ಸುರಿಮಳೆ


ವೀಣಾ ರಮೇಶ್
ಧೋ ಎಂದಿದೆ ನಗುಮಳೆ
ಮನಸಿನ ಸುಂದರ ನಗರಿಯಲಿ
ನಿನ್ನ ನಸುನಗುವಿನ
ಸಿಹಿ ಸಿಂಚನದ ಕಳೆ
ಬಿಸಿಯೇರಿದ ವಿರಹದ
ಕಾವಿಗೆ ಒಂದಷ್ಟು ತಂಪು
ನೀಡಿದೆ,,ಎಡಬಿಡದೆ
ಸುರಿವ ನಿನ್ನ ನಗುವಿನ
ನರ್ತನದಲಿ ಮನದ ಇಳೆ
ನನ್ನ ಮೈ ಮನಗಳು
ಒದ್ದೆಯಾಗಿವೆ
ತುಸು ಮೆಲ್ಲ ಬೀಸಿದೆ
ನೆನಪಿನ ತಂಗಾಳಿ
ಕತ್ತಲೆಯ ಮೌನವಷ್ಟೇ
ಸೀಳಿದೆ ತಬ್ಬಿ ಈ ಸುಳಿಗಾಳಿ
ಮತ್ತದೇ ಸಿಹಿ ಹನಿಗಳು
ಆಳಕೆ ಸುರಿದಿದೆ,
ನಾ ತೇಲಿ ಹೋಗುವಷ್ಟು
ಹರ್ಷ ಧಾರೆಯಲಿ
ನೆನೆಯದಂತೆ ಬಚ್ಚಿಟ್ಟು
ಕೊಂಡಿರುವೆ ನೆನಪುಗಳು
ನನ್ನೊಳಗೆ ತೋಯದಂತೆ
********



