ಕಾವ್ಯಯಾನ
ಗಝಲ್ ಸಹದೇವ ಯರಗೊಪ್ಪ ಹರವಾದ ಎದೆಯ ಹೊಲ ಹರಗಿ ಮಿದುಗೊಳಿಸಿ ಮಳೆಗಾಗಿ ಕಾಯುತಿರುವೆ| ಕಸ ಕಡ್ಡಿಗಳನು ಎರೆಹುಳುವಿನ ಜರಡಿಯಿಂದ ಸಾಣಿಸಿ ಮಳೆಗಾಗಿ ಕಾಯುತಿರುವೆ|| ಎಲ್ಲೇ ಮೀರಿ ಓಡುವ ಮೋಡಗಳಿಗೆ ಬಲೆ ಬಿಸಿ ನಾಲ್ಕು ಹನಿ ಉದುರಿಸಿ ಬಿಸಿಲು ತಣಿಸುವೆ| ಇಳಿಜಾರಿನ ಎದೆಗೆ ನೀರುಣಿಸಲು ಒಡ್ಡು ಬಿಗಿಗೊಳಿಸಿ ಮಳೆಗಾಗಿ ಕಾಯುತಿರುವೆ|| ಇರಿದು ಹರಿದೋಡುವ ಭಾವದಲೆಗಳಿಗೆ ಅಲ್ಲಲ್ಲಿ ತಡೆಗೋಡೆ ನಿರ್ಮಿಸಿರುವೆ| ಬಾಯ್ದೆರೆದ ರೆಂಟೆ ಸಾಲುಗಳ ಗಂಟಲು ಒಣಗಿಸಿ ಮಳೆಗಾಗಿ ಕಾಯುತಿರುವೆ|| ಮಳೆ ಮೈದುಂಬಿ ಸುರಿದು ಇಳೆಗೆ ಆಲಂಗಿಸಿ ಹಸಿರು ಅಚ್ಛಾದಿಸುವ ವಿಶ್ವಾಸ| ಕಪ್ಪು ಮೂತಿಯ ಮುಗಿಲ ಕಣ್ಣೀರು ಕೋಡಿ ಹರಿವು ಆಶಿಸಿ ಮಳೆಗಾಗಿ ಕಾಯುತಿರುವೆ|| ನೆಲ ಮುಗಿಲು ಮಿಲನ ಮರೆತರೆ ಕಂಗಳ ಕೊಳದ ನೀರುಣಿಸಿ ಬರ ಚಿಗುರಿಸುವೆ| ಸಾಚಿ ಉಡಿ ಮುತ್ತುಗಳನ್ನು ಕೂರಿಗೆ ಕಣ್ಣಲ್ಲಿ ಪೋಣಿಸಿ ಮಳೆಗಾಗಿ ಕಾಯುತಿರುವೆ|| ***********









