ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಅಮೃತ ಎಂ ಡಿ ಕಣ್ಮುಚ್ಚಿ ನೋವುಗಳನ್ನೇ ಸಹಿಸಿಕೊಳ್ಳುವೆ ಗೆಳೆಯ ನಿನ್ನ ಹೆಸರಲ್ಲಿ ನನ್ನಯ ಉಸಿರುಂಟು ಗೆಳೆಯ ಆಗಾಗ ಉಸಿರಾಡೋ ಗಾಳಿಯಲ್ಲಿ ನಿನ್ನಯ ಹೆಸರನ್ನೇ ಹುಡುಕುವ ಹುಚ್ಚಾಟದ ಅತಿರೇಕವುಂಟು ಗೆಳೆಯ ಶ್ರೀಗಂಧದ ಘಮಲು ಕೂಡ ಪೈಪೋಟಿ ನೀಡುತ್ತಿರುವಾಗ ಚಂದದ ಮೋರೆಗೆ ಎಲ್ಲಿಲ್ಲದ ಅಂದವುಂಟು ಗೆಳೆಯ ನಿನ್ನೊಲವ ನೆರಳಲ್ಲಿ ಮುಳ್ಳು ಹಾದಿಯು ಕೂಡ ಹೂವಿನ ಹಾಸಿಗೆ ಆಗುವುದೆಂಬ ಆಸೆವುಂಟು ಗೆಳೆಯ “ಅಮ್ಮು”ವಿನ ಸಂತೋಷದ ಪರಿಛಾಯೆಯು ನಿನ್ನ ಸಂಪ್ರೀತಿಯ ಸಾಂಗತ್ಯದಲ್ಲೇ ಉಂಟು ಗೆಳೆಯ ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೊಗಸೆಯೊಳಗಿನ ಬಿಂದು ಎನ್. ಶೈಲಜಾ ಹಾಸನ ಬಿಟ್ಟು ಬಿಡು ಗೆಳೆಯನನ್ನಷ್ಟಕ್ಕೆ ನನ್ನರೆಕ್ಕೆ ಹರಿದ ಹಕ್ಕಿಹಾರಿಹೋಗುವುದೆಲ್ಲಿಇಷ್ಟಿಷ್ಟೆ ಕುಪ್ಪಳಿಸಿಅಲ್ಲಲ್ಲೆ ಅಡ್ಡಾಡಿನಿನ್ನ ಕಣ್ಗಾವಲಲ್ಲಿಯೇಸುತ್ತಿ ಸುಳಿದುಒಂದಿಷ್ಟೆ ಸ್ವಚ್ಛಗಾಳಿಸೋಕಿದಾ ಕ್ಷಣಧನ್ಯತೆಯ ಪುಳಕತಣ್ಣನೆಯ ನಡುಕಎದೆಯ ತಿದಿಯೊಳಗೆನೀನೇ ಒತ್ತಿದ ಕಾವುಭಾವನೆಗಳ ಬೇಯಿಸಿಮನವೀಗ ಚಿತೆಯೊಳಗೆಬೆಂದ ಕುಂಭಬಿಟ್ಟರೂ ಬಿಡಲಾರೆಎನುವ ಮಾಯೆಅಟ್ಟಾಡಿಸುತ್ತಿದೆಗೆಲುವಿನ ಹಾದಿಯನೀನೇ ಹಾರ ಬಿಟ್ಟರೂರೆಕ್ಕೆ ಇಲ್ಲದ ನಾನುಮತ್ತೇ ನಿನ್ನ ಉಡಿಗೆಬೊಗಸೆಯೊಳಗಿನ ಬಿಂದುಮುಷ್ಠಿಯೊಳಗೆ ಆವಿಎತ್ತತ್ತ ಸರಿದರೂಮತ್ತೆ ಅಲ್ಲಿಗೇಪಯಣದ ಹಾದಿದೂರ ದೂರಕೆ ********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕೃತಿ ಪರಿಚಯ ತಲ್ಲಣಗಳ ಪಲ್ಲವಿ ಪುಸ್ತಕ: ತಲ್ಲಣಗಳ ಪಲ್ಲವಿ (ಕಥಾ ಸಂಕಲನ) ಲೇಖಕರು: ಅನುಪಮಾ ರಾಘವೇಂದ್ರ ಉಡುಪುಮೂಲೆ ಪುಸ್ತಕ: ತಲ್ಲಣಗಳ ಪಲ್ಲವಿ (ಕಥಾ ಸಂಕಲನ) ಲೇಖಕರು: ಅನುಪಮಾ ರಾಘವೇಂದ್ರ ಉಡುಪುಮೂಲೆ ನೃತ್ಯ ಶಿಕ್ಷಕಿಯಾಗಿರುವ ಅನುಪಮಾ ರಾಘವೇಂದ್ರ ಉಡುಪುಮೂಲೆ ಅವರು ಕಾಸರಗೋಡಿನ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ನಾಟ್ಯ ವಿದುಷಿಯೂ, ಎಡನೀರಿನ ಭೂಮಿಕಾ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆಯೂ ಆಗಿರುವ ಇವರು ಬಹುಮುಖ ಪ್ರತಿಭೆಯವರು. ಇತ್ತೀಚೆಗೆ ಯಕ್ಷಗಾನ ಕ್ಷೇತ್ರಕ್ಕೂ ಪ್ರವೇಶಿಸಿದ ಅನುಪಮಾ ಅವರು ಈಗಾಗಲೇ ‘ಕಲಾತರಂಗ ಕಲಾಂತರಂಗ’ ಎಂಬ ಲೇಖನ ಸಂಕಲನವನ್ನೂ, ‘ಹತ್ತಗುಳು’ ಎಂಬ ಹವ್ಯಕ ಕಥಾ ಸಂಕಲನವನ್ನೂ ಪ್ರಕಟಿಸಿದ್ದಾರೆ. ಕಳೆದ ಎಪ್ರೀಲ್ 24 ರಂದು ಎಡನೀರು ಮಠದಲ್ಲಿ ಶ್ರೀಗುರುಗಳ ದಿವ್ಯ ಹಸ್ತದಿಂದ ಇವರ ಮೂರನೇ ಕೃತಿ ‘ತಲ್ಲಣಗಳ ಪಲ್ಲವಿ’ ಕಥಾ ಸಂಕಲನವು ಬಿಡುಗಡೆಗೊಂಡಿತು. ಭೂಮಿಕಾ ಪ್ರತಿಷ್ಠಾನದಿಂದ ಪ್ರಕಟಗೊಂಡ ಈ ಸಂಕಲನಕ್ಕೆ ಡಾ. ಹರಿಕೃಷ್ಣ ಭರಣ್ಯ ಅವರು ಮುನ್ನುಡಿ ಬರೆದಿದ್ದಾರೆ. ಶ್ರೀಮತಿ ಪ್ರಸನ್ನ ವಿ. ಚೆಕ್ಕೆಮನೆಯವರು ಬೆನ್ನುಡಿ ಬರೆದಿದ್ದಾರೆ. ಇದರಲ್ಲಿ ಒಟ್ಟು 12 ಸಣ್ಣ ಕಥೆಗಳಿದ್ದು ಬೇಗನೆ ಓದಿ ಮುಗಿಸಬಹುದಾಗಿದೆ. ಅವರು ಗೃಹಿಣಿಯಾಗಿದ್ದರೂ ಸಮಾಜದೊಳಗಿನ ಸೂಕ್ಷ್ಮ ವಿಚಾರಗಳನ್ನು ಗಮನಿಸುವುದನ್ನು ಕಾಣಬಹುದು. ವಿಚಾರಗಳನ್ನು ಗ್ರಹಿಸಿ ಭಿನ್ನವಾದ ವಸ್ತುಗಳನ್ನಿಟ್ಟುಕೊಂಡು ತನ್ನದೇ ಆದ ಶೈಲಿಯಲ್ಲಿ ಕಥೆಗಳನ್ನು ಕಟ್ಟಿ ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಕಥೆ ‘ಜೀವಜಲ’ದಲ್ಲಿ, ಅಣ್ಣ ಶಂಕರ ಹಳ್ಳಿಯಲ್ಲಿ ಶಿಕ್ಷಕ ವೃತ್ತಿಯೊಂದಿಗೆ ಕೃಷಿ ಮಾಡುತ್ತಾ ಬದುಕುತ್ತಾನೆ. ಹೊರ ದೇಶಗಳಲ್ಲಿ ದುಡಿಯುವವರಿಗೆ ಕೆಲಸ ಖಾಯಂ ಅಲ್ಲ. ಆರ್ಥಿಕ ಕುಸಿತ ಉಂಟಾಗುವಾಗ ಕಂಪೆನಿಯವರು ನೌಕರರನ್ನು ಮರಳಿ ಊರಿಗೆ ಕಳಿಸುವಾಗ ಅವರಿಗೆ ಹುಟ್ಟೂರೇ ಗತಿ ಎಂಬ ಸತ್ಯದ ದರ್ಶನವಾಗುತ್ತದೆ. ತಪ್ಪುತಿಳುವಳಿಕೆಯಿಂದ ಅಣ್ಣನ ಮೇಲೆ ಅಸಮಾಧಾನವಿದ್ದ ಶಶಾಂಕನಿಗೆ ಕೊನೆಗೆ ಹೊಸ ಬದುಕು ಕಟ್ಟಿಕೊಳ್ಳಲು ಅಣ್ಣನ ಸಹಾಯವನ್ನೇ ಸ್ವೀಕರಿಸಬೇಕಾಗುತ್ತದೆ. ಇಲ್ಲಿ ಶಂಕರ್ ಅಣ್ಣನಾಗಿ, ಅಪ್ಪನಾಗಿ ಕಾಣಿಸುತ್ತಾನೆ. ‘ಮರೆತೇನೆಂದರು ಮರೆಯಲಿ ಹ್ಯಾಂಗ’ ಕಥೆಯಲ್ಲಿ ಮನೆಯಲ್ಲಿರುವವರನ್ನು ನಾವು ಹೇಗೆ ಪ್ರೀತಿಸುತ್ತೇವೋ ಹಾಗೆಯೇ ಸಾಕಿದ ಪ್ರಾಣಿಗಳನ್ನೂ ಅಷ್ಟೇ ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುವುದನ್ನು ಕಾಣಬಹುದು. ‘ಆ ಮಾತು’ ಕಥೆಯಲ್ಲಿ ಒಬ್ಬ ಗುರುವಾಗಿದ್ದು ತನ್ನ ಮಗಳಿಗೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಬದಲು, ಸ್ವಂತ ಸುಖಕ್ಕಾಗಿ ಹಿರಿಯರನ್ನೂ ದೂರವಿರಿಸಲು ಕಿವಿಮಾತು ಹೇಳುವುದನ್ನು ಕಾಣುವಾಗ ಆತನ ಮೇಲಿಟ್ಟ ನಂಬಿಕೆ ಒಡೆದುಹೋಗುತ್ತದೆ. ‘ಅನಾಘ್ರಾಣಿತ ಕುಸುಮ’ ಕಥೆಯಲ್ಲಿ ಸಂಪತ್ತಿನ ಮುಂದೆ ಸಂಬಂವಗಳೂ ಮೌಲ್ಯ ಕಳೆದುಕೊಳ್ಳುತ್ತವೆ. ಗಂಡನಿಂದ ವಿಚ್ಛೇದನ ಪಡೆದ ಹೆಣ್ಣೊಬ್ಬಳು ಸಮಾಜದಲ್ಲಿ ಬದುಕಲು ಕೃತಕ ಗರ್ಭಧಾರಣೆಯ ಮೂಲಕ ಮಗುವನ್ನು ಪಡೆಯುವುದು, ಯಾರ ಹಂಗೂ ಇಲ್ಲದೆ ಆಕೆಯನ್ನು ಬೆಳೆಸಲು ಪಟ್ಟ ಕಷ್ಟ, ಮದುವೆ ಮಾಡಿಸಿ ಮೊಮ್ಮಕ್ಕಳನ್ನಾಡಿಸುತ್ತಾ ಆಕೆ ತನ್ನ ನೋವನ್ನು ಮರೆಯುವ ಚಿತ್ರಣವಿದೆ. ‘ಯಶೋದೆ…ಕೃಷ್ಣನ ಬೆಳೆಸಿದರೇನು… ಕಥೆಯಲ್ಲಿ ಲಾವಣ್ಯ ಮೂರು ಬಾರಿ ತನ್ನ ಮಗುವನ್ನು ಕಳೆದುಕೊಂಡಾಗ ಕೆಲಸದಾಕೆ ಕಮಲಿಯ ಮಗುವನ್ನು ತನ್ನ ಮಗುವೆಂದೇ ಸಾಕುತ್ತಾಳೆ. ಮುಂದೊಂದು ದಿನ ಮಗುವಿನ ಜನ್ಮ ರಹಸ್ಯ ತಿಳಿಯುವಾಗ ಕೆಲಸದಾಕೆ ಕಮಲಿಯ ಮೇಲೆ ಕನಿಕರಗೊಳ್ಳುತ್ತಾಳೆ. ಲಾವಣ್ಯನ ಸಣ್ಣ ಮನಸ್ಸಿನ ಮುಂದೆ ಕಮಲಿಯ ಹೃದಯ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತಾರೆ. ಧಾತ್ರಿಯ ಸ್ಥಿತಿಯನ್ನು ಯಶೋದಾ ನಂದನ ಕೃಷ್ಣನಿಗೆ ಹೋಲಿಸುತ್ತಾರೆ. ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯೊಂದು ಅವ್ಯಕ್ತ ಕಥೆಯಲ್ಲಿದೆ. ಹೆತ್ತವರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುವುದನ್ನು, ಮಕ್ಕಳ ಕನಸುಗಳಿಗೆ ಬಣ್ಣ ಬಳಿಯದೆ ಅವರ ನಿರ್ಧಾರಗಳಿಗೆ ಆಸೆ-,ಆಕಾಂಕ್ಷೆಗಳಿಗೆ ಮನ್ನಣೆ ನೀಡದೆ ತಮ್ಮ ನಿರ್ಧಾರಗಳನ್ನು ಅವರ ಮೇಲೆ ಹೇರಿ ತಮ್ಮದೇ ದಾರಿಯಲ್ಲಿ ಅವರನ್ನು ನಡೆಸುವುದನ್ನೂ, ಕೊನೆಗೆ ಮಕ್ಕಳ ಸಾವಿಗೂ ಕಾರಣವಾಗುವುದನ್ನು ಗಮನಿಸಬಹುದು. ‘ಜ್ವಾಲಾಮುಖಿ’ ಕಥೆಯಲ್ಲಿ ಮಹಾ ಭಾರತದಲ್ಲಿ ಬರುವ ಅಂಬೆಯ ಪಾತ್ರವನ್ನು ವಿಭಿನ್ನ ನೆಲೆಯಲ್ಲಿ ಚಿತ್ರಿಸಿದ್ದಾರೆ. ‘ಸಮರ್ಪಣೆ’ ಕಥೆಯಲ್ಲಿ ಲೇಖಕಿಗೆ ಯಕ್ಷಗಾನದ ಮೇಲಿರುವ ಅಪಾರ ಪ್ರೀತಿ ಗೋಚರಿಸುತ್ತದೆ. ಯಕ್ಷಗಾನದ ನಡುವೆ ನಡೆಯುವ ಹಾಸ್ಯಪ್ರಸಂಗಗಳನ್ನು ಮೆಲುಕು ಹಾಕುತ್ತಾ ಕೇಚ ಎಂಬ ಕೇಶವನ ಮೂಲಕ ತನ್ನ ಜೀವನವನ್ನೇ ಯಕ್ಷಗಾನಕ್ಕಾಗಿ ಮುಡಿಪಾಗಿರಿಸುವ ಕಲಾವಿದನನ್ನು ಪರಿಚಯಿಸುತ್ತಾರೆ. ‘ಮತ್ತೆ ಹಾಡಿತು ಕೋಗಿಲೆ’ ಕಥೆಯಲ್ಲಿ ವಿಧವೆಯಾದ ಜಯಶ್ರೀಯ ಬಾಳಿಗೆ ಪ್ರಸನ್ನನ ಆಗಮನವಾದಾಗ ಅವರ ಬದುಕಿನಲ್ಲಿ ಮತ್ತೊಮ್ಮೆ ವಸಂತಕಾಲ ಬರುತ್ತದೆ. ‘ಕ್ವಚದಪಿ ಕುಮಾತಾ ನ ಭವತಿ…’ ಕಥೆಯಲ್ಲಿ ಸಹನಾ- ಕಿಶೋರ್ ದಂಪತಿಗೆ ಅವಳಿ ಮಕ್ಕಳಾದಾಗ ಗಂಡು ಮಗು ಆರೋಗ್ಯದಿಂದಿದ್ದರೂ, ಹೆಣ್ಣು ಮಗುವಿಗೆ ಸೊಂಟದಿಂದ ಕೆಳಗೆ ಊನವಾಗಿತ್ತು. ಹೆತ್ತ ತಾಯಿಯೇ ಆ ಮಗುವನ್ನು ‘ಅಮ್ಮ ತೊಟ್ಟಿಲು’ ಕೇರ್ ಟೇಕಿಂಗ್ ಹೋಮ್ ಗೆ ಕಳುಹಿಸುವಾಗ ಮಗ ಅನ್ವಿತ್ ತಂಗಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ತಾಯಿ ತಂದೆಯರಿಗಿರಬೇಕಾದ ಕಾಳಜಿ ಪ್ರೀತಿ ಅನ್ವಿತ್ ಗೆ ತಂಗಿಯಲ್ಲಿದೆ. ಆಕೆ ಸರ್ವಾಂಗೀಣ ಬೆಳವಣಿಗೆಗೆ, ಆಕೆಯ ಉಜ್ವಲ ಭವಿಷ್ಯ ರೂಪಿಸುವಲ್ಲಿ ಅಣ್ಣನ ಪಾತ್ರ ದೊಡ್ಡದು. ಮುಂದೆ ಅನಿತ ಸಂಗೀತದಲ್ಲಿ ಸಾಧನೆ ಮಾಡಿದಾಗ ಮಗನ ಮುಂದೆಯೇ ಅಪ್ಪ ಅಮ್ಮ ಚಿಕ್ಕವರಾಗಿಬಿಡುತ್ತಾರೆ. ಶಾಂತ..ಮ್ಮಾ…, ನಾಲ್ಕು ದಿನದ ಈ ಬದುಕಿನಲ್ಲಿ, ಎಂಬ ಕಥೆಗಳೂ ಈ ಸಂಕಲನದಲ್ಲಿ ಗಮನ ಸೆಳೆಯುತ್ತವೆ. ಇಲ್ಲಿನ ಕಥೆಗಳಲ್ಲಿ ಸಂದರ್ಭೋಚಿತವಾಗಿ ಸಂಸ್ಕೃತದ ವಾಕ್ಯಗಳನ್ನೂ ಬಳಸಿರುತ್ತಾರೆ. ಅವರ ಕಥೆಗಳಲ್ಲಿ ಆರೋಗ್ಯಕರವಾದ ಕೌಟುಂಬಿಕ ಚಿತ್ರಣವಿದೆ. ಸಮಾಜಕ್ಕೊಂದು ಸಂದೇಶವಿದೆ. ಸಂಪತ್ತಿಗಿಂತಲೂ ಸಂಬಂಧಗಳಿಗೆ ಪ್ರಾಧಾನ್ಯ ನೀಡುತ್ತಾರೆ. ಪ್ರೀತಿ, ನಂಬಿಕೆಗಳಿಂದಲೇ ಸಂಬಂಧಗಳು ಗಟ್ಟಿಯಾಗಿ ನೆಲೆನಿಲ್ಲುತ್ತವೆ ಎಂಬುದನ್ನು ಕಥೆಗಳ ಮೂಲಕ ತಿಳಿಸುತ್ತಾರೆ. ಇಲ್ಲಿನ ಹೆಚ್ಚಿನ ಕಥೆಗಳೂ ಕೂಡ ಸುಖಾಂತ್ಯವನ್ನು ಕಾಣುತ್ತವೆ. ಹಾಗೂ ಇಲ್ಲಿನ ಕಥೆಗಳೆಲ್ಲವೂ ಒಂದಕ್ಕಿಂತ ಒಂದು ವ್ಯತ್ಯಸ್ಥವಾಗಿದ್ದು ಓದುಗರಲ್ಲಿ ಕುತೂಹಲ ಮೂಡಿಸುತ್ತಾ ಓದಿಸಿಕೊಂಡು ಹೋಗುತ್ತವೆ. *********** ಚೇತನಾ ಕುಂಬ್ಳೆ

ಪುಸ್ತಕ ಸಂಗಾತಿ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಆಡಿದ ಮಾತುಗಳೆಲ್ಲ ವಚನಗಳೇನಲ್ಲ.. ಸ್ವರ್ಗದ ಕುರುಹಿಲ್ಲವಿಲ್ಲಿ! ಆಡಿದ ಮಾತುಗಳೆಲ್ಲ ವಚನಗಳೇನಲ್ಲ ತಿರುಕನಿಗೊ ಆಯ್ಕೆಯ ಅವಕಾಶವಿರುವುದಿಲ್ಲ ರಕ್ತ ಒಸರುವ ಗತದ ಗಾಯ ಮುಲಾಮುಗಳಿಗೆಲ್ಲ ಮಾಯುವುದಿಲ್ಲ ಬಾಂಡಲಿಯ ಕುದಿಯುವ ಎಣ್ಣೆಯೊಳಗೆ ಬೇಯಿಸುವ ನರಕದ ಭಯ ಯಾರಿಗಿದೆ ಇಲ್ಲೀಗ? ಸ್ವರ್ಗದ ಕುರುಹು ತೋರಿದರೆ ಮಾತ್ರ ನಂಬುವವರುಂಟಿಲ್ಲಿ ನರಕವ ದೇಹವೇ ದೇಗುಲವೆಂಬುದು ನೆನಪಾದೊಡನೆ ದೂರವಾಗಿ ಮೈಥುನದಾಸೆ ಮುಷ್ಠಿಮೈಥುನದ ಹೊರದಾರಿ ಕಂಡುಕೊಂಡ ತರುಣರ ಗುಂಪುಗಳಿಂದ ದೂರನಿಂತ ತರುಣಿಯರ ತೊಡೆಗಳಿಂದೊಸರುವ ರಕ್ತದಲಿ ಅದೆಷ್ಟು ಜೀವಮೂಲಗಳು ವ್ಯರ್ಥವಾದವೆಂಬುದನ್ನು ಲೆಕ್ಕವಿಡುವ ವಿಜ್ಞಾನದ ಪುಸ್ತಕಗಳ ಮಸ್ತಕಕ್ಕಿಳಿಸದೆ ಸುಮ್ಮನೆ ನಡೆದು ಬಿಡು ಅಲೆಮಾರಿಯಂತೆ ಇಲ್ಲಿ ಸಿಗಲಾರದ್ದು ನಿನಗಿನ್ನೆಲ್ಲಯೂ ಸಿಗಲಾರದು ********* ಕು.ಸ.ಮದುಸೂದನ್

ಕವಿತೆ ಕಾರ್ನರ್ Read Post »

ಇತರೆ

ಪ್ರಸ್ತುತ

ಮರುವಲಸೆಯ ಮಹಾಪರ್ವಕ್ಕೆ ಪರಿಹಾರ ಯಾರೂ ಊಹಿಸಿರದ ಪ್ರಮಾಣದಲ್ಲಿ ಕಾರ್ಮಿಕರ ಮರುವಲಸೆ ಪ್ರಾರಂಭವಾಗಿದೆ. ತಮ್ಮ ಊರಿನಲ್ಲಿ ದುಡಿಮೆಯ ಅವಕಾಶವಿಲ್ಲದೆ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ವಲಸೆ ಬಂದವರು ಕೊರೊನಾ ಲಾಕ್ಡೌನ್ನಿಂದಾಗಿ ಕಂಗಾಲಾಗಿದ್ದಾರೆ. ಪೂರ್ವಾಪರ ಯೋಚಿಸದೆ, ಶತ್ರು ದೇಶದ ಮೇಲೆ ದಾಳಿ ಮಾಡುವ ರೀತಿಯಲ್ಲಿ ದಿಢೀರ್ ಎಂದು ಘೋಷಣೆಯಾದ ಲಾಕ್-ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ನೂರಾರು ಕಿಲೋ ಮೀಟರ್ ನಡೆದುಕೊಂಡೇ ಹೊರಟರು. ಕೊರೊನಾ ಭಯಕ್ಕಿಂತ ಹಸಿವಿನ ಭಯ ಅವರನ್ನು ಕಾಡುತ್ತಿತ್ತು. ಪೋಲೀಸರ ಲಾಠಿಗೆ ಹೆದರಿ, ನಗರ ತೊರೆಯಲಾರದವರು ಈಗ ಅವಕಾಶ ಸಿಕ್ಕೊಡನೆ ತಮ್ಮ ಊರುಗಳಿಗೆ ಧಾವಿಸುತ್ತಿದ್ದಾರೆ. ಈ ಮರುವಲಸೆ ಕೇವಲ ದೈಹಿಕ ಶ್ರಮಿಕರಿಗೆ ಮಾತ್ರ ಸೀಮಿತವಾಗಿಲ್ಲ ಅಥವಾ ದೇಶದ ನಗರಗಳಿಂದ ಮಾತ್ರ ನಡೆದಿಲ್ಲ. ಪ್ರತಿಯೊಂದು ರಾಜ್ಯದಿಂದಲೂ ಜನರು ಇತರೆಡೆಗೆ ವಲಸೆ ಹೋಗಿದ್ದಾರಾದರೂ ಉತ್ತರ ಭಾರತದಿಂದ ದೈಹಿಕ ಶ್ರಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಿರುವದು ನಿಚ್ಚಳವಾಗಿ ಕಾಣುತ್ತಿದೆ. ದೇಶದೊಳಗಡೆ ಮಾತ್ರವಲ್ಲ, ಇತರ ದೇಶಗಳಿಗೂ ದೈಹಿಕ ಶ್ರಮಿಕರು ವಲಸೆ ಹೋಗಿದ್ದು, ಅವರಲ್ಲಿ ಹೆಚ್ಚಿನವರು ವಾಪಸು ಬರುವುದು ನಿಶ್ಚಿತ. ಆರ್ಥಿಕ ಹಿಂಜರಿತ ಇಡೀ ಜಗತ್ತನ್ನು ಕಾಡುತ್ತಿದೆ. ಎಲ್ಲೆಡೆ ಉದ್ಯೋಗ ಕಡಿತ ಪ್ರಾರಂಭವಾಗಿದೆ. ಪ್ರತಿಯೊಂದು ದೇಶವೂ ತನ್ನ ನಾಗರಿಕರ ಉದ್ಯೋಗಾವಕಾಶ ರಕ್ಷಣೆಗೆ ಮುಂದಾಗುತ್ತಿದೆ. ಇದರ ಪರಿಣಾಮದಿಂದಾಗಿ ಉದ್ಯೋಗಕ್ಕಾಗಿ ಹೊರದೇಶಗಳಿಗೆ ಹೋಗಿರುವವರಲ್ಲಿ ಹಲವರು ಉದ್ಯೋಗ ಕಳೆದುಕೊಂಡು ತಮ್ಮ ದೇಶಗಳಿಗೆ ಹಿಂದಿರುಗಬೇಕಾಗಿದೆ. ಇವರಲ್ಲಿ ದೈಹಿಕ ಶ್ರಮಿಕರು ಹಾಗೂ ಬೌದ್ಧಿಕ ಶ್ರಮಿಕರು ( ತಂತ್ರಜ್ಞರು, ಇಂಜಿನಿಯರ್, ವೈದ್ಯರು ಇತ್ಯಾದಿ) ಸೇರಿದ್ದಾರೆ. ಮರುವಲಸೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಎಲ್ಲಾ ದೇಶಗಳಲ್ಲೂ ನಡೆಯಲಿದೆ. ಆದರೆ ಮರುವಲಸಿಗರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾಕೆಂದರೆ ಜಗತ್ತಿನ ಬಹುತೇಕ ಎಲ್ಲಾ ದೇಶಗಳಿಗೂ ಉದ್ಯೋಗ ಹುಡುಕಿಕೊಂಡು ಭಾರತೀಯರು ಹೋಗಿದ್ದಾರೆ. ತಾವು ವಾಸಿಸುವ ಪ್ರದೇಶದಲ್ಲಿ ದುಡಿಮೆಯ ಅವಕಾಶ ಇಲ್ಲದ ಕಾರಣಕ್ಕೆ ಬೇರೆಡೆ ವಲಸೆ ಹೋದವರು, ತಮ್ಮ ದೇಶ ಅಥವಾ ಊರಿಗೆ ವಾಪಸು ಬಂದೊಡನೆ ಅವರಿಗೆ ಉದ್ಯೋಗವಕಾಶ ಸಿಗಲು ಸಾಧ್ಯವೇ? ಕೃಷಿ ಭೂಮಿ ಉಳ್ಳವರು ಬೇಸಾಯ ಪ್ರಾರಂಭಿಸುವ ಕುರಿತು ಚಿಂತನೆ ನಡೆಸಬಹುದು. ಕೆಲವರು ಚಿಕ್ಕ ಪುಟ್ಟ ವ್ಯವಹಾರ , ಚಿಲ್ಲರೆ ಮಾರಾಟ ಮಳಿಗೆ ತೆಗೆಯಬಹುದು. ಆದರೆ ಹೆಚ್ಚಿನವರಿಗೆ ಯಾವುದೇ ದುಡಿಮೆಯ ಅವಕಾಶ ಸಿಗಲಾರದು. ಆಧಾರ ರಹಿತ, ಅವೈಚಾರಿಕ,ಅತಾರ್ಕಿಕ ಮಾಹಿತಿ ಸೃಷ್ಟಿಸಿ, ಮಾಧ್ಯಮಗಳ ಮೂಲಕ ಬಿತ್ತರಿಸುತ್ತಿರುವ ಕೊರೊನಾ ಜೀವ ಭಯದಿಂದ ಬೆದರಿರುವ ಜನರು ಪೋಲೀಸರ ಲಾಠಿ ಏಟಿಗೆ ಹೆದರಿ ಲಾಕ್-ಡೌನ್ ಪಾಲಿಸುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆಯ ನಂತರ ಆರ್ಥಿಕ ವ್ಯವಹಾರಗಳು ಸಾಮಾನ್ಯ ಸ್ಥಿತಿಗೆ ಬರಲು ವರ್ಷಗಳೇ ತಗಲಬಹುದು. ನಗರಗಳಲ್ಲಿರುವ ಉದ್ಯೋಗದಾತರು ಕರೆದರೂ, ಅಲ್ಲಿಂದ ವಾಪಸ್ಸು ಬಂದವರು ಪುನಃ ಹೋಗುವ ಧೈರ್ಯ ಮಾಡಲಾರರು. ಯಾಕೆಂದರೆ ಮತ್ತೆ ಪುನಃ ಏಕಾಏಕಿಯಾಗಿ ಲಾಕ್ಡೌನ್ ಹೇರಿಯಾರೆಂಬ ಭಯ ಅವರನ್ನು ಕಾಡುತ್ತಿದೆ. ತಮ್ಮನ್ನು ಯಾವ ರೀತಿಯಲ್ಲಿ ಉದ್ಯಮಿಗಳು ಬಳಸಿ ಬಿಸಾಡುತ್ತಾರೆಂಬುದನ್ನು ಲಾಕ್ಡೌನ್ ಅವಧಿಯ ನರಕಯಾತನೆಯಿಂದ ಕಾರ್ಮಿಕರು ಅರಿತಿದ್ದಾರೆ. ಇನ್ನೊಂದೆಡೆ ಆದಾಯದ ಕೊರತೆ ಅನುಭವಿಸುತ್ತಿರುವ ಮಧ್ಯಮ ವರ್ಗ, ಖರೀದಿ ಶಕ್ತಿಯಿಲ್ಲದ ಬಡವರಿಂದಾಗಿ ಉದ್ಯಮಗಳ ಉತ್ಪನ್ನಗಳು ಮಾರಾಟವಾಗದೇ ಅವು ಹಿನ್ನೆಡೆ ಅನುಭವಿಸುತ್ತಿವೆ. ಇದರಿಂದಾಗಿ ಮೊದಲಿನಂತೆ ಪೂರ್ತಿ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ಅಗತ್ಯವೂ ಅವರಿಗಿಲ್ಲ. ಒಂದೆಡೆ ನಗರ ಕೇಂದ್ರಿತ ಉದ್ದಿಮೆಗಳು, ಕಾರ್ಮಿಕರ ಅಭಾವ ಎದುರಿಸುವ, ಮರುವಲಸೆ ಹೋಗಿರುವ ಕಾರ್ಮಿಕರು ತಮ್ಮ ಊರುಗಳಲ್ಲಿ ನಿರುದ್ಯೋಗ ಪೀಡಿತರಾಗಿರುವ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಿಭಾಯಿಸುವ ಯಾವ ಯೋಚನೆ ಅಥವಾ ಯೋಜನೆ ಯಾವ ರಾಜಕೀಯ ಪಕ್ಷದ ಬಳಿಯೂ ಇಲ್ಲ. ಈ ಸಮಸ್ಯೆಯ ಸರಳ ಪರಿಹಾರವೆಂದರೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಜನರ ಸಹಭಾಗಿತ್ವದಿಂದ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳು ಅರ್ಥಾತ್ ಜನಾಧಿಕಾರ ವ್ಯವಸ್ಥೆಯ ಅನುಷ್ಠಾನ. ಉದ್ದಿಮೆಗಳು ಕೇಂದ್ರೀಕೃತವಾಗಿ ಸ್ಥಾಪಿತವಾಗಲು ಮೂಲ ಕಾರಣ ಬಂಡವಾಳವಾದಿ ಚಿಂತನೆಗಳು. ಲಾಭಗಳಿಕೆಯ ಹೆಚ್ಚಳದ ತವಕದಲ್ಲಿ ಸ್ಥಳೀಯ ಸಂಪನ್ಮೂಲಗಳ ಕುರಿತಾದ ನಿರ್ಲಕ್ಷ್ಯ , ಸಂಪನ್ಮೂಲಗಳ ದುರ್ಬಳಕೆ, ಕೇಂದ್ರಿಕೃತ ಉತ್ಪಾದನೆಯಿಂದ ವೆಚ್ಚ ತಗ್ಗಿಸುವ ದಿಸೆಯಲ್ಲಿ ನಡೆಯುತ್ತಿರುವ ಉದ್ಯಮಿಗಳ ನಡೆಯನ್ನೂ ಬೆಂಬಲಿಸುವ ಸರ್ಕಾರದ ಆರ್ಥಿಕ ನೀತಿಗಳೇ ನಗರಾಭಿಮುಖಿ ವಲಸೆಗೆ ಕಾರಣ. ಪೃಥ್ವಿಯ ಎಲ್ಲೆಡೆಗೂ ಸಂಪನ್ಮೂಲಗಳು ಇಲ್ಲವೆಂಬ ಬಂಡವಾಳವಾದಿ ಚಿಂತನೆಗೆ, ಸಂಪನ್ಮೂಲಗಳ ಕುರಿತಾದ ಸೀಮಿತ ಚಿಂತನೆಯೇ ಕಾರಣ. ಪೃಥ್ವಿಯ ಎಲ್ಲಾ ಭಾಗಗಳಲ್ಲಿಯೂ ಪ್ರಕೃತಿ ಒಂದಿಲ್ಲೊಂದು ವಿಧದ ಸಂಪನ್ಮೂಲಗಳನ್ನು ನೀಡಿದೆ. ಹಾಗೆ ಅದನ್ನು ಗುರ್ತಿಸಿ, ಬಳಸುವ ಬುದ್ಧಿಶಕ್ತಿಯನ್ನು ಮಾನವನಿಗೂ ನೀಡಿದೆ. ತಾಯಿಯಲ್ಲಿ ಎದೆ ಹಾಲು ಸೃಷ್ಟಿ ಮಾಡಿ, ಭೂಮಿಗೆ ಬರುವ ಮುನ್ನವೇ ಮಗುವಿನ ಕುರಿತಾಗಿ ಪ್ರಕೃತಿ ಕಾಳಜಿ ತೋರುತ್ತದೆ. ಅಂದರೆ ಯಾವುದೇ ಪ್ರದೇಶದಲ್ಲಿ ಜನವಸತಿ ಇದೆಯೆಂದಾದರೆ ಅವರ ಬದುಕಿಗೆ ಬೇಕಾಗುವಷ್ಟು ಸಂಪನ್ಮೂಲಗಳು ಆ ಪ್ರದೇಶದಲ್ಲಿ ಇದೆಯೆಂದೇ ಅರ್ಥ. ಸ್ಥಳೀಯ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ, ಜನರಸಹಭಾಗಿತ್ವದೊಂದಿಗೆ ,ಆ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರಿಗೆ ದುಡಿಮೆಯ ಅವಕಾಶ ಸೃಷ್ಟಿಸುವ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ( ಕೃಷಿ, ಉದ್ದಿಮೆ, ವ್ಯಾಪಾರ, ಸೇವೆ ಇತ್ಯಾದಿ) ನಡೆಸುವ ಯೋಜನೆಗಳು ರೂಪುಗೊಳ್ಳಬೇಕು. ಬ್ಲಾಕ್ ಮಟ್ಟದಲ್ಲಿ ಅಂದರೆ ತಳಮಟ್ಟದಲ್ಲಿ ಯೋಜನೆಗಳು ರೂಪಿತವಾಗಿ, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಕ್ರೋಢೀಕೃತಗೊಳ್ಳಬೇಕು. ಮೇಲಿನಿಂದ ಕೆಳಗೆ ಹರಿದು ಬರುವ ಯೋಜನೆಗಳು ನಿಷ್ಪ್ರಯೋಜಕ. ಇಂದು ಅನುಸರಿಸುತ್ತಿರುವ ಕೇಂದ್ರೀಕೃತ ಅರ್ಥವ್ಯವಸ್ಥೆಯ ಬದಲಿಗೆ ವಿಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯನ್ನು ಅನುಷ್ಟಾನಗೊಲಿಸಬೇಕು ಅಂದರೆ ಜನಾಧಿಕಾರದ ವ್ಯವಸ್ಥೆಯಿಂದ ಹೊಸ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿ ಸುಲಭ ಸಾಧ್ಯ. ಹೊರ ದೇಶಗಳ ಹೂಡಿಕೆದಾರರಿಂದ ಅಥವಾ ಬೇರೆ ದೇಶಗಳನ್ನ ಬಿಟ್ಟು ಬರುತ್ತಿರುವ ಕಂಪನಿಗಳಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಂಬ ಭ್ರಮೆಯಲ್ಲೇ ಇದ್ದರೆ, ಮರು ವಲಸೆಯ ಪರಿಣಾಮದಿಂದಾಗಿ ಉಂಟಾಗುವ ನಿರುದ್ಯೋಗ, ಕಳ್ಳತನ, ದರೋಡೆ, ಹಿಂಸಾಚಾರ, ಸಾಮಾಜಿಕ ಸಂಘರ್ಷಗಳನ್ನು ಎದುರಿಸುವುದು ಅನಿವಾರ್ಯ. ********* ಗಣೇಶ ಭಟ್ಟ ಶಿರಸಿ

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಅರಿಯದ ಹಾಡು ಡಾ.ವೈ.ಎಂ.ಯಾಕೊಳ್ಳಿ ಗಜದಾಲಯದಲಿ ಮೂಡಿದ ಸುಂದರ ರಾಗ. ತೇಲಿ ಬಂದಿತು ಅಂತಪುರದ ಹಂಸತೂಲಿಕದೊಳಗೆ ಬಗೆಯಿತು ರಾಣಿಯ ಎದೆಯನು ಯಾರಿಗೂ ತಿಳಿಯದ ಹಾಗೆ ತಡೆಯಲೇ ಇಲ್ಲ ಕಾವಲುಭಟರ ಸಾವಿರ ಕಾಲಾಳುಗಳ ಪಡೆ ಕೊಟ್ಟಳು ಮನವನು ಎಂದೂ ನೋಡದ ದನಿಗೆ ಮನವನು ಬಗೆದ ರಾಗವ ಬೆನ್ನತ್ತಿ ಹೊರಟೇ ಬಿಟ್ಟಿತು ನಿಲ್ಲದೆ ಎರಡು ಗಳಿಗೆ ಲೋಕದ ವಿಕಾರ ಧರಿಸಿತ್ತು ಮಾನವನ ಆಕಾರ, ಎಲ್ಲಿದೆ ವಿವೇಚನೆ ಒಲಿದ ಎದೆಗೆ ತಡಮಾಡದೇ ಕೊಟ್ಟಿತು ದಾನ ಹೃದಯವ ಮಾವುತನ ಎದೆಯೊಸಗೆಗೆ ಆಹಾ !ಲೋಕದ‌ ಕಣ್ಣಿಗೆ ಅಪಾತ್ರ ದಾನ! ಹೇಳುವರಾರು,ಕೇಳುವರಾರು ನಡೆದೆ ಬಿಟ್ಟಿತುಪ್ರೇಮದಯಾಣ ಕಣ್ಣು‌ಮುಚ್ಚಿ,,ಕಣ್ಣು ತಪ್ಪಿಸಿ ಸಿದ್ಧವಾಯಿತು ಇತಿಹಾಸದಿ ದೊರಕದ‌ ಪುಟವೊಂದು ಲೋಕವೆ ಕರುಬುವ ಗಂಡ, ರಾಣಿಯ ಪಟ್ಟ ಎಲ್ಲವೂ ಆಯಿತು ಕಾಲಿನ ಕಸ ಬದಗನ ಎದೆಯೆ ಆಯಿತು ಸ್ವರ್ಗ ಕಾಣಲೇ ಇಲ್ಲ ಧರ್ಮ ,ಸಮಾಜ ಒಲಿಯದ ಗಂಡನು ಎಸೆದ ಕುಸುಮ‌ ಮಾಡಿತು‌ ಮಾಯದ ಗಾಯ, ಆನೆಯ ಚಬಕದ ಹೊಡೆತ ಬಾಧಿಸಲಿಲ್ಲ ರಾಣಿಯ ಮೈಗೆ ಅಂದಿನದೊಂದೇ ಕಥೆಯೆ ಇದು! ನಡೆದಿದೆ ಎಂದಿಗೂ ಹೀಗೆ , ಆಡುವ ಬಾಯಿಗಳು ಆಡಿಕೊಳ್ಳುತಲೇ ಇವೆ ಕೇಳದೆ ನಡೆದಿವೆ ಅಮೃತಮತಿ ಬದಗರ‌ ಬೆಸುಗೆ *********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಬದುಕು ಹೇಳಿಕೊಟ್ಟದ್ದು… ಮೂಲ ಮಲಯಾಲಂ:ಉಸ್ಮಾನ್ ಪಾಡರಡುಕ್ಕ ಕನ್ನಡಕ್ಕೆ: ಚೇತನಾ ಕುಂಬ್ಳೆ ತತ್ವಶಾಸ್ತ್ರದಿಂದ ಒಂದು ಗೋಪುರವನ್ನೇ ನಿರ್ಮಿಸಬಹುದಾದರೂ ಅದಕ್ಕೆ ಜೀವ ತುಂಬಲು ಸಾಧ್ಯವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಸತ್ಕಾರ್ಯಗಳಿಂದ ಒಂದು ಹೂದೋಟವನ್ನೇ ಮಾಡಿ ಬೆಳೆಸಬಹುದಾದರೂ ದುಷ್ಕೃತ್ಯಗಳು ತಾನೇ ಇಲ್ಲದಾಗುತ್ತದೆಯೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಎಲ್ಲರಿಗೂ ಪ್ರೀತಿ ಪಾತ್ರನಾಗಿ ಹೃದಯದಲ್ಲಿ ಸ್ಥಾನ ಪಡೆದರೂ ಎಲ್ಲರಿಗಿಂತಲೂ ಹೆಚ್ಚು ಪ್ರೀತಿಪಾತ್ರನೋಗಲು ಸಾಧ್ಯವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ತ್ಯಾಗಿಯಾಗಿ ಕರ್ಮಯೋಗಿಯಾಗಿ ತನ್ನ ಸಂಘಟನೆಗಾಗಿ ರಕ್ತಸಾಕ್ಷಿಯಾಗಬಹುದಾದರೂ ಚೈತನ್ಯವನ್ನು ಜಡವಾಗಿಸಬಹುದೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಅತಿಯಾದ ಆನಂದದಿಂದ ಮೈಮರೆತು ಕುಣಿದರೂ ದುಃಖ ತುಂಬಿದ ಹಾದಿಯನ್ನು ಕ್ರಮಿಸುವುದು ಸುಲಭವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ನಿಂದನೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದಾದರೂ ಮಾನ್ಯನಾಗಿ ಬಾಳುವುದು ಅಷ್ಟೊಂದು ಸರಳವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ **********

ಅನುವಾದ ಸಂಗಾತಿ Read Post »

ಇತರೆ

ಟಂಕಾ

ಟಂಕಾ ತೇಜಾವತಿ.ಹೆಚ್.ಡಿ.   ಟಂಕಾ ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ. ನಿಯಮಗಳು:- ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ. 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು ಹೊಂದಿರಬೇಕು. 2,4,5  ನೇ ಸಾಲುಗಳಲ್ಲಿ ಏಳೇಳು ಅಕ್ಷರಗಳನ್ನು ಹೊಂದಿರಬೇಕು. ಇದು ಒಟ್ಟು 31 ಅಕ್ಷರ ಜೋಡಣೆಯ ಛಂದಸ್ಸಿನ ಗುಚ್ಛ ಇಲ್ಲಿ ಅಕ್ಷರಗಳ ಲೆಕ್ಕ ಗಣನೆಗೆ ಬರುತ್ತದೆ ಟಂಕಾ-01 ನಿನ್ನ ಹೃದಯ ನನ್ನರಮನೆಯಾಗಿ ಅಧಿಪತ್ಯವ ಕೈಸೆರೆ ಹಿಡಿದಿದೆ ಕೈಜಾರಿ ಬೀಳದಂತೆ!! ಟಂಕಾ-02 ಹಸಿರಾಗಿದೆ ತ್ರಾಣ ಹೃದಯದಲ್ಲಿ ನಿನ್ನೊಲುಮೆಯ ಧಾರೆಯಲ್ಲಿ ಮಿಂದಿದೆ ಹಸಿರಿನ ಉಸಿರು ! ಟಂಕಾ-03 ಟಂಕಾ ಕಲಿಕೆ ಹೊಸತನದ ಅಲೆ ಕವಿಯ ಭಾವ ಬರಹಗಳೆಲ್ಲವೂ ನಿನ್ನ ಅಲಂಕಾರವೇ!! ಟಂಕಾ -04 ವರ್ಷಸಿಂಚನ ಧರೆಯಾಗಸ ಮಿಂದು ಹೃದಯ ರಾಗ ಒಲವ ಕಾತುರತೆ ಹನಿಗಳಲ್ಲಿ ಲೀನ !!

ಟಂಕಾ Read Post »

ಇತರೆ

ಅನಿಸಿಕೆ

ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ ರಾಮಸ್ವಾಮಿ ಡಿ.ಎಸ್. ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ . . . . ‘ನಾನೇಕೆ ಬರೆಯುತ್ತೇನೆ?’ ಎನ್ನುವ ಪ್ರಶ್ನೆಗೆ ಉತ್ತರ ಕೊಡುವುದು ಎಣಿಸಿದಷ್ಟು ಸುಲಭವಲ್ಲವಲ್ಲವೆಂಬುದು ಎಲ್ಲ ಬರಹಗಾರರಿಗೂ ಅರಿವಾಗುವುದೇ ಅವರು ಇಂಥ ಪ್ರಶ್ನೆಗೆ ಉತ್ತರ ಕೊಡಲು ಕೂತಾಗ ಮಾತ್ರ! ಹೇಗೆ ಬರೆದರೆ ತನ್ನ ಬರಹಗಳಿಗೂ ಪತ್ರಿಕೆಗಳಲ್ಲಿ ಒಂದಿಷ್ಟು ಜಾಗ ಸಿಕ್ಕಬಹುದೆನ್ನುವ ಯೋಚನೆಯಲ್ಲೇ ಬರೆಯುತ್ತಿದ್ದ ದಿನಗಳು ಹೋಗಿ ಅನ್ನಿಸಿದ್ದೆಲ್ಲವನ್ನೂ ಫೇಸ್ಬುಕ್ಕಲ್ಲೋ ವಾಟ್ಸಪ್ಪಿನ ಗುಂಪಲ್ಲೋ ಬರೆದು ಬಿಸಾಕುತ್ತಿರುವ ಈ ಹೊತ್ತಿನ ಬರಹಗಾರ ಹೊಳೆದದ್ದನ್ನು ಬರೆಯುವದಕ್ಕಿಂತಲೂ ಅನ್ಯರನ್ನು ಮೆಚ್ಚಿಸಲು ಬರಹದ ಹಿಂದೆ ಬಿದ್ದ ಅಕ್ಷರ ಬೇಟೆಗಾರನ ಹಾಗೆ ನನಗೆ ಕಾಣುತ್ತಿದ್ದಾನೆ. ಇದರ ಜೊತೆಗೇ ನಾವು ಮೆಚ್ಚಿದ ಹಿರಿಯ ಬರಹಗಾರರನ್ನು ಕೇಳಹೋದರೆ ಅವರೂ ನಮ್ಮದೇ ಗೊಂದಲದಲ್ಲಿ ಬಿದ್ದವರ ಹಾಗೇ ಮಾತಾಡ ತೊಡಗುತ್ತಾರೆ. ಜೊತೆಗೇ ಇತರ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿರುವ ತಮ್ಮ ಸಮಕಾಲೀನರ ಬಗ್ಗೆ ಫೇಸ್ಬುಕ್ಕಲ್ಲಿ ಪಟ ಹಾಕಿ ಗಂಟೆಯಲ್ಲಿ ಸಾವಿರ ಲೈಕು ಪಡೆದವರ ಬಗ್ಗೆ ಕೊಂಚ ಹೊಟ್ಟೆಕಿಚ್ಚಿನ ಮಾತೇ ಸೇರಿಸುತ್ತಾರೆ. ಹೇಗೆ ಹೇಗೆ ಬರೆಯಬೇಕೆಂದು ಹೇಳುವವರ ಹಿಂದೆ ಅವರು ಮೆಚ್ಚಿಕೊಂಡ ಬರಹಗಳ ಹಿನ್ನೆಲೆ ಇದ್ದೇ ಇರುತ್ತದೆ. ಆದರೆ ಸದ್ಯೋವರ್ತಮಾನದ ತವಕ ತಲ್ಲಣಗಳನ್ನು ‘ಹೀಗೇ’ ಬರೆಸುವುದರಿಂದ ಹಿಡಿದಿಡುವುದು ಸಾಧ್ಯವೇ ಎನ್ನುವುದು ಇಲ್ಲಿ ಪ್ರಶ್ನೆ. ನಮ್ಮ ತಲೆಮಾರಿಗೆ ಬರಹದ ಮಾಧ್ಯಮವೇ ಮೊದಲ ಸಮಸ್ಯೆಯಾಗಿದೆ. ವಿವಿಧ ಕಾಲಘಟ್ಟಗಳಲ್ಲಿ ಉಜ್ವಲವಾಗಿ ಬೆಳಗುತ್ತಿದ್ದ ಸಾಹಿತ್ಯ ಪ್ರಕಾರಗಳು ಆಯಾ ಕಾಲದ ಲೇಖಕರ/ಕವಿಗಳ ಪಾಲಿಗೆ ವರದಾನವಾಗಿದ್ದವು. ಆದರೆ ಯಾವುದೇ ಚಳುವಳಿಗಳ ಹಂಗಿಲ್ಲದ ಆದರೆ ಎಲ್ಲೆಲ್ಲೂ ಅತೃಪ್ತಿಗಳೇ ತಾಂಡವವಾಡುತ್ತಿರುವ ಈ ದಿನಗಳಲ್ಲಿ ಎಲ್ಲ ಕ್ಷೇತ್ರಗಳಂತೆ ಕಾವ್ಯಕ್ಷೇತ್ರವನ್ನೂ ‘ವೇಗ’ ಮತ್ತು ‘ಸ್ಪರ್ಧೆ’ಗಳೇ ಆಳುತ್ತಿವೆ. ಮೊದಲ ಸಂಕಲನದಲ್ಲಿ ಹುಬ್ಬೇರಿಸುವಂತೆ ಬರೆದವರೆಲ್ಲ ಏಕೋ ಎರಡನೆಯ ಸಂಕಲನ ತರುವ ಹೊತ್ತಿಗೆ ಮತ್ತದೇ ಸವೆದ ಜಾಡುಗಳಲ್ಲಿ ತಮ್ಮ ರೂಪಕ, ಪ್ರತಿಮೆಗಳನ್ನು ನೆಡಲು ತಹತಹಿಸುತ್ತಿರುವುದರ ಕಾರಣಗಳೂ ಸ್ಪಷ್ಟವಾಗುತ್ತಿವೆ. ಸರಿಯಾಗಿ ಉಸಿರಾಡಲೂ ಪುರುಸೊತ್ತಿಲ್ಲದ ದಿನಗಳಲ್ಲಿ ‘ಟೈಮ್ ಮ್ಯಾನೇಜ್’ ಮಾಡುತ್ತಿರುವ ನಾವೆಲ್ಲ ಕಛೇರಿಯ ಕಡತಗಳಲ್ಲಿ, ಆನ್ ಲೈನ್ಗಂಟಿದ ಮೋಹದ ಬಲೆಗಳಲ್ಲಿ ನಮ್ಮನ್ನೇ ತೆತ್ತುಕೊಳ್ಳುತ್ತಿದ್ದೇವೆ. ಈ ನಡುವೆ ಓದು ಬರಹ ತಿಳಿದವರೆಲ್ಲ ಅವಸರದಲ್ಲಿ ಬರೆದೋ, ಅನ್ಯರದ್ದನ್ನು ಕದ್ದು ತಮ್ಮದೆಂದು ಹಾಕಿ ಕೊಳ್ಳುವ ಫೇಸ್ಬುಕ್ಕಿನಲ್ಲಂತೂ ಬರಹಗಳಿಗಿಂತಲೂ ಸ್ಟೆಟಸ್ಸಿನ ಪಟಗಳೇ ಭಾರೀ ಸದ್ದು ಮಾಡುತ್ತಿವೆ.  ಏಕಾಂತದಲ್ಲಿ ಮತ್ತು ಶಾಂತ ಮನಸ್ಥಿತಿಯಲ್ಲಿ ಸೃಜಿಸಬೇಕಾದ ಕಾವ್ಯವೂ ಕೂಡ ತಕ್ಷಣದ ಕ್ಷಿಪ್ರ ‘ದರ್ಶಿನಿ ಸಂಸ್ಕೃತಿ’ಯಂತಾಗುತ್ತಿದ್ದರೂ, ಬರೆಯಲೇಬೇಕೆಂದು ಹಟತೊಟ್ಟವರಿಗೆ, ಸಾಹಿತ್ಯ ರಚನೆ ಎಂಬುದು ಘನಸ್ತಿಕೆಯ ಕೆಲಸವೆಂದು ನಂಬಿದವರಿಗೆ  ಈ ಬಗೆಯ ಚಟುವಟಿಕೆಗಳಿಂದಾದ ಪರಿಣಾಮ ಘೋರವಾದುದು. ಕವಿತೆಗಳ ಬಗ್ಗೆ ಚರ್ಚಿಸುವವರಿಲ್ಲ ಎಂಬ ಮಾತು ಆಗೀಗ ತೂರಿ ಬರುತ್ತಲೇ ಇರುತ್ತದೆ. ಈಗ ಬರೆಯುತ್ತಿರುವವರ ಆತ್ಮ ವಿಶ್ವಾಸ ಕೂಡ ಪ್ರಶ್ನಾರ್ಹವೇ ಆಗಿದೆ. ಹಾಗೆಂದು ಸದ್ಯ ಬರೆಯುತ್ತಿರುವವರೆಲ್ಲ ತಮ್ಮ ಸಮಕಾಲೀನರನ್ನು ಓದಿಕೊಳ್ಳುತ್ತಿದ್ದಾರೆಯೇ ಎನ್ನುವುದೂ ಇಲ್ಲಿ ಬಹು ಮುಖ್ಯ ವಿಚಾರವಾಗಿದೆ. ಸಣ್ಣ ಪುಟ್ಟ ವಿಷಯಗಳಿಗೂ ಒಳಗಿರುವ ‘ಗಿಲ್ಟ್’ನ್ನು ತಟ್ಟೆಬ್ಬಿಸುವ ವ್ಯವಸ್ಥೆಯಲ್ಲಿ ಆತ್ಮ ವಿಶ್ವಾಸ ಶ್ವಾಸ ಕಳೆದುಕೊಳ್ಳುವುದೂ ಮಾಮೂಲಿ ಖಾಯಿಲೆಯೇ ಆಗುತ್ತಿದೆ. ಆದರೂ ನಮ್ಮ ಪುಣ್ಯಕ್ಕೆ ಸಾಕಷ್ಟು ಕಿರುಪತ್ರಿಕೆಗಳಲ್ಲಿ ಬ್ಲಾಗುಗಳಲ್ಲಿ ಈ ಕೆಲಸ ನಡೆಯುತ್ತಿರುವುದನ್ನು ನಾವು ಗಮನಿಸಿಲೇ ಬೇಕು. ಈವತ್ತು ಬರೆಯುತ್ತಿರುವವರೆಲ್ಲ ತಾವು ನಿಜಕ್ಕೂ ಮೆಚ್ಚಿಕೊಂಡಿದ್ದರ ಬಗ್ಗೆಯೇ ಬರೆಯುತ್ತಿದ್ದಾರೆ. ಇನ್ನು ಈ ಹೊತ್ತಿನ ಪದ್ಯಗಳನ್ನು ಹಾಡಲು ಸಾಧ್ಯವಿಲ್ಲವಲ್ಲ ಎಂಬ ಕ್ಯಾತೆಯ ಮಾತು ಆಗೀಗ ಪ್ರತಿಧ್ವನಿಸುತ್ತಲೇ ಇರುತ್ತದೆ. ಆದರೆ ಕವಿತೆ ಹಾಡಾದಾಗ ರಾಗ ಸಂಯೋಜನೆಯಷ್ಟೇ ಮುಖ್ಯವಾಗುತ್ತದೆ. ಅಡಿಗರ ‘ಮೋಹನ ಮುರಳಿ’ ಓದಿದಾಗ ದಕ್ಕುವ ತಾತ್ವಿಕ ದರ್ಶನ ಅದನ್ನೇ ಭಾವಗೀತೆಯಾಗಿ ಕೇಳಿದಾಗ ಮೈಸೂರು ಅನಂತ ಸ್ವಾಮಿಗಳು ವಿರಹಗೀತೆಯೊಂದಕ್ಕೆ ರಾಗ ಜೋಡಿಸಿದಂತೆಯೇ  ಕೇಳಿಸುತ್ತದೆ. ಆಕಾಶವಾಣಿ ಕೆಂದ್ರಗಳ ‘ತಿಂಗಳ ಹೊಸ ಹಾಡು’ ನವಸುಮಗಳ ಕೊಡುಗೆ ಎಂಬುದು ನಿತ್ಯ ರೇಡಿಯೋ ಕೇಳುವವರಿಗಷ್ಟೇ ಗೊತ್ತಿರುವ ಸಂಗತಿ. ಅಂತೆಯೇ ಸುಗಮ ಸಂಗೀತದ ಕ್ಯಾಸೆಟ್ಟುಗಳಿಗೂ ನಮ್ಮ ಯುವಕವಿಗಳ ಕೊಡುಗೆಯೂ ಇದೆ. ಭಾಷೆ ಬದಲಾಗಿದೆ. ಬದುಕಿನ ರೀತಿ ಬದಲಾಗಿದೆ. ಹಾಗೆಯೇ ಇವೆರಡರ ನಡುವೆ ಹುಟ್ಟಿ ಉಳಿಯಬೇಕಾದ ಸಾಹಿತ್ಯಕ-ಸಾಂಸ್ಕೃತಿಕ ಸಂಗತಿಗಳೂ ಬದಲಾಗುತ್ತಿವೆ. ಆಧುನಿಕ ಸಂದರ್ಭದಲ್ಲಿ ಸಾಹಿತ್ಯದ ಓಟ ಎತ್ತಕಡೆಗಿದೆ ಎಂದು ಗಮನಿಸಬೇಕಾದ ಮೀಮಾಂಸಕರು ತಮ್ಮ ಕರ್ತವ್ಯವನ್ನೇ ಮರೆತು ಓಟಕ್ಕೊಂದು ದಿಕ್ಕು ತೋರಿಸುವ ಸಲುವಾಗಿ ಮತ್ತದೇ ಪರಂಪರೆಯೆಂಬ ಕಾಗದದ ಹುಲಿಯನ್ನು ನಮ್ಮ ಮುಂದಕ್ಕೆ ಚಾಚುತ್ತಿದ್ದಾರೆ. ಅಂಥವರೇ ಕಾವ್ಯ ಈ ಕಾಲದ ಮಾಧ್ಯಮವಲ್ಲವೆಂದೂ ಘೋಷಿಸಿಯೂ ಬಿಡುತ್ತಾರೆ. ಯಾವುದನ್ನೂ ಪರಿಪೂರ್ಣ ಅರಿಯಲು ಬಿಡದ ಆದರೆ, ಎಲ್ಲವನ್ನೂ ತಿಳಿದಿರಲೇಬೇಕೆಂದು ಒತ್ತಾಯಿಸುವ ನಮ್ಮ ಶಿಕ್ಷಣ ವ್ಯವಸ್ಥೆಯೇ ‘ಕಿಚಡಿ’ಯಾಗಿರುವುದನ್ನು ಅವಸರದಲ್ಲಿ ಮರೆತೂ ಬಿಡುತ್ತಾರೆ. ಜೀ.ಪಿ.ರಾಜರತ್ನಂ, ಪಂಜೆ, ಹೊಯ್ಸಳರೇ ಗೊತ್ತಿಲ್ಲದ ಪೀಳಿಗೆ ಹೇಗೆ ತಾನೆ ಸಾಹಿತ್ಯ ಚರಿತ್ರೆಯನ್ನು ಅಭ್ಯಸಿಸಿ ಬರೆಯಲು ಸಾಧ್ಯ? ಜ್ಞಾನವೆಂಬುದು ಆಳವಾಗಿ ಉಳಿಯದೇ ಬರಿಯ ಮೇಲ್ನೋಟದ ತಿಳುವಳಿಕೆಯಾಗುತ್ತಿರುವ ಹೊತ್ತಲ್ಲಿ ಹೊಸಕವಿಗಳು ಕಟ್ಟಿಕೊಡುತ್ತಿರುವ ರೂಪಕ, ಪ್ರತಿಮೆಗಳು ಅವರ ಕವಿಮನದ ವ್ಯುತ್ಪತ್ತಿಯಿಂದಲೇ ಮೂಡಿದವೆಂಬುದನ್ನು ಏಕೋ ಯಾರೂ ಗಮನಿಸುತ್ತಿಲ್ಲ. ಹೆಸರಾಂತ ಪತ್ರಿಕೆಗಳು ಕಂಡರಿಯದ ಮೊತ್ತದ ನಗದು ಬಹುಮಾನಗಳನ್ನು ಕಥಾ ಸ್ಪರ್ಧೆಗಳಿಗೆ ಕೊಡುತ್ತಿವೆ, ನಿಜ. ದುರಂತವೆಂದರೆ ಬಹುಮಾನ ಗಿಟ್ಟಿಸುತ್ತಿರುವವರೆಲ್ಲ ಅದೇ ಅದೇ ಕತೆಗಾರರು. ಬಿಗಿ ಬಂಧ, ಪರಂಪರೆ ತುಂಬಿದ ಸಾಂದ್ರತೆ, ಸಾಂಸ್ಕೃತಿಕ ತಲ್ಲಣಗಳ ಮೆರವಣಿಗೆ ಎಂಬೆಲ್ಲ ತೀರ್ಪುಗಾರರ ಷರಾ ಪಡೆದ ಈ ಕತೆಗಾರರು ಸುತ್ತಿದಲ್ಲೇ ಸುತ್ತುತ್ತಿದ್ದಾರೆ. ಹೇಳಿದುದನ್ನೇ ಮತ್ತೆ ಮತ್ತೆ ತಂತ್ರ ಪೂರ್ವಕವಾಗಿ ಪಠಿಸುತ್ತಿದ್ದಾರೆ. ಏಕೆಂದರೆ ಪತ್ರಿಕೆಗಳು ತೀರ್ಪುಗಾರರೆಂದು ನೇಮಿಸಿದವರೆಲ್ಲ ಈಗಾಗಲೇ ಈ ರಂಗದಿಂದ ಕಡ್ಡಾಯ ನಿವೃತ್ತಿ ಪಡೆಯಬೇಕಾಗಿದ್ದೂ ಇನ್ನೂ ವಯಾಗ್ರ ಸೇವಿಸಿ ತಾವಿನ್ನೂ ಫಾರಂನಲ್ಲಿ ಇದ್ದೇವೆಂದು ಬೀಗುತ್ತಿರುವವರು. ಈ ಎಲ್ಲದರ ನಡುವೆ ಅಪವಾದವೆಂಬಂತೆ ಕ್ರೈಸ್ಟ್ ಕಾಲೇಜು, ಸಂಚಯ ಸಾಹಿತ್ಯ ಪತ್ರಿಕೆಯ ಸಾಹಿತ್ಯ ಸ್ಪರ್ಧೆಗಳು, ಸಾಹಿತ್ಯ ಅಕಾಡೆಮಿಯ ಕಮ್ಮಟಗಳು ಹೊಸಬರನ್ನು ಗುರುತಿಸಿವೆ, ಪೋಷಿಸಿವೆ ಮತ್ತು ಸಂರಕ್ಷಿಸಿವೆ. ಎಂ.ಎನ್.ಜಯಪ್ರಕಾಶ್, ವಿಭಾ ತಿರಕಪಡಿ, ಕಾ.ಸು.ರಾಮಚಂದ್ರ ಸತ್ತ ನಂತರವೂ ನಮಗೆ ಸಿಗುವ ಹಾಗೆ ಮಾಡಿವೆ. ಕಾವ್ಯ ಯಾವತ್ತೂ ಕೆಲವೇ ಜನರಿಗೆ ಬೇಕಾದದ್ದು. ಸಂಪೂರ್ಣ ಹಸಿದಿರುವವರಿಗೆ ಮತ್ತು ಪೂರ್ಣ ಹೊಟ್ಟೆ ತುಂಬಿದವರಿಗೆ-ಹಸಿವನ್ನು, ಅವಮಾನವನ್ನು ಕಾವ್ಯ ಮರೆಸಬಲ್ಲ ಶಕ್ತಿಯುಳ್ಳದ್ದು. ಹಾಗೆಯೇ ಮೆರೆಸಬಲ್ಲ ತಾಕತ್ತಿರುವಂಥದು. ಈ ಎರಡೂ ಅತಿಗಳ ನಡುವೆ ಇರುವ ಕಂದಕದೊಳಗೇ ಹೆಚ್ಚಿನ ಜನಸಮುದಾಯ ಇರುವುದರಿಂದ ಕಾವ್ಯ ಯಾವತ್ತೂ ಸಾಮಾನ್ಯರಿಗೆ ಸಹ್ಯವಾಗುವುದೇ ಇಲ್ಲ. ಹಾಗಾಗಿ ಕಾವ್ಯ ಈ ಕಾಲದ ಮಾಧ್ಯಮವಲ್ಲ ಎಂಬ ಹೇಳಿಕೆ ಅವಸರದ್ದಾಗುತ್ತದೆ, ರದ್ದಾಗುತ್ತದೆ. ನೆಲವೇ ಕಾಣದ ಹಾಗೆ ತಲೆ ಎತ್ತಿರುವ ಕಟ್ಟಡಗಳು, ಭೂಮಿಯಗೆದು ಅದಿರ ತರುವ ಕೆಲಸ ತಪ್ಪಿಸಿವೆ. ಹಗಲು ಇರುಳುಗಳ ವ್ಯತ್ಯಾಸವೇ ತಾಕದ ಹಾಗೆ ವಿಜೃಂಬಿಸುತ್ತಿರುವ ಬೆಳಕು ತನ್ನ ಮೂಲವನ್ನೇ ಮರೆಮಾಚಿ ವಂಚಿಸುತ್ತಿದೆ. ಲೋಹ ತಂದು ಇಷ್ಟ ದೇವತೆಯ ವಿಗ್ರಹಕ್ಕೆ ಒಗ್ಗಿಸುವ ಅಸಲು ಅಕ್ಕಸಾಲಿಯ ಗುಣ ನೆಲದ ಸ್ಪರ್ಶವೇ ಸಿಕ್ಕದಿರುವ ಹೊತ್ತಲ್ಲಿ, ಪರಿತಪಿಸುತ್ತಿದೆ. ಇದರ ಮೂಲ ಕಾರಣವಾದ ಬದುಕಿನ ವೇಗವನ್ನು ನಿಯಂತ್ರಿಸಲು ಸಾಧ್ಯವಿದೆಯೇ?  ಇದು ನಮ್ಮ ಮುಂದಿರುವ ಸವಾಲೆಂದರೆ ಹೌದು. ಇಲ್ಲವೆಂದರೆ ಇಲ್ಲ. ದೂರದಲ್ಲೆಲ್ಲೋ ಕೂತು ತಾಯ್ನೆಲದ ಬಗ್ಗೆ ಬರೆಯುವವರು, ಆತ್ಮ ವಂಚಿಸಿಕೊಂಡು ಮೌಲ್ಯಗಳ ಬಗ್ಗೆ ಕೊರೆಯುವವರು, ಸಂಸ್ಕೃತಿಯೆಂದರೆ ಕ್ಯಾಸೆಟ್ಟುಗಳ ಸಂಗೀತಕ್ಕೆ ಕೈ, ಕಾಲು ಕುಣಿಸುವವರು, ಅನ್ಯರ ಮೇಲಣ ದ್ವೇಷವನ್ನೇ ಸಂವೇದನೆಯೆಂದು ವಾದಿಸುವವರೂ ಇರುವ ಕಾಲದಲ್ಲಿ ಕಾವ್ಯದ ಶುದ್ಧತೆಯ ಕುರಿತು ಮಾತನಾಡುವುದೇ ವ್ಯಂಗ್ಯವಾಗುತ್ತದೆ. ಬರೆಯುವವರೆಂದರೆ ವಿಶ್ವ ವಿದ್ಯಾಲಯಗಳಲ್ಲಿ ಪಾಠಹೇಳುವವರೆನ್ನುವ ಹುಸಿಯನ್ನಳಿಸುವಂತೆ ಈ ಹೊತ್ತಿನ ಬರಹಗಾರರು ಜ್ಞಾನದ ಹಲವು ಸೆಲೆಗಳಿಂದ, ಜೀವನ ದರ್ಶನದ ಹಲವು ಸ್ತರಗಳಿಂದ ಬಂದವರಾಗಿದ್ದಾರೆನ್ನುವುದೇ ಅತಿ ಖುಷಿಯ ಸಂಗತಿಯಾಗಿದೆ. ಬಹು ವಿಸ್ತಾರವಾದ ಬಟಾಬಯಲಿನಲ್ಲಿ ಹಿಂದಿನವರಿಗೆ ಇದ್ದಂಥ ಸ್ಪಷ್ಟ ದಾರಿಗಳೂ, ಸಿದ್ಧಾಂತಗಳ ಗೋಜಲುಗಳೂ ಇಲ್ಲದ ಗಾಢ ಆತಂಕದ ಸನ್ನಿವೇಶದಲ್ಲಿ ಇವತ್ತಿನ ಕವಿ ಇದ್ದಾನೆ. ತೀರ ಯಾಂತ್ರಿಕವೂ, ಕೃತಕವೂ, ವೇಗವೂ ಆಗುತ್ತಿರುವ ನಿತ್ಯ ಬದುಕಿನ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಓದು, ಬರಹ, ಚರ್ಚೆ ಅತ್ಯಗತ್ಯವೆಂದು ನಂಬಿದ್ದಾನೆ.ಅದು ಪತ್ರಿಕೆಗಳ ಅಂಕಣದ ಮೇಲಣ ಸಂವಾದವೋ, ಪರಸ್ಪರರ ಈ-ಮೇಲೋ, ಅಥವ ಬ್ಲಾಗೋ, ಎಸ್.ಎಂ.ಎಸ್ಸೋ, ತನ್ನ ಅನ್ನಿಸಿಕೆಗಳನ್ನು ಹಂಚಿಕೊಳ್ಳುತ್ತಲೇ ಇದ್ದಾನೆ. ಅದು ಬದುಕಿಗೆ ಕೊಂಚ ನೆಮ್ಮದಿಯನ್ನು ಕೊಡುತ್ತಿರುವುದರಿಂದ, ಬರೆಯದಿದ್ದರೆ ತಲೆ ಸಿಡಿದು ಹೋಳಾಗಬಹುದೆಂಬ ಭಯದಿಂದ, ಒತ್ತಡಗಳಿಂದ ಕೊಂಚಕಾಲವಾದರೂ ದೂರವಾಗುವ ಆಸೆಯಿಂದ, ತನ್ನ ಸುತ್ತಣ ಒತ್ತಡಗಳಿಗೇ ಕಾವ್ಯದ ಪೋಷಾಕು ತೊಡಿಸುತ್ತಿದ್ದಾನೆ. ಆದುದರಿಂದಲೇ ‘ಇದಮಿಥ್ಥಂ’ ಪಂಡಿತರಿಂದ ಮೂತಿಗಿಕ್ಕಿಸಿಕೊಳ್ಳುತ್ತಿದ್ದಾನೆ. ಹಾಗಾಗಿಯೇ ಇಂದು ಬರೆಯುವುದು ಕಷ್ಟವಾಗಿದೆ. ಬರೆಯದೇ ಇರುವುದು ಅದಕ್ಕಿಂತ ಹೆಚ್ಚಿನ ಯಾತನೆಗೆ ದೂಡುತ್ತಿದೆ. ಹೊರಬಂದ ಮಾತುಗಳಿಗೆ ಒಂದೆರೆಡಾದರೂ ಕಿವಿಗಳಿರಬಹುದೆಂಬ ಆಶಾವಾದದಲ್ಲಿ ಬರೆಯುತ್ತಿದ್ದಾನೆ. ಅಷ್ಟೆ! *********

ಅನಿಸಿಕೆ Read Post »

You cannot copy content of this page

Scroll to Top