ಅಂಕಣ ಬರಹ ಕಬ್ಬಿಗರ ಅಬ್ಬಿ ಹಣತೆ ಹಚ್ಚಿದ ಅಕ್ಷರ ದೀಪ ನಮ್ಮ ಅಜ್ಜಿ ಹಚ್ಚಿ ಹಣತೆ ಬೆಳಕಲ್ಲಿ ತೆರೆದಳು ರಾಮಾಯಣ. ಹಣತೆ ಸಣ್ಣಗೆ ಬೆಳಗುವಾಗ ರಾಮ ಪುಟು ಪುಟು ಹೆಜ್ಜೆ ಹಾಕುತ್ತಿದ್ದ.ಜತೆಗೆ ಇನ್ನೂ ಮೂರು ತಮ್ಮ ತಮ್ಮ ತಮ್ಮಂದಿರು. ಎಷ್ಟು ಪ್ರೀತಿ ಮುಗ್ಧ ಬೆಳಕಿತ್ತು. ಕತೆ ಕೇಳುತ್ತಾ ನಮಗೆಲ್ಲ ಪುಳಕ. ಹಣತೆಯ ಬೆಳಕೂ ರಾಮನೂ ಜತೆ ಜತೆ ಬೆಳೆದರು. ವಿಶ್ವಾಮಿತ್ರನ ಕೈ ಹಿಡಿದು ಅಣ್ಣ ತಮ್ಮ ಗುರು ತೋರಿದ ಕಾಡುಹಾದಿಯಲ್ಲಿ ತಿಳಿವಿನ ಬೆಳದಿಂಗಳಿತ್ತು. ಕೆಂಗಣ್ಣ ದೈತ್ಯೆ ತಾಟಕಿಯ ಘೋರ ಆರ್ಭಟಕ್ಕೆ ಹಣತೆಯ ಪುಟ್ಟ ಜ್ವಾಲೆ ಕೆಂಪು ಕೆಂಪು ಓಲಾಡಿತು.ಅಜ್ಜಿ ಚಾಳೀಸು ಸರಿಪಡಿಸಿ ಪುಸ್ತಕದೊಳಗೇ ನೋಟ ನೆಟ್ಟರು. ಆ ಪುಸ್ತಕದೊಳಗೆ ಯಜ್ಞವಿತ್ತು. ಮಾರೀಚನಿದ್ದ, ಯಜ್ಞಕ್ಕೆ ನೆತ್ತರು ಸುರಿಯುತ್ತ ಆಗಸದಲ್ಲಿ. ಹಣತೆಯ ಬೆಳಕಲ್ಲಿ ಆತ ತುಂಬಾ ಭಯಾನಕನಂತೆ ಕಂಡ. ಅಜ್ಜೀ ಅಜ್ಜೀ..ಭಯವಾಗುತ್ತಿದೆ ಅಂದು ಮಕ್ಕಳು ಅಜ್ಜಿಯ ಮಡಿಲಲ್ಲಿ ಮುಖಮುಚ್ಚಿ ರಕ್ಷಣೆ ಪಡೆದರು.ರಾಮ ಬಾಣ ಹೂಡಿ, ಮಾರೀಚ ಯೋಜನ ದೂರ ಸಮುದ್ರಕ್ಕೆ ಬಿದ್ದ. ಹಣತೆಯ ಬೆಳಕೂ ಶಾಂತವಾಯಿತು. ಜನಕನ ರಾಜ ಭವನ ಬೆಳಗಿತು ಪುಟ್ಟ ಹಣತೆ. ಸೀತೆ ಬೆಳಗಿದಳು ಎಷ್ಟು ಚಂದ, ರಾಮ ಸ್ವಯಂವರದೀಪದ ಬೆಳಕಲ್ಲಿ. ಕತೆ ಕೇಳುತ್ತಾ ಹುಡುಗಿಯರು ಸೀತೆಯಂತೇ ಕಂಡರು. ರಾಗರತಿಯ ಮತ್ತೇರಿದ ದೀಪ ಜ್ವಾಲೆ ನಡು ಬಳುಕಿಸಿ ನಲಿಯಿತು. ಪರಶುರಾಮನ ಕೋಪಾಗ್ನಿಗೆ, ಪುಸ್ತಕದ ಅಕ್ಷರಗಳು ಅಜ್ಜಿಯ ವರ್ಣನೆಗೆ ಕೆಂಪಡರಿದ್ದವು. ಸಮಚಿತ್ತ ವಿನಯದ ತಂಪಿಗೆ ಬೆಳಕು ನಂದಲಿಲ್ಲ. ರಾಮ! ರಾಮ! ಮಂಥರೆ ಮೇಲೆ ದೀಪದ ಬೆಳಕು ಹೊಗೆ ಸುತ್ತಿ ಪುಸ್ತಕದೊಳಗೆಲ್ಲ ನೆರಳು ಹೊಗೆಯಾಡಿತು ರಾಮ ಕಾಡಿಗೆ ಹೊರಟ. ಅಜ್ಜಿ ದೀಪದ ಬತ್ತಿ ಸರಿಪಡಿಸಿದರು. ಬೆಳಕು ಸ್ಪಷ್ಟವಾದಾಗ ಕೈಕೇಯಿ ಮನಸ್ಸು ಹೊಗೆ ಮುಕ್ತ. ದಶರಥನ ಜೀವ ಅಕ್ಷರಗಳಿಂದ ಮುಕ್ತವಾದಾಗ ಅಜ್ಜಿ ದೀಪದ ಉಸಿರು ಆರಿಸಿದರು. ಮಲಗಿ ಮಕ್ಕಳೇ!. ಮುಂದಿನ ಕತೆ ನಾಳೆಗೆ. ಅಜ್ಜಿ ಪುನಃ ಹಚ್ಚಿದರು ಹಣತೆ. ಸುತ್ತಲೂ ಅಂಧಕಾರ. ಪುಸ್ತಕದೊಳಗೆ ದಂಡಕಾರಣ್ಯದ ಚಿತ್ರ. ಅಜ್ಜಿ ಓದುತ್ತಿದ್ದಂತೇ ದೀಪದ ಬೆಳಕಲ್ಲಿ ಋಷಿ ಮುನಿಗಳ ಆಶ್ರಮ, ತಪಸ್ಸು, ಅಕ್ಷರಗಳಾದವು. ಕುಣಿಯುತ್ತ ಬಂತು ಚಿನ್ನದ ಜಿಂಕೆ. ಚಂಚಲವಾಯಿತು ಹಣತೆ. ರಾಮನ ಕಳಿಸಿದಳು ಸೀತೆ, ಜಿಂಕೆಯ ಬಣ್ಣದ ಹಿಂದೆ. ‘ಹಾ ಸೀತೇ..ಹಾ ಲಕ್ಷ್ಮಣಾ’.. ಮರಣಾಕ್ರಂದನ, ಬೆಳಕು ಮುಗ್ಧವಾಗಿತ್ತು ಸೀತೆ ಲಕ್ಷ್ಮಣರೇಖೆ ದಾಟಿದ್ದಳು ಸೀತಾಪಹರಣ ಮಾಡಿದ ರಾವಣನ ಮೇಲೆ ಬೆಳಕಿನ ನೆರಳು ಕರ್ರಗೆ ಚೆಲ್ಲಿತ್ತು. ಅಜ್ಹಿಯ ಕಣ್ಣು ತೇವವಾಗಿ ಅಕ್ಷರಗಳು ಮಂದವಾದವು. ಕಿಷ್ಕಿಂಧೆಯಲ್ಲಿ ವಾಲಿ ಸುಗ್ರೀವ ನಡುವೆ ಎಷ್ಟೊಂದು ಪ್ರೀತಿಯಿತ್ತು. ಕಿಟಿಕಿಯಿಂದ ಗಾಳಿ ಬೀಸಿ, ಹಣತೆ ಬೆಳಕು ತುಯ್ದಾಡಿತು. ವಾಲಿಯ ಮನಸ್ಸಿನ ಮೇಲೆ ಶಂಕೆಯ ನೆರಳು ಬಿತ್ತು.ಸಹೋದರದ ಪದಸಂಧಿ ವಿಂಗಡಿಸಿತು. ಹನುಮನ ಮೇಲೆ ಬೆಳಕು ಚೆಲ್ಲಿತು ಹಣತೆ. ಸೀತಮ್ಮನ ಹುಡುಕುತ್ತ ಸಾಗರ ಹಾರಿದ ಕತೆ ಕೇಳುತ್ತಾ ನಾನೂ ನನ್ನ ಹಿಂಭಾಗ ಸವರಿದೆ! ಬಾಲ ಸಿಗಲಿಲ್ಲ. ಅಜ್ಜಿ ಅಂದರು..ದೀಪಕ್ಕೆ ಎಣ್ಣೆ ತುಂಬಲು, ಬತ್ತಿ ನೇರ ಮಾಡಲು. ಬೆಳಕ ಏಕಾಗ್ರ ಚಿತ್ತ. ಸಂಕ ಕಟ್ಟುವತ್ತ ಕೋಟಿ ಮರ್ಕಟ ಮನಸ್ಸು ಏಕಾಗ್ರ, ರಾಮ! ರಾಮ!. ರಾಮ ರಾವಣ ಪದಗಳು ಸಮಸಮ ಹೊಳೆಯುತ್ತಿದ್ದವು. ಎರಡೂ ಪಾತ್ರಗಳು ಹಣತೆಯ ಬೆಳಕ ಹೀರಿ ಬೆಳೆಯುತ್ತಿದ್ದವು. ಅಸ್ತ್ರ ಶಸ್ತ್ರ ಶಾಸ್ತ್ರಗಳು ಪುಸ್ತಕದೊಳಗೆ ಸಾಲುಗಳು ದೀಪ ದೀಪ್ತಿಯಲ್ಲಿ ಬೆಳಗಿದವು. ರಾಮ ತೆರೆದ ತನ್ನ ಆದಿತ್ಯ ಹೃದಯ.ಒಳಗೆ ತುಂಬಾ ಬೆಳಕು ತುಂಬಲು. ರಾವಣನ ಹೃದಯ ಉಕ್ಕಿನ ಕವಚ. ಒಳಗೆ ಬೆಳಕು ತಲಪಲಿಲ್ಲ. ರಾವಣನ ಕತೆ ಮುಗಿಯಿತು. ರಾಮ ಲಕ್ಷ್ಮಣ ಸೀತೆ ಪುಷ್ಪಕ ವಿಮಾನವೇರಿ ಅಯೋಧ್ಯೆಗೆ ಬಂದಾಗ, ಅಜ್ಜಿಯ ರಾಮಾಯಣ ಪುಸ್ತಕದೊಳಗೆ ಸಾಲು ಸಾಲು ಹಣತೆ ಬೆಳಗಿ ಪುಟ್ಟ, ಮಕ್ಕಳ ಕಣ್ಣೊಳಗೆ ದೀಪಾವಳಿ!. ದೀಪ ಮತ್ತು ಬೆಳಕನ್ನು ಸೃಜನಶೀಲ ಮನಸ್ಸು ಹಲವು ಪ್ರತಿಮೆಗಳಾಗಿ ಕಾಣುತ್ತವೆ. ಬೆಳಕು ಮನಸ್ಸನ್ನು ಬೆಳಗುವಾಗ ಅದರ ಆಯಾಮಗಳು ನೂರಾರು. ಮನಸ್ಸಿನ ಕ್ಯಾನುವಾಸ್ ನಲ್ಲಿ ಚಿತ್ರಗಳು ಮೂಡಲು ಬೆಳಕು ಸಾಧನ ತಾನೇ. ನಾಟಕದ ಪಾತ್ರಗಳ ಭಾವಾಭಿವ್ಯಕ್ತಿಯೂ ಬೆಳಕಿನ ಬಣ್ಣಗಳನ್ನು ಸಂಯೋಜಿಸಿ ಅದಕ್ಕೆ ಹೊಸ ರೂಪ ಕೊಡುವುದೂ ಒಂದು ಕಲೆಯೇ. ಹಾಗಾಗಿ, ವಸ್ತುವನ್ನು ನಾವು ನೋಡುವ ಬಗೆಯಲ್ಲಿ ಬೆಳಕಿನ ಪಾತ್ರ ಅತ್ಯಂತ ಪ್ರಮುಖವಾದದ್ದೂ ಹೌದು,ಸಾಪೇಕ್ಷವಾದದ್ದೂ ಹೌದು. ಹಾಗೆ ಅಚಾನಕ್ಕಾಗಿ ಫ್ಲಾಷ್ ಆಗುವ ಬೆಳಕಲ್ಲಿ ರೂಪ ಹೇಗಿರಬಹುದು?. ಬೇಂದ್ರೆಯವರ “ಸ್ವರೂಪ ದೀಪ” ಕವಿತೆಯ ಸಾಲುಗಳು ಹಣತೆಯ ಬೆಳಕಲ್ಲಿ ಹೀಗೆ ಹೊಳೆಯುತ್ತವೆ. “ಬೆಳಕೀಗೆ ಕತ್ತಲೆ ಕೊಟ್ಟಾಗ ಮುದ್ದು ಮೂಡ್ಯಾನೋ ಚಂದಿರ ಹಗಲು ಹೋಯಿತು ಜಾರಿ ಬಟಾ ಬಯಲೆಲ್ಲಾ ಚುಕ್ಕಿಯ ಮಂದಿರ ಚಕಮಕ್ಕಿ ಹಾರೀ ಕಂಡಿತೋ ಮಾರಿ ಎಂದಿನದೀ ನೋಟ ಮೈಯೊಳಗ ಮೈಯೋ ಕೈಯೊಳಗ ಕೈಯೋ ಕರುಳಾಟ ಮರುಳಾಟ” ರಾತ್ರೆಯ ಕತ್ತಲಲ್ಲಿ ಆಗಸದ ಚಿತ್ತಾರದ ಅಡಿಯಲ್ಲಿ, ಚಕಮಕ್ಕೀ ಹಾರಿದಾಗ ನೋಟದೊಳಗೆ ಮೂಡುವ ಚಿತ್ರಕ್ಕೆ ಪ್ರಾಪ್ತವಾಗುವ ಸ್ವರೂಪ ದೀಪದ ಮೇಲೆ ಅವಲಂಬಿತ,ಅಲ್ಲವೇ. ಒಲವು, ಜ್ಞಾನ ಎಲ್ಲವೂ ಬೆಳಕೇ. ದೀಪ ಹಚ್ಚುವುದೆಂದರೆ ಪ್ರಕಾಶಿಸುವುದೆಂದರೆ ಅದರಲ್ಲಿ ಋಣಾತ್ಮಕ ಅಂಶಗಳಿಗೆ ಎಡೆಯೇ ಇಲ್ಲ. “ನೀ ಬಂದು ನಿಂದಿಲ್ಲಿ ದೀಪ ಹಚ್ಚಾ..” ಎಸ್ ವಿ ಪರಮೇಶ್ವರ ಭಟ್ಟ ಅವರು ಬರೆದ ಕವನದ ಪ್ರತೀ ಸಾಲುಗಳು ಸಾಲುದೀಪಾಕ್ಷರಗಳು. “ಪ್ರೀತಿಯ ಕರೆಕೇಳಿ ಆತ್ಮನ ಮೊರೆಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚಾ ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚಾ ದೇಹದ ಗೂಡಲಿ ನಿನ್ನೊಲವು ಮೂಡಲಿ ಜಗವೆಲ್ಲ ನೋಡಲಿ ದೀಪ ಹಚ್ಚಾ ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ ನನ್ನ ಮನದಂಗಳದಿ ದೀಪ ಹಚ್ಚಾ ಹಳೆಬಾಳು ಸತ್ತಿತ್ತು ಕೊನೆಬಾಳು ಸುಟ್ಟಿತ್ತು ಹೊಸಬಾಳು ಹುಟ್ಟಿತ್ತು ದೀಪ ಹಚ್ಚಾ ಪ್ರೀತಿಯ ರತಿಗೆ ನೀ ಬೆಳಕಿನ ಆರತಿ ಬೆಳಗಿ ಕಲ್ಲಾರತಿ ದೀಪ ಹಚ್ಚಾ ಮೋಹದ ಮತಿಗೆ ನೀ ಸುಟ್ಟು ತೋರುವ ದೀಪ ಸುಜ್ಞಾನಪ್ರದೀಪ ದೀಪ ಹಚ್ಚಾ ಜ್ಯೋತಿಸ್ವರೂಪನೆ ಸ್ವಯಂಪ್ರಕಾಶನೆ ತೇಜೋರೂಪನೆ ದೀಪ ಹಚ್ಚಾ ವಿಶ್ವಮೋಹಿತಚರಣ ವಿವಿಧವಿಶ್ವಾಭರಣ ಆನಂದದ ಕಿರಣ ದೀಪ ಹಚ್ಚಾ” ಪ್ರೀತಿ, ಒಲವು, ಆತ್ಮಜ್ಯೋತಿ, ಮನಸ್ಸೊಳಗಿನ ಭಾವ, ಬದುಕು, ಜ್ಞಾನ, ಆನಂದ, ಇವೆಲ್ಲ ಕವಿಗೆ ದೀಪದ ಬೆಳಕಾಗಿ ಹಬ್ಬವಾಗುತ್ತೆ. ಅಕ್ಷರಗಳು ಜ್ಞಾನದ,ಕಲೆಯ, ಚಿಂತನೆಯ, ಸೃಜನಾತ್ಮಕ ಪ್ರಕ್ರಿಯೆಯ ಜೀವಕೋಶಗಳು ತಾನೇ. ಹಾಗಾದರೆ ಭಾಷೆ?. – ಡಿ. ಎಸ್. ಕರ್ಕಿ ಅವರ ಈ ಪದ್ಯದಲ್ಲಿ ಕನ್ನಡವೂ ದೀಪವೇ. “ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ” ಭಾಷೆಯೂ ದೀಪ, ಅದರ ಸಿರಿವಂತಿಕೆಯೂ ದೀಪ ಅದರೊಳಗೆ, ಅದರ ಮೂಲಕ ಮತ್ತು ಅದರತ್ತ ಇರುವ ಒಲವೂ ದೀಪವೇ. ಉರಿಸಿದಾಗ ಕರ್ಪೂರದಂತೆ ಭಾಷೆಯ ಕಂಪೂ ಹರಡುತ್ತದೆ,ಅಲ್ಲವೇ. ನರನರವನೆಲ್ಲ ಹುರಿಗೊಳಿಸಿ ಭಾಷೆಯ ಮುಲಕ ಹೊಸತನ ತುಂಬುವುದು ದೀಪೋಜ್ವಲನವೇ. “ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ” ಎಂಬ ಸಾಲುಗಳು ಅಸ್ಮಿತೆಯ ದೀಪ ಹಚ್ಚುತ್ತೆ. ಬೇಂದ್ರೆಯವರ “ಚೈತನ್ಯದ ಪೂಜೆ” ಎಂಬ ಕವನದಲ್ಲಿ ದೀಪದೊಳಗಿನ ವಿಶ್ವಾತ್ಮ ಚೈತನ್ಯದ ಜ್ಯೋತಿಯಿದೆ. “ಚೈತನ್ಯದ ಪೂಜೆ ನಡೆದSದ ನೋಡS ತಂಗಿ।। ಅಭಂಗದ ಭಂಗೀS ।। ಪ ।। ಸತ್ಯ ಎಂಬುವ ನಿತ್ಯದ ದೀಪ ಸುತ್ತೆಲ್ಲಾ ಅವನದೇ ರೂಪ ಪ್ರೀತಿ ಎಂಬುವ ನೈವೇದ್ಯ ಇದು ಎಲ್ಲರ ಹೃದಯದ ಸಂವೇದ್ಯ.” ಸತ್ಯ ಎಂಬುವ ನಿತ್ಯದ ದೀಪ, ಸುತ್ತೆಲ್ಲ ಅವನದೇ ರೂಪ ಎನ್ನುತ್ತಾ, ಬೇಂದ್ರೆಯವರು ಚೈತನ್ಯದ ಆರಾಧನೆಯ ಮಾರ್ಗ ಕ್ಕೆ ಬೆಳಕು ಚೆಲ್ಲುತ್ತಾರೆ. ಕೆ.ಎಸ್ ನರಸಿಂಹ ಸ್ವಾಮಿಯವರು ಬರೆದ “ದೀಪವು ನಿನ್ನದೆ,ಗಾಳಿಯೂ ನಿನ್ನದೆ,ಆರದಿರಲಿ ಬೆಳಕು ” ಎನ್ನುವ ಸಾಲುಗಳು, ದೀಪವನ್ನು ಏಳು ಬೀಳುಗಳನ್ನು ಅನುಭವಿಸುತ್ತಾ ಸಾಗುವ ಬದುಕಿಗೆ ಪ್ರತಿಮೆಯಾಗಿಸುತ್ತಾರೆ. ಅವರ ದೀಪಾವಳಿ ಕವನವೂ ಹಾಗೆಯೇ ದೀಪವನ್ನು ಹಲವು ರೂಪಕವಾಗಿ ಬೆಳಗಿಸುತ್ತೆ. ಹೂವು ಬಳ್ಳಿಗೆ ದೀಪ ; ಹಸಿರು ಬಯಲಿಗೆ ದೀಪ ; ಅನ್ನುತ್ತಾ ಅವರು ದೀಪಕ್ಕೆ ಹೊಸ ವ್ಯಾಖ್ಯಾನ ಕೊಡುವ “ಬಲ್ಮೆ ತೋಳಿಗೆ ದೀಪ” ಎಂಬ ಸಾಲು ಬರೆಯುತ್ತಾರೆ. ಅವರ ಈ ಸಾಲುಗಳನ್ನು ಗಮನಿಸಿ!. “ಸಹನೆ ಅನುಭವ – ದೀಪ ಬದುಕಿನಲ್ಲಿ ಕರುಣೆ ನಂದಾದೀಪ ಲೋಕದಲ್ಲಿ” ಅಕ್ಷರಗಳನ್ನು ದೀಪವಾಗಿ ಕಾಣುತ್ತಾ ಅವರು ಬರೆಯುತ್ತಾರೆ.. “ಕತ್ತಲೆಯ ಪುಟಗಳಲಿ ಬೆಳಕಿನಕ್ಷರಗಳಲಿ, ದೀಪಗಳ ಸಂದೇಶ ಥಳಥಳಿಸಲಿ !” ದೀಪದ ಬಗ್ಗೆ ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟರು ಬರೆದ ಕವನ ಅನನ್ಯ ಭಾವದ ಒಲುಮೆಯ ದೀಪವೇ. “ಮಾನವನೆದೆಯಲಿ ಆರದೆ ಉರಿಯಲಿ. ದೇವರು ಹಚ್ಚಿದ ದೀಪ ರೇಗುವ ದನಿಗೂ ರಾಗವು ಒಲಿಯಲಿ ಮೂಡಲಿ ಮಧುರಾಲಾಪ” ಹಮ್ಮು ಬಿಮ್ಮುಗಳ ಮರುಳುಗಾಡಿನಲಿ ಎಲ್ಲೋ ಥಣ್ಣನೆ ಚಿಲುಮೆ ತಾಪವ ಹರಿಸಿ ಕಾಪಾಡುವುದು ಒಳಗೇ ಸಣ್ಣಗೆ ಒಲುಮೆ.” ಇವುಗಳಿಗೆಲ್ಲ ಭಿನ್ನವಾಗಿ ಶಿವರುದ್ರಪ್ಪನವರು ಬರೆದ ಕವನ “ನನ್ನ ಹಣತೆ” “ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಆದರೂ ಹಣತೆ ಹಚ್ಚುತ್ತೇನೆ ನಾನೂ; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ; ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ.” ಹಣತೆಯ ಬೆಳಕಲ್ಲಿ, ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಆಸೆಯಿಂದ, ಹಣತೆ ಹಚ್ಚುವ ಕವಿ, ಜೀವಪ್ರೇಮವನ್ನೂ ಜೀವನಪ್ರೇಮವನ್ನೂ, ವಾಸ್ತವಾನುಭವದ ಸತ್ಯವನ್ನು ಮಾತ್ರ ಅವಲಂಬಿಸುತ್ತಾರೆ. ಅಕ್ಷರಗಳ ಮೂಲಕ ಅನುಭೂತಿ ಹುಡುಕುವ, ನಮ್ಮ ಈ ಪ್ರಯತ್ನದಲ್ಲಿ, ಅಕ್ಷರಮಾಲೆ, ದೀಪದ ಸಾಲುಗಳು. ಈ ಅಕ್ಷರ ದೀಪಾವಳಿಯ ಶುಭಾಶಯಗಳು, ನಿಮಗೆಲ್ಲರಿಗೂ. ****************************************** ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ದೇಗುಲದಲ್ಲಿ ದೆವ್ವ
ಮೂಲ : ಗೂಗಿ ವಾ ಥಿಯಾಂಗೋ ಕನ್ನಡಕ್ಕೆ : ಬಂಜಗೆರೆ ಜಯಪ್ರಕಾಶ್
ಅಂಕಣ ಬರಹ ಹವ್ಯಾಸವೆಂಬ ಮಂದಹಾಸ… ಹವ್ಯಾಸಗಳಿಲ್ಲದ ಮನುಷ್ಯನೆಂದರೆ ಎಲೆ ಹೂವು ಹಣ್ಣು ಏನೊಂದೂ ಇಲ್ಲದ ಬೋಳು ಮರವೇ ಸರಿ. ಬದುಕು ದುರ್ಬರವೆನಿಸಿದ ಹೊತ್ತಲ್ಲೂ ಸಹನೀಯತೆ ತರುವ ಶಕ್ತಿ ಇದ್ದರೆ ಅದು ಹವ್ಯಾಸಗಳಿಗೆ ಮಾತ್ರ. ಹೊತ್ತು ಕಳೆಯಲು ವ್ಯರ್ಥ ಅಭ್ಯಾಸಗಳನ್ನು ಮಾಡಿಕೊಳ್ಳುವ ಬದಲು ಸಮಯವನ್ನು ಗೌರವಿಸುವಂತ ಅರ್ಥಪೂರ್ಣ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಹವ್ಯಾಸಗಳು ಬರಿದೆ ಮೂರ್ತಿಗೆ ಮಾಡಿದ ಅಲಂಕಾರದಂತೆ ನಮ್ಮನ್ನು ಚೆಂದಗಾಣಿಸುತ್ತದೆ. ಹವ್ಯಾಸವೆನ್ನುವ ಟಾರ್ಚು ನಮ್ಮ ಕೈಯಲ್ಲಿದ್ದರೆ ಅದು ದಟ್ಟ ಕಾಡಿನ ನಡುವೆಯೂ ಕೈಹಿಡಿದು ನಡೆಸಿ ಗುರಿ ಮುಟ್ಟಿಸಬಲ್ಲದು, ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದು, ನೋವನ್ನು ಮರೆಸಿ ಮಾಯಿಸಬಲ್ಲದು. ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನು ಹವ್ಯಾಸಗಳ ಒರೆಗೆ ಹಚ್ಚುವುದರಿಂದ ಪುಟಕ್ಕಿಟ್ಟ ಚಿನ್ನವೆಂದು ಸಾಬೀತಾಗುತ್ತದೆ. ಸಾಯಲು ನಿಂತವನಲ್ಲೂ ಒಂದು ಸಣ್ಣ ಹಾಡು, ಒಂದು ಸಣ್ಣ ಕವಿತೆ, ಚೆಂದದ ಚಿತ್ರ ಬದುಕುವ ಆಸೆಯನ್ನು ಹುಟ್ಟಿಸುತ್ತದೆಯೆಂದರೆ ಅದರ ಶಕ್ತಿಯನ್ನು ಯಾರಾದರೂ ಊಹಿಸಬಹುದು. ಹವ್ಯಾಸಗಳೆಂದಾಕ್ಷಣ ನಾವದರಲ್ಲಿ ಅತೀತವಾದ್ದೇನನ್ನೋ ಸಾಧಿಸಲೇ ಬೇಕಂತಿಲ್ಲ. ಅದು ನಮ್ಮ ಆತ್ಮ ಸಂತೋಷಕ್ಕೆ ಒದಗಿ ಬಂದರೂ ಸಾಕು. ಹಳ್ಳಿಗಳಲ್ಲಿ ಅದೆಷ್ಟೋ ಅನಕ್ಷರಸ್ಥರು ತಮಗರಿವಿಲ್ಲದೇ ತಮ್ಮ ವಿರಾಮದ ವೇಳೆಯಲ್ಲಿ ಸೋಬಾನೆ ಪದ ಹಾಡಿಕೊಳ್ಳುವುದು, ಹಸೆ ಹೊಯ್ಯುವುದು, ಜಾನಪದ ಕತೆಗಳನ್ನು ಹೇಳುವುದು, ಕೌದಿ, ದಟ್ಟ ಹೊಲೆಯುವುದು, ಹೊಲಿಗೆ, ಕಸೂತಿ, ರಂಗೋಲಿ, ಹಗ್ಗ ಹೆಣೆಯುವುದು, ಬುಟ್ಟಿ ಹೆಣೆಯುವುದು, ಮನೆ ಮುಂದೆ ಕೈತೋಟ ಮಾಡಿ ಅದರಲ್ಲಿ ನಾನಾ ಬಗೆಯ ಗಿಡಗಳನ್ನು ತಂದು ನೆಟ್ಟು ಬೆಳೆಸುವುದು…. ಇಂತಹ ಅದೆಷ್ಟೋ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. “ಖಾಲಿ ಮೆದುಳು, ದೆವ್ವದ ಮನೆ” ಎನ್ನುವ ಹಾಗೆ ಖಾಲಿ ಕುಳಿತಾಗ ಅನವಶ್ಯಕ ಚಿಂತೆಗಳು ಮುತ್ತಿ ಆರೋಗ್ಯ ಹಾಳುಮಾಡುತ್ತವೆ. ಇಲ್ಲಾ ದೈಹಿಕ ಮತ್ತು ಮಾನಸಿಕ ನಿಷ್ಕ್ರಿಯತೆಯಿಂದಾಗಿ ದೇಹ ರೋಗಗಳ ಗೂಡಾಗುತ್ತದೆ. ಹವ್ಯಾಸಗಳನ್ನು ಬೆಳೆಸಿಕೊಳ್ಳಲು ವಯಸ್ಸಿನ ಮಿತಿ ಅಂತ ಏನೂ ಇಲ್ಲ. ನಮ್ಮ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಯಾವುದಾದರೂ ಸರಿ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಯಾವುದೇ ವಯಸ್ಸಿನವರಾಗಲೀ ತಮ್ಮ ವಿರಾಮದ ವೇಳೆಯಲ್ಲಿ ಅನವಶ್ಯಕವಾಗಿ ಸಮಯ ಹಾಳುಮಾಡುವ ಬದಲು ಹವ್ಯಾಸಕ್ಕೆಂದು ಬಳಸಿಕೊಂಡರಾಯಿತು. ಈ ಅಭ್ಯಾಸ, ರೂಢಿ, ಚಟ ಎನ್ನುವ ಪದಗಳು ಹವ್ಯಾಸಕ್ಕೆ ಸಮೀಪದಲ್ಲಿದ್ದರೂ ಹವ್ಯಾಸವನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕಿದೆ ನಾವು. ಮಕ್ಕಳು ಏನನ್ನಾದರೂ ಸುಲಭವಾಗಿ ಬಹಳ ಬೇಗ ಕಲಿತುಬಿಡುತ್ತರೆ. ಹಾಗಾಗಿ ರಜೆಯಲ್ಲಿ ಅವರು ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬಹುದು. ಸ್ವಲ್ಪ ದೊಡ್ಡ ಮಕ್ಕಳಿಗೆ ಸಣ್ಣ ಪುಟ್ಟ ತಿನಿಸು ಪಾನೀಯ ತಯಾರಿಸುವುದನ್ನೂ ಹೇಳಿಕೊಡಬಹುದು. ಮನೆಯನ್ನು ಸ್ವಚ್ಛವಾಗಿ ಒಪ್ಪವಾಗಿ ಇಟ್ಟುಕೊಳ್ಳುವುದು, ಹಿರಿಯರಿಗೆ ಸಹಾಯ ಮಾಡುವುದು, ಸಂಗೀತ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಕತೆ-ಕವನ ಬರೆಯುವುದು, ಉತ್ತಮ ಪುಸ್ತಕಗಳನ್ನು ಓದುವುದು, ಆಟ ಆಡುವುದು, ಕೃಷಿ, ತೋಟಗಾರಿಕೆ, ಈಜು, ನಾಟಕ, ಯೋಗ, ಭಾಷಣ, ಗೀತಾ ಪಠಣ, ಕರಾಟೆ ಹೀಗೆ ನಾನಾ ಹವ್ಯಾಸಗಳಲ್ಲಿ ಮಕ್ಕಳು ತೊಡಗಿಕೊಳ್ಳಬಹುದು. ಮಕ್ಕಳಿಗೆ ಸ್ಫೂರ್ತಿ ಮತ್ತು ಮಾದರಿಯಾಗುವಂತೆ ಹಿರಿಯರೂ ಸಹ ಹವ್ಯಾಸಗಳಲ್ಲಿ ತೊಡಗಿಕೊಳ್ಳಬಹುದು. ಇಂದಿನ ಜಗತ್ತು ನಮ್ಮ ಹವ್ಯಾಸಗಳನ್ನೇ ವೃತ್ತಿಯಾಗಿಸಿಕೊಳ್ಳಲು ಅನುಕೂಲಕರವಾಗಿದೆ. ಅದೆಷ್ಟೋ ಜನ ಹಾಗೆ ತಮ್ಮ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ಯಶಸ್ಸೂ ಕಂಡಿದ್ದಾರೆ. ಕರಕುಶಲ ವಸ್ತು ತಯಾರಿಕೆ, ಹೊಲಿಗೆ ಮತ್ತು ಕಸೂತಿ ಕೆಲಸ, ಸಂಗೀತ, ನೃತ್ಯ, ನಟನೆ, ಬರಹ, ಅಡುಗೆಯಂತಹ ಹವ್ಯಾಸಗಳು ಜೀವನದ ನಿರ್ವಹಣೆಗೂ ಆಧಾರವಾಗಿವೆ. ಅದೆಷ್ಟೋ ಮಹಿಳೆಯರು ಇಂತಹ ಗೃಹಾಧಾರಿತ ಉದ್ದಿಮೆಗಳಿಂದಾಗಿ ಸಾಕಷ್ಟು ಸಾಧನೆ ಮಾಡಿ ಹೆಸರುವಾಸಿಯಾಗಿದ್ದಾರೆ ಕೂಡ. ಇದಲ್ಲದೆ ಆರೋಗ್ಯದ ದೃಷ್ಟಿಯಿಂದ ಪ್ರತಿ ನಿತ್ಯ ಮುಂಜಾನೆ ಮತ್ತು ಸಂಜೆಗಳಲ್ಲಿ ನಡಿಗೆ, ಓಟ, ವ್ಯಾಯಾಮ, ಹಗ್ಗದಾಟ, ಶಟಲ್, ಟೆನ್ನಿಕಾಯ್ಟ್ ನಂತಹ ಅಲ್ಪ ದೈಹಿಕ ಶ್ರಮ ಬೇಡುವಂತಹ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಇದು ಬದಲಾದ ನಮ್ಮ ಜೀವನ ಶೈಲಿಗೆ ಮತ್ತು ಕೋವಿಡ್ 19 ನಂತಹ ಪ್ಯಾಂಡಾಮಿಕ್ ಕಾಯಿಲೆಗಳ ವಿರುದ್ಧ ಪರಿಹಾರವಾಗಿಯೂ ತೋರುತ್ತದೆ. ನಾವಿರುವ ಪ್ರದೇಶದಲ್ಲೇ ಸಣ್ಣ ಪುಟ್ಟ ಸಂಘ ಮಾಡಿಕೊಂಡು ಸ್ವಚ್ಛತೆ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಹೀಗೆ ಹಲವಾರು ಅಂಶಗಳನ್ನಿಟ್ಟುಕೊಂಡು ಜನರನ್ನು ಒಟ್ಟಾಗಿ ಸೇರಿಸಿ ರಚನಾತ್ಮಕ ಕಾರ್ಯಗಳಲ್ಲಿಯೂ ತೊಡಗಿಕೊಳ್ಳಬಹುದು. ಹವ್ಯಾಸಹಳಿಂದ ಚಿಂತೆ ದೂರವಾಗುತ್ತದೆ. ಆತ್ಮವಿಶ್ವಾಸ ಬೆಳೆಯುತ್ತದೆ. ಬುದ್ಧಿ ಮನಸ್ಸು ವಿಕಸನಗೊಳ್ಳುತ್ತದೆ. ಬದುಕಿನಲ್ಲಿ ಹೊಸ ಜೀವನೋತ್ಸಾಹ ತುಂಬಿಕೊಳ್ಳುತ್ತದೆ. ಧನಾತ್ಮಕ ಚಿಂತನೆ, ಪ್ರೀತಿ, ನಂಬಿಕೆ, ವಿಶ್ವಾಸ, ಸಹಕಾರದಂತಹ ಮೌಲ್ಯಗಳು ಬೆಳೆದು ಮನುಷ್ಯ ಪ್ರಬುದ್ಧನಾಗುತ್ತಾನೆ. ಹಾಗಾಗಿ ಯಾರೇ ಆಗಲಿ ಮನುಷ್ಯರಾಗಿ ಹುಟ್ಟಿದ ಮೇಲೆ ಒಂದಾದರೂ ಹವ್ಯಾಸ ಇಟ್ಟುಕೊಳ್ಳಲೇ ಬೇಕು. ಇತ್ತೀಚಿನ ದಿನಗಳಲ್ಲಿ ಶಾಲೆಗಳು, ಶಿಕ್ಷಕರು, ಹಾಗೂ ಪೋಷಕರು ಮಕ್ಕಳ ಹವ್ಯಾಸಗಳ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಶಾಲೆಗಳಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಸಿಕೊಂಡ ಮೇಲೆ ಸಹಪಠ್ಯ ಚಟುವಟಿಕೆಗಳು ಮತ್ತು ಪಠ್ಯೇತರ ಚುಟುವಟಿಕೆಗಳೂ ಸಮಾನ ಪ್ರಾಶಸ್ತ್ಯ ಪಡೆದುಕೊಳ್ಳುತ್ತಿವೆ. ಇದರಿಂದಾಗಿ ಎಳೆವಿನಲ್ಲೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡುವುದು ಸಾಧ್ಯವಾಗಿದೆ. ಪ್ರತಿಭಾ ಕಾರಂಜಿಯಂತಹ ವೇದಿಕೆಗಳೂ ಸಹ ಮಕ್ಕಳ ಹವ್ಯಾಸಗಳನ್ನು ಬೆಳೆಸುತ್ತಿವೆ. ಮಾಧ್ಯಮಗಳು ಮತ್ತು ವಿವಿಧ ಚ್ಯಾನಲ್ಲುಗಳೂ ಸಹ ಹಲವಾರು ಬಗೆಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳು ಮತ್ತು ಹಿರಿಯರಿಬ್ಬರ ಪ್ರತಿಭೆಗೂ ಪ್ರಚಾರ ಮತ್ತು ವೇದಿಕೆ ಕಲ್ಪಿಸಿಕೊಡುತ್ತಿವೆ. ಅಕ್ಬರನ ಆಸ್ಥಾನದಲ್ಲಿದ್ದ ಸಂಗೀತ ವಿದ್ವಾಂಸರಾದ ತಾನಸೇನರು ತಮ್ಮ ಗುರು ಹರಿದಾಸರು ತಮಗಿಂತಲೂ ಶ್ರೇಷ್ಠ ಗಾಯಕರು ಎಂದು ಹೇಳುತ್ತಿದ್ದರು. ಕಾರಣ ತಾನಸೇನರು ಅಕ್ಬರರನ್ನು ಮೆಚ್ಚಿಸಲು ಹಾಡುವವರಾಗಿದ್ದರು. ಆದರೆ ಹರಿದಾಸರು ಆತ್ಮ ಸಂತೋಷಕ್ಕಾಗಿ ಮಾತ್ರ, ಜಗತ್ತಿನಲ್ಲಿ ನಾದ ಹುಟ್ಟುವಷ್ಟೇ ಸಹಜವಾಗಿ ಹಾಡುತ್ತಿದ್ದರು. ಇಬ್ಬರೂ ಶ್ರೇಷ್ಠರೇ. ಆದರೆ ನಮ್ಮ ಲಕ್ಷ್ಯ ಯಾವುದು ಎಂಬುದು ನಮಗೆ ಸ್ಪಷ್ಟವಿರಬೇಕು. ಇನ್ನಾದರೂ ಸಮಯವಿಲ್ಲ, ಕೆಲಸ ಜಾಸ್ತಿ, ನಂಗ್ಯಾವುದರಲ್ಲೂ ಆಸಕ್ತಿ ಇಲ್ಲ ಅಂತೆಲ್ಲ ಸಬೂಬು ಹೇಳುವ ಬದಲು ಯಾವುದಾದರೊಂದು ಹವ್ಯಾಸವನ್ನು ಬೆಳೆಸಿಕೊಂಡು ಜೀವನ್ಮುಖಿಯಾಗಿ ಹವ್ಯಾಸದ ಮಂದಹಾಸ ಬೀರಬೇಕಿರುವುದು ಈ ಕಾಲದ ತುರ್ತು. **************************************** ಆಶಾಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಹೊದಬನಿ-ಹೊಸದನಿ-14 ಅಗತ್ಯಕ್ಕಿಂತ ಲಂಬಿಸಿಯೂ ಹ್ರಸ್ವವಾಗೇ ಉಳಿಯುವ ಆಸ್ಪರಿಯವರ ಕವಿತೆಗಳು ಚನ್ನಬಸವ ಆಸ್ಪರಿ . ಅವ್ವನೂ ಕಸೂತಿ ಹಾಕುತ್ತಿದ್ದಳು ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ ಎಂದು ತನ್ನೊಳಗಿನ ಸಂಕಟಗಳನ್ನು ಕವಿತೆಯಾಗಿಸುವ ಚನ್ನಬಸವ ಆಸ್ಪರಿ ಫೇಸ್ಬುಕ್ಕಿನಲ್ಲಿ ಬರೆಯುತ್ತಿರುವ ಹಲವು ಹೆಸರುಗಳ ನಡುವೆ ಅನುಭವದ ಆಧಾರ ಪಡೆದ ಸಶಕ್ತ ಕವಿತೆಗಳನ್ನು ಅಪರೂಪಕ್ಕೆ ಪ್ರಕಟಿಸುತ್ತಿರುತ್ತಾರೆ. ನಾವೆಲ್ಲ ಅವ್ವ ಎನ್ನುವ ಕವಿತೆಯ ಸರ್ವ ಸ್ವಾಮ್ಯವನ್ನೂ ಲಂಕೇಶರಿಗೆ ಅರ್ಪಿಸಿಬಿಟ್ಟಿರುವಾಗಲೂ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಡುವ ಕಾಪಾಡಿದ ಅವ್ವನ ನೆನಪು ಅನನ್ಯ. ಅಸ್ಪರಿಯವರ ಈ ಕವಿತೆ ಅವಧಿಯಲ್ಲೂ ಪ್ರಕಟವಾಗಿತ್ತು. ಈ ಪದ್ಯದಲ್ಲೇ ಕವಿ ತಾಯಿಯನ್ನು ಹೀಗೂ ಕಾಣುತ್ತಾನೆ; ನಂಜನೇ ಬಳುವಳಿಯಾಗಿ ಕೊಟ್ಟವರ ಅಳುವ ಕೊರಳಿಗೂ ಸಾಂತ್ವನದ ಹೆಗಲೊಡ್ಡಿದ ಅವ್ವ ಶಿಲುಬೆಗಂಟಿದ ಹನಿ ಹನಿ ರಕ್ತದಲೂ ಅಂತಃಕರಣದ ಕಡುಲಿಕ್ಕಿಸಿದ ಏಸು ಅವರಿವರ ಬದುಕು ಸಿಂಗರಿಸುತ್ತಲೇ ಕಾಲನ ಪಾದದಡಿ ನರಳಿದ ಪಾಪದ ಹೂ ಎಂದು ಬರೆಯುವಾಗ “ಪಾಪದ ಹೂ” ಎಂದು ಯಾಕಾಗಿ ಬರೆದರೋ ಏನೋ, ಹೊಸ ಕಾಲದ ಹುಡುಗರು ತಾವು ಬಳಸಿದ ಶಬ್ದಗಳ ಬಗ್ಗೆ ತುಂಬಾ ಎಚ್ಚರದಲ್ಲಿರುವ ಅಗತ್ಯತೆ ಇದ್ದೇ ಇದೆ. ಪ್ರಾಯಶಃ ಲಂಕೇಶರು ಬೋದಿಲೇರನನ್ನು ಅನುವಾದಿಸಿದ್ದ ಪಾಪದ ಹೂ ಎನ್ನುವ ಶೀರ್ಷಿಕೆ ಈ ಕವಿಗೆ ತಕ್ಷಣಕ್ಕೆ ಹೊಳೆದಿರಬೇಕು. ಶ್ರೀ ಚನ್ನಬಸವ ಆಸ್ಪರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿಯವರು. ವೃತ್ತಿಯಿಂದ ಪ್ರೌಢ ಶಾಲಾ ಆಂಗ್ಲ ಭಾಷಾ ಶಿಕ್ಷಕ. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ.ಅನುವಾದದಲ್ಲಿ ವಿಶೇಷ ಆಸಕ್ತಿ.ವಿಶ್ವವಾಣಿ, ವಿಜಯ ಕರ್ನಾಟಕ, ಅವಧಿ ಪತ್ರಿಕೆಗಳಲ್ಲಿ ಬಿಡಿ ಕವಿತೆಗಳು ಪ್ರಕಟವಾಗಿವೆ.ಸಂಕ್ರಮಣ ಕಾವ್ಯ ಪುರಸ್ಕಾರ ಹಾಗೂ ಪ್ರತಿಲಿಪಿ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಇಲಾಖೆಯಿಂದ ಪೂರ್ವಾನುಮತಿ ಪಡೆದು ಪಾರ್ಟ್ ಟೈಮ್ ಕ್ಯಾಂಡಿಡೇಟ್ ಆಗಿ ಪಿ.ಹೆಚ್.ಡಿ.ಮಾಡುತ್ತಿರುವ ಇವರು ಪಿ.ಯು.ಉಪನ್ಯಾಸಕರ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸರಕಾರಿ ಪ.ಪೂ.ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೊದಲನೇ ರ್ಯಾಂಕ್ ಪಡೆದ ಪ್ರತಿಭಾಶಾಲಿ, ಸರ್ಕಾರಿ ನೌಕರಿ ಸೇರಿದ ಕೂಡಲೇ ಸಂಬಳ ಸಾರಿಗೆ ಇಂಕ್ರಿಮೆಂಟೆಂದು ಲೆಕ್ಕ ಹಾಕುತ್ತ ಕಳೆದೇ ಹೋಗುವ ಬದಲು ಇಲಾಖೆಯು ಒದಗಿಸಿರುವ ಅವಕಾಶವನ್ನು ಉಪಯೋಗಿಸಿಕೊಂಡ ಮಾದರಿ ಯುವಕ. ಕವಿತೆ ಬರೆಯುವುದೆಂದರೆ ಶಬ್ದದ ಧಾರಾಳ ಬಳಕೆ ಮತ್ತು ವಾಚಾಳಿತನವೇ ಆಗುತ್ತಿರುವ ಹೊತ್ತಲ್ಲಿ ಈ ಕವಿ ಶಬ್ದಗಳ ಶಬ್ದದ ಸಂತೆಯೊಳಗೂ ಮೌನವನ್ನು ಹುಡುವುದು ವಿಶೇಷ ಲಕ್ಷಣವೇ ಆಗಿದೆ. ಮಾತಾಗದೇ ಹೊರಬರಲು ಕಾತರಿಸಿ ಮಾತಾಗಿ ಹೆಗಲು ನೀಡದ ಮೌನವಾಗಿ ತಬ್ಬಿ ರಮಿಸದ ಎಡಬಿಡಂಗಿ ಶಬ್ದಗಳ ಹಡೆದ ಮನಸಿಗೆ ಗೊತ್ತಾಗಲಿಲ್ಲವೇ ಗಂಡಾಗಿ ಗುಡುಗದ ಹೆಣ್ಣಾಗಿ ಮರುಗದ ತನ್ನ ಸಂತಾನ ಕೇವಲ ಚಟದ ಫಲವೆಂದು? ಎಂದೆನ್ನುವಾಗ ಮಾತ ಪಾತಳಿಯ ಅಸ್ತಿವಾರವನ್ನೇ ಅಲುಗಿಸಿ ಆಳದಾಳದ ಗೊಂದಲವನ್ನು ಹೊರಹಾಕುತ್ತಾರೆ ಮತ್ತು ಕವಿತೆಯ ಅಂತ್ಯದಲ್ಲಿ ಶಬ್ದಕೆ ಅಂಟದ ಮಾತು ನಿಶ್ಯಬ್ದ ಮೀರಿದ ಮೌನ ದಾಟಬಹುದು ಅಂತಃಕರಣದ ನಾವೆ ಎದೆಯಿಂದ ಎದೆಗೆ ಎನ್ನುತ್ತಾರಲ್ಲ ಅದು ಸುಲಭಕ್ಕೆ ಸಿಗದ ಸಾಮಾನ್ಯ ಸಂಗತಿಗೆ ನಿಲುಕದ ವಸ್ತುವೂ ಆಗಿದೆ. ಬೋಧಿಯಿಂದ ಬುದ್ಧನಿಗೆ ಜ್ಞಾನವೋ ಬುದ್ಧನಿಂದ ಬೋಧಿಗೆ ಮುಕ್ತಿಯೋ ! ಹಸನು ದಾರಿಯಲಿ ನಡೆದವನದಿರಲಿ ನಡೆದ ದಾರಿಯನೇ ಹಸನುಗೊಳಿಸಿದವನ ಪಾದ ಧೂಳಿಗೂ ಮುಕ್ತಿ ಎಂದು “ಮುಕ್ತಿ ಮಾಯೆ” ಎನ್ನುವ ಕವಿತೆಯಲ್ಲಿ ಕಚ್ಚಾ ರಸ್ತೆಯಲ್ಲಿ ನಡೆದೂ ಅದನ್ನೇ ಹಸನು ಮಾಡಿದವನ ಪಾದದ ಧೂಳಿಗೂ ಮುಕ್ತಿ ಸಿಕ್ಕಿತು ಎನ್ನುವಾಗ ಪದ್ಯದ ಆಶಯವನ್ನೇ ಗೊಂದಲದ ಗೂಡಾಗಿಸಿಬಿಟ್ಟಿದ್ದಾರೆ. ಇದು ಸಹಜವಾಗಿ ಆಗುವ ತಪ್ಪು. ಕವಿಯೊಬ್ಬ ತಾನು ಬರೆದುದನ್ನು ಕೆಲವು ದಿನ ಹಾಗೇ ಬಿಟ್ಟು ಕೆಲ ದಿದ ನಂತರ ಅದು ತನ್ನ ರಚನೆಯೇ ಅಲ್ಲವೆಂದುಕೊಂಡು ಓದಿದರೆ ತಪ್ಪು ಕಾಣಿಸುತ್ತದೆ. ಬರೆದ ಕೂಡಲೇ ಪ್ರಕಟಿಸಿ ಬಿಡುವ ಅವಸರ ಈ ಬಗೆಯ ತಪ್ಪನ್ನು ಮಾಡಿಸಿ ಬಿಡುತ್ತದೆ. ನನ್ನ ಮುಖದ ಮೇಲೆ ಥೇಟ್ ಅಪ್ಪನದೇ ಮೂಗು ತುಟಿಗಳಿಗೆ ಅವ್ವನದೇ ನಗು ಅವೇ ಚಿಕ್ಕ ಕಣ್ಣುಗಳು ಚಿಕ್ಕಪ್ಪನಿಗಿರುವಂತೆಯೇ ಮಾತಿನಲಿ ಅಜ್ಜನದೇ ಓಘ ನಡೆದರೆ ಸೋದರಮಾವನ ಗತ್ತು ನನ್ನದೇನಿದೆ? ಎನ್ನುವ ಕವಿತೆಯ ಸಾಲುಗಳು ಈ ಕವಿಯ ಭಿನ್ನ ಧ್ವನಿಗೆ ಪುರಾವೆಯಾಗಿವೆ. ಈ ನಡುವೆ ಅದರಲ್ಲೂ ಈ ಎಫ್ಬಿಯಲ್ಲಿ ಪದ್ಯಗಳೆಂದು ಪ್ರಕಟವಾಗುವ ೯೦% ಪದ್ಯಗಳು ಸ್ವಕ್ಕೆ ಉರುಳು ಹಾಕಿಕೊಳ್ಳುತ್ತಿರುವಾಗ ಈ ಕವಿ ತನ್ನ ಅಸ್ತಿತ್ವ ಅನ್ಯರ ಪ್ರಭಾವದಿಂದ ಆದುದು ಎಂಬ ಪ್ರಜ್ಞೆಯಿಂದ ಆದರೆ ಅದನ್ನು ನೆಗೆಟೀವ್ ಅರ್ಥದಲ್ಲಿ ಹೇಳದೇ ಇರುವುದು ಭಿನ್ನತೆ ಅಲ್ಲದೇ ಮತ್ತಿನ್ನೇನು? ಹುಟ್ಟು ಪಡೆವ ಜೀವಕ್ಕೆ ನೀಗದ ಪರಿಪಾಟಲು ಜೀವ ಪಡೆವ ಕವಿತೆಗೆ ಸಾವಿರ ಸವಾಲು ಎಂದು ಸ್ಪಷ್ಟವಾಗಿ ಅರಿತಿರುವ ಈ ಕವಿಗೆ ಕವಿತೆಯ ರಚನೆ ಸುಲಭದ್ದೇನೂ ಅಲ್ಲ ಎನ್ನುವ ಸತ್ಯ ಗೊತ್ತಿದೆ. ಇದು ಕೂಡ ಅಪರೂಪವೇ. ಸದ್ಯದ ಬಹುತೇಕರು ಪದವೊಂದಕ್ಕೆ ಇರುವ ಅರ್ಥವನ್ನೇ ಅರಿಯದೇ ಚಡಪಡಿಸುತ್ತ ಇರುವಾಗ ಚನ್ನಬಸವ ಆಸ್ಪರಿಯವರು ತಮ್ಮನ್ನು ತಾವೇ ನಿಕಷಕ್ಕೆ ಒಡ್ಡಿ ಕೊಳ್ಳುತ್ತ ಪದ್ಯರಚನೆಯ ಸಂದರ್ಭ ಮತ್ತು ಸಮಯ ಅರಿತವರೂ ಹೌದೆಂದು ಇದು ಪುರಾವೆ ನೀಡಿದೆ. ಬುದ್ಧ ಕತ್ತಲು ಮತ್ತು ದೀಪಗಳ ಜೊತೆಗೆ ತನ್ನ ಒಳಗನ್ನು ತೋಯಿಸಿದ ಕುರಿತೇ ಪದ್ಯವನ್ನಾಗಿ ಬೆಳಸುವ ಆಸ್ಪರಿ ಒಮ್ಮೊಮ್ಮೆ ತೀವ್ರ ವಿಷಾದದ ಸುಳಿಗೂ ಸಿಕ್ಕಿ ಬೀಳುತ್ತಾರೆ ಮತ್ತು ಆ ಅಂಥ ಸುಳಿಯಿಂದ ಹೊರಬರುವುದು ದುಸ್ತರ ಎನ್ನುತ್ತಲೇ ಕಡು ಕಷ್ಟದ ಬದುಕು ತೋರುಗಾಣಿಸಿದ ಬೆಳಕ ದಾರಿಯನ್ನೂ ಸ್ಮರಿಸುತ್ತಾರೆ. ತನ್ನೊಳಗನ್ನೇ ಶೋಧಿಸದೇ ಅನ್ಯರ ಹುಳುಕನ್ನು ಎತ್ತಿಯಾಡುವ ಕಾಲದಲ್ಲಿ ಇದು ಭಿನ್ನ. ಆದರೂ ಅಗತ್ಯಕ್ಕಿಂತ ಹೆಚ್ಚು ವಿಸ್ತರಿಸುವ ಇವರ ಕವಿತೆಗಳಿಗೆ ಸಂಕಲನಕ್ಕೆ (ಕತ್ತರಿ ಪ್ರಯೋಗ) ಅಂದರೆ ಅಗತ್ಯಕ್ಕಿಂತ ಉದ್ದವಾದುದನ್ನು ಹ್ರಸ್ವಗೊಳಿಸುವ ಅಗತ್ಯತೆ ಇದ್ದೇ ಇದೆ. ನಿಜದ ಕವಿತೆಗಳು ಈ ಕವಿಯ ಒಳಗೇ ಉಳಿದಿವೆ. ಪ್ರಾಯಶಃ ಕಂಡ ಕಷ್ಟಗಳು ಉಂಡ ಸಂಕಟಗಳಾಚೆಯೂ ಇರುವ ಸಂತಸವನ್ನೂ ಇವರು ಹೊರತಾರದೇ ಇದ್ದರೆ ಬರಿಯ ವಿಷಾದದಲ್ಲೇ ಈ ಕವಿತೆಗಳು ನರಳಬಹುದು. ಬದುಕೆಂದರೆ ವಿಷಾದ ಸಂತಸ ಭರವಸೆ ಆಸೆ ನಿರಾಸೆಗಳ ಒಟ್ಟು ಮೊತ್ತ. ಬರಿಯ ದುಃಖಾಗ್ನಿಯೇ ಅಲ್ಲದೆ ಸಂತಸದ ಸಂಭ್ರಮದ ಘಳಿಗೆಯ ದಾಖಲೆಯಾಗಿಯೂ ಇವರ ಕವಿತೆಗಳು ಹೊಮ್ಮಲೇ ಬೇಕಾದ ಅನಿವಾರ್ಯವನ್ನು ಈ ಕವಿ ಅರಿಯುವ ಅಗತ್ಯತೆ ಇದೆ. ಚನ್ನಬಸವ ಆಸ್ಪರಿಯವರ ಉದ್ದೇಶಿತ ಸಂಕಲನ ಸದ್ಯವೇ ಹೊರ ಬರಲಿದೆಯಂತೆ. ಅದಕ್ಕೂ ಮೊದಲು ಅವರು ಅದರ ಹಸ್ತಪ್ರತಿಯನ್ನು ಪುಸ್ತಕ ಪ್ರಾಧಿಕಾರವು ಪ್ರತಿವರ್ಷ ಕೊಡುವ ಸಹಾಯಧನದ ಯೋಜನೆಯಲ್ಲಿ ಪ್ರಕಟಿಸಿದರೆ ಅವರ ಹೆಸರು ಕರ್ನಾಟಕದ ಉದ್ದಗಲಕ್ಕೂ ಗೊತ್ತಾಗುತ್ತದೆ ಎನ್ನುವ ಆಶಯದೊಂದಿಗೆ ಅವರ ಪದ್ಯಗಳನ್ನು ಕುರಿತ ಈ ಟಿಪ್ಪಣಿಗೆ ಅವರದೇ ಐದು ಕವಿತೆಗಳನ್ನು ಸೇರಿಸಿ ಮುಗಿಸುತ್ತೇನೆ. ೧. ಶಬ್ದ ಸಂತೆಯಲಿ ಮೌನದ ಮೆರವಣಿಗೆ ಕೆಲವು ಶಬ್ದಗಳು ತುಂಬ ವಿಚಿತ್ರ ಹೊರಬಂದು ಮಾತಾಗುವುದೇ ಇಲ್ಲ ! ಕೇವಲ ತುಟಿ ಕಿನಾರೆಗಳ ಅರಳಿಸಿಯೋ ಮೂಗು ಮುರಿದೋ ಹಣೆಗೆರೆಗಳ ಬರೆದೋ ಕೆನ್ನೆಗುಳಿಗಳಲಿ ನರ್ತಿಸಿಯೋ ಕಣ್ ಹುಬ್ಬು ಕೊಂಕಿಸಿಯೋ ಇಲ್ಲಾ ಕಣ್ಣು ತಿರುವಿಯೋ ಹೊತ್ತು ತಂದ ಸಂದೇಶ ರವಾನಿಸಿಬಿಡುತ್ತವೆ ಅಖಂಡ ಮೌನದಲಿ… ನಿರುಮ್ಮಳ ನಿದ್ದೆಗೆ ಹಿತದಿಂಬು ಕೆಲವು ಸಲ ಮತ್ತೆ ಹಲವು ಸಲ ಬೂದಿ ಮುಚ್ಚಿದ ಕೆಂಡ ಕೆಲವೊಮ್ಮೆ ಶಬ್ದಗಳು ಅಬ್ಬರಿಸುತ್ತವೆ ಮಾತು ಸೋಲುತ್ತದೆ ಆದರೂ ಉದುರುತ್ತಲೇ ಹೋಗುತ್ತವೆ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಹಂಕಾರದ ಕಣ್ಣಾಮುಚ್ಚಾಲೆಯಲಿ ಮೈಮರೆವ ಮನಸಿಗೆ ಚಾಟಿ ಏಟು ಯಾವ ಲೆಕ್ಕ? ಒಮ್ಮೊಮ್ಮೆ ಶಬ್ದಗಳು ಜಾರುತ್ತವೆ ನಾಲಗೆಯಿಂದ ಚಿಮ್ಮುತ್ತವೆ ಬಾಯಿಂದ ತಿವಿಯುತ್ತವೆ ಒಲವ ಹನಿಗೆ ಬಾಯ್ದೆರೆದ ದೈನೇಸಿ ಎದೆಯನು ಇಂಥ ಶಬ್ದಗಳ ಅನಾಯಾಸವಾಗಿ ಹಡೆದು ಧ್ವನಿಬಟ್ಟೆ ತೊಡಿಸಿ ಸಿಂಗರಿಸಿ ಮಾತು ಎಂದು ಹೆಸರಿಟ್ಟು ತೇಲಿಬಿಟ್ಟ ಮನಸಿಗೆ ವೇಗ ರಭಸ ದಾರಿ ಗುರಿ ಯೇ ಗೊತ್ತಿಲ್ಲದಿರುವಾಗ ಅವು ಹಾದರಕ್ಕೆ ಹುಟ್ಟಿದ ಮಕ್ಕಳಲ್ಲದೆ ಮತ್ತೇನು? ಇನ್ನೂ ಕೆಲ ಶಬ್ದಗಳು ಮೈಮುರಿಯುತ್ತವೆ ಆಕಳಿಸುತ್ತವೆ ತೂಕಡಿಸುತ್ತವೆ ಜೋಲಿ ಹೊಡೆಯುತ್ತಲೇ ನಾಲಿಗೆ ಪಲ್ಲಂಗದಲ್ಲಿ ಪವಡಿಸುತ್ತವೆ ಮತ್ತೆ ಕೆಲವು ಗಂಟಲ ಕಣಿವೆಯಲ್ಲಿ ಜಾರಿ ಬೀಳುತ್ತವೆ ತುಟಿಸರಹದ್ದುಗಳಲಿ ಸಿಕ್ಕಿ ನರಳುತ್ತವೆ ಹಲ್ಲುಗಂಬಗಳಿಗೆ ನೇಣು ಬಿಗಿದುಕೊಳ್ಳುತ್ತವೆ ಮಾತಾಗಿ ಹೆಗಲು ನೀಡದ ಮೌನವಾಗಿ ತಬ್ಬಿ ರಮಿಸದ ಎಡಬಿಡಂಗಿ ಶಬ್ದಗಳ ಹಡೆದ ಮನಸಿಗೆ ಗೊತ್ತಾಗಲಿಲ್ಲವೇ ಗಂಡಾಗಿ ಗುಡುಗದ ಹೆಣ್ಣಾಗಿ ಮರುಗದ ತನ್ನ ಸಂತಾನ ಕೇವಲ ಚಟದ ಫಲವೆಂದು? ಹೀಗೂ ಉಂಟು- ಶಬ್ದಗಳನ್ನು ಒದ್ದು ಹೋದ ಬುದ್ಧ ಲೋಕದ ಮಾತಾದ ಬಹುಶಃ ಈ ಲೋಕದ ಪಾಪಗಳೆಲ್ಲ ತೀರಿದ ದಿನ ಅಥವಾ ಮಾಡಿದ ಮಾಡುವ ಪ್ರತಿ ಪಾಪಕ್ಕೂ ವಿಮೋಚನಾ ಪತ್ರ ದೊರೆತೀತೆಂಬ ಭರವಸೆ ದಕ್ಕಿದ ದಿನ ಅಥವಾ ಪಾಪ ಪುಣ್ಯಗಳಾಚೆಯ ನಿರ್ವಾತದಲ್ಲಿ ನೆಲೆಯಾದ ದಿನ ಉದುರಬಹುದು ಶಬ್ದಗಳು ನಿಶ್ಯಬ್ದದ ಕೂಸುಗಳಾಗಿ ಮಾರ್ದನಿಸಬಹುದು ಆತ್ಮಗರ್ಭದಿಂದ ಶಬ್ದಕೆ ಅಂಟದ ಮಾತು ನಿಶ್ಯಬ್ದ ಮೀರಿದ ಮೌನ ದಾಟಬಹುದು ಅಂತಃಕರಣದ ನಾವೆ ಎದೆಯಿಂದ ಎದೆಗೆ -ಚನ್ನಬಸವ ಆಸ್ಪರಿ ೨.ಮುಕ್ತಿ ಮಾಯೆ ಕವಿತೆ ಒಡಲಿಂದ ಹಠಾತ್ತನೆ ಕಳಚಿದ ಅನಾಥ ಸಾಲು ಭಾವಕ್ಕೆ ಭಾರವೇ? ಮುಕ್ತಿ ಕವಿತೆಗೋ ದೈನೇಸಿ ಪದಗಳಿಗೋ ! ಟೊಂಗೆ ತೋಳಿಂದ ಹಗುರ ಕುಸಿದ ಹಣ್ಣೆಲೆ ಮರಬಸಿರಿಗೆ ಭಾರವೇ? ಮುಕ್ತಿ ಟೊಂಗೆಗೋ ಹಣ್ಣೆಲೆಯ ಜೀವಕೋ ! ಗಾಳಿ ಉಸಿರಿಂದ ಸರಕ್ಕನೆ ಸೂತ್ರ ಹರಿದ ಗಾಳಿಪಟ ದಾರಕ್ಕೆ ಭಾರವೇ? ಮುಕ್ತಿ ಆಕಾಶಕ್ಕೋ ತಲೆಮರೆಸಿಕೊಂಡ ಗಾಳಿಪಟಕ್ಕೋ ! ಬಾನಗೊಂಚಲಿಂದ ಧುತ್ತನೆ ಉದುರಿದ ನಕ್ಷತ್ರ ಬೆಳಕಿಗೆ ಭಾರವೇ? ಮುಕ್ತಿ ಬೆಂಕಿಗೋ ಕುದಿಕುದಿದು ಆರಿದ ನಕ್ಷತ್ರದೊಡಲಿಗೋ ! ಬೋಧಿಯಿಂದ ಬುದ್ಧನಿಗೆ ಜ್ಞಾನವೋ ಬುದ್ಧನಿಂದ ಬೋಧಿಗೆ ಮುಕ್ತಿಯೋ ! ಹಸನು ದಾರಿಯಲಿ ನಡೆದವನದಿರಲಿ ನಡೆದ ದಾರಿಯನೇ ಹಸನುಗೊಳಿಸಿದವನ ಪಾದ ಧೂಳಿಗೂ ಮುಕ್ತಿ -ಚನ್ನಬಸವ ಆಸ್ಪರಿ ೩. ಅವ್ವ ಎಂಬ ರೇಖಾಚಿತ್ರ ಅವ್ವ ಆಡಿ ಬಂದ ನನ್ನ ಅಂಗಾಲ ತೊಳೆಯಲಿಲ್ಲ ಕೇಕು ಕತ್ತರಿಸಿ ಮೋಂಬತ್ತಿ ಆರಿಸುವ ನನ್ನ ಸಂಭ್ರಮಕ್ಕೆ ಸಾಕ್ಷಿಯಾಗಲಿಲ್ಲ ಅಪ್ಪ ಮನೆ ಕಟ್ಟಲಿಲ್ಲ ಅವ್ವ ಮನೆಯ ಗೌಡತಿ ಆಗಲಿಲ್ಲ ಗುಳೇ ಹೊರಟ ಅಪ್ಪನ ಹಿಂದೆ ಗಂಟು ಮೂಟೆ ಕಟ್ಟಿ ಊರೂರು ಅಲೆದಳು ಮರುಮಾತನಾಡದೆ ಸಾಕಿದ ನಾಯಿ ಯಜಮಾನನ್ನು ಹಿಂಬಾಲಿಸಿದಂತೆ ಸುಮ್ಮನೆ ಬಾಲ ಅಲ್ಲಾಡಿಸಿಕೊಂಡು ಅಪ್ಪನಿಗೆ ಬಣ್ಣ ಬಣ್ಣದ ನಿಲುವಂಗಿ ತೊಡಿಸಿ ತಾನೇ ಬಣ್ಣದ ಪತಂಗವಾಗುತ್ತಿದ್ದ ಅವ್ವನ ಮಾಸಿದ ಸೀರೆ ಸೆರಗಿನ ತುಂಬ ಹಳಸಿದೆದೆಯ ಕನಸುಗಳು ಉಳಿದರ್ಧ ಬದುಕು ನೀರ ಮೇಲೆ ತೇಲಿ ಬಿಟ್ಟ ಬಾಗಿನಕ್ಕೆ ಮಾಡಿದ ಸಿಂಗಾರ ಅವ್ವನೂ ಕಸೂತಿ ಹಾಕುತ್ತಿದ್ದಳು ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ ಪುಸ್ತಕದಲ್ಲಿಟ್ಟ ನವಿಲುಗರಿ ಇನ್ನೂ ಮರಿ ಹಾಕಿಲ್ಲ ಪಾಟೀಚೀಲದ ಹೊಲಿಗೆಗಂಟಿದ ಅವ್ವನ ಬೆರಳ ತುದಿಯ ಬಿಸಿ ಇನ್ನೂ ಆರಿಲ್ಲ ನಂಜನೇ ಬಳುವಳಿಯಾಗಿ ಕೊಟ್ಟವರ ಅಳುವ ಕೊರಳಿಗೂ ಸಾಂತ್ವನದ ಹೆಗಲೊಡ್ಡಿದ ಅವ್ವ ಶಿಲುಬೆಗಂಟಿದ ಹನಿ ಹನಿ ರಕ್ತದಲೂ ಅಂತಃಕರಣದ ಕಡುಲಿಕ್ಕಿಸಿದ ಏಸು ಅವರಿವರ ಬದುಕು ಸಿಂಗರಿಸುತ್ತಲೇ ಕಾಲನ ಪಾದದಡಿ ನರಳಿದ ಪಾಪದ ಹೂ ವಿಚಿತ್ರ ನರಳಿಕೆಗಳನುಂಡು ತೇಗುವ ವಾರ್ಡಿನ ಬಿಳಿ ಗೋಡೆಗಳ ಮಧ್ಯೆ
ಅಂಕಣ ಬರಹ ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಕವಿತೆಯ ಹೊಳಹುಗಾಣುತ್ತದೆ ಹೇಮಲತಾ ವಸ್ತ್ರದ. ಪರಿಚಯ: ಎಂಎ, ಎಂಇಡಿ, ಪಿಜಿ ಡಿಪ್ಲೋಮಾ ಇನ್ ಇಂಗ್ಲಿಷ್. ವಿಜಯಪುರ ಗ್ರಾಮೀಣ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದಾರೆ. ಊರು: ಸಿಂದಗಿ. ಜಿಲ್ಲೆ: ವಿಜಯಪುರ. ಕೃತಿಗಳು: ಅವ್ವನಿಗೊಂದು ಪತ್ರ (ಕವನಸಂಕಲನ). ಪೃಥ್ವಿಯೊಡಲು(ಕಥಾಸಂಕಲನ)(ಅಚ್ಚಿನಲ್ಲಿದೆ). ಗಜಲ್ ಸಂಕಲನಅಚ್ಚಿನಲ್ಲಿದೆ. ಅಕ್ಕನಾಗಮ್ಮ (ನಾಟಕ)(ಅಚ್ಚಿನಲ್ಲಿ) ಶೈಕ್ಷಣಿಕ, ಸಾಹಿತ್ಯಕ ಲೇಖನಗಳು. ಮಕ್ಕಳ ಕಥೆಗಳು, ಕವನಗಳು. ಕ್ರೀಯಾಸಂಶೋದನೆ (ಬಾಲಕಾರ್ಮಿಕಪದ್ಧತಿ). ಗುಲ್ಬರ್ಗಾ ವಿಶ್ವವಿದ್ಯಾಲಯ ದ ಎಂಎ ಮೂರನೇ ಸೆಮ್ (ಆಧುನಿಕ ಕಾವ್ಯ ಸಂಗ್ರಹ-೨೦೧೨) ಗೆ ಕನ್ನಡಗಜಲ್ಗಳು, ಕವನಗಳು ಪಠ್ಯವಾಗಿವೆ. ಪ್ರಜಾವಾಣಿ, ಮಯೂರ, ವಿಜಯಕರ್ನಾಟಕ ಇತ್ಯಾದಿ ಪತ್ರಿಕೆಗಳಲ್ಲಿ ಕವನ, ಗಜಲುಗಳು ಮತ್ತು ಲೇಖನಗಳು ಪ್ರಕಟವಾಗಿವೆ. ಚಂದನ ದೂರದರ್ಶನದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಅಕ್ಕಮಹಾದೇವಿ ವಿ.ವಿ, ಗುಲ್ಬರ್ಗ ವಿ.ವಿ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಇತ್ಯಾದಿಗಳಲ್ಲಿ ಉಪನ್ಯಾಸ. ವಿಜಯಪುರ ಆಕಾಶವಾಣಿಯಲ್ಲಿ ಚಿಂತನಗಳ ಪ್ರಸಾರ. ಕಥೆ, ಕವನಗಳ ಪ್ರಸಾರವಾಗಿವೆ. ಸಂದ ಗೌರವಗಳು : ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ (2018). ಹಾಗೂ ಶಿಕ್ಷಣ ಕ್ಷೇತ್ರದ ‘ಗುರುಶ್ರೇಷ್ಠ ‘ ಪುರಸ್ಕಾರ.(2017) ಸಂದರ್ಶನ: ಧಮಿನಿಸಲ್ಪಟ್ಟ ಎಲ್ಲದಕ್ಕೂ ದನಿಯಾಗುವ ಹಂಬಲ ನನ್ನ ಕವಿತೆಗೆ ನೀವು ಕವಿತೆಗಳನ್ನು ಯಾಕೆ ಬರೆಯುವಿರಿ? ಬರೆದಾದ ಮೇಲಿನ ನನ್ನ ತುಡಿತ ಕಡಿಮೆಯಗುವುದಕ್ಕೆ. ಸಿಗುವ ತೃಪ್ತಿ, ಸಮಾಧಾನಕ್ಕೆ,. ಕಿಂಚಿತ್ ಆದರೂ ಸಮಾಜದ ಋಣ ತೀರಿಸಬಹುದು(ಭ್ರಮೆ) ಎಂಬುದಕ್ಕೆ. ಮುಖ್ಯವಾಗಿ ದಮನಿಸಲ್ಪಟ್ಟ ಎಲ್ಲದಕ್ಕೂsss ದನಿಯಾಗುವ ಹಂಬಲಕ್ಕೆ ಬರೆಯುತ್ತೇನೆ. ಕವಿತೆ ಹುಟ್ಟುವ ಕ್ಷಣ ಯಾವುದು? ಇಂಥಹದ್ದೆ ಕ್ಷಣ ಎನ್ನಲಾಗದು. ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಹೊಳಹುಗಾಣುತ್ತದೆ. ನಿಮ್ಮ ಕವಿತೆಗಳಲ್ಲಿ ಪದೇ ಪದೇ ಕಾಡುವ ವಿಷಯ ಯಾವುದು? ಕವಿತೆಗಳ ವಸ್ತು ಯಾವುದು? ಬದುಕಿನ ಎಲ್ಲ ಮೂರ್ತ ಮತ್ತು ಅಮೂರ್ತಗಳು. ಸ್ವಲ್ಪ ಹೆಚ್ಚು ಅನ್ನುವಂತಿರುವುದು ಸ್ತ್ರೀ ಸಂವೇದನೆಗಳ ಅಭಿವ್ಯಕ್ತಿ. ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆ, ನೋವಿಗೆ ತುತ್ತಾದ ಜೀವಗಳ ಕಣ್ಣೋಟ ತುಂಬ ಕಾಡುತ್ತವೆ. ಕವಿತೆಗಳಲ್ಲಿ ಬಾಲ್ಯ,ಹರೆಯ ಇಣುಕಿದೆಯಾ? ಇಣುಕಿದೆ. ಬಾಲ್ಯ ಮತ್ತು ಹರೆಯದ ಪ್ರಭಾವವೇ ಅಂತಹದ್ದು. ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ಕವಿಯಾಗಿ ಹೇಗೆ ಪ್ರತಿಕ್ರಿಯಿಸುವಿರಿ? ಸ್ವಾರ್ಥ, ದುರಾಸೆ ಮತ್ತು ನಿರ್ಲಜ್ಯ ರಾಜಕಾರಣವಿಂದು ವಿಜ್ರಂಭಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಪೂಜೆ ಯಾವತ್ತಿಗೂ ಅಪಾಯಕಾರಿಯೇ. ಇದರಿಂದ ದೋಷಗಳು ಕಾಣಿಸದೇ ಹೋಗುತ್ತವೆ. ರಾಷ್ಟ್ರದ ಬೆಳವಣಿಗೆಗಾಗಿ ಮೌಲ್ಯಯುತ ದೂರಾಲೋಚನೆಗಳಿರುವ ಯೋಜನೆಗಳು ಮತ್ತು ಪ್ರಾಮಾಣಿಕ ಪ್ರಯತ್ನದ ಕೊರತೆ ಕಾಣುತ್ತಿದೆ. ಬರಿ ಕಲ್ಯಾಣ ಯೋಜನೆಗಳಿಂದ ಬಲಿಷ್ಠ ರಾಷ್ಟ್ರ ಕಟ್ಟಲಾಗದು. ಪ್ರಸ್ತುತ ರಾಜಕೀಯ ವ್ಯವಸ್ಥೆಯೆ ಅಪಮೌಲ್ಯಗೊಂಡಿದೆ. ದೇವರು ಧರ್ಮದ ಬಗ್ಗೆ ನಿಮ್ಮ ನಿಲುವೇನು? ಶರಣ ಧರ್ಮ ನನ್ನದು. ಜಾತಿಯಲ್ಲಿ ನಂಬಿಕೆಯಿಲ್ಲ. ಮೂರ್ತ ಕಲ್ಪನೆಗಳಲ್ಲ ನನ್ನ ದೇವರು. ಮಾನವೀಯತೆಯ ಸಾಕಾರವನ್ನು ದೇವರೆನ್ನಬಹುದೇನೊ. ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಹೇಗಿದೆ? ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಪರವಾಗಿಲ್ಲ ಅನಿಸುವಂತಿದೆ ಅಷ್ಟೆ. ತಾರತಮ್ಯದ ಕಸ ತೆಗೆಯಬೇಕಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಕರಗಿದೆ. ಸಾಹಿತ್ಯದ ರಾಜಕೀಯದ ಬಗ್ಗೆ ನಿಮಗೆ ಏನನಿಸುತ್ತದೆ? ರಾಜಕಾರಣದಲ್ಲಿ ಸಾಹಿತ್ಯ ಇರಬೇಕೆ ವಿನಾ ಸಾಹಿತ್ಯದಲ್ಲಿ ರಾಜಕಾರಣವಿರಬಾರದು. ಸಾಹಿತಿ ಮಾತ್ರ ಮುನ್ನೆಲೆಗೆ ಬರುತ್ತಾನೆ. ಸಾಹಿತ್ಯ ದಿವಾಳಿಯಾಗುತ್ತದೆ. ಇಂದು ಸಾಹಿತ್ಯ ವಲಯದ ರಾಜಕಾರಣದ ಕುರಿತು ವಿಷಾದವಿದೆ. ದೇಶದ ಚಲನೆಯ ಬಗ್ಗೆ ನಿಮಗೇನನಿಸುತ್ತಿದೆ? ನಿಜಕ್ಕೂ ದೇಶದ ಚಲನೆ ಹಿಮ್ಮುಖವಾಗಿದೆ ಎನಿಸುತ್ತಿದೆ. ಬಂಡವಾಳಶಾಹಿ ಗಹಗಹಿಸುತ್ತಿದೆ. ಅಸಹಿಷ್ಣುತೆ ಎಲ್ಲ ವಲಯಗಳಲ್ಲಿ ಹೆಚ್ಚಾಗಿದೆ. ಇಂಥ ಮನಸ್ಥಿತಿ ದೇಶಕ್ಕೆ ಮಾರಕ. ಸಾಮಾನ್ಯರ ಬದುಕು ಅಸಹನೀಯವಾಗಿದೆ. ವ್ಯವಸ್ಥೆ ಹದಗೆಟ್ಟಿದೆ.ಅಶನ ವಸನಕ್ಕೂ ಪರದಾಡುವಂತಾಗಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಮನಸ್ಸುಗಳನ್ನು ಕಟ್ಟುವ ಕೃತಿ ರಚಿಸಬೇಕು ಎಂಬ ಕನಸಿದೆ. ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ನಿಮ್ಮ ಇಷ್ಟದ ಕವಿಗಳಾರು? ಕನ್ನಡದಲ್ಲಿ ಕವಿಯಾಗಿ ಜಿ ಎಸ್ ಎಸ್, ನಿಸಾರ್ ಅಹಮ್ಮದ ಅವರು ಇಷ್ಟ. ಸಾಹಿತಿಯಾಗಿ ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ತ್ರಿವೇಣಿ, ಕೊಡಗಿನ ಗೌರಮ್ಮ ಇಷ್ಟ. ಶರ್ಲಾಕ್ ಹೋಮ್, ಟಾಲ್ಸ್ಟಾಯ್, ಕೀಟ್ಸ್ ಇಷ್ಟ. ರವೀಂದ್ರನಾಥ ಟ್ಯಾಗೋರ, ಗಾಲಿಬ್, ರೂಮಿ, ಕಮಲಾದಾಸ ಅವರ ಸಾಹಿತ್ಯ ಹೆಚ್ಚು ಆಕರ್ಷಿಸುತ್ತದೆ. ನೀವು ಓದಿದ ಪುಸ್ತಕಗಳಾವವು? ಅಮೇರಿಕಾದ ಕಪ್ಪುಗುಲಾಮ ಫ್ರೆಡೆರಿಕ್ ಡಗ್ಲಾಸ್ ನ ಆತ್ಮಕಥೆ ಕಪ್ಪುಕುಲುಮೆ, ಅಮೃತ ನೆನಪುಗಳು ಮತ್ತು ಸಿಂಗಾರೆವ್ವ ಮತ್ತು ಅರಮನೆ ಇನ್ನೊಮ್ಮೆ ಓದಿದೆ. ನಿಮಗೆ ಇಷ್ಟದ ಕೆಲಸ ಯಾವುದು? ಕಲಿಸುವುದು ಮತ್ತು ಕೃಷಿಯಲ್ಲಿ ತೊಡಗುವುದು. ನಿಮ್ಮ ಇಷ್ಟದ ಸ್ಥಳಯಾವುದು ? ಸಮುದ್ರ ಮತ್ತು ಹೊಲದಲ್ಲಿರುವ ಪುಟ್ಟಮನೆ. ನಿಮ್ಮ ಇಷ್ಟದ ಸಿಮಿಮಾ ಯಾವುದು? ಬೆಟ್ಟದ ಜೀವ, ಕರಾಟೆ ಕಿಡ್ ಮರೆಯಲಾಗದ ಘಟನೆಯಾವುದು ? ಅವ್ವ ಮತ್ತು ಪತಿಯ ಸಾವು. ************************************************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಣ ಬರಹ ದಂಗೆಯ ದಿನಗಳುಇಂಗ್ಲಿಷ್ ಮೂಲ : ಮನೋಹರ ಮಳಗಾಂವ್‌ಕರ್ ಕನ್ನಡಕ್ಕೆ : ರವಿ ಬೆಳಗೆರೆಪ್ರ : ಭಾವನಾ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೮೫ಪುಟಗಳು : ೩೦೪ ಪ್ರಸಿದ್ಧ ಭಾರತೀಯ ಆಂಗ್ಲ ಲೇಖಕ ಮನೋಹರ ಮಳಗಾಂವ್‌ಕರ್ ಅವರ ಐತಿಹಾಸಿಕ ಕಾದಂಬರಿಯ ಅನುವಾದವಿದು. ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ ನಂತರ ಈಸ್ಟ್ ಇಂಡಿಯಾ ಕಂಪೆನಿಯು ವ್ಯಾಪಾರದ ಹೆಸರಿನಲ್ಲಿ ಭಾರತದ ಒಂದೊಂದೇ ರಾಜ್ಯಗಳನ್ನು ಕಬಳಿಸಿಯಾದ ಮೇಲೆ ಭಾರತೀಯರನ್ನು ಹಿಂಸಿಸ ತೊಡಗಿದಾಗ ಅವರ ವಿರುದ್ಧ ಸೇಡು ತೀರಿಸಿ ಅವರನ್ನು ಭಾರತದಿಂದ ಹೊಡೆದೋಡಿಸಲು ೧೮೫೭ರಲ್ಲಿ ನಡೆಸಿದ ಐತಿಹಾಸಿಕ ‘ಮೊದಲ ಸ್ವಾತಂತ್ರ್ಯ ಸಮರ’ದ ಸಂದರ್ಭದಲ್ಲಿ ಸಂಭವಿಸಿದ ಘಟನಾವಳಿಗಳ ಆರ್ದ್ರ ಚಿತ್ರಣ ಇಲ್ಲಿದೆ. ಸಮರದ ಪ್ರಮುಖ ರೂವಾರಿಯಾಗಿ ಕಾರ್ಯ ನಿರ್ವಹಿಸಿದ ನಾನಾ ಸಾಹೇಬನೇ ಇಡೀ ಕಾದಂಬರಿಯ ಕಥನ ಕ್ರಿಯೆಯ ನಿರೂಪಕನಾಗಿದ್ದಾನೆ. ಆಗ ಭಾರತದ ಬಹು ದೊಡ್ಡ ಭಾಗವನ್ನು ಆಳುತ್ತಿದ್ದ ಮರಾಠಾ ಸಾಮ್ರಾಜ್ಯದ ಎರಡನೇ ಪೇಶ್ವೆ ಬಾಜಿರಾಯನ ದತ್ತು ಪುತ್ರ ನಾನಾಸಾಹೇಬ ವಿಶಾಲ ಮನೋಭಾವದ ಸಂವೇದನಾಶೀಲ ವ್ಯಕ್ತಿ. ಇಂಗ್ಲಿಷ್ ವಿದ್ಯಾಭ್ಯಾಸ ಪಡೆದು ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಂಡ ನಾನಾಸಾಹೇಬನಿಗೆ ಬ್ರಿಟಿಷರು ಮತ್ತು ಭಾರತೀಯರ ನಡುವೆ ಸೌಹಾರ್ದಯುತ ಸಂಬಂಧ ನೆಲೆಗೊಳ್ಳಬೇಕೆಂಬ ಹಂಬಲ. ಆದರೆ ಅವನ ತಂದೆಯ ಕಾಲದಲ್ಲೇ ಅವರ ಮನೆತನಕ್ಕಿದ್ದ ಪೇಶ್ವೆಯೆಂಬ ಬಿರುದನ್ನೂ ವಿಶಾಲವಾದ ರಾಜ್ಯವನ್ನೂ ಕಸಿದುಕೊಂಡು ಅಂಥೋರವೆಂಬ ಚಿಕ್ಕ ಪ್ರದೇಶದ ಒಡೆತನವನ್ನು ಮಾತ್ರ ಬ್ರಿಟಿಷರು ಅವರಿಗೆ ಉಳಿಸಿಕೊಟ್ಟದ್ದು ನಾನಾಸಾಹೇಬನ ಅಸಮಾಧಾನಕ್ಕೆ ಕಾರಣವಾಗುತ್ತದೆ. ಇದು ಅವನ ಬದುಕನ್ನು ಬರಿಯ ಹೋರಾಟವನ್ನಾಗಿಸುತ್ತದೆ. ಈ ಕಾದಂಬರಿಯಲ್ಲಿ ಕೇವಲ ಐತಿಹಾಸಿಕ ಘಟನೆಗಳ ನಿರೂಪಣೆ ಮಾತ್ರವಲ್ಲದೆ ಹಲವು ಪ್ರಮುಖ ಪಾತ್ರಗಳ ಸೃಜನಶೀಲ ಚಿತ್ರಣವಿದೆ. ನಾನಾಸಾಹೇಬನ ಮನೋಭೂಮಿಕೆಯಲ್ಲಿ ನಡೆಯುವ ಎಲ್ಲ ವ್ಯಾಪಾರಗಳ ವಿವರಣೆಯಿದೆ. ದೇಶಭಕ್ತಿ ಮತ್ತು ಧಾರ್ಮಿಕ ದ್ವೇ಼ಷದ ಜ್ವಾಲೆಗಳಿಗಿಂತಲೂ ಮನುಷ್ಯ ಸಂಬಂಧಗಳನ್ನು ಅರ್ಥಪೂರ್ಣವಾಗಿ ಬೆಸೆಯುವುದೇ ಹೆಚ್ಚು ಮಹತ್ವದ ಕೆಲಸವೆಂಬುದನ್ನು ತನ್ನ ಮಾತು, ಯೋಚನೆ ಮತ್ತು ಕೃತಿಗಳ ಮೂಲಕ ತೋರಿಸಿ ಕೊಡುವ ನಾನಾಸಾಹೇಬ ಓರ್ವ ಆದರ್ಶ ವ್ಯಕ್ತಿಯಾಗಿ ನಮ್ಮ ಮುಂದೆ ಬಂದು ನಿಲ್ಲುತ್ತಾನೆ. ಆತನ ವ್ಯಕ್ತಿತ್ವದಲ್ಲಿ ಅಡಕವಾಗಿರುವ ಸದ್ಗುಣಗಳು ಮತ್ತು ಸದಾಚಾರಗಳು ನಮ್ಮ ಮೆಚ್ಚುಗೆಯನ್ನು ಪಡೆಯುತ್ತವೆ ಮಾತ್ರವಲ್ಲದೆ ರಾಜ ಮನೆತನದ ಅನೇಕರಲ್ಲಿರುವ ಲೈಂಗಿಕ ದೌರ್ಬಲ್ಯಗಳ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳುವ ನಾನಾಸಾಹೇಬನ ಕಥನವು ಒಂದು ಆತ್ಮ ನಿವೇದನೆಯಂತಿದೆ.ವಸಾಹತೀಕರಣದ ಕಾಲದಲ್ಲಿ ಭಾರತೀಯರು ಅನುಭವಿಸಿದ ಸಂಕಷ್ಟಗಳ ಯಥಾವತ್ತಾದ ಚಿತ್ರಣವೀಯುವ ಈ ಕಾದಂಬರಿ ದಾಖಲೆಯ ದೃಷ್ಟಿಯಿಂದ ಅತ್ಯಂತ ಪ್ರಸ್ತುತವಾಗಿದೆ. ರವಿ ಬೆಳಗೆರೆಯವರ ಅನುವಾದದ ಶೈಲಿಯು ಸುಂದರವೂ ಹೃದ್ಯವೂ ಆಗಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ದೇವರಮನೆಯಲ್ಲಿ ಕುರಿಂಜಿ (ಬಿಸಿಲನಾಡಾದ ಬಳ್ಳಾರಿ ಸೀಮೆಯಲ್ಲೂ ಕುರಿಂಜಿಯಿದೆ ಎಂಬ ಖಬರಿಲ್ಲದೆ,ಎರಡು ವರ್ಷದ ಹಿಂದೆ ಬರೆದ ಲೇಖನವಿದು.) ತರೀಕೆರೆ ಸೀಮೆಗೆ ಸೇರಿದ ಕೆಮ್ಮಣ್ಣುಗುಂಡಿ, ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕಲ್ಹತ್ತಿಗಿರಿ ಮುಂತಾದ ಶೋಲಾ ಬೆಟ್ಟಗಳಲ್ಲಿ ಬಾಲ್ಯದಿಂದಲೂ ಅಲೆದಿದ್ದೇನೆ. ಆಗ ಕಳೆಯಂತೆ ಬೆಳೆದಿರುತ್ತಿದ್ದ ಅನಾಮಿಕವಾದ ಹಸಿರು ಗಿಡಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಅವು 12 ವರ್ಷಕ್ಕೊಮ್ಮೆ ಹೂಬಿಟ್ಟು ಗಿರಿಕಣಿವೆಗಳನ್ನು ಹೂವಿನ ತೊಟ್ಟಿಲಾಗಿ ಮಾಡಬಲ್ಲ ಕುರಿಂಜಿಗಳೆಂದು ಗೊತ್ತಿರಲಿಲ್ಲ. ತಿಳಿಯುತ್ತ ಹೋದಂತೆ, ನಮ್ಮ ಆಸುಪಾಸಿನಲ್ಲೇ ಇರುವ ಅವನ್ನು ಗಮನಿಸದೆ ಹೋದೆನೆಲ್ಲ ಎಂದು ತುಸು ಲಜ್ಜೆಯಾಗಿತ್ತು. ಕಳೆದ ಋತುವಿನಲ್ಲಿ ಕುರಿಂಜಿಯ ಭೇಟಿ ಮಾಡಿದೆ. ಕುರಿಂಜಿಯ ಸಾಮಾನ್ಯವಾಗಿ ಪಶ್ಚಿಮಘಟ್ಟದ ಶೋಲಾಕಾಡುಗಳಲ್ಲಿ ಬೆಳೆಯುತ್ತದೆ. ಅದರಲ್ಲೂ ನಾಲ್ಕೈದು ಸಾವಿರ ಅಡಿ ಎತ್ತರದಲ್ಲಿ ಮತ್ತು ಧೋಧೋ ಮಳೆ ಬೀಳುವಲ್ಲಿ. ಶೋಲಾಕಾಡುಗಳ ವಿಶಿಷ್ಟ ಚಹರೆಯೆಂದರೆ-ಬೋಳಾಗಿ ಕಾಣುವ ಹುಲ್ಲುಬೆಳೆದ ಬೆಟ್ಟಗಳು; ಆಳವಾದ ಕಣಿವೆಗಳಲ್ಲಿ ಹಸಿರುಹಿಮ ಹೆಪ್ಪುಗಟ್ಟಿದಂತೆ ಕಾಡು; ಬೆಟ್ಟ-ಕಣಿವೆಗಳನ್ನು ಹೊಗೆಯಂತೆ ಬಂದು ತಬ್ಬಿಕೊಂಡು ಆಟವಾಡುವ ಮೋಡಗಳು; ಹರನ ಜಟೆಯಿಂದ ಜಿನುಗುವ ಗಂಗೆಯಂತೆ ಒಸರುವ ಜಲಧಾರೆಗಳು; ಮುಖದೋರದೆ ಹಚ್ಚನೆ ಕಂಬಳಿಯೊಳಗೆ ಅಡಗಿ ಕಣಿವೆಯೇ ಹಾಡುವಂತೆ ಮಾಡುವ ಹಕ್ಕಿಗಳು; ಅಪರೂಪಕ್ಕೆ ಹುಲ್ಲುಹಾಸಿನ ನೆತ್ತಿಗಳ ಮೇಲೆ ಕಾಣುವ ಕಾಡುಕೋಣ, ಕಾಡುಕುರಿ, ಕಡವೆ, ಜಿಂಕೆಗಳು; ಎಂದೂ ಕಾಣಿಸದ ಹುಲಿ.ಇಂತಹ ಪರಿಸರದಲ್ಲಿ ವಾಸಿಸುವ ಕುರಿಂಜಿ, ನೋಡಲು ಮೊಳಕಾಲೆತ್ತರದ ಸಾಧಾರಣ ಗಿಡ; ಕಪ್ಪುಹಸುರಿನ ದಪ್ಪನೆಯ ಎಲೆಗಳಿಗೆ ಹಸ್ತರೇಖೆಯಂತೆ ಎದ್ದುಕಾಣುವ ಗೀರುನರ; ಚಳಿಗೆದ್ದ ನವಿರಿನಂತೆ ಸೂಕ್ಷ್ಮವಾದ ಸುಂಕು. ಅಂಚಿನಲ್ಲಿ ಗರಗಸದ ಹಲ್ಲಿನಂತೆ ಕಚ್ಚುಗಳು. ಫರ್ನ್ ಹಾಗೂ ಹುಲ್ಲಿನ ಜತೆ ಬೆರೆತು ಬೆಳೆಯುವ ಇದು, ಹೂವಿಲ್ಲದ ದಿನಗಳಲ್ಲಿ ಯಾವ ಆಸಕ್ತಿಯನ್ನೂ ಕೆರಳಿಸುವುದಿಲ್ಲ. ಗೊರಟೆಯಂತೆ ಕಾಣುವ ಇದರ ಹೂ ಕೂಡ ಬಹಳ ಸುಂದರವಲ್ಲ. ಬಹುಶಃ ಹೂಬಿಡಲು ತೆಗೆದುಕೊಳ್ಳುವ ದೀರ್ಘಕಾಲ ಮತ್ತು ಹೂತಳೆದ ಕಾಲಕ್ಕೆ ಕಣಿವೆಗಳನ್ನೆ ನೀಲಿಯಾಗಿಸುವ ಶಕ್ತಿಯಿಂದ ಅದು ಖ್ಯಾತೆ. ಉದಕಮಂಡಲದ ಬೆಟ್ಟಗಳಿಗೆ ‘ನೀಲಗಿರಿ’ ಹೆಸರು ಬರಲು ಕುರಿಂಜಿಯೇ ಕಾರಣ. ನೀಲದ ಜತೆಗೆ ತಿಳಿಗೆಂಪು ಹಾಗೂ ಮಾಸಲುಬಿಳಿ ಕುರುಂಜಿಯೂ ಇವೆ. ಮಲೆನಾಡಿಗರಾದ ಕಲ್ಕುಳಿ ಹೆಗ್ಗಡೆಯವರ ಪ್ರಕಾರ, ಕುರಿಂಜಿ ಜಾತಿಗೆ ಸಮೀಪವಾದ ಗುರುಗಿ ಸಹ ಐದಾರು ವರ್ಷಕ್ಕೊಮ್ಮೆ ಹೂಬಿಡುತ್ತದೆ. ವ್ಯತ್ಯಾಸವೆಂದರೆ, ಕುರಿಂಜಿ ಬೆಟ್ಟದ ಬಯಲಲ್ಲಿದ್ದರೆ, ಗುರುಗಿ ಕಾಡಂಚಿನ ನೆರಳಲ್ಲಿ ಬೆಳೆಯುತ್ತದೆ. ಕುರಿಂಜಿ ಕೆಮ್ಮಣ್ಣುಗುಂಡಿ, ಬಾಬಾಬುಡನ್‍ಗಿರಿ, ಕುದುರೆಮುಖ, ಕೊಡಚಾದ್ರಿ, ದೇವರಮನೆ, ಕುಮಾರಪರ್ವತಗಳ ಶೋಲಾಗಳಲ್ಲಿ ಚದುರಿಕೊಂಡಿದೆ. ಕುದುರೆಮುಖದ ಬಳಿ ಕುರಿಂಜಿ ಎಂಬ ಬೆಟ್ಟವೇ ಇದೆ. ಕುರಿಂಜಿಗೆ ಕನ್ನಡದಲ್ಲಿ ಹಾರ್ಲೆ ಎನ್ನುವರು. ಇದರ ನಿಜ ವೈಭವ ತಮಿಳುನಾಡಿನ ಉದಕಮಂಡಲ, ಪಳನಿ, ಕೊಡೈಕೆನಾಲ್, ಏರ್ಕಾಡು ಹಾಗೂ ಕೇರಳದ ಮುನ್ನಾರ್‍ಗಳಲ್ಲಿದೆ. ಅಲ್ಲಿ ಇಡೀ ಬೆಟ್ಟಕಂದರಗಳ ಮೇಲೆ ರಂಗಿನ ಚಾದರವಾಗಿ ಹಬ್ಬುವ ಕುರುಂಜಿ ತನ್ನ ಸರ್ವಾಧಿಕಾರ ಸ್ಥಾಪಿಸುತ್ತದೆ; ಹಿಮಾಲಯದ ಹೂಕಣಿವೆಗಳ ಚೆಲುವನ್ನು ನೆನಪಿಸುತ್ತದೆ. ನಾನು ಕುರಿಂಜಿ ಕಾಣಲು ನನಗೆ ಅತಿಪರಿಚಿತವಾಗಿರುವ ಬಾಬಾಬುಡನಗಿರಿ ಶ್ರೇಣಿಯನ್ನು ಬಿಟ್ಟು, ಮೂಡಿಗೆರೆ ಸಮೀಪದ ದೇವರಮನೆಯನ್ನು ಆರಿಸಿಕೊಂಡೆ. ದೇವರಮನೆ ಕೆಳಗಿನ ಬೆಟ್ಟಗೆರೆಯಲ್ಲಿರುವ ಕಿರಿಯಗೆಳೆಯ ಸಂಪತ್, ‘ಹೂಬಿಟ್ಟಿವೆ ಬನ್ನಿ. ಆದರೆ ಕಾಡಾನೆಗಳ ಕಾಟ’ ಎಂದು ಎಚ್ಚರಿಕೆ ಸಹಿತವಾದ ಆಹ್ವಾನ ಕೊಟ್ಟರು. ಕ್ಯಾಮೆರಾಧಾರಿ ಸೋದರ ಕಲೀಮನೊಡನೆ ಬೆಟ್ಟಗೆರೆಗೆ ಹೋದೆ. ಸಂಪತ್ ಮನೆ ಅವರ ಪುಟ್ಟ ಕಾಫಿತೋಟದಲ್ಲಿದೆ. ಮನೆಯ ಸುತ್ತಮುತ್ತವಿದ್ದ ಮರ ಗಿಡಗಳಿಗೆ ಶೋಲಾ ಪರಿಸರದ ನೂರಾರು ಬಗೆಯ ಹಕ್ಕಿಗಳು ಬಂದುಹೋಗುತ್ತಿದ್ದವು. ಈ ಹಾರುವ ಹೂಗಳನ್ನು ಕಂಡು ಕುರುಂಜಿಯನ್ನು ಮರೆಯುವ ಲಕ್ಷಣ ತೋರಿಸುತ್ತಿದ್ದ ಪಕ್ಷಿಪ್ರಿಯ ತಮ್ಮನನ್ನು ಉಪಾಯವಾಗಿ ಎಬ್ಬಿಸಿಕೊಂಡು ದೇವರಮನೆಗೆ ಹೊರಟೆವು.ದೇವರಮನೆ- ಕರ್ನಾಟಕದಲ್ಲಿ ಹಾಯುವ ಪಶ್ಚಿಮಘಟ್ಟಗಳ ಸಾಲಿನ ಮೋಹಕ ಪರ್ವತ ಶ್ರೇಣಿಗಳಲ್ಲಿ ಒಂದು. ಹಚ್ಚನೆಯ ಹಚ್ಚಡ ಹೊದ್ದ ಪರ್ವತ-ಕಣಿವೆ; ಅವಕ್ಕೆ ಮನಬಂದಾಗ ಮುಸುಕುವ ಹೊಗೆಮಂಜಿನ ಅಪ್ಪುಗೆ. ಇದು ಭೈರವಾರಾಧನೆಯ ಕ್ಷೇತ್ರ ಕೂಡ. ‘ದೇವರ’ ವಿಶೇಷಣ ಅಂಟಿಸಿಕೊಡಿರುವ ಹಳ್ಳಿ, ಕಣಿವೆ, ಗುಡ್ಡ, ಕಾಡು, ಕೆರೆಗಳು ಸಾಮಾನ್ಯವಾಗಿ ಭೈರವಾರಾಧನೆಗೆ ಸಂಬಂಧಿಸಿದವು. ಅಲ್ಲಿರುವ ಭೈರವ ಗುಡಿಯನ್ನೂ ರುದ್ರಭೀಷಣ ಭಂಗಿಯ ಮೂರ್ತಿಶಿಲ್ಪಗಳನ್ನೂ ಕಂಡರೆ, ಹಿಂದೆ ಇದೊಂದು ನರಬಲಿ ಮುಂತಾಗಿ ತಾಂತ್ರಿಕ ನಿಗೂಢಾಚರಣೆ ನಡೆಯುತ್ತಿದ್ದ ಸ್ಥಳವಾಗಿತ್ತು ಎಂದು ಭಾಸವಾಗುತ್ತದೆ. ಪುರಾವೆಗೆಂಬಂತೆ ಅಲ್ಲೊಂದು ನರಬಲಿ ಫಲಕವೂ ಇದೆ.ಬೆಟ್ಟಗೆರೆಯಿಂದ ದೇವರಮನೆಗೆ ಏರುಹಾದಿ. ತೆಳಗೆ ಕಣಿವೆಯಾಳದಲ್ಲಿ ಕಾಣುವ ಒಂದು ಹಳ್ಳಿಯ ಹೆಸರು ಕೇಳಿ ಖುಶಿಯಾಯಿತು: ‘ಕೋಗಿಲೆ’! ಹಾದಿಯುದ್ದಕ್ಕೂ ಚಿಕ್ಕಚಿಕ್ಕ ಬೆಟ್ಟಗಳು. ಅವುಗಳ ತುಂಬ ಹೊಲದಲ್ಲಿ ಪೈರು ಬೆಳೆದಂತೆ ಕುರುಂಜಿ ಗಿಡ. ಕುರುಂಜಿ ಕನಕಾಂಬರದಂತೆ ಮುಚ್ಚಿದ ಮಗುವಿನ ಮುಷ್ಠಿಯಂತಹ ಪುಟ್ಟತೆನೆಯಲ್ಲಿ ಹೂಬಿಡುತ್ತ ಬರುತ್ತದೆ. ನಾವು ಹೋದಾಗ ಹೂವೈಭವ ಮುಗಿಯುತ್ತಿತ್ತು. ಕೂಲಿಗೆ ಹೋಗುವ ಹೆಂಗಸರು ರಸ್ತೆಯಲ್ಲಿ ನಡೆವಾಗ ಕೈಗೆ ಸಿಕ್ಕ ಬೇಲಿಹೂವನ್ನು ತುರುಬಿಗೆ ಸಿಕ್ಕಿಸಿಕೊಳ್ಳುವಂತೆ, ತೆನೆಯ ತುದಿಯಲ್ಲಿ ಕೆಲವಷ್ಟೆ ಉಳಿದಿದ್ದವು. ಸ್ಥಳೀಯರಿಗೆ `ಹಾರ್ಲೆ’ ಎಂಟು ಹತ್ತು ಹನ್ನೆರಡು ವರ್ಷಕ್ಕೊಮ್ಮೆ ಹೂಬಿಡುವುದು ತಿಳಿದಿದೆ. ಅದನ್ನೊಂದು ವಿಶೇಷವೆಂದು ಅವರು ಭಾವಿಸಿಲ್ಲ. ಅದನ್ನು ದನ ತಿಂದರೆ ಉಚ್ಚಿಕೊಳ್ಳುತ್ತವೆ ಎಂಬುದನ್ನು ಬಲ್ಲರು. ಮಲೆನಾಡ ಜಾನಪದದಲ್ಲೂ ಕುರಿಂಜಿಯ ಉಲ್ಲೇಖ ಕಾಣಲಿಲ್ಲ. ಪದ್ಮಾ ಶ್ರೀರಾಮ್ ಅವರು ಬರೆದ ‘ನೀಲಮೊಗದ ಚೆಲುವೆ’ಯಂತಹ ಕೆಲವು ಲೇಖನಗಳನ್ನು ಬಿಟ್ಟರೆ, ಇದರ ಮೇಲೆ ಹೆಚ್ಚಿನ ಬರೆಹಗಳೂ ಇದ್ದಂತಿಲ್ಲ. ಬಿ.ಜಿ.ಎಲ್. ಸ್ವಾಮಿಯವರ ‘ಹಸಿರುಹೊನ್ನು’ ಕೂಡ ಕುರಿಂಜಿಯ ಪ್ರಸ್ತಾಪಿಸುವುದಿಲ್ಲ. ಪಶ್ಚಿಮಘಟ್ಟಗಳಲ್ಲಿ ಜೀವಮಾನವೆಲ್ಲ ಕಳೆದ ತೇಜಸ್ವಿಯವರಿಗೂ ಕುರಿಂಜಿ ಕಾಡಿಲ್ಲ. ಬಹುಶಃ ಪ್ರಾಣಿ ಹಕ್ಕಿಗಳ ಮೇಲೆ ಅವರಿಗಿದ್ದಷ್ಟು ಕುತೂಹಲ ಸಸ್ಯಗಳ ಬಗ್ಗೆ ಇರಲಿಲ್ಲವೆ?ಕನ್ನಡ ಸಂಸ್ಕøತಿಗೆ ಹೋಲಿಸಿದರೆ, ತಮಿಳು ಸಂಸ್ಕøತಿಯಲ್ಲಿ ಕುರಿಂಜಿ ನೂರಾರು ರೂಪದಲ್ಲಿ ಕಾಣಿಸುತ್ತದೆ. ಅಲ್ಲಿನ ಬುಡಕಟ್ಟು ಜನ, ಮದುಮಗಳಿಗೆ ಎರಡು ಕುರುಂಜಿ ವಯಸ್ಸಾಯಿತು, ಅವನಿಗೆ ಸಾಯುವಾಗ ಎಂಟು ಕುರಿಂಜಿ ವಯಸ್ಸಾಗಿತ್ತು ಎಂದು, ಅದನ್ನು ಆಯಸ್ಸು ಅಳೆಯುವ ಮಾನವಾಗಿಸಿಕೊಂಡಿರುವರು. ತಮಿಳಿನ ಪ್ರಾಚೀನ ಅಭಿಜಾತ ಸಾಹಿತ್ಯದಲ್ಲಿ ಕುರಿಂಜಿ ವಿರಾಜಮಾನ. ಪ್ರೇಮಕಾವ್ಯವಿರುವ ಸಂಗಂ ಸಾಹಿತ್ಯದಲ್ಲಿ ತಮಿಳುನಾಡನ್ನು ಕರಾವಳಿ, ಮರುಭೂಮಿ, ಕಾನುಪ್ರದೇಶ, ಹೊಲಗದ್ದೆಯ ಬಯಲು ಹಾಗೂ ಬೆಟ್ಟಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಭೂಪ್ರದೇಶದ ಜತೆಗೂ ಒಂದೊಂದು ಸಸ್ಯ ಇಲ್ಲವೇ ಹೂವನ್ನು ಸಮೀಕರಿಸಲಾಗಿದೆ. ಗುಡ್ಡಗಾಡಿನ ಪ್ರದೇಶಕ್ಕೆ ಕುರಿಂಜಿ ಸಂಕೇತ. ಇದರಿಂದ `ಕುರಿಂಜಿ ತಿಣೈ’ ಎಂಬ ಕಾವ್ಯ ಸಂಪ್ರದಾಯವೇ ಹುಟ್ಟಿದೆ. ಈ ಕಾವ್ಯದ ವಸ್ತು, ಅಗಲಿದ ಪ್ರೇಮಿಗಳ ಮಾತುಕತೆ ಮತ್ತು ಕೂಟ. ಇದಕ್ಕೆ ಪೂರಕವಾಗಿ ಕುರಿಂಜಿ ತಿಣೈನಲ್ಲಿ ಬೆಟ್ಟಪ್ರದೇಶದ, ಕುರಿಂಜಿ ಹೂವಿನ, ನಡುರಾತ್ರಿಯ, ಇಬ್ಬನಿ ಸುರಿವ ಚಳಿಗಾಲದ, ಹುಲಿ ಆನೆ ನವಿಲುಗಳ, ಬಿದಿರಿನ ಹಿಂಡಿಲುಗಳ, ಜಲದ ಅಬ್ಬಿಗಳ, ದುಂಬಿಗಳ, ಜೇನುಕೀಳುವ ಜನರ ಬದುಕಿನ ವರ್ಣನೆಗಳು. ಈ ಕಾವ್ಯಮಾರ್ಗದ ಅಧಿದೇವತೆ ಮುರುಗನ್. ಬೆಟ್ಟಪ್ರದೇಶದ ದೈವವಾದ ಮುರುಗನ್ ಕುರಿಂಜಿಹಾರ ತೊಟ್ಟು ಬುಡಕಟ್ಟಿನ ಚೆಲುವೆಯಾದ ವೆಳ್ಳಿಯನ್ನು ಪ್ರೇಮಿಸುವವನು. ಕೊಡೈಕೆನಾಲಿನ ಕುರಿಂಜಿ ಬನದಲ್ಲಿ ಅವನದೊಂದು ಗುಡಿಯಿದೆ. ತಮಿಳರ ಆದಿಮಕಾವ್ಯವಾದ ‘ಶಿಲ್ಪಪ್ಪದಿಕಾರಂ’ನ ನಾಯಕಿ ಕನ್ನಗಿ ಸಹ ಕಡಲತೀರದಲ್ಲಿ ಹುಟ್ಟಿಬೆಳೆದು, ಮದುರೆಯಂತಹ ಬಯಲುನಾಡಲ್ಲಿ ದುರಂತ ಕಂಡು, ಕೊನೆಗೆ ಕುರುಂಜಿ ಹೂವಿನ ಬೆಟ್ಟದಲ್ಲಿ ಪ್ರಾಣತ್ಯಾಗ ಮಾಡುವವಳು. ತಮಿಳು ಮನೆಮಾತಿನ ಕನ್ನಡ ಕವಿ, ಎ.ಕೆ. ರಾಮಾನುಜನ್ ಪ್ರಾಚೀನ ಸಂಗಂ ಸಾಹಿತ್ಯವನ್ನು ‘ಪೊಯೆಮ್ಸ್ ಆಫ್ ಲವ್ ಅಂಡ್ ವಾರ್’ ಹಾಗೂ ‘ಇಂಟೀರಿಯರ್ ಲ್ಯಾಂಡ್‍ಸ್ಕೇಪ್’ ಎಂದು ಇಂಗ್ಲೀಶಿಗೆ ಅನುವಾದಿಸಿದ್ದಾರೆ. ಅವರು ಅನುವಾದಿಸಿರುವ ಕುರಿಂಜಿ ತಿಣೈನ ಎರಡು ಪದ್ಯಗಳ ಕನ್ನಡ ಸಾರವಿದು: 1. ಇಳೆಗಿಂತಲೂ ದೊಡ್ಡ, ದಿಟಕ್ಕೂ ಆಗಸಕ್ಕಿಂತಲೂ ಎತ್ತರನೀರಿಗಿಂತಲೂ ಹೆಚ್ಚು ಆಳ ನನ್ನ ಗಂಡಿನ ಮೇಲಣ ಪ್ರೇಮಪರ್ವತಗಳ ಇಳುಕಲಿನಲಿ ಕಡುಕಪ್ಪನೆಯ ದೇಟಿನಚೆಲುವಾದ ಕುರಿಂಜಿ ಹೂಗಳಿಂದ ದುಂಬಿಗಳು ಮಾಡುವ ಜೇನು 2. ಹುರುಳಿಕಾಯ ಬತ್ತಲೆಬೇರು ನಸುಗೆಂಪಾಗಿದೆಕಾಡುಕೋಳಿಯ ಕಾಲಿನಂತೆಚಿಗರೆ ಹಿಂಡು ಮಾಗಿದ ಕಾಯಿಗಳ ಮೇಲೆರಗುತಿದೆಇಬ್ಬನಿ ಸುರಿವ ಮುಂಜಾನೆಯ ಋತುವಿನ ಹೊಡೆತಕ್ಕೆಬೇರೆ ಮದ್ದಿಲ್ಲ, ನನ್ನ ಗಂಡಿನ ಹರವಾದ ಎದೆಯ ಹೊರತು. ಕುರಿಂಜಿ ತಿಣೈ ಕಾವ್ಯಮಾರ್ಗವೆಂದರೆ- ಪಶ್ಚಿಮಘಟ್ಟದ ಸಸ್ಯಾವಳಿ, ಕೀಟ, ಹಕ್ಕಿ, ಪ್ರಾಣಿ, ನೀರು, ಗಾಳಿ, ಜನ, ಅವರ ದುಡಿಮೆ, ಹಾಡು ಕತೆ ಸಂಗೀತಗಳೆಲ್ಲವನ್ನು ತುಂಬಿಕೊಂಡ ಅನನ್ಯಲೋಕ. ಈ ಲೋಕದಲ್ಲಿ ಒಂದು ಲೋಕದೃಷ್ಟಿಯೂ ಅಡಗಿದೆ. ಕುರಿಂಜಿಪಾಟ್ಟು ಎಂಬ ಹಾಡುಗಳನ್ನು ನಾಟ್ಟುಕುರಿಂಜಿ ಎಂಬ ರಾಗದಲ್ಲಿ ಸಂಜೆ ಹೊತ್ತು ಹಾಡುವರು; ಅದರ ಜತೆ ನುಡಿಸುವ ತಂತಿವಾದ್ಯದ ಹೆಸರು ಕುರಿಂಜಿಯಾಳ್. ತಮಿಳು ಸಂಸ್ಕøತಿಯ ಜತೆ ಆಪ್ತನಂಟನ್ನು ಏರ್ಪಡಿಸಿಕೊಳ್ಳದೆ ಹೋದ ಕನ್ನಡ ಸಾಹಿತ್ಯಕ್ಕೆ ಇವೆಲ್ಲ ಯಾವುದೊ ಲೋಕದ ವಿಚಾರಗಳಂತೆ ತೋರಬಹುದು. ಸಂಸ್ಕøತ ಕಾವ್ಯಮೀಮಾಂಸೆಗೆ ತನ್ನನ್ನು ಅಗತ್ಯಕ್ಕಿಂತ ಹೆಚ್ಚಾಗಿ ತೆತ್ತುಕೊಂಡು ಜೀತಮಾಡಿದ ಕನ್ನಡ ಶಿಷ್ಟ ಕಾವ್ಯಪರಂಪರೆ, ದ್ರಾವಿಡ ಸೀಮೆಯ ಸ್ಥಳೀಯ ಸಾಂಸ್ಕøತಿಕ ನೆಲೆಗಳ ಮೂಲಕ ತನ್ನದೇ ಮೀಮಾಂಸೆ ಕಟ್ಟಿಕೊಳ್ಳಲಾರದೆ ಹೋಯಿತು. ಆಧುನಿಕ ಕಾಲದಲ್ಲಿ ಈ ತಮಿಳು ಸಂಸ್ಕøತಿಯೊಂದಿಗೆ ಕನ್ನಡ ಸಂಸ್ಕøತಿಯನ್ನು ಕೂಡಿಸುವ ಕಸುವು ಬಿಜಿಎಲ್ ಸ್ವಾಮಿಗಿತ್ತು. ರಾಮಾನುಜನ್‍ಗಿತ್ತು. ಶಿವಪ್ರಕಾಶರಿಗಿದೆ. ಈ ದಿಸೆಯಲ್ಲಿ ಕನ್ನಡವು ಹೊಸಹಾದಿ ಸೋಸಬೇಕಿದೆ.ಕುರಿಂಜಿ ಸಂಸ್ಕøತಿಯನ್ನು ತಮಿಳು ಸಿನಿಮಾ ಸಂಗೀತ ಚಿತ್ರಕಲೆಗಳು ಅದ್ಭುತವಾಗಿ ಮುಂದುವರೆಸಿದವು. ಅಲ್ಲಿ ಕುರಿಂಜಿ ಹೆಸರಲ್ಲಿ ಶಾಲೆ ಆಸ್ಪತ್ರೆ ಹೋಟೆಲು ರೆಸಾರ್ಟು ಬಡಾವಣೆಗಳಿವೆ; ಒಬ್ಬ ಇಂಜಿನಿಯರ್ ತಮಿಳು ಲಿಪಿಗಾಗಿ ಕುರಿಂಜಿ ಫಾಂಟ್ ಎಂಬ ಅಕ್ಷರವಿನ್ಯಾಸ ಸೃಷ್ಟಿಸಿರುವನು. ತಮಿಳು ಸಿನಿಮಾ ಗೀತಕಾರನೊಬ್ಬನ ಹೆಸರು ಕುರಿಂಜಿಪ್ರಭ; ತಮಿಳು ಸಿನಿಮಾಗಳು ಕುರಿಂಜಿಯ ಹೂಸುಗ್ಗಿಯನ್ನು ಸೆರೆಹಿಡಿಯಲು ಮರೆಯುವುದಿಲ್ಲ. ‘ಕುರಿಂಜಿ ಮಲರ್’ ಚಿತ್ರದಲ್ಲಿ ‘ಕುರಿಂಜಿ ಮಲರೈ’ ಎಂಬ ಜಾನಕಿ-ಜೇಸುದಾಸ್ ಹಾಡಿರುವ ಇಂಪಾದ ಹಾಡಿದೆ. ವ್ಯಂಗ್ಯವೆಂದರೆ ಈ ಹಾಡಿನ ಮೊದಲ ಸಾಲು ಕುರಿಂಜಿ ಬೆಳೆಯುವ ಶೋಲಾಬೆಟ್ಟಗಳಲ್ಲಿ ಚಿತ್ರೀಕರಣಗೊಂಡಿದೆ. ಅದು ಹೂವಿಲ್ಲದ ಕಾಲ. ತಮಿಳರ ಈ ಯತ್ನಗಳ ಹಿಂದೆ ಅವರ ಸಾಂಸ್ಕøತಿಕ ಪ್ರಜ್ಞೆಯಿದೆ. ಜತೆಗೆ ಸಾಂಸ್ಕøತಿಕ ಸಂಕೇತಗಳನ್ನು ಮಾರುಕಟ್ಟೆಗಾಗಿ ಬಳಸುವ ವ್ಯಾಪಾರಿ ಜಾಣ್ಮೆ ಕೂಡ. ಕೇರಳ-ತಮಿಳುನಾಡಿನ ಗಿರಿಧಾಮಗಳಿಗೆ ಪ್ರವಾಸಿಗರನ್ನು ಸೆಳೆಯಲು ಅವರಿಗೆ ಕುರಿಂಜಿಯೊಂದು ದೊಡ್ಡ ಆಕರ್ಷಣೆ. ಅಲ್ಲಿನ ಹೋಟೆಲುಗಳಲ್ಲಿ ಕುರಿಂಜಿ ಋತುವಿನ ವರ್ಷಗಳ್ನು ಸೂಚಿಸುವ ಮಾಹಿತಿ ಬರೆಹಗಳಿರುತ್ತವೆ. ಒಮ್ಮೆ ದಕ್ಷಿಣ ಭಾರತದ ಎತ್ತರ ಶಿಖರವಾದ ಮುನ್ನಾರಿನ ಎರವಿಕುಲಮ್‍ಗೆ ಕಾಡುಮೇಕೆ ನೋಡಲು ಹೋಗಿದ್ದೆವು. ಕುರಿಂಜಿ ಗಿಡಗಳಿಂದ ತುಂಬಿಹೋಗಿದ್ದ ಬೆಟ್ಟದ ಕೋಡಿನಲ್ಲಿ ಮೇಕೆ ನಿರಾಳ ಮೇಯುತ್ತಿದ್ದವು. ಅದು ಹೂವಿನ ಕಾಲವಾಗಿರಲಿಲ್ಲ. ಈಚೆಗೆ ಕುರಿಂಜಿ ನೆಲೆಗಳಾದ ಶೋಲಾಗಳನ್ನು ಚಹತೋಟಗಳನ್ನಾಗಿ ಮಾಡಲಾಗಿದೆ. ಕುರಿಂಜಿ ದಟ್ಟವಾದ ಹುಲ್ಲಿನ ಜತೆ ಬೆಳೆಯುವುದರಿಂದ, ಆ ಹುಲ್ಲಿಗೆ ಬೆಂಕಿಬಿದ್ದಾಗಲೆಲ್ಲ ತಾನೂ ಭಸ್ಮವಾಗುತ್ತದೆ. ಕರ್ನಾಟಕದ ಶೋಲಾಗಳಲ್ಲಿ ಈ ಖಾಂಡವದಹನ ಪ್ರಸಂಗಗಳು ಸಾಮಾನ್ಯೆ. ಈಗೀಗ ತಮಿಳುನಾಡಲ್ಲಿ ಕುರಿಂಜಿ ಉಳಿಸುವ ಚಳುವಳಿಗಳೂ ಹುಟ್ಟಿಕೊಂಡಿವೆ. ಕೆಲವು ಜಾತಿಯ ಮೀನುಗಳು ಹೊಳೆಗಳಲ್ಲಿ ನೂರಾರು ಮೈಲಿ ಪಯಣಿಸಿ ಹೊಸಸಂತಾನಕ್ಕೆ ಮೊಟ್ಟೆಯಿಟ್ಟು ಜೀವಬಿಡುತ್ತವೆ. ಅದರಂತೆ ದಶಕಗಳ ಕಾಲ ಕಾಯುವ ಕುರಿಂಜಿ ಹೂತರೆ ಅದರ ಮರಣದ ಸೂಚನೆ. ಬಿದಿರು ಕೂಡ ಹೀಗೆ ತಾನೇ? ಕುರಿಂಜಿ ಹೂತಳೆದು ಸತ್ತ ಬಳಿಕ, ಬಿದ್ದ ಅದರ ಬೀಜಗಳು ಮಳೆಗಾಲಕ್ಕೆ ಕಾದು ಸಸಿಯಾಗಿ ಹೊಸ ಬದುಕನ್ನು ಆರಂಭಿಸುತ್ತವೆ. ಇದರ ಹುಟ್ಟುಸಾವಿನ ಈ ಯಾನ ಎಷ್ಟು ಸಹಸ್ರ ಶತಮಾನಗಳಿಂದ ನಡೆದುಬಂದಿದೆಯೊ? ಹೆಚ್ಚಿನ ಸಸ್ಯಗಳಿಗೆ ‘ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆ’; ಕುರಿಂಜಿಗಾದರೊ ದಶಕಕೊಂದು ಹೊಸತು ಜನ್ಮ. ಆದರೆ ಸಾವಿನ ಸಾನಿಧ್ಯದಲ್ಲಿ ಅದು ಹೂತಳೆದು ಪಡುವ ಸಂಭ್ರಮ, ಸಾವು ಮತ್ತು ಮರುಹುಟ್ಟುಗಳ ನಡುವೆ ಮಾಡುವ ಧ್ಯಾನ ಅಪೂರ್ವ. ಕುರಿಂಜಿ ಬೆಳೆಯುವ ಮುಳ್ಳಯ್ಯನಗಿರಿ, ಬಾಬಾಬುಡನಗಿರಿ ಕೊಡಚಾದ್ರಿಗಳು ನಾಥರು ಸೂಫಿಗಳು ಅವಧೂತರ ತಾಣಗಳಾಗಿದ್ದು, ಇಲ್ಲಿ ಧ್ಯಾನದ ಗುಹೆಗಳಿವೆ; ವಿಭಿನ್ನ ದಾರ್ಶನಿಕ ಪರಂಪರೆಗೆ ಸೇರಿದ ಸಂತರು ಒಂದೇ ಗುಹೆಗಳಲ್ಲಿದ್ದ ಚರಿತ್ರೆಯಿದೆ. ಮಂಜು ಮಳೆ ಬಿಸಿಲು ಚಳಿಗಳೆಂಬ ಪರೀಷಹಗಳನ್ನು ಎದುರಿಸುತ್ತ ಸಹಸ್ರಾರು ವರ್ಷಗಳಿಂದ ನಿಂತಿರುವ ಶೋಲಾಬೆಟ್ಟಗಳನ್ನು ನೋಡುವಾಗ, ಅವೂ ಸ್ವತಃ ಧ್ಯಾನಸ್ಥವಾಗಿವೆ ಅನಿಸುತ್ತದೆ. ಅವುಗಳ ತುದಿಯಲ್ಲಿ
ಅಂಕಣ ಬರಹ ಋಗ್ವೇದ ಸ್ಫುರಣ ಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿ ಋಗ್ವೇದ ಸ್ಫುರಣಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿಪ್ರ : ಅಭಿನವ ಪ್ರಕಟಣೆಯವರ್ಷ : ೨೦೧೭ಬೆಲೆ : ರೂ.೨೦೦ಪುಟಗಳು : ೧೬೦ ಪ್ರಾಚೀನ ಭಾರತದ ಅತ್ಯಂತ ಪ್ರಮುಖ ಭಾಷಿಕ ದಾಖಲೆಯಾದ ಋಗ್ವೇದ ಸೂಕ್ತಗಳಲ್ಲಿರುವ ಋಕ್ಕುಗಳೊಳಗಿನ ಬಿಡಿ ಪದ್ಯಗಳ ಸರಳ ಅನುವಾದ ಈ ಕೃತಿಯಲ್ಲಿದೆ. ಮೂಲ ಸಂಸ್ಕೃತದಲ್ಲಿರುವ ಈ ಪದ್ಯಗಳನ್ನು ಆರಂಭದಲ್ಲಿ ಸೂಕ್ತ ವ್ಯಾಖ್ಯಾನಗಳ ಮೂಲಕವೂ ನಂತರ ತಿಳಿಗನ್ನಡದಲ್ಲಿ ವ್ಯಾಖ್ಯಾನಗಳಾಗಿಯೂ ನೀಡಲಾಗಿದೆ. ಋಗ್ವೇದದ ಋಕ್ಕುಗಳು ಪ್ರಕೃತಿಯ ಮಹಾಶಕ್ತಿಗಳು. ವಾಸ್ತವದ ನೆಲೆಯಲ್ಲಿ ಗ್ರಹಿಸುವಂಥವು. ವಿಶ್ವಭ್ರಾತೃತ್ವವನ್ನು ಪ್ರೇರಿಸುವ ಭಾರತೀಯ ಸಂಸ್ಕೃತಿಗೆ ಋಗ್ವೇದವು ಉಗಮ ಸ್ಥಾನ. ಉಪನಿಷತ್ತುಗಳಲ್ಲಿ ವಿಸ್ತೃತವಾಗಿ ಚರ್ಚಿತವಾಗಿರುವ ಅದ್ವೈತ ತತ್ವವು ಮೊದಲು ಕಾಣಿಸಿದ್ದು ಋಗ್ವೇದದಲ್ಲಿ. ಪರಸ್ಪರ ಪ್ರೀತಿ-ಪೋಷಣೆಗಳು ಜಗತ್ತಿನ ಕಲ್ಯಾಣಕ್ಕೆ ಅಗತ್ಯ ಮತ್ತು ವಿಶ್ವ ಸಾಮರಸ್ಯವೇ ತಮ್ಮ ಏಕೈಕ ಗುರಿ ಎಂದು ತಿಳಿದವರು ವೇದಕಾಲದ ಋಷಿಗಳು. ಕೇವಲ ಮಾನವನ ಸುಖವಲ್ಲ ವಿಶ್ವ ನಿಯಮದ ಗುರಿ. ಬದಲಾಗಿ ಅದು ಸಕಲ ಚರಾಚರ ಜೀವಿಗಳು ಅಪ್ರತಿಹತವಾದ ಋತದ ಮೂಲಕ ಪಡೆಯುವ ಆನಂದವಾಗಿದೆ. ಈ ವಿಶ್ವದಲ್ಲಿ ಗೆಲ್ಲುವುದು ಋತವೊಂದೇ. ಅನೃತವಲ್ಲವೆಂದು ಋಗ್ವೇದ ಹೇಳುತ್ತದೆ. ಈ ಋತಕ್ಕೆ ಯಾವುದು ಅಡ್ಡ ನಿಲ್ಲುತ್ತದೆಯೋ ಅದು ಆಸುರೀ ಶಕ್ತಿ. ಅಂಥ ಶಕ್ತಿಗಳ ವಿರುದ್ಧ ವೇದಕಾಲದ ಋಷಿಗಳು ಅನವರತ ಹೋರಾಡಿದರು. ಋಗ್ವೇದ ಸ್ಫುರಣದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಆಯ್ದ ಸೂಕ್ತಗಳ ಕನ್ನಡ ರೂಪದ ಜತೆಗೆ ಸರಳ ವ್ಯಾಖ್ಯಾನಗಳ ಮೂಲಕ ಚಿಕ್ಕ ಮಕ್ಕಳಿಗೂ ಅರ್ಥವಾಗುವಂಥ ವಿವರಣೆಗಳಿವೆ. ಎರಡನೆಯ ಭಾಗದಲ್ಲಿ ಬೇರೆ ಬೇರೆ ಸಂದರ್ಭಗಳನ್ನು ಸೂಚಿಸುವಂಥ ಬಿಡಿ ಕವಿತೆಗಳಿವೆ. ವೇದಕಾಲದಲ್ಲಿ ಜನಜೀವನ ಹೇಗಿತ್ತು, ಸಾಮಾಜಿಕ ರೀತಿ-ನೀತಿಗಳು ಮತ್ತು ಪದ್ಧತಿ-ಪರಂಪರೆಗಳು ಹೇಗಿದ್ದವು ಎಂಬುದರ ಚಿತ್ರಣವನ್ನು ಈ ಕವಿತೆಗಳು ನೀಡುತ್ತವೆ. ಯುದ್ಧಭೂಮಿಯಲ್ಲಿ ಯೋಧನ ಚಿತ್ರ, ಮುಪ್ಪು ಮತ್ತು ಮರಣ, ದಾಂಪತ್ಯ ತತ್ವ, ಮಳೆಗಾಲದಲ್ಲಿ ಕಪ್ಪೆಗಳು, ಕಳೇಬರವನ್ನು ಕುರಿತು, ಪತಿಯನ್ನು ಕಳೆದುಕೊಂಡ ಪತ್ನಿ, ಕಸಬುಗಾರಿಕೆ, ಕಾಳ್ಗಿಚ್ಚು, ಸವತಿ ಸಂಬಂಧ, ಶ್ರದ್ಧೆ ಮೊದಲಾದ ಕವಿತೆಗಳ ವಸ್ತುವನ್ನು ನೋಡಿದರೆ ಅವು ಆಧುನಿಕ ಕವಿತೆಗಳಿಗಿಂತ ಭಿನ್ನವಾಗಿ ಕಾಣುವುದಿಲ್ಲ. ವೇದಕಾಲದ ಸಾಮಾಜಿಕ ಚಿಂತನೆಗಳು, ಎಷ್ಟರ ಮಟ್ಟಿಗೆ ಜೀವಪರವಾಗಿದ್ದವು ಎಂಬುದನ್ನು ಈ ಕವಿತೆಗಳು ನಿರೂಪಿಸುತ್ತವೆ. ಕಾವ್ಯದ ಅನುವಾದಕ್ಕೆ ವಿಶೇಷ ಮಹತ್ವವಿದೆ. ಮೂಲದ ಛಂದಸ್ಸನ್ನೂ ಅಲಂಕಾರಗಳನ್ನೂ ಅರ್ಥಪೂರ್ಣವಾಗಿ ಉಳಿಸಿಕೊಳ್ಳುವುದು ಅನುವಾದಕರ ಸೃಜನಶಕ್ತಿಗೆ ಒಂದು ಬಹಳ ದೊಡ್ಡ ಸವಾಲು. ಇಲ್ಲಿ ಅನುವಾದಕರೂ ಸ್ವತಃ ಅನುಭವಿ ಕವಿಗಳೂ ಆದ ಹೆಚ್.ಎಸ್.ಆರ್. ಅವರು ಈ ಸವಾಲನ್ನು ಗೆಲ್ಲುವಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ. ಅನುವಾದಿತ ಕವಿತೆಗಳನ್ನೂ ಭಾವಗೀತೆಗಳಾಗಿ ಹಾಡುವಷ್ಟು ಛಂದೋಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ********************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ಹಾಡು ಹಳೆಯದಾದರೇನು ಹಳೆಯ ಹಾಡುಗಳನ್ನು ಕೇಳುವಾಗಲೆಲ್ಲಾ ಎಂಥದೋ ಭಾವುಕತೆಗೆ ಒಳಗಾಗುವುದು, ಏನೋ ಒಂದು ರೀತಿ ಹೊಟ್ಟೆ ಚುಳ್ ಎನ್ನುವುದು, ಆ ಹಳೇ ದಿನಗಳ ನೆನಪುಗಳೆಲ್ಲಾ ಹಿಂದಿನ ಜನ್ಮದ ನೆನಪುಗಳೇನೋ ಎನ್ನುವಂತೆ ಕಾಡುವುದು… ಹೀಗೆಲ್ಲಾ ನನಗೆ ಮಾತ್ರ ಅನಿಸುತ್ತದಾ? ಬೇರೆಯವರಿಗೂ ಹೀಗೆಲ್ಲಾ ಆಗುತ್ತದಾ? ಗೊತ್ತಿಲ್ಲ. ಆದರೆ ನನಗೆ ಇದರ ಜೊತೆಗೆ ಇನ್ನೂ ವಿಚ್ ವಿಚಿತ್ರವಾಗೆಲ್ಲ ಏನೇನೋ ಅನ್ನಿಸುವುದಿದೆ. ಹಳೇ ಫೋಟೋಗಳನ್ನು ನೋಡುವಾಗ ಅದರಲ್ಲಿನ ಅಪರಿಚಿತರ ಬಗ್ಗೆ ಏನೇನೋ ಅನಿಸುತ್ತದೆ. ಅವರನ್ನು ನಾನೆಲ್ಲೋ ಭೇಟಿ ಮಾಡಿರುವೆ, ಮಾತಾಡಿಸಿರುವೆ, ಅಥವಾ ಇವರೆಲ್ಲಾ ಎಲ್ಲಿಯವರು, ಇವರೂ ನಮ್ಮಂತೆಯೇ ಬದುಕುತ್ತಿರುವರಾ… ಇನ್ನೂ ಏನೇನೋ ಅನಿಸಿ ಕಾಡತೊಡಗುತ್ತದೆ. ತಲೆ ಕೊಡವಿ ಎದ್ದು ಹೋಗದಿದ್ದರೆ ತಲೆಯೇ ಉದುರಿಹೋಗುತ್ತದೇನೋ ಅನಿಸಿಬಿಡುವಷ್ಟು. ಆದರೂ ಹಳೆಯ ಮಧುರ ಹಾಡುಗಳೆಂದರೆ ನನಗೆ ವಿಪರೀತ ಇಷ್ಟ. ಎಂದೋ ಪ್ರೀತಿಯಿಂದ ಹಾಡಿಕೊಳ್ಳುತ್ತಿದ್ದ ಹಾಡುಗಳು, ಎಂದೂ ಶ್ರುತಿ ತಾಳಗಳ ಲೆಕ್ಕಾಚಾರದ ಮಾತನ್ನು ನನ್ನೊಂದಿಗೆ ಆಡಿಲ್ಲ. ಭಾವದ ಅಗತ್ಯಕ್ಕೆ ತಕ್ಕಂತೆ ಒಂದಾಗಿವೆ. ಮನಸನ್ನು ಮುದಗೊಳಿಸಿವೆ. ನಾನು ಐದನೇ ತರಗತಿಯಲ್ಲಿದ್ದಾಗ ಸರ್ವಶಕ್ತ ಎನ್ನುವ ಪದ್ಯವೊಂದು ನಮ್ಮ ಪಠ್ಯಪುಸ್ತಕದಲ್ಲಿತ್ತು. “ದೇವ ನಿನ್ನ ಇರವ ನಂಬಿ ಜೀವಕೋಟಿ ಸಾಗಿದೆ, ಕಾವನೆಂಬ ಅರಿವಿನಲ್ಲಿ ನಿನ್ನ ಚರಣಕೆರಗಿದೆ” ಎಂದು ಅದರ ಪಲ್ಲವಿ. ಬರೆದ ಕವಿ ಹೆಸರನ್ನು ಮರೆತಿರುವುದಕ್ಕೆ ಕ್ಷಮೆ ಇರಲಿ. ಅದೆಷ್ಟು ಚಂದದ ರಾಗದಲ್ಲಿ ನಮಗದನ್ನು ನಮ್ಮ ಬಸವಣ್ಯೆಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದರಂದರೆ ಆ ಪ್ರಾರ್ಥನೆಯನ್ನು ಹಾಡುತ್ತಾ ಹೋದಂತೆ ಕಣ್ತುಂಬುತ್ತಿತ್ತು. ಅಳು ಅಳುತ್ತಲೇ ಅದನ್ನು ಹಾಡಿ ಮುಗಿಸುವಾಗ ಎಂಥದೋ ಸಮಾಧಾನ, ಧನ್ಯತಾ ಭಾವ ಮನಸಿಗೆ. ನಿರಾಳ ಎನಿಸಿಬಿಡುತ್ತಿತ್ತು. ಇಂತಹ ಅದೆಷ್ಟೋ ಹಾಡುಗಳನ್ನು ನಮ್ಮ ಬಸವಣ್ಯಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದರು. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು(ಬಿ.ಎಂ.ಶ್ರೀ.)”, ಆ ಹಾ ಹಾ ಮಲ್ಲಿಗೆ, ಬರುವೆನೇ ನಿನ್ನಲ್ಲಿಗೆ(ಬೇಂದ್ರೆ)”, ” ಈ ನಾಡಿನಲಿ ನಾನು ಮೂಡಿಬಂದುದೆ ಸೊಗಸು, ಭಾರತವ ಪ್ರೀತಿಸುವ ಭಾಗ್ಯವೆನದಾಯ್ತು”….. ಹೀಗೆ ಅದೆಷ್ಟೋ ಭಾವಪೂರ್ಣ ಹಾಡುಗಳನ್ನು ಮಕ್ಕಳಿಂದ ಹಾಡಿಸಿದ ಶ್ರೇಯ ಅವರದು. ಅವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ ಅದರ ಪರಿಣಾಮ. ನಾವಿವತ್ತು ಏನಾಗಿ ಬೆಳೆದಿದ್ದೇವೋ ಅದರ ಹಿಂದಿನ ಮೌಲ್ಯಗಳನ್ನು ನಾವು ಪಡೆದದ್ದು ಇಂತಹ ಅದೆಷ್ಟೋ ಹಾಡುಗಳಿಂದ ಎಂದರೆ ಸುಳ್ಳಲ್ಲ. ಅವು ಕಾಲದ ಜೊತೆ ಮರೆಯಾಗತೊಡಗಿದಾಗ ಒಂಥರಾ ಸಂಕಟವಾಗುತ್ತಿತ್ತು. ಮೆದುಳಿನ ಸಾಮರ್ಥ್ಯದ ಬಗ್ಗೆ ಅನುಮಾನವಾಗುತ್ತಿತ್ತು. ಆಗ ಹೊಳೆದದ್ದು, ಡೈರಿಯೆನ್ನುವ ಗಂಧದ ಡಬ್ಬಿಯಲ್ಲಿ ನನ್ನ ಪ್ರೀತಿಯ ನವಿರಾದ ನವಿಲುಗರಿಯಂಥ ಹಾಡುಗಳನ್ನು ಬರೆದಿಡಬೇಕು ಎನ್ನುವುದು. ಬರೆದೆ. ಬರೆದ ಹಾಡುಗಳಲ್ಲಿ ನನ್ನಿಷ್ಟದ “ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ, ಬಾಡಿಹೋಗುವ ಮುನ್ನ ಕೀಳುವರಾರೆಂದು” ಎನ್ನುವ ಕವಿತೆಯೂ ಇತ್ತು. ಆದರೆ ಚಿಕ್ಕಂದಿನಲ್ಲಿ ನನಗೆ ಅದನ್ನು ಬರೆದವರು ಯಾರು ಎನ್ನುವುದು ಗೊತ್ತಿರಲಿಲ್ಲ. ಇತ್ತೀಚೆಗೆ ಅದನ್ನಯ ಬರೆದವರು ವ್ಯಾಸರಾಯ ಬಲ್ಲಾಳರು ಎಂದು ತಿಳಿದದ್ದು. ಡೈರಿಯಲ್ಲೇನೋ ಬರೆದಿಟ್ಟಿದ್ದೆ. ಆದರೆ ಒಂದಿನ ಯಾರೋ ಆ ಡೈರಿಯನ್ನೇ ಅಪಹರಿಸಿಬಿಟ್ಟರು. ಎಷ್ಟು ಹುಡುಕಿದರೂ ಸಿಗಲಿಲ್ಲ. ಅಳುವೇ ಬಂತು. ನೆನಪಿದ್ದಷ್ಟೂ ಹಾಡುಗಳನ್ನು ಮತ್ತೆ ಬರೆದಿಟ್ಟುಕೊಂಡೆ. ಆದರೆ ಒಂದಷ್ಟು ಇಷ್ಟದ ಹಾಡುಗಳು ನೆನಪಿನಿಂದಲೂ ಹಾರಿದ್ದವು. ಅತ್ತೆ ಅಷ್ಟೇ. ಆಗಲೇ “ಕಾಡು ಮಲ್ಲಿಗೆಯೊಂದು…” ಕವಿತೆಯೂ, ಕಳೆದು ಹೋದದ್ದು. ಆದರೆ ಮೊನ್ನೆ ವಿಜಯ ಪ್ರಕಾಶರ ಧ್ವನಿಯಲ್ಲಿ ಆ ಹಾಡನ್ನು, ಅದೇ ಧಾಟಿಯಲ್ಲಿ ಮತ್ತೂ ವಿಸ್ತೃತ ಸ್ವರ ಪ್ರಸ್ತರ, ಆಲಾಪ ಮತ್ತು ಚಂದದ ಪ್ರಸ್ತುತಿಯೊಂದಿಗೆ ಕೇಳಿದಾಗ ಕಿವಿಗಳಿಗೆ ಅಪೂರ್ವ ಆನಂದವಾಅಯಿತು. ಅದರ ಸಾಹಿತ್ಯವೂ ಸಿಕ್ಕಿದ್ದು ಮತ್ತೊಂದೇ ಎತ್ತರದ ಖುಷಿ. ಆದರೆ ಕೆಲವರು ಯಾಕೆ ಹಾಗೆ ಮತ್ತೊಬ್ಬರ ಸಂಗ್ರಹವನ್ನು ಕದಿಯುತ್ತಾರೋ ಗೊತ್ತಿಲ್ಲ. ನನಗೆ ಹೀಗೆ ಡೈರಿಯಲ್ಲಿ ಬರೆದಿಟ್ಟುಕೊಳ್ಳುವ ಅಭ್ಯಾಸ ಶುರುವಾದದ್ದು ಬಹಳ ಚಿಕ್ಕಂದಿನಲ್ಲಿಯೇ. ಈಗ ನನ್ನ ತರಗತಿಯ ಪ್ರತಿಯೊಬ್ಬ ಮಗುವಿನಿಂದಲೂ ಈ ಕೆಲಸವನ್ನು ಮಾಡಿಸುತ್ತಿರುತ್ತೇನೆ. ಆಸಕ್ತಿ ಮತ್ತು ಪ್ರೀತಿಯಿಂದ ಮಾಡುವವರನ್ನು ಕಂಡಾಗ ಮಾಡಿಸಿದ ಕೆಲಸ ಸಾರ್ಥಕವಾಯಿತು ಎನಿಸುತ್ತದೆ. ಈ “ಕಾಡುಮಲ್ಲಿಗೆಯೊಂದು” ಕವಿತೆ ಒಂದೊಂದು ಬಾರಿ ಒಂದೊಂದು ಅರ್ಥವನ್ನು ಹೊಳೆಯಿಸುತ್ತದೆ. ನಿರ್ಲಕ್ಷಿತ ಸಮುದಾಯವೊಂದರ ದನಿಯಾಗಿ ಹಾಡುತ್ತದೆ. ಮೀರಾ ಎನ್ನುವ ಕವಯಿತ್ರಿಯ ಕವಿತೆಯೊಂದು ಕವಿತೆ ಇದ್ದಕ್ಕೆ ಸಮವರ್ತಿಯೆನ್ನುವಂತೆ ಇದೆ. “ಬಿಳಿ ಮಲ್ಲಿಗೆ ಮುಡಿ ಏರುತ ನಗುತಿರೆ, ಕಾಕಡ ಗಿಡದಲಿ ಬಾಡುತಿದೆ…” ಎಂದು ಆ ಹಾಡು ಶುರುವಾಗುತ್ತದೆ. “ಕಾಡುಮಲ್ಲಿಗೆ”ಯ ನೆನಪಲ್ಲಿ, ಅನುಪಸ್ಥಿತಿಯಲ್ಲಿ ಈ ಕವಿತೆ ನನಗೆ ಸಾಂತ್ವನ ಹೇಳಿತ್ತು. ಆದರೆ ” ಕಾಡು ಮಲ್ಲಿಗೆಯ” ಮುಂದೆ ಇದು ಸಪ್ಪೆಯೇ ಎಂದು ಬಹಳಷ್ಟು ಸಾರಿ ಅನ್ನಿಸಿದೆ. ಇವುಗಳ ಯಾದಿಯಲ್ಲಿ ಬರುವ ಮತ್ತೊಂದು ಗೀತೆಯೆಂದರೆ “ಬಂಗಾರದೆಲೆಯ ಮೇಲೆ ತಂಗಾಳಿ ಬೀಸಿ ಬಂತು, ಸಂಗಾತಿ ನಿನ್ನ ನೆನಪು, ನನ್ನೆದೆಗೆ ತಂಪು ತಂತು..” ಕವಿತೆ. ಹರೆಯದ ಕನಸುಗಳಿಗೆ ಕಸುವು ತುಂಬಿದ ಕವಿತೆ ಇದು ಎಂದರೆ ತಪ್ಪಾಗಲಾರದು. ಅಷ್ಟು ಮುದ್ದಾದ ಭಾವಗೀತೆ ಇದು. “ಆ ಶುಕ್ರ ತಾರೆ ನಕ್ಷತ್ರ ಧಾರೆ ಧರಗೇರಿ ಏರಿ ಏರಿ, ನನ್ನೆದೆಯ ವೀಣೆ ನಿನ್ನೆದೆಯ ಮೀಟಿ ಇದು ರಾಗ ರಾಸ ವೀಣೆ” ಎಂದು ತಾರಕವನ್ನು ಮುಟ್ಟುವ ಜಾಗವಂತೂ ಭಾವ ತೀವ್ರತೆ ತೀವ್ರ ಗತಿ ಪಡೆದುಕೊಂಡು ಶಿಖರ ಮುಟ್ಟುತ್ತದೆ. ಹಾಗೇ ನಾವೆಲ್ಲರೂ ಹಾಡಿನೊಳಗೆ ಲೀನವಾಗುತ್ತೇವೆ. ಚಿಕ್ಕಂದಿನಲ್ಲಿ ಹಾಡಿಕೊಳ್ಳುತ್ತಿದ್ದ ಮತ್ತೊಂದು ದೇಶಭಕ್ತಿ ಗೀತೆಯೆಂದರೆ, “ಮೊಳಗಲಿ ಮೊಳಗಲಿ ನಾಡಗೀತವು, ಮೂಡಲಿ ಮೂಡಲಿ ಸುಪ್ರಭಾತವು” ಎನ್ನುವ ಈ ಗೀತೆ. ಬಹಳ ವರ್ಷಗಳ ವರೆಗೂ ನನಗೆ ಈ ಗೀತೆಯನ್ನು ಬರೆದವರು ಎಚ್.ಎಸ್.ವೆಂಕಟೇಶಮೂರ್ತಿಯವರು ಎನ್ನುವ ವಿಚಾರವೇ ತಿಳಿದಿರಲಿಲ್ಲ. ಆದರೆ ಆ ಗೀತೆಗಿದ್ದ ಪ್ರಸಿದ್ಧಿಯ ಬಗ್ಗೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರ ನಾಲಿಗೆ ಮೇಲೆ ನಲಿದಾಡುತ್ತಿದ್ದ ಗೀತೆ ಅದು. ಈಗಲೂ ನಾ ನನ್ನ ಮಕ್ಕಳಿಗೆ ಅದನ್ನು ಹೇಳಿಕೊಡುತ್ತಿರುತ್ತೇನೆ. ಇಂತಹುದೇ ಮತ್ತೊಂದು ದೇಶಭಕ್ತಿ ಗೀತೆಯೆಂದರೆ “ಕುಹೂ ಕುಹೂ ನೀ ಕೋಗಿಲೆಯೆ ನಾ ಹಾಡುವ ಹಾಡೊಂದ ಹಾಡುವೆಯಾ ನಾ ಹೇಳುವ ಮಾತೊಂದ ಕೇಳುವೆಯಾ…” ಗೀತೆ. ಈಗಲೂ ಇದನ್ನು ಬರೆದ ಕವಿಯ ಬಗ್ಗೆ ನನಗೆ ಅಸ್ಪಷ್ಟ ತಿಳಿವಳಿಕೆ. ಆದರೆ ಅದು ಕೇಳುವ ಹಾಡುವ ಹೃದಯಗಳಲ್ಲಿ ನೆಲೆಸಿರುವ ರೀತಿಯ ಬಗ್ಗೆ ಸ್ವತಃ ಕವಿಗೇ ಎಂತಹ ಹೆಮ್ಮೆ ಮತ್ತು ಪರಮಾನಂದವಿರಬಹುದು… ಬಹುದೊಡ್ಡ ಅಚ್ಚರಿ… ಇಂತಹ ಅದೆಷ್ಟೋ ಮುಗಿಯದ ಹಾಡುಗಳು… ನಾನು ದೂರ ಶಿಕ್ಷಣದ ಮೂಲಕ ಬಿಎಡ್ ಮಾಡುತ್ತಿದ್ದ ಕಾಲದಲ್ಲಿ ನಡೆದ ಒಂದು ಘಟನೆಯನ್ನು ಹೇಳುವೆ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ನಮ್ಮ ಇಗ್ನೂ ಸೆಂಟರ್ ಇದ್ದದ್ದು. ಕಾಂಟ್ಯಾಕ್ಟ್ ಪ್ರೋಗ್ರಾಮಿಗಾಗಿ ಅಲ್ಲಿ ಉಳಿಯಬೇಕಾಗಿ ಬಂದಿತ್ತು. ಅಲ್ಲಿ ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಪ್ರತ್ಯೇಕ ಡಾರ್ಮೆಟ್ರಿಗಳಿದ್ದವು, ಒಂದರ ಎದುರು ಇನ್ನೊಂದು. ಒಂದು ದಿನ ಸ್ನಾನಕ್ಕೆ ಹೋದಾಗ ನಾನು ಯಾವ ಪರಿವೆಯಿಲ್ಲದೆ “ಏನೆ ಕೇಳು ಕೊಡುವೆ ನಿನಗೆ ನಾನೀಗ…” ಎನ್ನುವ ಗೀತ ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಾ ಮಜವಾಗಿ ಸ್ನಾನ ಮಾಡಿ ಬಂದಿದ್ದೆ. ಅವತ್ತು ಮಧ್ಯಾಹ್ನ ಯಾರೋ ಪಕ್ಕದ ಪುರುಷರ ರೂಮಿನವರೊಬ್ಬರು ಗೆಳತಿಯರಲ್ಲಿ “ಯಾರದು ಆ ಹಾಡನ್ನು ಹಾಡುತ್ತಿದ್ದವರು? ಏ ಚನ್ನಾಗಿ ಹಾಡುತ್ತಿದ್ದರು…” ಎಂದು ಒಂಥರಾ ನಗಾಡುತ್ತಾ ಕೇಳಿದರಂತೆ. ನನಗೆ ಹೀಗಾಗಬಹುದೆಂಬುದರ ಅರಿವೇ ಇರಲಿಲ್ಲ. ಜೀವ ಬಾಯಿಗೆ ಬಂದಂತಾಗಿತ್ತು. “ದಯವಿಟ್ಟು ಅದು ನಾನು ಎಂದು ತೋರಿಸಬೇಡಿ ಕಣ್ರೇ ಅವರಿಗೆ… ಪ್ಲೀಸ್..” ಎಂದು ಗೋಗರೆದಿದ್ದೆ. ಈಗಲೂ ಆ ಘಟನೆಯನ್ನು ನೆನೆದಾಗಲೆಲ್ಲಾ ನಗು ಬರುತ್ತದೆ… ಇಂತಹ ಅದೆಷ್ಟೋ ಬೆಚ್ಚನೆ ನೆನಪುಗಳನ್ನು ಕೊಟ್ಟ ಆ ಹಳೆಯ ಹಾಡುಗಳಿಗೆ ಶರಣು ಶರಣಾರ್ತಿ… ************************************* ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಹೊಸ ದನಿ – ಹೊಸ ಬನಿ-೧೩. ಸಿದ್ಧಾಂತದ ಚೌಕಟ್ಟಿನಲ್ಲೇ ಉಳಿದೂ ಬೆಳಕಿಗೆ ತಡಕುವ ವಸಂತ ಬನ್ನಾಡಿ ಕವಿತೆಗಳು ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ವಾಣಿಜ್ಯ ಪಾಠ ಕಲಿಸುತ್ತಿದ್ದ ಶ್ರೀ ವಸಂತ ಬನ್ನಾಡಿ ಅಲ್ಲಿನ ರಂಗ ಅಧ್ಯಯನ ಕೇಂದ್ರದ ಸಂಚಾಲಕರಾಗಿಯೂ ಪ್ರಸಿದ್ಧರು. ಶಬ್ದಗುಣ ಹೆಸರಿನ ಅರ್ಧವಾರ್ಷಿಕ ಸಾಹಿತ್ಯ ಪತ್ರಿಕೆಯನ್ನು ಅತ್ಯಂತ ಶ್ರೀಮಂತವಾಗಿ ಸಂಪಾದಿಸುತ್ತಿದ್ದವರು ಅವರು. ಶಬ್ದಗುಣ ಕೂಡ ಉಳಿದೆಲ್ಲ ಹಲವು ಸಾಹಿತ್ಯ ಪತ್ರಿಕೆಗಳ ಹಾಗೇ ಪ್ರಾರಂಭದಲ್ಲಿ ಅತಿ ಉತ್ಸಾಹ ತೋರುತ್ತಲೇ ಮೂರು ಸಂಚಿಕೆಗಳನ್ನು ಸಂಪಾದಿಸುವಷ್ಟರಲ್ಲೇ ಅಕಾಲಿಕ ಮರಣಕ್ಕೆ ತುತ್ತಾಯಿತು. ಸಾಹಿತ್ಯ ಪತ್ರಿಕೆಗಳ ಬಗ್ಗೆ ಪ್ರೀತಿಯ ಮಾತು ಆಡುತ್ತಲೇ ಅದರ ಪೋಷಣೆಗೆ ಅತಿ ಅವಶ್ಯವಾದ ಚಂದಾ ಕೊಡದೆ ಆದರೆ ಪತ್ರಿಕೆ ಪಾಪ ಪ್ರಕಟಣೆ ನಿಲ್ಲಿಸಿತೆಂದು ಚಿರ ಸ್ಮರಣೆಯ ಲೇಖನ ಬರೆಯುವ ಲೇಖಕರೇ ಹೆಚ್ಚಿರುವಾಗ ಸಾಹಿತ್ಯ ಪತ್ರಿಕೆಗಳ ಪ್ರಕಟಣೆಯ ಬಗ್ಗೆಯೇ ವಿಸ್ತೃತ ಲೇಖನ ಬರೆಯಬಹುದು. ಇರಲಿ,ಆದರೆ ತಂದದ್ದು ಮೂರೇ ಮೂರು ಸಂಚಿಕೆಗಳೇ ಆದರೂ ಆ ಸಂಚಿಕೆಗಳನ್ನು ರೂಪಿಸುವುದಕ್ಕೆ ಫಣಿರಾಜ್ ಮತ್ತು ರಾಜಶೇಖರರಂಥ ಅಪ್ಪಟ ಸಮಾಜ ವಾದೀ ಚಿಂತನೆಯ ಲೇಖಕರ ಸಹಕಾರ ಇವರಿಗೆ ಇತ್ತೆಂದರೆ ನಿಸ್ಸಂಶಯವಾಗಿ ಬನ್ನಾಡಿಯವರ ಚಿಂತನೆಯ ಹಾದಿಯನ್ನು ಮತ್ತೆ ಸ್ಪಷ್ಟಪಡಿಸುವ ಅವಶ್ಯಕತೆಯೇ ಇಲ್ಲ. ತಮ್ಮೆಲ್ಲ ಸಮಯ ಮತ್ತು (ಆರ್ಥಿಕ) ಶಕ್ತಿಯನ್ನು ಕೂಡ ರಂಗ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಮತ್ತು ಪ್ರಕಾಶನದ ಕೆಲಸಕ್ಕೂ ಬಳಸಿಯೇ (ಪ್ರ)ಸಿದ್ಧರಾದ ಶ್ರೀ ಬನ್ನಾಡಿ ರಂಗ ಕರ್ಮಿಯಾಗಿ ಕೂಡ ಸಮಾಜವಾದೀ ಸಿದ್ಧಾಂತದ ಪ್ರತಿ ಪಾದಕರಾಗಿ ನಿರಂತರವಾಗಿ ಫ್ಯೂಡಲ್ ತತ್ವಗಳ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಗರ್ಜಿಸುತ್ತಲೇ ಇರುವವರು. ಈವರೆಗೆ ಐದು ಕವನ ಸಂಕಲನಗಳನ್ನು ಪ್ರಕಟಿಸಿದ್ದರೂ ಫೇಸ್ಬುಕ್ಕಿನಲ್ಲಿ ಅತ್ಯಂತ ಚಟುವಟಿಕೆಯಿಂದ ಸಮಾಜ ಮುಖೀ ಬರಹಗಾರರ ಪರವಾಗಿ ಮಾತನಾಡುತ್ತಲೇ ಪ್ರಭುತ್ವದ ವಿರುದ್ಧದ ತಮ್ಮ ನಿಲುವುಗಳನ್ನು ಅತ್ಯಂತ ಸ್ಪಷ್ಟವಾಗಿಯೇ ಪ್ರಕಟಿಸುವ ಬನ್ನಾಡಿಯವರ ಕವಿತೆಗಳು ಫೇಸ್ಬುಕ್ಕಿನಲ್ಲಿ ಪ್ರಕಟಿಸುವ ರೀತಿಯೇ ಭಿನ್ನವಾದುದು. ಬಹುತೇಕರು ಫೇಸ್ಬುಕ್ಕಿನಲ್ಲಿ ಕವಿತೆ ಎಂದು ತಾವು ಭಾವಿಸಿದುದನ್ನು ಪ್ರಕಟಿಸುವಾಗ ಅದಕ್ಕೊಂದು ಶೀರ್ಷಿಕೆಯ ಅಗತ್ಯತೆ ಇದೆ ಎಂದೇ ಭಾವಿಸದೇ ಇರುವ ಹೊತ್ತಲ್ಲಿ ಇವರು ಪ್ರಕಟಿಸುವ ಪ್ರತಿ ಕವಿತೆಯೂ ಅತ್ಯಂತ ಸಮರ್ಥ ಶೀರ್ಷಿಕೆ ಮತ್ತು ಅಗತ್ಯವಿದ್ದಲ್ಲಿ ಅತ್ಯಗತ್ಯವಾದ ಚಿತ್ರಗಳ ಜೊತೆಗೇ ಪ್ರಕಟವಾಗುವುದನ್ನು ನೀವು ಗಮನಿಸಿಯೇ ಇರುತ್ತೀರಿ. ಜೊತೆಗೇ ಸಹ ಬರಹಗಾರರ ಸಣ್ಣದೊಂದು ಬರಹಕ್ಕೂ ಚಂದದ ಪ್ರತಿಕ್ರಿಯೆ ಕೊಡುವ ಅವರ ಗುಣ ಕೂಡ ನೀವು ಬಲ್ಲಿರಿ. ಮೂಲತಃ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದ ಯಾವುದೇ ಲೇಖಕ ಕವಿಯಾಗಿ ಪ್ರಕಟವಾಗುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಈಗಾಗಲೇ ಆ ಸಿದ್ಧಾಂತದ ಚೌಕಟ್ಟಿಗೆ ತನ್ನೆಲ್ಲ ಬೌದ್ಧಿಕ ಸಾಮರ್ಥ್ಯವನ್ನೂ ವ್ಯಯಿಸಿ ತನ್ನ ಚೌಕಟ್ಟಿನ ಆಚೆಗೆ ಹೊರಬರಲಾರದೇ ತಳಮಳಿಸುವುದು ಮತ್ತು ಏನೇ ಹೇಳ ಹೊರಟರೂ ಕಡೆಗೆ ಆ ಮೂಲಕ್ಕೇ ಮತ್ತೆ ಮತ್ತೆ ಮರಳುವ ಕಾರಣದಿಂದಾಗಿ ಕವಿಯಾಗಿ ಕಾಣುವುದಕ್ಕಿಂತ ಲೇಖಕನಾಗಿಯೇ ಉಳಿದುಬಿಡುವುದೂ ಮತ್ತು ಆ ಅಂಥ ಚಿಂತನೆಯ ಲೇಖಕ ಬರೆಯ ಹೊರಟ ಕವಿತೆಯು ಕೂಡ ಆ ಸಿದ್ಧಾಂತದ ಘೋಷ ವಾಕ್ಯವೇ ಆಗಿ ಪರಿಸಮಾಪ್ತಿ ಆಗುವುದನ್ನು ನಾವು ಬಲ್ಲೆವು. ಬನ್ನಾಡಿಯವರ ಕಾವ್ಯ ಕೃಷಿ ಈ ಆರೋಪಗಳನ್ನು ಅಥವ ಮಿತಿಗಳನ್ನು ಸಮರ್ಥವಾಗಿ ಎದುರಿಸುತ್ತಿರುವುದನ್ನು ಅವರ ಕವಿತೆಗಳ ಓದಿನ ಮೂಲಕ ಗುರ್ತಿಸಬಹುದು ಕಡಲ ಧ್ಯಾನ ಸಂಕಲನಕ್ಕೆ ಬಾಲೂರಾವ್ ದತ್ತಿನಿಧಿಯ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿಯನ್ನು ಮತ್ತು ನೀಲಿ ಹೂ ಸಂಕಲನಕ್ಕೆ ಪುತಿನ ಕಾವ್ಯ ಪುರಸ್ಕಾರ ಪಡೆದ ಬನ್ನಾಡಿ ಕವಿತೆಗಳು ಬಿಎಂಶ್ರೀ ಅವರ ಹಾಗೆಯೇ ಸಮರ್ಥ ಅನುವಾದ ಸಾಮರ್ಥ್ಯವನ್ನೂ ಪುತಿನ ಥರದ ಸರ್ವರ ಸಮಾನತೆಯನ್ನೂ ಪಡೆದುದರ ಕಾರಣವಾಗಿದೆ. ಕಾವ್ಯ ವಿಮರ್ಶೆಯ ಸವೆದ ಜಾಡುಗಳು ಈ ಕವಿಯು ಎತ್ತಿಹಿಡಿದ ಭಾವನಾತ್ಮಕ ನೆಲೆಯಾಚೆಗಿನ ಬೌದ್ಧಿಕ ತಹತಹಿಕೆಗಳನ್ನು ಬೇಕೆಂತಲೇ ಬದಿಗೆ ಸರಿಸುವ ಕಾರಣದಿಂದಾಗಿ ಜನಪ್ರಿಯ ಆವೃತ್ತಿಯ ಬಹು ಪ್ರಸರಣದ ಪತ್ರಿಕೆಗಳಲ್ಲಿ ಇಂಥವರ ಕಾವ್ಯ ಪ್ರಕಟವಾಗುವುದು ಅಪರೂಪ. ಹಾಗೆಂದೇ ಏನೋ ತಮ್ಮ ಚಿಂತನೆಗಳನ್ನು ಕವಿತೆಗಳನ್ನಾಗಿ ಪೋಣಿಸುವ ವಸಂತರು ತಮ್ಮ ಹೆಸರಿನಂತೆಯೇ ಎಂಥ ಗ್ರೀಷ್ಮದಲ್ಲೂ ವಸಂತದ ಚಿಗುರನ್ನು ಕಾಣಿಸಬಲ್ಲ ಕನಸುಳ್ಳವರು. ಅವರ ಬಿಡಿ ಬಿಡಿ ಕವಿತೆಗಳ ಡಿಸೆಕ್ಷನ್ನಿಗಿಂತಲೂ ಒಟ್ಟೂ ಕಾವ್ಯದ ಅನುಸರಣದ ಅಭ್ಯಾಸಕ್ಕಾಗಿ ಈ ಟಿಪ್ಪಣಿಯಲ್ಲಿ ಎಂದಿನಂತೆ ಪ್ರತ್ಯೇಕವಾಗಿ ವಿಭಾಗಿಸದೇ ಅವರ ಕಾವ್ಯದ ನಿಲುವಿನ ಬದ್ಧತೆಯ ಸೂಕ್ಷ್ಮವನ್ನು ಒಟ್ಟಂದದಲ್ಲಿ ಸವಿಯಲು ಅವರ ನಾಲ್ಕು ಕವಿತೆಗಳನ್ನು ಇಲ್ಲಿ ಕಾಣಿಸುತ್ತಿದ್ದೇನೆ. “ಅರ್ಥವಾಗದಂತೆ ಯಾರಿಗಾಗಿ ಕಾವ್ಯ ಬರೆಯಬೇಕಾಗಿದೆ ಈಗ ನಾನು?” ಎನ್ನುವ ಸಂಕಟದಲ್ಲೇ ಒಟ್ಟೂ ವರ್ತಮಾನದ ದಾಂಗುಡಿಗಳನ್ನು ವಿಮರ್ಶಿಸುತ್ತಲೇ ಸುಳ್ಳು ಸುಳ್ಳೇ ಒಳಾರ್ಥಗಳಿವೆ ಎಂದು ಬಿಂಬಿಸುವವರ ಪ್ಯೂರಿಟಿಯನ್ನು ಈ ಇಂಪ್ಯೂರ್ ಕವಿತೆ ಹೇ(ಕೇ)ಳುತ್ತಿದೆ. ೧.ಯಾರಿಗಾಗಿ ಬರೆಯಬೇಕಾಗಿದೆ ಕಾವ್ಯ.. …………………………………………………………. ಈ ಜಗತ್ತು ಯಾವತ್ತೂ ನನಗೆ ಬೇಸರ ಬರಿಸಿರಲಿಲ್ಲ ನನ್ನ ಅಜ್ಜಿಯ ನಡುಗುವ ಕೈಗಳು ಮುಖದ ಸುಕ್ಕುಗಳು ನನ್ನ ಜೀವನ ಪ್ರೀತಿಯನ್ನು ಹೆಚ್ಚಿಸಿದವು ನನ್ನ ಸಂಪರ್ಕಕ್ಕೆ ಬಂದವರು ಒಳ್ಳೆಯವರೂ ಆಗಿರಲಿಲ್ಲ ಕೆಟ್ಟವರೂ ಆಗಿರಲಿಲ್ಲ ಅಥವಾ ಎರಡೂ ಆಗಿದ್ದರು ಎರಡೂ ಆಗಿರಲಿಲ್ಲ ಹೀಗೆ ಹಾರಿಹೋದವು ನನ್ನ ಯೌವ್ವನದ ದಿನಗಳು ಯಾವ ಪೂರ್ವನಿರ್ಧರಿತ ಯೋಚನೆಗಳೂ ಇಲ್ಲದೆ ಎಲ್ಲರಿಗೂ ಕಷ್ಟಗಳು ಇದ್ದವು ಸಾಗರದಂತೆ ಮೈ ಚಾಚಿಕೊಂಡ ಕಷ್ಟಗಳು ನಡುವೆ ಉಕ್ಕುವ ನಗು ಬದುಕಿನ ಭರವಸೆ ಹುಟ್ಟಿಸುವ ನಗು ಸುಟ್ಟು ಹಾಕಿಬಿಡಬಲ್ಲ ಬೆಂಕಿ ಹೂವಾಗಿ ಅರಳಿದ ಗಳಿಗೆಗಳೂ ಇದ್ದವು ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ಒಂದೋ ನಾನು ಓದುತ್ತಿರುವ ಪುಸ್ತಕಗಳಿಂದ ಎದ್ದು ಬಂದವರ ಹಾಗೆಯೂ ಅಥವಾ ಅವರೇ ಪುಸ್ತಕಗಳ ಒಳಗೆ ಸೇರಿಕೊಂಡವರ ಹಾಗೆಯೂ ಇರುತ್ತಿದ್ದುದರಿಂದ ನನಗೆ ಎಲ್ಲವೂ ಆಸಕ್ತಿದಾಯಕವೂ ನಿಗೂಢವೂ ಅಚ್ಚರಿದಾಯಕವೂ ಸಂತೋಷ ಕೊಡುವಂತದ್ದೂ ಖಿನ್ನನಾಗಿಸುವಂಥದ್ದೂ ಆಗಿ ಹೊಸ ವರ್ಷವೆನಿಸುತ್ತಿರಲಿಲ್ಲ ಯಾವ ವರ್ಷವೂ ಸಣ್ಣಪುಟ್ಟ ಆಸೆಗಳು ಹತ್ತಿಕ್ಕಿಕೊಂಡ ಸ್ವಾರ್ಥ ಹೆಡೆಬಿಚ್ಚುವ ಈಷ್ಯೆ೯ ಮನಸ್ಸು ಬಿಚ್ಚಿ ಹೇಳಿಕೊಳ್ಳುವ ಸಂಕಟಗಳು ಹೇಳದೇ ಉಳಿದ ಮಾತುಗಳು ಎಲ್ಲವೂ ನದಿಯೊಂದು ಹರಿಯುವ ಹಾಗೆ ಹರಿಯುತ್ತಲೇ ಇರುವಾಗ ಬೆಚ್ಚಿ ಬೀಳಿಸಿದ್ದು ಎಲ್ಲೋ ದೂರದಲ್ಲಿ ಎಂಬಂತೆ ಕೇಳಿಬರುತ್ತಿದ್ದ ಕೊಲೆಯ ಸದ್ದುಗಳು ಮನುಷ್ಯ ದೇಹವನ್ನು ಕತ್ತರಿಸಿ ಮೂಟೆಯಲಿ ಕಟ್ಟಿ ಬಿಸಾಕುತ್ತಿದ್ದ ಭೀಭತ್ಸಗಳು ಹಣಕ್ಕಾಗಿಯೋ ಪೂರ್ವದ್ವೇಷದಿಂದಲೋ ನಡೆಯುತ್ತಿದ್ದರಬಹುದಾದ ಕೃತ್ಯಗಳು ಅವೇ ಕೃತ್ಯಗಳು ಸಾಮೂಹಿಕವಾಗಿ ಬಿಟ್ಟರೆ? ಸಾಮೂಹಿಕವಾಗಿ ಒಬ್ಬನನ್ನು ಬೆನ್ನಟ್ಟಿದರೆ? ಗುಡಿಸಲುಗಳ ಮೇಲಿನ ಸಾಮೂಹಿಕ ದಾಳಿಯಾಗಿ ಬಿಟ್ಟರೆ? ಮುಗಿಸಿಬಿಡಲೆಂದೇ ಒಂದೇ ದಿಕ್ಕಿನಲ್ಲಿ ಯೋಚಿಸುವ ಇಬ್ಬರು ಮೂವರು ಹತ್ತಾರು ನೂರಾರು ಕೈಗಳು ಒಟ್ಟಾಗಿ ವಧಿಸತೊಡಗಿದರೆ? ಕಮರಿ ಹೋಯಿತು ನನ್ನ ಕಲ್ಪನೆ ಕಮರಿ ಹೋಗಿತ್ತು ನನ್ನ ಜಗತ್ತಿನ ಕಲ್ಪನೆಯೂ ನಡು ವಯಸ್ಸಿಗೆ ಕವಿದುಕೊಂಡಿತು ಕಣ್ಣಿಗೆ ಕತ್ತಲ ಪೊರೆ ಎಲ್ಲ ಅಸಡ್ಡಾಳಗಳ ನಡುವೆಯೂ ಸಹ್ಯವೆನಿಸಿದ್ದ ಜಗತ್ತು ಮೊದಲ ಬಾರಿಗೆ ಒಡೆದುಹೋಯಿತು ಕನ್ನಡಿಯೊಂದು ಠಳ್ಳನೇ ಒಡೆದು ಚೂರಾಗುವಂತೆ ಅರ್ಥವಾಗದಂತೆ ಯಾರಿಗಾಗಿ ಕಾವ್ಯ ಬರೆಯಬೇಕಾಗಿದೆ ಈಗ ನಾನು? ಸಿದ್ಧಾಂತದ ಅಂಟಲ್ಲಿ ಸಿಲುಕಿದವರು ಅದರಿಂದ ಹೊರ ಬಂದರೂ ಬಿಟ್ಟೂ ಬಿಡದೇ ಕಾಡುವ ಆ ಅದೇ ದಾರಿಗಳು ಅವರು ನಂಬಿದ ಅಧ್ಯಾತ್ಮದ ದಾರಿಯೇ ಆಗಿ ಬದಲಾಗುವುದನ್ನು ಈ ಪದ್ಯ ಸಮರ್ಥಿಸುತ್ತಿದೆ. ಈ ಕವಿತೆಯಲ್ಲಿ ಕವಿ ಯಾರೊಂದಿಗೆ ಸಂಕಟದ ಸಾಗರವನ್ನು ದಾಟಿದ್ದು ಪ್ರೇಮಿಯೊಂದಿಗೋ, ಗೆಳೆಯನೊಂದಿಗೋ ಅಥವ ತನ್ನದೇ ಸಿದ್ಧಾಂತದೊಂದಿಗೋ ಎನ್ನುವುದು ಆಯಾ ಓದುಗರ ಮರ್ಜಿಗೆ ಬಿಟ್ಟ ಸಂಗತಿ. ೨. ದಾಟಿದೆವು ನಾವು ಸಂಕಟದ ಸಾಗರವನು ……………………………………………………. ಸಂಕಟದ ಮಹಾಸಾಗರಗಳೇ ತುಂಬಿವೆ ನಮ್ಮ ಗತಕಾಲದ ದಿನಚರಿಯ ಪುಟಗಳಲಿ ಎಂತಹ ದಾರುಣ ಕಾಲವನು ದಾಟಿ ಬಂದೆವು ನಾವು ನಿನ್ನನು ತಲುಪಲು ನನ್ನ ಬಳಿ ಅಂದು ಒಂದು ಮುರುಕು ದೋಣಿಯೂ ಇರಲಿಲ್ಲ ಆಚೆ ದಡದಲ್ಲಿ ಕೈಬೀಸಿ ಹಾಗೆಯೇ ಮರೆಯಾಗಿ ಬಿಡುತ್ತಿದ್ದೆ ನೀನು ನಕ್ಷತ್ರಗಳ ಗೊಂಚಲನು ಮನೆಯಂಗಳದಲಿ ನೆಡುವ ಕಣಸ ಕಂಡಿದ್ದೆವು ನಾವು ಕಾಲೂರಲೊಂದು ಅಂಗುಲ ನೆಲ ಬಿಸಿಲ ತಾಪ ಮರೆಸಲು ನಾಕು ಹಿಡಿ ಸೋಗೆ ಇಷ್ಟಿದ್ದರೆ ಸಾಕು,ಗೆದ್ದೆವು ಅಂದುಕೊಂಡಿದ್ದೆವು ಇಕ್ಕಟ್ಟಾಗುತ್ತಾ ಹೋಗುವ ಊರ ಓಣಿಯ ದಾರಿ ಬೆನ್ನಿಗಂಟಿ ಈಟಿ ಇರಿವ ಮಂದಿಯ ಕಿಡಿ ಕಣ್ಣು ಸಾಗುತ್ತಲೇ ಇರಬೇಕೆಂಬ ಹಂಸ ನಡೆಯನು ಗಟ್ಟಿಗೊಳಿಸಿದವು ನಮ್ಮಲಿ ನಮ್ಮ ಜೊತೆಗಿದ್ದುದು ಗಾಳಿಯ ಮರ್ಮರ ಬಿಡದೆ ಹಿಂಬಾಲಿಸುವ ಕೋಗಿಲೆಯ ಕುಹೂ ಕುಹೂ ಗಾನ ಶೃತಿ ಹಿಡಿವ ಏಕತಾರಿ ಜೀರುಂಡೆ ಜೀಕು ಕವುಚಿ ಬಿದ್ದ ಬೋಗುಣಿಯೆಂಬ ಆಕಾಶದ ಸೊಗಸು ಪ್ರತೀ ಸಲ ಸಾಗರದ ಮುಂದೆ ನಿಂತಾಗಲೂ ಯೋಚಿಸುವುದಿದೆ ನಾವು ನಿರಾಳತೆಯ ಹೊದಿಕೆ ಹೊದ್ದಿರುವ ಸಾಗರವೆಂಬ ಸಾಗರವೇ ಹಾಗೆ ಕೂಗಿ ಕೊಳ್ಳುತ್ತಿದೆಯೇಕೆ ಲೋಕಕೆ ಮುಖ ಮಾಡಿ? ಕೊತ ಕೊತ ಕುದ್ದು ಅಲೆಯಲೆಯಾಗಿ ಹೊರಳಿ ದನಿಯೆತ್ತಿ ದಡಕ್ಕನೆ ಅಪ್ಪಳಿಸುತ್ತಿದೆಯೇಕೆ? ಅಂತಹ ಸಂಕಟ ಅದೇನು ಹುದುಗಿದೆ ನಿನ್ನ ಒಡಲಲಿ? ನಮ್ಮ ಉಸಿರ ಬಿಸಿಯನು ಉಳಿಸಿದ್ದು ಧನ ಕನಕ ಬಣ್ಣ ಬಡಿವಾರಗಳಲ್ಲ ದಿನವೂ ಇಷ್ಟಿಷ್ಟೇ ಹಂಚಿಕೊಂಡ ಒಲವೆಂಬ ಮಾಯಕದ ಗುಟುಕುಗಳು ಮಿಂದುಟ್ಟು ನಲಿಯ ಬಯಸಿದ್ದು ನಾನು ನಿನ್ನ ಅಂಗ ಭಂಗಿಗಳ ನಿರಾಭರಣ ಝರಿಯಲಿ ಮುಗಿಲ ನಕ್ಷತ್ರಕೆ ಆಸೆಪಡದ ನಾನು ಮುಖವೂರಲು ಬಯಸಿದ್ದು ನಿನ್ನ ನಿಬಿಡ ಹೆರಳಿನ ಸಿಕ್ಕುಗಳಲಿ ———————————- “ಕಡಲು ಮತ್ತು ನೀನು” ಪದ್ಯದ ವಿನಯವಂತಿಕೆ ಎಂದಿನ ಇವರ ರೂಕ್ಷ ರೀತಿಯಿಂದ ಬಿಡಿಸಿಕೊಂಡ ಆದರೆ ಸಂಬಂಧಕ್ಕೂ ಸಿದ್ಧಾಂತದ ಹೊರೆಯನ್ನು ದಾಟಿಸುವ ಯತ್ನ ೩.ಕಡಲು ಮತ್ತು ನೀನು ………………….….. ಮಳೆಗಾಲದ ಕಡಲು ಎಂದಿನ ಕಡಲಿನಂತಲ್ಲ ನೋಡಿದ್ದೀಯ ನೀನು ಮಳೆಗಾಲದ ಕಡಲನು? ಅದು ಅಲ್ಲೋಲ ಕಲ್ಲೋಲ ಮಗುಚುವುದನು? ಜಗತ್ತಿನ ಕೊಳೆ ಕೆಸರನು ಮರುಮಾತನಾಡದೆ ಹೊದ್ದು ಕೆಸರಾಗುವುದನು ತಾನೂ ನೀಲಾಕಾಶ ತಾನಾಗಬೇಕೆಂದು ವರುಷವಿಡೀ ಕನಸುವ ಕಡಲು ಈಗ ಕಪ್ಪಾಗುವುದು ಅದೂ ಎಂಥಾ ಕಪ್ಪು ಕಾಡಿಗೆ ಕಪ್ಪು ಕಡಲು! ತಾಳಲಾರದೆ ತಳಮಳ ಅಗ್ನಿಕುಂಡವಾಗುವುದು ಕೊತ ಕೊತ ಕುದಿಯುವುದು ನೋಡಿದ್ದೀಯಾ ನೀನು ನೋಡಿದ್ದೀಯಾ ನೋಡಿದ್ದೇನೆ ನಾನು ಕಡಲನು ನಿನ್ನ ಕಣ್ಣುಗಳಲಿ ಕಡಲು ಅಲ್ಲಿ ತುಳುಕಾಡುವುದನು ಯಾರ ಊಹೆಗೂ ನಿಲುಕದ ಭಾವ ಕಡಲು ಒಂದು ವ್ಯತ್ಯಾಸವಿದೆ ಮಳೆಗಾಲದ ಕಡಲಿಗೂ ನಿನ್ನ ಕಾಡಿಗೆ ಕಣ್ಣಿಗೂ ಭೋರ್ಗರೆವ ನೀನು ರೆಪ್ಪೆಗಳ ಒಳಗೇ ಕೂಗು ಹಾಕುವುದಿಲ್ಲ ಕಡಲಂತೆ ಕತ್ತರಿಸುತ್ತಾ ಹರಿಯುವುದೂ ಇಲ್ಲ ಯಾರನೂ ನೋಯಿಸುವ ಇರಾದೆ ಇರದ ನೀನು ಎಲ್ಲವನು ಬಲ್ಲ ಮೌನ ಕಡಲು ಬೇಸರ ಮುತ್ತಿಕೊಂಡಾ ನಿನ್ನನು ಮರಳುವೆ ನೀನು ನಿನ್ನ ಅಲೆಹಾಡಿನರಮನೆಗೆ ಅನುಗಾಲದ ಕಡಲಂತೆ ಶಾಂತ,ಗಂಭೀರ ಅಲೆ ಅಲೆಗಳಲಿ ಫಳಫಳ ಬೆಳ್ಳಿ ಬೆಳಕ ಚಿಮ್ಮಿಸುವ ರುದ್ರ ನೀಲ ಮನೋಹರ ಮಡಿಲು ಇಂಗಿ ಹೋಗುವುದು ನಿನ್ನೊಳಗೆ ಯಾರ ಗಮನಕೂ ಬಾರದೆ ಬೆಂಕಿಯ ನದಿಯೊಂದು ದೂರದಲೆ ನಿಂತು ನಿನ್ನ ನೋಡುವೆ ನಾನು ಕಡಲ ಅನತಿ ದೂರದಲಿ ಕೈ ಕಟ್ಟಿ ನಿಂತಿರುವ ಅನಾದಿ ಬಂಡೆಯೊಂದಿರುವುದಲ್ಲ ಹಾಗೆ ಪ್ರೀತಿಯ ಸಿಂಚನದಲಿ ದಿನವೂ ತೋಯಬಯಸುವವನು ಸ್ಪರ್ಶದ ದಿಗಿಲಿಗೆ ಹಾತೊರೆಯುವವನು ಬಿರುಮಳೆ ಹೆಂಡದ ನಶೆ ಏರಿಸಿಕೊಂಡ ಕಡಲು ಬಾನೆತ್ತರ ಚಿಮ್ಮಿ ಬಂದೆರಗುವುದಲ್ಲ ಬಯಸುವೆ ಅದನೇ ನಾನೂ ಉಪ್ಪು ತೋಳಾಗಿ ಬಂದು ನೀನು ಅಪ್ಪುವುದನು ———————————————— ಮಾಧ್ವ ಸಂಪ್ರದಾಯವನ್ನು ಬಿಡದೆಯೂ ಮಾರ್ಕ್ಸ್ ವಾದದ ಅಪ್ರತಿಮ ಪ್ರತಿ ಪಾದಕರಾಗಿದ್ದ ಕವಿ ಸು.ರಂ.ಎಕ್ಕುಂಡಿ ಯಾಕೋ ಈಗ ನೆನಪಾಗುತ್ತಾರೆ. ತಾವು ನಂಬಿದ ಸಿದ್ಧಾಂತ ಮತ್ತು ತತ್ವಕ್ಕೆ ನಿಷ್ಠೆ ಇಟ್ಟುಕೊಂಡೂ ಬದುಕಿನ ರೀತಿಯಲ್ಲಿ ರಾಜಿಯಾಗದೆ ಆದರ್ಶವಾಗುವುದು ಕಡು ಕಷ್ಟದ ಕೆಲಸ. ವಸಂತ ಬನ್ನಾಡಿಯವರೂ ಎಕ್ಕುಂಡಿಯವರ ಮಾರ್ಗವನ್ನು ಅನುಲಕ್ಷಿಸಿದ್ದೇ ಆದರೆ ಅವರೊಳಗಿನ ಕವಿಗೆ ಮತ್ತಷ್ಟು ಕಸುವು ಮತ್ತು ಕಸುಬು ಸಿದ್ಧಿಸೀತೆಂಬ ಆಶಯದೊಂದಿಗೆ “ಮಳೆಗಾಲದ ಹಾಡು ಪಾಡು” ಕವಿತೆಯ ಸಾಲುಗಳಾದ







