ಅಂಕಣ ಸಂಗಾತಿ
ವಿಜಯಶ್ರಿ ಹಾಲಾಡಿಯವರ ಅಂಕಣ
ನೆಲಸಂಪಿಗೆ
ಕಾಡಿನೊಳಗೆ ಕಳೆದುಹೋದ ದಾರಿ
ಅಂಕಣ ಸಂಗಾತಿ ವಿಜಯಶ್ರಿ ಹಾಲಾಡಿಯವರ ಅಂಕಣ ನೆಲಸಂಪಿಗೆ ಸಣ್ಣತನಗಳನ್ನು ಮೀರಲು… . ಈಗ ರಾತ್ರಿ ಹನ್ನೆರಡೂವರೆ ಹೊತ್ತಿಗೆ ನಾಯಿಗಳದ್ದು ಬೊಬ್ಬೆಯೋ ಬೊಬ್ಬೆ, ಸುಮಾರು ಇಪ್ಪತ್ತು ದಿನಗಳ ಕಾಲ ಬಿಡದೇ ಹೊಯ್ದ ಜಡಿಮಳೆ ಮನುಷ್ಯರು, ಪ್ರಾಣಿ-ಪಕ್ಷಿಗಳ ಹೊರ ಸಂಚಾರವನ್ನೇ ನಿಯಂತ್ರಿಸಿತ್ತು ಎಂದರೂ ಉತ್ಪೇಕ್ಷೆಯಲ್ಲ. ಮಳೆಯೊಂದಿಗೆ ಚಳಿ ಗಾಳಿಯೂ ಇದ್ದದ್ದರಿಂದ ಅಗತ್ಯ ಕೆಲಸಗಳನ್ನು ಹೊರತುಪಡಿಸಿ ಹೊರಗೆ ತಲೆ ಹಾಕಲು ಯಾರಿಗೂ ಇಷ್ಟವಿಲ್ಲ. ಆದರೆ ದಿನಚರಿ ಸಾಗದೆ ಬೇರೆ ಮಾರ್ಗವಿಲ್ಲ. ಹೀಗೆ ಎಲ್ಲರನ್ನೂ ಕಟ್ಟಿ ಹಾಕಿದ್ದ ಮಳೆ ಈಗೆರಡು ದಿನದಿಂದ ಹೊಳವಾದ್ದರಿಂದ ನಮ್ಮ ನಾಯಿಗಳ ಬದುಕಿನಲ್ಲೂ ಸ್ವಲ್ಪ ಉತ್ಸಾಹ ತುಂಬಿ, ಗಂಟಲಿಗೆ ಬಲ ಬಂದಂತಿದೆ! ಯಾಕೆ ಇಷ್ಟೊಂದು ಗಲಾಟೆ ಮಾಡುತ್ತಿವೆ ಎಂದು ಹೊರಗೆ ಹೋಗಿ ನೋಡಿದರೆ ನನಗೇನೂ ಕಾಣಲಿಲ್ಲ. ಟಾಮಿ, ಕೆಂಪಿ ಗೇಟಿನ ಹತ್ತಿರ ಆಚೀಚೆ ನುಗುಳುತ್ತಾ ಚಡಪಡಿಸುತ್ತಿದ್ದರೆ ಪ್ಯಾಚಿ ಮನೆಯ ಹತ್ತಿರ ಸರ್ತ ಕುಳಿತು ಸೂಕ್ಷ್ಮವಾಗಿ ವೀಕ್ಷಿಸುತ್ತಿತ್ತು. ಯಾರೋ ಹೊಡೆದು ಕಾಲಿಗೆ ತೀವ್ರ ಪೆಟ್ಟಾಗಿ ಈಗೊಂದು ವಾರದಿಂದ ಮೂರೇ ಕಾಲಿನಲ್ಲಿ ನಡೆಯುತ್ತಿರುವ ಗುಂಡ ಮತ್ತು ಸಣ್ಣ ಪುಟ್ಟಗಾಯವಾಗಿರುವ ಕರಡಿ(ಕರಿಯ) ಎರಡೂ ಸಿಟೌಟಿನಲ್ಲೇ ಮಲಗಿ ಕಿವಿ ಕೆಪ್ಪಾಗುವಂತೆ ಅರಚುತ್ತಲೇ ಇದ್ದವು. ಕರಡಿಯಂತೂ ಸ್ಟ್ಯಾಂಡಿನೊಳಗೆ ಮಲಗಿಯೇ ಕೂಗಾಡುತ್ತಿತ್ತು! ತಾವಿಬ್ಬರು ಯಾಕೆ ಕೂಗುತ್ತಿರುವುದೆಂದೇ ಇಬ್ಬರಿಗೂ ಗೊತ್ತಿಲ್ಲ! ಒಟ್ಟೂ ಬೊಗಳುವುದು! ಗೇಟಿನ ಹತ್ತಿರ ಯಾವುದೋ ನಾಯಿ ಸುಳಿವಾಡಿತೋ ಅಥವಾ ಬಾವಲಿ, ಗುಮ್ಮಗಳು ಓಡಾಡಿದವೋ… ಏನೋ ಸಣ್ಣ ಪುಟ್ಟ ಕಾರಣಇರಬಹುದು. ಆ ತಂಪು ವಾತಾವರಣದಲ್ಲಿ ತಿರುಗಾಡಿ ಬಂದ ನನಗಂತೂ ಗುಂಡ, ಕರಡಿಯರ ವೇಷ ಕಂಡು ನಗು ಬಂತು. ‘ಸುಮ್ನೆ ಮನಿಕಣಿ’ ಎನ್ನುತ್ತಾ ಬಾಗಿಲು ಹಾಕಿಕೊಂಡು ಬಂದು ಬರೆಯಲು ಕುಳಿತೆ. ಇದೇ ಥಂಡಿ ಥಂಡಿ ದಿನಗಳ ಬಾಲ್ಯದ ನೆನಪಾಗುತ್ತದೆ. ಅಂದಿನ ನಮ್ಮ ಮನೆ ಇರುವುದೇ ಗದ್ದೆ ಬಯಲಿನಲ್ಲಿ. ಗದ್ದೆ ಬಯಲೆಂದರೆ ಸಣ್ಣದಲ್ಲ. ಉದ್ದಾನುದ್ದಕ್ಕೆ ಎಲ್ಲರ ಮನೆಗಳ ಗದ್ದೆಗಳು. ಬದಿಯಲ್ಲಿ ಅವರವರ ಮನೆ. ಸುತ್ತಲೂ ಆವರಿಸಿದ ಹಾಡಿ, ಕಾಡುಗಳು. ಆ ದಿನಗಳಲ್ಲಿ ಕಾಡು ಜಾಸ್ತಿಯೇ ಇತ್ತು. ಮನೆಯ ಹಿಂಭಾಗದಲ್ಲಿ ತೋಟ ಮತ್ತು ತೋಟಕ್ಕೆ ಒತ್ತಿಕೊಂಡು ತೋಡು. ಈ ತೋಡಿಗೆ ಕಾಡಿನಿಂದ ಹರಿದು ಬಂದ ಸಹಜ ಉಜಿರೇ ನೀರಿನ ಮೂಲ. ಹೀಗಾಗಿ ಮಳೆ, ಚಳಿಗಾಲದಲ್ಲಿ ಬಯಲು ಪೂರ್ತಿ ಥಂಡಿ. ನಮ್ಮನೆಯಲ್ಲಿ ಅಪ್ಪಯ್ಯ ಹುಡುಕಿ ಹುಡುಕಿ ಶೋಲಾಪುರ ಹೊದಿಕೆಯನ್ನೇ ತರುತ್ತಿದ್ದುದು. ಇವು ಸೊಲ್ಲಾಪುರದಲ್ಲಿ ತಯಾರಾಗುವ ಉತ್ಕೃಷ್ಟ ಹೊದಿಕೆಗಳು. ಅಪ್ಪಯ್ಯ ಹಾಗೇ, ಅವರಿಗೆ ಯಾವ ವಸ್ತು ತೆಗೆದುಕೊಂಡರೂ ಅದು ಉತ್ತಮ ಗುಣಮಟ್ಟದ್ದೇ ಆಗಿರಬೇಕು. ಹಾಗಾಗಿ ಬಾಲ್ಯದಲ್ಲಿ ಪರಿಚಿತವಾದ ಈ ‘ಶೋಲಾಪುರ’ ಹೊದಿಕೆ ಇಂದಿಗೂ ನನ್ನನ್ನು ಬಿಟ್ಟುಹೋಗಿಲ್ಲ. ಇವುಗಳ ವಿಶೇಷತೆಯೆಂದರೆ ಗಟ್ಟಿಮುಟ್ಟು, ಸುದೀರ್ಘ ಬಾಳಿಕೆ, ಒಳ್ಳೇ ಉದ್ದ-ಅಗಲ ಮತ್ತು ಚಂದದ ಬಣ್ಣ, ಡಿಸೈನ್. ಇಷ್ಟಲ್ಲದೆ ಇವುಗಳ ದೊಡ್ಡ ಗುಣವೆಂದರೆ ಹೊದಿಕೆ ಒಂತರ ಥಂಡಿ. ನಮ್ಮದಕ್ಷಿಣ ಕನ್ನಡದ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತವೆ ಇವು. ಯಾಕೆಂದರೆ ಎಂಥಾ ಚಳಿಯೊಳಗೂ ಒಂಚೂರು ಉರಿ ಉರಿ, ಸೆಕೆ ಸೆಕೆ, ಬೆವರು ಬೆವರು ಅನ್ನಿಸುವ ವಾತಾವರಣ ಇಲ್ಲಿಯದು. ಹಾಗಾಗಿ ನನಗೇನೋ ಈ ಶೋಲಾಪುರ ಹೊದಿಕೆ ಹೊದ್ದು ಮಲಗಿದರೆ ನಿರಾಳ, ಒಳ್ಳೇ ನಿದ್ದೆ. ಈಗ ಮಗನಿಗೂ ಇದೇ ಅಭ್ಯಾಸವಾಗಿ ಹೋಗಿದೆ. ಈ ಹೊದಿಕೆಗಳ ಬಣ್ಣ, ಡಿಸೈನ್ಗಳ ಕುರಿತಾದ ವಿಷಯ ಬಂದಾಗ ಒಂದು ವಿಷಯವನ್ನು ಪ್ರಸ್ತಾಪಿಸಲೇಬೇಕು. ಸಣ್ಣವಳಿದ್ದಾಗ ನನಗೆ ಪದೇ ಪದೇ ಜ್ವರ ಬರುತ್ತಿತ್ತು. ಆಗ ನಾನು ಹೊದೆದ ಈ ಶೋಲಾಪುರ ಹೊದಿಕೆಯ ಕೆಂಪು ಹಸಿರು ನೀಲಿ ನೇರಳೆ ಬಣ್ಣಗಳು, ಚಿತ್ತಾರಗಳೆಲ್ಲ ದೊಡ್ಡ ಆಕಾರ ತಳೆದು ವಿಕಾರವಾಗಿ ಕಣ್ಣೆದುರು ಬಂದು ಹೆದರಿಸುತ್ತಿದ್ದವು. ಹಲ್ಲು ಕಚ್ಚಿಕೊಂಡು ಅವನ್ನೆಲ್ಲ ನೋಡುತ್ತ ಹೆದರಿ ಬೆವರುತ್ತಿದ್ದೆ. ಹೊದಿಕೆಯನ್ನು ಎಸೆಯೋಣ ಅನ್ನಿಸಿದರೂ ಕೈ ಮೇಲೇಳುತ್ತಿರಲಿಲ್ಲ. ಇಷ್ಟೆಲ್ಲ ಆದರೂ ಜ್ವರ ಬಿಟ್ಟ ನಂತರ ಮತ್ತೆ ಶೋಲಾಪುರ ಹೊದಿಕೆ ಹೊದ್ದು ಮಲಗಿದರೇ ಸರಿಯಾಗಿ ನಿದ್ದೆ ಬರುತ್ತಿದ್ದುದು! ಇಂತಹ ಹೊದಿಕೆ ಹೊದ್ದು ಅಮ್ಮಮ್ಮನ ಹತ್ತಿರ ಮಲಗಿದಾಗ ಚಳಿಗಾಲವಾದರೆ ಅಂಗಳದಲ್ಲಿ ಪಟ್ ಪಟ್ ಎಂದು ಹನಿಗಳು ಬೀಳುವ ಸದ್ದು ಕಿವಿಗೆ ಹಿತವಾಗಿ ತಾಕುತ್ತಿತ್ತು. ಅದು ತೆಂಗಿನ ಮರಗಳಿಂದ ಜಾರಿದ ಇಬ್ಬನಿ ಅಂಗಳದ ನುಣುಪು ನೆಲಕ್ಕೆ ಬೀಳುವುದು. ಹಾಗೇ ಕೆಲವೊಮ್ಮೆ ಗೆಣಸಿನ ಗದ್ದೆಗೆ ಬಂದ ಜೀವಾದಿಗಳನ್ನು ಓಡಿಸುವ ‘ಹಿಡ್ಡಿಡ್ಡಿ ಹಿಡಿ ಹಿಡಿ’ ಎಂಬ ಕೂಗು, ಕಬ್ಬಿನ ಗದ್ದೆಗೆ ಬಂದ ನರಿಗಳ ‘ಕುಕುಕುಕೂಕೂಕೂ’ ಎಂಬ ಮಧುರ ಹಾಡು ರೋಮಾಂಚನಗೊಳಿಸುತ್ತಿದ್ದವು. ಆಗೆಲ್ಲ ಕತ್ತಲ ಮಾಂತ್ರಿಕ ಲೋಕದೊಳಗೆ ಏನೋ ದೊಡ್ಡ ಬೆರಗಿದೆ ಎಂಬ ಭಾವ ನನ್ನೊಳಗೆ ಪ್ರವೇಶಿಸುತ್ತಿತ್ತು. ಕೆಲವೊಮ್ಮೆ ಹೊರಗಡೆ ದೊಡ್ಡ ಶಬ್ದ ಕೇಳಿಸಿದರೆ ಅಮ್ಮಮ್ಮ ಬ್ಯಾಟರಿ ಹಿಡಿದು ಹೋಗುತ್ತಿದ್ದರು. ಗದ್ದೆಯ ಕಂಟಗಳನ್ನು ಅಗೆದು ಅಲ್ಲಿ ಹುಳುಗಳನ್ನು ಹುಡುಕಲು ಕಾಡು ಹಂದಿಗಳು ಬರುತ್ತಿದ್ದವು. ಹಾಗೆ ಬಂದ ಅವು ಬಸಳೆ ಚಪ್ಪರದ ಗಿಡಗಳು, ಬತ್ತದ ಸಸಿಗಳು ಎಲ್ಲವನ್ನೂ ಒಕ್ಕಿ ತಲೆಕೆಳಗೆ ಮಾಡಿ ಹೋಗುತ್ತಿದ್ದವು. ಅಮ್ಮಮ್ಮಗಟ್ಟಿಗಂಟಲಲ್ಲಿ ಹೆದರಿಸಿ ಬಂದು ಗೊಣಗುತ್ತಾ ಮಲಗುತ್ತಿದ್ದರು. ಅವರಿಗೆ ಪಾಪ; ಈ ಹಂದಿಗಳ ದೆಸೆಯಿಂದ ಬೆಳೆ ಹಾಳಾಗುತ್ತಿದೆಯಲ್ಲ ಎಂಬ ಚಿಂತೆ. ಆದರೆ ನನಗೆ ಯಾವುದೋ ನಿಗೂಢ ಲೋಕಕ್ಕೆ ಪ್ರಯಾಣಿಸಿದ ಅನುಭವ. ಹೊದಿಕೆಯಿಂದ ಮುಖವನ್ನು ಮಾತ್ರ ಹೊರಗೆ ಹಾಕಿ ಮಲಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆ. ಮಳೆಗಾಲದಲ್ಲಂತೂ ಹೇಳುವುದೇ ಬೇಡ. ಮನೆ ಮುಂದಿನ ಗದ್ದೆಗಳೆಲ್ಲ ಕಪ್ಪೆಗಳು, ವಿವಿಧ ಕೀಟಗಳ ಸಂಗೀತ ಮೇಳಗಳಿಂದ ತುಂಬಿ ಹೋಗುತ್ತಿದ್ದವು. ಈ ಸಂಗೀತ ಒಂದು ಜೋಗುಳದಂತೆ ನಮ್ಮ ನಿದ್ದೆಯನ್ನು ಸಂತೈಸುತ್ತಿತ್ತು. ಕಣ್ಣು ಮುಚ್ಚಿದರೆ ತೆರೆದರೆ ಕಿವಿ ತುಂಬಿದ ಮಳೆಯ ಸದ್ದು; ಜೊತೆಗೆ ಕಪ್ಪೆಗಳ ಮೊರೆತ. ಇದರ ನಡುವೆ ಸುಖ ನಿದ್ದೆ! ನಡುನಡುವೆ ಗುಮ್ಮಗಳ ಕೂಗು! ‘ಊಂಹೂಂಹೂ’ ಎಂಬ ಗುಮ್ಮಗಳ ಪ್ರಶ್ನೋತ್ತರ ಹಿತವಾದ ನಡುಕ ಹುಟ್ಟಿಸುತ್ತಾ ಇನ್ನೂ ಕೂಗಲಿ, ಮತ್ತೂ ಕೂಗಲಿ ಎಂಬ ಕಾತುರ ತುಂಬುತ್ತಿತ್ತು. ಮಿಂಚುಹುಳುಗಳು ತಳಿಕಂಡಿಯಲ್ಲಿ ಒಳಗೆ ಬರುತ್ತಿದ್ದವು. ಅವು ಗತಿಸಿದ ಮನೆಯ ಹಿರಿಯರ ಆತ್ಮಗಳು ಅಂದರೆ ಜಕ್ಣಿಗಳು ಎಂದು ದೊಡ್ಡವರು ಹೇಳಿಟ್ಟಿದ್ದರಿಂದ ಅವುಗಳನ್ನು ನೋಡಿದರೆ ಒಂತರಾ ಹೆದರಿಕೆ. ಅವುಗಳನ್ನು ಮುಟ್ಟಬಾರದು ಎಂದಿದ್ದರು. ಆದರೂ ಮುಟ್ಟುವ ತವಕ. ದೂರದ ಕೇದಗೆ ಹಿಂಡಲಿನಲ್ಲಿ ಸೀರಿಯಲ್ ಲೈಟಿನಂತೆ ಜಗ್ಗನೆ ಅವು ಮಿಂಚುವುದನ್ನು ನೋಡುವಾಗ ಆಶ್ಚರ್ಯವಾಗುತ್ತಿತ್ತು. ಈ ನಡುವೆ ಜಿರಾಪತಿ ಮಳೆಯ ಶೀತ ವಾತಾವರಣದಿಂದ ಸಣ್ಣಗೆ ಒಡಲ ಜ್ವರ ಬಂದರೆ ಮಣಸಿನಕಾಳಿನ ಕಷಾಯ, ಹುರಿದಕ್ಕಿಗಂಜಿಯ ಉಪಚಾರ. ಜೋರು ಚಳಿಯಾದರೆ ಬೆಕ್ಕುಗಳೊಂದಿಗೆ ಅಡುಗೆಮನೆಯ ಒಲೆ ಬುಡದಲ್ಲಿ ಕುಳಿತು ಆಟವಾಡುವುದು. ಪ್ರೀತಿ, ಮುದ್ದು ಸಿಗುತ್ತಿದ್ದ; ಜವಾಬ್ದಾರಿಗಳೇ ಇಲ್ಲದ ಬಾಲ್ಯ! ನಿಜವಾಗಿಯೂ ಅದೊಂದು ಕಿನ್ನರ ಲೋಕವೇ. ರಾತ್ರಿ ಒಂಬತ್ತಕ್ಕೆ ಮಲಗಿದರೆ ಬೆಳಿಗ್ಗೆ ಆರರ ತನಕ ತುದಿ ಮೊದಲಿಲ್ಲದ ನೆಮ್ಮದಿಯ ಪ್ರಪಂಚ. ಆಗ ಹೊರಲೋಕದ ಯಾವ ತಲ್ಲಣಗಳೂ ನಮ್ಮಂತಾ ಮಕ್ಕಳನ್ನು ಬಾಧಿಸಲು ಸಾಧ್ಯವೇ ಇರಲಿಲ್ಲ. ಬದುಕಿನ ಉತ್ಕೃಷ್ಟ ದಿನಗಳವು! ಎಲ್ಲರ ಮನದೊಳಗೊಂದು ಮಗು ಇರುತ್ತದೆ, ಇರಬೇಕು. ಅದು ಸಂತೃಪ್ತಿಯಾಗಿದ್ದರೆ ವ್ಯಕ್ತಿ ನೆಮ್ಮದಿಯಿಂದ ದಿನ ದೂಡಬಹುದು. ಇಲ್ಲವಾದರೆ ಬದುಕೆಲ್ಲ ನೋವು, ನಿರಾಸೆ, ಗೊಂದಲ. ಮೊನ್ನೆ ಮಳೆ ಸ್ವಲ್ಪವೇ ಸ್ವಲ್ಪ ಹೊಳವಾದ ರಾತ್ರಿ, ಹನ್ನೊಂದರ ಸುಮಾರಿಗೆ ಇಲ್ಲಿ ನಮ್ಮನೆ ಹತ್ತಿರ ಗುಮ್ಮಕೂಗಿತ್ತು! ಇದು ಬಾಲ್ಯದ ‘ಊಹೂಂಹೂಂ’ ಗುಮ್ಮಅಲ್ಲ; ಇನ್ನೊಂದು ಪ್ರಭೇದದ್ದು. ‘ಗುಗ್ಗೂ… ಘುಘ್ಘೂ’ ಎಂಬ ಕೂಗಿನದ್ದು. ಮೈ ನವಿರೆದ್ದಿತು. ನಮ್ಮ ಮಾತು ಕೇಳಿ ಸಿಟ್ಟುಗೊಂಡು ಮನೆ ಹಿಂಭಾಂಗಕ್ಕೆ ಹೋದದ್ದು ತಿಳಿದು ಮನೆಯ ಎದುರಿನ ಲೈಟ್ ಆರಿಸಿ ಹಿಂಬದಿಗೆ ಹೋಗಿ ನಿಂತು ಕೇಳಿಸಿಕೊಂಡೆ. ಮೈಯ್ಯ ನರನರಗಳನ್ನೂ ಎಚ್ಚರಿಸಬಲ್ಲ ಕೂಗು. ಸುಮಾರು ಹತ್ತು ನಿಮಿಷ ಕೂಗಿ ಆಮೇಲೆ ಮೌನ ವಹಿಸಿತು. ಅಷ್ಟು ಹೊತ್ತು ಆ ಕಡುಕತ್ತಲಿನಲ್ಲಿ ನನ್ನಿಡೀ ಗಮನ ದೂರದ ಆ ಕೂಗಿನ ಮೇಲೆ ಮಾತ್ರ ಇತ್ತು. ಇಂತಹ ಅನುಭವಗಳಲ್ಲೇ ಬದುಕಿನ ಮೂಲದ್ರವ್ಯ ಅಡಗಿರುತ್ತದೆ ಅನಿಸುತ್ತದೆ ನನಗೆ. ನಮ್ಮ ಸಣ್ಣತನಗಳನ್ನು ಮರೆಸುವ ಇಂತಹ ಸಣ್ಣ ಸಣ್ಣ ಗಳಿಗೆಗಳನ್ನಾದರೂ ನಾವು ಹುಡುಕಿಕೊಳ್ಳಬೇಕು. ವಿಜಯಶ್ರೀ ಹಾಲಾಡಿ ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಮುಂತಾದವು.–ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು, ಪಪ್ಪುನಾಯಿಯ ಪೀಪಿ, ಸೂರಕ್ಕಿ ಗೇಟ್, ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.
ಅಂಕಣ ಸಂಗಾತಿ ನೆಲಸಂಪಿಗೆ ಒಂದು ನಿಗೂಢ ಧ್ವನಿ ಈ ವರ್ಷ ಎಪ್ರಿಲ್ ಕೊನೆ- ಮೇ ತಿಂಗಳ ಆರಂಭದಲ್ಲೇ ಗುಡುಗು ಮಳೆ ಬಂದು ಅಕಾಲಿಕವಾಗಿ ಮಳೆಗಾಲದ ವಾತಾವರಣವೂ ಕಾಣಿಸಿಕೊಂಡಿತು. ಆ ಸಮಯದಲ್ಲಿ ಒಂದು ರಾತ್ರಿ ನಮ್ಮ ಮನೆಯ ಹಿಂದಿನ ಹಾಡಿಯ ಕಡೆಯಿಂದ ಕೊಕ್ ಕೊಕ್ ಕೊಕ್ ಎಂಬ ಲಯ ಹಿಡಿದ ನಿರಂತರ ಕೂಗು ಆರಂಭವಾಯಿತು. ಪೊದೆಗಳೆಲ್ಲ ಪೂರ್ತಿ ಕತ್ತಲುಮಯವಾದ್ದರಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಏನೂ ಕಾಣುವಂತಿರಲಿಲ್ಲ. ಆದರೆ ಶೀತವಾಗಿ ಗಂಟಲು ಕಟ್ಟಿದಂತೆ ಕೇಳಿ ಬರುತ್ತಿರುವ ಆ ಕೂಗು ಯಾವುದೋ ನೀರು ಹಕ್ಕಿಯದು ಎಂದು ಊಹಿಸಬಹುದಿತ್ತು. ಮೇಲ್ನೋಟಕ್ಕೆ ಅನಿಸಿದ್ದೆಂದರೆ ಯಾವುದೋ ನೀರುಹಕ್ಕಿ ಪೊದೆಗಳೆಡೆಯಲ್ಲಿ ಮೊಟ್ಟೆಯಿಟ್ಟು, ಅದರ ಮೇಲೆ ಕುಳಿತು ಒಂದೇ ಲಯದಲ್ಲಿ ಬಿಡದೆ ಕೂಗುತ್ತಿದೆ ಎಂದು! ಹಾಗಾದರೆ ಅದು ಯಾವ ಹಕ್ಕಿ? ಸುತ್ತ ಹಬ್ಬಿಕೊಂಡ ಹಾಡಿ, ಕಾಡು ಬಿಟ್ಟರೆ ಕೆರೆ ಮುಂತಾದ ಯಾವುದೇ ನೀರಿನ ಮೂಲವಿಲ್ಲದ ಇಲ್ಲಿ ಯಾಕೆ ಹೀಗೆ ಕೂಗುತ್ತಿದೆ ಎಂದು ಯೋಚಿಸಿ ತಲೆ ಖರ್ಚು ಮಾಡಿಕೊಂಡದ್ದೇ ಬಂತು. ಕೊನೆಗೆ ಧ್ವನಿಯನ್ನು ರೆಕಾರ್ಡ್ ಮಾಡಿ ಹಕ್ಕಿಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದವರಿಗೆ ಕಳಿಸಿ ಕೇಳಿದಾಗ ಅದು ಹುಂಡುಕೋಳಿ ಅಥವಾ ಅದೇ ಜಾತಿಯ ಯಾವುದೋ ಹಕ್ಕಿಯಿರಬಹುದು ಎಂಬ ಉತ್ತರ ಸಿಕ್ಕಿತು. ಆದರೆ ನನಗಂತೂ ಸಮಾಧಾನವಾಗಲಿಲ್ಲ. ಯಾಕೆಂದರೆ ಹರಿಯುವ ನೀರಿನ ಕಲಕಲ, ಜುಳುಜುಳು ನಾದವನ್ನೆಲ್ಲ ಹೊತ್ತುಕೊಂಡಿರುವ ಹುಂಡುಕೋಳ್ಹಕ್ಕಿಯ ಸಂಭ್ರಮದ ಸ್ವರವೆಲ್ಲಿ! ಶೀತದಿಂದ ಮೂಗು ಕಟ್ಟಿದ ಈ ಕ್ವಾಂಕ್ ಕ್ವಾಂಕ್ (ಇದೂ ಒಂತರ ಚೆನ್ನಾಗೇ ಇದ್ದರೂ) ಎಲ್ಲಿ ? ಹಾಗಾದರೆ ಮತ್ಯಾವುದಿದು ಎನ್ನುವ ಕುತೂಹಲದೊಂದಿಗೆ ರಾತ್ರಿ ಹನ್ನೆರಡು ಗಂಟೆಯವರೆಗೂ ಕತ್ತಲ ಆಳದಿಂದ ಆ ದನಿಯನ್ನು ಕೇಳುತ್ತ ಆಮೇಲೆ ನಿದ್ದೆ ಮಾಡಿದ್ದಾಯಿತು. ಮತ್ತೆ ಮರುದಿನ, ಅದರ ಮರುದಿನ ಹೀಗೆ ದಿನವೂ ನಮ್ಮ ಮನೆಯ ಸುತ್ತಿನ ಎಲ್ಲ ಕಾಡುಗಳ ದಿಕ್ಕಿನಿಂದಲೂ ಸಂಜೆ-ರಾತ್ರಿಯ ಹೊತ್ತು ಇದೇ ನಿಗೂಢ ಹಕ್ಕಿಯ ಶ್ರುತಿ ಹಿಡಿದ ದನಿ ರಾತ್ರಿ ಪೂರಾ ಕೇಳಿ ಕೇಳಿ ನಾವಿರುವ ಪರಿಸರವೇ ಪೂರ್ತಿ ಹಕ್ಕಿಯಮಯವಾದಂತೆ ಕಂಡು ಯಾಂತ್ರಿಕ ದಿನಗಳಿಗೆ ಗೆಜ್ಜೆ ಕಟ್ಟಿದಂತೆನಿಸಿತು! ಹೀಗೇ ಸ್ವಲ್ಪ ದಿನ ಕಳೆದ ಬಳಿಕ ಒಂದು ದಿನ ಮನೆಯಎಡಗಡೆಯ ಲಕ್ಷ್ಮಣ ಫಲದ ಗಿಡದೊಳಗಿಂದ ಹೆಚ್ಚು ಕಮ್ಮಿ ನಮ್ಮ ನಿಗೂಢ ಹಕ್ಕಿಯ ದನಿಯನ್ನೇ ಹೋಲುವ ದನಿ ಬೆಳಗಿನ ಹೊತ್ತಲ್ಲೇ ಕೇಳಿ ಬಂದಿತು! ಈ ಸಲ ಕಳ್ಳ ಸಿಕ್ಕಿಬಿದ್ದ ಎಂದು ಆತುರಾತುರವಾಗಿ ಹೋದರೆ ಮಳೆಯ ದೆಸೆಯಿಂದ ಕಳೆ ಗಿಡದ ಭರ್ತಿ ಪೊದೆಗಳೇ ಪೂರ್ತಿ ಲಕ್ಷ್ಮಣ ಗಿಡವನ್ನು ಆವರಿಸಿಕೊಂಡು ಏನೂ ಕಾಣಲಿಲ್ಲ. ಆದರೂ ಪ್ರಯತ್ನ ಬಿಡದೆ ನಾಯಿಗೆ ತಿಂಡಿ ಹಾಕಿಕೊಂಡು ಬಂದಿದ್ದ ಪ್ಲೇಟನ್ನು ಅಲ್ಲೇ ಬಿಟ್ಟು ಸದ್ದು ಮಾಡದೆ ಒಂದಷ್ಟು ಮುಂದೆ ಹೋಗಿ ನಿಧಾನವಾಗಿ ಇಣುಕಿ ನೋಡಿದಾಗ ಕಂಡದ್ದು ತಲೆ ಹೊರಹಾಕಿ ನನ್ನನ್ನೇ ಗಮನಿಸುತ್ತಿದ್ದ ಕಳ್ಳ ಹಕ್ಕಿ! ಹಳದಿ ಕೊಕ್ಕು, ಕೆಂಪು ಹಣೆ, ಬಿಳಿ ಕುತ್ತಿಗೆ, ಸ್ಲೇಟಿನ ಬಣ್ಣದ ಗರಿಗಳು ಕಂಡವು! ಹೌದು, ಸಂಶಯವೇ ಇಲ್ಲ. ಅದೊಂದು ಹುಂಡುಕೋಳಿ! ಹೆಜ್ಜೆ ಹಿಂದಿಟ್ಟು ಬೇಗಬೇಗನೆ ಮನೆಯೊಳಗೆ ಬಂದುಬಿಟ್ಟೆ. ಏಕೆಂದರೆ ನಮ್ಮ ಬೆಳ್ಳಿಬೆಕ್ಕು ಆಗಲೇ ಹಕ್ಕಿಯ ದನಿಯನ್ನು ಹಿಂಬಾಲಿಸುವ ತಯಾರಿ ಮಾಡಿಕೊಳ್ಳುತ್ತಿದ್ದುದು ಕಾಣಿಸಿತು. ಕೂಡಲೇ ಅದರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆಸಿದೆ. ಆ ಹುಂಡುಕೋಳಿ ಲಕ್ಷ್ಮಣ ಗಿಡದ ಮೇಲೇ ಕುಳಿತಿತ್ತು. ಬಹುಶಃ ಮೊಟ್ಟೆಯಿಟ್ಟು ಮರಿಯೊಡೆಸಿತ್ತು ಕಾಣುತ್ತದೆ. ನಾನು ಒಳಬಂದ ತುಸು ಹೊತ್ತಿಗೇ ಅದರ ಮಾಮೂಲಿ ಸ್ವರ ಅಂದರೆ ನೀರನ್ನು ಗಂಟಲಲ್ಲಿ ತುಂಬಿಕೊಂಡ ಅಪೂರ್ವ ಧ್ವನಿ ಕೇಳಿಸಿತು. ಜೊತೆಗೆ ಮರಿಗಳ ಕೂಗೂ! ಸಂತಸದಿಂದ ಮಾತೇ ಹೊರಡಲಿಲ್ಲ. ಅಲ್ಲಿಗೆ ಇಷ್ಟು ದಿನ ರಾತ್ರಿಯೆಲ್ಲಾ ಶೀತವಾದವರಂತೆ ಕೂಗಿ ಸತಾಯಿಸಿದ್ದು ಇದೇ ಹುಂಡುಕೋಳಿ ಎನ್ನುವುದು ಖಚಿತವಾಯಿತು. ಆದರೆ ಅದು ರಾತ್ರಿಯ ಹೊತ್ತು ಯಾಕೆ ಕ್ವಾಕ್ ಕ್ವಾಕ್ ಎಂದು ಒಂದೇ ಲಯದಲ್ಲಿ ನಿರಂತರ ಕೂಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಕಿಟಕಿಯಿಂದ ಈ ಕಳ್ಳನ ಆಪ್ತ ಸ್ವರವನ್ನು ಒಂದಷ್ಟು ರೆಕಾರ್ಡ್ ಮಾಡಿಟ್ಟೆ. ಕುತೂಹಲದಿಂದ ಹುಂಡುಕೋಳಿಯ ವಾಸದ ಪ್ರದೇಶದ ಕುರಿತು ತೇಜಸ್ವಿಯವರ ‘ಹಕ್ಕಿಪುಕ್ಕ’ ಪುಸ್ತಕ ಹುಡುಕಿ ನೋಡಿದಾಗ ‘ಜೌಗು ಪ್ರದೇಶದ ಸುತ್ತಮುತ್ತಲಿನ ಪೊದೆಗಳೆಡೆಯಲ್ಲಿ ಮತ್ತು ಜೊಂಡಿನ ಸಂದುಗೊಂದುಗಳಲ್ಲಿ ಹಗುರ ಹೆಜ್ಜೆಗಳನ್ನಿಡುತ್ತಾ ನಡೆದಾಡುವ ಚುರುಕಾದ ಪಕ್ಷಿ’, ‘ನೀರಿನಲ್ಲಿ ಈಜಾಡುವ ಪಕ್ಷಿಯಲ್ಲದಿದ್ದರೂ ಇದರ ಓಡಾಟ ಮತ್ತು ಆಹಾರನ್ವೇಷಣೆಯಲ್ಲಾ ನೀರಿನ ಹತ್ತಿರವೇ. ಸಂಜೆ ಹೊತ್ತಿನಲ್ಲಿ ಕೇದಿಗೆ ಪೊದೆಯೊಳಗೆ ಕುಳಿತು ಕರ್ರೊ ಕೊಕ್ ಕೊಕ್ ಎಂದು ಅವಿರತ ಕೂಗುತ್ತದೆ’ ಎಂಬ ಅಮೂಲ್ಯ ಮಾಹಿತಿ ಸಿಕ್ಕಿತು. ಸುತ್ತಮುತ್ತಲ ಹಾಡಿಗಳ ಹೊಂಡಗಳಲ್ಲಿ ನೀರು ತುಂಬಿರುವುದರಿಂದ ಈ ಪ್ರದೇಶದಲ್ಲಿ ಅವೀಗ ವಾಸವಾಗಿರಬಹುದು. ಹೀಗೆ ರಾತ್ರಿ ಹೊತ್ತು ನಿರಂತರವಾಗಿ ಕೊಕ್ ಕೊಕ್ ಕೂಗುವುದನ್ನು ಬೇರೊಂದು ಬಾಡಿಗೆ ಮನೆಯಲ್ಲಿ ಇದ್ದಾಗಲೂ ನಾನು ಕೇಳಿದ್ದೆ. ಆದರೆ ಅದು ಹುಂಡುಕೋಳಿ ಎಂದು ತಿಳಿದದ್ದು ಈಗಲೇ. ಲಕ್ಷ್ಮಣ ಗಿಡದಲ್ಲಿ ಕಂಡ ದಿನದಿಂದ ಇಂದಿನವರೆಗೂ ಸುಮಾರು ಎರಡು ತಿಂಗಳಿನಿಂದ ಪ್ರತೀ ರಾತ್ರಿಯೂ ಲಯಬದ್ಧವಾದ ಇದರ ಕೂಗು ನಮ್ಮನೆಯ ಸುತ್ತಲಿನ ಕಾಡಿನಿಂದ ಕೇಳಿಬರುತ್ತಿದೆ. ಬಹುಶಃ ಈ ಪ್ರದೇಶದಲ್ಲಿ ಅನೇಕ ಹುಂಡುಕೋಳಿಗಳು ಇರಬಹುದು. ಈಗೀಗ ಹಗಲುಹೊತ್ತು ಮನೆಯ ಹಿಂಬಾಗಿಲು ತೆರೆದಾಗ ಒಂದು ಜೋಡಿ ಆಗಾಗ ಹೆದರಿಕೆಯಲ್ಲಿ ಓಡಿಹೋಗುವುದು ಕಾಣುತ್ತದೆ. ಒಮ್ಮೊಮ್ಮೆ ಅವು ಮುಂಭಾಗಕ್ಕೂ ಬಂದು ಹುಲ್ಲಿನ ನಡುವೆ ಏನೋ ಮೇಯುತ್ತವೆ. ಆದರೆ ನಮ್ಮಗುಂಡ, ಕರಡಿ, ಪ್ಯಾಚಿ ನಾಯಿಮರಿಗಳು ಆಟವಾಡುತ್ತಾ ಅವುಗಳನ್ನು ಅಟ್ಟುತ್ತವೆ. ಅಂತಹ ಹೊತ್ತಿನಲ್ಲಿ ‘ಈ ಕೆಟ್ಟನಾಯಿ ಮರಿಗಳನ್ನು ಗೂಡೊಳಗೆ ಹಾಕಿಡಬೇಕು’ ಎಂದು ಸಿಟ್ಟು ಬಂದರೂ ಮತ್ತೆ ಪಾಪ ಅನ್ನಿಸಿ ಸುಮ್ಮನಾಗುತ್ತೇನೆ. ಬಾಲ್ಯದ ನಮ್ಮ ಮನೆಯ ಅಂಗಳ ದಾಟಿದರೆ ತೋಟ. ತೋಟದ ಬದಿಯಲ್ಲಿ ತೋಡು. ಮಳೆಗಾಲದಲ್ಲಿ ತೋಡು ತುಂಬಿ ಹರಿಯುತ್ತಿತ್ತು. ಅದಲ್ಲದೆ ಹತ್ತಿರದ ಗದ್ದೆಯಲ್ಲೂ ಬೇಸಗೆ ಹೊರತುಪಡಿಸಿ ಉಳಿದ ಕಾಲದಲ್ಲಿ ನೀರಿರುತ್ತಿತ್ತು. ಚಳಿಗಾಲದಲ್ಲಿ ತೋಡಿಗೆ ಕಟ್ಟು ಹಾಕಿದಾಗಲೂ ನೀರು ತುಂಬಿಕೊಂಡಿರುತ್ತಿತ್ತು. ಆಗೆಲ್ಲ ಸಂಜೆಹೊತ್ತು ಹುಂಡುಕೋಳಿ ತನ್ನ ವಿಶಿಷ್ಟ ಸ್ವರದಲ್ಲಿ ಕೂಗಿದಾಗ ಆಚೆಮನೆ ದೊಡ್ಡಮ್ಮ “ಅಗಣಿ ಮಕ್ಳೇ, ಹುಂಡ್ಕೋಳ್ಹಕ್ಕಿ ಮಗಿನ್ ಮೀಸತ್ತ್ ಕಾಣಿ” ಎನ್ನುತ್ತಿದ್ದರು. ನನಗಂತೂ ಹುಂಡುಕೋಳಿಯ ಸ್ವರದಲ್ಲಿ ಸಾಕ್ಷಾತ್ ಜೋಗುಳ ಹಾಡಿ ಮಗುವನ್ನು ಮೀಯಿಸಿ ತಟ್ಟಿ ಮಲಗಿಸುವ ಮುದ್ದೇ ಕೇಳಿದಂತಾಗುತ್ತಿತ್ತು. ಈಗಲೂ ಹುಂಡುಕೋಳಿಯ ಸ್ವರ ಕೇಳಿದಾಗೆಲ್ಲ ಅದೇ ಕಲ್ಪನೆ ಮರಳುವುದು ವಿಶಿಷ್ಟ ನೊಸ್ಟಾಲ್ಜಿಯಾ! ಹುಂಡುಕೋಳಿಯ ಗರಿಯ ಸ್ಲೇಟಿನ ಬಣ್ಣವಾಗಲಿ, ಅದರ ನೀಳ ಕಾಯ, ಜಾಳು ನಡಿಗೆಯ ಗತ್ತಾಗಲೀ, ಕತ್ತನ್ನು ಬಳುಕಿಸುವ ಕೊಂಕಾಗಲೀ, ಅದು ಕಾಣಿಸುವ ನೀರಿನ ಪರಿಸರವಾಗಲಿ ಎಲ್ಲವೂ ಬಾಲ್ಯದ ನೊಸ್ಟಾಲ್ಜಿಯಾವೇ ಅನಿಸುವುದಕ್ಕೆ ನಾನು ಬೆಳೆದ ಹಳ್ಳಿಯ ಪರಿಸರವೂ ಕಾರಣವಿರಬಹುದು. ಜೂನ್ನಿಂದ ಅಕ್ಟೋಬರ್ವರೆಗೆ ಕೆರೆದಡದ ಪೊದೆಗಳಲ್ಲಿ, ಜೊಂಡಿನಲ್ಲಿ ಗೂಡು ಮಾಡಿ ಮೊಟ್ಟೆಯಿಡುವ ಹುಂಡುಕೋಳಿ ಸಣ್ಣ ಸದ್ದು ಕೇಳಿದರೂ ಓಡಿ ಹೋಗುವ ಸಂಕೋಚದ, ಹೆದರಿಕೆಯ ಹಕ್ಕಿ. ಸಾಮಾನ್ಯವಾಗಿ ಎಲ್ಲಾ ಪ್ರಾಣಿ ಪಕ್ಷಿಗಳೂ ಅಷ್ಟೇ; ಮನುಷ್ಯನ ಸುಳಿವು ಸಿಕ್ಕೊಡನೆ ಪರಾರಿಯಾಗುತ್ತವೆ. ಅವುಗಳ ದುರ್ಬಲತೆ, ಅಸಹಾಯಕತೆ ಮತ್ತು ನಿಸರ್ಗ ಸಹಜ ಮುಗ್ಧತೆಯನ್ನು ಮನುಷ್ಯರಾದ ನಾವು ದುರುಪಯೋಗ ಪಡಿಸಿಕೊಂಡಿದ್ದೇವೆ. ನಮಗೆ ಅರಿವಾಗಬೇಕಾದದ್ದೆಂದರೆ ಹುಂಡುಕೋಳಿ ನಿಸರ್ಗದ ಸರಪಳಿಯಲ್ಲಿ ಅತ್ಯಗತ್ಯ; ಆದರೆ ಮನುಷ್ಯರಾದ ನಮಗೆ ಪ್ರಕೃತಿಯಲ್ಲಿ ಅಂತಹ ಪ್ರಾಶಸ್ತ್ಯ ಇಲ್ಲ ಎನ್ನುವುದು! ಬೇಸಗೆಯ ದಿನಗಳಲ್ಲಿ ಧಗೆ, ಉರಿ ಅನ್ನಿಸಿ ಕಾಡುವ ನಮ್ಮ ಮನೆಯ ಸುತ್ತಲಿನ ಪರಿಸರವೂ ಸಂಜೆ-ರಾತ್ರಿಯಾದೊಡನೆಯೇ ಪವಾಡ ಸದೃಶವೆಂಬಂತೆ ಬದಲಾಗುತ್ತದೆ! ಈಗಂತೂ ಮಳೆಗಾಲದ ತಂಪು, ಥಂಡಿ ಆವರಿಸಿದೆ. ಅದೃಷ್ಟವಿದ್ದರೆ ರಾತ್ರಿ ಒಮ್ಮೊಮ್ಮೆಗುಮ್ಮನ ದನಿಯೂ ಕೇಳಿಸಿ ರೋಮಾಂಚನಗೊಳಿಸುವುದಿದೆ! ಹುಂಡುಕೋಳಿಯ ಕೊಕ್ ಕೊಕ್ ನಾದವಂತೂ ಕಾಡೇ ನುಡಿಗೊಟ್ಟಂತೆ ಕಾಣಿಸುತ್ತದೆ. ಆದರೆ ಅದು ರಾತ್ರಿಗಳಲ್ಲಿ ಯಾವ ಕಾರಣಕ್ಕೆ ಹಾಗೆ ಎಡೆಬಿಡದೆ ಕೂಗುತ್ತದೆ ಎನ್ನುವುದು ನಿಗೂಢವಾಗೇ ಉಳಿದಿದೆ! ವಿಜಯಶ್ರೀ ಹಾಲಾಡಿ ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಮುಂತಾದವು.–ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು, ಪಪ್ಪುನಾಯಿಯ ಪೀಪಿ, ಸೂರಕ್ಕಿ ಗೇಟ್, ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ. ನಾಯಿಕುರ್ಕನ ನೆರಳಿನಲ್ಲಿ
ಅಂಕಣ ನೆಲಸಂಪಿಗೆ ಈ ಹಕ್ಕಿ ಮರಳಿ ಕಾಡಿಗೆ ಹೋಗಿ ಬದುಕಲಾರದು…! ಮನೆಗೆ ಬೇಕಾದ ಕೆಲ ಅಗತ್ಯದ ವಸ್ತುಗಳು ಮತ್ತು ಬಟ್ಟೆ ಖರೀದಿಸಲೆಂದು ಆವತ್ತು ಪೇಟೆಗೆ ಹೋಗಿದ್ದೆವು. ಮಾರ್ಚ್ ತಿಂಗಳ ಸುಡುಬಿಸಿಲು, ಧೂಳು. ಬಿಡುವು ಕೊಡದೆ ಧಾವಿಸುವ ವಾಹನಗಳ ಕರ್ಕಶ ಸದ್ದು. ಎಲ್ಲದರ ನಡುವೆ ರೋಸಿ ಹೋಗಿ ಬಟ್ಟೆಯಂಗಡಿಯ ಬಳಿ ತಲುಪಿದಾಗ ಆಗಲೇ ಆಯಾಸವಾಗಿತ್ತು. ಅಂತಹ ಹೊತ್ತಿನಲ್ಲಿ ಗುಬ್ಬಚ್ಚಿಯೊಂದು ಉರಿಬಿಸಿಲಿಗೆ ಕುದಿಯುತ್ತಿದ್ದ ರಸ್ತೆಯಲ್ಲಿ ಏನನ್ನೋ ಹುಡುಕುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅಲ್ಲೇನೂ ಕಾಣಲಿಲ್ಲ. ಅದು ಬಾಯಾರಿಕೆ, ಹಸಿವಿನಿಂದ ಕಂಗೆಟ್ಟಂತೆ ನನಗೆ ಕಂಡಿತು. ಮೊದಲೆಲ್ಲ, ‘ಅಂಗಡಿ ಪಕ್ಕಿ’ ಎಂಬ ಹೆಸರಿಗೆ ಅನ್ವರ್ಥವಾಗಿ ಸಾಲು ಅಂಗಡಿಗಳ ಮುಂದೆ ಗಲಾಟೆ ಎಬ್ಬಿಸುತ್ತ ಚೆಲ್ಲಿದ ಕಾಳು ಆರಿಸುತ್ತಿದ್ದ ಗುಬ್ಬಚ್ಚಿಗಳ ಹಿಂಡು ನೆನಪಾಗಿ ಈ ಒಂಟಿಗುಬ್ಬಿ ಸದ್ಯದ ಪರಿಸ್ಥಿತಿಗೆ ರೂಪಕವಾಗಿ ಕಂಡು ಎದೆಯೊಳಗೆ ನೋವಾಯಿತು. ಬಟ್ಟೆಖರೀದಿಸುವ ಆಸಕ್ತಿ ಉಳಿಯದೆ “ನನಗೀಗ ಏನೂ ಬೇಡ” ಎಂದು ತಿಳಿಸಿ ಮನೆಮಂದಿಯನ್ನು ಅಂಗಡಿಯೊಳಗೆ ಕಳಿಸಿ ಸುಮ್ಮನೆ ಯೋಚಿಸುತ್ತ ನಿಂತುಬಿಟ್ಟೆ… ** ನಮ್ಮ ಆ ಬಾಡಿಗೆ ಮನೆಗೆ ಸಕಾರಣವಾಗಿ ‘ಹಕ್ಕಿ ಮನೆ’ ಎಂದು ಹೆಸರಿಟ್ಟಿದ್ದೆವು. ವಿಶಾಲವಾಗಿದ್ದ ಮನೆಯ ಸುತ್ತ ಒಂದಷ್ಟು ಜಾಗವಿತ್ತು; ಮರಗಿಡಗಳಿದ್ದವು. ತೆಂಗು, ನುಗ್ಗೆ ಮರಗಳು, ಪಪ್ಪಾಯಿ, ಬಾಳೆ, ಕ್ರೋಟನ್ ಗಿಡಗಳು ಅಂದ ಹೆಚ್ಚಿಸಿದ್ದವು. ಅಷ್ಟು ಒಳ್ಳೆಯ ಬಾಡಿಗೆಮನೆ ಸಿಕ್ಕಿದ್ದು ನಮ್ಮಅದೃಷ್ಟವೆಂದೇ ಹೇಳಬೇಕು. ಹಗಲಿನ ವೇಳೆ ಹಕ್ಕಿ ಹಾಡು, ಕೋಳಿಗಳ ಕೂಗು, ಮುಂಗುಸಿ, ಅಳಿಲು, ನಾಯಿ, ಬೆಕ್ಕುಗಳ ಸುಂದರ ಪ್ರಪಂಚವಾದರೆ; ರಾತ್ರಿ ತಾರಸಿಯ ಮೇಲಿನ ಬೆಳದಿಂಗಳ ಲೋಕ, ಇರುಳಹಕ್ಕಿಗಳ ಸವಿಮಾತು!ಇಂತಹ ಮನೆಗೆ ಹೋದ ಸ್ವಲ್ಪ ಸಮಯದಲ್ಲಿ ಮಗ ಮತ್ತು ನಾನು ರಜೆಯ ದಿನ ಒಂದು ಕಿಲಾಡಿತನ ಮಾಡಿದೆವು. ಎರಡುರಟ್ಟಿನ ಪೆಟ್ಟಿಗೆಯನ್ನುತೆಗೆದುಕೊಂಡು, ರಂಧ್ರಕೊರೆದು, ದಾರಕಟ್ಟಿ ಸಿಟೌಟಿನ ಕಂಬಕ್ಕೆ ಬಿಗಿಯಾಗಿ ಬಿಗಿದೆವು. “ಯಾವುದಾದರೊಂದು ಹಕ್ಕಿ ಬಂದು ಅದನ್ನು ತನ್ನ ಗೂಡಾಗಿ ಸ್ವೀಕರಿಸಬಾರದೇ’ ಎಂಬ ಅಸಾಧ್ಯ ಹಂಬಲ, ಕಲ್ಪನೆ ಮಾತ್ರ ನಮ್ಮದಾಗಿತ್ತು. ಆದರೆ ನಾಲ್ಕೈದು ದಿನ ಕಳೆಯುವಷ್ಟರಲ್ಲಿ ಮಡಿವಾಳ ಹಕ್ಕಿ(ಮ್ಯಾಗಿಫೈ ರಾಬಿನ್)ಯೊಂದು ನಮ್ಮಕಲ್ಪನೆಯನ್ನು ವಾಸ್ತವಕ್ಕಿಳಿಸಿ ಔದಾರ್ಯ ಮೆರೆಯಿತು! ಆ ಬೆಳಗು ರಟ್ಟಿನ ಪೆಟ್ಟಿಗೆಗೆ ನಾರು ತಂದು ಹಾಕುತ್ತಿದ್ದ ಮಡಿವಾಳವನ್ನು ಕಂಡು ಕನಸೊಂದನ್ನು ಎಡವಿ ಬಿದ್ದಂತೆ ನನಗೆ ಭಾಸವಾಯಿತು! ಮಗನಂತೂ ಹಕ್ಕಿಗಳಿಗೆ ತೊಂದರೆಯಾದೀತೆಂದು ಮೌನವಾಗಿಯೇ ಕುಣಿದು ಖುಷಿಪಟ್ಟ! ಬದುಕಿನಲ್ಲಿ ಮೊದಲ ಬಾರಿಗೆ ಇಂಥದ್ದೊಂದು ವಿಭಿನ್ನ ಅನುಭವಕ್ಕೆ ತೆರೆದುಕೊಂಡ ಸಂಭ್ರಮ ನನ್ನದಾಗಿತ್ತು. ಹುಲುಮಾನವರಾದ ನಾವು ಕೊಟ್ಟ ‘ಗೂಡನ್ನುʼಆಕಾಶಲೋಕದ ಕಿನ್ನರರಾದ ಹಕ್ಕಿಗಳು ಸ್ವೀಕರಿಸುವುದೆಂದರೆ ಏನು ಕಮ್ಮಿಯಮಾತೇ ? ಈ ಪುಳಕವೇ ನನ್ನ ಮುಂದಿನ ದಿನಗಳಿಗೆ ಉತ್ಸಾಹದ ಅಮೃತವೆರೆಯಿತು. ಸಿಟೌಟ್ನಲ್ಲಿದ್ದ ಹಕ್ಕಿಗಳಿಗೆ ತೊಂದರೆಯಾಗದಂತೆ ಚೂರೂ ಶಬ್ದ ಮಾಡದೆ ಇಡೀ ಮನೆಯ ಕೆಲಸಗಳನ್ನು ನಿರ್ವಹಿಸುವುದು ನಮ್ಮ ದಿನಚರಿಯ ಭಾಗವಾಯಿತು. ಹಕ್ಕಿಜೋಡಿ ಬೇಕೆಂಬಷ್ಟು ನಾರನ್ನುತಂದು ಗೂಡಿನೊಳಗೊಂದು ಗೂಡು ಮಾಡಿದವು. ನಂತರ ಮೊಟ್ಟೆಯಿಟ್ಟದ್ದು, ಕಾವು ಕೊಟ್ಟದ್ದುಎಲ್ಲವನ್ನೂ ಅವುಗಳ ನಿಶ್ಯಬ್ದ ಚಲನವಲನದಿಂದ ತಿಳಿದುಕೊಂಡೆವು. ಕೆಲವೇ ದಿನದಲ್ಲಿ ಮರಿಯೊಡೆದು ‘ಚೀಂಚೀಂ’ ಎಂಬ ಕಂದಮ್ಮಗಳ ಸದ್ದು ಕೇಳಿಬಂದಾಗ ವ್ಯಕ್ತಪಡಿಸಲಾದ ಸಂತಸ, ಎನರ್ಜಿ ಮನೆಯನ್ನೆಲ್ಲ ತುಂಬಿಕೊಂಡಿತು. ದಿನದ ಕೆಲಸಗಳನ್ನು ಮುಗಿಸಿ ಕತ್ತಲ ನೀರವತೆಯಲ್ಲಿ ಸ್ವಲ್ಪ ಹೊತ್ತು ಕುಳಿತು ನಿಸರ್ಗದ ಸದ್ದುಗಳನ್ನು ಆಲಿಸುವುದು ನನ್ನ ನಿತ್ಯದ ಅಭ್ಯಾಸ. ಇಂಥಾ ಹೊತ್ತಿನಲ್ಲಿ ತಲೆ ಮೇಲೆಯೇ ಇರುತ್ತಿದ್ದ ಹಕ್ಕಿ ಸಂಸಾರದ ಮೆಲುಮಾತು, ಜೀವಂತಿಕೆ ನನ್ನನ್ನು ಹೊಸದೊಂದು ಬೆಚ್ಚನೆಯ ಲೋಕಕ್ಕೆ ಕರೆದೊಯ್ಯುತ್ತಿತ್ತು. ತುಸು ದಿನಗಳಲ್ಲಿ ಮರಿಗಳು ದೊಡ್ಡವಾಗಿ ಕೊನೆಗೊಮ್ಮೆ ಹಾರಿ ಹೋದದ್ದು ತಿಳಿದಾಗ ಸದ್ಯ; ಎಲ್ಲವೂ ಸರಿಯಾಯಿತಲ್ಲ! ನಮ್ಮರಟ್ಟಿನ ಪೆಟ್ಟಿಗೆಯಿಂದ ಇಷ್ಟಾದರೂ ಸಹಾಯವಾಯಿತಲ್ಲ ಎಂದು ಸಮಾಧಾನದ ನಿಟ್ಟುಸಿರಿಟ್ಟೆವು. ಆದರೆ ಆ ರಟ್ಟಿನ ಪೆಟ್ಟಿಗೆಗೆ ಇನ್ನೂ ಹಲವು ಕರ್ತವ್ಯಗಳಿರಬಹುದೆಂದು ತಕ್ಷಣಕ್ಕೆ ನನಗೆ ಹೊಳೆದಿರಲಿಲ್ಲ. . ಒಂದಷ್ಟು ದಿನ ಕಳೆದ ಅನಂತರ ಒಂದು ದಿನ ಮಡಿವಾಳ ಹಕ್ಕಿಯೊಂದು ಮತ್ತೆ ನಮ್ಮಗೂಡಿಗೆ ನಾರು-ಬೇರು ತಂದು ಹಾಕುತ್ತಿದ್ದುದ್ದನ್ನು ನೋಡಿದೆ! ಅರೇ, ಇದ್ಯಾವ ಹಕ್ಕಿ; ಒಮ್ಮೆಉಪಯೋಗವಾದ ಹಕ್ಕಿಗೂಡು ಮತ್ತೆ ವಾಸಯೋಗ್ಯವಲ್ಲ ಎಂಬುದು ಬಾಲ್ಯದಿಂದಲೂ ಕಂಡ ಹಾಗೆ, ಓದಿದ ಹಾಗೆ ನನ್ನ ತಿಳುವಳಿಕೆ! ಆದರಿಲ್ಲಿ ಆ ‘ಜ್ಞಾನ’ ಉಲ್ಟಾ ಹೊಡೆದಿತ್ತು! ಹೌದು, ಪುನಃ ಇನ್ನೊಂದು ಹಕ್ಕಿ ನಮ್ಮರಟ್ಟಿನ ಪೆಟ್ಟಿಗೆಯನ್ನುತನ್ನ ಮನೆಯಾಗಿ ಸ್ವೀಕರಿಸಿತ್ತು. ಇದಂತೂ ಬಹಳ ಖುಷಿಯ, ಕುತೂಹಲದ ವಿಷಯ. ಎರಡು, ಮೂರು ದಿನ ತಿರುತಿರುಗಿ ಈ ವಿಷಯವನ್ನೇ ಮಾತಾಡಿದ್ದಾಯಿತು. ಆದರೆ ಅಷ್ಟರಲ್ಲಿ ನಮ್ಮ ಮನೆಯ ಓನರ್ ಅವರ ಒತ್ತಡ ಮಿತಿಮೀರಿ ‘ಮನೆ ಬಿಟ್ಟು ಹೊರಡಿ’ ಎಂಬ ಕೊನೆಯ ‘ವಾರ್ನಿಂಗ್’ ಹೊರಬಿದ್ದಿತು! ತಾವೇ ಬಂದು ಅಲ್ಲಿ ನೆಲೆಸುತ್ತೇವೆಂಬ ಅವರ ಮಾತಿಗೆ ನಮ್ಮಲ್ಲಿ ಬದಲಿರಲಿಲ್ಲ. ಆದರೆ ನನಗೆ ಇನ್ನೊಂದು ಮನೆ ಹುಡುಕುವ, ಸಾಮಾನು ಸರಂಜಾಮು ಸಾಗಿಸುವ, ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಎಲ್ಲ ಚಿಂತೆಗಳ ಮಧ್ಯೆ ಹಕ್ಕಿಗಳ ವ್ಯಥೆ ಎಡೆಬಿಡದೆ ಕಾಡುತ್ತಿತ್ತು. ವಿಧಿಯಿಲ್ಲದೆ ಮತ್ತೊಂದು ವಾರದಲ್ಲಿ ನಾವು ಮನೆ ಖಾಲಿ ಮಾಡಿದೆವು. ಕನಸಿನ ಗೂಡುಕಟ್ಟುತ್ತಿರುವ ಹಕ್ಕಿಗಳಿಗೇನು ಹೇಳುವುದು… ಹೊರಟ ಗಳಿಗೆ ಮನ ಭಾರವಾಗಿತ್ತು. ಆದರೆ ಗಟ್ಟಿಮನಸ್ಸು ಮಾಡಿ ನಾನೊಂದು ನಿರ್ಧಾರ ತೆಗೆದುಕೊಂಡೆ. ಮುಂದೆ ಆ ಮನೆಗೆ ಬರುವ ಯಾರೇ ಆದರೂ ಬಾಗಿಲಲ್ಲೇ ಇರುವ ರಟ್ಟಿನ ಪೆಟ್ಟಿಗೆಯನ್ನು ‘ಕಸ’ವೆಂದು ತಿಳಿದು ಆಚೆ ಎಸೆಯುವುದು ಖಾತ್ರಿಯಿತ್ತು. ಹಾಗಾಗಿ, ಐದಾರು ದಿನ ನಾರು ತಂದಿಟ್ಟ ಹಕ್ಕಿಗಳಲ್ಲಿ ಕ್ಷಮೆ ಬೇಡಿ, ನಡುಗುವ ಕೈಗಳಿಂದ ಗೂಡನ್ನು ಬಿಚ್ಚಿ ಜೋಪಾನವಾಗಿ ಹೊಸ ಮನೆಗೆ ಒಯ್ದೆ. ಮುಂದೆ ಕೇಳಿಸಬಹುದಾದ ಮೊಟ್ಟೆ ಮರಿಗಳ ಆಕ್ರಂದನಕ್ಕಿಂತ ಇದು ಉತ್ತಮವೆಂದು ನಾನು ಭಾವಿಸಿದೆ. ನಮ್ಮʼಹೊಸʼ ಬಾಡಿಗೆಮನೆ ಹಳೆಯ ಮನೆಯೇ ಆದರೂ ನಿಸರ್ಗದ ಮಡಿಲಲ್ಲಿತ್ತು. ಇಲ್ಲಿಯೂ ಮನೆ ಮುಂದೆ ಕಂಬವೊಂದಿತ್ತು. ರಟ್ಟಿನ ಪೆಟ್ಟಿಗೆಯ ಹಕ್ಕಿಗೂಡನ್ನು ಬರೀ ನೆನಪಿಗೆಂದೇ ಬಿಚ್ಚಿಕೊಂಡು ಬಂದದ್ದು ಹೌದಾದರೂ ನೋಡೋಣವೆಂದು ಕಂಬಕ್ಕೆ ಕಟ್ಟಿ, ಮನೆ ಸಾಮಾನು ಜೋಡಿಸುವಲ್ಲಿ, ಶಾಲೆಯ ಕೆಲಸದಲ್ಲಿ ನಿರತಳಾದೆ. ಸುಮಾರು ತಿಂಗಳೊಂದು ಕಳೆದಿತ್ತು. ಒಂದು ದಿನ ವಿನ್ಯಾಸ್ ಕರೆದು ತೋರಿಸಿದ; ಇನ್ನೊಂದು ಮಡಿವಾಳ ಹಕ್ಕಿ ಜೋಡಿ ಅದೇ ಪ್ರೀತಿಯ ಗೂಡಿಗೆ ಮತ್ತೆ ನಾರು ತಂದು ಹಾಕುತ್ತಿತ್ತು. ಈ ಸಲವಂತೂ ನಾನು ಭಾವುಕಳಾದೆ. ಕಣ್ಣೀರು ಉಕ್ಕಿ ಮಣ್ಣಿಗೆ ಸೇರಿತು. ಹಕ್ಕಿಗಳು ಮರಿಗಳಿಗೆ ಬೆಚ್ಚನೆಯ ಹಾಸಿಗೆ ಮಾಡಿದವು; ಮೊಟ್ಟೆಯಿಟ್ಟವು, ಮರಿಗಳೂ ಒಡೆದವು. ಆ ಹೊತ್ತಿಗೆ ಬಿರುಬೇಸಗೆ ಕಳೆದು ಮಳೆಗಾಲ ಆರಂಭವಾಗಿತ್ತು. ಜೋರು ಗಾಳಿ ಮಳೆಗೆ ಸಿಬ್ರ್(ಎರಚಲು) ಬಡಿದು ಗೂಡು ಹಾಳಾಗುತ್ತದೇನೋ ಎಂಬ ಭಯ ಕಾಡಿತು. ಈಗಾಗಲೇ ಆ ಪೆಟ್ಟಿಗೆ ಚೂರು ಶಿಥಿಲವಾಗಿತ್ತು. ಆದರೆ ಒಳಗಡೆ ನಾರಿನ ಆಶ್ರಯವಿತ್ತು. ಹಕ್ಕಿಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ದಿನಚರಿಯಲ್ಲಿ ಮೈಮರೆತಿದ್ದವು. ಈ ಸಂದರ್ಭದಲ್ಲೇ ಒಂದು ದಿನದ ಮಟ್ಟಿಗೆ ನಾವು ಹಾಲಾಡಿಗೆ ಹೋಗಬೇಕಾಯಿತು. ಆದರೆ ಹಾಗೆ ಹೋಗಿ ಬರುವುದರೊಳಗೆ ಇಲ್ಲಿ ನಮ್ಮ ಮೂಡಬಿದ್ರೆಯ ನಿಸರ್ಗದ ಮನೆಯಲ್ಲಿ ದೊಡ್ಡ ಅವಘಡವೇ ನಡೆದಿತ್ತು. ಏನಾಯಿತೋ ಗೊತ್ತಾಗಲಿಲ್ಲ ದೊಡ್ಡ ಹಕ್ಕಿಯ ದಾಳಿಯೋ, ಹಾವಿನ ಕಿತಾಪತಿಯೋ… ಮರಿಗಳು ಮಾಯವಾಗಿದ್ದವು! ಅಪ್ಪ-ಅಮ್ಮ ಹಕ್ಕಿಗಳು ಬಹುಶಃ ಹಾರಿಹೋಗಿದ್ದವು. ಇಂತಹ ನೋವುಗಳಿಗೆ ಪದಗಳಿಲ್ಲ. ಅಂತೂ ಹೇಗೋ ಎಲ್ಲವನ್ನೂ ಮರೆತು ಬದುಕಬೇಕೆಂಬ ಸೂತ್ರ ಅನುಸರಿಸಿ ಕುಂಟುವ ಮನಸ್ಸಿನೊಂದಿಗೆ ದಿನಕಳೆದ್ದಾಯಿತು. ಎರಡು ಮೂರು ತಿಂಗಳ ನಂತರ ಒಂದು ದಿನ ಹಕ್ಕಿಗೂಡಿನೊಳಗೆ ದೊಡ್ಡದೊಡ್ಡ ಹುಲ್ಲಿನೆಳೆಗಳು ಕಂಡುಬಂದವು. ಇದನ್ಯಾರು ತಂದಿಟ್ಟರೆಂದು ತಿಳಿಯಲಿಲ್ಲ! ಆ ಸಂಜೆ ಹೊತ್ತು ಮನೆಯೆದುರು ಹುಲ್ಲು ಬೆಳೆದ ಜಾಗದಲ್ಲಿ ಏನೋ ಕೆಲಸ ಮಾಡುತ್ತಿದ್ದ ನನ್ನವರಲ್ಲಿ ಕೇಳಿದೆ; “ನೀವೇನಾದರೂ… ಹುಲ್ಲನ್ನು ಹಕ್ಕಿ ಗೂಡೊಳಗೆ ಹಾಕಿದ್ದೀರಾ?” ಎಂದು! ಏಕೆಂದರೆ ಯಾರೋ ಮನುಷ್ಯರೇ ತುಂಬಿಟ್ಟಂತೆ ಅಸಡಾ ಬಸಡಾ ಇತ್ತದು. ಇವರು ನಗಾಡಿದರು. “ನನಗೇನು ಬೇರೆ ಕೆಲಸ ಇಲ್ವಾ?” ಎನ್ನುತ್ತಾ! ಹಾಗಾದರೆ ಇದ್ಯಾವುದೋ ಹೊಸ ಹಕ್ಕಿಯ ಕಾರುಬಾರೇ ಇರಬೇಕೆಂದು ಜ್ಞಾನೋದಯ ಹೊಂದಿ ಕಳ್ಳನನ್ನು ಕಂಡುಹಿಡಿಯಲು ಕಾದುಕೂತೆವು. ಅಂತೂ ಕಳ್ಳ ಬೇಗನೆ ಸಿಕ್ಕಿಹಾಕಿಕೊಂಡ; ಅದೊಂದು ‘ಮುನಿಯ’. ಭರದಿಂದ ಹುಲ್ಲನ್ನು ತಂದು ರಟ್ಟಿನ ಪೆಟ್ಟಿಗೆಯೊಳಗೆ ಒಟ್ಟುತ್ತಿತ್ತು. ಇದಂತೂ ಭಯಂಕರ ಚಟುವಟಿಕೆಯ ಹಕ್ಕಿ. ಎಂಥಾ ಚುರುಕು, ಏನು ಕತೆ! ನಿಜವಾಗಿಯೂ ಅದೃಷ್ಟಶಾಲಿ ರಟ್ಟಿನಪೆಟ್ಟಿಗೆ ಮತ್ತು ನಾವು. ಈ ಹಕ್ಕಿ ಜೋಡಿಯೂ ಮೊಟ್ಟೆಯಿಟ್ಟು ಕಾವು ಕೊಟ್ಟು ಮರಿಗಳಿಗೆ ತುತ್ತುಣಿಸಿ, ದೊಡ್ಡ ಮಾಡಿ ಒಂದು ದಿನ ತೆರಳಿದವು. ಆದರೆ ಖಾಲಿಯಾದ ಗೂಡು ಹಾಗೇ ಉಳಿಯಲಿಲ್ಲ. ಮತ್ತೆ ಎರಡು ಮುನಿಯ ಹಕ್ಕಿಯ ಸಂಸಾರಗಳು ಬಂದವು. ಯಾವ ಅವಘಡಗಳಿಗೂ ತುತ್ತಾಗದೆ ನೆಮ್ಮದಿಯಿಂದ ಬದುಕಿ ಗೂಡನ್ನು ಖಾಲಿ ಮಾಡಿ ಹೊರಟುಹೋದವು. ಇಷ್ಟೆಲ್ಲಾ ಆಗುವಾಗ ಬಿರುಸಾದ ಮಳೆ ಮತ್ತು ಬಿಸಿಲಿಗೆ ಸ್ವಲ್ಪ ಭಾಗವನ್ನು ಒಡ್ಡಿಕೊಂಡಿದ್ದ ಗೂಡು ಮತ್ತಷ್ಟು ಶಿಥಿಲವಾಗಿತ್ತು. ಕೊನೆಯ ಸಲವಂತೂ ಇನ್ನೇನು ಕಳಚಿ ಬೀಳುತ್ತದೋ ಎಂಬಂತಾಯಿತು. ಆದರೆ ಒಳಗಡೆ ನಾರು, ಬೇರು, ಹುಲ್ಲಿನ ಬಲವಾದ ಮನೆಯೇ ಇದ್ದುದರಿಂದಲೋ ಏನೋ ಮುನಿಯಗಳು ಧೈರ್ಯವಾಗಿ ವಾಸಿಸಿದವು. ಲೆಕ್ಕ ಹಾಕಿದರೆ; ಕಾಲಾನುಕಾಲಕ್ಕೆ ಒಟ್ಟು ಆರು ಹಕ್ಕಿ ಸಂಸಾರಗಳು ನಮ್ಮ ಈ ಒಂದೇ ರಟ್ಟಿನ ಪೆಟ್ಟಿಗೆಯನ್ನು ತಮ್ಮಗೂಡಾಗಿ ಸ್ವೀಕರಿಸಿದ್ದವು! ನನ್ನ ಬದುಕಿನ ಪ್ರಮುಖ ಘಟನೆಗಳಲ್ಲಿ ಇದೂ ಒಂದು. ಮುಗ್ಧ ಹಕ್ಕಿಗಳು ಮನುಷ್ಯರಾದ ನಮ್ಮ ಮೇಲಿಟ್ಟ ಪ್ರೀತಿ, ವಿಶ್ವಾಸದ ಕುರುಹು ಇದೆಂದು ಭಾವಿಸಿ ಸದಾ ಕೃತಜ್ಞಳಾಗಿರುತ್ತೇನೆ. ಶಿಥಿಲವಾದ ಗೂಡನ್ನು ಬಿಚ್ಚಿ ನೆನಪಿಗೆಂದು ಇಟ್ಟುಕೊಂಡೆವು. *** ಮುಂದೆ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ಲಾಟೊಂದರಲ್ಲಿ ವಾಸಿಸಲು ಹೊರಟಾಗ ಅಲ್ಲಿಯೂ ಹಕ್ಕಿಗಳು ನಮ್ಮನ್ನು ಹಿಂಬಾಲಿಸಿ ಸಂಧಿಸುತ್ತವೆಂದು ನಾನು ಊಹಿಸಿರಲಿಲ್ಲ! ಆದರೆ ಮಣ್ಣಿನ ಸ್ಪರ್ಶ, ಮರಗಳ ಸೊಗಡು ಇಲ್ಲದ ಫ್ಲಾಟಿನ ಮನೆಯಲ್ಲಿ ಸೂರಕ್ಕಿಗಳು ಬಂದು ದಿನಗಳನ್ನು ಹಗುರಗೊಳಿಸಿಬಿಟ್ಟವು! ಬಾಲ್ಕನಿಯಲ್ಲಿದ್ದ ಬಟ್ಟೆಯೊಣಗಿಸುವ ದಾರಕ್ಕೆ ಗೂಡು ಕಟ್ಟಿ ಮರಿಗಳನ್ನು ಪೊರೆದವು. ವಿಚಿತ್ರವೆಂದರೆ ಇಲ್ಲಿಯೂ ಕೂಡಾ ಖಾಲಿಯಾದ ಗೂಡು ತಿರಸ್ಕೃತಗೊಳ್ಳದೆ ಮತ್ತೆ ಮತ್ತೆ ಸೂರಕ್ಕಿಗಳು ಬಂದು ಅದರೊಳಗೆ ಹಾಸಿಗೆ ಮಾಡಿ ಮೊಟ್ಟೆಯಿಟ್ಟು ಮರಿಗಳನ್ನು ಪೋಷಿಸಿಕೊಂಡು ಹೋದವು. ಹೀಗೆ ಒಂದು ವರ್ಷದಲ್ಲಿ ನಾಲ್ಕೈದು ಆವರ್ತನವಾದ ನಂತರ ಗೂಡು ಹರಿದು ಹೋಗಿ ಕಾಲು ಭಾಗ ಮಾತ್ರ ಉಳಿದುಕೊಂಡಿತು. ಆದರೂ ಬಿಡದೆ ಮತ್ತೊಂದು ಸೂರಕ್ಕಿ ಬಂದು ಅದೇ ಗೂಡನ್ನು ಪೂರ್ಣಗೊಳಿಸಿ ತನ್ನ ಜೊತೆಗಾತಿಯೊಂದಿಗೆ ಮರಿಗಳನ್ನು ಬೆಳೆಸಿ ಬಾನಿಗೆ ಹಾರಿಸಿತು! ಅಚ್ಚರಿಯೆಂದರೆ ನವೀಕರಣಗೊಂಡ ಈ ಹೊಸ ಗೂಡಿಗೆ ಮತ್ತೆ ಮತ್ತೆ ಹೊಸ ಜೋಡಿ ಬಂದು ಕುಟುಂಬ ಪೊರೆದವು. ನೀರವ ರಾತ್ರಿಗಳಲ್ಲಿ ಕಾವು ಕೊಡಲು ಗೂಡಿನಿಂದ ತಲೆ ಹೊರ ಹಾಕಿ ಕುಳಿತ ಹಕ್ಕಿ ಒಮ್ಮೆ ನನ್ನ ಮಗು ಎನಿಸಿದರೆ, ಇನ್ನೊಮ್ಮೆ ನಮ್ಮನ್ನು ಕಾಯುವ ನಿಸರ್ಗದ ಕಣ್ಣು ಅನ್ನಿಸುವುದು. ಇದಂತೂ ನಾನು ಬರೆಯುವ ಕುರ್ಚಿಯಿಂದ, ನಿದ್ದೆ ಹೋಗುವ ಮಂಚದಿಂದ ಬರೀ ಒಂದು ಮಾರು ದೂರದಲ್ಲಿರುವ ಗೂಡು. ಅಂದರೆ ಸೂರಕ್ಕಿ ಸಂಗಾತಿಗಳು ಸದಾ ನನ್ನ ಹತ್ತಿರ…..ತೀರಾ ಹತ್ತಿರ! ಈ ನಡುವೆ ಹೇಳಲೇಬೇಕಾದ ಇನ್ನೊಂದು ವಿಷಯವೆಂದರೆ, ನಮ್ಮ ‘ಹಕ್ಕಿಮನೆ’ಯಲ್ಲಿ ಪಿಕಳಾರ (ಬುಲ್ ಬುಲ್)ಗಳು ಅಂಗಳದ ಕ್ರೋಟನ್ ಗಿಡದಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವಾದರೂ; ಬೆಕ್ಕೋ, ಹಾವೋ ತಿಂದು ಹಾಕಿದ್ದರಿಂದ ವ್ಯರ್ಥವಾಗಿತ್ತು. ಬಹುಶಃ ರಟ್ಟಿನ ಪೆಟ್ಟಿಗೆಯನ್ನು ನಾವು ಕಂಬಕ್ಕೆ ಎತ್ತರದಲ್ಲಿ ಕಟ್ಟಿದ್ದು ಈ ದೃಷ್ಟಿಯಿಂದ ಬಹಳ ಸಹಾಯವಾಯಿತು ಮತ್ತು ಹಕ್ಕಿಗಳಿಗೂ ಮೆಚ್ಚುಗೆಯಾಯಿತೆಂದು ಕಾಣುತ್ತದೆ! ಇನ್ನು, ನಮ್ಮ ಫ್ಲಾಟಿನ ಗೋಡೆಗಳ ಸಂದುಗೊಂದುಗಳಲ್ಲಿ ಪಾರಿವಾಳದ ನೆಲೆ, ಅವುಗಳ ಗುಟರ್ಗುಟರ್ ಸಂಗೀತ ಸದಾ ಸೆಳೆಯುತ್ತದೆ. ಬಾಲ್ಕನಿಯಲ್ಲಿ ನೀರು, ಕಾಳು, ಬಾಳೆಹಣ್ಣು ಇಡುವ ವ್ಯವಸ್ಥೆ ಮಾಡಿದ್ದೇವೆ.
ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ
ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿ
ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ
You cannot copy content of this page