ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ವರ್ತಮಾನ

ಬರಗೂರರೆಂಬ ಬೆರಗು

ಲೇಖನ ಬರಗೂರರೆಂಬ ಬೆರಗು ಮಮತಾ ಅರಸೀಕೆರೆ ಪ್ರೊ.ಬರಗೂರು ರಾಮಚಂದ್ರಪ್ಪನವರ ಬಗ್ಗೆ ಬರೆಯುವುದೆಂದರೆ ಸಾಗರಕ್ಕೆ ಸೇರುವ ನದಿಗಳನ್ನು ಎಲ್ಲೋ ಕುಳಿತು ಎಣಿಸಿದಂತೆ.ಯಾವುದೇ ಉತ್ಪ್ರೇ  ಕ್ಷೆಯಿಲ್ಲದ ಮಾತುಗಳಿವು ಎಂದು ಅವರನ್ನು ಸನಿಹದಿಂದ ಬಲ್ಲವರಿಗೆಲ್ಲಾ ಚಿರಪರಿಚಿತ.ಅವರ ಹತ್ತು ಹಲವು ಮಜಲುಗಳ ವೈವಿಧ್ಯ ಚಟುವಟಿಕೆಗಳನ್ನು ಸಾಮಾನ್ಯವಾಗಿ ಎಲ್ಲರೂ ಬಲ್ಲರು.ನಾನಿಲ್ಲಿ ಬರಗೂರು ಸರ್ ಬಗ್ಗೆ ಅಕಾಡೆಮಿಕ್‌ ಅಲ್ಲದ ಕೆಲವೇ ಸರಳ ಮಾತುಗಳಲ್ಲಿ ಬರೆಯಲು ಪ್ರಯತ್ನಪಡುವೆ. ಬರಗೂರರನ್ನ ಕಂಡಿದ್ದು ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ.ಸಾಮಾನ್ಯವಾಗಿ ಆಯ್ದ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನ, ಅಂಕಣಗಳನ್ನು ತಪ್ಪದೇ ಓದುತ್ತಿದ್ದೆ.ಬಿ.ಆರ್.ಬರಹಗಳನ್ನು ಮೆಚ್ಚುತ್ತಿದ್ದೆ.ನಂತರ ಅಲ್ಲಿಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ದೂರದಿಂದ ಗಮನಿಸಿ ಭಾಷಣಗಳನ್ನು ಆಲಿಸುತ್ತಿದ್ದೆ.ನನ್ನ ವೈಚಾರಿಕ ಗುರುಗಳು ಸ್ವಾಮಿಯವರು ಒಮ್ಮೆ ಬಿ.ಆರ್.ರನ್ನು ತಮ್ಮ ಗುರುಗಳೆಂದೂ, ತಮ್ಮ ಅಧ್ಯಯನದ ಸಲುವಾಗಿ ಅವರು ವಹಿಸುತ್ತಿದ್ದ ವಿಶೇಷ ಆಸಕ್ತಿಯನ್ನು, ಪ್ರೀತಿ ಕಾಳಜಿಯನ್ನೂ ವರ್ಣಿಸಿ ತುಂಬು ಮೆಚ್ಚುಗೆಯಿಂದ ಸ್ಮರಿಸುವಾಗ ಸರ್ ಬಗ್ಗೆ ಮತ್ತಷ್ಟು ಅಭಿಮಾನವಾಯ್ತು. ಸ್ವಾಮಿ ಗುರುಗಳ ದೃಷ್ಟಿಯಲ್ಲಿ ಬರಗೂರರಿಗೆ ವಿಶೇಷ ಸ್ಥಾನಮಾನ. ಅದೇ ಭಾವದ ಮುಂದುವರಿಕೆ ನನ್ನಲ್ಲೂ. ಬಿ.ಆರ್.ಸರ್‌ನ ತೀರಾ ಹತ್ತಿರದಿಂದ ಕಂಡದ್ದು ಶ್ರವಣಬೆಳಗೊಳದಲ್ಲಿ. ನಮ್ಮ ಪರಿಚಯದ ಸ್ನೇಹಿತರೊಬ್ಬರು ಶ್ರವಣಬೆಳಗೊಳದಲ್ಲಿ ಸಿನೆಮಾ ಶೂಟಿಂಗ್ ನೋಡಲು ಆಹ್ವಾನಿಸಿದ್ದರು.ಬರಗೂರರು ಸಿನೆಮಾ ನಿರ್ದೇಶಕರು. ಸ್ನೇಹಿತರೊಂದಿಗೆ ತೆರಳಿ, ಕೆಲವು ಹೊತ್ತು ಅಲ್ಲಿದ್ದು ಸರ್‌ನ ಕೂಡ ಕ್ಲುಪ್ತವಾಗಿ ಮಾತನಾಡಿಸಿ ವಾಪಸ್ ಬಂದ ನೆನಪು. ನಂತರ ಮಾತನಾಡಲು ಸಿಕ್ಕಿದ್ದು ತೀರಾ ಕಡಿಮೆ.ಒಂದೆರಡು ಕಾರ್ಯಕ್ರಮಗಳಲ್ಲಿ ಪರಿಚಯಿಸಿಕೊಂಡಾಗ ಆತ್ಮೀಯವಾಗಿಯೇ ಮಾತನಾಡಿಸಿದರು. ಸಾಂಸ್ಕೃತಿಕ ವಿಷಯಗಳಿಗಾಗಿ ಆಗಾಗ ನಾನು ಮೆಸೇಜ್ ಮಾಡಿದಾಗ ತಪ್ಪದೇ ಉತ್ತರಿಸುವರು.ಶಿಕ್ಷಣ ಇಲಾಖೆಯ ಸುಧಾರಣೆಗೆ ಸಂಬಂಧಿಸಿದಂತೆ ಕೆಲವು ಅಹವಾಲು ಹೊತ್ತು ಡಿ ಎಸ್ ಈ ಆರ್ ಟಿ ಗೆ ತೆರಳಿದ್ದಾಗ ಪುಸ್ತಕ ಕಮಿಟಿ ಅಧ್ಯಕ್ಷರಾಗಿದ್ದ ಅವರು ಸುಮಾರು ಅವಧಿಯ ಕಾಲ ನಮ್ಮೊಂದಿಗೆ ಮಾತನಾಡಿ ಸಹನೆಯಿಂದ ಆಲಿಸಿ ಸೂಕ್ತ ಪ್ರತಿಕ್ರಿಯೆ ನೀಡಿದಾಗ ಅವರ ಸರಳತೆ, ಸಹೃದಯತೆ ಕಾಳಜಿ ಬಗ್ಗೆ ಖುಷಿಯಾಗಿತ್ತು.ಕೆಲವು ದಿನಗಳ ನಂತರ ಡಿ.ಎಸ್.ಈ.ಆರ್.ಟಿಯಲ್ಲಿಯೇ ಒಂದು ಕಾರ್ಯಕ್ರಮ ಆಯೋಜಿಸಿ ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ, ಗ್ರಂಥಾಲಯ ಸುಧಾರಣೆ ಕುರಿತಂತೆ ಸಲಹೆ ಸೂಚನೆ ನೀಡಲು ಬರಹಗಾರ ಶಿಕ್ಷಕರನ್ನು ಆಹ್ವಾನಿಸಿದ್ದರು.ಪಠ್ಯಪುಸ್ತಕ ಕಮಿಟಿಯಲ್ಲಿ ಬರಹಗಾರರಿದ್ದರೆ ಅದರ ಸ್ವರೂಪ ಮತ್ತಷ್ಟು ಉತ್ತಮವಾಗುತ್ತಿತ್ತೇನೋ ಎಂದ ಅವರ ದೂರದರ್ಶಿತ್ವದ ಮಾತಿನ್ನೂ ನನಗೆ ನೆನಪಿದೆ. ಸಾಂಸ್ಕೃತಿಕ ನೀತಿಯ ವರದಿಯನ್ನು ಸಿದ್ದಪಡಿಸಿದ್ದು, ಅದರ ಜಾರಿಗೆ ಸಾಂಸ್ಕೃತಿಕ ವಲಯ ಒತ್ತಾಯಿಸುತ್ತಿದ್ದುದನ್ನು ಗಮನಿಸುತ್ತಿದ್ದೆ. ಮತ್ತು ಆ ಸಂಬಂಧ ಕೆಲವು ಸಂದೇಶ ಕಳಿಸಿದ್ದು ಬಿಟ್ಟರೆ ನಂತರ ಅವರ ಸಿನೆಮಾ ಆರಂಭವಾಗುವಾಗ ಮತ್ತೆ ಮೆಸೇಜ್‌ಗಳು. ಸಾಂಸ್ಕೃತಿಕ ವಲಯದ ಕೆಲವು ಅಸಂಬದ್ಧ ನಿರ್ಣಯಗಳಿಂದ ನಮಗೆ ಹತಾಶೆಯಾದಾಗ ಪುನಃ ಸಂಪರ್ಕ ಮಾಡಿದ್ದೆ.ತಡಮಾಡದೇ ಪ್ರತಿಕ್ರಿಯಿಸುತ್ತಿದ್ದ ಅವರ ಸಂವಹನ ಗುಣ ಭರವಸೆ ತುಂಬುತ್ತಿತ್ತು. ತೀರಾ ಇತ್ತೀಚೆಗೆ ಲಾಕ್‌ಡೌನ್‌ ಆರಂಭವಾದಾಗ ಎಲ್ಲರೂ ಭೀತಿಯಿಂದ ಗೃಹಬಂಧನದ ರುಚಿ ನೋಡುವಂತಾಯಿತು. ಏಕತಾನತೆ ಹಾಗೂ ಕ್ಲೇಷಗಳನ್ನು ತಾತ್ಕಾಲಿಕವಾಗಿ ಮರೆಸುವ ಸಾಧನವಾಗಿ ಬರಹ ನೆರವಿಗೆ ಬಂದು ಒಂದಷ್ಟು ಕವಿತೆ ಬರೆದು ಹಿರಿಯ ಲೇಖಕರಿಗೆ ಕಳಿಸುವಾಗ ಬಿ.ಆರ್.ಸರ್ ಗು ಕಳಿಸಿದೆ. ಸಕಾರಾತ್ಮಕ ಸ್ಪಂದನೆಯಿಂದ ಹುರಿಗೊಂಡೆ.ಅದೇ ವೇಳೆಗೆ ಕೋಲಾರದ ಗೆಳೆಯರ ಯೋಜನೆಯೊಂದಕ್ಕೆ ಬರಗೂರರನ್ನ ಯೂಟ್ಯೂಬ್  ಚಾನಲ್ ಗೆ ಮೌಖಿಕವಾಗಿ ಪರಿಚಯಿಸುವ ಸದಾವಕಾಶ ದಕ್ಕಿತು. ಆ ಸಂದರ್ಭದಲ್ಲಿ ಅವರ ಕುರಿತು ಮತ್ತಷ್ಟು ತಿಳಿಯುವ ಸಲುವಾಗಿ  ಅಂತರ್ಜಾಲ ತಡಕಾಡುವಾಗ ದಕ್ಕಿದ್ದು ಅಪಾರ ಸಾಮಗ್ರಿ . ಅಲ್ಲಿಂದ ಶುರುವಾಯಿತು ನನ್ನ ಹುಡುಕುವಿಕೆ.ಅದೆಷ್ಟೊಂದು ದಾಖಲೆಗಳು.ಯೂಟೂಬ್ , ಪತ್ರಿಕೆ, ವಿಕಿಪಿಡಿಯಾದಲ್ಲೆಲ್ಲೆಲ್ಲಾ ಬಹಳಷ್ಟು ಮಾಹಿತಿಗಳು. ಓದುತ್ತಾ, ನೋಡುತ್ತಾ ಅವುಗಳಲ್ಲಿ ಕೆಲವು ತಪ್ಪಿಹೋದಾವೆಂದು ಎಚ್ಚರ ವಹಿಸುವಾಗ ಎಫ್.ಬಿ. ಪೇಜ್‌ ತೆರೆದು ಅಲ್ಲಿ ಸಂಗ್ರಹಿಸುತ್ತಾ ಹೋದೆ. ಅವರ ಸಾಮಾಜಿಕ ತುಡಿತ, ಸ್ಪಂದನೆ ಇಷ್ಟವಾಗುತ್ತ ಮತ್ತಷ್ಟು ಮಗದಷ್ಟು ಅಭಿಮಾನಿಯಾದೆ. ಸಮಾಜವನ್ನು,ತನ್ನ ಸುತ್ತಲಿನ ಪ್ರತೀ ಸಂದರ್ಭವನ್ನು ಕುರಿತು ಅವರ ಅಪೂರ್ವ ಒಳನೋಟವುಳ್ಳ ಗ್ರಹಿಕೆ, ಆ ಅರಿವಿನ ವಿಸ್ತಾರ, ಓದಿನ ವ್ಯಾಪ್ತಿ, ಮುಂದ್ಗಾಣಿಕೆ, ಮುಂದಾಲೋಚನೆ ದೂರದೃಷ್ಟಿಯ ಮಾತುಗಳು ನನಗೆ ಬೇರೆಯದೇ ವಿಶ್ವವನ್ನು ಮನಗಾಣಿಸತೊಡಗಿದವು. ಪ್ರತೀ ಕದಲಿಕೆಯನ್ನು ಅವರು ಕಾಣುವ ರೀತಿ, ವಿಮರ್ಶಿಸುವ ಪರಿ, ವಿಶಿಷ್ಟ ಆಯ್ಕೆ, ವಸ್ತು, ಘಟನೆ, ವಾತಾವರಣ, ಮೊದಲಾದವನ್ನ ಕಾಣಬೇಕಾದ ನೋಟದ ಪರಿಚಯ, ಮೊದಲಾದವುಗಳಲ್ಲಿ ಅವರಿಗೆ ಅವರೇ ಸಾಟಿ. ಸೂಕ್ಷ್ಮಾತಿಸೂಕ್ಷ್ಮ ಸ್ವಭಾವದ ಮೇಷ್ಟ್ರು ಎಳೆ ಗರಿಕೆಯ ಚಲನೆಯಲ್ಲೂ ಅದ್ಭುತವನ್ನು ಕಾಣಬಲ್ಲರು.ಕೂದಲು ಸೀಳಿದಂತಹ ಆಂತರಿಕ ಅವಲೋಕನದ ತಾಕತ್ತು ಅವರ ಅಗಾಧ ಶಕ್ತಿ.ಇಷ್ಟೆಲ್ಲ ವಿಷಯವನ್ನ ಅಂತರ್ಜಾಲದ ಮೂಲಕ ಮಾತ್ರ ಪಡೆದ ನನಗೆ ಅವರ ಶಿಷ್ಯ ವರ್ಗದವರ ಮೇಲೆ ಅಸೂಯೆಯಾಗಿದ್ದಂತೂ ಖರೆ.ಯುವ ಸಮುದಾಯವನ್ನು, ಯುವ ಪೀಳಿಗೆಯನ್ನು ಬಿ.ಆರ್.ಸರ್ ಪ್ರೋತ್ಸಾಹಿಸುವ ಪರಿಯ ಬಗ್ಗೆ ಅವರ ಆತ್ಮೀಯರಿಂದಲೇ ತಿಳಿಯಬೇಕು.ಅವರಿಂದ ಸಹಾಯ ಸಹಕಾರ ಪಡೆದಿರುವ ಅಪಾರ ಶಿಷ್ಯ ಬಳಗದ ದಂಡೇ ಇದೆ. ಯೂಟೂಬಿನಲ್ಲಿ ಅವರ ಹಾಗೂ ಅವರ ಪತ್ನಿಯವರ ಆತಿಥ್ಯ ಸತ್ಕಾರಗಳ ಬಗ್ಗೆ ತಿಳಿದು ಅಚ್ಚರಿಯಾಗಿತ್ತು. ಚಳುವಳಿ, ಸಂಘಟನೆ ಸಾಮಾಜಿಕವಾಗಿ ತೊಡಗಿಸಿಕೊಂಡವರಿಗೆ ಸೃಜನಾತ್ಮಕತೆ ಸಾಧ್ಯವಿಲ್ಲ ಎಂಬುದೊಂದು ಮಾತಿದೆ.ಅದನ್ನ ಸಾರಾಸಗಟಾಗಿ ಸುಳ್ಳು ಎಂದು ಪ್ರತಿಪಾದಿಸಿದವರು ಮೇಷ್ಟ್ರು.ಸಂವೇದನಾಶೀಲ ಬರಹಗಳ ಮೂಲಕ ಎಲ್ಲವನ್ನೂ ಸಮತೂಗಿಸಿ ತೋರಿಸಿದವರು. ಪದ್ಯಗಳ ಮೂಲಕವೂ ನವಿರುತನವನ್ನು ಸೊಗಸಾಗಿ ನಿರೂಪಿಸಿದವರು.ಒಂದು ವಿಷಯವನ್ನು ವಿಂಗಡಿಸಿ ವಿಶ್ಲೇಷಿಸುವುದರ ಮೂಲಕ ಆವಾಹಿಸಿಕೊಳ್ಳುವ ಮಾರ್ಗಗಳನ್ನು ಪರಿಚಯಿಸಿದವರು. ನಾಣೊಂದು ಪದ್ಯದಲ್ಲಿ ಕೊಂಚ ಸಂಘರ್ಷವನ್ನು ಅಡಕಗೊಳಿಸಿದಾಗ ‘ ಸಂವಹನ ಬೀದಿಯಲ್ಲಿ ನಿಂತು ಜಗಳವಾಡಿದಂತಿರಬಾರದು’ಎಂಬ ಮಾತಿನ ಮೂಲಕ ನಯವಾದ ಮಾತಿನ ಪೆಟ್ಟು ಕೊಟ್ಟು ತಿದ್ದಿದವರು.ಸಿನೆಮಾ ಮಾಧ್ಯಮದ ಮೂಲಕ ಅವರು ಸಾಧಿಸಿದ್ದು ಬಹಳ.ಕಲಾತ್ಮಕತೆ ಮೂಲಕ ಸದಭಿರುಚಿಯನ್ನು ಯಥೇಚ್ಚವಾಗಿ ಹಂಚಿದವರು. ಒಂದೊಂದು ಸಿನೆಮಾವು ಕ್ಲಾಸಿಕ್.ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರ ಸಾಕಷ್ಟು ಕೆಲಸಗಳು ಇಂದಿಗೂ ಜನಜನಿತ.ಅವರ ಕತೆಗಳು, ಕವನಗಳು, ಅಂಕಣ ಬರಹಗಳು, ಕಾದಂಬರಿಗಳನ್ನು ಓದುವಾಗಅವರ ಸಂಪೂರ್ಣ ನಿಲುವು ಖಚಿವಾಗುತ್ತದೆ.ಬದ್ಧತೆ, ತಲ್ಲೀನತೆಗೆ ಅವರೇ ಮಾದರಿ.ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಕಾಣಿಸಿದ ಅವರು ತೊಡಗಿಕೊಳ್ಳದ ಕ್ಷೇತ್ರಗಳೇ ಇಲ್ಲವೆನ್ನುವಷ್ಟು ಸಾಧಿಸಿದವರು. ಸ್ವತಃ ಪ್ರಾಧ್ಯಾಪಕರಾಗಿದ್ದು, ಈಗಲೂ  ಶೈಕ್ಷಣಿಕ ಸವಾಲುಗಳಿಗೆ ಸಕಾಲದಲ್ಲಿ ಧಾವಿಸಿ ನೀಡುವ ಸಲಹೆಗಳು, ರಾಜಕೀಯವಾಗಿ ಒದಗಿಸುವ ಮಾರ್ಗದರ್ಶನಗಳು ಮುತ್ಸದ್ದಿಯ ಅಸಾಧಾರಣಗುಣದವು. ಇಷ್ಟೆಲ್ಲಾ ಜ್ಞಾನ ದಕ್ಕಿದ್ದೂ ಕೂಡ ಪತ್ರಿಕೆ ಮತ್ತು ಅಂತರ್ಜಾಲದಲ್ಲಿಯೇ.ಇಷ್ಟೆಲ್ಲ ಹೇಳಲು ಅರ್ಹತೆಯಿದೆಯೋ ಇಲ್ಲವೋ,  ಸಂಕೋಚ ಮುಜುಗರದಿಂದಲೇ ಹೇಳಬೇಕಾಯಿತು. ಗ್ರಾಮೀಣ ಹಿನ್ನೆಲೆಯಿಂದ ಬದುಕನ್ನು ರೂಪಿಸಿಕೊಂಡು, ಸತತ ಪ್ರಯತ್ನ ಹಾಗೂ ನಿರಂತರ ಬದ್ಧತೆಯ ಛಲದ ಮೂಲಕ ಅಸಾಮಾನ್ಯ ಚಿಂತಕರಾದ, ಸಾಂಸ್ಕೃತಿಕ ಚಾಲಕರಾದ ಬಿ.ಆರ್.ಮೇಷ್ಟು ಜನ್ಮದಿನ ಅಕ್ಟೋಬರ್ ತಿಂಗಳಿನಲ್ಲಿಯೇ ಬರುತ್ತದೆ. ಈ ಹಿಂದೆ ಅವರ ಬಳಗ ಏರ್ಪಡಿಸಿದ್ದ ‘ಬರಗೂರು-೭೦, ವಿಚಾರ ಸಂಕಿರಣ’ ದಲ್ಲಿ ಪಾಲ್ಗೊಂಡ ಖುಷಿ ನನ್ನದು.ಈಗಲೂ ಇದೇ ಅಕ್ಟೋಬರ್ ೨೯ ರಂದು ಬೆಳಗ್ಗೆ ಅವರ ಶಿಷ್ಯವರ್ಗ ರಾಷ್ಟ್ರೀಯ ವೆಬಿನಾರ್‌ ಆಯೋಜಿಸಿ ಗುರುಗಳ ಬಗ್ಗೆ ಹಿರಿಯ ಲೇಖಕರಿಂದ ಮಾತನಾಡಿಸಲಿದ್ದಾರೆ.ಶೀರ್ಷಿಕೆ- ನಮ್ಮ ಮೇಷ್ಟ್ರು, ನಮ್ಮ ಹೆಮ್ಮೆ. ಹೆಮ್ಮೆಯ ಸಂಗತಿಯೇ. ಬರಗೂರರ ಬಳಗ, ಅಭಿಮಾನಿಗಳು, ಅವರ ಅನುಯಾಯಿಗಳ ಸಂಖ್ಯೆ ಅಪಾರ. ಅವರ ಕುರಿತು ಅದೆಷ್ಟೋ ಪಿ.ಎಚ್.ಡಿ.ಗಳಾಗಿವೆ. ಬರಹಗಳು, ಲೇಖನಗಳು ಬಂದಿವೆ. ಆ ಮಟ್ಟಕ್ಕಲ್ಲದಿದರೂ ಕಿರು ಅಭಿಮಾನಿಯಾಗಿ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗದೆ ಕೆಲವೇ ಪದಗಳಲ್ಲಿ ಗ್ರಹಿಕೆಗೆ ದಕ್ಕಿದಂತೆ ದಾಖಲಿಸಲು ಯತ್ನಿಸಿರುವೆ. ************************************** ಫೋಟೊ ಆಲ್ಬಂ

ಬರಗೂರರೆಂಬ ಬೆರಗು Read Post »

ಇತರೆ, ವರ್ತಮಾನ

ಮಣ್ಣಿನ ಕಣ್ಣು ವರ್ತಮಾನದ ರಾಜಕೀಯ,ಸಾಮಾಜಿಕ, ಆಗುಹೋಗುಗಳ ಬಗೆಗಿನ ಬರಹಗಳು ರೈತರ ಆತ್ಮಹತ್ಯೆ: ತಡೆಯಬಲ್ಲಂತಹ ಒಂದಷ್ಟು ಯೋಜನೆಗಳ ಬಗ್ಗೆ!          ರೈತನ ಆತ್ಮಹತ್ಯೆ ಎನ್ನುವುದು ಈಗೀಗ ಮಾಮೂಲಿಯಾದ ಸುದ್ದಿಯಾಗಿಬಿಟ್ಟಿದೆ ಪ್ರತಿ ವರ್ಷವೂ ಒಂದೋ ಬರಗಾಲ ಎದುರಾಗುತ್ತದೆ, ಇಲ್ಲ ಅತಿವೃಷ್ಠಿಯ ಭೂತ ಬಂದೆರಗುತ್ತದೆ. ಬೆಳೆನಷ್ಟವಾಗಿ ಬೀದಿಗೆ ಬೀಳುವ ರೈತ ವಿಧಿಯಿಲ್ಲದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.. ವಿರೋಧಪಕ್ಷಗಳು ಆಡಳಿತ ಪಕ್ಷದವರ ವೈಫಲ್ಯದ ಬಗ್ಗೆ ಹೇಳಿಕೆ ನೀಡಿ, ತೀರಾ ಮನಸ್ಸು ಬಂದರೆ  ಸದರಿ ರೈತನ ಮನೆಗೆ ಟಿ.ವಿ.ಕ್ಯಾಮೆರಾದೊಂದಿಗೆ ಬೇಟಿ ನೀಡಿ ಒಂದಿಪ್ಪತ್ತು ಸಾವಿರದ ಚೆಕ್ ನೀಡಿ ಮುಂದಿನ ಚುನಾವಣೆಗೆ ಒಂದಿಷ್ಟು ಮತಗಳು ನಿಕ್ಕಿಯಾದವೆಂದು ಸಂಭ್ರಮಿಸುತ್ತಾರೆ.  ಸರಕಾರವೂ ಒಂದಿಷ್ಟು ಪರಿಹಾರ ಘೋಷಿಸಿ ತನಿಖೆಗೆ ಒಂದು ಸಮಿತಿ ನೇಮಿಸಿ ಮುಂದಿನ ವರ್ಷ ಇಂತಹ ಆತ್ಮಹತ್ಯೆಗಳು ನಡೆಯದಂತೆ ನೋಡಿಕೊಳ್ಳುವುದು ತಮ್ಮ  ಉದ್ದೇಶವೆಂದೆ ಘೋಷಿಸಿ ಮತ್ತೆ ಮಲಗುತ್ತವೆ.ಪ್ರತಿ ವರ್ಷ ಇಂತಹ ರಾಜಕೀಯ ಕೃಪಾಪೋಷಿತ ನಾಟಕಗಳು ನಡೆಯುತ್ತಲೇ ಇರುತ್ತವೆ. ನಾವೂ ಕೂಡ ಯಾವುದೋ ನಾಟಕದ ಪ್ರೇಕ್ಷಕರಂತೆ ನೋಡುತ್ತ ಕೂರುತ್ತೇವೆ. ತೊಂಭತ್ತರ ದಶಕದವರೆಗೂ ರೈತರ ಆತ್ಮಹತ್ಯೆಗಳು ವಿರಳವಾಗಿದ್ದವು. ಆದರೆ ಜಾಗತೀಕರಣದ ನಂತರ ನಮ್ಮ ಪ್ರಗತಿಯ ಹಾದಿಯನ್ನು ಬದಲಾಯಿಸಿಕೊಂಡ ನಾವು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟೆವು. ಇದರ ಪರಿಣಾಮವಾಗಿ ಮೊದಲು ಶೇಕಡಾ 72ರಷ್ಷಟಿದ್ದ ನಮ್ಮ ಕೃಷಿ ಆದಾಯ ಇದೀಗ ಕೇವಲ ಶೇಕಡಾ 12ಕ್ಕೆ ಇಳಿಯುವಂತಾಗಿದೆ. ಕೈಗಾರಿಕೆಗಳಿಗೆ ನೀಡುವ ಯಾವ ಸೌಲಭ್ಯವೂ ಕೃಷಿ ಕ್ಷೇತ್ರಕ್ಕೆ ದೊರೆಯದಂತಾಗಿ ಈ ಕ್ಷೇತ್ರ ಸೊರಗತೊಡಗಿದೆ. ಸಮಯಕ್ಕೆ ಸರಿಯಾಗಿಬರದ ಮಳೆ, ಒಮ್ಮೆಲೆ ಬಂದೆರಗುವ ಅತಿವೃಷ್ಠಿ, ದೊರೆಯದ ಬ್ಯಾಂಕುಗಳ ಸಾಲ, ಉತ್ತಮ ಗುಣಮಟ್ಟದ ಬೀಜ ಗೊಬ್ಬರಗಳ ಕೊರತೆ, ಬೆಳೆದ ಬೆಳೆಗೆ ದೊರೆಯದ ನ್ಯಾಯಯುತ ಮಾರುಕಟ್ಟೆ ಬೆಲೆಗಳು ರೈತನನ್ನು ಅಸಹಾಯಕತೆಯಿಂದ ಹತಾಶೆಗೆ ದೂಡಿ ಅವನನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿವೆ. ಇವೆಲ್ಲವುಗಳ ಅರಿವಿದ್ದೂ ಸರಕಾರಗಳು ರೈತರ ಬಗ್ಗೆ ಕಾಳಜಿ ತೋರದೆ ದಪ್ಪ ಚರ್ಮವನ್ನು ಬೆಳೆಸಿಕೊಂಡು ಅವನನ್ನು ಮತ್ತಷ್ಟು ಹತಾಶೆಗೆ ದೂಡುತ್ತಿವೆ.      ಪ್ರತಿವರ್ಷ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಇದಕ್ಕೊಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಆದ್ದರಿಂದ ಇಂತಹದೊಂದು ಸಮಸ್ಯೆಗೆ ಸರಕಾರ ಒಂದು ಶಾಶ್ವತವಾದ ನೀತಿಯೊಂದನ್ನು ಅಳವಡಿಸಿಕೊಂಡು ಮುಂದುವರೆದರೆ ಮಾತ್ರ ಭವಿಷ್ಯದಲ್ಲಿ ರೈತನ ಆತ್ನಹತ್ಯೆಗಳನ್ನು ತಡೆಯಬಹುದು ಜೊತೆಗೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ. ಈ ದಿಸೆಯಲ್ಲಿ ಸರಕಾರವೊಂದು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ  ಒಂದಿಷ್ಟು ಸಲಹೆ ಸೂಚನೆಯನ್ನು ಈ ಲೇಖನದ ಮೂಲಕ ನೀಡಲು ಪ್ರಯತ್ನಸಿದ್ದೇನೆ. ಬೆಳೆ ವಿಮೆ ಯೋಜನೆ:      ಈಗಿರುವ ಬೆಳೆ ವಿಮಾ ಯೋಜನೆ ಯಾವುದೇ ವೈಜ್ಞಾನಿಕ ಮಾನದಂಡವನ್ನೂ ಹೊಂದಿಲ್ಲ  ಮತ್ತು ಇಂತಹ ವಿಮೆಯ ಬಗ್ಗೆ ರೈತರಿಗೂ ಸಂಪೂರ್ಣ ಅರಿವಿಲ್ಲ.  ಆದ್ದರಿಂದ ಬೆಳೆಯುವ ಬೆಳೆಯ ಆಧಾರದಲ್ಲಿ  ಇಡೀ ರಾಜ್ಯವನ್ನು ಒಂದಷ್ಟು ವಿಭಾಗಗಳಾಗಿ ವಿಂಗಡಿಸಬೇಕು. ಆಯಾ ಪ್ರದೇಶದಲ್ಲಿ ಬೆಳೆಯುವ ಮುಖ್ಯ ಬೆಳೆಯ ಬಗ್ಗೆ ತಜ್ಞರು ಅದ್ಯಯನ ಮಾಡಿ  ಒಂದು ಏಕರೆಯಲ್ಲಿ ಆ ಬೆಳೆ ಬೆಳೆಯಲು  ತಗುಲಬಹುದಾದ ಅಂದಾಜು ವೆಚ್ಚವನ್ನು  ಮತ್ತು ಬರಬಹುದಾದ ಆದಾಯದ ಪ್ರಮಾಣವನ್ನು  ನಿಗದಿ ಪಡಿಸಬೇಕು. ತದನಂತರ ಒಂದು ಏಕರೆಗೆ ಇಷ್ಟು ಎಂದು ವಿಮಾಕಂತನ್ನು ನಿಗದಿಪಡಿಸಬೇಕು. ಹೀಗೆ ನಿಗದಿಪಡಿಸುವ ಮೊತ್ತ ರೈತನಿಗೆ ಹೊರೆಯಾಗುವಂತಿರಬಾರದು. ಆಯಾ ಪಂಚಾಯಿತಿ ವ್ಯಾಪ್ತಿಯ ವ್ಯವಸಾಯ ಸೇವಾ ಸಹಕಾರಸಂಘ(ಸೊಸೈಟಿ)ಗಳಲ್ಲಿ ಗ್ರಾಮಲೆಕ್ಕಿಗರ ಮೇಲುಸ್ತುವಾರಿಯಲ್ಲಿ  ರೈತರು ವಿಮಾ ಕಂತು ಪಾವತಿ ಮಾಡುವ ಮತ್ತು ಹಾಗೆ ಕಂತು ಪಾವತಿ ಮಾಡಿದ 24 ಗಂಟೆಗಳ ಒಳಗೆ ಕೃಷಿಬಾಂಡ್ ನೀಡುವ ವ್ಯವಸ್ಥೆ ಮಾಡಬೇಕು. ಸಣ್ಣ ರೈತರಿಗೆ ಈ ವಿಮಾ ಮೊತ್ತವನ್ನು ಕಟ್ಟುವುದು ಹೊರೆಯಾಗುವುದರಿಂದ ಗುರುತಿಸಿದ ಸಣ್ಣ ರೈತರ ವಿಮಾ ಮೊತ್ತವನ್ನು ಸರಕಾರದ ಕೃಷಿ ಇಲಾಖೆಯೇ ಭರಿಸುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪ್ರತಿ ಬಜೆಟ್ಟಿನಲ್ಲೂ ಸದರಿ ಇಲಾಖೆಗೆ ಇಂತಿಷ್ಟೆಂದು ಅನುದಾನ ಬಿಡುಗಡೆ ಮಾಡಬೇಕು.  ಇಂತಹ ಬೆಳೆ ವಿಮೆಯನ್ನು ಸರಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು.ಅಕಸ್ಮಾತ್ ಬೆಳೆ ನಾಶವಾದರೆ  ವಿಮೆಯ ಪರಿಹಾರ ಮೊತ್ತವನ್ನು ಮೊದಲೇ ಅಂದಾಜಿಸಿದರೀತಿಯಲ್ಲಿ  ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಬೇಕು. ಬೆಳೆನಷ್ಟದ ಬಗ್ಗೆ ಅಧಿಕೃತವಾಗಿ ಪ್ರಮಾಣ ಪತ್ರ ನೀಡುವುದಕ್ಕೆ  ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಜ್ಞರುಗಳ ಒಂದು ಸಮಿತಿ ಮಾಡಿ  ಗರಿಷ್ಠ ಮೂರುದಿನಗಳಲ್ಲಿ ಈ ವರದಿ ನೀಡುವ ಕಾನೂನು ಜಾರಿಗೊಳಿಸಬೇಕು. ಹೀಗೆ ವರದಿ ನೀಡಲು ವಿಫಲವಾದರೆ ಆ ಸಮಿತಿಗಳವರೆ ಪರಿಹಾರದ ಹಣವನ್ನು ನೀಡಬೇಕೆನ್ನುವ ಷರತ್ತನ್ನು ವಿದಿಸಬೇಕು. ಅಂತಹ ಸಮಿತಿಯಲ್ಲಿ ಸ್ಥಳೀಯ ಗ್ರಾಮಲೆಕ್ಕಿಗ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖೆಗಳ ಮುಖ್ಯಸ್ಥರು ಇರುವಂತೆ ನೋಡಿಕೊಂಡು ತಹಶೀಲ್ದಾರ್ ಇಂತಹ ಸಮಿತಿಯ ಅದ್ಯಕ್ಷರಾಗಿರುವಂತೆ ನಿಯಮ ರೂಪಿಸಬೇಕು.ಹೀಗೆ ಬೆಳೆ ನಷ್ಟದ ಪರಿಹಾರ ನೀಡಲು ಬೇಕಾದ ಮೊತ್ತವನ್ನು ವಿಮಾ ಕಂತುಗಳಿಂದ ಸಂಗ್ರಹಿಸುವುದರ ಜೊತೆಗೆ ಸರಕಾರವೂ ಆಯವ್ಯಯದಲ್ಲಿ ಸಾಕಷ್ಟು ಅನುದಾನ ಒದಗಿಸ ಬೇಕು.  ಅಗತ್ಯವೆನಿಸಿದರೆ ಕೃಷಿ ಇಲಾಖೆಯಲ್ಲಿಯೇ ಇದಕ್ಕೊಂದು ಪ್ರತ್ಯೇಕ ವಿಭಾಗವನ್ನು ರಚಿಸಿ, ಕೃಷಿಯಲ್ಲಿ ಪಧವೀದರರಾಗಿರುವವರನ್ನು ನೇಮಕ ಮಾಡಬಹುದು. ತನ್ಮೂಲಕ ಕೃಷಿ ಪಧವೀದರರಿಗೆ ಉದ್ಯೋಗಾವಕಾಶವನ್ನೂ ಒದಗಿಸಬಹುದಾಗಿದೆ. ಇಂತಹದೊಂದು ಬೆಳೆವಿಮಾ ಯೋಜನೆಯನ್ನು ಜಾರಿಗೆ ತಂದಲ್ಲಿ ಶೇಕಡಾ ತೊಂಭತ್ತೈದರಷ್ಟು ಆತ್ಮಹತ್ಯೆಗಳನ್ನು ನಿಲ್ಲಿಸಬಹುದಾಗಿದೆ. ಇಲ್ಲಿ ನಾನು ಪ್ರಸ್ತುತ ಪಡಿಸಿದ ಯೋಜನೆಯ ವಿವರಗಳಲ್ಲಿ ಕೆಲವೊಂದು ತಾಂತ್ರಿಕ ಅಡಚಣೆಗಳು ಇರಬಹುದಾರೂ ತಜ್ಞರುಗಳ ಸಮಿತಿಯೊಂದು ಇಂತಹ ಯೋಜನೆಯನ್ನು ಇನ್ನೂ ಸರಳೀಕರಿಸಿ ತಳಮಟ್ಟದಲ್ಲಿ ಜಾರಿಗೆ ತರಬಹುದಾಗಿದೆ.ಇದಕ್ಕಾಗಿ ಸರಕಾರ ಕೃಷಿಯನ್ನು ನಿಜವಾದ ಅರ್ಥದಲ್ಲಿ ಅದ್ಯಯನ ಮಾಡಿರುವ ವಿದ್ವಾಂಸರುಗಳನ್ನು, ವಿಮಾ ಕ್ಷೇತ್ರದಲ್ಲಿನ ಅನುಭವಿಗಳನ್ನು, ರೈತ ಮುಖಂಡರುಗಳನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಿ ಇಂತಹದೊಂದು ಬೆಳೆವಿಮೆಯ ಯೋಜನೆಯನ್ನು ರೂಪಿಸಿಕೊಡುವಂತೆ ಹೇಳಬಹುದಾಗಿದೆ. ಒಂದು ಪ್ರಜಾಸತ್ತಾತ್ಮಕ ಸರಕಾರಕ್ಕೆ ಇದೇನು ತೀರಾ ದೊಡ್ಡವಿಚಾರವಲ್ಲ, ನಿಜ. ಆದರೆ ನಮ್ಮ ಸರಕಾರಗಳನ್ನು ನೆಸುವ ರಾಜಕಾರಣಿಗಳಿಗೆ ಈ ಬಗ್ಗೆ ಇಚ್ಚಾಶಕ್ತಿ ಇರಬೇಕಾಗುತ್ತದೆ. ರೈತರಿಗೆ ನೀಡುವ ಬೆಳೆಸಾಲ    ಇವತ್ತು ನಮ್ಮ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಖಾಸಗಿಯವರಿಂದ ಪಡೆದ ಸಾಲದ ಬಡ್ಡಿ ಕಟ್ಟಲಾಗದೆ ಹೋಗುವುದಗಿದೆ. ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ನೀಡುವ ವಿಚಾರದಲ್ಲಿ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಸರಕಾರವೇ ಮುಂದೆ ನಿಂತು ರೈತರ ಬೆಳೆವಿಮೆಯಿಂದ ಸಿಗಬಹುದಾದ ಪರಿಹಾರವನ್ನು ಅದು ನೀಡುವ ಸಾಲಕ್ಕೆ ಗ್ಯಾರಂಟಿಯಾಗಿ ನೀಡುವ ಪದ್ದತಿಯನ್ನು ಅಳವಡಿಸಿಕೊಂಡು ಈ ಬಗ್ಗೆ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ. ಎಷ್ಟು ಸಾಲ ನೀಡಬೇಕು ಎನ್ನುವುದರ ಬಗ್ಗೆಯೂ ಬೆಳೆವಿಮೆ ಮಾಡುವಾಗ ಅಂದಾಜಿಸಿದ್ದ ವೆಚ್ಚದ ಆಧಾರದ ಮೇಲೆಯೇ ಬ್ಯಾಂಕುಗಳು ಸಾಲ ನೀಡುವುದನ್ನು ಕಡ್ಡಾಯಗೊಳಿಸಬೇಕು. ಹೀಗೆ ನೀಡುವ ಸಾಲಗಳು ಸದುಪಯೋಗವಾಗುವಂತೆ ರೈತರು ಖರೀಧಿಮಾಡುವ ಬೀಜ ಗೊಬ್ಬರಗಳನ್ನು ಪೂರೈಸುವವರಿಗೆ ಚೆಕ್ ರೂಪದಲ್ಲಿಯೇ ಬ್ಯಾಂಕಿನಿಂದ ಹಣ ಸಂದಾಯವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ರೈತರು ದೊರೆತ ಹಣವನ್ನು ಬೇರೆ ಉದ್ದೇಶಗಳಿಗೆ ವ್ಯಯಿಸುವುದು ತಪ್ಪಿದಂತಾಗುತ್ತದೆ.    ಇವೆಲ್ಲವುಗಳಿಗೆ ಪೂರಕವಾಗುವಂತೆ ಪ್ರತಿ ಗ್ರಾಮದ ಕೃಷಿ ಸಹಕಾರ ಸಂಘಗಳಲ್ಲಿಯೂ ರೈತರ ಭೂಮಿ ಬೆಳೆ ಇತ್ಯಾದಿಗಳನ್ನು ಕಂಪ್ಯೂಟರಿಕರಣಗೊಳಿಸಬೇಕು. ಸ್ಥಳೀಯವಾಗಿ ಕಂಪ್ಯೂಟರ್ ಕಲಿತ ಯುವಕ ಯುವತಿಯರನ್ನು ಇದಕ್ಕೆ ನೇಮಕ ಮಾಡಿಕೊಳ್ಳುವುದರಿಂದ ರೈತರ ನಿರುದ್ಯೋಗ ನಿವಾರಣೆಯು ನಿವಾರಣೆಯಾದಂತಾಗುತ್ತದೆ.     ರೈತರ ಆತ್ಮಹತ್ಯೆ ತಪ್ಪಿಸಲು ನಾನು ಹೇಳಿದ ಮೇಲಿನ ಅಂಶಗಳಿಂದಲೇ ಸಾದ್ಯವಿಲ್ಲವಾದರೂ, ರೈತರ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಂತೂ ಆಗುವುದರಲ್ಲಿ ಅನನುಮಾನವಿಲ್ಲ.  ನಮ್ಮ ರೈತ ಸಂಘಟನೆಗಳು ಇಂತಹ ಯೋಜನೆಗಳ ಬಗ್ಗೆ ಕರಡು ಪ್ರತಿಯೊಂದನ್ನು ರಚಿಸಿ ಸರಕಾರದ ಮುಂದಿಟ್ಟು ಅದನ್ನು ಅನುಷ್ಠಾನಗೊಳಿಸುವಂತೆ ಹೋರಾಡಬೇಕಿದೆ. ಈ ವಿಚಾರದಲ್ಲಿಯಾದರು ನಮ್ಮ ರೈತ ಮುಖಂಡರುಗಳು ತಮ್ಮ ಪ್ರತಿಷ್ಠೆಯನ್ನು ಮರೆತು ಒಂದಾಗಿ ಹೋರಾಡಬೇಕಾಗಿದೆ. ಇಲ್ಲದೇ ಹೋದರೆ ಭವಿಷ್ಯದಲ್ಲಿ ರೈತ ಹೋರಾಟಗಳೆಂದರೆ  ಜನರ ದೃಷ್ಠಿಯಲ್ಲಿ ಅಣಕು ಪ್ರದರ್ಶನಗಳಾಗಿ ಪರಿವರ್ತನೆಗಳಾಗಲಿವೆ. ಸರಕಾರಗಳು ಅಷ್ಟೆ ಅನ್ನ ನೀಡುವ ರೈತರನ್ನು ನಿರ್ಲಕ್ಷಿಸದೆ ಇಂತಹ ರೈತಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ  ಯೋಚಿಸಬೇಕಾಗಿದೆ. ********* ಕುಸಮ

Read Post »

You cannot copy content of this page

Scroll to Top