜ ಅಜ್ಜಿ ವೃದ್ಧಾಶ್ರಮದಲ್ಲಿರುವಾಗ ತನ್ನ ಜೊತೆ ಆಡಲು ಯಾರಿಲ್ಲವೆಂದು ಮಗು ಕೊರಗುತ್ತದೆ. ಇಷ್ಟಾದರೂ ತಂದೆ ತಾಯಿಗಳು ಹೇಳುವ ಒಳ್ಳೆಯ ವಿಷಯಕ್ಕೆ ಮಕ್ಕಳ ಒಪ್ಪಿಗೆ ಇದ್ದೇಇರುತ್ತದೆ.ಉಳ್ಳವರ ಸೊಕ್ಕನು ಮುರಿದುಬಡವರಿಗೆ ಜೊತೆಯಾಗಿಬಸವಣ್ಣನ ಹಾದ್ಯಾಗೆ ನಡಿಯೋ ಮಗನೆಎನ್ನುವ ಮಾತಿಗೆ ಯಾವ ಮಗುವೂ ಇಲ್ಲ ಎನ್ನುವುದಿಲ್ಲ ಎನ್ನುವ ನಂಬಿಕೆ ಕವಿಗೆ ಇದೆ. ಹೀಗಾಗಿ ಮಕ್ಕಳ ಮೇಲೆ ನಂಬಿಕೆ ಇಟ್ಟು ನಡೆಯುವುದೇ ತಂದೆತಾಯಿಗಳಿಗೆ ಹಿತವಾದದ್ದು. ಮಕ್ಕಳನ್ನು ಅವರದ್ದೆ ಕಲ್ಪನೆಯ ಹಾದಿಯಲ್ಲಿ ಬಿಟ್ಟರೆ ಅವರು ಸೂರ್‍ಯ ಚಂದ್ರರನ್ನೂ ಭೂಮಿಗೆ ತಂದು ಕಟ್ಟಿಡಬಲ್ಲರು. ಮೋಡವನ್ನೂ ನಿಯಂತ್ರಿಸಿ ಕಲ್ಲು ಹೊಡೆದು ಮಳೆ ಸುರಿಸಲೂ ಹಿಂದೆ ಮುಂದೆ ನೋಡರು ಇಂದಿನ ಜನಾಂಗ. ಮೋಡದ ರಾಸಿಗೆಕಲ್ಲು ಹೊಡೆದುಆಲಿಕಲ್ಲನು ರಪರಪ ಕೆಡಗೋಣಬೇಕೆಂದಾಗ ಮಳೆಯನು ಪಡೆದುಧಗೆಯನು ಅಟ್ಟೋಣಎಂದು ಹುಮ್ಮಸ್ಸಿನಿಂದ ಹೇಳುವ ಇಂದಿನ ತಲೆಮಾರಿನ ಹುಮ್ಮಸ್ಸಿಗೆ ಕೊನೆ ಎಲ್ಲಿದೆ. ಸೂರ್‍ಯನನ್ನೂ ಓಡಿಸಿ ಶಾಸ್ವತವಾಗಿ ಚಂದ್ರನೇ ಬೆಳಕು ನೀಡಲಿ, ಈ ಧಗೆ ಸಹಿಸಲಾಗದು ಎನ್ನುವ ಮಕ್ಕಳಿಗೆ ಚಂದ ತಾರೆಯರ ಚಾಡಿ ಮಾತು ಕೇಳುವ ಅಸಮಧಾನವೂ ಇದೆ. ಮನೆಯಲ್ಲಿ ಅಪ್ಪನ ಕೋಪಕ್ಕೆ ಅಮ್ಮ ಚಾಡಿ ಹೇಳುತ್ತಾಲೆ ಎನ್ನುವ ಮಕ್ಕಳ ಮನಸಿನ ಮಾತು ಇದು ಎಂದೇ ನನಗೆ ಓದಿದಾಗಲೆಲ್ಲ ಅನ್ನಿಸಿದೆ. ಚಾಡಿಯ ಹೇಳಲು ತಾರೆಗಳೆಲ್ಲನಿನ್ನಯ ಹಿಂದೆಯೇ ಕಾದಿವೆ ನೋಡುಎನ್ನುವ ಮಗು ಪೆನ್ಸಿಲ್ ತಪ್ಪು ಬರೆಯಲು ನೀನೇ ಕಾರಣ ಎಂದು ರಬ್ಬರ್ ಗುರಾಯಿಸುವ ಕನಸನ್ನು ತರಗತಿಯಲ್ಲೂ ಕಾಣುವ ಸಾಮರ್ಥ್ಯ ಹೊಂದಿದೆ. ಮಗುವಿನ ಕಲ್ಪನಾ ಶಕ್ತಿಗೆ ಎಲ್ಲಿದೆ ಮಿತಿ? ಪರಿಸರ ಕಾಳಜಿಯ ಕವನಗಳೂ ಇಲ್ಲಿವೆ. ಗುಬ್ಬಿಯ ಮರಿಗಳು ಕಾಂಕ್ರಿಟ್ ಕಾಡಿನಲ್ಲಿ ದಂಗಾಗಿ ಕುಳಿತಿರುವಾಗ ಗುಬ್ಬಿಯು ತನ್ನ ಸಂಸಾರವನ್ನು ಹಳ್ಳಿಗೆ ಸಾಗಿಸುತ್ತದೆ. ಅಲ್ಲಿಯೂ ಗಿಡಮರಗಳಿಲ್ಲದ್ದನ್ನು ಕಂಡು ಕಾಡೇ ಉತ್ತಮ ಎನ್ನುತ್ತ ಕಾಡಿನ ಕಡೆ ಮುಖ ಮಾಡುತ್ತದೆ. ಇನ್ನೊಂದೆಡೆ ಮಳೆಯ ಸುರಿಸಲು ಬಳಿ ಬಾ ಎಂದು ಮೋಡವನ್ನು ಕರೆದರೆ ಕಾಡು ಕಡಿದು, ಭೂಮಿಯನ್ನೆಲ್ಲ ಹೊಲಸು ಮಾಡಿದ್ದನ್ನು ವಿರೋಧಿಸುವ ಮೋಡ, ಹಸಿರು ಬೆಳೆಸಿದರೆ ಖಂಡಿತಾ ಬರುತ್ತೇನೆ ಎನ್ನುತ್ತದೆ. ಹಾಗೆ ಬರುವಾಗಲೇ ಮಿಂಚು, ಗುಡುಗು, ಮಳೆಗೆ ಪೈಪೋಟಿಯೂ ಆಗುತ್ತದೆ. ಮಿಂಚಿನ ಬೆಳಕು ಮೊದಲು ಭೂಮಿಗೆ ತಲುಪುತ್ತದೆ, ಗುಡುಗಿನ ಶಬ್ಧ ನಂತರ ಕೇಳಿದರೆ ಮಳೆ ಮೂರನೆ ಸ್ಥಾನವನ್ನು ಪಡೆಯುತ್ತದೆ. ಇಲ್ಲಿ ಬೆಳಕಿನ ವೇಗ ಶಬ್ಧದ ವೇಗಕ್ಕಿಂತ ಹೆಚ್ಚು ಎನ್ನುವ ಸೂಕ್ಷ್ಮ ಪಾಠವೂ ಅಡಗಿಕೊಂಡಿದೆ. ಮತ್ತೊಂದು ಕವನದಲ್ಲೂ ನದಿಯನ್ನು ಕಂಡು ಪ್ರಾಣಿ ಪಕ್ಷಿಗಳೆಲ್ಲ ಖುಷಿಪಡುತ್ತವೆ. ಆದರೆ ಮನುಷ್ಯ ಮಾತ್ರ ಸುತ್ತಲಿನ ಕಾಡು ಕಡಿದು ಗದ್ದೆ ಮಾಡುತ್ತಾನೆ. ಮಳೆ ಕಡಿಮೆಯಾಗಿ ನದಿ ಒಣಗಿ ಹೋಗುತ್ತದೆ ಎನ್ನುವುದನ್ನು ತಿಳಿಸುತ್ತ ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಾಗಬಾರದು ಎನ್ನುತ್ತಾರೆ. ಹೀಗಾಗಿಯೇ ಪುಟ್ಟನು ದೀಪಾವಳಿ ಹಬ್ಬಕ್ಕೂ ಪಟಾಕಿ ಹೊಡೆಯದೇ ಪರಿಸರದ ಬಗ್ಗೆ ಕಾಳಜಿ ತೋರಿಸುವುದನ್ನು ಚಂದದ ಕವಿತೆಯನ್ನಾಗಿಸಿ ಮಕ್ಕಳ ಮನಸ್ಸಿನಲ್ಲಿ ಪರಿಸರದ ಕುರಿತು ಜಾಗ್ರತಿ ಮೂಡಿಸುತ್ತಾರೆ. ಅಮ್ಮ ಇಲಿಯ ಕಾಟ ತಾಳದೆ ವಿಷವಿಕ್ಕಿದ್ದನ್ನೂ ಮಗು ಚಿಕ್ಕಿಲಿಗೆ ಹೇಳುತ್ತ, ಬಡವರ ಗೂಡಿಗೆ ಹೋಗಲೇ ಬೇಡ ಎನ್ನುತ್ತದೆ. ತಮ್ಮನಿಗೂ ತಿಂಡಿ ಕೊಡದೆ ತಿಂದ ಗುಂಡನ ಕೈಯ್ಯಿಂದ ತಿಂಡಿ ಎಗರಿಸಿದ ಕಾಗೆ ತನ್ನೆಲ್ಲ ಬಂದು ಬಳಗವನ್ನು ಕರೆದು ಹಂಚಿಕೊಂಡು ತಿನ್ನುತ್ತದೆ. ಇರುವೆ ಒಗ್ಗಟ್ಟಿನ ಪಾಠ ಹೇಳುತ್ತದೆ. ಕಾಡಿನಲ್ಲಿ ಸಿಗುವ ರುಚಿರುಚಿಯಾದ ಹಣ್ಣು ಬಿಟ್ಟು ಪೇಟೆಗೆ ಬಂದು ಅಂಗಡಿಯಲ್ಲಿ ಕದಿಯುವ ಮಂಗಗಳ ಕುರಿತು ಮಗು ಪ್ರಶ್ನೆ ಕೇಳುತ್ತ ಕಾಡಿನಲ್ಲಿರುವ ಹಣ್ನಿನ ಮರಗಳನ್ನೆಲ್ಲ ಕಡಿದುದ್ದರ ಕುರಿತು ವಿಷಾದ ವ್ಯಕ್ತ ಪಡಿಸುತ್ತದೆ. ಹೀಗೆ ಪರಿಸರದ ಪಾಠ ಹೇಳುತ್ತಲೆ ಅಡುಗೆ ಮನೆಯ ಆಟಗಾರ ಎಂದು ಮಗುವನ್ನು ಕುರಿತೂ ಹೇಳುವ ಕವಿತೆ ಇಲ್ಲಿದೆ. ಅಪ್ಪನ ಹೊಲದಲ್ಲಿ ದುಡಿಯಬೇಕೆನ್ನುವ, ಮನೆಯಲ್ಲಿ ರೋಬೋಟ್ ಜೊತೆ ಆಡುತ್ತಲೇ ಊರಿನ ತೋಟದಲ್ಲಿ ಏನೇನಿದೆ ಎಂದು ತೋರಿಸಲು ತಂದೆಯನ್ನು ಕರೆಯುವ ಮಗುವಿಗೆ ಅಪ್ಪನಂತೆ ಗಡ್ಡ ಮೀಸೆ ಯಾವಾಗ ಬರುವುದು ಎಂದು ಅಮ್ಮನನ್ನು ಕೇಳುತ್ತ ಎದುರು ನೋಡುತ್ತಿದೆ. ತನ್ನ ಶಾಲೆಯಷ್ಟು ಸುಂದವಾದದ್ದು ಬೇರಿಲ್ಲ ಎನ್ನುತ್ತದೆ. ಕಾಡಿಗೆ ಹೋಗಬಯಸುವ, ಸಂತೆಯಲ್ಲಿ ನಲಿದಾಡಲು ಇಷ್ಟಪಡುವ ಮಗುವಿನ ಮನವಿಗೆ ಹಿರಿಯರೆನ್ನಿಸಿಕೊಂಡ ನಾವು ಸ್ಪಂದಿಸಿದ್ದೇವೆಯೇ? ಭೀಮಲೀಲೆ ಎನ್ನುವ ಅಂಬೇಡ್ಕರರ ಕುರಿತಾದ ಕವನ ಮಕ್ಕಳನ್ನು ಮುಟ್ಟುವಂತಿದೆ. ಓದು ಬರೆಹ ಕಲಿಯದ ಗೋಣಿ ಬಸವನ ಪಾಡನ್ನು ಕಂಡರೆ ಮಗು ಒಂದಿಷ್ಟಾದರೂ ಓದಬೇಕೆಂದು ಬಯಸುವುದು.ಆಕಾಶವನ್ನೇ ಮುಟ್ಟಬಲ್ಲೆವುಏಣಿಯ ನೀಡಿ ಸಹಕರಿಸಿಎಂದು ತಮ್ಮ ಮೇಲೆ ತಾವೇ ಭರವಸೆಯಿಟ್ಟು ಮಗು ಕೇಳುತ್ತಿದೆ. ಆಕಾಶಕ್ಕೆ ಏರುವ ಮಗುವಿಗೆ ಏಣಿ ಕೊಟ್ಟು ಬೆನ್ನು ತಟ್ಟಬೇಕಾದದ್ದು ಪಾಲಕರು ಮಾಡಲೇ ಬೇಕಾದ ಕರ್ತವ್ಯ.ಬೆನ್ನು ತಟ್ಟಿ ಬೆಂಬಲಿಸಿಬದುಕ ದಾರಿ ತೋರಿಸಿಸೋತರೂ ಗೆಲ್ಲೋ ಕಲೆಯಕಲೀತೀವಿ ಸಹಕರಿಸಿ ನಮ್ಮ ಮಕ್ಕಳ ಬೆನ್ನು ತಟ್ಟಿ ಯಾವುದು ಒಲ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಸಿಕೊಳ್ಳಲೇ ಬೇಕಲ್ಲವೇ? ಇಲ್ಲದೇ ಹೋದರೆ ತಪ್ಪು ಸರಿ ಎನ್ನುವುದರ ಅರಿವಾಗುವುದಾದರೂ ಹೇಗೆ? ಅಂತಹ ತಿಳುವಳಿಕೆ ನೀಡಿಲ್ಲದ್ದರಿಂದಲೇ ಸಮಾಜದಲ್ಲಿ ಇಷ್ಟು ಅನ್ಯಾಯ, ಅತ್ಯಾಚಾರಗಳು ಹೆಚ್ಚುತ್ತಿವೆ. ನಾವು ನೀಡುವ ಪಾಠ ಮಕ್ಕಳಲ್ಲಿ ನೈತಿಕತೆಯನ್ನು ತುಂಬಿದರೆ ಸಮಾಜ ಖಂಡಿತಾ ಅಧೋಗತಿಗಿಳಿಯಲಾರದು. ಲಿಂಗತ್ವದ ಕಲ್ಪನೆ ಮಾಡಿಕೊಡುವುದು ಹಾಗೂ ಲಿಂಗಬೇಧ ಮಾಡದಂತೆ ನೋಡಿಕೊಳ್ಳುವುದು ನಮ್ಮದೇ ಕರ್ತವ್ಯ.