ಕಾವ್ಯಯಾನ
ಗಾಯಗಳ ಎಣಿಸುತ್ತಲೇ! ದೀಪಾಜಿ ಮಾತಿಗೊಮ್ಮೆ ತುಟಿಕಚ್ಚಿ ಹೀಗೆಂದರೆ ಎಲ್ಲಿ ಬಿಟ್ಟು ಹೋದಾನೊ ಹಾಗೆಂದರೆ ಎಲ್ಲಿ ಬಿಟ್ಟು ಹೋದಾನೊ ಎಂಬ ದುಗುಡದಲ್ಲೆ ಕಳೆದೆ ಅಷ್ಟು ದಿನಗಳನ್ನ.. ಹೆಜ್ಜೆ ಹೆಜ್ಜೆಗೊಮ್ಮೆ ಹೆಜ್ಜೇನು ಸುರಿದು ಬಾಯಿಗೆ ಸೆರಗ ಒತ್ತಿ ದುಃಖ ಉಮ್ಮಳಿಸಿದಾ -ಗೆಲ್ಲ ಹುಸಿ ನಗುವನ್ನೆ ಹೊರಚೆಲ್ಲಿ ನೋವೆಲ್ಲ ಪಕ್ಕಡಿಗೆ ಸರಿಸುತ್ತಲೆ ಕಳೆದೆ ಅಷ್ಟು ದಿನಗಳನ್ನ.. ಉಸಿರು ಬಿಟ್ಟುರು ಸಾಕು ಹೆಡೆಎತ್ತಿ ಬುಸುಗುಡುತ್ತೀ ಪ್ರೇಮ ಸರಸ ಸಮರಸ ಕಲ್ಪಸಿದವಳಿಗೆ ಸಿಕ್ಕಿದ್ದು ಬರಿಯ ಹಾಲಾಹಲ ನಿನ್ನ ಸಿಟ್ಟುರಿಯ ಹರಿವು ಅಸಮಾಧಾ -ನದ ಕೋಲಾಹಲ ಸಹಿಸುತ್ತಲೇ ಬಂದೆ ಅಷ್ಟು ದಿನಗಳನ್ನ ಅಕ್ಕರೆಯ ಸವಿಬೆಲ್ಲ ನೀ ಹರೆಸಲಿಲ್ಲ ಅನ್ನಕ್ಕೇನು ಕೊರತೆ ಮಾಡಲಿಲ್ಲ ಆದರೆ ನೀ ಹುಡುಕಿದ್ದು ಮೊಸರೊಳಗಿನ ಕಲ್ಲ, ಆ ಕಲ್ಲು ಇಲ್ಲವೆನ್ನುತ್ತಲೆ ಕಳೆದೆ ಅಷ್ಟು ದಿನಗಳನ್ನ ಕರುಣೆ ಕಕ್ಕಲಾತಿಗಳೇನು ಬೇಡ ಆದರೆ ಸಹಿಸುತ್ತ ಸವರುತ್ತ ಬಂದಿ -ರುವುದು ಬೆನ್ನ ಮೇಲಿನ ಬಾಸುಂಡೆಗಳನೆ ಗಾಯಗಳ ಎಣೆಸುತ್ತಲೆ ಕಳೆದೆ ಅಷ್ಟು ದಿನಗಳನ್ನ ಮಕ್ಕಳು ನಿನ್ನ ಹೋಲುವುದೆ ಇಲ್ಲವೆಂದು ಹೊಡೆದು ಬಡೆದು ಹಾಕುತ್ತೀ ,ನಶೆ ಎರುವ ಮುಂಚೆ ಮನೆಗೆ ಬಂದರೆ ತಿಳಿದೀತು ಹೋಲಿಕೆ,ಗರ್ತಿಯ ತಲೆಗೆ ಅಪಚಾರದ ಪಟ್ಟ ಕಟ್ಟುತ್ತಲೆ ಬಂದಿ ಅದ ಕೇಳುತ್ತಲೆ ಉಳಿದೆ ಅಷ್ಟು ದಿನಗಳನ್ನ ಗಂಡಬಿಟ್ಟವಳೆಂದು ಅವರಿವರೆಂದಾರೆಂದು ನಿನ್ನ ಸಹಿಸುವುದು ದಂಡವೇ ಸರಿ ಗಂಡನಿಲ್ಲದಿದ್ದರು ಅದೆಂಥ ವೈನಾಗಿ ಬದುಕಿದಳೆನ್ನುವಂತೆ ಕಳೆಯುವೆ ಇನ್ನೂಳಿದ ಅಷ್ಟು ದಿನಗಳನ್ನ… ================= ಪರಿಚಯ: ಅಂಚೆಇಲಾಖೆಯಲ್ಲಿ ವೃತ್ತಿ, ಓದು, ಬರವಣಿಗೆ ಹವ್ಯಾಸ







