ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….4 ” ಪರಾವಲಂಬನೆಯ ಕಠಿಣ ದಿನಗಳು…” “ಆತ್ಮಾನುಸಂಧಾನ “             ಸಾಣೆಕಟ್ಟೆಯಲ್ಲಿ ದೊಡ್ಡಮ್ಮನ ಆಶ್ರಯ ಗಣಪುವಿನ ಎರಡು ಹೊತ್ತಿನ ಊಟ ತಿಂಡಿಯ ಚಿಂತೆ ಬಗೆಹರಿಸಿತು. ಆದರೆ ಗಣಪು ಬಯಸಿದ್ದು ಅಕ್ಷರಾಭ್ಯಾಸ. ಆಕಸ್ಮಿಕವಾಗಿ ಸಾಣೆಕಟ್ಟೆಗೆ ಬಂದ ನಾಡುಮಾಸ್ಕೇರಿಯ ಬೇಲೆ ಹಿತ್ತಲ ರಾಕು ಎಂಬ ತರುಣ ಹಮ್ಮಜ್ಜಿಯ ಮನೆಯಲ್ಲಿದ್ದ ಗಣಪುವಿನ ಯೋಗಕ್ಷೇಮ ವಿಚಾರಿಸುತ್ತ ಆತನ ಕಲಿಯುವ ಆಸೆಯನ್ನು ಗ್ರಹಿಸಿದ. ಊರಿಗೆ ಮರಳಿದವನು ಗಣಪುವಿಗೆ ಮತ್ತೆ ಹನೇಹಳ್ಳಿ ಹಾಸ್ಟೇಲಿನಲ್ಲಿ ಅವಕಾಶ ದೊರೆಯುವಂತೆ ಪ್ರಯತ್ನಿಸಿ ಆತನನ್ನು ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದ. ಕನಿಷ್ಟ ಹದಿನೈದು ದಿನಗಳಿಗೊಮ್ಮೆಯಾದರೂ ಒಮ್ಮೆ ಗಣಪುವನ್ನು ಕಂಡು ಕೈಲಾದ ಹಣಕಾಸಿನ ನೆರವು ನೀಡಿ ಚೆನ್ನಾಗಿ ಓದುವಂತೆ ಹುರುಪು ತುಂಬುತ್ತಿದ್ದ. ರಜೆಯ ದಿನಗಳಲ್ಲಿ ತನ್ನ ಮನೆಗೂ ಕರೆದೊಯ್ದು ಊಟ ತಿಂಡಿ ನೀಡಿ ಉಪಚಾರ ಮಾಡುತ್ತಿದ್ದ.             ರಾಕುವಿನ ಅಣ್ಣನೆ ಕೃಷ್ಣ ಆಗೇರ. ಆಗಿನ ಕಾಲದಲ್ಲಿ ಹೆಸರಾಂತ ಯಕ್ಷಗಾನ ಕಲಾವಿದ. ಬೇರೆ ಬೇರೆ ಊರುಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಲು ಹೋಗಿಬರುತ್ತಿದ್ದ. ಆತನೊಂದಿಗೆ ಗಣಪು ಯಕ್ಷಗಾನ ನೋಡುವ ಕುತೂಹಲದಲ್ಲಿ ಜೊತೆ ನೀಡುತ್ತ ಮೆಲ್ಲ ಮೆಲ್ಲನೆ ಯಕ್ಷಗಾನ ಭಾಗವತಿಕೆ, ಅರ್ಥ ಹೇಳುವುದು, ಕುಣಿತ ಇತ್ಯಾದಿಗಳನ್ನು ಅಭ್ಯಾಸ ಮಾಡಿಕೊಂಡ. ಈ ನಡುವೆ ಹನೇಹಳ್ಳಿಯ ಶಾಲೆಯ ವಿದ್ಯಾಭ್ಯಾಸವೂ ನಡೆಯುತ್ತಿತ್ತು. ಗಣಪು ಮತ್ತೆ ಗುಂದಿಹಿತ್ತಲ ಪರಿವಾರದ ಕುರಿತು ಚಿಂತೆಮಾಡುವ ಪ್ರಮೇಯವೇ ಬರಲಿಲ್ಲ.             ೧೯೩೦ ರ ಹೊತ್ತಿಗೆ ಅಂಕೋಲೆಯ ವಂದಿಗೆ ಗ್ರಾಮದಲ್ಲಿ ಸುಕ್ರು ಮಾಸ್ತರ್ ಎಂಬುವವರು ತಮ್ಮ ಆಗೇರ ಸಮಾಜದ ಮಕ್ಕಳ ಕಲಿಕೆಗಾಗಿ ಕ್ರೈಸ್ತ ಮಿಶನರಿ ಸಂಸ್ಥೆಯ ನೆರವಿನಿಂದ ವಂದಿಗೆ ಗ್ರಾಮದ ಆಗೇರ ಕಾಲನಿಯಲ್ಲಿ ಶಾಲೆಯೊಂದನ್ನು ತೆರೆದು ಅಲ್ಲಿ ತಾವೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಸ್ಪೃಶ್ಯತೆ ಆಚರಣೆಯಲ್ಲಿರುವ ಅಂದಿನ ಕಾಲದಲ್ಲಿ ಆಗೇರರ ಮಕ್ಕಳು ಇತರ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಅಸಾಧ್ಯವಾದ ಸಂದರ್ಭದಲ್ಲಿ ಸುಕ್ರು ಮಾಸ್ತರರ ಶಾಲೆ ಕಲಿಕೆಯ ಆಸಕ್ತಿಯುಳ್ಳ ಆಗೇರರ ಮಕ್ಕಳಿಗೆ ವರದಾನವಾಗಿತ್ತು.             ೧೯೩೪ ರಲ್ಲಿ ಗಾಂಧೀಜಿ ಹರಿಜನೋದ್ಧಾರ ನಿಧಿ ಸಂಗ್ರಹಣೆಗಾಗಿ ದೇಶಾದ್ಯಂತ ತಿರುಗಾಟ ಮಾಡುವಾಗ ಅಂಕೋಲೆಗೆ ಬಂದವರು ಸುಕ್ರು ಮಾಸ್ತರರ ಶಾಲೆಗೂ ಭೇಟಿ ನೀಡಿದ್ದು ಒಂದು ಚಾರಿತ್ರಿಕ ಮಹತ್ವದ ಸಂಗತಿಯಾಗಿದೆ. ಮುಂದೆ ಭಾರತಸೇವಾ ಸಮಾಜದ ಆಜೀವ ಸಭಾಸದರೂ,  ಅಖಿಲ ಭಾರತೀಯ ಹರಿಜನ ಸೇವಕ ಸಂಘದ ಮಾನ್ಯ ಕಾರ್ಯದರ್ಶಿಗಳೂ ಆಗಿರುವ ಶ್ರೀಮಾನ್ ಥಕ್ಕರ್ ಬಾಪಾ ಅವರು ೧೯೪೦ ರಲ್ಲಿ ಅಂಕೋಲೆಗೆ ಭೇಟಿ ನೀಡಿದಾಗ ಆಗೇರ ಸಮಾಜದ ಶಿಕ್ಷಣದ ಕುರಿತು ವಿಶೇಷ ಕಾಳಜಿ ವಹಿಸಲು ಚಿಂತನೆ ನಡೆಸಿ ಅಂಕೋಲೆಯಲ್ಲಿ ಒಂದು ವಸತಿ ಶಾಲೆಯನ್ನು ಆರಂಭಿಸಲು ವ್ಯವಸ್ಥೆ ಮಾಡಿದರು. ಇದರ ಪರಿಣಾಮವಾಗಿ ಸುಮಾರು ಇಪ್ಪತ್ನಾಲ್ಕು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿ ಶಾಲೆಯನ್ನು ತೆರೆಯಲು ಯೋಜನೆಯನ್ನು ರೂಪಿಸಲಾಯಿತು.             ೧೯೪೧ ರಲ್ಲಿ ಶ್ರೀ ಎಸ್.ಎನ್. ಕೇಶವಾನ್, ಕೃಷ್ಣರಾವ್ ಹಳದೀಪುರ, ಬಿ.ಎಮ್. ಬಸ್ರೂರ, ಹರಿ ಅನಂತ ಪೈ, ಎಸ್.ಎಸ್.ಶಾಸ್ತ್ರೀ,  ಸುಂದರರಾವ್ ಪಂಡಿತ್, ಶ್ರೀ ನಾಯಕ, ಡಿ.ಎಂ.ನಾಡಕರ್ಣಿ ಮುಂತಾದ ಮಹನೀಯರ ಸಮಿತಿಯೊಂದು ರಚನೆಗೊಂಡು ವಂದಿಗೆ ಸುಕ್ರು ಮಾಸ್ತರರ ಶಾಲೆಗೆ ಹೊಂದಿಕೊಂಡಂತೆ ತಾತ್ಕಾಲಿಕವಾಗಿ ತೆಂಗಿನ ಗರಿಗಳ ವಸತಿ ಶಾಲೆಯೊಂದನ್ನು ಆರಂಭಿಸಲಾಯಿತು.             ಬೇರೆ ಬೇರೆ ಊರುಗಳಿಂದ ಆಗೇರರ ಮಕ್ಕಳು ಇಲ್ಲಿಗೆ ಬಂದು ಸೇರಿಕೊಂಡು ಕಲಿಯಲು ಆರಂಭಿಸಿದರು. ಇಷ್ಟು ಹೊತ್ತಿಗೆ ಹನೇಹಳ್ಳಿ ಶಾಲೆಯಲ್ಲಿ ಆರನೇಯ ಇಯತ್ತೆ ಮುಗಿಸಿದ ಗಣಪು ಮುಲ್ಕಿ ಪರೀಕ್ಷೆಯ ಗಂಭೀರ ಓದಿನ ಅವಕಾಶ ಬಯಸಿ ಸುಕ್ರು ಮಾಸ್ತರರ ವಸತಿ ಶಾಲೆಗೆ ಬಂದು ಸೇರಿದ. ಮೊದಲ ತಂಡದಲ್ಲಿ ಅಂಕೋಲೆಯವರೇ ಆದ ಬಂಟ ಕೃಷ್ಣಮಕ್ಕಿ, ಬುದ್ದು ಆಗೇರ, ಮೊಗಟಾ ಗ್ರಾಮದ ಜಟ್ಟಿ ಆಗೇರ, ಶೇಡಗೇರಿಯ ಬೀರಾ ಆಗೇರ, ನಾಡು ಮಾಸ್ಕೇರಿಯ ಗಣಪು ಆಗೇರ, ಗೋಕರ್ಣದ ಅಮಾಸ್ಯಾ ಆಗೇರ ಮುಂತಾದವರು ಮುಲ್ಕೀ ಪರೀಕ್ಷೆ ಕಟ್ಟಿದರು. ಇವರಲ್ಲಿ ಗಣಪು ಮತ್ತು ಅಮಾಸ್ಯಾ ಆಗೇರ ಇಬ್ಬರು ಮುಲ್ಕಿ ಪರೀಕ್ಷೆ ಪಾಸುಮಾಡಿ ಆಗೇರ ಸಮಾಜದ ಹೆಮ್ಮೆಯ ವಿದ್ಯಾರ್ಥಿಗಳೆಂಬ ಗೌರವಕ್ಕೆ ಪಾತ್ರರಾದರು.             ನಾಡುಮಾಸ್ಕೇರಿಯ ಕೃಷ್ಣ ಮತ್ತು ರಾಕು ಸಹೋದರರ ಸಹಕಾರದಿಂದ ವಂದಿಗೆಯ ಸುಕ್ರುಮಾಸ್ತರ್ ವಸತಿ ಶಾಲೆಯ ಆಶ್ರಯದಲ್ಲಿ ಗಣಪು ಮುಲ್ಕಿ ಪಾಸು ಮಾಡಿದ ಬಳಿಕ ಉದ್ಯೋಗ ದೊರೆಯುವುದು ಕಠಿಣವಾಗಲಿಲ್ಲ. ನಾಲ್ಕಾರು ತಿಂಗಳ ಅಂತರದಲ್ಲಿಯೇ ಸರಕಾರಿ ಶಾನಭೋಗ ಹುದ್ದೆ ದೊರೆಯಿತು. ಜೋಯ್ಡಾ ಎಂಬ ಬೆಟ್ಟ ಪ್ರದೇಶದಲ್ಲಿ ಗಣಪು ಶಾನಭೋಗ ವೃತ್ತಿಗೆ ಹಾಜರಾದ. ದಟ್ಟ ಕಾಡಿನ ಹಳ್ಳಿಗಾಡು ಎಂಬುದನ್ನು ಬಿಟ್ಟರೆ ಊರ ಜನರ ಸಹಕಾರ ಇತ್ಯಾದಿ ತುಂಬಾ ಅನುಕೂಲಕರ ಪರಿಸರವೇ ದೊರೆಯಿತು. ಆದರೆ ಗಣಪು ತಾನು ಓದುವ ಹಂತದಲ್ಲಿಯೇ ಶಿಕ್ಷಕನಾಗಬೇಕೆಂದು ಕನಸು ಕಾಣುತ್ತಿದ್ದ. ಬಯಸಿದ ಉದ್ಯೋಗವೊಂದು ದೊರೆಯಲಿಲ್ಲ ಎಂಬ ಆತಂಕವೊಂದು ಅವನನ್ನು ಕಾಡುತ್ತಲೇ ಇತ್ತು. ******************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಆತ್ಮಕತೆ–03 ಅಕ್ಷರ ಬೀಜದ ಬೆಳಕಿನತ್ತ….. ಗುಂದಿ ಹಿತ್ತಲಿನ ಎರಡೂ ಕುಟುಂಬಗಳು ಗೇಯ್ದು ಉಣ್ಣುವ’ ಬದುಕಿನಲ್ಲಿ ಸಂತೃಪ್ತಿ ಕಂಡಿದ್ದವು. ಅಕ್ಷರ ದಾರಿದ್ರö್ಯದ ದಟ್ಟ ಬಡತನವೊಂದು ಅವರಿಗೆ ಬಡತನವೇ ಅನ್ನಿಸಿರಲಿಲ್ಲ. ಅಂಥ ಕುಟುಂಬಗಳಲ್ಲಿ ಗಣಪು ಎಂಬ ಹುಡುಗನೊಬ್ಬ ಹೇಗೋ ಅಕ್ಷರ ಕಲಿಕೆಗೆ ಆಸೆಪಟ್ಟು ಅಕ್ಷರ ಬೀಜದ ಬೆಳಕಿನ ಬೆನ್ನು ಹತ್ತಿದ. ಸಮೀಪದ ಹೆಗ್ರೆ ಶಾಲೆಯಲ್ಲಿ ಅ, ಆ ಕಲಿಕೆಯ ಹಂತದಲ್ಲೆ ತಾಯಿ ತೀರಿಕೊಂಡಳು. ಶಾಲೆ ಕಲಿಯುವ ಹಂಬಲಕ್ಕೆ ಮತ್ತುಷ್ಟು ತೊಡಕುಗಳಾದವು. ಮತ್ತೆ ಕೆಲವು ದಿನಗಳ ಬಳಿಕ ಯಾರದೋ ಸಹಾಯದಿಂದ ಹನೇಹಳ್ಳಿಯ ಸರಕಾರಿ ಹಾಸ್ಟೆಲ್ಲು ಸೇರಿಕೊಂಡು ಓದಲಾರಂಭಿಸಿದ. ಆದರೆ ಮನೆಯಲ್ಲಿ ಯಾರಿಗೂ ಗಣಪು ಶಾಲೆಗೆ ಸೇರಿದ್ದು ಸರಿಬರಲಿಲ್ಲ. ಅಕ್ಕಂದಿರು ಅಣ್ಣಂದಿರೆಲ್ಲ ಸಾಣೆಕಟ್ಟೆಯ ಉಪ್ಪಿನಾಗರ ಕೆಲಸಕ್ಕೆ ಸೇರಿ ಅನ್ನದ ದಾರಿ ಕಂಡುಕೊಂಡಿದ್ದರು. ಗಣಪು ಅದೇ ಕೆಲಸಕ್ಕೆ ಅವರೆಲ್ಲರನ್ನು ಕೂಡಿಕೊಳ್ಳಬೇಕೆಂಬುದು ಅವರೆಲ್ಲ ಒತ್ತಾಸೆಯಾಗಿತ್ತು. ಒತ್ತಾಯದಿಂದ ಶಾಲೆ ಬಿಡಿಸಿ ಮನೆಗೆ ಕರೆತಂದರಾದರೂ ಗಣಪು ಆಗರದ ಕೆಲಸಕ್ಕೆ ಯಾವ ಬಗೆಯಿಂದಲೂ ಒಪ್ಪಿಕೊಳ್ಳಲಿಲ್ಲ. ನಾಡವರ ಮನೆಯ ದನಗಳನ್ನು ಮೇಯಿಸುವ ಕೆಲಸಕ್ಕೆ ನೇಮಿಸಲಾಯಿತು. ಮನಸ್ಸಿಲ್ಲದ ಮನಸ್ಸಿನಲ್ಲಿ ಗಣಪು ಗೋವಳಿಗನಾದ. ‘ಹಣೆಯ ಬರಹವೊಂದು ಸರಿಯಾಗಿದ್ದರೆ ಅದನ್ನು ಯಾರೂ ಕೆಡಿಸಲಾರರು’ ಎಂಬ ಹಳೆಯ ನಂಬಿಕೆಯ ಮಾತೊಂದಿದೆ. ಗಣಪು ಮತ್ತೆ ಅಕ್ಷರದ ದಾರಿಯಲ್ಲಿ ನಡೆಯುವಂತೆ ಮಾಡಿದ ವಿಚಿತ್ರ ಘಟನೆಯೊಂದು ನಡೆದು ಹೋಯಿತು… ಅಗ್ಗರಗೋಣದ ಏಸುಮನೆ ನಾರಾಯಣ ನಾಯಕ ಎಂಬುವವರ ಮಗ ಯಶವಂತ ಹನೇಹಳ್ಳಿಯ ಶಾಲೆಯಲ್ಲಿ ಗಣಪುವಿನ ಸಹಪಾಠಿಯಾಗಿದ್ದವನು. ಅಗ್ರಗೋಣದಿಂದ ಹನೇಹಳ್ಳಿಗೆ ಗದ್ದೆ ಬಯಲಿನ ದಾರಿಯಲ್ಲಿ ಹೋಗುವಾಗ ನಡುವೆ ಗುಂದಿಹಿತ್ತಲಿನ ಬದಿಯಲ್ಲೇ ಕಾಲು ದಾರಿಯಿದೆ. ಯಶವಂತ ಅದೇ ದಾರಿಯಲ್ಲಿ ನಡೆಯುತ್ತಾ ಗಣಪುವಿನ ಜೊತೆಸೇರಿ ಮುಂದುವರಿಯುವುದು ರೂಢಿಯಾಗಿತ್ತು. ಇದೇ ಕಾರಣದಿಂದ ಇಬ್ಬರಲ್ಲೂ ಅನ್ಯೋನ್ಯತೆ ಬೆಳೆದು ಗಾಢ ಸ್ನೇಹ ಬೆಸೆದುಕೊಂಡಿತ್ತು. ಗಣಪು ಶಾಲೆ ಬಿಟ್ಟು ದನಕಾಯ ಹತ್ತಿದ ಬಳಿಕ ಯಶವಂತನಿಗೆ ಒಂಟಿತನ ಕಾಡಿತು. ಗುಂದಿಹಿತ್ತಲಿನಿಂದ ಮುಂದಿನ ಹನೇಹಳ್ಳಿಯ ದಾರಿ ಬೇಸರ ಹುಟ್ಟಿಸಿತು. ಒಂದು ದಿನ ಶಾಲೆಗೆ ಹೊರಟವನು ದಾರಿಯನ್ನು ಬದಲಿಸಿ ಹಳ್ಳದ ಈಚೆ ನಾಡುಮಾಸ್ಕೇರಿ ಭಾಗದ ಗದ್ದೆ ಬಯಲಲ್ಲಿ ಗಣಪು ದನ ಮೇಯಿಸುತ್ತಿರುವಲ್ಲಿಗೆ ಬಂದು, “ಗಣಪು ನೀನು ಶಾಲೆಗೆ ಬರದಿದ್ರೆ ನನಗೂ ಶಾಲೆ ಬೇಡವೇ ಅನಿಸ್ತಿದೆಯೋ” ಎಂದು ತನ್ನ ದುಃಖ ತೋಡಿಕೊಂಡ. ಅಂದು ಇಡಿಯ ದಿನ ಗಣಪುವಿನ ಜೊತೆ ಇದ್ದು ದನ ಮೇಯಿಸುವಲ್ಲಿ ಆಟವಾಡುತ್ತ ಸಂಜೆ ಶಾಲೆ ಬಿಡುವ ಸಮಯ ನೋಡಿ ಮನೆಗೆ ಮರಳಿದ. ಯಶವಂತ ಅಂದು ಶಾಲೆಗೆ ಹೋಗದಿರುವ ಸಂಗತಿ ಮನೆ ಮಂದಿಗೆನೂ ತಿಳಿಯಲಿಲ್ಲ. ಯಶವಂತ ಮರುದಿನವೂ ಗಣಪು ಇರುವಲ್ಲಿಗೆ ಬಂದ…. ಆಡುತ್ತ ದಿನ ಕಳೆದ. ಇದು ರೂಢಿಯಾಯಿತು. ಪಾಟೀಚೀಲದೊಂದಿಗೆ ಮನೆಯಿಂದ ಶಾಲೆಗೆ ಹೋಗುವ ಸಂಭಾವಿತನಂತೆ ಹೊರಡುವ ಯಶವಂತ ದಿನವೂ ಗಣಪು ಇದ್ದಲ್ಲಿಗೆ ಬಂದು ಸಮಯ ಕಳೆದು ಮರಳುತ್ತಿದ್ದ. ಅಂಥ ಒಂದು ದಿನ ಯಶವಂತ ಬಂದದ್ದೆ ಯಾವುದೋ ಆಟದಲ್ಲಿ ಇಬ್ಬರೂ ಮೈಮರೆತಿದ್ದರೆ ಗಣಪು ಬಯಲಿನಲ್ಲಿ ಬಿಟ್ಟ ದನಗಳೆಲ್ಲ ಜಮೀನ್ದಾರ್ ಗಾಂವಕರರೊಬ್ಬರ ಕಾರುಗದ್ದೆಗೆ ನುಗ್ಗಿ ಹಾಯಾಗಿ ಮೇಯ ತೊಡಗಿದವು. ಆಕಸ್ಮಿಕವಾಗಿ ಬಯಲಿಗೆ ಬಂದ ಗಾಂವಕರರು ಹಸನಾಗಿ ಮೊಳಕೆಯೊಡೆದಿದ್ದ ಕಾರುಗದ್ದೆ ದನಗಳ ಮೇವಿನ ಕಣವಾದುದನ್ನು ಕಂಡು ಕೆಂಡಾಮಂಡಲವಾದರು. ಗದ್ದೆ ಹಾಳೆಯ ಮೇಲಿನ ಲುಕ್ಕಿ ಗಿಡದ ಬರಲು ಕಿತ್ತುಕೊಂಡದ್ದೇ ಗಣಪುವನ್ನು ಹಿಡಿದು ಬಾರಿಸತೊಡಗಿದರು. ಕಾದ ಕಬ್ಬಿಣದ ಸಲಾಕೆಯಂತೆ ಲುಕ್ಕಿ ಬರಲಿನ ಬಾಸುಂಡೆಗಳೆದ್ದುದನ್ನು ಖಾತ್ರಿ ಪಡಿಸಿಕೊಂಡೇ ಗಾಂವಕರರು ಗಣಪುವಿನ ಕೈ ಬಿಟ್ಟಿದ್ದರು. ಯಶವಂತ ದಿಕ್ಕುಗೆಟ್ಟವನಂತೆ ಊರಿನತ್ತ ಓಡಿದ್ದ. ನೋವು ಅವಮಾನಗಳಿಂದ ಜರ್ಜರಿತನಾದ ಗಣಪು ಗದ್ದೆ ಹಾಳೆಯ ಮೇಲೆ ಕುಸಿದು ಕುಳಿತ. ತನ್ನ ಬೆನ್ನಿಗೆ ಬಾಸುಂಡೆಗಳು ಮೂಡುವಂತೆ ಬಾರಿಸಿದ ಗಾಂವಕರರಿಗಿಂತ ತನ್ನ ತಂದೆ ಅಕ್ಕಂದಿರು ಅಣ್ಣನ ಮೇಲೆ ಸಿಟ್ಟು ಉಕ್ಕಿ ಬಂತು. ತನ್ನನ್ನು ಶಾಲೆ ಬಿಡಿಸಿ ಕರೆತಂದು ದನ ಕಾಯಲು ಹಚ್ಚಿದ ಅವರೆಲ್ಲ ಅಪ್ಪಟ ವೈರಿಗಳಂತೆ ಭಾಸವಾದರು. ಮತ್ತೆ ಮನೆಗೆ ಹೋದರೂ ತನ್ನದೇ ತಪ್ಪೆಂದು ಆರೋಪಿಸಿ ಪೆಟ್ಟು ಕೊಡುತ್ತಾರೆ ಎಂಬ ಭಯವೂ ಆಯಿತು. ಮತ್ತೆಂದೂ ಮನೆಕಡೆ ಕಾಲಿಡಲೇಬಾರದು ಎಂದು ಗಣಪು ಆಕ್ಷಣದಲ್ಲಿ ನಿರ್ಧರಿಸಿದ. ತಾಯಿ ತೀರಿದ ಬಳಿಕ ಆಗಾಗ ಮನೆಗೆ ಬಂದು ಸಾಂತ್ವನ ಹೇಳಿ ತನ್ನನ್ನು ವಿಶೇಷವಾಗಿ ಮದ್ದು ಮಾಡುತ್ತಿದ್ದ ಸಾಣೆಕಟ್ಟೆಯ ದೊಡ್ಡಮ್ಮ ಹಮ್ಮಜ್ಜಿ’ ನೆನಪಾದಳು. ಗಣಪು ಅಳುತ್ತಲೇ ಸಾಣೆಕಟ್ಟೆಯತ್ತ ಹೆಜ್ಜೆ ಹಾಕಿದ. ರಾಮಕೃಷ್ಣ ಅವರ ತಂದೆ-ತಾಯಿ ಸಾಣೆಕಟ್ಟೆಯಲ್ಲಿ ದೊಡ್ಡಮ್ಮನ ಮಡಿಲಲ್ಲಿ ತಲೆಯಿಟ್ಟು ಬಿಕ್ಕಳಿಸಿದ ಗಣಪು ತಾನು ಮತ್ತೆಂದೂ ಊರಿಗೆ ಹೋಗುವುದಿಲ್ಲವೆಂದೂ ತನ್ನನ್ನು ಮತ್ತೆ ಶಾಲೆಗೆ ಸೇರಿಸೆಂದೂ ಪರಿಪರಿಯಾಗಿ ಬೇಡಿಕೊಂಡ. ತಬ್ಬಲಿ ಕಂದನ ಆಕ್ರಂದನಕ್ಕೆ ಅಂತಃಕರಣ ಕಲುಕಿದಂತಾದ ಹಮ್ಮಜ್ಜಿ ಗಣಪುವನ್ನು ಗಟ್ಟಿಯಾಗಿ ಎದೆಗೆ ಅಪ್ಪಿಕೊಂಡು ತಾಯ್ತನದ ಪ್ರೀತಿಯೆರೆಯುತ್ತ ಬೆನ್ನ ಮೇಲಿನ ಬಾಸುಂಡೆಗಳಿಗೆ ಎಣ್ಣೆ ಲೇಪಿಸತೊಡಗಿದಳು. ************************************************************************ ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ…

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ರಾಮಕೃಷ್ಣ ಗುಂದಿ ಆತ್ಮಕತೆ–02 ಗುಂದಿ ಹಿತ್ತಲದಲ್ಲಿ ಕಡ್ಲೆ ಬೇಸಾಯ ಗಂಗಾವಳಿ ನದಿಯ ದಕ್ಷಿಣ ತೀರದಿಂದ ನದಿಯ ಶಾಖೆಯಾಗಿ ಚಿಕ್ಕ ಹಳ್ಳವೊಂದು ಅಗ್ಗರಗೋಣ ಗ್ರಾಮದ ಅಂಚಿನಿಂದ ಹೆಗ್ರೆ ಗ್ರಾಮದವರೆಗೆ ಹರಿದು ಅಗ್ರಗೋಣ ಮತ್ತು ನಾಡುಮಾಸ್ಕೇರಿ ಗ್ರಾಮಗಳ ನಡುವೆ ಗಡಿರೇಖೆಯೊಂದನ್ನು ನಿರ್ಮಿಸಿದೆ. ಹಳ್ಳದ ಇಕ್ಕೆಲದಲ್ಲೂ ವಿಸ್ತಾರವಾದ ಗದ್ದೆಬಯಲು ಹನೇಹಳ್ಳಿಯ ಅಂಚಿನವರೆಗೂ ವ್ಯಾಪಿಸಿದೆ. ಹಳ್ಳದ ಪೂರ್ವ ದಂಡೆಯ ಅಗ್ಗರಗೋಣ ಗ್ರಾಮ ವ್ಯಾಪ್ತಿಯ ಬಯಲಲ್ಲಿ ಒಂದು ಪುಟ್ಟ ದಿನ್ನೆಯಿದೆ. ಹಳ್ಳಕ್ಕೆ ಹತ್ತಿರವಾಗಿ ಎರಡು-ಮೂರು ಗುಂಟೆಯ ಅಳತೆಯಲ್ಲಿ ವಿಸ್ತರಿಸಿಕೊಂಡಿರುವ ಈ ಗುಂದವನ್ನು ಜನರು ವಾಡಿಕೆಯಲ್ಲಿ “ಗುಂದಿಹಿತ್ತಲ” ಎಂದೇ ಗುರುತಿಸುತ್ತಿದ್ದರು. ನನಗೆ ಬುದ್ದಿ ಬಲಿತ ಸಂದರ್ಭದಲ್ಲಿ ನಾನು ಗುಂದಿಹಿತ್ತಲವನ್ನು ನೋಡಿದಾಗ ಎಂಟತ್ತು ತೆಂಗಿನ ಮರಗಳು ಗೊನೆಬಿಟ್ಟು ನಿಂತಿದ್ದವು. ಉಳಿದಂತೆ ಒಂದು ಅಮಟೆ ಮರ, ಎರಡು ಕರವೀರ ಹೂವಿನ ಗಿಡಗಳು, ಬೇಲಿಗುಂಟಿ ಹಾಲುಗಳ್ಳಿಯ ಗಿಡಗಳು ಇದ್ದವು. ತಲೆತಲಾಂತರದಿಂದ ಬಂದ ಮೂರು ಕುಟುಂಬಗಳಲ್ಲಿ ನಾನು ನನ್ನ ವಂಶವಾಹಿನಿಯ ಮೂಲವನ್ನು ಶೋಧಿಸಬೇಕಿತ್ತು… ನಾನು ಮೊದಲ ಬಾರಿಗೆ ನೋಡಿದಾಗ ಗುಂದಿಹಿತ್ತಲಿನಲ್ಲಿ ಸುಕ್ರು , ವತ್ತು,  ಬೇಡು ಎಂಬ ಹಿರಿಯ ಸಹೋದರರು ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಎರಡು ಪ್ರತ್ಯೇಕ ಮನೆಗಳಲ್ಲಿ ಅಲ್ಲಿ ನೆಲೆಸಿದ್ದರು. ಈ ಕುಟುಂಬಗಳಿಗೆ ಕಡ್ಲೆಮನೆತನ’ ಎಂಬ ಹೆಸರಿತ್ತು. ಬಹುಶಃ ಇವರ ಕುಟುಂಬದ ಹಿರಿಯರಲ್ಲಿ ಯಾರೋ ಕಡ್ಲೆ ಎಂಬ ಹೆಸರಿನವರಿದ್ದಿರಬೇಕು. ಅವನ ವಂಶಸ್ಥರೆಲ್ಲ ಕಡ್ಲೆಮನೆಮಂದಿ’ ಎಂದೇ ಗುರುತಿಸಿಕೊಂಡಿರಬಹುದು.             ಎರಡೂ ಕುಟುಂಬಗಳಲ್ಲಿ ನಾಲ್ಕು ನಾಲ್ಕು ಗಂಡು ಮತ್ತು ಹೆಣ್ಣು ಮಕ್ಕಳಿದ್ದು ತುಂಬಿದ ಮನೆತನವಾಗಿತ್ತು. ಗುಂದಿಹಿತ್ತಲ’ ಪಿತ್ರಾರ್ಜಿತ ಆಸ್ತಿಯೆಂಬುದನ್ನು ಬಿಟ್ಟರೆ ಈ ಕುಟುಂಬಗಳಿಗೆ ಆದಾಯದ ಮೂಲವೇನೂ ಇರಲಿಲ್ಲ. ಎರಡೂ ಕುಟುಂಬಗಳ ಗಂಡಸರು ಹೆಂಗಸರೆಲ್ಲ ಉಪ್ಪಿನಾಗರದಲ್ಲಿ ಉಪ್ಪು ತೆಗೆಯುವುದು, ಕಲ್ಲುಗಣಿಗಳಲ್ಲಿ ಕಲ್ಲು ತೆಗೆಯುವುದು, ನಾಡವರ ಮನೆಗಳಲ್ಲಿ ಕೃಷಿಕೂಲಿ ಇತ್ಯಾದಿ ಕೆಲಸಗಳಿಂದ ಹೊಟ್ಟೆ ಹೊರೆಯುತ್ತಿದ್ದರು. ಕುಚ್ಚಿಗೆ ಅಕ್ಕಿಯ ಗಂಜಿ ಇಲ್ಲವೆ ರಾಗಿ ಅಂಬಲಿ ಅವರ ಮುಖ್ಯ ಆಹಾರವಾಗಿತ್ತು. ಪಕ್ಕದಲ್ಲಿಯೇ ಇದ್ದ ಹಳ್ಳದಲ್ಲಿ ಗಾಳ ಹಾಕಿ ಅಥವಾ ಬಲೆ ಬೀಸಿ ಬಂದರೆ ಬುಟ್ಟಿ ಬುಟ್ಟಿ ತುಂಬ ಶಾಡಿ, ಕರ್ಶಿ, ಮಡ್ಲೆ, ಗರಗಟ್ಲೆ, ಏಡಿ, ಶೆಟ್ಲಿ ಇತ್ಯಾದಿ ಮೀನುಗಳನ್ನು ಹಿಡಿದು ತರುತ್ತಿದ್ದರು. ಮಳೆಗಾಲದಲ್ಲಿ ಗದ್ದೆ ಬಯಲಲ್ಲೂ ಗದ್ದೆ ಬೆಲಗುಗಳಲ್ಲಿ ಕೂಳಿ ಹಾಕಿ ಕೈಂಜಬ್ಬು’ಗಳನ್ನು ಹಿಡಿದು ತರುತ್ತಿದ್ದರು. ಹೀಗಾಗಿ ಮೀನು ಇತ್ಯಾದಿ ಹಣಕೊಟ್ಟು ಖರೀದಿಸುವ ತಾಪತ್ರಯ ಇರಲಿಲ್ಲ. ಶನಿವಾರ ಪನಿವಾರಗಳಲ್ಲಿ ನಾಡವರ ಹಿತ್ತಲಲ್ಲಿ ಅಥವಾ ಬೇರೆಲ್ಲಾದರೂ ಬೆಳೆದ ಕೆಸುವಿನ ಸೊಪ್ಪು, ನುಗ್ಗೆ ಸೊಪ್ಪುಗಳನ್ನು ತಂದು ಪುಡಿ ಹಾಕಿ ಗಂಜಿಯೊಟ್ಟಿಗೆ ಉಣ್ಣುತ್ತಿದ್ದರು. ಮೂರು ಗುಂಟೆಯಷ್ಟಾದರೂ ಸ್ವಂತ ಆಸ್ತಿ ಹೊಂದಿದ ಕಡ್ಲೆಮನೆತನ ಎಂಬ ಬಿಂಕ ಒಂದುಕಡೆಯಾದರೆ ಕುಟುಂಬದ ಸದಸ್ಯರ ಸಂಖ್ಯೆಯ ಹೆಚ್ಚುಗಾರಿಕೆ ಇನ್ನೊಂದುಕಡೆ. ಒಟ್ಟಾರೆಯಾಗಿ ಸುತ್ತಲ ಗ್ರಾಮಗಳ ಇತರ ಆಗೇರರು ಕಡ್ಲೆಮನೆತನದ ಕುರಿತು ಹಗುರವಾಗಿ ಮಾತನಾಡಲು ಅಂಜುತ್ತಿದ್ದರು. ಇದರೊಡನೆ ಈ ಮನೆತನದ ಕುರಿತು ಒಂದಿಷ್ಟು ಭಯವೂ ಸೇರಿಕೊಳ್ಳಲು ಇನ್ನೊಂದು ಪ್ರಬಲ ಕಾರಣವೂ ಇತ್ತು. ಅದು ಕೋಳಿ ಅಂಕ. ಕಡ್ಲೆ ಮನೆತನದ ಸುಕ್ರು ಮತ್ತು ಬೇಡು ಎಂಬ ಇಬ್ಬರೂ ಹಿರಿಯರಿಗೆ ಕೋಳಿ ಅಂಕದ ಹವ್ಯಾಸವಾಗಿತ್ತು. ಅಲ್ಲದೆ ಈ ಇಬ್ಬರೂ ಕೋಳಿಗಳ ಬಣ್ಣ ಮತ್ತು ಆಕಾರಗಳಿಂದಲೇ ಅವುಗಳ ಸಾಮರ್ಥ್ಯವನ್ನು ಅಳೆಯಬಲ್ಲ ಪ್ರತಿಭೆಯುಳ್ಳವರಾಗಿದ್ದರು. ಅವುಗಳಿಗಾಗಿ ಪ್ರತ್ಯೇಕ ಗೂಡುಗಳನ್ನು ಮಾಡದೆ ತಮ್ಮ ಮಲಗುವ ಅಥವಾ ಅಡಿಗೆ ಕೋಣೆಯ ಒಂದು ಮೂಲೆಯಲ್ಲಿಯೆ ಅಂಕದ ಕೋಳಿಗಳನ್ನು ಕಟ್ಟಿ ಸಾಕುತ್ತಿದ್ದರು. ಹದವಾಗಿ ಬೆಳೆದ ಅಂಕದ ಕೋಳಿಗಳಿಗೆ ಹೋರಾಟದ ತರಬೇತಿ ನೀಡುವುದರಲ್ಲಿ ಅವುಗಳ ಕಾಲಿಗೆ ಕತ್ತಿಕಟ್ಟಿ ಬಿಡುವುದರಲ್ಲಿ, ಗಾಯಗೊಂಡ ಕೋಳಿಗಳ ಗಾಯಕ್ಕೆ ಹೊಲಿಗೆ ಹಾಕಿ ಉಪಚರಿಸುವುದರಲ್ಲಿ ಇಬ್ಬರೂ ನಿಪುಣರಾಗಿದ್ದರು. ಹೀಗಾಗಿ ಸುತ್ತಮುತ್ತ ಎಲ್ಲಿಯೇ ಅಂಕಗಳು ನಡೆಯಲಿ ಸುಕ್ರು ಮತ್ತು ಬೇಡು ಸಹೋದರರು ಅನಿವಾರ್ಯವಾಗಿದ್ದರು. ಅನ್ಯರು ತಮ್ಮ ಕೋಳಿಗಳನ್ನು ಅಂಕಕ್ಕೆ ಒಡ್ಡುವಾಗಲೂ ಇವರನ್ನೆ ಅವಲಂಬಿಸುತ್ತಿದ್ದರು. ಈ ಸಹೋದರರಲ್ಲಿ ಯಾರಾದರೊಬ್ಬರು ತಮ್ಮ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಬೆನ್ನು ನೇವರಿಸಿ ಬಿಟ್ಟರೆ ಅವು ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತವೆ ಎಂಬ ನಂಬಿಕೆ ಅವರದ್ದಾಗಿತ್ತು. ಅವರ ಈ ಬಗೆಯ ನಂಬಿಕೆಗೆ ಇನ್ನೂ ಒಂದು ಪ್ರಬಲ ಕಾರಣವೂ ಇತ್ತು. ಅದು ಏನೆಂದರೆ, ಇಬ್ಬರಿಗೂ ಇರುವ ಭೂತ ಬೆಂಬಲ: ಸುಕ್ರು ಮತ್ತು ಬೇಡು ಸಹೋದರರು ಅಂಕದಲ್ಲಿ ಕೋಳಿಗಳನ್ನು ಒಡ್ಡುವ ಮುನ್ನ ಸ್ಮಶಾನದಲ್ಲಿ ಬಂಧಿಯಾಗಿರುವ ತಮ್ಮ ಮನೆತನದ ಹಿರಿಯರ ಪ್ರೇತಾತ್ಮಗಳನ್ನು ಜಾಗೃತಗೊಳಿಸಿ ಬರುತ್ತಿದ್ದರಂತೆ: ಕೋಳಿ ಅಂಕದ ಸೀಸನ್ ಆರಂಭವಾಗುವುದೇ ಗದ್ದೆ ಕೊಯ್ಲಿನ ಬಳಿಕ. ಇಷ್ಟು ಹೊತ್ತಿಗೆ ಅಂಕದ ಕೋಳಿಗಳೂ ಬೆಳೆದು ಯುದ್ಧಕ್ಕೆ ಸಜ್ಜಾದ ಯೊಧರಂತೆ ನಿಗುರಿ ನಿಂತಿರುತ್ತಿದ್ದವು. ಅಂಥ ಸಮಯದಲ್ಲಿ ಸುಕ್ರು ಮತ್ತು ಬೇಡು ಸಹೋದರರು ಅಗ್ರಗೋಣದ ಹೊಲೆವಟ್ರ ಎಂಬ ಗ್ರಾಮ ದೇವತೆಯಲ್ಲಿ ಬಾಗಿಲುಕಟ್ಟಿ’ ಹರಕೆ ಮಾಡಿಕೊಂಡು ಸ್ಮಶಾನದಲ್ಲಿರುವ ತಮ್ಮ ಹಿರಿಯರ ಪ್ರೇತಾತ್ಮಗಳಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಂಕದಲ್ಲಿ ಕೋಳಿ ಗೆದ್ದು ಬಂದರೆ, ಸೋತ ಕೋಳಿಯ ಮಾಂಸವನ್ನು ಬಂಧು ಬಳಗದೊಂದಿಗೆ ಹಂಚಿ ತಿನ್ನುವ ಮುನ್ನ ಭಯ ಭಕ್ತಿಯಿಂದ ಪ್ರೇತಾತ್ಮಗಳಿಗೆ ಮೀಸಲು ನೀಡುತ್ತಿದ್ದರು. ಈ ರಹಸ್ಯವನ್ನು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಹೇಗೋ ತಿಳಿದುಕೊಂಡಿದ್ದರು. ಹೀಗಾಗಿ ಜಾತಿಬಾಂಧವರಾದ ಆಗೇರರು ಮಾತ್ರವಲ್ಲದೆ ಕೋಳಿ ಅಂಕದಲ್ಲಿ ಆಸಕ್ತಿಯಿರುವ ಹಾಲಕ್ಕಿಗಳು, ನಾಮಧಾರಿಗಳು, ನಾಡವರೆಲ್ಲಾ ಕಡ್ಲೆ ಮನೆತನದ ಈ ಸಹೋದರರನ್ನು ಪರಿಣತ “ಜೂಂಜುಕಾರ” ರೆಂದು ವಿಶಿಷ್ಟವಾದ ಗೌರವದಿಂದ ಗುರುತಿಸುತ್ತಿದ್ದರು. ಬೇಡು ಮತ್ತು ಸುಕ್ರು ಇಬ್ಬರಿಗೂ ಕೋಳಿ ಅಂಕದ ಕಾರಣದಿಂದ ಸಿಕ್ಕ ಸಾಮಾಜಿಕ ಗೌರವ ಮತ್ತು ಪಿತ್ರಪ್ರೇತಾತ್ಮದ ಬೆಂಬಲದ ನಂಬಿಕೆ ಯಿಂದಾಗಿ ನಮ್ಮ ಆಗೇರ ಜಾತಿಯಲ್ಲಿ ನಮ್ಮ ಕಡ್ಲೆಮನೆತನಕ್ಕೆ ಒಂದಿಂಚು ಹೆಚ್ಚಿನ ಗೌರವವಿತ್ತು. ಅಗ್ರಗೋಣ, ಹೆಗ್ರೆ, ನಾಡುಮಾಸ್ಕೇರಿ ಮೂರು ಗ್ರಾಮಗಳ ಆಗೇರರೊಡನೆ ಗದ್ದೆ ಬಯಲ ನಡುವಿನ ಗುಂದಿಹಿತ್ತಲದ ಕಡ್ಲೆಮನೆ’ ಕುಟುಂಬದ ಸಂಬಂಧ ಸಹಜವಾಗಿಯೇ ಸೌಹಾರ್ದದಿಂದ ಕೂಡಿತ್ತು. ಜಾತಿ ಕೂಟಗಳು, ಹಬ್ಬ ಹರಿದಿನಗಳು, ಯಕ್ಷಗಾನ ಪ್ರಸಂಗಗಳು (ಬೈಟಕ್) ನಡೆಯುವಾಗ ಮೂರು ಗ್ರಾಮಗಳು ಒಟ್ಟಾಗಿ ಸೇರಿ ಆಚರಿಸಿ ಆನಂದಿಸುತ್ತಿದ್ದವು. ಪರಸ್ಪರ ಕಷ್ಟಸುಖ ಏನೇ ಇದ್ದರೂ ಈ ಮೇಲಿನ ಮೂರೂ ಗ್ರಾಮಗಳ ಆಗೇರರಲ್ಲಿ ಭೇದ ಭಾವವಿಲ್ಲದ ಅನೋನ್ಯತೆ ಸಾಧ್ಯವಾಗಿತ್ತು. ಹಲವಾರು ಬಾರಿ ಗುಂದಿಹಿತ್ತಲಿನ ಕಡ್ಲೆಮನೆ ಸಂಕಷ್ಟಕ್ಕೆ ಸಿಲುಕಿದಾಗ ನೆರೆಯ ಈ ಮೂರು ಗ್ರಾಮದವರೆ ನೆರವಿಗೆ ಬಂದು ನಿಲ್ಲುತ್ತಿದ್ದರು. ಗದ್ದೆ ಬಯಲಿನ ನಟ್ಟನಡುವೆ ಇರುವ ಗುಂದಿಹಿತ್ತಲ ಪ್ರಚಂಡ ಮಳೆಗಾಲದಲ್ಲಿ ಒಂದು ಪುಟ್ಟ ದ್ವೀಪದಂತೆ ಗೋಚರಿಸುತ್ತಿತ್ತು. ಹಳ್ಲದಲ್ಲಿ ನೆರೆ ಬಂದರೆ ಗುಂದಿಹಿತ್ತಲವಿಡೀ ಮುಳುಗಿ ಮರೆಯಾಗಿಬಿಡುವ ಸಂದರ್ಭಗಳೂ ಇರುತ್ತಿದ್ದವು. ಇಂಥ ಸಮಯದಲ್ಲಿ ಅಗ್ಗರಗೋಣ, ಹೆಗ್ರೆ ಅಥವಾ ನಾಡುಮಾಸ್ಕೇರಿಯ ಜಾತಿ ಜನರು ಗುಂದಿಹಿತ್ತಲಿನ ಎರಡೂ ಕುಟುಂಬಗಳನ್ನು ತಮ್ಮಲ್ಲಿಗೆ ಕರೆದೊಯ್ದು ಆಶ್ರಯ ನೀಡುತ್ತಿದ್ದರು. ಹೀಗೆ ನೆರವಾಗುವ ಸಂದರ್ಭದಲ್ಲೂ ಈ ಕುಟುಂಬದ ಘನತೆಗೆ ಕುಂದು ಬಾರದಂತೆ ಗೌರವದಿಂದ ನಡೆಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಜೋಡಿ ಸಹೋದರರಲ್ಲಿ ಕಿರಿಯವನು ಬೇಡು. ಮೂವರು ಗಂಡುಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳ ತಂದೆ. ಮಕ್ಕಳಲ್ಲಿ ಯಾರೂ ಅಕ್ಷರ ಕಲಿಕೆಯಲ್ಲಿ ಆಸಕ್ತಿ ತೋರಿಸಲಿಲ್ಲ. ಮೂಲ ಕಸುಬುಗಳನ್ನು ಆಶ್ರಯಿಸಿ ಮದುವೆ ಮಾಡಿಕೊಂಡು ಬೇರೆ ಬೇರೆ ಊರುಗಳಿಗೆ ಹೋದರು. ಹಿರಿಯವನಾದ ಸುಕ್ರುವಿಗೆ ಇಬ್ಬರು ಹೆಂಡಿರು. ಮೊದಲ ಹೆಂಡತಿ ನಡುವಯಸ್ಸಿನಲ್ಲಿ ತೀರಿಕೊಂಡಳಾದರೂ ಅದಾಗಲೇ ಅವಳಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಎರಡನೆಯ ಹೆಂಡತಿ ಸುಕ್ರುವಿನಿಂದ ಓರ್ವ ಗಂಡುಮಗುವನ್ನು ಪಡೆದಳಾದರೂ ಸಂಸಾರ ನಡೆಸಲಾಗದೇ ಗಂಡ ನಿಂದ ಬೇರೆಯಾಗಿ ತನ್ನ ತವರೂರು ಅಂಕೋಲೆಗೆ ಹೊರಟವಳು ಅಲ್ಲಿಯೇ ನೆಲೆಸಿದ್ದಳು. ಕಡ್ಲೆ ಮನೆತನದ ಸಂಬಂಧದಿಂದ ಹೊರಗೇ ಉಳಿದುಬಿಟ್ಟಳು. ಸುಕ್ರುವಿನ ಹಿರಿಯ ಹೆಂಡತಿಯ ಇಬ್ಬರು ಗಂಡುಮಕ್ಕಳು ಮುರ್ಕುಂಡಿ ಮತ್ತು ಗಣಪು ಹೆಣ್ಣು ಮಕ್ಕಳು ದೇವಿ ಮತ್ತು ನಾಗಮ್ಮ. ಸುಕ್ರುವಿನ ಎರಡನೆಯ ಗಂಡುಮಗ ಗಣಪುವಿನ ಹೊರತಾಗಿ ಉಳಿದ ಮೂವರು ಶಾಲೆ ಕಲಿಯಲು ಆಸಕ್ತಿ ತೋರಿಸಲಿಲ್ಲ. ಆದರೆ ಗಣಪು ಎಂಬ ಹುಡುಗ ಶಾಲೆ ಕಲಿಯಲು ಹಠ ಮಾಡಿದ್ದೇ ಅಪರಾಧವಾಗಿತ್ತು. ಕೂಲಿ ಮಾಡಿದರೆ ತುತ್ತು ಅನ್ನ ಸಿಗುತ್ತದೆ, ಶಾಲೆ ಕಲಿತರೆ ಉಪವಾಸವೇ ಗತಿ ಎಂದು ನಂಬಿದ ಪಾಕಲರ ನಡುವೆ ಅಕ್ಷರದ ಬೆನ್ನು ಹತ್ತಿದ ಗಣಪು ಪಟ್ಟ ಕಷ್ಟ ನಡೆಸಿದ ಹೋರಾಟ ಅಷ್ಟಿಷ್ಟಲ್ಲ! ಅಂದು ಆತ ಆ ಬಗೆಯ ಹೋರಾಟ ನಡೆಸಿ ನಾಲ್ಕು ಕಾಳಿನಷ್ಟಾದರೂ ಅಕ್ಷರಗಳನ್ನು ಆಯ್ದು ತನ್ನ ಜೋಳಿಗೆಯಲ್ಲಿ ತುಂಬಿಕೊಳ್ಳದಿದ್ದರೆ ಇಂದು ನಾನು ಹೀಗಿರುತ್ತಿರಲಿಲ್ಲ. ಏಕೆಂದರೆ ಅಂದು ಅಕ್ಷರ ಪ್ರೀತಿಯಲ್ಲಿ ಅರೆಹೊಟ್ಟೆ ಉಂಡು ಮನೆಯನ್ನೇ ಬಿಟ್ಟು ಹೊರ ನಡೆದ ಛಲಗಾರ ಬೇರೆ ಯಾರೂ ಅಲ್ಲ, ನನ್ನ ತಂದೆ ಗಣಪು ಮಾಸ್ತರ! ಡಾ.ರಾಮಕೃಷ್ಣ ಗುಂದಿಯವರ ಹಳೆಯ ಪೋಟೊಗಳು ********************************************************* ಡಾ.ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ…

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ-01 ಆತ್ಮಕತೆಯ ಮೊದಲ ಕಂತು.. ಅಸ್ತಿತ್ವವಿಲ್ಲದ ಅವ್ವನ ಹೆಜ್ಜೆಗಳು ಅಕ್ಟೋಬರ್, ೧, ೨೦೦೮ ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲನಾಗಿ ಕರ್ತವ್ಯಕ್ಕೆ ಹಾಜರಾದೆ. ಕಳೆದ ಮೂವತ್ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿರುವಾಗಿನ ಸಿಹಿ ಕಹಿ ನೆನಪುಗಳ ಚಿಪ್ಪಿನಿಂದ ಪೂರ್ತಿಯಾಗಿ ಹೊರಬರುವುದು ಇನ್ನೂ ಸಾಧ್ಯವಾಗಿರಲಿಲ್ಲ. ಮುಂದಿನ ವೃತ್ತಿನಿರತ ಬದುಕಿನ ನಾಲ್ಕು ವರ್ಷಗಳನ್ನು ಕಾರವಾರದ ಹೊಸ ಪರಿಸರದಲ್ಲಿ ಹೇಗೆ ಹೊಂದಿಸಿಕೊಳ್ಳಬೇಕೆಂಬ ಆಲೋಚನೆ ಒಂದುಕಡೆ ಮನಸ್ಸನ್ನು ಕೊರೆಯುತ್ತಿತ್ತು.             ಕಾಲೇಜ್ ಕ್ಯಾಂಪಸ್ಸಿನ ಆವರಣದಲ್ಲಿಯೇ ಪ್ರಾಚಾರ್ಯರ ವಸತಿ ಗ್ರಹದ ಅನುಕೂಲತೆಯಿದೆ. ಅಗತ್ಯವೆನಿಸುವ ಎಲ್ಲ ಮೂಲಭೂತ ಸೌಲಭ್ಯಗಳೂ ಇದ್ದವು. ಸಮುದ್ರ ತೀರದ ನಿಸರ್ಗದ ಸಹಜ ಸುಂದರ ವಾತಾವರಣವೂ ಇದೆ. ಕೇವಲ ನಮ್ಮ ಮನಸ್ಸುಗಳನ್ನು ಇಲ್ಲಿಯ ಪರಿಸರ ಮತ್ತು ಮನುಷ್ಯ ಸಂಬಂಧ ಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಸಜ್ಜಾಗುತ್ತಿದ್ದೆವು.             ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಹಿರಿಯ ಮಗ ಸಚಿನ್, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಇಂಜಿನಿಯಿಂಗ್ ಓದುತ್ತಿರುವ ಎರಡನೆಯ ಮಗ ಅಭಿಷೇಕ್ ನಮ್ಮ ವಸತಿಗ್ರಹ ಮತ್ತು ಕಾಲೇಜ್ ಕ್ಯಾಂಪಸ್ ನೋಡುವುದಕ್ಕಾಗಿಯೇ ಕಾರವಾರಕ್ಕೆ ಬಂದಿದ್ದರು.             ಒಂದು ರಾತ್ರಿ ಊಟ ಮುಗಿಸಿ ಕಾಲೇಜು ಮೈದಾನದಲ್ಲಿ ಹೆಂಡತಿ ಮಕ್ಕಳೊಡನೆ ಹೀಗೆ ಹರಟುತ್ತಾ ತಿರುಗಾಡುತ್ತಿದ್ದೆ. ಮೈದಾನದ ಎದುರುಗಡೆ ರಾಷ್ಟ್ರೀಯ  ಹೆದ್ದಾರಿ ಹದಿನೇಳರ ಆಚೆ ಸ್ಮಶಾನದ ಕಂಪೌಂಡಿನ ಹೆಬ್ಬಾಗಿಲು ಸರಿಯಾಗಿ ಗೋಚರಿಸುತ್ತಿತ್ತು. ಐದಾರು ದಶಕಗಳ ಹಿಂದೆ ಬರಿಯ ಸಮುದ್ರದ ಬೇಲೆಯಾಗಿದ್ದ ಇದೇ ಸ್ಮಶಾನ ಭೂಮಿಯಲ್ಲಿ ಅಜ್ಜಿಯನ್ನು ಮಣ್ಣುಮಾಡಿದ ಘಟನೆಯನ್ನು ಅವ್ವನ ಬಾಯಿಂದ ಕೇಳಿದ್ದು ನೆನಪಾಯಿತು. ಮಕ್ಕಳಿಗೆ ಹೇಳಿದೆ, “ಐವತ್ತಾರು ವರ್ಷಗಳ ಹಿಂದೆ ನಿಮ್ಮ ಮುತ್ತಜ್ಜಿ ಇದೇ ಸ್ಮಶಾನದಲ್ಲಿ ಮಣ್ಣಾಗಿದ್ದಾಳೆ. ನಾನಾವಾಗ ಎರಡು ತಿಂಗಳ ತೊಟ್ಟಿಲ ಮಗುವಾಗಿದ್ದೆ. ಈಗ ಇಷ್ಟು ವರ್ಷಗಳ ಬಳಿಕ ಈ ಸ್ಥಿತಿಯಲ್ಲಿ ಇಲ್ಲಿಗೆ ಬಂದು ಅಜ್ಜಿಯ ಸಮಾಧಿ ಸ್ಥಳ ನೋಡಬಹುದೆಂದು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಜೀವನ ಅಂದ್ರೆ ಹೀಗೆಯೇ ಚಿತ್ರವಿಚಿತ್ರ ತಿರುವುಗಳು ನೋಡಿ,” ಎಂದು ಮಾತು ಮುಗಿಸುವಾಗ ನಾನು ಅನಪೇಕ್ಷಿತವಾಗಿ ಭಾವುಕನಾಗಿದ್ದೆ. ಹೆಂಡತಿ ಮಕ್ಕಳಿಗೆ ಸಖೇದಾಶ್ಚರ್ಯ!. ಕುಟುಂಬದವರಿಲ್ಲ. ಜಾತಿ ಬಾಂಧವರಿಲ್ಲ. ಇಂಥಲ್ಲಿ ಅಜ್ಜಿಯ ಹೆಣ ಮಣ್ಣು ಮಾಡಿದ್ದಾರೆ ಅಂದರೆ ನಂಬುವುದಕ್ಕೆ ಆಗದ ಸ್ಥಿತಿಯಲ್ಲಿದ್ದರು. ಅವರಿಗೆ ಆರು ದಶಕಗಳ ಹಿಂದಿನ ಇತಿಹಾಸದ ತುಣುಕೊಂದನ್ನು ಕಥೆಯಾಗಿಸಿ ಹೇಳಬೇಕಾಯಿತು. ಮೈದಾನದ ಕಲ್ಲು ಬೆಂಚಿನ ಮೇಲೆ ಅವರನ್ನು ಕೂಡ್ರಿಸಿಕೊಂಡು ನಮ್ಮ ಅವ್ವನ ನತದ್ರಷ್ಟ ತಾಯಿ ನಾಗಮ್ಮಜ್ಜಿಯ ಪುರಾಣ ಬಿಚ್ಚಿದೆ….             ಕುಮಟಾ ತಾಲೂಕಿನ ನಾಡುಮಾಸ್ಕೇರಿ ಎಂಬ ಪುಟ್ಟ ಗ್ರಾಮದ ಕೃಷಿಕೂಲಿಕಾರ ದಂಪತಿಗಳಾದ ಕೃಷ್ಣ-ನಾಗಮ್ಮ ನಮ್ಮ ಅವ್ವ ತುಳಸಿಯ ತಂದೆ ತಾಯಿಯರು. ತಂದೆ ಕೃಷ್ಣ ಆಗೇರ ನಿರಕ್ಷರಿಯಾದರೂ ಉತ್ತಮ ಯಕ್ಷಗಾನ ಕಲಾವಿದನಾಗಿದ್ದ. ಶೃಂಗಾರ ಪಾತ್ರಗಳಿಗೆ ಹೇಳಿ ಮಾಡಿಸಿದಂತ ವ್ಯಕ್ತಿತ್ವ ಅವನದ್ದಾಗಿತ್ತೆಂದು ಅವ್ವ ಆಗಾಗ ನೆನಪಿಸಿಕೊಳ್ಳುತ್ತಿದ್ದಳು.             ತಮ್ಮ ಒಬ್ಬಳೇ ಮಗಳು ತುಳಸಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದೇ ಕನಸು ಕಟ್ಟಿಕೊಂಡು ತಾಯಿ ತಂದೆಯರಿಬ್ಬರೂ ಮಗಳನ್ನು ಶಾಲೆಗೆ ಸೇರಿಸಿದ್ದರು. ಆದರೆ ದೈವೇಚ್ಛೆ ಹಾಗಿರಲಿಲ್ಲ. ದುರ್ದೈವದಿಂದ ತಂದೆ ಕೃಷ್ಣ ಆಗೇರ ಖಚದೇವಯಾನಿ’ ಯಕ್ಷಗಾನ ಬಯಲಾಟದಲ್ಲಿ ಖಚನ ಪಾತ್ರ ಮಾಡುತ್ತಿದ್ದಾಗ ರಂಗದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ. ನಾಲ್ವತ್ತರ ಹರೆಯದ ತಂದೆ ತೀರಿಕೊಂಡಾಗ ಮಗಳು ತುಳಸಿ ಇನ್ನೂ ಮೂರನೆಯ ತರಗತಿಯ ಮುಗ್ಧ ಬಾಲಕಿ.             ಊರಿನ ಕೆಲವು ದಲಿತರಿಗೆ ಅಂಕೋಲಾ ತಾಲೂಕಿನ ಹಿಲ್ಲೂರಿನ ಅರಣ್ಯಭೂಮಿಯನ್ನು ಬೇಸಾಯಕ್ಕಾಗಿ ಸರಕಾರ ಮಂಜೂರಿ ನೀಡಿತು. ನಾಡುಮಾಸ್ಕೇರಿಯಲ್ಲದೆ ಸುತ್ತಲಿನ ಹೆಗ್ರೆ, ಅಗ್ರಗೋಣ ಮುಂತಾದ ಗ್ರಾಮಗಳಲ್ಲಿ ಕೂಲಿಮಾಡಿಕೊಂಡಿದ್ದ ಆರೆಂಟು ದಲಿತ ಕುಟುಂಬಗಳು ಸ್ವಂತ ಜಮೀನು ಹೊಂದುವ ಉತ್ಸಾಹದಲ್ಲಿ ಹಿಲ್ಲೂರಿಗೆ ಹೊರಟು ನಿಂತವು.             ವಿಧವೆ ನಾಗಮ್ಮಜ್ಜಿ ತನ್ನ ಮಗಳನ್ನು ಕಟ್ಟಿಕೊಂಡು ತಾನೂ ಹಿಲ್ಲೂರಿನೆಡೆಗೆ ಮುಖ ಮಾಡಿದಳು. ಅಲ್ಲಿಗೆ ಅವ್ವನ ಓದುವ ಕನಸು ಭಗ್ನವಾಯಿತು.             ನಾಗಮ್ಮಜ್ಜಿ ತಾನೂ ಸ್ವಂತ ಜಮೀನು ಹೊಂದುವ ಆಸೆಯಿಂದ ತನ್ನ ಮಗಳೊಂದಿಗೆ ಹಿಲ್ಲೂರಿಗೆ ಬಂದಳಾದರೂ ಅವಳಿಗೆ ಜಮೀನು ಮಂಜೂರಿಯಾಗಲಿಲ್ಲ. ಸಂಬಂಧಿಕರ  ಇದ್ದುಕೊಂಡು ಜಮೀನು ಪಡೆದವರ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ಕೂಲಿಯಾಗಿ ದುಡಿದಳು. ಗಟ್ಟಿಗಿಟ್ಟಿಯಾದ ನಾಗಮ್ಮಜ್ಜಿ ಬೆಟ್ಟದ ಭೂಮಿಯ ಬಿದಿರು ಹಿಂಡುಗಳನ್ನು ಕಡಿದು ಬೆಂಕಿಯಿಟ್ಟು ಬಯಲು ಮಾಡಿ, ಕುಠಾರಿ ಹಿಡಿದು ನೆಲ ಅಗೆಯುವ ಕಾಯಕ ನಿಷ್ಠೆಯನ್ನು ಕಂಡ ಬ್ರಿಟಿಷ್ ಅಧಿಕಾರಿಯೊಬ್ಬರು “ನಾಗಮ್ಮನಿಗೆ ಲ್ಯಾಂಡ್ ಸ್ಯಾಂಕ್ಶನ್ ಮಾಡಲೇಬೇಕು” ಎಂದು ಹಠ ಹಿಡಿದು ಅವಳ ಹೆಸರಿಗೂ ಹತ್ತು ಎಕರೆ ಅರಣ್ಯ ಭೂಮಿ ಮಂಜೂರಿ ಮಾಡಿಸಿದರು. ತನ್ನದೇ ಎಂಬ ಭೂಮಿ ದೊರೆತ ಬಳಿಕ ಇನ್ನಷು ಕಷ್ಟಪಟ್ಟು ದುಡಿದ ನಾಗಮ್ಮಜ್ಜಿ ಭೂಮಿಯನ್ನು ಹದಗೊಳಿಸಿಕೊಂಡು ಬೇಸಾಯಕ್ಕೆ ಅಣಿಗೊಳಿಸಿದಳು. ಆದರೆ ಪಟ್ಟಾ ಬರೆಯುವ ಸ್ವಜಾತಿ ಬಂಧು ಶಾನುಭೋಗನೊಬ್ಬ ದಾಖಲೆಗಳಲ್ಲಿ ಈ ಎಲ್ಲ ಜಮೀನನ್ನು ನಾಗಮ್ಮ ಎಂಬ ತನ್ನ ಹೆಂಡತಿಯ ಹೆಸರಿಗೆ ದಾಖಲಿಸಿದ್ದ:             ಆರೆಂಟು ವರ್ಷಗಳು ಕಳೆದ ಮೇಲೆಯೇ ತನಗೆ ವಂಚನೆಯಾದ ಸಂಗತಿ ನಾಗಮ್ಮಜ್ಜಿಯ ಅರಿವಿಗೆ ಬಂತಾದರೂ ತನ್ನ ಭೂಮಿಗಾಗಿ ಕಾನೂನು ಇತ್ಯಾದಿ ಬಳಸಿಕೊಂಡು ಹೋರಾಟ ಮಾಡಲು ಅವಳ ಬೆಂಬಲಕ್ಕೆ ಯಾರೂ ಇರಲಿಲ್ಲ. ಬೇರೆದಾರಿಯಿಲ್ಲದೆ ನಾಗಮ್ಮಜ್ಜಿ ತನ್ನ ಮಗಳೊಂದಿಗೆ ಸ್ವಂತ ಊರು ನಾಡುಮಾಸ್ಕೇರಿಗೆ ಮರಳಿದಳು. ***************************************************** ಡಾ.ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ…

Read Post »

You cannot copy content of this page

Scroll to Top