ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸಂಗಾತಿ ಬರಹಗಾರರಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ-2021

ಸಂಗಾತಿಯ ಇಬ್ಬರು ಬರಹಗಾರರಿಗೆ 2021 ನೇ ಸಾಲಿನ ರಾಜ್ಯಮಟ್ಟದ ಕಾವ್ಯ ಮಾಣಿಕ್ಯ ಪ್ರಶಸ್ತಿ ದೊರಕಿದ್ದು ಪತ್ರಿಕೆ ಅವರಿಗೆಅಭಿನಂದನೆ ಸಲ್ಲಿಸುತ್ತದೆ

ಸಂಗಾತಿ ಬರಹಗಾರರಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ-2021 Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಭಾಗ-2 ಬಾಲ್ಯ ಮಧ್ಯಾಹ್ನದ ಬಿಸಿಲಿನಲ್ಲೊಮ್ಮೆ ಅತೀವ ಬಾಯಾರಿಕೆಯಾಗಿ ಸಾರ್ವಜನಿಕ ನಲ್ಲಿ ತಿರುಗಿಸಿ ನೀರು ಕುಡಿದಾಗ ಸವರ್ಣೀಯರಿಂದ ಮೈಲಿಗೆ ಮಾಡಿದನೆಂದು ಬೈಗುಳ ತಿಂದು ಹೊಡೆಯಿಸಿ ಕೊಂಡಿದ್ದು, ತನ್ನ ರೇಷ್ಮೆಯಂತ ತೆಲೆಗೂದಲನ್ನು ಕತ್ತರಿಸಲು ಕ್ಷೌರಿಕನು ನಿರಾಕರಿಸಿದಾಗ ಭೀಮನ ಮನಸ್ಸು ಜರ್ಜಿತವಾಗಿ ಚಿಂತಿತವಾಗುತಿತ್ತು. ಹಿರಿಯ ಅಕ್ಕನೆ ಭೀಮನ ತೆಲೆಗೂದಲನ್ನು ಕತ್ತರಿಸುತ್ತಿದ್ದಳು ಅದೇ ಹಿಂದು ದೇವರಗಳನ್ನು ಪೂಜಿಸಿದರು, ಅದೇ ಹಿಂದು ಹಬ್ಬ ಹರಿದಿನಗಳನ್ನು ಆಚರಿಸಿದರೂ, ಅದೇ ಹಿಂದು ಹೆಸರುಗಳನ್ನಿಟ್ಟುಕೊಂಡರೂ ಸವರ್ಣೀಯರು, ಹೀಗೇಕೆ ನಮ್ಮನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ, ಮುಟ್ಟಿದೆಲ್ಲ, ಮೈಲಿಗೆ ಆಯಿತೆಂದು ನಮ್ಮನ್ನೇಕೆ ದೂಷಿಸುತ್ತಾರೆ, ಮಂದಿರ ಪ್ರವೆಶಿಸದಂತೆ  ನಮ್ಮನ್ನೇಕೆ ತಡೆಯುತ್ತಾರೆ, ಹೀಗೆ ಭೀಮ ಪ್ರಶ್ನಿಸುತ್ತಿದ್ದ. ತಂದೆ ಮತ್ತು ಅಕ್ಕ ಭೀಮನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಗೋ ಸಮಾಧಾನ ಪಡಿಸುತ್ತಿದ್ದರು.  ಒಂದು ದಿನ ಮಳೆ ಸುರಿಯುತಿತ್ತು, ಮೇಲ್ಜಾತಿಯ ವಿಧ್ಯಾರ್ಥಿಯೊಬ್ಬ ಭೀಮನಿಗೆ ಶಾಲೆಗೆ ಹೊಗುವಂತೆ ಸವಾಲು ಹಾಕಿದನು. ಭೀಮ ಛತ್ರಿ ಇಲ್ಲದೆ ಮಳೆಯಲ್ಲಿಯೇ ನಡೆದು ಶಾಲೆಗೆ ಬಂದ. ಸುರಿಯುತ್ತಿರುವ ಮಳೆಯಲ್ಲಿ ಬಂದಿದ್ದರಿಂದ ಬಟ್ಟೆ ಒದ್ದೆಯಾಗಿತ್ತು. ಪೇಂಡ್ಸೆ ಎಂಬಾತ ಗುರುಗಳು ತೊಯ್ದ ಬಟ್ಟೆಯಿಂದ ಮೈಯಲ್ಲ ತಂಪಾಗಿ ನಡುಗುತ್ತಿದ್ದ ಭೀಮನನ್ನು ನೋಡಿ, ಕೂಡಲೆ ತನ್ನ ಮಗನೊಂದಿಗೆ ಹತ್ತಿರದಲ್ಲಿ ತನ್ನ ಮನೆಗೆ ಕಳುಹಿಸಿ ಉಡಲು ಬೆಚ್ಚನೆ ಬಟ್ಟೆ ಕೊಟ್ಟು ಅರ್ಧಗಂಟೆ ವಿಶ್ರಾಂತಿ ಪಡೆದು ಬರುವಂತೆ ತಿಳಿಸಿದರು. ಪೇಂಡ್ಸೆ ಗುರುಗಳ ಈ ಪ್ರೀತಿ ಹರುಷ ತಂದಿತು. ಅದೆ ಶಾಲೆಯಲ್ಲಿ ಅಂಬೇಡ್ಕರ್ ಹೆಸರಿನ ಇನ್ನೊಬ್ಬ ಶಿಕ್ಷಕ ಇದ್ದರು. ಅವರು ಭೀಮನನ್ನು ತುಂಬಾ ಅಕ್ಕರೆಯಿಂದ ಕಾಣುತ್ತಿದ್ದರು. ತಾವು ತಂದ ಊಟದಲ್ಲಿ ಭೀಮನಿಗೆ ಹಂಚಿಕೊಡುತ್ತಿದ್ದರು. ಅಭಿಮಾನದಿಂದ ಆ ಶಿಕ್ಷಕರು ತಮ್ಮ ಹೆಸರನ್ನೆ ಭೀಮನ ಅಡ್ಡ ಹೆಸರು ಅಂಬಾವಾಡೇಕರ್ ಇದ್ದದ್ದನ್ನು ಬದಲಾಯಿಸಿ ಅಂಬೇಡ್ಕರ ಅಂತಾ ಶಾಲಾ ದಾಖಲೆಗಳಲ್ಲಿ ಬರೆಸಿದರು. ಇದೇ ಹೆಸರು ಮುಂದೆ ಖಾಯಂ ಆಗಿ ಉಳಿಯಿತ್ತು. ಭೀಮಜಿ ಬೆಳೆಯುತ್ತ ಕಠಿಣ ಪರಿಶ್ರಮ ಪಟ್ಟು  ಓದಿ ಸಾಧನೆ ಮಾಡಿ ಮಹಾ ನಾಯಕನಾದನು. ಅಂಬೇಡ್ಕರ ಹೆಸರು ಜಗತ್ಪ್ರಸಿದ್ದವಾಯಿತು.ಶಿಷ್ಯನ ಸಾಧನೆಯಿಂದ ಗುರುವಿನ ಹೆಸರು  ಶಿಷ್ಯನೊಂದಿಗೆ ಅಮರವಾಯಿತು. ಅಂಬೇಡ್ಕರ ಶಿಕ್ಷಕರು ತರಗತಿಯಲ್ಲಿ ಭೀಮನಿಗೆ ಓದಲು ಬರೆಯಲು ಪ್ರೋತ್ಸಾಹಿಸುತ್ತಿದ್ದರು. ಶಾಲೆಯಲ್ಲಿ ಸವರ್ಣೀಯ ವಿದ್ಯಾರ್ಥಿಗಳು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಶೀಲವಂತಿಕೆ ಮಾಡುತ್ತಿದ್ದರು. ತಾನು ಮತ್ತು ಅಣ್ಣನು ಮನೆಯಿಂದ  ಬರುವಾಗ ಗೋಣೀಚೀಲ ತಂದು ಮೂಲೆಯಲ್ಲಿ ಹಾಸಿಕೊಂಡು ಕೂಡ್ರುತ್ತಿದ್ದರು. ಶಿಕ್ಷಕರು ಅಕ್ಕರೆಯಿಂದ ಕಾಣುತ್ತಿದ್ದರೂ ಅವರ ಪಾಠಿ ಪುಸ್ತಕ ಮುಟ್ಟಿ  ಬರೆದು ಕೊಡುತ್ತಿರಲಿಲ್ಲ. ದೂರದಿಂದಲೆ ಪಾಠ ಹೇಳಿಕೊಡುತ್ತಿದ್ದರು. ಇನ್ನು ಅವರಿಗೆ ನೀರಡಿಕೆಯಾದರಂತೂ ಹೇಳಲಾರದ ನೋವು, ಅನುಭವಿಸಬೇಕು, ನೀರಿನ ಹೂಜಿ ಮುಟ್ಟಿ ನೀರು ಕುಡಿಯುವಂತಿಲ್ಲ. ಬಾಯಾರಿಕೆಯಾಗಿ ನೀರು ಬೇಕಾದಾಗ ಸಿಪಾಯಿ ಬಂದು ತಂಬಿಗೆಯಿಂದ ಒಂದಡಿ ಮೇಲಿಂದ ನೀರು ಸುರಿಯಬೇಕು, ಆಗ  ಇವರು ಬಾಗಿ ಬೊಗಸೆಯೊಡ್ಡಿ ನೀರು ಹಾಕಿಸಿಕೊಂಡು ಕುಡಿಯಬೇಕು. ಶಾಲೆಗೆ ಸಿಪಾಯಿ ಬರಲಿಲ್ಲ ಅಂದ್ರೆ ಅಂದು ನೀರು ಇಲ್ಲ. ದಿನವಿಡಿ ನೀರು ಕುಡಿಯದೆ ಕಳೆಯಬೇಕು. ಈ ಅಪಮಾನಗಳು ಮುಗ್ದ ಬಾಲಕನ ಮನಸ್ಸಿನ ಮೇಲೆ ಬೆಟ್ಟದಂತೆ ಬೆಳೆದು ನಿಂತವು.              ಅಮಾನವೀಯ ಘಟನೆಗಳಿಂದಾಗಿ ಭೀಮನ ಓದುವ ಆಸಕ್ತಿ ಕಡಿಮೆ ಆಗತೊಡಗಿತ್ತು. ಶಾಲೆ ತಪ್ಪಿಸಿ ಮೇಕೆ ಕಾಯಲು ಹೋಗಿದ್ದುಂಟು, ಸಾತಾರ ರೈಲು ನಿಲ್ದಾಣದಲ್ಲಿ ಒಮ್ಮೆ ಕೂಲಿ ಕೆಲಸ ಮಾಡಿದ. ಅತ್ತೆ ಮೀರಾಬಾಯಿಗೆ ಇದು ಗೊತ್ತಾಗಿ ಓದಲು ಬುದ್ದಿ ಹೇಳಿದಳು. ಅತ್ತೆ ಮನಸ್ಸು ನೋಯಿಸಬಾರದೆಂದು ತೀರ್ಮಾನಿಸಿ ಮತ್ತೆ ಓದಿನ ಕಡೆ ಭೀಮನು ಗಮನ ಹರಿಸಿದ. ಇಂತಹದರಲ್ಲಿ ತಂದೆ ಮರುಮದುವೆ ಮಾಡಿಕೊಂಡಿದ್ದು ಅಘಾತವೆನಿಸಿತು. ಮಲತಾಯಿ ತನ್ನ ತಾಯಿಯ ಆಭರಣಗಳನ್ನು, ಉಡುಪುಗಳನ್ನು ಧರಿಸುವುದು ಭೀಮನಿಗೆ ಇಷ್ಟವಾಗುತ್ತಿರಲಿಲ್ಲ. ರಾಮಜಿ ಸಕ್ಪಾಲ ಕುಟುಂಬ ನಡೆಸಲು  ಕಷ್ಟ ಪಡುತ್ತಿದ್ದರು. ತಮ್ಮನ್ನು ಸಾಕಿಸಲುಹಿ, ಓದಿಸಲು ಕಷ್ಟ ಪಡುವ ತಂದೆಗೆ ಆಸರೆಯಾಗಲು ಸ್ವಂತ ಕೆಲಸ ಮಾಡಲು ನಿರ್ಧರಿಸಿ ಮುಂಬಯಿ ಬಟ್ಟೆ ಕಾರ್ಖಾನೆಗಳಲ್ಲಿ ಕೆಲಸ ಸಿಗುವುದೆಂದು ತಿಳಿದು ಮುಂಬಯಿಗೆ ಹೊಗಲು ಯೋಚಿಸಿದ. ಆದರೆ ಮುಂಬಯಿಗೆ ಪ್ರಯಾಣ ಮಾಡಲು ಹಣ ಇರಲಿಲ್ಲ. ಅತ್ತೆ ಸೊಂಟಕ್ಕೆ  ಸಿಕ್ಕಿಸಿಕೊಳ್ಳುತ್ತಿದ್ದ ಚಿಕ್ಕ ಚೀಲದಲ್ಲಿ ದುಡ್ಡು ಇದ್ದಿರಬಹುದೆಂದು ಬಾವಿಸಿ ಅದನ್ನು ಕದಿಯಲು ಮೂರುನಾಲ್ಕು ಬಾರಿ ಪ್ರಯತ್ನಿಸಿ ವಿಫಲವಾಗಿದ್ದನು, ಒಂದು ದಿನ ರಾತ್ರಿ ಅತ್ತೆ ಮಲಗಿದ್ದಾಗ ಚೀಲ ಕದ್ದುದುಡ್ಡು ಹುಡುಕಿದಾಗ ಅದರಲ್ಲಿ ಮುಂಬಯಿಗೆ ಪ್ರಯಾಣ ಮಾಡುವಷ್ಟು ಹಣ ಅದರಲ್ಲಿರಲಿಲ್ಲ. ಇದರಿಂದ ನಿರಾಶೆಯಾಯಿತು. ಮನಸ್ಸಿನ ಮೇಲೆ ಈ ಘಟನೆ ಪರಿಣಾಮ ಬೀರಿತು, ಮುಂದೆ ಎಂದು ಕದಿಯುವಂತೆ ಕೆಲಸ ಮಾಡಲಿಲ್ಲ, ಚನ್ನಾಗಿ ಓದಲು ನಿರ್ಧರಿಸಿದ. ನ್ಯಾಯಮೂರ್ತಿ ಮಹಾದೇವ ಗೋವಿಂದ ರಾನಡೆ ಅವರ ನಿದನದಿಂದ ಶಾಲೆಗೆ ರಜೆ ಕೊಡಲಾಗಿತ್ತು. ಭೀಮನು ಶಾಲೆಗೆ ಏಕೆ ರಜೆ ಕೊಟ್ಟರೆಂದು ತಂದೆಯನ್ನು ವಿಚಾರಿಸಿದ, ರಾನಡೆಯವರು ಮಹಾನ ಸಮಾಜ ಸುಧಾಕರಾಗಿದ್ದರು, ಅವರು ಮಾಡಿದ ಸಮಾಜ ಸುಧಾರಣೆ ಕಾರ್ಯಗಳ ಗೌರವಾರ್ಥವಾಗಿ ರಜೆ ಕೊಟ್ಟಿರುವುದಾಗಿ ರಾಮಜಿ ವಿವರಿಸಿದರು. ಅವರಂತೆ ತಾನು ಸುಧಾರಕನಾಗಿ ಸಾಧನೆ ಮಾಡಬೇಕೆಂದು ಭೀಮನ ಮನದಲ್ಲಿ ಛಲ ಮೂಡಿತು. ಸೋದರತ್ತೆ ದುಡ್ಡಿನ ಚೀಲ ಕದಿಯಲು ಮಾಡಿದ ಕಳ್ಳತನ ಕೃತ್ಯ ಇನ್ನೆಂದಿಗೂ ಮಾಡದಂತೆ ಮನಸ್ಸು ಪರಿವರ್ತನೆಯಾಯಿತು. ರಾನಡೆ ಅವರಂತೆ ಸಮಾಜ ಸುಧಾರಕನಾಗಲು ನಿರ್ಧರಿಸಿದ. ಈ ಎರಡು ಘಟನೆಗಳು ಭೀಮನ ಜೀವನದಲ್ಲಿ ತಿರುವು ತಂದು ಕೊಟ್ಟವು ಓದು ಗುರಿಯಾಯಿತು. ಅವಮಾನಗಳನ್ನು ಸೇಡಿನಿಂದ ನೋಡದೆ ಸವಾಲಾಗಿ ಸ್ವೀಕರಿಸಿದ. 1904 ರಲ್ಲಿ ರಾಮಜಿ ಸಕ್ಪಾಲರು  ಸಂಸಾರ ಸಮೇತ ಸಾತಾರದಿಂದ ಮುಂಬಯಿಗೆ ಬಂದು ಲೋವರ ಪರೇಳಿನ ಡಾಬಕ ಚಾಳದಲ್ಲಿನ ಚಿಕ್ಕ ಮನೆಯೊಂದನ್ನು ಬಾಡಿಗೆ ಹಿಡಿದು ಅಲ್ಲಿಯೇ ನೆಲೆಸಿದರು. ಹೆಣ್ಣುಮಕ್ಕಳ ಮದುವೆ ಮಾಡಿದರು. ಗಂಡು ಮಕ್ಕಳನ್ನು ಎಲ್ಪಿನ್ ಸ್ಟನ್ ಶಾಲೆಗೆ ಸೇರಿಸಿದರು. ಎಲ್ಪಿನ್ ಸ್ಟನ್ ಶಾಲೆ ಅಂದು ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತಲ್ಲದೆ, ಪ್ರತಿಷ್ಠಿತ ಶಾಲೆಗಳಲ್ಲೊಂದಾಗಿತ್ತು. ಸರಕಾರಿ ಶಾಲೆಯಾದರು ಅಲ್ಲಿಯೂ ಅಸ್ಪೃಶ್ಯತೆಯ ಅವಮಾನಗಳು ತಪ್ಪಲಿಲ್ಲ. ಭೀಮನು ಸಂಸ್ಕೃತ ಕಲಿಯಲು ಇಷ್ಟಪಟ್ಟ. ಆದರೆ ಭೀಮ ಅಸ್ಪೃಶ್ಯನೆಂಬ ಕಾರಣದಿಂದ ಸಂಸ್ಕೃತ ಪಂಡಿತ ಮೇಷ್ಟ್ರು ಸಂಸ್ಕೃತ ಕಲಿಸಲು ಒಪ್ಪಲಿಲ್ಲ. ಅಸ್ಪೃಶ್ಯರು ಸಂಸ್ಕೃತ ಕಲಿಯಬಾರದೆಂದು ನಿರ್ಬಂಧ ಹಾಕಿದ್ದರು. ಕಲಿಯಲು ಸಂಸ್ಕೃತ ವಿಷಯ ಸಿಗದೆ ಇದ್ದುದ್ದರಿಂದ ಭೀಮನು ತಂದೆ ಮುಂದೆ ಕಣ್ಣೀರು ಹಾಕಿದ. ಸಂಸ್ಕೃತ ಸಿಗದೆ ಹೋದರೆ ಏನಾಯ್ತು, ಅದಕ್ಕಿಂತ ಸರಳ ಸುಂದರ ಭಾಷೆ ಇಂಗ್ಲೀಷ ಕಲಿಯಲು ರಾಮಜಿ ಮಗನನ್ನು ಪ್ರೋತ್ಸಾಹಿಸಿ ಇಂಗ್ಲೀಷ ರೀಡರ ಪುಸ್ತಕಗಳನ್ನು ತಂದು ಕೊಟ್ಟರು, ಭೀಮನ ಓದು ಮುನ್ನಡೆಯಿತು.   ಒಂದು ಸಲ ಗಣಿತ ಮೇಷ್ಟ್ರು ಭೀಮನಿಗೆ ಲೆಕ್ಕ ಬಿಡಿಸಲು ಕರೆದರು. ಭೀಮ ಲೆಕ್ಕ ಬಿಡಿಸಲು ಕಪ್ಪು ಹಲಗೆಯತ್ತ ಧಾವಿಸುತ್ತಿದಂತೆಯೇ ಸವರ್ಣೀಯ ವಿದ್ಯಾರ್ಥಿಗಳು ಓಡೋಡಿ ಹೋಗಿ ಆ ಕಪ್ಪು ಹಲಗೆ ಹಿಂದೆ ಇಟ್ಟಿದ್ದ ತಮ್ಮ ತಮ್ಮ ಊಟದ ಡಬ್ಬಿಗಳನ್ನು ಎತ್ತಿಕೊಂಡು ಬಂದರು. ಭೀಮನು ಕಪ್ಪು ಹಲಗೆ ಮುಟ್ಟುವುದರಿಂದ ಅವರ ಊಟದ ಡಬ್ಬಿಗಳು ಮೈಲಿಗೆಯಾಗುತ್ತವೆಂದು, ಅಸ್ಪೃಶ್ಯರು ಮುಟ್ಟಿದ ಆಹಾರ ತಿನ್ನಬಾರದೆಂದು ಗೊಣಗುತ್ತ ಶಪಿಸುತ್ತಾರೆ. ಕೆಲವರು ಭೀಮನತ್ತ ಊಟದ ಡಬ್ಬಿಗಳನ್ನು ಎಸೆದರು. ಭೀಮನಿಗೆ ಅವಮಾನವಾಯಿತು. ಇಂಥ ಅವಮಾನಗಳನ್ನು ಸವಾಲಾಗಿ ಸ್ವಿಕರಿಸುತ್ತ ಓದು ಮುಂದುವರೆಸಿದ.                                                  (ಮುಂದುವರೆಯುವುದು)                                              ಸೋಮಲಿಂಗ ಗೆಣ್ಣೂರ

Read Post »

ಇತರೆ

ಸ್ವರ ವ್ಯಂಜನಳಿಗೆ ಒಂದೇ ಮಣೆ, ಕ-ನಾದ ಕೀಲಿಮಣೆ

ಸ್ವರ ವ್ಯಂಜನಳಿಗೆ ಒಂದೇ ಮಣೆ, ಕ-ನಾದ ಕೀಲಿಮಣೆ ಸರೋಜಾ ಪ್ರಭಾಕರ್ ʻಕ-ನಾದ ಫೋನೆಟಿಕ್ಸ್‌ ಪ್ರೈ. ಲಿ.ʼ ಇದು ಕರ್ನಾಟಕ ಸ್ಟಾರ್ಟ್‌ ಅಪ್‌ ಅಡಿಯಲ್ಲಿನ ಒಂದು ಪುಟ್ಟ ಕಂಪೆನಿ. ಫೋನೆಟಿಕ್ಸ್‌ ಎಂದರೆ ಧ್ವನಿಶಾಸ್ತ್ರ, ಸ್ವರಶಾಸ್ತ್ರ, ಭಾಷಾಧ್ವನಿ ಶಾಸ್ತ್ರ ಎನ್ನುವ ಅರ್ಥವಿದೆ. ಈ ಪುಟ್ಟ ಕಂಪೆನಿಯ ಮುಂದೆಯೂ ಭಾರತೀಯ ಭಾಷೆ ಮತ್ತು ಲಿಪಿಯ ಅಳಿವು, ಉಳಿವು ಬೆಳವಣಿಗೆಯ ಮಹದಾಸೆಯಿದೆ, ಸವಾಲೂ ಇದೆ. ʻಕನ್ನಡ ಅನ್ನ ನೀಡುವ ಭಾಷೆ ಅಲ್ಲʼ ಎನ್ನುವ ಮಾತನ್ನು ಸುಳ್ಳಾಗಿಸಿ, ಭಾರತೀಯ ಭಾಷೆಗೆ ತಂತ್ರಜ್ಞಾನದ ಸ್ಪರ್ಶ ನೀಡುವ ಮೂಲಕ ಅದನ್ನು ಅನ್ನ ನೀಡುವ ಭಾಷೆಯಾಗಿ ಪರಿವರ್ತಿಸುವ ಪಣ ತೊಟ್ಟಿದೆ ಈ ಕಂಪೆನಿ.   ಸ  ಅದರ ಮೊದಲ ಹೆಜ್ಜೆಯಾಗಿ ಕನ್ನಡವೂ ಒಳಗೊಂಡಂತೆ ೯ ಭಾರತೀಯ ಭಾಷೆಯ ಕೀಲಿಮಣೆಯನ್ನು ಸಿದ್ಧಪಡಿಸಿ ಆಗಸ್ಟ್‌ ೧೫, ೨೦೨೦ರಂದು ಕನ್ನಡದ ಕೀಲಿಮಣೆಯು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ.ಎಸ್.‌ ನಾಗಾಭರಣ ಅವರಿಂದಲೂ, ತುಳು ಕೀಲಿಮಣೆಯು ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಪೂಜ್ಯ ವೀರೇಂದ್ರ ಹೆಗ್ಗಡೆ ಅವರಿಂದಲೂ ಲೋಕಾರ್ಪಣೆಗೊಂಡಿತು.  ಭಾರತೀಯ ಭಾಷೆಗಳಿಗೆ ಶತಶತಮಾನಗಳ ಶ್ರೀಮಂತ ಇತಿಹಾಸವುಂಟು; ಪರಂಪರೆಯುಂಟು. ಆದರೆ ನಾವು ನಮ್ಮ ಭಾಷೆಯನ್ನು ಟಂಕಿಸಲು ಬಳಸುವ ಕೀಲಿಮಣೆ ಮಾತ್ರ ಆಂಗ್ಲಭಾಷೆಯ ಕ್ವರ್ಟಿ ಕೀಲಿಮಣೆ.  ನಾವು ಈ ವಿಚಾರವನ್ನು ತುಂಬ ಸಹಜವಾಗಿ ಸ್ವೀಕರಿಸಿಬಿಟ್ಟಿದ್ದೇವೆ. ಅದು ಯಾಕೆ ಹೀಗೆ, ಅದರ ಪರಿಣಾಮವೇನು? ಎಂಬ ಬಗ್ಗೆ ಎಂದೂ ಯೋಚಿಸುವ ಗೋಜಿಗೂ ಹೋಗಿಲ್ಲ.   ಹಾಗೆಂದು ಯೋಚಿಸದವರೇ ಇಲ್ಲ ಎನ್ನುವದೇನಿಲ್ಲ; ಯೋಚಿಸಿದವರಿದ್ದಾರೆ, ಅದೂ ನಮ್ಮ ನಡುವೆಯೇ. ಅದನ್ನು ತುಂಬ ಗಂಭೀರವಾಗಿ ಪರಿಗಣಿಸಿ ಅದಕ್ಕಾಗಿಯೇ ಕೆಲಸ ಮಾಡಿ ಯಶಸ್ಸು ಪಡೆದು ಇಂದು ಕನ್ನಡವೊಂದೇ ಅಲ್ಲದೆ, ಭಾರತದ ಒಂಬತ್ತು ಭಾಷೆಗಳ ಕೀಲಿಮಣೆ ತಯಾರಿಸಿದ್ದಾರೆ. ತಯಾರಿಸಿದ ಬಳಿಕ ಅದನ್ನು ಬಳಸದೆ ಇಡಲಾದೀತೆ? ಅಂತಹ ಸವಾಲೊಂದು ಕೀಲಿಮಣೆಯನ್ನು ಹತ್ತುವರ್ಷಕಾಲದ ಪರಿಶ್ರಮದಿಂದ ಅನ್ವೇಷಿಸಿರುವ ವಿಜ್ಞಾನಿ ಡಾ. ಗುರುಪ್ರಸಾದ್‌ ಅವರ ಮುಂದೆ ಬಂದಾಗ, ಆ ಕಾರ್ಯವನ್ನೂ ತಮ್ಮ ಹೆಗಲಮೇಲೆ ಹೊತ್ತುಕೊಂಡು ಕಂಪೆನಿಯನ್ನೂ ತಂಡವನ್ನೂ ಕಟ್ಟಿ ಮುನ್ನಡೆಸುತ್ತಿದ್ದಾರೆ. ಬೀಜಾವಾಪ ಮೂಲತಃ ಮೈಸೂರಿನವರಾದ ಡಾ. ಗುರುಪ್ರಸಾದ ಅವರಿಗೆ ಮೊದಲಿನಿಂದಲೂ ರೊಬೋಟ್‌ ಮೇಲೆ ವಿಪರೀತ ಪ್ರೀತಿ. ಮಂಡ್ಯದ ಗದ್ದೆಬಯಲಿನಲ್ಲಿ ಸ್ನೇಹಿತರನ್ನು ಕಟ್ಟಿಕೊಂಡು ರೊಬೋಟ್‌ ತಯಾರಿಸಿ ಖುಷಿಪಡುತ್ತಿದ್ದ ಇವರು ಬಳಿಕ ಸೇರಿದ್ದು ಇಸ್ರೋವನ್ನು. ಅಲ್ಲಿ ಕಸ್ತೂರಿರಂಗನ್‌ ಅವರೊಡನೆ ಕೆಲಸ ಮಾಡುತ್ತಿದ್ದವರು ರೊಬೋಟ್‌ ಕುರಿತಾದ ತಮ್ಮ ಆಸಕ್ತಿಯನ್ನು ಹೇಳಿದಾಗ ಅವರು ಅಮೆರಿಕೆಗೆ ಕಳುಹಿಸಿದರು. ಒರ್ಲೆಂಡೋ ಕೆನಡಿ ಸ್ಪೇಸ್‌ ಸೆಂಟರ್‌ನಲ್ಲಿ ಇವರಿಗೆ ಅಲ್ಲಿನ ನಾಗರಿಕತ್ವ ಇಲ್ಲದ ಹಿನ್ನೆಲೆಯಲ್ಲಿ ಉತ್ಸಾಹಕ್ಕೆ ತುಸು ಹಿನ್ನಡೆಯುಂಟಾದರೂ, ಪೈಲಟ್‌ ಇಲ್ಲದ ವಿಮಾನ ಹಾರಿಸುವುದು ಇವೇ ಮೊದಲಾದ ಕಾರ್ಯದಲ್ಲಿ ಮೂವತ್ತು ವರ್ಷ ಕಳೆದರು.  ಕಾಲ ಹಾಗೇ ನಿಲ್ಲುವುದಿಲ್ಲ; ಬದುಕು ಇನ್ನೆಲ್ಲೋ ತಿರುವು ಪಡೆದುಬಿಡುತ್ತದೆ. ಒರ್ಲೆಂಡೋ ಕನ್ನಡ ಸಂಘದಿಂದ ಮಕ್ಕಳಿಗೆ ಕನ್ನಡ ಕಲಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯ್ತು. ಇವರ ಮಗನೂ ಕ್ಲಾಸಿಗೆ ಸೇರಿದಾಗ ಅದೊಂದು ದಿನ ಇವರ ಮಗನಿಗೆ ಕನ್ನಡ ಅಕ್ಷರ ತಿದ್ದಲು ಹೇಳಿದರು. “ನಾನ್ಯಾಕೆ ಕನ್ನಡ ಅಕ್ಷರ ತಿದ್ದಬೇಕು? ಆಂಗ್ಲಕೀಲಿಮಣೆಯಲ್ಲಿ ಕನ್ನಡವನ್ನು ಆರಾಮಾಗಿ ಟೈಪಿಸಬಹುದು. ನೀನೂ ಟೈಪಿಸಬಹುದು. ನಾವಿಬ್ಬರೂ ಕನ್ನಡವನ್ನೇ ಮಾತನಾಡುತ್ತೇವೆ. ಮತ್ತ್ಯಾಕೆ ಕಲಿಯುವುದು?” ಎಂದು ಪ್ರಶ್ನಿಸಿದಾಗ ಇವರ ಯೋಚನಾದಿಕ್ಕೇ ಬದಲಾಗಿಹೋಯ್ತು. “ನ್ಯೂಯಾರ್ಕ ಟೈಮ್ಸ್‌ ವರದಿಯ ಪ್ರಕಾರ ಕೆಲವೇ ವರ್ಷಗಳಲ್ಲಿ ಕೇವಲ ಆಡುಭಾಷೆಯಾಗಿ ಉಳಿಯುವ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ ಎಂಬುದು ಆತಂಕಕಾರಿ ವಿಚಾರ. ಕನ್ನಡವು ಅನ್ನ ಕೊಡಲಾರದೆಂಬುದು ನಮ್ಮ ಭಾವನೆ. ಯಾಕೆ ಹೀಗೆ? ಜಪಾನ್‌ನಂತಹ ದೇಶವು ತನ್ನ ಮಾತೃಭಾಷೆಯನ್ನೇ ಬಳಸಿಯೂ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ನಂ. ಒನ್‌ ಆಗಿಲ್ಲವೇ? ಅದು ನಮಗ್ಯಾಕೆ ಸಾಧ್ಯವಾಗುವುದಿಲ್ಲ?” ಎಂದು ಪ್ರಶ್ನಿಸುತ್ತಾರೆ ಡಾ. ಗುರುಪ್ರಸಾದ್.‌  ಇದೇ ವಿಚಾರವನ್ನು ಮುಂದಿಟ್ಟುಕೊಂಡು ನೋಡಿದಾಗ ಅವರಿಗೆ ಕ್ವರ್ಟಿ ಕೀಲಿಮಣೆಗಿಂತ ನಮ್ಮ ಭಾಷೆಯದೇ ಕೀಲಿಮಣೆ ಯಾಕೆ ತಯಾರಿಸಬಾರದು? ಎನ್ನುವ ವಿಚಾರ ಬಂತು. ಅಲ್ಲಿಂದ ಇವರ ಕೀಲಿಮಣೆ ಧ್ಯಾನ ಶುರುವಾಯ್ತು. ಅದಕ್ಕೆ ಇಂಬುಗೊಟ್ಟು ತಮ್ಮ ಲಿಪಿಜ್ಞಾನವನ್ನೆಲ್ಲ ಧಾರೆ ಎರೆದು ಇವರಿಗೆ ಪೂರ್ಣ ನೆರವು ಒದಗಿಸಿದವರು ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಬಿವಿಕೆ ಶಾಸ್ತ್ರಿ ಅವರು. ಕೀಲಿಮಣೆಗೆ ಅಮೆರಿಕದ ಪೆಟೆಂಟ್‌ ದೊರೆತ ಕ್ಷಣದಲ್ಲೇ ಮನೆಯವರ ಸಲಹೆಯಂತೆ ಕರ್ನಾಟಕಕ್ಕೇ ಬಂದು ಇಲ್ಲೇ ಆ ಸಲುವಾಗಿ ಕೆಲಸ ಪ್ರಾರಂಭಿಸಿದರು.   ಸವಾಲುಗಳ ಸರಮಾಲೆ ಇವರು ಮೊದಲು ತಯಾರಿಸಿದ್ದು ಚೌಕಾಕಾರದ ಕ-ನಾದ ಏಕರೂಪ ಕೀಲಿಮಣೆಯನ್ನು. ಆಯತಾಕಾರದ ಕ್ವರ್ಟಿ ಕೀಲಿಮಣೆ ರೂಢಿಯಾದ ಜನ ಚೌಕಾಕಾರದ ಕೀಲಿಮಣೆಯನ್ನು ಸ್ವೀಕರಿಸದೆ ಹೋದಾಗ ಅದಕ್ಕಾಗಿ ಈ ಕೀಲಿಮಣೆಯನ್ನೂ ಸಹ ಆಯತಾಕಾರವಾಗಿ ರೂಪಿಸಬೇಕಾಯ್ತು. ಗ್ರಾಮೀಣಭಾಗದಲ್ಲಿ ವಿದ್ಯುತ್‌ ತೊಂದರೆ ಜಾಸ್ತಿ. ಅದಕ್ಕಾಗಿ ಬ್ಯಾಕ ಅಪ್‌ ನೀಡಬೇಕಾಯ್ತು. ಬರಿಯ ಕೀಲಿಮಣೆ ಯಾರಿಗೆ ಬೇಕು? ಅದನ್ನು ಗಮನಿಸಿ ʻಇಂಡಿಕ್‌ ಕೀಬೋರ್ಡ್‌ ಲ್ಯಾಂಗ್ವೇಜ್‌ ಲ್ಯಾಬ್‌ & ಸ್ಟೆಮ್‌ ಲ್ಯಾಬ್‌ʼ ಎನ್ನುವ ವಿನೂತನ ಭಾಷಾ ಪ್ರಯೋಗಾಲಯ ಸ್ಥಾಪಿಸಿದರು. ಶಾಲೆಯಲ್ಲಿ ಪಠ್ಯವನ್ನು ಗಣಕಯಂತ್ರದಲ್ಲಿ ಕಲಿಸುವ ವ್ಯವಸ್ಥೆಯನ್ನು ಶಿಕ್ಷಕರೊಡಗೂಡಿ ಮಾಡಬೇಕಾಯ್ತು. ಗಣಕಯಂತ್ರದ ಲ್ಯಾಬ್‌ಗೆ ತುಸುಮಟ್ಟಿಗೆ ತರಬೇತಿ ಪಡೆದ ಒಬ್ಬ ಅಸಿಸ್ಟೆಂಟ್‌ ಒದಗಿಸುವ ವ್ಯವಸ್ಥೆ ಮಾಡಬೇಕಾಯಿತು. ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ಈ ರೀತಿ ಬೇರೆಬೇರೆ ವ್ಯವಸ್ಥೆ ರೂಪಿಸಬೇಕಾಯ್ತು. ಹಾಲಿ ಇರುವ ಗಣಕಯಂತ್ರ ಪ್ರಯೋಗಾಲಯಕ್ಕೆ ಆಫ್ಲೈನ್‌ ವಿಷಯದೊಂದಿಗೆ ೧ ಪಾಕೆಟ್‌ ಸರ್ವರ್‌, ೫ ಕೀಬೋರ್ಡ್‌, ನೆಟ್‌ವರ್ಕಿಂಗ್‌ ಹಾರ್ಡ್ವೇರ್‌ ಒದಗಿಸಿದರೆ ಸಾಕಾಯ್ತು. ಹೊಸ ಪ್ರಯೋಗಾಲಯಕ್ಕೆ ಆಫ್ಲೈನ್‌ ವಿಷಯದೊಂದಿಗೆ ಪಾಕೆಟ್‌ ಸರ್ವರ್‌, ೫ ಕೀಬೋರ್ಡ್‌ ಜೊತೆಗೆ ಮೈಕ್ರೋ ಪಿಸಿ ಸೆಟ್‌, ೫ ಅಂಡ್ರಾಯ್ಡ್‌ ಸಾಧನಕ್ಕೆ ಸಂಪರ್ಕಿಸುವ ಕೀಬೋರ್ಡ್‌, ೨ ಕೀಬೋರ್ಡ್‌ ಸಾಗಿಸುವ ಕೇಸ್‌, ನೆಟ್ವಕ್ರಿಂಗ್‌ ಹಾರ್ಡ್ವೇರ್‌, ೬ ತಿಂಗಳು ಅರೆಕಾಲಿಕ ತರಬೇತಿ ಪಡೆದ ಸಿಬ್ಬಂದಿ, ಹೀಗೆಲ್ಲ ಒದಗಿಸಬೇಕಾಯ್ತು. ಇದೆಲ್ಲಕ್ಕೂ ಒರ್ಲೆಂಡೋ ಕನ್ನಡ ಸಂಘದ ಬೆಂಬಲವೂ ಇದೆ. ನಮ್ಮಲ್ಲಿ ಒಂದು ಮಾತಿದೆಯಲ್ಲ, ʻಸಂನ್ಯಾಸಿ ಸಂಸಾರʼ ಎಂದು. ಹಾಗೆ ಒಂದು ಕೀಲಿಮಣೆಯ ಜೊತೆಗೆ ಇವೆಲ್ಲವನ್ನೂ ನೀಡಿ ಶಾಲೆಯ ಮಕ್ಕಳನ್ನು ಡಿಜಿಟಲ್‌ ಸಾಕ್ಷರರನ್ನಾಗಿ ಮಾಡುವ ಹೊಣೆಯನ್ನೇ ತನ್ನ ಹೆಗಲ ಮೇಲೆ ಹೊತ್ತುಕೊಂಡಿದೆ ಕ-ನಾದ. ಇದರ ಜೊತೆಗೆ ಡಿಕೋಡಿಂಗ್‌, ಆನ್ಲೈನ್‌ ಭಾಷಾಕಲಿಕೆ ಸಹ ಕ-ನಾದ ಕೀಲಿಮಣೆಯಿಂದ ಸಾಧ್ಯವಾಗಿದೆ. ತುಳುರಾಮಾಯಣವನ್ನು ಡೀಕೊಡ್‌ ಮಾಡಿ ಧರ್ಮಸ್ಥಳಕ್ಕೆ ಒಪ್ಪಿಸಲಾಗಿದೆ. ʻಒಮ್ಮೆ ಕಳೆದುಕೊಂಡರೆ ಪುನಃ ತರುವುದು ಸುಲಭವಲ್ಲʼ ಎನ್ನುವುದು ತುಳುಲಿಪಿಯನ್ನು ಪುನಃ ಹೊರತರುವ ಕಾರ್ಯ ಮಾಡುತ್ತಿರುವ ಡಾ. ಗುರುಪ್ರಸಾದ್‌ ಅವರ ಅನುಭವ. “ಕನ್ನಡವೂ ಆ ಪಟ್ಟಿಗೇ ಸೇರಬೇಕೆ? ಯೋಚಿಸಿ” ಎನ್ನುತ್ತಾರೆ ಇವರು. ನಮ್ಮಲ್ಲಿ ವರ್ತಮಾನದ ಚಿತ್ರಣ ಹೇಗಿದೆಯೆಂದರೆ, ಅಕ್ಷರಾಭ್ಯಾಸ ಮಾಡಿಸುವುದಕ್ಕೂ ಪುರಸೊತ್ತಿಲ್ಲದಂತೆ ಸೀದಾ ʻಎ ಫಾರ್‌ ಆಪಲ್‌, ಬಿ ಫಾರ್‌ ಬಾಲ್‌ʼ ಎಂದು ಶುರುವಿಟ್ಟುಕೊಳ್ಳುತ್ತಿದ್ದೇವೆ. ʻನೀರಿಳಿಯದ ಗಂಟಲೊಳ್‌ ಕಡುಬು ತುರುಕಿದಂತೆʼ ಎನ್ನುವ ಮಾತೇ ಸರಿಯಾದೀತು ಪಾಲಕರ ಈ ಆತುರಕ್ಕೆ. ಹೀಗೆ ಮುಂದುವರಿದರೆ ಇನ್ನೆರಡು ಪೀಳಿಗೆ ನಂತರ ಕನ್ನಡ ಲಿಪಿಯೇ ಮಾಯವಾಗುವುದರಲ್ಲಿ ಸಂಶಯವೇ ಇಲ್ಲ. ʻಕನ್ನಡಲಿಪಿ ಬಡವಾಗುತ್ತಿದೆ, ಕಲಿಸುವುದರಲ್ಲೂ ಜಿಪುಣತನ ಕಾಣುತ್ತಿದೆ, ಎಷ್ಟೋ ಅಕ್ಷರಗಳನ್ನೂ ಕಲಿಸುತ್ತಲೇ ಇಲ್ಲʼ ಎನ್ನುವ ಮಾತು ಕೇಳಿಬರುತ್ತಿದೆ. ಜೊತೆಗೆ ಪತ್ರಿಕೆಯವರೂ ಲಿಪಿಯ ಕುರಿತಾಗಿ ಹೊಣೆಗಾರಿಕೆಯನ್ನು ತೋರುತ್ತಿಲ್ಲ ಎನ್ನುವ ಬೇಸರವನ್ನೂ ಕೆಲವರು ಹೊರಹಾಕುತ್ತಿದ್ದಾರೆ. ʻಭಾಷೆ ಲಿಪಿಯ ಅವನತಿಯೊಡನೆ ಒಂದು ಸಂಸ್ಕೃತಿಯೇ ನಾಶವಾಗುತ್ತದೆʼ. ʻನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿʼ ಎನ್ನುತ್ತೇವೆ. ಆದರೆ ಕಾಶ್ಮೀರದಲ್ಲಿ ಶಾರದಾ ಲಿಪಿ ಎನ್ನುವುದೊಂದಿತ್ತು ಎಂದು ನಾವು ಇತಿಹಾಸದ ಪಠ್ಯದಲ್ಲೂ ಓದಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ನಂಬುವಿರಾ?  ದಾನಕ್ಕೂ ಸೈ  ಕ-ನಾದ ಹಾರ್ಡವೇರ್‌ ತಂತ್ರಾಂಶವನ್ನು ಇವೆಲ್ಲದರ ಜೊತೆಗೆ ಒಂದು ಶಾಲೆಗೆ ಒದಗಿಸುವುದೆಂದರೆ ಒಬ್ಬರಿಂದ ಸಾಧ್ಯವಿಲ್ಲ. ಹಾಗಾಗಿ ಕ-ನಾದ ದಾನಿಗಳಿಗೆ ʻನಮ್ಮ ಕಾರ್ಯದಲ್ಲಿ ಕೈಜೋಡಿಸಿʻ ಎಂದು ಕೇಳಿಕೊಳ್ಳುತ್ತಿದೆ. ದುಡ್ಡಿದ್ದವರು ಭಾಷಾ ಲ್ಯಾಬ್‌ ಒಂದನ್ನೇ ಶಾಲೆಯಲ್ಲಿ ಸ್ಥಾಪಿಸಬಹುದಾಗಿದ್ದರೆ ಕೆಲವರಿಗೆ ಹೆಚ್ಚು ಹಣವಿರದಿದ್ದರೂ ದಾನ ಮಾಡುವ ಮನಸ್ಸಿರುತ್ತದೆ. ಅಂತಹವರು ಒಂದು ಕೀಲಿಮಣೆ ಕೂಡಾ ದಾನ ಮಾಡಬಹುದು. ದಾನಿಗಳ ಹೆಸರನ್ನು ಕೀಲಿಮಣೆಯಲ್ಲಿ, ವೆಬ್‌ಸೈಟ್ನ ದಾನಿಗಳ ಪಟ್ಟಿಯಲ್ಲಿ ಪ್ರಕಟಿಸಲಾಗುವುದು. ದಾನ ಅಥವಾ ಉಡುಗೊರೆ ಎನ್ನುವುದನ್ನು ನೀಡುವವರೇ ನಿರ್ಧರಿಸಬಹುದು. ಕ-ನಾದ ಕೀಲಿಮಣೆಯೇ ಯಾಕೆ? ʻನಮ್ಮ ಗ್ರಾಮೀಣ ಭಾಗದ ಶಾಲೆಗಳು, ವಿದ್ಯಾಭಾರತಿ ಶಾಲೆಗಳಲ್ಲಿ ಶೇ. ೨೭ರಷ್ಟು ಮಾತ್ರ ಡಿಜಿಟಲ್‌ ವ್ಯವಸ್ಥೆ ಹೊಂದಿದೆʼ ಎನ್ನುತ್ತಾರೆ ಗುರುಪ್ರಸಾದ್‌ ಅವರು. ಗ್ರಾಮೀಣ ಭಾಗದ ಪ್ರತಿಭೆಗಳು ಆಂಗ್ಲ ಭಾಷೆ ಬರುವುದಿಲ್ಲ ಎಂದು ಗಣಕಯಂತ್ರವನ್ನೂ ಬಳಸಲು ಸಾಧ್ಯವಾಗದೆ ಭವಿಷ್ಯದಲ್ಲಿ ಕೀಳರಿಮೆ, ಆತ್ಮವಿಶ್ವಾಸದ ಕೊರತೆಯಿಂದ ಬಳಸುವಂತಾಗುತ್ತದೆ. ಕ-ನಾದ ಕೀಲಿಮಣೆಯಲ್ಲಿ ಕನ್ನಡದಲ್ಲೇ ಟೈಪ್‌ ಮಾಡಬಹುದು. ಪ್ರಾಥಮಿಕ ಹಂತದಲ್ಲೇ ಅದರಲ್ಲೂ ಗ್ರಾಮೀಣ ಭಾಗದಲ್ಲೂ ಡಿಜಿಟಲ್‌ ಸಾಕ್ಷರತೆಗೆ ಇದರಿಂದ ಅನುಕೂಲ. ನಾವು ಯೋಚಿಸುವ ಭಾಷೆಯಲ್ಲೇ ಟಂಕಿಸುವುದರಿಂದ ಕ್ವರ್ಟಿ ಕೀಲಿಮಣೆಗಿಂತಲೂ ಶೇ. ೩೦ರಷ್ಟು ವೇಗದಲ್ಲಿ ಟಂಕಿಸಬಹುದು, ಇದರಿಂದ ಡಿಜಿಟಲ್‌ ಸಾಕ್ಷರತೆಯೊಡನೆ ನಮ್ಮ ಮಾತೃಭಾಷೆ ಲಿಪಿಯೂ ಉಳಿದು ಬೆಳವಣಿಗೆಯಾಗುತ್ತದೆ. ನಮ್ಮ ಸಂಸ್ಕೃತಿಯ ಉಳಿವಿಗೂ ಅನುಕೂಲ. ಕ-ನಾದ ಕೀಲಿಮಣೆಯಲ್ಲಿ ರಾಕೆಟಿಂಗ್‌, ರೊಬಾಟಿಕ್ಸ್‌, ಅನಿಮೇಶನ್‌ ಗೇಮಿಂಗ್‌ನಂತಹ ಆಧುನಿಕ ತಂತ್ರಜ್ಞಾನವನ್ನೂ ಕಲಿತು ಕೆಲಸ ಮಾಡಬಹುದಾಗಿದೆ. ಇಂದು ಹಲವಾರು ಶಾಲೆಗಳಲ್ಲಿ ಇದನ್ನು ಬಳಸುತ್ತಿದ್ದು, ನಾಲ್ಕು ವರ್ಷದ ಮಗುವೂ ಗಣಕಯಂತ್ರದಲ್ಲಿ ಟಂಕಿಸುತ್ತಿದೆ ಎಂದರೆ ನಂಬಲಾರಿರಿ ಎನ್ನುತ್ತಾರೆ ಡಾ. ಗುರುಪ್ರಸಾದ್.‌ ನಮ್ಮ ರಾಷ್ಟ್ರೀಯ ಶಿಕ್ಷಣನೀತಿಯನ್ನೂ, ಕರ್ನಾಟಕ ಸರ್ಕಾರದ ಆಶಯವಾದ ಕಚೇರಿಯಲ್ಲಿ ಕನ್ನಡ ಇವೆಲ್ಲವನ್ನೂ ಕ-ನಾದ ಬಳಸಿ ಸಾಧ್ಯವಾಗಿಸಬಹುದು. ಅಂಗನವಾಡಿಯಂತಹ ಕೇಂದ್ರಗಳಲ್ಲೂ ಆರಾಮಾಗಿ ಗಣಕಯಂತ್ರದ ವ್ಯವಸ್ಥೆಯನ್ನು ಕ-ನಾದದಿಂದ ಸಾಧ್ಯವಾಗಿಸಬಹುದು. ಆಂಗ್ಲಭಾಷೆಯ ಹಂಗಿಲ್ಲದೆ ಮಕ್ಕಳು ತಮ್ಮ ಜ್ಞಾನವನ್ನು ವೇಗವಾಗಿ ಹೆಚ್ಚಿಸಿಕೊಳ್ಳಬಹುದು. ಏಕರೂಪ ಕೀಲಿಮಣೆಯಾಗಿರುವ ಕಾರಣ ಭಾರತದ ಹಲವಾರು ಭಾಷೆಗಳನ್ನು ಜೊತೆಗೆ ಆಂಗ್ಲಭಾಷೆಯನ್ನೂ ಇದರಲ್ಲಿ ಟಂಕಿಸಬಹುದು. ಆಸಕ್ತರು ಇದನ್ನೇ ಬಳಸಿ ಹಲವಾರು ಭಾಷೆಯನ್ನೂ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಇದು ಮೇಡ್‌ ಇನ್‌ ಇಂಡಿಯಾ ಯೋಜನೆಯಡಿಯಲ್ಲಿ ರೂಪಿಸಿರುವ ಕೀಲಿಮಣೆಯಾಗಿದೆ. ಇದನ್ನು ವ್ಯಾಪಕವಾಗಿ ಬಳಸುವ ಕಾರ್ಯ ಕನ್ನಡಿಗರಿಂದ, ಇತರ ಭಾಷೆಯವರಿಂದ ಆಗಬೇಕಾಗಿದೆ;ಇದೇ ನಮ್ಮ ಕೀಲಿಮಣೆ ಎನ್ನುವಂತಾಗಬೇಕಾಗಿದೆ.    ಮಾತೃಭಾಷೆಗೆ ಮೊದಲಸ್ಥಾನ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಮಕ್ಕಳು ಉಸಿರಾಗಿಸಿಕೊಂಡಿರುತ್ತಾರೆ. ಅದನ್ನೇ ಮುಂದೆಯೂ ನೀಡಿದರೆ ಗಟ್ಟಿಯಾಗಿ ಅವರು ಬದುಕಿನಲ್ಲಿ ನಿಲ್ಲಬಲ್ಲರು. ಆಂಗ್ಲಭಾಷೆಯೊಂದನ್ನು ಅರ್ಥಮಾಡಿಕೊಳ್ಳಲು ಮಗುವಿಗೆ ಹತ್ತುವರ್ಷ ಬೇಕಾಗುವುದಂತೆ. ಅಷ್ಟು ಆ ಮಗುವಿನ ವಿಷಯ ಅರ್ಥೈಸಿಕೊಳ್ಳುವ ಅವಧಿ ಕಡಿತಗೊಳ್ಳುತ್ತದೆ. ಕನ್ನಡವು ಅನ್ನಕೊಡುವುದಿಲ್ಲವೆಂದು ಮೂಲೆಗುಂಪಾಗಿಸುವ ಅಗತ್ಯವೇನೂ ಇಲ್ಲ. ಕನ್ನಡಕ್ಕಾಗಿ ಕೀಲಿಮಣೆಯಿದೆ; ಕನ್ನಡದ್ದೇ ಕೀಲಿಮಣೆಯಿದೆ. ನಿರಾತಂಕವಾಗಿ ನಮ್ಮ ಮುಂದಿರುವ ಈ ಹಾರ್ಡವೇರ್‌ ತಂತ್ರಾಂಶವನ್ನು ಬಳಸುವುದಷ್ಟೆ ನಮ್ಮ ಮುಂದಿರುವ ಜವಾಬ್ದಾರಿಯಾಗಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು: Mo: +919606796810/9945031391 E-Mail: info@ka-naada.com

ಸ್ವರ ವ್ಯಂಜನಳಿಗೆ ಒಂದೇ ಮಣೆ, ಕ-ನಾದ ಕೀಲಿಮಣೆ Read Post »

ಇತರೆ

ಸುಭಾಷಿತಗಳ ಸ್ವಾರಸ್ಯ

ಲೇಖನ ಸಂಗಾತಿ  ಸುಭಾಷಿತಗಳ ಸ್ವಾರಸ್ಯ ಎಂ. ಆರ್. ಅನಸೂಯ ಬಾಲ್ಯದಲ್ಲಿ ಅವಳು ಮನೆಯ ಹಿರಿಯರು ತಮ್ಮ ಮಾತು  ಕತೆಗಳಲ್ಲಿ ಸಮಯಾನುಸಾರ ಬಳಸುತ್ತಿದ್ದ ಗಾದೆಗಳನ್ನು  ಕೇಳಿಸಿಕೊಂಡೇ  ಬೆಳೆದವಳು. ಹೀಗಾಗಿಯೇ ನೂರಾರು  ಗಾದೆಗಳು ಅವಳ ನಾಲಿಗೆಯ ತುದಿಯಲ್ಲಿದ್ದವು. ಅವಳ ಹಿರಿಯರು ಅನಕ್ಷರಸ್ಥರಾದರೂ ಸಹ ಅವರ ನಾಲಿಗೆಯ ಮೇಲೆ ಸರಾಗವಾಗಿ ಬಳಸಲ್ಪಡುತ್ತಿದ್ದ ಗಾದೆಗಳ ಕುರಿತ ಮೆಚ್ಚುಗೆಯ ಜೊತೆಯಲ್ಲೇ ಹಿರಿಯರ ಸಂದರ್ಭೋಚಿತ ಗಾದೆಗಳ ಬಳಕೆಯ ವಾಕ್ಚಾತುರ್ಯಕ್ಕೆ ಬೆರಗಾಗುತ್ತಿದ್ದಳು ಗಾದೆಗಳಂತೆ ಸರ್ವಜ್ಞನ ಹಾಗೂ ಬಸವಣ್ಣನ ವಚನಗಳು ನಮ್ಮ ನಾಡಾಡಿಗಳ ಮಾತುಕತೆಗಳ ನಡುವೆ  ನುಸುಳಲು  ಕಾರಣ ಅವುಗಳ ಭಾಷೆಯ  ದೇಸಿತನ  ಮತ್ತು ಸರಳತೆ  ಎಂಬುದರಲ್ಲಿ ಎರಡು ಮಾತಿಲ್ಲ. ಗಾದೆಗಳನ್ನು ನಾಣ್ಣುಡಿ ಹಾಗೂ ಲೋಕೋಕ್ತಿ ಎಂದು ಸಹಾ  ಕರೆಯಲಾಗುತ್ತದೆ. ಗಾದೆಗಳು ಜನಸಾಮಾನ್ಯರ ನಡುವೆ ಬಳಕೆಯಲ್ಲಿರುವ  ಮಾತುಗಳಾಗಿರುವುದೇ ಇದಕ್ಕೆ ಕಾರಣ. ಈ ಗಾದೆಗಳು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸತ್ಯಗಳೇ ಆಗಿದ್ದೂ  ಜನರ  ಸಂಸ್ಕೃತಿಯ  ಪ್ರತಿಧ್ವನಿಗಳಾಗಿವೆ. ಅವಳು ಪ್ರೌಢಶಾಲೆಗೆ ಕಾಲಿಟ್ಟಾಗ ಅಲ್ಲಿ ಪ್ರತಿನಿತ್ಯ ಶಾಲಾ ಆರಂಭದ ವೇಳೆಯಲ್ಲಿ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಿದ ನಂತರ ಸರದಿಯ ಮೇಲೆ ಹತ್ತನೇ ತರಗತಿಯಲ್ಲಿ ಓದುವ ವಿದ್ಯಾರ್ಥಿನಿಯರು ಅಂದಿನ ವರ್ತಮಾನ ಪತ್ರಿಕೆ  ವಾಚನ ಮಾಡುವ ಪರಿಪಾಠವಿತ್ತು. ಮೊಟ್ಟಮೊದಲಿಗೇ ಅಂದಿನ ಸುಭಾಷಿತವನ್ನು ಓದಬೇಕು. ನಂತರ ಅಂದಿನ ಪತ್ರಿಕೆಯ ಮುಖ್ಯಾಂಶಗಳನ್ನು ಓದಬೇಕು. ಅಂತ್ಯದಲ್ಲಿ ಕ್ರೀಡಾ ವಾರ್ತೆಗಳು. ಸರದಿಯ ಪ್ರಕಾರ ಬಂದ ವಾರ್ತಾ ವಾಚಕಿಯು ಶಾಲೆಗೆ ಮುಂಚಿತವಾಗಿ ಬಂದು ಪತ್ರಿಕೆಯ ಮುಖ್ಯಾಂಶಗಳನ್ನು ಗುರುತು ಮಾಡಿಕೊಂಡು ಸಿದ್ಧಳಾಗ ಬೇಕಿತ್ತು. ಪ್ರತಿದಿನದ ಸುಭಾಷಿತ ಅಥವಾ ಸೂಕ್ತಿಗಳನ್ನು   ತನಗೆ ತಿಳಿದಂತೆ  ಅರ್ಥೈಸಿಕೊಳ್ಳುತ್ತಿದ್ದಳು.  ಪ್ರತಿದಿನದ ಸುಭಾಷಿತಗಳನ್ನು ಕಿವಿಗೊಟ್ಟು ಕೇಳುತ್ತ ತನಗರಿವಿಲ್ಲದೆ ಅವಳು ಅದರ ಅಭಿಮಾನಿಯಾಗಿಬಿಟ್ಟಳು. ಅದ್ಯಾವ ಪರಿಯ ಗೀಳು ಹತ್ತಿತೆಂದರೆ  ಒಂದು ನೋಟ್ ಬುಕ್ ನ್ನು ಕೊಂಡುಕೊಂಡು  ಅದರಲ್ಲಿ  ದಿನಪತ್ರಿಕೆಯಲ್ಲಿ ಬರುತ್ತಿದ್ದ ಸುಭಾಷಿತಗಳನ್ನು  ಬರೆದುಕೊಳ್ಳತೊಡಗಿದಳು. ಹತ್ತನೇ ತರಗತಿಯವರೆಗು ಮುಂದುವರಿದ ಈ ಹವ್ಯಾಸವನ್ನು ಆ ನೋಟ್ ಬುಕ್ ಕಳೆದುಹೋಗುವ ತನಕ ಮುಂದುವರಿಸಿ ಕೊಂಡು ಬಂದಿದ್ದಳು. ಮುಂದೆ ಆ  ಹವ್ಯಾಸಕ್ಕೆ ಪೂರ್ಣ ವಿರಾಮ ಇಟ್ಟರೂ, ಸುಭಾಷಿತವನ್ನು ಓದಿ ಆಸ್ವಾದಿಸುವ ಅಭಿರುಚಿ ಮಾತ್ರ ಇಂದಿನವರೆಗೂ ಮುಂದುವರಿದಿದೆ.  ಸುಭಾಷಿತಗಳು ಈಗ ಮುಖಹೊತ್ತಿಗೆ( F B )ಯಲ್ಲಂತೂ ಪ್ರೇರಣಾತ್ಮಕ ಅಥವ ಧನಾತ್ಮಕ ಉಲ್ಲೇಖಗಳೆಂಬ ಹೊಸ ದಿರಸನ್ನು  ಧರಿಸಿವೆ. ಬುದ್ಧ ನುಡಿಗಳು  ಹಾಗೂ ಝೆನ್ ನುಡಿಗಳು ಅದ್ಭುತ ! ಇಂತಹ ಉಲ್ಲೇಖಗಳನ್ನು ಓದುತ್ತ ಮನನ ಮಾಡಿಕೊಳ್ಳುವ ಖಯಾಲಿ ಈಗಲೂ  ಅವಳಿಗೆ ಕಡಿಮೆಯಾಗಿಲ್ಲ. ಧನಾತ್ಮಕ ಉಲ್ಲೇಖಗಳು ಒಮ್ಮೊಮ್ಮೆ ಎಷ್ಟು ಪರಿಣಾಮ ಬೀರುತ್ತವೆಯೆಂದರೆ ನಮ್ಮ ಬದುಕಿನ ದೃಷ್ಟಿಕೋನವನ್ನು ಬದಲಿಸುವ ಕಸುವನ್ನು ಹೊಂದಿರುತ್ತವೆ.  “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ನಿಮ್ಮ ಮೂಲಕ ಬಂದಿದ್ದಾರೆಯೇ ಹೊರತು ನಿಮ್ಮಿಂದಲ್ಲ. ನಿಮ್ಮ ಜೂತೆಗೆ ಇದ್ದರೂ ನಿಮಗೆ ಸೇರಿದ್ದಲ್ಲ. ಅವರ ದೇಹಗಳಿಗೆ ನೀವು ಮನೆಯಾಗಬಹುದೇ ಹೊರತು ಆತ್ಮಗಳಿಗಲ್ಲ”  ಕವಿ ಖಲೀಲ್ ಗಿಬ್ರಾನ್ ನ ಈ ಮಾತುಗಳು ಮಕ್ಕಳಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ನಿರಾಶರಾದಂಥ ತಂದೆ ತಾಯಿಗಳ ಮನಸ್ಥಿತಿಗೆ ಪರಿಹಾರ ಸೂಚಕವಾಗಿ ಅವರ ಚಿಂತನೆಯ ದಿಕ್ಕನ್ನು ಬದಲಾಯಿಸಬಹುದು. “ಪದೇ ಪದೇ ಕಷ್ಟಗಳು ಬರುತ್ತಿವೆ ಅಂದ್ರೆ ನಿನ್ನ ಹಣೆಯ ಬರಹ ಸರಿ ಇಲ್ಲ ಅಂತ ಅಲ್ಲ. ಮುಂದೆ ನಿನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದರ್ಥ” ನಮಗೆ ದಿಕ್ಕು ತೋಚದ ಕ್ಷಣಗಳಲ್ಲಿ ಈ ಮೇಲಿನ ಮಾತು ಆಶಾಕಿರಣದಂತೆ ಕಂಡು ಭರವಸೆ ತುಂಬುತ್ತಲೇ ಹೊಸ ಹೊಳಹುಗಳನ್ನು ತೋರುತ್ತವೆ. ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶಗಳನ್ನು ಕಂಡುಕೊಳ್ಳುತ್ತಾನೆ ಎಂಬ ಮಾತು ಅದೆಷ್ಟು ನಿಜ ! ಕೆಲವೊಂದು ಉಲ್ಲೇಖಗಳನ್ನು ಓದಿದಾಗ ಅವು ನಮ್ಮ ಅಂತರಾಳದ ಅನಿಸಿಕೆಗಳೇನೋ ಎಂಬಂತೆ ಆಪ್ತವಾಗಿ ಬಿಡುತ್ತವೆ.ಕೆಳಗಿನ ಸಾಲುಗಳು ಅದೆಷ್ಟು ಆಪ್ತವಾಗುತ್ತವೆ ” ನನ್ನ ಬಿಟ್ಟು ಹೋದವರಿಗೆ ಎರಡು ವಿಷಯ ಹೇಳೋಕೆ  ಇಷ್ಟಪಡ್ತೀನಿ. ಒಂದು sorry ಮತ್ತೊಂದು Thank you Sorry  ಯಾಕಂದ್ರೆ ನಾನು ನಿನ್ನನ್ನು ತುಂಬಾ ಹಚ್ಕಂಡಿದ್ದಕ್ಕೆ Thank you  ಯಾಕಂದ್ರೆ ನನಗೆ ಏಕಾಂಗಿಯಾಗಿ ಬದುಕುವುದು ಹೇಗೆ ಅಂತ ತೋರಿಸಿದ್ದಕ್ಕೆ “ ಸಶಕ್ತ ಉಲ್ಲೇಖಗಳು ನಮ್ಮನ್ನು ನಾವೇ ಸ್ವವಿಮರ್ಶೆಗೆ ತೊಡಗಿಸಿಕೊಳ್ಳುವಲ್ಲಿ ದಾರಿ ತೋರುತ್ತವೆ. ಕೆಳಗಿರುವ ಸಾಲುಗಳು ಇದಕ್ಕೊಂದು ನಿದರ್ಶನ.  “ನಿನ್ನ ಬಲಹೀನತೆಗಳ ಅರಿವಿದ್ದರೆ ನೀನು ಅತ್ಯಂತ ಬಲಶಾಲಿ ನಿನ್ನ ದೋಷಗಳನ್ನು ಗುರುತಿಸುವಿಯಾದರೆ ಬಲು ಸಾಹಸಿ  ಮತ್ತು ನಿನ್ನ ತಪ್ಪುಗಳನ್ನು ನೀನೇ ತಿದ್ದಿಕೊಳ್ಳುವೆಯಾದರೆ ಬಲು ಬುದ್ಧಿವಂತ” ರಚನಾತ್ಮಕ ಉಲ್ಲೇಖಗಳು ನಾವು ಆತ್ಮವಂಚನೆ ಮಾಡಿ ಕೊಳ್ಳದಂತೆ ತಡೆಯುವಂಥ ತಾಕತ್ತನ್ನು ಹೊಂದಿರುತ್ತವೆ.  “ಮನಸ್ಸಿನ ನ್ಯಾಯಾಲಯದಲ್ಲಿ  ಮನಸ್ಸಾಕ್ಷಿಯೇ ನ್ಯಾಯಾಧೀಶ” “ಜನ್ಮಪೂರ್ತಿ ಪುಸ್ತಕ ಓದಿದೆ ಏನು ಕಲಿಯಲಾಗಲಿಲ್ಲ   ಹತ್ತಿರದಿಂದ ಕೆಲವು ಮುಖಗಳ ಓದಿದೆ ನೂರಾರು ಪಾಠ ಕಲಿತೆ ”  ಬದುಕು ಕಲಿಸುವ ಪಾಠ ಇದೇ ಅಲ್ಲವೇ ?  ಸಕಾರಾತ್ಮಕವಾದ ದೃಷ್ಟಿಕೋನವುಳ್ಳ ಉಲ್ಲೇಖಗಳು ನಮ್ಮೊಳಗಿನ ಹುಡುಕಾಟಕ್ಕೆ ಅನುವು ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತವೆ.   ” ದೇವರನ್ನು ಯಾರೋ ಕೇಳಿದರು ನಿನ್ನ ಪ್ರೀತಿ ಮತ್ತು  ಮನುಷ್ಯನ ಪ್ರೀತಿಯ ನಡುವೆ ಏನು ವ್ಯತ್ಯಾಸವಿದೆ ಎಂದು?  ದೇವರು ಹೇಳಿದ ಆಗಸದಲ್ಲಿ ಹಾರುವ ಹಕ್ಕಿಯ ನೋಡಿ ಖುಷಿ ನೋಡುವುದೇ ನನ್ನ ಪ್ರೀತಿ. ಅದೇ ಹಕ್ಕಿಯನ್ನು ಪಂಜರದಲ್ಲಿ ಇರಿಸಿಕೊಳ್ಳುವುದೇ ಮನುಷ್ಯನ ಪ್ರೀತಿ”   ಅದೆಷ್ಟು ಅರ್ಥಗರ್ಭಿತ ! ಅಂತಃಕರಣಕ್ಕೆ ಹತ್ತಿರವಾಗುವ  ಉಲ್ಲೇಖಗಳು ನಮ್ಮ ಬದುಕಿನ ಹಿನ್ನೋಟ ನೋಡಲು ಅವಕಾಶ ಒದಗಿಸುತ್ತವೆ “ಜೀವನದಲ್ಲಿ ಖುಷಿಯಾಗಿರಬೇಕು ಅಂದ್ರೆ ಯಾರಿಂದಲೂ ಏನನ್ನು ಬಯಸಬಾರದು”   ಹಾಗೂ “ಯಾವುದೇ ಒಬ್ಬ ವ್ಯಕ್ತಿಯ ಮೇಲೆ  ಅತಿ ನಂಬಿಕೆಯಿಟ್ಟು ನೋಡಿ  ‌. .  ಅದೇ ವ್ಯಕ್ತಿ ಬೇರೆ ಯಾರನ್ನೂ ನಂಬಲಾರದ ಹಾಗೆ  ಪಾಠ ಕಲಿಸುತ್ತಾನೆ “ ಮನ ಮುಟ್ಟುವ ಉಲ್ಲೇಖಗಳು ನಾವು ನಡೆದು ಬಂದ  ಹಾದಿಯನ್ನು ನೆನಪಿಸುತ್ತ ಮನವನ್ನು ಆರ್ದ್ರಗೊಳಿಸಿ ಕಾಠಿಣ್ಯತೆಯನ್ನು ಕರಗಿಸುವ ಸಹೃದಯಿ ಸಾಲುಗಳಾಗ ಬಹುದು. ಕೆಲವು ಉಲ್ಲೇಖಗಳೂ ನಮ್ಮ ಮನದಾಳದ ಮಾತುಗಳ ಮಾರ್ದ್ವನಿಗಳಾಗಿ ಹೊರಹೊಮ್ಮಿಬಿಡುತ್ತವೆ. “ಕಾಲಿಗಾದ ಗಾಯ ಹೇಗೆ ನಡೆಯಬೇಕೆಂದು ಕಲಿಸಿದರೆ ಮನಸ್ಸಿಗಾದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ      ಕೆಲವು ಭಾವಪೂರ್ಣ ಸೂಕ್ತಿಗಳಂತೂ ನಮ್ಮ ಸಂಕಟದ  ಸಂದರ್ಭಗಳಲ್ಲಿ ಸಖಿಯಂತೆ ಸಾಂತ್ವನಗೊಳಿಸ ಬಲ್ಲವು   ಕೆಳಗಿನ ಸಾಲುಗಳನ್ನು ನೋಡಿ ” ನಿನಗಾದ ನೋವನ್ನು ಮರೆತುಬಿಡು ಆದರೆ ಅದರಿಂದ ಕಲಿತ  ಪಾಠವನ್ನು ಎಂದಿಗೂ ಮರೆಯಬೇಡ “ ನನಗೆ ನಾನೇ ಎನ್ನುವಂಥ ಉತ್ಕಟ ಕ್ಷಣಗಳಲ್ಲಿ ಏಕಾಂಗಿ ಯಾಗಿ ನಿಂತಿರುವಾಗ ಸ್ಪೂರ್ತಿದಾಯಕ ಉಲ್ಲೇಖಗಳು ನಮ್ಮ ಜೊತೆಯಾಗಿ ಕೈ ಹಿಡಿದು ನಡೆಸುತ್ತವೆ.  ಡಿ.ವಿ.ಜಿ. ಅವರ  ಈ ಸಾಲುಗಳು ಚೈತನ್ಯ ತುಂಬುವ ಪರಿಗೆ ನಾವು ಬೆರಗಾಗಲೇ ಬೇಕು. ” ಓರ್ವನೇ ನಿಲುವಿಗೆ ನೀನುತ್ಕಟ  ಕ್ಷಣಗಳಲಿ ಧರ್ಮಸಂಕಟಗಳಲಿ ಜೀವನ ಸಮರದಲಿ ನಿರ್ವಾಣ ದೀಕ್ಷೆಯಲಿ , ನಿರ್ಯಾಣ  ಘಟ್ಟದಲ್ಲಿ ನಿರ್ಮಿತ್ರನಾಗಿರಲು  ಕಲಿ  –  ಮಂಕುತಿಮ್ಮ ಇಂತಹ ಮಹಾಶಕ್ತಿ ಲೋಕೋಕ್ತಿಗಳಿಗಿರುವುದರಿಂದಲೇ ಸಹೃದಯಿಗಳ ಮನಗಳಲ್ಲಿ ನೆಲೆ ನಿಂತು ಆತ್ಮವಿಶ್ವಾಸ ತುಂಬಿ  ಸಾಧನೆಗೆ  ಮೌನವಾಗಿ ಪೂರಕವಾಗಿವೆ. ಇನ್ನು ಋಣಾತ್ಮಕ ಭಾವ ಸ್ಪುರಿಸುವ ಉಲ್ಲೇಖಗಳನ್ನು ಮರೆಯುವಂತಿಲ್ಲ. ವಿಷಾದ ಭಾವ ಆವರಿಸಿದ ಮನಕ್ಕೆ  ಕ್ಷಣ ಕಾಲವಾದರೂ ಸಮಾಧಾನ ಸಿಗಬಹುದು. ಖಿನ್ನತೆ ತುಂಬಿದ ಮನಗಳಿಗೆ ಹಿತವಾಗಿಯೆ ಕಂಡರೂ ಅವರನ್ನು ಮತ್ತಷ್ಟು ಖಿನ್ನತೆಗೆದೂಡುವಂಥ ಸಾಧ್ಯತೆಗಳನ್ನು ತಳ್ಳುವ ಹಾಗಿಲ್ಲ. ಸಮಸ್ಯೆಗಳು ಎದುರಾದಾಗ ಪಲಾಯನವಾದಿ ಮಾರ್ಗವನ್ನನುಸರಿಸದೆ ಅವುಗಳನ್ನು ಎದುರಿಸಿ ನಿಲ್ಲುವ ಆತ್ಮವಿಶ್ವಾಸವು ನಮ್ಮದಾಗಬೇಕು. ಈ ದಿಸೆಯಲ್ಲಿ ನಿಂತು ಯೋಚಿಸಿದಾಗ ಜೀವನೋತ್ಸಾಹ ತುಂಬುವ ಧನಾತ್ಮಕ ಸೂಕ್ತಿಗಳು ಅಥವಾ ಚಿಂತನೆಗಳು ಅತ್ಯವಶ್ಯಕ.ಇಂತಹ ಚಿಂತನೆಗಳು ನಮ್ಮನ್ನು ದ್ವೇಷದಿಂದ ವಿಮುಖರನ್ನಾಗಿಸಿ ಸಹಿಷ್ಣುತಾ ಮನೋಭಾವ ಬೆಳೆಸುತ್ತ ಸ್ವಾರ್ಥವೆನ್ನುವುದು ಕಡಿಮೆಯಾಗಿ ನಮ್ಮನ್ನು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಹೃದಯಿ ಮನದ ದೃಷ್ಟಿಕೋನವನ್ನು ಬೆಳೆಸುತ್ತವೆ. ಅಂತರ್ಮುಖಿ ವ್ಯಕ್ತಿಗಳಾಗಿ ಆತ್ಮಸಾಂಗತ್ಯ ಹೊಂದುತ್ತ ನಮ್ಮನ್ನು ನಾವು ಸ್ಟವಿಮರ್ಶೆ ಮಾಡಿಕೊಂಡಾಗ ಮಾತ್ರವೇ ನಮ್ಮೊಳಗಿನ  ಅರಿವಿನ ಪ್ರಣತಿ ಬೆಳಗುತ್ತದೆ. 

ಸುಭಾಷಿತಗಳ ಸ್ವಾರಸ್ಯ Read Post »

ಇತರೆ

ಅಭಿನಂದನೆಗಳು

ಅಭಿನಂದನೆಗಳು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಸರ್ಕಾರಿ ಪ್ರೌಢಶಾಲೆ ಯಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ನಿರ್ಮಲಾ ಶೆಟ್ಟರ ನಮ್ಮ ಸಂಗಾತಿ ಪತ್ರಿಕೆಯ ಬರಹಗಾರರೂ ಆಗಿದ್ದಾರೆ.ಅವರ 2020 ರಲ್ಲಿ ಪ್ರಕಟವಾದ ಸರಹದ್ದುಗಳಿಲ್ಲದ ಭೂಮಿಯ ಕನಸು ಕೃತಿಗೆ ಈ ಮೊದಲೇ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಮುದ್ದಣ ರತ್ನಾಕರವರ್ಣಿ ಅನಾಮಿಕ ದತ್ತಿ ಬಹುಮಾನ ಸಂದಿರುತ್ತದೆ. ಈಗ ಸೇಡಂನಿಂದ ಕೊಡಮಾಡುವ ಅಮ್ಮ ಪ್ರಶಸ್ತಿಯು ಲಭಿಸಿದ್ದು, ಇದೇ ತಿಂಗಳು 26ನೇ ದಿನಾಂಕ ದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಈ ಸಂದರ್ಭದಲ್ಲಿ ಸಂಗಾತಿ ಬಳಗದಿಂದ ಅವರಿಗೆ ಶುಭ ಹಾರೈಕೆಗಳು.

ಅಭಿನಂದನೆಗಳು Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-42 ಏಕನಾಥ ಗುರೂಜಿಯವರ ಪ್ರಖ್ಯಾತಿ ಬಹಳ ಬೇಗನೇ ತಮ್ಮೂರನ್ನು ದಾಟಿ ದೂರ ದೂರದ ಊರು, ನಗರಗಳಿಗೂ ಹಬ್ಬಿತು. ಹಾಗಾಗಿ ಮುಂದೆ ಈಶ್ವರಪುರದ ಸುತ್ತಮುತ್ತದ ಕೆಲವು ಜಿಲ್ಲೆಗಳ ಹಲವಾರು ಬೃಹತ್ ನಾಗಬನಗಳು ಇವರಿಂದಲೇ ಜೀರ್ಣೋದ್ಧಾರಗೊಳ್ಳಲು ಕ್ಷಣಗಣನೆಯಲ್ಲಿದ್ದವು. ಅವನ್ನೆಲ್ಲ ಆದಷ್ಟು ಬೇಗ ಮುಗಿಸಿಬಿಡಬೇಕೆಂಬ ಆತುರ ಅವರಲ್ಲಿತ್ತು. ಆದರೆ ತಮ್ಮ ಯಶಸ್ಸನ್ನು ಮೆಚ್ಚಿ ಆಗಾಗ ಹರಿದು ಬರುವ ಅಭಿನಂದನೆ ಮತ್ತು ಪ್ರಶಸ್ತಿ ಪುರಸ್ಕಾರಗಳಂಥ ಪ್ರತಿಷ್ಠಿತ ಸಮಾರಂಭಗಳು ಹಾಗೂ ಅವುಗಳ ನಡುವೆ ತಮ್ಮ ಜೀವನೋಪಾಯದ ಧಾರ್ಮಿಕ ಚಟುವಟಿಕೆಗಳೆಲ್ಲವೂ ಕೂಡಿ ಆ ಜೀರ್ಣೋದ್ಧಾರ ಕಾರ್ಯಗಳನ್ನು ತಡೆಹಿಡಿಯುತ್ತಿದ್ದವು. ಇವೆಲ್ಲದರ ನಡುವೆ ಅವರು ಭಾಗೀವನದ ಸಮೀಪದ ದೇವರಕಾಡಿನ ಮೇಲೆ ಇಟ್ಟುಕೊಂಡಿದ್ದ ಮಹತ್ವಾಕಾಂಕ್ಷೆಯ ಕೆಲಸವೊಂದು ಹಗಲಿರುಳು ಅವರನ್ನು ಭಾದಿಸುತ್ತಿತ್ತು. ಆದ್ದರಿಂದ ಅದರ ಕುರಿತೂ ಅವರು ಸುಮ್ಮನೆ ಕುಳಿತಿರಲಿಲ್ಲ. ಸಮಯ ಸಿಕ್ಕಾಗಲೆಲ್ಲ ಆ ಕಾರ್ಯದಲ್ಲಿ ತೊಡಗುತ್ತಿದ್ದರು. ಆ ಹಾಡಿ ಮತ್ತದರ ಸುತ್ತಮುತ್ತಲಿನ ಪ್ರದೇಶವು ಬಹಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಶೀನಯ್ಯ ಎಂಬವನ ಕುಟುಂಬಕ್ಕೆ ಸೇರಿದ್ದೆಂದೂ ಅವರಲ್ಲಿ ಬಹುತೇಕರು ಎಲ್ಲೆಲ್ಲೋ ಹಂಚಿ ಹೋಗಿದ್ದು ಸದ್ಯ ಆ ಅರಣ್ಯದ ಹತ್ತಿರದ ಹಳೆಯ ಮನೆಯಲ್ಲಿ ಅವನ ಕುಟುಂಬದ ಇಬ್ಬರು ಹಿರಿಯರು ಮಾತ್ರವೇ ಉಳಿದಿರುವರೆಂದೂ ಆ ಮನೆತನದ ನಾಗ, ಪರಿವಾರ ದೈವಗಳು ಅನಾದಿ ಕಾಲದಿಂದಲೂ ಆ ಮನೆಯ ಸಣ್ಣ ಕೋಣೆಯಲ್ಲಿ ಪೂಜೆಗೊಳ್ಳುತ್ತಿವೆಯೆಂದೂ ರಾಘವನ ಗುಪ್ತ ಅಧ್ಯಯನದಿಂದ ಗುರೂಜಿಯವರಿಗೆ ತಿಳಿದು ಬಂದಿತ್ತು. ಹಾಗಾಗಿ ಆ ಬೃಹತ್ತ್ ಅರಣ್ಯವನ್ನು ತೆರವುಗೊಳಿಸಿ ಅಲ್ಲಿ ಭವ್ಯವಾದ ನಾಗನ ದೇವಸ್ಥಾನವೊಂದನ್ನು ನಿರ್ಮಿಸಬೇಕು ಮತ್ತದರ ಸಮೀಪದ ಮದಗವನ್ನು ನಾಗ ದೇವಳಕ್ಕೆ ಸಂಬಂಧಿಸಿದ ಸುಂದರ ಪುಷ್ಕರಣಿಯನ್ನಾಗಿ ಮಾರ್ಪಡಿಸಿ ಆ ಕ್ಷೇತ್ರವನ್ನು ಬಹಳ ಕಾರಣಿಕದ ಪುಣ್ಯಭೂಮಿಯನ್ನಾಗಿ ಮಾಡಬೇಕೆಂಬ ವಿಶೇಷ ಯೋಜನೆಯು ಗುರೂಜಿಯವರೊಳಗೆ ನಿರಂತರ ಮಥಿಸುತ್ತಲೇ ಇತ್ತು.    ಆ ದೇವರ ಕಾಡಿನಲ್ಲಿ ತಾವು ಸ್ಥಾಪಿಸಬೇಕಾದ ನಾಗ ದೇವಸ್ಥಾನದ ಕುರಿತ ತಮ್ಮ ಆಕಾಂಕ್ಷೆಯನ್ನು ಸಿದ್ಧಿಸಿಕೊಳ್ಳಬೇಕಾದ ಮಾರ್ಗೊಪಾಯದ ಚಿತ್ರಣವನ್ನೂ ಹಾಗೂ ಅದಕ್ಕೆ ಬೇಕಾದ ಸೂಕ್ತ ನಕ್ಷೆಯನ್ನೂ ತಮ್ಮೊಳಗೆಯೇ ತಯಾರಿಸುತ್ತಿದ್ದ ಗುರೂಜಿಯವರು ಆವತ್ತೊಂದು ಶುಭಗಳಿಗೆಯಲ್ಲಿ ಆಪ್ತ ಸಹಾಯಕ ರಾಘವನನ್ನು ಕರೆದು ತಮ್ಮ ಯೋಜನೆಯನ್ನು ಅವನಿಗೆ ಕೂಲಂಕಷವಾಗಿ ವಿವರಿಸಿದರು. ಆದರೆ ಅದನ್ನು ಕೇಳಿದ ಅವನು ವಿಪರೀತ ಭಯಕ್ಕೆ ಬಿದ್ದು ಆ ಕೆಲಸಕ್ಕೆ ಸಹಕಾರ ನೀಡಲು ಹಿಂಜರಿದುಬಿಟ್ಟ. ಅದರಿಂದ ಗುರೂಜಿಯವರು ಸ್ವಲ್ಪ ನಿರಾಶರಾದರು. ಆದರೆ ಅವರು ಬೆನ್ನು ಹಿಡಿದರೆ ಬೇತಾಳನಂಥ ಸ್ವಭಾವದವರು. ಆದ್ದರಿಂದ ಅವನ ಭಯವನ್ನು ಕಂಡವರು ಮೆಲುವಾಗಿ ನಕ್ಕು, ‘ನೋಡು ರಾಘವಾ, ಇದು ನಮ್ಮ ಸ್ವಾರ್ಥಕ್ಕೋ ಅಥವಾ ಹಣದ ಲಾಭಕ್ಕೋ  ಹಮ್ಮಿಕೊಂಡಿರುವ ಕಾರ್ಯವೆಂದು ಯಾವತ್ತಿಗೂ ಭಾವಿಸಬೇಡ. ಇದೇನಿದ್ದರೂ ನಮ್ಮ ಊರು ಮಾತ್ರವಲ್ಲದೇ ಇಡೀ ಲೋಕ ಕಲ್ಯಾಣಾರ್ಥವಾಗಿ ಬಹಳ ಹಿಂದೆಯೇ ನಾವು ಸಂಕಲ್ಪಿಸಿಕೊಂಡಿರುವ ಪುಣ್ಯಕಾರ್ಯವಿದು! ಅಷ್ಟಲ್ಲದೇ ಈ ದೈವೀ ಕಾರ್ಯವು ನಿನ್ನ ಹೊರತು ಬೇರೆ ಯಾರಿಂದಲೂ ಸಾಧ್ಯವಾಗುವಂಥದ್ದಲ್ಲ! ಯಾಕೆಂದರೆ ಇದಕ್ಕೆ ಅದರದ್ದೇ ಆದ ಶುದ್ಧ ನೇಮನಿಷ್ಠೆ ಮತ್ತು ಗಟ್ಟಿ ಆತ್ಮಬಲವಿರುವವರೇ ಬೇಕಾಗುತ್ತದೆ. ಅವೆಲ್ಲವೂ ನಿನ್ನಲ್ಲಿವೆ. ಆದ್ದರಿಂದಲೇ ಈ ಕೆಲಸಕ್ಕೆ ನಿನ್ನನ್ನು ಆರಿಸಿರುವುದು. ಇದನ್ನು ನೀನು ಭಕ್ತಿಯಿಂದ ಕೈಗೊಳ್ಳುತ್ತಿಯಾದರೆ ನಿನಗೆ ಯಾವ ಕಂಟಕವೂ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಅಷ್ಟು ಮಾತ್ರವಲ್ಲದೇ ನೀನಿದನ್ನು ಸರಿಯಾಗಿ ನಡೆಸಿಕೊಟ್ಟೆಯೆಂದರೆ ಅದೇ ನಾಗನ ಹೆಸರಿನಲ್ಲಿ ನಿನಗೊಂದು ಐದು ಸೆಂಟ್ಸ್ ಒಳ್ಳೆಯ ಜಾಗವನ್ನೂ ಎರಡು ಸಾವಿರ ಚದರಡಿಯ ಚಂದದ ತಾರಸಿ ಮನೆಯನ್ನೂ ಉಡುಗೊರೆಯಾಗಿ ನೀಡುವ ಆಸೆ ನಮಗಿದೆ. ಯಾವುದಕ್ಕೂ ಯೋಚಿಸಿ ನೋಡು!’ ಎಂದರು ಗಂಭೀರವಾಗಿ. ಗುರೂಜಿಯವರಿಂದ ಉದುರುತ್ತಿದ್ದ ದುಬಾರಿ ನುಡಿಮುತ್ತುಗಳನ್ನು ಆಸ್ಥೆಯಿಂದ ಹೆಕ್ಕಿಕೊಳ್ಳುತ್ತಿದ್ದ ರಾಘವನಿಗೆ ನಾಗನ ಹೆಸರಿನಲ್ಲಿ ಅವರು ನೀಡುತ್ತೇವೆಂದ ಉಡುಗೊರೆಯು ತಟ್ಟನೆ ಅವನ ಭಯವನ್ನೂ ಹಿಂಜರಿಕೆಯನ್ನೂ ಹೊಡೆದೋಡಿಸಿಬಿಟ್ಟಿತು. ‘ಆಯ್ತು ಗುರೂಜಿ. ನನ್ನಿಂದ ನಾಲ್ಕು ಜನರಿಗೆ ಒಳ್ಳೆಯದಾಗುವುದಾದರೆ ತಮಗಾಗಿ ಯಾವ ಕೆಲಸ ಮಾಡಲೂ ಸಿದ್ಧ! ಎಲ್ಲವೂ ತಮ್ಮ ಮಾರ್ಗದರ್ಶನದಿಂದಲೇ ನಡೆದರೆ ಸಾಕು!’ ಎಂದು ಎದೆ ಸೆಟೆಸಿ ಒಪ್ಪಿಗೆ ಸೂಚಿಸಿದ. ಅಷ್ಟು ಕೇಳಿದ ಗುರೂಜಿಯವರ ತುಟಿಯಂಚಿನಲ್ಲಿ ವ್ಯಂಗ್ಯ ನಗುವೊಂದು ಮಿಂಚಿ ಮರೆಯಾಯಿತು. ‘ಹೌದು ರಾಘವಾ ಸರಿಯಾದ ಮಾತು. ನಾವು ಯಾವಾಗಲೂ ಹಾಗೆಯೇ ಯೋಚಿಸುತ್ತ ಜೀವನದಲ್ಲಿ ಮೇಲೆ ಬರುವುದು ಹೇಗೆಂಬುದನ್ನು ಕಲಿಯಬೇಕು. ನೀನು ನಮ್ಮೊಂದಿಗೆ ಇರುವವರೆಗೆ ನಿನ್ನ ರಕ್ಷಣೆಯ ಜವಾಬ್ದಾರಿಯೂ ನಮ್ಮದು!’ ಎಂದು ಗುರೂಜಿ ಅವನಲ್ಲಿ ಇನ್ನಷ್ಟು ಧೈರ್ಯ ತುಂಬಿದರು. ಹಾಗಾಗಿ ಅವರು ಗೊತ್ತುಪಡಿಸಿದ ಶುಭದಿನದಂದು ರಾಘವ ತನ್ನ ಕೆಲಸವನ್ನಾರಂಭಿಸಿದ. ಒಂದು ನರಪಿಳ್ಳೆಗೂ ಸುಳಿವು ಸಿಗದಷ್ಟು ಜಾಗ್ರತೆಯಿಂದ ಆ ದೇವರಕಾಡನ್ನು ಕೆಲವು ಬಾರಿ ಪ್ರವೇಶಿಸಿದವನು, ಅದರೊಳಗೆ ನಾಗಬನ ಮತ್ತು ಭೂತಸ್ಥಾನಗಳು ಇರುವ ಕುರುಹುಗಳನ್ನು ಬಹಳವೇ ಹುಡುಕಾಡಿದ. ಆದರೆ ಆ ಅರಣ್ಯದೊಳಗೆ ಅವನಿಗೆ ಅಂಥ ಯಾವ ಗುರುತುಗಳೂ ಕಾಣಿಸಲಿಲ್ಲ. ಅದರಿಂದ ತೀವ್ರ ನಿರಾಶನಾದ. ತನ್ನ ಇಂಥ ಶ್ರಮಕ್ಕೆ ಗುರೂಜಿಯವರಿಂದ ಕಡಿಮೆಯೆಂದರೂ ನಲವತ್ತು ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತದ ಬಹುಮಾನವು ಸಿಗುವುದರಲ್ಲಿತ್ತು. ಆದರೂ ತನ್ನ ದುರಾದೃಷ್ಟಕ್ಕೆ ಕೈತಪ್ಪಿತಲ್ಲ…! ಎಂದೂ ಕೊರಗಿದ. ಹಾಗಾಗಿ ಅವನಿಗೆ ನಾಗದೇವನ ಮೇಲೆ ವಿಪರೀತ ಕೋಪ ಬಂತು.  ‘ಛೇ! ಛೇ! ಇದೇನಿದು ನಾಗದೇವಾ…! ನಿನಗೊಂದು ಭದ್ರವಾದ ನೆಲೆಯನ್ನು ಕಲ್ಪಿಸಲಿಕ್ಕಾಗಿಯೇ ನಾನೂ ಗುರೂಜಿಯವರೂ ಕೂಡಿ ಒದ್ದಾಡುತ್ತಿರುವುದು ನಿನಗೂ ಕಾಣಿಸುತ್ತಿಲ್ಲವಾ? ಹೀಗಿರುವಾಗ ನಿನ್ನ ಉದ್ಧಾರಕ್ಕೆ ನೀನೇ ಮನಸ್ಸು ಮಾಡದಿದ್ದರೆ ಹೇಗೆ ಹೇಳು…!’ ಎಂದು ಅಸಹನೆಯಿಂದ ಗೊಣಗುತ್ತ ಹಿಂದಿರುಗಿದ.    ತನ್ನ ಪತ್ತೇಧಾರಿ ಕೆಲಸವು ವ್ಯರ್ಥವಾದುದನ್ನು ಗುರೂಜಿಯವರಿಗೆ ಬೇಸರದಿಂದ ವಿವರಿಸಿದ. ಆದರೆ ಆ ಸುದ್ದಿ ಕೇಳಿದ ಗುರೂಜಿಯವರಿಗೆ ಆಘಾತವಾಯಿತು. ‘ಅಯ್ಯಯ್ಯೋ… ನಾಗದೇವಾ! ಅಂಥದ್ದೊಂದು ಪುರಾತನವಾದ ಹಾಡಿಯೊಳಗೆ ನಾಗ, ದೈವಸ್ಥಾನಗಳು ಇರಲೇಬೇಕೆಂದು ತಾವು ಭಾವಿಸಿದ್ದು ಹೇಗೆ ಸುಳ್ಳಾಗಿಬಿಟ್ಟಿತು ಪರಮಾತ್ಮಾ…?’ ಎಂದು ಯೋಚಿಸಿ ತೀವ್ರ ಕಳವಳಪಟ್ಟರು. ಆಗ ಅವರನ್ನು ಇನ್ನೊಂದು ಸಂಗತಿಯೂ ತಲೆ ತಿನ್ನತೊಡಗಿತು. ದಿನನಿತ್ಯ ಒಂದಲ್ಲ ಒಂದು ವಿಧದ ತರಲೆ, ತಾಪತ್ರಯಗಳನ್ನು ತಮ್ಮಲ್ಲಿಗೆ ಹೊತ್ತು ತರುತ್ತಿರುವಂಥ ಬುಕ್ಕಿಗುಡ್ಡೆಯ ನಿವಾಸಿಗಳಿಗೂ ಮತ್ತು ಮುಖ್ಯವಾಗಿ ಭಾಗೀವನದ ಸುಮಿತ್ರಮ್ಮ ಹಾಗೂ ಶಂಕರನಿಗೂ ಅದೊಂದು ಪುರಾತನವಾದ ಕಾರಣಿಕದ ನಾಗಬನವೆಂದೂ, ಈಗ ಅಲ್ಲಿನ ದೈವದೇವರುಗಳೆಲ್ಲ ನೀರು ನೆರಳಿಲ್ಲದೆ ಹತಾಶೆಗೊಂಡು ಗ್ರಾಮದ ಮೇಲೆ ಕುಪಿತರಾಗಿದ್ದಾರೆಂದೂ ಅದರ ಸೂಚನೆಯೇ ಆ ವಠಾರದಲ್ಲಿ ನಾಗರಹಾವು ಕಾಣಿಸಿಕೊಳ್ಳುತ್ತಿರುವುದೆಂದೂ ಮತ್ತು ಆದಷ್ಟು ಬೇಗ ಅದನ್ನು ಜೀರ್ಣೋದ್ಧಾರ ಮಾಡಲೇಬೇಕೆಂದೂ ಸ್ವತಃ ನಾಗದೇವನೇ ಆಜ್ಞೆ ಮಾಡಿದ್ದಾನೆ!’ ಎಂದೂ ತಾವು ಅದೆಷ್ಟು ಬಾರಿ ತಮ್ಮ ಹೊಸ ಜ್ಯೋತಿಷ್ಯಕ್ರಮದ ಪ್ರಕಾರ ಹೇಳುತ್ತ ಬಂದಿಲ್ಲ!    ಅಯ್ಯೋ ದೇವಾ…! ಇನ್ನೇನು ಮಾಡುವುದಪ್ಪಾ…? ಜನರಿಗೆ ತಮ್ಮ ಮೇಲೆ ನಂಬಿಕೆ, ಗೌರವ ಹೊರಟು ಹೋಯಿತೆಂದರೆ ಮುಂದೆ ತಮ್ಮ ಜೀವನದ ಗತಿಯೇನು? ಎಂದುಕೊಂಡ ಅವರು ತೀವ್ರ ಚಿಂತೆಗೊಳಗಾದರು. ಆದರೂ ತೋರಿಸಿಕೊಳ್ಳದೆ, ‘ಸರಿ, ಸರಿ. ಪರ್ವಾಗಿಲ್ಲ ರಾಘವ ಆ ಕುರಿತು ಇನ್ನೊಮ್ಮೆ ಮಾತಾಡುವ. ನಮ್ಮಲ್ಲಿ ಆ ಇಚ್ಛೆಯನ್ನು ಹುಟ್ಟಿಸಿದ ನಾಗನೇ ಏನಾದರೊಂದು ದಾರಿ ತೋರಿಸುತ್ತಾನೆ. ಈಗ ನೀನು ಹೋಗು…!’ ಎಂದು ತಾಳ್ಮೆಯಿಂದ ಹೇಳಿ ಅವನನ್ನು ಕಳುಹಿಸಿದರು. ಆದರೆ ಆಮೇಲೆ ಮತ್ತೆ ಅದೇ ಚಿಂತೆಗೆ ಬಿದ್ದರು. ಕೊನೆಗೂ ಅವರಿಗೊಂದು ಉಪಾಯ ಹೊಳೆಯಿತು. ಮೊದಲಿಗೆ ಅದನ್ನು ಕಾರ್ಯಗತಗೊಳಿಸಲು ಭಯಪಟ್ಟರು. ಬಳಿಕ ಗಟ್ಟಿ ಮನಸ್ಸು ಮಾಡಿದರು. ‘ಹೌದು. ತಮ್ಮ ಬಹು ಅಪೇಕ್ಷಿತವಾದ ಈ ಬೃಹತ್ತ್ ಯೋಜನೆಯೊಂದು ನೆರವೇರಬೇಕಾದರೆ ಅದೇ ಸರಿಯಾದ ಮಾರ್ಗ. ಅಷ್ಟಕ್ಕೂ ನಾವೇನು ಜನರ ಮನೆ ಮಠ ಒಡೆದು ದೇವರಕ್ಷೇತ್ರ ನಿರ್ಮಿಸಲು ಹೊರಟಿದ್ದೇವಾ, ಇಲ್ಲವಲ್ಲಾ! ಭೂಮಿಗೆ ಭಾರವಾಗಿರುವ ಒಂದಷ್ಟು ಕ್ರೂರಮೃಗಗಳೂ, ವಿಷಜಂತುಗಳೂ ಮತ್ತು ಕೆಲಸಕ್ಕೆ ಬಾರದ ಕ್ರಿಮಿಕೀಟ, ಹಕ್ಕಿಪಕ್ಷಿಗಳೂ ತುಂಬಿ ಜನರಿಗೆ ಆಗಾಗ ಹಾನಿಯಾಗುತ್ತಿರುವಂಥ ಆ ಕಗ್ಗಾಡನ್ನು ದೇವರ ಹೆಸರಿನಲ್ಲಿ ಕಡಿದು ಜೀರ್ಣೋದ್ಧಾರ ಮಾಡುವುದರಿಂದ ನಾಡಿಗೆ ಒಳ್ಳೆಯದಾಗುತ್ತದೆಯೇ ಹೊರತು ಕೆಟ್ಟದ್ದಾಗಲಿಕ್ಕಿದಿಲ್ಲ! ಆದ್ದರಿಂದ ತಾವು ಅಂದುಕೊಂಡ ಕಾರ್ಯವನ್ನು ಹೇಗಾದರೂ ಸಾಧಿಸಿ ಜನರು ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲೇಬೇಕು ಎಂದು ನಿರ್ಧರಿಸಿದರು.    ಆವತ್ತು ಅಮಾವಾಸ್ಯೆಯ ದಿನ. ಅಂದು ದಟ್ಟ ಕಾರ್ಗತ್ತಲ ನಡುರಾತ್ರಿಯಲ್ಲಿ ರಾಘವನನ್ನು ನಿಶ್ಶಬ್ದವಾಗಿ ಕೂರಿಸಿಕೊಂಡ ಗುರೂಜಿಯವರ ಕಾರು ಪೋರ್ಟಿಕೋದಿಂದ ಹೊರಬಿತ್ತು. ಸ್ವಲ್ಪಹೊತ್ತಿನಲ್ಲಿ ಹೂಮ್ಮಣ್ಣು ಗ್ರಾಮವನ್ನು ತಲುಪಿತು. ಅಲ್ಲಿ ಒಂದು ಕಡೆ ಸುಮಾರು ಮೂರು ಶತಮಾನಗಳಷ್ಟು ಪ್ರಾಚೀನವಾದ ದೊಡ್ಡ ನಾಗಬನವೊಂದು ಕೆಲವು ಕಾಲದ ಹಿಂದೆ ಗುರೂಜಿಯವರ ಸುಪರ್ದಿಯಲ್ಲಿಯೇ ಜೀರ್ಣೋದ್ಧಾರಗೊಂಡಿತ್ತು. ಆದರೆ ಬನಕ್ಕೆ ಸಂಬಂಧಪಟ್ಟವರು ಅಲ್ಲಿನ ಹಳೆಯ ನಾಗನ ಕಲ್ಲುಗಳನ್ನು ಇನ್ನೂ ವಿಸರ್ಜನೆ ಮಾಡಿರಲಿಲ್ಲ. ಈಗ ಮಬ್ಬು ಬೆಳಕಿನ ಬ್ಯಾಟರಿಯನ್ನು ಹಿಡಿದುಕೊಂಡ ಗುರೂಜಿಯವರು ನಿಧಾನವಾಗಿ ಆ ಬನವನ್ನು ಹೊಕ್ಕರು. ಅವರ ಹಿಂದೆ ರಾಘವನೂ ನಡುಗುತ್ತ ಹೆಜ್ಜೆ ಹಾಕಿದ. ಗುರೂಜಿಯವರು ತಮಗೆ ಬೇಕಾದ ಕೆಲವು ನಾಗನ ಕಲ್ಲುಗಳನ್ನು ಬೇಗಬೇಗನೇ ಆಯ್ದು ರಾಘವನಿಂದ ಕಾರಿನ ಡಿಕ್ಕಿಗೆ ತುರುಕಿಸಿದರು. ಬಳಿಕ ಕೂಡಲೇ ಅವರ ಕಾರು ಮಿಂಚಿನ ವೇಗದಲ್ಲಿ ಅಲ್ಲಿಂದ ಮಾಯವಾಗಿ ಭಾಗೀವನದ ಸಮೀಪದ ದೇವರಕಾಡಿನೆದುರು ಪ್ರತ್ಯಕ್ಷವಾಯಿತು. ಅಲ್ಲೊಂದು ದೈತ್ಯ ರೆಂಜೆಮರದ ಬುಡದಲ್ಲಿ ರಾಘವ ಹಿಂದಿನ ದಿನ ರಾತ್ರಿಯೇ ತೋಡಿಟ್ಟಿದ್ದ ಹೊಂಡದೊಳಗೆ ಆ ಕಲ್ಲುಗಳನ್ನು ಸಾಲಾಗಿ ಇಟ್ಟು ಯಾರಿಗೂ ಚೂರೂ ಸುಳಿವು ಸಿಗದಂತೆ ಮಣ್ಣು ಮುಚ್ಚಿ ಅದರ ಮೇಲೆ ತರಗೆಲೆಗಳನ್ನು ಹರಡಿ ಮರೆಮಾಚಿದವರು ಕ್ಷಣದಲ್ಲಿ ಮನೆಯನ್ನು ಸೇರಿದರು.    ಈ ಅದ್ಭುತ ಕಾರ್ಯಸಾಧನೆ ನಡೆದ ಆರು ತಿಂಗಳ ಬಳಿಕ ಗುರೂಜಿಯವರು ಆ ದೇವರಕಾಡಿನಲ್ಲಿ ನಾಗನ ದೇವಸ್ಥಾನ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲು ಮುಂದಾದರು. ಜಾಗದ ವಾರಸುದಾರರಾದ ಮುದಿ ಗಂಡಹೆಂಡತಿಯನ್ನೂ ಅವರ ದೂರದೂರದ ಕೆಲವು ಸಂಬಂಧಿಕರನ್ನೂ ರಾಘವನ ಮೂಲಕ ಸಂಪರ್ಕಿಸಿ ಅಲ್ಲಿನ ದೈವದೇವರುಗಳ ಕಾರಣಿಕವನ್ನು ಕಣ್ಣಾರೆ ಕಂಡಂತೆ ಅವರಿಗೆ ವಿವರಿಸಿದರು. ಅದೇ ಕಾರಣಕ್ಕೆ ಭಾಗೀವನದೊಳಗೂ ನಾಗಧೂತನು ಸುತ್ತಾಡುತ್ತಿರುವ ಉದಾಹರಣೆಯನ್ನೂ ನೀಡಿ ಅವರಲ್ಲೂ ದೋಷದ ಭೀತಿಯನ್ನು ಸೃಷ್ಟಿಸಿ ಸಜ್ಜುಗೊಳಿಸಿದರು. ಒಂದು ಶುಭದಿನದಂದು ಊರ ಮುಖ್ಯಸ್ಥರನ್ನೂ ಕಾಡಿನ ವಾರಸುದಾರರನ್ನೂ ಮತ್ತು ಭಾಗಿವನದವರನ್ನೂ ಆ ಕಾಡಿನಲ್ಲಿ ಬಂದು ಸೇರುವಂತೆ ಆಜ್ಞಾಪಿಸಿದರು. ಆ ದಿನವೂ ಬಂದಿತು. ಅಂದು ಸೂರ್ಯೋದಯವಾಗಿ ಒಂದು ಗಳಿಗೆಯ ಬಳಿಕ ಗುರೂಜಿಯವರು ಸರ್ವಸಮಸ್ತರ ಸಮ್ಮುಖದಲ್ಲಿ ದೇವರಕಾಡನ್ನು ಪ್ರವೇಶಿಸಲು ಹೊರಟು ಬಂದವರು ಕಾರಿನಿಂದಿಳಿದು ಕಾಡಿನತ್ತ ಹೆಜ್ಜೆ ಹಾಕಿದರು. ಆಗ ಅಲ್ಲಿ ವಿಲಕ್ಷಣ ವಿದ್ಯಾಮಾನವೊಂದು ಸಂಭವಿಸತೊಡಗಿತು.     ಆ ಅರಣ್ಯದ ಸಮೃದ್ಧಿಯಲ್ಲೂ ಮತ್ತು ಸುತ್ತಲಿನ ಜನಜೀವನದ ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರವಹಿಸಿರುವ ಕಟ್ಟಿರುವೆಗಳ ದೊಡ್ಡ ಕುಟುಂಬವೊಂದು ಮಿತಿಮೀರಿ ಬೆಳೆದ ತಮ್ಮ ಸಂಸಾರ ಬಾಹುಳ್ಯದಿಂದಾಗಿ ಒಂದೇ ಗೂಡಿನೊಳಗೆ ವಾಸಿಸಲಾಗದೆ ಹೊಸ ಪ್ರದೇಶಗಳಿಗೆ ವಲಸೆ ಹೋಗಲು ನಿರ್ಧರಿಸಿದ್ದವು. ಆದ್ದರಿಂದ ಅವುಗಳು ಅಂದು ಬೆಳಗ್ಗಿನಿಂದಲೇ ಶಿಸ್ತಿನ ಸಿಪಾಯಿಗಳಂತೆ ಕವಲು ಕವಲುಗಳಾಗಿ ಪ್ರಯಾಣ ಬೆಳೆಸಿದ್ದವು. ಅಲ್ಲಿನ ಹಸಿರು ಸಂರಕ್ಷಣೆಯಲ್ಲಿ ತೊಡಗಿದ್ದ ಗೆದ್ದಲ ಕುಟುಂಬವೂ ತಮ್ಮ ವಂಶೋತ್ಪತಿಗಾಗಿ ಹೊಸ ಹುತ್ತಗಳನ್ನು ಕಟ್ಟುವುದರಲ್ಲಿ ನಿರತವಾಗಿದ್ದವು. ಆ ಅಡವಿಯ ಅಸಂಖ್ಯಾತ ಕ್ರಿಮಿಕೀಟಗಳು ತಮ್ಮ ಜೀವನ ನಿರ್ವಹಣೆಯ ಮೂಲಕವೇ ವಿವಿಧ ಬಗೆಯಿಂದ ಹಸಿರು ಪರಿಸರದ ಸ್ವಚ್ಛತೆಯಲ್ಲಿತೊಡಗಿದ್ದವು. ಅನೇಕ ಜಾತಿ ಮತ್ತು ಪ್ರಭೇದಗಳ ಹಾವುಗಳು ಇಲಿ, ಹೆಗ್ಗಣ, ಕಪ್ಪೆ, ಹಲ್ಲಿ, ಅರಣೆ, ಓತಿಕ್ಯಾತ ಮತ್ತು ಉಡಗಳಂಥ ಜೀವರಾಶಿಗಳ ಚಟುವಟಿಕೆಯೂ ಅವಕ್ಕೆ ಸಂಬಂಧಿಸಿದ ಆಹಾರದ ಜೀವಿಗಳ ಕೋಲಾಹಲ, ಕಲರವಗಳೂ ಕಾಡಿನೊಳಗಿನ ಜೀವಂತಿಕೆಯನ್ನು ಸಾರುತ್ತಿದ್ದವು. ಗೊರವಂಕ, ಮಂಗಟ್ಟೆ, ನವಿಲು, ಜಿಂಕೆ, ಕಾಡುಕೋಣ, ಚಿಟ್ಟೆಹುಲಿ, ಹಂದಿ, ಬರಿಂಕಗಳಂಥ ವನ್ಯಪ್ರಾಣಿಗಳ ಕೆನೆತ, ನೆಗೆತ ಗುಟುರು ಗರ್ಜನೆಗಳು ಅರಣ್ಯದ ಮೌನಕ್ಕೆ ಹೊಸ ಮೆರುಗನ್ನು ನೀಡಿ ಮಾರ್ದನಿಸುತ್ತ ಆ ಕಾಡು ಮನೋಹರವಾಗಿ ನಳನಳಿಸುತ್ತಿತ್ತು. ಆದರೆ ಕೆಲವೇ ಕ್ಷಣದಲ್ಲಿ ಅಲ್ಲೊಂದು ಕೆಟ್ಟ ಅಪಶಕುನದ ಛಾಯೆಯೂ ಉದ್ಭವಿಸಿಬಿಟ್ಟಿತು.

Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಬಾಲ್ಯ ಭಾಗ-ಒಂದು ಭಾರತದಲ್ಲಿ ಶತಶತಮಾನಗಳಿಂದ ಐದನೇ ಒಂದು ಭಾಗದಷ್ಟು ಜನರನ್ನು ಶೂದ್ರರೆಂದು, ಅಸ್ಪೃಶ್ಯರೆಂದು, ಅಂತ್ಯಜರೆಂದು, ಅಪವಿತ್ರರೆಂದು, ಅವರ್ಣಿಯರೆಂದು ಮಲಿನರೆಂದು ಊರ ಹೊರಗೆ ಪಶುವಿಗಿಂತ ಕೀಳಾಗಿ ಅಮಾನವೀಯ ಜೀವನ ಸಾಗಿಸುತ್ತಾ ಸವರ್ಣೀಯರಿಂದ ತುಳಿಯಲ್ಪಟ್ಟ ಸಮುದಾಯವೆ ನಿಮ್ನ ವರ್ಗದ ಜನ, ಋಗ್ವೇದದ ಪುರುಷ ಸೂಕ್ತದಲ್ಲಿ ವರ್ಣಿಸಿದಂತೆ ಪುರುಷನೆಂಬಾತನ ಮುಖದಿಂದ ಬ್ರಾಹ್ಮಣರು, ಬಾಹುಗಳಿಂದ ಕ್ಷತ್ರೀಯರು, ತೊಡೆಯಿಂದ ವೈಶ್ಯರು ಮತ್ತು ಪಾದದಿಂದ ಶೂದ್ರರು ಜನಿಸಿದರೆಂದು ಜನರನ್ನು ವರ್ಗಿಕರಿಸಿ ಶೂದ್ರರನ್ನು ಇನ್ನು ನಿಮ್ನಕರಿಸಿ ಚಂಡಾಲರನ್ನು ಅಸ್ಪೃಶ್ಯರೆಂದು ಅತ್ಯಂತ ಹೀನ ನಿಕೃಷ್ಠ ಅವಮಾನವಿತೆಯಿಂದ ನಡೆಸಿಕೊಂಡು ಬಂದಿದ್ದು ಸತ್ಯ ಸಂಗತಿಯಾಗಿದೆ,  ಶೂದ್ರರನ್ನು ಹೊಲೆಯ, ಮಾದಿಗ, ಚಮ್ಮಾರ, ಡೋರ, ಭಂಗಿ, ಇತ್ಯಾದಿ ಜಾತಿಗಳಿಂದ ಹಣೆಪಟ್ಟಿ ಕಟ್ಟಿ ಊರ ಒಳಗೆ ಬರದಂತೆ, ದೇವಸ್ಥಾನ ಪ್ರವೇಶಿಸದಂತೆ ಊರಿನ ಕೆರೆ ಬಾವಿಗಳಿಂದ ನೀರು ಮುಟ್ಟಿ ತೆಗೆದುಕೊಳ್ಳದಂತೆ ನಿರ್ಭಂದಿಸಿ, ಬಹಿಸ್ಕರಿಸಿ ಅವರ ನೆರಳೂ ತಮ್ಮ ಮೇಲೆ ಬಿಳದಂತೆ ಮುಟ್ಟಿಸಿಕೊಳ್ಳದಂತೆ ದೂರವಿರಿಸಿ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದ ಕಾಲವದು, ಅಸ್ಪೃಶ್ಯತೆಯ ಕರಾಳ ವಾತಾವರಣ ಕಾಲದಲ್ಲಿ 1891 ನೇ ಇಸ್ವಿಯ ಏಪ್ರಿಲ್ 14 ನೇ ತಾರಿಖಿನ ದಿನದಂದು ಮಧ್ಯಪ್ರದೇಶದ ಮಹೌ ಎಂಬಲ್ಲಿ ರಾಮಜಿ ಸಕ್ಪಾಲ ಮತ್ತು ಭೀಮಾಬಾಯಿ ದಂಪತಿಗಳಿಗೆ 14 ನೇ ಮಗುವಾಗಿ ಭೀಮರಾವ ಅಂಬೇಡ್ಕರ್ ಜನಿಸುತ್ತಾರೆ. ಹದಿನಾಲ್ಕು ಮಕ್ಕಳಲ್ಲಿ ಬದುಕುಳಿದವರು ಬಾಳಾರಾವ, ಆನಂದರಾವ ಮತ್ತು ಭೀಮಾರಾವ ಗಂಡುಮಕ್ಕಳಾದರೆ ಮಂಜುಳಾ, ತುಳಸಿ ಹೆಣ್ಣು ಮಕ್ಕಳು, ರಾಮಜಿ ಸಕ್ಪಾಲರು ಅವರ ತಂದೆ ಮಾಲೋಜಿ ಸಕ್ಪಾಲರಂತೆ ಬ್ರಿಟಿಷ ಸೈನ್ಯದಲ್ಲಿ ಸುಭೇದಾರಾಗಿ ಸೇವೆ ಸಲ್ಲಿಸಿದವರು. ತಾಯಿ ಭೀಮಾಬಾಯಿ ಠಾಣಾ ಜಿಲ್ಲೆಯ ಮುರ್ಚಾದ ಗ್ರಾಮದವರಾಗಿದ್ದರು, ತಾಯಿಯ ಸಂಬಂಧಿಕರು ಬ್ರಿಟಿಷ ಸೈನ್ಯದಲ್ಲಿ ಸುಭೇದಾರರಾಗಿದ್ದರು,  ರಾಮಜಿಯವರಂತೆ ಅವರು ಕೂಡಾ ಕಬೀರ ಪಂಥದ ಅನುಯಾಯಿಯಾಗಿದ್ದರು. ಭೀಮ ಎರಡು ವರ್ಷ ವಯಸ್ಸಿನವನಿದ್ದಾಗ ರಾಮಜಿ ಸಕ್ಪಾಲ ನಿವೃತ್ತಿ ಹೊಂದುತ್ತಾರೆ, ನಿವೃತ್ತಿ ನಂತರ ಮಹಾರಾಷ್ಟ್ರ, ಕೊಂಕಣದ ದಾಪೋಲಿಗೆ ಬಂದು ನೆಲೆಸುತ್ತಾರೆ ರಾಮಜಿ ಸಕ್ಪಾಲ ತುಂಬಾ ಸರಳ ಜೀವಿ ಮಾಂಸಹಾರ ಮಧ್ಯಪಾನದಿಂದ ದೂರವಿದ್ದವರು, ಸದಾ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ, ಅವರಿಗೆ ಕೆಲಸ ಸಿಗದೆ ಇದ್ದಾಗ ಸಂಸಾರ ಸಾಗಿಸೋದು ಕಷ್ಟವಾಗುತ್ತದೆ. ಕೆಲಸ ಅರಸಿಕೊಂಡು ಸಾತಾರಕ್ಕೆ ಬಂದು ನೆಲೆಸುತ್ತಾರೆ ಇಲ್ಲಿಯೇ, ಭೀಮ ಮತ್ತು ಆತನ ಅಣ್ಣಂದಿರು ಪ್ರಾಥಮಿಕ ಶಾಲೆಗೆ ಸೇರಿಕೊಳ್ಳುತ್ತಾರೆ, ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡುವ ಕನಸನ್ನು ರಾಮಜಿ ಹೊಂದಿರುತ್ತಾರೆ, ಆದರೆ ಸಾತಾರಕ್ಕೆ ಬಂದ ಕೆಲವೆ ದಿನಗಳಲ್ಲಿ ಭೀಮಾಬಾಯಿ ತೀರಿಕೊಳ್ಳುತ್ತಾರೆ ಇದು ರಾಮಜಿ ಸಕ್ಪಾಲ ಕುಟುಂಬಕ್ಕೆ ಬಾರಿ ಆಘಾತವನ್ನುಂಟು ಮಾಡುತ್ತದೆ. ತಾಯಿ ತೀರಿಕೊಂಡಾಗ ಭೀಮನಿಗೆ ಆಗ ಇನ್ನು ಐದು ವರ್ಷ ವಯಸ್ಸು, ರಾಮಜಿ ಸಕ್ಪಾಲರ ಕುಟುಂಬದ ನಿರ್ವಹಣೆ ಮಕ್ಕಳ ಪಾಲನೆ ಪೋಷಣೆಯ ಹೋರೆ ತಂಗಿ ಮೀರಾಬಾಯಿ ಮೇಲೆ ಬೀಳುತ್ತದೆ, ಕಷ್ಟದಲ್ಲಿಯು ರಾಮಜಿ ಸಕ್ಪಾಲರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಅವರ ಸರಳ ಸಜ್ಜನಿಕೆಯ ಸನ್ನಡತೆ ಮಕ್ಕಳ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿತ್ತು. ಭೀಮನು ಸಾತಾರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಡ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾನೆ. ಅಸ್ಪೃಶ್ಯತೆಯ ನರಕಯಾತನೆ ಕಹಿ ನೋವುಗಳ ಅನುಭವ ಆಗಲೇ ದರ್ಶನವಾಗ ತೋಡಗಿತ್ತು. ತಾನು ಮಹಾರ ಜಾತಿಗೆ ಸೇರಿದವನು ಮಹಾರ ಅಸ್ಪೃಶ್ಯತೆ ಜಾತಿ ಎಂಬುದರ ಶಾಲಾ ದಿನಗಳ ಅನುಭವಗಳನ್ನು ಮುಂದೆ ಅಂಬೇಡ್ಕರರು ಬೆಳೆದು ದೊಡ್ಡವರಾದಾಗ ತಮ್ಮ ಆತ್ಮಕಥನ “ವೇಟಿಂಗ್ ಫಾರ ವಿಸಾ” ಅಂದರೆ ವಿಸ್ ಕ್ಕಾಗಿ ಕಾಯುವ ಜನ ಎಂಬ ಬರಹಗಳಲ್ಲಿ ಪ್ರಸ್ತೂತ ಪಡೆಸಿದ್ದಾರೆ. 1901 ರಲ್ಲಿ ನಡೆದ ಒಂದು ಘಟನೆ ಭೀಮಜಿ ಮಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಬರಪೀಡತದಿಂದಾಗಿ ಸಾವಿರಾರು ಜನರು ಹೊಟ್ಟೆಪಾಡಿಗಾಗಿ ಉದ್ಯೋಗವಿಲ್ಲದೆ ಸಯುವಂತಾಗಿತ್ತು, ಆ ಸಂದರ್ಭದಲ್ಲಿ ಬಾಂಬೆ ಸರಕಾರವು ಖಟವ್ ತಾಲೂಕಿನ ಗೋರೆಗಾಂವ ಗ್ರಾಮದಲ್ಲಿ ಕೆರೆ ನಿರ್ಮಾಣ ಕಾರ್ಯ ಆರಂಭಿಸಿ ಜನರಿಗೆ ಉದ್ಯೋಗ ಒದಗಿಸುತ್ತದೆ. ರಾಮಜಿ ಕೆಲಸ ಹುಡುಕಿಕೊಂಡು ಗೋರೆಗಾಂವಗೆ ಹೋಗುತ್ತಾರೆ, ಅಲ್ಲಿ ಹಣ ಬಟವಾಡೆ ಮಾಡುವ ಗುಮಾಸ್ತನ ಕೆಲಸ ಸಿಗುತ್ತದೆ. ಕೆಲಸ ಸಿಕ್ಕಿದ್ದರಿಂದ ಆಗ ಅಲ್ಲಿಯೆ ಉಳಿದುಕೊಂಡಿದ್ದರು ಬೇಸಿಗೆ ಕಾಲವಾಗಿದ್ದರಿಂದ ಶಾಲೆಗಳಿಗೆ ರಜೆ ಘೋಷಿಸಿರುತ್ತದೆ. ರಜಾ ದಿನಗಳಲ್ಲಿ ತನ್ನ ಜೊತೆ ಕಾಲ ಕಳೆಯಲು ಗೋರೆಗಾಂವಗೆ ಬರಲು ಮಕ್ಕಳಿಗೆ ರಾಮಜಿ ಪತ್ರ ಬರೆದಿದ್ದರು. ಭೀಮ ತನ್ನ ಅಣ್ಣ ಮತ್ತು ಅಕ್ಕನ ಮಗನೊಂದಿಗೆ ಕೂಡಿ ಮೂವರು ಗೋರೆಗಾಂವಗೆ ರೈಲು ಮೂಲಕ ಪ್ರಯಾಣ ಮಾಡುತ್ತಾರೆ ಹೊಸ ಹೊಸ ಬಟ್ಟೆತೊಟ್ಟುಕೊಂಡು ಅತ್ತೆ ಮೀರಾಬಾಯಿ ಮಾಡಿದ ರುಚಿ ರುಚಿಯಾದ ಅಡುಗೆಯ ಬುತ್ತಿ ಕಟ್ಟಿಕೊಂಡು ಒಂದಿಷ್ಟು ದುಡ್ಡು ಹೊಂದಿಸಿಕೊಂಡು ರೈಲು ಬಂಡಿಯಲ್ಲಿ ಪ್ರಯಾಣ ಮಾಡುತ್ತಾರೆ ಮೊದಲಸಲ ರೈಲು ಬಂಡಿಯಲ್ಲಿ ಪ್ರಯಾಣ ಮಾಡುತ್ತಿರುವುದು ಅವರ ಆನಂದಕ್ಕೆ ಪಾರವೆ ಇರಲಿಲ್ಲ. ಗೋರೆಗಾಂವ ಗ್ರಾಮಕ್ಕೆ ರೈಲು ಮಾರ್ಗ ಇಲ್ಲದ್ದರಿಂದ ಹತ್ತಿರದ ಗ್ರಾಮ ಮಾಸೂರ ನಿಲ್ದಾಣಕ್ಕೆ ರೈಲು ಬಂದು ತಲುಪಿದಾಗ ಸಂಜೆಯಾಗಿತ್ತು, ಅಲ್ಲಿಂದ ಗೋರೆಗಾಂವಗೆ ಹೋಗಲು ಹತ್ತು ಮೈಲು ದೂರ ಕ್ರಮಿಸಬೇಕಿತ್ತು, ಆಗಲೇ ಸಂಜೆ ಆಗಿದ್ದರಿಂದ ರಾತ್ರಿ ಕತ್ತಲಾಗುವುದರೊಳಗಾಗಿ ಅಲ್ಲಿಗೆ ತಲುಪಬೇಕೆಂದು ನಿರ್ಧರಿಸುತ್ತಾರೆ. ಭೀಮ ಮತ್ತು ಆತನ ಸಹೋದರರು ರೈಲಿನಿಂದ ಕೆಳಗೆ ಇಳಿದು ನಿಂತು ನೋಡುತ್ತಾರೆ. ಅಲ್ಲಿ ಪರಿಚಿತರು ಯಾರು ಕಾಣುವುದಿಲ್ಲ ತಾವು ಇಂತದಿನ ಬರುವುದಾಗಿ ಪತ್ರ ಬರೆದಿದ್ದರಿಂದ ಅಪ್ಪ ತಮ್ಮನ್ನು ಕರೆದುಕೊಂಡು ಹೋಗಲು ಸೇವಕನನ್ನು ಕಳುಹಿಸಿರುತ್ತಾನೆಂದು ನೋಡುತ್ತಾರೆ. ಭೀಮನು ಬರೆದ ಪತ್ರ ಅಂಚೆಯವನು ರಾಮಜಿಗೆ ತಲುಪಿಸದೆ ಇಟ್ಟುಕೊಂಡಿದ್ದು ಮಕ್ಕಳು ಬರುತ್ತಿರುವುದು ರಾಮಜಿಗೆ ತಿಳಿದಿರಲಿಲ್ಲ. ಅಂಚೆಯವನ ಎಡವಟ್ಟಿನಿಂದ ಅವರನ್ನು ಕರೆದುಕೊಂಡುಹೊಗಲು ಯಾರು ಬಂದಿರಲಿಲ್ಲ. ಮಕ್ಕಳು ಚಿಂತಿತರಾಗುತ್ತಾರೆ. ಭೀಮ ಹೇಗೋ ಉಪಾಯಮಾಡಿ ಅಲ್ಲಿದ್ದ ಸ್ಟೇಷನ ಮಾಸ್ತರನ ಸಹಾಯದೊಂದಿಗೆ ಒಂದು ಎತ್ತಿನ ಬಂಡಿಯನ್ನು ಗೋತ್ತು ಮಾಡಿಕೊಂಡು ಅಲ್ಲಿಂದ ಗೋರೆಗಾಂವಗೆ ಹೊರಡುತ್ತಾರೆ. ಹುಡುಗರು ಹೊಸ ಬಟ್ಟೆ ತೊಟ್ಟಿದ್ದರಿಂದ ಮೊದ ಮೊದಲು ಬಂಡಿಯವನಿಗೆ ಅವರು ಅಸ್ಪೃಶ್ಯರೆಂದು ಸಂಶಯ ಬಂದಿರಲಿಲ್ಲ. ಹೇಗೋ ಏನೋ ಸ್ವಲ್ಪ ದೂರ ಹೋಗುವುದರಲ್ಲಿ ಎತ್ತಿನ ಬಂಡಿಯವನಿಗೆ ಇವರು ಮಹಾರರೆಂಬುವುದು ಗೋತ್ತಾಗಿ ಗೊಬ್ಬರ ಸಾಗಿಸುವ ತನ್ನ ಬಂಡಿ ಮೈಲಿಗೆ ಮಾಡಿದರೆಂದು ಕೋಪಗೊಂಡು ಬೈಯುತ್ತ ಬಂಡಿಯ ನೊಗ ಬಿಚ್ಚಿ ಮೇಲಿಂದ ಸುರಿಯುವಂತೆ ಎತ್ತಿ ಬಿಟ್ಟು ಬಂಡಿಯಲ್ಲಿ ಕುಳಿತ ಹುಡುಗರನ್ನು ಕೆಳಗೆ ಬಿಳಿಸಿ ಬಿಡುತ್ತಾನೆ. ಮಕ್ಕಳು ಭಯಗೊಂಡು ಚಿಂತಿತರಾಗಿ ನೋವನ್ನು ಸಹಿಸಿಕೊಂಡು, ಬಂಡಿಯವನಿಗೆ ತಮ್ಮನ್ನು ಕರೆದುಕೊಂಡು ಹೋಗುವಂತೆ ಬೇಡಿಕೊಳ್ಳುತ್ತಾರೆ. ಬಂಡಿಯವನು ಹುಡುಗರನ್ನು ದಿಟ್ಟಿಸುತ್ತಾ ನೀವು ಅಸ್ಪೃಶ್ಯರು, ಬಂಡಿ ಮುಟ್ಟಿ ಮೈಲಿಗೆ ಮಾಡಿದ್ದಿರಿ ನೀವು ಬೇರೆ ಬಂಡಿ ನೋಡಿಕೊಳ್ಳಿ ಎನ್ನುತ್ತಾನೆ. ಭೀಮನು ಉಪಯಮಾಡಿ ಬಂಡಿಯವನಿಗೆ ಅಣ್ಣ ನಾವು ಎರಡರಷ್ಷು ಬಾಡಿಗೆ ಕೊಡುತ್ತೆವೆ. ಮೇಲಾಗಿ ನಾವೆ ಬಂಡಿ ನಡೆಸುತ್ತೆವೆ, ಎಂದಾಗ ಎರಡು ಪಟ್ಟು ಬಾಡಿಗೆ ಸಿಗುವುದು ಖಾತ್ರಿಯಾದಗ ಬಂಡಿಯವನು ಹುಡುಗರನ್ನು ಕರೆದುಕೊಂಡು ಹೋಗಲು ಒಪ್ಪಿಕೊಳ್ಳುತ್ತಾನೆ. ರೈಲು ಬಂಡಿಯ ಪ್ರಾಯಾಣದ ಖುಷಿಯಲ್ಲಿ ಮುಂಜಾನೆಯಿಂದ ಊಟಮಾಡಿರಲಿಲ್ಲ. ರುಚಿಯಾಗಿ ಅಡುಗೆ ಮಾಡಿಕೊಂಡು ತಂದಿದ್ದ ಬುತ್ತಿಯನ್ನು ಊಟಮಾಡಬೇಕೆಂದರೆ ದಾರಿ ಉದ್ದಕ್ಕು ಯಾರು ನೀರು ಕೊಟ್ಟಿರಲಿಲ್ಲ. ಸುಂಕದ ಕಟ್ಟೆಗೆ ಬಂದು ತಲುಪಿದಾಗ ತಡರಾತ್ರಿ ಯಾಗಿತ್ತು. ಕತ್ತಲಾಗಿದ್ದರಿಂದ ರಾತ್ರಿ ಕಳೆದು ನಸುಕಿನ ಜಾವ ಪ್ರಯಾಣ ಬೆಳೆಸುವುದಾಗಿ ನಿರ್ಧರಿಸಿ ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಅಲ್ಲಿ ಬಹಳಷ್ಟು ಎತ್ತಿನ ಬಂಡಿಗಳು ವಿಶ್ರಾಂತಿಗೆ ತಂಗಿದ್ದವು. ಅಸಿವು ನೀರಡಿಕೆ ಯಾಗಿತ್ತು ಎಲ್ಲಿಯು ನೀರು ಸಿಕ್ಕಿರಲಿಲ್ಲ ಬಂಡಿಯವನು ಕೈಮಾಡಿ ತೋರಿಸಿ ಅಲ್ಲಿ ಸುಂಕದ ಸಂಗ್ರಹಗಾರನ ಗುಡಿಸಲು ಇದೆ ಅಲ್ಲಿಗೆ ಹೋಗಿ ನೀರು ತರಬಹುದು, ನೀವು ಮಹಾರ ಅಂತ ಹೇಳಬೇಡಿ, ಮುಸಲ್ಮಾನರು ಅಂತ ಹೇಳಿ ನಿಮ್ಮ ಅದೃಷ್ಟ! ನೀರು ಸಿಗಬಹುದು ಎಂದು ಹೇಳಿದನು ಭೀಮನು ಸ್ವಲ್ಪ ದೂರದಲ್ಲಿ ಇದ್ದ ಸುಂಕದ ಸಂಗ್ರಹಕಾರನ ಹತ್ತಿರ ಹೋಗಿ ಹಸಿವು ಆಗಿದೆ, ನೀರಿಲ್ಲ ಊಟಮಾಡಲು ನೀರುಕೊಡಲು ಕೇಳುತ್ತಾರೆ ಸಂಗ್ರಹಕಾರ ಯಾರು ನೀವು ಎಂದು ಪ್ರಶ್ನಿಸುತ್ತಾನೆ. ಉರ್ದು ಬರುತ್ತಿರುವುದರಿಂದ ಭೀಮ ಉರ್ದುವಿನಲ್ಲಿ ಮುಸಲ್ಮಾನರು ಎನ್ನುತ್ತಾನೆ. ನಿಮಗಾಗಿ ನೀರು ಇಡೋಕೆ, ಆಗುತ್ತಾ? ಗುಡ್ಡದ ಮೇಲೆ ನೀರು ಇದೆ ಅಲ್ಲಿಗೆ ಹೋಗಿ ಎಂದು ನೀರು ಕೋಡದೆ ಸುಂಕದ ಸಂಗ್ರಹಕಾರ ಸುಮ್ಮನಾದ. ರಾತ್ರಿ ಸಮಯ ಗುಡ್ಡದ ಮೇಲೆ ಹೋಗುವುದರಿಂದ ಅಪಾಯವೆಂದು ತಿಳಿದು, ಬುತ್ತಿ ಇದ್ದರು ಯಾರು ನೀರು ಕೋಡದೆ ಇದ್ದುದ್ದರಿಂದ ಊಟಮಾಡದೆ ಉಪವಾಸ ಮಲಗುತ್ತಾರೆ. ರಕ್ಷಣೆಗಾಗಿ ಮೂವರು ಒಬ್ಬರಾದ ಮೇಲೆ ಒಬ್ಬ ಸರದಿಯಂತೆ ಎಚ್ಚರವಿದ್ದು ಇನ್ನಿಬ್ಬರು ಮಲಗುವಂತೆ ರಾತ್ರಿ ಕಳೆದು, ಮುಂಜಾನೆ ಗೋರೆಗಾಂವಗೆ ತಲುಪಿದ್ದರು. ನಿಸರ್ಗದ ನೀರನ್ನು ಕುಡಿಯಲು ಬಿಡದ, ಸಗಣಿ ಸಾಗಿಸುವ ಬಂಡಿಯಲ್ಲಿ ಕೂಡ್ರಲು ಬಿಡದ ಈ ಅಸ್ಪೃಶ್ಯತೆಯ ಕರಾಳ ಘಟನೆ ಒಂಭತ್ತು ವರ್ಷದ ಬಾಲಕ ಭೀಮನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ——————————— ಸೋಮಲಿಂಗ ಗೆಣ್ಣೂರ

Read Post »

ಇತರೆ

ಸೋಮಣ್ಣನ ಸಂಕಟಗಳು

ಹಾಸ್ಯ ಲೇಖನ ಸೋಮಣ್ಣನ ಸಂಕಟಗಳು ಸೋಮಣ್ಣ ನಮ್ಮ ಮನೆಗೆ ಹಾಲು ಹಾಕಲು ಬರುತ್ತಾರೆ.ಮನೆ ಕಡೆ ಹೊಲ,ಗದ್ದೆ ,ತೋಟ ಅಂತ ಜಮೀನು ಕೂಡ ಚೆನ್ನಾಗಿದೆ.ಒಂದಷ್ಟು ಮನೆ ಕಟ್ಟಿ ಬಾಡಿಗೆ ಕೂಡ ಕೊಟ್ಟಿದ್ದಾರೆ.ಇಷ್ಟು ಆದಾಯ ಸಾಲದು ಅಂತ ಡೈರಿ ಏಜೆನ್ಸಿ ಕೂಡ ತೊಗೊಂಡು ಮನೆ ಮನೆಗೆ ಹಾಲು ಹಾಕುತ್ತಾರೆ.ಒಟ್ಟಾರೆಯಾಗಿ ಮನೆ ಕಡೆ ಚೆನ್ನಾಗಿದ್ದಾರೆ. ಸೋಮಣ್ಣ ಒಳ್ಳೆ ಹಸನ್ಮುಖ ವ್ಯಕ್ತಿ.ಹಾಲು ಕೊಡಲು ಬಂದಾಗ ,ನನಗೆ ರಜೆಯಿದ್ದ ದಿನವಾಗಿ, ಒಂದಷ್ಟು ಬಿಡುವಿದ್ದರೆ ಒಂದು ನಾಲ್ಕು ಕಷ್ಟ ಸುಖದ ಮಾತನಾಡಿ ಹೋಗುತ್ತಾರೆ.ಅಂತಹ ಒಂದು ದಿನ ಮಾತಾಡಿಕೊಂಡು”ಏನ್ ಸೋಮಣ್ಣ ,ಚೆನ್ನಾಗಿದ್ದೀರಾ? ಮಕ್ಳು  ಏನ್  ಮಾಡ್ಕೊಂಡವ್ರೆ?” ಅಂತ ಕೇಳಿದೆ. ಸೋಮಣ್ಣ ನಿಟ್ಟುಸಿರು ಬಿಡುತ್ತಾ,”ಏನ್ ಚಂದ ಬುಡಿ ಮೇಡಂ,ಯಾಕಾದ್ರೂ ಮದ್ವೆಯಾಗಿ ಮಕ್ಳು ಮಾಡ್ಕೊಂಡೆ ಅಂತ  ಆಗ್ಬುಟ್ಟದೆ”  ಎಂದರು. ನನಗೆ ಆಶ್ಚರ್ಯವಾಯಿತು.” ಅಲ್ಲ ಸೋಮಣ್ಣ,ಇಬ್ರೂ ಮಕ್ಳನ್ನ  ಎಂಜಿನಿಯರಿಂಗ್  ಓದ್ಸಿದ್ದಿರಾ,ಒಳ್ಳೆ ಮಕ್ಳು ನಿಮ್ಮವು, ಅದ್ಯಾಕೆ  ಹಂಗಂತಿರ.?” ಅಂದೆ. ಸೋಮಣ್ಣ,” ಓದಕ್ಕೇನೋ ಓದ್ದೋ,ಆದ್ರೆ ಕೆಲ್ಸವೇ  ಸಿಕ್ಕಿಲ್ಲ  ನೋಡಿ, ಏನ್ಮಾಡೋದು?”  ಅಂದ್ರು. ನನಗೆ  ಯಾವಾಗಲೋ  ಒಂದು  ಸಾರಿ  ಅವರು ” ಮಗ ಕ್ಲಾಸ್ ಒನ್ ಕಂಟ್ರಾಕ್ಟರ್  ಆಗಿ ಕೆಲ್ಸ ಮಾಡ್ತಾ  ಅವ್ನೆ,” ಅಂದಿದ್ದು  ನೆನಪಾಯಿತು. ಅದಕ್ಕೆ  ಕೇಳಿದೆ, “ಯಾಕೆ? ಕಾಂಟ್ರಾಕ್ಟ್  ಮಾಡ್ಸೋದು  ಬಿಟ್  ಬಿಟ್ನ,” ಎಂದಿದ್ದಕ್ಕೆ ” ಕಾಂಟ್ರಾಕ್ಟ್ ಏನೋ  ಮಾಡುಸ್ತ  ಅವ್ನೆ, ದುಡ್ಡು  ವಸಿ ಪರವಾಗಿಲ್ಲ ಮಾಡವ್ನೆ , ಆದ್ರೆ  ಅವರವ್ವಂಗೆ  ಸಮಾಧಾನ್ವೆ ಇಲ್ಲ. ದಿನಾ ಬೆಳಿಗ್ಗೆ ಎದ್ರೆ,” ಮಗಂಗೆ ಗೋರ್ ಮೆಂಟ್  ಕೆಲ್ಸ  ಕೊಡುಸ್ನಿಲ್ಲ  ನೀನು,” ಅಂತ ಹಂಗುಸ್ತಳೆ..ನೀವೇ  ಹೇಳಿ  ಮೇಡಂ  ಈಗ  ಗೋರ್ ಮೆಂಟ್ ಕೆಲ್ಸ ಅಷ್ಟು ಸುಲಭಕ್ಕೆ ಸಿಕ್ಕದಾ? ಕಿರಿಮಗನೂ ಎಸ್ ಐ ಆಗ್ಬೇಕು ಅಂತ ಮೂರ್ ಸತಿ ಪರೀಕ್ಷೆ ಬರ್ದ,ಫಿಸಿಕಲ್ ಆಯ್ತದೆ, ಬರೆಯೋದ್ರಲ್ಲಿ ಹೊಯ್ತದೇ,ಇವ್ಳು ‘ನಮ್ಮ ಕಡೆವ್ರು ಮಿನಿಸ್ಟ್ರು ಆಗವ್ರಲ್ಲ ಅವ್ರ ಕೇಳಿ ಕೊಡ್ಸಿ’,ಅಂತ ಜೀವ ತಿಂತಾವ್ಳೆ.”ಲೆ, ಈಗ ಕಾಲ ಕೆಟ್ಟೋಗದೆ  ಕಣೆ,ಹಿಂದ್ಲಂಗಲ್ಲ, ಎಲ್ಲಾ ಆನ್ಲೈನ್ ಮಾಡ್ಬುಟ್ಟವ್ರೆ. ಯಾರಿಗ್  ಕೆಲ್ಸ ಕೊಟ್ಟವ್ರೆ,ಮೆರಿಟ್  ಎಷ್ಟು ,ಎಲ್ಲಾ ಕಂಪ್ಯೂಟ್ರು ತೋರಿಸಿ ಬುಡ್ತದೆ. ಹಂಗೆ  ಹಿತ್ಲು ಬಾಗ್ಲಿಂದ ಕೆಲ್ಸ ಕೊಡ್ಸಕ್ಕೆ  ಹೋದ್ರೆ ಬಾಕಿ ಹೈಕ್ಳು ಬುಡಕ್ಕಿಲ್ಲ,ಕೇಸ್ ಹಾಕೊತ್ತವೆ, ಆ ಮಿನಿಸ್ಟ್ರು ಅವನ ಹಕ್ಕಳಿಗೇ ಕೆಲ್ಸ ಕೊಡ್ಸಕ್ಕಾಕ್ಕಿಲ್ಲ, ಇನ್ನು ನಮ್ ಹೈಕ್ಳಿಗೆ ಎಲ್ಲಿಂದ  ಕೊಡ್ಸಾನು? ,ಸುಮ್ನಿರು  ಅಂದ್ರೂ  ಕೇಳಕ್ಕಿಲ್ಲ,”  ಎಂದು ಬೇಜಾರಿಂದ  ಹೇಳಿದರು. ” ನಿಮ್ಮ ಮನೆದೇ ಮಸ್ತಾಗಿ  ಅದಲ್ಲ,ಅದು ಸಾಲ್ದ, ಒಬ್ಬ ಕಾಂಟ್ರಾಕ್ಟ್ ಮಾಡುಸ್ಲಿ, ಇನ್ನೊಬ್ಬುನ್ನ  ಜಮೀನಿಗ್  ಬುಡಿ,” ಎಂದೆ. “ಮೇಡಂ,ಅದು ಆಕ್ಕಿಲ್ವಂತೆ  ಅವಳ್ಗೆ, ‘ಹುಡ್ಗ  ಕೆಲ್ಸದ್ ಮೇಲವ್ನೆ  ಅಂದ್ರೆ  ಒಳ್ಳೆ  ಕಡೆ  ಹೆಣ್  ಕೊಡ್ತರೆ,ಇಲ್ದಿದ್ರೆ ಯಾರ್  ಕೊಡ್ತರೆ?’  ಅಂತಳೆ.’ ಈಗ ನಾನ್  ಕೆಲ್ಸದಲ್ಲಿ ಇಲ್ದಿದ್ರೂ  ನೀನು  ನನ್ನ  ಮದ್ವೆ ಆದ್ಯಲ್ಲ, ಹಂಗೇ ಅವುಕ್ಕೂ ಯಾರಾದ್ರೂ ಸಿಕ್ತಾರೆ ಬುಡು’,ಅಂದ್ರೆ, “ನಮ್ಮಪ್ಪಂಗೆನೋ ತಲೆ ಕೆಟ್ಟಿತ್ತು ,ನಿಂಗ್ ಕೊಟ್ಟ, ಈಗ್ಲವ್ರು  ಕೊಟ್ಟಾರಾ?” ಅಂತಳೆ ಮೇಡಂ, ಹೆಚ್ಗೆ  ಓದಿಲ್ಲ  ಮೇಡಂ  ಅವ್ಳು, ಆದ್ರೂ ಮಾತಾಡ್ ಬೇಕಾದ್ರೆ ಬರೀ ಲಾ ಪಾಯಿಂಟೇ  ಬತ್ತವೆ .ನಾನ್  ಏನ್ ಹೇಳಿದ್ರೂ  ಕೇಳಕ್ಕಿಲ್ಲ. ನಂಗೆ ರೋಸಿ ಹೋಗದೆ.ಯಾಕಾದ್ರೂ ಮದ್ವೆಯಾಗಿ ಮಕ್ಳು ಹುಟ್ಟುಸ್ದೆ,ಅಂತ  ದಿನಾ  ಕೊರಗಂಗ್  ಆಗದೆ,” ಅಂತ ಹೇಳಿ, “ಬತ್ತಿನೀ ಮೇಡಂ, ಇನ್ನೂ ಸುಮಾರ್ ಮನೆಗೆ ಹಾಲ್ ಹಾಕ್ಬೇಕು.” ಅನ್ನುತ್ತಾ ಹೋದರು.ನಾನು ನಗು ತಡೆದುಕೊಂಡು ಒಳಬಂದೆ.

ಸೋಮಣ್ಣನ ಸಂಕಟಗಳು Read Post »

ಇತರೆ

ಪಕ್ಷಿಗಳೋ… ಪಕ್ಷಿವೀಕ್ಷಕರೋ

ಲೇಖನ ಪಕ್ಷಿಗಳೋ… ಪಕ್ಷಿವೀಕ್ಷಕರೋ ಸಂಧ್ಯಾ ಕೋಟೇಶ್ವರ “ಸರ್ ಸರ್,  ನನ್ನ ಫೋಟೋನೂ ತೆಗೀರಿ ಸರ್.  ಮೇಡಂ,  ನಾನು ಪ್ರತಿದಿನದ  ಹಾಗೇ ಇವತ್ತೂ ತುಂಬಾ ಕಲರ್ ಫುಲ್ ಆಗಿ ಬಂದಿದೀನಿ. ನನ್ನ ಫೋಟೋ ತೆಗೀರಿ.  ಇವಾಗ ತಿರುಗಿ ನಿಲ್ಲುತ್ತೇನೆ.  ಈ ಕಡೆ ಕ್ಲಿಕ್ ಮಾಡಿ”.  ಹೀಗೇ ಬೇಡಿಕೆಗಳ ಪಟ್ಟಿ ಮುಗಿಯದಷ್ಟು.  ಎಷ್ಟು ಫೋಟೋ ಹೊಡೆದರೂ ಹೊಡೆಯುವವರಿಗೆ ಬೇಜಾರಾಗುತ್ತಿಲ್ಲ.  ಹೊಡೆಸಿಕೊಳ್ಳುವವರಿಗಂತೂ ಒಂದು ಚೂರು ಮುಲಾಜಿಲ್ಲ.  ಇದು ಯಾವ ಸ್ಟುಡಿಯೋ ಅಂದುಕೊಳ್ತಾ ಇದ್ದೀರಾ?  ಚಳಿಗಾಲ ಬಂತೆಂದರೆ ಸಾಕು,  ಫೋಟೋಗಾಗಿ ಬೇಡಿಕೆ ಇಡುವವರು ರಂಗುರಂಗಿನ ವಲಸೆ ಪಕ್ಷಿಗಳು.  ಹುಚ್ಚು ಹಿಡಿದಂತೆ ತಲ್ಲೀನರಾಗಿ ಕ್ಲಿಕ್ಕಿಸುವವರು ಪಕ್ಷಿವೀಕ್ಷಕರು.  ಒಂದು ವಿಶೇಷ ಪಕ್ಷಿಯ  ಕರೆ ಕೇಳುತ್ತಲೇ ಏನೇನೋ ಚರ್ಚೆ ಮಾಡುತ್ತಾ ಕೂತವರೆಲ್ಲಾ ಒಂದೇ ಸಮನೆ ತಂತಮ್ಮ  ಕ್ಯಾಮರ ಬಳಿ ಓಡುತ್ತಾರೆ. ಎಲ್ಲರ ಎದೆ ಬಡಿತ ಜೋರಾಗುತ್ತದೆ. ಏದುಸಿರು ಬಿಡುತ್ತಾರೆ. ಆ ಬಣ್ಣ ,  ಮೈಕಟ್ಟು ಸುಮ್ಮನೆ ನಿಂತು ಆನಂದಿಸುತ್ತಾರೆ.  ಎಷ್ಟು ನೋಡಿದರೂ ತೃಪ್ತಿ ಇಲ್ಲ. ಅದು ಓಡಿದ ಕಡೆ ಎಲ್ಲಾ ಓಡಿ,  ಬೇರೆ ಬೇರೆ ಅಂಗುಲಗಳಲ್ಲಿ ಅದರ ಅಂದ ಸವಿಯುತ್ತಾರೆ. ತಮಗೆ ಬೇಕಾದಷ್ಟು ಕ್ಲಿಕ್ಕಿಸಿ ಮತ್ತೆ ಬಂದು ಸುಮ್ಮನೆ  ಕುಳಿತು ಬಿಡುತ್ತಾರೆ.  ಇದು ಈಗ ಅಂತಲ್ಲ.  ಪ್ರತಿ ಬಾರಿ ಹೊಸ ಪಕ್ಷಿ ನೋಡಿದಾಗಲೂ ಇದೇ ಧಾವಂತದಿಂದ  ಪಕ್ಷಿ ವೀಕ್ಷಕರು ಧಾವಿಸುತ್ತಾರೆ.  ಮುಂಜಾವಿನ ಸರ‍್ಯೋದಯದ ಮುಂಚೆ ಗಾಢ ಮೌನದಲ್ಲಿರುವ ಪ್ರಕೃತಿ, ಚಿಲಿಪಿಲಿ ನಿನಾದದಲಿ ಎಲ್ಲರ ಉಸಿರು ಬಿಗಿ ಹಿಡಿಸಲು ತಯಾರಿ ನಡೆಸುತ್ತಿದೆಯೋ ಅನ್ನಿಸುತ್ತದೆ. ತಂಪಾಗಿರುವ ಮೌನಕ್ಕೆ,  ನಿದ್ರಿಸುತ್ತಿರುವ ಗಿಡ ಗಂಟಿಗಳಿಗೆ,  ಬಿದಿರು ಕಡ್ಡಿಗಳಿಗೆ,  ಪೊದೆಗಳಿಗೆಲ್ಲ ಚಲನೆ ಕೊಡುವುದೇ ಈ ಪಕ್ಷಿಗಳ ಚಟುವಟಿಕೆ.  ಇವುಗಳ ಅಂದ ಅನುಭವಿಸುವವನೇ ಬಲ್ಲ. ಒಂದಕ್ಕೆ ಮೈ ತುಂಬಾ ಒಂದೇ ಬಣ್ಣ; ಇನ್ನೂ ಕೆಲವು ಒಂದೊಂದು ಇಂಚಿಗೂ ಚಂದದ ಒಂದೊಂದು,  ಬಣ್ಣ,  ವಿನ್ಯಾಸವನ್ನು ಬಳಿದುಕೊಂಡಿರುತ್ತದೆ.  ಕೆಲವಕ್ಕೆ ಯಾರೋ ಅದ್ಭುತ ಕಲಾವಿದ, ಕುಂಚವನ್ನು ದಟ್ಟ ಶ್ರೀಮಂತ ಬಣ್ಣಕ್ಕದ್ದಿ ರಾಚಿ ಬಿಟ್ಟಿರಬೇಕು.  ಕೆಲವು ಪಕ್ಷಿಗಳು ಎದುರು ಬಂದು ಕುಳಿತಾಗಲಂತೂ ಸೃಷ್ಠಿಕರ‍್ತ ಎಷ್ಟು ರಸಿಕನಿರಬಹುದು ಎನಿಸುತ್ತದೆ.  ಪಕ್ಷಿಗಳ ಲಗುಬಗೆ ಒಂದೆಡೆಯಾದರೆ ಇನ್ನು ಪಕ್ಷಿ ವೀಕ್ಷಕರ ಸಂಭ್ರಮ ನೋಡಬೇಕು. ಪಕ್ಷಿಗಳನ್ನು ಹುಡುಕಿಕೊಂಡು ಹೋಗುವ ಒಂದು ಗುಂಪಿದೆ. ಅವರನ್ನು ಬರ್ಡರ್ಸ  ಅಥವಾ  ಪಕ್ಷಿವೀಕ್ಷಕರು ಅಂತ ಕರೀತಾರೆ. ಇವರಲ್ಲಿ ವೃತ್ತಿಪರರು ಹಾಗು ಹವ್ಯಾಸಿಗಳು ಇರುತ್ತಾರೆ. ಪಕ್ಷಿಗಳನ್ನು ಗಮನಿಸುವುದು, ಅವರ ಚಲನವಲನ ಕಂಡು ಆನಂದಿಸುವುದು ಎಷ್ಟು ಖುಷಿ ಕೊಡುತ್ತದೋ , ಈ  ಪಕ್ಷಿವೀಕ್ಷಕರನ್ನು ನೋಡುವುದು ಅಷ್ಟೇ ಮಜಾ ಕೊಡುತ್ತದೆ. ಅವರಿಗೆ ಪ್ರಕೃತಿಯ ಚಿಕ್ಕ ಚಿಕ್ಕ ಬದಲಾವಣೆಗಳು ಪ್ರಚೋದಿಸುತ್ತವೆ. ಸಾಮಾನ್ಯರಿಗೆ ಬಹುಶಃ ಕಾಗೆ,ಮೈನಾ, ಕೊಕ್ಕರೆ, ಬಾತುಕೋಳಿ , ಇಂತಹ ಕೆಲವು ಪಕ್ಷಿಗಳ  ಹೆಸರು ತಿಳಿದಿರುತ್ತದೆ.  ಬೇರೆ ಎಲ್ಲಾ ಪಕ್ಷಿಗಳೂ ಒಂದೇ ತರಹ ಕಾಣಿಸುತ್ತದೆ.  ಆದರೆ ಇವರಿಗೆ ಪಕ್ಷಿಯ ಮೇಲಿನ ಒಂದು ಚಿಕ್ಕ ವಿವರವೂ ಮುಖ್ಯವಾಗುತ್ತದೆ.  ಪಕ್ಷಿಯ ಆವಾಸ, ಗಾತ್ರ, ಆಕಾರ,  ಬಣ್ಣ,  ಕೂಗು ಇವೆಲ್ಲದಕ್ಕೂ  ಸೂಕ್ಷ್ಮ ಗ್ರಾಹಿಗಳಾಗಿರುತ್ತಾರೆ.  ಆಗಸದ ಅಂಚಲ್ಲಿ ಎಷ್ಟೋ ಎತ್ತರದಲ್ಲಿ ಹಾರುವ ಪಕ್ಷಿಯ ಹೆಸರನ್ನು ಥಟ್ ಅಂತ ಹೇಳುತ್ತಾರೆ.  ಇಷ್ಟೇ ಅಲ್ಲ,  ಪಕ್ಷಿಗಳ ನಡವಳಿಕೆಗಳು ಕೂಡಾ ಮುಖ್ಯವಾಗುತ್ತದೆ. ಪಕ್ಷಿಗಳನ್ನು ನೋಡಿದಂತೆ ತಮ್ಮ ದಾಖಲೆ ಯ ಪಟ್ಟಿಗೆ ಸೇರಿಸುತ್ತಾರೆ.  ಅದರಲ್ಲಿ ಒಂದು ಹೊಸದು ಸರ‍್ಪಡೆಯಾದರೂ ಏನೋ ಖುಷಿ.  ಈಗ ಚಳಿಗಾಲ ಶುರುವಾಗಿದೆ ನೋಡಿ, ಈಗಂತೂ ಹಬ್ಬ.‌ ದೇಶ ವಿದೇಶಗಳಿಂದ ಪಕ್ಷಿಗಳು ವಲಸೆ ಬಂದಿರುತ್ತವೆ. ತಾವು  ನೋಡದೆ ಇರುವ ಪಕ್ಷಿ  ಒಂದು ಜಾಗದಲ್ಲಿ ಇದೆ ಎಂದು ತಿಳಿದು ಬಂದರೆ ಸಾಕು,  ಮಳೆ,  ಗಾಳಿ,  ಧೂಳು,ಕೊಚ್ಚೆ ಯಾವುದನ್ನೂ ಲೆಕ್ಕಿಸದೆ ಅದನ್ನು ನೋಡಲು ಅಣಿಯಾಗಿ ಹೊರಟುಬಿಡುತ್ತಾರೆ.  ಇನ್ನೇನಾದರೂ  ಅವರನ್ನು ಗಮನಿಸಲು ತೊಡಗಿದರೆ ಮೊದಲ ಸಲ ನೋಡಿದರೆ ಕಿರಿಕಿರಿಯಾಗುತ್ತದೆ.  ನಂತರ ಹುಚ್ಚು ಅನಿಸುತ್ತದೆ ! ಇದೊಂಥರಾ ಪ್ರಕೃತಿಯೊಂದಿಗೆ ಬೆರೆಯುವ ಹುಚ್ಚು.  ನಿರ‍್ಗದ ಮಡಿಲಲ್ಲಿ ಲೀನವಾಗುವ ಹುಚ್ಚು.  ಯಾವುದೋ ಪಕ್ಷಿ ನೀರ ಸೆಲೆಯಲ್ಲಿ ಮಿಂದು ಮೈ ಕೊಡವಿ ಎದ್ದರೆ ಇವರ ಮೈ ಎಲ್ಲಾ ರೋಮಾಂಚನ.  ಹಕ್ಕಿಯೊಂದು ಆಹಾರಕ್ಕಾಗಿ ಮೀನೋ,  ಕೀಟವನ್ನೋ ಬಾಯಲ್ಲಿ ಹಿಡಿದರೆ ಆ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ತವಕ. ಬಯಲಿನ  ಮೂಲೆಯಲ್ಲಿ ಒಂದು ಕೂಗು ಕೇಳಿದರೂ, ಅತೀವವಾದ ಆನಂದದಿಂದ ಅದನ್ನು ಹುಡುಕಿ ಅಲೆಯುತ್ತಾರೆ. ಅವರ ಕಣ್ಣ ಮುಂದೆ ಒಂದೊಂದು ಸುಯ್ನ್ ಅಂತ ಸುಳಿದಾಗಲೂ ವಿಚಿತ್ರವಾದ ಕೌತುಕವೊಂದು ಅವರ ಕಣ್ಣಂಚಲಿ ಮೂಡುತ್ತದೆ.  ಆ ಪಕ್ಷಿಯ ಬರುವಿಕೆಗಾಗಿ,  ಒಂದು ನೋಟಕ್ಕಾಗಿ ದಿನವಿಡೀ ಕಾಯುತ್ತಾರೆ. ಬಹುಶಃ ಆ ತಾಳ್ಮೆಯನ್ನೂ ಪ್ರಕೃತಿಯೇ ಕಲಿಸಿರಬೇಕು. ಪಕ್ಷಿವೀಕ್ಷಕರ ನಿರ‍್ಗದ ಬಗೆಗಿನ ಕಳಕಳಿಯೂ  ಶ್ಲಾಘನೀಯ. ಮರ ಕಡಿಯುವುದರಿಂದ,  ಕೆರೆಗಳ ನಾಶದಿಂದ, ಜನರ ಹಾವಳಿಯಿಂದ  ಪಕ್ಷಿಗಳ ವಾಸಸ್ಥಾನಕ್ಕೆ ತೊಂದರೆಯಾಗುವುದರ ಬಗ್ಗೆ ದನಿಯೆತ್ತುತ್ತಾರೆ.  ಕಟ್ಟಿರುವ ಗೂಡು ನಾಶವಾಗದಂತೆ ಕಾಳಜಿ ವಹಿಸುತ್ತಾರೆ.  ಅಪಾಯದ ಅಂಚಿನಲ್ಲಿರುವ ಸಂಕುಲದ ಬಗ್ಗೆ ಮರುಗುತ್ತಾರೆ.  ಇವರ ಆಸಕ್ತಿಯಿಂದ ಪಕ್ಷಿಸಂಕುಲ ಉಳಿದು ಪರಿಸರ ಸಮೃದ್ಧಿಯಾಗಿರಲಿ ಎಂಬುದೇ ಆಶಯ.

ಪಕ್ಷಿಗಳೋ… ಪಕ್ಷಿವೀಕ್ಷಕರೋ Read Post »

ಇತರೆ

ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ

ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ   ಒಬ್ಬ ಮನುಷ್ಯ ಸಮಾಜಮುಖಿಯಾಗಿ ಚಿಂತಿಸಲು ಒಂದು ಕಾರಣ, ಘಟನೆ ಆತನೊಳಗೆ ಅಡಗಿರುತ್ತದೆ. ಪ್ರತಿಯೊಬ್ಬ ಮನುಷ್ಯನು ಶಿಕ್ಷಣವಂತನಾಗಬೇಕು, ಯಾರೂ ಕೂಡ ಶಿಕ್ಷಣದಿಂದ ವಂಚಿತನಾಗಬಾರದು ಎಂದು ಶಿಕ್ಷಣಕ್ಕಾಗಿಯೇ ದುಡಿಯುತ್ತ ಅದರ ಸೇವೆಯಲ್ಲಿಯೇ ನಿರತರಾಗಿರುವ ಹರೇಕಳ ಹಾಜಬ್ಬರು ಸರ್ಕಾರಕ್ಕಲ್ಲದೆ ಜನ ಸಾಮಾನ್ಯರಿಗೂ ಮಾದರಿ. ಮಂಗಳೂರು ತಾಲ್ಲೂಕಿನ ಹರೇಕಳ ಗ್ರಾಮದವರಾದ ಹಾಜಬ್ಬರು ತೀರಾ ಹಿಂದುಳಿದ ಗ್ರಾಮೀಣ ಪ್ರದೇಶದವರು. ಬೀದಿಬದಿಯಲ್ಲಿ ಬುಟ್ಟಿಯೊತ್ತು ಕಿತ್ತಲೆ ಹಣ್ಣನ್ನು ಮಾರಿ ಅದರಿಂದಲೇ ತಮ್ಮ ಕುಟುಂಬದ ಜೀವನ ನಡೆಸುವ ಕಾಯಕ ಯೋಗಿ. ಔಪಚಾರಿಕವಾದ ಶಿಕ್ಷಣವನ್ನೆ ಹೊಂದಿರದ ಇವರು ತುಳು ಮತ್ತು ಬ್ಯಾರಿ ಭಾಷೆಗಳ ಬಗ್ಗೆ ಮಾತ್ರ ತಿಳುವಳಿಕೆಯುಳ್ಳವರು. ಹೀಗೆ ಒಂದು ದಿನ ಕಿತ್ತಲೆ ಮಾರುತ್ತ ಒಂದು ಕೈಯಲ್ಲಿ ಬುಟ್ಟಿ ಹಿಡಿದು, ಮತ್ತೊಂದು ಕೈಯಲ್ಲಿ ಕಿತ್ತಲೇ ಹಿಡಿದು ಮಾರುತ್ತ ಸಾಗುವಾಗ 68 ವರ್ಷದ ವೃದ್ಧ ಇಂಗ್ಲೀಷ್ ದಂಪತಿಗಳು ಕಿತ್ತಲೇ ಹಣ್ಣನ್ನು ಕೊಂಡುಕೊಳ್ಳಲು “How Much” ಎಂದು ಕೇಳುತ್ತಾರೆ. ವರ್ಷಾನುಗಟ್ಟಲೆ ವ್ಯಾಪಾರ ಮಾಡುತಿದ್ದರು ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗದೆ ಮುಜುಗರಕ್ಕೊಳಗಾಗುತ್ತಾರೆ. ಇದಕ್ಕೆ ಮೂಲಕಾರಣ ನಾನು ಶಿಕ್ಷಣದಿಂದ ವಂಚಿತನಾಗಿರುವುದು ಎಂಬುದನ್ನು ಮನಗಾಣುತ್ತಾರೆ. ಈ ಘಟನೆಯೆ ಅವರ ಶಿಕ್ಷಣಕ್ರಾಂತಿಯ ತಿರುವು. ಹಾಜಬ್ಬರ ಹರೇಕಳ ಗ್ರಾಮದಲ್ಲಿ ಶಾಲೆಯೆ ಇರಲಿಲ್ಲ. ಈ ಕಾರಣಕ್ಕಾಗಿಯೆ ಅವರು ಶಿಕ್ಷಣವನ್ನೆ ಕಾಣಲಿಲ್ಲ. ಅಲ್ಲದೆ ಹಾಜಬ್ಬರು ಆ ಊರಿಗೆ ಶಾಲೆ ತರುವ ತನಕ ಅಲ್ಲಿನ ಮಕ್ಕಳು ಶಿಕ್ಷಣವಿಲ್ಲದೆ ಮೂಲಭೂತ ಹಕ್ಕಿನಿಂದ ವಂಚಿತರಾಗಿದ್ದರು. ನನಗಂತೂ ಶಿಕ್ಷಣ ಸಿಗಲಿಲ್ಲ, ಆದರೆ ಇಂದಿನ ಪೀಳಿಗೆ ಶಿಕ್ಷಣದಿಂದ ವಂಚಿತರಾಗಬಾರದೆಂದು, ಆ ಕಡುಬಡತನ ಜೊತೆಗೆ ಕಿತ್ತಲೆ ಹಣ್ಣು ವ್ಯಾಪಾರದ ನಡುವೆ ಸರ್ಕಾರಿ ಕಛೇರಿ, ಸಂಬಂಧಪಟ್ಟ ಅಧಿಕಾರಿಗಳ ಬಳಿಗೆ ಅಲೆದಾಡಿದರು. ಅವರ ಅಲೆದಾಟದ ಪರಿಶ್ರಮಕ್ಕೆ 17 ಜೂನ್ 2000 ನೇ ಇಸವಿಯಲ್ಲಿ ಹರೇಕಳಕ್ಕೆ ಪ್ರಾಥಮಿಕ ಶಾಲೆ ಮಂಜೂರಾಯಿತು.  ಸರ್ಕಾರ ಶಾಲೆಯನ್ನೆನೊ ಮಂಜೂರು ಮಾಡಿದೆ, ಆದರೆ ಮಕ್ಕಳಿಗೆ ಪಾಠ ಮಾಡಲು ಕಟ್ಟಡವಿಲ್ಲ. ಹೀಗಿರುವಾಗ ಹಾಜಬ್ಬರು ತಾವು ಕಿತ್ತಲೆ ಹಣ್ಣು ಮಾರಿ ಉಳಿತಾಯ ಮಾಡಿದ್ದ 25.000 ರೂ ಜೊತೆಗೆ ಇತರೆ ದಾನಿಗಳಿಂದ ಹಣ ಸಂಗ್ರಹಿಸಿ ಒಂದು ಎಕರೆ ಭೂಮಿ ಖರೀದಿಸಿ  ಮಕ್ಕಳಿಗೆ ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟರು. ಇದೀಗ ಆ ಶಾಲೆ ಪ್ರಾಥಮಿಕದೊಂದಿಗೆ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿದೆ. ಇಂದಿಗೂ ಸಹ ತನಗೆ ಬರುವ ಲಕ್ಷಾಂತರ ರೂ ಪ್ರಶಸ್ತಿ ಮೊತ್ತವನ್ನು ತಮಗಾಗಿ ಬಳಸದೆ ಶಾಲೆ ಅಭಿವೃದ್ಧಿಗಾಗಿಯೇ ಬಳಸುತ್ತಾರೆ. ವಿವಿಧ ದಾನಿಗಳಿಂದ ಈ ವರೆವಿಗೂ 70 ಲಕ್ಷ ರೂ ದೇಣಿಗೆ ಸಂಗ್ರಹಿಸಿ ಅದನ್ನು ಶಾಲೆಯ ಅಭಿವೃದ್ಧಿಗೆ ಬಳಸಿ ಯಶಸ್ವಿಯಾಗಿ ಅಕ್ಷರ ಸಂತನಾಗಿ ಜನಮಾಸದಲ್ಲಿ ನೆಲೆಸಿದ್ದಾರೆ. ಅಕ್ಷರ ಸಂತ ಹಾಜಬ್ಬರ ಕುರಿತು ಇರ್ಸತ್ ಪಜೀರ್ ರವರು ‘ಹರಕೇಳ ಹಾಜಬ್ಬ ಜೀವನ ಚರಿತ್ರೆ’ ಎಂಬ ಪುಸ್ತಕವನ್ನು ಬರೆದರು. ಅನಂತರ ಹಾಬಜ್ಜರ ಜೀವನ ಚರಿತ್ರೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಪಠ್ಯಕ್ರಮದಲ್ಲಿ ಸೇರಿಸಿತು. ಇವರ ಸಮಾಜ ಸೇವೆಯನ್ನು ಮೆಚ್ಚಿ ಬ್ರಿಟಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ (BBC) 2012 ರಲ್ಲಿ ‘ಅಕ್ಷರವಿಲ್ಲದ ಹಣ್ಣು ಮಾರಾಟಗಾರನ ಭಾರತೀಯ ಶಿಕ್ಷಣ ಕನಸು’ ಎನ್ನುವ ಶೀರ್ಷಿಕೆಯಡಿ ಲೇಖನ ಪ್ರಕಟಿಸಿತು.  CNN, IBN ಮತ್ತು Relaince Foundation ನವರು ‘The Real Hero’ ಪ್ರಶಸ್ತಿ ನೀಡಿದರು.  ಇದೀಗ ಅವರಿಗೆ ಭಾರತೀಯ ಸರ್ಕಾರ ಕೊಡಮಾಡುವ 2020 ರ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಭಾಜನರಾಗಿದ್ದಾರೆ. ಪ್ರಶಸ್ತಿ ತೆಗೆದುಕೊಳ್ಳುವಾಗಲೂ ರಾಷ್ಟ್ರಪತಿ ಭವನಕ್ಕೆ ಬರಿಗಾಲಿನಲ್ಲಿಯೇ ತೆರಳಿ ಸ್ವೀಕರಿಸಿದ ಇವರು ಶಿಕ್ಷಣ ಕ್ರಾಂತಿಯ ಕಣ್ಣಂತೆಯೆ.  ತಾನು ಒಂದಕ್ಷರವನ್ನು ಕಲಿಯದೆ ಈ ತಲೆಮಾರಿನ ಮಕ್ಕಳಿಗೆ ಅರಿವಿನ ದೀಪವನ್ನು ಬೆಳಗಿಸುತ್ತಲೆ, ತಾನು ಮಾತ್ರ ಎಡಗೈಯಲ್ಲಿ ಬುಟ್ಟಿಯೊತ್ತು ಬಲಗೈಯಲ್ಲಿ ಕಿತ್ತಲೆ ಹಣ್ಣಿಡಿದು ಶಾಲೆ ಮತ್ತು ಮಕ್ಕಳ ಓದಿನ ಬಗೆಯೆ ಧ್ಯಾನಿಸುತ್ತಿರುವ ಅಕ್ಷರ ಸಂತ ಹರೇಕಳ ಹಾಜಬ್ಬರು ಈ ಕಾಲಮಾನದಲ್ಲಿ ಸಂತೆಯೊಳಗೆ ನಿಂತ ಕಬೀರ. ಹಾರೋಹಳ್ಳಿ ರವೀಂದ್ರ

ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ Read Post »

You cannot copy content of this page

Scroll to Top