ಉದಾಹರಣೆ
ಕಥೆ ಮಧುರಾ ಕರ್ಣಮ್ ಎಲ್ಲ ಸರಿ ಇದ್ದವರು ಸುಮ್ಮನಿರಲಾಗದೇ ಮೈಮೇಲೆ ಇರುವೆ ಬಿಟ್ಕೊಂಡು ತುರಸ್ಕೋತಾರಂತೆ. ಹಾಗಾಗಿದೆ ನನ್ನ ಕತೆ. ನೀವು ಹೇಳಿದ್ರೆ ನಂಬ್ತೀರೋ ಇಲ್ಲವೋ, ಜನಕ್ಕೆ ನೂರೆಂಟು ತಾಪತ್ರಯಗಳು. ವೃದ್ಧರಿಗಂತೂ ಸಾವಿರದೆಂಟಂದ್ರೂ ಪರವಾಗಿಲ್ಲ. ಅಪರೂಪಕ್ಕೆ ನನಗೆ ತೊಂದರೆಗಳೇ ಇಲ್ಲದಂತಿದ್ದೆ. ‘ತೊಂದರೆಗಳು ನಾವು ನೋಡುವ ದೃಷ್ಟಿಯಲ್ಲಿರುತ್ತವೆ ಬಿಡಿ. ಆದ್ರೂನೂ ನನಗೆ ಒಂದೇ ಒಂದು ಕೊರತೆ ಅನಿಸಿದ್ದು ನನ್ನ ಪತ್ನಿ ಜಾನ್ಹವಿ, ಜಾನೂ ಇಲ್ಲದ್ದು. ಕೈಹಿಡಿದವಳು ಕೈಬಿಟ್ಟು ನಡೆದು ಆಗಲೇ ಹತ್ತು ವರ್ಷಗಳಾಗಿದ್ದವು. ಅದನ್ನು ಬಿಟ್ಟರೆ ಮೂರು ಜನ ಮಕ್ಕಳು ತಮ್ಮ ಪತ್ನಿಯರು, ಮಕ್ಕಳೊಂದಿಗೆ ಆರಾಮವಾಗಿದ್ದಾರೆ. ಮುವರೂ ಸಾಫ್ಟವೇರೇ. ಹಿರಿಯವ ಮುಕುಲ್ ಕಂಪನಿಯೊಂದರಲ್ಲಿ ಎ.ವಿ.ಪಿ. ಆಗಿದ್ದಾನೆ. ಎರಡನೆಯವ ನಕುಲ್ ಸಾಫ್ಟವೇರ್ ಜೊತೇನೆ ಅಮೆರಿಕಾ ಸೇರಿದ್ದಾನೆ. ಕೊನೆಯವ ಬಕುಲ್ ಮುಂಬಯಿ ಸೇರಿಕೊಂಡಿದ್ದಾನೆ. ಸೊಸೆಯಂದಿರು ಮೂವರು ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟರೆ ಒಳ್ಳೆಯವರೇ. ನನ್ನ ತಂಟೆಗೇನೂ ಬರುವದಿಲ್ಲ. ನಾನು ಎಂದಿಗೂ ಅವರು ಧರಿಸುವ ಬಟ್ಟೆ, ಮಾಡುವ ಖರ್ಚು ಶಾಪಿಂಗ್ಗಳ ಉಸಾಬರಿ ಮಾಡುವದಿಲ್ಲ. ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೋ ಸೇರುವಂತೆ, ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ಕಾಲೇಜಿಗೆ ಮಣ್ಣು ಹೊತ್ತು ಪೋಸ್ಟಲ್ ಡಿಪಾರ್ಟಮೆಂಟಿಗೆ ಸೇರಿದ್ದೆ. ಮಕ್ಕಳ ಓದಿಗೆಂದು ಪುಣೆಗೆ ಬಂದವರು ಅಲ್ಲೇ ನೆಲೆ ನಿಂತೆವು. ಜೀವನವೂ ನಿಧಾನವಾಗಿ ಪುಣೇರಿ ಧಾಟಿಯಲ್ಲೇ ಬದಲಾಗತೊಡಗಿತ್ತು. ಅವಶ್ಯಕ ವಿಷಯಗಳ ಬಗ್ಗೆ ಮಾತ್ರ ಮಾತು, ಚರ್ಚೆ ಇತ್ಯಾದಿ. ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರ ಆರಿಸಿಕೊಂಡರು. ಹಾಗೇ ಪತ್ನಿಯರನ್ನೂ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೆಂದಳು ಜಾನ್ಹವಿ. ಯಾವಾಗಲೋ ಒಮ್ಮೆ ಹೋಗಿ ಬರುತ್ತಿದ್ದ ಧಾರವಾಡದ ನಂಟು ಪೂರ್ತಾ ಕಡಿಮೆಯಾಯಿತು. ಲಕ್ಷ್ಮಿ ರೋಡಿನ ಈ ಚಾಳದಲ್ಲಿ ನಲವತ್ತು ವರ್ಷಗಳ ಹಿಂದೆ ನಾವು ಹೊಸದಾಗಿ ಬಂದಾಗ ವಾಸಿಸಲಾರಂಭಿಸಿದ ಮನೆಯಲ್ಲೇ ಇಂದಿಗೂ ನಮ್ಮ ವಾಸ. ಹಳೆಯ ಮನೆಗಳು. ಅರವತ್ತು ರೂಪಾಯಿಗಳ ಬಾಡಿಗೆ. ಆಗಲೋ ಈಗಲೋ ಎನ್ನುವಂತಿದ್ದರೂ ಇನ್ನೂ ಏನೂ ಆಗಿಲ್ಲ. ನನ್ನ ಹಣೆಬರಹದಂತೆ ಗಟ್ಟಿಮುಟ್ಟಾಗಿವೆ. ಹಿಂದೆಯೇ ತುಳಸಿ ಬಾಗ. ಪುಣೆಯ ಖ್ಯಾತ ಮಾರುಕಟ್ಟೆ. ಅಲ್ಲಿ ಸದಾ ಸಂತೆಯೇ. ರಾತ್ರಿ ಹನ್ನೊಂದು ಗಂಟೆಯಲ್ಲೂ ಬೇಕಾದ್ದು ಸಿಗುತ್ತಿತ್ತು. ಆದರೆ ವ್ಯಾಪಾರಿಗಳ ಗಲಾಟೆ, ಚಿಕ್ಕ ಚಿಕ್ಕ ಖೋಲಿಗಳ ಮನೆ ಮಕ್ಕಳು ದೊಡ್ಡವರಾದಂತೆ ಅವರಿಗೆ ಹಿಡಿಸಲಿಲ್ಲ. ಮುಕುಲ್ ‘ಸಾರ್ಗೇಟ್’ನಲ್ಲಿ ದೊಡ್ಡ ಮನೆ ಮಾಡಿದ. ನಮ್ಮನ್ನೂ ಅಲ್ಲಿಗೇ ಕರೆದ. ಯಾಕೋ ಚಾಳ ಬಿಟ್ಟು ಹೋಗಲು ಮನಸ್ಸೊಪ್ಪಲಿಲ್ಲ. ಆದರೆ ಮೂರೂ ಮಕ್ಕಳ ಮದುವೆ, ಹೆಂಡಿರ ಸೀಮಂತ, ಮೊಮ್ಮಕ್ಕಳ ಜಾವಳ ಇತ್ಯಾದಿಗಳು ಈ ಗುಬ್ಬಿಗೂಡಿನಲ್ಲೇ ನಡೆದವು. ನಕುಲ್ ಹೆಂಡತಿಯೊಂದಿಗೆ ಅಮೆರಿಕಾ ಸೇರಿದವ ಆಗಾಗ್ಗೆ ಬಂದು ಹೋಗುತ್ತಾನೆ. ಬಕುಲ್ ಮುಂಬೈನಲ್ಲೇ ಓನರ್ಶಿಪ್ ಮೇಲೆ ಫ್ಲಾಟ್ ಕೊಂಡು ಆರಾಮವಾಗಿದ್ದಾನೆ. ಮೊಮ್ಮಕ್ಕಳನ್ನು ಕಂಡ ಕೆಲವೇ ದಿನಗಳಲ್ಲಿ ಜಾನು ಹೋಗಿಬಿಟ್ಟಳು. ಕುಳಿತವಳು ಎದ್ದು ಹೋದಂತೆ. ಒಂದು ದಿನವೂ ಮಲಗಲಿಲ್ಲ. ‘ಎದೆನೋವು’ ಎಂದವಳು ನನ್ನ ಕೊಂಡಿಯಿಂದ ಕಳಚಿಕೊಂಡುಬಿಟ್ಟಳು. ಆಗಿನಿಂದಲೇ ನಾನು ಒಬ್ಬಂಟಿ. ಹತ್ತು ವರ್ಷಗಳು ಯಾಂತ್ರಿಕವಾಗಿ ಸಾಗಿದ್ದವು. ಶುಗರ್, ಬಿ.ಪಿ. ಇದ್ದರೂ ತೊಂದರೆ ಕೊಡಲಿಲ್ಲ. ನಿತ್ಯ ಒಂದು ಡಯಾನಿಲ್, ಒಂದು ಲೋಸಾರ್ ನುಂಗಿದರಾಯಿತು. ಹೀಗಾಗಿ ಚಾಳಿನ ಮನೆಯನ್ನೇನೂ ಬಿಟ್ಟಿರಲಿಲ್ಲ. ನಿತ್ಯ ಸಾರ್ಗೇಟ್ನಲ್ಲಿರುವ ಮಗನ ಮನೆಗೆ ವಾಕಿಂಗ್ ಮಾಡುತ್ತಾ ಹೋಗಿ ತಿಂಡಿ, ಊಟ ಮುಗಿಸಿ ಒಂದಿಷ್ಟು ಓಡಾಡಿ, ನಿವೃತ್ತರೊಂದಿಗೆ ಕಾಲ ಕಳೆದು, ದೇವಸ್ಥಾನ, ಲೈಬ್ರರಿಗಳಿಗೆ ಭೇಟಿ ನೀಡಿ ರಾತ್ರಿ ಊಟ ಮುಗಿಸಿಯೇ ಮನೆ ಸೇರುವದಿತ್ತು. ಮನೆ ಕೀಲಿ ಹಾಕಿಕೊಂಡು ಮುಂಬೈಗೆ ಹೋದರೆ ಮೂರು ತಿಂಗಳು ಪುಣೆಯತ್ತ ಹೊರಳುತ್ತಿರಲಿಲ್ಲ. ನಕುಲ್ ಎರಡು ಬಾರಿ ಅಮೆರಿಕೆಗೆ ಕರೆಸಿಕೊಂಡಿದ್ದ. ನಯಾಗರ ನೋಡಿಕೊಂಡು ಬಂದಿದ್ದೆ. ಪಾಪ, ಜಾನು ಏನೂ ನೋಡಲಿಲ್ಲ. ಅವಳ ಜೀವನವೆಲ್ಲ ಕತ್ತೆಯಂತೆ ದುಡಿದು ಗಂಡ, ಮಕ್ಕಳಿಗೆ ಚಪಾತಿ, ಪಲ್ಯದ ಡಬ್ಬಿ ಕಟ್ಟಿದ್ದೇ ಬಂತು. ಮಕ್ಕಳ ಶ್ರೀಮಂತಿಕೆ, ಕಾರುಗಳು, ಚಿನ್ನ ಏನೂ ಕಾಣಲಿಲ್ಲ. ಅವಳಿಗೊಂದೆರೆಡು ಒಡವೆ ಕೂಡ ಕೊಡಿಸಲಾಗಲಿಲ್ಲ. ಹೇಗೆ ಕೊಡಿಸುತ್ತಿದ್ದೆ? ಮೂರು ಮಕ್ಕಳ ಶಿಕ್ಷಣ, ಪುಣೆಯಲ್ಲಿ ಜೀವನ ಎಂದರೆ ಹುಡುಗಾಟವೇ? ಹಾಸಿದರೆ ಹೊದೆಯಲಿಲ್ಲ, ಹೊದ್ದರೆ ಹಾಸಲಿಲ್ಲ ಎಂಬಂಥ ಪರಿಸ್ಥಿತಿ. ಹೊಂದಾಣಿಕೆ ಮಾಡಿಕೊಳ್ಳುತ್ತಲೇ ನಮಗಾಗಿ ಬದುಕು ಕಳೆದುಬಿಟ್ಟಳು. ಏನೇ ಆದರೂ ನಾವಿಬ್ಬರೂ ಸಂಕಷ್ಟಿಯಂದು ‘ಪರ್ವತಿ’ಯಲ್ಲಿದ್ದ ಗಣಪತಿಯ ದರ್ಶನ ತಪ್ಪಿಸುತ್ತಿರಲಿಲ್ಲ. ಇಬ್ಬರೂ ಸೇರಿ ದರ್ಶನ ಮಾಡಿಕೊಂಡು ಎದುರಿನ ಹೊಟೆಲ್ನಲ್ಲಿ ಸಂಕಷ್ಟಿಯ ಸ್ಪೆಶಲ್ ಸಾಬೂದಾಣೆಯ ವಡೆ, ಬಟಾಟೆಯ ಹಪ್ಪಳ ತಿಂದು ಬರುತ್ತಿದ್ದೆವು. ಈಗ ಯಾಂತ್ರಿಕವಾಗಿ ಒಬ್ಬನೇ ಹೋಗುತ್ತೆನೆ. ಆ ಬಾರಿ ಅಂಗಾರಕ ಸಂಕಷ್ಟಿ ಬೇರೆ. ಪರ್ವತಿಯಲ್ಲಿ ಗಣಪತಿಯ ದರ್ಶನಕ್ಕೆ ಉದ್ದಾನುದ್ದ ಸಾಲು. ಸರತಿಯ ಸಾಲಿನಲ್ಲಿ ಯಾವುದೋ ಪರಿಚಿತ ಮುಖ ಕಂಡಂತಾಯಿತು. ನನ್ನಿಂದ ಅನತಿ ದೂರದಲ್ಲೇ. ತಲೆ ಕೆರೆದುಕೊಂಡು ಯೋಚಿಸಿದಾಗ ಚಿತ್ತಭಿತ್ತಿಯಲ್ಲಿ ಮೀನಾ ಕಂಡುಬಂದಳು. ಹೌದು, ಅವಳೇ ನನ್ನ ತಂಗಿ ಸುರೇಖಾಳ ಗೆಳತಿ ಮೀನಾ. ಸುರೇಖಾ ಮತ್ತು ಮೀನಾ ಆಟ್ರ್ಸ ತೆಗೆದುಕೊಂಡು ಧಾರವಾಡದ ಜೆ.ಎಸ್.ಎಸ್. ಕಾಲೇಜಿಗೆ ಹೋಗುತ್ತಿದ್ದರು. ಆಗ ನನ್ನದೂ ಹದಿ..ಹದಿ..ಹರಯ. ಅವಳ ಜಿಂಕೆಗಂಗಳ ಮೋಡಿಗೆ ಸಿಲುಕಿದ್ದೆ. ತೊಡುತ್ತಿದ್ದ ಲಂಗ, ದಾವಣಿ, ಸೀರೆ ಅವಳ ಮೈಮಾಟಕ್ಕೊಪ್ಪುತ್ತಿದ್ದವು. ಮಾತನಾಡಿಸಬೇಕೆಂಬ ಬಯಕೆ ತೀವ್ರವಾಗಿತ್ತು. ಆದರೆ ಅಪ್ಪನ ಹೆದರಿಕೆ. ಅಲ್ಲದೇ ಸುರೇಖಾ ಸದಾ ಅವಳ ಜೊತೆಯಲ್ಲೇ ಇರುತ್ತಿದ್ದಳು. ಕೊನೆಗೆ ಧಾರವಾಡ ರೆಸ್ಟೋರೆಂಟ್ ಪಕ್ಕ ಅವಳು ಟೈಪಿಂಗ್ ಕ್ಲಾಸಿಗೆ ಹೋಗುವದನ್ನು ತಿಳಿದುಕೊಂಡು ಅಲ್ಲೇ ಹೋಗಿ ಮಾತನಾಡಿಸಿದೆ. ಬಹುಶ: ಅವಳಿಗೂ ನನ್ನ ಮೇಲೆ ಆಕರ್ಷಣೆ ಇತ್ತು. ಹೀಗಾಗಿ ಹೆದರದೇ ಮುಗುಳ್ನಗುತ್ತ ಮಾತನಾಡಿದಳು. ಇಬ್ಬರೂ ಮೊದಲೇ ನಿಶ್ಚಯಿಸಿಕೊಂಡು ಒಮ್ಮೆ ನುಗ್ಗೀಕೇರಿಗೆ ಹೋಗಿದ್ದೆವು. ಹನುಮಪ್ಪನ ದರ್ಶನ ಪಡೆದು ಮುಂದೆ ಮರದ ನೆರಳಿನಲ್ಲಿ ಕುಳಿತು ಪ್ರೇಮ ನಿವೇದನೆ ಮಾಡುತ್ತಾ ಅವಳ ಮುಂಗೈಯನ್ನು ತುಟಿಗೊತ್ತಿಕೊಂಡಿದ್ದೆ. ರೋಮಾಂಚನವಾಗಿತ್ತು. ತಕ್ಷಣ ಅವಳು ನಾಚಿಕೊಂಡು ಕೈ ಕೊಸರಿಕೊಂಡು ಓಡಿಹೋಗಿದ್ದಳು. ಮಾತಿಗೆ ನಿಲುಕದ ಸುಖ. ಜನ್ಮಪೂರ್ತಾ ಮರೆಯಲಾಗಿರಲಿಲ್ಲ. ಮುಂದೆ ನಾನು ಅಂಚೆ ಇಲಾಖೆ ಸೇರುತ್ತಿದ್ದಂತೆ ಸುರೇಖಾಳ ಮದುವೆಯಾಗಿತ್ತು. ಅವಳ ಮದುವೆಯಲ್ಲಿ ನಮ್ಮಿಬ್ಬರ ಓಡಾಟ ಕಂಡು ಕೆಲವರ ಕಣ್ಣು ಕೆಂಪಾಗಿದ್ದವು. ಮದುವೆ ಗಲಾಟೆ ಮುಗಿಯುತ್ತಿದ್ದಂತೆ ಅಪ್ಪ ಗುಡುಗಿದ್ದರು. ಅವರದು ಬ್ಯಾರೇ ಜಾತಿ. ನಿನಗ ಹುಡುಗಿನ್ನ ನಾವು ನೋಡೇವಿ ಎಂದಿದ್ದರು. ಅತ್ತ ಮೀನಳ ಮನೆಯಲ್ಲೂ ವಾಸನೆ ಬಡಿದಿತ್ತು. ವಾರದೊಳಗೇ ಅವಳ ಮದುವೆ ಗೊತ್ತಾಗಿತ್ತು. ನನಗೊಂದು ಭೇಟಿಗೂ ಅವಕಾಶವಾಗದಂತೆ ಮದುವೆ ಮುಗಿದು ಹೋಯಿತು. ರಾತ್ರಿ ಹೊದಿಕೆಯ ಒಳಗೇ ದು:ಖಿಸಿದ್ದೆ. ಮುಂದೆ ಜಾನು ನನ್ನ ಕೈಹಿಡಿದಳು. ಎಲ್ಲ ತೆರೆಯ ಮೇಲೆ ಸರಿಯುವ ರೀಲಿನಂತೆ. ಹಾಗೇ ಇದ್ದಾಳೆ. ಹೆಚ್ಚೇನೂ ಬದಲಾಗಿಲ್ಲ. ಮುಖದ ಮೇಲಿನೊಂದೆರಡು ಸುಕ್ಕುಗಳು, ಕಣ್ಣಸುತ್ತ ಕಪ್ಪು ವರ್ತುಲ , ನೋವಿನ ಗೆರೆಗಳನ್ನು ಬಿಟ್ಟು.. .. ಗಣೇಶನ ದರ್ಶನ ಮಾಡಿಕೊಂಡು ಹುಡುಕುತ್ತ ಬಂದಾಗ ದೇವಾಲಯದ ಆವರಣದಲ್ಲೇ ಅವಳು ಪ್ರಸಾದದೊಂದಿಗೆ ಕುಳಿತಿರುವದು ಕಂಡಿತು. ತಟಕ್ಕನೇ ಮುಂದೆ ನಿಂತು ಹೆಂಗಿದ್ದೀ ಮೀನಾ? ಎಂದೆ. ಅವಳು ಕಣ್ಕಣ್ಣು ಬಿಟ್ಟು ನೋಡಿದಳು. ನನ್ನ ಅರ್ಧ ಸಪಾಟಾದ ತಲೆ ಗುರುತು ಸಿಗಲು ತೊಡಕಾಗಿತ್ತು. ನಂತರ ಪ್ರ..ಕಾ..ಶ ? ಎಂದಳು ಪ್ರಶ್ನಾರ್ಥಕವಾಗಿ. ಹೌದು ಎನ್ನುತ್ತ ಕತ್ತಾಡಿಸಿದೆ. ನೀ ಹೆಂಗೋ ಇಲ್ಲೇ? ಎಂದಳು. ಅಲ್ಲೆ ಹೋಗೋಣ ಎಂದು ಕೊಂಚ ದೂರದ ಪಾರ್ಕ್ ಗೆ ಹೋಗಿ ಕುಳಿತೆವು. ನಾನು ನನ್ನ ಪ್ರವರವನ್ನೆಲ್ಲಾ ಹೇಳಿದೆ. ಕೇಳಿಸಿಕೊಂಡು ತನ್ನದನ್ನೂ ಹೇಳಿದಳು. ಹೇಳ್ಲಿಕ್ಕೆ ಭಾಳೇನಿಲ್ಲೋ ಪ್ರಕಾಶ. ಅವರದು ಸರ್ಕಾರಿ ಆಫೀಸಿನ್ಯಾಗ ಸ್ಟೆನೋ ಕೆಲಸಿತ್ತು. ಎರಡು ಮಕ್ಕಳು. ಮಗಳು ಮದಿವ್ಯಾಗಿ ‘ನಾಸಿಕ’ನ್ಯಾಗಿದ್ದಾಳ. ಮಗ ಭಾಸ್ಕರ ಪುಣೇದಾಗ ಬ್ಯಾರೇ ಮನಿ ಮಾಡಿಕೊಂಡು ಹೆಂಡ್ತಿ ಜೋಡಿ ಇದ್ದಾನ. ಅವರು ಹೋಗಿ ಹತ್ತು ವರ್ಷಾತು. ನಾ ಒಬ್ಬಾಕಿನ ಸಾರ್ಗೇಟ್ ಕಡೆ ಖೋಲಿ ಬಾಡಿಗಿಗೆ ತೊಗೊಂಡಿದ್ದೇನಿ. ಎಂದು ಮೌನವಾದಳು . ಅಂದು ಮನೆಗೆ ಹಿಂತಿರುಗಿ ಬಂದರೂ ಮೀನಳ ಗುಂಗು ಆವರಿಸಿತ್ತು. ನಾವಿಬ್ಬರೂ ಸಮದು:ಖಿಗಳಿದ್ದಂತೆ. ಹೆಚ್ಚು ಕಡಿಮೆ ಜಾನು ಹೋದಾಗಲೇ ಅವಳ ಗಂಡನೂ ಹೋಗಿದ್ದು. ಅವಳದೂ ಒಂಟಿ ಜೀವ. ರಾತ್ರಿಯೆಲ್ಲ ಏಕೋ ಧಾರವಾಡದ ನುಗ್ಗಿಕೇರಿಯ ನಮ್ಮ ಭೇಟಿಯ ನೆನಪು ಮೂಡಿ ಬಂದಿತ್ತು. ಮುಂದಿನ ದಿನಗಳಲ್ಲಿ ನಾನು ಅನೇಕ ಬಾರಿ ಸಾರ್ಗೇಟ್ನ ಅವಳ ಮನೆಗೆ ಭೇಟಿ ಇತ್ತಿದ್ದೆ. ಅವಳೂ ನನ್ನ ಮನೆಗೆ ಬಂದು ಹೋಗಿದ್ದಳು. ಹಾಗೇ ನಮ್ಮ ಒಡನಾಟ ಬೆಳೆದು ವಾರಕ್ಕೆ ಎರಡು ಮೂರು ಬಾರಿಯಾದರೂ ನಾವು ಭೇಟಿಯಾಗುವಂತಾಯಿತು. ಹೆದರಿಸಲು ಇಲ್ಲೇನು ಅಪ್ಪನ ಕಣ್ಣುಗಳಿರಲಿಲ್ಲ. ಅಮ್ಮನ ನೊಂದ ಮುಖವಿರಲಿಲ್ಲ. ಈ ಮನಸ್ಸಿನ ಕಥೆಯನ್ನೇ ನಾನು ಹೇಳಿದ್ದು. ಎಷ್ಟು ವಿಚಿತ್ರ ನೋಡಿ. ಹೆಂಡತಿ ಎಂಬ ಚೌಕಟ್ಟಿದ್ದರೆ ಒಳಗೇ ಹರಿದಾಡಿಕೊಂಡಿರುತ್ತದೆ. ಇಲ್ಲವಾದರೆ ಎಲ್ಲೆಲ್ಲೋ ನುಗ್ಗಿ ಒಡ್ಡು ಮೀರಿ ಹರಿಯುತ್ತ.. ..ಮೊರೆಯುತ್ತದೆ. ನನಗೀಗ ಅರವತ್ತೆರಡು ವರ್ಷಗಳು. ಇತ್ತೀಚೆಗೆ ನನಗೆ ‘ಮೀನಳನ್ನೇಕೆ ಮದುವೆಯಾಗಬಾರದು?’ ಎನಿಸಿತ್ತು. ಅಂದು ಅಪ್ಪನ ಹೆದರಿಕೆಯಿಂದ ನಿಂತು ಹೋದ ಪ್ರೀತಿ ಮತ್ತೆ ಮುಂದುವರೆಯಬಹುದಲ್ಲ. ನನ್ನ ಮಕ್ಕಳಂತೂ ಬೇಡವೆನ್ನಲಿಕ್ಕಿಲ್ಲ. ‘ಫಾರ್ವರ್ಡ’ಹುಡುಗರು. ಬೇರೆ ಏನೂ ಜಂಜಡವಿಲ್ಲ. ಇಬ್ಬರೂ ಸಮದು:ಖಿಗಳು. ಜೋಡಿಯಾಗಿ ವೃದ್ಧಾಪ್ಯ ಕಳೆಯಬಹುದು. ಈ ವಯಸ್ಸಿಗೆ ಅವಶ್ಯಕವಾಗಿ ಬೇಕಾಗುವದು ‘ಸಾಂಗತ್ಯ.’ ಇಬ್ಬರೂ ಒಬ್ಬರಿಗೊಬ್ಬರು ಆಸರೆಯಾಗಿ ಹೆಜ್ಜೆ ಹಾಕಿದರೆ.. ಅನೇಕ ‘ರೇ..ಳು ಮನದಲ್ಲಿ ಸುಳಿದವು. ನುಗ್ಗೀಕೇರಿಯ ಆಲದ ಮರದಡಿಯ ಚಿತ್ರ ಮುಂದೋಡಿ ಉತ್ತುಂಗ ಸುಖ ತಂದಿಡುವಂತೆ ಭಾಸವಾಯಿತು. ವಿಷಯ ಪ್ರಸ್ತಾಪಿಸಿದಾಗ ಮೀನಳಿಗೆ ಅಚ್ಚರಿಯೇನೂ ಆಗಿರಲಿಲ್ಲ. ಬದಲಿಗೆ ನಿರೀಕ್ಷಿಸುತ್ತಿದ್ದವಳಂತೆ ಸಮ್ಮತಿಸಿದ್ದಳು. ನನಗ ಇಬ್ಬರು ಮಕ್ಕಳಿದ್ದಾರಂತ ಹೇಳಿದೆನಲ್ಲ ಪ್ರಕಾಶ. ನೀ ಬೇಕಾದರೆ ಅವರಿಬ್ಬರನ್ನೂ ಒಮ್ಮೆ ಭೆಟ್ಟಿ ಮಾಡು ಎಂದಿದ್ದಳು. ನಾನು ಹೀರೋನ ಪೋಸು ಕೊಟ್ಟು ಬೇಕಾಗಿಲ್ಲ ಮೀನಾ. ನಿನ್ನ ಮಕ್ಕಳಂದ್ರ ನನ್ನ ಮಕ್ಕಳಿದ್ದಂಗ. ನನಗಂತೂ ಹೆಣ್ಣು ಮಕ್ಕಳಿಲ್ಲ. ಹಿಂಗರೆ ಒಬ್ಬಾಕಿ ಮಗಳು ಸಿಕ್ಕಂಗಾತು. ಎಂದಿದೆ.್ದ ನನ್ನ ಮಕ್ಕಳಿಗೆ ವಿಷಯ ತಿಳಿಸಿದಾಗ ಅಚ್ಚರಿಯಿಂದ ಹುಬ್ಬೇರಿಸಿದರು. ಸೊಸೆಯಂದಿರೂ ಆಶ್ಚರ್ಯಚಕಿತರಾದರೂ ಬದಲು ಹೇಳಲಿಲ್ಲ. ಎಲ್ಲರ ಪರವಾಗಿ ಮುಕುಲ್ ಮಾತನಾಡಿದ್ದ. ದಾದಾ, ನಿಮ್ಮ ಇಚ್ಛಾಕ್ಕ ನಾವು ಅಡ್ಡ ಬರಂಗಿಲ್ಲ. ಆದ್ರ ನಮ್ಮವ್ವನ್ನ ನಾವು ಮರೀಲಿಕ್ಕಾಗೂದಿಲ್ಲ… .. ಎಂದಿದ್ದ. ಹೌದಲ್ಲ, ಇಷ್ಟೂ ದಿನಗಳೂ ಮೀನಳ ಭೇಟಿಯಾದಾಗಿನಿಂದ ನನ್ನ ಜಾನ್ಹವಿಯ ನೆನಪೇ ಬರದಷ್ಟು ಮರೆತು ಹೋಗಿದ್ದೆ. ‘ಈ ವಯಸ್ಸಿನಲ್ಲಿ.. ಮದುವೆಯಾಗಿ.. ಜಾನ್ಹವಿಗೇನಾದರೂ ಮೋಸ ಮಾಡುತ್ತಿದ್ದೇನಾ?’ ಎಂಬ ವಿಚಾರ ಒಳಹೊಕ್ಕು ತಲೆಯೆಲ್ಲ ಚಿಟ್ಟೆಂದಿತು. ‘ಉಹ್ಞೂಂ, ನಾನು ಜಾನ್ಹವಿಗೇನೂ ಅನ್ಯಾಯ ಮಾಡುತ್ತಿಲ್ಲ. ಒಮ್ಮೆ ನಿರ್ಧರಿಸಿ ಆಗಿದೆ. ಇನ್ನು ಮುಂದುವರೆದೇ ಸೈ’ ಎಂದು ತೀರ್ಮಾನಿಸಿದೆ. ಅಕ್ಕ ಪಕ್ಕದ ಒಂದೆರೆಡು ಮನೆಯವರಿಗೆ ವಿಷಯ ತಿಳಿಸಿದೆ. ಕೆಲವರು ಕಣ್ಣರಳಿಸಿದರು. ಹಲವರು ಸಂತೋಷದಿಂದ ಕಂಗ್ರಾಚುಲೇಷನ್ಸ ಎಂದರು. ಹಿಂದೆ ಆಡಿಕೊಂಡು ನಕ್ಕವರೂ ಇದ್ದರೆನ್ನಿ. ಏನೋ ಸಂತೋಷ, ಹುರುಪು.. ಮಹಾಬಲೇಶ್ವರದಲ್ಲಿ ಒಂದು ವಾರ ಮಜವಾಗಿ ಕಳೆದು ಬಂದು ಸಂಸಾರ ಆರಂಭಿಸಬೇಕು. ಏನೇನೋ ಕನಸುಗಳು, ಕನವರಿಕೆಗಳು… ನಿರೀಕ್ಷಿಸಿದಂತೆ ದೇವಸ್ಥಾನದಲ್ಲಿ ಹಾರ ಬದಲಾವಣೆ ಮಾಡಿಕೊಂಡು ಸರಳವಾಗೇ ಮದುವೆಯಾದೆವು. ಬಕುಲ್ ಗ್ರೀಟಿಂಗ್ಸ ಕಳಿಸಿದ್ದ. ನಕುಲ್ನಿಂದ ಶುಭಾಷಯದ ಸಂದೇಶ ಬಂದಿತ್ತು. ಮುಕುಲ್ ಒಬ್ಬನೇ ಬಂದು ಶುಭ ಹಾರೈಸಿದ. ಹೆಂಡತಿ, ಮಕ್ಕಳು ಬೇಸಿಗೆ ರಜಕ್ಕೆ ತವರಿಗೆ ಹೋಗಿದ್ದರಂತೆ. ಶಿಷ್ಟಾಚಾರದಂತೆ ನನಗೆ ಮೀನಳಿಗೆ ನಮಸ್ಕರಿಸಿ ಆಫೀಸಿಗೆ ಹೊರಟು ಹೋದ. ನಾವೇ ನವದಂಪತಿಗಳು ಪಾಂಚಾಲಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಮನೆಗೆ ಬಂದೆವು. ಚಾಳದ ಕಣ್ಣುಗಳೆಲ್ಲ ಆನಂದಾಶ್ಚರ್ಯಗಳಿಂದ ನೋಡಿ ಶುಭ ಹಾರೈಸಿದರು. ಮೊದಲು ಬಂದು ಜಾನ್ಹವಿಯ ಫೋಟೋಕ್ಕೆ ಕೈ ಮುಗಿದೆ.







