ಧಾರಾವಾಹಿ ಸಂಗಾತಿ-20 ಅರ್ಜುನ ಉವಾಚ ವಿಶ್ವನಾಥ ಎನ್ ನೇರಳೆಕಟ್ಟೆ ರಣರಂಗ ಪ್ರವೇಶಿಸದಂತೆ ರಾಜಕುವರನನ್ನು ತಡೆದಿತ್ತು ರತಿಕಾಮನೆ ಹಂಸಧ್ವಜ ಕಾಯುತ್ತಿದ್ದದ್ದು ಪ್ರೀತಿಯ ಮಗ ಸುಧನ್ವನ ಬರುವಿಕೆಗಾಗಿ. ಅವನು ವಿಳಂಬ ಮಾಡಿದ್ದಾನೆ ಎಂಬ ಕೋಪ ಹಂಸಧ್ವಜನಲ್ಲೀಗ ಮೂಡತೊಡಗಿತ್ತು. ರಣವೀರ ಸುಧನ್ವ ರಣರಂಗದೆಡೆಗೆ ಬರಲು ವಿಳಂಬವಾದುದಕ್ಕೆ ಸಕಾರಣವಿತ್ತು. ಸೈನಿಕರು ಯುದ್ಧಕ್ಕೆ ಸಿದ್ಧರಾಗಿ ಹೋಗುತ್ತಿದ್ದುದನ್ನು ಕಂಡ ಸುಧನ್ವ ತಾನೂ ತಯಾರಾದ. ವೇಷಭೂಷಣಗಳನ್ನು ಧರಿಸಿಕೊಂಡ. ಮನವನ್ನು ರಣಶೌರ್ಯಕ್ಕೆ ಸಿದ್ಧವಾಗಿಸಿಕೊಂಡ. ಹೋಗಿ ಸಾಷ್ಟಾಂಗ ವಂದಿಸಿದ್ದು ತಾಯಿಯ ಚರಣಕಮಲಗಳಿಗೆ. “ಕುದುರೆಯನ್ನು ಕಟ್ಟಿ ಕದನವನ್ನು ಮಾಡಹೊರಟಿರುವ ನನ್ನ ಮೇಲೆ ನಿನ್ನ ಪೂರ್ಣ ಆಶೀರ್ವಾದವಿರಲಿ ತಾಯೇ” ಎಂದು ಬೇಡಿದ. ಮಗನ ಮನವನ್ನು ವೀರತ್ವದಿಂದ ಹರಿದಾಸತ್ವದೆಡೆಗೆ ಸೆಳೆವ ಪರಮವಾಣಿ ಮೊಳಗಿತು ಆ ಕ್ಷಣದಲ್ಲಿ ಮಾತೆಯ ಮನದಾಳದಿಂದ. “ಅರ್ಜುನನ ಯಾಗದ ಕುದುರೆಯದು ನಾಲ್ಕಡಿಯ ದೇಹವನ್ನು ಹೊಂದಿದೆಯಷ್ಟೇ. ಅದರ ಗೊಡವೆಗಿಂತಲೂ ಆ ಪೊಡವೀಪತಿ ಶ್ರೀಕೃಷ್ಣನನ್ನು ಒಲಿಸುವ ಬುದ್ಧಿಯದು ನಿನಗೆ ಒಲಿಯಬೇಕಿದೆ. ನಿನ್ನ ಸಾಹಸವನ್ನು ಮೆಚ್ಚಿ ಆ ಅಸುರಾರಿ ಇಂದು ಪ್ರತ್ಯಕ್ಷನಾದರೆ ನಾವೆಲ್ಲರೂ ಸಾಕ್ಷಾತ್ ಕಾಣಬಹುದು ಅವನ” ಎಂದಳು ಸುಧನ್ವ ಮಾತೆ. ಮಾತೆ ಮಾತದು ಪ್ರೇರೇಪಿಸಿತು ಸುಧನ್ವನನು ಪ್ರತಿಜ್ಞಾಬದ್ಧತೆಯೊಂದರ ಕಡೆಗೆ. “ಅರ್ಜುನನಿಗೆ ನೋವಾದರೆ ಆ ಶ್ರೀಕೃಷ್ಣ ಬಾರದೇ ಇರುವನೇ! ಆಪ್ತರ ಆರ್ತನಾದವನ್ನು ಆ ಆಪದ್ಬಾಂಧವ ಸಹಿಸಿಯಾನೇ! ಇಂದ್ರಸುತನೊಡನೆ ಹೋರಾಡುವೆ ಶೌರ್ಯದಿಂದ. ತನ್ಮೂಲಕ ಆ ಹರಿಯನ್ನು ನಮ್ಮೀ ಧರಣಿಗೆ ಬರಗೊಡುವೆ. ನಂತರ ಆ ಕೃಷ್ಣನ ಮುಂದೆ ನನ್ನ ಪೌರುಷವನ್ನು ತೋರಿಸುವೆ” ಎಂದು ದಿಟ್ಟತನದಿಂದ ನುಡಿದನು ಸುಧನ್ವ. ಶ್ರೀಕೃಷ್ಣ ಬಂದಾಗ ಮಗನೆಲ್ಲಿ ಯುದ್ಧಕ್ಕೆ ವಿಮುಖನಾಗುವನೋ ಎಂಬ ಭಾವ ಆ ತಾಯಿಯನ್ನು ಕಾಡಿತು. ಅದನ್ನೇ ಹೇಳಿದಳು ಮಗನಲ್ಲಿ. “ಕೃಷ್ಣಾಗಮನದ ಗಳಿಗೆಯಲ್ಲಿ ನೀನು ಯುದ್ಧಕ್ಕೆ ವಿಮುಖನಾದರೆ ಜನರ ಮುಂದೆ ಮರ್ಯಾದೆ ನಾಶವದು ಖಚಿತ” ಎಂಬ ಎಚ್ಚರಿಕೆ ನೀಡಿದಳು. “ಕೃಷ್ಣನಿಗೆ ವಿಮುಖನಾಗಿ ಬಂದರೆ ನಿನ್ನ ಗರ್ಭದಲ್ಲಿ ಜನಿಸಿದವನೇ ನಾನಲ್ಲ” ಎಂಬ ಧೀರನುಡಿಯನಾಡಿದ ಸುಧನ್ವ, ಕದನದಲ್ಲಿ ಭರಪೂರ ಶೌರ್ಯವನ್ನು ತೋರಿಸುವ ಆಶ್ವಾಸನೆಯನ್ನು ಅವಳಿಗಿತ್ತನು. ಅಷ್ಟರಲ್ಲಿ ಬಳಿಗೆ ಬಂದ ಅವನ ಸಹೋದರಿ ಕುವಲೆಯೆನ್ನುವವಳು “ಕೃಷ್ಣನಿಗೆ ವಿಮುಖನಾಗಿ ನೀನು ಬಂದರೆ ನನ್ನ ಗಂಡನ ಮನೆಯಲ್ಲಿ ನಾನು ತಲೆಯೆತ್ತಿ ನಡೆಯಲಾರೆ” ಎಂದು ಹೇಳಿ, ಅಣ್ಣ ಅಸಹಾಯ ಶೌರ್ಯ ತೋರಲಿ ಎಂದು ಹಾರೈಸಿ, ಆರತಿಯನೆತ್ತಿ, ಚಂದನದ ತಿಲಕವನ್ನಿಟ್ಟು, ಕರ್ಪೂರ ವೀಳ್ಯವನ್ನು ಕೊಟ್ಟು, ಅಕ್ಷತೆಯನ್ನು ಎರಚಿ ಕಳುಹಿಸಿಕೊಟ್ಟಳು ಸುಧನ್ವನನ್ನು. ಹೀಗೆ ಯುದ್ಧಮುಖನಾಗಿ ಅರಮನೆಯಿಂದ ಹೊರಟುನಿಂತ ಸುಧನ್ವನಿಗೀಗ ಎದುರಾದವಳು ಪ್ರಭಾವತಿ. ಅವನ ಪ್ರಿಯ ರಾಣಿ. ಚಂದ್ರಮಂಡಲದಂತಿತ್ತು ಅವಳ ವದನ. ಹೊಸತು ಬೆಳದಿಂಗಳಂತೆ ಶೋಭಿಸುವ ಅವಳ ನಗು. ರೇಷ್ಮೆಯುಡುಗೆಯನ್ನು ತೊಟ್ಟು ಮೆರೆಯುತ್ತಿದ್ದಾಳೆ. ಅವಳ ಹಣೆಯ ಮೇಲಿನ ಕೆಂಬಣ್ಣದ ಸಿಂಧೂರ ತಿಲಕವದು ಅವಳ ಚಿತ್ತದ ಅನುರಾಗವನ್ನು ಸೂಚಿಸುವಂತಿದೆ. ಸೌಂದರ್ಯವನ್ನೇ ಹೊತ್ತುನಿಂತಿದ್ದಳು ಪ್ರಭಾವತಿ. ಮಡದಿಯ ಬೆಡಗು ಬಿನ್ನಾಣಗಳನ್ನು ನೋಡಿ ಮುಗುಳುನಗುತ ಸುಧನ್ವ “ಇಂದು ಯುದ್ಧದಲ್ಲಿ ಅರ್ಜುನನ ಬಿಂಕವನ್ನು ಕೊನೆಗಾಣಿಸುತ್ತೇನೆ. ಕೃಷ್ಣ ಪ್ರತ್ಯಕ್ಷನಾದಾಗ ಅವನ ಮುಂದೆಯೂ ನನ್ನ ಪರಾಕ್ರಮದ ಪ್ರದರ್ಶನಗೈಯ್ಯುತ್ತೇನೆ. ಗೆಲುವನ್ನು ಪಡೆಯುತ್ತೇನೆ. ಅದಾಗದಿದ್ದರೆ ವೀರಮರಣವನ್ನು ಪಡೆದು ಮುಕ್ತಿಯನ್ನು ಗಳಿಸುತ್ತೇನೆ. ನನ್ನನ್ನು ಒಲವಿನಿಂದ ಕಳಿಸಿಕೊಡು ನೀನು” ಎಂದನು. ರಾಣಿ ಪ್ರಭಾವತಿಯ ಆಕಾಂಕ್ಷೆಯದು ಬೇರೆಯದೇ ತೆರದಲ್ಲಿತ್ತು. ಕೃಷ್ಣನಿಗೆ ಯುದ್ಧದಲ್ಲಿ ಎದುರಾದ ಬಳಿಕ ಮೋಕ್ಷವಲ್ಲದೆ ಜಯ ದೊರೆಯಲು ಸಾಧ್ಯವಿಲ್ಲ ಎಂಬ ಅರಿವಿತ್ತು ಅವಳಿಗೆ. ಗಂಡ ಯುದ್ಧಕ್ಕೆ ಹೋಗುವುದಕ್ಕೂ ಮೊದಲು ತನ್ನನ್ನು ಕೂಡಿದರೆ ಆ ಬಳಿಕ ತಾನು ಸಂತಾನರಹಿತೆ ಎನಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಅವಳ ಯೋಚನೆ. ಕಾಮಾಸಕ್ತಿ ಅವಳಲ್ಲಿ ಗರಿಗೆದರಿತ್ತು. ತಾಯ್ತನದ ಹಂಬಲ ಅವಳನ್ನು ಕಾಡತೊಡಗಿತ್ತು. ತನ್ನನ್ನು ತೃಪ್ತಿಗೊಳಿಸಿ ಯುದ್ಧಕ್ಕೆ ತೆರಳು ಎಂದು ಕೇಳಿಕೊಂಡಳು ಸುಧನ್ವನನ್ನು. ಯುದ್ಧರಂಗದೆಡೆಗೆ ಮುಖಮಾಡಿದ್ದ ಹಂಸಧ್ವಜಸುತನಿಗೆ ಮಡದಿಯ ಮಾತು ಸರಿದೋರಲಿಲ್ಲ. “ಕಾಮದಾಟಕ್ಕೆ ಇದು ಸಮಯವಲ್ಲ. ಕದನಭೇರಿ ನನ್ನನ್ನು ಕರೆಯುತ್ತಿದೆ. ನನ್ನ ತಂದೆ ಈಗಾಗಲೇ ರಣಭೂಮಿಯನ್ನು ಸೇರಿಯಾಗಿದೆ. ಸರಿಯಾದ ಸಮಯದಲ್ಲಿ ನಾನಲ್ಲಿ ಇರದಿದ್ದರೆ ಕ್ರಮವನ್ನು ಮೀರಿದಂತಾಗುತ್ತದೆ. ನೀನು ನನ್ನನ್ನೀಗ ತಡೆಯುವುದು ಸರಿಯಲ್ಲ. ನನ್ನನ್ನು ಹೋಗಲು ಬಿಡು” ಎಂದು ಹೇಳುತ್ತಾ ಅವನು ಮುಂದುವರಿಯುವ ಮನಸ್ಸು ಮಾಡಿದ. ಆಗಲೇ ಅವಳು ಅವನ ಗಲ್ಲವನ್ನು ಹಿಡಿದು, ಮುದ್ದುಮಾಡಿ, ಅವನೆಡೆಗೆ ತನ್ನ ತನುವನ್ನು ನೂಕಿದಳು. ಮನ್ಮಥನ ರಣರಂಗವನ್ನು ಪ್ರವೇಶಿಸಬೇಕಾದ ನೀನು ಕುದುರೆಯನ್ನು ಗೆಲ್ಲಬೇಕಾದ ಯುದ್ಧರಂಗಕ್ಕೆ ಹೇಗೆ ಹೋಗುವೆಯೋ ನೋಡುತ್ತೇನೆ ಎಂಬಂತೆ ಅವಳು ತನ್ನೆರಡೂ ಮೊಲೆಗಳನ್ನು ಅವನ ದೇಹಕ್ಕೆ ಒತ್ತುತ್ತಾ, ಗಾಢವಾಗಿ ಆಲಿಂಗನಗೈದು ಶೃಂಗಾರ ಚೇಷ್ಟೆಗಳನ್ನು ತೋರಿದಳು. ಹಂಸಗಳ ತುಪ್ಪಳದಿಂದ ನಿರ್ಮಿಸಲಾದ ಹಾಸಿಗೆಯೆಡೆಗೆ ಅವನನ್ನು ಸೆಳೆದೊಯ್ದಳು. ಮಡದಿಯ ಮೋಹದಾಟಗಳು ಯುದ್ಧರಂಗದೆಡೆಗೆ ಮುಖಮಾಡಿದ್ದ ಸುಧನ್ವನ ಅಂತರಂಗವನ್ನು ಇನ್ನೊಂದು ದಿಕ್ಕಿಗೆ ಹಾಯಿಸಿದವು. ಮನದನ್ನೆಯ ಮನದ ಕಾಮನೆಯನ್ನು ತಣಿಸಿ, ರಮಿಸುವುದರಲ್ಲೇನೂ ತಪ್ಪಿಲ್ಲ ಎಂದು ತೋರಿತು ಅವನಿಗೆ. ಸರಸದ ಮಾತುಗಳನ್ನಾಡಿದ. ಚುಂಬಿಸಿದ. ಪ್ರೀತಿಯಿಂದ ಅವಳೆದೆಯಲ್ಲಿ ಒರಗಿದ. ಕಾಮಿನಿಯ ಕಾಮದ ಕಡಲಲ್ಲಿ ಮುಳುಗಿಹೋದ ಸುಧನ್ವ. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಕೃಷ್ಣದರ್ಶನದ ಹಂಬಲವದು ಕುದುರೆಯನು ಕಟ್ಟಿಸಿತು ಚಂಪಕಾನಗರಿಯ ಅರಸ ಹಂಸಧ್ವಜ. ನಿಷ್ಠೆ ನಿಯಮಗಳಿಗೆ ನಿಜಾರ್ಥದ ದೊರೆಯಾಗಿದ್ದವನು. ಇಡಿಯ ಚಂಪಕಾಪುರಕ್ಕೆ ಸರಿಹೊಂದುವ ನಿಯಮಾವಳಿಯನ್ನವನು ರೂಪಿಸಿದ್ದ. ಎಲ್ಲಾ ಪ್ರಜೆಗಳು ಏಕಪತ್ನೀವ್ರತವನ್ನು ಪಾಲಿಸಬೇಕಿತ್ತು. ಕೃಷ್ಣಪೂಜೆಯನ್ನು ಗೈಯ್ಯಬೇಕಿತ್ತು. ದಾನಧರ್ಮಗಳನ್ನು ನಡೆಸಬೇಕಿತ್ತು. ಹೀಗೆ ರಾಜಕೃತ ನಿಯಮಾವಳಿಗಳನ್ನು ಯಾರೂ ಮೀರುವುದಕ್ಕೆ ಸಾಧ್ಯವೇ ಇರಲಿಲ್ಲ. ಪ್ರಜೆಗಳ ಕೆಡುಕಿನ ವರ್ತನೆಯನ್ನು ಸಹಿಸದವನಾಗಿದ್ದ ಹಂಸಧ್ವಜ. ಹಾಗೆಂದು ಕೇವಲ ಪ್ರಜೆಗಳ ಮೇಲೆ ನಿರ್ಬಂಧ ಹೇರಿ ಸುಮ್ಮನಿರುವವನಲ್ಲ ಆತ. ಪ್ರಜೆಗಳಿಗೆ ಇವುಗಳನ್ನು ಬೋಧಿಸುವುದಕ್ಕೂ ಮೊದಲು ತಾನೇ ಪಾಲಿಸಿದವನಾಗಿದ್ದ. ‘ಯಥಾ ರಾಜ ತಥಾ ಪ್ರಜಾ’ ಎಂಬ ಮಾತಿನಂತೆ ಹಂಸಧ್ವಜನ ಸುಗುಣಗಳನ್ನು ಅಲ್ಲಿನ ಪ್ರಜೆಗಳಲ್ಲಿಯೂ ಕಾಣಬಹುದಾಗಿತ್ತು. ಎಲ್ಲರೂ ಏಕಪತ್ನೀವ್ರತಸ್ಥರಾಗಿದ್ದರು. ಕೃಷ್ಣಪೂಜೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ತಮ್ಮಲ್ಲಿರುವ ಸಂಪತ್ತಿನಲ್ಲಿ ಒಂದಷ್ಟು ಭಾಗವನ್ನು ಅವಶ್ಯಕತೆ ಇರುವವರಿಗೆ ಕೊಟ್ಟು ಧನ್ಯಭಾವವನ್ನು ಅನುಭವಿಸುತ್ತಿದ್ದರು. ಹೀಗಿತ್ತು ಚಂಪಕಾನಗರಿ, ನಮ್ಮ ಯಾಗದ ಕುದುರೆ ಅಲ್ಲಿಯ ಧರಣಿಯ ಮೇಲೆ ಕಾಲನ್ನಿರಿಸಿದಾಗ. ಏಳು ಮಂದಿ ತಮ್ಮಂದಿರಿದ್ದರು ಹಂಸಧ್ವಜನಿಗೆ. ಸುದರ್ಶನ, ಸುಧನ್ವ, ಸುಮನಸ, ಸುರಥ ಎಂಬ ನಾಮಾಂಕಿತ ನಾಲ್ಕು ಮಂದಿ ವೀರ ಪುತ್ರರಿದ್ದರು. ಶಂಖ ಲಿಖಿತ ಎಂಬ ಅಣ್ಣತಮ್ಮಂದಿರು ಹಂಸಧ್ವಜನ ಪುರೋಹಿತರೆನಿಸಿಕೊಂಡಿದ್ದರು. ಇವರಿಬ್ಬರಿಗೂ ಶಾಸ್ತçಪಾಲನೆಯ ವಿಚಾರ ಬಂದಾಗ ಬಾಂಧವ್ಯವಾಗಲೀ, ಆತ್ಮೀಯತೆಯಾಗಲೀ ಮುಖ್ಯವಾಗುತ್ತಿರಲಿಲ್ಲ. ಅದೊಂದು ಸಲ ಲಿಖಿತನ ಆಶ್ರಮಕ್ಕೆ ಬಂದ ಶಂಖ ಅವನಲ್ಲಿ ಕೇಳದೆಯೇ ನೆಲದಲ್ಲಿ ಬಿದ್ದಿದ್ದ ಹಣ್ಣನ್ನು ಎತ್ತಿಕೊಂಡು ತಿಂದ. ಶಂಖನ ವರ್ತನೆಯದು ದೋಷ ಎಂದು ತೀರ್ಮಾನಿಸಿದ ಲಿಖಿತ ಸಹೋದರ ಎನ್ನುವುದನ್ನೂ ಪರಿಗಣಿಸದೆ ಶಿಕ್ಷೆ ಕೊಡಿಸಲು ಹಂಸಧ್ವಜನ ಆಸ್ಥಾನಕ್ಕೆ ಕರೆತಂದಿದ್ದ. ಶಂಖನ ಕೈಗಳನ್ನು ಕತ್ತರಿಸಿಹಾಕುವ ಶಿಕ್ಷೆ ಪ್ರಕಟವಾಯಿತು ಹಂಸಧ್ವಜನ ಕಡೆಯಿಂದ. ಹೀಗೆ ಶಿಕ್ಷೆಗೆ ಒಳಗಾದ ಶಂಖನಿಗೆ ತಪೋಬಲದಿಂದ ಮತ್ತೆ ಕೈ ಮೂಡುವಂತೆ ಮಾಡಿದ ಲಿಖಿತ. ಹೀಗೆ ಸರಿ ತಪ್ಪುಗಳ ವಿವೇಚನೆಗಿಳಿದರೆ ಬೇರಾವುದಕ್ಕೂ ಎಡಗೊಡದ ಕಟ್ಟುನಿಟ್ಟಿನ ಚಿತ್ತದ ಅಣ್ಣತಮ್ಮಂದಿರು ಪುರೋಹಿತರೆನಿಸಿಕೊಂಡು ಹಂಸಧ್ವಜನಿಗೆ ಮಾರ್ಗದರ್ಶನ ನೀಡುತ್ತಿದ್ದರು. ಕುದುರೆಯ ರಕ್ಷಣೆಗಾಗಿ ಚಂಪಕಾನಗರಿಯನ್ನು ಸೇರಿಕೊಂಡ ನಾನು ಪಟ್ಟಣದ ಜನರನ್ನೂ ಹಾಗೆಯೇ ಒಮ್ಮೆ ನೋಡಿದೆ. ಉಣ್ಣುವುದಕ್ಕೆ ಉಡುವುದಕ್ಕೆ ಯಾವ ಕೊರತೆಯೂ ಅಲ್ಲಿನ ಜನರಿಗಿರಲಿಲ್ಲ. ವಸ್ತçಭೂಷಣಗಳಿಂದ, ಅಲಂಕಾರ- ಸುಗಂಧ ದ್ರವ್ಯಗಳಿಂದ ಶೋಭಿಸುತ್ತಿದ್ದರು. ವೀರರು ಎನ್ನುವುದು ಅವರ ನಿಲುವಿನಲ್ಲಿಯೇ ಗೊತ್ತಾಗುವಂತಿತ್ತು. ಹಾಗೆ ನಾನು ಈಕ್ಷಿಸುತ್ತಿದ್ದಾಗಲೇ ಡಂಗುರದ ದನಿ ಕೇಳಿಬಂತು. ನಮ್ಮ ಕುದುರೆಯನ್ನು ಕಟ್ಟಿಹಾಕುವ ನಿರ್ಧಾರ ಮಾಡಿದ್ದ ಹಂಸಧ್ವಜ. ಅವನು ನಮ್ಮ ಜೊತೆಗಿನ ಯುದ್ಧಕ್ಕೆ ಮನಸ್ಸು ಮಾಡಿದ್ದೇಕೆ ಎಂಬ ವಿಷಯವೂ ಸ್ವಲ್ಪ ಸಮಯದಲ್ಲಿಯೇ ನನ್ನ ಸೇವಕರ ಮೂಲಕ ತಿಳಿದುಬಂತು. ನಮ್ಮ ಯಾಗದ ಕುದುರೆ ಅವನ ನಗರಿಯನ್ನು ಪ್ರವೇಶಿಸಿದ ತಕ್ಷಣವೇ ತನ್ನ ಆಪ್ತ ಸಚಿವರ ಸಭೆಯನ್ನು ಕರೆದನಂತೆ. “ಪಾಂಡವರ ಯಾಗದ ಕುದುರೆಯನ್ನು ಕಟ್ಟಿ ಅರ್ಜುನನ ಜೊತೆ ಸಂಘರ್ಷಕ್ಕಿಳಿದರೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ನಮ್ಮ ಈ ಭೂಮಿಯಲ್ಲಿ ಪ್ರತ್ಯಕ್ಷನಾಗುತ್ತಾನೆ. ಇಷ್ಟರವರೆಗೂ ನಾವು ಯಾರೂ ಕೃಷ್ಣನನ್ನು ಕಂಡವರಲ್ಲ. ಈಗ ಕಾಣುವ ಸುಯೋಗ ಒದಗಿಬಂದಿದೆ. ಕೃಷ್ಣ ಪ್ರತ್ಯಕ್ಷನಾಗಿ ನಮ್ಮನ್ನು ವಿರೋಧಿಸಿದರೂ ಅದು ನಮಗೆ ಸಂತಸವೇ. ಅದಕ್ಕಾಗಿ ಕುದುರೆಯನ್ನು ಕಟ್ಟಿಹಾಕಬೇಕಿದೆ” ಎಂದನಂತೆ. ಅಂದರೆ, ಕೃಷ್ಣದರ್ಶನದ ಹಂಬಲದಿಂದಲೇ ಅವನು ನಮ್ಮ ಯಾಗದ ಕುದುರೆಯ ಚಲನೆಗೆ ತಡೆಯೊಡ್ಡಿದ್ದ. ರಾಜಾಜ್ಞೆ ಹೊರಟ ಮೇಲೆ ಯುದ್ಧ ನಿಶ್ಚಯ ಎನ್ನುವುದು ನನಗೆ ಸ್ಪಷ್ಟವಾಯಿತು. ಅವನ ಜೊತೆಗೆ ಯುದ್ಧವನ್ನು ಆರಂಭಿಸುವುದಕ್ಕೂ ಮೊದಲು ಅವನ ಬಲಾಬಲಗಳನ್ನು ಅರಿತುಕೊಳ್ಳುವುದು ಬಲುಮುಖ್ಯ ಎನಿಸಿತು. ತಿಳಿದುಕೊಂಡೆ. ಎಪ್ಪತ್ತು ಮಂದಿ ದಳಪತಿಗಳಿದ್ದರು ಅವನ ಸೇನೆಯಲ್ಲಿ. ಒಬ್ಬೊಬ್ಬ ದಳಪತಿಗಳು ಎಪ್ಪತ್ತೊಂದು ಸಾವಿರ ರಥಗಳಿಗೆ, ಇಪ್ಪತ್ತೊಂದು ಸಾವಿರ ಆನೆಗಳಿಗೆ, ಲಕ್ಷ ಕುದುರೆಗಳಿಗೆ, ಲಕ್ಷ ಸೈನಿಕರಿಗೆ ಅಧಿಪತಿಗಳೆನಿಸಿಕೊಂಡಿದ್ದರು. ಹಿರಿದು ಸೈನ್ಯವನ್ನೇ ಎದುರುಹಾಕಿಕೊಳ್ಳಬೇಕಿದೆ ನಾವು ಎನ್ನುವುದು ದೃಢವಾಯಿತು ನನಗೆ. ಹಂಸಧ್ವಜನೆAಬ ಪ್ರಜಾಪರ ರಾಜನ ಡಂಗುರವನ್ನು ಅಲ್ಲಿನ ಪ್ರಜೆಗಳು ಒಡನೆಯೇ ಪಾಲಿಸಿದರು. ಚತುರಂಗ ಬಲಗಳು ಸಿದ್ಧಗೊಂಡವು. ಯುದ್ಧ ನಡೆಯುವ ತಾಣದೆಡೆಗೆ ನಡೆದುಬರತೊಡಗಿದವು. ನನಗೆ ವಿಸ್ಮಯ ಮೂಡಿದ್ದು ಯುದ್ಧಕ್ಕೆ ಬರುತ್ತಿದ್ದ ಸೈನಿಕರ ಮೊಗದ ಭಾವನೆಯನ್ನು ಕಂಡಾಗ. ಸಾಮಾನ್ಯವಾಗಿ ಯುದ್ಧಕ್ಕೆ ಬರುವ ಸೈನಿಕರಲ್ಲಿ ವೀರತ್ವ ಮನೆಮಾಡಿರುತ್ತದೆ. ಜೊತೆಗೆ ಅಂಜಿಕೆಯೂ ಇರುತ್ತದೆ. ಆದರೆ ಚಂಪಕಾನಗರಿಯ ಸೈನಿಕರ ಮೊಗದಲ್ಲಿ ಹರ್ಷಭಾವ ತುಂಬಿ ತುಳುಕುತ್ತಿತ್ತು. ಅದರ ಹಿಂದಿನ ಕಾರಣವನ್ನು ತಿಳಿದುಕೊಂಡೆ. ಕೃಷ್ಣ ಪ್ರತ್ಯಕ್ಷವಾಗದೆ ನನಗೆ ಸೋಲುವವನಲ್ಲ ಹಂಸಧ್ವಜ ಎನ್ನುವುದು ಸೈನಿಕರಿಗೆ ಖಚಿತವಾಗಿತ್ತು. ಕೃಷ್ಣದರ್ಶನ ತಮಗೆ ಲಭಿಸುತ್ತದೆ. ತಮ್ಮ ಜನ್ಮ ಸಾರ್ಥಕವಾಗುತ್ತದೆ ಎಂಬ ಭಕ್ತಿಭಾವದ ಶರಧಿಯಲ್ಲಿ ತೇಲುತ್ತಾ, ಸೊಗಭಾವ ಅನುಭವಿಸುತ್ತಿದ್ದರು ಆ ಸೈನಿಕರು. ಹೀಗೆ ಯುದ್ಧರಂಗದೆಡೆಗೆ ನಡೆದುಬರುತ್ತಿದ್ದ ಸೈನಿಕರನ್ನು ನೋಡುತ್ತಿದ್ದರು ಉಪ್ಪರಿಗೆಗಳಲ್ಲಿ ನಿಂತ ಅಂಗನೆಯರು. ರಣರಂಗದ ಮೇಲಿನ ಯುದ್ಧಕ್ಕೂ ಮೊದಲು ಶಯನಗೃಹದ ಸರಸಕಾಳಗದೆಡೆಗೆ ಗಂಡನ ಮನಸ್ಸನ್ನು ಸೆಳೆದ ಅದೆಷ್ಟೋ ಕಾಮಿನಿಯರು ಯುದ್ಧ ಮಾಡುವುದಕ್ಕೆ ಬೇಕಾದ ಭರಪೂರ ಉತ್ಸಾಹವನ್ನು ಅವರಲ್ಲಿ ತುಂಬಿ ಕಳುಹಿಸಿಕೊಟ್ಟಿದ್ದರು. ಯುದ್ಧಕ್ಕೆ ಸಿದ್ಧವಾಗಿ ನಾವೂ ನಿಂತೆವು. ಹಂಸಧ್ವಜನ ಸೇನೆಯೂ ನಿಂತಿತು. ಯಾರದೋ ಆಗಮನಕ್ಕೆ ಕಾಯುತ್ತಿರುವಂತೆ, ಅವನೇಕೆ ಇನ್ನೂ ಬಂದಿಲ್ಲ ಎಂದು ಅತ್ತಿತ್ತ ನೋಡುತ್ತಿರುವಂತೆ ಹಂಸಧ್ವಜನ ವರ್ತನೆಯಿತ್ತು. ರಣಕಹಳೆ ಇನ್ನೂ ಮೊಳಗಿರಲಿಲ್ಲ. ಯಾರಿಗಾಗಿ ಕಾಯುತ್ತಿದ್ದಾನೆ ಹಂಸಧ್ವಜ?! ನನಗೆ ಅರ್ಥವಾಗಲಿಲ್ಲ. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ-17 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಕುದುರೆ ಸಂಚಾರಕ್ಕೆ ಸಂಚಕಾರವಾಯಿತು ಆ ಶಿಲೆ! ಈಗ ನಮ್ಮ ಜೊತೆ ನೀಲಧ್ವಜನೂ ಸೇರಿಕೊಂಡಿದ್ದ. ತೆಂಕುದಿಕ್ಕಿನೆಡೆಗೆ ಹೆಜ್ಜೆ ಹಾಕುತ್ತಿತ್ತು ಹಯ. ಮುಂದೆ ಕಾಣುತ್ತಿದ್ದದ್ದು ವಿಂಧ್ಯಾ ಪರ್ವತ. ನಮ್ಮ ಅವಿರತ ಚಲನೆಯನ್ನು ಕಂಡೂ ಚಲನೆಗೆ ಮನಸ್ಸು ಮಾಡದೆ ದೃಢತೆಯೇ ಮೈವೆತ್ತ ಬಗೆಯಲ್ಲಿತ್ತು ಅದರ ನಿಲುವು. ಶೃಂಗವಿತ್ತು. ಕಂದರವಿತ್ತು. ಮಂಜು ಮುಸುಕಿತ್ತು. ಕಾಡು ಬೆಳೆದಿತ್ತು. ಅರಣ್ಯವನ್ನೇ ಆಶ್ರಯಿಸಿಕೊಂಡಿದ್ದ ಜನರನ್ನು ಕಂಡೆವು. ಬಗೆಬಗೆಯ ಪಕ್ಷಿಗಳು ಅಲ್ಲಿದ್ದವು. ವಿಧವಿಧದ ಪ್ರಾಣಿಸಮೂಹಗಳಿದ್ದವು. ಹಾಗೆಯೇ ಮುಂದೆ ಹೋಗುತ್ತಿದ್ದಂತೆ ಋಷಿಗಳ ಆಶ್ರಮಗಳು ಕಣ್ಣಿಗೆ ಕಂಡವು.ವಿಂಧ್ಯಾ ಪರ್ವತದೊಳಗನ್ನು ಪ್ರವೇಶಿಸಿದೆವು. ಕುದುರೆಯನ್ನು ಕೂಡಿಕೊಂಡ ನಾವು, ಕೃಷ್ಣ ಕಿಂಕರರು, ಕಾಲಿಟ್ಟ ಒಡನೆಯೇ ಅಚ್ಚರಿ ಹುಟ್ಟಿಸುವ ಪರಿವರ್ತನೆಗೀಡಾಯಿತು ಆ ಪರ್ವತ ಪ್ರದೇಶ. ದುರ್ಗಮವಾಗಿದ್ದ ದಾರಿಯದು ಸುಗಮವಾಗಿ ತೋರಿತು. ಅದುವರೆಗೂ ನೆಲೆಸಿದ್ದ ಕತ್ತಲು ತೊಲಗಿ ಬೆಳ್ಳನೆಯ ಬೆಳಕು ಮೂಡಿಬಂತು. ನಾವೆಲ್ಲರೂ ಕುದುರೆಯ ಜೊತೆಜೊತೆಗೇ ಇದ್ದೆವು. ತನ್ನ ಇಚ್ಛೆಯನುಸಾರ ಸಾಗುತ್ತಿತ್ತು ಆ ಕುದುರೆ. ಮುಂದೆ ಮುಂದೆ ಹೋದಾಗ ಎದುರಾದದ್ದು ಅತೀವ ವಿಸ್ತಾರದ ಒಂದು ಶಿಲೆ. ಒಂದು ಯೋಜನದಷ್ಟು ಅಗಲವಿದ್ದಿರಬಹುದು ಅದು. ಅದರ ಮೇಲೆಯೂ ನಡೆಯುವೆ ತಾನು ಎಂಬAತೆ ಕಾಲುಗಳನ್ನಿಟ್ಟಿತು ಕುದುರೆ.ಸ್ವಚ್ಛಂದವಾಗಿ ಸಂಚರಿಸುತ್ತಿದ್ದ ಅಶ್ವದ ಸುಗಮ ಸಂಚಾರಕ್ಕೆ ಸಂಚಕಾರ ಎದುರಾದದ್ದು ಆಗಲೇ. ಕಾಲುಗಳನ್ನು ಮೇಲಕ್ಕೆ ಎತ್ತಲಾಗದ, ಎತ್ತಿ ಮುಂದಿಡಲಾಗದ ಸ್ಥಿತಿಯಲ್ಲಿ ಕುದುರೆ ಅಲ್ಲಿಯೇ ನಿಂತುಬಿಟ್ಟಿತು. ಆ ಶಿಲೆಗೆ ಅದರ ಕಾಲುಗಳು ಅಂಟಿಕೊAಡಿವೆಯೋ ಏನೋ ಎಂಬAತೆ ತೋರುತ್ತಿತ್ತು. ನಡೆಯುವುದನ್ನೇ ಮರೆತಂತೆ ಅದು ಅಲ್ಲಿಯೇ ನಿಂತಿತು. ಪೌರ್ಣಮಿಯಂದು ಚಂದ್ರಾಕೃತಿಯ ಒಳಗೆ ಮೊಲವೊಂದು ತಟಸ್ಥವಾಗಿ ತೋರುವಂತೆ ಅಗಲಗಲವಾಗಿದ್ದ ಶಿಲೆಯ ಮೇಲೆ ಈ ಕುದುರೆ ಅಚಲವಾಗಿ ನಿಂತಿತ್ತು. ಗಾಳಿಯ ವೇಗವನ್ನೂ ಮೀರಿ ನಡೆಯುವ ಕುದುರೆ ಈ ಬಗೆಯಲ್ಲಿ ನಿಂತುದನ್ನು ಕಂಡಾಗ ಆಶ್ಚರ್ಯವಲ್ಲದೆ ಇನ್ನೇನು ತಾನೇ ಆಗಲು ಸಾಧ್ಯ!ಕುದುರೆ ಚಲಿಸಲೇಬೇಕಿತ್ತು. ಅದು ಚಲಿಸದೆಯೇ ನಾವು ಚಲಿಸುವಂತಿರಲಿಲ್ಲ. ಚಲಿಸಿದರೂ ಅದಕ್ಕೇನೇನೂ ಸಾರ್ಥಕತೆಯಿರಲಿಲ್ಲ. ಬದುಕು ಎಂದರೆ ಕೆಲವೊಮ್ಮೆ ಹೀಗೆಯೇ. ಇನ್ನೊಬ್ಬರ ಚಲನೆಯಿದ್ದರೆ ಮಾತ್ರ ನಮ್ಮ ಚಲನೆಗೆ ಅರ್ಥವಿರುತ್ತದೆ.ಜೊತೆಗಿದ್ದ ಸೇವಕರನ್ನು ಕುದುರೆಯ ಬಳಿಗೆ ಅಟ್ಟಿದೆ. ಕುದುರೆಯ ಕಾಲುಗಳನ್ನು ಬಿಡಿಸಲು ಹೇಳಿದೆ. ಅಳವು ತೋರಿದ ಆಳುಗಳು ಸೋತು ಅಳುಮೋರೆ ಮಾಡಿದರು.ಏನಾಯಿತಿದು! ಕುದುರೆಗೇಕೆ ಇಂತಹ ದುರವಸ್ಥೆ! ಅದು ಚಲಿಸದಿದ್ದರೆ ಮುಂದಿನ ತಾಣವನ್ನು ಸೇರುವ ಬಗೆ ಹೇಗೆ! ಅಶ್ವಮೇಧ ಯಾಗದ ಗತಿಯೇನಾಯಿತು! ಎಂದೆಲ್ಲಾ ಚಿಂತೆ ಮಾಡಿದ ನನಗೆ ಹೊಳೆದ ಯೋಚನೆ ಮುನಿಶಾಪದ್ದು. ಯಾರೋ ಮುನಿಗಳ ಶಾಪದ ಫಲವೇ ಇದಾಗಿರಬೇಕು ಎನಿಸಿತು. ತಿಳಿದ ಹಿರಿಯರಲ್ಲಿ ಕೇಳಿದರೆ ಒಳಿತು ಎನಿಸಿತು.“ಈ ಸ್ಥಳದಲ್ಲಿ ಸುತ್ತಮುತ್ತ ಋಷಿಗಳ ಆಶ್ರಮವಿದೆಯೇ ಎಂದು ನೋಡಿಬನ್ನಿ” ಎಂದು ಸೇವಕರನ್ನು ಕಳುಹಿಸಿಕೊಟ್ಟೆ. ತಾಣವನ್ನು ಸುತ್ತಾಡಿದ ಅವರು ಸ್ವಲ್ಪ ಸಮಯದಲ್ಲಿಯೇ ನನ್ನ ಬಳಿಬಂದು ಹತ್ತಿರದಲ್ಲಿಯೇ ಒಂದು ಆಶ್ರಮ ಇರುವುದಾಗಿ ಹೇಳಿದರು. ಪ್ರದ್ಯುಮ್ನ, ವೃಷಕೇತು, ಸಾಲ್ವಪತಿ, ಯೌವನಾಶ್ವ, ನೀಲಧ್ವಜ ಇವರೆಲ್ಲರನ್ನೂ ಜೊತೆ ಸೇರಿಸಿಕೊಂಡು ಆ ಆಶ್ರಮವಿದ್ದೆಡೆಗೆ ಹೊರಟೆ. ಹೋಗಿ ತಲುಪಿದೆ.ಶ್ರೇಷ್ಠ ಋಷಿಗಳು ಇರುವ ಪ್ರದೇಶವದು ಎನ್ನುವುದು ಆ ಪರಿಸರವನ್ನು ಈಕ್ಷಿಸಿದಾಗಲೇ ಗೊತ್ತಾಗುವಂತಿತ್ತು. ಬಗೆಬಗೆಯ ಮೃಗಗಳು ಪಕ್ಷಿಗಳು ತಮ್ಮ ವೈರತ್ವವನ್ನು ಮರೆತು ಅನುರಾಗ ಭಾವದಲ್ಲಿ ಸೊಗ ಕಂಡುಕೊಂಡಿದ್ದವು. ಅಗ್ನಿ, ವಾಯು, ಚಂದ್ರ, ವರುಣ ಮೊದಲಾದ ದೇವಾನುದೇವತೆಗಳು ಅಲ್ಲಿ ನೆಮ್ಮದಿಯಿಂದ ನೆಲೆಸಿದ್ದರು. ಅಲ್ಲಿದ್ದ ಎಲ್ಲಾ ಗಿಡ ಮರಗಳಲ್ಲಿಯೂ ಕಾಯಿ ಹಣ್ಣುಗಳ ಸಮೃದ್ಧಿ. ಬಂದವರು ಬಯಸಿದ್ದನ್ನು ಯಾವಾಗಲೂ ನೀಡಲು ಸಿದ್ಧವಾಗಿ ನಿಂತಂತೆ ತೋರುತ್ತಿತ್ತು ವೃಕ್ಷ ತರುಗಳು ನಿಂತ ಭಂಗಿ. ಸದಾಕಾಲವೂ ಸುಗ್ಗಿಯ ಕಾಲ ಎಂಬAತೆ ಪ್ರಕೃತಿ ಕಾಣಿಸುತ್ತಿತ್ತು. ಸುಖದ ಕೊರತೆಯಿದ್ದರೆ ತಾನೇ ದುಃಖ ಹುಟ್ಟುವುದು! ದುಃಖ ಉದ್ಭವಿಸಲು ಅಲ್ಲಿ ಅವಕಾಶವೇ ಇರಲಿಲ್ಲ. ಸುಖವೇ ಎಲ್ಲಾ.ಆಶ್ರಮದ ಒಂದೆಡೆಯಲ್ಲಿ ಒಂದಷ್ಟು ಮುನಿಗಳು ವೇದ ಆಗಮ ಶಾಸ್ತç ಪುರಾಣಗಳ ಪ್ರವಚನ, ಅಧ್ಯಯನದಲ್ಲಿ ನಿರತರಾಗಿದ್ದರು. ಇನ್ನೊಂದಷ್ಟು ಋಷಿಗಳು ಜಪ ತಪಸ್ಸನ್ನು ಗೈಯ್ಯುತ್ತಾ, ಪರಮಾತ್ಮ ಸ್ಮರಣೆಯಲ್ಲಿ ಪವಿತ್ರಾನುಭವ ಪಡೆಯುತ್ತಿದ್ದರು. ಸೂರ್ಯ ನಮಸ್ಕಾರ, ಹರಿಹರ ಸಮಾರಾಧನೆ, ಯೋಗ ಸಾಧನೆ ಮೊದಲಾದವು ನಡೆಯುತ್ತಿದ್ದವು. ಅತಿಥಿಗಳನ್ನು ಆದರದಿಂದ ಸತ್ಕರಿಸುವುದರಲ್ಲಿ ತಲ್ಲೀನರಾಗಿದ್ದರು ಕೆಲವರು.ಆಗಲೇ ನನ್ನ ಕಣ್ಣನ್ನು ಕಾಡಿದ್ದು ತೇಜೋಮಯವಾದ ಒಂದು ದಿವ್ಯಕಾಯ. ಶಾಂತಭಾವವೇ ಮೂರ್ತರೂಪ ಪಡೆದಂತೆ ಕುಳಿತಿದ್ದರು ಮುನಿಶ್ರೇಷ್ಠರೆನಿಸಿಕೊಂಡ ಸೌಭರಿ ಮುನಿಗಳು. ಅಗ್ನಿಯಂತಹ ಪ್ರವರ್ಧಮಾನವಾದ ಬೆಳಕಿನಿಂದ ಕಂಗೊಳಿಸುತ್ತಿದ್ದರು. ಆದರೆ ಸುಡುವವರಲ್ಲ. ಸೂರ್ಯನಂತೆ ಕಾಂತಿಮಯವಾಗಿದ್ದರು. ಆದರೆ ಮೈಸುಡುವ ಬಿಸಿ ಅವರದ್ದಲ್ಲ. ಜಟೆಯನ್ನು ಹೊತ್ತಿದ್ದವರು ಶಿವನಂತೆ ತೋರುತ್ತಿದ್ದರು. ಆದರೆ ನಂಜಿನ ಕಂಠ ಅವರದ್ದಲ್ಲ.ಸಾಷ್ಟಾಂಗ ನಮಸ್ಕರಿಸಿದೆ ಅವರಿಗೆ. ಅಶ್ವಮೇಧ ಯಾಗದ ವಿಚಾರ ಅರುಹಿದೆ. ಈಗ ಕುದುರೆ ಶಿಲೆಯ ಮೇಲೆ ಕಾಲಿಟ್ಟು ತಟಸ್ಥವಾದ ವಿಷಯ ತಿಳಿಸಿದೆ. “ನಿಮ್ಮ ಮಾರ್ಗದರ್ಶನ ಬೇಕು” ಎಂದೆ.ನನ್ನನ್ನು ಲೇವಡಿ ಮಾಡುವ ನಗು ಅವರ ಮೊಗದಲ್ಲಿ ಮೂಡಿತು. ಈ ಪರಿಯ ನಗುವದೇತಕೆ! ಅರ್ಥವಾಗಲಿಲ್ಲ. ಅವರ ಮುಖವನ್ನೇ ನೋಡಿದೆ. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ-15 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಕುಟುಂಬ ಕಲಹವದು ಕುದುರೆ ಕದನದಿಂದ… ಕುಟುಂಬ ಕಲಹವದು ಕುದುರೆ ಕದನದಿಂದ… ಸೂರ್ಯನಿನ್ನೂ ಉದಯಿಸಿರಲಿಲ್ಲ. ನನ್ನೊಳಗೆ ಕದನ ಸೆಳೆತ ಉದಯಿಸಿಯಾಗಿತ್ತು. ಮಾಹಿಷ್ಮತಿಯ ಸೇನೆಗೆ ಸಾಧ್ಯವಾದಷ್ಟು ಶೀಘ್ರ ಸೋಲುಣಿಸುತ್ತೇನೆ ಎಂಬ ತವಕ ತಲೆಯೇರಿ ಕುಳಿತಿತ್ತು. ನೇಸರನ ನಸುಬೆಳಕು ಮಾಹಿಷ್ಮತಿಯ ಬುವಿನಾರಿಯನ್ನು ಸ್ಪರ್ಶಿಸುವ ಮಧುರ ಗಳಿಗೆಗೂ ಮೊದಲೇ ಕುದುರೆಯನ್ನು ಕಟ್ಟಿಹಾಕಿದ್ದ ಕಟ್ಟಾಳುಗಳನ್ನು ಕದನದಲ್ಲಿ ಕೊನೆಗಾಣಿಸುವ ರುಧಿರ ಗಳಿಗೆ ನನ್ನನ್ನಪ್ಪಿತು.ನಮ್ಮ ಚತುರಂಗ ಬಲ ಮಾಹಿಷ್ಮತಿ ಪಟ್ಟಣಕ್ಕೆ ಮುತ್ತಿಗೆ ಹಾಕಿತು. ಎರಡೂ ಪಡೆಗಳ ಮಧ್ಯೆ ಬಿಡುವಿರದ, ಎಡೆಯಿರದ ಕಾದಾಟ. ಕಂಡ ಕಂಡ ಕಡೆಯಲ್ಲೆಲ್ಲಾ ಬಾಣಗಳ ಆರ್ಭಟ. ಆನೆ ಕುದುರೆ ರಥಗಳ ಎಡೆಬಿಡದ ಓಡಾಟ. ಯಮರಾಜನಿಗದೋ ಸೈನಿಕರ ಸಾವಿನ ರಸದೂಟ.ನಾನಂತೂ ಯಾವುದಕ್ಕೂ ಅಳುಕದವನಾಗಿದ್ದೆ. ಇಂದಂತೂ ಜಯ ನಮ್ಮ ಸೈನ್ಯಕ್ಕೆ ಒದಗಲೇಬೇಕು ಎಂಬ ಹಠ ನನ್ನೊಳಗಿತ್ತು. ನನ್ನ ಈ ಬಗೆಯ ವೀರಾವೇಶ ನೀಲಧ್ವಜನ ಅರಿವಿಗೂ ಬಂದಿತ್ತು. ನನ್ನ ರಭಸವನ್ನು ತಾಳಿಕೊಳ್ಳುವ ತ್ರಾಣವದು ಅವನ ಸೇನೆಗೆ ಅದೆಲ್ಲಿತ್ತು!ಸೈನಿಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಲೇ ಇದ್ದರು. ರಥಗಳು ಮುರಿದವು. ಗಜಶಿರಗಳು ಒಡೆದವು. ಕುದುರೆಗಳು ಧರಾಶಾಯಿಯಾದವು.ಅನಾಥಪ್ರಜ್ಞೆ ನೀಲಧ್ವಜನನ್ನು ಬಂದು ಅಪ್ಪಿದ್ದು ಆ ಗಳಿಗೆಯಲ್ಲಿ, ಸಹೋದರ ಸುತರನ್ನು ಕಳೆದುಕೊಂಡ ಹೀನ ಕ್ಷಣದಲ್ಲಿ. ಕುಗ್ಗಿಹೋದ ನೀಲಧ್ವಜ. ಹಿಂದಣ ಯುದ್ದದಲ್ಲಿ ಕಾಣದ ಹತಾಶೆ ಅವನೊಳಗೆ. ಯುದ್ಧವೇ ಬೇಡ ಎಂಬ ವೈರಾಗ್ಯ ಆತನಲ್ಲಿ ಮೂಡಿದಂತೆನಿಸಿತು ನನಗೆ. ಕೆಲವೊಮ್ಮೆ ಹಾಗೆಯೇ. ಬಂಧುಗಳಿರುವಾಗ, ನಮ್ಮವರೆನಿಸಿಕೊಂಡವರು ನಮ್ಮ ಜೊತೆಗೇ ಇರುವಾಗ ಅವರ ಮೌಲ್ಯ ನಮ್ಮರಿವಿಗೆ ದಕ್ಕುವುದಿಲ್ಲ. ಆದರೆ ಅವರನ್ನು ಕಳೆದುಕೊಂಡಾಗ ಇಡಿಯ ಬದುಕೇ ಪೂರ್ಣಶೂನ್ಯವಾಗಿ ನಮ್ಮನ್ನು ಆವರಿಸಿ ಕಾಡತೊಡಗುತ್ತದೆ. ಅದೇ ಬಗೆಯ ಭಾವತೀವ್ರತೆ ನೀಲಧ್ವಜನಲ್ಲಿ ಮೂಡಿಬಂತು. ಅದು ನನ್ನ ತಿಳಿವಳಿಕೆಗೆ ನಿಲುಕಿತು.ಇದ್ದಕ್ಕಿದ್ದಂತೆಯೇ ರೋಷಾತಪ್ತನಾದ ಮಾಹಿಷ್ಮತಿಯ ಅರಸ. ಮಡಿದ ತನುಜ ಅನುಜರ ಸಾವಿಗೆ ಸೇಡು ತೀರಿಸಿಕೊಳ್ಳುವ ಕೆಚ್ಚು ಅವನಲ್ಲಿ ಮೂಡಿದ್ದಿರಬೇಕು. ಕೆರಳಿನಿಂತ. ಕಿಡಿಕಿಡಿಯಾದ. ವಿಚಿತ್ರವಾದ ಆವೇಶದಲ್ಲಿ ನನ್ನೊಡನೆ ಹೋರಾಟಕ್ಕಿಳಿದ. ನನ್ನಲ್ಲಿ ಈಗಲೂ ಕದನದ ಉಮೇದು ಅಳಿದಿರಲಿಲ್ಲ. ಬಾಣವನ್ನು ನಿರಂತರವಾಗಿ ಪ್ರಯೋಗಿಸಿದೆ. ಅದೊಂದು ಕ್ಷಣದಲ್ಲಿ ನೀಲಧ್ವಜ ಪೂರ್ಣಪ್ರಜ್ಞೆಯಿಂದ ವಿಮುಕ್ತನಾದ. ಮೂರ್ಛೆ ಹೋದ. ರಥದಲ್ಲಿಯೇ ಕುಸಿದು ಕೂತ. ಅವನ ಸಾರಥಿಗೆ ದೊರೆಯ ಸ್ಥಿತಿ ಮನದಟ್ಟಾಯಿತು. ರಥವನ್ನಲ್ಲಿಂದ ಓಡಿಸಿ ಅರಮನೆಯ ಬಳಿಗೆ ಒಯ್ದ.ರಾಜನೇ ಇಲ್ಲವಾದ ಮಾಹಿಷ್ಮತಿ ಸೇನೆಯಲ್ಲಿ ಗೊಂದಲ, ತಳಮಳ. ಒಡೆಯನಿಲ್ಲವಾದ ಸೈನಿಕರು ದೆಸೆದೆಸೆಗೆ ಓಡಿದರು. ಅವರ ಕಳವಳದ ಬೊಬ್ಬೆಯದು ನಮ್ಮ ಗೆಲುವನ್ನು ಸಾರಿಹೇಳುವ ವಿಜಯಘೋಷವಾಯಿತು. ನಾವು ಗೆದ್ದೆವು.ಅರಮನೆಯಲ್ಲಿ ಎಚ್ಚರಗೊಂಡ ನೀಲಧ್ವಜನಿಗೆ ಸೋಲಿನ ವಿಚಾರ ತಿಳಿಯಿತು. ಅವಮಾನವಾಯಿತು. ಮೊದಲೇ ಸಂಧಾನದ ಮೂಲಕ ಗೌರವಯುತವಾಗಿ ಕುದುರೆಯನ್ನು ಬಿಟ್ಟುಕೊಡುವ ನಿರ್ಧಾರ ಮಾಡಿದವನು ತಾನು. ಆದರೆ ಆ ಬಳಿಕ ಕದನಕ್ಕಿಳಿದು ಉಳಿಸಿಕೊಂಡ ಮರ್ಯಾದೆಯನ್ನು ಮಣ್ಣುಪಾಲು ಮಾಡಿಕೊಂಡೆ ಎಂಬ ಅಪಮಾನಸುಳಿ ಅವನನ್ನು ಕೀಳರಿಮೆ ಕೊಳದಲ್ಲಿ ಮುಳುಗಿಸಿತು. ಅದಕ್ಕೆ ಕಾರಣಳಾದ ರಾಣಿ ಜ್ವಾಲೆಯ ಮೇಲೆ ಕೋಪ ಉಕ್ಕಿಬಂತು. “ನಿನ್ನೆಯೇ ಕುದುರೆಯನ್ನು ಪಾರ್ಥನಿಗೆ ಬಿಟ್ಟುಕೊಡುವ ನಿರ್ಣಯ ತಳೆದವನು ನಾನು. ಬಿಡಬೇಡ ಎಂಬ ತಪ್ಪು ಸಲಹೆ ಕೊಟ್ಟು ನನ್ನನ್ನು ಹಾಳುಮಾಡಿದೆಯಲ್ಲಾ! ನಿನ್ನ ಮಾತು ಕೇಳಿ ನನ್ನವರನ್ನು ಕಳೆದುಕೊಂಡೆ. ದುಷ್ಟೆ ನೀನು. ನಿಕೃಷ್ಟೆ ನೀನು. ಅತಿಕಷ್ಟ ಕೊಟ್ಟೆಯೆನಗೆ” ಎಂದು ಅವಳನ್ನು ಪರಿಪರಿಯಾಗಿ ಜರಿದ. “ನನ್ನ ಅರಮನೆಯಲ್ಲಿ ನೀನು ಇರಕೂಡದು” ಎಂದು ಆಜ್ಞಾಪಿಸಿದ.ಹೀಗೆ ಜ್ವಾಲೆಯೊಂದಿಗೆ ಜಗಳವಾಡಿ ಅವಳೊಂದಿಗಿನ ಬಂಧವನ್ನು ಮುರಿದ ನೀಲಧ್ವಜ ಬಂದದ್ದು ನನ್ನ ಬಳಿಗೆ. ನಮ್ಮ ಗೆಲುವನ್ನವನು ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡ. ಅಖಿಲ ವಸ್ತುಗಳನ್ನು ಸಮರ್ಪಿಸಿದ. ಅಶ್ವಮೇಧ ಯಾಗಕ್ಕಾಗಿ ಸಂಪದವನ್ನಿತ್ತ. ಬಗೆಬಗೆಯ ಧವಸಧಾನ್ಯಗಳನ್ನು ಬಂಡಿಬಂಡಿಗಳಲ್ಲಿ ತುಂಬಿಸಿ ತರಿಸಿ ಎದುರಿಗಿರಿಸಿದ. ಪಾಂಡವ ಸಾರ್ವಭೌಮತ್ವವನ್ನವನು ಸ್ವೀಕರಿಸಿದ. ಒಲವಿನಿಂದ ನನ್ನ ಬಳಿಗೆ ಬಂದು ನಮ್ಮದು ನಿಜ ಗೆಲುವು ಎನ್ನುವುದನ್ನು ಮನ್ನಿಸಿದ.ನನಗಂತೂ ಸಂತಸವಾಗಿತ್ತು. ಅಗ್ನಿಯ ಸಂಧಾನಕ್ಕೆ ಅನುಸಾರವಾಗಿ ಅವನು ಕುದುರೆಯನ್ನು ಬಿಟ್ಟು ಕಳುಹಿಸಿಕೊಟ್ಟಿದ್ದರೆ ಈ ಬಗೆಯ ಸಂಭ್ರಮ ಖಂಡಿತವಾಗಿಯೂ ನನ್ನದಾಗುತ್ತಿರಲಿಲ್ಲ. ಶಕ್ತಿಯನ್ನು ಪ್ರದರ್ಶಿಸಿ, ನೋವು ಬೇಗೆಗಳನ್ನು ದರ್ಶಿಸಿ ಪಡೆದ ಗೆಲುವಾದ್ದರಿಂದ ಇದಕ್ಕೆ ಮಹತ್ವ ಅಧಿಕ ಎನಿಸಿತು.ಆದರದಿಂದ ನೀಲಧ್ವಜನಿಗೆ ನಮಿಸಿದೆ. ಅಲ್ಲಿಂದ ಹೊರಡುತ್ತೇನೆಂದೆ. ಅವನೂ ನಮ್ಮ ಜೊತೆಗೆ ಬರುವುದಕ್ಕೆ ಸಿದ್ಧನಿದ್ದ. ಅವನನ್ನೂ ಜೊತೆಮಾಡಿಕೊಂಡು ನಾವು ಮುಂದೆ ಮುಂದೆ ಹೋದೆವು. ಹಯವದು ಚಲಿಸುತ್ತಿತ್ತು ನಮ್ಮ ಮುಂದೆ. ದಕ್ಷಿಣ ದಿಶೆಯೆಡೆಗೆ ಮುಖಮಾಡಿ ಹೊರಟಿತು ಆ ಕುದುರೆ.ನೀಲಧ್ವಜನಿಂದ ತಿರಸ್ಕೃತಳಾದ ಜ್ವಾಲೆಯೊಡಲಲ್ಲಿ ಅವಮಾನದ ಜ್ವಾಲೆಯೆದ್ದಿತ್ತು. ಇಷ್ಟೊಂದು ಅವಮಾನ ಮಾಡಿಸಿಕೊಂಡು ಇಲ್ಲಿರುವುದಾದರೂ ಏತಕ್ಕೆ ಎಂಬ ಭಾವ ತಳೆದ ಅವಳು ಅರಮನೆಯನ್ನು ಆ ಕ್ಷಣವೇ ತೊರೆದಳು. ಉನ್ಮುಖ ಹೆಸರಿನ ಸಹೋದರನಿದ್ದ ಅವಳಿಗೆ. ಅವನ ಮನೆಗೆ ಹೋದಳು.ಅಕ್ಕನನ್ನು ಅಕ್ಕರೆಯಿಂದ ಆದರಿಸಿದ ಉನ್ಮುಖ. ಅಕ್ಕನ ಆಕಸ್ಮಿಕ ಆಗಮನದ ಕಾರಣವೇನೆಂದು ಕೇಳಿದ. ನನ್ನೆದುರಿಗೆ ಕದನದಲ್ಲಿ ಮಕ್ಕಳನ್ನು ಕಳೆದುಕೊಂಡುದನ್ನು ತಮ್ಮನಿಗೆ ತಿಳಿಸಿದಳು. ಪತಿ ನೀಲಧ್ವಜ ಗೆಲುವಿಗೆ ಅಧಿಪತಿಯಾಗದಿರುವುದನ್ನು ನೋವಿನಿಂದ ಉಸುರಿದಳು. ತನ್ನ ಕುಟುಂಬದ ಹೀನಸ್ಥಿತಿಗೆ ಕಾರಣನಾದ ಅರ್ಜುನನ ಶಿರವನ್ನು ಕತ್ತರಿಸಿಹಾಕಬೇಕು ನೀನು ಎಂದು ಮನವಿ ಮಾಡಿಕೊಂಡಳು ತಮ್ಮನನ್ನು.ತನ್ನ ರೋಷದ ನುಡಿಗೆ ಅವನು ಸ್ಪಂದಿಸಿಯಾನು ಎಂಬ ನಿರೀಕ್ಷೆಯಿತ್ತು ಅವಳಲ್ಲಿ. ನಿರುಕಿಸಿದಳು ಜ್ವಾಲೆ ಉನ್ಮುಖನ ಮೊಗವನ್ನು “ನರನ ಶಿರವನ್ನು ನಾನು ತಂದೊಪ್ಪಿಸುವೆ ನಿನಗೆ” ಎಂಬ ಮಾತು ಅವನಿಂದ ಹೊರಹೊಮ್ಮುತ್ತದೆಂಬ ಭಾವದಲ್ಲಿ… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ-14 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಅನಲ ಅಳಿಯನಾದ ಬಗೆ ಹೀಗೆ ಅನಲ ಅಳಿಯನಾದ ಬಗೆ ಹೀಗೆ‘ಮೇಧಾಶ್ವವನ್ನು ಯಾವ ಕಾರಣಕ್ಕೂ ಬಿಡಲಾರೆ. ನನ್ನ ಜೊತೆಗೆ ಹೋರಾಟ ಮಾಡಿಯೇ ಕುದುರೆಯನ್ನುಕರೆದೊಯ್ಯಬೇಕು ನೀನು. ಇದು ಖಚಿತ’ ಎಂಬ ನೀಲಧ್ವಜ ಉದ್ಘೋಷಿತ ಸಂದೇಶ ನನ್ನನ್ನು ಬಂದು ತಲುಪಿತು.ನನಗಾದದ್ದು ಅಚ್ಚರಿ.ಅಗ್ನಿಯ ಮಾತಿನಂತೆ ಯುದ್ಧವನ್ನು ನಿಲ್ಲಿಸಿದ್ದವನು ನೀಲಧ್ವಜ. ಕುದುರೆಯನ್ನವನು ಬಿಟ್ಟುಕೊಡುತ್ತಾನೆಎನ್ನುವುದು ನನಗಿದ್ದ ಸರಳ ಸಹಜ ಅಂದಾಜು. ಆದರೆ ಇದ್ದಕ್ಕಿದ್ದಂತೆಯೇ ಅವನು ಮನಸ್ಸು ಬದಲಾಯಿಸಿದ್ದ.ಮಾಹಿಷ್ಮತಿಯರಸನ ಮನ ತಕ್ಷಣ ಬದಲಾದುದಕೆ ಏನದು ಕಾರಣ ಎಂಬ ಮೂಲ ಮರ್ಮಲತೆಯನ್ನು ಹುಡುಕಿಹೊರಟನನಗೆ ತಿಳಿದುಬಂದದ್ದು ಜ್ವಾಲೆಯೆಂಬವಳ ಮಾತು.ಜ್ವಾಲೆ, ನೀಲಧ್ವಜನ ಪ್ರೀತಿಯ ರಾಣಿ. ಅರ್ಜುನನ ಕುದುರೆಯನ್ನು ಬಿಟ್ಟು ಕಳುಹಿಸಬೇಕು ಎಂದು ಮಂತ್ರಿಗಳಲ್ಲಿನೀಲಧ್ವಜ ಮಾತನಾಡುತ್ತಿದ್ದುದು ಅವಳಿಗೆ ತಿಳಿಯಿತಂತೆ. ಅವಳಿಗದು ಮೆಚ್ಚುಗೆಯಾಗಲಿಲ್ಲ. “ಹೆದರಿಕೆ ಅದೇತಕೆ!ಬಿಡದಿರು ಕುದುರೆಯನ್ನು. ನಿಲ್ಲಿಸದಿರು ಯುದ್ಧವನ್ನು. ಅರ್ಜುನನಿಗೆದುರಾಗಿ ನಿಂತು ಕದನವ ಮಾಡು” ಎಂಬ ಸಲಹೆಇತ್ತಳಂತೆ ತನ್ನೊಡೆಯನಿಗೆ. ಅದಾವ ಮಾಯೆಯಲ್ಲಿ ಅವಳ ಮಾತಿನ ಸುಳಿಗೆ ಸಿಲುಕಿದನೋ ಆ ನೀಲಧ್ವಜ! ಹಯವಬಿಟ್ಟುಕೊಡದಿರುವ ಛಲವ ಹೊತ್ತುಮೆರೆಯುತಿಹ ಸಂದೇಶವ ನನಗೆ ಕಳುಹಿಸಿಕೊಟ್ಟ.ಜ್ವಾಲೆಯ ಮನೋಭೂಮಿಕೆ ಹೊಸದೆನಿಸಿತು ನನಗೆ. ಸಾಮಾನ್ಯವಾಗಿ ಕ್ಷಾತ್ರಪುರುಷರು ಕಲಹದೆಡೆಗೆಕುತೂಹಲಿಗಳಾಗಿರುತ್ತಾರೆ. ಅವರ ಆಸಕ್ತಿಯದು ಸಹಜ. ಹೆಂಗಳೆಯರು ಯುದ್ಧ ಬೇಡವೆಂದು ಗಂಡಂದಿರನ್ನು ತಡೆಯುವಪ್ರಯತ್ನ ಮಾಡುತ್ತಾರೆ. ಕದನವಾದರೆ ತನ್ನವನಿಗೆ ಅದೇನಾದೀತೋ ಎಂಬ ಆತಂಕ ಅವರಲ್ಲಿರುತ್ತದೆ. ಆದರೆ ಈ ಜ್ವಾಲೆಯುದ್ಧದಿಂದ ವಿಮುಖನಾಗಿ ಶಾಂತಿಯೆಡೆಗೆ ಮನಸ್ಸು ಮಾಡಿದ ರಮಣನ ಮನಸ್ಸನ್ನು ಮತ್ತೆ ಕ್ರಾಂತಿಯೆಡೆಗೆ ಸೆಳೆಯುವಮನಸ್ಸು ಮಾಡಿದ್ದಳು. ರಮಣನ ಪ್ರಾಣದೆಡೆಗೆ ಅವಳಿಗೆ ಮಮಕಾರ ಭಾವ ಇರಲಿಲ್ಲವೇ?! ಗೊತ್ತಿಲ್ಲ.ಅವಳಿಗೆ ನನ್ನ ಮೇಲೇನಾದರೂ ದ್ವೇಷವಿತ್ತೇ! ನನಗೆ ಅರಿವಿಲ್ಲ. ನಾನ್ಯಾವತ್ತೂ ಅವಳಲ್ಲಿ ಮಾತನಾಡಿದ್ದಿಲ್ಲ.ಜಗಳ ಆಡಿದ್ದಿಲ್ಲ. ಹಾಗಿರುವಾಗ ನನ್ನ ಮೇಲೆ ಅವಳಿಗೆ ದ್ವೇಷ ಇರಲು ಸಾಧ್ಯವೇ! ತಿಳಿಯಲಿಲ್ಲ.ಇನ್ನೊಂದು ಬಗೆಯ ಯೋಚನೆ ಮೂಡಿತು ನನಗೆ ಆ ಕ್ಷಣದಲ್ಲಿ. ಯುದ್ಧ ಸಂಧಾನಕಾರನಾಗಿ ನಡೆದುಕೊಂಡವನುಅಗ್ನಿ. ಅವನು ನೀಲಧ್ವಜನ ಅಳಿಯ. ಮಾಹಿಷ್ಮತಿಯಲ್ಲಿಯೇ ನೆಲೆನಿಂತು ಆ ನಗರದ ಅಳಿಯನಂತೆ ಗುರುತಿಸಿಕೊಂಡವನು.ಮಗಳನ್ನು ಮದುವೆಯಾದ ಅಳಿಯನ ಮೇಲೇನಾದರೂ ಕೋಪ ಇರಬಹುದೇ ಜ್ವಾಲೆಗೆ?! ಎಂಬ ಆಲೋಚನೆ ನನ್ನಲ್ಲಿಉದಯಿಸಿತು.ಈ ಬಗೆಯ ಚಿಂತನೆ ನನ್ನಲ್ಲಿ ಮೂಡುವುದಕ್ಕೆ ಸಕಾರಣವಿತ್ತು. ನೀಲಧ್ವಜನ ಮಗಳು ಅಗ್ನಿಯನ್ನು ಪ್ರೀತಿಸಿಮದುವೆ ಆದವಳು.ನೀಲಧ್ವಜ ಜ್ವಾಲೆಯರ ಮಗಳು ಅಪ್ರತಿಮ ರೂಪವತಿಯಾಗಿದ್ದಳು. ಗುಣಶೀಲೆ ಎನಿಸಿಕೊಂಡಿದ್ದಳು. ಹೀಗಿದ್ದಚೆಲುವೆ ಯೌವ್ವನಾವಸ್ಥೆಯನ್ನು ತಲುಪಿದಾಗ ನೀಲಧ್ವಜನಲ್ಲಿ ಮಗಳ ಮದುವೆಯ ಯೋಚನೆ ಮೂಡಿತು. ಮೂರೂ ಲೋಕಗಳಲ್ಲಿ ಖ್ಯಾತಿ ಗಳಿಸಿದ, ವೀರರೆಂದು ಹೆಸರು ಪಡೆದ, ಸಿರಿವಂತರೆAದು ಗುರುತಿಸಿಕೊಂಡ ಪುರುಷರ ಚಿತ್ರವನ್ನುಅವಳೆದುರು ಹಿಡಿದು, “ಇವರಲ್ಲಿ ನಿನ್ನ ಪತಿಯಾಗುವವರು ಯಾರೆಂದು ನೀನೇ ಹೇಳು ಮುದ್ದು ಮಗಳೇ” ಎಂದ.ತಂದೆಯ ಮಾತಿನಂತೆ ಚಿತ್ರಪಟದೆಡೆಗೆ ಹರಿಣಿನೇತ್ರವನ್ನು ಹರಿಸಿದ ಸುಂದರಿಗೆ ಚೆಲುವನಾಗಿ ಕಂಡದ್ದು ಅಗ್ನಿದೇವ.ತಂದೆ ತಂದು ಕೈಗಿಟ್ಟಿದ್ದ ಚಿತ್ರಪಟದಲ್ಲಿ ಅಗ್ನಿ ಗಂಧರ್ವ ಯಕ್ಷ ದೇವತೆಗಳನ್ನು ತನ್ನ ಚೆಲುವಿನಿಂದಲೇ ಅಪಹಾಸ್ಯ ಮಾಡಿನಗುತ್ತಿದ್ದ. ಸಕಲ ಭೂಮಂಡಲದ ರಾಜಾಧಿರಾಜರನ್ನು ಮೀರುವಂತೆ ತೋರುತ್ತಿದ್ದ. ಮನ್ಮಥರಾಜ ವಸಂತರಾಜರನ್ನೂಮೀರಿದ ಸೌಂದರ್ಯವನ್ನು ಆವಾಹಿಸಿಕೊಂಡು ಕುಳಿತಿದ್ದ. ತಕ್ಷಣವೇ ನೀಲಧ್ವಜಕುವರಿಯ ಚಿತ್ತ ಚಿತ್ರಪಟದಲ್ಲಿದ್ದಅಗ್ನಿದೇವನ ಹೃದಯವನ್ನು ಕೂಡಿಕೊಂಡಿತು. “ಎನಗಿನ್ನು ಇವನೇ ರಮಣ” ಎಂದಳು ತಂದೆಯಲ್ಲಿ, ನಸುನಾಚಿಕೆತೋರುತ್ತ.ನಡೆಯಲಾರದ್ದರೆಡೆಗೆ, ಸಾಧ್ಯವಾಗದ್ದರ ಕಡೆಗೆ ಮಗಳು ಮನಸ್ಸು ಹರಿಸಿದ್ದಾಳೆ ಎನಿಸಿತು ನೀಲಧ್ವಜನಿಗೆ.ಅದನ್ನೇ ತನುಜೆಗೆ ಹೇಳಿದ. ತಂದೆಯ ಮಾತು ಅಪಥ್ಯವಾಯಿತು ಆ ಚೆಲುವೆಗೆ. ಜನಕನನ್ನು ಜರಿದವಳು ಅರಮನೆಯನ್ನುತೊರೆದುಹೋದಳು.ತಾರುಣ್ಯವೆಂದರೆ ಹಾಗೆಯೇ. ಹೃದಯ ಏನನ್ನು ಬಯಸುತ್ತದೆಯೋ ಅದು ದಕ್ಕದಾದಾಗ ನಿರಾಸೆ ಮೂಡುತ್ತದೆ;ಹಠ ಕುಡಿಯೊಡೆಯುತ್ತದೆ. ಪಡೆಯದಿರಲಾರೆ ಮನ ಬಯಸಿದ ಅನಲನನ್ನು ಎಂದುಕೊಂಡಳು ನೀಲಧ್ವಜಸುತೆ.ಅರಮನೆಯನ್ನು ತೊರೆದವಳು ನರ್ಮದಾ ತೊರೆಯ ತೀರವನ್ನು ಸೇರಿದಳು, ತೀರದಾಸೆಯನ್ನು ಎದೆಯಲ್ಲಿಹೊತ್ತುಕೊಂಡು. ನಾನಾ ವಿಧಗಳಲ್ಲಿ ಅಗ್ನಿದೇವನನ್ನು ಅರ್ಚಿಸಿದಳು.ಅವಳ ಪೂಜೆಯ ಸೊಗಸದು ಅಗ್ನಿಗೆ ಮೆಚ್ಚುಗೆಯಾಯಿತು. ಅವಳನ್ನು ಮದುವೆಯಾಗುವ ಇಚ್ಛೆ ಅವನಲ್ಲಿಯೂಮೂಡಿತು.ಬ್ರಾಹ್ಮಣ ವೇಷವನ್ನು ತಾಳಿದ ಅನಲ ಕಾಣಿಸಿಕೊಂಡದ್ದು ನೀಲಧ್ವಜನ ಆಸ್ಥಾನದಲ್ಲಿ. ಸಭೆಗೆ ಬಂದಭೂಸುರನನ್ನು ಸ್ವಾಗತಿಸಿದ ನೀಲಧ್ವಜ. ಬಂದ ಕಾರಣವನ್ನು ನಯವಾಗಿ ಕೇಳಿದ. “ಕನ್ಯೆಯನ್ನು ಬಯಸಿ ಬಂದಿದ್ದೇನೆ.ನಿನ್ನ ಸುತೆಯನ್ನು ಕೊಡು ಎನಗೆ. ರಾಜನಾಗಿರುವ ನೀನು ಬ್ರಾಹ್ಮಣನಾದ ನನಗೆ ಮಗಳನ್ನು ಮದುವೆಮಾಡಿಕೊಡಬಹುದು. ಶಾಸ್ತçದ ಅಭ್ಯಂತರವಿಲ್ಲ” ಎಂದ ಬ್ರಾಹ್ಮಣ ವೇಷದ ಅನಲ.ಮಗಳು ಅಗ್ನಿಯನ್ನು ಮದುವೆಯಾಗುವ ಮನಸ್ಸು ಮಾಡಿದ್ದಾಳೆ. ಏನು ಮಾಡಲಿ! ಎಂದು ಅಸಹಾಯಕತೆತೋರಿದ ನೀಲಧ್ವಜ. ತಕ್ಷಣವೇ ತಾನೇ ಅಗ್ನಿ ಎಂಬ ಸತ್ಯವನ್ನು ಅರುಹಿದ ಅನಲ.ನೀಲಧ್ವಜನ ಆಪ್ತಮಂತ್ರಿ ಪರೀಕ್ಷಿಸಿದ. ಅವನು ಅಗ್ನಿಯೆನ್ನುವುದು ಸಾಬೀತಾಯಿತು. ನೀಲಧ್ವಜನ ಸತಿಯೂಪರೀಕ್ಷೆ ಮಾಡಿದಳು. ವಿಪ್ರ ವೇಷವದು ನಕಲು. ನಿಜವಾಗಿಯೂ ಅಗ್ನಿಯವನು ಎನ್ನುವುದವರ ಅರಿವಿಗೆ ಬಂತು. ನೀಲಧ್ವಜಅಗ್ನಿಯಲ್ಲಿ “ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ಇದೇ ನಗರದಲ್ಲಿ ಇರಬೇಕು” ಎಂದ. ಅಗ್ನಿಒಪ್ಪಿದ. ಅನಲ ನೀಲಧ್ವಜನ ಅಳಿಯ ಎನಿಸಿಕೊಂಡ.ಹೀಗೆ ಅಳಿಯನಾದ ಅಗ್ನಿಯ ಮೇಲೆ ರಾಣಿ ಜ್ವಾಲೆಗೆ ಏನಾದರೂ ಅಸಮಾಧಾನ ಇತ್ತೋ ಏನೋ! ಈಕಾರಣದಿಂದಲೇ ಅವನು ಏರ್ಪಡಿಸಿದ ಸಂಧಾನವದು ಅವಳಿಗೆ ಸಹ್ಯವಾಗಲಿಲ್ಲವೋ ಏನೋ! ನೀಲಧ್ವಜ ಸೇನೆಯೊಡನೆ ಮತ್ತೆ ಕದನ ಹೂಡುವುದೀಗ ಅನಿವಾರ್ಯವಾಗಿಬಿಟ್ಟಿತ್ತು ನಮಗೆ. ಕುದುರೆಯಕಾಲುಗಳು ಮಾಹಿಷ್ಮತಿ ನಗರವನ್ನು ತೊರೆದು ಮುಂದೆ ಚಲಿಸಬೇಕಾದರೆ ನಮ್ಮ ಕಾಲುಗಳು ಕದನರಂಗಕ್ಕಿಳಿಯಬೇಕಿತ್ತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ-13 ಅರ್ಜುನ ಉವಾಚ ವಿಶ್ವನಾಥ ಎನ್ ನೇರಳೆಕಟ್ಟೆ ಕದನಾಂತರಂಗದಲ್ಲಿ ಅನಲ ನರ್ತನ ಕದನಾಂತರಂಗದಲ್ಲಿ ಅನಲ ನರ್ತನ ಪ್ರವೀರನೆಂಬ ವೀರ ಮೇಧಾಶ್ವವನ್ನು ಕಟ್ಟಿಹಾಕಿದ್ದಾನೆ ಎಂಬ ಸುದ್ದಿಯನ್ನು ನನ್ನಲ್ಲಿಗೆ ಹೊತ್ತುತಂದರು ಕುದುರೆಯ ಮೈಗಾವಲಿಗಿದ್ದ ಭಟರು. ಗೆಲ್ಲುವ ಸಾಮರ್ಥ್ಯವಿದ್ದರೆ ಆ ಪಾರ್ಥ ನನ್ನೆದುರು ಯುದ್ಧಕ್ಕೆ ಬರಲಿ ಎಂದಿದ್ದನಂತೆ ಪ್ರವೀರ. ನಗುವೂ ಬಂತು. ಕೋಪವೂ ಉಕ್ಕಿತು. ಇಂತಹ ಸಾಕಷ್ಟು ಯುದ್ಧಗಳನ್ನು ಕಾಣುವುದಕ್ಕಿದೆ ಮುಂದೆ ಎಂದು ಸಾಮರ್ಥ್ಯವನ್ನು ಮುಂದುಮಾಡಿಕೊಂಡೇ ಬಂದವ ನಾನು. ಹಾಗಿರುವಾಗ ಆ ಪ್ರವೀರ ಗೆಲ್ಲುವ ಸಾಮರ್ಥ್ಯ ಇದ್ದರೆ ಎಂಬ ಮಾತನ್ನು ಆಡಿದನಲ್ಲಾ ಎಂಬ ಯೋಚನೆ ನಗುವನ್ನು ಮೂಡಿಸಿತು. ಪಾಂಡವವೀರರಿಗೆ ಸೇರಿದ ಅಶ್ವವಿದು ಎಂದು ಅರಿವಾದ ಬಳಿಕವೂ ಶರಣು ಬರದೆ ಕುದುರೆಯನ್ನು ಕಟ್ಟುವ ಭಂಡಧೈರ್ಯ ತೋರಿದನಲ್ಲಾ ಎಂದು ಕೋಪ ಬಂತು. ಸೈನಿಕರನ್ನೆಲ್ಲಾ ಸನ್ನದ್ಧಗೊಳಿಸಿದೆ. ಚತುರಂಗ ಬಲಗಳೂ ಬಲಪಡೆದು ನಿಂತವು. ಮಾಹಿಷ್ಮತಿ ನಗರದ ಮೇಲೆ ಧಾಳಿಯಿರಿಸಿದೆವು. ಮೇಧಾಶ್ವವನ್ನು ಬಿಡಿಸಿಕೊಳ್ಳಬೇಕೆಂಬ ಉತ್ಸುಕತೆಯಲ್ಲಿದ್ದ ನಮ್ಮ ಕಡೆಯ ಸೈನಿಕರಲ್ಲಿ ಅಶ್ವಸದೃಶ ಶಕ್ತಿ ನೆಲೆಗೊಂಡಿತ್ತು. ನಮ್ಮ ಧಾಳಿಯ ಬಿರುಸಿಗೆ ಧೂಳೆದ್ದಿತು. ಜೊತೆಗೆ ವಾದ್ಯಗಳ ಆರ್ಭಟ. ಪ್ರವಾಹವೇ ಬಂತೇನೋ ಎನ್ನುವಂತೆ ಬೆದರಿದರು ಮಾಹಿಷ್ಮತಿ ಪಟ್ಟಣದ ಜನರು. ಉಕ್ಕಿದ ಕಡಲಿನ ಬಗೆಯಲ್ಲಿ, ಪ್ರಳಯ ಕಾಲದ ಕಾರ್ಮೋಡದ ತೆರದಲ್ಲಿ ಹೋಗಿ ಮುತ್ತಿದೆವು ಕುದುರೆಯನ್ನು ವಶಪಡಿಸಿಕೊಂಡಿದ್ದ ವೀರ ಪ್ರವೀರನನ್ನು. ಹುಚ್ಚು ಧೈರ್ಯ ಅವನದು ಎಂದುಕೊಂಡಿದ್ದೆ ಮೊದಲಿಗೆ, ಅವನು ಕುದುರೆಯನ್ನು ಕಟ್ಟಿಹಾಕಿದ ವಿಚಾರ ಕೇಳಿದಾಗ. ಆದರೆ ಈಗ ಸೇನೆಸಹಿತ ಅವನನ್ನು ಸುತ್ತುವರಿದಾಗ ಅವನ ನಿಜ ಪರಾಕ್ರಮ ನನ್ನರಿವಿಗೆ ಬಂತು. ನನ್ನನ್ನು ಕಂಡೊಡನೆಯೇ ರಥವನ್ನು ಭರದಿಂದ ಓಡಿಸಿಯಾನು ಎಂಬ ಅಂದಾಜು ನನ್ನದು. ಆದರೆ ಅವನು ಚಲಿಸದೆಯೇ ನಿಂತ. ಕೆಲವೊಮ್ಮೆ ಹಾಗೆಯೇ. ಏನು ಮಾಡಬೇಕೆಂದು ತೋಚದಾದಾಗಲೂ ಶರೀರಕ್ಕೊಂದು ಸ್ಥಿರತೆ ಒದಗುತ್ತದೆ. ಅಂತಹದ್ದೇ ಸ್ಥಿರತೆ ಆಗಿರಬೇಕಿದು ಎಂದುಕೊಂಡೆ. ಅಲ್ಲ! ನಿಜಬಗೆಯ ದಿಟ್ಟತನದಲ್ಲಿ ರಥದಲ್ಲಿಯೇ ಕುಳಿತಿದ್ದ ಪ್ರವೀರ. ವೀರರು ಸುತ್ತುವರಿದಾಗಲೂ ಅಂಜದೆ ಅಳುಕದೆ ತೇರಿನಲ್ಲಿ ಕುಳಿತಿದ್ದ ಅವನ ಆ ನಿಲುವು ಪರಮ ವೈರಾಗಿಯನ್ನು ನೆನಪಿಸುವಂತಿತ್ತು. ಯುದ್ಧದ ಅಂತಿಮ ಪರಿಣಾಮವನ್ನು ಮನಗಂಡ ತತ್ವಜ್ಞಾನಿಯಂತೆ ಕುಳಿತಿದ್ದನಾತ. ಏಕಾಂಗಿಯಾಗಿ ಹೋರಾಟಕ್ಕಿಳಿದ ಆತ ನಮ್ಮ ಸೈನಿಕರನ್ನೆಲ್ಲಾ ಸತತ ಬಾಣಪ್ರಯೋಗಗಳಿಂದ ಕೊಂದುಹಾಕಿದ. ಸತ್ವಯುತನಿವನು ಎನ್ನುವುದು ನನಗೆ ಖಚಿತವಾಯಿತು. ಹೀಗಿದ್ದಾಗಲೇ ನೀಲಧ್ವಜ ಸೇನೆಸಹಿತನಾಗಿ ನಮ್ಮನ್ನು ಎದುರಿಸುವುದಕ್ಕೆ ಬಂದ. ಒಂಟಿಯಾಗಿ ಹೋರಾಡುತ್ತಿದ್ದ ಪ್ರವೀರನಿಗೆ ಸಮಸ್ತ ಬಲವದು ದೊರಕಿದಂತಾಯಿತು. ಅವರ ಶಕ್ತಿಯುತವಾದ ಹೋರಾಟ ನಮ್ಮ ಸೇನೆಯನ್ನು ಕಳೆಗುಂದಿಸಿತು. ಸೇನೆಯ ಮುಂಚೂಣಿಯಲ್ಲಿದ್ದ ನಾನು ನಾಯಕತ್ವವನ್ನು ಸರಿಯಾಗಿ ನಿಭಾಯಿಸಲಾಗದೆ ಎಡವಿದೆ ಎಂಬ ಭಾವ ನನ್ನನ್ನು ಆವರಿಸಿತು. ನನ್ನ ಅಂತರಂಗದೊಳಗೆ ಯಾರೋ ಬೆಂಕಿ ಹಚ್ಚಿದ ಅನುಭವ. ಮೊದಲ ಯುದ್ಧದಲ್ಲಿಯೇ ಹೀಗಾದರೆ ಇನ್ನುಳಿದ ಕದನಗಳ ಗತಿಯೇನು ಎಂಬ ಯೋಚನೆ ಬಂತು. ಅಣ್ಣ ಧರ್ಮಜ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳದವನಾದೆನೇ ಎಂಬ ಅಳುಕು ಮೂಡಿತು. ಬಗೆಬಗೆಯ ಭಾವಗಳ ನೆಲೆವೀಡಾಗಿಹೋದ ನನ್ನ ಚಿತ್ತ ಯುದ್ಧದತ್ತ ಏಕಾಗ್ರವಾಗಲೇ ಇಲ್ಲ. ಸೋಲುತ್ತೇನೆ ಎಂಬ ಭಾವ ದೃಢವಾದಾಗಲೇ ‘ಇಲ್ಲ! ಏನೆಂದರೂ ಬಿಡಲಾರೆ’ ಎಂಬ ಛಲ ನಮ್ಮಲ್ಲಿ ಮೂಡುವುದು. ಯುದ್ಧದಲ್ಲಿಯೂ ಹೀಗೆಯೇ. ಬದುಕಿನಲ್ಲಿಯೂ ಹೀಗೆಯೇ. ಎದುರಿಗಿದ್ದ ಮಾಹಿಷ್ಮತಿ ಸೇನೆ ನನ್ನ ಪಾಲಿಗೆ ಒಗಟಿನಂತಾಗಿತ್ತು. ಬಿಡಿಸುತ್ತೇನೆ ಈ ಒಗಟನ್ನು ಕುದುರೆಯನ್ನು ಬಿಡಿಸುವುದಕ್ಕೋಸ್ಕರ ಎಂದುಕೊAಡೆ. ಕೋಪಾತಿರೇಕದ ಆ ಅವಸ್ಥೆಯಲ್ಲಿ ಬಿಲ್ಲಿಗೆ ಕೈಯ್ಯಿಕ್ಕಿದೆ. ಹೆದೆಯನ್ನು ಮಿಡಿದೆ. ಎದ್ದ ನಾದ ಮಾಹಿಷ್ಮತಿ ಸೇನೆಯನ್ನು ಯಮಪುರಿಗಟ್ಟುವ ಮರಣಶ್ರುತಿಯಾಯಿತು. ಮಳೆಗಾಲದ ಕೊನೆಕೊನೆಯಲ್ಲಿ ಹಠಹಿಡಿದು ಸುರಿವ ಮಳೆಯಂತೆ ಅಬ್ಬರಿಸಿದೆ. ನೀಲಧ್ವಜನ ಸೇನೆಯದು ದಿಕ್ಕೆಟ್ಟುಹೋಯಿತು. ಕಂಗೆಟ್ಟ ನೀಲಧ್ವಜ ಹೋಗಿ ಸಹಾಯ ಕೇಳಿದ್ದು ಅಗ್ನಿಯಲ್ಲಿ. ಅನಲ ನೀಲಧ್ವಜನ ಅಳಿಯ. ಅವನ ಮಗಳನ್ನು ಮದುವೆಯಾದವನು. ಮಾಹಿಷ್ಮತಿ ಪಟ್ಟಣದಲ್ಲಿಯೇ ನೆಲೆಸಿದ್ದವನು. ಮಾವನ ಕೋರಿಕೆಗೆ ಬೆಲೆಯಿತ್ತ ಅಗ್ನಿ, ನಮ್ಮಿಡೀ ಸೈನ್ಯವನ್ನು ಕರುಣೆಯಿಲ್ಲದೆಯೇ ದಹಿಸತೊಡಗಿದ. ಅನಲನ ಕೆನ್ನರ್ತನ ನಮ್ಮ ಕಡೆಯ ಸೈನಿಕರನ್ನು ಕಪ್ಪಗಾಗಿಸಿತು. ಅವನ ಚಲನೆ ನಮ್ಮವರನ್ನು ಅಚಲರಾಗಿಸಿತು. ಅವನ ತೇಜಸ್ಸು ಹೆಚ್ಚಿದಂತೆ ನಮ್ಮವರೆಲ್ಲಾ ತೇಜಶೂನ್ಯರಾದರು. ದೆಸೆದೆಸೆಗಳಲ್ಲಿ ಭೀಕರವಾದ ಹೊಗೆ. ದಿಕ್ಕುದಿಕ್ಕುಗಳಲ್ಲಿ ಅನಲ ಜ್ವಾಲೆ. ಯಾರಲ್ಲಿಯೂ ಭೇದ ತೋರದೆ ಎಲ್ಲರನ್ನೂ ಆಹುತಿಗೊಳ್ಳತೊಡಗಿದ ಅನಲ. ನನ್ನಲ್ಲಿ ಅತೀವ ಆತಂಕ ಮನೆಮಾಡಿತು. ಅಗ್ನಿಯ ಶಕ್ತಿಯೇನೆಂಬುದರ ಅರಿವಿತ್ತು ನನಗೆ. ಅವನ ಸಾಮರ್ಥ್ಯವನ್ನು ನಾನು ಕಂಡದ್ದು ಇದೇ ಮೊದಲೇನಲ್ಲ. ಅಂದು ಖಾಂಡವ ವನವನ್ನು ದಹಿಸಿದ ಅವನ ಉರಿಹಸಿವಿನ ತೀಕ್ಷ್ಣತೆಯನ್ನು ಸಾಮಿಪ್ಯದಿಂದ ದರ್ಶಿಸಿದವ ನಾನು. ಹಾಗಿರುವಾಗ ಅಗ್ನಿಯ ಈ ಬಗೆ ಹೀಗೆಯೇ ಮುಂದುವರಿದರೆ ಅಶ್ವಮೇಧದ ನೆಪದಲ್ಲಿ ಬಂದ ನಾವೆಲ್ಲರೂ ಅಗ್ನಿಯೊಡಲಿಗೆ ಮೇಧಾಶ್ವಗಳಾಗುವುದು ಖಚಿತ ಎನಿಸಿತು ನನಗೆ. ಶಕ್ತಿಯಿಂದ ಗೆಲ್ಲಲಾಗದ್ದನ್ನು ಯುಕ್ತಿಯಿಂದ ಗೆಲ್ಲಬೇಕು. ಇದು ಲೋಕರೂಢಿ. ಜಗದ ನಿಯಮ. ನುಡಿಯಿಂದ ಅನಲನನ್ನು ಮೆಚ್ಚಿಸಿ ಅವನನ್ನು ತೃಪ್ತಗೊಳಿಸುವ ತಂತ್ರ ಹೂಡಿದೆ. “ನೀನೇನೂ ನನಗೆ ಅಪರಿಚಿತನಲ್ಲ. ನಾನು ಗಾಂಡೀವಿ ಎನಿಸಿಕೊಳ್ಳಲು ಕಾರಣವಾದ ಗಾಂಡೀವ ಧನುಸ್ಸು ದೊರೆತದ್ದೇ ನಿನ್ನಿಂದ. ನನ್ನ ಮಡದಿ ದ್ರೌಪದಿ ನಿನ್ನಿಂದಲೇ ಉದಿಸಿಬಂದವಳು” ಎಂದೆಲ್ಲಾ ಹೇಳಿ ನನಗೂ ಅವನಿಗೂ ಇರುವ ಬಾಂಧವ್ಯದ ನೆನಪು ಮಾಡಿದೆ. ವೇದವ್ಯಾಸ ಮುನಿಗಳು ಹೇಳಿದ್ದಕ್ಕಾಗಿ, ಶ್ರೀಕೃಷ್ಣ ಸೂಚನೆ ಇತ್ತದ್ದಕ್ಕಾಗಿ ಈ ಯಾಗ; ಈ ಯುದ್ಧ. ಇಲ್ಲವಾದರೆ ಇದೆಲ್ಲಾ ಬೇಕಿರಲಿಲ್ಲ ಎಂದೆ. ಅಗ್ನಿ ತಂಪಾದ. ದಹಿಸುವುದನ್ನು ನಿಲ್ಲಿಸಿದ. ನನ್ನ ಮಾತಿನಲ್ಲಿದ್ದ ದೈನ್ಯತೆ ಅವನನ್ನು ದಯಾಪರನನ್ನಾಗಿಸಿತು. ಮಗಳನಿತ್ತ ಮಾವನಾದ ನೀಲಧ್ವಜನಲ್ಲಿ ಯುದ್ಧ ನಿಲ್ಲಿಸುವಂತೆ ಸೂಚಿಸಿದ. ಅಳಿಯ ಅಗ್ನಿಯ ಮಾತನ್ನು ಅಂಗೀಕರಿಸಿದ ನೀಲಧ್ವಜ. ಯುದ್ಧ ನಿಂತಿತು ಎಂದು ನಾನು ನಿರಾಳತೆ ಹೊಂದುವಷ್ಟರಲ್ಲಿ ನನ್ನನ್ನು ಮತ್ತೆ ಚಿಂತೆಗೀಡುಮಾಡುವ ಸುದ್ದಿಯೊಂದು ಬಂದು ತಲುಪಿತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅರ್ಜುನ ಉವಾಚ
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅವರಅಂಕಣ
ಈ ವಾರ
ಪರಮಾತ್ಮನ ಪರಮ ಪಯಣವದು ಪ್ರಿಯಪುರದ ಕಡೆಗೆ…
