ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಭಾವನೆಗಳು ಮಾತನಾಡುತ್ತಿವೆ ಕಲ್ಪನೆಗಳ ಸಾಗರದಲಿ ಹುದುಗಿ ಹೊಕ್ಕಿದ್ದ ಶಿಲ್ಪವನು ಹೆಕ್ಕಿ ನನಸಾಗಿಸುವಾಸೆಯಲಿ ನೂರೂರಗಳ ಸುತ್ತಿ ಸುತ್ತಿ ಮೌನಿಯಾದ ಶಿಲ್ಪಿಯೊಬ್ಬ ಬಾಯಾರಿ ದಣಿದಿರಲು ತಿರುಕನ ಕನಸು ಹಾರೈಸಿದಂತೆ ಚಂದಿರನ ಬೆಳದಿಂಗಳ ಮೀರಿ ಅಮೃತ ಸಮಾನ ಶಿಲೆಯೊಂದು ಹರ್ಷದಾ ವರವಾಗಿ ಗೋಚರಿಸಿ ವನವಾಸದಲಿಹ ಲಕ್ಷ್ಮಣನ ಕಾಯ್ದು ಕನವರಿಸಿ ಕಲ್ಲಾಗಿ ತಪಗೈವಂತೆ ಊರ್ಮಿಳೆ, ಹಸಿವು ನಿದ್ದೆಗಳ ಗೆದ್ದು ಕಾಲನ ಕುಣಿಕೆಯ ಮರೆತು ಹಗಲಿರುಳು ಹವಣಿಸುತಲಿ ಶಿಲೆಯನು ದೃಷ್ಟಿಸುತಲಿ ಅಂತರಾತ್ಮದಿ ಅಡಗಿಹ ಅರಿವನು ಹದಗೊಳಿಸಿ ಕಲ್ಪನೆ ಶಿಲ್ಪವನೆ ಉಸಿರಾಡಿ ಇಂದ್ರಿಯಗಳ ನಿಗ್ರಹಿಸಿ ಅತೀಂದ್ರಿಯ ಹುರಿಗೊಳಿಸಿ ಬಕಧ್ಯಾನದಿಂದಲಿ ಶಿಲೆಯ ತಿದ್ದುತಲಿ ತೀಡುತಲಿ ನವಿರಾಗಿ ಸಿಹಿ ಉಳಿಪೆಟ್ಟು ನೀಡುತಲಿ ಜ್ಞಾನದ ಒಳಗಣ್ಣ ತೆರೆದು ಕಾಲ್ಬೆರಳಿಗುಂಗುರ ಕೈಗೆಬಳೆಗಳ ಮೂಗುನತ್ತು ಕೊರಳ ಮಾಂಗಲ್ಯ ಜೀವ ಭಾವಗಳೆಲ್ಲವ ತುಂಬಿ ಕಣ್ಬಿಟ್ಟ ಶಿಲ್ಪವನು ಹೆಣ್ಣಾಗಿಸಿ ಅಪ್ಸರೆ ಸೋಲಿಸುವ ತವಕದಿ ದಣಿದ ಶಿಲ್ಪಿಯ ಉಸಿರು ಸಿಂಧೂರವಿಡದೆ ಹೆಣ್ಣಾದ ಶಿಲ್ಪಕೆ ವಿಧಿಯಾಟಕೆ ಬಲಿಯಾಯಿತು ಶಿಲ್ಪಿ ಸಾಂಗತ್ಯಕೆ ಕಾಯುತಲಿ ಜೀವಬಂದ ಶಿಲ್ಪ ಒಂಟಿತನದಿ ಬರಿಯ ಮೌನವೇ ಶಾಪವಾಗಿ ಮೂಕ ರೋಧನೆಯ ಕೂಪದಿ ಭಾವನೆಗಳು ಮಾತನಾಡುತ್ತಿವೆ ************

ಕಾವ್ಯಯಾನ Read Post »

ಇತರೆ

ಲಹರಿ

ಆತ್ಮಸಾಕ್ಷಿಯಾಗಿ… ಸುರೇಶ ಎನ್ ಶಿಕಾರಿಪುರ. ಸತ್ತ ವ್ಯಕ್ತಿಯನ್ನು ಶ್ರೀಗಂಧ, ಒಣ ಕೊಬ್ಬರಿ, ತುಳಸಿಯನ್ನು ರಾಶಿ ಒಟ್ಟಿ, ಮೇಲೆ ತುಪ್ಪವ ಸುರಿದು ಸುಟ್ಟರೆ ಅದು ಕಡೆಯ ಪಕ್ಷ ಹೆಣದ ವಾಸನೆಯನ್ನು ಮರೆ ಮಾಚಬಹುದು ಇಲ್ಲವೇ ಸತ್ತ ವ್ಯಕ್ತಿಯ ಶ್ರೀಮಂತಿಕೆಯ ಪ್ರದರ್ಶನ ವಾಗಬಹುದು ಅಷ್ಟೆ. ಅದು ಗುಣದ ಮಾನದಂಡವಲ್ಲ. ಅದರಿಂದ ಮೃತ ವ್ಯಕ್ತಿಯ ಗುಣ ಮಾತ್ರ ಸುಡುವುದಿಲ್ಲ. ಅದು ಒಳ್ಳೆಯ ಗುಣವಾಗಿದ್ದರೂ ಕೆಟ್ಟ ಗುಣವಾಗಿದ್ದರೂ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ… ಸದ್ಗುಣವಾಗಿದ್ದರೆ ಜನತೆಯ ನಾಲಗೆಯ ಮೇಲೆ ಸ್ತುತಿಯಾಗಿಯೂ ದುರ್ಗುಣವಾಗಿದ್ದರೆ ಅದೇ ಜನರ ನಾಲಗೆಯ ಮೇಲೆ ನಿಂದೆಯಾಗಿಯೂ ತಲೆಮಾರುಗಳು ಕಳೆದರೂ ಹಾಗೆಯೇ ಉಳಿಯುತ್ತದೆ‌. “ಉಂಡರೆ ಉಟ್ಟರೆ ಸೇರ ಮಂಡೆ ಬಾಚಿದರೆ ಸೇರ | ಕುಂತಲ್ಲಿ ಸೇರ ದುಸ್ಮಾನ | ಸತ್ತಾರೆ | ಉಂಡ್ಹೋಗಿ ಹೆಣವ ತಗುದೇವೊ||“ ಇದು ದುಷ್ಟರ ಸಾವಿಗೆ ಜನಪದ ಪ್ರತಿಕ್ರಿಯಿಸಿದ ರೀತಿ. ಬೂತಯ್ಯ ಸತ್ತಾಗ ಊರು ಪ್ರತಿಕ್ರಿಯಿಸಿದ ರೀತಿಯೂ ಹಾಗೇ. ಆದರೆ ಒಳ್ಳೆಯವರ ಸಾವನ್ನೂ ಪಟಾಕಿ ಹೊಡೆದು ಸಂಭ್ರಮಿಸುವ, ಕೇಕೆ ಹಾಕಿ ಕುಣಿಯುವ, ನಿಂದೆಗಳ ಮಳೆಗರೆದು ವಿಕೃತ ಆನಂದ ಅನುಭವಿಸುವ ವಿಕಾರಿಗಳೇ ತುಂಬಿರುವ ಅಸಹನೀಯ ವಾತಾವರಣದಲ್ಲಿ ನಾವೀಗ ಬದುಕುತ್ತಿದ್ದೇವೆ. ದುಷ್ಟರ ಸಾವು ನೋವು ಸಮಾಜದ ದೃಷ್ಟಿಯಲ್ಲಿ ಯಾವ ಸಹಾನುಭೂತಿಯನ್ನೂ ಗೌರವವನ್ನೂ ಪಡೆದುಕೊಳ್ಳುವುದಿಲ್ಲ. ಸಾವು ಸಾರ್ಥಕವಾಗಬೇಕಾದರೆ ಬದುಕು ಸಾರ್ಥಕವಾಗಿರಬೇಕು. ಆ ಸಾರ್ಥಕತೆ ನಮ್ಮಷ್ಟಕ್ಕೆ ನಮ್ಮದೇ ಆಗಿರದೆ ಅದು ನಾಲ್ಕು ಜನರೂ “ಸಾರ್ಥಕವಾಗಿ ಬದುಕಿದ್ನಪ್ಪ ಆ ಮನುಷ್ಯ ಪುಣ್ಯಾತ್ಮ” ಎನಿಸಿಕೊಳ್ಳುವಂತಿರಬೇಕು. ಅದಕ್ಕೇ ಯಾರೋ ಒಬ್ಬ ಕವಿ ಬರೆದುಬಿಟ್ಟ, “ಒಳಿತು ಮಾಡು ಮನುಸಾ… ನೀ ಇರೋದು ಮೂರು ದಿವಸ…” ಎಂದು. ನಾವು ಸರಳವಾಗಿ ಬದುಕಬೇಕು. ಕಪಟವಿಲ್ಲದ ನೆಡೆ ನುಡಿ ನೋಟ ಹೊಂದಿರಬೇಕು. ನನಗೆ ಸಾಲದೆಂದು ನನ್ನ ಮಕ್ಕಳಿಗೂ ಮೊಮ್ಮಕ್ಕಳಿಗೂ ಮರಿಮಕ್ಕಳಿಗೂ ಅವರ ಮರಿ ಮಕ್ಕಳಿಗೂ ಆಗುವಷ್ಟು ಕೂಡಿಡುವ ದುರಾಸೆ ಸಲ್ಲದು. ಸಂಪತ್ತು ಹೆಚ್ಚಿದಷ್ಟೂ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಾ ಹೋಗುತ್ತಾನೆ ಮಾತ್ರವಲ್ಲ ಮನುಷ್ಯತ್ವವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾನೆ. ದರ್ಪ, ಅಹಂ, ಮದ, ಉದಾಸೀನತೆ, ಕ್ರೌರ್ಯ ಅವನಲ್ಲಿ ಮನೆ ಮಾಡುತ್ತಾ ಹೋಗುತ್ತದೆ‌. ಅವನೊಬ್ಬ ಶೋಷಕನೂ ನಾಶಕನೂ ಆಗಿ ಮಾರ್ಪಾಡಾಗುತ್ತಾನೆ‌. ಮಾನವ ದಾನವನಾಗುವ ಪರಿ ಇದು. ಇಂಥವರ ಸಾವು ನೊಂದವರ ಸಂಭ್ರಮವಾಗುತ್ತದೆ. ಸಾವು ಅರ್ಥಪೂರ್ಣವಾಗಬೇಕು ಸತ್ತ ಮೇಲೂ ಬದುಕಬೇಕು ಎಂದರೆ ನಾವು ಹಣವನ್ನು ಸಿರಿಯನ್ನು ಕೀರ್ತಿಯನ್ನು ಅಧಿಕಾರವನ್ನು ಮೋಹಿಸುವುದನ್ನು ಸ್ವಾರ್ಥವನ್ನು ಸ್ವಪ್ರತಿಷ್ಟೆಯನ್ನು ಬಿಡಬೇಕು. ಮನದ ಮುಂದಣ ಆಸೆಯೆಂಬ ಮಾಯೆ ನಮ್ಮನ್ನು ಎಂದೂ ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಬಿಡದು. ಮನುಷ್ಯನಿಗೆ ಹಂಚಿ ತಿನ್ನುವ ಗುಣ ಇರಬೇಕೋ ಹೊರತು ಹೊಂಚಿ ಹೊಡೆದು ತಿನ್ನುವ ಗುಣ ಅಲ್ಲ. ಯಾವನು ಅಂತರಂಗವೂ ಬಹಿರಂಗವೂ ಶುದ್ಧನಾಗಿರುತ್ತಾನೋ ಅವನು ಜಗತ್ತಿನ ಯಾವ ಶ್ರೀಮಂತನಿಗೂ ಕೆಳಗಿನವನಲ್ಲ. ಗುಣಶ್ರೀಯೇ ಮನುಷ್ಯನ ಶ್ರೀಮಂತಿಕೆ. ಗುಣವನ್ನು ಹಣ ಕೊಟ್ಟು ಕೊಳ್ಳಲು ಆಗುವುದಿಲ್ಲ. ಅದು ನಮ್ಮೊಳಗೇ ಹುಟ್ಟಿ ಹರಿಯುವ ಅಮೃತವಾಹಿನಿ ಅದನ್ನು ಮನುಷ್ಯನಿಂದ ಮನುಷ್ಯನಿಗೆ ಹರಿಸಬೇಕು.. ಮಾನವತೆಯ ಬೀಜವನ್ನು ಬಿತ್ತಿ ಬೆಳೆಯಬೇಕು. ನಮ್ಮ ದೇಹ ಹೊರಟುಹೋಗುವ ಹಕ್ಕಿಯನ್ನು ಕೂಡಿಹಾಕಿಕೊಂಡಿರುವ ತೊಗಲು ಮಾಂಸ ಮೂಳೆಯ ಪಂಜರ. ಹಕ್ಕಿಯು ಒಂದಲ್ಲಾ ಒಂದು ದಿನ ಬಂಧನದಿಂದ ಮುಕ್ತವಾಗಿ ಹಾರಿ ಹೋಗುತ್ತದೆ. ಅಸ್ತಿತ್ವ ಕಳೆದುಕೊಂಡ ದೇಹವೆಂಬ ಪಂಜರ ಕೊಳೆಯಲು ಆರಂಭಿಸುತ್ತದೆ. ಇದು ಸಕಲ ಪ್ರಾಣಿ ಜಗತ್ತಿನ ಬಾಳಿನ ಅಂತಿಮ ಸತ್ಯ. ಆದರೆ ಮನುಷ್ಯನನ್ನು ಹೊರತು ಪಡಿಸಿ ಬೇರಾವ ಪ್ರಾಣಿಗಳೂ ಅಪ್ರಾಕೃತಿಕವಾಗಿ ಬದುಕಲಾರವು ಅವುಗಳ ವರ್ತನೆಯಲ್ಲಿ ನಮ್ಮ ಸಣ್ಣತನಗಳಿಲ್ಲ. ನಮ್ಮ ದುರಾಸೆಗಳಿಲ್ಲ, ನಮ್ಮ ಧರ್ಮ ಜಾತಿಯ ಕಿತ್ತಾಟಗಳಿಲ್ಲ‌. ನಾಳೆಗೆ ಕೂಡಿಸಿಟ್ಟುಕೊಳ್ಳಬೇಕೆಂಬ ಸ್ವಾರ್ಥ ದಾಹವಿಲ್ಲ. ಗುಣದಲ್ಲಿ ಅವೇ ಮೇಲು ನಾವೇ ಕೀಳು. ಸದಾ ಅತೃಪ್ತಿಯಲ್ಲೇ ಬದುಕುವಾತ ಎಂದೂ ಸುಖವಾಗಿರಲಾರ ಮತ್ತು ಆತ ಇತರರನ್ನೂ ಸುಖವಾಗಿರಲು ಬಿಡಲಾರ. ಯಯಾತಿಯ ದಾಹ ಯಯಾತಿಯನ್ನೇ ಬಲಿ ಪಡೆಯಿತು. ಕಂಡಕಂಡ ಹೆಣ್ಣುಗಳನ್ನೆಲ್ಲಾ ಭೋಗಿಸಿದ, ಚಿರ ಯೌವ್ವನಕ್ಕಾಗಿ ಹಪಹಪಿಸಿದ, ಅವನ ದುರಾಸೆ ಅವನ ಅತೃಪ್ತಿ ಅವನ ದಾಹಕ್ಕೆ ತೃಷೆಗೆ ಎಲ್ಲೆಯೇ ಇರಲಿಲ್ಲ. ಮನುಷ್ಯತ್ವ ಕಳೆದುಕೊಂಡ ಕಾಮದ ಪುತ್ಥಳಿಯಾಗಿದ್ದ. ತನ್ನ ತೆವಲು ತನ್ನ ಸುಖಕ್ಕಾಗಿ ನಿಸರ್ಗದ ಧರ್ಮದ ವಿರುದ್ಧವಾದ ಹಾದಿಯಲ್ಲಿ ಗೂಳಿ ದನದಂತೆ ನುಗ್ಗುತ್ತಿದ್ದ ಆತ; ಅಕಾಲಿಕ ಮುಪ್ಪಿನ ಶಾಪಕ್ಕೆ ಗುರಿಯಾದ. ಕಡೆಗೆ ಮಗನ ಯೌವ್ವನಕ್ಕೂ ಕನ್ನ ಹಾಕಿದ. ಎಲ್ಲವೂ ಆದಮೇಲೆ ಅವನಿಗೆ ಬದುಕಿನ ಅಂತಿಮ ಸತ್ಯದ ಅರಿವಾಯಿತು ದರ್ಶನವಾಯಿತು. ತಪ್ಪಿಗಾಗಿ ಪರಿತಪಿಸಿದ ಪಶ್ಚಾತ್ತಾಪಬಟ್ಟ. ಆದರೆ ಶಿಕ್ಷೆಯಿಂದ ಆತನಿಗೆ ಮುಕ್ತಿಯಿಲ್ಲ. ಬಂದ ಮುಪ್ಪನ್ನು ನಿರಾಕರಿಸಲು ತಪ್ಪಿಸಿಕೊಳ್ಳಲು ದಾರಿಗಳಿಲ್ಲವೆಂಬ ಜೀವನ ಸತ್ಯದ ಅರಿವಾದಾಗ ಎಲ್ಲವನ್ನೂ ಬಿಟ್ಟುಕೊಟ್ಟು ನಿರಾಳನಾದ ಆತ “ಮಹಾತ್ಮ” ಎನಿಸಿಕೊಂಡ. ‌ನಾವು ನಮ್ಮೊಳಗಿನ ಯಯಾತಿಯ ದಾಹವನ್ನು ಕೊಂದುಕೊಳ್ಳಬೇಕು. ಸನ್ಮಾರ್ಗದ ಆಯ್ಕೆಯೇ ನಮ್ಮನ್ನು ಸುಖವಾಗಿ ಸುಂದರವಾಗಿ ಇಡುವುದು. ಬಾಳು ಇರುವುದು ಸ್ವೀಕರಣೆಗೋ ಹೊರತು ನಿರಾಕರಣೆಗಲ್ಲ. ಎಲ್ಲರಿಂದಲೂ ಕಲ್ಲು ಹೊಡೆಸಿಕೊಳ್ಳುವ ಕಾಬಾದ ಶಿಲೆಯಾಗಿ ಬಾಳುವುದಕ್ಕಿಂತ ಎಲ್ಲರೂ ಮೆಚ್ಚವ ಮನುಷ್ಯನಾಗಿ ನಾಲ್ಕು ಕಾಲ ಬಾಳಿದರೆ ಸಾಕು.. **************************

ಲಹರಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಜಾಂಬ್ಳಿ ಟುವಾಲು ಜಾಂಬ್ಳಿ ಟುವಾಲು ಕಥಾಸಂಕಲನ ಲೇಖಕರು- ರಾಜು ಹೆಗಡೆ ಪ್ರಕಾಶನ – ಅಂಕಿತ ಪುಸ್ತಕ ಶಿರಸಿಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಪ್ರೊ.ರಾಜು ಹೆಗಡೆ ಉತ್ತರ ಕನ್ನಡದ ಪ್ರಮುಖ ಕವಿ ಮತ್ತು ಕಥೆಗಾರ.ಉ.ಕದ ಗಡಿರೇಖೆಯೊಳಗೆ ತಮ್ಮ ಕಥಾಲೋಕ ಸೃಷ್ಟಿಸಿಕೊಂಡು ಇಲ್ಲಿಯೇ ನೆಲೆಸಿರುವ ಬರಹಗಾರ. ಜಾಂಬ್ಳಿ ಟುವಾಲು ಎಂಬ ಹೆಸರಿನ ಯಾವುದೇ ಕಥೆ ಇಲ್ಲಿಲ್ಲ. ಆದರೆ ‘ಕುರುರಾಯ ಇದನೆಲ್ಲ ಕಂಡು..’ ಎಂಬ ಕಥೆಯಲ್ಲಿ ಟವೆಲ್ ಇಟ್ಟು ಹೋದವರ ಜಗಳದ ಪ್ರಸಂಗ ಬರುತ್ತದೆ. ಕಥೆಗಳನ್ನು ಜಾಂಬ್ಳಿ – ಇಲ್ಲಿ ಆರು ಕಥೆಗಳು ಇವೆ. ಟುವಾಲು- ಇಲ್ಲಿಯೂ ಆರು ಕಥೆಗಳಿವೆ. ಮತ್ತು ಅನುಬಂಧದಲ್ಲಿ ನಾಲ್ಕು ಕಥೆಗಳಾಗಿ ವಿಂಗಡಿಸಲಾಗಿದೆ. ಅಪಾರ ಪಾಂಡಿತ್ಯವನ್ನು ಪಡೆದಿದ್ದರೂ ರಾಜು ಹೆಗಡೆ ಅವರು ಅದನ್ನು ಕಥೆಗಳಲ್ಲಿ ತುರುಕಿಲ್ಲ. ಸರಳ ಮತ್ತು ಉತ್ತರ ಕನ್ನಡದ ಭಾಷೆಯಲ್ಲಿ ಕತೆ ಹೇಳುತ್ತಾ ಹೋಗಿದ್ದಾರೆ. ವಿನೋದದ ಪ್ರಸಂಗವನ್ನು ಚಂದಾಗಿ ಹೇಳಬಲ್ಲ ಹೆಗಡೆಯವರು ‘ ಲಾರಿ ಏರಿದ ಕಾಡು ‘ ಎಂಬ ಕತೆಯಂತಹ ಕತೆಯಲ್ಲಿ ವಿಷಾದವನ್ನು ಸಟಕ್ಕನೆ ತಂದು ಕಾಡುವರು. ಕತ್ತಲೆ ಮೌನ ಮತ್ತು… ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಮೊದಲ ಬಹುಮಾನ ಪಡೆದ ಕಥೆ. ಇಲ್ಲಿ ಗಜಾನನ, ತಿಮ್ಮಣ್ಣ (ತಿರುಮಲೇಶ) ಮತ್ತು ಗೌರಿಯ ಸುತ್ತ ಸುತ್ತುತ್ತಾ ಊರನ್ನೂ ಒಳಗೊಳ್ಳುವ ಕಥೆ. ಸಣ್ಣ ಪುಟ್ಟ ಚಾಲ್ ನಲ್ಲೆ ಚಿತ್ರಣ ಕಟ್ಟಿಕೊಡುವುದು ಇವರ ನಿರೂಪಣೆಯ ವಿಶೇಷ. ಚಾವಿ ಕಥೆ ಅತ್ಯಂತ ಸಣ್ಣ ಸಮಯದಲ್ಲಿ ನೆಡೆಯುವ ಸಾಮಾನ್ಯ ಘಟನೆ. ಆದರೆ ಅದು ರಾಜು ಹೆಗಡೆ ಅವರ ಕೈಯಲ್ಲಿ ಕಲಾತ್ಮಕವಾಗಿ ಹೊರಹೊಮ್ಮಿದೆ. ಪಾರಿಜಾತದ ಗೀರು ಒಂದು ವಿಶಿಷ್ಟವಾದ ಕಥೆ.ಇಲ್ಲಿಯ ಪ್ರೇಮಿಗಳ ವಾತಾವರಣ ಈಗಿನ ಕಾಲಘಟ್ಟದ್ದಾದರೂ, ಇಬ್ಬರೂ ಪ್ರೌಢರು. ವಿಪ್ರಲಂಭ ಕೂಡಾ ಎಕ್ಸ್ಟ್ರಾ ಮರೈಟಲ್ ರಿಲೇಶನ್ ಶಿಪ್ ಬಗ್ಗೆ ರೋಮ್ಯಾಂಟಿಕ್ ನಿರೂಪಣೆಯಲ್ಲಿ ಸಾಗುತ್ತದೆ. ಲಾಸ್ಟ್ ಪೆಗ್,ಫ್ರಿಜ್ಜು, ಲೌಕಿಕ ದಂತಹ ಕತೆಗಳು ಯಾವುದೇ ಪ್ರಕಾರದ ಹಂಗಿಲ್ಲದೆ ಓದುವ ಮತ್ತು ಕೇವಲ ಓದುವ ಖುಷಿಯನ್ನು ಕೊಡುತ್ತವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಒಮ್ಮೆ ಓದಲೇಬೇಕಾದ ಕೃತಿ ಈ ‘ ಜಾಂಬ್ಳಿ ಟುವಾಲು. ***********. ಡಾ.ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ರೆಕ್ಕೆ ಮುರಿದಾಗ… ಚೇತನಾ ಕುಂಬ್ಳೆ ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಅಲ್ಲಿ ಉರುಳಿ ಬಿದ್ದು ಅಸುನೀಗಿದ್ದು ಬರೇ ಜೀವಗಳು ಮಾತ್ರ ಆಗಿರಲಿಲ್ಲ. ಹಲವು ಕುಟುಂಬಗಳ ಆಧಾರಸ್ತಂಭಗಳಾಗಿತ್ತು. ಅಲ್ಲಿ ಕಳೆದುಕೊಂಡದ್ದು ಸ್ನೇಹ ಸಂಬಂಧಗಳ ಕೊಂಡಿಯಾಗಿತ್ತು. ಒಬ್ಬರಿಗೆ ಪ್ರೀತಿಯ ಒಡಹುಟ್ಟಿದವರು ಮತ್ತೊಬ್ಬರಿಗೆ ಸ್ನೇಹಿತರು ಮಗದೊಬ್ಬರಿಗೆ ಬಾಳಿಗೆ ಬೆಳಕಾಗಿದ್ದ ಹೆತ್ತವರು ಕೆಲವರಿಗೆ ಜೀವದುಸಿರಾಗಿದ್ದ ಬಾಳಸಂಗಾತಿಗಳು, ಕರುಳಬಳ್ಳಿಗಳು ಮತ್ತೂ ಕೆಲವರಿಗೆ ಸಂಬಂಧಿಕರು ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಅಲ್ಲಿ ನುಚ್ಚುನೂರಾದದ್ದು ಕೇವಲ ದೇಹಗಳೂ ಎಲುಬುಗಳೂ ಮಾತ್ರವಾಗಿರಲಿಲ್ಲ ಹೆಣೆದಿಟ್ಟ ಕನಸುಗಳಾಗಿತ್ತು ಮನದ ಮೂಲೆಯಲ್ಲಿದ್ದ ನಿರೀಕ್ಷೆಗಳಾಗಿತ್ತು ಭದ್ರವಾಗಿ ಬೇರೂರಿದ ನಂಬಿಕೆಗಳಾಗಿತ್ತು ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಕ್ಷಣದೊಳಗೆ ಹೊತ್ತಿ ಉರಿದದ್ದು ಒಂದಷ್ಟು ಮಿಡಿವ ಹೃದಯಗಳು ಮಾತ್ರ ಆಗಿರಲಿಲ್ಲ ಗೆಳೆಯರಿಗಾಗಿ, ಬಂಧುಗಳಿಗಾಗಿ ಖರೀದಿಸಿದ ಸ್ನೇಹದ ಉಡುಗೊರೆಗಳಾಗಿದ್ದವು ಹೆತ್ತವರಿಗಾಗಿ ತೆಗೆದಿರಿಸಿದ ವಸ್ತ್ರಾಭರಣಗಳಾಗಿದ್ದವು ಬಾಳ ಸಂಗಾತಿಗಾಗಿ ಅಡಗಿಸಿಟ್ಟ ಒಲವ ಉಡುಗೊರೆಗಳಾಗಿದ್ದವು ಮಕ್ಕಳಿಗಾಗಿ ಕೊಂಡುಕೊಂಡ ಚಾಕ್ಲೇಟ್ ಗಳೂ, ಆಟಿಕೆಗಳೂ ಆಗಿದ್ದವು. ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಎಲ್ಲವೂ ನಭವನ್ನಾವರಿಸಿದ ಕಪ್ಪು ಹೊಗೆಯೊಂದಿಗೆ ಬೆರೆತು ಕರಕಲಾಗಲು ಒಂದು ನಿಮಿಷವೂ ಬೇಕಾಗಿರಲಿಲ್ಲ ಎಲ್ಲವೂ ಮುಗಿದಿತ್ತು ಕ್ಷಣದೊಳಗೆ ಏನೆನ್ನಲಿ… ವಿಧಿಯಾಟವ…. ಹೇಗೆ ಮರೆಯಲಿ… ಹೇಗೆ ಸಹಿಸಲಿ…ನೋವನ್ನು… ದಿನಗಳುರುಳಿ ವರುಷಗಳಾಗುತ್ತಿವೆ ವರುಷಗಳೊಂದಿಗೆ ಕಾಲವೂ ಬದಲಾಗುತ್ತಿದೆ ಆದರೆ, ನೆನಪುಗಳು… ಅದೂ ಕಹಿ ನೆನಪುಗಳು… ಈಗಲೂ ಎದೆಯನ್ನು ಇರಿಯುವಾಗ ಕಣ್ಗಳು ಹನಿಗೂಡುತ್ತವೆ ಹೃದಯ ಭಾರವಾಗುತ್ತದೆ ಜೊತೆಗೆ, ದೀರ್ಘವಾದ ಒಂದು ನಿಟ್ಟುಸಿರು… (ದಶಕದ ಹಿಂದೆ ಮಂಗಳೂರಲ್ಲಿ ನಡೆದ ವಿಮಾನ ದುರಂತ ಘಟನೆಯ ಆಧಾರಿತ) *********

ಕಾವ್ಯಯಾನ Read Post »

You cannot copy content of this page

Scroll to Top