ಶಾಂತವೇರಿ ಗೋಪಾಲಗೌಡರು.! ಮಾನವ ಸರಳ-ಸಮಾನತೆಯ, ನಿಮ್ನವರ್ಗದ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಶಾಂತವೇರಿ ಗೋಪಾಲಗೌಡರು.! ಕೆ.ಶಿವು ಲಕ್ಕಣ್ಣವರ ನಾನು ಒಂದಿಷ್ಟು ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಮಾಜವಾದಿಗಳ ಬಗೆಗೆ ಬರೆಯುತ್ತಿದಂತೆ ನಮ್ಮ ಎಲ್ಲ ಮಾನವ ಸಮಾನ ಮನಸ್ಕ ಮನುಷ್ಯರ ಬಗೆಗೂ ಒಂದಿಷ್ಟು ಲೇಖನ ಬರೆಯಿರಿ ಎಂದು ಗೆಳೆಯರು ಕಿವಿಮಾತು ಹೇಳಿದರು. ಆಗ ಆ ನಿಟ್ಟಿನಲ್ಲಿ ಯೋಚಿಸಿದಾಗ ಮೊದಲು ಶಾಂತವೇರಿ ಗೋಪಾಲಗೌಡರ ಬಗೆಗೇ ಬರೆಯುವುದೇ ಉತ್ತಮ ಎಂದು ನಮ್ಮ ಶಾಂತವೇರಿ ಗೋಪಾಲಗೌಡರ ಮಾಹಿತಿ ಹೆಕ್ಕಿದೆ. ಇಂತಹ ಸಮಾಜವಾದಿಗಳ ಬಗೆಗೆ ಸಾಕಷ್ಟು ತಿಳಿದುಕೊಂಡ ಕಾಳೆಗೌಡ ನಾಗವಾರರು ಹುಬ್ಬಳ್ಳಿಯ ಕಾರ್ಯಕ್ರಮವೊಂದಕ್ಕೆ ಬಂದಾಗ ಕೊಟ್ಟ ಅವರೇ ಸಂಪಾದಿಸಿದ ಒಂದೆರಡು ಪುಸ್ತಕಗಳನ್ನು ಮತ್ತೊಮ್ಮೆ ತಿರುವಿಹಾಕಿಕೊಂಡೆನು. ಆ ಪುಸ್ತಕಗಳಲ್ಲಿಯ ಕೆಲ ಮಾಹಿತಿ ಹೆಕ್ಕಿ ಗೌಡರ ಬಗೆಗೆ ಬರೆಯಲು ಕುಳಿತೆನು. ಈ ಲೇಖನ ಅದೇ ಈ ಸರಳ-ಸಮಾನತೆಯ, ನಿಮ್ನವರ್ಗದ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು..! ಶಾಂತವೇರಿ ಪಾಲಗೌಡರದು ಎತ್ತರದ ನಿಲುವು; ದುಂಡು ಮುಖ; ಉದ್ದವಲ್ಲದ ಮುದ್ದಾದ ಮೂಗು; ಅಗಲವಾದ ಹಣೆ; ಕೂದಲು ಕಡಿಮೆಯಾದ ದೊಡ್ಡ ತಲೆ; ವಿಶಾಲವಾದ ಕೆಂಗಣ್ಣುಗಳು; ಕಂದು ಬಣ್ಣ; ಶುಭ್ರವಾದ ಬಿಳಿಯ ಖಾದಿ ಜುಬ್ಬ, ಅಚ್ಚುಕಟ್ಟಾಗಿ ಉಟ್ಟ ಕಚ್ಚೆಪಂಚೆ; ಗಂಭೀರ ಮುಖ ಮುದ್ರೆ; ಮಾತನಾಡಲು ಮೆಲ್ಲಗೆ ಎದ್ದು ನಿಂತರು; ಎಲ್ಲರ ಕಣ್ಣು,ಕಿವಿ ಅತ್ತ ತಿರುಗಿದವು! ಆನೆ ಹೆಜ್ಜೆ ಇಟ್ಟ ಹಾಗೆ ಖಚಿತವಾದ ಮಾತು; ಶ್ರೋತೃಗಳನ್ನು ಸೆರೆಹಿಡಿಯುವ ವಾದಸರಣಿ. ಅವರೇ ಶಾಂತವೇರಿ ಗೋಪಾಲಗೌಡರು. ವಿಧಾನಸಭಾಧಿವೇಶನದ ಸಂದರ್ಭಗಳಲ್ಲಿ ಕಂಡು ಬರುತ್ತಿದ್ದ ನಿತ್ಯಸ್ಮರಣೀಯ ದೃಶ್ಯವಿದು… ಅಪೂರ್ವ ವ್ಯಕ್ತಿತ್ವ ರಾಷ್ಟ್ರ, ರಾಜ್ಯ, ಸಮಾಜ, ರಾಜಕೀಯ, ಆಡಳಿತ, ಸಾಹಿತ್ಯ-ಸಂಸ್ಕೃತಿಕ, ಕಲೆ, ಉದ್ಯಮ, ಅರ್ಥವ್ಯವಸ್ಥೆ – ಅದು ಯಾವುದೇ ವಿಚಾರವಿರಲಿ ಅದರ ಬಗ್ಗೆ ಖಚಿತ, ಸದೃಢ, ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಶಾಂತವೇರಿ ಗೋಪಾಲಗೌಡರ ಪ್ರವೃತ್ತಿಯಾಗಿತ್ತು. ಸತ್ಯವನ್ನು ಅವರಿಗೆ ಹೇಳುವುದರಲ್ಲಿ ಅವರಿಗೆ ಸಂಕೋಚವಿರಲಿಲ್ಲ; ಮಾತಿಗೆ ಮಂತ್ರ ಶಕ್ತಿಯನ್ನು ಕೊಡುವ ವ್ಯಕ್ತಿತ್ವದ ಹಿನ್ನೆಲೆ – ಅದಕ್ಕಾಗಿ ಅವರ ಮಾತಿಗೆ ತುಂಬ ಬೆಲೆ. ಅಧಿಕಾರಸ್ಥ ಸರ್ಕಾರ ತಲ್ಲಣಗೊಳ್ಳುವಂತಹ ಗರ್ಜನೆ; ವೈರಿಯೂ ಒಪ್ಪುವಂತಹ ವಿಚಾರಧಾರೆ ಅವರದು… ಉಗ್ರವಾದಿಯಾಗಿದ್ದ ಅವರಿಗೆ ಕೆಲವೊಂದು ಸಂದರ್ಭಗಳಲ್ಲಿ ಶೀಘ್ರಕೋಪ ಉಕ್ಕಿ ಬರುತ್ತಿತ್ತಾದರೂ ಅದು ಆಧಾರರಹಿತವಾಗಿರುತ್ತಿರಲಿಲ್ಲ. ವಿಶಿಷ್ಟ ಸನ್ನಿವೇಶಗಳನ್ನು ಉಂಟು ಮಾಡುವುದರಲ್ಲಿ, ಬಹಳ ಮಟ್ಟಿಗೆ ಪ್ರಥಮ ಸ್ಥಾನ ಪಡೆದಿದ್ದ ಗೋಪಾಲಗೌಡರು, ಅಂತಹ ಸನ್ನಿವೇಶಗಳಿಗೆ ಅರ್ಥಪೂರ್ಣ ಹಿನ್ನೆಲೆ ಇದೆ ಎಂಬುದನ್ನು ತೋರಿಸಿ ಕೊಡುತ್ತಿದ್ದರು… ಕೇವಲ ಐವತ್ತು ವರ್ಷಗಳ ಅವಧಿಯಲ್ಲಿ ಪ್ರಚೋದಕ ಶಕ್ತಿಯಾಗಿ ರೂಪುಗೊಂಡ ಗೋಪಾಲಗೌಡರ ಬೆಳವಣಿಗೆಯ ಹಿನ್ನೆಲೆ ಮನಮುಟ್ಟುವಂತಹ ಘಟನೆಗಳಿಂದ ಕೂಡಿತ್ತು. ವಿದ್ಯಾಭ್ಯಾಸದ ಹಾದಿ ಅಡಚಣೆಗಳ ಆಗರವಾಗಿ ಪರಿಣಮಿಸಿತಾದರೂ ವಿಶಾಲವಾದ ಸಮಾಜ ಜೀವನ, ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಸನ್ನಿವೇಶ, ರಾಜಕೀಯ ರಂಗದ ರಂಗುರಂಗಿನ ಘಟನೆಗಳು ಅವರ ವ್ಯಕ್ತಿತ್ವ ನಿರೂಪಣೆಗೆ ಪೋಷಣೆ ನೀಡಿದವು; ರಾಜಕೀಯ ಮುತ್ಸದ್ದಿಯನ್ನಾಗಿ ಕಡೆದು ನಿಲ್ಲಿಸಿದವು. ಶಾಂತವೇರಿ ಗೋಪಾಲಗೌಡರ ಬಾಲ್ಯ, ಬೆಳವಣಿಗೆ ಶಿಕ್ಷಣ– ಮೊದಲಾದ ಎಲ್ಲ ಹಂತಗಳೂ ಗಮನಿಸುವಂತಹ ಪ್ರಸಂಗಗಳು… ಬಡತನದ ಕುಟುಂಬ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಆರಗದ ರೈತ ಕುಟುಂಬದಲ್ಲಿ ಶಾಂತವೇರಿ ಗೋಪಾಲಗೌಡರ ಜನನ. ೧೯೨೩ನೆಯ ಮಾರ್ಚ್ ೧೪ ರಂದು ಕೊಲ್ಲೂರಯ್ಯ ಮತ್ತು ಶೇಷಮ್ಮನವರ ಮೂರನೆಯ ಮಗುವಾಗಿ ಜನಿಸಿದವರು. ಅಣ್ಣ ಧರ್ಮಯ್ಯಗೌಡ; ಅಕ್ಕ ಸಿದ್ಧಮ್ಮ. ಇವರ ತಾತ ಲೋಕಣ್ಣಗೌಡರು ಅನುಕೂಲಸ್ಥರಾಗಿದ್ದರು. ಆದರೆ, ತಂದೆ ಕೊಲ್ಲೂರಯ್ಯನವರು ಬಡತನದ ಸುಳಿಯಲ್ಲಿ ಸಿಕ್ಕವರು… ಓದು- ಬರಹಗಳನ್ನು ಬಲ್ಲ ಕೊಲ್ಲೂರಯ್ಯನವರು ಅಂಚೆಪೇದೆಯಾಗಿ ಕೆಲಸಕ್ಕೆ ಸೇರಿದವರು; ಕೇವಲ ಹನ್ನೊಂದು ರೂಪಾಯಿಯ ಸಂಬಳ. ಅಂಚೆ ವಿತರಣೆಗಾಗಿ ಅನೇಕ ಹಳ್ಳಿಗಳನ್ನು ತಿರುಗಬೇಕಾಗಿತ್ತು. ಕವಲೇದುರ್ಗ, ಕೊಳವಳ್ಳಿ, ಹೊಸಗದ್ದೆ, ನಿಲುವಾಸೆ ಮೊದಲಾದ ಹಳ್ಳಿಗಳಿಗೆ ಅವರ ಅಂಚೆ ಯಾತ್ರೆಯು ಸಾಗಿತ್ತು… ಬಡತನದ ಬದುಕು ಗೋಪಾಲಗೌಡರ ಪಾಲಿಗಿತ್ತಾದರೂ ದೈವದತ್ತವಾದ ಮಲೆನಾಡ ಪ್ರಕೃತಿ ಸಂಪತ್ತಿನ ಮಡಿಲಲ್ಲಿ ಬೆಳೆದ ಅವರ ಮೈ- ಮನಸ್ಸುಗಳ ಮೇಲೆ ಮಧುರ ಪ್ರಭಾವ ಮೂಡಿ ಬಂದಿತು… ಗೋಪಾಲಗೌಡರ ಪ್ರಾಥಮಿಕ ವಿದ್ಯಾಭ್ಯಾಸ ಆರಗದಲ್ಲಿಯೇ ನಡೆಯಿತು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಹೋಗಲು ಸಾಧ್ಯವಾಗಲಿಲ್ಲ. ಅಂಚೆಪೇದೆ ಕೆಲಸದ ಜೊತೆಗೆ ಸಣ್ಣ ವ್ಯವಸಾಯವನ್ನೂ ಇಟ್ಟುಕೊಂಡಿದ್ದ ಕೊಲ್ಲೂರಯ್ಯನವರಿಗೆ ನೆರವು ನೀಡುವುದು; ದನ ಮೇಯಿಸುವುದು; ಕಾಡು ಮೇಡುಗಳಲ್ಲಿ ತಿರುಗಾಡಿ ಸೊಪ್ಪು ಸದೆ ಹೊತ್ತು ತರುವುದು- ಇವೇ ಮೊದಲಾದ ಕಾಯಕಷ್ಟದ ಕೆಲಸಗಳಲ್ಲಿ ತೊಡಗಿದರು… ಗೋಪಾಲಗೌಡರು ದನಕಾಯುವ ಕಾಯಕದಲ್ಲಿ ತೊಡಗಿದ್ದಾಗ ಒಂದು ದಿನ ಒಂದು ಘಟನೆ ನಡೆಯಿತೆಂದು ಪ್ರತೀತಿ. ಉತ್ತರ ಕರ್ನಾಟಕದ ಸ್ವಾಮಿಗಳೊಬ್ಬರು ದನ ಮೇಯಿಸುವ ಹುಡುಗನನ್ನು ಅಕಸ್ಮಾತ್ತಾಗಿ ನೋಡಿದರಂತೆ. ಆತನ ಕಡೆಗೆ ಆಕರ್ಷಣೆಯಾಯಿತಂತೆ! ಆತನನ್ನು ಮಾತನಾಡಿಸಿ, ಎಲ್ಲ ವಿಚಾರಗಳನ್ನೂ ತಿಳಿದುಕೊಂಡು, ಕಣ್ಣುಗಳ ಹೊಳಪನ್ನೂ ಹಸ್ತರೇಖೆಯನ್ನೂ ನೋಡಿ ‘ನೀನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು’ ಎಂದು ತಿಳಿಸಿದರಂತೆ… ಆಗ ಆತ ಅಸಹಾಯಕತೆಯನ್ನು ತೋಡಿಕೊಂಡನಂತೆ. ಎಲ್ಲವನ್ನೂ ಕೇಳಿ ತಿಳಿದುಕೊಂಡ ಸ್ವಾಮಿಗಳು ಕೊಲ್ಲೂರಯ್ಯನವರ ಬಳಿಗೆ ಹೋಗಿ ‘ನಿಮ್ಮ ಮಗನಿಗೆ ಒಳ್ಳೆಯ ಭವಿಷ್ಯವಿದೆ. ವಿದ್ಯಾಭ್ಯಾಸವನ್ನು ನಿಲ್ಲಿಸಬೇಡಿ. ಹೇಗಾದರೂ ಮಾಡಿ ಓದಿಸಲೇಬೇಕು…’ ಎಂದು ಸಲಹೆ ಮಾಡಿ ಹೊರಟು ಹೋದರಂತೆ… ಅಷ್ಟರಲ್ಲಿ, ಗೋಪಾಲಗೌಡರ ಅಣ್ಣ ಧರ್ಮಯ್ಯ ಗೌಡರು ಶಿಕಾರಿಪುರದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರಾದರು. ಹೀಗಾದದ್ದರಿಂದ ಗೋಪಾಲಗೌಡರ ವಿದ್ಯಾಭ್ಯಾಸ ಮುಂದುವರಿಯಲು ಸಹಾಯಕವಾಯಿತು. ಶಿಕಾರಿ ಪುರದಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆ ಮುಗಿಸಿದರು… ಸ್ವಾತಂತ್ರ್ಯದ ಹೋರಾಟ, ಸೆರೆಮನೆ ಮುಂದೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ತೀರ್ಥಹಳ್ಳಿಗೆ ತೆರಳಿದರು. ಹೈಸ್ಕೂಲಿನಲ್ಲಿ ತರುಣ ವಿದ್ಯಾರ್ಥಿಯಾಗಿದ್ದ ಗೋಪಾಲಗೌಡರು ತಮ್ಮ ಪ್ರಭಾವವನ್ನು ತೋರಿಸತೊಡಗಿದರು. ಎಳೆಯ ವಯಸ್ಸಿನಲ್ಲೇ ನಾಯಕ ಲಕ್ಷಣದ ಸೊಗಡು ಅವರಲ್ಲಿ ಹೊರಹೊಮ್ಮುತ್ತಿತ್ತು. ನಾಯಕ ಲಕ್ಷಣಗಳಿಗೆ ನೀರೆರೆಯಲೆಂಬಂತೆ, ೧೯೪೨ರ ಸ್ವಾತಂತ್ರ್ಯ ಹೋರಾಟದ ಮಹಾ ಚಳುವಳಿ ಪ್ರಾರಂಭವಾಯಿತು. ಗಾಂಧಿ, ನೆಹರೂ ಮೊದಲಾದ ಹಿರಿಯ ನಾಯಕರೆಲ್ಲರ ಬಂಧನವಾಯಿತು. ಗಾಂಧೀಜಿಯವರು ‘ಬ್ರಿಟಿಷರೇ, ಭಾರತವನ್ನು ಬಿಟ್ಟು ತೊಲಗಿ’ ಎಂಬ ಘೋಷಣೆಯನ್ನು ಮಾಡಿದ್ದರು… ಇಡೀ ದೇಶವೇ ಈ ಘೋಷಣೆಯನ್ನು ಮಾರ್ದನಿಗೊಳಿಸಿತ್ತು. ಸ್ವಾತಂತ್ರ್ಯ ಪ್ರಿಯರಾಗಿದ್ದ ಭಾರತೀಯರು ಹೋರಾಟಕ್ಕೆ ಸಿದ್ಧರಾದರು. ಶಾಲಾ- ಕಾಲೇಜುಗಳು ಇದಕ್ಕೆ ಹೊರತಾಗಲಿಲ್ಲ. ದೇಶದ ಎಲ್ಲ ಕಡೆಯಂತೆ ತೀರ್ಥಹಳ್ಳಿಯ ಹೈಸ್ಕೂಲು ವಿದ್ಯಾರ್ಥಿಗಳು ಮೈಮುರಿದೆದ್ದರು. ಗೋಪಾಲಗೌಡರಲ್ಲಿ ಒಳಗೊಳಗೆ ಕುದಿಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಧಿಗ್ಗನೆ ಎದ್ದು ನಿಂತಿತು. ವಿದ್ಯಾರ್ಥಿ ನಾಯಕರಲ್ಲಿ ಪ್ರಮುಖ ವ್ಯಕ್ತಿಯಾಗಿ ಮುಂಚೂಣಿಯಲ್ಲಿ ನಿಂತರು. ಅಂದಿನ ಉಲ್ಬಣಗೊಂಡ ಸನ್ನಿವೇಶವನ್ನು, ಅಲ್ಲಿ ಕನ್ನಡ ಪಂಡಿತರಾಗಿದ್ದ ಕಮಗೋಡು ನರಸಿಂಹಶಾಸ್ತ್ರಿಗಳವರು ಚೆನ್ನಾಗಿ ವಿವರಿಸುತ್ತಿರುತ್ತಾರೆ… ಶಾಸ್ತ್ರಿಗಳವರು ಶಿಸ್ತು, ನಿಷ್ಠೆ, ಸರಳ ಭಾವ, ಮಮತೆ, ಪ್ರೀತಿ ಬೋಧನಾ ಕ್ರಮದ ವೈಶಿಷ್ಟ್ಯ, ವಿಚಾರವಂತಿಕೆ ಮೊದಲಾದ ಶ್ರೇಷ್ಠ ಗುಣಗಳಿಗೆ ಹೆಸರಾಗಿದ್ದವರು. ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದರು. ವಿದ್ಯಾರ್ಥಿಗಳು ಅವರಲ್ಲಿ ತುಂಬು ಪ್ರೀತಿ ಗೌರವಗಳನ್ನು ಇಟ್ಟುಕೊಂಡಿದ್ದರು… ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ ವಿದ್ಯಾರ್ಥಿಗಳು, ಅದರಲ್ಲೂ ಗೋಪಾಲಗೌಡರಂತಹವರು ಉಪಾಧ್ಯಾಯರ ಬಳಿಗೆ ಹೋಗಿ, ತರಗತಿಗಳಿಂದ ಹೊರಗೆ ಬರುವಂತೆ ಉಗ್ರವಾಗಿಯೇ ಒತ್ತಾಯಪಡಿಸಿದರು; ಚಳುವಳಿಯಲ್ಲಿ ಸೇರಿಕೊಳ್ಳ ಬೇಕೆಂದು ಕೇಳಿಕೊಂಡರು. ರಾಜೀನಾಮೆ ಕೊಡಬೇಕೆಂದು ಆಗ್ರಹಪಡಿಸಿದರು. ಎಲ್ಲರ ಪ್ರೀತಿಗೂ ಪಾತ್ರರಾಗಿದ್ದ ನರಸಿಂಹಶಾಸ್ತ್ರಿಗಳವರನ್ನೂ ಇದು ಬಿಡಲಿಲ್ಲ. ಅವರು ರಾಜೀನಾಮೆ ಕೊಡುವುದಿಲ್ಲವೆಂದು ಗೊತ್ತಾದ ಮೇಲೆ ಗೋಪಾಲಗೌಡರು ಅವರ ಬಳಿಗೆ ಹೋಗಿ ‘ಸಾರ್……. ಸ್ವಲ್ಪ ಇರಿ… ನೋಡಿಕೋತೀವಿ…’ಎಂದು ಕೋಪೋದ್ರೇಕದಿಂದ ಹೇಳಿ ಸರಕ್ಕನೆ ಹೊರಟು ಹೋದರು… ಅಂದಿನ, ಆ ಉದ್ರೇಕಪೂರ್ಣ ಸನ್ನಿವೇಶ ಅಲ್ಲಿದ್ದ ಎಲ್ಲರ ಮನಸ್ಸಿನಲ್ಲಿಯೂ ಉಳಿದು ನಿಂತಿತು. ಚಳುವಳಿಯ ಬಿಸಿಯಿಂದಾಗಿ ಗೋಪಾಲಗೌಡರ ಬಂಧನವಾಯಿತು. ವಿಚಾರಣೆಗೊಳಗಾಗಿ, ಶಿವಮೊಗ್ಗ ಕಾರಾಗೃಹದಲ್ಲಿ ಆರು ತಿಂಗಳು ೧೯ ದಿನಗಳನ್ನು ಕಳೆದರು. ಆದರೆ, ಆಮೇಲೆ (ಟೆಲಿಗ್ರಾಫ್) ತಂತಿ ಕತ್ತರಿಸಿದ್ದಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದರು. ಸೆಷನ್ಸ್ ನ್ಯಾಯಾಲಯಕ್ಕೆ ಅಪೀಲು ಮಾಡಿಕೊಂಡಿದ್ದರಿಂದ ಶಿಕ್ಷೆ ರದ್ದಾಯಿತು. ಈ ಹೋರಾಟದ ಮಧ್ಯೆ ೧೯೪೩-೪೪ರಲ್ಲಿ ಎಸ್.ಎಸ್. ಎಲ್.ಸಿ. ಮುಗಿಸಿದರು… ಉಪಾಧ್ಯಾಯರು ಹೈಸ್ಕೂಲ್ ಶಿಕ್ಷಣವೇನೋ ಮುಗಿಯಿತು. ಆದರೆ, ಮುಂದೆ? ಮುಂದೆ ಓದಬೇಕೇ ಬಿಡಬೇಕೆ ಎಂಬ ಪ್ರಶ್ನೆ ಅವರನ್ನೂ, ಅವರ ಹಿರಿಯರನ್ನೂ ಕಾಡತೊಡಗಿತು. ಹಾಗೂ ಹೀಗೂ ಪ್ರಯತ್ನಮಾಡಿ ಶಿವಮೊಗ್ಗದಲ್ಲಿ ಇಂಟರ್‌ಮೀಡಿಯೆಟ್ ಕಾಲೇಜಿಗೆ ಸೇರಿದರು… ಆದರೆ, ಹಣದ ಅಡಚಣೆಯಿಂದಾಗಿ ಅವರು ಶಿಕ್ಷಣವನ್ನು ನಿಲ್ಲಿಸಬೇಕಾಯಿತು. ಆ ಬಳಿಕ ೧೯೪೫-೪೬ರಲ್ಲಿ ಆರಗದ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯ ವೃತ್ತಿಯನ್ನು ಅವಲಂಬಿಸಿಕೊಂಡರು. ಅಲ್ಲಿ-ಉಪಾಧ್ಯಾಯರಾಗಿ ಸೇರಿಕೊಂಡ ಪ್ರಸಂಗ ತುಂಬಾ ಸ್ವಾರಸ್ಯಕರವಾಗಿದೆ… ಆರಗದ ಮಾಧ್ಯಮಿಕ ಶಾಲೆಯಲ್ಲಿ ‘ಶ್ರೀನಾಗಾನಂದ’ ಎಂಬ ಹೆಸರಿನಲ್ಲಿ ಸಾಹಿತ್ಯ ರಚಿಸುತ್ತಿದ್ದ ಮಹನೀಯರೊಬ್ಬರು ಉಪಾಧ್ಯಾಯರಾಗಿದ್ದರು. ಉಪಾಧ್ಯಾಯ ವೃತ್ತಿಯ ಜೊತೆಗೆ ಅವರು ವೈದ್ಯಕೀಯವನ್ನೂ ನಡೆಸುತ್ತಿದ್ದರು. ಕಾಲೇಜು ಬಿಟ್ಟು ಬಂದ ಗೋಪಾಲಗೌಡರು ಅವರ ಬಳಿಗೆ ಹೋದರು. ಆ ವೇಳೆಗಾಗಲೇ ಗೋಪಾಲಗೌಡರಿಗೆ ತಲೆ ಸರಿಯಾಗಿಲ್ಲವೆಂಬ ಸುದ್ದಿ ಹಬ್ಬಿತ್ತು! ಆದರೆ ಶ್ರೀನಾಗಾನಂದರಿಗೆ ಹಾಗೇನೂ ಅನ್ನಿಸಲಿಲ್ಲ. ಅವರ ಸಂಗಡ ಗೌಡರು ಸರಿಯಾಗಿಯೇ ಮಾತನಾಡಿದರಂತೆ. ‘ನನಗೆ ಹುಚ್ಚೇನು ಸಾರ್, ನೀವೇ ಹೇಳಿ’ ಎಂದು ಗೌಡರು ಕೇಳಿದ ಪ್ರಶ್ನೆ ಬಹು ದಿನಗಳ ವರಗೆ ಅವರ ಕಿವಿಯಲ್ಲಿ ತುಂಬಿಕೊಂಡಿದವಂತೆ. ಶ್ರೀಯುತರು ಗೋಪಾಲಗೌಡರ ಪ್ರತಿಭೆ, ಭಾಷೆಯ ಮೇಲಿನ ಹಿಡಿತ, ಸಾಹಿತ್ಯಾಭಿರುಚಿ ಮೊದಲಾದವುಗಳನ್ನು ಗುರುತಿಸಿದರು. ಅವರ ನಿಕಟ ಸಂಪರ್ಕವನ್ನು ಬೆಳೆಸಿಕೊಂಡರು. ಅವರಿಂದ ಇಂಗ್ಲಿಷ್ ಲೇಖನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸುತ್ತಿದ್ದರು. ತನಿ ಲೇಖನಗಳನ್ನು ಕೂಡ ಬರೆಸುತ್ತಿದ್ದರು. ಕೆಲವು ಪತ್ರಿಕೆಗಳಲ್ಲಿ ಪ್ರಕಟಿಸಿಯೂ ಆಯಿತು. ಗಾಢ ಸ್ನೇಹಸಂಪರ್ಕವಾದ ಮೇಲೆ, ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯವೃತ್ತಿಯನ್ನು ಕೊಡಿಸಿದರು… ಗೋಪಾಲಗೌಡರ ಮಾನಸಿಕ ಸ್ಥಿತಿಯನ್ನು ಸಮೀಪವಾಗಿ ಗಮನಿಸುತ್ತಿದ್ದ ಶ್ರೀ ನಾಗಾನಂದರು ‘ಇವರಲ್ಲಿರುವ ಗಾಬರಿಗೆ ಏನೋ ಹಿನ್ನೆಲೆಯಿರಬೇಕು. ಎಂದು ಮನಸ್ಸಿನಲ್ಲಿಯೇ ಲೆಕ್ಕಹಾಕಿ ಒಂದು ದಿನ ಸರಸ ಸಲ್ಲಾಪದಲ್ಲಿದ್ದಾಗ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದರಂತೆ. ಆಗ ಗೌಡರು ತಮ್ಮ ಅಧೀರತೆಗೆ ಅಧಿಕ ಎದೆಬಡಿತವೇ ಕಾರಣವೆಂದು ಹೇಳಿ ಅದು ಹೇಗೆ ಪ್ರಾರಂಭವಾಯಿತೆಂಬುದನ್ನು ವಿವರಿಸಿದರಂತೆ. ಆ ಪ್ರಸಂಗ ಹೀಗಿದೆ– ಒಂದು ದಿನ ಬಸ್ಸಿನಲ್ಲಿ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೊರಟರು. ಬಸ್ಸಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿಕೊಂಡಿದ್ದರು… ಗೋಪಾಲಗೌಡರು ಕಂಡಕ್ಟರ್ ಸೀಟಿನಲ್ಲಿ ಕುಳಿತುಕೊಂಡಿದ್ದರು. ಬಸ್ಸು ಇಳಿಜಾರಿನಲ್ಲಿ ವೇಗವಾಗಿ ಚಲಿಸುತ್ತಿತ್ತು. ಹಾಗೆಯೇ ಪಕ್ಕದಲ್ಲಿ ನೋಡುತ್ತಿದ್ದ ಗೌಡರಿಗೆ, ಮುಂದಿನಚಕ್ರ ಸಡಿಲವಾಗಿ ಕ್ರಮೇಣ ಹೊರಗಡೆಗೆ ಸರಿಯುತ್ತಿದ್ದುದು ಕಂಡುಬಂದಿತು… ‘ಇನ್ನೇನು ಚಕ್ರ ಕಳಚಿಹೋಗುತ್ತದೆ; ಬಸ್ಸು ಪಲ್ಟಿ ಹೊಡೆಯುತ್ತದೆ; ಅನೇಕರು ಸತ್ತು ಹೋಗುತ್ತಾರೆ; ಅವರಲ್ಲಿ ನಾನೂ ಒಬ್ಬ..!’ ಎಂದು ಗಾಬರಿಗೊಂಡ ಗೌಡರ ಎದೆ ಬಲವಾಗಿ ಬಡಿದುಕೊಳ್ಳತೊಡಗಿತು. ಕುಳಿತಿದ್ದ ಸೀಟನ್ನು ಬಲವಾಗಿ ತಬ್ಬಿಕೊಂಡರು. ಕಣ್ಣುಗಳಲ್ಲಿ ಬಿಳೀಗುಡ್ಡೆ ಮಾತ್ರ ಕಾಣಿಸುತ್ತಿತ್ತೆಂದು ಪ್ರಯಾಣಿಕರೊಬ್ಬರು ಆಮೇಲೆ ಹೇಳಿದರಂತೆ! ಕಂಡಕ್ಟರ್‌ನ ಮುಂಜಾಗ್ರತೆಯಿಂದಾಗಿ ಬಸ್ಸು ನಿಂತಿತು. ಆಮೇಲೆ ಸರಿ ಮಾಡಿಸಿಕೊಂಡು ಮುಂದೆ ಪ್ರಯಾಣ ಮಾಡಿತು. ಬಸ್ಸಿನ ಆ ಘಟನೆ ನಡೆದಮೇಲೆ, ಯಾವಾಗಲಾದರೂ ಉದ್ರೇಕದ ಪರಿಸ್ಥಿತಿ ಉಂಟಾದಾಗ ಗೌಡರ ಎದೆಯ ಬಡಿತ ಜಾಸ್ತಿಯಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಏನೇನೋ ಮಾತನಾಡುವುದು ಕಂಡುಬರುತ್ತಿತ್ತು. ಇದಕ್ಕೆಲ್ಲ ವಿಪರೀತ ಎದೆಬಡಿತವೇ ಕಾರಣವಾಗಿತ್ತು! ಇದನ್ನು ಕಂಡವರು, ವಾಸ್ತವಾಂಶವನ್ನು ತಿಳಿಯದೇ ಬುದ್ಧಿ ಭ್ರಮಣೆ ಎಂದು ಮಾತನಾಡಿಕೊಂಡದ್ದುಂಟು. ಉದ್ರೇಕದ ಸನ್ನಿವೇಶಗಳು ಸಂಭವಿಸಿದಾಗ, ಹೇಗೆ ಹೇಗೋ ನಡೆದುಕೊಳ್ಳುವ ಸಾಧ್ಯತೆಯಿತ್ತೆಂಬುದು ಸಮೀಪವರ್ತಿಗಳಾಗಿದ್ದವರಿಗೆ ಮನವರಿಕೆಯಾದ ದ್ದುಂಟು… ಉಪಾಧ್ಯಾಯರಾಗಿದ್ದ ಗೋಪಾಲಗೌಡರಿಗೆ ಮುಂದೆ ಓದಬೇಕೆಂಬ ಆಸೆ ಬಲಗೊಳ್ಳತೊಡಗಿತು. ಆದರೆ ಅವರ ಮನೋಗತಿಯನ್ನು ಕಂಡ ಅವರ ಹಿರಿಯರಿಗೆ ಮುಂದೆ ಓದುವುದಕ್ಕೆ ಕಳುಹಿಸಲು ಅಷ್ಟಾಗಿ ಇಷ್ಟವಿರಲಿಲ್ಲ. ಹಣದ ಅಡಚಣೆಯು ಬಹಳವಾಗಿತ್ತು. ಆದರೆ, ಅವರ ನಿಕಟವರ್ತಿಗಳಾಗಿದ್ದ ‘ಶ್ರೀನಾಗಾನಂದರು’ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚಾರಮಾಡಿ ಅಭ್ಯಾಸಕ್ಕೆ ಅಗತ್ಯವಾದ ಹಣ ವನ್ನೊದಗಿಸಿಕೊಟ್ಟರು. ಹೀಗಾಗಿ ಶಿವಮೊಗ್ಗದಲ್ಲಿ ಮತ್ತೆ ಇಂಟರ್‌ಮೀಡಿಯೆಟ್ ತರಗತಿಗೆ ಸೇರಿ ಅಭ್ಯಾಸವನ್ನು ಮುಂದುವರಿಸಿದರು. ನೆರವು ನೀಡಿದ ಹತ್ತಾರು ಸದ್ಗೃಹಸ್ಥರನ್ನು ಸದಾ ನೆನೆಯುತ್ತಿದ್ದರು… ಆಗರದಲ್ಲಿ ಉಪಾಧ್ಯಾಯ ವೃತ್ತಿಯನ್ನು ಅವಲಂಬಿಸಿಕೊಂಡದ್ದು ಕೇವಲ ಒಂದು ವರ್ಷದಷ್ಟು ಕಾಲವಾದರೂ ಆ ಅವಧಿ, ಅವರ ಮುಂದಿನ ಸಾರ್ವಜನಿಕ ಜೀವನಕ್ಕೆ ಭದ್ರವಾದ