ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾ ಯಾನ

ಕಥೆ ಸ್ವಾತಂತ್ರ್ಯ ಡಾ.ಪ್ರೇಮಲತ ಬಿ. ನನಗೀಗ ೧೯ ವರ್ಷ. ಕೆಲವೊಮ್ಮೆ ಆಲೋಚನಾ ಲಹರಿಯಿಂದ ನಾನು ಇತರರಿಗಿಂತ ವಿಭಿನ್ನ ಮಿಡಿತಗಳನ್ನು ಹೊಂದಿರುವಂತೆ ಅನಿಸಿದರೂ ತಾರುಣ್ಯದ ದಿನಗಳ ಎಲ್ಲ ಭಾವನೆಗಳ ಉಗಮದ ಪ್ರತಿ ಅನುಭವ ನನಗಾಗಿದೆ. ಮಧ್ಯಮವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ಕಾರಣದಿಂದಲೋ ಏನೋ, ಪ್ರೀತಿ-ಪ್ರೇಮದ ಅಲೆಗಳಲ್ಲಿ, ಡಿಸ್ಕೋ-ಕುಡಿತಗಳ ಅಮಲಿನಲ್ಲಿ ಕೊಚ್ಚಿಹೋಗುವ ಉನ್ಮಾದಕ್ಕಾಗಿ ಮನಸ್ಸು ತೀವ್ರವಾಗಿ ಮಿಡಿದಿಲ್ಲ. ಬದಲು ಸಮಾಜದಲ್ಲಿ ಮುಕ್ತತೆಯನ್ನು ಕಾಣುವ, ಸ್ವಾತಂತ್ರದ ಸಂಪೂರ್ಣ ಸ್ವೇಚ್ಚೆಗಾಗಿ ನನ್ನ ಮನಸ್ಸು ತುಮಲಗೊಳ್ಳುತ್ತದೆ. ಧೀಮಂತ ಯುವ ಶಕ್ತಿಯನ್ನು ಬಳಸಿ ಈ ಸಂಕುಚಿತ ಸಮಾಜವನ್ನು ಬದಲು ಮಾಡಬೇಕೆಂಬ ಉತ್ಕಟೇಚ್ಛೆ ನನ್ನಲ್ಲಿ ಯಥೇಚ್ಚವಾಗಿದೆ. ಒಬ್ಬ ಸುಂದರ ಯುವತಿಯನ್ನು ಕಂಡರೆ ಮನಸ್ಸು ಪುಳಕಗೊಳ್ಳುಷ್ಟೇ ಸಹಜವಾಗಿ ಸಮಾಜದಲ್ಲಿನ, ಅನೀತಿ, ಅಧರ್ಮ, ಲಂಚಕೋರತನ, ಶಿಕ್ಷಣದಲ್ಲಿರುವ ರಾಜಕೀಯ ಇವುಗಳನ್ನು ಕಂಡಾಗ ಕೆಡುಕೆನಿಸುತ್ತದೆ.ಧಮನಿ, ಧಮನಿಗಳಲ್ಲಿ ಹರಿವ ರಕ್ತ ಬಿಸಿಯಾಗಿ ಅಸಹಾಯಕತೆಯ ನಿಟ್ಟಿಸುರಾಗಿ ಹೊರಬಂದು ಆತ್ಮಸಾಕ್ಷಿ ನನ್ನನ್ನು ಹಿಂಸಿಸುತ್ತದೆ.ಬೆಟ್ಟಗಳನ್ನು ಹತ್ತಲು, ನದಿಗಳನ್ನು ಈಜಲು,ಬಯಲಿನಲ್ಲಿ ನಿರ್ಭಿಡೆಯಾಗಿ ಓಡಲು, ಕಾಡಿನಲ್ಲಿ ಒಂಟಿಯಾಗಿ  ಅಲೆಯಲು ಅದಮ್ಯ ಉತ್ಸಾಹ ಹೊಂದಿರುವ ನನ್ನಂತಹವರ ಮಿಡಿತಗಳು, ರಸ್ತೆಯಲ್ಲಿ ಸಂಕೋಚಪಡದೆ, ಹೆದರದೆ ನಡೆಯಲೂ ಆಗದಿರುವ ಈ ವ್ಯವಸ್ಥೆಯಲ್ಲಿ ಹಾಗೇ ತಣ್ಣಗಾಗಿಬಿಡುತ್ತವೆ. ಇದು ನಿರಾಶಾವಾದವಲ್ಲ. ಬದುಕಿನ ಕ್ರೂರ ಸತ್ಯ! ಇದಕ್ಕೆ ವಿರುದ್ಧವಾಗಿ ಸೊಲ್ಲೆತ್ತಿದರೆ ಆತ್ಮಹತ್ಯೆಯ ಹೆಸರಲ್ಲಿ ಅವರ ಹತ್ಯೆ. ಹಾಡುಹಗಲಲ್ಲೇ ಗುಂಡು. ವ್ಯವಸ್ಠಿತ ಜಾಲದ ಮಾಯೆಯಲ್ಲಿ ಎಲ್ಲ ಮಾಹಿತಿ,ಪರಿಣತಿಗಳ ವಿಪರ್ಯಾಸ. ಮಾಧ್ಯಮಗಳ ಹುಟ್ಟಡಗಿಸಿ, ಪರ-ವಿರೋಧಗಳ ಮಾರುಕಟ್ಟೆಯನ್ನು ಸೃಷ್ಟಿಸಿ ಅಪಹಾಸ್ಯವಾಗುತ್ತಿರುವ ಈ ದೇಶದ ಯುವ ತರುಣನಾಗಿ ನಾನೇನು ಮಾಡಬಲ್ಲೆ?? ಅಖಂಡವಾಗಿ ನಿಂತಿರುವ ದೊಡ್ಡ ದೇಶ ನನ್ನದು. ಆದರೆ ಇಲ್ಲಿ ಬದಲಾವಣೆಯ ಹರಿಕಾರರು ಯಾರದರೂ ಇದ್ದಾರೆಯೇ? ಅಂತವರಿಗಾಗಿ ನಾನು ಹುಡುಕಿ ಅಲೆಯಲೇ? ಈ ವ್ಯವಸ್ಥಿತ ಭ್ರಷ್ಟಾಚಾರ ನನ್ನ ಮನಸ್ಸುನ್ನು ಆಲೆಗಳೇ ಇಲ್ಲದಸಮುದ್ರವಾಗಿ ಯಾಂತ್ರಿಕತೆಯನ್ನು ರೂಢಿಸಿಕುಳ್ಳುವಂತೆ ಮಾಡುವ  ಮೊದಲು, ನನ್ನ ಭವಿಷ್ಯವನ್ನು ಹೇಗೆ ತಿರುಗಿಸಲಿ? ಇಂದಿನ ಸ್ವತಂತ್ರ ದಿನಾಚರಣೆಯ ಯಾವ ಭಾಷಣಕಾರರಲ್ಲೂ ನಾನು ಬದಲಾವಣೆಯ ಕಿಡಿಯಿರಲಿ, ಕಾವನ್ನೂ ಕಾಣಲಿಲ್ಲ.ಕಳೆದ ಹತ್ತು ವರ್ಷಗಳಲ್ಲಿ ಸ್ವಾತಂತ್ರ ದಿನಾಚರಣೆಯ ಬಗ್ಗೆ ಪುಳಕಿತಗೊಳ್ಳುವ ದಿನಗಳಿಂದ ಬದಲಾಗಿ, ನಿರಾಶಗೊಳ್ಳುವ ಆತಂಕಕ್ಕೆ ಸಿಲುಕಿಕುಳ್ಳುತ್ತಿದ್ದೇನೆ. ದೇವರೇ ರಕ್ಷಿಸು.”.. “ಹತ್ತಾರು ವರ್ಷದ ಅವೇ ಹಳೇ ಬಟ್ಟೆಗಳನ್ನು ಅದೇನಂತ ಹಾಕ್ಕೋತಿಯೋ?ಬಿಸಾಕಿ,ಬೇರೆ ಹೊಲಿಸಿಕೋ…. “ನಡುಮನೆಯಲ್ಲಿ ಬಟ್ಟೆ ಮಡಿಚಿಡುತ್ತಿದ್ದ ಅಮ್ಮ ಕೂಗಿದಳು. “ಅವೇನು ಹರಿದಿಲ್ಲವಲ್ಲಮ್ಮ..? ಹೊಸದ್ಯಾಕೆ ಬೇಕು?”-ಹರೆಯದ ದಿನಗಳನನ್ನ ಹಳೇ ದಿನಚರಿ ಪುಸ್ತಕದಲ್ಲಿ ಸ್ವತಂತ್ರ ದಿನಾಚರಣೆಯ ದಿನ ಬರೆದದ್ದನ್ನು ಓದುವುದನ್ನು ನಿಲ್ಲಿಸಿ, ತಲೆ ಎತ್ತಿ ಕೂಗಿ ದಬಕ್ಕನೆ ಇಹಲೋಕಕ್ಕೆ ಬಂದೆ.ಇವತ್ತು ಕೂಡ ಇನ್ನೊಂದು ಸ್ವತಂತ್ರ ದಿನಾಚರಣೆ. ಹಾಗೆಂದೇ ನನ್ನಲ್ಲಿ ಈ ತಾದಾನ್ಮ್ಯತೆ.  ಅಮ್ಮ ಹೇಳುತ್ತಿದ್ದುದು ಸರಿಯೆಂದು ಗೊತ್ತಿದ್ದರೂ ಹತ್ತು ವರ್ಷಗಳಿಂದ ಹೇಳುತ್ತಿದ್ದ ಅದೇ ಉತ್ತರ ಹೇಳಿದೆ.ಅಮ್ಮನಲ್ಲವೇ…..ದಬಾಯಿಸಿಬಿಡಬಹುದು! “ಈಗೆಲ್ಲ ಈ ತರದವನ್ನು ಜನ ಹಾಕ್ಕೊಳಲ್ಲ.ಫ್ಯಾಷನ್ ಬದಲಾಗಿದೆ. ಜನ ಆಡ್ಕೊಂಡ್ ನಗ್ತಾರೆ….” ಅಮ್ಮನೇನು ಬಿಡುವವಳಲ್ಲ. “ಆಡ್ಕೊಂಡ್ ನಗಲಿ ಬಿಡು.ನಾನು ಯಾರಿಗೇನು ತೊಂದರೆ ಮಾಡ್ತಿಲ್ವಲ್ಲ.ಈ ಜನರಿಗೆ ಯಾರು ಅವರಿಗೆ ಹಾನಿ ಮಾಡ್ತಿದ್ದಾರೆ ಅನ್ನೋ ಅರಿವಿದ್ರೆ ತಾನೆ..” “ಏನೋಪ್ಪ..,ಬೇಕಾದಷ್ಟು ದುಡೀತೀಯ.ವಯಸ್ಸಿದೆ,ಎಲ್ಲರಂಗಿರು ಅಂತ ಹೇಳಿದೆ… “ಅಮ್ಮ ಅಲ್ಲಿಗೆ ಸುಮ್ಮನಾದಳು. ಮನಸ್ಸಲ್ಲಿ ಏನೆಂದುಕೊಂಡಳೋ ಯಾರಿಗೆ ಗೊತ್ತು? ಭಾರತ ಬಿಟ್ಟು ೧೫ ವರ್ಷವಾಯ್ತು.ಇಪ್ಪತ್ತೈದು ವರ್ಷದ ವಯಸ್ಸಿನಲ್ಲಿ ಇದ್ದ ಆಕಾರದಲ್ಲೇ ಈಗಲೂ ಇದ್ದೇನೆ.ಮನಸ್ಥಿತಿ, ಕಾಲಗತಿಯಲ್ಲೂ….. ಹರಿಯದ ಬಟ್ಟೆಗಳನ್ನು ಎಸೆಯದೆ,ಬೆಳೆಸಿಕೊಂಡ ಭಾವನೆಗಳನ್ನು ಹರಿದುಕೊಳ್ಳದೆ ಗಡಿಯಾರದಂತೆ ಪ್ರತಿ ಆಗಷ್ಟ್ ಗೆ ಸರಿಯಾಗಿ ಭಾರತಕ್ಕೆ ಮರಳಿದ್ದೇನೆ. ಅದೇ ಹಳೆಯ ಬಟ್ಟೆಗಳನ್ನು ಅಲೆಮಾರಿನಿಂದ ತೆಗೆದು ಉಟ್ಟು, ಪರಕಾಯ ಪ್ರವೇಶ ಮಾಡಿದಂತೆ ಹುದುಗಿಕೊಂಡಿದ್ದೇನೆ.ಕಾಲಕ್ರಮದಲ್ಲಿ ನಾನೊಂದಾಗಿದ್ದಾಗ ನನಗನಿಸಿದ್ದ ಎಲ್ಲ ಭಾವನೆಗಳಿಗೆ ಮರುಜೀವ ನೀಡಿ ಅಪ್ಯಾಯಕರವಾದ ಹಲವು ಭಾವನೆಗಳನ್ನು ಮೆಲುಕು ಹಾಕಲು ತವಕಿಸುತ್ತೇನೆ. ೨ ನಡುಮನೆಯಲ್ಲಿ ಅಮ್ಮ ಮಾತನಾಡುತ್ತಿದ್ದಳು. “ಚೆನ್ನಾಗಿದ್ದೀರ? …ಹೌದು.. ಮಗ-ಸೊಸೆ ಬಂದು ಒಂದು ವಾರ ಆಯ್ತು. ಇಲ್ಲ. ಸೊಸೆ ಮಕ್ಕಳನ್ನು ಕರ್ಕೊಂಡು ಅವರಮ್ಮನಮನೆಗೆ ಹೋಗಿದ್ದಾಳೆ….ಇಂಗ್ಲೆಂಡಿನಲ್ಲೇ ಇರಲ್ವಂತೆ. ಬರ್ತೀನಿ ಅಂತಾನೆ ಇರ್ತಾನೆ..ಅದೇನು ಮಾಡ್ತಾನೋ ಗೊತ್ತಿಲ್ಲ… ನನಗೇನೋ ಬರ್ತಾನೆ  ಅನ್ನಿಸುತ್ತೆ.ಅದ್ರೂ ಹೇಳಕ್ಕಾಗಲ್ಲ…ದೇವರಿಟ್ಟಂತೆ ಅಗ್ಲಿ ಬಿಡಿ ಗಂಗ, ನನ್ನ ಕೈ ಲೇನಿದೆ ಹೇಳಿ…” ಅಮ್ಮ ತನ್ನ ಗೆಳತಿ ಗಂಗಾಂಬಿಕೆಯ  ದೂರವಾಣಿ ಕರೆಗೆ  ಕಿವಿಯೊಡ್ಡಿದ್ದಳು. ನನ್ನ ಅಕ್ಕ ಮತ್ತು ಭಾವ ಇದೇ ದೇಶದಲ್ಲಿದ್ದು ಅಮ್ಮನನ್ನು ನೋಡಿಕೊಳ್ಳುತ್ತಿರುವುದರಿಂದ ಅಮ್ಮನ ಬಗ್ಗೆ ಆತಂಕವಿಲ್ಲ, ಭಾವ ಅಮ್ಮನ ಕೊನೆಯ ತಮ್ಮನೂ ಆಗಿರುವುದರಿಂದ ಅಳಿಯ ಎಂಬ ಹಂಗಿಲ್ಲ. ಗಂಡುಮಗ ಜೊತೆಯಲ್ಲಿಲ್ಲದ ಕೊರತೆ ಅಮ್ಮನ ಮಾತಲ್ಲಿ ಕಾಣಿಸುತ್ತಿತ್ತು. ಆದರೆ, ನಿರಾಸೆಯನ್ನು ಹತ್ತಿಕ್ಕಿ, ನಿರುಮ್ಮಳವಾಗಿ ಗೆಳತಿಯ ಜೊತೆ ಅಮ್ಮ ಮಾತು ಮುಂದುವರಿಸಿದಳು. “ಬೆಂಗಳೂರಲ್ಲಿ ಬೇಕದಷ್ಟು ಆಸ್ತಿ ಮಾಡಿದ್ದಾರಲ್ಲ…ಹೌದು… ಒಂದು ಫ್ಲಾಟ್ ಇದೆ, ಮನೆ ಇದೆ.ಎರಡನ್ನೂ ಬಾಡಿಗೆಗೆ ಕೊಟ್ಟಿದ್ದಾನೆ.ಬೇಕಾದಷ್ಟು ಬಾಡಿಗೆ ಬರುತ್ತೆ.ಲಂಡನ್ನಿನಲ್ಲೇನು…ಅವರಿಗೆ ಬೇಕಾದಂತೆ ಸಂಬಳ…ಕೈಗೊಂದು,ಕಾಲಿಗೊಂದು ಆಳು…ಎರಡೆರಡು ಕಾರು…ಗೊತ್ತಲ್ಲ, ಆ ದೇಶದ ದುಡ್ಡಿಗೆ ಡಾಲರಿಗಿಂತ ಭಾರೀ ಬೆಲೆಯಂತಲ್ಲ……?“ ನಾಲ್ಕನೇ ತರಗತಿಗೆ ಓದು ನಿಲ್ಲಿಸಿ, ೧೬ ಕ್ಕೆಲ್ಲ ಮದುವೆಯಾದ ಅಮ್ಮನಿಗೆ ಯಾವ ಕೊರತೆಯೂ ಇರಲಿಲ್ಲ. ಕೈ ತುತ್ತು ನೀಡಿ ಬೆಳೆಸಿದ ಮಗನ ಅಗಲಿಕೆಯ ನೋವನ್ನು ಅವನ ದುಡ್ಡಿನ ಬಗೆಗಿನ ಬೊಗಳೆಯಲ್ಲಿ ಮುಳುಗಿಸಿ.ಗೆಳತಿಯ ಮುಂದೆ ತೇಲಿಬಿಡುತ್ತಿದ್ದಾಳೆ. ಸಂಬಂಧಗಳು ಸಮುದ್ರದ ಎರಡೆರಡು ದಿಕ್ಕಿನಲ್ಲಿ ಹರಡಿಕೊಂಡರೂ ಹಣದ ಮೇಲ್ಮೈ ಅಡಿ ಅಗಲಿಕೆಯ ನೋವನ್ನು ಬಚ್ಚಿಟ್ಟು ಸಮಾಜದಲ್ಲಿ ಮೂಗೆತ್ತಿ ನಡೆವ ಅಮ್ಮನ ಕುಶಲತೆಗೆ ತಲೆಬಾಗಬೇಕೇನೋ……! ಅಮ್ಮನನ್ನು ಬಿಗಿದಪ್ಪಿ ಬಾಚಿ ಕೂರಬೇಕೆಂದು ಎಷ್ಟೋ ಸಾರಿ ಅನ್ನಿಸುತ್ತದೆ,ತಂದೆ ತೀರಿದ ಮೇಲೆ ಮೊಮ್ಮಕ್ಕಳ ಸ್ಪರ್ಷ ಬಿಟ್ಟರೆ ಅವಳಿಗೆ ಬೇರಿಲ್ಲ. ಹಾಗೆ ಮಾಡಿದರೆ ಅವಳು ಕೊಸರಿಕೊಂಡರೂ ಒಳಗೊಳಗೆ ಸಂತಸ ಪಡುತ್ತಾಳೆಂದೂ ನನಗನಿಸಿದೆ. ಆದರೆ ಪರಸ್ಪರ ವರ್ಷಕ್ಕೊಮ್ಮೆ ಎದುರಾದಾಗ ಹಸ್ತವನ್ನು ಅದುಮಿಕ್ಕಿದ್ದಕ್ಕಿಂತ ಹೆಚ್ಚು ಮಾಡಿಲ್ಲ. ಪರದೇಶಿಯಾದ ನಾನು ಒಂದಿಷ್ಟೂ ಸ್ವದೇಶಿತನವನ್ನು ಬಿಟ್ಟಿಲ್ಲ. “ ಅಯ್ಯೋ ನೀನೇನೋ…ನೀನು, ನಿನ್ನ ಮಕ್ಳು ಎಲ್ಲ ಹೋಟೆಲಿನಲ್ಲಿ ನಮ್ಮ ತರಾನೇ ತಿಂದಿರಲ್ಲೋ…ಶಾರದಮ್ಮನ ಮಗಳು- ಗಂಡ ಅಮೆರಿಕದಿಂದ  ಬಂದಾಗ ನೀನು ನೋಡಬೇಕಿತ್ತು…. ಅವರ ಊಟದ ಕಟ್ಟುಪಾಡೇನು… ನೀರಿನ ವ್ಯವಸ್ಠೆಯೇನು…ಇಡೀ ಮೂರು ವಾರ ಅವರ ಮನೆಯಲ್ಲಿ ನಡೆದದ್ದು ಮುಂದಿನ ಮೂರು ತಿಂಗಳ ಕಾಲ ನಮ್ಮ ಮಹಿಳಾ ಸಂಘದಲ್ಲಿ ಚರ್ಚೆಯಾಯ್ತು…” ಅಂತ ಅಮ್ಮ ಒಮ್ಮೆ ಹೇಳಿದ್ದಳು.ಅಮ್ಮನ ಈ ಮಾತಲ್ಲಿ ನಿರಾಶೆಯ ಸುಳಿವಿತ್ತು ಎನ್ನುವಲ್ಲಿ ನನಗೆ ಸಂಶಯವಿರಲಿಲ್ಲ. ಅಮ್ಮ ನನ್ನ ಬಗ್ಗೆ ಏನು ತಾನೇ ಹೇಳಿಕೊಳ್ಳಲು ಸಾಧ್ಯವಿತ್ತು? ನನ್ನಲ್ಲಿ ಪರದೇಶದ ದುಡ್ಡಿನ ಯಾವ ಗತ್ತುಗಳೂ ಇರಲಿಲ್ಲ. ಒಮ್ಮೊಮ್ಮೆ ಈ ಜಟಿಲ ಸಮಾಜ ಪರದೇಶದಿಂದ ಬಂದ ಭಾರತೀಯರು ಪಾಸ್ಚಿಮಾತ್ಯರ ರೀತಿಯೇ ವರ್ತಿಸಲಿ ಎಂದು  ನಿರೀಕ್ಷಿಸುತ್ತದೆ. ಅದನ್ನು ನೋಡುವ ಅರೆಕ್ಷಣದ ಮನರಂಜನೆಯನ್ನು ಬಿಟ್ಟರೆ ಅದರಿಂದ ಇವರಿಗೆ ಗಿಟ್ಟುವುದಾದರೂ ಏನು?ಭಾರತೀಯತೆಯಲ್ಲಿ ಮೀಯಲು ಸಾವಿರಾರು ಮೈಲಿ ಹಾರಿಬರುವ ನಮಗೆ ಕೆಲವೊಮ್ಮೆ ನಿರಾಶೆ ಕಟ್ಟಿಟ್ಟ ಬುತ್ತಿ.ಪರದೇಶದಲ್ಲಿ ಭಾರತೀಯರಂತಿರುವ ನಮಗೆ,ಭಾರತಕ್ಕೆ ಮರಳಿದಾಗ ಪಾಶ್ಚಾತ್ಯರಂತೆ ವರ್ತಿಸಬೇಕಾದ ಹಿಂಸೆ ! ವಿದೇಶದಲ್ಲಿರುವಾಗ ಭಾರತೀಯರು ಎಂಬುದನ್ನು ಮರೆತು ಬಿಳಿಯರಿಗಿಂತ ಬೆಳ್ಳಗೆ ವರ್ತಿಸಿ,ಭಾರತದಲ್ಲೂ ಅದೇ ಚಮಕ್ ತೋರಿಸುವ ಭಾರತೀಯರು ಇವರಿಗೆ ಮಾದರಿ? ಭಾರತದ ಇಂದಿನ ಸಮಾಜದಲ್ಲಿ ಪಾಶ್ಚಾತ್ಯರ ಅಂಧ ಅನುಕರಣೆ ಊಟ, ಉಡಿಗೆ, ತೊಡಿಗೆಗಳಲ್ಲಿ ಹಾಸು ಹೊಕ್ಕಿದೆ. ಇತ್ತೀಚೆಗೆ ಗೆಳೆಯರ ಸಮಾವೇಶದಲ್ಲಿ ಅಮೆರಿಕಾದ ಉಡುಗೆ ತೊಟ್ಟು, ಸಂಜೆಯಲ್ಲಿ ಕರಿಕಪ್ಪು ಕನ್ನಡಕ ತೊಟ್ಟು, ಹೆಂಡತಿಗೆ ತುಂಡುಲಂಗ ಉಡಿಸಿಕೊಂಡು ಬಂದಿಳಿದ ಗೆಳೆಯ ರವಿಯ ಸಂಸಾರದ ಜೊತೆ ಫೊಟೋ ಕ್ಲಿಕ್ಕಿಸಿಕೊಳ್ಳಲು ಸಾಲುಗಟ್ಟಿ ಸರತಿಗೆ ಕಾದ ನನ್ನ ಭಾರತೀಯ ಮಿತ್ರರ ಬಗ್ಗೆ ಕನಿಕರವಾಯ್ತು,   ಮರುಕ್ಷಣ ಫೇಸ್ಬುಕ್ಕಿನಲ್ಲಿ, ವ್ಹಾಟ್ಸಪ್ಪಿನಲ್ಲಿ ಅಮೆರಿಕಾದ ತಮ್ಮ ಮಿತ್ರರ ಜೊತೆ ತೆಗೆಸಿಕೊಂಡ ಚಿತ್ರಗಳ ರವಾನೆ ಮಾಡುತ್ತಿದ್ದರು.ಭಾರತದಲ್ಲಾದರೂ ಭಾರತೀಯ ಉಡುಗೆ ಉಡುವ ಅವಕಾಶ ಇದೆ  ಎಂದು ತಿಳಿದು ಅಪ್ಪಟ ಭಾರತೀಯ ತೊಡುಗೆಯಲ್ಲಿದ್ದ ನಮ್ಮನ್ನು  ಕೇಳುವವರಿರಲಿಲ್ಲ. ಕನ್ನಡದಲ್ಲಿ ಮಾತಾಡುತ್ತಿದ್ದವರು ಬಹುಶಃ ನಾವಿಬ್ಬರೇ! ಊಟಕ್ಕೆ ಫ್ರೆಂಚ್ ಮೆನ್ಯು. ಜೊತೆಗೆ ಪಿಜ್ಜ, ಬರ್ಗರ್ರು ಗಳೇ…. ಮನೆ ಬಿಟ್ಟು ಹೊರಹೋದರೆ ಇಂಗ್ಲೆಂಡಿನಲ್ಲಿ ಇಂತವೇ ಊಟಗಳ ಹೊರತು ಇನ್ನೊಂದು ಸಿಗುವುದಿಲ್ಲ. ಭಾರತದಕ್ಕೆ ಬಂದಾಗಲೂ ಫ್ರೆಂಚ್,ಇಟಲಿಯ ಊಟ ಮಾಡಲು ನನಗೂ-ಸುಮಿಗೂ ಬೋರು ಹೊಡೆದಿತ್ತು. ತಮ್ಮ ಜಾನಿ –ವಾಕರ್ ಬಾಟಲ್ ಗಳನ್ನು ಮುಖದ ಮುಂದೆ ಹಿಡಿದುಕೊಂಡು ಫ್ಹೋಟೊ ಕ್ಲಿಕ್ಕಿಸಿಕೊಂಡು ರೊಯ್ಯನೆ ವಾಟ್ಸಪ್ಪಿಗೆ ರವಾನಿಸುವುದನ್ನು ಮಾತ್ರ ಮರೆಯದ ಗೆಳೆಯರು ಸಂತೋಷವಾಗಿರುವುದನ್ನು ಬಿಟ್ಟು ತೋರಿಕೆಯ ಆಟಗಳಲ್ಲಿ ಸಂತೋಷ ಕಾಣುವುದನ್ನು ಕಂಡೆವು. ಬಾಯಿ ತುಂಬಾ ಮನಸ್ಪೂರ್ವಕವಾಗಿ ಮಾತಾಡಿ , ಹಳೆಯ ದಿನಗಳನ್ನು ನೆನೆದು ಮನಸಾರೆ ನಗೋಣ ಅಂತ ಬಂದ ನನಗೆ ಪೆಚ್ಚಾದದ್ದು ಸುಮಿಗೂ ತಿಳಿಯಿತೇನೋ. ಅವಳು ಅದನ್ನು ತೋರಿಸಲಿಲ್ಲ. ನೂರಾರು ವರ್ಷಗಳ ತಮ್ಮ ಸಾಮಾಜಿಕ ದಿನಚರಿಯಲ್ಲಿ ಸಹಜವಾಗಿ ಮುಳುಗಿರುವ ಪಾಶ್ಚಿಮಾತ್ಯರು…ಅವರ ಅಂಧ ಅನುಕರಣೆಯಲ್ಲಿ ಅಂತಹಃಕರಣ ಕಳೆದುಕೊಳ್ಳುತ್ತಿರುವ ಭಾರತೀಯ ಸಮಾಜಕ್ಕೆ ಏನಾಗಿದೆ…?ಪ್ರತಿ ಆಂಗ್ಲನಲ್ಲಿ ತಾನು ಆಂಗ್ಲನೆಂದು ಇರುವ ಹೆಮ್ಮೆ,ಭಾರತೀಯನಲ್ಲಿ ಆಳವಾಗಿ ಬೇರು ಬಿಟ್ಟಿರುವ ಕೀಳಿರಿಮೆಗಳ ವ್ಯತ್ಯಾಸ ಡಣಾಡಾಳಾಗಿ ಕಾಣುತ್ತದೆ.ಇದನ್ನೇ ಬಳಸಿಕೊಂಡು ಕಳೆದ ಹತ್ತು ವರ್ಷಗಳಲ್ಲಿ ಕುಸಿಯುತ್ತಿರುವ ತಮ್ಮ ದೇಶದ ಮಾರುಕಟ್ಟೆಗಳನ್ನು ಮತ್ತೆ ಬೆಳೆಸಿಕೊಳ್ಳಲು ಭಾರತದಂತಹ ದೇಶಗಳಿಗೆ ಬರುತ್ತಿರುವ ಮಾರುಕಟ್ಟೆಯ ಸರದಾರರು ಭಾರತೀಯರಿಗೆ ಮೂಗುದಾರ ಹಾಕಿ ಗುಲಾಮಗಿರಿಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಕತ್ತೆಗಳಿಗೆ ಕೋಲಿದ್ದವನೇ ಮಾಲೀಕ…. ಮನಸ್ಸು ಹಿಂದಕ್ಕೆ ಓಡಿತು….  ಗಾಂಧೀಜಿಯ ಆತ್ಮ ಚರಿತ್ರೆ ನನ್ನ ಮೆಲೆ ಗಾಢ ಪರಿಣಾಮ ಬೀರಿತ್ತು. ಇಂಗ್ಲೆಂಡಿಗೆ ಹೊರಟಾಗ  ಯಾವ ಪರಿಸ್ಥಿ ತಿಯಲ್ಲೂ ಬದಲಾಗದ ಹಠಮಾರಿ ಸ್ವಭಾವದ ಗಾಂಧಿಗೆ ಇಂಗ್ಲೆಂಡಿನಲ್ಲಿ ಓದಿನ ಬಳಿಕವೇ ಭಾರತದ ಸ್ವತಂತ್ರದ ಅರಿವು ಮೂಡಿತೆಂಬ ಸಮಜಾಯಷಿ ಹೇಳಿಕೊಂಡಿದ್ದೆ.ತರಭೇತಿಯ ನೆಪದಲ್ಲಿ ಹೊರಟು, ಹೊಟ್ಟೆ ಪಾಡಿನ ಹೆಸರಲ್ಲಿ ಇನ್ನೂ ಪರದೇಶದಲ್ಲೇಇದ್ದೇನೆ.ಯಾವ ಗಿಂಬಳವೂ ಇಲ್ಲದೆ, ತೆರಿಗೆ ವಂಚಿಸದೆ ಕೂಡಿಟ್ಟ ಪ್ರತಿ ಪೌಂಡನ್ನು ಭಾರತದ ರೂಪಾಯಿಯಾಗಿಸಿ ಭಾರತದಲ್ಲಿ ನೆಲವನ್ನು ಕೊಂಡು ಭಾರತೀಯನಾಗಿ ಹಿಂತಿರುಗುವ ಕನಸನ್ನು ಮುಂದುವರಿಸಿದ್ದೇನೆ.ಆದರೆ ಕಾರಣವೇ ಇಲ್ಲದೆ ಸಾವಿರಾರು ಪಟ್ಟು ಜಿಗಿದ ಭಾರತದ ಕರಾಳ ಮಾರುಕಟ್ಟೆಗೆ ನನ್ನ ದುಡಿಮೆ ಸಾಕಾಗಲಿಲ್ಲ.ತೆಗೆದ ಸಾಲಗಳಿಗೆ ಈಗಲೂ ಹಣ ತುಂಬುತ್ತಿದ್ದೇನೆ… ಮನೆಯಿಂದ ನಡೆದು ಹತ್ತಿರದಲ್ಲಿರುವ ಸ್ಟೇಡಿಯಂ ತಲುಪಿದೆ. ಜನಜಂಗುಳಿ ಸೇರಿತ್ತು. ಹಲವಾರು ಪೋಷಕ ವೃಂದದ ಜೊತೆ ಇದ್ದವರೆಲ್ಲ ಬರೀ ಪಡ್ಡೆ ಹುಡುಗರು. ಸ್ವಯಂ ಸೇವಕರು, ನಿವೃತ್ತರಾದ ಶಿಕ್ಷಕರು, ಬಿಳೀ ಟೋಪಿ ತೊಟ್ಟ ದೇಶ ಭಕ್ತರು ನಿಧಾನವಾಗಿ ಇಲ್ಲಿಗೆ ಬರುವುದನ್ನು ನಿಲ್ಲಿಸಿದ್ದಾರೇನೋ? “ಎಕ್, ದೋ,ತೀನ್..ಚಾ..ರ್…” ರಂಗು ರಂಗಿನ ಬಣ್ಣದ ಬಟ್ಟೆ ತೊಟ್ಟ ವಿವಿಧ ಶಾಲೆಗಳ ಮಕ್ಕಳು ಸ್ವತಂತ್ರ ದಿನಾಚರಣೆಯ ಕವಾಯತಿನಲ್ಲಿ ತೊಡಗಿಕೊಂಡಿದ್ದರು. ಈ ದಿನ ನಾನು ಪ್ರತಿ ವರ್ಷದಂತೆ ಸ್ಟೇಡಿಯಂನಲ್ಲಿ ತಪ್ಪದೆ ಹಾಜರ್. ಒಂದೊಮ್ಮೆ ನಾನು ಈ ಮಕ್ಕಳಲ್ಲಿ ಒಬ್ಬನಾಗಿದ್ದೆ. ಹೀಗೇ ಕವಾಯತು ಮಾಡಿ, ನಮ್ಮ ಭಾರತದ ಬಗ್ಗೆ ಹೆಮ್ಮೆಯಿಂದ ಬೀಗಿದ್ದೆ. “ನಿಮಗೇಕೆ ಕೊಡಬೇಕು ಕಪ್ಪ…., ನೀವೇನು ಇಷ್ಟರಾ..ಒಡೆಯರಾ…” -ಎಂದು ಕೇಳುವ ಕಿತ್ತೂರು ರಾಣಿಯ ಪಾಠವನ್ನು ಓದುವಾಗ ಕಣ್ಣೀರು ಹಾಕಿದ್ದೆ. ಈಗ ಪ್ರತಿ ವರ್ಷಕ್ಕೊಮ್ಮೆ ಇಂಗ್ಲೆಂಡಿನ ಜನತೆಗೆ ಸೇವೆ ಸಲ್ಲಿಸಿ ಗಳಿಸಿದ ದುಡ್ಡಿನಲ್ಲಿ ಸ್ವತಂತ್ರ ಭಾರತದ ಮಾರುಕಟ್ಟೆಯಲ್ಲಿ ಸಿಗದ ಸೌಲಭ್ಯಗಳಿಗಾಗಿ, ನಿಯತ್ತಿಗಾಗಿ, ಸಮಾನತೆಗಾಗಿ ತಪ್ಪದೆ ಕಪ್ಪವನ್ನು(ತೆರಿಗೆ) ಕಟ್ಟಿ ಧನ್ಯನಾಗುತ್ತಿದ್ದೇನೆ.ಇದು ನಾನು  ಭಾರತದ ಪಟ್ಟಭದ್ರ ಹಿತಾಸಕ್ತಿಗಳಿಂದ ಗಳಿಸಿದ ಮುಕ್ತಿಗಾಗಿಯೂ ಇರಬಹುದು! ಎಲ್ಲರೂ  ಆಶೆಗಳನ್ನು ಕೈಬಿಟ್ಟಿದ್ದಾರೆ. ಮಾಧ್ಯಮಗಳು ರಾಜಕೀಯದ ಉಧ್ಯಮಿಗಳ ಕೈ ವಶವಾಗಿದೆ! ನ್ಯಾಯಾಲಯಗಳು ಕಣ್ಣಿಲ್ಲದೆ ಕೆಲಸ ಮಾಡುತ್ತಿವೆ.ಪೋಲಿಸರು ತಮಗೇ ದಕ್ಕಿರದ ನ್ಯಾಯ, ಸ್ವಾತಂತ್ರಗಳಿಗೆ ಹೋರಾಡುವಲ್ಲಿ ಕೂಡ ಹತಾಶರಾಗಿ ರಾಜೀನಾಮೆ ಕೊಡುತ್ತಿದ್ದಾರೆ.ಶಿಕ್ಷಣ ಖರೀದಿಗಿದೆ.ಹೊಸದಾಗಿ ಹರಿದಾಡುತ್ತಿರುವ ವಾಣಿಜ್ಯ ಬೆಳವಣಿಗೆಗೆ ಪ್ರತಿಯಾಗಿ ಬೆಳೆಯದ ಸೌಲಭ್ಯಗಳಿಂದ ಇಡೀ ವ್ಯವಸ್ಥೆ ನಲುಗಿದೆ. ಇವರ ಮಧ್ಯೆ ದೇವರ ಹೆಸರಿನ ದೊಡ್ಡ ದಂಧೆ ನಡೆದಿದೆ.

ಕಥಾ ಯಾನ Read Post »

ಕಥಾಗುಚ್ಛ

ನೂರು ಪದಗಳಮೂರು ಕಥೆಗಳು

ಕಥೆಗಳು ಡಾ.ಪ್ರೇಮಲತ ಬಿ. ಸಮಸ್ಯೆ ಆ ಮನೆಯಲ್ಲಿದ್ದ ಎಲ್ಲರೂ ಚಿಂತಾಕ್ರಾಂತರಾಗಿದ್ದರು. ವಿಷಯವೂ ಗಂಭೀರದ್ದೇ ಆಗಿತ್ತು. ಸಮಸ್ಯೆಯ ಜಾಡನ್ನಿಡಿದು ಅದು ಹೇಗೆ ಶುರುವಾಯ್ತು, ಹೇಗೆ ಬೆಳೆಯಿತು ಎಂದು ಮತ್ತೆ ಮತ್ತೆ ಎಷ್ಟು ಯೋಚಿಸಿದರೂ ಅದಕ್ಕೊಂದು ಉತ್ತಮ ಪರಿಹಾರ ಹೊಳೆದಿರಲಿಲ್ಲ. ಒಂದು ರೀತಿಯ ಒಪ್ಪಂದಮಾಡಿಸಿದರೆ, ನಿಮ್ಮಿ ಮತ್ತು ಶೈಲಜಾರ ಬದುಕು ಹಸನಾಗುತ್ತಿತ್ತು ಆದರೆ ರಾಘವನಿಗೆ ಘೋರ ಅನ್ಯಾಯವಾಗುತ್ತಿತ್ತು. ರಾಘವನ ಕಡೆ ವಾಲಿದರೆ ಇಡೀ ಸ್ತ್ರೀ ಕುಲಕ್ಕೇ ಮಸಿ ಬಳೆವಂತ ಪರಿಹಾರ ಹೇಳಿದ ಪಾಪ  ವೆಂಕಣ್ಣಯ್ಯನ ಹೆಗಲೇರಿ ಕಾಡುತ್ತಿತ್ತು. ಈ ಸಂದಿಗ್ದದಲ್ಲಿ ದಿನಕ್ಕೊಂದು ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ವೆಂಕಣ್ಣಯ್ಯ ಯೋಚಿಸುತ್ತಿದ್ದರಾದರೂ ಅದನ್ನು ನಿಜವಾಗಿ ಕಾರ್ಯರೂಪಕ್ಕೆ ಇಳಿಸಲು ಅವರಲ್ಲಿ ಧೈರ್ಯ ಸಾಲುತ್ತಿರಲಿಲ್ಲ.  ಬದುಕೇ ಹೀಗಲ್ಲವೇ? ಅದೇನು ಪರಿಹಾರವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಶುರುವಾಗುತ್ತವೇನು? ಬದುಕನ್ನು ಕಟ್ಟುತ್ತ ಕಟ್ಟುತ್ತ ದಾರಿ ಕಂಡುಕೊಳ್ಳುತ್ತ ಸಾಗಬೇಕು. ಒಳ್ಳೇ ಪೇಚಿನಲ್ಲಿ ಸಿಕ್ಕಿಬಿಟ್ಟೆನಲ್ಲ?ಎಂದುಕೊಂಡರು. ಹಾಗಂತ ಅಂತ್ಯದಲ್ಲಾದರೂಸಮಸ್ಯೆಗೆ ಒಂದು ಒಳ್ಳೆಯ ಪರಿಹಾರ ಇಲ್ಲದಿದ್ದರೆ ಏನು ಚೆನ್ನಾಗಿರುತ್ತದೆ? ವೆಂಕಣ್ಣಯ್ಯ ಐವತ್ತನೇ ವಯಸ್ಸಿನಲ್ಲಿ ಹೊಸದಾಗಿ ಕಥೆ ಬರೆಯಲು ಶುರುಮಾಡಿದ್ದು ತಾನೇ? ಅದೂ ಮೊದಲ ಕಥೆ! ———- ರಕ್ಷಣೆ-ಭಕ್ಷಣೆ ಯಾಕೋ ಬಟ್ಟೆಚೀಲ ವಾಪಸ್ತಂದೆ? ಹೋಗೋದ್ರೊಳಗೆ ತುಂಕೂರಿಗೆ ಕರ್ಕೊಂಡೋಗ್ಬಿಟ್ಟಿದ್ರು… ಅಯ್ಯೋ ಹಾಕ್ಕೊಳ್ಳೋಕೆ ಒಂದುಬಟ್ಟೆಇಲ್ಲ, ಕೈಯಲ್ಲೊಂದು ಕಾಸಿರ್ಲಿಲ್ಲ..ಈಗೇನ್ಮಾಡೋದು? ಅದಿರ್ಲಿ..ಈಗನಮ್ಮನ್ನೂ ಚೆಕ್ಮಾಡೋಕೆ ಬರ್ತಾರೆ ಅನ್ನಿಸುತ್ತೆ. ನಾವೇನ್ಮಾಡಿದ್ದೀವಿ ಅಂತ? ಜೊತೇಲಿದ್ವಲ್ಲಅದಕ್ಕೆ… ಮನೇಸುತ್ತ ತಗಡು ಹೊಡೀಬಹುದು.. ಯಾಕೆ ?ತಗಡುಹೊಡಿದ್ರೆ ..ಏನಾಗುತ್ತೆ? ನೋಟೀಸೂ ಅಂಟಿಸಬಹುದು.. ನಂದೀಶ…ಅವೆಲ್ಲ ಯಾಕೇಂತ ಹೇಳೋ?  ಯಾರಿಗ್ಗೊತ್ತು…ಸಾಬರೇನಾದ್ರೂ ಆಗಿದ್ರೆಇಬ್ಬರುಪೋಲೀಸರ್ನುಕಾವಲುಹಾಕ್ತಿದ್ರುಗೊತ್ತಾ?…ಇಲ್ದಿದ್ರೆ ಅವರು ತಪ್ಪಿಸ್ಕೊಂಡು ಓಡಾಡ್ತಾರಂತೆ… ನಾವು ಹಂಗ್ಮಾಡಲ್ಲ ಅಂತ ಬರಕೊಟ್ರೆ?ನಮ್ಮನ್ನೆಲ್ಲ ಕೂಡಾಕಿದ್ರೆ ಅಮ್ಮಂಗ್ ಬಟ್ಟೆ ಕೊಡೋರ್ಯಾರು? ನಿಮ್ಮಜ್ಜಿಗೆ ಫೋನ್ ಮಾಡಕ್ಕೂ ಬರಲ್ವಲ್ಲೋ?ಎಷ್ಟು ಹೆದರ್ಕೊಂಡಿರತ್ತೋ… ಜ್ವರ -ಕೆಮ್ಮು ಅಂತ ಕರ್ಕೊಂಡು ಹೋಗಿದ್ದೇ ತಪ್ಪಾಯ್ತು… ಕೈಕಾಲೇ ಆಡ್ತಿಲ್ಲ ಕಣೋ… ಒಂದೇ ಸಮನೆ ಅತ್ತಳು ಸುಭದ್ರ. –ಮರುದಿನ- ಸುಭದ್ರ-ಅಯ್ಯೋ …..ಪೋಲೀಸ್ರು.. ಈಗ್ನಮ್ಮನ್ನೂ ಕರ್ಕೊಂಡೋಗ್ತಾರೇನೋ?… ಪೋಲಿಸ್ರು-ಅಮ್ಮಾ….. ಅದೇನಂದ್ರೇ.. ಆಸ್ಪತ್ರೇಲಿ ನಿಮ್ಮವ್ವ..ಕೊರೋನಾ ಮಾರಿಗ್ ಹೆದರ್ಕೊಂಡು ಉಟ್ಕೊಂಡಿದ್ದ ಸೀರೇಲೇ ನೇಣು  ಹಾಕ್ಕೊಂಡು ಬಿಟ್ಟವ್ರೆ……… ಸ್ವಲ್ಪ ಸಮಾಧಾನ ಮಾಡ್ಕಳಿ ತಾಯಿ…. ———– ನೊಸ್ಟಾಲ್ಜಿಯ  ಮಳೆ ಬಂದು ಬಿಟ್ಟ ಸಂಜೆ,ತಂಪಾದ ಗಾಳೀಲಿ ಸುಟ್ಟ ಮುಸುಕಿದ ಜೋಳದ ವಾಸನೆ…, ಸ್ಟೇಡಿಯಂ ಮೆಟ್ಟಿಲ ಮೇಲೆ ಕೂತು,ಬೆಚ್ಚಗಿನಉಪ್ಪು-ಖಾರ, ಮಸಾಲೆ ಹಚ್ಚಿದ ಮುಸುಕಿನ ಜೋಳನ ಕಚ್ಚಿ, ಕಚ್ಚಿ ಜಗಿದು ತಿನ್ನುತ್ತ ಅದರ ಹಾಲನ್ನು  ಚಪ್ಪರಿಸೋದು ಎಂಥ ಮಜಾ…  “ ಅದಕ್ಕಿನ್ನ ಮಜಾ ಅಂದ್ರೆ, ಸ್ಕೂಲ್ ಮುಂದೆ ತಳ್ಳೋಗಾಡೀ ರಾಮಕ್ಕ ಅದೆಲ್ಲಿಂದನೋ ತರ್ತಿದ್ದ ಹಸಿರು ಕಿರು ಗಿತ್ತಳೆ ಹಣ್ಣುಗಳು. ಅದನ್ನು ಮಧ್ಯಕ್ಕೆ ಹೋಳು ಮಾಡಿ, ಚೆನ್ನಾಗಿ ಉಪ್ಪು-ಖಾರ ಹಚ್ಚಿ ಕೊಡೋಳು, ಬಾಯಿಗಿಡೋಕೆ ಮುನ್ನವೇ ಚುಳ್ಳಂತ ನಾಲ್ಗೇ ಕೆಳಗೆ ನೀರು ತುಂಬ್ಕೊಳ್ಳೋದು, ಮೊದಲು ಅದನ್ನು ನೆಕ್ಕೋದು, ಆಮೇಲೆ ಅದರ ಹುಳೀ ಸಮೇತ ನಾಲ್ಗೇ ಮೇಲೆ ಹಿಂಡಿಕೊಳ್ಳೋದು.. ಆಮೇಲೆ ಅದರ ತೊಳೆಗಳನ್ನು ಕಚ್ಚಿ, ಕಚ್ಚಿ ತಿನ್ನೋದು…ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅನ್ನಂಗಿರೋದು ಈಗ ಅವನ್ನು ನೆನಸ್ಕೊಂಡ್ರೆ ಬಾಯಲ್ಲಿ ನೀರು ಬರುತ್ತೆ ಆದ್ರೆ ಉಳಿದಿರೋ ಹಲ್ಲೆಲ್ಲ ಚುಳ್ಳಂತ ನಡುಗಿಬಿಡ್ತವೆ ಬಿಡು ಮಾರಾಯ್ತಿ.. “.ಎಂದ ಶಾಮಣ್ಣ. ಕಟ್ಟಿಸಿಕೊಂಡ ಹಲ್ಲು ಸೆಟ್ಟನ್ನು ಕಟ-ಕಟನೆಂದು ಆಡಿಸಿ ಪಕ-ಪಕನೆ ನಕ್ಕಳು ಪಂಕಜಮ್ಮ. ****************************

ನೂರು ಪದಗಳಮೂರು ಕಥೆಗಳು Read Post »

ಕಥಾಗುಚ್ಛ

ಸಹನೆಯ ತೇರು

ಕಥೆ ಸುಧಾ ಹಡಿನಬಾಳ.            ರೀ, ನಿನ್ನೆ  ಅವರೆಲ್ಲಾ ನಗ್ ನಗ್ತಾ ಮಾತಾಡ್ತಿರ್ವಾಗ ನೀವ್ಯಾಕ್ರಿ ಮಂಕಾಗಿ ಕುತಿದ್ರಿ? ನೀವೂ ನಗ್ತಾ ಮಾತಾಡ್ತಾ ಇದ್ರೆ ನಂಗೆ ಎಷ್ಟು ಖುಷಿ ಆಗ್ತಿತ್ತು ಗೊತ್ತಾ’ ಎನ್ನುತ್ತ ನಿನ್ನೆಯ ಅಮ್ಮನ ಮನೆ ಸಡಗರದ ಗುಂಗಲ್ಲೇ ಗಂಡನ ಕೊರಳಿಗೆ ಜೋತು ಬಿದ್ದು ಲಲ್ಲೆಗರೆದಳು ಸ್ವಾತಿ. ಅಷ್ಟೇ ನಿರ್ದಾಕ್ಷಿಣ್ಯವಾಗಿ ಅವಳ ಕೈಗಳನ್ನು ತಳ್ಳಿ ‘ ಒಹೋ, ನಿನ್ ತರನೆ ಕಂಡವರ ಜೊತೆ ಎಲ್ಲಾ ಹಲ್ ಕಿರ್ದು ನಗ್ಬೇಕಿತ್ತಾ? ನಿಂಗೆ ನೀನು ಮದುವೆ ಆಗಿರೋಳು ಅನ್ನೋದೆ ಮರ್ತು ಹೋದಂತಿದೆ. ನಂಗಿದೆಲ್ಲ ಒಂಚೂರು ಇಷ್ಟ ಆಗೋದಿಲ್ಲ. ಈಗ್ಲೆ ಹಿಂಗಿರೋಳು ಮದುವೆಗೆ ಮುಂಚೆ ಹೇಗಿದ್ಯೊ ಏನ್ ಕತೆನೊ. ಇನ್ಮುಂದೆ ಅಲ್ಲಿ ಹೋಗಿ  ಮೊದಲಿಂತರ ಇರೋ ಕನಸು ಕಾಣ್ಬೇಡ ಹಾಂ’ ಎನ್ನುತ್ತಾ ಬೋರಲಾಗಿ ಮುಸುಕು ಎಳೆದುಕೊಂಡ. ಗಂಡನ ಮಾತಿನ ತೀಕ್ಷ್ಣತೆಗೆ, ಒಳಾರ್ಥಕ್ಕೆ ಸ್ವಾತಿ ನಲುಗಿ ಹೋದಳು.          ‌‌ ‌‌‌ ‌‌‌                   ಸ್ವಾತಿ ಕಿಲಕಿಲ ನಗುವ ಉತ್ಸಾಹದ ಚಿಲುಮೆಯಾಗಿದ್ದವಳು. ಇಡೀ ಊರಿಗೆ ಯುವರಾಣಿ ಹಾಗೆ ರಾಜಾರಸ್ಸಾಗಿ ಸಮುದ್ರ, ಹೊಲ- ಗದ್ದೆ ಹೀಗೆ ಎಲ್ಲೆಡೆ ತನ್ನ ಓರಗೆಯವರು, ಊರ ಹೈಕಳ ದಂಡು ಕಟ್ಟಿಕೊಂಡು ನಾಟಕ, ಡಾನ್ಸ ಅಂತ ನಲಿದಾಡ್ತಾ ಇರೊ ನವಿಲು ಅವಳು. ಅಪ್ಪನ ಜೊತೆ ಕತ್ತಿ ಹಿಡಿದು ತೋಟಕ್ಕೆ ಬಿಟ್ರು ಸೈ, ಅಡುಗೆ ಮನೆಯಲ್ಲಿ ಎಂಟಾಳಿಗೆ ಅಡಿಗೆ ಮಾಡಿ ಬಡಿಸೋಕು ಜೈ ಅಂತಿರೋಳು. ಹೆಸರಿಗೆ ತಕ್ಕ ಹಾಗೆ ಅಪರೂಪದ ಸ್ವಾತಿ ಮುತ್ತು. ಇಂತ ಮಗಳನ್ನ ಒಲ್ಲದ ಮನಸ್ಸಿನಿಂದ ಒಳ್ಳೆಯ ಸಂಬಂಧ , ಒಬ್ಬನೇ ಮಗ, ಅಲ್ಲೂ ರಾಜಕುಮಾರಿ ತರ ಇರ್ಬಹುದು ಅಂತ ಹೆತ್ತವರು ಮಹೇಶನಿಗೆ ಧಾರೆ ಎರೆದು ಕೊಟ್ಟರು. ಊರು – ಕೇರಿಯ  ಪ್ರೀತಿ,ಆಶೀರ್ವಾದದೊಂದಿಗೆ  ಬೆಳಕಿನ ಕಿರಣವಾಗಿ, ಮಹೇಶನ ಭಾಗ್ಯವಾಗಿ ಮನೆ ತುಂಬಿ ಬಂದವಳು ಸ್ವಾತಿ.ಆದರೆ ಅವನಿಗದು ಬೇಕಿರಲಿಲ್ಲ. ಹೇಳಿಕೊಳ್ಳಲೇನೂ ಕೊರತೆ ಇಲ್ಲ. ಮಿತಭಾಷಿ ಅತ್ತೆ, ಆಳು- ಕಾಳು , ತೋಟ, ಸ್ವಂತ ಟ್ಯಾಕ್ಸಿ ಓಡಿಸುವ ಗಂಡ. ಆದರೆ ಮದುವೆ ಸ್ವಾತಿಯ ಪಾಲಿಗೆ ಮಧುರ ಅನುಭವ ನೀಡಲಿಲ್ಲ.; ಸರಸ- ಸಲ್ಲಾಪದ ರಸ ನಿಮಿಷಗಳಾಗಿರಲಿಲ್ಲ. ಮಹೇಶನಿಗೆ ಹೆಂಡತಿಯಲ್ಲಿ ಯಾವ ಆಸಕ್ತಿ ಇಲ್ಲ. ಬೇಕಾದಾಗ ಮಡಿಲಿಗೆ ಬಂದರೆ ಮುಗಿಯಿತು. ಪಿಸು ಮಾತು, ಬಿಸಿಯಪ್ಪುಗೆ ಬೇಕಿರಲಿಲ್ಲ. ಅವಳ ಕಿಲಕಿಲ ನಗು ಅವನಿಗೆ ವರ್ಜ್ಯ. ಅದಕ್ಕೆ ಮದುವೆಯಾದ ಹೊಸದರಲ್ಲೇ ಬ್ರೇಕ್ ಹಾಕಿದ್ದ. ಅವಳ ಸೌಮ್ಯ ವದನ, ಸಹನೆಯನ್ನು ಕೆಣಕಿ ಕೊಂಕು ತೆಗೆಯುತ್ತಿದ್ದ.ಯಾವುದಕ್ಕೂ ಸೊಲ್ಲೆತ್ತದ ಸ್ವಾತಿ ಹೆಚ್ಚು – ಕಮ್ಮಿ ನಗುವುದನ್ನೇ ಮರೆತಿದ್ದಳು.ಗಂಡನ ವಿಚಿತ್ರ ವರ್ತನೆಗೆ ಕಾರಣ ಗೊತ್ತಿಲ್ಲದೆ ತಡಕಾಡುತ್ತಿದ್ದಳು. ಕಾಲ ಹೀಗೆ ಉರುಳುತ್ತಿರಲು ಸ್ವಾತಿಯ ಮಡಿಲಲ್ಲಿ ಮುದ್ದು ಕೂಸೊಂದು ಅರಳಿತ್ತು. ಮೂರು ತಿಂಗಳ ಕೂಸಿನೊಂದಿಗೆ ಮರಳಿ ಬಂದ ಸ್ವಾತಿ ಗಂಡನ ನಡೆಯಲ್ಲಿನ ಏರುಪೇರನ್ನು ಗುರುತಿಸಿದಳು. ಮೊದಲಿನಂತೆ ಮನೆಗೆ ಸರಿಯಾಗಿ ಬರುತ್ತಿಲ್ಲ. ಬಂದರೂ ತಡವಾಗಿ ಕುಡಿದು ಬರುತ್ತಿದ್ದ.ಪ್ರಶ್ನಿಸಿದರೆ ಏರು ದನಿಯಲ್ಲಿ ಗದರಿ ರಂಪಾಟ ಮಾಡಿ ಬಾಯಿ ಮುಚ್ಚಿಸುತ್ತಿದ್ದ. ಒಂದಿನ ಅಕ್ಕಿ ಗೇರುವಾಗ ಸ್ವಾತಿಯ ಅಸಹಾಯಕ ಮೌನವನ್ನು ಗ್ರಹಿಸಿ ಮನೆಯಾಳು ಮಂಜಮ್ಮ ಸತ್ಯ ಬಾಯ್ಬಿಟ್ಟಳು. ಗಂಡನ ಈ ಅನೈತಿಕ ಸಂಬಂಧವನ್ನು ಸಹಿಸಲಾರದೆ ಮುದ್ದು ಮಗಳ ಮುಂದೆ ಕಣ್ಣೀರಾಗುವುದೊಂದೆ ಸಮಾಧಾನದ ಕ್ಷಣ.ಇನ್ನೇನು ಮಾಡಿಯಾಳು? ಅವಳ ಸಹನೆ ಎಲ್ಲವನ್ನೂ ಮೌನವಾಗಿ ಒಪ್ಪಿಕೊಂಡಿತ್ತು. ಎಲ್ಲಕ್ಕೂ ಕಾಲವೆ ಪಾಠ ಕಲಿಸುತ್ತದಲ್ಲವೆ?            ‌‌‌                                ಅದೊಂದು  ರಾತ್ರಿ ಕುಡಿದ ಅಮಲಿನಲ್ಲಿ ಟ್ಯಾಕ್ಸಿ ಓಡಿಸಿಕೊಂಡು ಬರುವಾಗ ನಿಂತ ಲಾರಿಗೆ ಗುದ್ದಿಕೊಂಡು ಮಣಿಪಾಲ ಸೇರಿದ. ತಲೆಗೆ ಬಲವಾಗಿ ಏಟು ಬಿದ್ದ ಕಾರಣ ಮೆದುಳು ದೇಹದ ಮೇಲಿನ ಹಿಡಿತ ಕಳೆದುಕೊಂಡಿತ್ತು. ವೈದ್ಯರೆ ಅಸಹಾಯಕರಾಗಿ ಇರುವಷ್ಟು ದಿನ ಹೀಗೆ ಮನೆಯಲ್ಲಿ ಇರಲಿ ; ಬೇರಾವ ಚಿಕಿತ್ಸೆಯೂ ಇಲ್ಲ ಎಂದಾಗ ಜೀವಂತ ಶವದಂತೆ ಮನೆ ಸೇರಿದ್ದ.. ಸ್ವಾತಿ ಟೊಂಕ ಕಟ್ಡಿ ಈ ಅಗ್ನಿ ಪರೀಕ್ಷೆಯನ್ನೂ ಎದುರಿಸಿದಳು. ಬಿದ್ದಲ್ಲೆ ಬಿದ್ದು ನಾರುವ ಎಲ್ಲವೂ ಸರಿ ಇದ್ದಾಗ ಗುರ್ ಎಂದು ಗೂಳಿಯಂತೆ ಗುಟುರುವ ಗಂಡನ ಕೊಳಕು ಬಳಿದು ,ಕುಂಡೆ ತೊಳೆದು ಕಲ್ಲಾಗಿದ್ದಳು. ಹೀಗೆ ನಾಲ್ಕು ವರ್ಷ ಕಳೆಯಿತು. ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಅವನ ಆರೋಗ್ಯ. ಅದೊಂದು ಮಳೆಗಾಲದ ರಾತ್ರಿ ಉಣಿಸಿ ಕಂಬಳಿ ಹೊದೆಸಿ ತುಸು ದೂರದಲ್ಲಿ ಮಲಗಿದ್ದಳು ಸ್ವಾತಿ. ಇದ್ದಕ್ಕಿದ್ದಂತೆ ಕೆಮ್ಮಲಾರಂಭಿಸಿದ ಗಂಡನ ತಲೆ ,ಬೆನ್ನು ನೀವುತ್ತಾ ನೀರು ಕುಡಿಸಲು ಮುಂದಾದ ಮಡದಿಯ ಕೈಯಲ್ಲೆ ಕತ್ತು ವಾಲಿಸಿ ಉಸಿರು ನಿಲ್ಲಿಸಿಬಿಟ್ಡ. ಬತ್ತಿ ಹೋದ ಅವಳ ಕಂಗಳಲ್ಲಿ ಮತ್ತೆ ನೀರು ಜಿನುಗಲಿಲ್ಲ. ಬೆಳಗಾಯಿತು. ಅಕ್ಕ- ಪಕ್ಕದವರು ,ಬಂಧು- ಬಳಗದ ಹಿರೀಕರು  ಸೇರಿದರು. ಎಲ್ಲಾ ಕ್ರಿಯಾಕರ್ಮ ಮುಗಿಸಿ ಸ್ವಾತಯನ್ನು ಹೊರಗೆ ಕರೆದರು. ಮುಂದಿನ ತಯಾರಿಗಾಗಿ  ಹೆಂಗಳೆಯರು ಶುರುವಿಟ್ಟುಕೊಂಡರು. ನೀರವ ಮೌನದ ನಡುವೆ ಆ ಮನೆಯ   ಹಿರಿಯಾಳು ಬೋಳು ಬೋಳಾಗಿದ್ದ ಬಾಲ ವಿಧವೆ ಮಂಜಮ್ಮ ಏರು ದನಿಯಲ್ಲಿ  ಮೊದಲ ಬಾರಿಗೆ ದನಿ ಎತ್ತಿದಳು.” ನಿಲ್ಸಿ, ಏನು ಮೊಕ ನೋಡ್ತಿವ್ರಿ; ಸ್ವಾತವ್ವ ಈ ಮನೆಗೆ ಬೆಳದಿಂಗಳ ಚಂದ್ರನಂತೆ ನಗ್ತಾ ಬಂದೋರು. ಆದ್ರೆ ಒಂದಿನ ನೆಮ್ಮದಿ ಕಾಣ್ಲಿಲ್ಲ ಅವರು. ನಮ್ ನಡುವಿನ ಸಹನೆಯ ತೇರು ಸ್ವಾತವ್ವ. ಮತ್ತೆ ಕೆಣಕ್ಬೇಡಿ ಅವರ ಸಹನೆಯ ಹಾಂ, ಅವ್ರನ್ನು ನೆಮ್ಮದಿಯಾಗಿ ಅವ್ರಿಷ್ಡದಂತೆ ಇರೋದಕ್ಕೆ ಬಿಟ್ಬಿಡಿ. ನೀವು ಒಳಗೆ ಹೋಗ್ರಿ ಸ್ವಾತವ್ವ’ ಎನ್ನುತ್ತಿದ್ದಂತೆ ಸ್ವಾತಿ ಸೆರಗು ಬಾಯಿಗೆ ಅಡ್ಡಲಾಗಿ ಹಿಡಿದು ಒಳಗೆ ನಡೆದಳು.  **********************          ‌      ‌   ‌   ‌                                                                            ‌                   

ಸಹನೆಯ ತೇರು Read Post »

ಕಥಾಗುಚ್ಛ

ಧಾರವಾಡದ ಹೇಮಾಮಾಲಿನಿ

ಸಣ್ಣ ಕಥೆ ಬಸವರಾಜ ಹೂಗಾರ ಆಕೆ ಒಡೆದ ಪ್ರತಿಮೆಯಂತಿದ್ದಳು. ಬಿದ್ದ ಪ್ರತಿಮೆಯ ಯಾವುದೇ ಚೂರಾದ ಸಂಗತಿಯನ್ನು ಎತ್ತಿಕೊಂಡರೂ ಅಲ್ಲಿಂದ ಬಿಂಬಗಳು ಕಾಣಿಸುತ್ತಿದ್ದವು . ಆಕೆ ಹೆಚ್ಚು ಪ್ರೇಮದ ಕುರಿತು ಮಾತನಾಡುತ್ತಿದ್ದಳು ಆಕೆಯ ಡ್ರೆಸ್ಸಿನದೇ ಒಂದು ವಿಚಿತ್ರ ಡಿಸೈನ್ .ಕಟ್ಟಿಕೊಂಡ ಬಣ್ಣದ ಬಟ್ಟೆಯ ತುಣುಕುಗಳು ,ಬೊಚ್ಚು ಬಾಯಿ ,ಅರ್ಧ ಗೌನೊ ,ಬಣ್ಣದ ಗಗ್ಗರಿಯನ್ನೊ ಉಟ್ಟುಕೊಂಡು ಬಗಲಿಗೆ ಜೋಳಿಗೆ ಏರಿಸಿ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಾ ಕೆಲವು ಸಾರಿ ದಿವ್ಯ ಮೌನ ವಹಿಸುತ್ತಾ ಚಿಂದಿ ಆಯುತ್ತಿದ್ದರೆ, ಅದು ಧಾರವಾಡ ಗೊತ್ತಿದ್ದವರಾಗಿದ್ದರೆ‌  ಖಂಡಿತ  ಆಕೆ ಹೇಮಾಮಾಲಿನಿ.                ಬಾಸೆಲ್ ಮಿಷನ್ ಸ್ಕೂಲ್ ರಸ್ತೆಯಲ್ಲಿಯೋ, ಅಥವಾ ಎಲ್ಐಸಿ ಮುಂದೆಯೊ ಆಕೆ ನಡೆದು ಹೋಗುತ್ತಿದ್ದರೆ ನೋಡುವ ಹುಡುಗರಿಗೆ ತಮಾಷೆ, ಹುಡುಗರ ಹಾಸ್ಟೆಲ್ ಸುತ್ತಮುತ್ತ ಆಕೆ ಬಂದರೆ ಆಕೆಯ ಬಾಯಲ್ಲಿ ಬೈಗುಳ ಕೇಳಬೇಕಿತ್ತು . ಸ್ವರ್ಗಕ್ಕೆ ಮೂರೇ ಗೇಣು. ಅಷ್ಟು ಚಂದದ ಬೈಗುಳಗಳು.ಹುಡುಗ-ಹುಡುಗಿಯರ ಕುರಿತಾಗಿ ಆಕೆ ಬೈಯುತ್ತಿದ್ದಳು.  ಯಾರಿಗೆ  ಬೈಯುತ್ತಾಳೊ? ಯಾಕಾಗಿ ಬೈಯುತ್ತಾಳೊ? ಒಬ್ಬರಿಗೂ ಅರ್ಥವಾಗುತ್ತಿರಲಿಲ್ಲ .ಹಲಕಟ್ಟ ಭಾಷೆಯಲ್ಲಿ ಆಕೆ ಬೈಯುತ್ತಿದ್ದರೆ ನೀವು  ತಕ್ಷಣವೇ ಚೆನ್ನಾಗಿ ಮಾತನಾಡಿಸಿದರೆ ಸಾಕು ಪ್ರೀತಿಯ ಹಾದಿಗೆ ಬರುತ್ತಿದ್ದಳು .ನಾವು ಎಷ್ಟೋ ಸಾರಿ ಆಕೆಯನ್ನು ‘ಏನ್ ಮೇಡಂ ,ತುಂಬ ಸಿಟ್ಟಾಗೆದ್ದೀರಿ? ಎಂದರೆ ಆಕೆ ಗೆಳತಿ ಗೆಳೆಯನಿಗೆ ಹೇಳುವ ಅಕ್ಕರೆಯ ಮಾತುಗಳಂತೆ ತನ್ನ ಕಾಡಿಸಿದವರ, ತಾನು ಅವರನ್ನು ಸೋಲಿಸಿದ ಕಥೆ ಹೇಳುತ್ತಿದ್ದಳು .ಅದಕ್ಕೆ ಆರಂಭ ಅಂತ್ಯ ಇರುತ್ತಿರಲಿಲ್ಲ.ಚಿಂದಿ‌ ಆಯುವಾಗ ನೋಟುಗಳು ಸಿಕ್ಕ ಕತೆ, ತಾನು ಬೆಳಗ್ಗೆ ನಾಷ್ಟಾ ಮಾಡಿದ ಕತೆ ,ಒಬ್ಬರ ಹತ್ತಿರ ಇಟ್ಟ ಗಂಟಿನ ಕತೆ,ಯಾವುದೋ ಹುಡುಗಿ ಇನ್ನಾವುದೋ ಹುಡುಗನಿಗೆ ಮೋಸ ಮಾಡಿದ ಕತೆ ,ಕೈಕೊಟ್ಟು ಹೋದರೂ ಪ್ರಾಮಾಣಿಕವಾಗಿ ನಡಕೊಂಡ ವ್ಯಥೆ, ಆಕೆ  ಲೊಚಗುಟ್ಟುತ್ತ ಮುಂದೆ ಹೋಗುತ್ತಿದ್ದರೆ ಆಕೆಯನ್ನು ನೋಡಿದ ಯಾರಾದರೂ ಇದು ಪ್ರೇಮದ ಕೇಸೆ ಎನ್ನುತ್ತಿದ್ದರು. ಆಕೆಯನ್ನು ಸಿಟ್ಟಿಗೆಬ್ಬಿಸಿ ಜೀವನದಲ್ಲಿ ಯಾರಿಂದಲೂ ಬೈಸಿಕೊಳ್ಳದವರು ಹಲಕಟ್ಟ ಬೈಗುಳ ಬೈಸಿಕೊಂಡ ದೊಡ್ಡಪಡೆಯೇ ಕರ್ನಾಟಕದಲ್ಲಿ ಇದೆ. ಹಾದಿಯಲ್ಲಿ ಹೊರಟರೆ ‘ನೋಡಲೇ ಅಲ್ಲಿ ,ಹೇಮಾ ಬರಕತ್ತ್ಯಾಳ ಎನ್ನುವವರೆ.  ಆಕೆ ಇಂಗ್ಲಿಷ್ ಮಾತನಾಡುತ್ತಿದ್ದಳು. ಧಾರವಾಡ ಆಧುನಿಕತೆಗೆ ಕಣ್ಣು ತೆರೆಯುತ್ತಿರುವಾಗಲೇ ಧಾರವಾಡದ ಆಧುನಿಕ ಹೆಂಗಸರಂತಿದ್ದಳು.ಕೇಳುಗರಿಗೆ ಕರುಣೆಯ ಲೆಕ್ಕದಲ್ಲಿ ಹುಷಾರಿನ ಪಾಠ ಹೇಳುತ್ತಿದ್ದಳು .ವಯಸ್ಸಿನ ಹೆಂಗಸಾಗಿದ್ದರೂ ಕಾಲೇಜಿನ ಹುಡುಗ-ಹುಡುಗಿಯರಿಗೆ ಯಾಕೆ   ಆಕರ್ಷಣೀಯ ಕೇಂದ್ರವಾಗಿದ್ದಳು?ಕಳೆದುಕೊಂಡಿದ್ದನ್ನ ಹುಡುಕುತ್ತಿದ್ದಳೊ? ಸಿಗುವದಿಲ್ಲ‌ ಎಂದು ಗೊತ್ತಿದ್ದರೂ ಕನವರಿಸುತ್ತಿದ್ದಳೊ? ಪುರುಷರ  ದೌರ್ಜನ್ಯಕ್ಕೆ ಒಳಗಾಗಿದ್ದಳೊ?  ಆಕೆಯನ್ನು ಯಾರು ಈ ಪರಿಸ್ಥಿತಿಗೆ ತಂದಿಟ್ಟರೋ ಗೊತ್ತಿಲ್ಲ. ಆಕೆ ಯಾಕೆ ಹುಚ್ಚಿಯಾಗಿ ತಿರುಗುತ್ತಿದ್ದಾರೆ ಎನ್ನುವುದು ಬಹುತೇಕ ಧಾರವಾಡದ ಜನಕ್ಕೆ ಗೊತ್ತಿಲ್ಲ .ಧಾರವಾಡದ ಒಡೆದ ಪ್ರತಿಬಿಂಬದಂತೆ ಆಕೆ ಬದುಕಿದಳು .ಮೋಸ ಮಾಡಿದವರ  ಕ್ರೌರ್ಯದ ಗಾಯಗಳು ಆಕೆಯ ದೇಹದ ಮೇಲೆ ತುಂಬಾ ಗಾಯ ಮಾಡಿದ್ದವು .ಆ ಗಾಯದ ಗೀರುಗಳನ್ನ ಆಕೆ ಮುಟ್ಟಿಮುಟ್ಟಿ ನೋಡಿಕೊಳ್ಳುತ್ತಿದ್ದಳು .ಅದು ಕೆಲವರಿಗೆ ತಮಾಷೆಯಾಗಿತ್ತು .ಇನ್ನು ಕೆಲವರಿಗೆ ನೋವಿನ ಪರಿಭಾಷೆಯಾಗಿತ್ತು. ಆಕೆ ಭಿಕ್ಷೆ ಬೇಡಲಿಲ್ಲ .ಯಾರಿಗೂ ಜೀ ಎನ್ನಲಿಲ್ಲ.  ಆಕೆ ಎಲ್ಲಿ ಮಲಗುತ್ತಿದ್ದಳೊ?ಗೊತ್ತಿಲ್ಲ .ಪೂರ್ಣ ಹುಚ್ಚಿಯೋ ಅದೂ ಗೊತ್ತಿಲ್ಲ .ಉದ್ದೇಶಪೂರ್ವಕವಾಗಿಯೇ ಅಂತ ವ್ಯಕ್ತಿತ್ವವನ್ನು ಆವಗಾಹಿಸಿಕೊಂಡಳೋ  ಗೊತ್ತಿಲ್ಲ .ಧಾರವಾಡದಲ್ಲಿ ಓದಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾಗ ಒಂದು ಸಲ ಆಕೆ ಎಲ್ಲಿರಬಹುದೆಂದು ಹುಡುಕುತ್ತಿದ್ದೆ. ಒಂದು ಸರ್ಕಾರಿ ಆಶ್ರಮದಲ್ಲಿ ಆಕೆ ಸಿಕ್ಕಳು .ಇಳಿವಯಸ್ಸಿನವರ ಜೊತೆಗೆ ಆಕೆ ಬದುಕುತ್ತಿದ್ದಳು. ಮೊದಲಿನ ಹಾಗೆ ಆಕೆಯ ಹತ್ತಿರ ಆವೇಶವಿರಲಿಲ್ಲ. ಸಮಾಧಾನವಿತ್ತು. ಸಹಜತೆ ಇತ್ತು .ಜೊತೆಗೆ ಫೋಟೋ ತೆಗೆಸಿಕೊಂಡೆ.’ಬಾಳ ಸಂತೋಷಪಾ,ಹುಡುಕಿಕೊಂಡು ಬಂದಿಯಲ್ಲ ಅಷ್ಟೇ ಸಾಕು ,ಬಾಳ ಜನ ಅದಾರ  ನೆನಪು ಮಾಡ್ಕೋತಾರ ‘ಅಂದಳು .ನಿನ್ನ ಫ್ರೆಂಡ್ಸ್ ಗೆ ಕೇಳಿದೆ‌ ಅಂತ ಹೇಳು ಅಂದಳು. ಧಾರವಾಡವೆಂಬ ಇಡೀ ಧಾರವಾಡದ ಹುಡುಗ-ಹುಡುಗಿಯರಿಗೆ ಹೇಮಮಾಲಿನಿ ಪರಿಚಿತರೆ .ಅದು ಆಕೆಯ ನಿಜವಾದ ಹೆಸರಲ್ಲ. ವಯಸ್ಸಾದಾರೂ ಆಕೆಯನ್ನು ನೋಡಿದರೆ ಒಂದು ಕಾಲಕ್ಕೆ ಸುಂದರಿಯಾಗಿದ್ದಿರಬೇಕು ಎಂದೆನಿಸುತ್ತಿತ್ತು.ಹಳೇ ಜಮಾನಾ ಆಕೆಯನ್ನು ಆ ಹೆಸರನಿಂದ ಕರೆದಿರಬೇಕು.ದಾಟಿ ಹೋಗುವ ಕಾಲದಲ್ಲಿ ಇಂಥವರು ನಮ್ಮ ನಡುವೆ ಬಂದು ಹೋಗುತ್ತಾರೆ .ನಮ್ಮದಲ್ಲದ ದುರಂತಕ್ಕೆ ಪ್ರತಿಮೆ ಯಾಗುತ್ತಾರೆ .ಆಕೆ ಕಳೆದುಕೊಂಡ ಸಂಗತಿಗಳನ್ನು ಧಾರವಾಡದ ಬೀದಿ ಬೀದಿಯಲ್ಲಿ ಹುಡುಕುತ್ತಿದ್ದಳು. ಹುಡುಗ ಹುಡುಗಿಯರು ,ಹೆಚ್ಚಾಗಿ ನಿವೃತ್ತರು ಕಾಣುವ ಧಾರವಾಡದಲ್ಲಿ ಜಿಟಿ ಮಳೆ , ಮಿರ್ಚಿ ಬಜಿ ಚಾ , ಅಲ್ಲಲ್ಲಿ ಒಡೆದ ಹೇಮಾಮಾಲಿನಿಯ  ನೆನಪಿನ ಬಿಂಬಗಳು.ಯಾರ ಕನಸುಗಳಿಗೆ ಯಾರು ಬಣ್ಣ ಬಳಿಯುತ್ತಾರೋ? ,ಎಲ್ಲೋ ಕಳೆದುಕೊಂಡಿದ್ದನ್ನ ಇನ್ನೆಲ್ಲಿ ಹುಡುಕುತ್ತಾರೆಯೋ?ಹೇಮಾಮಾಲಿನಿ ಸತ್ತಳಂತೆ ಅಂತಾ ಸುದ್ದಿ ಗೊತ್ತಾದಾಗ ಇದೆಲ್ಲ ನೆನಪಾಯಿತು .ಹೋಗಿ ಬಾ ಹೇಮಾ ನಿನ್ನಂಥ ಲವ್ವರ್ ಗಳು ಎಷ್ಟೋ  ಜನ ಇನ್ನೂ ಧಾರವಾಡದಲ್ಲಿ ಇದ್ದಾರೆ.          ***********************

ಧಾರವಾಡದ ಹೇಮಾಮಾಲಿನಿ Read Post »

ಕಥಾಗುಚ್ಛ

ಅಲೀಕತ್ತು

ಅಲೀಕತ್ತು ಕಥೆ ಕೆ. ಎ. ಎಂ. ಅನ್ಸಾರಿ “ನಮ್ಮ ಮಗಳು ಆಮಿನಾ ಳಿಗೆ ವಯಸ್ಸು ಹನ್ನೆರಡು ಆಯಿತಲ್ಲವೇ…? ಇನ್ನು ಒಂದೆರಡು ವರ್ಷ ಆದ್ರೆ ಮದುವೆ ಗಂಡು ಹುಡುಕಬೇಕು… ಅದಕ್ಕಿಂತ ಮೊದಲು ಅವಳಿಗೆ ಅಲೀಕತ್ತು ತೊಡಿಸಬೇಕಲ್ಲಾ…” ಪೋಕರ್ ಹಾಜಿ ಮಡದಿ ಪಾತುವಿನಲ್ಲಿ ಹೇಳುವುದು  ಆಮಿನಾಳಿಗೆ ಕೇಳಿಸುತ್ತಿತ್ತು ಅಲೀಕತ್ತು ಎಂಬ ಪದ ಕೇಳುತ್ತಿದ್ದಂತೆಯೇ ಅಪ್ಪನ ಮಂಚದ ಕೆಳಗೆ ಮಲಗಿದ್ದ ಅಮಿನಾ ನಾಚಿ ನೀರಾದಳು… ಅವಳಿಗೆ ಬಂಗಾರವೆಂದರೆ ಪ್ರಾಣ. ಆಮಿನಾ ಕೇಳಿಸಿಕೊಂಡವಳಂತೆ ನಟಿಸಲಿಲ್ಲ.. ಅವಳಷ್ಟಕ್ಕೆ ಚಾಪೆಯಲ್ಲಿ ಹೊರಳಾಡುತ್ತಿದ್ದಳು… … ರಾತ್ರಿ ಸುಮಾರು ಗಂಟೆ 12 ಕಳೆದಿರಬಹುದು.. ಆಮಿನಾಳಿಗೆ ನಿದ್ದೆಯಿಲ್ಲ. ಅಪ್ಪನ ಗೊರಕೆ ಸದ್ದು ಕೇಳಿಸುತ್ತಿತ್ತು.. ಅಮ್ಮ  ತನ್ನ ಪಕ್ಕದಲ್ಲಿ ಗಾಢ ನಿದ್ದೆಯಲ್ಲಿದ್ದಳು.. ಆಮಿನಾ ಎದ್ದು ಮೆಲ್ಲಗೆ ಸದ್ದು ಮಾಡದೆ ಬಚ್ಚಲು ಮನೆಯತ್ತ ನಡೆದಳು… ಬಚ್ಚಲು ಮನೆಗೆ ಹೊರಡುವಾಗ ಅಪ್ಪ ಮೀಸೆ ಕತ್ತರಿಸುವಾಗ ಬಳಸುತ್ತಿದ್ದ ಕನ್ನಡಿ ಒಯ್ಯಲು ಮರೆಯಲಿಲ್ಲ. ಬಚ್ಚಲು ಮನೆಯಲ್ಲಿ ಚಿಮಿಣಿ ದೀಪದ ಬೆಳಕು ಏರಿಸುತ್ತಾ ತನ್ನ ಮೊಗವನ್ನೊಮ್ಮೆ ನೋಡಿದಳು. ಕನ್ನಡಿ ನೋಡಿ ನಕ್ಕಳು… ಕನ್ನಡಿಯಲ್ಲಿ ಕಿವಿಯನ್ನು ನೋಡುತ್ತಾ ಸಂಭ್ರಮಿಸಿದಳು.. ಕತ್ತಲ್ಲಿ ಇದ್ದ ಬೆಳ್ಳಿಯ ಸರವನ್ನು ಸರಿಪಡಿಸಿ ತನ್ನ ಎದೆಯನ್ನೊಮ್ಮೆ ನೋಡಿ ನಾಚಿದಳು. … ಅಪ್ಪನ ಕೆಮ್ಮುವ ಸದ್ದು ಕೇಳಿಸುತ್ತಿದ್ದಂತೆ ಭಯದಿಂದ ಚಿಮಿಣಿ ದೀಪ ಮತ್ತು ಕನ್ನಡಿಯೊಂದಿಗೆ ಜಾಗ ಖಾಲಿ ಮಾಡಿ ಏನೂ ಅರಿಯದವಳಂತೆ ಸ್ವಸ್ಥಾನದಲ್ಲಿ ಬಂದು ಮಲಗಿದಳು.. ನಾಳೆ ಬಟ್ಟೆ ಒಗೆಯಲು ಹೋಗುವಾಗ ಈ ವಿಷಯ ಗೆಳತಿ ಗುಬ್ಬಿಯಲ್ಲಿ ಮತ್ತು ಅತೀಕಾ ಳಲ್ಲಿ ಹೇಳಬೇಕು ಎಂದು ತೀರ್ಮಾನಿಸಿದಳು… .. ರಾತ್ರಿಯ ನಿದ್ದೆ ಕೈಕೊಟ್ಟ ಕಾರಣ ಎಂದಿನ ಸಮಯಕ್ಕೆ ಆಮಿನಾ ಎಚ್ಚರಗೊಳ್ಳಲಿಲ್ಲ. ಅಮ್ಮ ನಮಾಜು ಮಾಡಿ ಬಂದ ನಂತರ ಕರೆದಳು.. ಗಂಟೆ 6 ಕಳೆಯಿತು. ನಮಾಜು ಮಾಡಿ ನಂತರ ಬೇಕಿದ್ದರೆ ಮಲಗು… ಆಮಿನಾ ಥಟ್ಟನೆ ಎದ್ದು ಬಚ್ಚಲು ಕೋಣೆಗೆ ಓಡಿದಳು.. ವುಜೂ ಮಾಡಿ ನಮಾಜಿಗೆ ನಿಂತಳು… ನಮಾಜಿಗೆಂದು ನಿಂತಿದ್ದರೂ ಮನಸ್ಸು ಮಾತ್ರ ನಿನ್ನೆ ರಾತ್ರಿಯ ಸಂಭಾಷಣೆಯ ಪ್ರತಿಫಲನ.. .. “ಅಮ್ಮಾ ಅಪ್ಪ ಎಲ್ಲಿ… ?” “ಅಪ್ಪ ಬೆಳಗ್ಗೆ ಮಸೀದಿ ಹೋದವರು ಬಂದಿಲ್ಲ. ನಿನಗೆ ಅಲೀಕತ್ತು ತೋಡಿಸಬೇಕು. ಉಸ್ತಾದರಲ್ಲಿ ಸಮಯ ನಿಶ್ಚಯಿಸಿ ಅಕ್ಕ ಸಾಲಿಗನ ಹತ್ತಿರ ಹೋಗಿ ಬರುತ್ತಾರೆ…” ಅಮ್ಮ ಪಾತು ದೋಸೆ ಹುಯ್ಯುತ್ತಾ ಉತ್ತರಿಸುತ್ತಿದ್ದಳು. ತನಗೆ ಏನೂ ಅರಿವಿಲ್ಲದಂತೆ ಆಮಿನಾ ದೋಸೆಯ ತುಂಡೊಂದನ್ನು ತೆಗೆದು ತಿನ್ನ ತೊಡಗಿದಳು. .. ಇನ್ನೇನು ಚಹಾ ಕುಡಿದು ಮುಗಿಯಲಿಲ್ಲ.. ಅಷ್ಟ್ಹೊತ್ತಿಗೇ ಆಮಿನಾ ಎಂಬ ಕೂಗು ಕೇಳಿಸಿತು.. ಕೂಗು ಕೇಳಿಸುತ್ತಿದ್ದಂತೆ ಬಕೆಟ್ ತುಂಬಾ ಬಟ್ಟೆ ತುಂಬಿಸುತ್ತಾ.. “ಹಾಂ ಬಂದೆ ಗುಬ್ಬಿ”  ಎನ್ನುತ್ತಾ ಗೇಟು ತೆಗೆದು ಹೊರ ನಡೆದಳು. ಇಬ್ಬರೂ ಕೂತು ಬಕೆಟಿನಿಂದ ಬಟ್ಟೆ ತೆಗೆಯುತ್ತಾ ಹೊಳೆದಡದಲ್ಲಿ ಮಾತಿಗಾರಂಭಿಸಿದರು.  ರಾತ್ರಿ ನಡೆದ ಸಂಭಾಷಣೆಯನ್ನು ಎಳೆ ಎಳೆಯಾಗಿ ವಿವರಿಸತೊಡಗಿದಳು. ಅಂದ ಹಾಗೆ ಗುಬ್ಬಿ ಈಕೆಯಿಂದ ಎರಡು ವರ್ಷ ದೊಡ್ಡವಳು… ಅಷ್ಟ್ಹೊತ್ತಿಗೆ  ಅತೀಕಾ ಕೂಡಾ ಹೊಳೆ ಪಕ್ಕದಲ್ಲಿ ಬಂದು ಸೇರಿದಳು. ಅತೀಕಾ ಮೆತ್ತಗೆ ಆಮಿನಾಳ ಕೆನ್ನೆಗೆ ಚಿವುಟುತ್ತಾ .. “ಹಾಂ ಮದುವೆಗೆ ಮುನ್ನುಡಿ ಆಯ್ತು ಅಂತ ಹೇಳು.. ಅಲೀಕತ್ತು ಬಂದ್ರೆ ಬರುವ ಒಂದೆರಡು ವರ್ಷಗಳಲ್ಲಿ ಮದುವೆ ಗ್ಯಾರಂಟಿ .. ಅನ್ನು.” ಆಮಿನಾ ನಾಚಿ ನೀರಾದಳು.. …. ಮಧ್ಯಾಹ್ನ ಒಗೆದು ತಂದಿದ್ದ ಬಟ್ಟೆಯನ್ನೆಲ್ಲಾ ಒಣಗಲು ಹಾಕುತ್ತಿದ್ದ ಆಮಿನಾಳಿಗೆ ಅಪ್ಪನ ಕೂಗು ಕೇಳಿಸಿತು… ಆಮಿನಾ … ಅಪ್ಪ ಹತ್ತಿರ ಕರೆದು ಬುದ್ದಿ ಮಾತು ಹೇಳತೊಡಗಿದ.  ‘ನೀನು ಈಗ ದೊಡ್ಡವಳಾಗಿದ್ದಿಯಾ .. ಮುಂಚಿನ ಹಾಗೆಲ್ಲಾ ಹೊಳೆ ಬದಿಯಲ್ಲಿನ ಬಟ್ಟೆ ಒಗೆತ ಕಡಿಮೆ ಮಾಡಬೇಕು. ನಾಡಿದ್ದು ಗುರುವಾರ ನಿನಗೆ ಅಲೀಕತ್ತು ತೊಡಿಸಲು ದಿನ ನಿರ್ಧರಿಸಲಾಗಿದೆ. ಹಾಂ ಬಾಪಾ … ಮರು ಮಾತನಾಡದೆ ಆಮಿನಾ ತನ್ನ ಕಾಯಕ ಮುಂದುವರಿಸಿದಳು.. … ಆಮಿನಾಳ ಖುಷಿ ಏನೋ ಮಾಯವಾದಂತೆ ಕಂಡಿತು ತಾಯಿ ಪಾತುವಿಗೆ. ಸದ್ಯ ಏನೂ ಕೇಳುವುದು ಬೇಡವೆಂದು ಸುಮ್ಮನಿದ್ದಳು. ಮಧ್ಯಾಹ್ನ ಊಟ ಮಾಡಿ ಮಲಗಿದ ಆಮಿನಾಳಿಗೆ ವಿಪರೀತ ಹೊಟ್ಟೆನೋವು…. ಅಮ್ಮ ಬಂದು ಹೊಟ್ಟೆ ಒತ್ತಿ ನೋಡಿಯಾಯಿತು… ಕಿಬ್ಬೊಟ್ಟೆಯ ಹತ್ತಿರ ಒತ್ತಿ ನೋಡುತ್ತಾ.. ಈಗ ನೋವಿದೆಯಾ ಅಮ್ಮ ಕೇಳಿದಾಗ ಹಾಂ.. ಎಂದು ಉತ್ತರಿಸಿದಳು. ಸರಿ ನೀ ಮಲಗಿರು. ಸ್ವಲ್ಪ ಹೊತ್ತಾದ ಮೇಲೆ ಎಲ್ಲಾ ಸರಿಯಾಗಬಹುದು ಎನ್ನುತ್ತಾ ಮುಗುಳ್ನಕ್ಕು ಪಾತು ಹೊರನಡೆದಳು. ಆಮಿನಾಳಿಗೆ ಒಂದೂ ಅರ್ಥವಾಗಲಿಲ್ಲ. ನಾನಿಲ್ಲಿ ಹೊಟ್ಟೆನೋವಿನಿಂದ ಸಾಯುತ್ತಿದ್ದರೂ ಅಮ್ಮನಿಗೆ ನಗು ಎಂದು ಮನಸ್ಸಲ್ಲೇ ಕೋಪಿಸಿದಳು. ನಂತರ ಕಿಟುಕಿಯಿಂದ ನೋಡಲು ಅಮ್ಮ,  ಅಪ್ಪನನ್ನು ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟುವುದು ಕಾಣಿಸಿತು. ಆಮಿನಾ ಮಲಗಿಯೇ ಇದ್ದಳು. ಅಮ್ಮ ಬಂದು ಕಿವಿಯಲ್ಲಿ..,”ನೀನು ದೊಡ್ಡವಳಾಗಿದ್ದಿ ಅಷ್ಟೇ.. ಭಯವೇನೂ ಬೇಡ. ಒಂದೆರಡು ದಿನ ಹೀಗೆ ಇರುತ್ತೆ’ ಎಂದು ಸಮಾಧಾನಪಡಿಸಿದಳು. ಥಟ್ಟನೆ ಅವಳಿಗೆ ಗುಬ್ಬಿ ಮತ್ತು ಅತೀಕಾ ಇದರ ಬಗ್ಗೆ ಹೇಳಿದ್ದು ನೆನಪಿಗೆ ಬಂತು. ಆಮಿನಾ ನಾಚಿ ನೀರಾದಳು. ಜೊತೆಗೆ ಮನಸ್ಸಿಗೆ ಏನೋ ಒಂದು ರೀತಿಯ ಖುಷಿ. ದಿನಗಳು ಓಡತೊಡಗಿತು.. ಅಕ್ಕಸಾಲಿಗ ಬಂದು ಕಿವಿ ಚುಚ್ಚಿ ಅಲೀಕತ್ತು ತೊಡಿಸಿ ಚೀಲದಲ್ಲಿ  ವೀಳ್ಯದೆಲೆ, ಅಕ್ಕಿ, ಅಡಿಕೆ ತುಂಬಿಸಿ ದಕ್ಷಿಣೆ ತಗೊಂಡು ಎಲೆ ಅಡಿಕೆ ಜಗಿಯುತ್ತಾ ಹೊರಹೋದ.. ಆಮಿನಾಳಿಗೆ ದಿನಕ್ಕೆ ಹತ್ತು ಹದಿನೈದು ಸಲ ಕನ್ನಡಿ ನೋಡುತ್ತಾ ತನ್ನ ಸೌಂದರ್ಯ ನೋಡುವುದೇ ಅಭ್ಯಾಸವಾಗಿ ಹೋಗಿತ್ತು. ಅಡಿಯಿಂದ ಮುಡಿವರೆಗೆ ತನ್ನನ್ನೇ ಕನ್ನಡಿಯಲ್ಲಿ ನೋಡುತ್ತಾ ಖುಷಿ ಪಡುತ್ತಿದ್ದಳು. ವರುಷ ಒಂದು ಕಳೆಯಿತು. ಒಂದು ದಿನ ರಾತ್ರಿ ಅಪ್ಪ ಪಾತುವಿನಲ್ಲಿ ಹೇಳುತ್ತಿದ್ದ. ಮಗಳಿಗೆ ವರ್ಷ 14 ಆಯಿತು. ಸಯ್ಯದ್ ಬ್ಯಾರಿ ಒಬ್ಬ ಒಳ್ಳೆಯ ಸಂಬಂಧ ಇದೆ ಅಂತ ಹೇಳಿದ್ದಾನೆ. ನಮಗಾದರೆ ಗಂಡಾಗಿ ಹೆಣ್ಣಾಗಿ ಇರುವುದು ಒಂದೇ ಕುಡಿ. ಇನ್ನು ತಡ ಮಾಡುವುದು ಬೇಡ ಎಂದು ತೀರ್ಮಾನಿಸಿ ನಾಡಿದ್ದು ಆದಿತ್ಯವಾರ ಹುಡುಗನ ಕಡೆಯವರನ್ನು ಬರಲು ಹೇಳಿದ್ದೇನೆ. ಅವನೂ ಒಬ್ಬನೇ ಒಬ್ಬ ಮಗನಂತೆ. ಒಳ್ಳೆಯ ತರವಾಡು.. ನಾವು ಹತ್ತಿರದ ಒಂದಿಬ್ಬರು ಸಂಬಂಧಿಕರನ್ನು ಮಾತ್ರ ಕರೆಯೋಣ… ಶನಿವಾರ ಸಂಜೆ ಹೊತ್ತಿಗೆ ಅತೀಕಾ ಮತ್ತು ಗುಬ್ಬಿ ಆಮಿನಾಳ ಮನೆಗೆ ಬಂದರು. ಕೈಗಳಿಗೆ ಮೆಹಂದಿ ಹಚ್ಚುತ್ತಾ ಕೀಟಲೆ ಮಾಡತೊಡಗಿದರು.. “ಹೋಗೇ” ಎಂದು ಬೈದರೂ ಮನಸ್ಸಿನಲ್ಲಿ ಪ್ರಕಟಿಸಲಾಗದ ಖುಷಿಯನ್ನು ಅವಳ ಮುಖಭಾವ ಹೇಳುತ್ತಿತ್ತು. ಆದಿತ್ಯವಾರ ಬೆಳಿಗ್ಗೆಯೇ ಪೋಕರ್ ಹಾಜಿಯ ಇಬ್ಬರು ಅಣ್ಣಂದಿರು ಮತ್ತು ಅವರ ಮಡದಿಯರು ಹಾಜರಾದರು. ತುಪ್ಪದ ಊಟ, ಕೋಳಿ ಸಾರು ಎಲ್ಲಾ ತಯಾರಾಯಿತು. ಮಧ್ಯಾಹ್ನದ ಹೊತ್ತು ಅಂಬಾಸಿಡರ್ ಕಾರಿನಲ್ಲಿ ಮದುಮಗನೊಂದಿಗೆ ಆತನ ಅಪ್ಪ ಅಮ್ಮ ಮತ್ತು ಒಂದಿಬ್ಬರು ಹೆಂಗಸರು ಇಳಿದು ಬಂದರು. ಆಮಿನಾ ಕಿಟುಕಿಯಿಂದ ಇಣುಕಿ ನೋಡುತ್ತಿದ್ದಳು… ಬಿಳಿ ಮೈಬಣ್ಣ, ತಲೆಗೊಂದು ಟೋಪಿ .. ಅಚ್ಚುಕಟ್ಟಾಗಿ ಟ್ರಿಮ್ ಮಾಡಿದ ಗಡ್ಡ…. ಮೊದಲ ನೋಟದಲ್ಲೇ ಇಷ್ಟವಾಯಿತು. ಚಾ ತಿಂಡಿ ಕಳೆದು ಪೋಕರ್ ಹಾಜಿ…. ,, ‘ಪಾತೂ.. ಹುಡುಗನಿಗೂ ನಮ್ಮ ಮಗಳನ್ನೊಮ್ಮೆ ತೋರಿಸು.. ಅವನಿಗೆ ಇಷ್ಟ ಆದ್ರೆ ಅಲ್ಲವೇ ಮುಂದಿನ ಮಾತು…” ನಗುತ್ತಾ ಹೇಳಿದ. ಹುಡುಗನೊಂದಿಗೆ ಬಂದ ಹೆಂಗಸರು ಒಳಗೆ ಕರೆದಾಗ ಹುಡುಗ ಅದನ್ನೇ ಕಾಯುತ್ತಿದ್ದವನಂತೆ ಬೇಗನೆ ಒಳ ನಡೆದ. ತಲೆಗೆ ಮಿನುಗುವ ಶಾಲು. ಆ ಶಾಲನ್ನು ಬೇಕೆಂತಲೇ ಕಿವಿ ಕಾಣುವಂತೆ ತಲೆಗೆ ಹಾಕಿದ್ದಳು. ಕಿವಿ ಮುಚ್ಚಿದರೆ ಅಲೀಕತ್ತು ದರ್ಶನವಾಗದು ಅಲ್ವೇ…? ಹುಡುಗ ಕೊಠಡಿಗೆ ಕಾಲಿಡುತ್ತಿದ್ದಂತೆಯೇ ತನ್ನೆರಡೂ ಕೈಗಳಿಂದ ಮುಖ ಮುಚ್ಚಿದಳು. ಮುಚ್ಚಿದ ಕೈಗಳ ಎಡೆಯಿಂದ ಹೊಳೆವ ಎರಡು ಕಣ್ಣುಗಳು ಕಾಣಿಸುತ್ತಿತ್ತು.. ಹುಡುಗನೊಂದಿಗೆ ಬಂದಿದ್ದ ಹೆಂಗಸರು ಆಕೆಯ ಕೈ ಯನ್ನು ಹಿಂದಕ್ಕೆ ಸರಿಸಿ ಹುಡುಗನಿಗೆ ಮುಖ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು. ಆಮಿನಾಳ ಕಣ್ಣು ಹೊಳೆಯುತ್ತಿತ್ತು.. ಜತೆಗೆ ಮೈಯೆಲ್ಲಾ ಬೆವರಿತ್ತು…. ಮುಖ ದರ್ಶನದ ನಂತರ .. “ನನಗೆ ಇಷ್ಟವಾಯಿತು” ಎಂಬ ಒಂದೇ ಒಂದು ಮಾತು ಹೊರಬಂತು. ಆಮಿನಾಳಿಗೆ ದೇಹವೆಲ್ಲಾ ವಿದ್ಯುತ್ ಸಂಚಾರವಾದ ಅನುಭವ. ಸಂತಸವ ವಿವರಿಸಲು ಪದಗಳಿಲ್ಲ.  ಊಟದ  ನಂತರ ಮಾತುಕತೆ.. ಎಲ್ಲವೂ ಮುಗಿದು ಎರಡು ವಾರದೊಳಗೆ ಮದುವೆ ಎಂದು ದಿನವೂ ನಿಶ್ಚಯಿಸಲಾಯಿತು. ಆಮಿನಾಳಿಗೆ ನಿದ್ದೆಯಿಲ್ಲದ ರಾತ್ರಿಗಳು. ಕೈ ಬೆರಳಿನಿಂದ ದಿನಗಳನ್ನು ಎಣಿಸುತ್ತಿದ್ದಳು. ಅಪ್ಪನಿಗೂ ಚಿಂತೆ ಇಲ್ಲ ಎಂದಲ್ಲ. ಮದುವೆ ಅಂದಮೇಲೆ ಒಡವೆ ವಸ್ತ್ರಗಳು ಬೇಕು.. ಅಪ್ಪ ಹಣದ ಬಗ್ಗೆ ಲೆಕ್ಕ ಹಾಕುತ್ತಿದ್ದ.. ಅಮ್ಮನಿಗೂ ಬಿಡದ ಚಿಂತೆ.. 14 ವರ್ಷ ಸಾಕಿ ಸಲುಹಿದ ಒಬ್ಬಳೇ ಒಬ್ಬಳು ಮಗಳನ್ನು ಕಳುಹಿಸಿಕೊಡಬೇಕು. ಜೊತೆಗೆ ನಾಲ್ಕು ಹಸುಗಳು.. ಅವುಗಳಿಗೆ ಸರಿಯಾದ ಸಮಯಕ್ಕೆ ಹುಲ್ಲು ಹಾಕಬೇಕು.. ಸಂಜೆ ಹೊತ್ತಿಗೆ ಹಟ್ಟಿಯಲ್ಲೂ ಕಟ್ಟಬೇಕು… ಆಮಿನಾಳು ಗಂಡನ ಮನೆ ಸೇರಿದರೆ ಹಸುವಿನ ಆರೈಕೆಯೂ ಬೇರೆ ಪಾತುವಿನ ಹೆಗಲಿಗೆ ಬರುತ್ತದೆ. ಪಾಲನೆ ಕಷ್ಟ ಆಗುವುದು ಎಂದು ಹಸುವನ್ನು ಮಾರಲೂ ಆಗದು. 20 ಲೀಟರ್ ಹಾಲು.. ಇದೊಂದು ಪ್ರಮುಖ ಆದಾಯ ಮಾರ್ಗ. ಚುಟುಕಾಗಿ ಹೇಳುವುದಿದ್ದರೆ ಮೂವರಿಗೂ ಬೇರೆ ಬೇರೆ ರೀತಿಯ ಚಿಂತೆಗಳು. ಬೆಳಿಗ್ಗೆ ಅಮ್ಮ ಮಗಳ ಮಾತಿನ ನಡುವೆ ಅಮ್ಮಳ ಒಂದು ಚಿಕ್ಕ ಪ್ರಶ್ನೆ… “ಆಮಿನಾ ನಿನಗೆ ಯಾವ ರೀತಿಯ ಒಡವೆ ಇಷ್ಟ ?”  ಒಲ್ಲದ ಮನಸ್ಸಿನಿಂದಲೇ ಅಮ್ಮನಲ್ಲಿ ಒಂದು ವಿಷಯ ಹೇಳಿದಳು. “ಅಮ್ಮಾ .. ಒಡವೆ ರೂಪದಲ್ಲಿ ನನಗೆ ಇಷ್ಟವಾಗಿರೋದು ಅಲೀಕತ್ತು ಮಾತ್ರ.  ಇರುವ ಅಲೀಕತ್ತು ಚಿಕ್ಕದು. ಮಾಲೆ ಸರ ಏನೂ ಬೇಡ.. ಸ್ವಲ್ಪ ಗಟ್ಟಿಯುಳ್ಳ ಅಲೀಕತ್ತು ಮಾತ್ರ ಸಾಕು.” ಅವಳ ಅಲೀಕತ್ತು ಪ್ರೀತಿಯನ್ನು ಕಂಡು ಆಶ್ಚರ್ಯ ಪಟ್ಟರೂ ತೋರ್ಪಡಿಸದೆ.. ಹಾಗೇ “ಆಗಲಿ. ಅಪ್ಪನಲ್ಲಿ ಹೇಳಿ ಹೊಸದು ಮಾಡಿಸೋಣ” ಎಂದು ಸಮ್ಮತಿ ಸೂಚಿಸಿದಳು. ಮದುವೆ ಅದ್ದೂರಿಯಾಗಿ ನಡೆಯಿತು. ಗಂಡು-ಹೆಣ್ಣಿನ ಕಡೆಯವರಿಂದ ಒಂದೇ ಮಾತು. ಮದುಮಗಳ ಅಲೀಕತ್ತು ಸೂಪರ್… ಈ ಮಾತು ಕೇಳಿಸುತ್ತಿದ್ದಂತೆ ಆಮಿನಾಳಿಗೆ ಮಾತ್ರವಲ್ಲ ಅಮ್ಮನಿಗೂ ಖುಷಿಯಾಗುತ್ತಿತ್ತು. ಅಮೀನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು. ಸುಮಾರು ಒಂದುವಾರ ಮದುಮಗ ಮನೆಯಲ್ಲಿಯೇ ಇದ್ದ. ಆಮಿನಾಳಿಗೆ ಸ್ವರ್ಗ ಸುಖದ ಅನುಭವ. ದಿನಗಳುರುಳುತ್ತಿತ್ತು. ಪೇಟೆಯಲ್ಲಿ ಅಂಗಡಿ ಇಟ್ಟಿದ್ದ ಗಂಡ ಇಬ್ರಾಹಿಂ ವಾಪಸ್ ಬರುವಾಗ ರಾತ್ರಿ ಗಂಟೆ ಹತ್ತು ಕಳೆಯುತ್ತಿತ್ತು. ಮೊದ ಮೊದಲು ಕಷ್ಟವಾದರೂ ಕ್ರಮೇಣ ಅಭ್ಯಾಸವಾಗಿ ಹೋಗಿತ್ತು. ಈ ನಡುವೆ ಆಮಿನಾ ಕುಟುಂಬಕ್ಕೆ ಮೊದಲ ಶಾಕ್ ಉಂಟಾಯಿತು. ಅಪ್ಪ ಪೋಕರ್ ಹಾಜಿಯ ಅಕಾಲಿಕ ಮರಣ. ಇಡೀ ಕುಟುಂಬವೇ ಕಣ್ಣೀರಲ್ಲಿ ಮುಳುಗಿತು. ಹೇಗೋ ಸುಧಾರಿಸಿ ಜೀವನ ಚಕ್ರ ನಡೆಯುತ್ತಿತ್ತು. ವಾರಕ್ಕೊಂದು ಸಲ ಆಮಿನಾ ಳು ಕೂಡಾ ಅಮ್ಮನ ಮನೆಗೆ ಬಂದು ಹೋಗುತ್ತಿದ್ದಳು. ಪ್ರತಿ ತಿಂಗಳೂ ಅಮ್ಮ ಹಾಗೂ ಅತ್ತೆ ಮನೆಯಿಂದ ಒಂದೇ ಪ್ರಶ್ನೆ… “ಹೀಗೆ ಇಬ್ಬರು ಮಾತ್ರ ಇದ್ದರೆ ಸಾಕಾ…? ಒಂದು ಮಗುವಿನ ಬಗ್ಗೆ ಇನ್ನೂ ಚಿಂತಿಸಿಲ್ಲವೇ ?”. “ದೇವರು ಯಾವಾಗ ಕೊಡುತ್ತಾನೋ ಆವಾಗ ಸಂತೋಷದಲ್ಲಿ ಸ್ವೀಕರಿಸೋಣ” ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ಇಬ್ರಾಹಿಂ. ಜೀವನ ರಥ ಸಾಗುತ್ತಿತ್ತು. ಒಂದು ದಿನ ರಾತ್ರಿ ಗಂಟೆ ಹತ್ತು ಕಳೆದರೂ ಇಬ್ರಾಹಿಂ ಬರಲಿಲ್ಲ. ಚಾವಡಿಯಲ್ಲಿ ಕೂತು ಸುಸ್ತಾದ ಆಮಿನಾಳ ಮೈಯೆಲ್ಲಾ ಬೆವರ ತೊಡಗಿತು. ಗಂಟೆ ಹನ್ನೊಂದು ದಾಟಿತು.. ಇಲ್ಲ… ಇನ್ನೂ ಬರದೇ ಇದ್ದಾಗ  ಆಮಿನಾ ಆಗಲೇ ನಿದ್ದೆಗೆ ಜಾರಿದ್ದ ತನ್ನ ಅತ್ತೆ ಮಾವನವರನ್ನು ಕೂಗಿ ಎಬ್ಬಿಸಿದಳು… “ಏನು ಮಾಡುವುದು…?” “ಎಲ್ಲಿ ಹೋಗಿರಬಹುದು..?” “ಇದುವರೆಗೂ ಹೇಳದೆ ಎಲ್ಲೂ ಹೋದವನಲ್ಲ.  ಇನ್ನೂ ಸ್ವಲ್ಪ ಕಾಯೋಣ…” ಮೂವರೂ

ಅಲೀಕತ್ತು Read Post »

ಕಥಾಗುಚ್ಛ

ನಾಯಿ ಮತ್ತು ಬಿಸ್ಕತ್ತು

ಕಿರು ಕಥೆ ನಾಗರಾಜ ಹರಪನಹಳ್ಳಿ ಆತ ದಂಡೆಗೆ ಬಂದು ಕುಳಿತ. ಎಲ್ಲಾ ಕಡೆ ಬಂಧನಗಳಿಂದ ಬಿಗಿದ‌ ಜಗತ್ತು ಸಾಕೆನಿಸಿತ್ತು.‌ ರಸ್ತೆಗಳೆಲ್ಲೆ ಮಕಾಡೆ ಮಲಗಿದ್ದವು. ಜನರ ಸುಳಿವಿಲ್ಲ.‌ಮುಚ್ಚಿದ  ಹೋಟೆಲ್ಲು, ಲಾಡ್ಜು, ಅಂಗಡಿ ಬಾಗಿಲು. ಗೂಡಂಗಡಿಗಳು ಬಲವಾದ ಹಗ್ಗಗಳಿಂದ ಬಂಧಿಸಲ್ಪಟ್ಟಿದ್ದವು.‌‌ ಇಡೀ ನಗರ ಸತ್ತು ಹೋಗಿತ್ತು. ಬಿಕೊ ಅನ್ನುತ್ತಿದ್ದ ಬಸ್ ಸ್ಟ್ಯಾಂಡ್. ‌ಬಿಕ್ಷುಕುರ ಸುಳಿವು ಸಹ ಇಲ್ಲ.ಮನುಷ್ಯರ ಸುಳಿವಿಲ್ಲ. ಪ್ರತಿ ಸರ್ಕಲ್ ‌ನಲ್ಲಿ ಸುರಿವ ಉರಿ ಬಿಸಿಲಲ್ಲಿ ಖಾಲಿ ರಸ್ತೆಗಳನ್ನು ಪೊಲೀಸರು ಕಾಯುತ್ತಿದ್ದರು. ಭೀತಿ ಮತ್ತು ಭಯ ಸ್ಪರ್ಧೆಗೆ ಬಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಕುಣಿದಾಡುತ್ತಿದ್ದವು .ಜನರಿಲ್ಲದೇ ಆಸ್ಪತ್ರೆಗಳು ಸಹ ದುಃಖಿಸುತ್ತಿದ್ದವು. ಔಷಧಿ ಅಂಗಡಿ ಮಾತ್ರ ತೆರೆದು ಕೊಂಡಿದ್ದು ಕೌಂಟರ್ ನಲ್ಲಿ ಒಬ್ಬ ಪೇಪರ್ ಹಿಡಿದು ಆದ್ಹೇನೋ‌ ಜಗತ್ತು ತಲೆ ಮೇಲೆ ಬಿದ್ದಂತೆ ತದೇಕ ಧ್ಯಾನಸ್ಥನಾಗಿ ಅಕ್ಷರದತ್ತ ದೃಷ್ಟಿ ನೆಟ್ಟಿದ್ದ .‌ಇದನ್ನೆಲ್ಲಾ ಕಣ್ತುಂಬಿ‌ ಕೊಂಡ ರಾಮನಾಥ ದಂಡೆಯಲ್ಲಿ ಧ್ಯಾನಿಸುತ್ತಿದ್ದ. ಆಗ ತಾನೇ ಕೋವಿಡ್ ಲ್ಯಾಬ್ ನಲ್ಲಿ ಅ ದಿನ ಬಂದ ಐವತ್ತು ಜನರ ಗಂಟ ದ್ರವ ಪರೀಕ್ಷೆ ಮಾಡಿ, ಜೀವವನ್ನು ಕೈಯಲ್ಲಿ ಹಿಡಿದು ಬಂದಿದ್ದ.‌ ಅಂದು ಬಂದ ಐವತ್ತು ಸಂಶಯಿತ ಕರೋನಾ ಗಂಟಲು ದ್ರವದಲ್ಲಿ ಹದಿನೆಂಟು ಜನರ ಗಂಟಲು ದ್ರವದಲ್ಲಿ ಕೋವಿಡ್ ೧೯ ವೈರಸ್ ಇರುವುದು ದೃಢಪಟ್ಟಿತ್ತು.‌ ತನ್ನ ಜೀವಮಾನದಲ್ಲಿ ಮನುಷ್ಯರು, ವೈದ್ಯರು, ಅಧಿಕಾರಿಗಳು…. ಎಲ್ಲರೂ ಗಡಿಬಿಡಿ , ಒಂಥರಾ ಅವ್ಯಕ್ತಭಯದಲ್ಲಿ ಇದ್ದುದ ರಾಮನಾಥ ಮೊಟ್ಟ ಮೊದಲ ಬಾರಿಗೆ ನೋಡಿದ್ದ.‌ತನ್ನ ಕೆಲಸವನ್ನು ನಿರ್ಲಿಪ್ತತೆಯಿಂದ‌ ಮುಗಿಸಿ ಬಂದಿದ್ದ ಆತ ಜೀವನದ ನಿರರ್ಥಕ ‌ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೋ ಅಥವಾ ವರ್ತಮಾನ ಕುಸಿಯುವುದನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದೇನೋ ಎಂದು ತರ್ಕಿಸುತ್ತಾ ಕುಳಿತಿದ್ದ. ಇದ್ದಕ್ಕಿದ್ದಂತೆ ಓರ್ವ ವ್ಯಕ್ತಿ ದುತ್ತನೇ ಎದುರಾಗಿ ಮಾತಿಗಿಳಿದ.‌ “ಏನ್ ಸರ್ ಸರ್ಕಾರ ಮಾಡಿದ್ದು ಸರಿಯಾ? ನಾ ಕುಡಿಯದೇ ಬದುಕಲಾರೆ.‌ ಲಿಕ್ಕರ್ ಶಾಪ್ ಮುಚ್ವಿದ್ದು ಸರಿಯೇ” ಎಂದು ಪ್ರಶ್ನಿಸಿದ.‌ ರಾಮನಾಥಗೆ  ಕಸಿವಿಸಿಯಾಯ್ತು.‌ಬಗೆಹರಿಸಲಾಗದ ಇವನ ಪ್ರಶ್ನೆಗೆ ಉತ್ತರ ಎಲ್ಲಿಂದ ತರುವುದು ಎಂದು? ಸರಿಯಲ್ಲ ಎಂದು ತಲೆ ಅಲ್ಲಾಡಿಸಿ ಮತ್ತೆ ನಿರ್ಲಿಪ್ತನಾದ.‌ ಹಠಾತ್ ಎದುರಾದ ವ್ಯಕ್ತಿ ಅಲ್ಲಿಂದ ನಡೆದು‌‌ಹೋದ.‌ಅವನನ್ನು‌ ನಾಯಿಯೊಂದು ಹಿಂಬಾಲಿಸಿತು.‌ ಮನ ತಣಿಯುವಷ್ಟು ದಂಡೆಯಲ್ಲಿ ಕುಳಿತ ರಾಮನಾಥ ಎದ್ದು ಮನೆ ಕಡೆ ನಡೆದ . ಅವನು ಒಬ್ಬಂಟಿ ಬೇರೆ. ಸಾಂಬರು ಕಟ್ಟಿಸಿಕೊಳ್ಳಲು‌ ಹೋಟೆಲ್ ‌ಗಳು  ಬೇರೆ ಬಂದ್ ಆಗಿವೆ.‌ ಅನ್ನ ಸಾರು ಅವನೇ ಬೇಯಿಸಿ ತಿನ್ನುವುದು ರೂಢಿಯಾಗಿತ್ತು ಲಾಕ್ ಡೌನ್ ಸಮಯದಲ್ಲಿ.‌ಮೊದಲಾದರೆ ಅನ್ನ ಮಾತ್ರ ಬೇಯಿಸಿಕೊಳ್ಳುತ್ತಿದ್ದ. ಇದೇ ಧಾವಂತದಲ್ಲಿ ಹೆಜ್ಜೆ ಹಾಕಿದವನಿಗೆ ದಾರಿಯಲ್ಲಿ ಹಠಾತ್ತನೇ ದಂಡೆಯಲ್ಲಿ ಪ್ರಶ್ನೆ ಎಸೆದ ವ್ಯಕ್ತಿ ಸಿಕ್ಕ. ಆತ ರಸ್ತೆ ಪಕ್ಕ ನಾಯಿಯೊಂದಿಗೆ ಮಾತಾಡುತ್ತಿದ್ದ. ಅದನ್ನೆ  ತನ್ನ ಜೀವದ ಭಾಗವೆಂಬಂತೆ ಅದಕ್ಕೆ ಬಿಸ್ಕತ್ತು ಹಾಕುತ್ತಾ …ತನ್ನ ದುಃಖವನ್ನೆಲ್ಲಾ  ನಾಯಿಯ ಕಣ್ಣಿಗೆ ವರ್ಗಾಯಿಸುತ್ತಾ ಅದ್ಹೇನೋ ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತಿದ್ದ. ಪ್ರತಿ ಮಾತಿಗೂ ಒಂದೊಂದೇ ಬಿಸ್ಕತ್ತಿನ‌ ತುಂಡುಗಳನ್ನು ಅದಕ್ಕೆ ಹಾಕುತ್ತಿದ್ದ.‌ ಮರದ ಕೆಳಗೆ ಈ‌ ಸಂಭಾಷಣೆ ನಡೆದಿತ್ತು. ಕುತೂಹಲದಿಂದ ರಾಮನಾಥ ಇದನ್ನು ಆಲಿಸತೊಡಗಿದ. ಲಿಕ್ಕರ್ ಹುಡುಕಿ ಹೊರಟ ಆ ಸಾಮಾನ್ಯ ಮೊದಲ ನೋಟಕ್ಕೆ ಕುಡುಕ ಅನ್ನಿಸಿದ್ದ. ಈಚೀಚೆಗೆ ಕೆಲಸವೂ ಇಲ್ಲದೇ, ಉಳಿಯಲು ಸೂರು ಇಲ್ಲದೇ ಅಂದಂದೆ ದುಡಿಯುವವರ  ಆಹಾರಕ್ಕೆ ಅಲೆದ‌ ಈ ಸತ್ತ ನಗರದಲ್ಲಿ‌ ;   ನಾಯಿ‌ ಹಸಿವಿಗೂ ಮಿಡಿವ, ಮನುಷ್ಯನ ಕಂಡು ಮನಸಲ್ಲೇ ಸಮಾಧಾನಿಯಾದ. ಅಷ್ಟರಲ್ಲಿ ಹಸಿದವರಿಗೆ ಊಟದ ಜೀಪ್ ನಲ್ಲಿ ಅನ್ನ ಸಾರು ತುಂಬಿದ ಪಾತ್ರೆ ಇಟ್ಟುಕೊಂಡು  ಹಸಿದವರಿಗೆ‌ ಹುಡುಕುವ  ಮದರ್  ಥೆರೇಸಾ ಟ್ರಸ್ಟನ ಸ್ಯಾಮಸನ್  ಎದುರಾದರು. ರಾಮನಾಥನನ್ನ ಕಂಡವರೇ   ಕೈ ಬೀಸಿದರು. ಅತ್ತ ನಾಯಿ‌ ಮತ್ತು ಕುಡುಕ ಮನುಷ್ಯ  , ಸ್ಯಾಮಸನರ  ಅನ್ನ ನೀಡುವ  ಜೀಪ್ ಬಂದ ದಿಕ್ಕಿ ನತ್ತ ಹೆಜ್ಜೆ ಹಾಕಿದರು. ಅದೇ‌ ಬೀದಿಯ ಪಿಡಬ್ಲುಡಿ ಕ್ವಾಟರ್ಸನಲ್ಲಿ ಕೊನೆಯ ಮೂಲೆಯ ಮನೆಯಲ್ಲಿದ್ದ ‌ಮೇರಿ  ಥಾಮಸ್  ಎಂಬ ಚೆಲುವೆ  ಬಾಗಿಲ  ಮರೆಯಲ್ಲಿ ನಿಂತು, ಎಂದಿನಂತೆ ರಾಮನಾಥನ ಕಂಡು ತಣ್ಣಗೆ ಮುಗುಳ್ನಕ್ಕಳು….. *****  

ನಾಯಿ ಮತ್ತು ಬಿಸ್ಕತ್ತು Read Post »

ಕಥಾಗುಚ್ಛ

ಅಮ್ಮಿಣಿ

ಕಿರುಗಥೆ ಕೆ. ಎ. ಎಂ. ಅನ್ಸಾರಿ ಅಮ್ಮಿಣಿಗೆ ಒಂದೇ ಚಿಂತೆ… ಸೂರ್ಯೋದಯಕ್ಕೆ ಮೊದಲೇ ಹೊರಡುವ ಗಂಡ ಸುಂದ ವಾಪಸ್ಸು ಬರುವಾಗ ಕತ್ತಲೆಯಾಗುತ್ತದೆ. ಖಂಡಿತಾ ಅವನು ಹೆಚ್ಚಿನ ಸಮಯ ಲಚ್ಚಿಮಿ ಯ ಗುಡಿಸಲಲ್ಲೇ ಕಳೆಯುತ್ತಿರಬಹುದು.  ರಾತ್ರಿ ತನ್ನ ಗುಡಿಸಲು ಸೇರಿದರೆ ಗದ್ದಲ ಬೇರೆ. ಸಾರಾಯಿ ಏರಿಸದೆ ಒಂದು ದಿನವೂ ಬಂದದ್ದಿಲ್ಲ. ಹಾಗೆಂದು ಮನೆ ಖರ್ಚಿಗೆ ಕೊಡುವುದಿಲ್ಲ ಎಂದಲ್ಲ. ಮಕ್ಕಳ ಮೇಲೆ ಪ್ರೀತಿಯಿದೆ .. ಆದರೂ ಆ ಲಚ್ಚಿಮಿ ಯ ಗುಡಿಸಲಲ್ಲಿ ಅವನಿಗೆ ಏನು ಇಷ್ಟು ಕೆಲಸ .. ? ಸೌಂದರ್ಯ ದಲ್ಲಿ ನಾನು ಅವಳಿಗಿಂತ ಕಮ್ಮಿಯೂ ಇಲ್ಲ ಅವಳಾದರೂ ಕರ್ರಗೆ ಕೋಲು ಮುಖದವಳು… ಗಂಡ ಸತ್ತ ಮೇಲೆ ಕೂಲಿ ನಾಲಿ ಮಾಡಿ ಜೀವಿಸುವವಳು. ಇರುವ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಆ ಸಂಪಾದನೆ ಸಾಕೇ ..? ತನ್ನ ಗಂಡ ಸುಂದ ಅವಳಿಗೂ ಖರ್ಚಿಗೆ ಕೊಡುತ್ತಿರಬಹುದೋ…  ?ಅಮ್ಮಿಣಿ ಹೊಸ್ತಿಲಲ್ಲಿ ಕೂತು ಚಿಂತಿಸುತ್ತಲೇ ಇದ್ದಳು. ಅಂಗಳದಲ್ಲಿ ಹಾಸಿದ್ದ ಓಲೆಬೆಲ್ಲವನ್ನು ಕೋಳಿ ಬಂದು ತಿನ್ನದೊಡಗಿದ್ದು ಅಮ್ಮಿಣಿಗೆ ಗೊತ್ತೇ ಆಗಲಿಲ್ಲ. ಪಕ್ಕದ ಮನೆ  ಜಾನಕಿ ಬಂದು ಕೋಳಿಯನ್ನು ಸುಯ್ ಸುಯ್ ಎಂದು ಓಡಿಸುತ್ತಲೇ .. ಅಮ್ಮಿಣಿ  ನೀನು ಏನು ಯೋಚನೆ ಮಾಡ್ತಾ ಇದ್ದೀಯಾ … ಓಲೆ ಬೆಲ್ಲ ಅರ್ಧವೂ ಕೋಳಿ ತಿಂದಾಯಿತು ಎನ್ನುವಾಗಲೇ ಎಚ್ಚರಗೊಂಡು ಎದ್ದು ಬಂದಳು. ಇಬ್ಬರೂ ಮಣೆ ಹಾಕಿ ಕುಳಿತು ಮಾತಿಗೆ ತೊಡಗಿದರು. ಅಲ್ಲ ಜಾನಕಿ .. ಈ ಸುಂದ ಹೋಗಿ ಹೋಗಿ ಆ ಮುಂಡೆ ಲಚ್ಚಿಮಿಯ ಹತ್ತಿರ ಕೂರುತ್ತಾನಲ್ಲ .. ಇದನ್ನು ಹೇಗೆ ತಡೆಯುವುದು  ಎನ್ನುವ ಪ್ರಶ್ನೆಗೆ ಈ ಮೊದಲೇ ವಿಷಯ  ಗೊತ್ತಿದ್ದ ಜಾನಕಿ ಏನೂ ಉತ್ತರಿಸಲಿಲ್ಲ. ಲಚ್ಚಿಮಿ  ಏನೂ ಅಪರಿಚಿತೆಯಲ್ಲ . ಜಾನಕಿಗೆ ದೂರದ ಸಂಬಂದಿ ಕೂಡಾ ಹೌದು.  ಸುಂದ ಮತ್ತು ಲಚ್ಚಿಮಿಯ ನಡುವಿನ ಸಂಬಂಧ ಊರಲ್ಲಿ ಕೂಡಾ ಎಲ್ಲರಿಗೂ ಗೊತ್ತಿರೋ ವಿಷಯವೇ.. ಬೆಳ್ಳಂಬೆಳಿಗ್ಗೆ ತಾಳೆಗೆ ಏರಲೆಂದು ಸುಂದ ಕತ್ತಿ, ಕೊಡ ತೋಳಿಗೇರಿಸಿ ನಡೆದರೆ ವಾಪಸಾಗುವುದು ಸಂಜೆ ಆರರ ನಂತರವೇ.. ಮಧ್ಯಾಹ್ನದ ಊಟ ಕೂಡಾ ಅಲ್ಲಿಯೇ .. “ಅಮ್ಮಿಣಿ … ನಾನೊಂದು ವಿಷಯ ಹೇಳುತ್ತೇನೆ. ನಿನಗದು ಬೇಜಾರು ಆಗಬಹುದು ಆದರೆ ನಾಳೆಯಾದರೂ ನಿನಗೆ ತಿಳಿದೇ ತಿಳಿಯುತ್ತದೆ ಮಾತ್ರವಲ್ಲ ತಿಳಿದಿರಲೇ ಬೇಕು ” …  ತಾ ಕೂತಿದ್ದ ಮಣೆಯನ್ನು ಎಡಗೈಯಿಂದ  ಲಚ್ಚಿಮಿಯ ನೂಕಿ ಇನ್ನೂ ಹತ್ತಿರ ಕುಳಿತಳು ಜಾನಕಿ. ಅಮ್ಮಿಣಿಗೂ  ಕುತೂಹಲ … ಆಕೆ ಮೆತ್ತಗೆ ಕಿವಿಯಲ್ಲಿ .. “ಆ ಲಚ್ಚಿಮಿಗೆ ಈಗ ತಿಂಗಳು ಒಂಭತ್ತು ಅಂತೆ. ನಿನ್ನೆ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಳಂತೆ. ಈ ತಿಂಗಳ ಕೊನೆಗೆ ಹೆರಿಗೆಯ ತಾರೀಕು ಕೊಟ್ಟಿದ್ದಾರಂತೆ … “ ಅಮ್ಮಿಣಿಗೆ ದುಃಖ ಉಮ್ಮಳಿಸಿ ಬಂತು. ದಿನವೂ ರಾತ್ರಿ ಜಗಳ ಮಾಡುವುದೊಂದೇ ಬಂತು. ತನ್ನ ಯಾವ ಮಾತನ್ನೂ ಕೇಳಿಸಿಕೊಳ್ಳುವ ಗೋಜಿಗೂ ಹೋಗದ ನೀಚ ನನ್ನ ಸುಂದ ಎನ್ನುತ್ತಾ ಕಣ್ಣೀರು ಹಾಕಿದಳು. ಇಂದು ರಾತ್ರಿ ತೀರ್ಮಾನಕ್ಕೆ ಒಂದು ಬರಲೇ ಬೇಕು … ಒಂದೋ ನಾನು ಇಲ್ಲ ಅವಳು .. ಮಧ್ಯಾಹ್ನ ದ ಊಟವೂ ಹೊಟ್ಟೆಗೆ ಹತ್ತಲಿಲ್ಲ …. ಅಂಗಳದಲ್ಲೇ ತಾಳೆಬೆಲ್ಲ ಒಣಗಿಸುತ್ತಾ ಕೂತಿದ್ದಳು .  ಮುಸ್ಸಂಜೆಯ ಹೊತ್ತು ಸುಂದ ಅಂಗಳಕ್ಕೆ ಕಾಲಿಟ್ಟ .. ಸಾರಾಯಿ ವಾಸನೆ ಮೂಗಿಗೆ ಬಡಿಯುತ್ತಲೇ ಇತ್ತು. ಸುಂದನನ್ನು ಒಮ್ಮೆಲೇ ಪ್ರಶ್ನಿಸುವಷ್ಟು ಧೈರ್ಯ ಅಮ್ಮಿಣಿಗೆ ಇರಲಿಲ್ಲ. ಅಮ್ಮಿಣಿ .. ನಾಳೆ 250 ಬೆಲ್ಲ ಪೇಟೆಯ ನಾಯ್ಕರ ಅಂಗಡಿಗೆ ಬೇಕು.. ಕಟ್ಟ ಒಂದಕ್ಕೆ ಹತ್ತರಂತೆ 25 ಕಟ್ಟ ಮಾಡಿಡು. 500 ರೂಪಾಯಿ ಕೊಟ್ಟಿದ್ದಾನೆ. ಉಳಿದದ್ದು ಅಂಗಡಿಯಲ್ಲಿ ಕೊಡುತ್ತಾನೆ. ಈ ಐನೂರು ನೀನೇ ಇಟ್ಟುಕೋ ನನ್ನಲ್ಲಿ ಇಟ್ಟರೆ ಖರ್ಚಾಗಬಹುದು ಎನ್ನುತ್ತಾ ಐನೂರರ ಗರಿ ನೋಟು ಅಮ್ಮಿಣಿಯ ಕೈಗಿಟ್ಟ … ಅಮ್ಮಿಣಿಯ ಕೋಪ ಒಮ್ಮೆಲೇ ಇಳಿಯಿತು. ಇಂದು ಕೇಳುವುದು ಬೇಡ ಎಂದು ತೀರ್ಮಾನಿಸಿ ರಾತ್ರಿಯ ಊಟಕ್ಕೆ ತಯಾರಿ ಮಾಡಲು ಅಡುಗೆ ಮನೆಯತ್ತ ಹೊರಟಳು. ಅಮ್ಮಿಣಿಯ ಚಿಂತೆ ಇನ್ನೂ ದೂರವಾಗಲಿಲ್ಲ. ರಾತ್ರಿ ಊಟವೂ ಆಯಿತು. ಮಕ್ಕಳಿಬ್ಬರೂ ಉಂಡು ಮಲಗಿಯೂ ಆಯಿತು… ಅವನಾಗಿ ಕರೆಯದೆ ಎಂದೂ ಅಮ್ಮಿಣಿ ಆತನ ಬಳಿ ಹೋದವಳಲ್ಲ. ಇಂದು ಸುಂದ ಕರೆಯದಿದ್ದರೂ ಮೆಲ್ಲನೆ ಆತನ ಬಳಿ ಮಲಗಿದಳು ಅಮ್ಮಿಣಿ. ಆತ ಗೊರಕೆ ಹೊಡೆಯುತ್ತಲಿದ್ದ. ಹೇಗೆ ಆರಂಭಿಸುವುದು ಎಂದು ತಿಳಿಯದೆ ಮೆತ್ತಗೆ ಆತನ ಎದೆಯನ್ನು ಸವರತೊಡಗಿದಳು. ಥಟ್ಟನೆ ಎದ್ದು ಕೂತ ಸುಂದ… ಆಹಾ.. ಇವತ್ತೇನು ವಿಷ್ಯಾ… ಸೂರ್ಯ ಪಶ್ಚಿಮದಲ್ಲಿ ಮೂಡಿದ್ದಾನೋ.. ಅಥವಾ ಐನೂರಕ್ಕೆ ಋಣವೋ… ಎಂದು ಮೆತ್ತಗೆ ನಕ್ಕ. “ಅಲ್ಲ ಸುಂದ .. ನನಗೂ ತಾಳೆ ಮರ ಏರುವುದು ಗೊತ್ತು.. ನಾಳೆಯಿಂದ ನಾನೂ ನಿನ್ನೊಂದಿಗೆ ಬರಲಾ …” ಕೂತಿದ್ದ ಸುಂದ ಒಮ್ಮೆಲೇ ನಿಂತು… ನೀ ನನ್ನೊಟ್ಟಿಗೆ ಬಂದ್ರೆ ಮಕ್ಕಳನ್ನು ನಿನ್ನಪ್ಪ ಬಂದು ನೋಡ್ತಾನಾ ಎಂದು ಗುಡುಗಿದ. ಅಮ್ಮಿಣಿ ಶಾಂತವಾಗಿ… “ಮಕ್ಕಳನ್ನು ಸಂಜೆ ತನಕ ನೋಡಿಕೊಳ್ಳುವೆ ಎಂದು ಅಮ್ಮ ಒಪ್ಪಿದ್ದಾಳೆ,,”. ಎಂದಾಗ ಕೋಪ ಇನ್ನೂ ನೆತ್ತಿಗೇರಿತ್ತು. ಅಮ್ಮಿಣಿ ಯನ್ನು ತಳ್ಳಿ ಹಾಕಿ ಚಾವಡಿಯಲ್ಲಿ ಕೂತು ಬೀಡಿಗೆ ಬೆಂಕಿ ಹಚ್ಚಿ ಬಯ್ಯುತ್ತಾ ಕುಳಿತ.. ಅಮ್ಮಿಣಿ ಒಬ್ಬಳೇ ಮಕ್ಕಳ ಬಳಿ ಹೋಗಿ ಮಲಗಿ ಅಳುತ್ತಲೇ ನಿದ್ದೆಗೆ ಜಾರಿದಳು. ಬೆಳಗ್ಗೆ ಸುಂದ ಚಾವಡಿಯಲ್ಲೇ ಮಲಗಿದ್ದ. ಆತನ ಕೋಪ ಇಳಿದಿತ್ತು. ಬೆಳಗ್ಗಿನ ತಿಂಡಿ ತಿನ್ನುತ್ತಲೇ ಮಕ್ಕಳನ್ನು ತನ್ನ ಹತ್ತಿರ ಕುಳ್ಳಿರಿಸಿ ಅವರಿಗೂ ತಿನ್ನಿಸುತ್ತಾ … ಅಮ್ಮಿಣಿ ಎಂದು ಪ್ರೀತಿಯಿಂದ ಕರೆದ. ಅಮ್ಮಿಣಿಗೂ ಆಶ್ಚರ್ಯ.. ಎಂದೂ ಹೀಗೆ ಪ್ರೀತಿಯಿಂದ ಕರೆದವನೋ ಮಾತನಾಡಿಸಿದವನೋ ಅಲ್ಲ. ಸಂಜೆಯಾದರೆ ಬೈಗುಳ. ಮಕ್ಕಳೊಡನೆ ಮಾತ್ರ ಮಾತುಕತೆ.. ಅಮ್ಮಿಣಿ ಒಲೆಗೆ ನಾಲ್ಕು ಸೌದೆ ತುರುಕಿಸಿ ಸೆರಗನ್ನು ಸರಿಮಾಡುತ್ತಾ… ” ಹಾ ಬಂದೆ”  ಎಂದು ಆತನ ಬಳಿ ಹೋಗಿ ಕುಳಿತಳು. ಸುಂದ ಏನೋ ಖುಷಿಯಲ್ಲಿದ್ದ. “ಅಮ್ಮಿಣಿ…  ನೋಡು ಕುಟ್ಟಿಗೌಡ ತನ್ನ ಎಂಟು ತಾಳೆಗಳನ್ನು ನನಗೆ ಕೆತ್ತಲು ವಹಿಸಿಕೊಟ್ಟಿದ್ದಾನೆ. ಬರುವ ವಾರದಿಂದ ಕೆಲಸ ಜಾಸ್ತಿ ಇರಬಹುದು. ಎಲ್ಲಾ ತಾಳೆಗೂ ಇವತ್ತಿಂದಲೇ ಬಿದಿರ ಏಣಿ ಕಟ್ಟಲು ತೊಡಗುತ್ತೇನೆ. ಪೇಟೆಯಲ್ಲೂ ತಾಳೆ ಬೆಲ್ಲಕ್ಕೆ ಡಿಮಾಂಡು ಈಗೀಗ ಜಾಸ್ತಿ ಆಗುತ್ತಿದೆ. ಬರುವ ವಾರದಿಂದ ನಿನ್ನನ್ನೂ ಕರಕೊಂಡು ಹೋಗುತ್ತೇನೆ..”. ಅಮ್ಮಿಣಿ ನಕ್ಕಳು… ಅವಳ ಉತ್ತರಕ್ಕೂ ಕಾಯದೆ ಚಾ ಹೀರುತ್ತಾ ಸುಂದ ಹೊರಡಲು ನಿಂತ. ಲೋಟ ಖಾಲಿಯಾಗುತ್ತಲೇ ಗೋಡೆಯಲ್ಲಿ ತೂಗು ಹಾಕಿದ್ದ ಕತ್ತಿ, ಕೊಡವನ್ನು ಎತ್ತಿ ಹೆಗಲಿಗೇರಿಸಿ ಸುಂದ ಅಂಗಳ ದಾಟಿ ಹೊರಟೇ ಬಿಟ್ಟ. ಅಮ್ಮಿಣಿ ಚಾವಡಿಯಲ್ಲಿ ಕೂತು ಆತನ ನಡಿಗೆಯನ್ನೇ ನೋಡುತ್ತಾ ಕುಳಿತಳು. ದಿನಗಳುರುಳಿತು… ಸುಂದನೊಂದಿಗೆ ಅಮ್ಮಿಣಿಯೂ  ಕೆಲಸಕ್ಕೆ ಹೋಗಲು ಶುರುಮಾಡಿದ್ದಳು. ಹೋಗುವ ದಾರಿಯಲ್ಲೇ ಲಚ್ಚಿಮಿಯ ಮನೆ.  ಅಮ್ಮಿಣಿಯ ಕಣ್ಣು ಆ ಕಡೆ ನೋಡುತ್ತಲೇ ಇತ್ತು. ಗುಡಿಸಲಿಗೆ ಬೀಗ ಜಡಿದಿತ್ತು. ಸಂಜೆಯ ಒಳಗಡೆ ಇಬ್ಬರೂ ಜೊತೆಯಾಗಿ ವಾಪಸ್ಸಾಗುತ್ತಿದ್ದರು. ಸಂಜೆ ಬಂದು ಬಾಣಲೆಗೆ ಹಾಕಿ ಕಳ್ಳು ಬೇಯಿಸತೊಡಗಿದರೆ ಮಧ್ಯರಾತ್ರಿಯ ವರೆಗೂ ಮುಂದುವರಿಯುತ್ತಿತ್ತು. ಅಮ್ಮ ಬಂದು ಸಹಾಯಕ್ಕೆ ನಿಂತಿದ್ದ ಕಾರಣ ಬೆಲ್ಲ ಒಣಗಿಸುವ ಮತ್ತು ಮಕ್ಕಳನ್ನು ನೋಡುವ ಜವಾಬ್ದಾರಿ ಆಕೆಯೇ ವಹಿಸಿಕೊಂಡಂತಾಗಿತ್ತು. ಅದೊಂದು ದಿನ ಬೆಳಿಗ್ಗೆ ಹೊರಟಾಗ ಲಚ್ಚಿಮಿಯ ಗುಡಿಸಲು ತೆರೆದಿತ್ತು. ಮನೆಯಲ್ಲಿ ಪುಟ್ಟ ಮಗುವಿನ ಅಳುವೂ ಕೇಳಿಸುತ್ತಿತ್ತು. ಸುಂದ ಒಂದು ನಿಮಿಷ ಅಲ್ಲೇ ನಿಂತ. ಅಮ್ಮಿಣಿ ಕೋಪದಿಂದ ನಡೀರಿ ಮುಂದೆ ಎನ್ನುತ್ತಾ ದೂಡಿದಳು. ಸುಂದ ಮನಸ್ಸಿಲ್ಲದ ಮನಸ್ಸಿನಿಂದ ಮುಂದೆ ನಡೆಯುತ್ತಿದ್ದ. ಸುಂದ ಮಂಕಾಗಿದ್ದ. ನಾಲ್ಕು ತಾಳೆಮರಕ್ಕೆ ಏರಿದವನು ಸುಸ್ತಾಗಿ ಕೆಳಗೆ ಮಲಗಿದ್ದ. ನಂತರ ಈಗ ಬರುತ್ತೇನೆ ಎಂದು ಹೋದವ ಒಂದು ಗಂಟೆ ಕಾದರೂ ವಾಪಸ್ಸಾಗಲಿಲ್ಲ. ಅಮ್ಮಿಣಿಯ ಕೋಪ ನೆತ್ತಿಗೇರಿತ್ತು… ನೇರವಾಗಿ ಲಚ್ಚಿಮಿಯ ಮನೆಗೆ ಹೆಜ್ಜೆ ಹಾಕಿದಳು. ಸುಂದ ಅದೇ ಗುಡಿಸಲಲ್ಲಿದ್ದ… !!!. ಒಂದುವಾರದ ಹಾಲುಗಲ್ಲದ  ಮಗು ತೊಟ್ಟಿಲಲ್ಲಿ ನಿದ್ರಿಸುತ್ತಿತ್ತು. ಬಾಣಂತಿ ಲಚ್ಚಿಮಿ ಕೂತಿದ್ದಳು. ಅಮ್ಮಿಣಿ ಜೋರಾಗಿ ಕಿರುಚಲು ಪ್ರಾರಂಭಿಸಿದಳು. ಮುಂಡೆ.. ನಿನಗೆ ಇಟ್ಟುಕೊಳ್ಳಲು ನನ್ನ ಗಂಡ ಮಾತ್ರ ಸಿಕ್ಕಿದ್ದಾ… ಹಿಡಿಶಾಪ ಹಾಕುತ್ತಾ ಸುಂದನ ಕೈ ಹಿಡಿದು ಎಳೆಯುತ್ತಾ ಕರೆತಂದಳು. ಲಚ್ಚಿಮಿ ಮಾತನಾಡಲಿಲ್ಲ. ಆದರೆ ಅಳುತ್ತಲೇ ಇದ್ದಳು. ಬಾಣಂತಿ ಹೆಣ್ಣು.. ತನ್ನವರೆಂದು ಆಕೆಗೆ ಯಾರೂ ಇರಲಿಲ್ಲ. ಸುಂದನ ಸಾರಾಯಿ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಅಮ್ಮಿಣಿಗೆ ಈಗ ಇದೊಂದು ಚಿಂತೆ ಬೇರೆ. ಜೊತೆಯಾಗಿ ಹೋಗುವುದೇನೋ ಸರಿ ಆದರೆ ಮಾತಿಲ್ಲ. ಎಲ್ಲವೂ ಕಳೆದುಕೊಂಡವನಂತೆ ಆಲೋಚನೆ ಮಾಡುತ್ತಲೇ ಇರುತ್ತಿದ್ದ. ಒಂದು ಬೆಳಿಗ್ಗೆ ಸುಂದ ಏಳಲೇ ಇಲ್ಲ… !. ಮಾತಿಲ್ಲ. ಎದ್ದೇಳಲೂ ಆಗುತ್ತಿಲ್ಲ.. ಬಲಗೈ ಮತ್ತು ಬಲಗಾಲು ಸ್ವಾಧೀನವನ್ನೂ ಕಳೆದುಕೊಂಡಿತ್ತು.. !. ವೈದ್ಯರು ಬಂದು ಪರೀಕ್ಷೆ ಮಾಡಿಯಾಯಿತು. ದಿನ ಮೂರಾಯಿತು…. ಸುಂದ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ ಎಂದು ಆತನ ಕಣ್ಣುಸನ್ನೆಯಿಂದ ಅರ್ಥವಾಗುತ್ತಿತ್ತು. ಗಂಡ ಮಲಗಿದ್ದಾನೆ.. ತಾನೂ ಮನೆಯಲ್ಲಿ ಕೂತರೆ ಜೀವನ ರಥ ಸಾಗುವುದಾದರೂ ಹೇಗೆ.. ? ಇಂದಿಗೆ ದಿನಗಳು ನಾಲ್ಕಾಯಿತು… ಅಮ್ಮಿಣಿ ನೇರ ತಾಳೆ ಮರದತ್ತ ಹೊರಟಳು. ದಾರಿಯಲ್ಲಿ ನಡೆವಾಗ ಲಚ್ಚಿಮಿಯ ಮನೆಯತ್ತ ನೋಡಲು ಮರೆಯಲಿಲ್ಲ. ಬಾಣಂತಿ ಹೆಣ್ಣು ಅಂಗಳದಲ್ಲಿ ಭತ್ತ ಕುಟ್ಟುತ್ತಲಿದ್ದಳು. ಅಮ್ಮಿಣಿ ಕಂಡೂ ಕಾಣದವಳಂತೆ ಮುಂದೆ ನಡೆದಳು. ಮುಸ್ಸಂಜೆಯಾಯಿತು. ಪೇಟೆಯಿಂದ ಸಾಮಾನು ಮತ್ತು ಒಂದಿಷ್ಟು ಬಟ್ಟೆ ಬರೆಗಳನ್ನೂ ಖರೀದಿಸಿ ಮನೆಗೆ ವಾಪಸ್ಸಾದಳು. ಅಮ್ಮನಲ್ಲಿ ನಾಟಿಕೋಳಿಯೊಂದನ್ನು ಸಾರುಮಾಡಲು ತಿಳಿಸಿ ಹೋಗಲು ಮರೆಯಲಿಲ್ಲ. ಸುಂದ ಅಸಹಾಯಕನಾಗಿ ಅಮ್ಮಿಣಿಯನ್ನೇ ನೋಡುತ್ತಲಿದ್ದ. ಮುಸ್ಸಂಜೆಯಾಯಿತು. ಅಮ್ಮಿಣಿ ಸುಂದನ ಬಳಿ ಬಂದು ಚಿಮಿಣಿ ದೀಪದ ಬೆಳಕು ಏರಿಸುತ್ತಾ… “ಸುಂದ… ನೋಡು ಯಾರು ಬಂದಿದ್ದಾರೆ…,,,” ಎಂದಳು. ಇವರೆಲ್ಲಾ ಇನ್ನು ನಮ್ಮೊಂದಿಗೇ ಇರುತ್ತಾರೆ ಎನ್ನುತ್ತಾ ಹಾಲುಕಂದನನ್ನು ಎದೆಗಪ್ಪಿ ಮುದ್ದಿಸುತ್ತಾ ಸುಂದನ ಮಡಿಲಲ್ಲಿಟ್ಟು ನಗತೊಡಗಿದಳು. ನಗುವಿನ ಹಿಂದೆ ನೂರಾರು ನೋವುಗಳಿತ್ತು. ಸುಂದನ ಕಣ್ಣಿಂದ ಹರಿವ ನೀರು ಲಚ್ಚಿಮಿಗೂ ಸಮಾಧಾನ ಹೇಳುವಂತಿತ್ತು. ********

ಅಮ್ಮಿಣಿ Read Post »

ಕಥಾಗುಚ್ಛ

ಕಾದ್ರಿಯಾಕ ಮತ್ತು ನಾಡ ದೋಣಿ

ಕಿರು ಕಥೆ ಕೆ.ಎ. ಎಂ. ಅನ್ಸಾರಿ ಪಕ್ಕದ  ಮಸೀದಿಯ ಬಾಂಗು(ಅಜಾನ್) ಕೇಳಿದಾಗ ಎದ್ದೇಳುವ ಕಾದ್ರಿಯಾಕನ ದಿನಚರಿ ಮಗ್ರಿಬ್ (ಮುಸ್ಸಂಜೆ) ವರೆಗೂ ಮುಂದುವರಿಯುತ್ತಿತ್ತು. ಬೆಳಗ್ಗೆ ಎದ್ದಕೂಡಲೇ ದೋಣಿಯ ಹತ್ತಿರ ಹೋಗಿ ದೋಣಿಯ ಸುತ್ತ ಒಂದು ಪ್ರದಕ್ಷಿಣೆ ಹಾಕಿ ಅದರ ಪ್ರತಿ  ಭಾಗಕ್ಕೆ ಒಂದು ಚಿಕ್ಕ ಏಟು. ನಂತರ ದೋಣಿಯ ಒಳಗಡೆ  ಕುಳಿತುಕೊಳ್ಳುವ ಆಸನದ ಪರಿಶೀಲನೆ… ಎಲ್ಲೂ ಹಲಗೆ ಅಲುಗಾಡುತ್ತಿಲ್ಲ… ಎಂಬುದನ್ನು ಖಾತ್ರಿಪಡಿಸುವಿಕೆ. ನಂತರ ಕಂಗಿನ ಹಾಳೆಯಿಂದ ಮಾಡಿದ ಚಿಳ್ಳಿ (ನೀರೆತ್ತಲು ಮಾಡಿದ ದೇಸಿ ಪರಿಕರ)ಯಿಂದ ದೋಣಿಯೊಳಗಿನ ನೀರನ್ನು ಹೊರಚೆಲ್ಲುವುದು. ದೋಣಿಗೆ ಸುಮಾರು ಇಪ್ಪತ್ತು-ಮೂವತ್ತು ವರುಷದ ಚರಿತ್ರೆಯಿದೆ. ಅಷ್ಟೂ ಹಳೆಯದಾದ ಚಿಕ್ಕ ನಾಡ ದೋಣಿ. ಅಲ್ಲಲ್ಲಿ ತೂತಾಗಿದ್ದರೂ ಡಾಂಬರು ಹಾಕಿ ಪ್ಯಾಚ್ ವರ್ಕ್ ನಡೆಸಲು ಕಾದ್ರಿಯಾಕ ಮರೆಯುತ್ತಿರಲಿಲ್ಲ. ಹೊಳೆಯ ಆ ಬದಿಯಿಂದ ಕೂಯ್ ಎಂಬ ದನಿಯೊಂದು ಕೇಳಿದರೆ ಸಾಕು.. ಈ ದಡದಿಂದ ಕೂಯ್ ಕೂಯ್ ಎಂದು ಪ್ರತಿದ್ವನಿ ಕೊಟ್ಟು ಹುಟ್ಟು (ತುಡುವು) ಹಾಕುತ್ತಾ ಆ ದಡಕ್ಕೆ ಯಾತ್ರೆ. ಈ ದಡದಿಂದ ಆ ದಡಕ್ಕೆ ಮೈಲಿಯ ದೂರವೇನೂ ಇಲ್ಲ. ಐದು ನಿಮಿಷದ ದಾರಿ. ಅವರ ಭಾಷೆಯಲ್ಲಿ ಹೇಳುವುದಾದರೆ ಒಂದು ಬೀಡಿ ದೂರ. ಅಂದ್ರೆ ಹುಟ್ಟು ಹಾಕುವಾಗ ಬೀಡಿ ಹೊತ್ತಿಸಿ ಬಾಯಲಿಟ್ಟರೆ ನಾಲ್ಕು ಸಲ ಹೊಗೆ ಬಿಟ್ಟಾಗ ಆ ದಡದಲ್ಲಿ ಹಾಜರ್. ಎಲ್ಲರ ಹಾಗೆ ಕಾದ್ರಿಯಾಕನಿಗೂ ಒಂದು ಕನಸಿತ್ತು. ಒಂದು ಹೊಸ ದೋಣಿ ಖರೀದಿಸಬೇಕು. ಅದೇನೂ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ತನಗೇ ಗೊತ್ತಿತ್ತು. ಹೊಳೆದಾಟಲು ಊರವರು ಕೊಡುತ್ತಿದ್ದ  ಒಂದೋ ಎರಡೋ ರೂಪಾಯಿಗಳು ಸೇರಿದರೆ ಐವತ್ತೋ ನೂರೋ ಆಗುತ್ತಿತ್ತು ಅಷ್ಟೇ… ಅದರಿಂದ ಆತನ ದಿನದ ಖರ್ಚಿಗೇ ಸಾಕಾಗುತ್ತಿರಲಿಲ್ಲ. ಖಾದ್ರಿಯಾಕನಿಗೆ ವಯಸ್ಸಾಗುತ್ತಾ ಬಂತು. ಗಂಡು ಮಕ್ಕಳೆಲ್ಲಾ ಪೇಟೆಗೆ ಕೆಲಸಕ್ಕೆ ಹೋಗಲು ಶುರುಮಾಡಿದರು. ದೋಣಿಗೆ ಹುಟ್ಟು ಹಾಕಿ ಹಾಕಿ ಆತನ ರಟ್ಟೆ ಬಲವೂ ಕ್ಷೀಣಿಸುತ್ತಾ ಬಂದಿತ್ತು. ಈ ನಡುವೆ ಪೇಟೆಗೆ ಹೋಗಲು ಇನ್ನೊಂದು ಭಾಗದಿಂದ ಸೇತುವೆಯೂ ನಿರ್ಮಾಣವಾಯಿತು. ಅದರೊಂದಿಗೆ ಪ್ರತಿ ಮನೆಯಲ್ಲೂ ದ್ವಿಚಕ್ರ ವಾಹನದ ಆಗಮನವೂ ಆಯಿತು. ಸಾಧಾರಣ ಲುಂಗಿ, ಲಂಗ, ಸೀರೆಯುಡುತ್ತಿದ್ದ ಊರವರ ಜೀವನ ಶೈಲಿಯೂ ಬದಲಾಯಿತು. ಒಂದು ಕಯ್ಯಲ್ಲಿ ಚಪ್ಪಲಿಯನ್ನು ಇನ್ನೊಂದು ಕಯ್ಯಲ್ಲಿ ಲುಂಗಿಯನ್ನೋ ಲಂಗವನ್ನೂ ತುಸು ಮೇಲಕ್ಕೆತ್ತಿ ದೋಣಿಯೇರುವ ಜನರ ಜೀವನದಲ್ಲಿ ಬೂಟು, ಪೈಜಾಮ, ಪ್ಯಾಂಟುಗಳು ಬಂದಮೇಲೆ ನೀರಲ್ಲಿ/ಕೆಸರಿನಲ್ಲಿ ತುಸು ದೂರ ನಡೆಯಲು ಯಾತ್ರಿಕರಿಗೆ ಕಷ್ಟವಾಗತೊಡಗಿತು. ತುಸು ದೂರವಾದರೂ ವಾಹನಗಳಲ್ಲಿ ಸೇತುವೆ ದಾಟಿ ಹೋಗಲು ಜನರು ಉತ್ಸುಕರಾದಾಗ ಕಾದ್ರಿಯಕರ ಸಂಪಾದನೆಗೂ ಕತ್ತರಿ ಬಿತ್ತು. ಅಂಗಳದಲ್ಲಿ ದೋಣಿ ಅಂಗಾತ ಮಲಗಿತು. ಮನೆಯೊಳಗೆ ಕಾದ್ರಿಯಾಕಾನೂ. ಕೋವಿಡ್ 19 ಎನ್ನೋ ಮಹಾಮಾರಿ ಭಾರತಕ್ಕೆ ಲಗ್ಗೆಯಿಟ್ಟ ವಿಷಯ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದು ಮಾಧ್ಯಮಗಳಲ್ಲಿ ಕಾಣಿಸುತ್ತಿತ್ತು. ಎಲ್ಲರೂ ಭಯಭೀತರಾಗಿ ಮನೆಯಲ್ಲೇ ಕುಳಿತುಕೊಂಡಿರುವ ಸಮಯ. ಲಾಕ್ಡೌನ್ ಶುರುವಾಗಿದೆ… ಎಲ್ಲಾ ಕಡೆ ರಸ್ತೆಗಳು ಮುಚ್ಚಿವೆ… !! ಈ ಪರಿಸ್ಥಿತಿಯಲ್ಲಿ ರಾತ್ರಿ ಸುಮಾರು ಹನ್ನೆರಡು ಗಂಟೆಗಯ ಹೊತ್ತಲ್ಲಿ ಐದಾರು ಜನರ ಗುಂಪು ಕಾದ್ರಿಯಾಕನ ಮನೆಬಾಗಿಲು ತಟ್ಟತೊಡಗಿದರು. ಕಾದ್ರಿಯಾಕನಿಗೆ ಎದ್ದು ನಡೆಯಲಾಗುತ್ತಿಲ್ಲ. ಕಾಕನ ಮಡದಿ ಬಾಗಿಲು ತೆರೆದಾಗ ಅಲ್ಲಿ ಕಂಡದ್ದು ಶಂಕರ ಭಟ್ರ ಮಗ,  ತುಂಬು ಗರ್ಭಿಣಿ ಸೊಸೆ…. ನಾಲ್ಕೈದು ಊರ ಭಾಂಧವರು. ಗುಂಪಿನಿಂದ ಹೇಗಾದರೂ ಮಾಡಿ ಹೊಳೆದಾಟಿಸಿಕೊಡಬೇಕೆಂಬ ನಿವೇದನೆ. ಊರಲ್ಲಿ  ಯಾವೊಬ್ಬನೂ ಕರೆದರೆ ಬರುತ್ತಿಲ್ಲ. ಎಲ್ಲರಿಗೂ ಕೊರೊನಾದ ಭಯ. ಪೊಲೀಸರು ಯಾರನ್ನೂ ಪೇಟೆಗೆ ಬಿಡುತ್ತಿಲ್ಲ. ಆಸ್ಪತ್ರೆ ಸೇರಬೇಕಾದರೆ ಇನ್ನೊಂದು ರಾಜ್ಯದ ಗಡಿ ದಾಟಬೇಕು… ಎಲ್ಲಾ ಕಡೆ ಪೊಲೀಸರ ಸರ್ಪಗಾವಲು. ಆಂಬುಲೆನ್ಸ್ ಕೂಡಾ ರಾಜ್ಯದ ಗಡಿ ದಾಟಲು ಬಿಡುತ್ತಿಲ್ಲ. ಹೇಗಾದರೂ ಮಾಡಿ ಹೊಳೆ ದಾಟಿಸಿ ಕೊಡಬೇಕು… ಕಾದ್ರಿಯಾಕನಿಗೆ ಏನುಮಾಡಬೇಕೆಂದು ತೋಚಲಿಲ್ಲ. ದೋಣಿ ಹಳೆಯದಾಗಿದೆ. ಅಂಗಾತ ಮಲಗಿದೆ ಎಂದು ಹೇಳುವ ಹಾಗೆಯೂ ಇಲ್ಲ. ರಾತ್ರೋ ರಾತ್ರಿ ಎಲ್ಲರೂ ಸೇರಿ ದೋಣಿಯನ್ನು ಹೊಳೆಗಿಳಿಸಿದರು. ಕಾದ್ರಿಯಾಕನ ಗೈರು ಹಾಜರಿಯಲ್ಲಿ ಮಡದಿ ಪಾತುಮ್ಮ ಹುಟ್ಟು ಹಾಕಿ ಇನ್ನೊಂದು ದಡಸೇರಿಸಿ ವಾಪಸ್ ಬಂದಾಗ ಕಾದ್ರಿಯಾಕನ ಕಣ್ಣುಗಳು ತೇವಗೊಂಡಿತ್ತು.

ಕಾದ್ರಿಯಾಕ ಮತ್ತು ನಾಡ ದೋಣಿ Read Post »

ಕಥಾಗುಚ್ಛ

ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. …..

ಕಥೆ ನಂದಿನಿ ವಿಶ್ವನಾಥ ಹೆದ್ದುರ್ಗ. “ನಾಡಿದ್ದು ಒಂದು ಇಂಟರವ್ಯೂ ಮಾಡೋಕಿದೆ.ಅವರ ಫೋನ್ ನಂಬರ್ ಜೊತೆಗೆ ಉಳಿದ ಡೀಟೈಲ್ಸ್ ಕಳಿಸ್ತಿನಿ.ಪ್ಲಾಂಟೇಷನ್ ನಲ್ಲಿ ಅವರು ಮಾಡಿರೋ ಸಾಧನೆಯ ಸಣ್ಣ ವಿವರವನ್ನೂ ಕಳಿಸ್ತೀನಿ.ಡೇಟ್ ನೆನಪಿರ್ಲಿ” ಅಂತ ಒಂದೇ ಉಸುರಿಗೆ ಹೇಳಬೇಕಾದ್ದನ್ನೆಲ್ಲಾ ಹೇಳಿ ಮುಗಿಸಿದ. ಅವನ ಸಮಯ ಅವನಿಗೆ ಬಹಳ ಮಹತ್ವದಂತೆ.ಹಾಗಂತ  ಪದೇಪದೇ ಹೇಳ್ತಾನೆ ಇರ್ತಾನೆ. ಅದೂ ಇತ್ತೀಚಿಗೆ. ಅವನ ಜೊತೆಗೆ  ಮಾತಾಡುವಾಗ ಸ್ವರ ಆದಷ್ಟೂ ಸಹಜವಾಗಿರೋದಿಕ್ಕೆ ಪ್ರಯತ್ನಿಸ್ತೀನಿ. ಅವನಿಗೆ ಕಾಲ್ ಮಾಡಿ ಆ ಕಡೆಯಿಂದ ಬರುವ ಮೊದಲ ಹಲೋಗೆ ಎದೆ ಮೂರು ಪಟ್ಟು ಮಿಡಿತ ಏರಿಸಿಕೊಂಡು ಕುಡಿದ ಕುದುರೆ ಥರ ಆಡೋದನ್ನ ಮುಚ್ಚಿಡ್ಲಿಕ್ಕೆ ಮಾಡೋ ಹರಸಾಹಸಕ್ಕೆ ಒಂದೊಂದು ಸರಿ ಬೇಸತ್ತು ಹೋಗಿ ಬಿಡುತ್ತೆ . ‘Okay.ಯೂ ಕ್ಯಾರಿ ಆನ್.ಇಫ್ ಯು ವಾಂಟ್ ವೆಹಿಕಲ್ ,ಐ ವಿಲ್ ಅರೆಂಜ್  ಫಾ ಇಟ್”ಅಂದ ತೀರ ಗಂಭೀರವಾಗಿ. ಅವನ ಪತ್ರಿಕೆಗಾಗಿ ಕೆಲಸ ಮಾಡೋ ಯಾರೋ ಹತ್ತರಲ್ಲೊಬ್ಬ ವರದಿಗಾರ್ತಿಯ ಜೊತೆ ಮಾತಾಡುವಂತೆ. ಎದುರಿಗಿದ್ದಿದ್ದರೆ ನನ್ನ ಉಗುರು ಅವನ ಕುತ್ತಿಗೆಯ ಮೇಲೆ ಮೂಡಿರ್ತಿದ್ವು.ಫೋನ್ ತೆಗೆದು ಬಿಸಾಡುವಷ್ಟು ಅಸಹನೆ ಅನಿಸ್ತು. ನನ್ನ ಹುಡುಗ…! ನನಗಾಗಿಯೇ ಇದ್ದವನು. ಆ ದಿನಗಳಲ್ಲಿ ನನ್ನ ಜೊತೆಗೆ ಕಳೆಯೋ ಹತ್ತೇ ಹತ್ತು ನಿಮಿಷಕ್ಕಾಗಿ ಅವನ ಆ ಹಾತೊರೆಯುವಿಕೆ, ನನ್ನ ಕಂಡೊಡನೆ ಬೆಳಕು ಚೆಲ್ಲುತ್ತಿದ ಅವನ ನೋಟದ ಪರಿ,ಅವನ ಇಡೀ ದೇಹ ನನ್ನ ಭೇಟಿಯನ್ನು ಸಂಭ್ರಮಿಸುತ್ತಿದ್ದದ್ದನ್ನ ನೋಡಿದಾಗೆಲ್ಲಾ ನನಗೆ ನನ್ನ ಬಗ್ಗೆ ಹೆಮ್ಮೆ ಅನಿಸ್ತಿತ್ತು. ಅವನ ಆ ಒಲವು,ಕಾವು ,ನನಗಾಗಿ ‌ಮೀಸಲಿಡುತ್ತಿದ್ದ ಸಮಯ ಎಲ್ಲವೂ ನನ್ನೊಳಗೆ ಉದ್ದೀಪಿಸುತ್ತಿದ್ದ ಆತ್ಮವಿಶ್ವಾಸವನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ.? ಅಂತಹ ಅವನು..?? ಹೀಗೆ…ಹೇಗೆ ಸಾಧ್ಯ.? ಇದೇನಾಯಿತು‌ ನಮ್ಮಿಬ್ಬರ ನಡುವೆ.? ಎಷ್ಟು ಯೋಚಿಸಿದರೂ ಒಂದೇ ಒಂದು ಬಿರುಕು ಮೂಡುವಂತ ಘಟನೆ ನೆನಪಿಗೆ ಬರತಿಲ್ಲ. ಅಥವಾ ನಡೆಯಲೂ ಇಲ್ಲ. ಎರಡು ವರ್ಷಗಳ ಕಾಲ ನಿತ್ಯದ ಸಂಜೆಗಳನ್ನ ನನಗಾಗಿಯೇ ಮೀಸಲಿಡುತ್ತಿದ್ದ ಅವ ನಿಧಾನವಾಗಿ ಕಾಲದ ಮಹತ್ವದ ಕುರಿತು ಭಾಷಣ ಶುರು‌ಮಾಡಿದ. ಮೊದಮೊದಲು ನನಗಿದಾವುದೂ ತಿಳಿಯಲೇ ಇಲ್ಲ. ಬರುಬರುತ್ತಾ  ನಿತ್ಯದ ಫೋನುಗಳು ಮೂರುದಿನಕ್ಕೋ,ವಾರಕ್ಕೋ ಬದಲಾಯಿಸಿಕೊಂಡಾಗ ನನ್ನ ದಿನಚರಿಯ ಭಾಗವೇ ಆಗಿಹೋಗಿದ್ದ ಸಂಭ್ರಮದ ಸಂಜೆಗಳಿಲ್ಲದೆ ದಿಗಿಲೆದ್ದು ಹೀಗೇಕೆ ಎಂದು ಗಾಬರಿ ಬಿದ್ದದ್ದು,ಮನೆಯಲ್ಲೇನಾದರೂ ಸಮಸ್ಯೆಯಾ ಅಂತ ದೇವರಿಗೆ ಮುಡುಪಿಟ್ಟದ್ದೆಲ್ಲ ಮುಗಿದು ನಾನೇ ಮಾತಾನಾಡಿಸುವ ಎಂದರೆ ಅವನ ಫೋನ್ ಲಾಂಗ್ ಟೈಮ್ ಎಂಗೇಜು. ಇಂಪಾರ್ಟೆಂಟ್ ಕೆಲಸ ಇತ್ತು,ಡೆಲಿಗೇಟ್ಸ್ ಇದ್ರು,ಕಾನ್ ಕಾಲ್ ಇತ್ತು ಅಂತ ಅವ ಹೇಳುವಾಗ  ‘ಛೆ.ಇದೇನು ಸಂಪಾದಕನ ಕೆಲಸ ಬಿಟ್ಟು ಯಾವುದಾದರೂ ಬಿಸಿನೆಸ್ ಶುರು ಮಾಡಿದ್ನಾ ಅಂತ ಅನುಮಾನವಾಗಿ ಕೇಳಿದ್ರೆ ”ಹಾ ಒಂದು ಪೆಯಿಂಟ್ ಏಜೆನ್ಸಿ ತಗೊಂಡಿದೀನಿ..ಶಾಪ್ ಮೊನ್ನೆ ಓಪನ್ ಆಯ್ತು..ಇಲ್ಲೇ ಥಿಯೆಟರ್ ಪ್ರಿಮಿಸಿಸ್ ನಲ್ಲೆ” ಅಂದ..ಶಾಕ್ ಆಯ್ತು…ಫೋಟೊ ಕಳಿಸಲಿಲ್ಲ,ಕರೀಲಿಲ್ಲ ಎಂದೆ. ತಕ್ಷಣ ಹತ್ತಿಪ್ಪತ್ತು ಫೋಟೋ ಬಂದ್ವು.  ಕಳಿಸಿದ ಫೋಟೊದಲ್ಲಿ  ದೂರದವರು ಅಂದುಕೊಂಡವರೆಲ್ಲ ಇದಾರೆ. ನಾನಿಲ್ಲ. ಹಾಗೆ ನೋಡಿದ್ರೆ ಅವರ ತಂದೆಗೆ ನನ್ನ ಕಂಡರೆ ಅಚ್ಚುಮೆಚ್ಚು. ನನ್ನ ಸೊಸೆ ಅಂತ ರೇಗಿಸ್ತಾನೆ ಇರ್ತಾರೆ. ಹಾಗಾದ್ರೆ ಇಲ್ಲೇನೋ ನಡೀತಿದೆ. ಪರಿಹರಿಸಿಕೊಳ್ಳಣಾಂದ್ರೆ ಅವ‌ ಮಾತಿಗೆ ಸಿಗೋದೇ ಇಲ್ಲ.. ಸಿಕ್ಕರೂ ಫಾರ್ಮಾಲಿಟೀಸ್ ಮಾತಿನಿಂದ ಮುಂದಕ್ಕೆ ಸಂಭಾಷಣೆ ಮುಂದುವರಿಯಲೇ ಇಲ್ಲ. “ರವೀಂದ್ರ,ದಯವಿಟ್ಟು ಕಟ್ ಮಾಡಬೇಡ ಕಾಲ್ .ಸರಿಯಾಗಿ ಕೇಳಿಸ್ಕೊ.ನಾನು ಈ ಇಂಟರ್ ವ್ಯೂ ಮಣ್ಣು ,ಮಸಿ ಅಂತ ಎಲ್ಲ ಮಾಡ್ತಿರೋದು ಹಣಕ್ಕಾಗಿ ಹೆಸರಿಗಾಗಿ ಅಲ್ಲ .ನಿನ್ನ ಜೊತೆ ಒಂದಷ್ಟು ಸಮಯ ಕಳೆಯಬಹುದಲ್ಲಾ ಅಂತ.as usual ಒಂದಷ್ಟು ರಫ್ ಪ್ತಶ್ನೆಗಳನ್ನ ತಯಾರಿ ಮಾಡಿದ್ದೀನಿ.ಅದನ್ನ ಫೈನ್ ಮಾಡಿಕೊಂಡು ನಾಡಿದ್ದು ನನ್ನನ್ನ ಮನೆಯಿಂದ ಪಿಕ್ ಮಾಡು.ನಿನ್ನ ವೃತ ಭಂಗ ಮಾಡೋದಿಲ್ಲೋ ಮಾರಾಯಾ ಜೊತೆಗಿರಬೇಕು ಅನ್ನೋದಷ್ಟೆ ನನ್ನಾಸೆ..ಏನು.?” ಅಂದೆ. ಮೊದಲಾದರೆ’ಆಹಾ ನಿನ್ನ ಸ್ವರವೇ!’ ಅಂತ ಮುದ್ದುಗರೆಯುತ್ತಿದ್ದವ ‘ಸರಿ’ ಎಂದಷ್ಟೇ ಹೇಳಿದಾಗ ಪಿಚ್ಚೆನಿಸಿತು. ಎಷ್ಟೋ ದಿನಗಳ ನಂತರ ಅವನ ಬೇಟಿ. ಸಂದರ್ಶನದ ದಿನ ಸಮಯಕ್ಕೂ ಮೊದಲೇ ತಯಾರಾಗಿ ಅವನಿಗಿಷ್ಟದ ನೀಲಿ ಬಿಂದಿಯಿಟ್ಟು ಕಾಯುತ್ತಿದ್ದವಳ ಕಣ್ಣಿಗೆ ಬಿದ್ದದ್ದು ಆಫೀಸಿನ ‌ಕಾರು. ತಲೆಸುತ್ತಿ ಬಂದ ಹಾಗಾಯ್ತು. ಹಾಗೆಲ್ಲ ನಾನು ಯೋಚಿಸಿದ ಹಾಗೆ ಇರಲಾರದು. ಅದು ಅವನೇ ಇರಬೇಕು. ಆಫೀಸ್ ಕಾರು ಅವನು ಬಳಸಬಾರದು ಅಂತೇನೂ ಇಲ್ಲವಲ್ಲ ಅಂತ ಮನಸಿಗೆ ಸಮಜಾಯಿಷಿ ಹೇಳಿಕ್ಕೊಳ್ಳುವಾಗಲೇ ಡ್ರೈವರ್ ಬಂದು’ಸರ್ ಹೇಳಿದ್ರು..ಅವರಿಗೆ ಬರೋದಿಕ್ಕೆ ಆಗಲ್ವಂತೆ.ನಿಮ್ ಫೋನು ಕನೆಕ್ಟ್ ಆಗ್ತಿಲ್ವಂತೆ..ತೋಟದ ಮಾಲೀಕರಿಗೆ ಫೋನ್ ಮಾಡಿದಾರೆ.ಬನ್ನಿ‌ಮೇಡಮ್ ‘ಅಂದ. ಇದೇನಾಗ್ತಿದೆ ನನ್ನ ಜೀವನದಲ್ಲಿ.! ನನ್ನ ಹುಚ್ಚು ಹತ್ತಿಸಿಕೊಂಡು ಕಾದುಕಾದು ಕರಗಿ ಹೋಗ್ತಿದ್ದವ ನನ್ನನ್ನುಅವಾಯ್ಡ್ ಮಾಡ್ತಿದ್ದಾನೆ.! ಕಾರಣ..?? ಇವತ್ತೇ.ಇದೇ ಕೊನೆ.ಮತ್ತೆಂದೂ‌ ಫೋನ್ ಅಥವಾ ಮೆಸೇಜ್ ಮಾಡಲಾರೆ ಅವನಿಗೆ. ಆದರೆ.? ಹೀಗಂತ ಎಷ್ಟು ದಿವಸ ಅಂದುಕೊಂಡಿಲ್ಲ ನಾನು.? ಬೆಳಗಾಗುವಷ್ಟರಲ್ಲಿ ನಿರ್ಧಾರ ಬದಲಾಗಿ ಇನ್ನೊಮ್ಮೆ.. ಒಮ್ಮೆ.. ಪ್ರಯತ್ನಿಸಬಹುದಲ್ಲಾ ಅನಿಸಿ ಮರಳಿ ಯತ್ನವ ಮಾಡಿದಾಗೆಲ್ಲಾ ಮತ್ತದೆ ಉಡಾಫೆ ಉತ್ತರ. ಅದೂ ಗಂಟೆ ಕಳೆದ ಮೇಲೆ. ” ಹಿ ಈಸ್ ಆನ್ಲೈನ್.ಬಟ್ ನಾಟ್ ಫಾರ್ ಯೂ”  ಅಂತ ಬೇರೆ ಸ್ಟೇಟಸ್ ಹಾಕಿದಾನೆ.. ನಾ ಈ ಮಟ್ಟಿಗೆ ಹಚ್ಚಿಕೊಳ್ಳೊ ಮುನ್ನ ಯೋಚಿಸಬೇಕಿತ್ತಾ..? ಆದರೆ ಅಳೆದು ಸುರಿದು ಮುಂದುವರೆಯಲು ಇದು ಭಾವಕೋಶದ ಮಾತು . ಯಾಕೆ ಅವನಿಗಾಗಿ ಅಳ್ತಿದ್ದೀನಿ ನಾನು.? ಅದೂ ಈ‌ ಮಟ್ಟಿಗೆ.? ಒಲಿಯುವವರೆಗೆ ನಡುರಾತ್ರಿ ತನಕ ನೋವು ಪ್ರಲಾಪಗಳ ಕವಿತೆ ಹಾಡಿದ್ದೇ ಹಾಡಿದ್ದು. ಛೀ ಅನಿಸುತ್ತೆ ಈಗ ಯೋಚಿಸಿದ್ರೆ. ಅತ್ತು‌ಮುಗಿದ ಮೇಲೆ  ಯೋಚಿಸುತ್ತೇನೆ.? ಯೋಗ್ಯತೆ ಇಲ್ಲದವನಿಗಾಗಿ ನನ್ನ ಕಣ್ಣೀರೇ.? ಈಗಿಂದೀಗಲೇ ಅವನನ್ನು ನನ್ನ ಮನಸಿಂದ ತೆಗೆದು ಹಾಕ್ತೀನಿ. ಹೀಗಂತ ಪದೇಪದೇ ಹೇಳಿಕೊಂಡಿದ್ದೂ ಆಯ್ತು. ಚಕ್ಕಳಮಕ್ಕಳ ಹಾಕಿ ಕೂತುಬಿಟ್ಟಿದ್ದಾನೆ. ಇಲ್ಲಿ.. ಈ ಎದೆಯೊಳಗೆ. ಹೊರಗೆ ಕಳಿಸೋದು ಅಷ್ಟು ಸುಲಭವಲ್ಲ. ‘ರವೀ…ನಿನ್ನ ಹೆಸರಿಗೆ ಅಂಟಿರುವ ಇಂದ್ರನ ಕುರಿತು ‌ನಂಗೆ ಮೊದಲಿಂದಲೂ ಅನುಮಾನ ಇದೆ’. ಅಂತಿದ್ದೆ ನಾನು ಆಗಾಗ. ಹಾಗಂದಾಗೆಲ್ಲಾ  ‘ ನನ್ನ ಪ್ರೇಮಕ್ಕೆ ,ಪಟ್ಟಕ್ಕೆ ಚಾರುದೇವಿಯೊಬ್ಬರೆ  ರಾಣಿ ‘ ಅಂದ‌ಮಾತಿಗೆ ಆಕಾಶಕ್ಕೆ ತಲೆ ಹೊಡಿಸಿಕೊಂಡು ಪೆಟ್ಟಾದ ಹಾಗೆ. ಮತ್ತೆ ಹಳೆ ನೆನಪುಗಳೆ. ಇವತ್ತು..ಇವತ್ತೇ ಕೊನೆ ಬಾರಿ. ಇನ್ನೆಂದೂ ನಿನಗೆ ಫೋನ್ ಮಾಡಲಿಕ್ಕೆ  ಮೆಸೇಜಿಗೆ ಪ್ರಯತ್ನಿಸೊಲ್ಲ.ಇದೊಂದು ಪರೀಕ್ಷೆ ನಡೆದೇ ಹೋಗಲಿ. “ರವಿ.ಮುಂದಿನ ಭಾನುವಾರ ಮಂಡ್ಯಕ್ಕೆ ಹೋಗ್ತಿದ್ದೀನಿ. ಮೈಸೂರಿನಿಂದ ಗೆಳತಿ ಪಿಕ್ ಮಾಡ್ತಾಳೆ. ಲಗೇಜಿದೆ.ಬಸ್ಸು ಪ್ರಯಾಣ “ ಅಂತ ಟೈಪಿಸಿ ಸೆಂಡ್ಒತ್ತಿದೆ. ಬಿದ್ದೇ ಹೋಗುವ ಎದೆಯ ಹಿಡಿದು ಅರ್ದ ಗಂಟೆ ಕಾಯ್ದ ಮೇಲೆ ಓಕೆ ಅಂತ ಮೆಸೇಜು ಬಂತು. ಇಷ್ಟೇನಾ..? ದೂರ ಹೋಗುವಾಗ ಹೇಳು. ಒಟ್ಟಿಗೆ ಪ್ರಯಾಣ ಮಾಡೋಣ. ನಿನ್ನ ಪ್ರಭಾವಳಿಯೊಳಗೆ ಸ್ವಲ್ಪ ಹೊತ್ತು ಇದ್ದ ಖುಷಿ ನನದಾಗುವ ಸಂಭ್ರಮವನ್ನು ಕೊಡೆ ಅಂತ ಗೋಗರೆಯುತ್ತಿದ್ದವ ಇವನೇನಾ.? ಇಲ್ಲ.. ಏನೋ ವ್ಯತ್ಯಾಸ ಆಗ್ತಿದೆ.ಅವನು ಮಾಡಿರಲಾರ ಮೆಸೇಜು.. ಒಪ್ಪಲಿಲ್ಲ ವಾಸ್ತವವನ್ನು ಮನಸ್ಸು. ಅನುಮಾನ, ಬೇರೆಯವರ ಬಳಿಯಲ್ಲಿ ಫೋನಿದ್ದರೆ..? ಕಾಲ್ ಒತ್ತಿದೆ..ಅವನದ್ದೇ ಧ್ವನಿ.ಕೇಳಿದೊಡನೆ ಕುಣಿಯೋ ನವಿಲಾಗೋ ಈ ಹಾಳು ಜನ್ಮ ಸಾಕು ಇನ್ನು. ಘನ ಗಂಭೀರವಾಗಿ ‘ಬಿಡುವಿದೆಯಾ’.ಎಂದೆ. ‘ಹಾ ಹೇಳು.’ ‘ಮಂಡ್ಯಕ್ಕೆ ಹೊರಟಿದ್ದೀನಿ’ ಮುಗಿದೇ ಇಲ್ಲ ಮಾತು. ‘ಸರಿಯಾಗಿ ಒಂಬತ್ತೂ ಕಾಲಿಗೆ ಮಾಡ್ತೀನಿ. ಪ್ಲೀಸ್ ಬಿಟ್ ಬ್ಯುಸಿ’ ಕರೆ ಕತ್ತರಿಸಿದ ಫೋನು ಹಿಡಿದವಳ ಮನಸಿಗೆ ಅವನ ಧ್ವನಿಯಲ್ಲಿ ಪ್ರಾಮಾಣಿಕತೆ ಇದೆ ಅನಿಸಿತೊ ಅಥವಾ ಈ ಸಂದರ್ಭಕ್ಕೆ ನಂಗೆ ಹಾಗೆ ಅನಿಸ್ತಿದೆಯಾ  ತಿಳಿಲಿಲ್ಲ. ಒಂಬತ್ತು ಮುಗಿದ ಮೇಲಿನ ಒಂದೊಂದು ನಿಮಿಷವೂ ಆ ಮಟ್ಟಿಗೆ ದೀರ್ಘ ಎನಿಸಿದ್ದು ಅದೇ ಮೊದಲು.. ಗಡಿಯಾರದ ಶೆಲ್ ಸರಿಗಿದೆಯಾ…ಚೆಕ್ ಮಾಡಬೇಕಿತ್ತು.. ಛೆ..ಫೋನ್  ನೆಟ್ವರ್ಕ್ ಲಿ ಇದೆಯಾ ಇಲ್ಲವೇ ಅಂತ ಚೆಕ್ ಮಾಡಿ… 9.15ಆಯ್ತು.ಓ ಮೈ ಗಾಡ್. ಇವನು…!! ಇವನು ಅವಾಯ್ಡ್ ಮಾಡ್ತಿದ್ದಾನೆ ನನ್ನ.! ಆನ್ ಲೈನ್‌ ಚೆಕ್ ಮಾಡಿದ್ರೆ ಮುಕ್ಕಾಲು ಗಂಟೆ ಹಿಂದೆ ಲಾಸ್ಟ್ ಸೀನ್ ಇದೆ. ‘ಹೈ ‘ಕಳಿಸಿದೆ. ಸಿಂಗಲ್  ರೈಟುಮಾರ್ಕು. ಅಂದರೆ. ಅಂದರೆ ಬೇರೆಯವರ ಜೊತೆಗೆ ಸಂಭಾಷಣೆ ನಡೀತಿದೆ.ಮಾತಾಡುವಾಗ ಅವ ನೆಟ್ ಆಫ್ ಇಡೋದು ಗೊತ್ತಿರೊ ವಿಚಾರವೇ. ಹೀಗೇಕಾಯ್ತು. ಸಂಬಂಧದಲ್ಲಿ ಏನೊಂದು  ಇಲ್ಲದೆ ಹೀಗೆ ದೂರಾಗಲು ಸಾಧ್ಯವೇ? ನನ್ನ ಪ್ರೀತಿಯಲ್ಲಿ ಇದ್ದ ಕೊರತೆಯಾದರೂ ಏನು? ಛೆ.ಅಲ್ಲದ್ದನ್ನೇ ಯೋಚಿಸ್ತೀನಿ. ಅಂತವನಲ್ಲ ಅವ. ಕ್ಷಣ ನಿರಾಳವಾದರೂ ಮತ್ತೆ ಎದೆಯೊಳಗೆ ಅನಂತವಾಗುತ್ತಿದ್ದ ನೋವು. ರಾತ್ರಿ ಹನ್ನೊಂದು ಕಾಲಿಗೆ ಸರಿಯಾಗಿ ಅವನಿಂದ ಮೆಸೇಜು ಬಂತು. ಜೊತೆಗೆ ಅನ್ಲೈನಿಗೂ ಬಂದ  ‘ಸಾರಿ..ಆಗಲಿಲ್ಲ.ಕಾಲ್ ಮಾಡೋದಿಕ್ಕೆ. ಫಾರ್ ಮಂಡ್ಯ, ಯೂ ಪ್ಲೀಸ್ ಕ್ಯಾರಿ ಆನ್. ಹ್ಯಾವ್ ಎ ನೈಸ್ ಟೈಮ್.ಬೈ.’ ಗಳಗಳನೆ ಅಳಬಹುದಾದ ಮಾತುಗಳು. ಆದರೆ…ಹೇಗೋ ಈ ಎದೆ ಗಟ್ಟಿಯಾಗಿದೆ.! ಒಂದೇ ಒಂದು ತೊಟ್ಟು ಕಣ್ಣೀರು ಬರಲಿಲ್ಲ . ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನೆಲ್ಲಾ ತುಸು ಹೊತ್ತು ಧ್ಯಾನಿಸಿ ಆವಾಹಿಸಿಕೊಂಡೆ. ಮತ್ತೆಂದೂ. ಎಂದೆಂದೂ ಅವನಿಗಾಗಿ ಕಾಯಲಾರೆ. ತಿರುಗಿ ಬಂದರೆ ಸ್ವೀಕರಿಸಲಾರೆ. ಮುಂದೆ ಯಾರಿಗಾಗಿಯೂ ಕಾಯಲಾರೆ.! ಕನ್ನಡಿ ನೋಡಿಕೊಂಡೆ. ಹಣೆಯ  ನೆರಿಗೆಗಳೆಲ್ಲ ಸಡಿಲಾಗಿ ಮುಖ ಪ್ರಸನ್ನವಾಗಿತ್ತು. ನೆಮ್ಮದಿಯ ಒಂದು ಕಿರುನಗು ತುಟಿಯ ಮೇಲೆ. ಎಂದೂ ನಿದ್ರಿಸದ ರೀತಿಯಲ್ಲಿ ಆ ರಾತ್ರಿ ಮಲಗಿ ನಿದ್ರಿಸಿದೆ. —– ಸುದೀರ್ಘವಾದ ನಿಟ್ಟುಸಿರಿನೊಂದಿಗೆ  ಮಾತು ಮುಗಿಸಿ ಅವಳು ನನ್ನ ಮುಖ ನೋಡಿದಳು. ಯಾಕೋ ಅಪ್ಪಿಕೊಳ್ಳಬೇಕು ಅನಿಸಿತು. ಸಮಾನ ದುಃಖಿಗಳು. ಇದೇ ಕಥೆ ನನ್ನ ಜೀವನದಲ್ಲಿ. ಎರಡು ವರ್ಷ ಮೊದಲು. ಆಗ ನನ್ನ ತಪ್ಪಿಸಿ ಮಾತಿಗೆ ತೊಡಗಿದ್ದು ಅವ ಇವಳ ಜೊತೆ.. ಈಗ …!!! ಹೆಸರು ಗೊತ್ತಿಲ್ಲ.. ಯಾವುದೋ ಹೆಣ್ಣು ಎದೆ… ಮೊಹರೊತ್ತಿಕೊಂಡಿದೆ ಇವನ ಹೆಸರನ್ನ.! ಮತ್ತದೇ ನೋವಿನ ಪ್ರಲಾಪಗಳ ಹಾಡು ಹೇಳ್ತಿರಬಹುದು. ನಡುರಾತ್ರಿವರೆಗೆ..!! ಹೆಣ್ಣು ಜನ್ಮ..’ಅಯ್ಯೋ’ ಅನ್ನೋದು ಜನ್ಮ ಸಿದ್ಧ.! ಎಲ್ಲ ಹೇಳಿ ಹಗುರಾಗಿ ಹೊಸದಾಗಿ ಹೊಳೆಯುತ್ತಿದ್ದ ಅವಳ ಅಕ್ಕರೆಯಲಿ ಕರೆದು ಒಂದು ಸಣ್ಣ ವಾಕಿಂಗ್ ಹೋಗಲಿಕ್ಕೆ ಹೊರಟೆ. ಅವಳೂ ಅಡ್ಡಿಯಿಲ್ಲದೆ  ಎದ್ದಳು. **********************

ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. ….. Read Post »

ಕಥಾಗುಚ್ಛ

ನಡಿ ಕುಂಬಳವೇ ಟರಾ ಪುರಾ

ಕಥೆ ಪ್ರಜ್ಞಾ ಮತ್ತಿಹಳ್ಳಿ             ಇನ್ನೇನು ಈ ಬಸ್ಸು ಇಳಿದಿಳಿದು ಕೆರೆಯೊಳಗೇ ನುಗ್ಗಿ ಬಿಡುತ್ತದೆ ಎಂಬ ಭಾವ ಬಂದು ಮೈ ಜುಂ ಎನ್ನುವಷ್ಟರಲ್ಲಿ ರೊಯ್ಯನೆ ಎಡಕ್ಕೆ ತಿರುಗಿ ದಟ್ಟ ಕಾಡಿನ ಏರಿ ಶುರುವಾಗುತ್ತದೆ. ಅಂದರೆ ಇದರರ್ಥ ಇಳಿಯೂರು ಎಂಬ ಊರು ದಾಟಿತು ಹಾಗೂ ತಲೆಯೂರಿಗೆ ೧೫ ಕಿ.ಮೀ ಉಳಿದಿದೆ ಅಂತ. ಮೂರು ಜನರ ಸೀಟಿನ ಎಡತುದಿಗೆ ಕೂತಿದ್ದ ಬಸವರಾಜ ಎಡಬದಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬೀಳುವುದನ್ನು ತಪ್ಪಿಸಿಕೊಳ್ಳುತ್ತಿದ್ದಾನೆ. ಇಕ್ಕೆಲದ ಎತ್ತೆತ್ತರದ ಮರಗಳು, ಅವುಗಳ ದಟ್ಟ ನೆರಳಿನಲ್ಲಿ ಬಿಸಿಲೇ ಕಾಣದ ಆಕಾಶ, ಬೈತಲೆಯಂಥ ಸಣ್ಣ ದಾರಿಯಷ್ಟೇ ಕಾಣುವ ಸ್ಟಾಪುಗಳು, ಅಲ್ಲಲ್ಲಿಳಿದುಕೊಂಡು ನಿರ್ಭಯವಾಗಿ ಸರಸರ ನಡೆಯುತ್ತ ಮಾಯವಾಗಿಬಿಡುವ ಜನರು. ಒಂದಿಷ್ಟು ಭತ್ತದ ಗದ್ದೆ, ಅಡಿಕೆ-ತೆಂಗಿನ ಮರಗಳಿರುವ ಒಂಟಿ ಮನೆಗೆ ಜನ ಒಂದು ಊರು ಎಂದು ಕರೆಯುವುದು ನಾಲ್ಕೈದು ದನ-ಕರು ಸಾಕಿಕೊಂಡು ೫-೬ ಜನರ ಕುಟುಂಬವೊಂದು ಆರಾಮವಾಗಿ ಸದ್ದಿಲ್ಲದೇ ಬದುಕುವ ರೀತಿ ಇವನ್ನೆಲ್ಲ ಈಗೊಂದು ೫-೬ ತಿಂಗಳಿಂದ ನೋಡುತ್ತಿದ್ದಾನೆ.  ಬೆಳಗಿನಿಂದ ರಾತ್ರಿಯವರೆಗೆ ಬಾಯ್ತುಂಬ ಎಲೆ-ಅಡಿಕೆ ತುಂಬಿಕೊಂಡು ಓಡಾಡುವ ಗಂಡಸರು, ತುರುಬು ಕಟ್ಟಿಕೊಂಡು ಅಬ್ಬಲ್ಲಿಗೆ ದಂಡೆ ಮುಡಿವ ಹೆಂಗಸರು. ಮೊದಮೊದಲು ಅವನಲ್ಲಿ ಭಯ ಹುಟ್ಟಿಸುತ್ತಿತ್ತದ್ದರು. ಪುಳು-ಪುಳು ಕುಣಿಯುವ ಮೀನು ಹಿಡಿದು ಅಡಿಗೆ ಮಾಡುವ ಸಂಗತಿಯೆ  ಅವನಿಗೆ ಎದೆ ಝಲ್ಲೇನ್ನಿಸುವಂತೆ ಮಾಡಿತ್ತು. ಬಿಜಾಪೂರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನವರು ಹುಟ್ಟಿದೂರಿನಲ್ಲಿ ಹುಟ್ಟಿದ, ಬಿಜಾಪುರವೆಂಬ ಗುಮ್ಮಟಗಳ ಊರಿನಲ್ಲಿ ಓದಿದ, ಈ ಬಸವರಾಜ ಉಳ್ಳಾಗಡ್ಡಿಯೆಂಬ ಸಂಭಾವಿತ ಹುಡುಗ ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡುವಾಗ ಡಿಪಾರ್ಟಮೆಂಟಿನ ಹುಡುಗರ ಜೊತೆ ಟೂರು ಹೋಗುವಾಗ ತಲೆಯೂರಿನ ಮಾರಿಕಾಂಬಾ ದೇವಸ್ಥಾನವನ್ನು ನೋಡಿದ್ದ. ತನ್ನ ಕುಟುಂಬದ ಸದಸ್ಯರು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದರ್ಶನಕ್ಕೆ  ಕರೆದೊಯ್ಯುವಾಗ, ಇಲ್ಲಿಯ ಬಸ್ ಸ್ಟಾö್ಯಂಡಿನಲ್ಲಿಳಿದು, ಕೆ.ಎಸ್.ಆರ್.ಟಿ.ಸಿ., ಕ್ಯಾಂಟೀನಲ್ಲಿ ಚಾ ಕುಡಿದಿದ್ದ. ಅಷ್ಟು ಬಿಟ್ಟರೆ, ಅವನಿಗೆ ಈ ಊರು ಅಪರಿಚಿತವೆ. ನೆಟ್ ಪರೀಕ್ಷೆ ರಿಝಲ್ಟ ಬರುತ್ತಿದ್ದಂತೆ, ಕೆ.ಪಿ.ಎಸ್.ಸಿ.ಯ ಇಂಟರವ್ಯೂ ನಡೆಸಿ, ಸೆಲೆಕ್ಟ್ ಆದವರಿಗೆ ಪೋಸ್ಟಿಂಗ್ ಕೊಡುವಾಗ ಕೌನ್ಸೆಲಿಂಗ್ ಮಾಡಿದ್ದರು. ಲಿಸ್ಟಿನಲ್ಲಿ ಮೊದಲು ಹೆಸರಿದ್ದವರೆಲ್ಲ ಬೆಂಗಳೂರು, ಮೈಸೂರು, ಇತ್ಯಾದಿ ಊರುಗಳನ್ನು ಆಯ್ದುಕೊಂಡಿದ್ದರು. ಬಸವರಾಜನ ಪಾಳಿ ಬರುವಷ್ಟರಲ್ಲಿ ಇದ್ದವೆಲ್ಲ ಸಣ್ಣ-ಸಣ್ಣ ಊರುಗಳು, ಶಿವಮೊಗ್ಗ, ಉಡುಪಿ ಜಿಲ್ಲೆಯ ಊರುಗಳನ್ನು ಆಯ್ಕೆ ಮಾಡಿಕೊಳ್ಳಲು ಮನಸ್ಸು ಬರದೇ, ಇದ್ದುದರಲ್ಲೇ ವಿಜಾಪೂರ, ಬಾಗಲಕೋಟೆಗಳಿಂದ ಡೈರೆಕ್ಟ್ ಬಸ್ಸು ಇರುವ ಇದೇ ಅನುಕೂಲ ಎನ್ನಿಸಿತು. ಆದರೆ, ಕೆ.ಪಿ.ಎಸ್.ಸಿ., ಬಿಲ್ಡಿಂಗ್‌ನ ಹೊರಗಿನ ಕ್ಯಾಂಟೀನಿನಲ್ಲಿ ಚಾ ಕುಡಿಯುತ್ತ ನಿಂತಾಗ, ಯಾರೋ ಕುಮಟಾ ಕಡೆ ಹುಡುಗಿಯಂತೆ ಕಣ್ಣಲ್ಲಿ ನೀರು ತುಂಬಿಕೊAಡು ಮತ್ತೊಬ್ಬರಿಗೆ ಹೇಳುತ್ತಿದ್ದಳು. “ಇದೇ, ಇವ್ರೆಯಾ ತಲೆಯೂರು ತಗೊಂಬಿಟ್ರು. ಇವ್ರ ನೆಕ್ಸಟ್ ನಂದೇ ಇತ್ತು. ಸಾಯ್ಲಿ ತಪ್ಪೋಯ್ತು ಒಂದ್ ನಿಮಿಷ್ದಲ್ಲಿ ಕೈ ಬಿಟ್ ಹೋಯ್ತು”.  ಕುಡಿಯುತ್ತಿರುವ ಚಾ ನೆತ್ತಿಗೇರಿದಂತಾಗಿ, ಕೆಮ್ಮು ಬಂದಿತ್ತು. ಜೊತೆಗಿದ್ದ ವೀರೇಶ ಬಳಿಗಾರ ಅವಳನ್ನೇ ನೇರವಾಗಿ ಕೇಳಿಬಿಟ್ಟ. “ಯಾಕ್ರಿ ಮೇಡಮ್ಮರೆ ಏನಾಯ್ತ್ರೀ?  ಯಾರಿಗ್ಯಾವ್ದು ಬೇಕೋ ತಗೋತರ‍್ರಿ, ನಿಮ್ಗೇನ್ ಮಾಡ್ಯಾನಿಂವ?” “ಅಯ್ಯೋ ನಾ ಎಂತ ಹೇಳ್ದೆ? ನಮಗೆ ಲೇಡಿಸಿಗೆ ದೂರ ಹೋಗೋದು ತ್ರಾಸಲ.  ನೀವು ಜಂಟ್ಸ್ ಬೇಕಾರ ಹೋಗ್ಬಹ್ದು .ಕುಮ್ಟಾ, ಇಲ್ಲದಿದ್ರೆ ತಲೆಯೂರು ಸಿಗ್ತದೆ ಹೇಳಿ ಆಸೆ ಇತ್ತು” ಎಂದೇನೋ ಗಳಗಳ ಹೇಳಿದಳು. “ಯಾವ್ಯಾವ ಊರಿನ ನೀರಿನ ಋಣ ಯಾರ‍್ಯಾರಿಗೆ ಇರ್ತೈತಿ ಹೇಳಾಕ ಬರೂದಿಲ್ರಿ. ಇಷ್ಟಕ್ಕೂ ಪ್ರತಿವರ್ಷ ಟ್ರಾನ್ಸಫರ್ ಮಾಡಿ ಒಗಿತಿರ‍್ತಾರ. ನೀವು ಮುಂದಿನ್ವರ್ಷ ಟ್ರಾನ್ಸಫರ್ ಕೌನ್ಸೆಲಿಂಗ್‌ಗೆ ರ‍್ರಿ. ಎಕ್ಸಚೇಂಜ್ ಮಾಡಿಕೊಳ್ಳೋಣ”, ವೀರೇಶ ಅಕ್ಕಿಆಲೂರು ತೆಗೆದುಕೊಂಡಿದ್ದ. ಅದೊಂದು ಸಣ್ಣ ಹಳ್ಳಿ. ತಾನು ಪ್ರತಿ ಶನಿವಾರ ತಲೆಯೂರಿಗೆ ಬಂದುಬಿಡುತ್ತೇನೆ ಎಂದು ಹೇಳಿದ್ದ.             ಬಸವರಾಜ ಜಾಯ್ನ ಆಗಲು ಬಂದಾಗ ಅಕ್ಟೋಬರ್ ತಿಂಗಳು. ಸೆಮಿಸ್ಟರ್ ಮುಗಿಯಲು ಇನ್ನೊಂದೇ ತಿಂಗಳು ಬಾಕಿ ಇತ್ತು.  ಎಂ.ಎ. ಮಾಡುವಾಗ ಹಾಸ್ಟೇಲಲ್ಲಿ ಪರಿಚಯವಿದ್ದ ರಾಮಚಂದ್ರ ನಾಯ್ಕ ಸಮಾಜಶಾಸ್ತ್ರಕ್ಕೆ ಜಾಯ್ನ ಆಗಲು ಬಂದಿದ್ದ. ಅವನು ಭಟ್ಕಳದವನಾದ ಕಾರಣ, ಊರಿನ ಪರಿಚಯ ಚೆನ್ನಾಗೇ ಇತ್ತು. ಅವನು ತಾನು ಮನೆ ಬಾಡಿಗೆಗೆ ಹಿಡಿಯುತ್ತೇನೆ, ನೀನು ಶೇರ್ ಮಾಡು ಎಂದಾಗ ಬಸವರಾಜನಿಗೆ ಅನುಕೂಲವೇ ಆಯ್ತು. ದೊಡ್ಡ ಕಂಪೌಂಡಿನ ಮಹಡಿ ಮನೆಯ ಕೆಳಗಿನ ಭಾಗದಲ್ಲಿ ಮಾಲಕರು ಇದ್ದರು. ಮೇಲ್ಬಾಗದ ಮೂರು ರೂಮುಗಳ ಮನೆ ಇವ್ರದ್ದು. ಮಾಲಕ ವಿಶ್ವನಾಥ ಕಿಣಿಯದು ಪೇಟೆಯಲ್ಲಿ ಅಂಗಡಿ ಇತ್ತು. ಹೆಂಡತಿ ದೊಡ್ಡ ಧ್ವನಿಯ ಜೋರುಮಾತಿನ ಸಂಧ್ಯಾಬಾಯಿ. ಮಕ್ಕಳು ಹುಬ್ಬಳ್ಳಿಯಲ್ಲಿ ಇಂಜನಿಯರಿಂಗ್ ಓದುತ್ತಿದ್ದರು. ಜನಿವಾರ ಹಾಕಿಕೊಂಡು ಸಂಧ್ಯಾವಂದನೆ ಮಾಡುವ ಕಿಣಿ ಮೀನು ತಿನ್ನುವುದು ನೋಡಿ ಬಸವರಾಜ ಕಕ್ಕಾಬಿಕ್ಕಿಯಾಗಿದ್ದ.  ಅವರು ಸಾರಸ್ವತ ಬ್ರಾಹ್ಮಣರೆಂದೂ, ಕೊಂಕಣಿ ಮಾತಾಡುತ್ತಾರೆ ಹಾಗೂ ಮತ್ಸ್ಯಾಹಾರ ಸೇವಿಸುತ್ತಾರೆಂದೂ ರಾಮಚಂದ್ರನಾಯ್ಕ ವಿವರಣೆಯಿತ್ತಾಗ, ಬಸವರಾಜ ತಲೆಯಾಡಿಸಿದ. ಕೊಂಕಣಿ ಮಾತೃಭಾಷೆಯ ಕಿಣಿ ದಂಪತಿಗಳು ರಾಗವಾಗಿ ಮಾತನಾಡುವ ಕನ್ನಡ ಇವನಿಗೆ ಅರ್ಥವೇ ಆಗುತ್ತಿರಲಿಲ್ಲ. ಒಂದು ಸಲ ಸಂಧ್ಯಾ ಮನೆ ಬಾಗಿಲ ಮೆಟ್ಟಿಲ ಮೇಲೆ ಕುಳಿತು ಚಾ ಕುಡಿಯುತ್ತಿರುವಾಗ ಕಾಲೇಜು ಮುಗಿಸಿ ಬಂದ ರಾಮಚಂದ್ರ ಬಸವರಾಜರಿಗೆ “ಚಾ ಕುಡಿವಾ ರ‍್ರಿ” ಎಂದು ಕರೆದಳು. ಮುಖ ತೊಳೆದು ಕುಡಿದರಾಯ್ತು ಎಂದು ಬಸವರಾಜ “ಹಿಂದಾಗಡೆ ಕುಡಿತೀನ್ರಿ ಅಕ್ಕಾರೆ” ಎಂದ. “ಇಶ್ಯಿಶ್ಯಿ ನಾವು ಜಾತಿಬೇಧ ಮಾಡೋದಿಲ್ಲ. ಹಿತ್ಲಲ್ಲೆಲ್ಲ ಕೂತ್ಕೊಂಡು ಕುಡ್ಯುದೆಂತಕೆ, ಇಲ್ಲೇ ಕುಡೀರಿ” ಎಂದಳು.  ಬಸವರಾಜನ ಭಾಷೆಯನ್ನು ಕೆಲಮಟ್ಟಿಗೆ ಬಲ್ಲ ರಾಮಚಂದ್ರ ಹಿಂದಾಗಡೆ ಅಂದ್ರೆ ಆಮೇಲೆ ಅಂತ ಎಂದು ಕನ್ನಡವನ್ನು ಕನ್ನಡಕ್ಕೆ ಭಾಷಾಂತರ ಮಾಡಬೇಕಾಯ್ತು. ರಾಮಚಂದ್ರನ ಅನ್ನ, ಕರಾವಳಿಯ ತೆಂಗಿನ ಕಾಯಿ, ಮಸಾಲೆ ಸಾರಿನ ಅಡುಗೆ, ಬಸವರಾಜನಿಗೆ ರೂಢಿಸಲಿಲ್ಲ. ಊರಿಂದ ದೊಡ್ಡ ಗೋಣೀಚೀಲದಲ್ಲಿ ಕಟಕರೊಟ್ಟಿ, ಚಟ್ನಿಪುಡಿ, ತಂದಿಟ್ಟುಕೊಳ್ಳುತ್ತಿದ್ದ.  ಯಾವುದಾದರೂ ತರಕಾರಿಯ ಪಲ್ಯ ಅಥವಾ ಸಾಂಬಾರ್ ಮಾಡಿಕೊಂಡು ಅನ್ನ-ರೊಟ್ಟಿಗಳ ಜೊತೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಬೆಳಗಿನ ತಿಂಡಿಗೆ ರಾಮಚಂದ್ರ ದೋಸೆ-ಇಡ್ಲಿ ಮಾಡುವುದು ಮಾತ್ರ ಬಸವರಾಜನಿಗೆ ಬಹಳ ಇಷ್ಟವಾಗುತ್ತಿತ್ತು. “ಮುಂಜಾನೆ ನಸಿಕ್ಲೆ ನಾಷ್ಟಾ ಮಾಡ್ತೀರಿ. ನೋಡಪ್ ನೀವೆಲ್ಲ. ನಮ್ಮೂರಾಗೆ ಬರೇ ಚಾ ಕುಡ್ದು ಮಂದಿ ಅಡ್ಡಾಡತೇವಿ. ಒಂದು ತುತ್ತು ಉಪ್ಪಿಟ್ಟು ಇಲ್ಲಾ, ಚುಮ್ಮರಿ ಒಗ್ಗರಣಿ ಕಾಣ್ಬೇಕಂದ್ರೆ ಹತ್ತು ಹೊಡೀತೇತಲೆ. ಅದು ಹ್ಯಾಂಗ ಏಳಕ್ಕೆ ತಿಂತಿರೋ ಮಾರಾಯ” ಎಂದು ಆಶ್ಚರ್ಯ ಪಡುತ್ತಿದ್ದ. ಎಂಟು ಗಂಟೆಯೆಂದರೆ, ಅಕ್ಕ-ಪಕ್ಕದ ಹೆಂಗಸರು ಒಬ್ಬರಿಗೊಬ್ಬರು “ಆಸ್ರಿ ಕುಡಿದ್ರಿ?” ಎಂದು ಕೇಳುತ್ತ ಚೊಂಯ್ ಚೊಂಯ್ ಎಂದು ದೋಸೆ ಎರೆವ ಸದ್ದಿನ ಹಿನ್ನೆಲೆ ಸಂಗೀತದೊಂದಿಗೆ ಓಡಾಡುತ್ತಿದ್ದರು.             ಬಸ್ಸಾಗಲೇ ತಲೆಯೂರಿನ ಬಸ್ ಸ್ಟಾö್ಯಂಡಲ್ಲಿ ನಿಂತು ಕಂಡಕ್ಟರ್ ಮುಖ ಹೊರಹಾಕಿ “ಡೈರೆಕ್ಟ ಕುಮ್ಟಾ, ಹೊನ್ನಾವರ್, ಭಟ್ಕಳ್ ಯರ‍್ರಿ” ಎಂದು ಕೂಗುತ್ತಿದ್ದ. ಪಕ್ಕದಲ್ಲಿ ಗೊರಕೆ ಹೊಡಿಯುತ್ತ ಮಲಗಿದ್ದ ಮಾವನನ್ನು ಅಲುಗಾಡಿಸಿ ಎಬ್ಬಿಸಿದ ಬಸವರಾಜ “ಏಳೋ ಮಾವಾ  ಊರ‍್ಬಂತು” ಸೀಟಿನ ಕೆಳಗಿನ ರೊಟ್ಟಿ ಚೀಲ, ಮೇಲಿಟ್ಟ ಬ್ಯಾಗುಗಳನ್ನು ತೆಗೆದುಕೊಂಡು ಇಬ್ಬರೂ ಇಳಿದರು. ಅವ್ನೌವ್ನ ಎಂಥಾ ನಿದ್ದೇಲೆ ಬಸು, ಹುಬ್ಬಳ್ಳಿ ದಾಟಿದ್ದೊಂದೇ ಗೊತ್ನೋಡೊ” ಎನ್ನುತ್ತ ಮಾಮಾ ಇಳಿದ. ಈ ಬಾರಿ ಊರಿಗೆ ಹೋದಾಗ ಅಕ್ಕನ ಗಂಡ ಮಲ್ಲಿಕಾರ್ಜುನ ತಾನೂ ಬರುವುದಾಗಿ ಬೆನ್ನು ಹತ್ತಿ ಬಂದಿದ್ದ.  ಬಸವರಾಜನ ಒಬ್ಬಳೇ ಅಕ್ಕ ನೀಲಾಂಬಿಕಾಳನ್ನು ಖಾಸಾ ಸೋದರ ಮಾವ ಮಲ್ಲಿಕಾರ್ಜುನನಿಗೆ ಕೊಟ್ಟಿದ್ದರು. ಬಸವನಬಾಗೇವಾಡಿಯ ಮಗ್ಗುಲಲ್ಲೇ ಇರುವ ನಿಡಗುಂದಿಯಲ್ಲಿ ಹೊಲ-ಮನೆ ಮಾಡಿಕೊಂಡು ಅನುಕೂಲವಾಗಿರುವ ಮಲ್ಕಾಜಿ ಮಾಮಾಗೆ ಹಿರಿಮಗಳು ಅಕ್ಕಮಹಾದೇವಿ.  ಅವಳನ್ನು ವಾಡಿಕೆಯಂತೆ, ತಮ್ಮನಿಗೇ ಕೊಡಬೇಕೆನ್ನುವ ಆಸೆ ನೀಲಕ್ಕನದು. ನೌಕರಿ ಸಿಕ್ಕಿದ್ದೇ ಮದುವೆ ಪ್ರಸ್ತಾಪ ಶುರುವಿಟ್ಟುಕೊಂಡರು. ಆದರೆ, ಅರ್ಥಶಾಸ್ತ್ರದ ಜೊತೆಗೆ ಒಂದಿಷ್ಟು ಸಾಹಿತ್ಯ, ವೈಚಾರಿಕತೆ ಅಂತೆಲ್ಲಾ ಓದುತ್ತ ಬೆಳೆದು ಇದೀಗ ನೌಕರಿಗೆ ಸೇರಿಕೊಂಡ ಬಸವರಾಜ ಉಳ್ಳಾಗಡ್ಡಿಗೆ ಅಕ್ಕನ ಮಗಳನ್ನು ಮದುವೆಯಾಗಲು ಎಳ್ಳಷ್ಟೂ ಮನಸ್ಸಿಲ್ಲದೇ ಒಲ್ಲೆನೆಂದು ಜಗಳ ತೆಗೆದಿದ್ದ. ಮೊದಲೇ ಈ ದೂರದ ಮಲೆನಾಡಿನ ಊರುಗಳನ್ನು ಸರಿಯಾಗಿ ನೋಡಿರದ ಬಾಗೇವಾಡಿಯ ಜನರಿಗೆ ಆತಂಕ ಶುರುವಾಗಿತ್ತು. ತಮ್ಮ ಬಸೂನನ್ನು ಅಲ್ಲಿ ಯಾರಾದರೂ ಬುಟ್ಟಿಗೆ ಹಾಕಿಕೊಂಡಿರುವರೇ, ಹೇಗೆಂದು  ತನಿಖೆ ಮಾಡುವ ಸಲುವಾಗಿ ಬಸೂನ ತಾಯಿ ಗೌರವ್ವ ತಮ್ಮನನ್ನು ಕಳಿಸಿದ್ದಳು. ಆಗಾಗ ಅಲ್ಲಿ-ಇಲ್ಲಿ ಊರು ನೋಡಿ ಬರುವ ಚಟವಿದ್ದ ಮಲ್ಕಾಜಿ ಮಾವ ತನ್ನ ಜೊತೆ ಬರುತ್ತೇನೆಂದಾಗ ಕಾರಣ ಗೊತ್ತಿರದ ಬಸೂ ಸಹಜವೇ ಇರಬೇಕೆಂದುಕೊಂಡು ಒಪ್ಪಿ ಕರೆತಂದಿದ್ದ. ಎರಡು ದಿನದ ರಜೆಗೆ ಊರಿಗೆ ಹೋಗಿದ್ದ ರಾಮಚಂದ್ರನಾಯ್ಕ ಮರುದಿನ ಬರುವವನಿದ್ದ ಕಾರಣ ರೂಮಿಗೆ ಬೀಗ ಹಾಕಿತ್ತು.  ಮೆಟ್ಟಿಲಮೇಲೆ ಕುಳಿತು ಪಕ್ಕದ ಮನೆ ಹೆಂಗಸಿನ ಜೊತೆ ಹರಟುತ್ತಿದ್ದ ಸಂಧ್ಯಾ,“ಏನು ಉಳ್ಳಾಗಡ್ಡಿ ರ‍್ರು, ಯಾರೋ ನೆಂಟ್ರಿಗೆ ಕಕ್ಕೊಂಬಂದಾರಲ್ಲ”ಎಂದಳು. “ಹೌದ್ರಿ ಅಕ್ಕಾರೆ, ಇವ್ರು ನಮ್ಮ ಮಾಮರ‍್ರಿ” ಎಂದ. “ಇನ್ ನಾಳೆ ಬೆಳಿಗ್ಗೇನೆ ನೀರು ಮ್ಯಾಲೇರ‍್ಸೋದು. ಹನಿ ಸಣ್ಣಕೆ ಬಿಟ್ಕಳ್ರಿ ಹಂ” ಎಂದಳು.  “ಯಕ್ಲೆ ಬಸ್ಯಾ ಈ ಊರಾಗೂ ನೀರಿನ ತ್ರಾಸೈತಿ” ಎಂದು ಭಯಂಕರ ಆಶ್ಚರ್ಯದಿಂದ ಕೇಳಿದ ಮಾವನಿಗೆ “ಇಲ್ಲೋ ಮಾರಾಯ ಈ ಮಾಲಕರು ಕೆಟ್ಟ ಜುಗ್ಗ ಅದಾರ. ದಿನಕ್ಕೊಮ್ಮೆ ಮುಂಜಾನೆ ನಳ ಬಿಟ್ಟಾಗ ನೀರು ಏರ‍್ಸತಾರ. ಕರೆಂಟು ಉಳ್ಸಾಕಂತ ಲೈಟು ರ‍್ಸಿ, ಅಂಗಳದಾಗ ಕೂಡೊ ಮಂದಿ ಐತಿ ಬಾ ಇಲ್ಲೆ” ಎಂದು ನಕ್ಕ.             ಅವ್ವ ಮಾಡಿಕೊಟ್ಟ ಮಾಡ್ಲಿ ಉಂಡಿ, ಚಕ್ಕುಲಿಗಳನ್ನು ಸಂಧ್ಯಾಗೆ ಕೊಡಲೆಂದು ಕೆಳಗೆ ಹೋದ.  “ಇದೇನು ರೇತಿ ಕಂಡಾಂಗೆ ಕಾಣ್ತದಲ್ಲ” ಎಂದು ಆಶ್ಚರ್ಯಪಟ್ಟಳು. ಹ್ಹೆ ಹ್ಹೆ ಹ್ಹೆ ಎಂದು ನಕ್ಕು ಮೇಲೆ ಬಂದ.  ರಾಮಚಂದ್ರನ ಫೋನು ಬಂದಾಗ ರೇತಿ ಎಂದರೇನೆಂದು ಕೇಳಿದ. ಅವನು ‘ಮರಳು’ ಅಂದಾಗಲೇ ಅರ್ಥವಾಗಿ ನಗು ಬಂದಿತು. ಮಾವನಿಗೆ ಊರು ತೋರಿಸಲು ಕರಕೊಂಡು ಹೊಂಟ.  ಅವರ ಮನೆಯಿದ್ದ ಅಯ್ಯಪ್ಪ ನಗರದಿಂದ ನಡೆಯುತ್ತ ಕೋಟೆಕರೆಗೆ ಬಂದರು. ಕೆರೆ ಏರಿ ಮೇಲೆ ನಡೆಯುತ್ತ ಹೊರಟಾಗ ಒಂದಿಬ್ಬರು ಹುಡುಗರು ಬಸವರಾಜನಿಗೆ “ನಮಸ್ಕಾರ ಸರ್, ವಾಂಕಿಗು?” ಎಂದು ಮಾತಾಡಿಸಿದರು. “ನಮ್ಮ ಮಾಮಾಗೆ ಊರು ತೋರಿಸ್ಬೇಕು’’ ಎಂದ. ಹಾಗಿದ್ರೆ ಮಾರಿಗುಡಿಗೆ ಹೊಗೋದು ಚೊಲೊ. ಈ ಬದಿಗೆ ಗಣಪತಿ ದೇವಸ್ಥಾನ ಮತ್ತೆಂತ ಉಂಟು ಈ ಊರಲ್ಲಿ.  ಆ ಹುಡುಗರಿಗೆ ತಮ್ಮ ಊರು ಎಂದರೆ, ಮಹಾಬೋರು. ಎರಡು ದೇವಸ್ಥಾನ-ಕೆರೆ ಇರುವ ಈ ಊರಲ್ಲಿ ಎಂತಾ ನೋಡ್ತಾರೆ ಅಂತ ಆಶ್ಚರ್ಯಪಟ್ಟರು. ಬನವಾಸಿಗೆ, ಜೋಗಕ್ಕೆ ಆಥ್ವಾ ಸಹಸ್ರಲಿಂಗಕ್ಕೆ ಹೋಗ್ಬಹುದು ಸರ್ ಎಂದ ಒಬ್ಬ. ಆಯ್ತು ಎಂದು ತಲೆಯಾಡಿಸುತ್ತ ಹೊರಟರು. “ಇವ್ರು ಹ್ಯಾಂಗ್ ಮಾತಾಡ್ತರ‍್ಲೆ, ಮಾಸ್ತರು ಅಂತ ಕಿಮ್ಮತ್ತಿಲ್ಲೇನಲ್ಲೆ? ರಿ ಹಚ್ಚಂಗಿಲ್ಲಲ್ಲ?” ಸಿಟ್ಟಿನಿಂದ ಕೇಳಿದ ಮಾವನಿಗೆ, “ನಂಗೂ ಹೀಗ ಅಗಿತ್ತಪ್ಪ ಶುರುವಿಗೆ. ಆಮೇಲೆ ಗೊತ್ತಾಯ್ತು.  ಇಲ್ಲಿ ಮಂದಿ ಕನ್ನಡ ಬ್ಯಾರೇನೇ ಐತಿ. ಯಾರಿಗೂ ರಿ ಹಚ್ಚಂಗಿಲ್ಲ. “ವಿಚಿತ್ರ ಊರು ಬಿಡಪ” ಎಂದು ಮಲ್ಕಾಜಿ ಪಾನಂಗಡಿ ಕಡೆ ನಡೆದು ಸಿಗರೇಟು ಹಚ್ಚಿಕೊಂಡ. ಬಾಳೆಹಣ್ಣು ಕೊಂಡ ಬಸೂ ಸಿಪ್ಪೆ ಸುಲಿದು ತಿನ್ನತೊಡಗಿದ.  “ಅರೆ ಸರ್, ನೀವು ಊರಿಂದ ಯಾವಾಗ ಬಂದ್ರಿ?” ಧ್ವನಿ ಕೇಳಿ ತಿರುಗಿದರೆ, ಫ್ಯೆನಲ್ ಬಿ.ಎ. ಹುಡುಗಿ ವರದಾ. ಇಡೀ ಕಾಲೇಜಿನಲ್ಲೇ ಹೆಚ್ಚು ಮಾತಾಡುವ ಐದೂ ಕಾಲಡಿ ಎತ್ತರದ ಕಟ್ಟುಮಸ್ತಾದ ಹುಡುಗಿ. ಆಟ-ಭಾಷಣ-ರಂಗೋಲಿ-ಡ್ಯಾನ್ಸು ಎಲ್ಲಾ ಸ್ಫರ್ಧೆಗಳಲ್ಲೂ ಬಹುಮಾನ ಗಳಿಸುತ್ತ ಉಪನ್ಯಾಸಕರ ಮುಖ ಕಂಡಾಗಲೊಮ್ಮೆ “ಇಂಟರ‍್ನಲ್ಸಗೆ ಇಪ್ಪತ್ತಕ್ಕೆ ಇಪ್ಪತ್ತು ಕೊಡ್ಬೇಕು ಹಂ ಈ ಸಲ ನಾವು ಫ್ಯೆನಲ್ ಇಯರ್. ಜೀವನದ ಪ್ರಶ್ನೆ ಮತ್ತೆ” ಎಂದು ತಾಕೀತು ಮಾಡುತ್ತ ತಿರುಗುತ್ತಿದ್ದಳು. ಹಾಂಗಂತ ಅಭ್ಯಾಸದಲ್ಲಿ ಅವಳು ತೀರಾ ಸಾಧಾರಣವಾದ ಅಂಕ ಪಡೆಯುವ ಹುಡುಗಿ. ಅವಳ ಭಯಕ್ಕೆ ಉಪನ್ಯಾಸಕರು ಅಂಕ ಕೊಡಬೇಕಾಗಿತ್ತು. ತೀರಾ ಕಟ್ಟುನಿಟ್ಟಿನ ಕಾಮತ್

ನಡಿ ಕುಂಬಳವೇ ಟರಾ ಪುರಾ Read Post »

You cannot copy content of this page

Scroll to Top