ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಡಾ.ರಾಮಕೃಷ್ಣ ಗುಂದಿಯವರ ಆತ್ಮಕಥೆ

ನಮ್ಮ ಗೆಳೆಯರ ಗುಂಪು ಈ ಚಹಾ ಅವಲಕ್ಕಿಯ ಭಾಗ್ಯಕ್ಕಾಗಿ ಪರಸಂಗದುದ್ದಕ್ಕೂ ಎಚ್ಚರಿದ್ದು ಅನಿವಾರ್ಯವಾಗಿ ಕಥಾನಕವನ್ನು ಆಲಿಸುತ್ತ ನಮಗೆ ಅರಿವಿಲ್ಲದಂತೆ ಈ ಕಲೆಯ ಕುರಿತು ಆಸಕ್ತಿ ಅನುಭವ ಗಳಿಸಿಕೊಂಡದ್ದು ಮಾತ್ರ ತುಂಬ ವಿಚಿತ್ರವೇ ಅನ್ನಿಸುತ್ತದೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಹೀಗೆ ಗೇರು ಹಕ್ಕಲಿನಲ್ಲಿ ಹಾಕಿದ ಹೆಜ್ಜೆಗಳು ಮೆಲ್ಲಮೆಲ್ಲನೆ ತಾಳ ಗತಿಯ ಲಯಕ್ಕೆ ಹೊಂದಿಕೆಯಾಗುತ್ತಿದ್ದಂತೆಯೇ ಯಕ್ಷರಂಗದ ಆಸಕ್ತಿ ಹೆಚ್ಚುತ್ತ ಹೋಯಿತು. ಅದೇ ಸಮಯದಲ್ಲಿ ನಮ್ಮ ತಂದೆಯವರು ಸುತ್ತಲಿನ ಹಳ್ಳಿಯ ಹವ್ಯಾಸಿ ತಂಡಗಳಿಗೆ ಯಕ್ಷಗಾನ ಕಲಿಸಲು ಹೋಗುತ್ತಿದ್ದರು.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-11 ಆತ್ಮಾನುಸಂಧಾನ ಗೇರು ಹಕ್ಕಲಿನಲ್ಲಿ ಅನುಭಾವ ಗೋಷ್ಠಿಗಳು (೧) ನಮ್ಮ ಕೇರಿಗೆ ಹೊಂದಿಕೊಂಡಂತೆ  ಪೇರುಮನೆ ನಾರಾಯಣ ನಾಯಕ ಎಂಬುವವರ ಒಂದು ವಿಶಾಲವಾದ ಗೇರು ಹಕ್ಕಲ’ವಿತ್ತು. ಅದನ್ನು ನಮ್ಮ ಜಾತಿಯವನೇ ಆದ ಗಣಪತಿ ಎಂಬುವನು ನೋಡಿಕೊಳ್ಳುತ್ತಿದ್ದ. ಗಣಪತಿ, ನಾರಾಯಣ ನಾಯಕರ ಮನೆಯ ಜೀತದ ಆಳು. ತನ್ನ ಹೆಂಡತಿ ಸಾವಿತ್ರಿಯೊಡನೆ ಒಡೆಯರ ಮನೆಯ ಕಸ ಮುಸುರೆ, ದನದ ಕೊಟ್ಟಿಗೆಯ ಕೆಲಸ ಮುಗಿದ ಬಳಿಕ ಅವನು ಗದ್ದೆ ಕೆಲಸದ ಮೇಲ್ವಿಚಾರಣೆ ಇತ್ಯಾದಿ ನೋಡಿಕೊಂಡು ಇರುತ್ತಿದ್ದ ಸರಿ ಸುಮಾರು ಎಪ್ರಿಲ್ ಮೇ ತಿಂಗಳು ಗೇರು ಬೀಜಗಳಾಗುವ ಹೊತ್ತಿಗೆ ಗೇರು ಬೀಜಗಳನ್ನು ಕೊಯ್ದು ದಾಸ್ತಾನು ಮಾಡಿ ಒಡೆಯನ ಮನೆಗೆ ಮುಟ್ಟಿಸುವುದು ಅವನ ಜವಾಬ್ದಾರಿಯಾಗಿತ್ತು. ಗೇರು ಬೀಜಗಳಿಗೆ ಅಷ್ಟೊಂದು ಬೆಲೆಯಿಲ್ಲದ ಕಾಲದಲ್ಲಿ ನಾಯಕರು ಗೇರು ಬೆಳೆಯ ಆದಾಯದ ಕುರಿತು ಅಷ್ಟೇನೂ ಕಾಳಜಿ ಪೂರ್ವಕ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ನಮ್ಮ ಗೆಳೆಯರ ಗುಂಪಿಗೆ ನಾಯಕರ ಗೇರು ಹಕ್ಕಲವೆಂಬುದು ಅತ್ಯಂತ ಪ್ರೀತಿಯ ಆಡುಂಬೊಲವಾಗಿತ್ತು. ಮೇವಿನ ತಾಣವೆನಿಸಿತ್ತು. ನಮ್ಮ ಅನುಭವ ಅನುಭಾವಗಳ ವಿಕಾಸ ಕೇಂದ್ರವಾಗಿತ್ತು.             ನಮ್ಮ ಕೇರಿಯಲ್ಲಿ ಆಗ ಹೆಚ್ಚೂ ಕಡಿಮೆ ಸಮಾನ ವಯಸ್ಕ ಗೆಳೆಯರೆಂದರೆ ನಾರಾಯಣ ವೆಂಕಣ್ಣ, ನಾರಾಯಣ ಮಾಣಿ, ಕೃಷ್ಣ ಮಾಣಿ, ಹೊನ್ನಪ್ಪ ವೆಂಕಣ್ಣ, ಗಣಪತಿ ಬುದ್ದು, ನಾನು ಮತ್ತು ನನ್ನ ತಮ್ಮ ನಾಗೇಶ. ಈ ಸಪ್ತ ಪುಂಡರ ದಂಡು ರಜೆಯ ದಿನಗಳಲ್ಲಿ ಮನೆಯಿಂದ ಹೊರಬಿದ್ದರೆಂದರೆ ಗೇರುಹಕ್ಕಲಿನಲ್ಲೇ ಇರುತ್ತಾರೆ ಎಂದು ಹಿರಿಯರೆಲ್ಲಾ ಅಂದಾಜು ಮಾಡಿಕೊಳ್ಳುತ್ತಿದ್ದರು. ಹಾಗೆಂದು ಅದರ ಆಚೆಗೆ ನಮ್ಮ ಕಾರ್ಯಕ್ಷೇತ್ರ ವಿಸ್ತರಣೆಗೊಂಡಿರಲಿಲ್ಲವೆಂದು ಅರ್ಥವಲ್ಲ. ಆದರೆ ಬೇರೆ ಯಾವ ಕಾರ್ಯಕ್ರಮ ಹಾಕಿಕೊಳ್ಳುವುದಕ್ಕೂ ಯೋಜನೆಗಳು ಸಿದ್ಧವಾಗುವುದು ಗೇರುಹಕ್ಕಲಿನಲ್ಲಿಯೇ. ಹಿತ್ತಲ ಮಧ್ಯದ ಹತ್ತಿಪ್ಪತ್ತು ವರ್ಷ ಹಳೆಯದಾದ ದೊಡ್ಡ ಗೇರುಮರವೊಂದು ನಮ್ಮ ಎಲ್ಲಾ ಚಟುವಟಿಕೆಗಳಿಗೆ ಹೊಂದಿಕೆಯಾಗುತ್ತ ತನ್ನ ಆಕ್ರತಿಯನ್ನು ಬದಲಿಸಿಕೊಳ್ಳುತ್ತಿತ್ತು. ಮರದ ವಿಶಾಲ ರೆಂಬೆಗಳಲ್ಲಿ ಮರಕೋತಿ ಆಟ’ ಆಡುವುದಕ್ಕೂ, ಯಕ್ಷಗಾನ ಬಯಲಾಟ’ ಕುಣಿಯುವುದಕ್ಕೂ, ಆಗಾಗ ನಡೆಯುವ ಮೇಜವಾನಿಗಳಿಗೂ ಈ ಮರದ ನೆರಳು ಆಶ್ರಯ ತಾಣವಾಗಿತ್ತು.             ಗೇರುಹಕ್ಕಲಿನಲ್ಲಿ ನಾವು ಕುಣಿಯುತ್ತಿದ್ದ ಯಕ್ಷಗಾನ ಬಯಲಾಟಗಳ ಕುರಿತು ನಾನು ಮುಂದೆ ಪ್ರಸ್ತಾಪಿಸಲಿರುವೆ. ಮೇಲೆ ಹೇಳಿದ ಮೇಜವಾನಿ’ ಎಂಬುದರ ಕುರಿತು ಒಂದಿಷ್ಟು ವಿವರಗಳನ್ನು ನೀಡಬೇಕು.             ಗೇರು ಹಕ್ಕಲಿನ ಒಡೆಯ ನಾರಾಯಣ ನಾಯಕರು ಮತ್ತು ಕಾವಲುಗಾರ ಗಣಪತಿಮಾವ’ನ ಕಣ್ಣು ತಪ್ಪಿಸಿ ನಾವು ಹಕ್ಕಲಿನಲ್ಲಿ ಗೇರುಬೀಜಗಳನ್ನು ಕದ್ದು ಯಾವುದಾದರೂ ಅಂಗಡಿಗೆ ಒಯ್ದು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಬೆಲ್ಲ ಅವಲಕ್ಕಿ, ಬೇಯಿಸಿದ ಗೆಣಸು, ಚಕ್ಕುಲಿ, ಮಂಡಕ್ಕಿಉಂಡಿ ಇತ್ಯಾದಿ ಸಿಕ್ಕ ತಿನಿಸುಗಳನ್ನು ಖರೀದಿಸಿ ತಂದು ಎಲ್ಲರೂ ಗೇರುಮರದ ನೆರಳಿಗೆ ಬಂದು ಹಂಚಿಕೊಂಡು ತಿನ್ನುತ್ತಿದ್ದೆವು. ಗೇರು ಬೀಜಗಳನ್ನೇ ಸುಟ್ಟು ತಿನ್ನುವುದೂ ಇತ್ತು. ಗೇರುಬೀಜದ ಸೀಜನ್ ಮುಗಿಯುತ್ತಿರುವಾಗಲೇ ಮಾವಿನ ಮಿಡಿಗಳು ಬಿಡಲಾರಂಭಿಸುತ್ತಿದ್ದವು. ಆಗ ನಮ್ಮ ತಂಡ ಮಾವಿನ ತೋಪುಗಳನ್ನು ಅರಸಿ ಹೋಗುತ್ತಿತ್ತು. ಗೇರು ಹಕ್ಕಲಿನ ಬದಿಯಲ್ಲೇ ಮೂರ್ನಾಲ್ಕು ಮಾವಿನ ಮರಗಳಿದ್ದ ಒಂದು ಚಿಕ್ಕ ಹಿತ್ತಲವಿತ್ತು. ಅದು ಕೊಂಕಣಿ ಮಾತನಾಡುವ ಒಬ್ಬ ವಿಧವೆ ಅಮ್ಮ’ನಿಗೆ ಸೇರಿದುದಾಗಿತ್ತು.             ನಾಡುಮಾಸ್ಕೇರಿಯಲ್ಲಿರುವ ಏಕೈಕ ಕೊಂಕಣಿಗರ ಮನೆ ಅಮ್ಮನ ಮನೆ’ ನಾವು ಕಾಣುವ ಹೊತ್ತಿಗೆ ಈ ಅಮ್ಮ ವಿಧವೆಯಾಗಿ ಕೇಶಮುಂಡನ ಮಾಡಿಸಿಕೊಂಡು ಕೆಂಪುಸೀರೆ ಉಡುತ್ತಿದ್ದಳು. ಅಮ್ಮನ ಹೆಸರು ಏನೆಂದು ನಮಗೆ ಕೊನೆಯವರೆಗೂ ತಿಳಿಯಲೇ ಇಲ್ಲ. ಅವಳ ಹಿರಿಯ ಮಗ ಯಾವುದೋ ಉದ್ಯೋಗದಲ್ಲಿ ಹೊರಗೇ ಇರುತ್ತಿದ್ದ. ತನ್ನ ಬಳಿಯೇ ಇರುವ ಅವಳಿ ಮಕ್ಕಳು ರಾಮು ಲಕ್ಷಣರಿಗೆ ಒಂದು ಪುಟ್ಟ ಅಂಗಡಿ ಹಾಕಿಕೊಟ್ಟು ವ್ಯಾಪಾರಕ್ಕೆ ಹಚ್ಚಿದ್ದಳು. ಇದ್ದ ಸ್ವಲ್ಪ ಬೇಸಾಯದ ಭೂಮಿಯನ್ನು ಹಾಲಕ್ಕಿ ಒಕ್ಕಲಿಗರಿಗೆ ಗೇಣಿ ಬೇಸಾಯ’ ಕ್ಕೆ ನೀಡಿದ ಅಮ್ಮ, ಹಿತ್ತಲಿನಲ್ಲಿ ಬೆಳೆದ ಮಾವು ಮುರಗಲ ಇತ್ಯಾದಿ ಕಾಯಿಗಳಿಂದ ಹುಳಿ’ ತಯಾರಿಸಿ ಮಾರಾಟಮಾಡಿ ಜೀವನ ಸಾಗಿಸುತ್ತಿದ್ದಳು. ಗೇರುಹಕ್ಕಲಿಗೆ ಹೊಂದಿಕೊಂಡಂತೆ ಇರುವ ಅಮ್ಮನ ಹಿತ್ತಲಿಗೆ ಲಗ್ಗೆ ಹಾಕುವುದು ನಮಗೆ ಬಹಳ ಸುಲಭವಾಗಿತ್ತು. ಮಾವು ಕಸುಗಾಯಿಯಾದ ಸಂದರ್ಭ ನೋಡಿ ನಾವು ಅಮ್ಮನ ಹಿತ್ತಲಿನಿಂದ ಮಾವಿನ ಕಾಯಿಗಳನ್ನು ಕದ್ದು ತಂದು ಅವುಗಳನ್ನು ಸಣ್ಣಗೆ ಹೆಚ್ಚಿ ಹಸಿಮೆಣಸು ಉಪ್ಪು ಬೆರೆಸಿ ಕೊಚ್ಚೂಳಿ’ ಮಾಡಿ ಒಂದೊಂದು ಬೊಗಸೆಯಷ್ಟನ್ನು ಪಾಲು ಹಾಕಿಕೊಂಡು ತಿನ್ನುತ್ತಿದ್ದೆವು. ನಾವು ಮಾವಿನ ಕಾಯಿ ಕದಿಯಲು ಬಂದದ್ದು ಗೊತ್ತಾಗಿ ಅಮ್ಮ ತನ್ನ ಸಾಕು ನಾಯಿಯನ್ನು ಛೂ ಬಿಟ್ಟುಕೊಂಡು ಅನ್ನಿ ಯಯ್ಲಪಳೆ ರಾಂಡ್ಲೋ ಪುತಾನಿ…. ಎಂದು ಮೊದಲಾಗಿ ಬಯ್ದುಕೊಳ್ಳುತ್ತಾ ಓಡಿ ಬರುತ್ತಿದ್ದರೆ ನಾವು ಕೈಗೆ ಸಿಕ್ಕಷ್ಟು ದೋಚಿಕೊಂಡು ಓಡುವುದೇ ತುಂಬಾ ಮಜವಾಗಿರುತ್ತಿತ್ತು. ಮಾವಿನ ಹಣ್ಣುಗಳಾಗುವ ಸಮಯದಲ್ಲೂ ಮರದಡಿಯಲ್ಲೇ ಕಾದುಕುಳಿತು ಬಿದ್ದ ಹಣ್ಣುಗಳನ್ನಾಯ್ದು ತಿನ್ನುತ್ತಿದ್ದೆವು.             ಬೇಸಿಗೆಯ ದಿನಗಳಲ್ಲಿ ನಮ್ಮ ಬಾಯಿ ಚಪಲಕ್ಕೆ ಆಹಾರ ಒದಗಿಸಲು ಒಂದಿಲ್ಲೊಂದು ದಾರಿ ಇದ್ದೇ ಇರುತ್ತಿತ್ತು. ಬೆಳೆದುನಿಂತ ಗೆಣಸಿನ ಹೋಳಿಗಳಾಗಲಿ, ಶೇಂಗಾ ಗದ್ದೆಗಳಾಗಲಿ ಕಂಡರೆ ಮಬ್ಬುಗತ್ತಲಲ್ಲಿ ಉಪಾಯದಿಂದ ನುಗ್ಗಿ ಲೂಟಿ ಮಾಡುತ್ತಿದ್ದೆವು. ನಮಗೆ ಅತ್ಯಂತ ದುಷ್ಕಾಳದ ದಿನಗಳೆಂದರೆ ಮಳೆಗಾಲದ ದಿನಗಳು. ಕರಾವಳಿಯ ಜೀಗುಡುಮಳೆ ಹಿಡಿಯಿತೆಂದರೆ ಮನೆಯಿಂದ ಹೊರಗೆ ಹೋಗುವುದೇ ಕಷ್ಟವಾಗುತ್ತಿತ್ತು. ಕೆಲಸವಿಲ್ಲದೆ ಕುಳಿತಾಗ ಬಾಯಿ ಚಪಲ ಇನ್ನೂ ತಾರಕಕ್ಕೇರುತ್ತಿತ್ತು. ಕೆಲವು ಮನೆಗಳಲ್ಲಿ ಮಳೆಗಾಲದ ನಾಲಿಗೆ ಚಪಲಕ್ಕಾಗಿಯೇ ಬೇಯಿಸಿದ ಗೆಣಸಿನ ಹೋಳುಗಳನ್ನು ಒಣಗಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಜೋರು ಮಳೆ ಹೊಯ್ಯುವಾಗ ಒಂದೊಂದು ಮುಷ್ಟಿ ಒಣಗಿದ ಗೆಣಸಿನ ಹೋಳುಗಳನ್ನು ಕೈಗೆಕೊಟ್ಟು ಕೂಡ್ರಿಸುತ್ತಿದ್ದರು. ಅವುಗಳನ್ನು ಸುಲಭವಾಗಿ ಜಗಿದು ತಿನ್ನುವುದು ಸಾಧ್ಯವಿರಲಿಲ್ಲ. ಒಂದೊಂದೇ ಹೋಳುಗಳನ್ನು ಬಾಯಿಗಿಟ್ಟು ಲಾಲಾರಸದಲ್ಲಿ ನೆನೆಸಿ ಮೆದುಮಾಡಿಕೊಂಡು ಜಗಿದು ನುಂಗಬೇಕಾಗುತ್ತಿತ್ತು. ಈಗಿನ ಚೂಯಿಂಗ್ ಗಮ್ ಥರ ಸಮಯ ಕೊಲ್ಲಲು ಗೆಣಸಿನ ಹೋಳುಗಳು ಬಹಳ ಸಹಾಯ ಮಾಡುತ್ತಿದ್ದವು.             ಮಳೆಗಾಲದ ತಿನಿಸುಗಳಿಲ್ಲದ ದುಷ್ಕಾಳದ ಸಮಯದಲ್ಲಿ ನಮ್ಮ ನೆರವಿಗೆ ಬಂದದ್ದೇ ಗೊಣ್ಣೆಗೆಂಡೆ ಸುಳಿ’. ಮತ್ತೆ ಅದೇ ಗೇರುಹಕ್ಕಲ ನಮಗೆ ಬಲಿತ ಗೊಣ್ಣೆ ಗೆಂಡೆಗಳನ್ನು ನೀಡಿ ಉಪಕಾರ ಮಾಡುತ್ತಿತ್ತು. ಬೇಸಿಗೆಯಲ್ಲಿ ಸುಳಿವು ನೀಡದೇ ನೆಲದೊಳಗೆ ಅವಿತುಕೊಂಡಿದ್ದ ಗೊಣ್ಣೆಗೆಂಡೆಯ ಬೇರುಗಳು ಮಳೆ ಬೀಳುತ್ತಿದ್ದಂತೆ ಬಲಿತು ಚಿಗುರೊಡೆದು ಅದರ ಬಳ್ಳಿಗಳು ಗೇರುಮರದ ರೆಂಬೆಗಳನ್ನು ಆಶ್ರಯಿಸಿ ಹಬ್ಬುತ್ತಿದ್ದವು. ಬಳ್ಳಿಗಳ ಬುಡವನ್ನರಸಿ ಅಗೆದು ಗೊಣ್ಣೆಗೆಂಡೆಗಳನ್ನು ಆಯ್ದುಕೊಳ್ಳುವುದು ಸುಲಭವಾಗುತ್ತಿತ್ತು. ಒಂದು ಮುಷ್ಠಿಗಾತ್ರದ ಉರುಟಾದ ಈ ಗಡ್ಡೆಗಳಿಗೆ ಒರಟಾದ ಕಪ್ಪು ಸಿಪ್ಪೆಯ ಕವಚವಿರುತ್ತಿತ್ತು. ಗಡ್ಡೆಗಳನ್ನು ಬೇಯಿಸಿದಾಗ ಆಲೂಗಡ್ಡೆಯ ಸಿಪ್ಪೆಯಂತೆ ಸುಲಿದು ತೆಗೆಯಬಹುದಾಗಿತ್ತು. ಆದರೆ ಅಸಾಧ್ಯ ಕಹಿಯಾಗಿರುವ ಗೊಣ್ಣೆಗೆಂಡೆಗಳನ್ನು ಹಾಗೇ ಬೇಯಿಸಿ ತಿನ್ನುವುದು ಸಾಧ್ಯವಿರಲಿಲ್ಲ. ಅದಕ್ಕೆ ಸೂಕ್ತ ಕ್ರಿಯಾ ಕರ್ಮಗಳನ್ನು ಮಾಡಿ ಹದಗೊಳಿಸಿ ಗೊಣ್ಣೆಗೆಂಡೆಸುಳಿ’ಯನ್ನು ತಯಾರು ಮಾಡಬೇಕಾಗುತ್ತಿತ್ತು. ನಮ್ಮ ತಂಡದಲ್ಲಿ ನಮ್ಮೆಲ್ಲರಿಗಿಂತ ವಯಸ್ಸಿನಲ್ಲಿ ಸ್ವಲ್ಪ ಹಿರಿಯವನೆಂದರೆ ನಾರಾಯಣ ವೆಂಕಣ್ಣ. ಅವನಿಗೆ ಅದರ ಕೌಶಲ್ಯ ಚೆನ್ನಾಗಿ ತಿಳಿದಿತ್ತು. ಅವನ ಮಾರ್ಗದರ್ಶನದಂತೆ ನಾವು ನೆರವಿಗೆ ನಿಲ್ಲುತ್ತಿದ್ದೆವು.             ಗೇರು ಹಕ್ಕಲಿನಿಂದ ಎಲ್ಲರೂ ಸೇರಿ ಗಡ್ಡೆಗಳನ್ನು ಅಗೆದು ತಂದಾದಮೇಲೆ ಅವುಗಳನ್ನು ಚೆನ್ನಾಗಿ ತೊಳೆದು ಮಣ್ಣಿನ ಗಡಿಗೆಯೊಂದರಲ್ಲಿ ಹಾಕಿ ಸರಿಯಾಗಿ ಬೇಯಿಸುವುದು. ಗಡ್ಡೆಗಳು ಬೆಂದ ಬಳಿಕ ಅದರ ಸಿಪ್ಪೆ ಸುಲಿದು ತೆಳ್ಳಗೆ ಹೋಳುಗಳಾಗಿ ಹೆಚ್ಚಿ ಕೊಳ್ಳುವುದು. ಹೆಚ್ಚಿದ ಹೋಳುಗಳನ್ನು ಜಾಳಿಗೆಯಂಥ ಬಿದಿರಿನ ಬುಟ್ಟಿಯಲ್ಲಿ ತುಂಬಿ ಒಂದು ರಾತ್ರಿಯಿಡೀ ಹರಿಯುವ ನೀರಿನಲ್ಲಿ ಇಟ್ಟು ಬರಬೇಕು. ಇದರಿಂದ ಗಡ್ಡೆಯಲ್ಲಿರುವ ಕಹಿ ಅಂಶ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.             ಮರುದಿನ ಬುಟ್ಟಿಯನ್ನು ಎತ್ತಿ ತಂದು ಮತ್ತೊಮ್ಮೆ ಚೆನ್ನಾಗಿ ತೊಳೆದು ಬೇಯಿಸಿಕೊಳ್ಳುವುದು. ಬೆಂದ ಹೋಳುಗಳನ್ನು ಮರದ ಮರಿಗೆಯಲ್ಲಿ (ಅಂದಿನ ಕಾಲದಲ್ಲಿ ಅನ್ನ ಬಸಿಯುವುದಕ್ಕಾಗಿ ದೋಣಿಯಾಕಾರದ ಕಟ್ಟಿಗೆಯ ಮರಿಗೆಗಳು ಬಹುತೇಕ ಮನೆಗಳಲ್ಲಿ ಇದ್ದವು) ಹಾಕಿ ಒನಕೆಯಿಂದ ಜಜ್ಜಿ ಮೆದುಗೊಳಿಸುವುದು. ಅದಕ್ಕೆ ಸಮಪ್ರಮಾಣದ ಬೆಲ್ಲ ಕಾಯಿಸುಳಿ’ ಬೆರೆಸಿ ಹದಮಾಡಿದರೆ ರುಚಿಯಾದ ಗೊಣ್ಣೆಗೆಂಡೆ ಸುಳಿ’ ಸಿದ್ಧವಾಗುತ್ತಿತ್ತು. ಎರಡು ದಿನಗಳ ಇಷ್ಟೆಲ್ಲ ವಿಧಿವಿಧಾನಗಳನ್ನು ನಾರಾಯಣಣ್ಣ ಅತ್ಯಂತ ತಾಳ್ಮೆಯಿಂದ ನಿರ್ವಹಿಸಿ, ಸಿದ್ಧವಾದ ಸುಳಿ’ಯನ್ನು ತಾನೇ ಬಾಳೆಲೆಯಲ್ಲಿ ನಮಗೆ ಪಾಲು ಹಾಕಿ ಕೊಡುತ್ತಿದ್ದ. ಇಪ್ಪತ್ನಾಲ್ಕು ಗಂಟೆಗಳ ಕಾಯುವಿಕೆಯ ಪರಿಣಾಮವೋ ಏನೋ ನಮ್ಮ ಪಾಲು ನಮ್ಮ ಕೈಗೆಟುಕಿದಾಗ ಮ್ರಷ್ಟಾನ್ನವೇ ಕೈಗೆ ಬಂದಂತೆ ಗಬಾಗಬಾ ಮುಕ್ಕುತ್ತಿದ್ದೆವು.             ಇಷ್ಟಾಗಿಯೂ ಗೊಣ್ಣೆ  ಕಹಿ ಗುಣ ಹಾಗೇ ಉಳಿದುಕೊಂಡಿರುವುದು ಗಮನಕ್ಕೆ ಬರುತ್ತಿತ್ತಾದರೂ ಲೆಕ್ಕಿಸದೇ ತಿಂದು ಮುಗಿಸುತ್ತಿದ್ದೆವು. ಈ ಮೇಜವಾನಿ ಹೆಚ್ಚೆಂದರೆ ಮಳೆಗಾಲದ ಒಂದೆರಡು ದಿನ ಮಾತ್ರ ಸಾಧ್ಯವಾಗುತ್ತಿತ್ತು. ಆದರೆ ಪ್ರತಿ ಮಳೆಗಾಲದಲ್ಲೂ, ನಾವು ದೊಡ್ಡವರಾಗುವವರೆಗೂ ವರ್ಷಕ್ಕೆ ಒಮ್ಮೆಯಾದರೂ ಈ ಮೇಜವಾನಿಯ ಯೋಗವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಬಹುಶಃ ಇದೇ ಕಾರಣದಿಂದ ಇರಬಹುದು ನಾವೆಲ್ಲರೂ ಇದೀಗ ಐವತ್ತು ದಾಟಿದ್ದೇವೆ, ಆದರೆ ಯಾರಿಗೂ ಸಕ್ಕರೆಯ ಸಮಸ್ಯೆ’ ಕಾಡಲೇ ಇಲ್ಲ. *************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-11 ಆತ್ಮಾನುಸಂಧಾನ ಕೇರಿ — ಕೊಪ್ಪಗಳ ನಡುವೆ…. ಬನವಾಸಿಯಿಂದ ಅಪ್ಪನಿಗೆ ಅಂಕೋಲಾ ತಾಲೂಕಿನ ಮಂಜಗುಣಿ ಎಂಬ ಊರಿನ ಶಾಲೆಗೆ ವರ್ಗವಾಯಿತು. ನಮ್ಮ ಪರಿವಾರ ನಾಡುಮಾಸ್ಕೇರಿಯಲ್ಲಿ ಮತ್ತೆ ನೆಲೆಸುವ ಅವಕಾಶ ಪಡೆಯಿತು. ಅಪ್ಪ ದಿನವೂ ಗಂಗಾವಳಿ ನದಿ ದಾಟಿ ಮಂಜಗುಣೆಯ ಶಾಲೆಗೆ ಹೋಗಿ ಬರುತ್ತಿದ್ದರೆ ನಾನು ಸಮೀಪದ ಜೋಗಣೆ ಗುಡ್ಡ’ ಎಂಬ ಭಾಗದಲ್ಲಿರುವ ಪೂರ್ಣ ಪ್ರಾಥಮಿಕ ಶಾಲೆಗೆ ಏಳನೆಯ ತರಗತಿಯ ಪ್ರವೇಶ ಪಡೆದುಕೊಂಡಿದ್ದೆ. ತಮ್ಮ, ತಂಗಿಯರು ಮನೆಯ ಸಮೀಪವೇ ಇರುವ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಕೊಂಡರು.             ನಾಡುಮಾಸ್ಕೇರಿಯ ವಾಸ್ತವ್ಯದ ಈ ಕಾಲಾವಧಿ ನನಗೆ ಕಲಿಸಿದ ಪಾಠ, ನೀಡಿದ ಅನುಭವ ಬಹಳ ಅಮೂಲ್ಯವಾದದ್ದು. ಇಲ್ಲಿ ಬಾಲ್ಯದ ಎಲ್ಲ ಸಂತಸದ ಅನುಭವಗಳೊಡನೆಯೇ ಅನೇಕ ಕಹಿ ಸಂದರ್ಭಗಳಿಗೂ ಮುಖಾಮುಖಿಯಾಗುವ ಅವಕಾಶ ಒದಗಿ ಬಂತು. ಜೀವ ವಿಕಾಸದ ಅನೇಕ ನಿಗೂಢತೆಗಳಿಗೆ ಮನಸ್ಸು ತೆರೆದುಕೊಂಡದ್ದೂ ಈ ಮಾಸ್ಕೇರಿಯಲ್ಲಿಯೇ.             ೬೨-೬೩ ರ ನೆರೆ ಹಾವಳಿ ನಮ್ಮ ಊರಿನಲ್ಲೂ ಅನೇಕ ಅವಾಂತರಗಳನ್ನು ಸೃಷ್ಠಿಸಿತ್ತು. ನಮ್ಮ ಜಾತಿಯ ಹಲವಾರು ಕುಟುಂಬಗಳು ತಮ್ಮ ಸ್ವಂತದ್ದಲ್ಲದ ಒಡೆಯರ ತುಂಡು ಭೂಮಿಯಲ್ಲಿ ಅಲ್ಲಿ ಇಲ್ಲಿ ಗುಡಿಸಲು ಹಾಕಿಕೊಂಡು ಬಾಳುವೆ ನಡೆಸುತ್ತಿದ್ದರು. ಅವುಗಳೆಲ್ಲಾ ನೆರೆಹಾವಳಿಯಲ್ಲಿ ನಾಶವಾಗಿ ನೆಲೆ ಕಳೆದುಕೊಂಡಿದ್ದರು. ಪರಿಸ್ಥಿತಿಯನ್ನು ಅರಿತ ನಮ್ಮ ತಂದೆಯವರು ಓದು ಬರಹ ಬಲ್ಲವರಾದ್ದರಿಂದ ಬನವಾಸಿಯಲ್ಲಿ ಇರುವಾಗಲೇ ನಮ್ಮವರ ಕಷ್ಟಗಳು ಸರಕಾರಕ್ಕೆ ಮನವರಿಕೆಯಾಗುವಂತೆ ಅರ್ಜಿ ಬರೆದು ಎಲ್ಲರಿಗೂ ಜಮೀನು ಮತ್ತು ಮನೆ ಮಂಜೂರಿಯಾಗುವಂತೆ ಮಾಡಿದ್ದರು. ನಾವು ಮರಳಿ ನಾಡುಮಾಸ್ಕೇರಿಗೆ ಬಂದು ನೆಲೆಸುವ ಹೊತ್ತಿಗೆ ಎಲ್ಲ ನಿರಾಶ್ರಿತ ಕುಟುಂಬಗಳಿಗೆ ತಲಾ ಐದು ಗುಂಟೆ ಭೂಮಿ ಮತ್ತು ಜನತಾ ಮನೆಗಳು ಮಂಜೂರಿಯಾಗಿ ಮನೆ ಕಟ್ಟುವ ಕೆಲಸ ಆರಂಭವಾಗಿತ್ತು.             ನಾಡು ಮಾಸ್ಕೇರಿಯ ನಾಡವರ ಕೊಪ್ಪದಿಂದ ಹಾರು ಮಾಸ್ಕೇರಿಯ ಬ್ರಾಹ್ಮಣರ ಮನೆಯವರೆಗೆ ವಿಶಾಲವಾದ ಬಯಲು ಪ್ರದೇಶವಿತ್ತು. ದನ-ಕರು ಸಾಕಿಕೊಂಡವರಿಗೆಲ್ಲ ಅದು ಗೋಮಾಳ’ದಂತೆ ದನ ಮೇಯಿಸುವ ಸ್ಥಳವಾಗಿತ್ತು. ಅದರ ಒಂದು ಭಾಗದಲ್ಲಿ ಆಗೇರರಿಗೆಲ್ಲಾ ಜಮೀನು ಹಂಚಿಕೆಯಾಗಿತ್ತು. ಉಳಿದ ಭಾಗವನ್ನು ಗೋಮಾಳವೆಂದೂ, ಆಟದ ಬಯಲು ಎಂದೂ ಬಿಟ್ಟಿದ್ದರು. ಹೀಗೆ ಊರಿನಲ್ಲಿ ಅಲ್ಲಿ ಇಲ್ಲಿ ಅನ್ಯರ ನೆಲದಲ್ಲಿ ಆಶ್ರಯ ಪಡೆದ ಆಗೇರರು ಒಂದು ನಿರ್ದಿಷ್ಟ ಸ್ಥಳದಲ್ಲಿ ಜನತಾ ಮನೆಗಳನ್ನು ಕಟ್ಟಿಕೊಂಡು ನೆಲೆಸುತ್ತಾ ಆಗೇರಕೇರಿ’ಯೊಂದು ನಿರ್ಮಾಣವಾಯಿತು.             ಗೋಮಾಳದ ಬಯಲು ದಾಟಿದ ಬಳಿಕ ಒತ್ತಾಗಿ ಇರುವ ನಾಡವರ ಮನೆಗಳು ಮತ್ತು ಮನೆಯ ಸುತ್ತ ಸೊಂಪಾಗಿ ಬೆಳೆದು ನಿಂತ ತೆಂಗು, ಅಡಿಕೆ, ಬಾಳೆ ಮತ್ತಿತರ ಗಿಡಮರಗಳ ಕಾರಣದಿಂದ ಬಹುಶಃ ನಾಡವರ ಕೇರಿಯನ್ನು ಕೇರಿ’ ಎನ್ನದೆ ನಾಡವರ ಕೊಪ್ಪ’ ಎಂದು ಕರೆಯುತ್ತಿರಬೇಕು. ಕೇರಿಯ ಬಹುತೇಕ ಎಲ್ಲರೂ ಕೊಪ್ಪದ ಹಂಗಿನಲ್ಲೇ ಬಾಳಬೇಕಾದ ಅನಿವಾರ್ಯತೆ ಇದ್ದವರು. ನಾಡವರ ಕೃಷಿ ಭೂಮಿಯ ಕೆಲಸಗಳು, ಮನೆಯ ಕಸ ಮುಸುರೆ ಇತ್ಯಾದಿ ಕಾಯಕದಿಂದ ಆಗೇರರ ಬಹಳಷ್ಟು ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಹಾಗಾಗಿ ಕೇರಿ-ಕೊಪ್ಪಗಳ ನಡುವೆ ಸಹಜವಾಗಿಯೇ ವ್ಯವಹಾರಿಕ ಸಂಬಂಧ ಬೆಸೆದುಕೊಂಡಿತ್ತು. ನಮ್ಮ ಕೇರಿಯ ಬಹಳಷ್ಟು ಜನ ತಮ್ಮ ಮದುವೆಗಾಗಿ ಜಮೀನ್ದಾರರಾಗಿದ್ದ ನಾಡವರಿಂದ ಸಾಲಪಡೆದು ಗಂಡ ಹೆಂಡತಿ ಇಬ್ಬರೂ ಜೀತದ ಆಳುಗಳಾಗಿ ದುಡಿಯುತ್ತಿದ್ದರು. ಮುಂದೆ ಈ ದಂಪತಿಗಳಿಗೆ ಹುಟ್ಟಿದ ಮಕ್ಕಳು ಕೂಡಾ ಇದೇ ಒಡೆಯನ ಮನೆಯ ಆಳಾಗಿ ದುಡಿಯುತ್ತ ಅಗತ್ಯವಾದರೆ ತಮ್ಮ ಮದುವೆಗೂ ಒಡೆಯನಿಂದ ಸಾಲ ಪಡೆಯುತ್ತ ಜೀತ ಪರಂಪರೆಯನ್ನು ಬಹುತೇಕ ಮುಂದುವರಿಸುತ್ತಿದ್ದರು. ಸಾಲ ಪಡೆಯದೆ ಜೀತದಿಂದ ಹೊರಗಿದ್ದವರೂ ಕೂಡ ದೈನಂದಿನ ಅನ್ನ ಸಂಪಾದನೆಗಾಗಿ ಇದೇ ಒಡೆಯರ ಮನೆಗಳಲ್ಲಿ, ಹೊಲಗಳಲ್ಲಿ ಚಾಕರಿ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದ್ದರು. ನಾಡವರ ಮನೆಗಳ ಕಸ-ಮುಸುರೆ, ತೋಟದ ಕೆಲಸ, ಬೆಸಾಯದ ಭೂಮಿಯಲ್ಲಿ ದುಡಿಮೆ ಇತ್ಯಾದಿಗಳನ್ನು ಮಾಡುತ್ತ ಕೇರಿಯ ಜನ ಕೊಪ್ಪದ ಯಜಮಾನರುಗಳೊಂದಿಗೆ ಅನ್ಯೋನ್ಯವಾಗಿಯೇ ಹೊಂದಿಕೊಂಡಿದ್ದರು. ಹಬ್ಬ-ಹುಣ್ಣಿಮೆ, ಯಜಮಾನರ ಮನೆಯ ಮದುವೆ, ಹರಿದಿನ ಮೊದಲಾದ ಸಮಾರಂಭಗಳಲ್ಲಿ ನಮ್ಮ ಕೇರಿಯ ಜನ ಪಾತ್ರೆಗಳನ್ನೊಯ್ದು ಒಡೆಯರ ಮನೆಗಳಿಂದ ಅನ್ನ, ಪಾಯಸ ಇತ್ಯಾದಿಗಳನ್ನು ಬಡಸಿಕೊಂಡು’ ಬಂದು ಮನೆ ಮಂದಿಯೆಲ್ಲ ಹಂಚಿಕೊಂಡು ಉಣ್ಣುತ್ತಿದ್ದರು. ದೀಪಾವಳಿ, ಯುಗಾದಿ, ಚೌತಿ, ತುಳಸಿ ಹಬ್ಬ ಮುಂತಾದ ವಿಶೇಷ ಹಬ್ಬಗಳ ದಿನ ಸಂಜೆಯ ಹೊತ್ತು ಕೇರಿಯ ಹೆಂಗಸರು ಮಕ್ಕಳೆಲ್ಲ ಒಂದೊಂದು ಹಚ್ಚಿಗೆ’ (ಬಿದಿರಿನ ಬುಟ್ಟಿ) ಅಥವಾ ಕೈಚೀಲ ಹಿಡಿದು ಕೊಪ್ಪದ ಮನೆಮನೆಯ ಮುಂದೆ ನಿಂತು ರೊಟ್ಟಿ ಬೇಡುವ’ ಅನಿಷ್ಟ ಪದ್ಧತಿಯೂ ಆಗ ಚಾಲ್ತಿಯಲ್ಲಿತ್ತು. ಇದು ಅತ್ಯಂತ ದೈನೇಸಿ ಕ್ರಮವೆಂಬ ಅರಿವಿಲ್ಲದೆ, ನನ್ನ ವಯಸ್ಸಿನ ಹುಡುಗರೂ ನಾಡವರ ಮನೆಗಳಿಂದ ಬೇಡಿ ತರುತ್ತಿದ್ದ ಬಿಳಿ ಬಿಳಿಯಾದ ರೊಟ್ಟಿಯ ಹೋಳುಗಳಿಗೆ ಆಸೆಪಟ್ಟು ನಾನೂ ಒಮ್ಮೆ ನಮ್ಮ ಗೆಳೆಯರ ತಂಡದಲ್ಲಿ ಸೇರಿಕೊಂಡು ರೊಟ್ಟಿ ಬೇಡಲು ಹೋಗಿ ಬಂದಿದ್ದೆ. ಕೆಲವು ಮನೆಗಳವರು ನನ್ನನ್ನು ಇಂಥವರ ಮಗ’ ಎಂದು ಗುರುತಿಸಿ ನನ್ನ ಕೈಚೀಲಕ್ಕೆ ಸ್ವಲ್ಪ ಹೆಚ್ಚಿನ ರೊಟ್ಟಿ ಹೋಳುಗಳನ್ನೇ ಅನುಗ್ರಹಿಸಿದ್ದರು! ನನಗೆ ಖುಷಿಯಾಗಿತ್ತು. ಆದರೆ ಮನೆಯಲ್ಲಿ ವಿಷಯ ತಿಳಿದಾಗ ದೊಡ್ಡ ರಂಪವೇ ಆಯಿತು. ಹೇಳಿ ಕೇಳಿ ನಾನೊಬ್ಬ ಸರಕಾರಿ ಸಂಬಳ ಪಡೆಯುವ ಮಾಸ್ತರನ ಮಗ. ನನ್ನಂಥವನು ಬೇಡಲು ನಿಂತದ್ದು ನನಗೂ, ನನ್ನ ತಾಯಿ, ತಂದೆಯರಿಗೂ ಅವಮಾನಕರ ಸಂಗತಿಯೇ. ಅಷ್ಟೆಲ್ಲಾ ಗಂಭೀರವಾಗಿ ಯೋಚಿಸುವ ತಿಳುವಳಿಕೆಯಾದರೂ ಎಲ್ಲಿತ್ತು? ಬರಿಯ ಬಾಯಿ ಚಪಲ ಮತ್ತು ಬೇಡುವುದೂ ಒಂದು ಆಟವೆಂಬಂತೆ ಗೆಳೆಯರೊಡನೆ ಹೊರಟುಬಿಟ್ಟಿದ್ದೆ. ಮನೆಯ ಮಾನ ಕಳೆದನೆಂದು ಅವ್ವ ಅಟ್ಟಾಡಿಸಿ ಹೊಡೆದಳು, ಅಪ್ಪ ಚೆನ್ನಾಗಿ ಬೈದಿದ್ದು, ಅಜ್ಜ ಕಣ್ಣೀರು ಹಾಕಿದ್ದ.             ಆದರೆ ಅಂದು ನಮ್ಮ ಕೇರಿಯ ಜನಕ್ಕೆ ಬೇಡಿಕೆ’ ಎಂಬುದು ಹಸಿವಿನ ಅನಿವಾರ್ಯತೆಯಾಗಿತ್ತು. ಸರಿಯಾಗಿ ಅಕ್ಕಿಯ ಗಂಜಿ ಬೇಯಿಸಿ ತಿಂದರೆ ಅದೇ ಮೃಷ್ಟಾನ್ನ! ಬಹುತೇಕ ಅಕ್ಕಿಯ ನುಚ್ಚಿನ ಗಂಜಿ ಇಲ್ಲವೆ ಅಂಬಲಿ ಕುದಿಸಿ ಕುಡಿದು ದಿನಕಳೆಯುವ ಕೇರಿಯ ಜನಕ್ಕೆ ಮನೆಯಲ್ಲಿ ಒಂದು ದೋಸೆ ಮಾಡಿ ತಿನ್ನುವುದಕ್ಕೂ ಹಬ್ಬದ ದಿನಕ್ಕಾಗಿಯೇ ಕಾಯಬೇಕಿತ್ತು. ಅಂಥವರಿಗೆ ತಾವೇ ದುಡಿಯುತ್ತಿರುವ ಒಡೆಯರ ಮನೆಗಳಲ್ಲಿ ಬೇಡಿ ತಿನ್ನಲು ಯಾವ ಸಂಕೋಚವೂ ಆಗದಿರುವುದು ಸಹಜವೇ ಆಗಿತ್ತು. ಅಲ್ಲದೆ ಊರಿನ ಗ್ರಾಮದೇವತೆ ಮತ್ತು ಮನೆದೇವತೆಗಳ ಪೂಜಾ ದಿನಗಳಲ್ಲಿ ಆಗೇರರು ತಮ್ಮಲ್ಲಿರುವ ಹಲಗೆ ವಾದ್ಯ, ಪಂಚವಾದ್ಯಗಳನ್ನು ಬಾರಿಸುವ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೆ ದೇವರ ಪ್ರಸಾದವಲ್ಲದೆ ಬೇರೆ ಸಂಭಾವನೆ ನೀಡುತ್ತಿರಲಿಲ್ಲ. ಬಹುಶಃ ಇದೇ ಕಾರಣದಿಂದ ಸಂಕ್ರಾಂತಿ, ಯುಗಾದಿ, ಸುಗ್ಗಿ ಹಬ್ಬದ ದಿನಗಳಲ್ಲಿ ಆಗೇರರು ಬೇರೆ ಬೇರೆ ತಂಡಗಳಲ್ಲಿ ಪಂಚವಾದ್ಯ, ಹಲಗೆವಾದ್ಯಗಳನ್ನು ಮನೆ ಮನೆಯ ಮುಂದೆ ಬಾರಿಸಿ ದುಡ್ಡು, ಭತ್ತ ಅಥವಾ ಅಕ್ಕಿಯನ್ನೇ ಬೇಡಿ ಪಡೆದು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಇದನ್ನು ಬೇಡಿಕೆ’ ಎಂದು ಕರೆದು ಸಾಂಪ್ರದಾಯಿಕ ಆಚರಣೆಯಂತೆಯೇ ನಡೆಸುತ್ತಿದ್ದರು. ಇದಕ್ಕೆ ಸಾಮಾಜಿಕವಾಗಿ ಗೌರವವೂ ಇತ್ತು ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಕಾಲಮಾನದ ತೀವೃ ಬದಲಾವಣೆಗೆ ನನ್ನ ಕೇರಿಯೂ ಹೊರತಾಗಲಿಲ್ಲ. ಅಲ್ಲಿ ಶಿಕ್ಷಣ, ರಾಜಕೀಯ, ಸಾಮಾಜಿಕ ಜೀವನ ಕ್ರಮ ಎಲ್ಲದರಲ್ಲಿಯೂ ಬದಲಾವಣೆಗಳಾಗಿವೆ. ಆದರೆ ಕೇರಿಯ ಹಲಗೆವಾದ್ಯ’, ಪಂಚವಾದ್ಯ’ ತಂಡಗಳು ತಮ್ಮ ಅಂದಿನ ಬೇಡಿಕೆ’ಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡೇ ನಡೆದಿವೆ. ************************************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-10 ಆತ್ಮಾನುಸಂಧಾನ ಬನವಾಸಿಯಲ್ಲಿ ನೋವಿನ ನೆನಪುಗಳು ಬಾಲ್ಯದ ನಾಲ್ಕು ವರ್ಷಗಳನ್ನು ಬನವಾಸಿಯಲ್ಲಿ ಕಳೆಯುವ ಅವಕಾಶ ದೊರೆತದ್ದು ನನ್ನ ಬದುಕಿನಲ್ಲಿ ಒದಗಿ ಬಂದ ಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಅತ್ಯಂತ ಆಪ್ತ ಸ್ನೇಹಿತರಾಗಿ ದೊರೆತ ಮುಖೇಶ್ ಕುಚಿನಾಡ, ಸೊಮಶೇಖರ ಒಡಿಯರ್, ಅಶೋಕ ಪಾಳಾ, ಸೆಂಟ್ರಲ್ ಕೆಫೆಯ ಸದಾನಂದ ಶೆಟ್ಟಿ, ಕಿರಾಣಿ ಅಂಗಡಿಯ ಸಚ್ಚಿದಾನಂದ ಮೂಡ್ಲಗಿರಿ ಶೆಟ್ಟಿ ಮುಂತಾದ ಗೆಳೆಯರ ಒಡನಾಟದಲ್ಲಿ ಅತ್ಯಂತ ಮಧುರವಾದ ಅನುಭವಗಳು ನನಗೆ ದಕ್ಕಿವೆ. ಈ ಗೆಳೆಯರೆಲ್ಲ ಆಟ ಪಾಠ ವಿನೋದಗಳಲ್ಲಿ ಜೊತೆ ಸೇರುವಾಗ ಜಾತಿಗೀತಿಯ ಯಾವ ಕೀಳರಿಮೆಯೂ ಕಾಡದಂತೆ ನಮ್ಮನ್ನು ನೋಡಿಕೊಂಡರು. ನೋವಿನ ಸಂಗತಿಯೆಂದರೆ ಈ ಯಾವ ಗೆಳೆಯರೂ ಈಗ ನನ್ನ ಸಂಪರ್ಕದಲ್ಲಿ ಇಲ್ಲ. ಅವರೆಲ್ಲ ಹೇಗಿದ್ದಾರೆ? ಎಲ್ಲಿದ್ದಾರೆ? ಎಂಬ ಯಾವ ಸುಳಿವೂ ನನಗಿಲ್ಲ. ಆದರೆ ಅವರೆಲ್ಲ ನನಗಿಂತ ಉತ್ತಮ ಸ್ಥಿತಿವಂತರಾಗಿಯೇ ಇದ್ದಿರಬೇಕು ಎಂದು ನಾನು ಭಾವಿಸಿದ್ದೇನೆ.             ಬನವಾಸಿಯ ಬಾಲ್ಯದ ಸಂತಸದ ದಿನಗಳಲ್ಲಿಯೂ ನನ್ನನ್ನು ನೋವಿನ ನೆನಪಾಗಿ ಕಾಡುವ ಒಂದೆರಡು ಸಂದರ್ಭಗಳು ಮತ್ತೆ ಮತ್ತೆ ನನ್ನನ್ನು ಕಾಡುತ್ತಲೇ ಇರುತ್ತದೆ…..             ಬನವಾಸಿಯ ವಾಸ್ತವ್ಯದ ಸಂದರ್ಭದಲ್ಲಿ ಹುಟ್ಟಿದವನು ಎಂಬ ಕಾರಣದಿಂದ ಬಹುಶಃ ನನ್ನ ಎರಡನೆಯ ಸಹೋದರನಿಗೆ ಮಧುಕೇಶ್ವರ ಎಂದು ಹೆಸರನ್ನಿಟ್ಟಿರಬೇಕು. ಆಗ ತಾನೆ ಎದ್ದು ನಿಂತು ಹೆಜ್ಜೆಯಿಕ್ಕಲು ಕಲಿಯುತ್ತಿದ್ದ. ಹೆಚ್ಚೂ ಕಡಿಮೆ ಅವನನ್ನು ಎತ್ತಿಕೊಂಡು ಆಡಿಸುವುದೂ, ನಡೆಸುವುದೂ ಮಾಡುತ್ತಿದ್ದೆನಾದ್ದರಿಂದ ನನ್ನೊಡನೆ ವಿಶೇಷ ಸಲುಗೆಯಿಂದ ಇರುತ್ತಿದ್ದ. ನಾನು ಆಟವಾಡಲು ಹೊರಟಾಗ ಹಠಮಾಡಿ ಬೆನ್ನಹಿಂದೆ ಬರುತ್ತಿದ್ದ.             ಒಮ್ಮೆ ಅವ್ವ ಒಂದಿಷ್ಟು ರೇಶನ್ ಸಾಮಾಗ್ರಿಗಾಗಿ ನನ್ನನ್ನು ಅಂಗಡಿಗೆ ಕಳುಹಿಸಿದ್ದಳು. ಅಪ್ಪನ ಸೈಕಲ್ ಮನೆಯಲ್ಲಿತ್ತು. ಅದನ್ನು ಹತ್ತಿ ಕೂರಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಒಳ ಪೆಡಲ್ ಮೇಲೆ ಕಾಲಿಟ್ಟು ಹೊಡೆಯುವ ರೂಢಿಮಾಡಿಕೊಂಡಿದ್ದೆ. ನನಗೋ ಇಂಥ ಅವಕಾಶ ಸಿಕ್ಕಾಗ ತುಂಬಾ ಖುಷಿಯಾಗುತ್ತಿತ್ತು. ಅವಸರದಲ್ಲಿ ಸೈಕಲ್ ಏರಿ ಹೊರಟೆ. ಮಧು ನನ್ನ ಬೆನ್ನ ಹಿಂದೆ ಬರುತ್ತಿದ್ದಾನೆ. ಎಂಬುದನ್ನು ಗಮನಿಸಲೇ ಇಲ್ಲ. ಓಣಿಯ ತಿರುವಿನಲ್ಲಿ ನಾನು ಮರೆಯಾಗುವವರೆಗೆ ನನ್ನ ಹಿಂದೆಯೇ ಓಡಿ ಬರುತ್ತಿದ್ದ ಮಧು, ನಾನು ಮರೆಯಾಗುತ್ತಲೇ ಹಿಂದಿರುಗಿದವನು ಬೇರೆ ದಾರಿ ಹಿಡಿದು ಮುಂದೆ ಸಾಗಿದ್ದಾನೆ. ಆಗ ತಾನೆ ಓಡಾಡಲು ಕಲಿತ ಹುಡುಗ ದಾರಿ ತಪ್ಪಿ ಅಳುತ್ತ ಓಡುವಾಗ ಅವರಿವರು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದಷ್ಟು ಅವರಿಂದ ತಪ್ಪಿಸಿಕೊಂಡು ಅಳುತ್ತ ಒಂದು ದಿಕ್ಕು ಹಿಡಿದು ಓಡುತ್ತಲೇ ಇದ್ದಾನೆ. ದಾರಿಯಲ್ಲಿ ನಮಗೆ ಪರಿಚಯವಿದ್ದ ಹೆಂಗಸೊಬ್ಬಳು ಅವನನ್ನು ಗುರುತು ಹಿಡಿದವಳು ಶತಾಯ ಗತಾಯ ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಾಳೆ. ಆದರೆ ಅವಳು ಮೂಕಿ. ಮಾತು ಸ್ಪಷ್ಟವಿಲ್ಲ. ತನ್ನ ಮೂಕ ಭಾಷೆಯಲ್ಲಿ ವಿಕಾರವಾಗಿ ಅರಚುತ್ತ ಮಧುವನ್ನು ತಡೆಯುವ ಪ್ರಯತ್ನ ಮಾಡಿದ್ದಾಳೆ. ಆದರೆ ಆತ ಇನ್ನಷ್ಟು ಗಾಬರಿಗೊಂಡು ಚೀರುತ್ತ ಓಡಿದ್ದಾನೆ.             ಇತ್ತ ಮನೆಯಲ್ಲಿ ಮಧುವನ್ನು ನಾನೇ ಕರೆದೊಯ್ದಿರಬೇಕೆಂದು ನಿರುಮ್ಮಳವಾಗಿದ್ದ ತಾಯಿ, ತಂಗಿಯರೆಲ್ಲ ನಾನೊಬ್ಬನೇ ಮರಳಿ ಬಂದಾಗ ಹೌಹಾರಿ ಹೋದರು. ಮನೆಯಲ್ಲಿ, ನೆರೆಮನೆಗಳಲ್ಲಿ, ಬೀದಿಗಳಲ್ಲಿ ಮಧುವನ್ನು ಅರಸಿ ಕಾಣದೆ ಕಂಗಾಲಾದೆವು.             ತಾಸರ್ಧ ತಾಸು ವಾತಾವರಣವೇ ಪ್ರಕ್ಷುಬ್ಧವಾಗಿ ಹೋಯಿತು. ಎಲ್ಲರೂ ನನ್ನ ನಿರ್ಲಕ್ಷ್ಯ ವೇ  ಇದಕ್ಕೆ ಕಾರಣವೆಂದು ಆಡಿಕೊಳ್ಳುವಾಗ ನಾನು ಕುಸಿದು ಹೋಗಿದ್ದೆ. ಸುದೈವವೆಂದರೆ ಮಧುವನ್ನು ಗುರುತಿಸಿ ತಡೆದು ನಿಲ್ಲಿಸಲು ಪ್ರಯತ್ನಿಸಿ ವಿಫಲಳಾದ ಮೂಕಜ್ಜಿ ಅಷ್ಟಕ್ಕೆ ನಿಲ್ಲದೆ ನಮ್ಮ ಮನೆಯವರೆಗೆ ಓಡೋಡಿ ಬಂದು ಸಂಗತಿಯನ್ನು ತಿಳಿಸಿ ಉಪಕಾರ ಮಾಡಿದಳು. ಅಪ್ಪ ಅವ್ವ ಪೇಟೆಯಲ್ಲಿ ಸಿಕ್ಕುಬಿದ್ದ ಮಧುವನ್ನು ಹುಡುಕಿ ಕರೆತರುವ ಹೊತ್ತಿಗೆ ಸರಿರಾತ್ರಿಯಾಗಿತ್ತು. ಆದರೆ ಈ ಘಟನೆ ನನ್ನ ನಿರ್ಲಕ್ಷ್ಯ ಕ್ಕೆ ಉದಾಹರಣೆಯಾಗಿ ಈಗಲೂ ನನ್ನನ್ನು ಕಾಡುತ್ತಲೇ ಇದೆ. ಆದರೆ ಅಂದು ಮರಳಿ ಮನೆ ಸೇರಿದ ಮಧು ಇಂದು ಈ ನೆನಪುಗಳನ್ನು ಬರೆಯುವ ಹೊತ್ತಿಗೆ ನಮ್ಮೊಡನಿಲ್ಲ. ವೃತ್ತಿಯಿಂದ ಕಂಡಕ್ಟರನಾದ. ಮದುವೆಯಾಗಿ ಒಂದು ಗಂಡು ಒಂದು ಹೆಣ್ಣು ಮಗುವಿನ ತಂದೆಯಾದ. ತನ್ನ ೫೪ ನೇ ವಯಸ್ಸಿನಲ್ಲಿ ೨೦೧೭ ರ ಮೇ ತಿಂಗಳ ಒಂದು ದಿನ ತೀವೃವಾದ ನಿಮೋನಿಯಾ ಕಾಯಿಲೆಯಿಂದ ಬಳಲಿ ನಮ್ಮನ್ನೆಲ್ಲ ಬಿಟ್ಟು ಹೊರಟು ಹೋದ.             ಬನವಾಸಿಯ ನೆನಪುಗಳಲ್ಲಿ ನನ್ನನ್ನು ಈಗಲೂ ಕೀಳರಿಮೆಯಿಂದ ಕಾಡುವ ಇನ್ನೊಂದು ಘಟನೆ ಬಂಕಸಾಣ ಜಾತ್ರೆ. ಅಪ್ಪ ಏಳನೆಯ ತರಗತಿಯ ವಿದ್ಯಾರ್ಥಿಗಳನ್ನು ಬಂಕಸಾಣ ಜಾತ್ರೆಯ ಪ್ರವಾಸಕ್ಕೆ ಕರೆದೊಯ್ದಿದ್ದರು. ಜಾತ್ರೆಯಾದ್ದರಿಂದ ನನ್ನನ್ನು, ನನ್ನ ತಮ್ಮ ನಾಗೇಶನನ್ನು ಜೊತೆಯಲ್ಲಿ ಕರೆದೊಯ್ದರು. ನಮಗಂತೂ ಬಹಳ ಸಂಭ್ರಮವಾಗಿತ್ತು. ಜಾತ್ರೆಯ ಮೋಜು ಮಜಾ ಎಲ್ಲವನ್ನು ಅನುಭವಿಸಿ ತಿರುಗಿ ಹೊರಡುವಾಗ ಅಪ್ಪನ ಕೆಲವು ವಿದ್ಯಾರ್ಥಿಗಳು ಮತ್ತಷ್ಟು ಖರೀದಿಯ ನೆಪದಲ್ಲಿ ಸಂತೆ ಅಂಗಡಿಗಳಲ್ಲಿ ಹೊಕ್ಕು ಚೌಕಾಶಿ ಮಾಡುತ್ತಿದ್ದರು. ಯಾವುದೋ ಹುಡುಗ ಕಾಲಿನ ಸ್ಲಿಪರ್ ಕೊಳ್ಳಲು ಚೌಕಾಶಿ ಮಾಡುತ್ತಿದ್ದಾಗ ಅಪ್ಪ ಮಧ್ಯ ಪ್ರವೇಶಿಸಿ ಒಂದು ರೇಟಿಗೆ ಹೊಂದಿಸಿ ಹುಡುಗನಿಗೆ ಸ್ಲಿಪರ್ ಕೊಡಿಸಿದರು.             ಅವರಿಗೆ ಏನನ್ನಿಸಿತೋ… ನನ್ನ ತಮ್ಮ ನಾಗೇಶನಿಗೂ ಒಂದು ಜೊತೆ ಹವಾಯಿ ಚಪ್ಪಲಿ ಕೊಡಿಸಿದರು. ಅಂಗಡಿಯಿಂದ ಹೊರ ಬಂದ ಬಳಿಕ ನಾನು ನಡೆದುಕೊಂಡ ರೀತಿಯನ್ನು ನೆನಪಿಸಿಕೊಂಡರೆ ನನಗೆ ಈಗಲೂ ಸಹಿಸಲಾಗದಷ್ಟು ನಾಚಿಕೆ ಮತ್ತು ಅಸಹ್ಯವುಂಟಾಗುತ್ತದೆ. ತಮ್ಮ ತೊಟ್ಟ ಚಪ್ಪಲಿಗಳನ್ನು ನೋಡಿ ನನ್ನ ಕಾಲುಗಳು ಭಾರವಾದವು ಕಣ್ಣುಗಳಲ್ಲಿ ಕಂಬನಿ ತುಂಬಿ ಬಂತು. ಮುಖ ಊದಿಕೊಂಡಿತು. ಹೆಜ್ಜೆ ಮುಂದಿಡಲಾಗದೆ ತಡವರಿಸುತ್ತಿದ್ದೆ.             ಇದನ್ನು ಗಮನಿಸಿದ ಅಪ್ಪ ತುಂಬಾ ನೊಂದುಕೊಂಡರು. ನನಗೂ ಒಂದು ಜೊತೆ ಚಪ್ಪಲಿ ಕೊಡಿಸುವ ಆಸೆ ಅವರಿಗೂ ಇತ್ತಾದರೂ ಅಷ್ಟೊತ್ತಿಗಾಗಲೇ ಅವರ ಕಿಸೆ ಖಾಲಿಯಾಗಿತ್ತು. ಅಸಹಾಯಕತೆಯಿಂದ ಅವರು ಚಡಪಡಿಸುತ್ತಿದ್ದರೆ ಅದನ್ನು ಗ್ರಹಿಸಲಾಗದ ದಡ್ಡತನ ನನ್ನದಾಗಿತ್ತು. ಬೇರೆ ದಾರಿ ಕಾಣದೆ ವಿದ್ಯಾರ್ಥಿಯೊಬ್ಬನಿಂದ ಒಂದಿಷ್ಟು ಹಣವನ್ನು ಸಾಲವಾಗಿ ಪಡೆದ ಅಪ್ಪ ನನಗೆ ಚಪ್ಪಲಿ ಕೊಡಿಸಿದ ಬಳಿಕವಷ್ಟೇ ನನ್ನ ಕಾಲುಗಳು ಮುಂದುವರಿದವು.             ಆದರೆ ಬನವಾಸಿಗೆ ಬಂದ ಮರುದಿನವೇ ಮಧುಕೇಶ್ವರ ದೇವಾಲಯದ ಆವರಣದಲ್ಲಿ ಆಟವಾಡಲು ಹೊರಡುತ್ತ ದೇವಸ್ಥಾನದ ಮೆಟ್ಟಿಲ ಮೇಲೆ ಕಳೆದಿಟ್ಟು ಹೋದ ಇಬ್ಬರ ಚಪ್ಪಲಿಗಳನ್ನು ಯಾರೋ ಅಪಹರಿಸಿ ಬಿಟ್ಟಿದ್ದರು….             ಅಪ್ಪನ ದೊಡ್ಡತನಕ್ಕೆ ನನ್ನ ಸಣ್ಣತನಕ್ಕೆ ಈ ಘಟನೆ ಉದಾಹರಣೆಯಾಗಿ ನನ್ನನ್ನು ಈಗಲೂ ಕಾಡುತ್ತಿದೆ.             ಬನವಾಸಿಯ ಬದುಕಿನ ಅವಧಿಯಲ್ಲಿ ಒಂದು ಅಚ್ಚಳಿಯದ ನೆನಪು ಮಳ್ಳು ಸುಕ್ರಣ್ಣನದು. ಸುಕ್ರಣ್ಣ ಮೊದಲಿಂದ ಮಳ್ಳನೇನಲ್ಲ. ಬನವಾಸಿಯ ವಿದ್ಯಾರ್ಥಿ ನಿಲಯದಲ್ಲಿ ಅವನು ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಬಹಳ ದೂರದ ಊರಿನಲ್ಲಿ ನಮಗೆ ಸ್ವಜಾತಿಯ ಬಂಧು ಎಂದರೆ ಈತನೊಬ್ಬನೇ ಮೂಲತಃ ನಮ್ಮ ನೆರೆಯ ಅಂಕೋಲಾ ತಾಲೂಕಿನ ಮೊಗಟಾ ಎಂಬ ಊರಿನವನು. ಮದುವೆಯಾಗಿದ್ದ. ಮಕ್ಕಳಾಗಿರಲಿಲ್ಲ. ಹೆಂಡತಿ ಶಿವಮ್ಮನೊಡನೆ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ಉಳಿದಕೊಂಡಿದ್ದರು. ಹಬ್ಬ ಹುಣ್ಣಿಮೆಯಂಥ ಅಪರೂಪದ ಸಂದರ್ಭದಲ್ಲಿ ನಮ್ಮ ಮನೆಗೂ ಬಂದು ಹೋಗುತ್ತಿದ್ದರಿಂದ ಸಹಜವಾಗಿಯೇ ನಾವೆಲ್ಲ ಅವರನ್ನು ಹಚ್ಚಿಕೊಂಡಿದ್ದೆವು.             ನಮಗೆಲ್ಲ ಒಂದು ಹಂತದವರೆಗೆ ಆಪ್ತನಾಗಿಯೇ ಇದ್ದ. ಸುಕ್ರಣ್ಣ ಇದ್ದಕ್ಕಿದ್ದಂತೆ ಕೂಗಾಡುವುದು, ಯಾರ ಯಾರನ್ನೋ ಬಯ್ಯುವುದು, ಹೆಂಡತಿಯೊಡನೆ ಜಗಳವಾಡುತ್ತ ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆಯುವುದು ಮಾಡ ಹತ್ತಿದ. ವಸತಿ ನಿಲಯದಲ್ಲಿ ಆಗ ಏಳನೆಯ ತರಗತಿಯ ವಿದ್ಯಾರ್ಥಿಗಳಲ್ಲಿ ಚಿಗುರು ಮೀಸೆಯ ಹೊಂತಕಾರಿಗಳೂ ಇದ್ದರು. ಅವರಲ್ಲಿ ಯಾರೇ ಆದರೂ ತನ್ನ ಪತ್ನಿಯೆಡೆಗೆ ನೋಡಿದರೆ ಮಾತಾಡಿದರೆ ಅನುಮಾನಗೊಂಡು ಜಗಳ ಕಾಯುತ್ತಿದ್ದನಂತೆ. ಕೆಲವು ಅವಿವಾಹಿತ ಶಿಕ್ಷಕರೂ ಸುಕ್ರಣ್ಣನ ಅನುಮಾನದ ಕಣ್ಣಿಗೆ ಗುರಿಯಾಗಿ ಬೈಸಿಕೊಂಡದ್ದನ್ನೂ, ಅಪ್ಪನೇ ಮುಂದೆ ಹೋಗಿ ಅವನಿಗೆ ಬುದ್ದಿ ಹೇಳಿ ಸಂತೈಸಿದ್ದನ್ನು ಅಪ್ಪ ಮನೆಗೆ ಬಂದಾಗ ಅವ್ವನೊಡನೆ ವಿವರಿಸುವಾಗ ನಾವು ಕೇಳುತ್ತಿದ್ದೆವಾದರೂ ಚಿಕ್ಕವರಾದ ನಮಗೆ ಸಮಸ್ಯೆಯ ಅರಿವಾಗುತ್ತಿರಲಿಲ್ಲ. ಆದರೆ ಮಾತಿನ ಕೊನೆಯಲ್ಲಿ “ಮಳ್ಳ ಸುಕ್ರು … ಜಾತಿ ಮರ್ಯಾದೆನೆಲ್ಲಾ ಕಳೀತಾನೆ…” ಎಂದು ಮುಗಿಸುವುದನ್ನು ಕೇಳುತ್ತಾ ಸುಕ್ರಣ್ಣನಿಗೆ ಮಳ್ಳು ಹಿಡಿದಿದೆ ಎಂದೇ ನಾವು ನಂಬ ತೊಡಗಿದ್ದೆವು .             ಸುಕ್ರಣ್ಣನ ಸಂಸಾರದ ನಡುವೆ ಬಿರುಕು ಬೆಳೆಯುತ್ತಾ ಸಾಗಿತು. ಶಿಕ್ಷಕರು, ವಿದ್ಯಾರ್ಥಿಗಳ ಮೇಲೆಲ್ಲಾ ಅನುಮಾನ ಪಡುತ್ತಾ ಶಾಲೆಯ ಆವರಣವನ್ನು ಪ್ರವೇಶಿಸಿ ಅವರನ್ನು ಬಯ್ಯ ತೊಡಗಿದಾಗ ಎಲ್ಲರಿಗೂ ಇವನ ಉಪದ್ರವ ಅಧಿಕವಾಯಿತೆಂದೇ ಅಸಹ್ಯಪಡುತ್ತಿದ್ದರು. ಕೆಲವೊಮ್ಮೆ ಯಾರನ್ನೂ ನೇರವಾಗಿ ಗುರಿಯಾಗಿಸದೇ ಎಲ್ಲರನ್ನೂ ದಿನವಿಡೀ ಬಯ್ಯುತ್ತ ಹುಚ್ಚರಂತೆಯೇ ವರ್ತಿಸತೊಡಗಿದ್ದ. ಕೊನೆ ಕೊನೆಗೆ ಸಾರ್ವಜನಿಕರೂ ಅವನನ್ನು ಮಳ್ಳನೆಂದೇ ಗುರುತಿಸುವ ಹಂತವನ್ನೂ ತಲುಪಿದ.             ೧೯೬೨-೬೩ ರ ಅವಧಿ ಎಂದು ನೆನಪು. ಎಲ್ಲೆಡೆ ಭಯಂಕರ ಮಳೆ. ವರದಾ ನದಿ ಉಕ್ಕಿ ಹರಿಯುತ್ತಾ ರಥ ಬೀದಿಯವರೆಗೂ ಪ್ರವಾಹ ಹರಿದು ಬಂದಿತ್ತು. ಶಾಲೆಗಳಿಗೆ ರಜೆ ಘೋಷಣೆಯಾಗಿತ್ತು. ಚಿಕ್ಕವರಾದ ನಾವುಗಳೆಲ್ಲ ಮನೆಯಿಂದ ಹೊರಗೆ ಹೋಗಲೂ ಸಾಧ್ಯವಿಲ್ಲದೆ ಗ್ರಹ ಬಂಧನಕ್ಕೊಳಗಾಗಿದ್ದೆವು.             ಅಂಥ ಭಯಾನಕ ಮಳೆಯ ಒಂದು ರಾತ್ರಿ ಸುಕ್ರಣ್ಣ ಇದ್ದಕ್ಕಿದ್ದಂತೆ ನಾಪತ್ತೆಯಾದ. ನಂತರದ ಎರಡು ದಿನ ಶಾಲಾ ಸಿಬ್ಬಂದಿಗಳೂ, ಊರಿನ ಕೆಲವು ಜನರೂ ಸೇರಿ ಊರೆಲ್ಲಾ ಹುಡುಕಾಡಿದರು. ಎಲ್ಲಿಯೂ ಅವನ ಸುಳಿವು ದೊರೆಯಲಿಲ್ಲ. ಭಯಂಕರವಾದ ಬಿರುಗಾಳಿ ಮಳೆಯ ಒಂದು ರಾತ್ರಿ ಮನುಷ್ಯ ಮಾತ್ರರು ಹೊರಬರಲಾಗದ ಕಗ್ಗತ್ತಲೆಯಲ್ಲಿ ಯಾರೋ “ಬೋಲೋ ಭಾರತ್ ಮಾತಾಕೀ….ಜೈ” ಎಂದು ಕೂಗುತ್ತಾ ಹೋದುದನ್ನು ಕೇಳಿದ್ದೇವೆ ಎಂದು ರಸ್ತೆಯಂಚಿನ ಮನೆಗಳ ಕೆಲವರು ಮಾತಾಡಿಕೊಂಡರು. ಅದು ಸುಕ್ರಣ್ಣನೇ ಇರಬಹುದೆಂದೂ ಬಹುತೇಕ ಜನ ಭಾವಿಸಿದರು. ನಾವು ಹಾಗೆಯೇ ಅನುಮಾನ ಪಟ್ಟುಕೊಂಡೆವು.             ಮೂರನೆಯ ದಿನ ಶಾಲೆಯ ಶಿಕ್ಷಕರೂ ವಿದ್ಯಾರ್ಥಿ ಗುಂಪಿನೊಡನೆ ಸುಕ್ರಣ್ಣನನ್ನು ಅರಸಲು ಹೋದ ಅಪ್ಪ ನಿರಾಶೆಯಿಂದಲೇ ರಾತ್ರಿ ತಡವಾಗಿ ಮನೆಗೆ ಬಂದರು. ಅಪ್ಪ ಒಳಗೆ ಬಂದದ್ದೇ ನನ್ನ ತಮ್ಮ ನಾಗೇಶ ತುಂಬ ಮುಗ್ಧತೆಯಿಂದ “ಅಪ್ಪ ಸುಕ್ರಣ್ಣ ಸತ್ತೋದ್ನಂತೆ….” ಎಂದು ಹೇಳಿದ. ಅಪ್ಪ ಇದುವರೆಗೆ ತನ್ನ ದುಗುಡವನ್ನು ಹೊಟ್ಟೆಯೊಳಗೇ ತಡೆದಿಟ್ಟುಕೊಂಡಿದ್ದನೆನೋ.. ಒಮ್ಮೆಲೆ ಬಿಕ್ಕಿ ಬಿಕ್ಕಿ ಅಳತೊಡಗಿದ. ಅವ್ವ ಮತ್ತು ನಾವೆಲ್ಲ ಅಪ್ಪನನ್ನು ಸಂತೈಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ****************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-9 ಆತ್ಮಾನುಸಂಧಾನ ಪಂಪನ ಬನವಾಸಿಗೆ ಪಯಣ             ನಾನು ಎರಡನೆ ಇಯತ್ತೆ ಮುಗಿಸುವಾಗ ನಮ್ಮ ತಂದೆಯವರಿಗೆ ಶಿರ್ಶಿ ತಾಲೂಕಿನ ಬನವಾಸಿಗೆ ವರ್ಗವಾಯಿತು. ನಮ್ಮ ಕುಟುಂಬದಲ್ಲಿ ಮಾತ್ರವಲ್ಲ, ನಮ್ಮ ಇಡಿಯ ಕೇರಿಯೇ ದಿಗಿಲುಗೊಂಡಿತು. ಅಂದಿನ ದಿನಮಾನಗಳಲ್ಲಿ ನಮಗೆಲ್ಲ ಬನವಾಸಿಯೆಂಬುದು ವಿದೇಶ ಪ್ರವಾಸದಷ್ಟೇ ದೂರದ ಅನುಭವವನ್ನುಂಟು ಮಾಡುವಂತಿತ್ತು. ಭಯಾನಕವಾದ ಪರ್ವತ ಶ್ರೇಣಿಗಳ ಆಚೆಗಿನ ಘಟ್ಟ ಪ್ರದೇಶ ಎಂಬುದು ಒಂದು ಕಾರಣವಾದರೆ, ನಮ್ಮೂರ ಪಕ್ಕದ ಹನೇಹಳ್ಳಿಯಿಂದ ಶಿರ್ಶಿಗೆ ಹೊರಡುವ ಒಂದೇ ಒಂದು ಬಸ್ಸು ನಸುಕಿನಲ್ಲಿ ಹನೇಹಳ್ಳಿಯನ್ನು ಬಿಟ್ಟರೂ ಗೋಕರ್ಣದ ಮೂಲಕ ಮಿರ್ಜಾನಿನಲ್ಲಿ ಜಂಗಲ್ ನೆರವಿನಿಂದ ಅಘನಾಶಿನಿ ನದಿಯನ್ನು ದಾಟಿ, ಕತಗಾಲ್ ಇತ್ಯಾದಿ ಮುನ್ನಡೆದು ಭಯಂಕರ ತಿರುವುಗಳುಳ್ಳ ದೇವಿಮನೆ ಘಟ್ಟವನ್ನು ಹತ್ತಿಳಿದು ಶಿರ್ಶಿಗೆ ತಲುಪುವಾಗ ಮಧ್ಯಾಹ್ನ ದಾಟಿ ಹೋಗುತ್ತಿತ್ತು. ಮತ್ತೆ ಅಲ್ಲಿಂದ ಬನವಾಸಿಯ ಬಸ್ಸು ಹಿಡಿದು ಅಲ್ಲಿಗೆ ತಲುಪುವಾಗ ರಾತ್ರಿಯೇ ಆಗುತ್ತಿತ್ತು. ನಾನು ನನ್ನ ತಮ್ಮ ತಂಗಿಯರೆಲ್ಲ ಬಸ್ ಪ್ರಯಾಣದ ತಲೆಸುತ್ತು, ವಾಂತಿ ಇತ್ಯಾದಿಗಳಿಂದ ಬಳಲಿ ನಮ್ಮನ್ನು ಯಾರಾದರೂ ಎತ್ತಿಕೊಂಡೆ ಮನೆಗೆ ತಲುಪಿಸಬೇಕಾದ ಹಂತಕ್ಕೆ ಬಂದಿರುತ್ತಿದ್ದೆವು. ಈ ದ್ರಾವಿಡ ಪ್ರಾಣಾಯಾಮದ ಕಾರಣದಿಂದಲೂ ಬನವಾಸಿಯೆಂಬುದು ನಮ್ಮ ಕಣ್ಣಳತೆಗೆ ಮೀರಿದ ಊರು ಎಂಬ ಭಾವನೆ ನಮ್ಮವರಲ್ಲಿ ಬೆಳೆದು ನಿಂತಿತ್ತು. ಹೀಗಾಗಿಯೇ ಅಪ್ಪ ಕುಟುಂಬ ಸಹಿತ ಬನವಾಸಿಗೆ ಹೊರಟು ನಿಂತಾಗ ಬಂಧುಗಳು ಆತಂಕಗೊಂಡಿದ್ದು ಸಹಜ. ನನಗೋ ಈ ಎರಡು ವರ್ಷಗಳಲ್ಲಿಯೇ ಗಾಢ ಸ್ನೇಹಿತರಾಗಿ ಹಚ್ಚಿಕೊಂಡಿದ್ದ ಕುಪ್ಪಯ್ಯ ಗೌಡ, ಚಹಾದಂಗಡಿಯ ಗಣಪತಿಗೌಡ, ಮುಕುಂದ ಪ್ರಭು, ಇತ್ಯಾದಿ ಗೆಳೆಯರನ್ನು ಬಿಟ್ಟು ಹೋಗಬೇಕಲ್ಲ? ಎಂಬ ಚಿಂತೆ ಕಾಡಿತು.             ಆದರೆ ಬನವಾಸಿಯಲ್ಲಿ ನೆಲೆನಿಂತ ಬಳಿಕ ಹೊಸತೊಂದು ಲೋಕವೇ ನಮ್ಮೆದುರು ತೆರೆದುಕೊಂಡ ಅನುಭವವಾಯಿತು. ಬಹಳ ಮುಖ್ಯವಾಗಿ ನಾಡುಮಾಸ್ಕೇರಿಯಲ್ಲಿನ ಜಾತೀಯತೆಯ ಕಹಿ ಅನುಭವಗಳಾಗಲಿ, ಕೀಳರಿಮೆಯಾಗಲೀ ನಮ್ಮನ್ನು ಎಂದಿಗೂ ಬಾಧಿಸಲಿಲ್ಲ. ನಾನು, ನನ್ನ ತಮ್ಮ ತಂಗಿಯರೆಲ್ಲ ಮಧುಕೇಶ್ವರ ದೇವಾಲಯದ ಆವರಣದಲ್ಲಿಯೇ ಯಾವ ಮುಜುಗರವೂ ಇಲ್ಲದೇ ಆಡಬಹುದಿತ್ತು. ಹನೇಹಳ್ಳಿಯವರೇ ಆಗಿದ್ದ ಕುಚಿನಾಡ ವೆಂಕಟ್ರಮಣ ಶಾನುಭೋಗರ ಕುಟುಂಬ, ಗಾಂವಕಾರ ಮಾಸ್ತರರು, ಅಗ್ಗರಗೋಣದ ಮೋಹನ ಮಾಸ್ತರರು, ರಾಮಚಂದ್ರ ಮಾಸ್ತರರು ಮೊದಲಾದವರ ಕುಟುಂಬಗಳು ಊರಿನವರೆಂಬ ಕಾರಣದಿಂದ ಸಹಜವಾಗಿಯೇ ಆಪ್ತವಾಗಿದ್ದವು. ಕುಚಿನಾಡ ಶಾನುಭೋಗರ ಮಕ್ಕಳೂ ನಮ್ಮ ಆಪ್ತ ಸ್ನೇಹಿತರಾಗಿಯೇ ದೊರೆತುದರಿಂದ ಅವರ ಕುಟುಂಬದೊಡನೆ ನಾವು ಅತಿ ಸಲಿಗೆ ಹೊಂದಿದ್ದೆವು. ಅಪ್ಪ ಬನವಾಸಿಯ ಒಡಿಯರ್’ ಮುಳಗುಂದ’ ಮುಂತಾದ ಶ್ರೀಮಂತ ಕುಟುಂಬದ ಮಕ್ಕಳಿಗೆ ರಾತ್ರಿಯ ಮನೆಪಾಠ ಹೇಳಲಾರಂಭಿಸಿದ ಬಳಿಕ ಅಂಥ ಮಕ್ಕಳ ಒಡನಾಟವೂ ನಮಗೆ ಸೌಹಾರ್ದಯುತವಾಗಿತ್ತು.                      ಬನವಾಸಿಯಲ್ಲಿ ನೆಲೆಸಿದ ಕೆಲವೇ ದಿನಗಳಲ್ಲಿ ಅಪ್ಪನ ಕೆಲವು ವಿಶಿಷ್ಟ ಪ್ರತಿಭೆಯಿಂದಾಗಿ ಅಲ್ಲಿನ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸದಸ್ಯತ್ವ ಪಡೆಯುವ ಅವಕಾಶ ದೊರಕಿಸಿಕೊಂಡ. ಬನವಾಸಿಯ ಹವ್ಯಾಸಿ ನಾಟಕ ಮಂಡಳಿಯಲ್ಲಿ ಪ್ರಮುಖ ಸ್ತ್ರೀಪಾತ್ರಧಾರಿಯಾಗಿ ನಟಿಸುವ ಅವಕಾಶ ಪಡೆದು ಅಂದಿನ ದಿನಗಳಲ್ಲಿ ಮಹಿಳೆಯರು ರಂಗಪ್ರವೇಶಕ್ಕೆ ಹಿಂದೇಟು ಹಾಕುವುದರಿಂದ ಪುರುಷರೇ ಸ್ತ್ರೀಯರಪಾತ್ರ ನಿರ್ವಹಿಸಬೇಕಿತ್ತು. ಸಿನಿಮಾ ನಟರಂತೆ ಆಕರ್ಷಕ ವ್ಯಕ್ತಿತ್ವದ ಪಿ.ಜಿ. ಪ್ರಾತಃಕಾಲ ಎಂಬ ನಮ್ಮ ಹಿಂದಿ ಮೇಷ್ಟ್ರು ಯಾವುದೇ ನಾಟಕದ ಕಥಾ ನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದರೆ ಅಪ್ಪ ಕಥಾನಾಯಕಿಯಾಗಿ ಪಾತ್ರ ನಿರ್ವಹಿಸಿ ಅವರಿಗೆ ಸರಿಜೋಡಿಯೆನಿಸುತ್ತಿದ್ದ.             ಅಪ್ಪನಿಗೆ ಉತ್ತಮ ಬರಹದ ಕೌಶಲ್ಯವೂ ಇದ್ದಿತ್ತು. ಬನವಾಸಿಯ ಅನೇಕ ಅಂಗಡಿ ಮುಂಗಟ್ಟುಗಳಿಗೆ ನಾಮಫಲಕಗಳನ್ನು ಬರೆದುಕೊಟ್ಟು ಎಲ್ಲರಿಗೂ ಬೇಕಾದವನಾದ. ಮಧುಕೇಶ್ವರ ದೇವಾಲಯದ ಆವರಣದೊಳಗೆ ಇರುವ ಎಲ್ಲ ಸಣ್ಣ ಪುಟ್ಟ ಗುಡಿಗಳಿಗೆ, ಕಲ್ಲಿನ ಮಂಟಪ ಇತ್ಯಾದಿಗಳಿಗೆ ಆಕರ್ಷಕವಾದ ನಾಮಫಲಕಗಳನ್ನು ಬರೆದು ಅಂಟಿಸಿ ದೇವಾಲಯದ ಆಡಳಿತ ಮಂಡಳಿಯ ಗೌರವಕ್ಕೂ ಪಾತ್ರನಾಗಿದ್ದ. ಹೀಗೆ ಅಪ್ಪ ಬನವಾಸಿಯಲ್ಲಿ ಪರಿಚಿತನಾಗುತ್ತಿದ್ದುದು ನಮಗೆಲ್ಲ ತುಂಬಾ ಅನುಕೂಲವಾಯಿತು. ಇಂಥವರ ಮಕ್ಕಳು ಎಂದು ಬಹುತೇಕ ಜನ ನಮ್ಮನ್ನು ಅಕ್ಕರೆಯಿಂದಲೇ ಕಾಣುತ್ತಿದ್ದರು.             ಬನವಾಸಿಯ ಮಧುಕೇಶ್ವರ ದೇವರ ರಥೋತ್ಸವ, ದಸರಾ ಉತ್ಸವ, ನೆರೆಯ ಗುಡ್ನಾಪುರ ಜಾತ್ರೆ, ಬಂಕಸಾಣ ಜಾತ್ರೆಗಳು ಇತ್ಯಾದಿ ಮರೆಯಲಾಗದಂಥಹ ಸಾಂಸ್ಕೃತಿಕ ಸಂದರ್ಭಗಳು ನಮ್ಮ ಅನುಭವಕ್ಕೆ ದಕ್ಕಿದುದು ಬನವಾಸಿಯ ವಾಸ್ತವ್ಯದಲ್ಲಿಯೇ ಶೈಕ್ಷಣಿಕವಾಗಿ ಕೂಡಾ ನಮಗೆ ಉತ್ತಮ ತಳಪಾಯ ದೊರೆತುದು ಇದೇ ಊರಿನಲ್ಲಿ. ಬನವಾಸಿಯ ಹಿರಿಯ ಪ್ರಾಥಮಿಕ ಶಾಲೆ ಸುತ್ತಲಿನ ಪರಿಸರದಲ್ಲಿ “ಉತ್ತಮ ಶಾಲೆ” ಎಂಬ ಕೀರ್ತಿಗೆ ಪಾತ್ರವಾಗಿತ್ತು. ಸುತ್ತಮುತ್ತಲಿನ ಹಳ್ಳಿಗಳಿಂದ ಹಲವು ವಿದ್ಯಾರ್ಥಿಗಳು ಈ ಶಾಲೆಗೆ ಸೇರಿಕೊಳ್ಳುತ್ತಿದ್ದರು. ಶಾಲೆಗೆ ಸಮೀಪವೇ ಇದ್ದ ಸರಕಾರಿ ವಸತಿ ನಿಲಯದಲ್ಲಿ ಉಳಿದುಕೊಂಡು ಅಭ್ಯಾಸ ಮಾಡುತ್ತಿದ್ದರು.             ಶಿಕ್ಷಣ ಕ್ರಮ ಮತ್ತು ಆಡಳಿತ ಶಿಸ್ತಿಗೆ ಬಹುಮುಖ್ಯ ಕಾರಣರೆನಿಸಿದವರು ಈ ಶಾಲೆಯ ಮುಖ್ಯಾಧ್ಯಾಪಕರಾದ ಖಾಜಿ ಮಾಸ್ತರರು. ವೈಯಕ್ತಿಕವಾಗಿಯೂ ತುಂಬಾ ಕಟ್ಟುನಿಟ್ಟಾದ ಶಿಸ್ತಿನ ಮನುಷ್ಯ. ಸ್ವಲ್ಪ ಕುಳ್ಳನೆಯ ವ್ಯಕ್ತಿಯಾದರೂ ಬಿಳಿಯ ಪಾಯಿಜಾಮಾ, ಬಿಳಿಯ ಶರ್ಟು, ಅದರಮೇಲೋಂದು ಕಪ್ಪನೆಯ ಓವರ್ ಕೋಟ್, ತಲೆಯ ಮೇಲೊಂದು ಕರಿಯ ಟೊಪ್ಪಿಗೆ, ಕಾಲಲ್ಲಿ ಚರಮರಿ ಜೋಡು ಮೆಟ್ಟ ಬಂದರೆಂದರೆ ಕಟೆದು ನಿಲ್ಲಿಸಿದಂಥ ಪರಸನ್ಯಾಲಿಟಿ. ಸದಾ ಘನ ಗಾಂಭೀರ್ಯದಲ್ಲಿ ಮುಖವನ್ನು ಗಂಟು ಹಾಕಿಕೊಂಡಂತಿರುವ ಖಾಜಿ ಮಾಸ್ತರರು ತಮ್ಮ ಕಣ್ಣುಗಳಿಂದಲೇ ಎಲ್ಲರನ್ನೂ ಕಂಟ್ರೋಲು ಮಾಡುವ ರೀತಿಯೇ ಅದ್ಭುತವಾಗಿತ್ತು!. ಎಲ್ಲ ಅಧ್ಯಾಪಕರನ್ನು ಹದ್ದು ಬಸ್ತನಲ್ಲಿಟ್ಟು ನಡೆಸುವ ಮಾಸ್ತರರ ಆಡಳಿತ ವ್ಯವಸ್ಥೆಯೇ ಶಾಲೆಯನ್ನು ಶಿಸ್ತು ದಕ್ಷತೆಗೆ ಹೆಸರುವಾಸಿಯಾಗುವಂತೆ ಮಾಡಿತ್ತು.             ಶಾಲೆಯಲ್ಲಿ ಅತ್ಯಂತ ಕಟ್ಟು ನಿಟ್ಟಿನ ಸದಾ ಗಂಭೀರ ನಿಲುವಿನಲ್ಲಿರುವ ಖಾಜಿ ಮಾಸ್ತರರು ಅಂತರಂಗದಲ್ಲಿ ಅಪಾರವಾದ ಪ್ರೀತಿ-ಅಂತಃಕರಣವುಳ್ಳವರಾಗಿದ್ದರೆಂಬುದು ನನಗೆ ಮುಂದಿನ ದಿನಗಳಲ್ಲಿ ವೇದ್ಯವಾಯಿತು.             ನಾನು ನಾಲ್ಕನೆಯ ತರಗತಿ ಓದುತ್ತಿರುವಾಗ ಬನವಾಸಿಯ ತುಂಬ ಭಯಂಕರವಾದ ಸಿಡುಬು ರೋಗ ವ್ಯಾಪಿಸಿತ್ತು. ನಮ್ಮ ಮನೆಯಲ್ಲೂ ನಮ್ಮ ತಾಯಿಯೊಬ್ಬಳನ್ನುಳಿದು ನಾನು, ಅಪ್ಪ ಮತ್ತು ತಮ್ಮ ತಂಗಿಯರೆಲ್ಲ ಸಿಡುಬು ರೋಗದಿಂದ ಹಾಸಿಗೆ ಹಿಡಿದಿದ್ದೆವು. ಮೈತುಂಬ ಸಿಡುಬಿನ ನೀರುಗುಳ್ಳೆಗಳೆದ್ದು ಬಾಳೆಎಲೆ ಹಾಸಿಗೆಯ ಮೇಲೆ ನಮ್ಮನ್ನೆಲ್ಲ ಮಲಗಿಸಿದ್ದರು. ಅತಿಯಾದ ನಿಶ್ಯಕ್ತಿ ಮತ್ತು ಮೈ ಉರಿಯಿಂದ ನಾವು ನರಳುತ್ತಿದ್ದರೆ ಅವ್ವ ನಮ್ಮ ಯಾತನೆಗೆ ಸಂಕಟ ಪಡುತ್ತಾ ಉಪಚರಿಸುತ್ತಾ ಓಡಾಡುತ್ತಿದ್ದಳು. ಅಪ್ಪನ ಸಹೋದ್ಯೋಗಿ ಶಿಕ್ಷಕರೆಲ್ಲಾ ಬಂದು ಸಾಂತ್ವನ ಹೇಳಿ ಹೋಗುತ್ತಿದ್ದರು. ಈ ಸಮಯದಲ್ಲಿ ಖಾಜಿ ಮಾಸ್ತರರು ತೋರಿದ ಕಾಳಜಿ, ಮಾಡಿದ ಉಪಕಾರ ಇನ್ನೂ ನನ್ನ ಕಣ್ಣಮುಂದೆ ಕಟ್ಟಿದಂತೆಯೇ ಇದೆ. ನಿತ್ಯವೂ ನಮಗೆ ಗಂಜಿ ಮತ್ತು ಹಣ್ಣು ಹಂಪಲುಗಳ ವ್ಯವಸ್ಥೆ ಮಾಡಿ ನಾವು ಸಂಪೂರ್ಣ ಗುಣಮುಖರಾಗುವವರೆಗೆ ತುಂಬಾ ಕಳಕಳಿಯಿಂದ ನೋಡಿಕೊಂಡರು. ಅವರು ಮತ್ತು ಅವರ ಸಹೋದ್ಯೋಗಿ ಶಿಕ್ಷಕರು ತೋರಿದ ಪ್ರೀತ್ಯಾದರಗಳೇ ನಮ್ಮನ್ನು ಖಾಯಿಲೆಗೆ ಬಲಿಯಾಗದಂತೆ ಬದುಕಿಸಿದ್ದವು ಅಂದರೆ ಉತ್ಪೆಕ್ಷೆಯಲ್ಲ!             ಬಹುಶಃ ಖಾಜಿ ಮಾಸ್ತರರಂಥ ಮಹನಿಯರೇ  ಸಮಾಜದಲ್ಲಿ ಮನುಷ್ಯರಾಗಿ ಮುಖವೆತ್ತಿ ಬಾಳಲು ಪೋಷಕ ದೃವ್ಯವಾಗಿ ಹೊರತೆರೆಂದು ನಾನೀಗಲೂ ದೃಢವಾಗಿ ನಂಬಿದ್ದೇನೆ *********************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….8 ನಾನೂ ಶಾಲೆಗೆ ಸೇರಿದೆ… ಅಪ್ಪನಿಗೆ ಅಲಗೇರಿಯಿಂದ ಕುಮಟಾ ತಾಲೂಕಿನ ಹನೇಹಳ್ಳಿ ಶಾಲೆಗೆ ವರ್ಗವಾಯಿತು. ಮತ್ತೆ ನಾವು ನಮ್ಮ ತಾಯಿಯ ತೌರೂರು ನಾಡುಮಾಸ್ಕೇರಿಗೆ ಬಂದು ನೆಲೆಸಬೇಕಾಯಿತು. ನಾಡು ಮಾಸ್ಕೇರಿಯಲ್ಲಿ ಆಗ ನಮ್ಮ ಜಾತಿಯ ಜನಕ್ಕೆ ಸ್ವಂತ ಭೂಮಿಯೆಂಬುದೇ ಇರಲಿಲ್ಲ. ಕೆಲವು ಕುಟುಂಬಗಳು ನಾಡವರ ಜಮೀನಿನ ಒಂದು ಮೂಲೆಯಲ್ಲಿ ಆಶ್ರಯ ಪಡೆದು ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದರು. ನಾಡುಮಾಸ್ಕೇರಿಯಲ್ಲಿ ನಾಡವರು ಇದ್ದುದರಲ್ಲಿಯೇ ಸ್ಥಿತಿವಂತರಾಗಿದ್ದರು. ಎಲ್ಲ ಕುಟುಂಬಗಳಿಗೂ ಅಲ್ಪಸ್ವಲ್ಪ ಬೇಸಾಯದ ಭೂಮಿಯೂ ಇದ್ದಿತ್ತು. ಮಾಸ್ಕೇರಿಯ ಈ ಭಾಗದಲ್ಲಿ ನಾಡವರು ವಾಸ್ತವ್ಯ ಇರುವುದರಿಂದಾಗಿಯೇ ನಾಡು ಮಾಸ್ಕೇರಿ’ ಎಂದು ಕರೆಯುತ್ತಿದ್ದಿರಬೇಕು. ಊರಿನ ಉತ್ತರ ಭಾಗದಲ್ಲಿ ಕೆಲವು ಬ್ರಾಹ್ಮಣರ ಮನೆಗಳಿದ್ದವು. ಹಾರ್ವರು ವಾಸಿಸುವ ಕಾರಣದಿಂದಲೇ ಈ ಭಾಗವನ್ನು ಹಾರೂ ಮಾಸ್ಕೇರಿ’ ಎಂದು ಕರೆಯುತ್ತಿದ್ದರು. ಬ್ರಾಹ್ಮಣರಿಗೆ ಸೇರಿದ ಜಮೀನಿನ ಮೂಲೆಯಲ್ಲಿಯೂ ಒಂದೆರಡು ನಮ್ಮ ಆಗೇರರ ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದವು.             ನಮ್ಮ ಅಜ್ಜಿಯ ಕುಟುಂಬ ನಾಡುಮಾಸ್ಕೇರಿ ಭಾಗದಲ್ಲಿ ನಾರಾಯಣ ನಾಯಕ ಎಂಬ ನಾಡವ ಜಾತಿಯ ಜಮೀನ್ದಾರರೊಬ್ಬರ ಗೇರು ಹಕ್ಕಲಿನಲ್ಲಿ ವಾಸವಾಗಿದ್ದಿತ್ತು. ನಮ್ಮ ತಂದೆಯವರು ಇಲ್ಲಿಗೆ ಬಂದ ಬಳಿಕ ಅಜ್ಜಿಯ ಮನೆಯ ಸಮೀಪವೇ ನಾರಾಯಣ ನಾಯಕರ ಅನುಮತಿಯಿಂದ ಒಂದು ಚಿಕ್ಕ ಹುಲ್ಲಿನ ಮನೆ ನಿಮಿಸಿಕೊಂಡರು. ಅಷ್ಟು ಹೊತ್ತಿಗೆ ನನಗೆ ಒಬ್ಬ ತಮ್ಮ (ನಾಗೇಶ) ಒಬ್ಬಳು ತಂಗಿ (ಲೀಲಾವತಿ) ಬಂದಾಗಿತ್ತು.             ತಾಯಿಯ ತೌರಿನ ಕಡೆಯಿಂದ ಅಜ್ಜಿಮನೆಯಲ್ಲಿ ಅವ್ವನ ಚಿಕ್ಕಪ್ಪ ರಾಕಜ್ಜ ಮತ್ತು ಅವನ ಹೆಂಡತಿ ಮತ್ತು ರಾಕಜ್ಜನ ಚಿಕ್ಕಮ್ಮ ಜುಂಜಜ್ಜಿ ಎಂಬ ಮುದುಕಿ ವಾಸಿಸುತ್ತಿದ್ದರು. ಆದರೆ ಈ ಪ್ರತ್ಯೇಕತೆ ಬಹಳ ಕಾಲವೇನೂ ಇರಲಿಲ್ಲ. ನನಗೆ ಬುದ್ದಿ ತಿಳಿಯುವ ಹೊತ್ತಿಗೆ ರಾಕಜ್ಜನಿಗೆ ಇದ್ದ ಮೊದಲ ಹೆಂಡತಿ ತೀರಿಕೊಂಡಿದ್ದಾರೆ ಎಂದೂ ಈಗ ಇರುವವಳು ಅವನ ಎರಡನೆಯ ಹೆಂಡತಿ ಎಂದೂ ತಿಳಿದು ಬಂತು. ಆದರೂ ಅವರು ಅನ್ಯೋನ್ಯವಾಗಿ ಇದ್ದಂತೆ ನಮಗೆ ಕಾಣಿಸುತ್ತಿತ್ತು. ಆದರೆ ಮುಂದಿನ ಒಂದೆರಡು ವರ್ಷಗಳಲ್ಲಿಯೇ ರಾಕಜ್ಜನ ಎರಡನೆಯ ಹೆಂಡತಿ ತನ್ನ ತೌರಿಗೆಂದು ಅಂಕೋಲೆಯ ಬಾಸಗೋಡ ಎಂಬ ಊರಿನ ಕಡೆ ಹೋದವಳು ಮತ್ತೆ ಎಂದೂ ತಿರುಗಿ ಬಾರದೇ ಅಲ್ಲಿಯೇ ಯಾರನ್ನೋ ಕೂಡಿಕೆ’ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಬಂದಿತ್ತು. ಆ ಬಳಿಕ ರಾಕಜ್ಜ ಮತ್ತು ಜುಂಜಜ್ಜಿ ನಮ್ಮದೇ ಮನೆಯ ಭಾಗವಾಗಿ ಹೋದರು. ರಾಕಜ್ಜ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ, ಜುಂಜಜ್ಜಿ ಮನೆಯಲ್ಲಿಯೇ ಇದ್ದು ಅವ್ವನಿಗೆ ಮನೆಗೆಲಸದಲ್ಲಿ ನೆರವಾಗುತ್ತ ನಾವು ಮೂವರು ಮರಿಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಾ ಉಳಿದುಕೊಂಡಳು.             ಇಷ್ಟೆಲ್ಲ ಪುರಾಣ ಹೇಳಿದ ಕಾರಣವೆಂದರೆ ನನ್ನನ್ನು ಮೊಟ್ಟ ಮೊದಲು ಶಾಲೆಗೆ ಕರೆದೊಯ್ದು ಸೇರಿಸಿದವಳೇ ಈ ಜುಂಜಜ್ಜಿ. ನನ್ನ ಹಠ, ತುಂಟತನ ಎಲ್ಲವನ್ನೂ ನಿರಾಳವಾಗಿ ಹಚ್ಚಿಕೊಂಡಿದ್ದ ಜುಂಜಜ್ಜಿಯೇ ಹಾರೂಮಾಸ್ಕೇರಿ ಭಾಗದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಸಲು ಕರೆದೊಯ್ದಿದ್ದಳು. ನನಗೆ ಇನ್ನೂ ಸರಿಯಾಗಿ ನೆನಪಿದೆ….. ಒಂದು ಪಾಯಿಜಾಮ, ನೆಹರೂ ಶರ್ಟ ಧರಿಸಿ ನಾನು ತುಂಬಾ ಜಬರ್ದಸ್ತ ಆಗಿಯೇ ಶಾಲೆಗೆ ಹೊರಟಿದ್ದೆ. ಆದರೆ ಅಲ್ಲಿಗೆ ಹೋದ ಬಳಿಕ ಶಾಲೆಯೆಂಬ ಶಾಲೆಯನ್ನು ಅದರೊಳಗಿರುವ ಮಾಸ್ತರರನ್ನೂ ಅಲ್ಲಿರುವ ಮಕ್ಕಳನ್ನೂ ಕಂಡದ್ದೇ ನನಗೆ ಕಂಡಾಬಟ್ಟೆ ಅಂಜಿಕೆಯಾಗಿ ಜುಂಜಜ್ಜಿಯ ಸೀರೆಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತ ಶಾಲೆಯೇ ಬೇಡವೆಂದು ಹಠ ಮಾಡತೊಡಗಿದ್ದೆ. ಯಾರೋ ಮಾಸ್ತರರೊಬ್ಬರು ಸಂತೈಸಿ ಕರೆದೊಯ್ಯಲು ಮುಂದೆ ಬಂದಾಗ ಮತ್ತಷ್ಟು ಭಯಗೊಂಡು ಚೀರಾಟ ಮಾಡಿದೆ. ಜುಂಜಜ್ಜಿಗೆ ನನ್ನನ್ನು ಸಂತೈಸುವುದೇ ಕಷ್ಟವಾಗಿ ಒದ್ದಾಡುತ್ತ ನನ್ನನ್ನು ಹೇಗೋ ರಮಿಸಿ ಶಾಲೆಯ ಪಕ್ಕದಲ್ಲೇ ಇರುವ ಗೋವಿಂದ ಶೆಟ್ಟಿ ಎಂಬುವರ ಚಹಾದಂಗಡಿಗೆ ಕರೆತಂದಳು.             ಅಂಗಡಿಯ ಮುಂಗಟ್ಟಿನಲ್ಲೇ ಇರುವ ಒಲೆಯಮೇಲೆ ಇರುವ ದೊಡ್ಡದೊಂದು ಪಾತ್ರೆಯಲ್ಲಿ ನೀರು ಕೊತಕೊತ ಕುದಿಯುತ್ತಿತ್ತು. ಅದರ ಮೇಲೆ ಚಹಾಪುಡಿ, ಸಕ್ಕರೆ ಬೆರೆಸಿದ ಕಿಟ್ಲಿ’ ಹೊಗೆಯುಗುಳುತ್ತ ಸುತ್ತೆಲ್ಲ ಚಹಾದ ಗಮ್ಮನೆ ಪರಿಮಳ ಹರಡುತ್ತ ಕುಳಿತಿತ್ತು. ನನಗೆ ಅಚ್ಚರಿ ಹುಟ್ಟಿಸಿದ ಸಂಗತಿಯೆಂದರೆ ಒಲೆಯ ಮೇಲಿಟ್ಟ ಆ ದೊಡ್ಡ ಪಾತ್ರೆಯೊಳಗಿಂದ ಕೇಳಿ ಬರುತ್ತಿದ್ದ ಕಿಣಿ ಕಿಣಿ ಶಬ್ಧ. ಅದೊಂದು ವಿಚಿತ್ರ ಮಾಯಾ ಪೆಟ್ಟಿಗೆಯೆಂಬಂತೆ ಅಚ್ಚರಿಯಿಂದ ನೋಡುತ್ತ ನನ್ನ ಅಳು ಯಾವುದೋ ಕ್ಷಣದಲ್ಲಿ ನಿಂತು ಹೋಗಿತ್ತು.             ಚಹದಂಗಡಿ ಚಾಲೂ ಸ್ಥಿತಿಯಲ್ಲಿ ಇದೆ ಎಂಬುದನ್ನು ಗಿರಾಕಿಗಳಿಗೆ ತಿಳಿಸಲು ಪಾತ್ರೆಯಲ್ಲಿ ಒಂದು ತೂತು ಬಿಲ್ಲೆ’ (ಆಗಿನ ಕಾಲದ ಒಂದು ನಾಣ್ಯ) ಯನ್ನು ಹಾಕಿ ಇಡುವರೆಂದೂ ಅದು ನೀರು ಕುದಿಯುವಾಗ ಹಾರಾಡುತ್ತ ಪಾತ್ರೆಯ ತಳಕ್ಕೆ ಬಡಿದು ಲಯಬದ್ಧವಾದ ಕಿಣಿ ಕಿಣಿ ಸಪ್ಪಳ ಹೊರಡುವುದೆಂದೂ ತಿಳಿಯಲು ನಾನು ನನ್ನ ಎರಡನೆಯ ತರಗತಿಯವರೆಗೂ ಕಾಯಬೇಕಾಯಿತು.             ಉಸೂಳಿ ಅವಲಕ್ಕಿ’ ಗೋವಿಂದ ಶೆಟ್ಟರ ಸ್ಪೇಶಲ್ ತಿಂಡಿಯಾಗಿತ್ತು. ಚೆನ್ನಾಗಿ ಬೇಯಿಸಿದ ಒಟಾಣೆ ಕಾಳುಗಳಿಗೆ ಒಗ್ಗರಣೆ ಹಾಕಿ ಸಿದ್ಧಪಡಿಸಿದ ಉಸೂಳಿ’ಯನ್ನು ಅವಲಕ್ಕಿ ಶೇವು ಬೆರೆಸಿಕೊಡುತ್ತಿದ್ದ ಶೆಟ್ಟರಿಗೆ ಅವುಗಳನ್ನು ಸಮಪ್ರಮಾಣದಲ್ಲಿ ಬೆರೆಸುವ ಹದ ತಿಳಿದಿತ್ತಂತೆ. ಹಾಗಾಗಿಯೇ ಗೋವಿಂದ ಶೆಟ್ಟರ ಉಸೂಳಿ ಅವಲಕ್ಕಿ ಸುತ್ತಲಿನ ನಾಡವರು, ಹಾಲಕ್ಕಿಗಳು, ನಾಮಧಾರಿಗಳು ಆಗೇರರಿಗೆಲ್ಲ ಮರಳು ಹಿಡಿಸುವಷ್ಟು ಪ್ರಿಯವಾದ ತಿಂಡಿಯಾಗಿತ್ತು.             ಜುಂಜಜ್ಜಿ ನನಗೆ ಅಂದು ಉಸೂಳಿ ಅವಲಕ್ಕಿ ಪೊಟ್ಟಣ ಕೊಡಿಸಿದಳು. ಅದನ್ನು ತಿಂದಾದ ಬಳಿಕ ಅದೇ ಅಂಗಡಿಯಲ್ಲಿ ಸಿಗುವ ನಾಲ್ಕು ಚಕ್ಕುಲಿಗಳನ್ನೂ ನನ್ನ ನೆಹರೂ ಶರ್ಟಿನ ಎರಡೂ ಕಿಶೆಗಳಲ್ಲಿ ತುಂಬಿದ ಬಳಿಕವೇ ನಾನು ಶಾಲೆಗೆ ಎಂಟ್ರಿಕೊಟ್ಟಿದ್ದೆ.             ನಾಡುಮಾಸ್ಕೇರಿಯವರೇ ಆದ ವೆಂಕಟ್ರಮಣ ಗಾಂವಕರ ಎಂಬುವರು ಶಾಲೆಯ ಮುಖ್ಯಾಧ್ಯಾಪಕರಾಗಿದ್ದರು. ಅಜಾನು ಬಾಹು ವ್ಯಕ್ತಿತ್ವ, ಅಚ್ಚಬಿಳಿಯ ಕಚ್ಛೆ ಪಂಚೆಯುಟ್ಟು ಅಂಥದ್ದೇ ಬಿಳಿಯ ನೆಹರೂ ಶರ್ಟ್ ತೊಟ್ಟ ವೆಂಕಟ್ರಮಣ ಗಾಂವಕರ ಕಟ್ಟುನಿಟ್ಟಿನ ಶಿಸ್ತಿಗೆ ಶಾಲೆಯ ಸಹ ಶಿಕ್ಷಕರೂ ಅಂಜಿ ವಿಧೇಯತೆ ತೋರುತ್ತಿದ್ದರು. ನನ್ನಂಥ ಮಕ್ಕಳು ಅವರ ಮುಂದೆ ಸುಳಿಯಲೂ ಭಯ ಪಡುತ್ತಿದ್ದರು. ಶಾಲೆಯ ವಾತಾವರಣದಿಂದ ಪಾರಾಗಿ ಹೊರಬರುವ ತವಕದಲ್ಲೇ ಇದ್ದ ನನ್ನನ್ನು ಇನ್ನೋರ್ವ ಗುರುಗಳು ಆತ್ಮೀಯವಾಗಿ ಕರೆದು ಪ್ರೀತಿಯಿಂದ ಮಾತನಾಡಿಸುತ್ತ ನನ್ನ ಭಯ ನಿವಾರಿಸಿ ಶಾಲೆಯ ಕುರಿತು ಪ್ರೀತಿ ಹುಟ್ಟಿಸಿದರು. ಅವರು ಕುಚೆನಾಡ ತಿಮ್ಮಣ್ಣ ಮಾಸ್ತರರೆಂದೂ ಅಂಕೋಲಾ ತಾಲೂಕಿನ ಬೇಲೇಕೇರಿ ಊರಿನವರೆಂದೂ ನನಗೆ ಅರಿವಾಗಲು ವರ್ಷಗಳೇ ಕಳೆದಿದ್ದವು… ಅಂತೂ ಜುಂಜಜ್ಜಿಯ ದೇಖರೇಖಿಯಲ್ಲಿ ನಾನೂ ಶಾಲೆಗೆ ಸೇರಿದೆ… ******* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….7 ಅಲಗೇರಿಯಲ್ಲಿ ಬೆಂಕಿ ಮತ್ತು ಮೊಲ             ನಾಗಮ್ಮಜ್ಜಿಯ ಅಂತ್ಯಸಂಸ್ಕಾರ ಅನಿವಾರ್ಯವಾಗಿ ಕಾರವಾರದಲ್ಲಿ ನಡೆದುಹೋಯಿತು. ಕ್ರಿಯಾ ಕರ್ಮಗಳನ್ನು ಪೂರ್ಣಗೊಳಿಸುವವರೆಗೆ ಊರಿಗೆ ಮರಳುವ ಹಾಗೆಯೂ ಇರಲಿಲ್ಲ. ತಾತ್ಕಾಲಿಕವಾಗಿ ನಮ್ಮ ಪರಿವಾರ ಕಾರವಾರ ತಾಲೂಕಿನ ಅರಗಾ ಎಂಬಲ್ಲಿ ಶಾನುಭೋಗಿಕೆಯಲ್ಲಿರುವ ನಾರಾಯಣ ಆಗೇರ ಎಂಬ ಜಾತಿ ಬಂಧುವೊಬ್ಬರ ಮನೆಯಲ್ಲಿ ವಾಸ್ತವ್ಯ ಮಾಡಬೇಕಾಯಿತು. ಶಾನುಭೋಗರ ಪತ್ನಿ (ಅವಳ ಹೆಸರೂ ನಾಗಮ್ಮ) ನನ್ನ ಯೋಗಕ್ಷೇಮಕ್ಕೆ ನಿಂತಳು. ತಬ್ಬಲಿ ತನದಲ್ಲಿ ನೊಂದು ಹಾಸಿಗೆ ಹಿಡಿದ ಅವ್ವ, ತರಬೇತಿಯ ಜವಾಬ್ದಾರಿಯಲ್ಲಿ ದಿಕ್ಕು ತೋಚದಂತಿದ್ದ ಅಪ್ಪ ಮತ್ತು ಹಸುಳೆಯಾದ ನನಗೆ ಅಂದು ನಾರಾಯಣ ಶಾನುಭೋಗ ದಂಪತಿಗಳು ನೀಡಿದ ಆಶ್ರಯ, ಮಾಡಿದ ಉಪಕಾರಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಅವ್ವ ಈಗಲೂ ನೆನಪಿಸಿಕೊಳ್ಳುತ್ತಾಳೆ. ಆದರೆ ಅವರಿಗೆ ಕೃತಜ್ಞತೆ ಹೇಳಲು ಇಬ್ಬರೂ ಬದುಕಿ ಉಳಿದಿಲ್ಲ ಎಂಬುದು ನಮ್ಮ ದೌರ್ಭಾಗ್ಯ!             ಮರಳಿ ಮಾಸ್ಕೇರಿಯ ತೌರಿಗೆ ಬಂದು ಸೇರುವಾಗ ಅವ್ವನಿಗೆ ತಾಯಿಯಿಲ್ಲದ ತೌರುಮನೆಯಾಗಿತ್ತು ಅದು. ಹಾಗೆಂದು ಅವ್ವ ನೊಂದುಕೊಂಡಿದ್ದರೂ ಮಾಸ್ಕೇರಿಯ ಜಾತಿ ಬಂಧುಗಳೆಲ್ಲರೂ ತಾಯಿ ತಂದೆಯರ ಹಾಗೆ ಅಕ್ಕರೆ ತೋರಿದರಂತೆ. ಅದರಲ್ಲಿಯೂ ಸಾಕವ್ವ ಎಂಬ ಮುದುಕಿ ಸರಿಯಾದ ಬಾಣಂತನವಿಲ್ಲದೆ ಅವ್ವನ ಮುಖ ಸೊರಗಿದುದನ್ನು ಗ್ರಹಿಸಿ ಎರಡು ತಿಂಗಳು ಕಟ್ಟು ನಿಟ್ಟಿನ ಬಾಣಂತನ ಮಾಡಿದಳಂತೆ. ತನ್ನ ಮನೆಯಿಂದ ಹತ್ತಾರು ಮಾರು ಅಂತರದಲ್ಲಿದ್ದ ನಮ್ಮ ಮನೆಗೆ ಮುಂಜಾನೆ ಸಂಜೆ ತಪ್ಪದೇ ಬರುತ್ತ ಅರಶಿನ ಎಣ್ಣೆ ತಿಕ್ಕಿ, ಅಡಕಲ ತುಂಬ ಬಿಸಿನೀರು ಹೊಯ್ದು, ಧೂಪದ ಹೊಗೆ ಹಾಕಿ ತಾಯಿ ಮಗುವನ್ನು ಉಪಚರಿಸಿದ ಸಾಕವ್ವ ಅವ್ವನಿಗೆ ಹದವಾದ ಕಾಳು ಮೆಣಸಿನ ಚಟ್ನಿಯನ್ನು ಮಾಡಿ ಉಣ್ಣಿಸುತ್ತಿದ್ದಳಂತೆ. ಸಾಕವ್ವನ ಅಂಥ ಕಟ್ಟುನಿಟ್ಟಿನ ಬಾಣಂತನದಿಂದಾಗಿಯೇ ಮುಂದೆ ಮತ್ತೆ ಐದು ಜನ ಮಕ್ಕಳನ್ನು ಹೆತ್ತರೂ ತನ್ನ ದೇಹದ ಚೈತನ್ಯ ಉಡುಗದೆ ಉಳಿಯುವುದು ಸಾಧ್ಯವಾಯಿತು ಅನ್ನುತ್ತಾಳೆ ಅವ್ವ.             ಬೆಳ್ಳಗೆ ಎತ್ತರದ ನಿಲುವಿನ ಸಾಕವ್ವ’ ಅವ್ವನಿಗೆ ಮಾತ್ರ ಸಾಕವ್ವನಾಗಿರದೆ ಕೇರಿಗೇ ಅಕ್ಕರೆಯ ಅವ್ವನಾಗಿದ್ದಳಂತೆ. ಶುಚಿಯಾಗಿ ಅಡಿಗೆ ಮಾಡುವ ಅವಳು, ಕೇರಿಯಲ್ಲಿ ಯಾರಿಗೇ ಕಾಯಿಲೆಯಾದರೂ ನಾರುಬೇರುಗಳ ಕಷಾಯ ಮಾಡಿ ಕುಡಿಸಿ ಕಾಯಿಲೆಗಳನ್ನು ಗುಣ ಪಡಿಸುತ್ತಿದ್ದಳಂತೆ. ೧೯೬೧-೬೨ ರ ಸುಮಾರಿಗೆ ನಾವೆಲ್ಲ ಬನವಾಸಿಯಲ್ಲಿರುವಾಗ ಊರಲ್ಲಿ ಹಬ್ಬಿದ ಆಮಶಂಕೆ’ ಕಾಯಿಲೆ ನಮ್ಮಕೇರಿಯ ಒಂದಿಷ್ಟು ಪ್ರಾಯದ ಮತ್ತು ಎಳೆಯ ಮಕ್ಕಳನ್ನು ಬಲಿತೆಗೆದುಕೊಂಡಿತ್ತು. ಸಾಕವ್ವಜ್ಜಿ ಕೂಡ ಇದೇ ಕಾಯಿಲೆಯಲ್ಲಿ ಸಾವು ಕಂಡಿದ್ದಳು.             ಕಾರವಾರದ ಶಿಕ್ಷಕ ತರಬೇತಿಯ ಬಳಿಕ ಕೆಲವು ವರ್ಷಗಳಲ್ಲಿ ಅಪ್ಪನಿಗೆ ಅಂಕೋಲಾ ತಾಲೂಕಿನ ಅಲಗೇರಿ’ ಎಂಬ ಹಳ್ಳಿಯ ಸರಕಾರಿ ಶಾಲೆಗೆ ವರ್ಗವಾಯಿತು. ನನಗೆ ಮೂರೋ ನಾಲ್ಕೋ ವರ್ಷ ತುಂಬಿರಬಹುದು. ಆಗಿನ್ನೂ ಬಾಲವಾಡಿ, ಅಂಗನವಾಡಿ ಇತ್ಯಾದಿ ವ್ಯವಸ್ಥೆ ಇರಲಿಲ್ಲ. ನಾನು ಮನೆಯಲ್ಲೇ ಆಡಿಕೊಂಡಿದ್ದೆ. ನಮಗೆ ನಮ್ಮ ಜಾತಿಯ ಜನರ ಕೇರಿಯಲ್ಲೇ ವಾಸ್ತವ್ಯಕ್ಕೆ ಒಂದು ಚಿಕ್ಕ ಹುಲ್ಲಿನ ಮನೆ ವ್ಯವಸ್ಥೆಯಾಗಿತ್ತು. ಅಪ್ಪ ಅದಾಗಲೇ ಹಳ್ಳಿಯ ಜನರ ಯಕ್ಷಗಾನ ಬಯಲಾಟಗಳಿಗೆ ಅರ್ಥಬರೆದುಕೊಡುವುದೂ, ಕುಣಿತ ಕಲಿಸುವುದೂ ಇತ್ಯಾದಿ ಮಾಡುತ್ತಿದ್ದ. ಇದರಿಂದ ಇತರ ಸಮಾಜದ ಜನರು ಅಪ್ಪನನ್ನು ವಿಶೇಷ ಗೌರವದಿಂದ ಕಾಣುತ್ತಿದ್ದರು. ಸಮಯಕ್ಕೊದಗಿ ಸಹಾಯವನ್ನು ಮಾಡುತ್ತಿದ್ದರು. ಹೆಚ್ಚಾಗಿ ಅಲ್ಲಿನ ಹಾಲಕ್ಕಿಗಳು ಮನೆಯವರೆಗೂ ಬಂದು ಹೆಚ್ಚಿನ ಪ್ರೀತಿ, ವಿಶ್ವಾಸ ತೋರಿಸುತ್ತಿದ್ದರು. ತಾವು ಬೆಳೆದ ತರಕಾರಿಗಳನ್ನು ಪುಕ್ಕಟೆಯಾಗಿ ತಂದು ಕೊಡುತ್ತಿದ್ದರು. ಒಬ್ಬ ಹಾಲಕ್ಕಿ ಗೌಡನಂತೂ ಒಂದು ಮೊಲವನ್ನು ಜೀವಂತ ಹಿಡಿದು ತಂದು ಅಪ್ಪನಿಗೆ ಕಾಣಿಕೆಯಾಗಿ ಒಪ್ಪಿಸಿದ್ದ. ಅಪ್ಪ ಅದಕ್ಕೊಂದು ಪಂಜರ ಮಾಡಿ ಸೊಪ್ಪು ಸದೆ ತಿನ್ನಿಸಿ ಅಕ್ಕರೆ ತೋರುತ್ತಿದ್ದರೆ, ನನಗೋ ಅದು ಜೀವಂತ ಆಟಿಗೆಯ ವಸ್ತುವಾಗಿತ್ತು. ಒಂದೆರಡು ತಿಂಗಳಲ್ಲೇ ನಮಗೆ ಹೊಂದಿಕೊಂಡ ಮೊಲ ಪಂಜರದ ಹೊರಗೂ ಅಷ್ಟೇ ನಿರಾಳವಾಗಿ ಓಡಾಡತೊಡಗಿತು. ಅಪ್ಪ ಶಾಲೆಗೆ ಹೊರಟರೆ ಹತ್ತು ಹೆಜ್ಜೆಯಾದರೂ ಅವನೊಟ್ಟಿಗೆ ಕುಪ್ಪಳಿಸಿ ನಡೆದು ಮತ್ತೆ ಆಚೀಚೆ ಬೆಕ್ಕು ನಾಯಿಗಳ ಸದ್ದು ಕೇಳಿದರೆ ಮರಳಿ ಬಂದು ಗೂಡು ಸೇರುತ್ತಿತ್ತು.             ಯಾವ ಊರಿನಲ್ಲಾದರೂ ಸಜ್ಜನರ ನಡುವೆಯೇ ಒಂದಿಬ್ಬರಾದರೂ ನಯವಂಚಕ ಜನ ಇದ್ದೇ ಇರುತ್ತಾರೆ ಎಂಬ ಸರಳ ಸತ್ಯದ ಅರಿವು ನಮ್ಮ ಮುಗ್ಧ ತಾಯಿ ತಂದೆಯರ ಗಮನಕ್ಕೆ ಬರಲೇ ಇಲ್ಲ. ಮೊಲವನ್ನು ಕಾಣಿಕೆ ನೀಡಿದ ಅದೇ ಜಾತಿಯ ಮನುಷ್ಯನೊಬ್ಬ ಮೆತ್ತಗಿನ ಮಾತನಾಡಿ, “ಮೊಲಕ್ಕೆ ಹುಲ್ಲು ಮೇಯಿಸಿ ತರುವೆ” ಎಂದು ಸುಳ್ಳು ಹೇಳಿ ಕೊಂಡೊಯ್ದವನು ಅದನ್ನು ಕೊಂದು ತಿಂದು ವಂಚನೆ ಮಾಡಿದ. ಅಪ್ಪ-ಅವ್ವ ಮತ್ತು ನಾನು ಮೊಲದ ಸಾವಿಗಾಗಿ ಮರುಗುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡುವಂತಿರಲಿಲ್ಲ.             ಅಲಗೇರಿಯಲ್ಲಿ ನನ್ನನ್ನು ಆಡಿಸುವುದಕ್ಕೂ ಆಯಿತು ತಾನು ಶಾಲೆ ಕಲಿಯುವುದಕ್ಕೂ ಆಯಿತು ಎಂಬ ಉದ್ದೇಶದಿಂದ ಅವ್ವನ ಚಿಕ್ಕಪ್ಪನ ಮಗ (ನನ್ನ ಸೋದರ ಮಾವ) ರಾಮ ಎಂಬ ಹುಡುಗ ಬಂದು ನಮ್ಮ ಜೊತೆಗೆ ಉಳಿದುಕೊಂಡಿದ್ದ. ಅಗ್ಗರಗೋಣದ ನಮ್ಮ ಸೋದರತ್ತೆಯ (ನಮ್ಮ ತಂದೆಯವರ ಅಕ್ಕ) ಮಗ ನಾರಾಯಣ ಎಂಬುವವನೂ ಕೆಲವು ದಿನ ನಮ್ಮೊಡನೆಯೇ ಇದ್ದ. ಇಬ್ಬರೂ ನನ್ನನ್ನು ಮುದ್ದು ಮಾಡುತ್ತ, ಹಟ ಮಾಡಿದರೆ ಬಡಿದು ತಿದ್ದುತ್ತ ಅಕ್ಕರೆಯಿಂದ ಆಟವಾಡಿಸುತ್ತಿದ್ದರು. ನಮಗೆ ಇಂಥಹುದೇ ಆಟಿಗೆ ವಸ್ತು ಎಂಬುದೇನೂ ಇರಲಿಲ್ಲ. ಮುರಿದ ತೆಂಗಿನ ಹೆಡೆ, ಗರಟೆ ಚಿಪ್ಪು, ಬಿದಿರಿನ ಕೋಲು, ಹುಲ್ಲಿನ ಬಣವೆ ಇತ್ಯಾದಿ ನಿಸರ್ಗ ಸಹಜ ವಸ್ತುಗಳೇ ನಮಗೆ ಆಟಿಕೆಯಾಗಿದ್ದವು.             ಒಂದು ಮುಸ್ಸಂಜೆಯ ಹೊತ್ತು. ಅವ್ವ ಮೀನು ಕೊಯ್ಯುತ್ತಾ ಅಂಗಳದ ಆಚೆ ಕುಳಿತಿದ್ದಳು. ಬದಿಯ ಮನೆಯವಳು ಕತ್ತಲಾಯಿತೆಂದು ನಮ್ಮ ಮನೆಯ ದೀಪದ ಬುರುಡಿಯನ್ನು ತನ್ನ ಮನಗೊಯ್ದು ಎಣ್ಣೆ ಹಾಕಿ ಹೊತ್ತಿಸಿ ತಂದ… ************************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….6 ನಾಗಮ್ಮಜ್ಜಿಯ ಅಂತಿಮಯಾತ್ರೆ                 ನಮ್ಮ ತಂದೆಯವರಿಗೆ ಶಿಕ್ಷಕ ವೃತ್ತಿ ದೊರೆಯಿತಾದರೂ ಇಲಾಖೆಯ ನಿಯಮದಂತೆ ಶಿಕ್ಷಕ ತರಬೇತಿ ಮುಗಿಸುವುದು ಅನಿವಾರ್ಯವಾಗಿತ್ತು. ತರಬೇತಿಗಾಗಿ ಆಯ್ಕೆಗೊಂಡು ಅವರು ಕಾರವಾರದ ಟ್ರೇನಿಂಗ್ ಕಾಲೇಜ್ ಸೇರುವಾಗ ಅವ್ವನ ಗರ್ಭದಲ್ಲಿ ನಾನು ಆಡಲಾರಂಭಿಸಿದ್ದೆನಂತೆ. ನಾಗಮ್ಮಜ್ಜಿಯ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. ಅವ್ವನ ಸೀಮಂತ ಇತ್ಯಾದಿ ಸಡಗರದಲ್ಲಿ ಸಂಭ್ರಮಿಸುತ್ತ ತನ್ನ ಕಣ್ಗಾವಲಿನಲ್ಲಿ ಮಗಳ ಬಾಣಂತನಕ್ಕೆ ಬೇಕು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಊರ ಸುತ್ತಲಿನ ಎಲ್ಲಾ ಗ್ರಾಮದೇವತೆಗಳಿಗೆ ಹಣ್ಣು ಕಾಯಿ ನೀಡಿ ಮೊಮ್ಮಗನೇ ಹುಟ್ಟಬೇಕೆಂದು ಹರಕೆ ಹೊತ್ತು ಬಂದಳಂತೆ. ಕೊನೆಗೂ ಅವ್ವನಿಗೆ ಹೆರಿಗೆಯ ನೋವು ಕಾಣಿಸುವಾಗ ಅಂಕೋಲೆಯ ಸಂಬಂಧಿಯೋರ್ವರ ಮನೆಗೆ ಕರೆತಂದು ಉಳಿಸಿಕೊಂಡಳು. ಏಕೆಂದರೆ ಆಗಿನ ಕಾಲದಲ್ಲಿ ಸರಿಯಾದ ಔಷಧೋಪಚಾರ ಸಿಗುವುದು ಅಂಕೋಲೆಯ ಮಿಶನರಿ ಆಸ್ಪತ್ರೆಯಲ್ಲಿ ಮಾತ್ರ ಎಂಬ ನಂಬಿಕೆ ಆಸುಪಾಸಿನಲ್ಲಿ ಬಲವಾಗಿತ್ತು. ನಾಗಮ್ಮಜ್ಜಿ ಸಾಕಷ್ಟು ಮುಂಜಾಗ್ರತೆ ವಹಿಸಿ ಮಗಳ ಹೆರಿಗೆಗೆ ಸಕಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿಯೇ ಮಾಡಿಕೊಂಡಿದ್ದಳು.                 ಮಾರ್ಚ್ ತಿಂಗಳ ಇಪ್ಪತ್ಮೂರನೆಯ ದಿನ, ಸಾವಿರದ ಒಂಬೈನೂರಾ ಐವತ್ಮೂರು ನನ್ನ ಜನನವಾಯಿತು. ನಾಗಮ್ಮಜ್ಜಿಯ ಸಂತೋಷಕ್ಕೆ ಪಾರವೇ ಇರಲಿಲ್ಲವೆಂದು ಅಮ್ಮ ನೆನೆಸಿಕೊಳ್ಳುತ್ತಾಳೆ. ದೇವರಿಗೆ ಹರಕೆ ಹೊತ್ತುದರಿಂದಲೇ ತನಗೆ ಮೊಮ್ಮಗ ಹುಟ್ಟಿದ್ದಾನೆ ಎಂಬ ಮುಗ್ದ ಬಿಂಕದಲ್ಲಿ ಬೇಡಿಕೊಂಡ ಎಲ್ಲಾ ದೇವರಿಗೆ ಹರಕೆಯೊಪ್ಪಿಸಿ, ಬಾಣಂತಿಯನ್ನೂ ಮಗುವನ್ನೂ ಊರಿಗೆ ಕರೆತಂದು ಆರೈಕೆಗೆ ನಿಂತಳು.                 ಮೂರು ತಿಂಗಳ ಕಾಲ ಬಾಣಂತನ ಮುಗಿಸಿ ಕಾರವಾರದಲ್ಲಿ ತರಬೇತಿ ಪಡೆಯುತ್ತಿರುವ ಅಪ್ಪನ ಕೈಗೊಪ್ಪಿಸಿ ಬಿಟ್ಟರೆ ತನ್ನ ಬಹುದೊಡ್ಡ ಜವಾಬ್ದಾರಿ ಮುಗಿಯಿತು ಎಂದುಕೊಂಡಿದ್ದಳು ನಾಗಮ್ಮಜ್ಜಿ. ಮಗುವಿಗೆ ಕೈಬಳೆ, ಕಾಲ್ಕಡಗ, ಹೊಸಬಟ್ಟೆ ತೊಡಿಸಿ ಮಗಳನ್ನೂ ಸಿಂಗರಿಸಿಕೊಂಡು ತೊಟ್ಟಿಲ ಹೊರೆ ಹೊತ್ತು ಕಾರವಾರಕ್ಕೆ ಬಂದಿಳಿದಳು. ಅಂದು ದಿನವಿಡೀ ಮಗಳು, ಅಳಿಯ, ಮೊಮ್ಮಗುವಿನೊಂದಿಗೆ ಆನಂದದಲ್ಲಿ ಮೈಮರೆತಿದ್ದ ನಾಗಮ್ಮಜ್ಜಿಗೆ ಸರಿರಾತ್ರಿ ನಿದ್ದೆಯಲ್ಲಿರುವಾಗ ಹೊಟ್ಟೆನೋವು ಕಾಣಿಸಿಕೊಂಡಿತು.                 ಸಾಮಾನ್ಯವಾಗಿ ತನಗೆ ಎಂಥ ಸಣ್ಣಪುಟ್ಟ ಕಾಯಿಲೆ ಬಂದರೂ ತಾನೇ ಏನಾದರೊಂದು ಔಷಧಿ ಮಾಡಿ ತಿಂದು ಸರಳವಾಗಿ ಬಿಡುತ್ತಿದ್ದ ನಾಗಮ್ಮಜ್ಜಿ ಅಂದು ಮಾತ್ರ ಧೃತಿಗೆಟ್ಟು ನರಳ ತೊಡಗಿದಳಂತೆ! ಅಪರಾತ್ರಿಯ ಹೊತ್ತಿನಲ್ಲಿ ಅಪ್ಪ ಕಾರವಾರದ ಎಲ್ಲಾ ಆಸ್ಪತ್ರೆಗಳ ಬಾಗಿಲು ಬಡಿದು ಕಳಕಳಿಯಿಂದ ಹುಡುಕಾಡಿದರೂ ವೈದ್ಯರೊಬ್ಬರೂ ದೊರೆಯಲಿಲ್ಲ.                 ಸಿಕ್ಕ ಒಬ್ಬಿಬ್ಬರು ಮಧ್ಯರಾತ್ರಿಯ ಹೊತ್ತಿನಲ್ಲಿ ಮನೆ ಬಿಟ್ಟು ಬರಲು ಒಪ್ಪಲಿಲ್ಲ. ರಾತ್ರಿಯೆಲ್ಲಾ ನೋವಿನ ಯಮಯಾತನೆಯಲ್ಲಿ ನರಳಿದ ನಾಗಮ್ಮಜ್ಜಿ ನಸುಕು ಹರಿಯುವ ಹೊತ್ತಿಗೆ ಗಾಢನಿದ್ದೆಗೆ ಶರಣಾಗಿದ್ದಳು.                 ಅವಳು ಈಗ ಮಲಗಿದ್ದಾಳೆ ನೋವು ಕಡಿಮೆಯಾಗಿರಬಹುದು ಎಂದೇ ಭಾವಿಸಿದ ಅಪ್ಪ ಅವ್ವ ಅಜ್ಜಿಯನ್ನು ಅವಳ ಪಾಡಿಗೆ ಬಿಟ್ಟು ದೈನಂದಿನ ಚಟುವಟಿಕೆಗಳಿಗೆ ಸಿದ್ಧರಾದರು. ಅಪ್ಪ ಉಪಹಾರ ಮುಗಿಸಿ ಮಂಜಾನೆಯೇ ಆರಂಭಗೊಳ್ಳುವ ತರಗತಿಗೆ ಹಾಜರಾಗಲು ಅತ್ತ ಹೋದಬಳಿಕ ಅವ್ವ ಕಸಮುಸುರೆ ಇತ್ಯಾದಿ ಕೆಲಸಗಳಲ್ಲಿ ಮೈಮರೆತಿದ್ದಳು. ಅಜ್ಜಿಯ ಪಕ್ಕದಲ್ಲಿಯೇ ನನಗೂ ಸೊಗಸಾದ ನಿದ್ದೆ ಬಿದ್ದುದರಿಂದ ಅವ್ವ ಇತ್ತ ಲಕ್ಷ್ಯ ಕೊಡುವ ಅಗತ್ಯವೂ ಬೀಳಲಿಲ್ಲವಂತೆ.                 ಮನೆಗೆಲಸವನ್ನೆಲ್ಲ ಮುಗಿಸಿ ಹತ್ತು ಹೊಡೆಯುವ ಹೊತ್ತಿಗೆ ಇಷ್ಟು ಹೊತ್ತಾದರೂ ಅವ್ವ ಏಕೆ ಏಳಲಿಲ್ಲ? ಎಂಬ ಅನುಮಾನ ಬಲವಾಗಿ ಬಳಿ ಬಂದು ಎಬ್ಬಿಸಿ ನೋಡುವಾಗ ನಾಗಮ್ಮಜ್ಜಿ ಮರಳಿಬಾರದ ಲೋಕಕ್ಕೆ ಹೊರಟು ಹೋಗಿದ್ದಳು!                 ಅಪರಿಚಿತವಾದ ಊರು. ಉಳಿದುಕೊಂಡದ್ದು ಯಾರದೋ ಮನೆ. ಹೇಳ ಕೇಳುವ ಬಂಧುಗಳು ಯಾರೂ ಹತ್ತಿರವಿಲ್ಲ. ಇಂಥ ಸಂದರ್ಭದಲ್ಲಿ ತೀರ ನಂಬಲೂ ಆಗದ ಸ್ಥಿತಿಯಲ್ಲಿ ಅಜ್ಜಿ ಹೆಣವಾಗಿ ಮಲಗಿದ್ದಾಳೆ….                 ಕಾರವಾರದ ಬೀದಿಗಳಲ್ಲಿ ಬೊಬ್ಬೆಯಿಡುತ್ತಲೆ ಶಿಕ್ಷಕರ ತರಬೇತಿ ಕೇಂದ್ರದತ್ತ ಓಡಿದ ಅವ್ವ ಅಪ್ಪನಿಗೆ ವಿಷಯ ತಿಳಿಸಿ ಅಪ್ಪನನ್ನು ಬೀಡಾರಕ್ಕೆ ಕರೆತರುವಷ್ಟರಲ್ಲಿ ಒಂದು ತಾಸಾದರೂ ಕಳೆದು ಹೋಗಿರಬಹುದು. ಹೆಣದ ಪಕ್ಕದಲ್ಲಿ ಯಾವ ಅರಿವೂ ಇಲ್ಲದೆ ಆಡುತ್ತ ಮಲಗಿದ ನನ್ನನ್ನು ನೆರೆ ಮನೆಯವರಾರೋ ನೋಡಿ ಎತ್ತಿಕೊಂಡಿದ್ದರಂತೆ.                 ಊರಿಗೆ ಸುದ್ದಿ ಮುಟ್ಟಿಸುವುದೂ ಕಷ್ಟವಾಗಿದ್ದ ಕಾಲ. ಸಮೀಪವೆಂದರೆ ಅಂಕೋಲೆಯ ದಾರಿಯಲ್ಲಿ ಅಮದಳ್ಳಿ ಎಂಬಲ್ಲಿ ಶಾನುಭೋಗಿಕೆ ಮಾಡಿಕೊಂಡಿರುವ ನಾಗಣ್ಣ ಎಂಬ ಪರಿಚಿತ ವ್ಯಕ್ತಿ ಮಾತ್ರ. ಅಪ್ಪ ಹೇಗೋ ನಾಗಣ್ಣನಿಗೆ ಸುದ್ದಿ ಮುಟ್ಟಿಸಿ ಅವನಿಂದ ಊರಿನವರೆಗೂ ನಾಗಮ್ಮಜ್ಜಿಯ ಮರಣ ವಾರ್ತೆ ತಲುಪುವಾಗ ಅರ್ಧ ದಿನ ಕಳೆದು ಹೋಗಿತ್ತು. ಅಲ್ಲಿಂದ ಬಂಧು ಬಾಂಧವರು ಹೊರಡ ಬೇಕೆಂದರೂ ಬಸ್ಸು ಇತ್ಯಾದಿ ಸೌಕರ್ಯಗಳಿಲ್ಲ! ಇದ್ದರೂ ಕೈಯಲ್ಲಿ ಕಾಸು ಇಲ್ಲದ ಜನ. ಕಾಲ್ನಡಿಗೆಯಲ್ಲೇ ಹೊರಟು ಕಾರವಾರ ಸೇರುವ ಹೊತ್ತಿಗೆ ಮತ್ತೆ ನಡುರಾತ್ರಿ.                 ಸರಿರಾತ್ರಿಯಲ್ಲಿ ನಾಗಮ್ಮಜ್ಜಿಯ ಶವವನ್ನು ಕಾರವಾರದ ಸ್ಮಶಾನದಲ್ಲಿ ಮಣ್ಣು ಮಾಡಿದರಂತೆ. ಮಗಳು ಮೊಮ್ಮಗನನ್ನು ಅತ್ಯಂತ ಸಡಗರದಿಂದ ಕರೆತಂದು ಅಳಿಯನ ಕೈಗೊಪ್ಪಿಸಿ ನಾಗಮ್ಮಜ್ಜಿ ತನ್ನ ಕನಸುಗಳೊಂದಿಗೆ ಕಣ್ಮರೆಯಾಗಿಬಿಟ್ಟಳು ಎಂಬ ಕತೆಯನ್ನು ಅವ್ವ ಹೇಳತೊಡಗಿದಾಗ ಅಜ್ಜಿಯ ಆಕೃತಿ, ಚಡಪಡಿಕೆ, ಕನಸುಗಳು, ತೀವೃವಾದ ಜೀವನೋತ್ಸಾಹಗಳು ನನ್ನ ಕಣ್ಣೆದುರೇ ಚಿತ್ರ ಶಿಲ್ಪವಾಗಿ ಮೂಡಿದಂತೆನಿಸುತ್ತದೆ. ಅಷ್ಟೊಂದು ಅಕ್ಕರೆ ತೋರುವ ಅಜ್ಜಿಯ ಪ್ರೀತಿ ಆರೈಕೆಗಳನ್ನು ಇನ್ನಷ್ಟು ಕಾಲ ಪಡೆಯುವ ಯೋಗ ನನಗಿದ್ದರೆ? ಎಂದೂ ಚಡಪಡಿಸುತ್ತದೆ. ********************************************

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….5 ಅಪ್ಪ ಅವ್ವನ ಅದ್ಧೂರಿ ಮದುವೆ             ಜೋಯ್ಡಾದಲ್ಲಿ ಶಾನುಭೋಗಿಕೆಯ ಕೆಲಸ ತುಂಬಾ ಅನುಕೂಲಕರವಾಗಿತ್ತು. ತಿಂಗಳ ಸಂಬಳದಲ್ಲಿ ಒಂದು ಪೈಸೆಯನ್ನೂ ಖರ್ಚುಮಾಡಗೊಡದೆ ಹಳ್ಳಿಯ ರೈತಾಪಿ ಜನ ದವಸ-ಧಾನ್ಯ ತರಕಾರಿಗಳನ್ನೆಲ್ಲ ತಂದುಕೊಟ್ಟು ಸಹಕರಿಸುತ್ತಿದ್ದರಂತೆ. ಚಾವಡಿಯ ಒಂದು ಮೂಲೆಯಲ್ಲಿಯೇ ವಾಸ್ತವ್ಯಕ್ಕೆ ಅವಕಾಶವೂ ಇತ್ತು. ಬೆಟ್ಟದ ಹಳ್ಳಿಗಾಡಿನ ಹಳೆಯ ಕಟ್ಟಡವಾದ್ದರಿಂದ ಸಹಜವಾಗಿಯೇ ಕೋಣೆ ತುಂಬಾ ಬಿಲಗಳಿದ್ದವು. ಆ ಬಿಲಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಇಲಿ ಹೆಗ್ಗಣ ಮತ್ತು ಅವುಗಳ ವಾಸನೆ ಹಿಡಿದು ಅಲ್ಲಿಗೆ ಬಂದು ಹೋಗುವ ವಿವಿಧ ಜಾತಿಯ ಹಾವುಗಳ ಉಪದ್ರವ ಬಿಟ್ಟರೆ ಊರಿನ ಜನ ತುಂಬ ಗೌರವದಿಂದ ಸಹಕರಿಸುತ್ತಿದ್ದರಂತೆ. ಆದರೆ, ಗಣಪು ಮಾಸ್ತರನಾಗಬೇಕೆಂದು ಬಯಸಿದ್ದರಿಂದ ಈ ಉದ್ಯೋಗ ಅಷ್ಟೇನೂ ತೃಪ್ತಿ ನೀಡಿರಲಿಲ್ಲ.             ಎರಡು ತಿಂಗಳಲ್ಲೇ ಸರಕಾರಿ ಶಾಲೆಯೊಂದರಲ್ಲಿ ಮಾಸ್ತರಿಕೆಯ ಆದೇಶ ಬಂದಿದೆಯೆಂಬ ಸುದ್ದಿ ಊರಿಂದ ಬಂತು. ಗಣಪು ಹಿಂದೆಮುಂದೆ ನೋಡದೆ ಶಾನುಭೋಗ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿದ. ಆದರೆ ಈ ರಾಜೀನಾಮೆ ಪ್ರಕ್ರಿಯೆಯಲ್ಲಿ ಎಂಟುದಿನ ತಡವಾಗಿತ್ತು. ಗಣಪು ಊರಿಗೆ ಬಂದು ಆದೇಶವನ್ನು ಪಡೆಯುವಷ್ಟರಲ್ಲಿ ಶಿಕ್ಷಣ ಇಲಾಖೆ ತನ್ನ ಆದೇಶವನ್ನು ಬದಲಿಸಿ ಬೇರೊಬ್ಬ ಶಿಕ್ಷಕನನ್ನು ನೇಮಿಸಿಕೊಂಡಾಗಿತ್ತು.             ಆರು ತಿಂಗಳ ಕಾಲ ಕೈಗೆ ಸಿಕ್ಕ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಯಾಗಿದ್ದ ಗಣಪುವಿನ ಚಡಪಡಿಕೆಯ ದಿನಗಳಲ್ಲಿ ನಾಡುಮಾಸ್ಕೇರಿಯ ರಾಕು ಬೆನ್ನಿಗೆ ನಿಂತು ಧೈರ್ಯ ತುಂಬುತ್ತಿದ್ದನಂತೆ. ಆರು ತಿಂಗಳ ಬಳಿಕ ಮತ್ತೆ ಮಾಸ್ತರಿಕೆಯ ಆದೇಶ ಬಂತು. ಹೆಗ್ರೆ ಗ್ರಾಮದ ಶಾಲೆಗೆ ಗಣಪು ಮಾಸ್ತರನಾದ.             ಮಾಸ್ತರಿಕೆ ದೊರೆತು ಜೀವನದ ದಾರಿ ಭದ್ರವಾದ ಬಳಿಕ ಗಣಪು ಮದುವೆಗೆ ಯೋಗ್ಯ ವರ’ ಎಂಬ ಭಾವನೆ ಜಾತಿ ಬಾಂಧವರಲ್ಲಿ ಮೂಡಿತು. ಈ ನಡುವೆ ಗುಂದಿಹಿತ್ತಲಿನ ಸಂಪರ್ಕದಿಂದ ದೂರವೇ ಉಳಿಯುತ್ತಿದ್ದ ಗಣಪು ತನ್ನ ಗೆಳೆಯ ರಾಕುವಿನ ಕುಟುಂಬಕ್ಕೆ ಸಹಜವಾಗಿಯೇ ಹತ್ತಿರವಾಗಿದ್ದ. ಹೀಗಾಗಿ ಗಣಪುವಿನ ಮದುವೆಯ ಜವಾಬ್ದಾರಿಯನ್ನು ರಾಕುವೇ ಕೈಗೆತ್ತಿಕೊಂಡು ಕನ್ಯಾ ಶೋಧಕ್ಕೆ ತೊಡಗಿದ.             ರಾಕುವಿನ ಅಣ್ಣನ ಮಗಳು ತುಳಸಿ ಹನ್ನೆರಡರ ಎಳೆಯ ಮಗು. ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಳೆ. ರಾಕುವಿಗೆ ಅದೇ ವಯಸ್ಸಿನ ಸ್ವಂತ ಮಗಳೊಬ್ಬಳಿದ್ದಾಳೆ. ಅವಳು ಶಾಲೆ ಕಲಿಯುತ್ತಿಲ್ಲ. ಹಾಗಾಗಿ ರಾಕು ಅಣ್ಣನ ಮಗಳು ತುಳಸಿಯನ್ನು ಗಣಪುವಿಗೆ ಮದುವೆ ಮಾಡಲು ಸಂಕಲ್ಪ ಮಾಡಿದ. ಜಾತಿ ಬಾಂಧವರು ಕೂಡ “ಕಲಿತ ಹುಡುಗಿ ಯೋಗ್ಯವಧು” ಎಂದು ಅನುಮೋದನೆ ನೀಡಿದರು. ಹುಡುಗಿಯ ವಯಸ್ಸು ಚಿಕ್ಕದು ಎಂಬ ಸಣ್ಣ ಅಪಸ್ವರವೊಂದು ಕೇಳಿ ಬಂತಾದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಗಣಪು ಮತ್ತು ತುಳಸಿಯರ ಮದುವೆ ನಿಶ್ಚಯವಾಯಿತು.             ಎಲ್ಲರಿಗಿಂತ ಹೆಚ್ಚು ಸಂತಸ ಸಂಭ್ರಮ ಪಟ್ಟವಳು ತುಳಸಿಯ ಅವ್ವ ನಾಗಮ್ಮಜ್ಜಿ. ಮಾಸ್ತರಿಕೆಯಲ್ಲಿರುವ ಅಳಿಯ ದೊರೆತಿರುವುದು ಅಂದಿನ ಕಾಲಕ್ಕೆ, ಅದರಲ್ಲಿಯೂ ಅಪರೂಪವಾಗಿ ಶಿಕ್ಷಣ ಸಂಸ್ಕಾರ ಪಡೆಯುತ್ತಿರುವ ಆಗೇರ ಜನಾಂಗದಲ್ಲಿ ಸಾಮಾನ್ಯ ಸಂಗತಿಯಾಗಿರಲಿಲ್ಲ. ಗಂಡ ಗತಿಸಿದ ಬಳಿಕ ಮಗಳ ಭವಿಷ್ಯವೊಂದನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡು ಹಿಲ್ಲೂರಿಗೆ ಹೊರಟು ಬೇಸಾಯಕ್ಕೆ ಬಯಸಿದ ನಾಗಮ್ಮಜ್ಜಿ ಅಲ್ಲಿಯ ವೈಫಲ್ಯದಿಂದಾಗಿ ಮರಳಿ ನಾಡುಮಾಸ್ಕೇರಿಗೆ ಬಂದಿದ್ದಳು. ಇಲ್ಲಿ ಕೂಲಿ ಮಾಡುತ್ತ ಮಗಳನ್ನು ಮತ್ತೆ ಶಾಲೆಗೆ ಸೇರಿಸಿದ್ದಳು. ಅಂಥ ಛಲಗಾರ್ತಿಯಾದ ಹೆಂಗಸಿಗೆ ಮಾಸ್ತರನೊಬ್ಬ ಅಳಿಯನಾಗುತ್ತಾನೆ ಎಂಬುದೇ ಸ್ವರ್ಗದಂಥ ಖುಷಿಯ ಸಂಗತಿ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದೇ ಸಂಕಲ್ಪ ಮಾಡಿದಳು.             ಲಂಕೇಶರು ಹೇಳಿದ ಹಾಗೆ ಬನದ ಕರಡಿಯಂತೆ ನಾಗಮ್ಮಜ್ಜಿ ಅಕ್ಕಿ, ಬೆಲ್ಲ, ಬಾಳೆ, ಹಲಸು, ಬಾಳೆಲೆಗಳನ್ನೆಲ್ಲಾ ಸಂಗ್ರಹಿಸತೊಡಗಿದಳು. ಹಿಲ್ಲೂರಿನಂಥ ಬೆಟ್ಟದಲ್ಲಿ ಬೇಸಾಯ ಮಾಡಿ ಬಂದ ದುಡಿಮೆಯ ಅನುಭವ ಅವಳದು. ಅದಾಗಲೇ ಅಲ್ಲಿಯ ನೆಂಟರೆಲ್ಲ ಭತ್ತ, ಕಬ್ಬು ಬೆಳೆಯುತ್ತ, ಬೆಲ್ಲದ ಕೊಡಗಳನ್ನೂ, ಅಕ್ಕಿಮೂಡೆಗಳನ್ನು ದಾಸ್ತಾನು ಮಾಡುವ ಹಂತ ತಲುಪಿದ್ದರು. ನಾಗಮ್ಮಜ್ಜಿ ಸ್ವತಃ ಹಿಲ್ಲೂರಿಗೆ ಹೋಗಿ ಅಕ್ಕಿ, ಬೆಲ್ಲ, ಬಾಳಿಗೊನೆ, ಹಲಸು ಇತ್ಯಾದಿಗಳನ್ನು ಸಾಕು ಸಾಕೆಂಬಂತೆ ಸಂಗ್ರಹಿಸಿ ಅವುಗಳನ್ನು ದೋಣಿಯಲ್ಲಿ ತುಂಬಿ ಗಂಗಾವಳಿ ನದಿಯ ಮೂಲಕವೇ ಊರಿಗೆ ಸಾಗಿಸಿದಳು. ಹಿಲ್ಲೂರಿನ ಎಲ್ಲ ಜಾತಿಬಂಧುಗಳಿಗೆ ಮದುವೆಗೆ ತಪ್ಪದೇ ಬರುವಂತೆ ವೀಳ್ಯ ನೀಡಿದ್ದಲ್ಲದೆ, ಊರಿಗೆ ಬರುತ್ತ ನದಿಯ ದಂಡೆಗುಂಟ ಇರುವ ಗುಂಡಬಾಳಾ, ಮೊಗಟಾ, ಸಗಡಗೇರಿ, ಅಗ್ಗರಗೋಣ ಮುಂತಾದ ಊರುಗಳ ಒಳಹೊಕ್ಕು ನೆಂಟರಿಷ್ಟರ ಪ್ರತಿಯೊಂದು ಮನೆಯಲ್ಲೂ ಅಳಿಯ ಮಾಸ್ತರನಿದ್ದಾನೆ’ ಎಂದು ಅಭಿಮಾನದಿಂದ ಹೇಳಿಕೊಂಡು ವೀಳ್ಯ ನೀಡಿ ಬಂದಳು.             ನಾಡುಮಾಸ್ಕೇರಿ ಮತ್ತು ಆಸುಪಾಸಿನ ಎಲ್ಲ ಜಾತಿ ಬಂಧುಗಳನ್ನು, ಪರಜಾತಿಯ ಹಿತೈಷಿಗಳನ್ನು ಕರೆಸಿಕೊಂಡು ಅದ್ದೂರಿಯಾದ ಹಂದರದಲ್ಲಿ ಮಗಳನ್ನು ಗಣಪು ಮಾಸ್ತರನಿಗೆ ಧಾರೆಯೆರೆದ ನಾಗಮ್ಮಜ್ಜಿ, ತಂದೆಯಿಲ್ಲದ ಕೊರತೆಯನ್ನೇ ತೋರಗೊಡದ ಚಿಕ್ಕಪ್ಪ ರಾಕು, ತುಳಸಿಯನ್ನು ದಾಂಪತ್ಯಜೀವನದ ಹೊಸ್ತಿಲಲ್ಲಿ ನಿಲ್ಲಿಸಿದರು. ಹಿರಿಯರ ಸಂಭ್ರಮ ಸಡಗರಗಳನ್ನು ಬೆರಗುಗಣ್ಣುಗಳಿಂದ ನೋಡುವುದನ್ನು ಬಿಟ್ಟರೆ ಹನ್ನೆರಡರ ಹರೆಯದ ಮುಗ್ಧ ತುಳಸಿಗೆ “ವಿವಾಹ ಏನು? ಏಕೆ?” ಎಂಬ ಅರ್ಥವೂ ತಿಳಿದಿರಲಿಲ್ಲ.             ನಾಡುಮಾಸ್ಕೇರಿಯಿಂದ ಗದ್ದೆ ಬಯಲಿಗೆ ಇಳಿದರೆ ಮಾರು ದೂರದಲ್ಲಿ ಸಿಗಬಹುದಾದ ವರನ ಮನೆಯಿರುವ ಗುಂದಿಹಿತ್ತಲಿಗೆ ಸೇರಬೇಕಾದ ದಿಬ್ಬಣ ನಾಗಮ್ಮಜ್ಜಿಯ ಸೂಚನೆಯ ಮೇರೆಗೆ ಹನೇಹಳ್ಳಿಯ ರಾಜಮಾರ್ಗದಲ್ಲಿ ಮೆರವಣಿಗೆ ಹೊರಟು ಬಾವಿಕೊಡ್ಲ, ಬಂಕಿಕೊಡ್ಲ, ಹನೇಹಳ್ಳಿ, ಹೆಗ್ರೆಗಳಲ್ಲಿ ಹಾದು ನಡುವೆ ಸಿಕ್ಕ ಬಂಧುಗಳ ಮನೆಯಲ್ಲಿ ಆರತಿ ಆಶೀರ್ವಾದ ಸ್ವೀಕರಿಸುತ್ತಾ ಗುಂದಿಹಿತ್ತಲಿನ ವರನ ಮನೆಯನ್ನು ಪ್ರವೇಶಿಸುವಾಗ ನಡುರಾತ್ರಿ ಸಮೀಪಿಸಿತ್ತಂತೆ.             ಹೀಗೆ ನಡೆಯಿತು ನಮ್ಮ ಅಪ್ಪ ಅಮ್ಮನ ಅದ್ದೂರಿ ಮದುವೆ. ********************************

Read Post »

You cannot copy content of this page

Scroll to Top