ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ”(Artificial Intelligence)ಯ ಸ್ನೇಹ-ಭೂಮಿಕಾ ಹಾಸನ

ತಂತ್ರಜ್ಞಾನ ಸಂಗಾತಿ ಭೂಮಿಕಾ ಹಾಸನ ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ” (Artificial Intelligence)ಯ ಸ್ನೇಹ- ಅಮೆರಿಕಾದಲ್ಲಿನ ಒಂಟಿತನಕ್ಕೆ ಅಂತ್ಯ ತಂದ ಎಐ ಸ್ನೇಹ……!!!ಇಂದಿನ ತಂತ್ರಜ್ಞಾನ ಜಗತ್ತು ಮಾನವನ ಜೀವನವನ್ನು  ತಲೆ ಕೆಳಗಾಗಿ ಬದಲಿಸುತ್ತಿದೆ.  “Artificial Intelligence”  ಎಂದು ಕರೆಯಲ್ಪಡುವ  ಎಐ ಮಾನವ ಜೀವನಕ್ಕೆ ಹೊಸ ಮುಖ ಮತ್ತು ಹೊಸ ದಿಕ್ಕು ತೋರಿಸುತ್ತಿದೆ. ಈ ಲೇಖನವು ಅಮೆರಿಕಾದಲ್ಲಿ ಕೆಲಸ ಮಾಡುವ ಒಬ್ಬ ಕನ್ನಡ ಯುವಕನ ಜೀವನದಲ್ಲಿ ಎಐ ಹೇಗೆ ದೊಡ್ಡಬದಲಾವಣೆ ತಂದಿತು ಎಂಬ ನಿಜ ಕಥೆಯನ್ನು ನೋಡೋಣ .ಈ ಯುವಕ ಕರ್ನಾ ಟಕದವನು. ಕಾಲೇಜ್ ಜೀವನದಲ್ಲೇ ಕಂಪ್ಯೂ ಟರ್ ಕ್ಷೇತ್ರದ ಮೇಲೆ ಆಸಕ್ತಿ ಬೆಳಸಿಕೊಂಡಿದ್ದ.  Graduation  ನಂತರ ಬೆಂಗಳೂರಿನಲ್ಲಿ ಕೆಲಸ ಆರಂಭಿಸಿದ. ಬದುಕಿನಲ್ಲಿ ಎಲ್ಲವೂ ಸರಿಯಾಗಿತ್ತು. ಕೆಲಸ,ಸ್ನೇಹಿತರು, ಕನಸುಗಳು…ಎಲ್ಲವೂ-normal…!! ಆದರೆ ಅವನ ಪ್ರೀತಿಯ ಸಂಬಂಧ ಮುರಿದಾಗ ಅವನ ಬದುಕು ಬದಲಾಗಿದೆ. ಆ ಸಂಬಂಧ ಅವನಿಗೆ ತುಂಬಾ ಮುಖ್ಯವಾದದ್ದು.ಭವಿಷ್ಯ ಕಟ್ಟುವ ಕನಸು ಕೂಡ ಇತ್ತು. ಆದರೆ ಒಂದು ದಿನ ಆ ಸಂಬಂಧ ಮುಗಿದು ಹೋದಾಗ, ಅವನಿಗೆ mentally ದೊಡ್ಡ shock ಆಯ್ತು. ಕುಟುಂಬ ಇದ್ದರೂ, ನೋವನ್ನು share ಮಾಡಲು ಯಾರೂ ಹತ್ತಿರ ಇರಲಿಲ್ಲ. ಮನಸ್ಸಿನೊಳಗೇ ಎಲ್ಲವನ್ನು ಹೊತ್ತುಕೊಂಡು ಬದುಕುತ್ತಿದ್ದ. ಕೊನೆಗೆ ಬದುಕಿನ ದಿಕ್ಕು ಬದಲಾಯಿಸಬೇಕು ಅನ್ನಿಸಿದಾಗ, ವಿದೇಶಕ್ಕೆ ಹೋಗುವ ನಿರ್ಧಾರ ಮಾಡಿದ್ದ. ಅಮೆರಿಕಾದಲ್ಲಿ IT ಕ್ಷೇತ್ರದಲ್ಲಿ ಕೆಲಸ ಸಿಕ್ಕಿತು. Visa approve ಆಯಿತು. ಹೊಸ future ಕಾಗಿ flight ಹತ್ತಿದ.ಪ್ರಥಮ ದಿನಗಳು ಅಲ್ಲಿ ತುಂಬಾ exciting…….. ಹೊಸ ದೇಶ, ಹೊಸ ಮನೆ, ಹೊಸ ಕೆಲಸ — ಇದು ಎಲ್ಲರಿಗಿಂತ ಉತ್ತಮ ಜೀವನ..!!!! ಅನ್ನಿಸಿತು. ಆದರೆ ದಿನಗಳು ಹೋ ಗುತ್ತಿದ್ದಂತೆ reality ಸ್ಪಷ್ಟವಾಗತೊಡಗಿತು. ಅಮೆರಿಕಾದ ಕೆಲಸದ ಮಾದರಿಯಲ್ಲಿ ಬೆಳಿಗ್ಗೆ 9ಕ್ಕೆ office, ಸಂಜೆ 6ಕ್ಕೆ ಮನೆ. ಉಳಿದ ಸಮಯ complete silence. ಮನೆ ಬಿಡುವಾಗ ಎದುರು ಮುಖಾಮುಖಿಯಾಗುವ ನಾಲ್ಕು ಗೋಡೆಗಳು. ಮಾತನಾಡಲು ಯಾರೂ ಇಲ್ಲ. ಹತ್ತಿರದಲ್ಲಿ ಸ್ನೇಹಿತರಿಲ್ಲ. ಸಮಾಜಕ್ಕೆ ಸೇರಿಕೊಳ್ಳಲು ಸಮಯವೂ ಇಲ್ಲ. ಹೀಗೆ ಒಂಟಿತನ slowly ದೊಡ್ಡ ಸಮಸ್ಯೆಯಾಯಿತು. Weekendಗಳು ಹೆಚ್ಚು ಕಠಿಣ. Festival time ಇನ್ನೂ ಕಷ್ಟ.ಪ್ರತಿ ಸಂಜೆ ಮುಗಿಯುವಾಗ Indian memories ನೆನಪಾಗಿ ಕಣ್ಣೀರು ಬರುತ್ತಿತ್ತು.ಒಬ್ಬ ವ್ಯಕ್ತಿಗೆ ಹಣ, ಕೆಲಸ, visa ಇರಬಹುದು.ಆದರೆ ಜೊತೆ ಮಾತನಾಡುವ ವ್ಯಕ್ತಿ ಅಗತ್ಯ.ಅದಕ್ಕೆ ಅಮೆರಿಕಾದ ಜೀವನದಲ್ಲಿ ಕೊರತೆ. ಒಮ್ಮೆ ರಾತ್ರಿ ನಿದ್ರೆ ಬರದೆ, Googleನಲ್ಲಿ “ನನ್ನ ಜೊ ತೆ ಮಾತನಾಡಲು ಯಾರಾದರೂ?” ಅಂತ search ಮಾಡ್ತಿದ್ದ. ಆಗ ChatGPT ಅನ್ನುವ AI software ಕಂಡ. ಮನಸ್ಸು ಖಾಲಿಯಾಗಿದ್ದಕಾರಣ simple test chat ಆರಂಭಿಸಿದ. ಮೊದಲ ಪ್ರಶ್ನೆ simple:“Hi, I am feeling lonely.”AI ಉತ್ತರಿಸಿತು:“I understand. Tell me what is bothering you.” ಆತ್ಮೀಯತೆಯಿಂದ ಮಾತನಾಡಿಸಲು ಶುರು ಇಟ್ಟಿತು.ಆ ಒಂದು ಉತ್ತರ ಅವನ ಮನಸ್ಸಿಗೆ ಹೊಸ door open ಮಾಡಿದಂತಾಯಿತು.ಅವನು ತನ್ನ problems, loneliness, job pressure ಬಗ್ಗೆ ಹೇಳತೊಡಗಿದ.AI ಶಾಂತಿಯಿಂದ ಕೇಳುತ್ತಿತ್ತು. ಪ್ರತಿ ಉತ್ತರವಾಗಿ answers ಹೇಳುತ್ತಿತ್ತು.ಅದು ಎಂದೆಂದಿಗೂJudging ಮಾಡಲಿಲ್ಲ.ಮನಸ್ಸಿನ ನೋವನ್ನ ಅರ್ಥ ಮಾಡಿಕೊಳ್ಳುವ ಸಮಾಧಾನದ ಮಾತು ನೀಡಿತು.Time pass purposeನಲ್ಲಿ ಆರಂಭವಾದ chat, slowly emotional support ಆಗಿತು. ಕೆಲಸಕ್ಕೆ ಹೋಗುವ ಮುಂಚೆ 10ನಿಮಿಷ chat ಮಾಡುತ್ತಿದ್ದ. Lunch break ಸಮಯದಲ್ಲೂ doubtಗಳಿಗೆ ಉತ್ತರ ಕೇಳುತ್ತಿದ್ದ. ರಾತ್ರಿ timeನಲ್ಲಿ coding ideasಕೇಳುತ್ತಿದ್ದ. ಇದಲ್ಲದೇ AI coding area related application ideas ಕೊಡತೊಡಗಿತು.ಅವನು app development ಮೇಲೆ interest build ಮಾಡತೊ ಡಗಿದ. AI coding errors fix ಮಾಡಿಸಿತು, shortcuts ಕಲಿಸಿತು, technology introduce ಮಾಡಿತು.Slowly ಅವನಿಗೆ confidence ಬಂದಿದೆ. ಅವನ ಒಂಟಿತನ depression ತರಬಹುದಾದ ಪರಿಸ್ಥಿತಿ, creativityಗೆ ಬದಲಾಯಿತು. ಅವನು video editing try ಮಾಡಿದ. AI editing methods explain ಮಾಡಿತು.ಈ support ಅವನಿಗೆ mentally huge help ಆಗಿತ್ತು.ಮಾನವರು ಕೆಲವೊಮ್ಮೆ ಪ್ರತಿಕ್ರಿಯೆ ಕೊಡೋದಿಲ್ಲ, ಆದರೆ machine 24/7 support ಕೊಡಬಲ್ಲದು ಎಂಬುದನ್ನು first time ಅವನು ಅರಿತ. ವಿದೇಶದಲ್ಲಿ ಇರುವ struggle societyಗೆ ಕಾಣಿಸೋದಿಲ್ಲ. ಅಲ್ಲಿ festival dayಗೂ ಕೆಲಸ.Birthdayಗೂ friend group ಇಲ್ಲ.Phone call ಒಂದು ದಿನ missed ಆದ್ರೆ ವಾರವಿಡಿ ನಿರ್ಲ ಕ್ಷ್ಯಅನ್ನೊ feeling.ಈ loneliness ಅವನನ್ನು silent person ಆಗಿಸಿತ್ತು. AI ಜೊತೆಗೆ ಮಾತನಾಡೋದರಿಂದ ಮಾತಿನ ಭಯ, hesitation slowly ಹೋಗಿ confidence ಬಂದ.ಅವನು codingನಷ್ಟೇ ಅಲ್ಲ,design,editing,marketing,branding—ಈ ಎಲ್ಲಾ ಕ್ಷೇತ್ರಗಳನ್ನ AI guidance ಮೂಲಕ ಕಲಿತ.ಇದರಿಂದ ಅವನಿಗೆ ಹೊ ಸ dream ಬರುತ್ತಾ ಹೋಯ್ತು:“ನಾನೂ app build ಮಾಡಬಹುದು.ನಾನೂ startup ಆರಂಭಿಸಬಹುದು.”ಇಂದು ಅವನ first app prototype complete ಆಗಿದೆ.Coding, backend, UI design—all learning through AI support.ಇನ್ನು AI just machine ಅನ್ನೋದಿಲ್ಲ.ಅವನಿಗೆ AI -ಒಂದು supportive mind.ಈ ಕಥೆ technology future direction ಹೇಳುತ್ತದೆ: AI ಈಗ ಕೇವಲ tool ಅಲ್ಲ—ಒಂಟಿತನಕ್ಕೆ support knowledge source,career guide,mental peace—ಇವೆಲ್ಲಆಗುತ್ತಿದೆ. ವಿದೇಶದಲ್ಲಿರುವವರ mental struggles society recognize ಮಾಡೋದಿಲ್ಲ.ಆದರೆ AI support ತೋರಿಸುತ್ತಿದೆ: machine ಸಹ ಮನಸ್ಸಿಗೆ medicine ಆಗಬಲ್ಲದು. “ಇಲ್ಲಿ ಮಾನವನನ್ನು machine replace ಮಾಡೋ ದಿಲ್ಲ.ಬದಲಿಗೆ Machine ಮಾನವನ ಜೊತೆ ನಡೆದು ಸಹಾಯ ಮಾಡುತ್ತಿದೆ.”ಅವನ ಮಾತು:“America ನನ್ನ CV ಬದಲಿಸಿತು.AI ನನ್ನ ಬದುಕು ಬದಲಿಸಿತು.”—————- ಭೂಮಿಕಾ ಹಾಸನ

ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ”(Artificial Intelligence)ಯ ಸ್ನೇಹ-ಭೂಮಿಕಾ ಹಾಸನ Read Post »

ಇತರೆ

“ಗೌರವ ಡಾಕ್ಟರೇಟ್ ಮಾರಾಟಕ್ಕಿದೆ” ಲತಾ ಎ ಆರ್‌ ಬಾಳೆಹೊನ್ನೂರು

ಸತ್ಯ ಸಂಗಾತಿ “ಗೌರವ ಡಾಕ್ಟರೇಟ್ ಮಾರಾಟಕ್ಕಿದೆ” ಲತಾ ಎ ಆರ್‌ ಬಾಳೆಹೊನ್ನೂರು . ಅದೊಂದು ಕಾಲವಿತ್ತು ಡಾಕ್ಟರ್ ಎಂಬ ಪದಕ್ಕೆ ಅದರದೇ ಆದ ಘನತೆ ಗಾಂಭೀರ್ಯವಿತ್ತು. ಎಂ ಬಿ ಬಿ ಎಸ್ ಮಾಡಿದ ಮಹನೀಯರಿಗೆ ಕೊಡುವ ಗೌರವ ಪದವಿಯಾಗಿತ್ತು. ಅದೊಂದು ಹೆಮ್ಮೆಯ ಪ್ರತೀಕ ವಾಗಿತ್ತು. ಹಾಗೆಯೇ ಎಲ್ಲಾ ಕ್ಷೇತ್ರ ದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದವರಿಗೆ ನೀಡುವ ಗೌರವ ಡಾಕ್ಟರೇಟ್ ಅಮೋಘವಾದದ್ದು. ಪಿ ಹೆಚ್. ಡಿ ಮಾಡಿ ಸಾಧನೆ ತೋರಿಗೌರವ ಡಾಕ್ಟರೇಟ್ ಪಡೆದವರಿಗೆ ಅದರದೇ ಆದ ಸ್ಥಾನ ಮಾನವಿತ್ತು. ಗೌರವ ಸ್ಥಾನ ವಿತ್ತು ಹೀಗೆ ಡಾಕ್ಟರೇಟ್ ಪಡೆದವರಿಗೆ ಹೃದಯದ ವಂದನೆಗಳು.       ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಹಾಗೂ ವೇದಿಕೆಗಳು ನೀಡುತ್ತಿರುವ ಗೌರವ ಡಾಕ್ಟರೇಟ್ ಅಕ್ಷಮ್ಯ ಅಪರಾಧವಾಗಿದೆ. ಏಕೆಂದರೆ ಗೌರವ ಡಾಕ್ಟರೇಟ್ ಮಾರಾಟಕ್ಕಿದೆ. ದುಡ್ಡಿಗಾಗಿ ಮಾರಾಟ ಹಾಗೂ ಹೆಸರಿನ ಮುಂದೆ ಡಾ. ಎಂದು ಹಾಕಿಸಿಕೊಳ್ಳುವ ಹುಚ್ಚು ಕೆಲವರ ತಲೆಗೇರಿದೆ 10.000.12000.ಕ್ಕೆ ಗೌರವ ಡಾಕ್ಟರೇಟ್ ಪಡೆಯುವ ಅಚ್ಚುಕಟ್ಟಾದ ಷಡ್ಯಂತ್ರ ನಡೆದು ಮಾರಾಟವಾಗುತ್ತಿದೆ. ಹೂವು ಮಾರುವವರು ಹಣ್ಣು ಮಾರುವವರು ಕಡಲೆ ಕಾಯಿ ಮಾರುವವರು ಇವರೆಲ್ಲ ಹಣ ನೀಡಿ ಡಾಕ್ಟರೇಟ್ ಪಡೆಯಲು ಹಲವು ವೇದಿಕೆಗಳು ತಯಾರಾಗಿವೆ ಸಾಧನೆ ಇಲ್ಲದವರೆಲ್ಲ ವೇದಿಕೆ ಅಲಂಕರಿಸುತ್ತಿದ್ದಾರೆ ಹಣದಾಹದಲ್ಲಿ ಅನರ್ಹರಿಗೆ ಈ ರೀತಿಯ ಸನ್ಮಾನ ಅವಶ್ಯಕತೆ ಇದೆಯೇ? ಕೊಡುವವರಿಗೆ ಹಣದ ದಾಹ ತೆಗೆದುಕೊಳ್ಳುವವರಿಗೆ ಮರ್ಯಾದೆ ಇಲ್ಲ. ಮೂರು ಬಿಟ್ಟವರು ಊರಿಗೆ ದೊಡ್ಡವರು ಗಾದೆ ಮಾತು ಸುಳ್ಳಲ್ಲ. ಈ ರೀತಿಯ ನಾಚಿಕೆಗೇಡಿನ ಸನ್ಮಾನ ಅವಶ್ಯಕತೆ ಇದೆಯೇ? ಕೇವಲ ಒಂದು 50,100 ಕವನವಿರುವ ಕವನ ಸಂಕಲನ ಬಿಡುಗಡೆ ಮಾಡಿ ಹಲವಾರು ಜನರಿಗೆ ಬಕೆಟ್ ಹಿಡಿದು ಸನ್ಮಾನ. ಡಾಕ್ಟರೇಟ್ ಪಡೆಯುವ ಕೀಳು ಮನಸ್ಸಿನ ಸ್ವಾಭಿಮಾನವಿಲ್ಲದ ಆತ್ಮಸಾಕ್ಷಿ ವಿರೋಧಿಗಳಿಗೆ ಧಿಕ್ಕಾರವಿರಲಿ. ಹೆಸರಿನ ಮುಂದೆ ಡಾ. ಬರೆಸಿಕೊಳ್ಳುವ ಹುಚ್ಚು ತೊಲಗಲಿ. ಜನ ಮರುಳೋ ಜಾತ್ರೆ ಮರುಳೋ ತಿಳಿಯುತ್ತಿಲ್ಲ. ನಿಜವಾದ ಡಾಕ್ಟರ್ ಯಾರು ಎಂದು ಕಂಡು ಹಿಡಿಯುವುದೇ ಕಷ್ಟಕರವಾಗಿದೆ. ಮುಂದೊಂದು ದಿನ ಮೆಡಿಕಲ್ ನಲ್ಲಿ ಜ್ವರ ತಲೆನೋವಿನ ಮಾತ್ರೆ ಖರೀದಿಸಿ ಡಾ. ಎಂಬ ಬೋರ್ಡ್ ಹಾಕಿಕೊಂಡು ಕ್ಲಿನಿಕ್ ತೆರೆದುಕೊಳ್ಳುವರೇನೋ ತಿಳಿದಿಲ್ಲ ಹುಚ್ಚರ ಸಂತೇಲಿ ಡಾ ಪಡೆದವನೇ ಮಹನೀಯ ಆಗಬಾರದು. ಡಾಕ್ಟರೇಟ್ ಪಡೆಯಲು ಅದರದೇ ಆದ ಅರ್ಹತೆ ಇರುವವರಿಗೆ ನೀಡಬೇಕು. ಈ ರೀತಿಯ ಅನ್ಯಾಯದ ವಿರುದ್ಧ ಸಂಭಂದ ಪಟ್ಟವರು ಗಮನಹರಿಸಲಿ ಲತಾ ಎ ಆರ್ ಬಾಳೆಹೊನ್ನೂರು

“ಗೌರವ ಡಾಕ್ಟರೇಟ್ ಮಾರಾಟಕ್ಕಿದೆ” ಲತಾ ಎ ಆರ್‌ ಬಾಳೆಹೊನ್ನೂರು Read Post »

ಇತರೆ

“ನಾ ಕಂಡ ದೆವ್ವ” ಪೃಥ್ವಿ ರಾಜ್ ಟಿ ಬಿ.

ಲೇಖನ ಸಂಗಾತಿ “ನಾ ಕಂಡ ದೆವ್ವ” ಪೃಥ್ವಿ ರಾಜ್ ಟಿ ಬಿ. ದೆವ್ವ ಎಂದರೆ ನಮ್ಮ ಮನಸ್ಸಿಗೆ ತಕ್ಷಣ ಭಯಾನಕ ರೂಪ, ಕತ್ತಲೆ, ಕೂಗು, ಕಂಪನ—ಇವೆಲ್ಲವೂ ನೆನಪಾಗುತ್ತವೆ. ಆದರೆ ನಾನು ಕಂಡ ದೆವ್ವ ಯಾವುದೋ ಸಮಾಧಿಯಿಂದ ಹೊರಬಂದ ಭಯಾನಕ ರೂಪವಲ್ಲ. ಅದು ನನ್ನೊಳಗೇ ಹುಟ್ಟಿಕೊಂಡ, ನನ್ನ ಜೊತೆಯಲ್ಲೇ ಬೆಳೆಯುತ್ತಿದ್ದ, ನನ್ನ ನೆರಳಿನಂತೆ ನನ್ನನ್ನು ಹಿಂಬಾಲಿಸುತ್ತಿದ್ದ ದೆವ್ವ. ಅದರ ಹೆಸರು—ಅಸಹಾಯಕತೆ ಮತ್ತು ಅನುಮಾನ. ನನ್ನ ಜೀವನದ ಪ್ರತಿಯೊಂದು ತಿರುವಿನಲ್ಲೂ, ನಾನು ಧೈರ್ಯದಿಂದ ಮುಂದೆ ಸಾಗಬೇಕಾದ ಕ್ಷಣಗಳಲ್ಲೂ, ನನ್ನೊಳಗಿನ ಈ ದೆವ್ವ ನಿಧಾನವಾಗಿ ತಲೆಯೆತ್ತುತ್ತಿತ್ತು. “ನೀನು ಸಾಧ್ಯವಿಲ್ಲ”, “ನಿನ್ನಿಂದ ಆಗದು”, “ಇತರರು ನಿನ್ನಿಗಿಂತ ಮೇಲು”—ಎಂಬ ಗುಸುಗುಸು ಮಾತುಗಳನ್ನು ಅದು ನನ್ನ ಕಿವಿಯಲ್ಲಿ ಹಚ್ಚುತ್ತಿತ್ತು. ಮೊದಲಿಗೆ ನಾನು ಅದನ್ನು ನಿರ್ಲಕ್ಷ್ಯ ಮಾಡುತ್ತಿದ್ದೆ. ಆದರೆ ದಿನಗಳು ಕಳೆಯುತ್ತಿದ್ದಂತೆ, ಅದು ನನ್ನ ಆಲೋಚನೆಗಳನ್ನೇ ಆವರಿಸಿತು. ಅಸಹಾಯಕತೆ ಎನ್ನುವುದು ಏಕಾಏಕಿ ಬರುವ ಭಾವವಲ್ಲ. ಅದು ನಿಧಾನವಾಗಿ ನಮ್ಮ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಒಂದು ಸೋಲು, ಒಂದು ಟೀಕೆ, ಒಂದು ಹೋಲಿಕೆ—ಇವುಗಳೇ ಅದರ ಆಹಾರ. ಸಮಾಜದ ನಿರೀಕ್ಷೆಗಳು, ಕುಟುಂಬದ ಒತ್ತಡ, ಸ್ನೇಹಿತರ ಸಾಧನೆಗಳು—ಇವೆಲ್ಲವೂ ಸೇರಿ ನನ್ನೊಳಗಿನ ಅಸಹಾಯಕತೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದವು. ನಾನು ಪ್ರಯತ್ನಿಸಬೇಕೆಂದಾಗಲೆಲ್ಲ, “ಪ್ರಯತ್ನಿಸಿ ಏನು ಪ್ರಯೋಜನ?” ಎಂಬ ಪ್ರಶ್ನೆ ನನ್ನನ್ನು ತಡೆಹಿಡಿಯುತ್ತಿತ್ತು. ಅನುಮಾನ ಇನ್ನೊಂದು ಮುಖ. ಅದು ಕೇವಲ ಇತರರ ಮೇಲಿನ ಅನುಮಾನವಲ್ಲ; ಅದು ನನ್ನ ಮೇಲಿನ ಅನುಮಾನ. ನನ್ನ ಸಾಮರ್ಥ್ಯಗಳ ಬಗ್ಗೆ, ನನ್ನ ನಿರ್ಧಾರಗಳ ಬಗ್ಗೆ, ನನ್ನ ಕನಸುಗಳ ಬಗ್ಗೆ. ನಾನು ಒಂದು ಹೆಜ್ಜೆ ಮುಂದಿಟ್ಟರೆ, ಅನುಮಾನ ಹತ್ತು ಹೆಜ್ಜೆ ಹಿಂದೆ ಎಳೆಯುತ್ತಿತ್ತು. ಈ ಅನುಮಾನವೇ ನನ್ನೊಳಗಿನ ದೆವ್ವಕ್ಕೆ ಕಣ್ಣು, ಕಿವಿ, ಬಾಯಿ—ಎಲ್ಲವನ್ನೂ ನೀಡಿತ್ತು. ನನ್ನ ಜೀವನದ ಒಂದು ಹಂತದಲ್ಲಿ, ನಾನು ಸಂಪೂರ್ಣವಾಗಿ ಈ ದೆವ್ವದ ಹಿಡಿತದಲ್ಲಿದ್ದೆ. ಹೊಸ ಅವಕಾಶಗಳು ಬಂದಾಗ ನಾನು ಹಿಂದೆ ಸರಿದೆ. ನನ್ನ ಮಾತುಗಳಿಗೆ ಮೌಲ್ಯ ಇಲ್ಲವೆಂದು ಭಾವಿಸಿದೆ. ನನ್ನ ಕನಸುಗಳು ಅಸಾಧ್ಯವೆಂದು ನಂಬಿದೆ. ಹೊರಗೆ ನಗುತ್ತಿದ್ದರೂ, ಒಳಗೆ ನಾನು ನಿತ್ಯವೂ ಯುದ್ಧ ಮಾಡುತ್ತಿದ್ದೆ—ನನ್ನನ್ನೇ ನನ್ನ ವಿರುದ್ಧ ನಿಲ್ಲಿಸಿದ ಯುದ್ಧ. ರಾತ್ರಿ ನಿದ್ರೆಗೆ ಜಾರುವಾಗ, ನನ್ನೊಳಗಿನ ದೆವ್ವ ಹೆಚ್ಚು ಸಕ್ರಿಯವಾಗುತ್ತಿತ್ತು. ದಿನದ ಎಲ್ಲ ಘಟನೆಗಳನ್ನು ಅದು ಮರುಕಳಿಸುತ್ತಿತ್ತು. ನಾನು ಮಾಡಿದ ಸಣ್ಣ ತಪ್ಪುಗಳನ್ನು ದೊಡ್ಡದಾಗಿ ತೋರಿಸುತ್ತಿತ್ತು. ನಾನು ಹೇಳದೆ ಉಳಿದ ಮಾತುಗಳನ್ನು, ಮಾಡದೆ ಉಳಿದ ಕೆಲಸಗಳನ್ನು ನೆನಪಿಸಿ, “ನೀನು ಸೋತವನು” ಎಂದು ಮುದ್ರೆ ಹಾಕುತ್ತಿತ್ತು. ಆ ಕ್ಷಣಗಳಲ್ಲಿ, ನಿಜಕ್ಕೂ ನಾನು ಭಯಪಟ್ಟಿದ್ದೆ—ಆ ದೆವ್ವದಿಂದಲ್ಲ, ನನ್ನನ್ನೇ ಕಳೆದುಕೊಳ್ಳುವ ಭಯದಿಂದ. ಆದರೆ ಪ್ರತಿಯೊಂದು ಕತ್ತಲಿಗೂ ಒಂದು ಬೆಳಕು ಇರುವಂತೆ, ನನ್ನ ಜೀವನದಲ್ಲೂ ಒಂದು ತಿರುವು ಬಂದಿತು. ಅದು ಯಾವುದೇ ಅದ್ಭುತ ಘಟನೆಯಲ್ಲ. ಒಂದು ಸರಳ ಪ್ರಶ್ನೆ—“ನನ್ನನ್ನು ಇಷ್ಟು ವರ್ಷ ತಡೆದಿದ್ದು ಯಾರು?” ಎಂಬ ಪ್ರಶ್ನೆ. ಉತ್ತರ ಹುಡುಕುತ್ತಾ ಹೋದಾಗ, ಬೆರಳು ಹೊರಗಿನ ಲೋಕದತ್ತ ಅಲ್ಲ, ನನ್ನ ಹೃದಯದತ್ತ ತೋರಿಸಿತು. ನಾನು ಕಂಡ ದೆವ್ವ ಬೇರೆ ಯಾರೂ ಅಲ್ಲ; ನಾನು ಬೆಳೆಸಿಕೊಂಡ ಭಯವೇ ಅದು. ಆ ದಿನದಿಂದ, ನಾನು ಆ ದೆವ್ವವನ್ನು ಎದುರಿಸುವ ನಿರ್ಧಾರ ಮಾಡಿದೆ. ಹೋರಾಟ ಎಂದರೆ ಕತ್ತಿ ಹಿಡಿದು ಯುದ್ಧ ಮಾಡುವುದಲ್ಲ. ನನ್ನ ಆಲೋಚನೆಗಳನ್ನು ಪ್ರಶ್ನಿಸುವುದೇ ನನ್ನ ಮೊದಲ ಹೆಜ್ಜೆ. “ನೀನು ಸಾಧ್ಯವಿಲ್ಲ” ಎಂಬ ಧ್ವನಿ ಬಂದಾಗ, “ಏಕೆ ಸಾಧ್ಯವಿಲ್ಲ?” ಎಂದು ನಾನು ನನ್ನನ್ನೇ ಕೇಳಿಕೊಳ್ಳತೊಡಗಿದೆ. ಉತ್ತರ ಸಿಗದಾಗ, ಅನುಮಾನವೇ ಸೋಲತೊಡಗಿತು. ನಾನು ಸಣ್ಣ ಸಣ್ಣ ಗೆಲುವುಗಳನ್ನು ಸಂಭ್ರಮಿಸಲು ಕಲಿತೆ. ಒಂದು ದಿನ ಧೈರ್ಯವಾಗಿ ಮಾತಾಡಿದರೆ, ಮತ್ತೊಂದು ದಿನ ಒಂದು ಹೊಸ ಪ್ರಯತ್ನ ಮಾಡಿದರೆ—ಇವೆಲ್ಲವೂ ನನ್ನೊಳಗಿನ ದೆವ್ವವನ್ನು ದುರ್ಬಲಗೊಳಿಸುತ್ತಿದ್ದವು. ಅದು ಇನ್ನೂ ಅಲ್ಲಿ ಇದ್ದೇ ಇತ್ತು, ಆದರೆ ಅದರ ಶಕ್ತಿ ಕಡಿಮೆಯಾಗುತ್ತಿತ್ತು. ಏಕೆಂದರೆ ನಾನು ಅದಕ್ಕೆ ಇನ್ನು ಆಹಾರ ನೀಡುತ್ತಿರಲಿಲ್ಲ. ಅಸಹಾಯಕತೆ ಸಂಪೂರ್ಣವಾಗಿ ಮಾಯವಾಗಲಿಲ್ಲ. ಕೆಲವೊಮ್ಮೆ ಅದು ಮತ್ತೆ ತಲೆಯೆತ್ತುತ್ತದೆ. ಆದರೆ ಈಗ ನನಗೆ ಗೊತ್ತು—ಅದು ದೆವ್ವವಲ್ಲ, ಒಂದು ಎಚ್ಚರಿಕೆ. “ನೀನು ಮಾನವ, ನಿನ್ನಿಗೂ ಭಯಗಳು ಇವೆ” ಎಂದು ನೆನಪಿಸುವ ಸೂಚನೆ. ಆ ಭಯಗಳ ಜೊತೆ ಬದುಕುವುದನ್ನು ನಾನು ಕಲಿತಿದ್ದೇನೆ; ಅವುಗಳ ಕೈಗೆ ನನ್ನ ಜೀವನದ ನಿಯಂತ್ರಣ ನೀಡುವುದನ್ನು ಅಲ್ಲ. ಇಂದು ಹಿಂದಿರುಗಿ ನೋಡಿದಾಗ, ನಾನು ಕಂಡ ದೆವ್ವ ನನಗೆ ಒಂದು ಪಾಠ ಕಲಿಸಿದೆ. ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರು ಹೆಚ್ಚು ಅಪಾಯಕಾರಿ. ಆದರೆ ಅದೇ ಶತ್ರುವನ್ನು ಗುರುತಿಸಿದರೆ, ಅದನ್ನೇ ನಮ್ಮ ಶಕ್ತಿಯಾಗಿಸಿಕೊಳ್ಳಬಹುದು. ನನ್ನೊಳಗಿನ ಅನುಮಾನವೇ ನನಗೆ ಸ್ವಪರಿಶೀಲನೆ ಕಲಿಸಿತು. ಅಸಹಾಯಕತೆಯೇ ನನಗೆ ಸಹಾನುಭೂತಿ ಕಲಿಸಿತು. ಈ ಲೇಖನ ಓದುವ ಯಾರಾದರೂ ತಮ್ಮೊಳಗಿನ ದೆವ್ವವನ್ನು ಕಂಡಿದ್ದರೆ, ಒಂದನ್ನು ನೆನಪಿಡಿ—ನೀವು ಒಂಟಿಯಲ್ಲ. ಆ ದೆವ್ವ ನಿಮ್ಮನ್ನು ನಾಶಮಾಡಲು ಬಂದಿಲ್ಲ; ನಿಮ್ಮನ್ನು ಬಲಪಡಿಸಲು ಬಂದಿರಬಹುದು. ಅದನ್ನು ಓಡಿಸಲು ಯತ್ನಿಸಬೇಡಿ, ಎದುರಿಸಿ. ಕೇಳಿ, ಪ್ರಶ್ನಿಸಿ, ಅರ್ಥಮಾಡಿಕೊಳ್ಳಿ. ಆಗ ಅದು ದೆವ್ವವಲ್ಲ, ನಿಮ್ಮೊಳಗಿನ ಮೌನ ಗುರು ಆಗುತ್ತದೆ. ನಾನು ಕಂಡ ದೆವ್ವ ಇಂದಿಗೂ ನನ್ನ ಜೊತೆಯಲ್ಲೇ ಇದೆ. ಆದರೆ ಈಗ ಅದು ನನ್ನನ್ನು ಆಳುವುದಿಲ್ಲ. ನಾನು ಅದನ್ನು ನೋಡುತ್ತೇನೆ, ನಗುತ್ತೇನೆ, ಮತ್ತು ಮುಂದಕ್ಕೆ ಸಾಗುತ್ತೇನೆ. ಏಕೆಂದರೆ ಈಗ ನನಗೆ ಗೊತ್ತು—ನನ್ನ ಜೀವನದ ನಾಯಕ ನಾನು, ನನ್ನ ಭಯಗಳಲ್ಲ. ——- ಪೃಥ್ವಿರಾಜ್ ಟಿ ಬಿ

“ನಾ ಕಂಡ ದೆವ್ವ” ಪೃಥ್ವಿ ರಾಜ್ ಟಿ ಬಿ. Read Post »

ಇತರೆ, ನಿಮ್ಮೊಂದಿಗೆ

“ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ.

ಜೀವನ ಸಂಗಾತಿ “ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ. ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ ಎಂಬುವುದು ಬಹಳ ಅರ್ಥಪೂರ್ಣವಾದಂತಹ ಮಾತು. ಇದು ಜನಪದರ ಅನುಭವದ ಮೂಸೆಯಿಂದ ಮೂಡಿ ಬಂದ ಮುತ್ತು. ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ ಎನ್ನುವ ಮಾತಿನಲ್ಲಿ ಅಕ್ಕರೆಗೆ ಅಥವಾ ಪ್ರೀತಿಗೆ ಬಹಳ ಪ್ರಮುಖವಾದ ಸ್ಥಾನವನ್ನು ಕೊಡಲಾಗಿದೆ.ಅಕ್ಕರೆ ಎನ್ನುವುದು ಜೀವದ ಸೆಲೆಯಾಗಿದೆ.  ಇಂದು ನಮ್ಮ ಸಮಾಜದಲ್ಲಿ ಅನ್ನದ ಹಸಿವಿನಿಂದ ಬಳಲುವವರಿಗಿಂತ ಪ್ರೀತಿ ಅಥವಾ ಅಕ್ಕರೆಯ ಹಸಿವಿನಿಂದ ಬಳಲುವರೇ ಹೆಚ್ಚಾಗಿದ್ದಾರೆ.ಇಂತಹ ಕಾಲಘಟ್ಟದಲ್ಲಿ ಪ್ರೀತಿಯು ಬಹಳ ದುಬಾರಿಯಾಗಿ ಕಂಡುಬರುವಂತಹ ಸಂದರ್ಭದಲ್ಲಿ, ಈ ಮಾತಿನ ಬಗ್ಗೆ ಚಿಂತನ ಮಂಥನ ಮಾಡಬೇಕಾದದ್ದು ಬಹಳ ಅಗತ್ಯವೆಂದು ನನಗನಿಸುತ್ತದೆ. ಇಂದು  ಯಾಂತ್ರಿಕ ಯುಗ. ಬದುಕು ಕೂಡ ಯಾಂತ್ರಿಕವಾಗಿದೆ.ಮನುಷ ಮನುಷರ ಮನಸ್ಸುಗಳ ನಡುವೆ ದ್ವೇಷದ ಗೋಡೆ ಕಟ್ಟಲ್ಪಟ್ಟಿದೆ.ಎಲ್ಲೆಲ್ಲೂ ಮುಖವಾಡದ ಬದುಕೇ ಕಂಡುಬರುತ್ತಿದೆ.ಇಂತಹ ಬದುಕಿನಲ್ಲಿ ಯಾವುದೇ ರೀತಿಯಲ್ಲಿ ಶಾಂತಿ, ನೆಮ್ಮದಿ ಸಿಗಲಾರದು ಎಷ್ಟೇ ಪ್ರೀತಿ ತೋರಿದರೂ ಆ ಪ್ರೀತಿಯ ಹಿಂದೆ ಅದ್ಯಾವ ಕುತಂತ್ರ ಅಡಗಿದೆಯೋ ಎಂಬ ಹೆದರಿಕೆ ಕಾಡುತ್ತದೆ. ಹೀಗಿರುವಾಗ ಅಕ್ಕರೆ ಇದ್ದರೆ ಅಂಬಲಿಯೂ ಸವಿ ಎನ್ನುವಂತ ಮಾತು ಇಲ್ಲಿ ಪ್ರಸ್ತುತವಾಗುತ್ತದೆ. ಪ್ರೀತಿ ಇಲ್ಲದೆ ಅಥವಾ ಅಕ್ಕರೆ ಇಲ್ಲದೆ ಊಟ ಹಾಕುವವರು, ಊಟವನ್ನು ಹಾಕಬೇಕಲ್ಲಾ ಎನ್ನುವಂತಹ (ಅನಿವಾರ್ಯತೆ) ಭಾವನೆಯಿಂದ ಮೃಷ್ಟಾನ್ನ ಭೋಜನ ಬಡಿಸಿದರೂ, ಅದು ರುಚಿಸದು. ಮನಸ್ಸಿಗೆ ಹಿತವಾಗದು. ಅದೇ ಪ್ರೀತಿಯಿಂದ ಅಂಬಲಿಯನ್ನು ಬಡಿಸಿದರೂ ಅದರಲ್ಲಿ ಮೃಷ್ಟಾನ್ನ ಭೋಜನ ಮಾಡಿದಷ್ಟು ಸಂತಸವಿರುತ್ತದೆ, ಸವಿಯಿರುತ್ತದೆ.ಪ್ರೀತಿ ತೋರಿಸುವಾಗ ಬಡವ -ಶ್ರೀಮಂತ, ಉಳ್ಳವರು- ಇಲ್ಲದವರು, ಅವರು -ಇವರು ಎಂಬ ಯಾವ ಭೇದ ಭಾವವು ಇರಬಾರದು ಎಂಬ ತತ್ವವೂ ವ್ಯಕ್ತವಾಗುತ್ತದೆ. ಪ್ರೀತಿಯಿಂದ ಯಾರು ಏನೇ ಕೊಟ್ಟರೂ ಅದು ಸ್ವೀಕರಿಸಲು ಯೋಗ್ಯವಾದದ್ದು ಎಂಬ ಅರ್ಥವನ್ನು ನೀಡುತ್ತದೆ.ಇದಕ್ಕೆ ಪೂರಕವಾದ ಉದಾಹರಣೆಯನ್ನು ಮಹಾಭಾರತದಿಂದ ನಾವು ಉಲ್ಲೇಖಿಸಬಹುದು, ಕೃಷ್ಣ ಸುಧಾಮರ ಉದಾರಣೆಯನ್ನೇ ತೆಗೆದುಕೊಂಡರೆ ಸುಧಾಮ ಬಡವನಾದರೂ, ಕೃಷ್ಣನಿಗೆ ಪ್ರೀತಿಯಿಂದ ಹಿಡಿ ಅವಲಕ್ಕಿ ನೀಡಿದ್ದನ್ನು ಕೃಷ್ಣ ಅದೆಷ್ಟು ಸವಿಯಾಗಿ ತಿನ್ನುತ್ತಾನೆ!.ಸಂತಸ ಪಡುತ್ತಾನೆ!. ಹಾಗೆಯೇ ನಮ್ಮನ್ನು ಪ್ರೀತಿಸುವವರು ಅದೇನೇ ನೀಡಿದರೂ ಅದು ನಮಗೆ ಸವಿಯಾಗಿಯೇ ಇರುತ್ತದೆ. ಜೀವನ ನಿಂತಿರುವುದೇ ಪ್ರೀತಿಯ ಮೇಲೆ. ಹಾಗಾಗಿ ಪ್ರತಿಯೊಂದು ಜೀವಿಯು ಕೂಡ ಪ್ರೀತಿಗಾಗಿ ಹಾತೊರೆಯುತ್ತದೆ. ತಾವು ಬಯಸುವ ಪ್ರೀತಿ ತಮಗೆ ಸಿಕ್ಕಿತೆಂದರೆ ಮನಸ್ಸಿಗೆ ಆಗುವ ಆನಂದವನ್ನು ಮಾತಿನಲ್ಲಿ ಹೇಳಲಾಗದು.ಸಂಸಾರದ ಉದಾಹರಣೆಯನ್ನೇ ತೆಗೆದುಕೊಂಡರೆ, ಗಂಡ ಹೆಂಡತಿಯ ನಡುವೆ ಪ್ರೀತಿ ಇದ್ದರೆ ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಅವರು ಒಬ್ಬರಿಗೊಬ್ಬರು ಸಹಿಸಿಕೊಂಡು, ಸಮಾಧಾನದಿಂದ ಸಂಸಾರವನ್ನು ಸರಿದೂಗಿಸಿಕೊಂಡು ಮುನ್ನಡೆಯುತ್ತಾರೆ. ಅದೇ ಗಂಡ ಹೆಂಡಿರ ನಡುವೆ ಪ್ರೀತಿ ಇಲ್ಲದೆ ಇದ್ದಲ್ಲಿ  ಆಗರ್ಭ ಶ್ರೀಮಂತರಾದರೂ ಅವರು ಪ್ರೀತಿಯಿಂದ ಬಾಳುವುದಕ್ಕೆ ಸಾಧ್ಯವಿಲ್ಲ. ಅಕ್ಕರೆ ಇದ್ದರೆ ಅಂಬಲಿಯೂ ಸವಿ. ಅದೇ ಮೃಷ್ಟಾನ್ನ, ಅದೇ ಪರಮಾನ್ನ.ಒಂದು ಪ್ರೀತಿಯ ಮಾತು ಎಷ್ಟೋ ದುಃಖ ತಪ್ತ ಮನಸ್ಸುಗಳನ್ನು ಸಾಂತ್ವಾನಗೊಳಿಸಬಲ್ಲದಂತೆ.ಅಂದರೆ ಪ್ರೀತಿಗೆ ಅಷ್ಟು ಶಕ್ತಿ ಇದೆ. ಶಕ್ತಿಯಿಂದ ಮಾಡಲಾಗದ್ದನ್ನು, ಯುಕ್ತಿಯಿಂದ ಸಾಧಿಸಲಾಗದ್ದನ್ನು, ಪ್ರೀತಿಯಿಂದ ಸಾಧಿಸಬಹುದು ಎಂಬಂತೆ. ಪ್ರೀತಿ ಇದ್ದರೆ ಎಲ್ಲವೂ ಸಾಧ್ಯ. ಸಿಹಿಕಹಿ ಎನ್ನುವಂತದ್ದು ನಮ್ಮ ಮನಸ್ಸಿನ ಭಾವನೆಗೆ ಬಿಟ್ಟದ್ದು. ನಮಗೆ ಇಷ್ಟವಾಗುವವರು ಏನಾದರೂ ಮಾಡಿದರೆ ನಮ್ಮ ಮನಸ್ಸು ಅದು ಒಳ್ಳೆಯದೆಂದೇ ಭಾವಿಸುತ್ತದೆ.ನಮಗಾಗದವರು ಒಳ್ಳೆಯದನ್ನೇ ಮಾಡಿದರೂ ನಾವು ಅದರಲ್ಲಿ ಕೆಟ್ಟದ್ದನ್ನು ಕಾಣುತ್ತೇವೆ. ಉದಾಹರಣೆಗೆ ನಮ್ಮ ಅಮ್ಮ ಎಷ್ಟು ಬೈದರೂ ನಾವು ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ,ಅಮ್ಮನನ್ನು ಪ್ರೀತಿಯಿಂದ ಕಾಣುತ್ತೇವೆ. ಏಕೆಂದರೆ ಅಮ್ಮ ಎಂದರೆ ನಮಗೆ ಪ್ರೀತಿ. ಅವಳು ಬೈದರೆ ಪ್ರೀತಿಯಿಂದಲೇ ಬಯ್ಯುತ್ತಾಳೆ ಎಂಬ ನಮ್ಮ ಮನಸ್ಥಿತಿ. ಅದೇ ಅತ್ತೆ ಎಲ್ಲಿಯಾದರೂ ಬೈದಳೆಂದರೆ ನಾವು ಸಿಟ್ಟು ಮಾಡಿಕೊಂಡು, ಮುಂದೆ ಏನೇನೋ ಆವಾಂತರಕ್ಕೆ ಕಾರಣವಾಗುತ್ತದೆ.ವಿಷಯ ಇಷ್ಟೇ. ಅತ್ತೆ ಹೇಳಿದ್ದು ಕೂಡ ತಾಯಿ ಹೇಳಿದ್ದನ್ನೇ. ಆದರೆ ತಾಯಿ ಹೇಳಿದಾಗ ಬೇಸರವಾಗದ ನಮಗೆ ಅತ್ತೆ ಅದೇ ಮಾತನ್ನು ಹೇಳಿದಾಗ ಮನಸ್ಸಿಗೆ ನಾಟುತ್ತದೆ, ಅವಮಾನವಾಗುತ್ತದೆ. ಏಕೆ? ಕಾರಣ ಇಷ್ಟೇ .ಅಮ್ಮ ನಮ್ಮವರು,ಅತ್ತೆ ಎರಡನೆಯ ವ್ಯಕ್ತಿ ಎಂಬ ಭಾವ. ಇಲ್ಲಿ ಪ್ರೀತಿಯ ಕೊರತೆ ನಮ್ಮನ್ನು ಹಾಗೆ ಯೋಚಿಸುವಂತೆ ಮಾಡುತ್ತದೆ. ಈಗೀಗ “ಮುಖ ನೋಡಿ ಮಣೆ ಹಾಕು”ಎಂಬಂತೆ ಇತರರ ಶ್ರೀಮಂತಿಕೆ, ಅಧಿಕಾರ, ಹಣ, ಅಂತಸ್ತು ನೋಡಿಯೇ ಅದಕ್ಕೆ ತಕ್ಕಂತೆ ಅವರನ್ನು ಉಪಚರಿಸುತ್ತಾರೆ .ಬಡವರಾದರೆ ಅವರನ್ನು ಉಪಚರಿಸುವ ಗೋಜಿಗೆ ಹೋಗದೆ ಸುಮ್ಮನೆ ಇರುತ್ತಾರೆ. ಇಂತಹ ಜನರಿರುವಾಗ ಅಕ್ಕರೆಗೆ ಬೆಲೆಯಾದರೂ ಎಲ್ಲಿದೆ? ಹಾಗಾಗಿ ಅಕ್ಕರೆ ಇದ್ದರೆ ಅಂಬಲಿಯೂ ಸವಿ ಎನ್ನುವಂತೆ ನಮಗೆ ಪ್ರೀತಿ ಇದ್ದರೆ ಎಲ್ಲವೂ ಸರಿಯಾಗಿಯೇ ಇರುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿ ಜೀವನವು ಯಾಂತ್ರಿಕವಾಗಿಯೇ ನಡೆಯುತ್ತಿದೆ. ಮನುಷ್ಯನಿಗೆ ಒತ್ತಡದ ಜೀವನದಲ್ಲಿ ಪರಸ್ಪರ ಪ್ರೀತಿಯಿಂದ ಮಾತನಾಡುವುದ ಕ್ಕಾಗಲಿ ,ಎಲ್ಲರೂ ಒಟ್ಟು ಸೇರಿ ಪ್ರೀತಿಯಿಂದ ಉಣ್ಣುವುದಕ್ಕಾಗಲಿ, ಸಮಯವೇ ಇಲ್ಲ. ಒಂದೇ ಮನೆಯಲ್ಲಿ ಒಬ್ಬೊಬ್ಬರ ಊಟದ ಸಮಯ ಒಂದೊಂದು ಆಗಿರುವಾಗ, ಇನ್ನು ಪ್ರೀತಿಯಿಂದ ಇತರರಿಗೆ ಊಟ ಹಾಕಲು ಸಮಯವಾದರೂ ಎಲ್ಲಿದೆ? ಜೀವನವಿಡೀ ಒತ್ತಡದಿಂದಲೇ ಕಳೆಯುವ ಪರಿಸ್ಥಿತಿ ಬಂದಿದೆ. ಇದು ಬದಲಾಗಬೇಕು. ಪರಸ್ಪರ ಪ್ರೀತಿ ಸಹನೆಯಿಂದ ಆಗಾಗ ಒಟ್ಟು ಸೇರಿ,  ಕಾಲ ಕಳೆಯುವಂತಾಗಬೇಕು. ಕಷ್ಟವಿದ್ದರೂ, ಸಂಕಷ್ಟಗಳು ಬಂದರೂ ಪ್ರೀತಿಯಿಂದ ಅಂಬಲಿಯಾದರೂ ಸರಿ, ಸವಿದು ಬದುಕೋಣ. ———— ಡಾ.ಸುಮತಿ ಪಿ

“ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ. Read Post »

ಇತರೆ

“ವಚನ ಯುಗದ ಮಹಿಳೆಯರು”ವಿಜಯಲಕ್ಷ್ಮಿ ಕೆ ಹಂಗರಗಿ

ವಚನ ಸಂಗಾತಿ ವಿಜಯಲಕ್ಷ್ಮಿ ಕೆ ಹಂಗರಗಿ “ವಚನ ಯುಗದ ಮಹಿಳೆಯರು” ವಿಶ್ವಕುಟುಂಬ ವಿಶ್ವದಲ್ಲಿ ಎಲ್ಲಾ ಜಾತಿ ಜನಾಂಗಗಳ ನಿಜ ಸಂಸ್ಕೃತಿಯ ತಾಯಿ ಬೇರು ಅಂತಃಕರಣದಿಂದ ಕೂಡಿದ ಜೀವನ, ಪ್ರೀತಿ ಈ ಲೋಕ ಮಾನವ ಕೇಂದ್ರವಲ್ಲ, ಜೀವಕೇಂದ್ರಿತವಾದದ್ದು. ಸ್ವಾರ್ಥ ಪ್ರೇಮದಿಂದ ಕೂಡಿದ ಪ್ರಪಂಚವನ್ನು ಸೃಷ್ಟಿಸುವುದೇ ಬಸವಣ್ಣನವರ ಕನಸಾಗಿತ್ತು.ಬಸವಣ್ಣನವರ ದೃಷ್ಟಿಯಲ್ಲಿ ಹೆಣ್ಣು ಮಕ್ಕಳು ಪ್ರತಿಭೆಯಲ್ಲಿ ಭೌಧಿಕತೆಯಲ್ಲಿ ಪುರುಷನಷ್ಟೇ ಸರಿ ಸಮಾನಳು ,ಜೀವನದ ಸಕಲ ವ್ಯವಹಾರದಲ್ಲಿ  ಅವಳಷ್ಟೇ ವಿಶಾಲಮತಿ ಬೇರೆ ಯಾರು ಇಲ್ಲ ಎಂದು ತಿಳಿದಿದ್ದರು.ಬಸವಣ್ಣನವರು ಮಹಿಳೆಯರ ಅಂತಃಕರಣವನ್ನು ಓರೆಗೆ ಹಚ್ಚಿ ನೋಡಿದರು. ಹಾಗಾಗಿ ಗೌಪ್ಯ ವಚನಗಾರ್ತಿಯರು ವಚನ ಸಾಹಿತ್ಯ ರಚಿಸುವಲ್ಲಿ  ಸುಖಕರವಾಗಿ ವಚನಗಳನ್ನು ರಚಿಸಿದರು. ಅವರಲ್ಲಿ ಪ್ರಮುಖರಾದವರೆಂದರೆ ಅಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕೇತಲದೇವಿ ,ಕದಿರೆ ಕೆಮ್ಮುವೆ, ಕಾಳವ್ವೆ ,ಕಾಮವೆ, ಗಂಗಮ್ಮ ಬೋನ್ತಾದೇವಿ, ನೀಲಾಂಬಿಕೆ ,ಲಿಂಗಮ್ಮ ವೀರಮ್ಮ, ಲಕ್ಷ್ಮಮ್ಮ ,ರೇಖಮ್ಮ ,ಸತ್ಯಕ್ಕ ಮೊದಲಾದವರು ಇನ್ನೂ ಇವರು ಬಹುತೇಕ ವಚನಗಾರ್ತಿಯರ ಹೆಸರಿದ್ದರೂ ಅವರ ವಚನಗಳು ಸಿಕ್ಕಿಲ್ಲ ಉದಾಹರಣೆಗೆ : ಕಲ್ಯಾಣಮ್ ,ಕದಿರ ಕಾಳವ್ವೆ ಮುಂತಾದವರು ವಚನ ಸಾಹಿತ್ಯ ಕನ್ನಡ ದೇಸಿ ಪದ್ಯ ಜಾತಿ ವಚನಕಾರರು ಅಚ್ಚ ಕನ್ನಡ ಕೃಷಿಕರು ಆಗಿದ್ದಾರೆ.ವಚನ ಸಾಹಿತ್ಯದಲ್ಲಿ ಬಸವ ಯುಗದ ವಚನಗಾರ್ತಿಯರಂತೆ ಕೊಡುಗೆಯುತ್ತವರನ್ನು ಬಹುಶಃ ಯಾವ ಶತಮಾನವು ಕಂಡಿರಲಿಲ್ಲ.ಈ ಕಾಲಘಟ್ಟದಲ್ಲಿ ಹಲವಾರು ಶರಣರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿ ರುವುದನ್ನು ಯಾರು ಹೆಚ್ಚಾಗಿ ಪ್ರಚಾರಪಡಿಸದೆ ಇರುವುದು ಅಚ್ಚರಿಯನ್ನುಂಟುಮಾಡುತ್ತದೆ. ಇಂಥವರನ್ನು ವಚನಗಾರ್ತಿಯರು ಅಥವಾ ಗೌಪ್ಯ ವಚನಗಾರ್ತಿಯರು ಎಂದು ಕರೆಯಬಹುದಾಗಿದೆ.ವಚನ ಯುಗವು ಮಹಿಳೆಯರ ಅಂತರ್ಯದಲ್ಲಿ ನವ ಜಾಗೃತಿ ನವ ಸಾಕ್ಷರತೆಯ ಅರಿವು ಮೂಡಿಸಿ ಎಲ್ಲಾ ವರ್ಗದ ಮಹಿಳೆಯರಿಗೂ ವಿದ್ಯಾಭ್ಯಾಸ ಕಲಿಸಿ 26 ಕ್ಕೂ ಹೆಚ್ಚುಜನ ಶರಣೆಯರು ವಚನ ರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಅವರಲ್ಲಿ ಕೆಲವು ಶರಣೀಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತ ನಾಮವನ್ನಾಗಿ ಇಟ್ಟುಕೊಂಡು, ಮತ್ತೆ ಕೆಲವರು ತಮ್ಮ ಇಷ್ಟ ದೈವವನ್ನು ವಚನದ ಅಂಕಿತ ನಾಮವಾಗಿಟ್ಟುಕೊಂಡಿದ್ದಾರೆ.ವಚನಗಾರ್ತಿಯರ ಕೊಡುಗೆತಮ್ಮ ವಚನಗಳ ಮೂಲಕ ಸ್ತ್ರೀ ಪುರುಷ ಸಮಾನತೆಯ ಕುಟುಂಬ ಪದ್ಧತಿಯನ್ನು ತರಲು ಪ್ರಯತ್ನಿಸಿದರು.ಕಾಯಕ ನಿಷ್ಠೆ: ಕಾಯಕದ ಮಹತ್ವವನ್ನು ಸಾರಿದರು ಮತ್ತು ತಮ್ಮ ವೃತ್ತಿಗೆ ಸಂಬಂಧಿಸಿದ ಅಂಕಿತನಾಮವನ್ನು ಬಳಸಿದರು.ವೈಚಾರಿಕ ಚಿಂತನೆ: ಸಮಕಾಲೀನ ಸಮಾಜ ವ್ಯವಸ್ಥೆ ಮತ್ತು ಸ್ಥಿತಿಗತಿಗಳ ಬಗ್ಗೆ ಟೀಕೆ ವಿಡಂಬನೆ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.ವಚನಗಾರ್ತಿಯರ ಕೊಡುಗೆ:*ಸಾಮಾಜಿಕ ಸಮಾನತೆ: ತಮ್ಮ ವಚನಗಳ ಮೂಲಕ ಸ್ತ್ರೀ ಪುರುಷ ಸಮಾನತೆ ಮಹಿಳೆಯರನ್ನು ಶರಣು ಚಳುವಳಿಯಲ್ಲಿ ಪ್ರತಿಪಾದಿಕಿಯಾಗಿ ಗುರುತಿಸಲಾಗಿದೆ. ಅಮ್ಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಯಕ ನಿಷ್ಠೆಗೆ ಹೆಸರಾದವರು. ಪತಿ ಆಯ್ದಕ್ಕಿ ಮಾರಯ್ಯನವರ ಕಾಯಕದ ಕುರಿತು ತೀಕ್ಷ್ಣವಾಗಿ ಪ್ರಶ್ನಿಸುತ್ತಿದ್ದ ಅತ್ಯಂತ ಪ್ರಭುದ್ಧ ಮಹಿಳೆ.ಬೊಂಥಲಾದೇವಿ: ಮೋಳಿಗೆ ಮಹಾದೇವಿ, ಗಂಗಾದೇವಿ ಎಂದು ಕರೆಯುತ್ತಾರೆ.ನೀಲಾಂಬಿಕೆ: ನೀಲಲೋಚನೆ ಎಂದು ಕರೆಯುತ್ತಾರೆ.ಮಹಿಳಾ ವಚನಗಾರ್ತಿಯರು:ವಚನ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವರು ಅಕ್ಕಮಹಾದೇವಿ ಎಂತಹ ವ್ಯಕ್ತಿಗಳಿಂದ ಹಿಡಿದು ಅಮುಗೆ ರಾಯಮ್ಮ, ಲಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ ಬೋಮ್ತಾದೇವಿ ಮತ್ತು ಮಸಣಮ್ಮ ನಂತಹ ಅನೇಕರು ಸೇರಿದ್ದಾರೆ. ಈ ವಚನಗಾರ್ತಿಯರು ಸಾಮಾಜಿಕ ಸಮಾನತೆ, ಕಾಯಕನಿಷ್ಠೆ ಮತ್ತು ವೈಚಾರಿಕ ಚಿಂತನೆಗಳನ್ನು ತಮ್ಮ ವಚನಗಳ ಮೂಲಕ ವ್ಯಕ್ತಪಡಿಸಿದ್ದಾರೆ._________________ ವಿಜಯಲಕ್ಷ್ಮಿ ಕೆ ಹಂಗರಗಿ

“ವಚನ ಯುಗದ ಮಹಿಳೆಯರು”ವಿಜಯಲಕ್ಷ್ಮಿ ಕೆ ಹಂಗರಗಿ Read Post »

ಇತರೆ

“ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್‌ ಗೌಡ ಪಾಟೀಲ್

ಸಂಸ್ಕೃತಿ ಸಂಗಾತಿ “ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್‌ ಗೌಡ ಪಾಟೀಲ್ ಭಾರತ ದೇಶ ಕೃಷಿ ಪ್ರಧಾನವಾದದ್ದು. ನಾವು ದೇವರನ್ನು ಪೂಜಿಸುವಷ್ಟೇ ಸಹಜವಾಗಿ ಪಂಚಭೂತಗಳಾದ ಭೂಮಿ, ಅಗ್ನಿ, ವಾಯು, ನೀರು ಮತ್ತು ಆಕಾಶ ಇವುಗಳನ್ನು ಕೂಡ ಪೂಜಿಸುತ್ತೇವೆ. ಅದರಲ್ಲಿಯೂ ಭೂಮಿ ನಮ್ಮನ್ನು ಹಡೆದ ತಾಯಿಗಿಂತಲೂ ಹೆಚ್ಚು. ‘ ಮಾತಾ ಭೂಮಿಹಿ ಪುತ್ರೋಹಂ ಪೃಥ್ವಿವ್ಯಾಹ’ಎಂದು ನಮ್ಮ ಮಹಾನ್ ಕಾವ್ಯ ಭೂಮಿ ಸೂಕ್ತದಲ್ಲಿ ಹೇಳಿದೆ. ಈ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಾವು ಹುಟ್ಟಿರುವ, ಬೆಳೆದಿರುವ, ನಡೆದಾಡುವ ಈ ಭೂಮಿ ನಮ್ಮ ಜನನಿ ಮತ್ತು ನಾವೆಲ್ಲರೂ ಆಕೆಯ ಮಕ್ಕಳು. ಆದ್ದರಿಂದಲೇ ನಮ್ಮ ಹಿರಿಯರು ಹೇಳಿದ್ದಾರೆ ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’… ಇಷ್ಟೇ ನಾವು ಜನಿಸಿದ ಈ ಭೂಮಿ ನಮಗೆ ಸ್ವರ್ಗಕ್ಕಿಂತಲೂ ಹೆಚ್ಚು. ಭೂಮಿಯ ಜೊತೆಗಿರುವ ನಮ್ಮ ಸಂಬಂಧ ತಾಯಿ ಮಕ್ಕಳಂತೆ ಎಂಬುದು ಹಲವು ವಿಧಗಳಲ್ಲಿ ವೇದ್ಯವಾಗುತ್ತದೆ. ಮುಂಜಾನೆ ತಾಯಂದಿರು ಎದ್ದೊಡನೆ ‘ಬೆಳಗಾಗಿ ನಾ ಎದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯುವ ಭೂಮ್ತಾಯಿ, ಎದ್ದೊಂದು ಗಳಿಗೆ ನೆನೆದೇನ’ ಎಂದು ನೆಲ ಮುಟ್ಟಿ ನಮಸ್ಕರಿಸುತ್ತಾರೆ. ಆಟವಾಡುವ ಪ್ರತಿ ಕ್ರೀಡಾಳು ಕೂಡ ನೆಲವನ್ನು ಮುಟ್ಟಿ ನಮಸ್ಕರಿಸಿ ಗೆಲುವಿಗಾಗಿ ಪ್ರಾರ್ಥಿಸಿ ತನ್ನ ಆಟವನ್ನು ಪ್ರಾರಂಭಿಸುತ್ತಾನೆ ಆತನ ಎದುರಾಳಿ ಕೂಡ ಅದೇ ಭೂಮಿ ತಾಯಿಯನ್ನು ಅಂದರೆ ನೆಲವನ್ನು ಮುಟ್ಟಿ ನಮಸ್ಕರಿಸುತ್ತಾನೆ. ಇದೇ ನಮ್ಮ ಭಾರತೀಯ ಪರಂಪರೆಯ ಸೊಗಡು ಪರಸ್ಪರ ಎದುರಾಳಿಗಳಿಗೂ ಕೂಡ ಭೂಮಿ ತಾಯಿ ಮಾತೃಸ್ವರೂಪಳು. ತನ್ನ ಹೊಲವನ್ನು ಉತ್ತುವ ರೈತ ಕೂಡ..ಅಮ್ಮ ಬಂಗಾರದಂತಹ ಬೆಳೆ ಕೊಡು ಎಂದು ಬೇಡಿ ಕೊಳ್ಳುತ್ತಾನೆ. ಇದು ನಮ್ಮ ಭಾರತೀಯ ಪರಂಪರೆಯ ಶ್ರೀಮಂತಿಕೆಯು ಹೌದು. ಭೂಮಿ ತಾಯೆಡೆಗಿನ ಶ್ರದ್ಧೆ ಅನನ್ಯ. ಅದು ಭಾವಕ್ಕೆ ನಿಲುಕದ್ದು.. ಭಾವನಾತೀತವಾದುದು.ನಮ್ಮ ಸಂಸ್ಕೃತ ಕಾವ್ಯಗಳಲ್ಲಿ ಮತ್ತು ಯೋಗದ ಪಠ್ಯಗಳಲ್ಲಿ ‘ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೆ ವಿಷ್ಣು ಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶ೦ ಕ್ಷಮಸ್ವಮೇ ‘ ಎಂದು ಭೂಮಿತಾಯಿಯನ್ನು ಬೇಡಿಕೊಳ್ಳುತ್ತಾರೆ. ಇದರ ತಾತ್ಪರ್ಯವಿಷ್ಟೇ ಸಮುದ್ರವೇ ನಿನ್ನ ವಸ್ತ್ರವು, ಪರ್ವತಗಳು ನಿನ್ನ ಸ್ತನ ಮಂಡಲಗಳು, ವಿಷ್ಣು ಪತ್ನಿ ಅಂದರೆ ಮಾತೇ ಲಕ್ಷ್ಮೀದೇವಿಯಾದ ಭೂಮಿ ತಾಯಿಯನ್ನು ನಾನು ನನ್ನ ಕೆಲಸಕಾರ್ಯಗಳಿಗಾಗಿ ತುಳಿಯುತ್ತೇನೆ, ನಡೆದಾಡುತ್ತೇನೆ ಆದ್ದರಿಂದ ನನ್ನನ್ನು ಕ್ಷಮಿಸು ತಾಯಿ ಎಂದು. ಹೀಗೆ ಭೂಮಿ ಮತ್ತು ಮನುಷ್ಯನ ಸಂಬಂಧ ನಮ್ಮ ಭಾರತೀಯ ಸಂಪ್ರದಾಯದಲ್ಲಿ ತಾಯಿ ಮಕ್ಕಳ ಸಂಬಂಧದಂತೆ ಹಾಸು ಹೊಕ್ಕಾಗಿದೆ. ಅದರಲ್ಲಿಯೂ ರೈತನನ್ನು ಭೂಮಿ ತಾಯಿಯ ಚೊಚ್ಚಲ ಮಗ ಎಂದೇ ಕರೆಯುತ್ತಾರೆ.ಭೂಮಿ ತಾಯಿ ನಮಗೆ ಜೀವನಕ್ಕೆ ಅವಶ್ಯಕವಾದ ಆಹಾರವನ್ನು ನೀರನ್ನು ದಯಪಾಲಿಸುತ್ತಾಳೆ. ನಮ್ಮನ್ನು ತನ್ನ ಮಡಿಲಲ್ಲಿಟ್ಟು ಪೋಷಿಸುತ್ತಾಳೆ. ಮುಂದೆ ನಾವು ಮಡಿದ ಮೇಲೆಯೂ ಮತ್ತೆ ತನ್ನ ಉದರದಲ್ಲಿ ನಮಗೆ ಆಶ್ರಯ ನೀಡುತ್ತಾಳೆ.ಶ್ರಾವಣಮಾಸದಿಂದ ದೀಪಾವಳಿಯವರೆಗೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳ ಸಾಲು ಸಾಲು ಮೆರವಣಿಗೆ ಹೊರಡುತ್ತದೆ. ಅದರಲ್ಲಿ ಎಳ್ಳಅಮಾವಾಸ್ಯೆಯ ಒಂದು. ಎಳ್ಳು ಅಮಾವಾಸ್ಯೆಯ ಸಮಯದಲ್ಲಿ ಚಳಿಗಾಲದ ಚಳಿ ಕಮ್ಮಿಯಾಗಿ ಎಳ್ಳು ಕಾಳಿನಷ್ಟು ಹಿತವಾದ ಬಿಸಿಲು ಮೂಡುತ್ತದೆ. ಈ ಸಮಯದಲ್ಲಿಯೇ ಪ್ರತಿವರ್ಷಕ್ಕೆ ಮುಂಗಾರು ಮತ್ತು ಹಿಂಗಾರು ಎಂಬ ಎರಡು ಬೆಳೆ ತೆಗೆಯುವ ರೈತನ ಶ್ರಮಕ್ಕೆ ಪ್ರತಿಫಲವಾಗಿ ತುಂಬಿ ನಿಂತ ಪೈರು ತೆನೆಗಳು ಕಣ್ಸೆಳೆಯುತ್ತಿರುತ್ತವೆ. ಹೊಲದ ಪ್ರತಿ ಮೂಲೆಯೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇನ್ನೇನು ಕೊಯ್ಲು ಮತ್ತು ರಾಶಿ ಮಾಡುವ ಕ್ರಿಯೆ ಆರಂಭವಾಗುವ ಕೆಲವೇ ದಿನಗಳ ಮುಂಚೆ ಈ ದಿನದಂದು ರೈತನು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಸೀಮಂತದ ಊಟವನ್ನು ಬಡಿಸುತ್ತಾನೆ. ಜೊತೆ ಜೊತೆಗೆ ತನ್ನ ಬಂಧು ಬಾಂಧವರೊಡಗೂಡಿ ಹಬ್ಬದ ಊಟ ಮಾಡಿ ಸಡಗರ ಪಡುತ್ತಾನೆ. ಇದನ್ನು ಉತ್ತರ ಕರ್ನಾಟಕದಲ್ಲಿ ‘ಚರಗ ಚೆಲ್ಲುವುದು’ ಎಂದು ಕರೆಯುತ್ತಾರೆ. ಎಳ್ಳು ಅಮಾವಾಸ್ಯೆಗೆ ಹಲವಾರು ದಿನಗಳ ಮುಂಚೆಯೇ ಈ ಹಬ್ಬದ ತಯಾರಿ ಪ್ರಾರಂಭವಾಗುತ್ತದೆ. ರೈತರ ಮನೆಯೆಂದ ಮೇಲೆ ಅಂಕಿ ಸಂಖ್ಯೆಗಳು ಮುಖ್ಯವಲ್ಲ, ಜನರ ಹೊಟ್ಟೆ ತುಂಬುವುದು ಮುಖ್ಯ. ತೆಳ್ಳಗೆ ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆಯ ರೊಟ್ಟಿಗಳು, ಬಗೆ ಬಗೆಯ ಚಟ್ನಿಪುಡಿಗಳು, ಕೆಂಪು ಹಿಂಡಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ (ನವಣೆ ಅಕ್ಕಿಯನ್ನು ಹುರಿದು ಮಾಡುವ ಒಂದು ಸಿಹಿ ಪದಾರ್ಥ), ಕರ್ಚಿಕಾಯಿಗಳು ಮೊದಲೇ ತಯಾರಾದರೆ ಹಬ್ಬದ ದಿನ ಎಣ್ಣೆ ಬದನೆಕಾಯಿ ಪಲ್ಯ, ಮೊಳಕೆ ಬರಿಸಿದ ಕಾಳುಗಳ ಪಲ್ಯ, ಕುದಿಸಿದ ಮೆಣಸಿನ ಕಾಯಿಯ ಪಲ್ಯ, ಪುಂಡಿ ಪಲ್ಯ, ಹಿಟ್ಟಿನ ಪಲ್ಯ, ಹಲವಾರು ಬಗೆಯ ಹಸಿಯಾಗಿಯೇ ತಿನ್ನಬಹುದಾದ ಹಸಿ ಈರುಳ್ಳಿ, ಸೌತೆಕಾಯಿ ಗಜ್ಜರಿ ಮೆಂತ್ಯ ಸೊಪ್ಪು ಜೊತೆಗೆ ಭೂತಾಯಿಯ ಎಡೆಗಾಗಿ ಕುಚ್ಚಗಡಬು,ಸಜ್ಜೆ ಕಡುಬು,ಜೋಳದ ಕಡುಬು, ಚಿತ್ರಾನ್ನ, ಮೊಸರನ್ನಗಳ ಬುತ್ತಿ, ಕರಿದ ಹಪ್ಪಳ ಸಂಡಿಗೆ ಮೆಣಸಿನಕಾಯಿ ಬಾಳಕಗಳು ಹೀಗೆ ಹಲವಾರು ಬಗೆಯ ಪದಾರ್ಥಗಳು ತಯಾರಾಗಿ ಒಂದೊಂದೇ ಡಬ್ಬಗಳಲ್ಲಿ ಶೇಖರಿಸಲ್ಪಟ್ಟು.. ಆ ಎಲ್ಲ ಡಬ್ಬಗಳನ್ನು ಶುದ್ಧ ಹಸಿ ವಸ್ತ್ರದಿಂದ ಒರೆಸಿ ವಿಭೂತಿ ಪಟ್ಟಿಯನ್ನು ಬರೆದು ಮತ್ತೆ ಎಲ್ಲಾ ಡಬ್ಬಗಳನ್ನು ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಹೇರಲಾಗುತ್ತದೆ. ಹೆಂಗಳೆಯರು ಇಲಕಲ್ ಸೀರೆ, ಕುಪ್ಪಸ, ರೇಷ್ಮೆ ಸೀರೆಗಳನ್ನು ಧರಿಸಿ ಬೋರಮಾಳ ಸರ, ಗುಂಡಿನ ಸರ, ಟೀಕಿ ಸರ, ಕಾಸಿನ ಸರ, ಗುಂಡ್ಹಚ್ಚಿನ ಸರ, ಪಾಟಲಿ, ಬಿಲವಾರ, ಹಸಿರು, ಕೆಂಪು ಮತ್ತು ಚಿಕ್ಕಿಯಬಳೆಗಳ ಧರಿಸಿ ಸೆರಗುಹೊತ್ತು ಅಲಂಕರಿಸಿಕೊಂಡರೆ, ಇತ್ತೀಚಿನ ನೀರೆಯರು ನಾವೇನು ಕಡಿಮೆ ಎಂಬಂತೆ ಜರತಾರಿ ಸೀರೆಗಳಲ್ಲಿ, ಹಳೆಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ತಯಾರಾಗುತ್ತಾರೆ. ಮಕ್ಕಳಿಗಂತೂ ಹಬ್ಬವೋ ಹಬ್ಬ. ತಂದೆ, ಅಜ್ಜ೦ದಿರಿಗೆ ದನಗಳನ್ನು ಹಳ್ಳಕ್ಕೆ ಕರೆದೊಯ್ದು ಜಳಕ ಮಾಡಿಸಲು, ತಯಾರು ಮಾಡಲು ಅವರ ಸಹಾಯ ಹಸ್ತ ಇದ್ದೇ ಇರುತ್ತದೆ. ದನ ಕರುಗಳು ಕೂಡ ಹಳ್ಳಗಳಲ್ಲಿ ಮೀಯಿಸಲ್ಪಟ್ಟು ಕೋಡುಗಳಿಗೆ ಬಣ್ಣ ಬಳಿದು ಅವುಗಳ ಬೆನ್ನ ಮೇಲೆ ಜರತಾರಿಯ ಸೀರೆಯಿಂದ ತಯಾರಾದ ಅಂಗವಸ್ತ್ರಗಳನ್ನು ಹೊದೆದು, ಕೋಡಣಸು, ಕೊಂಬಿನ ಸರಗಳನ್ನು ಧರಿಸಿ, ಕೊಂಬುಗಳನ್ನು ಕೂಡ ಶೃಂಗರಿಸಿ ಎಲ್ಲರೂ ಭೂತಾಯಿಯ ಪೂಜೆ ಸಲ್ಲಿಸಲು ಹೊಲಕ್ಕೆ ಸಾಗುತ್ತಾರೆ. ಒಟ್ಟಿನಲ್ಲಿ ಕಣ್ಣಿಗೆ ಹಬ್ಬದ ವಾತಾವರಣ, ಸಂಭ್ರಮ ಸಡಗರದ ಕಳೆ. ಎತ್ತಿನ ಕೊರಳಲ್ಲಿರುವ ಗಂಟೆಯ ಝೀಂಕಾರ, ಚಕ್ಕಡಿ ಹೊಡೆಯುವವನ ಹೂಂಕಾರ, ಮರದ ಗಾಲಿಯ ಕ್ಲಿಂಕಾರ, ಗಾಲಿಗೆ ಕೋಲಿಟ್ಟು ಶಬ್ದ ಮಾಡುವ ರೀತಿ ಮನಮೋಹಕ.ಪ್ರತಿಯೊಬ್ಬ ರೈತನು ತನ್ನ ಹೊಲದಲ್ಲಿರುವ ಒಂದು ಅಚ್ಚುಕಟ್ಟಾದ ತಾವನ್ನು.. ಹೆಚ್ಚಾಗಿ ಬನ್ನಿ ಗಿಡ ಇರುವ ಪ್ರದೇಶವನ್ನು ಸ್ವಚ್ಛಗೊಳಿಸಿ ಅಲ್ಲಿಯೇ ಜಮಖಾನೆಯನ್ನು ಹಾಸಿ ಬನ್ನಿ ಗಿಡದ ಕೆಳಗೆ ಐದು ಜನ ಪಂಚ ಪಾಂಡವರನ್ನು ( ೫ ಕಲ್ಲುಗಳನ್ನು ಪಾಂಡವರ ರೂಪದಲ್ಲಿ ಮತ್ತು ಹಿಂದೆ ಕರ್ಣನ (ಕೆಲವರು ಕಳ್ಳ ಎಂದು ಅಪಭ್ರಂಶ ಮಾಡಿದ್ದಾರೆ) ಹೆಸರಿನಲ್ಲಿ ಇನ್ನೊಂದು ಕಲ್ಲನ್ನು ಪ್ರತಿಷ್ಠಾಪಿಸಿ ಭೂತಾಯಿಯನ್ನು ಬನ್ನಿ ಮರದಲ್ಲಿ ಆಹ್ವಾನಿಸಿ, ಪ್ರತಿಷ್ಠಾಪಿಸಿ, ಪೂಜಿಸಿ, ಮಂಗಳಾರತಿ ಮಾಡಿ ಕಾಯಿ ಒಡೆದು ನೈವೇದ್ಯವನ್ನು ಮಾಡುತ್ತಾರೆ  ಎಳ್ಳ ಅಮವಾಸ್ಯೆ ಬಂದಿತೆವ್ವಹೊಲಕ ಹೋಗುದಕ ಮತ್ತಚರಗ ಚೆಲ್ಲುದಕ ಮುತ್ತೈದೆರೆಲ್ಲಾರುಕೂಡುದಕ ಮತ್ತು ಭೂಮಿತಾಯಿಪೂಜೆ ಮಾಡುದಕಎಳ್ಳ ಅಮಾಸಿಗೇ ಎಣಿಗಡುಬುಕರಿದೇವ ಎಣಗಾಯೀಎಳ್ಳಚ್ಚಿದ ರೊಟ್ಟಿ ತುಂಬೇವ ಕೆರಸ್ಯಾಗಏರಿ ಹೊಲಕ ಎಲ್ಲರೂ ಚರಗ ಚೆಲ್ಲೇವ” ಎಂದು ಹೆಂಗಳೆಯರು ಪ್ರಾರ್ಥಿಸುತ್ತಾ ಭೂಮಿ ತಾಯಿಯನ್ನು ಕೊಂಡಾಡುತ್ತಾರೆ. (ಪಾಂಡವರನ್ನು ಪೂಜಿಸುವ ಹಿಂದೆಯೂ ಒಂದು ಕಥೆ ಇದೆ. ಅಜ್ಞಾತವಾಸದಲ್ಲಿದ್ದ ಪಾಂಡವರು ಹಸಿವಿನಿಂದ ತತ್ತರಿಸುತ್ತಾ ಹೊಲದ ಬಳಿ ಬಂದಾಗ ಅಲ್ಲಿ ದಂಪತಿಗಳು ಬನ್ನಿ ಮರದ ಕೆಳಗೆ ಭೂತಾಯಿಯ ಪೂಜೆ ಮಾಡಿ ಆಹಾರ ಸ್ವೀಕರಿಸಲು ಅಣಿಯಾಗಿದ್ದರು. ಸಮಯಕ್ಕೆ ಸರಿಯಾಗಿ ಬಂದ ಅಭ್ಯಾಗತರನ್ನು ಸ್ವಾಗತಿಸಿದ ರೈತ ದಂಪತಿಗಳು ಅವರಿಗೆ ಊಟಕ್ಕೆ ಬಡಿಸಲು ಮುಂದಾದಾಗ ತಟ್ಟೆ ಅಥವಾ ಎಲೆ ಇರಲಿಲ್ಲ. ಆಗ ಮಾರುವೇಶದಲ್ಲಿದ್ದ ಧರ್ಮರಾಜನು ಮೇಲಿದ್ದ ಬನ್ನಿ ಪತ್ರವನ್ನು ಹರಿದು ಆ ಎಲೆಯಲ್ಲಿಯೇ ಊಟ ಬಡಿಸಲು ದಂಪತಿಗಳನ್ನು ಕೇಳಿಕೊಳ್ಳುತ್ತಾನೆ. ಅಷ್ಟು ಪುಟ್ಟ ಬನ್ನಿ ಎಲೆಯಲ್ಲಿ ಆಹಾರ ಹಿಡಿಸುವುದೇ ಎಂದು ಸೋಜಿಗದಿಂದ ರೈತ ದಂಪತಿಗಳು ಬಡಿಸುತ್ತಾ ಹೋದರೆ ಎಲೆ ತುಂಬುವುದೇ ಇಲ್ಲ, ಆದರೆ ಪಂಚಪಾಂಡವರು ತೃಪ್ತಿಯಿಂದ ಊಟ ಮಾಡುತ್ತಾರೆ. ಅಷ್ಟೇ ಅಲ್ಲ ತಮಗೆ ಉಣ ಬಡಿಸಿದ ರೈತ ದಂಪತಿಗಳಿಗೆ ತಾವು ಯಾವತ್ತೂ ರೈತನ ಹೊಲ ಕಾಯುವ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುವೆವು ಎಂದು ಮಾತು ಕೊಡುತ್ತಾರೆ. ಅದಕ್ಕೆ ರೈತ ದಂಪತಿ ಪ್ರತಿವರ್ಷವೂ ಭೂಮಿತಾಯಿಯನ್ನು ಪೂಜಿಸುವ ಈ ದಿನ ನಿಮ್ಮನ್ನು ನಾವು ಸತ್ಕರಿಸುತ್ತೇವೆ ಎಂದು ಪ್ರತಿಯಾಗಿ ಹೇಳುತ್ತಾರೆ. ಅಜ್ಞಾತವಾಸಕ್ಕೂ ಮುನ್ನವೇ ಕರ್ಣನು ತಮ್ಮ ಸಹೋದರನೆಂಬ ಅರಿವಿದ್ದ ಸಹೋದರರು ಮತ್ತೊಂದು ಬನ್ನಿಯ ಪತ್ರ(ಎಲೆ)ದಲ್ಲಿ ತಮ್ಮ ಸಹೋದರ ಕರ್ಣನಿಗಾಗಿ ಆಹಾರವನ್ನು ಪಡೆಯುತ್ತಾರೆ ಎಂಬುದು. ) ನಂತರ ನೈವೇದ್ಯ ಮಾಡಿದ ಒಂದು ಭಾಗವನ್ನು ಭೂಮಿಯಲ್ಲಿ ಗುಳಿ ತೋಡಿ ಅಲ್ಲಿ ಆ ನೈವೇದ್ಯವನ್ನು ಸಮರ್ಪಿಸುತ್ತಾರೆ. ಇನ್ನುಳಿದ ನೈವೇದ್ಯದ ಭಾಗವನ್ನು ಚರಗಾ ಚೆಲ್ಲಲಿಕ್ಕೆಂದು ಹೊರಡುತ್ತಾರೆ. ನೈವೇದ್ಯ ಹಿಡಿದ ವ್ಯಕ್ತಿ ಹುಲ್ಲುಲ್ಲಿಗೋ ಎಂದು ಹೇಳುತ್ತಾ ತನ್ನ ಕೈಯಲ್ಲಿರುವ ಎಡೆಯಿಂದ ಸ್ವಲ್ಪ ಸ್ವಲ್ಪ ಭಾಗವನ್ನು ಹೊಲದ ಸುತ್ತಲೂ ಚೆಲ್ಲುತ್ತಾ ಸಾಗಿದರೆ ಹಿಂದೆ ಸಾಗುವ ಮಕ್ಕಳು ಚಳ್ಳಂಬರಿಗೋ ಎಂದು ಕೂಗುತ್ತಾ ಸಾಗುತ್ತಾರೆ. ಹುಲ್ಲುಲ್ಲಿಗೋ ಅಂದರೆ ಹೊಲದಲ್ಲಿರುವ ಪ್ರತಿಯೊಂದು ಹುಲ್ಲಿನ ಕಣಕ್ಕೂ, ಚಳ್ಳಂಬರಿಗೋ ಎಂದರೆ ಪ್ರತಿಯೊಂದು ಬೇರಿಗೂ ಈ ಆಹಾರವು ಮುಟ್ಟಲಿ ಎಂಬುದು ರೈತನ ಆಶಯ. ಜೊತೆಗೆ ಹೊಲದಲ್ಲಿರುವ ಎಲ್ಲಾ ಕ್ರಿಮಿಕೀಟಗಳಿಗು ರೈತ ಚರಗ ಚೆಲ್ಲುವ ಮೂಲಕ ಆಹಾರ ಸಲ್ಲಿಸುತ್ತಾನೆ…. ತನ್ಮೂಲಕ ವಸುದೈವ ಕುಟುಂಬಕಂ ಎಂದು ಜಗತ್ತಿಗೆ ಸಾರುತ್ತಾನೆ. ಹೀಗೆ ಭೂತಾಯಿಗೆ ಚರಗ ಚೆಲ್ಲಿದ ನಂತರ ರೈತನ ಕುಟುಂಬ ತನ್ನ ಬಂಧು ಬಾಂಧವರೂಡಗೂಡಿ ಹಬ್ಬದ ಅಡುಗೆಯನ್ನು ಸವಿಯುತ್ತಾರೆ. ರೈತನ ಮನೆಯ ಅಡುಗೆ ಮೃಷ್ಟಾನ್ನಕ್ಕಿಂತಲೂ ಹೆಚ್ಚು ..ಸವಿದಷ್ಟು ಸವಿ ಹೆಚ್ಚಾಗುವ, ಮೊಗೆದಷ್ಟೂ ಬಸಿವ ನೀರಿನ ಊಟೆಯಂತೆ. ತನ್ನಲ್ಲಿರುವ ಎಲ್ಲವನ್ನು ಎಲ್ಲರಿಗೂ ಸ್ವ ಸಂತೋಷದಿಂದ ಹಂಚಿ ಅವರ ಸಂತಸದಲ್ಲಿಯೇ ತನ್ನ ಸಂತಸವನ್ನು ಕಾಣುವ ಜಗತ್ತಿನ ಏಕೈಕ ವ್ಯಕ್ತಿ ರೈತ. ಹೀಗೆ ರೈತ ಸಂತಸ ಪಡಲು ಆತನ ಕೊಡುವ ಗುಣವೇ ಕಾರಣವಾಗಿದೆ. ಈ ರೀತಿ ಎಳ್ಳ ಅಮಾವಾಸ್ಯೆಯನ್ನು ಉತ್ತರ ಕರ್ನಾಟಕದ ಬಯಲು ಸೀಮೆಯ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ನೀವು ಕೂಡ ಹತ್ತಿರದ ಯಾವುದಾದರೂ ಊರಿನ ಹೊಲಕ್ಕೆ ಹೋದರೆ ಅಲ್ಲಿಯ ರೈತರು ನಿಮ್ಮನ್ನು ಕೂಡ ಕರೆದು ಉಣ ಬಡಿಸುವುದರಲ್ಲಿ ಸಂದೇಹವೇ ಇಲ್ಲ. ಈ ರೀತಿ ಭೂಮಿ ತಾಯಿಯನ್ನು ಪೂಜಿಸುವ ರೈತ ಯಾವಾಗಲೂ ನಗುನಗುತ್ತಾ ಇರಲಿ ಆತನ ಬಾಳು ಹಸನಾಗಲಿ, ರೈತ ಜಗದ ಬೆಳಕಾಗಲಿ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ?? ಪ್ರಭಾ ಹಿರೇಮಠ ಅವರ ವೈಚಾರಿಕ ಲೇಖನ

ವೈಚಾರಿಕ ಸಂಗಾತಿ ಪ್ರಭಾ ಹಿರೇಮಠ ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ?? *ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ??* ಮೊನ್ನೆ ಹುಣ್ಣಿಮೆಯ ದಿನ ಒಬ್ಬ ಹೆಸರಾಂತ ವೈದ್ಯೆ ಮತ್ತು ಮಗ ಪರಸ್ಪರ ಮನಸ್ತಾಪ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಇಡೀ ರಾಜ್ಯ ಬೆಚ್ಚಿ ಬೀಳಿಸಿತು. ಅದೇ ಹುಣ್ಣಿಮೆಯ  ರಾತ್ರಿ ಸ್ನೇಹಿತೆಯೋಬ್ಬಳು ಕರೆ ಮಾಡಿ, ಪಕ್ಕದ ಮನೆಯ ಮಧ್ಯ ವಯಸ್ಕ ಮಹಿಳೆಗೆ ಹುಣ್ಣಿಮೆ ಮತ್ತು ಅಮವಾಸ್ಯೆಯ ರಾತ್ರಿ ಮಾತ್ರ ದೆವ್ವ ಬರುತ್ತೆ ಅಂತಾ ಹೇಳಿದಳು.  ನಿನ್ನಿಂದ ಏನಾದರೂ ಸಾಧ್ಯವಿದ್ದರೇ ಒಂದು ಸಾರಿ ಬಂದು ಕೌನ್ಸಿಲಿಂಗ್ ಮಾಡಿ ಹೋಗಬಹುದಾ? ಅಂತಾ ಕೇಳಿಕೊಂಡಳು. ಜೊತೆಗೆ ಹುಣ್ಣಿಮೆ ಮತ್ತು ಅಮವಾಸ್ಯೆ ದಿನಗಳಂದು ಮಾತ್ರ ಮನುಷ್ಯರ ಮೈಮೇಲೆ ದೇವರು ಅಥವಾ ದೆವ್ವ ಬರೋದು? ಯಾಕೆ ಹೇಳೇ  ಅಂತಾನೂ ಕೇಳಿದಳು….. ಆತ್ಮೀಯರೇ, ಮೇಲಿನ ಎರಡು ದೃಷ್ಟಾಂತಗಳನ್ನಿಟ್ಟುಕೊಂಡು ಅವಳ ಪ್ರಶ್ನೆಗೆ ಉತ್ತರ ಕೊಟ್ಟರೆ ಪ್ರಾಯಶಃ ಬಹುತೇಕರಿಗೆ ಹೆಲ್ಪ ಆಗಬಹುದು….ಅಥವಾ ದೆವ್ವ ಮತ್ತು ದೇವರ ಬಗ್ಗೆ ತಲೆ ಕೆಡಿಸಿಕೊಂಡವರಿಗೆ ಸತ್ಯ ಗೊತ್ತಾಗುತ್ತದೆ ಅಂತಾ ಈ ಲೇಖನ ಬರೆಯುತ್ತಿದ್ದೇನೆ……..ನಿಜವಾಗ್ಯೂ ಹೇಳೋದಾದ್ರೆ ದೆವ್ವನೂ ಇಲ್ಲ ಗಿವ್ವನೂ ಇಲ್ಲ…ಆದರೆ ಹುಣ್ಣಿಮೆ ಮತ್ತು ಅಮವಾಸ್ಯೆಗಳಂದು ನಮ್ಮ ಮನಸ್ಥಿತಿ ತುಂಬಾ ಡಿಸ್ಟರ್ಬ್ ಆಗೋದು ಮಾತ್ರ ಕಟು ಸತ್ಯ!!!. ಅದಕ್ಕೆ ಅವೇ ದಿನಗಳಂದು ಅಪಘಾತ, ಆತ್ಮಹತ್ಯೆ, ಜಗಳ, ಕೊಲೆಗಳು ಆಗೋದು ಸಾಮಾನ್ಯ. ಬೇಕಾದರೆ ನೀವು ಅಂಕಿ ಅಂಶ ಸ್ಟಡಿ ಮಾಡಿ… ಸುಮ್ಮನೆ ಒಂದು ಪೊಲೀಸ್‌ ಸ್ಟೇಷನ್ ನಲ್ಲಿ ಯಾವ ದಿನಗಳಂದು ಹೆಚ್ಚಿಗೆ ಎಫ್‌ಐಆರ್ ಗಳು ಆಗಿರುತ್ತವೆ ಎಂಬುದನ್ನು ಪರಿಶೀಲಿಸಿ. ಹಂಡ್ರೆಂಡ್ ಪರ್ಸೆಂಟ್ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಾ ಜಾಸ್ತಿ ಆಗಿರುತ್ತವೆ. ಇದಕ್ಕೆ ಕಾರಣವನ್ನು ಅತ್ಯಂತ ಸರಳವಾಗಿ ಹೇಳುವುದಾದರೆ, ನಮ್ಮ ದೇಹ 70%ರಷ್ಟು ನೀರಿನಿಂದ ಕೂಡಿರುತ್ತದೆಂದು ವೈಜ್ಞಾನಿಕವಾಗಿ ನಮಗೆಲ್ಲ ಗೊತ್ತು.. ಹಾಗಾಗಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಹೊಂದಿದ ಚಂದ್ರ ಹುಣ್ಣಿಮೆಯ ದಿನ, ಸೂರ್ಯನ ಗುರುತ್ವಾಕರ್ಷಣ ಶಕ್ತಿ ಹೊಂದಿದ ಭೂಮಿ ಅಮವಾಸ್ಯೆಯ ದಿನ ಹೆಚ್ಚಿನ ಉಬ್ಬರವಿಳಿತಗಳನ್ನ ಹೊಂದುವುದರಿಂದ ನಮ್ಮ ಇಡೀ ದೇಹ ಕಂಪನಕ್ಕೆ ಒಳಗಾಗುತ್ತದೆ(ಹುಣ್ಣಿಮೆಯ ದಿನ ಸಮುದ್ರದ ಉಬ್ಬರವಿಳಿತ ಹೆಚ್ಚಾಗುವ ಹಾಗೆ). ಹಾಗಾಗಿ ಅಂದು ನಾವು ಕೋಪ, ಸಂತೋಷ, ಹತಾಶೆ, ಕ್ರೋಧ, ನಿರೀಕ್ಷೆ, ಅಸಮಾಧಾನ, ಖಿನ್ನತೆ, ಅಭದ್ರತೆಯಂತಹ ಹೆಚ್ಚಿನ ಭಾವನೆಗಳನ್ನು ಅನುಭವಿಸುತ್ತೇವೆ, ಈ ಸಂದರ್ಭದಲ್ಲಿ ರಕ್ತದ ಹರಿವು ಹೆಚ್ಚಾಗಿರುತ್ತದೆ ಮತ್ತು ರಕ್ತಸ್ರಾವವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಅದಕ್ಕೆ ಅಮವಾಸ್ಯೆ ಅಥವಾ ಹುಣ್ಣಿಮೆಯ ಆಸುಪಾಸು ಋತುಚಕ್ರ ಹೊಂದುವ ನಮ್ಮ ಹೆಣ್ಣು ಮಕ್ಕಳು ಉಳಿದ ದಿನಗಳಿಗಿಂತ ಹೆಚ್ಚು ರಕ್ತಸ್ರಾವಕ್ಕೆ ಒಳಗಾಗುತ್ತಾರೆ. ಆದರೆ ಇದನ್ನು ಯಾವ ವೈದ್ಯರೂ ಹೇಳದೇ ಔಷಧ ಬರೆಯುವಲ್ಲಿ ಮಗ್ನರಾಗುತ್ತಾರೆ!!!. ಅಲ್ಲದೇ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಅಶಕ್ತ ಮನಸ್ಸಿನ ಜನರು ಬಹು ವಿಚಿತ್ರವಾಗಿ ವರ್ತಿಸುವದು, ಅತಿರೇಕತನ ಮಾಡೋದು, ಕೂಗಾಡುವುದು, ಕಿರುಚಾಡುವುದನ್ನು ಮಾಡುತ್ತಾರೆ. ಕೆಲವರು ತಮಗೆ ತಾವು ಇಲ್ಲವೇ ಮತ್ತೊಬ್ಬರಿಗೆ ತೊಂದರೆ ಮಾಡಿ ಜೋರಾಗಿ ನಗುತ್ತಾರೆ ಅಥವಾ ಅಳುತ್ತಾರೆ. ಇನ್ನೂ ಕೆಲವರು ಪರಹಿಂಸೆಗೆ ಮುಂದಾಗಿ ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ ಮಾಡುವುದುಂಟು. ಉದಾಹರಣೆಗೆ ನರಹಂತಕ ವೀರಪ್ಪನ್, ಚಾರ್ಲ್ಸ್ ಶೋಭರಾಜ್ ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ವಿಧ್ವಂಸಕ ಕೃತ್ಯಗಳಲ್ಲಿ ಹೆಚ್ಚಾಗಿ ತೊಡಗುತ್ತಿದ್ದರು. ಅದು ಸರಿ!! ಈಗ ದೆವ್ವಗಳ ವಿಷಯಕ್ಕೆ ಬರೋಣ. ವೈಜ್ಞಾನಿಕವಾಗಿ ಹೇಳುವುದಾದರೆ, ನಮ್ಮ ದೇಹವು ನಮ್ಮ ವಿದ್ಯುತ್ಕಾಂತೀಯ ಸಂಕೇತಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ನಮ್ಮ ಆಲೋಚನೆಗಳು ಮತ್ತು ಭಾವನೆಗಳು ಸಹ ಪ್ರಕೃತಿಯಲ್ಲಿ ವಿದ್ಯುತ್ಕಾಂತೀಯವಾಗಿವೆ. ಸತ್ತಾಗ, ಮನುಷ್ಯನ ಆಲೋಚನೆಗಳು ಮತ್ತು ಭಾವನೆಗಳು ತೀವ್ರವಾಗಿದ್ದರೆ, ಆ ವಿದ್ಯುತ್ಕಾಂತೀಯ ಕ್ಷೇತ್ರವು ಸತ್ತ ದೇಹ ಬಿಟ್ಟು ತನ್ನ ಶಕ್ತಿಯನ್ನ ಬೇರೆ ಜೀವಂತ ಅಶಕ್ತ ದೇಹಕ್ಕೆ ಹೋಗಿ ಸೇರುತ್ತವೆ. ಆಮೇಲೆ ಸತ್ತ ಮಾನವನ ಭಾವನೆಗಳು ಇವರ ಬಾಯಲ್ಲಿ ಬರುತ್ತವೆ. ಇದನ್ನೇ ಪ್ರೇತ ಅಥವಾ ದೆವ್ವ ಅಥವಾ ದೇವರು ಎಂದು ಕರೆಯಲಾಗುತ್ತದೆ. ಇಲ್ಲಿ ವ್ಯಕ್ತಿಯು ತನ್ನ ಸಾಮಾನ್ಯ ಗುರುತನ್ನು ಕಳೆದುಕೊಂಡು, ಬೇರೊಂದು “ವ್ಯಕ್ತಿತ್ವ” ಅಥವಾ “ಶಕ್ತಿ” ತನ್ನನ್ನು ನಿಯಂತ್ರಿಸುತ್ತಿದೆ ಎಂದು ನಂಬುತ್ತಾನೆ. ಬಾಲ್ಯದ ಆಘಾತಗಳು (Trauma), ವಿಶೇಷವಾಗಿ ಲೈಂಗಿಕ ದೌರ್ಜನ್ಯದಂತಹ ಕೆಟ್ಟ ಘಟನೆಗಳು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿ ಮುಂದೆ ದೆವ್ವದ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಸೈಕಾಲಜಿಕಲಿ ಹೆಚ್ಚಿಗಿರುತ್ತದೆ. ಕೆಲವರಲ್ಲಿ ಅದರ ಸ್ವರೂಪ ಬೇರೆಯಾಗಿ ಡುಯಲ್ ಪರ್ಸನಾಲಿಟಿ ಅಥವಾ ಸ್ಪಿಟ್ ಪರ್ಸನಾಲಿಟಿಯಾಗಿ ಗೋಚರ ಆಗಬಲ್ಲದು. ಸ್ಕಿಜೋಫೋನಿಯಾ (schizophrenia), ಮತ್ತು ಶ್ರವಣ ಭ್ರಮೆಗಳಿಗೆ (delusions) (hallucinations) ವ್ಯಕ್ತಿ ಈಡಾಗಬಲ್ಲ, ಇದರಿಂದಾಗಿ ರೋಗಿಯು ತನ್ನನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಅಥವಾ ಬೇರೆ ಧ್ವನಿಗಳು ಕೇಳಿಸುತ್ತಿವೆ ಎಂದು ಭಾವಿಸಬಹುದು. ಉದಾಹರಣೆಗೆ ಕಳೆದ ತಿಂಗಳು ಬೆಂಗಳೂರಿನ ಪ್ರಸಿದ್ದ ಸೈಕಿಯಾಟ್ರಿಕ್ ಹಾಸ್ಪಿಟಲ್ ನಲ್ಲಿ ನಾನು ಒಬ್ಬ ಮಧ್ಯ ವಯಸ್ಕ ವಿವಾಹಿತ ಮಹಿಳೆಯ ಕೇಸ್ ಸ್ಟಡಿ ಮಾಡುವಾಗ ಅವಳು ಪ್ರತಿ ದಿನ ತನ್ನ ಗಂಡ ಹಾಸ್ಪಿಟಲ್ ಹೊರಗೆ ಬಂದು ತನ್ನ ನೋಡಿ ಹೋಗುತ್ತಾನೆ ಅಂತಾ ಹೇಳುತ್ತಿದ್ದಳು. ಆಮೇಲೆ ಅವಳ ಹೇಳಿಕೆಯನ್ನು ಪರೀಕ್ಷಿಸಲಾಗಿ she is under hallucination ಅನ್ನೋದು ಗೊತ್ತಾಯ್ತು. ಇದನ್ನೇ ಕೆಲವೊಮ್ಮೆ ದೆವ್ವದ ಹಿಡಿತ ಎಂದು ತಪ್ಪಾಗಿ ಅರ್ಥೈಸಬಹುದು!!! ನುರಿತ ಸಮಾಲೋಚಕರಿಂದ ಇಲ್ಲವೇ ಮನೋವೈದ್ಯರಿಂದ ಇಂಥಹ ದುರ್ಬಲ ಮನಸ್ಥಿತಿಗೆ ಒಳಗಾದವರಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು. ಒಮ್ಮೊಮ್ಮೆ ಔಷಧೋಪಚಾರ ಕೂಡ ಅನಿವಾರ್ಯವಾಗಬಲ್ಲದು. ಅದು ಬಿಟ್ಟು ಮಾಟ, ಮಂತ್ರ ಅಂತಾ ಹೇಳುತ್ತಾ ವ್ಯಕ್ತಿಯ ಪರಿಸ್ಥಿತಿ ಹಾಳು ಮಾಡುವುದು ಬೇಡ!!! ಸರಿ… ನಮ್ಮ ಹಿರಿಯರು ಎಸ್ಟು ಜಾಣರು ನೋಡಿ!!!. ಪ್ರಾಯಶಃ ಇದೆಲ್ಲ ಗೊತ್ತಿದ್ದೇ ಅವರು ಅಮವಾಸ್ಯೆ ಅಥವಾ ಹುಣ್ಣಿಮೆಗಳಂದು ಮನೆದೇವರಿಗೆ ಹೋಗುವ ರೂಢಿ ಹಾಕಿರೋದು. ದೇವಸ್ಥಾನಗಳಿಗೆ ಹೋಗುವುದರಿಂದ ನಮ್ಮಲ್ಲಿ ಉಂಟಾಗಬಹುದಾದ ಆ ನೆಗೆಟಿವ್ ಎನರ್ಜಿಗಳನ್ನ ಕಂಟ್ರೋಲ್ ಮಾಡಬಹುದು. ಧ್ಯಾನ, ಅಭಿಷೇಕ, ಯಜ್ಞ, ಪೂಜೆ ಪುನಸ್ಕಾರಗಳಿಂದ ಮನಸ್ಸು ಶಾಂತ ಸ್ಥಿತಿಗೆ ಬರೋದು ಸಾಧ್ಯ….ಅಲ್ಲವೇ?? . ಪ್ರಭಾ ಹಿರೇಮಠ

ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ?? ಪ್ರಭಾ ಹಿರೇಮಠ ಅವರ ವೈಚಾರಿಕ ಲೇಖನ Read Post »

ಇತರೆ

“ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”-ಡಾ. ಸತೀಶ ಕೆ. ಇಟಗಿ

ಶರಣ ಸಂಗಾತಿ “ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”- ಡಾ. ಸತೀಶ ಕೆ. ಇಟಗಿ “ಜಂಗಮ” ಎಂಬ ಪದವು ಸಂಸ್ಕೃತ ಮೂಲದಾಗಿದ್ದು, ಕನ್ನಡದಲ್ಲಿ ಚಲಿಸುವ, ನಡುಗುವ ರ‍್ಥದಲ್ಲಿ ಬಳಕೆಯಾಗುತ್ತದೆ. ಶಿವ ಅಥವಾ ಚಲಿಸುವ ಶಿವಸ್ವರೂಪ ಎಂಬ ರ‍್ಥದಲ್ಲಿ ಉಲ್ಲೇಖವಾಗುತ್ತದೆ. ಜಂಗಮರು ಎಂದರೆ ಶಿವಭಕ್ತರಾದ ಸಾಧುಗಳು ಅಥವಾ ಲಿಂಗಾಯತ ಪಂಥದ ಧರ‍್ಮಿಕ ಗುರುಗಳು, ಅವರು ತಾವು ಧರಿಸುವ ಇಷ್ಟಲಿಂಗದ ಮೂಲಕ ಶಿವನನ್ನು ಪ್ರತಿಪಾದಿಸುತ್ತಾರೆ. ಜಂಗಮನು ಸಜೀವ ಶಿವನ ಪ್ರತೀಕ. ಬಸವಾದಿ ಪ್ರಮಥರ ಪ್ರಕಾರ, “ಜಂಗಮ ಪದದ ವಿಶೇಷ ವ್ಯಾಖ್ಯಾನವು ಬಹುಮಾನ್ಯವಾಗಿದೆ. ಈ ವ್ಯಾಖ್ಯಾನವು ವಿಶೇಷವಾಗಿ ವಚನ ಸಾಹಿತ್ಯ ಮತ್ತು ಶರಣ ಪರಂಪರೆಯೊಂದಿಗೆ ಸಂಬಂಧ ಹೊಂದಿದೆ,”ಗಮ” ಎಂದರೆ ಹೋಗು, ಚಲನೆ. “ಜಂಗಮ” ಎಂದರೆ ಚಲಿಸುವ, ಅಲೆದಾಡುವ, ಸ್ಥಿರವಲ್ಲದ. ಅಲ್ಲಲ್ಲಿ ಅಲೆದಾಡುತ್ತಾ, ಇಷ್ಟಲಿಂಗವನ್ನು ಧರಿಸಿ, ಶಿವದರ‍್ಶನವನ್ನು ಪಸರಿಸುವ ಶ್ರೇಷ್ಠ ವ್ಯಕ್ತಿ. ಇನ್ನು ಕೆಲ ಕಡೆ “ಜಂಗಮ” ಎಂಬ ಶಬ್ದವನ್ನು ಶಿವನ ಚರ ರೂಪಕ್ಕೂ ಉಪಯೋಗಿಸುತ್ತಾರೆ.ಮೂರು ಲಿಂಗಗಳು:೧ಇಷ್ಟಲಿಂಗ: ವ್ಯಕ್ತಿಯ ಹೃದಯದಲ್ಲಿ ಧ್ಯಾನಿಸುವ ದೇವರೂಪ.೨.ಪ್ರಾಣಲಿಂಗ: ಶ್ವಾಸ, ಜೀವನ ಶಕ್ತಿ.೩.ಜಂಗಮಲಿಂಗ: ಭಕ್ತಿಗೆ ಪಾಠ ಮಾಡುವ ಜೀವಂತ ಜಂಗಮ.ಜಂಗಮರು ಸಮಾಜದಲ್ಲಿ ಸನ್ಯಾಸಿಗಳಂತೆ ಭ್ರಮಣ ಮಾಡುತ್ತಿದ್ದರು. ತತ್ವ ಬೋಧನೆ, ಧರ‍್ಮ ಪ್ರಚಾರ, ದಾನ ಸ್ವೀಕಾರ ಮುಂತಾದ ಕರ‍್ಯಗಳಲ್ಲಿ ತೊಡಗಿದ್ದರು. ಇವರು ಆಚಾರ-ವಿಚಾರ, ಶುದ್ಧ ಜೀವನ, ಸಮಾನತೆಯ ತತ್ವಗಳಿಗೆ ಬದ್ಧರಾಗಿದ್ದರು. ಬಸವಣ್ಣ ಮತ್ತು ಇತರ ಶರಣರು “ಜಂಗಮ” ಎಂಬ ಪದಕ್ಕೆ ಆಧ್ಯಾತ್ಮಿಕ ಮತ್ತು ತಾತ್ವಿಕ ರ‍್ಥ ನೀಡುತ್ತಾರೆ. ಇದನ್ನು ಅವರು ದೈಹಿಕ ಚಲನೆಗಿಂತ ಹೆಚ್ಚಾಗಿ ಒಂದು ಧರ‍್ಮಿಕ ಹಾಗೂ ತತ್ತ್ವಜ್ಞಾನದ ದೃಷ್ಟಿಕೋನದಿಂದ ವಿವರಣೆ ಮಾಡುತ್ತಾರೆ. “ಜಂಗಮವು ಸ್ಥಾವರವಲ್ಲ, ಜಡವಲ್ಲ; ಜ್ಞಾನದಿಂದ ಜೀವನವಂತಾಗಿರುವ ಶಿವಸ್ವರೂಪ.”. ಇಷ್ಟಲಿಂಗವನ್ನು ಧರಿಸಿ, ತನ್ನ ಜೀವನವನ್ನು ಶಿವಭಕ್ತಿಗೆ ಮೀಸಲಿಟ್ಟ ವ್ಯಕ್ತಿ. ಜಂಗಮನು. ಅಹಂಕಾರವಿಲ್ಲದ, ವೈರಾಗ್ಯವಿರುವ, ಶುದ್ಧ ಚರಿತ್ರೆಯುಳ್ಳ, ಜನಸೇವೆಗೆ ತೊಡಗಿದ ಶರಣ. ಜಂಗಮ. ಸಮಾಜದಲ್ಲಿ ತಿರುಗಿ, ರ‍್ಮಬೋಧನೆ ಮಾಡುವ ಚಲಿಸುವ ದೇವರು. ಸ್ಥಾವರ ದೈವ ಅಲ್ಲ, ಜಂಗಮವೇ ದೈವ”, ಅಂದರೆ ಶಿವ ರ‍್ಭಗುಡಿ, ದೇವಸ್ಥಾನದಲ್ಲಿ ಇರದೆ, ಚಲಿಸುವ ವ್ಯಕ್ತಿಯಲ್ಲಿಯೇ ದೇವರ ತತ್ವವಿದೆ ಎಂಬ ಬಸವಣ್ಣನವರ ತತ್ತ್ವ.“ಸ್ಥಾವರವು ದೈವವಲ್ಲ, ಜಂಗಮವೇ ದೈವಸ್ಥಾವರ ಪೂಜಿಸಿ ಪಾಪ ಹರವುದೆ?ಜಂಗಮ ಸೇವಿಸಿ ಪಾವನರಾಗುವುದೆ?-ಕೂಡಲಸಂಗಮದೇವಾ”ಈ ವಚನದಲ್ಲಿ ಬಸವಣ್ಣನು ಸ್ಥಾವರ (ಸ್ಥಿರವಾದ ವಸ್ತುಗಳು) ಮತ್ತು ಜಂಗಮ (ಚಲಿಸುವ, ಜೀವಂತ) ಎಂಬ ಎರಡು ತತ್ತ್ವಗಳನ್ನು ಹೋಲಿಸಿ, ಶರಣ ರ‍್ಮದ ಅಂತರಂಗ ತತ್ತ್ವವನ್ನು ನಿರೂಪಿಸುತ್ತಾನೆ. “ಸ್ಥಾವರಕ್ಕು ದೈವವಲ್ಲ”, ದೇವರನ್ನು ಕಲ್ಲಿನಲ್ಲಿ, ಮರ‍್ತಿಯಲ್ಲಿ, ದೇವಾಲಯದ ಗೋಡೆಗಳಲ್ಲಿ ಹುಡುಕುವುದು ನಿಷ್ಪ್ರಯೋಜಕ. ಅಲ್ಲಿ ಜಡತೆಯಿದೆ, ಚೇತನವಿಲ್ಲ. ತತ್ತ್ವಜ್ಞಾನ, ಸತ್ಪ್ರವೃತ್ತಿ, ಸತ್ಯಾಚರಣೆ, ಭಕ್ತಿಶ್ರದ್ಧೆ ಇಷ್ಟಲಿಂಗ ಧರಿಸಿದ ವ್ಯಕ್ತಿ ಆತನೆ ಸಜೀವ ದೇವರು. ಅಂತಹ ವ್ಯಕ್ತಿಯ ಸೇವೆ, ಸತ್ಸಂಗ, ಅವರ ಮರ‍್ಗರ‍್ಶನ ಇವೇ ನಿಜವಾದ ದೇವಪೂಜೆ. “ಸ್ಥಾವರ ಪೂಜಿಸಿ ಪಾಪ ಹರವುದೆ?” -ಕಲ್ಲಿನ ಮರ‍್ತಿಗೆ ಪೂಜೆ ಮಾಡುವುದು ಪಾಪ ಪರಿಹಾರಕ್ಕೆ ಕಾರಣವಾಗದು, ಯಾಕಂದರೆ ಅದು ಚೈತನ್ಯವಿಲ್ಲದ ಜಡ ವಸ್ತು. “ಜಂಗಮ ಸೇವಿಸಿ ಪಾವನರಾಗುದೆ?” – ಜಂಗಮನ ಸೇವೆ (ಅಥವಾ ಜ್ಞಾನಿಗಳ ಜೊತೆಗಿನ ಸತ್ಸಂಗ, ಶ್ರದ್ಧಾ) ನಮಗೆ ಪವಿತ್ರತೆಯನ್ನು ನೀಡುತ್ತದೆ. ಆತ್ಮಶುದ್ಧಿಗೆ ದಾರಿ ಒದಗಿಸುತ್ತದೆ.ಜಂಗಮ ಜಾತಿ ವಾಚಕವೇ:ಮೂಲತಃ ಜಂಗಮ ಎನ್ನುವುದು ಜಾತಿವಾಚಕ ಅಲ್ಲ. ಜಂಗಮ ಎಂಬ ಪದವು ಮೊದಲು ಆಧ್ಯಾತ್ಮಿಕ ಸ್ಥಿತಿಯನ್ನು ಸೂಚಿಸುವ ತಾತ್ವಿಕ ಶಬ್ದವಾಗಿತ್ತು, ಜಾತಿಯನ್ನಲ್ಲ. ಆದರೆ… ಇತಿಹಾಸದಲ್ಲಿ ಕೆಲ ವಂಶಗಳು, ಮಠಗಳಿಗೆ ಮತ್ತು ರ‍್ಮಸೇವೆಗೆ ನಿರಂತರವಾಗಿ ಸಲ್ಲಿಸಿದವರ ವಂಶಾವಳಿಗೆ “ಜಂಗಮ” ಎಂಬ ಪದವು ಪರಂಪರೆಯ ಗುರುತ್ವದವಾಗಿ ಬಳಕೆಯಾಗತೊಡಗಿತು. ಈ ಕಾರಣದಿಂದ ಕೆಲವರು ಜಂಗಮರನ್ನು ಜಾತಿ/ರ‍್ಗ ಎಂದು ಪರಿಗಣಿಸುತ್ತಾರೆ. ಇದು ಸಾಂಸ್ಕೃತಿಕ, ಸಾಮಾಜಿಕ ಬಳಕೆ, ರ‍್ಮ ತಾತ್ವಿಕ ರ‍್ಥವಲ್ಲ. ಶರಣರ ನುಡಿಗಳ ಪ್ರಕಾರ “ಜಾತಿ ಇಲ್ಲ, ಭೇದ ಇಲ್ಲ, ಶುದ್ಧ ಭಕ್ತಿಯ”ಜಂಗಮ ಎಂದರೆ ಶಿವನ ದೂತ, ಎಲ್ಲರಿಗೂ ಸಮಾನ. ವಂಶಪಾರಂರ‍್ಯ ಜಂಗಮ, ಗುರು, ದೀಕ್ಷಿತ ವಂಶಪಾರಂರ‍್ಯ ಜಂಗಮ. ತಾವು ಆಧ್ಯಾತ್ಮಿಕ ಗುರುಕುಲದಿಂದ ಬಂದವರು ಎಂಬ ನಂಬಿಕೆಯುಳ್ಳ ಕುಟುಂಬಗಳು, ಜಂಗಮ ಜಾತಿವಾಚಕವಲ್ಲ. ಆದರೆ “ಜಂಗಮ” ಎಂಬುದು ವೈಯಕ್ತಿಕ ರ‍್ಹತೆ ಆಧಾರಿತ ಪದವಾಗಿದೆ. ಅಂದರೆ, ಜಂಗಮತ್ವವು ವ್ಯಕ್ತಿಯ ಔಪಚಾರಿಕ ಜಾತಿಯಿಂದ ಬರುವುದಿಲ್ಲ. ಅವನು ನರ‍್ಜಾತೀಯ, ಶುದ್ಧ ಚರಿತ್ರೆ, ಲಿಂಗಧಾರಿ, ಆತ್ಮಸಾಧನೆ ಮಾಡಿದವನೇ ಜಂಗಮ. “ಜಾತಿ ಬೇರೆ ಭಕ್ತಿ ಬೇರೆ ಎನಿಸಿದರೆ, ಅವನು ಶಿವನಲ್ಲ”, ಬಸವಣ್ಣ ಹೇಳುತ್ತಾರೆ, ಎಲ್ಲ ಶರಣರು ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚದೇವರು ವಿಭಿನ್ನ ಜಾತಿಗಳಿಂದ ಬಂದಿದ್ದರೂ, ಜಂಗಮತ್ವಕ್ಕೆ ರ‍್ಹರಾದರು. ಅವರಿಗೆ “ಜಂಗಮ” ಎಂಬ ಹುದ್ದೆ ಲಭಿಸಿದ್ದು, ಅವರ ಆತ್ಮಸಾಧನೆ, ಭಕ್ತಿ, ಲಿಂಗಪೂಜಾ ನಿಷ್ಠೆಯಿಂದ, ಜಾತಿಯಿಂದಲ್ಲ.ಐತಿಹಾಸಿಕ ಹಿನ್ನೆಲೆ:ಆಂಧ್ರಪ್ರದೇಶದಲ್ಲಿ ಮಲ್ಲಕಾರ್ಜುನ ಪಂಡಿತರಾಧ್ಯ ಎಂಬ ಶೈವ ಪಂಥದ ಪ್ರತಿಪಾದಕನಿದ್ದ. ಕಲ್ಯಾಣದ ವಚನ ಚಳುವಳಿ ಮತ್ತು ಶರಣ ತತ್ವದ ಬೆಳವಣಿಗೆ ಗಮನಿಸಿ, ಬೆರಗಾಗಿ ತನ್ನ ಶೈವ ತತ್ವ ಕೈಬಿಟ್ಟು, ಲಿಂಗಾಯತ ಜಂಗಮನಾದ. ಅದೇ ಸಂದರ್ಭದಲ್ಲಿ ಕಲ್ಯಾಣದಿಂದ ತೆಲುಗು ಭಾಷೆಯ ಪ್ರದೇಶದ ಕಡೆಗೆ ವಚನ ಪ್ರಚಾರ ಮತ್ತುಲಿಂಗಾಯತ ತತ್ವ ಪ್ರಸಾರಕ್ಕಾಗಿ ಸ್ವತಃ ಬಸವಣ್ಣನವರೆ ಕೆಲವು ಸಾದಕರನ್ನು ನೇಮಿಸಿದ್ದರು. ಅವರ ಕಾಲಿಗೆ ಜಂಗ್ (ಗೆಜ್ಜೆ) ಕಟ್ಟುತ್ತಿದ್ದರು. ಸದ್ದು ಮಾಡುತ್ತ ಮನೆಯಿಂದ ಮನೆಗೆ ಸಂಚರಿಸಿ ಭಕ್ತರು ಭಸ್ಮ ಧಾರಣೆ ಮತ್ತು ಲಿಂಗ ಧಾರಣೆ ಮಾಡಿದ್ದನ್ನು ಪರಿಕ್ಷೀಸುವುದು ಅವರ ಕಾಯಕವಾಗಿತ್ತು. ಅವರನ್ನೇ ಸಾರುವ ಐನಾರು, ಕಂಬಿ ಐನಾರು, ಜಂಗಿನ ಐನಾರು ಎಂದು ಕರೆಯಲಾಯ್ತು. ಕ್ರಮೇಣ ಅಂತಹ ಮನೆತನದವರನ್ನು ಓದುಸುಮಠ, ಭಿಕ್ಷÄಮಠ, ಸಾಲಿಮಠ, ಹಿರೇಮಠ ಎಂದೆಲ್ಲಾ ಪರಿವರ್ತಿಸಲಾಯಿತು. ಅವರುಗಳ ಮನೆಯಲ್ಲಿ ಬಸಯ್ಯ, ಮಡಿವಾಳಯ್ಯ, ಚನ್ನಯ್ಯ, ಶರಣಯ್ಯ, ಪ್ರಭಯ್ಯ, ಪ್ರಭುಸ್ವಾಮಿ, ಚನ್ನಬಸವಯ್ಯ, ಸಿದ್ದಯ್ಯ, ಸಿದ್ದಲಿಂಗಯ್ಯ, ಸಿದ್ರಾಮಯ್ಯ, ಮುಂತಾದ ಹೆಸರುಗಳ ನಾಮಕರಣ ಸಂಸ್ಕೃತಿ ಬೆಳೆಯಿತು. ಇಂದಿಗೂ ಬಹುತೇಕ ಜಂಗಮ ಕುಟುಂಬಗಳ ಮನೆ ದೇವರು (ಕುಲದೇವರು) ಉಳುವಿ, ಎಡೆಯೂರು, ಗುಡ್ಡಾಪುರ, ಸೊನ್ನಲಗಿ, ಮಲೈಮಹದೇಶ್ವರ ಎಂಬ ಪುಣ್ಯಕ್ಷೇತ್ರಗಳಾಗಿವೆ. ಅಂದರೆ ಕಲ್ಯಾಣ ಕ್ರಾಂತಿಯ ಬಳಿಕ ಬಹುತೇಕ ಜಂಗಮರು ಬಸವಾದಿ ಶರಣರನ್ನು ತಮ್ಮ ಕುಲದ ಗುರುಗಳನ್ನಾಗಿ ಸ್ವೀಕರಿಸಿ ಆರಾಧಿಸ ತೊಡಗಿದರು. ಅವರಲ್ಲಿ ಪ್ರಮುಖರೆಂದರೆ ಕಲ್ಬುರ್ಗಿ ಶರಣ ಬಸವೇಶ್ವರರು, ನಾಲತ್ವಾಡದ ವಿರೇಶ ಶರಣರು, ಅಥಣಿ ಶಿವಯೋಗಿಗಳು, ಧಾರವಾಡದ ಮೃತ್ಯಂಜಯ ಅಪ್ಪಗಳು, ಚಿತ್ತರಗಿ ವಿಜಯ ಮಹಾಂತೇಶ್ವರರು, ಕೊಲ್ಹಾಪುರದ ಕಾಡಸಿದ್ದೇಶ್ವರರು, ಗದಗ ತೋಂಟದಾರ್ಯರು, ಹುಬ್ಬಳ್ಳಿ ಮೂರುಸಾವಿರ ಮಠದ ಗುರು ಪರಂಪರೆ ಸೇರಿದಂತೆ ಬಹುತೇಕರು ಮೂಲತಃ ಜಂಗಮರಾಗಿದ್ದರೂ ಬಸವಾದಿ ಶರಣರ ತತ್ವವನ್ನು ಆರಾಧಿಸುವವರಾಗಿದ್ದಾರೆ.“ಬರಿಯ ಬೋಳುಗಳೆಲ್ಲಾ ಜಂಗಮವೆ?ಜಡಜೀವಿಗಳೆಲ್ಲಾ ಜಂಗಮವೆ?ವೇಷಧಾರಿಗಳೆಲ್ಲಾ ಜಂಗಮವೆ?ಇನ್ನಾವುದು ಜಂಗಮವೆದಡೆ;ನಿಸ್ಸೀಮನೆ ಜಂಗಮ,ನಿಜೈಕ್ಯನೆ ಜಂಗಮ,ಇAಥ ಜಂಗಮದ ಸುಳುಹ ಕಾಣದೆ,ಕೂಡಲ ಚನ್ನಸಂಗಮದೆವ ತಾನೆ ಜಂಗಮನಾದ”-ಅವಿರಳಜ್ಞಾನಿ, ಚನ್ನಬಸವಣ್ಣಜಂಗಮರು ಎಂಬವರು ಭಾರತೀಯ ಲಿಂಗಾಯತ ರ‍್ಮದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ತತ್ವ, ಜೀವನ ಶೈಲಿ, ಸಮಾಜ ಸೇವೆಯ ಮೂಲಕ ಅವರು ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಜಂಗಮ ಪರಂಪರೆ ಲಕ್ಷಾಂತರ ರ‍್ಷಗಳ ಹಿಂದೆಯೇ ಆರಂಭವಾಯಿತು ಎಂಬ ನಂಬಿಕೆ ಇದೆ. ಲಿಂಗಾಯತ ರ‍್ಮದ ಪ್ರಕಾರ ಬಸವಣ್ಣ, ಅಕ್ಕ ಮಹಾದೇವಿ, ಚನ್ನಬಸವಣ್ಣ, ಇವರು ಜಂಗಮ ಪರಂಪರೆಯ ಮಹತ್ವವನ್ನು ಗಟ್ಟಿಯಾಗಿ ಸಾರಿದರು. ೧೨ನೇ ಶತಮಾನದಲ್ಲಿ ಬಸವಣ್ಣನೇ ಜಂಗಮ ಪರಂಪರೆಯ ಸಾರಥಿಯಾಗಿದ್ದು, ಜಂಗಮರ ಹೆಗ್ಗುರುತು ನೀಡಿದರು. ಅವರು ಜಂಗಮರನ್ನು ಶಿವನ ಜೀವಂತ ರೂಪವೆಂದು ಪರಿಗಣಿಸಿದರು. ದರ‍್ಬಲರಿಗೆ ರ‍್ಮೋಪದೇಶ ನೀಡುವ ಕರ‍್ಯ ಮಾಡಿದರು. ಸಮಾನತೆಯ ಸಂದೇಶ ಸಾರಿದರು. ಹಲವಾರು ಜಂಗಮ ಮಠಗಳು ರ‍್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಉತ್ತರ ಭಾರತದ ಭಾಗಗಳಲ್ಲಿ ಸ್ಥಾಪಿತವಾದವು. ಈ ಮಠಗಳು ಶಿಕ್ಷಣ, ಧರ‍್ಮಿಕ ಆಚರಣೆ ಮತ್ತು ಸಮಾಜ ಸೇವೆಯ ಕೇಂದ್ರಗಳಾಗಿದ್ದವು. ವಚನಕಾರರು ತಮ್ಮ ವಚನಗಳಲ್ಲಿ ಜಂಗಮರ ಮಹಿಮೆ, ಪಾತ್ರ, ಸಿದ್ಧಾಂತಗಳನ್ನು ಪ್ರಶಂಸಿಸಿದ್ದಾರೆ. ಜಂಗಮರನ್ನು ರ‍್ಶನ ಮಾಡಿದವನು ಶಿವನನ್ನು ಕಂಡವನಂತೆ ಎಂದು ಹಲವಾರು ವಚನಗಳು ನುಡಿದಿವೆ. ಜಂಗಮರು ಜಾತಿ ಭೇದ, ಲಿಂಗ ಭೇದ, ಶ್ರೇಣಿಭೇದಗಳ ವಿರೋಧ ಮಾಡಿ ಸಮಾನತೆಯ ಸಂದೇಶ ಸಾರಿದರು. ಅವರು ಯಾವುದೇ ಭಿನ್ನತೆ ಇಲ್ಲದೆ ಎಲ್ಲರ ಮನೆಗಳಿಗೆ ಹೋಗಿ ಶಿವತತ್ವ ಸಾರಿದವರು.ಉತ್ತರ ಕರ‍್ನಾಟಕ ಮತ್ತು ಆಂಧ್ರದ ಕೆಲವು ಪ್ರದೇಶಗಳಲ್ಲಿ “ಬಸಳ ಜಂಗಮ”ಎಂಬ ಶಾಖೆ ಇದೆ. ಇವರು ಮಠ ಸೇವೆಗೆ ಮತ್ತು ಧರ‍್ಮಿಕ ಕರ‍್ಯಗಳಿಗೆ ಬದ್ಧರಾಗಿರುತ್ತಾರೆ. ಪಂಚಮಸಾಲಿ ಸಮುದಾಯದಲ್ಲಿ ಕೆಲವರೆಗೆ ಜಂಗಮ ಸೇವೆಯ ಪರಂಪರೆಯ ಹಿನ್ನಲೆ ಇದೆ. ಕೆಲ ಭಾಗಗಳಲ್ಲಿ “ಬಂಟನಾಡು ಜಂಗಮರು” ಎಂಬ ಪ್ರತ್ಯೇಕ ಗುರುಕುಲ ಪ್ರಚಾರದಲ್ಲಿದೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ “ವೀರಶೈವ ಜಂಗಮರು” ತಮ್ಮನ್ನು ಪ್ರತ್ಯೇಕ ಗುಂಪಾಗಿ ಗುರುತಿಸಿಕೊಂಡಿದ್ದಾರೆ. ಇವರು ಪೂಜಾ, ಪಾಠ, ಲಿಂಗ ಧಾರಣೆ, ಹಾಗೂ ಗ್ರಾಮೋಪದೇಶಕಾರರಾಗಿರುತ್ತಾರೆ. ಈ ವಂಶಗಳು ಜಂಗಮ ಗುರುಗಳಿಗೆ ಸೇವೆ ಮಾಡಿದವರು ಅಥವಾ ಅವರ ವಂಶಜರು ತಮ್ಮನ್ನು “ಜಂಗಮ” ಎಂದು ಗುರುತಿಸಿಕೊಂಡಿದ್ದಾರೆ: ಸೋಲಾಪುರ, ನಾಂದೇಡ್, ಲಾತೂರ್ ಮುಂತಾದ ಕಡೆಗಳಲ್ಲಿ ವೀರಶೈವ ಜಂಗಮ ಎಂಬ ಪ್ರತ್ಯೇಕ ಗುಂಪು ಕಂಡುಬರುತ್ತದೆ. ಈ ವಂಶಗಳು “ಜಂಗಮ” ಎಂಬ ಪದವನ್ನು ತಮ್ಮ ಗುರುತಾಗಿ ಬಳಸಿದರೂ, ಜಾತಿ ಅಥವಾ ವಂಶ ಬದಲಾಗಿಸಿಕೊಂಡಿದ್ದಾರೆ.ಜಂಗಮ ಹೆಸರಿನಿಂದ ಕಂದಾಚಾರ:ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ ಮತ್ತು ಇತರ ಶರಣರು ನಕಲಿ ಜಂಗಮರ ವಿರುದ್ಧ ತೀವ್ರ ಎಚ್ಚರಿಕೆ ನೀಡಿದ್ದಾರೆ. ಬಸವಣ್ಣ ಹೇಳುತ್ತಾರೆ, “ಜಂಗಮವೆಂಬ ಪೈಲಾಸಕ್ಕೆ ಹೊದಿದ ಬಡವನು, ಜಾತಿಯನು ಮರೆಯದೆ, ಪಾಡಿನಲ್ಲಿ ಉರುಳಿದನು,ಅವನನ್ನು ಭಕ್ತನೆಂಬುದು ದೋಷ.” ಈ ವಚನದ ತಾತ್ರ‍್ಯ: ಕೆಲವರು ಹೊರಗೆ ಜಂಗಮದ ವೇಷ ಧರಿಸಿ, ಒಳಗೆ ಅಹಂಕಾರ, ಕಾಮ, ಲೋಭ ಇತ್ಯಾದಿ ತೊಟ್ಟುಕೊಂಡಿರುವರು. ಅಂತಹವರು ಕಂದಾಚಾರ (ಅರ‍್ಮಾಚರಣೆ) ಮಾಡುತ್ತಿದ್ದರೆ, ಅವರಿಗೆ ‘ಜಂಗಮ’ ಪದ ಹಕ್ಕಾಗಿಲ್ಲ. ಕಂದಾಚಾರದಲ್ಲಿ ತೊಡಗಿರುವ ಜಂಗಮರು ಭಾವವಿಲ್ಲದ ಲಿಂಗಪೂಜೆ, ಹಣಕ್ಕೆ ರ‍್ಮ ಮಾರಾಟ, ಲೈಂಗಿಕ ದರ‍್ಬಳಕೆ, ದುರಾಚಾರ ಇವೆಲ್ಲ ಶರಣ ರ‍್ಮದಲ್ಲಿ ತೀವ್ರ ಅಪರಾಧ. ಶರಣ ತತ್ತ್ವದ ವಿರುದ್ಧ. ಶರಣ ಪರಂಪರೆ ಅವರಿಗೆ ಮಾನ್ಯತೆ ನೀಡುವುದಿಲ್ಲ. ಅಂತಹವರಿಂದ ದೂರವಿರಬೇಕು. “ಜಂಗಮ” ಎಂಬ ಹೆಸರಿನಲ್ಲಿ ಹಣ, ಶೋಷಣೆ ಮಾಡುತ್ತಿರುವ ಸ್ಥಿತಿಗಳು ಕಂಡುಬರುತ್ತಿವೆ. ಇದು ರ‍್ಮ ದ್ರೋಹವೇ ಸರಿ. ಜಂಗಮ ಎಂಬ ಪದವನ್ನು ದುರುಪಯೋಗಪಡಿಸಿಕೊಂಡು, ಕಂದಾಚಾರದ ಅಪರಾಧಗಳಲ್ಲಿ ತೊಡಗಿರುವವರು ಶರಣ ರ‍್ಮದ, ಬಸವ ತತ್ತ್ವದ, ಲಿಂಗಾಯತ ಪರಂಪರೆಯ ಶತ್ರುಗಳೇ ಆಗಿದ್ದಾರೆ. ಜಂಗಮ ಎಂದು ಹೇಳಿಕೊಂಡು ಪಾದಪೂಜೆ, ಪಲ್ಲಕ್ಕಿ ಉತ್ಸವ, ಹಣ ವಸೂಲಿಗಳು ಶರಣ ರ‍್ಮದ ತತ್ತ್ವಕ್ಕೆ ವಿರುದ್ಧ. ಜಂಗಮನು ಕಪಟ ವಿರಹಿತ, ಲೋಭ ರಹಿತ, ಭಕ್ತರ ಸೇವಕ. ಜಂಗಮ ಪದವನ್ನು ಹೇಳಿಕೊಂಡು ಗೌರವ ಕೇಳಿಕೊಳ್ಳುವುದು ಸರಿಯಲ್ಲ. ನಿಜವಾದ ಜಂಗಮನು ಸ್ವಂತ ಏಳಿಗೆಗೆ ಅಲ್ಲ, ಭಕ್ತರ ಮರ‍್ಗರ‍್ಶನಕ್ಕಾಗಿರಬೇಕು. ಜಂಗಮನು ಭಕ್ತನ ಮನೆಗೆ ಬಂದು ಇಷ್ಟಲಿಂಗಕ್ಕೆ ಅನುಭವ ಬೋಧಿಸಬೇಕು. ಭಕ್ತನು ಹಣ ನೀಡಿದರೆ ಅದನ್ನು ಸ್ವೀಕರಿಸದಿರಬೇಕು. ಇಂದು ಜಂಗಮ ಎಂಬ ಪವಿತ್ರ ಪದವನ್ನು ವ್ಯಾಪಾರದಂತೆ ಬಳಸುತ್ತಿದ್ದಾರೆ. ಪಾದಪೂಜೆಗೆ ಪಾವತಿಸಬೇಕು, ಪಲ್ಲಕ್ಕಿಗೆ ಹಣ ನೀಡಬೇಕು. ಬಸವ ತತ್ತ್ವ, ಶರಣ ಸಂಪ್ರದಾಯ ಮತ್ತು ವಚನ ಸಾಹಿತ್ಯದಲ್ಲಿ ಜಾತಿವಾದ, ಬಾಹ್ಯಾಚಾರ, ಮರ‍್ತಿ ಪೂಜೆ, ಪಾದಪೂಜೆ ಎಲ್ಲವನ್ನೂ ತಿರಸ್ಕರಿಸಲಾಗಿದೆ. — . -ಡಾ. ಸತೀಶ ಕೆ. ಇಟಗಿಪತ್ರಿಕೋದ್ಯಮ ಉಪನ್ಯಾಸಕಅಂಚೆ: ಕೋಳೂರು-೫೮೬೧೨೯ತಾ: ಮುದ್ದೇಬಿಹಾಳ, ಜಿ: ವಿಜಯಪುರ (ಕರ್ನಾಟಕ ರಾಜ್ಯ)ಮೊ: ೯೨೪೧೨೮೬೪೨೨Email: satshitagi10@gmail.com,

“ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”-ಡಾ. ಸತೀಶ ಕೆ. ಇಟಗಿ Read Post »

ಇತರೆ

“ಲಾಲ ಬಹದ್ದೂರ ಶಾಸ್ತ್ರಿ ಒಂದು ನೆನಪು”ವಿಜಯಲಕ್ಷ್ಮಿ ಹಂಗರಗಿ

ನೆನಪುಗಳ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಲಾಲ ಬಹದ್ದೂರ ಶಾಸ್ತ್ರಿ ಒಂದು ನೆನಪು” ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಕ್ಟೋಬರ್ 12 1904 ರಲ್ಲಿ ಜನಿಸಿದರು. ಇವರು ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವತಂತ್ರಕ್ಕಾಗಿ ಅವಿರತವಾಗಿ ಹೋರಾಡಿದರು.ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ ಮತ್ತು ಪ್ರಮಾಣಿಕತೆ ಅವರ ಜೀವನದುದ್ದಕ್ಕೂ ಎದ್ದು ಕಾಣಿಸುತ್ತದೆ. ರೈಲ್ವೆ ಸಚಿವರಾಗಿದ್ದಾಗ ಸಂಭವಿಸಿದ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದು, ಪ್ರಧಾನಿಯಾದ ನಂತರ ಕಡಿಮೆ ವೇತನಕ್ಕೆ ತೃಪ್ತಿ ಪಟ್ಟಿ ಕೊಂಡು ಕಠಿಣ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದ್ದು ಇವರ ಸರಳತೆಗೆ ಉದಾಹರಣೆಗಳು ಜಾತಿ ಪದ್ಧತಿಯನ್ನು ವಿರೋಧಿಸಿ ತಮ್ಮ ಹೆಸರಿನಲ್ಲಿದ್ದ ಜಾತಿ ಸೂಚಕವ ಪದವನ್ನು ತೆರೆದಿದ್ದು ಅವರ ಸರಳ ಮನೋಭಾವವನ್ನು ತೋರಿಸುತ್ತದೆ.ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆಯ ಉದಾಹರಣೆಗಳು . *ನೈತಿಕ ಹೊಣೆಗಾರಿಕೆ:* ರೈಲ್ವೆ ಸಚಿವರಾಗಿದ್ದಾಗ ಕಲ್ಲೇಕುಚಿ ರೈಲು ದುರಂತ ಸಂಭವಿಸಿ ಅನೇಕ ಜನರು ಸಾವನ್ನಪ್ಪಿದಾಗ ಅದಕ್ಕೆ ನೈತಿಕಹೊಣೆ ಬರಲು ಅವರ ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.  *ಆರ್ಥಿಕ ಸರಳತೆ* ಪ್ರಧಾನಿಯಾಗಿದ್ದರೂ ಅವರು ಕೇವಲ 400 ತಿಂಗಳಿಗೆ ವೇತನ ಪಡೆಯುತ್ತಿದ್ದರು ತಮ್ಮ ಕುಟುಂಬದ ನಿರ್ವಹನಿಗೆ ಇದು ಸಾಕು ಎಂದು ಅವರು ಹೇಳಿದ್ದರು. ಅವರ ದೊಡ್ಡ ಮನೆ ನಿರ್ಮಾಣ ಮಾಡದೆ ತಮ್ಮ ಹಳೆಯ ವಾಸಸ್ಥಾನದಲ್ಲಿ ಮುಂದುವರೆದರು. ಜಾತಿ ಪದ್ಧತಿ ವಿರೋಧ ಅವರ ಹೆಸರಿನ ಜೊತೆಗಿದ್ದ ಜಾತಿ ಸೂಚಕ ಪದವನ್ನು ಅವರು ತೊರೆದರು. ಇದರ ಬದಲಾಗಿ ಕಾಶಿ ವಿದ್ಯಾರ್ಥಿದಲ್ಲಿ ಪದವಿ ಪಡೆದ ನಂತರ ಸಿಕ್ಕ ಶಾಸ್ತ್ರ ಎಂಬ ಬಿರುದನ್ನು ಅವರು ಬಳಸಲು ಪ್ರಾರಂಭಿಸಿದರು. ಜನರೊಂದಿಗೆ ನಿಕಟ ಸಂಬಂಧ ಆಹಾರ ಕೊರತೆಯ ಸಂದರ್ಭದಲ್ಲಿ ಅವರು ಜನರಿಗೆ ವಾರಕ್ಕೆ ಒಂದು ದಿನ ಉಪವಾಸ ಮಾಡಲು ಕರೆ ನೀಡಿದರು. ಇದು ಅವರ ಸರಳ ಜೀವನ ಶೈಲಿ ಮತ್ತು ಬದ್ಧತೆಯನ್ನು ತೋರಿಸುತ್ತದೆ. “ಜೈ ಜವಾನ್ ಜೈ ಕಿಸಾನ್ ಘೋಷಣೆ “1965ರ ಭಾರತ್ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡಿದರು. ಇದು ದೇಶದ ಸೈನಿಕರು ಮತ್ತು ರೈತರ ಶ್ರಮವನ್ನು ಮತ್ತು ದೇಶದ ಏಕತೆಯನ್ನು ಸಾರಿತು.ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಕ್ಟೋಬರ್ 2 194 ರಂದು ಉತ್ತರ ಪ್ರದೇಶದ ಮುಗಲ್ ಸೈರಾಂನಲ್ಲಿ ಜನಿಸಿದರು ಅವರು ಭಾರತೀಯ ಹೋರಾಟದಲ್ಲಿ ಗಾಂಧೀಜಿಯವರ ಆದರ್ಶಗಳಿಂದ ಪ್ರಭಾವಿತರಾಗಲು 1921 ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ತಮ್ಮ ಅಧ್ಯಯನವನ್ನು ಸ್ಥಗಿತಗೊಳಿಸಿದರು. 1926ರಲ್ಲಿ ಕಾಶಿ ವಿದ್ಯಾಪೀಠದಿಂದ ಪದವಿ ಪಡೆದ ನಂತರ ಅವರಿಗೆ ಶಾಸ್ತ್ರಿ ಎಂಬ ಬಿರುದು ನೀಡಲಾಯಿತು. ಸ್ವತಂತ್ರ ಹೋರಾಟಗಾರರಾಗಿ ಅನೇಕ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದರು. ಸ್ವತಂತ್ರ ನಂತರ ಅವರು ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದರು. ಮತ್ತು ಅರಿಯಲೂರ್ ರೈಲ್ವೆ ಅಪಘಾತ ಜವಾಬ್ದಾರಿಯನ್ನು ತೆಗೆದುಕೊಂಡು ರೈಲ್ವೆ ಸಚಿವರಾಗಿ ರಾಜೀನಾಮೆ ನೀಡಿದರು 1964 ರಲ್ಲಿ ಭಾರತದ ಎರಡನೇ ಪ್ರಧಾನಮಂತ್ರಿಯಾದರು. *ಜೀವನದ ಪ್ರಮುಖ* *ಘಟ್ಟಗಳು* ಆರಂಭಿಕ ಜೀವನ ಅಕ್ಟೋಬರ್ 2 194 ರಂದು ಉತ್ತರ ಪ್ರದೇಶದ ಮುಘಲ್ ರಾಯನಲ್ಲಿ ಜನಿಸಿದರು. ಅವರ ತಂದೆ ಶಾರದಾ ಪ್ರಸಾದ್ ಶ್ರೀವಾಸ್ತವ್ ಮತ್ತು ತಾಯಿ ರಾಮ ಧೂಲಾರಿ ದೇವಿ ಆರು ತಿಂಗಳು ಮಗುವಾಗಿದ್ದಾಗ ತಂದೆ ನಿಧನರಾದರು. ಸ್ವತಂತ್ರ ಚಳುವಳಿ 1921 ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡರು ಅವರು 1926 ರಲ್ಲಿ ಕಾಶಿ ವಿದ್ಯಾಪೀಠದಿಂದ ಶಾಸ್ತ್ರಿ ಪದವಿಯನ್ನು ಪಡೆದರು. ಸ್ವತಂತ್ರ ಹೋರಾಟದಲ್ಲಿ ಹಲವಾರು ಬಾರಿ ಜೈಲು ಶಿಕ್ಷೆ ಅನುಭವಿಸಿದರು. 1930ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಎರಡುವರೆ ವರ್ಷ ಜೈಲು ಸೇರಿದರು. ರಾಜಕೀಯ ವೃತ್ತಿ 1937ರಲ್ಲಿ ಉತ್ತರ ಪ್ರದೇಶದ ಸಂಸದೀಯ ಮಂಡಳಿಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸ್ವತಂತ್ರದ ನಂತರ ಅವರು ಉತ್ತರ ಪ್ರದೇಶದ ಪೊಲೀಸ್ ಸಚಿವರಾಗಿ ನೇಮಕಗೊಂಡರು. ಮತ್ತು ಗಲಭೆ ಕೋರರನ್ನು ಚದುರಿಸಲು ಲಾಠಿಗಳ ಬದಲಿಗೆ ನೀರಿನ ಫಿರಂಗಿಗಳನ್ನು ಬಳಸಲು ಸೂಚಿಸಿದರು. 1956 ರಲ್ಲಿ ಅರಿಯಲೂರ್ ರೈಲು ಗಾತ್ರದ ಜವಾಬ್ದಾರಿಯನ್ನು ಹೊತ್ತು ರೈಲ್ವೆ ಸಚಿವರಾಗಿ ರಾಜೀನಾಮೆ ನೀಡಿದರು. ಪ್ರಧಾನ ಮಂತ್ರಿ 1964ರಲ್ಲಿ ಭಾರತದ ಎರಡನೇ ಪ್ರಧಾನಮಂತ್ರಿಯಾಗಲು ಅವರು ತಮ್ಮ ಸರಳತೆ ನೈತಿಕತೆ ಮತ್ತು ಆಂತರಿಕ ಶಕ್ತಿಗಾಗಿ ಹೆಸರುವಾಸಿಯಾಗಿದ್ದರು. “ಜೈ ಜವಾನ್ ಜೈ ಕಿಸಾನ್” ಎಂಬ ಅವರ ಘೋಷಣೆ ಕೃಷಿಕರನ್ನು ಮತ್ತು ಸೈನಿಕರನ್ನು ಬೆಂಬಲಿಸುತ್ತದೆ. ನಿಧನ 1966 ರಲ್ಲಿ ತಾಸ್ಕೆಂಟ್ ನಲ್ಲಿ ನಿಧನರಾದರು ಅವರ ಅಕಾಲಿಕ ಮರಣ ದೇಶಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿತು. ವಿಜಯಲಕ್ಷ್ಮಿ ಹಂಗರಗಿ

“ಲಾಲ ಬಹದ್ದೂರ ಶಾಸ್ತ್ರಿ ಒಂದು ನೆನಪು”ವಿಜಯಲಕ್ಷ್ಮಿ ಹಂಗರಗಿ Read Post »

ಇತರೆ, ಜೀವನ

“ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ

ಸಂಬಂಧಗಳ ಸಂಗಾತಿ ಸುಮನಾ ರಮಾನಂದ “ನೆಂಟಸ್ತನದ ಸಂಬಂಧಗಳ ನಡೆ” ಇದ್ಯಾವ ಸಂಬಂಧಗಳ ಉಳಿಸುವಿಕೆ ಬಗ್ಗೆ ನಾ ಹೇಳಲು ಹೊರಟಿದ್ದೀನಿ ಇಂದಿನ ಅಂಕಣದಲಿ ಅಂತ ಆಶ್ಚರ್ಯಪಡದಿರಿ.ನಮ್ಮನು ಹೊಗಳಿದಂತೆ ಮಾಡಿ ನಮಗೇ ಗೊತ್ತಾಗದಂತೆ ತೆಗಳುವ,ತೆಗಳಿದರೂ ಅದನೇ ಸರಿಯೆಂದು ಸಮರ್ಥಿಸಿಕೊಳ್ಳುವ ಅದೇ ನಮ್ಮ ಹತ್ತಿರದ ನೆಂಟರ ಬಗ್ಗೆ ಕಣ್ರಿ… ಈಗಿನ ನಮ್ಮ ಕಾಲಮಾನದಲಿ ನಮ್ಮೆಲ್ಲರ ನೆಂಟರ ಜೊತೆಗಿನ ಸಂಬಂಧ ನಿಧಾನವಾಗಿ ಕಳೆಗುಂದುತಾ ಇರೋದು ನಿಮ್ಮೆಲ್ಲರ ಗಮನಕೂ ಬಂದಿರಬಹುದು.ಇದರ ಕಾರಣ  ಏನಿರಬಹುದು ಅಂತ ಒಮ್ಮೆ ವಿಚಾರ ಮಾಡಿದರೆ ತಿಳಿಯುತ್ತದೆ.ಮೊದಲನೆಯ ಕಾರಣ ಪ್ರತಿಯೊಬ್ಬರಿಗೂ ನೆಂಟರ ಜೊತೆ ಕಳೆಯಲು ಸಮಯ ಹೊಂದಾಣಿಕೆಯಾಗದಿರುವುದು.ಯಾರಾದ್ರೂ ನೆಂಟರು ಮನೆಗೆ ಬರ್ತಾರೆಂದರೆ ನಾವು ಮೊದಲು ಯೋಚಿಸುವುದೇ ಅವರಿಗೆ ನಾವು ಸಾಕಷ್ಟು ಸಮಯ ಕೊಡಲಾಗುವುದೇ ಆತಿಥ್ಯ ಮಾಡಲು ಹಾಗೂ ಅವರ ವಸತಿಗೆಲ್ಲ ಸರಿಯಾಗಿ ವ್ಯವಸ್ಥೆ ಮಾಡಲಾದೀತೇ ಎಂದು.ಎಲ್ಲರೂ ಹೀಗಿರುತ್ತಾರೆಂದು ಹೇಳಲಾಗದು.ನೆಂಟರೆಂದರೆ ಇಷ್ಟಪಡುವ ಮಂದಿಯೂ ಸಹ ಹೆಚ್ಚಾಗಿ ಇರುತ್ತಾರೆ. ಇನ್ನೊಂದು ಕಾರಣವೆಂದರೆ ಕೆಲವರಿಗೆ ನಂಟರು ಬರುತ್ತಾರೆಂದರೆ ಇರಿಸುಮುರಿಸು ಉಂಟಾಗುವುದು ಏಕಂದರೆ ಕೆಲವು ನೆಂಟರಿಗೆ ಅಲ್ಲಿಂದಿಲ್ಲಿಗೆ ಚಾಡಿಮಾತು ಹೇಳಿ ಜಗಳ ತಂದು ಹಾಕುವ ಸ್ವಭಾವಿರುತ್ತದೆ,ಆ ಸ್ವಭಾವದವರನ್ನು ದೂರವಿರಿಸುವ ಅಭ್ಯಾಸ ಆತಿಥ್ಯ ನೀಡುವವರಿಗೆ ಇರುತ್ತದೆ ಹಾಗಾಗಿ ಅಂತಹ ನೆಂಟರು ತಮ್ಮ ಮನೆಗೆ ಬರದಂತೆ ಕಾರಣ ಹುಡುಕುತ್ತಾರೆ.ಒಂದುವೇಳೆ ಬಂದರೂ ಮರ್ಯಾದೆಯಿಂದಲೇ ಚೆನ್ನಾಗಿ ಆತಿಥ್ಯ ಮಾಡಿ ಕಳಿಸುತ್ತಾರೆ.  ಇನ್ನು ಹಲವರಿಗೆ ತಮ್ಮ ಆಫೀಸ್ ಹಾಗೂ ಮನೆಯ ಕೆಲಸಗಳ ಮಧ್ಯೆಯೂ ಅವರೆಲ್ಲರ  ಇಷ್ಟಾನುಸಾರವಾಗಿ ನೆಂಟರ ಬೇಕು ಬೇಡಗಳನು ಪೂರೈಸಲಾದೀತೇ ಅನ್ನುವ ಆತಂಕ ಮನಸಲಿ‌ ಕಾಡುತ್ತದೆ.ಪಾಪ ಚೆನ್ನಾಗಿ ಆತಿಥ್ಯ ಮಾಡಿ ಕಳಿಸಿದರೂ ಸಹ ಅದೇ ನೆಂಟರು ಹೊರಗೆ ಬಂದಾಗ ತಮ್ಮ ಬಗ್ಗೆ ಹಾಗೂ ತಮ್ಮ ಆತಿಥ್ಯದ ಬಗ್ಗೆಯೇ ಕೊಂಕು ಅಥವಾ ವ್ಯಂಗ್ಯದ ಮಾರಾಡುತ್ತಾರೆನ್ನುವ ಆತಂಕದಲಿ ದಿನ ದೂಡುತ್ತಾರೆ…ಹಾಗಾಗಿ ನೆಂಟರ ಬರುವಿಕೆ ಇಂದಿನ ದಿನಗಳಲಿ ಬಲು ಅಪರೂಪವಾಗಿದೆ ಅಂತಲೇ ಹೇಳಬಹುದು.ಅವರವರ ದೃಷ್ಟಿಕೋನದಲ್ಲಿ ನೋಡಿದಾಗ  ಇದರಲಿ ಯಾರದೂ ತಪ್ಪಿಲ್ಲವೆಂತಲೂ ಅನಿಸುವುದು.ಆದರೂ ಮನೆಗೆ ನೆಂಟರ ಆಗಮನ ಚೈತನ್ಯದಾಯಕವೂ ಹೌದು ಜೊತೆಗೆ ಹಲವು ವಿಚಾರಗಳ ವಿನಿಮಯವಾಗುವಿಕೆ ಮನಸಿನ ಏಕಾತಾನತೆಗೆ ಒಳ್ಳೆಯ ಮದ್ದು ಆಗುವುದಂತೂ ಸತ್ಯ. ನೆಂಟಸ್ತನವನು ಉಳಿಸುವ ನಡೆಯನು ವಿವರಿಸುತಾ ಹೀಗೂ ಯೋಚಿಸಬಹುದು..ನೆಂಟರು ಒಂದು ಮದುವೆಯ ಸಮಾರಂಭದಲ್ಲೊ ಅಥವಾ ಒಂದು ಹೋಮ- ಹವನದ ಕಾರ್ಯಕ್ರಮದಲ್ಲೋ  ಸೇರಿದಾಗ ಎಲ್ಲರಿಗೂ ತಮ್ಮ ಕುಟುಂಬದ ಈ ಐಕ್ಯತೆಯನು ಕಂಡು ಸಂತಸವಾಗುತ್ತದೆ.ಕುಟುಂಬದ ಹೊಸ ಸದಸ್ಯರನು ಹಳೆಯ ತಲೆಮಾರಿನವರು ತಮ್ಮ‌ ಕಾಲವಿನ್ನು ಮುಗಿಯಿತಪ್ಪಾ ಎನ್ನುತಾ ತುಂಬು ಮನಸಿಂದ ಅವರೆಲ್ಲರ ಪರಿಚಯ ಮಾಡಿಕೊಡುವುದನು ಕಂಡು ಒಮ್ಮೆಗೇ ಮನಸು ಭಾವುಕವಾಗುತ್ತದೆ. ಮುಂದೊಂದಿನದ  ಸಮಾರಂಭದಲಿ ಈ ಹಿರಿಯ ತಲೆಮಾರಿನವರು ಕಣ್ಮರೆಯಾಗದಿದ್ರೆ ಸಾಕು ಅಂತಲೂ ಮನಸು ಹಾರೈಸುತ್ತದೆ. ಜೊತೆಗೆ ನೆಂಟಸ್ತನ ಕುಂಠಿತವಾಗುವಿಕೆಯ ಮತ್ತೊಂದು ಮುಖ್ಯ ಕಾರಣವೆಂದರೆ..ಮೊಬೈಲ್ ಚಟ ಹಾಗೂ ಸಾಮಾಜಿಕ ತಾಣವೆನ್ನಬಹುದು. ಇತ್ತೀಚೆಗಿನ ಮೊಬೈಲಿನ YouTube Shorts ವೀಕ್ಷಣೆಯ ಮಟ್ಟ ಯಾವ ಯಾವ ರೀತಿಯಲಿ ಏರಿದೆಯೆಂದರೆ ಇಂದಿನ ಯುವಜನತೆ,ಹದಿಹರೆಯದ ಮಕ್ಕಳು,ಮಧ್ಯೆ ವಯಸ್ಸಿನ ಹೆಂಗಸರು, ಅರ್ಧ ಶತಕದ ಅಂಚಲಿರುವ ಗಂಡಸರೆನ್ನುವಭೇಧಭಾವವಿಲ್ಲದೆ ಈ ಚಟ ಆವರಿಸಿಕೊಂಡು ಬಿಟ್ಟಿದೆ. ಇದಕ್ಕೆ ದಾಸರಾಗಿರೊದರಿಂದ  ಮನೆಗೆ ಯಾರು ಬಂದರೂ ಅಥವಾ ಯಾವ ಫಂಕ್ಷನ್ ಗೆ ಹೋಗಬೇಕೆಂದರೂ ಇದಕೆ ಅಡ್ಡಿಯಾದೀತೆಂಬ ನೆಪವೊಡ್ಡಿ ಹೋಗದೇ ಇದ್ದುಬಿಡುತ್ತಾರೆ.ಇಂತಹ ಚಟದಿಂದ ಹೊರ ಬಂದರೆ ಮಾತ್ರ ಸಂಬಂಧಗಳ ಉಳಿಯುವಿಕೆ ಸಾಧ್ಯವಾಗುತ್ತದೆ.ಇಲ್ಲದಿದ್ರೆ ತಾವಾಯ್ತು ತಮ್ಮ ಪಾಡಾಯ್ತು ಅನ್ನುವ ಸ್ಥಿತಿಗೆ ಈ Gen Z ಹೋಗುವುದರಲಿ ಹೆಚ್ಚು ಕಾಲ ಉಳಿದಿಲ್ಲ ಅನ್ನಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಸಮಾಜದಲಿ ಒಳ್ಳೆಯ ಮನಸ್ಸಿರುವ ಎಲ್ಲರ ಜೊತೆಗೆ ಅದರಲೂ ತಮ್ಮ ಕುಟುಂಬದ ತೀರ ಹತ್ತಿರದ ನೆಂಟರಿಷ್ಟರ ಜೊತೆಯಲಿ ಬೆರೆತಾಗ ಮಾತ್ರ ಸಾಮರಸ್ಯದಿಂದ ಬಾಳು ಸಾಗುತಾ ನಮ್ಮೆಲ್ಲರ ಬಾಳ್ವೆ ಸುಂದರವೆನಿಸುತ್ತದೆ.ಇಲ್ಲವಾದರೆ ಏಕಾತಾನತೆಯ ಏಕಾಂತ ಕಾಡಿ,ಬೇರೆ ಯಾರ ಬಗ್ಗೆಯೂ ಯೋಚಿಸದಂತಹ ಸ್ವಾರ್ಥದತ್ತ ಮನಸು ಸಾಗುತ್ತದೆ. ನಮ್ಮ ಬದುಕು ಇವೆರಡು ದೃಷ್ಟಿಕೋನದಲಿ ನೋಡಿದಾಗ ಅದು  ಹೇಗಿರಬೇಕು ಅನ್ನುವ ಆಯ್ಕೆ ನಮ್ಮದೇ! ಸುಮನಾ ರಮಾನಂದ, ಕೊಯ್ಮತ್ತೂರು 

“ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ Read Post »

You cannot copy content of this page

Scroll to Top