ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಹಿಮದೊಡಲ ಬೆಂಕಿ

ಪುಸ್ತಕ ಪರಿಚಯ ಹಿಮದೊಡಲ ಬೆಂಕಿ ಹಿಮದೊಡಲ ಬೆಂಕಿ.ಗಜ಼ಲ್ ಸಂಕಲನ.ಬೆಲೆ:- 80/-ಲೇಖಕರು :-ಅರುಣಾ ನರೇಂದ್ರಸಿದ್ಧಾರ್ಥ ಪ್ರಕಾಶನ ,ನಂದಿ ನಗರ , ಕೊಪ್ಪಳ. ಅರುಣಾ ನರೇಂದ್ರ ಅವರ ಹಿಮದೊಡಲ ಬೆಂಕಿ ಗಜ಼ಲ್ ಸಂಕಲನದ ಒಳಗೊಂದು ಸುತ್ತು… ಅರುಣಾ ನರೇಂದ್ರ ರವರು ಕೊಪ್ಪಳ ಜಿಲ್ಲೆಯವರಾಗಿದ್ದು ಈ ನಾಡಿನ ಹೆಸರಾಂತ ಮಹಿಳಾ ಸಾಹಿತಿಗಳಲ್ಲಿ ಇವರೂ ಒಬ್ಬರು. ಮುಖತಃ ನೋಡಿಲ್ಲದ, ಮಾತನಾಡಿಲ್ಲದ ಕೇವಲ ವಾಟ್ಸ್ ಆಪ್ ಗ್ರೂಪ್‌ನಿಂದಲೇ ಅಕ್ಷರಗಳ ಮುಖೇನ ಇವರೊಂದಿಗೆ ಅನುಸಂಧಾನ ಮಾಡುತ್ತಿರುವ ನಾನು ಇವರು  ಉದಯೋನ್ಮಖ ಬರಹಗಾರರ ಬರಹಗಳಿಗೆ ಮನಬಿಚ್ಚಿ ಬೆನ್ನುತಟ್ಟುವ ಕಾರ್ಯಕ್ಕೆ  ಮನಸೋತಿರುವೆ. ಸಹೋದರಿ ಸಮಾನರಾದ  ಇವರ ಈ ಹಿಮದೊಡಲ ಬೆಂಕಿ ವಿಭಿನ್ನ ದೃಷ್ಷಿಯ ಆರ್ದ್ರ ಸ್ವರೂಪದ ಗಜ಼ಲ್ ಸಂಕಲನಕ್ಕೆ ಭಾವ ತೀವ್ರತೆಯಿಂದ ನರಳಿಸುತ್ತಾ ಬದುಕು ಅರಳಿಸುವ ಗಜ಼ಲ್ ಗಳು ಎನ್ನುವ ಶಿರೋನಾಮೆಯನ್ನು ಹೊಳಪಿಸಿ ಗಜ಼ಲ್ ನ ಆಕೃತಿ ಮತ್ತು ಆತ್ಮಕ್ಕೆ ಜೀವ ದ್ರವ್ಯ ತುಂಬಿ ಮುನ್ನುಡಿ ಬರೆದ ಬಾಗಲಕೋಟೆ ಜಿಲ್ಲೆಯ ಖ್ಯಾತ ಹಿರಿಯ ಸಾಹಿತಿಗಳಾದ ಅಬ್ಬಾಸ್ ಮೇಲಿನಮನಿಯವರ   ಮುನ್ನುಡಿಯಿಂದ ಗಜ಼ಲ್ ನಾದ ಲೋಕದ ಜೀವ ತಂತಿಯಂತಿರುವ ಅರುಣಾ ನರೇಂದ್ರ  ರವರು ಕನ್ನಡ ಸಾಹಿತ್ಯ ಲೋಕದಲ್ಲಿ ಈಗಾಗಲೇ ರುಬಾಯಿ, ಹಾಯ್ಕು, ಕವನ, ತತ್ವಪದ,ನಾಟಕ ಕಲೆ  ಮುಂತಾದ ಹಲವಾರು ಪ್ರಕಾರಗಳಲ್ಲಿ ಪಳಗಿದ ಕೈ ಎಂಬುದು ತಿಳಿದು ಖುಷಿಯಾಯಿತು ; ಜೊತೆಗೆ ಈ ಸಂಕಲನ ಇವರ ಹದಿಮೂರನೇ ಕೃತಿ. ಇವರು ಕನ್ನಡ ಸಾಹಿತ್ಯದ ಕೃಷಿಯನ್ನು ಹೇಗೆ ಹದಗೊಳಿಸಿದ್ದಾರೆ ಎಂಬುದು ಇದರಿಂದಲೇ ತಿಳಿಯಬಹುದು . ಗಜ಼ಲ್ ಅರಬಿ ಶಬ್ದ ” ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ ಅನುರಾಗ ವ್ಯಕ್ತಪಡಿಸುವುದೆಂದು ಅರ್ಥ. ಪಾರಿಭಾಷಿಕವಾಗಿ ಹೇಳುವುದಾದರೆ ” ಹೃದಯದ ವೃತ್ತಾಂತ  ಮತ್ತು ಪ್ರೇಮ ಮೋಹಗಳ ವಿದ್ಯ ಮಾನಗಳ ಹೇಳಿಕೆ “ ಗಜ಼ಲ್ ಕಾವ್ಯಕ್ಕೆ ಇಂತಹುದೇ ವಿಷಯ ಎಂಬುದಿಲ್ಲ . ಪ್ರಾರಂಭದಲ್ಲಿ ಇದೊಂದು ಸಾಂಪ್ರದಾಯಿಕ ಕಾವ್ಯವಾಗಿತ್ತು. ಆದರೆ ಇತ್ತಿಗೆ ಎಲ್ಲಾ ವಿಷಯ ವಸ್ತುಗಳ ಮೇಲೂ,  ಸಾಮಾಜಿಕ ತಲ್ಲಣಗಳ ಮೇಲೂ,  ಪ್ರಕೃತಿ, ಆಧ್ಯಾತ್ಮಿಕ ,ಸ್ವಾತಂತ್ರ್ಯ ದ ಮೇಲೂ ಗಜ಼ಲ್ ರಚಿತವಾಗಿ ಜನ ಮನವನ್ನು ಹೆಚ್ಚು ಹೆಚ್ಚು ತಲುಪಿಸುವ ಕಾರ್ಯವಾಗುತ್ತಿದೆ. ಈ ಸಂಕಲನದಲ್ಲಿ ಒಟ್ಟು ೬೧ ಗಜ಼ಲ್ ಗಳಿವೆ. ಕಾವ್ಯ ಲೋಕದ ಅನುಭವಗಳಿಂದ ಪಕ್ವಗೊಂಡ ಜೀವ ಸಂವೇದನೆಗಳನ್ನು ಒಡಲೊಳಗೆ ಹುದುಗಿಸಿಕೊಂಡು ಮನುಷ್ಯ ಸಂಬಂಧಕ್ಕಾಗಿ ತುಡಿಯುವ ,ಮಾನವೀಯತೆಯ ಅಭಿವ್ಯಕ್ತಿಗೆ  ಧಾವಂತ ತೋರಿ ಆತ್ಮದ ಶೋಧನೆಗೆ ತೊಡಗಿಸಿಕೊಂಡ ಅನುಭಾವದ ನಿಜ ನೆಲೆಯನ್ನು ದರ್ಶಿಸುವ ವ್ಯಕ್ತಿ ಎಂದು ಈ ಗಜ಼ಲ್ಗಳ ಮಿಸ್ರಗಳಿಂದ ತಿಳಿಯಬಹುದು… ಮೇಲೆ ಚರ್ಮದ ಹೊದಿಕೆ , ದೇಹ ಎಲುಬಿನ ಗೂಡು ಬರಿ ಅಸ್ಥಿಪಂಜರ ನರಳಿ ನರಳಿ ಮಣ್ಣನಪ್ಪುವ ಮುನ್ನ ಎದೆಗೊಮ್ಮೆ ಬಂದು ಒದೆದು ಹೋಗು. ಗ.೧೧ ಬರಲಿ ಬೇನೆ ಬೇಸರಿಕೆಗಳ ಮಹಾಪೂರ ನಶ್ವರ ಸುಖ ನನಗೆ ಬೇಕಾಗಿಲ್ಲ ಕೈ ಸೋಲುವವರೆಗೂ ಹುಟ್ಟು ಹಾಕಿ ಬಾಳ ನೌಕೆಯೊಂದಿಗೆ ರಾಜಿಯಾಗುತ್ತೇನೆ… ಗ.೧೪ ಮನುಜರೆದೆಯ ಗಾಯಗಳಿಗೆ ಮುಲಾಮು ಹಚ್ಚುತ್ತೇನೆ ಉಸಿರಿರುವವರೆಗೆ ಸತ್ತ ಮೇಲೆ ಅರುಣಾಳ ಶವದ ಮುಂದೆ ಕಣ್ಣೀರನು ಹಾಕಬೇಡಿ… ಗ.೧೭ ಶುದ್ಧ ನಿರಾಕಾರ ಬಹ್ಮ ತಾನೆಂದು ತಿಳಿದಾಗ ಆತ್ಮ ಪರಮಾತ್ಮನೊಡಗೂಡಿ ಮಾತು ಮೌನವಾಗುತ್ತದೆ ..ಗ.೫೫. ಬಾಳ ಬನದಲಿ ಬೆಳೆದ ಅವಗುಣದ ಕಳೆ ತೆಗೆದು ಹುಲುಸಾಗಬೇಕು ಮನದ ಬಯಲಲಿ ಅಷ್ಟಮದಗಳ ಕಳೆದು ಹಸನಾಗಬೇಕು ಬದುಕು. ಗ.೩೬. ಈ ಗಜ಼ಲ್ ತನ್ನನ್ನೇ ತಾನು ಓರೆಗಚ್ಚಿಕೊಂಡು ಆತ್ಮ ಸಾಕ್ಷಾತ್ಕಾರ ಹೊಂದುವ ಹಾದಿಗೆ ಜಾರಿದಂತೆ  ಕಂಡು ಬಂತು. ತಮ್ಮ ಸುದೀರ್ಘ ಸಾಹಿತ್ಯದ ಪಯಣದಲ್ಲಿ ಬದುಕಿನ ನಿಜ ಅರ್ಥ ತಿಳಿದ ಇವರು ಸಮಾಜದ ಅಂಧಕಾರಗಳಿಗೆ ಬೇಸತ್ತು ಕೈ ಚೆಲ್ಲಿದ ಹಲವಾರು ಸಂಕಟಗಳು, ಮನೋವ್ಯತೆಗಳು ಎದೆಗಾನಿಸಿ ಕಂಬನಿ ಮಿಡಿದು ಸೆಟೆದು ನಿಲ್ಲುವಂತೆ  ಇಲ್ಲಿ ಸುಳಿಯುತ್ತವೆ… ಗುಡಿಸಲಿನ ಜನರು ಕಂಡ  ಕನಸುಗಳು ಮಹಡಿಯಲಿ ಕೊಳೆತು ಹೋಗುತ್ತವೆ ಬಲಾತ್ಕಾರಕ್ಕೆ ಒಳಗಾದ ಹೆಣ್ಣು ಮಕ್ಕಳು ಗೋರಿಯಲಿ ನರಳುತ್ತಾರೆ ಈ ಲೋಕದಲ್ಲಿ..ಗ. ೩೫.  ಈ ಮಿಸ್ರಗಳು ಕೆಲವು ಉಲ್ಲೇಖಗಳಷ್ಟೇ….. ಶೋಷಿತರ ಧ್ವನಿಗೆ ಕಿವಿಯಾಗಿ ಎದೆಯ ಆಲಯದಲಿ ಆಸರೆ ನೀಡುವ ಬಹುತೇಕ ಗಜ಼ಲ್ ಗಳು ಒಂದಕ್ಕಿಂತ ಒಂದು ವಿಭಿನ್ನ ಅರ್ಥ ಕಲ್ಲಿಸುವ ಬರಹ  ಈ ಸಂಕಲನದಲ್ಲಿ ಮನೆ ಮಾಡಿದೆ ಆದರೆ ನಾನು ಇಲ್ಲಿ ಇದನ್ನು ಮಾತ್ರ ಉದಾಹರಿಸಿರುವೆ… ತುಳಿತಕ್ಕೆ ಒಳಗಾದ ಜನರೆಲ್ಲ ಮೇಲೆದ್ದು ಕಟಿಬದ್ದರಾಗಲು ಹರಸು ಉಂಡ ಕಹಿ ನೋವಿನ ನೆತ್ತರದ ಹಾಳೆಯಲಿ ಅರುಣಾಳ ಹೊಸ ಇತಿಹಾಸವನ್ನೇ ಬರೆಸು ಸಾಕಿ..ಗ. ೪೭. ಚಿಂದಿ ಆಯ್ದ ಕೈಗೆ ಪೆನ್ನು ಪುಸ್ತಕವಿತ್ತು ಅಕ್ಷರದ ಜಾತ್ರೆಗೆ ಅವರನ್ನು ಕಳಿಸು ಸಾಕಿ. ದ್ವೇಶ , ಅಸೂಯೆ, ವಂಚನೆ, ಮತ್ಸರ, ಹೊಡದಾಟ, ಹಾರಾಟ ,ಸ್ವಾರ್ಥ ಏಕೆ ಬೇಕು ಜೀವನ ಮೂರು ದಿನದ ಸಂತೆ  ಜನರೆಲ್ಲರನ್ನು ಪ್ರೀತಿಯಿಂದ ಕಾಣು ಮಾನವತೆಯಿಂದ ಮಹಾ ಮಾನವನಾಗು ಎನ್ನವ ಸಂದೇಶ ನೀಡಿ  , ಆ ಹಾದಿಯಲ್ಲಿ ಬದುಕು ಸವೆಸಲು  ಹೆಣಗುತ್ತಿರಬಹುದು ಎಂದೆನಿಸದಿರದು. ಹೀಗೆ ಓದುತ್ತಾ ಸಾಗಿದಂತೆ ಲೌಕಿಕ ಜಗತ್ತಿನ ಜಂಜಡಗಳಿಂದ ಅಲೌಕಿಕ , (ಅಧ್ಯಾತ್ಮ)ದತ್ತ ಹೊರಳಿಸುವ ಇವರ ಬರಹಗಳು ಜೀವಕ್ಕೆ ಸಂಜೀವನಿಯನ್ನು ಹರಿಸಿ  ಹೊಸ ಚೈತನ್ಯವನ್ನು ತಂದುಕೊಡುತ್ತದೆ. ಈ ಸಂಕಲನದ ಜೊತೆಗೆ ಇನ್ನಷ್ಟು ಮತ್ತಷ್ಟು ಸಂಕಲನಗಳು ಹೊರ ತಂದು ಸಮಾಜದ ಅಂಕು ಡೊಂಕಿನ ಕವಲು ದಾರಿಗಳನ್ನು ಸಮಸಮಾಜವಾಗಿಸುವಲ್ಲಿ ಇವರ ಸಾಹಿತ್ಯ ಧ್ವನಿಸಲಿ ಎಂದು ಈ ಸಂದರ್ಭದಲ್ಲಿ ಶುಭಹಾರೈಸುತ್ತಾ ಇವರ ನೆರಳಿನಲ್ಲಿ  ಹೊಸ ತಲೆಮಾರಿನ ಉದಯೋನ್ಮುಖ ಬರಹಗಾರರು ಸಾಹಿತ್ಯದ ಸವಿ ಉಂಡು ಬೆಳಕಿಗೆ ಬರಲೆಂದು ಆಶಿಸುತ್ತೇನೆ. ************************ ಅಶೋಕ ಬಾಬು ಟೇಕಲ್ಷ

ಹಿಮದೊಡಲ ಬೆಂಕಿ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಅಲೆವ ನದಿ ಅಲೆವ ನದಿಗಜಲ್ ಗಳುಕವಿ :- ಕಿರಸೂರ ಗಿರಿಯಪ್ಪಪ್ರಕಾಶನ :- ಸನ್ಮತಿ ಪ್ರಕಾಶನ ಬಾಗಲಕೋಟೆಬೆಲೆ‌:- ೮೦ಪುಟಗಳು :- ೫೮ ಗಜಲ್ ಎಂದಾಕ್ಷಣ ನೆನಪಿಗೆ ಬರುವುದುಪ್ರೇಮಿಗಳ ಸರಸ ಸಲ್ಲಾಪ ,ಮನದಾಳದ ಸುಕೋಮಲ ಭಾವನೆಗಳು, ಹೆಂಗಳೆಯರ ಪಿಸು ನುಡಿಗಳು , ಒಳಹೊಕ್ಕು ಹೊರ ನೋಡುವ ತೀಕ್ಷ್ಣಮತಿ ಸೂಕ್ಷ್ಮವಾದ ಭಾವನೆಗಳ ಪೂರಣ, ಗಜಲ್ನಸಾಮಾನ್ಯ ಲಕ್ಷಣಗಳು ಕಾಫಿಯಾ ,ರದೀಪ್,ಮತ್ಲಾ,ಮಕ್ತಾ, ಕಾಣಬಹುದು ನೆರಳು-ಬೆಳಕಿನಾಟದಂತೆ ಇವುಗಳನ್ನು ಹೊಂದಾಣಿಕೆ ಮಾಡಿದರೆ ಮಾತ್ರ ಗಜಲ್ ಆಗಲ್ಲ ಸಹಜವಾಗಿ ಮೇಳೈಸಿಕೊಂಡು ಹೃದಯವನ್ನು ತಟ್ಟಿ ಬಡಿದೆಬ್ಬಿಸಬೇಕು. ಗಜಲ್ಗಳು ಮನಸೂರೆಗೊಂಡು ಒನ್ಸ್ ಮೋರ್ ಭಾವನೆಯನ್ನು ಹೊರ ಸೂಸಬೇಕು,ಅಂದಾಗ ಆ ಗಜಲ್ ನ ಶೇರ್ ಕೇಳಿದಾಕ್ಷಣ ವ್ಹಾ ! ಉತ್ಕಟವಾದ ಭಾವನೆ ಹೊರಹೊಮ್ಮಬೇಕು ಅದು ಗಜಲ ಶಕ್ತಿ. ಬಾಗಲಕೋಟೆ ಜಿಲ್ಲೆಯ ಕಿರಸೂರು ಗಿರಿಯಪ್ಪನವರ ಗಜಲ್ ಸಂಕಲನ ಅಲೆವ ನದಿ ಒಳಗಿನ ಅಂತರಾತ್ಮವನ್ನು ಒಂದು ಸಾರಿ ನೋಡಿ ಬರೋಣ…ಮೊದಲಿಗೆ ಪುಸ್ತಕದ ಬಗ್ಗೆ ಮಾತನಾಡುವುದಾದರೆ ಮುದ್ರಣ ಬಹಳ ಅಚ್ಚುಕಟ್ಟಾಗಿ ಮುಖಪುಟದ ಚಿತ್ರವು ಕೂಡ ಅಷ್ಟೇ ಸೊಗಸಾಗಿ ಮನ ಸೆಳೆಯುವಂತೆ ಮೂಡಿಬಂದಿದೆ, ಮುಖಪುಟ ತಯಾರಿಸಿದ ಕಲಾವಿದರಿಗೆ ನನ್ನದೊಂದು ನಮನ. ಇದೊಂದು ನಿತ್ಯ ಅಲೆದಾಟ ಕಲ್ಮಶಗಳನ್ನುತೊಳೆದು ನಿತ್ಯ ಪರಿಸರ ಮಾತೆಯು ತನ್ನೊಡಲಲ್ಲಿ ತುಂಬಿಕೊಳ್ಳುವಳು ದಾಹವನ್ನು ನೀಗಿಸಿ ,ಜಾತಿ- ಮತ-ಪಂತ ಭೇದಗಳನ್ನು ಮರೆತು ಸ್ವಚ್ಛಂದವಾಗಿ ಹರಿಯುವ ಮಾತೆ , ನಿರ್ಗುಣ ,ನಿರಾಕಾರ,ಅಲೆವ ನದಿ ಪುಸ್ತಕದ ಒಳ ಹೂರಣವನ್ನು ತಿಳಿಯೋಣ ಈ ಪುಸ್ತಕದ ಟೈಟಲ್ ಕೂಡ ಬಹಳ ಚಂದವಿದೆ. ಗಜಲ್ ಗಳೆಂದರೆ ಪ್ರೇಮಿಗಳ ವಿರಹ, ಪ್ರೇಮಿಗಳ ಉತ್ಕಟ ಭಾವನೆ, ಸರಸ-ವಿರಸ ಸಮರಸ, ಪ್ರೀತಿಯ ಉತ್ತುಂಗದ ಸ್ಥಿತಿ, ನಿರಾಸೆ, ಕಾಮನೆಗಳು, ಕುಡುಕರ ಮಾತುಗಳು, ಹೆಂಗಳೆಯರ ಮನದಾಳದ ಪಿಸು ಮಾತುಗಳು, ಬದುಕಿನ ಮಧುಪಾತ್ರೆ, ಮೊದಮೊದಲು ಒಂದೇ ಗುಂಪಿಗೆ ಗಜಲ್ ಸೇರಿಕೊಂಡಿತ್ತು ಆದರೆ ಕಾಲ ಬದಲಾದಂತೆ ಅದರ ವಿಸ್ತಾರವು ಕೂಡ ಬದಲಾಗಿದೆ‌ ಹೇಗೆ ? ತನ್ನ ವಿಸ್ತಾರದ ಹರಿವನ್ನು ಗಜಲ್ ಲೋಕವು ಬಹು ವಿಸ್ತಾರವಾಗಿ ಹರಡಿಕೊಂಡಿದೆ ಜಗದ ಜಂಜಡ ಗಳಿಗೆ ಮಿಡಿಯುವ ಮನ, ಸದ್ಯದ ಆಗು ಹೋಗುಗಳಿಗೆ ಸ್ಪಂದಿಸುವ ಗಜಲ್, ರಾಜಕೀಯ,ಆರ್ಥಿಕ ಸ್ಥಿತಿ, ಮಹಿಳಾ ಪರ ಹೋರಾಟ ಧ್ವನಿ,ದಬ್ಬಾಳಿಕೆ, ದೌರ್ಜನ್ಯ, ಶೋಷಣೆ, ಗಡಿಯಾಚೆಯು ಪ್ರೀತಿಯ ಹಂಚುವಿಕೆಯ ಹುಡುಕಾಟವನ್ನು ಬಹುತೇಕ ಗಜಲ್ ಕವಿಗಳಲ್ಲಿ ಈಗೀಗ ನೋಡಬಹುದು ಇದು ಒಳ್ಳೆಯ ಬೆಳವಣಿಗೆ. *ಬತ್ತಿದ ಬಾವಿದಂಡ್ಯಾಗ* *ಬತ್ತಿದ ಬಾವಿದಂಡ್ಯಾಗ ಗುಬ್ಬಚ್ಚಿಗಳ ಪಾದ ನಲುಗ್ಯಾದೊ |*ಬ್ಯಾಸಗಿ ಹೊಡೆತಕ್ಕೆ ಇರುವೆಗಳ ಪಾದನಲುಗ್ಯಾದೊ | ಈ ಮತ್ಲಾ ಗಮನಿಸಿದಾಗ ಈಗ ಗುಬ್ಬಚ್ಚಿ ಕಣ್ಮರೆಯಾಗಿ ಪರಿಸರದಲ್ಲಿ ಅವುಗಳ ಕಲರವ ಇಲ್ಲದೆ ಮನುಜ ಮೂಕವಾಗಿದ್ದಾನೆ .ಮಳೆ‌ವಿಲ್ಲದೆ ಸಣ್ಣ ಜೀವಿ ಇರುವೆ ಕೂಡಾ ಬಹಳ ತೊಂದರೆಯಲ್ಲಿ ಇವೆ ಎನ್ನುವ ಅವರ ಪರಿಸರ ಕಾಳಜಿಯ ಪ್ರಸ್ತುತ ಮನುಜ ದುರಾಸೆಯನ್ನು ಈ ಮತ್ಲಾದಲ್ಲಿ ಗಮನ ಸೆಳೆಯುತ್ತದೆ. *ಅಳುವ ಮೋಡದ ಕಣ್ಣಿಗೆ* *ಅಳುವ ಮೋಡದ ಕಣ್ಣಿಗೆ‌ ನೆಲದ ಬಾಯಿ ಕಂಡಾಗ ಎಂಥಾ ಚಂದ |**ಕೊರಗೊ ರೆಂಬೆಯ ಒಡಲಿಗೆ ಮಣ್ಣ ನಗು ಸಿಕ್ಕಾಗ ಎಂಥಾ ಚಂದ |* ನಾಡಿನಲ್ಲಿ ‌ಮಳೆ ಬೆಳೆ ಎಲ್ಲಾ ಕಾಲಕ್ಕೆ ತಕ್ಕಂತೆ ಸರಿಯಾಗಿ ಆದರೆ ಬಹಳ ಚಂದ ,ಸಾಯುವ ಜೀವಕ್ಕೆ ಹಿಡಿ ಆಶ್ರಯ ಸಿಕ್ಕರೆ ಎಷ್ಟೋ ಆ ಮನ ಸಂತಸ ಗೊಳ್ಳುತ್ತದೆ ಅಲ್ಲವೆ ಕಲ್ಪನೆಯನ್ನು ಕವಿ ನಿತ್ಯ ಪರಿಚರ ಮೂಲಕ ಹೇಳಿದ್ದಾರೆ.ವ್ಹಾ.! *ಕಂಬನಿಯ ಪಾತ್ರೆ* *ಅವಳು ರಾತ್ರಿಯ ಬೆದೆಗೆ ನಲುಗಿ ಕನಸುಗಳ ಕಣ್ಣೀರು ಸುರಿದಳು |**ನನ್ನ ಹೃದಯದ ಪದ ಮಧು ಶಾಲೆಯ ಜೋಗುಳವಾಗಿ ತೇಲುತ್ತಿತ್ತು |* ಕವಿ ಅವಳು ರಾತ್ರಿ ಬೆದರಿ ,ಕನಸುಗಳು ಕಮರಿ ನಯನಗಳು ಒದ್ದೆಯಾದವು ಆ ನೋವಿಗೆ ಹೃದಯ ವೀಣೆ ಜೋಗುಳವಾಗಿ ಹಾಡುತ್ತಿತ್ತು ಬಹಳ ಸುಂದರವಾದ ವರ್ಣನೆ ಸಹಜವಾಗಿ ಮೂಡಿ ಬಂದಿದೆ. *ಖುತುಮಾನಗಳಿಗೊಂದು ಪತ್ರ* *ಇಬ್ಬನಿಯ ಹಿಗ್ಗಿನಲಿ ತೇಲುವ ಕರುಳ ಕುಟುಕಿನ ಜೋಳದ ಕುಡಿ ನಾನು**ಮುಸುಕದಿರಿ ಸಂತತಿಯ ಬೀಜ ನೆಲದ ತೇವ ಹಿಡಿದಾಡಿಸುವ ಕಾಲ* ಪ್ರತಿ ಅಣುರೇಣು ಕೂಡಾ ಸಂತೋಷದಲ್ಲಿ ತೇಲುವ ಸಮಯದಲ್ಲಿ ಸ್ವಲ್ಪವಾದರೂ ಆಶೆಯ ಭಾವನೆಗಳನ್ನು ಹೊಂದಿರುತ್ತದೆ, ಜೀವ ಸಂತತಿಯ ಹಾಳು ಮಾಡದಿರಿ ನೆಲದ ಋಣವ ತೀರಿಸಲು ಬಿಡಿ ಎಂದ ಆರ್ಥಾನಾದ ಭಾವ ಬಹುತೇಕ ಇವರ ಗಜಲ್ ಗಳಲ್ಲಿ ಕಾಣಬಹುದು ‌. *ಕತ್ತಲಿನಾಚೆ* *ಪ್ರೀತಿ ಗೆಲ್ಲದ ಪದಗಳು ಎಷ್ಟು ಹಾಡಿದರೇನು ! ಬೆಳಕಿನಾಚೆ**ಎದೆಗೆ ನಾಟದ ಧರ್ಮಗಳ ಎಷ್ಟು ಹುಡುಕಿದರೇನು ಕತ್ತಲಿನಾಚೆ‌* ಹೃದಯಗಳ ಭಾಷೆಯನ್ನು ಅರಿತು ಪ್ರೀತಿಯಿಂದ ಜಗವ ಗೆಲ್ಲಬೇಕು ಆ ಪದಗಳು ಪ್ರೀತಿಯಿಲ್ಲದ ಮೇಲೆ ಹೇಗೆ ಹುಟ್ಟುತ್ತವೆ ಎಂಥಾ ಮಾತು ಈ ಸಾಲು ನಾಡಿನ ಹಿರಿಯ ಕವಿಯಾದ ಡಾ | ಜಿ.ಎಸ್.ಶಿವರುದ್ರಪ್ಪ ಕವಿತೆ ನೆನಪಿಗೆ ಬಂತು.ಎದೆಯಲ್ಲಿ ಪ್ರೀತಿಯನ್ನು ನಾಟದ ಧರ್ಮ ಇದ್ದರೆಷ್ಟೊ ಬಿಟ್ಟರೆಷ್ಟೊ ! *ಪ್ರೀತಿ ಬಟ್ಟಲು* *ಫಲವತ್ತಾದ ಪೈರನು ಬೆಳೆದ ರಾಶಿಯಾದ ಕೈಗಳು**ಹುತ್ತದ ಬಳ್ಳಿಯಲ್ಲಿ ಒಡಲ ಸವಿಗಾಗಿ ತಡಕಾಡಿದವು* ರೈತ ತನ್ನ ನೆಲದವ್ವನ್ನು ಪ್ರೀತಿಯಿಂದ ಬೆಳೆಗಳನ್ನು ಬೆಳೆದು ಜಗಕ್ಕೆ ಅನ್ನವನ್ನು ನೀಡಿದ ಕೈಗಳು ಇಂದು ಆಧುನಿಕ ಕಾಲದ ವಿಷಪೂರಿತ ಕ್ರಿಮಿನಾಶಕಗಳ ಹಾವಳಿ,ನೀರಿಲ್ಲದೆ ಒಣ ಭೂಮಿಯಲ್ಲಿ ನಾಳೆಯ ಕಾಳಿಗಾಗಿ ಪರಿತಪಿಸುವ ಕಾಲ ಬಂದಿದೆ. *ಕುರಿ ಕಾಯುವ ನನ್ನೊಳಗ* *ನೇಗಿಲ ಹೂಡೋ ನನ್ನೊಳಗೆ ನೀನು ಹದವಾದ ಮಣ್ಣಿನ್ಹಂಗ**ನೆಲಕ್ಕುರುಳೋ ಎಲೆಗಳ ದನಿಯಲಿ ಹೊಸ ಚಿಗುರಿನ ನೆಲೆಯ್ಹಂಗ* ಈ ಷೇರ್ ಗಮನಿಸಿದಾಗ ನೇಗಿಲಯೊಳಗೆ ಅಡಗಿದೆ ಕರ್ಮವೆಂಬ ಕುವೆಂಪು ನೆನಪಿಗೆ ಬರುತ್ತದೆ.ಬದುಕಿನ ಬಹು ಪಾಲು ನಾವು ಮಣ್ಣಿನೊಂದಿಗೆ ಕಲಿಯಬೇಕು ಅವಳು ಹದಭರಿತವಾದ ಮಣ್ಣು ಎಂಬ ಹೋಲಿಕೆ ಸಹಜವಾಗಿದೆ.ಹೊಸ ಬೆಳಕಿನಲಿ ಜೀವನದಲಿ ನೆಲಕ್ಕೆ ಎಲೆಗಳು ಉರುಳಿ ಮರಳಿ ನೆಲದ ಋಣವನ್ನು ತೀರಿಸಬೇಕು,ಮತ್ತೆ ಹುಟ್ಟುವ ವಸಂತ ಚಿಗುರಿನ ನೆಲೆಯ್ಹಂಗ ಬಹಳ ಮಾರ್ಮಿಕವಾದ ಸಾಲುಗಳು. *ನೆಲದ ಮಾತಾಗಿ ಉಳಿದವು* *ಅಲೆಯ ಬಡಿತಗಳ ಅರಗಿಸಿ ಮುತ್ತುಗಳ ದನಿಯಾತು ಬೆವರು**ಹಜ್ಜೆಗಳ ಸವೆತ ಉಂಡ ರಸ್ತೆಗಳು ದೀಪಗಳ ನೆರಳಾಗಿ ಉಳಿದವು* ಕಷ್ಟಕಾರ್ಪಣ್ಯಗಳನ್ನು ನುಂಗಿದ ಜೀವ ಮುಂದೊಂದು ದಿನ ಸಿಹಿಯಾದ ಸವಿಗಳಿಗೆ ಅನ್ನು ಸವಿಯಬಲ್ಲದು ಅದರಂತೆ ಇಟ್ಟ ಹೆಜ್ಜೆ ಹೋರಾಟದ ಬದುಕಿನಲ್ಲಿ ಕಳೆದು ಹೋದ ದಿನಗಳಲ್ಲಿ ಆ ರಸ್ತೆಗಳೇ ಮುಂದೆ ನಿನಗೆ ದಾರಿದೀಪವಾಗಿ ಬೆಳಗಬಲ್ಲ ವೆಂಬ ಶ್ರಮಿಕರ ದಮನಿತರ ನುಡಿ ಈ ಸಾಲಿನಲ್ಲಿ ಕಾಣಬಹುದು. ಅವರ ಗಜಲ್ ಗಳನ್ನು ಗಮನಿಸುತ್ತಾ ಹೋದರೆ ಬಹುತೇಕ ಗಜಲ್ ಗಳು ತನ್ನ ಸುತ್ತಮುತ್ತಲಿನ ಅನುಭವಿಸಿದ ನೆಲಮೂಲದ ಅನುಭವಗಳ ಕಟ್ಟಿಕೊಟ್ಟ ಗಜಲ್ ಸಂಕಲನ ಎಂದು ಹೇಳಬಹುದು ಆದರೆ ಈ ಗಜಲ್ ಸಂಕಲನದಲ್ಲಿ 35 ಗಜಲ್ ಗಳು ಒಳಗೊಂಡಿವೆ. ಆದರೆ ಕವಿ ಏಕೋ ಒಂದೇ ಬಗೆಯ ಪ್ರಕಾರಕ್ಕೆ ಸೀಮಿತಗೊಂಡಂತೆ ಚೌಕಟ್ಟನ್ನು ಹಾಕಿಕೊಂಡಿದ್ದಾರೆ ಎಂದು ನನಗನಿಸುತ್ತದೆ.ಇವರ 30 ಗಜಲ್ ಗಳು ಮುರದ್ದಪ್  ಗಜಲ್ ಗಳಾಗಿದ್ದು ,ಉಳಿದ 5 ಗಜಲ್ ಗಳು ಗೈರಮುರದ್ದಪ್, ಒಟ್ಟಾರೆಯಾಗಿ ಒಂದೇ ಪ್ರಕಾರದ ಗಜಲ್ ಪುಸ್ತಕ ಮಾಡಿದ್ದರೆ ಓದುಗರಿಗೆ ಇನ್ನೂ ಚೆನ್ನಾಗಿತ್ತೇನೋ ಓದಿದಾಗ ಅನಿಸಿದ ಭಾವನೆ. *ಗಜಲ್ ಗಳೆಂದರೆ ಹಾಡುಗಬ್ಬ* ಸುಲಭವಾಗಿ ಹಾಡಿ ಅವುಗಳು ನಮ್ಮ ಮನವನ್ನು ತನಿಸಿ ಮತ್ತೆ ಮತ್ತೆ ನಮ್ಮೊಳಗೆ ಧ್ಯಾನಿಸುವಂತೆ ಮಾಡಬೇಕು ಇವರ ಬಹುತೇಕ ಗಜಲ್ಗಳು ಹಾಡಲು ಬರುವುದಿಲ್ಲ ,ಆದರೆ ಭಾವನೆ ತೀವ್ರತೆ, ಅಭಿವ್ಯಕ್ತಿ ಉತ್ಪ್ರೇಕ್ಷೆ ಎಲ್ಲವನ್ನು ಸೇರಿಸಿ ಒಂದು ಕ್ಷಣ ನಮ್ಮೊಳಗೆ ಅವುಗಳನ್ನು ಚಿಂತಿಸುವ ಪ್ರಯತ್ನ ಮಾಡಿದ್ದಾರೆ. ಇವರ ಗಜಲ್ಗಳು ಕಂಡಂತೆ ಕಾಫಿಯಾ ಮತ್ತು ರದೀಪ್ ಬಹಳ ಉದ್ದನೆಯ ಸಾಲುಗಳನ್ನು ಒಳಗೊಂಡಿವೆ , ರದೀಪ್ ಮತ್ತು ಕಾಫಿಯಾ ಕೇಳಿದ ತಕ್ಷಣ ವ್ಹಾ ಎನ್ನುವ ಉದ್ಗಾರ ನಮ್ಮೊಳಗೆ ಪ್ರಜ್ವಲಿಸಬೇಕು.ಆ ರೀತಿಯಲ್ಲಿ ಸಮ ಸಾಲುಗಳುಳ್ಳ ಸರಳ ಪದಗಳನ್ನು ಬಳಸಿದರೆ ಇನ್ನೂ ಚೆನ್ನಾಗಿರುತ್ತದೆಯೆಂದು ಹೇಳಬಹುದು. ಕವಿಯು ಹೊಲ, ರೆಂಟೆ,ಕುಂಟೆ, ಮಣ್ಣು ,ಎಲೆ, ಬೀಜ, ಕಣ್ಣು, ಹೀಗೆ ಇತ್ಯಾದಿ ಪದಗಳ ಸುತ್ತಲೂ ಗಜಲ್ ಗಳು ಗಿರಕಿ ಹೊಡೆದುವೆಂಬ ಭಾವನೆ ವ್ಯಕ್ತವಾಗುತ್ತದೆ , ಹಲವು ಕಡೆ ಬಳಸಿದ ಪದಗಳೇ ಪದೇಪದೇ ಪುನರ್ ಬಳಕೆಯಾಗಿವೆ.ಇಂಥ ಕಡೆ ಸ್ವಲ್ಪ ಗಮನಿಸಬೇಕೆಂಬ ಗಜಲ್ ಓದುಗನಾಗಿ,ಗಜಲ್ ಕೇಳುಗನ ವಿನಂತಿ. ಹೀಗೆ ಇವರ ಗಜಲ್ ಸಂಕಲನವನ್ನು ಗಮನಿಸಿದಾಗ ಚಂದನೆಯ ಮುಖಪುಟ ಗಜಲ್ ಗಳಿಗೆ ತಕ್ಕ ಹಾಗೆ ಇರುವ ರೇಖಾ ಚಿತ್ರಗಳು. ಗಜಲ್ ನ ಮೂಲ ಆಶಯವನ್ನು ಕನ್ನಡೀಕರಿಸುವುದು ಬಹಳ ಕಷ್ಟದ ಕೆಲಸ ಆದರೂ ಕವಿವರ್ಯ ಬಹಳ ಜಾಣ್ಮೆಯಿಂದ ಜನಪದಿಯ ಶೈಲಿಯಲ್ಲಿ ಆಡುಮಾತಿನಲ್ಲಿ, ಇವರ ಗಜಲ್ ಕಟ್ಟುವಗಾರಿಕೆ ವಿಸ್ಮಯಗೊಳಿಸುತ್ತದೆ, ನಿತ್ಯ ಬದುಕಿನ ಪ್ರೀತಿಯ ಹುಡುಕಾಟ ನೆಲದ ಮೇಲಿರುವ ಅದಮ್ಯ ಪ್ರೀತಿ,ಕೆಲವು ಕಡೆಗೆ ಮತ್ಲಾ ಮಕ್ತಾ ಸೂಜಿಗಲ್ಲಿನಂತೆ ಗಮನ ಸೆಳೆದು ನಿಲ್ಲಿಸಿಬಿಡುತ್ತದೆ, ಹಿರಿಯರು ಹೇಳಿದಂತೆ ಅನುಭಾವದಲ್ಲಿ ಅಮೃತವೂ ತುಂಬಿರುತ್ತದೆ ಹಾಗೆ ತತ್ವಪದಗಳಲ್ಲಿ,ವಚನಗಳ ಆಗಲಿ, ಸೂಫಿ ಸಾಹಿತ್ಯ,ಹೀಗೆ ಎಲ್ಲವೂ ಆ ಕಾಲಘಟ್ಟದ ನಡುವೆ ನಮ್ಮ ನೆಲವನ್ನು ಒಂದು ಕ್ಷಣ ಮಂತ್ರಮುಗ್ಧ -ರನ್ನಾಗಿ ಆಗಿನ ವ್ಯವಸ್ಥೆಯನ್ನು ಬಿಂಬಿಸುತ್ತದೆ, ಇವರು ಕೂಡ ತಮ್ಮ ಸುತ್ತಲಿನ ಪರಿಸರವನ್ನು ಬಿಂಬಿಸಿ ಗಜಲ್ ಮೂಲಕ ಪುಸ್ತಕವನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ ನಮ್ಮೆಲ್ಲರನ್ನು ಹೊಸ ಬಗೆಯ ಒಳನೋಟವನ್ನು ಇಣುಕಿ ಇಣುಕಿ ನೋಡುವಂತೆ ಈ ಪುಸ್ತಕವು ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಪುಸ್ತಕ ಬಹಳ ಆಕರ್ಷಕವಾಗಿದೆ ಜೊತೆಗೆ ಬಳಸಿದ ಕಾಗದಗಳು ಮತ್ತು ಮುದ್ರಣವನ್ನು ಸುಂದರವಾಗಿ ಮಾಡಿದ್ದಾರೆ,ಅವರಿಗೂ ಪ್ರೀತಿಯ ಸಲಾಂ. ಹೊಸ ಪುಸ್ತಕಗಳು ಬಂದಾಗಲೆಲ್ಲ ಆ ಪುಸ್ತಕವನ್ನು ಕೊಟ್ಟು ಓದಿನ ರುಚಿ ಹಚ್ಚುವ ಬೆನ್ನುಬಿದ್ದು ಅದರ ಬಗ್ಗೆ ಟಿಪ್ಪಣಿ ಬರೆಸುವ ಕಥೆಗಾರರಾದ ಅನಿಲ್ ಗುನ್ನಾಪೂರ ಅವರಿಗೆ ಪ್ರೀತಿ ಪೂರ್ವಕವಾದ ಧನ್ಯವಾದಗಳು. ಪುಸ್ತಕದ ಹೆಸರಿನಲ್ಲಿಯೂ ಕೂಡ ವಿಸ್ಮಯ ಅಲೆವ ನದಿ* ಈ ಪುಸ್ತಕವನ್ನು ನೀವುಗಳು ಕೊಂಡು ಓದಿ ನಿಮಗೂ ಕೆಲವು ಬದುಕಿನ ಅಲೆದಾಟದ ಚಿತ್ರಣವು ದೊರಕುತ್ತದೆ ಎಂದು ಹೇಳಬಹುದು, ಸಾಹಿತ್ಯಲೋಕಕ್ಕೆ ಈ ರೀತಿಯ ಇನ್ನೂ ಹೆಚ್ಚಿನ ಪುಸ್ತಕಗಳು ವಿಭಿನ್ನವಾಗಿ ಕಿರಸೂರ ಗಿರಿಯಪ್ಪನವರಿಂದ ಬರಲಿ ಎಂದು ಶುಭ ಹಾರೈಸುತ್ತೇನೆ  **************************************** ಮುತ್ತು ಬಳ್ಳಾ ಕಮತಪುರ

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಅಂತರಂಗದ ಆಲಾಪ ಕವಿತೆಗಳು

ಪುಸ್ತಕ ಪರಿಚಯ ಅಂತರಂಗದ ಆಲಾಪ   ಕವಿತೆಗಳು ಅಂತರಂಗದ ಆಲಾಪ   ಕವಿತೆಗಳು ಸುಜಾತಾ ಎನ್        ” ಬೆಚ್ಚನೆಯ ಕೌದಿಯ ತುಂಡುಗಳು”             ಸುಜಾತಾ ಎನ್ ಮೈಸೂರಿನವರು. ಭಾರತೀಯ ಜೀವವಿಮಾ ನಿಗಮದ ಉದ್ಯೋಗಿ. ಕಾಲೇಜು ದಿನಗಳಲಿ ಬರವಣಿಗೆ ಇದ್ದರೂ ಎಲ್ಲವನೂ ಬಿಟ್ಟು ನೌಕರಿ, ಸಂಸಾರದಲ್ಲಿ ನೆಲೆನಿಂತು ವಾತಾವರಣಕ್ಕೆ ತಕ್ಕಂತೆ ಕಳೆದ ಮೂರ್ನಾಲ್ಕು  ವರ್ಷಗಳಿಂದ ಮತ್ತೆ ಬರವಣಿಗೆಯಲಿ ನಿರತರಾಗಿರುವರು. ಕಥೆ,ಕವಿತೆ, ವಿಮರ್ಶೆ ,ಲೇಖನಹೀಗೆ ಎಲ್ಲ ಪುಟಗಳನ್ನೂ ತಿರುವಿ ನೋಡಿದವರೇ. ಫೇಸ್ಬುಕ್ , ವಾಟ್ಸಪ್ ಗುಂಪುಗಳ ಮೂಲಕ ತಮ್ಮದೇ ಆದ ವಿಶಿಷ್ಟ ಓದುಗರನ್ನು ಕಲೆಹಾಕಿ , ಸಂಘಟಿಸಿ ಸ್ಪರ್ಧೆ , ಬಹುಮಾನಗಳ ಮೂಲಕ  ತಾವೂ ಬರೆದರು ತಮ್ಮ ಸುತ್ತಮುತ್ತಲಿನವರನ್ನೂ ಬರಹಕೆ ತೊಡಗಿಸಿಕೊಳ್ಳಲು ಪ್ರೇರೇಪಿಸಿ ಕೊಂಡ ಎಂ.ಕಾಂ. ಪಧವೀಧರೆಯಾದ ಇವರಿಗೆ ಈಗ ಕನ್ನಡ ಸಾಹಿತ್ಯವೇ ಉಸಿರಾಗಿದೆ. ಬೆಂಗಳೂರಿನ ಹೆಚ್.ಎಸ್.ಆರ್.ಎ ಪ್ರಕಾಶನ ಪ್ರಕಟಿಸಿದ ಸುಜಾತಾ ಅವರ ಮೊದಲಿನ ಸಂಕಲನವಾದ ಈ  ” ಅಂತರಂಗದ ಆಲಾಪ ” ದ  ನೂರು ಪುಟಗಳಲ್ಲಿ  76 ಕವಿತೆಗಳಿವೆ. ತನ್ನ ಮುತ್ತಮುತ್ತಲಿನ ಸಾಮಾನ್ಯ ಜನರು ಕಂಡುಂಡ  ಸಂಗತಿಗಳೇ ಇವರ ಕವನಕ್ಕೆ ಸ್ಪೂರ್ತಿಯಾಗಿದೆ. ಹೊಸ ಹುಡುಗ, ಹೊಸ ಕ್ಯಾಮರಾ ಕೊಂಡಾಗ ಕಂಡದ್ದೆಲ್ಲಾ  ಕ್ಲಿಕ್ಕಿಸುವಂತೆ ಸುಜಾತಾ ತಮ್ಮ ಅಕ್ಷರಗಳ ಮೂಲಕ ಉತ್ಸಾಹದಲ್ಲಿ ಕಂಡುಕಂಡದ್ದೆಲ್ಲಾ  ಮನನ ಮಾಡಿ  ಕವಿತೆಯ ರೂಪ ನೀಡಿರುವರು.   ಸಂಸಾರ , ಕಛೇರಿಯ ಕೆಲಸದ ಒತ್ತಡದ ನಡುವೆಯೂ  ಸದಾ ಕ್ರಿಯಾಶೀಲರಾದ ಇವರು ಕನ್ನಡ ಪ್ರೀತಿಗೆ ಅಭಿನಂದನಾರ್ಹರು ಮನೆ ಮನಗಳಲಿ ತುಂಬಿರಲು ಸ್ನೇಹ ಸೌಹಾರ್ದ ಸಂತೃಪ್ತಿಯ ಅನುಭೂತಿ ತುಂಬಿರುವ ಮನ ಆರ್ದ ಪರಸ್ಪರ ಸಹಕಾರದ ಸಹಬಾಳ್ವೆಯದೇ ಆನಂದ ವಿಶ್ವಕುಟುಂಬದೀ ಪರಿಕಲ್ಪನೆಯ ನಾ ಇಷ್ಟ ಪಟ್ಟೆ. ” ನಾ ಇಷ್ಟಪಟ್ಟೆ ” ಕವಿತೆಯಲಿ ಮಾನವೀಯ ಮೌಲ್ಯಗಳ ಕುರಿತು ಬರೆಯುತ್ತಾ , ಸ್ನೇಹ ಸೌಹಾರ್ದತೆ ಸಂತೃಪ್ತಿ , ಸಹಕಾರದ ಬಾಳ್ವೆಯಿಂದ ನಾವು ವಿಶ್ವಕುಟುಂಬದ ಪರಿಕಲ್ಪನೆಯಲಿ ಬದುಕಬೇಕು. ದ್ವೇಷ , ದುರಹಂಕಾರದಿಂದ ಬದುಕಿ ಏನು ಪ್ರಯೋಜನ. ಕಂದನ ಮುಗ್ಧ ನಗು , ಬಣ್ಣ ಬಣ್ಣದ ಹೂವು , ಜುಳುಜುಳು ನಿನಾದದ ನದಿ  ಇವುಗಳಂತರಂಗವ ಕಂಡು ನಾವು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವದೇ ತನಗೆ ಇಷ್ಟ ಎಂದು ಕವಿ ತಮ್ಮ ಮನದಾಳದ ಇಂಗಿತವನ್ನು ಅಕ್ಷರಗಳಾಗಿಸಿರುವರು. ” ಅಭಿನೇತ್ರಿ ” ಕವಿತೆಯಲಿ ಜೀವನದ ರಂಗಭೂಮಿಯಲಿ ಭೂಮಿಕೆಗಳ ನಿರ್ವಹಿಸುತ್ತಾ ಅಸ್ಮಿತೆಯಾಗಿ ತನ್ನ ಅಸ್ತಿತ್ವದ  ಸುಳಿವ ಹೊಳಹಿಸುತ್ತಾ ಬಾಳ ಗಮ್ಯದ ಕಡೆಗೆ ಪಯಣಿಸುತಿಹ ಯಾತ್ರಿ ಓ ಹೆಣ್ಣೆ ನಿಜ ಅರ್ಥದಲಿ ನೀನು ಶ್ರೇಷ್ಠ ಅಭಿನೇತ್ರಿ. ಎಂದು ಹೆಣ್ಣಿನ ಅಸ್ಮಿತೆಗಾಗಿ  ಮನದ ಮಾತನಾಡಿರುವರು. ಹೆಣ್ಣು ಈ ಭೂಮಿಗೆ ಬರುವ ಮೊದಲೇ ಸಾಕಷ್ಟು ಅವಮಾನವನ್ನು ಸ್ವಾಗತಿಸಬೇಕಿದೆ. ಅವಳು ಮುಂದೆ ನಿರ್ವಹಣೆ ಮಾಡಬೇಕಾದ ಪಾತ್ರಗಳು ಕಣ್ಮುಂದೆ ಬರುವದು. ಮಗಳು / ಸಹೋದರಿ/ ಸಂಗಾತಿ/ ತಾಯಿ…. ಹೀಗೆ ಎಲ್ಲವೂ ಆಗಿರುವಳು ಹೆಣ್ಣು. ಆದರೂ ಅವಳಿಗೆ ಅವಮಾನ ಅನುಮಾನಗಳು ಸದಾ ಕಟ್ಟಿಟ್ಟ ಬುತ್ತಿ. ಹೆಣ್ಣೆಂದರೆ  ಎಲ್ಲಾ ಪಾತ್ರಗಳನ್ನೂ ನಿರ್ವಹಿಸುವ ಅಭಿನೇತ್ರಿ ಎಂದಿರುವರು. ಹವ್ಯಾಸಿ ಬರಹಗಾರರಾದ ಮೈಸೂರು ನಾಗೇಶ , ಈ ಪುಸ್ತಕಕೆ ಮುನ್ನುಡಿ ಬರೆಯುತ್ತಾ ….. ” ನಿರಂತರ ಕಾವ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಸುಜಾತಾರವರದು ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಕಾಣಿಸುವ ಹೆಸರು. ದುಡಿಯುವ ನಡುವಿನ ಬಿಡುವಲ್ಲಿ ಬರೆದ ಕವನಗಳನ್ನು ಪ್ರಕಟಿಸುತ್ತಲೋ, ಹಲವಾರು ಗುಂಪಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಲೋ, ಬರೆಯುವ ಇತರ ಬರಹಗಾರರನ್ನು ಪ್ರೋತ್ಸಾಹಿಸುತ್ತಲೋ, ಒಂದಲ್ಲ ಒಂದು ರೀತಿಯಲ್ಲಿ ಸಕ್ರಿಯವಾದ ವ್ಯಕ್ತಿತ್ವ ಇವರದು.ಹೆಣ್ಣಿನ ಅಂತಃಕರಣ, ಮನಃಸತ್ವಗಳ ಕ್ಯಾನ್ವಾಸಿನಲ್ಲಿ ಬಿತ್ತನೆಯಾಗುವ ವೈವಿಧ್ಯಮಯ ಸಂಗತಿಗಳೆಲ್ಲದ್ದಕ್ಕೂ ಕವನದ ದಿರಿಸುಡಿಸಿ ನಲಿವಿನ ರಮ್ಯೋದ್ಯಾನವಾಗಿಸುವ ಪ್ರಯತ್ನ ಇಲ್ಲಿ ಸಾಕಾರ. ವಸ್ತು, ವಿಷಯದ ಪರಿಮಿತಿ ಇಲ್ಲದೇ ದೈನಂದಿನವೆಲ್ಲದರ ಪ್ರಭಾವವನ್ನೇ ಸರಕಾಗಿಸಿಕೊಂಡ ಕವಿತೆಗಳಿವು ” ಎಂದಿರುವರು. ಹೆಣ್ಣು ತ್ಯಾಗಮಯಿ ಸಹನಶೀಲೆಎಂತೆಲ್ಲಾ ಹೊಗಳಿಕೆಯ ಪದವಿಯಿತ್ತವರು.ದುರಂತವೆಂದರೆ ಕಾಣದ್ದು ಆ ಹೊನ್ನಶೂಲದಡಿ ಭಾವನೆಗಳಿಗಾಗುತ್ತಿಹ ಶೋಷಣೆಯ ಅರ್ಧಸತ್ಯ. ಎನ್ನುತ್ತಾ “ಅರ್ಧಸತ್ಯ ” ಕವಿತೆಯಲ್ಲಿ  ಹೆಣ್ಣಿನ ನೋವನ್ನು ಅರ್ಧಸತ್ಯದಲಿ ಬಿಚ್ಚಿಡುತ್ತಾ ಹೋಗುವರು. ಈ ಸಮಯ ಸಾಧಕರದು ಬರೀ ಹೊಗಳಿಕೆಯೆ.ತಮ್ಮ ಬೇಳೆ ಬೇಯಿಸಿಕೊಳ್ಳುವ ಮುಖವಾಡಿಗರು ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸಿ ನಂತರ ಪ್ರಪಾತಕ್ಕೆ ನೂಕಿಬಿಡುವರು. ಬೂದಿ ಮುಚ್ಚಿದ ಕೆಂಡದಂತೆ ಕಾಣುವದೆಲ್ಲಾ ಅರೆಸತ್ಯವೇ ! ಇವೆಲ್ಲವೂ ಸುಳ್ಳಿನ ಕವಚದಲಿ ಹುದುಗಿರುವುದೇ ಆಗಿರುತ್ತದೆ. ಯಾವುದೇ ದೇಶವಿರಲಿ , ಭಾಷೆಯಿರಲಿ , ಧರ್ಮವಿರಲಿ ಅಲ್ಲೆಲ್ಲಾ ಹೆಣ್ಣಿನ ಶೋಷಣೆಗಳು ನಿತ್ಯನಿರಂತರವೇ . ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಅರಿತ ಸುಜಾತಾರವರ ಸಹೋದರಿ ವೈಶಾಲಿ ರಾವ್ ಅಕ್ಕನ ಕವಿತೆಗಳ ಕುರಿತು ಬರೆಯುತ್ತಾ…..ಹೆಸರಿಗೆ ತಕ್ಕಂತೆ ಎಲ್ಲಾ ಕವನಗಳೂ ಈ ಕವಯತ್ರಿಯ ಅಂತರಂಗದ ಆಲಾಪವಾಗಿದೆ. ಸಂಗೀತದಲ್ಲಿ, ರಾಗಾಲಾಪನೆಯಿಂದ ಆಯಾ ರಾಗದ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಮೂಡಿಸುವದು ಹೇಗೆ ಮುಖ್ಯವೋ, ಅದೇ ರೀತಿ ಸುಜಾತಾರವರು ತಮ್ಮ ಅಂತರಂಗದ ಆಲಾಪನೆಯಿಂದ ಪ್ರತಿಯೊಂದು ಕವಿತೆಗೂ ನಿರ್ದಿಷ್ಟ ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ಬದುಕಿನ ನಾಗಾಲೋಟದಲ್ಲಿ ಸಂಬಂಧಗಳು ಕಾಣೆಯಾಗುತ್ತಿದೆ ; ಆದರೆ ದುರದೃಷ್ಟವೆಂದರೆ ಸಂಬಂಧಗಳಿರಲಿ, ನಮ್ಮನ್ನು ನಾವೇ ಕಾಣದಂತಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಭಾವನೆಗಳಿಗೆ ಅಕ್ಷರ ರೂಪ ನೀಡುವದರೊಂದಿಗೆ, ಪದಗಳ ಮಧ್ಯೆ ಪದಪುಂಜಗಳ ಲಾಲಿತ್ಯವನ್ನೂ ಸೇರಿಸಿದರೆ ಮಾತ್ರ ಅದು ಕವಿತೆ ಎನಿಸಿಕೊಳ್ಳುವದು. ಆ ಜಾಣ್ಮೆಯನ್ನು ಸುಜಾತಾ ಸಾಬೀತು ಪಡಿಸಿರುವರು…. ಎಂದಿರುವರು. ” ಅನ್ನದಾತ ” ಕವಿತೆಯಲ್ಲಿ ದೇಶದ ಬೆನ್ನೆಲುಬಾದ ರೈತರ ಕುರಿತಾಗಿ  ಬರೆಯುತ್ತಾ… ಆ ಪ್ರಕೃತಿ ಮಾತೆಗೂ ನಿನ್ನ ಮೇಲೆ ಕೋಪ  ಆಗಾಗ ತೋರುವಳು ತನ್ನ ಪ್ರತಾಪ ಅತಿವೃಷ್ಟಿ ಅನಾವೃಷ್ಟಿ ಪ್ರವಾಹಗಳ ಪ್ರಕೋಪ ಯಾವುದೇ ಇರಲಿ ಹೆಚ್ಚಿಸುವದು ಮನದ ತಾಪ ಎನ್ನುತ್ತಾ….. ನೀನು ಪಟ್ಟ ಶ್ರಮಕ್ಕೆ ತಕ್ಕ ಬೆಲೆ ನಿನ್ನ ಅಸ್ತಿತ್ವಕ್ಕೆ ಸೂಕ್ತ ನೆಲೆ ಸಿಕ್ಕಾಗ ಮಾತ್ರ ದೇಶದ ಉನ್ನತಿ ಇದಿಲ್ಲದಿದ್ದರೆ ಭವಿಷ್ಯ ಅಧೋಗತಿ.. ಎಂಬ ಅರಿವಿನೊಂದಿಗೆ  ರೈತನ ಬವಣೆಯನ್ನು ತೀರಾ ಸಾಮಾನ್ಯ ಜನರೂ ಅರ್ಥೈಸುವಂತೆ ಕವಿ ಇಲ್ಲಿ ತಮ್ಮ ಕವನವನ್ನು ಹೊಸೆದಿರುವರು. ಈ ಪುಸ್ತಕಕೆ ಬೆನ್ನುಡಿ ಬರೆದ ಕವಿ ಮನಸಿನ ಗುರುಮಾತೆ ಎಂ.ವಿಜಯ ಜಯಪ್ರಕಾಶ , ” ಸಂಪಾದನೆ ಮತ್ತು ಸುಖದ ಜೀವನದತ್ತ ವಾಲುತ್ತಿರುವ ಈ ಹೊತ್ತಿನ ಸಂದರ್ಭದಲ್ಲಿ  ಸುಜಾತಾ ವಿಶಿಷ್ಟವಾಗಿ ನಿಲ್ಲುತ್ತಿರುವದು ಅಭಿಮಾನದ ಸಂಗತಿಯಾಗಿದೆ. ತಾಜಾ  ಪ್ರತಿಭೆಯಾದ ಸುಜಾತಾ ರವೀಶ್ ರಿಗೆ ತಮ್ಮ ಬಾಲ್ಯದ ಬದುಕಿನ ಅನುಭವಗಳು ಬರವಣಿಗೆಯ ಮೇಲೆ ಪ್ರಭಾವ ಬೀರಿರುವದನ್ನು ಇಲ್ಲಿಯ ಕವನಗಳಲ್ಲಿ ಕಾಣಬಹುದು. ಕ್ರಿಯಾಶೀಲ ಮನಸ್ಸಿನ ಇವರಿಗೆ  ಸಂಬಂಧಗಳು, ಪ್ರಕೃತಿ, ಸಾಮಾಜಿಕ ಜೀವನದ ಬಗ್ಗೆ ಅತೀವ ಆಸಕ್ತಿ ಇರುವುದು ವ್ಯಕ್ತವಾಗುತ್ತದೆ “. ಎಂದಿರುವರು. ಮತ್ತೆ ಅಮ್ಮನ ಮಡಿಲ ಸೇರಿ ಮಗುವಾಗಿ ಬಿಡುವಾಸೆ ಬೆರಗುಗಣ್ಣಲಿ ಹೊಸದಾಗಿ ಈ ಜಗವ ನೋಡುವಾಸೆ ಪೂರ್ವಗ್ರಹಗಳ ಹಂಗಿಲ್ಲದೇ ಹೊಸ ನಂಟು ಬೆಸೆವಾಸೆ ಮತ್ತೊಮ್ಮೆ ಬಾಲ್ಯವೆಂಬ ಕಡಲಲಿ ಮುಳುಗಿ ಬಿಡುವಾಸೆ ಎಂದು ” ಮಗುವಾಗಿ ಬಿಡುವಾಸೆ ” ಕವಿತೆಯಲ್ಲಿ ಮಗುಮನವನ್ನು ಬಿಚ್ಚಿಡುವರು. ಈ ಧಾವಂತ ಬದುಕಿನಲಿ ಆದೇ ದ್ವೇಷ ಅಸೂಯೆಗಳು , ನಂಬಿಕೆಗಳು ಕಳೆದು ಹೋಗಿದೆ. ಎಲ್ಲೆಲ್ಲೋ ಹಣದ ವ್ಯಾಮೋಹ. ಈ ಬದುಕೇ ಸಾಕಾಗಿ ಬಿಟ್ಟಿದೆ. ಅದಕಾಗಿ ಎಲ್ಲವನೂ ಮರೆತು ಅಮ್ಮನ ಮಡಿಲು ಸೇರಿ ಬಾಲ್ಯವೆಂಬ ಕಡಲಲಿ ಮಗುಮನದಿಂದ ಮುಳುಗುವಾ ಎಂದು ಕವಿ ಆಶಿಸುವರು. ದೇಶ ಕಾಯುವ ಸೈನಿಕನ ಕುರಿತಾಗಿಯೂ ” ಪುಳಕ “ ಕವಿತೆಯಲ್ಲಿ ಬರೆಯುತ್ತಾ , ಇವರ ನಿಸ್ವಾರ್ಥ ಸೇವೆ ನೆನೆದು ಧನ್ಯತೆಯ ಪುಳಕವಾಗುವದು ಎಂಬ ಧನ್ಯತಾಭಾವ  ಮೈಗೂಡಿಸಿಕೊಂಡಿರುವರು. ಈ ಪುಸ್ತಕದ ಕವಿತೆಗಳೊಡತಿ ಸುಜಾತಾ ಎನ್.” ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯ ಓದುತ್ತಲೇ ಬೆಳೆದಿದ್ದೆ.ಈಗ ನಾಲ್ಕು ವರ್ಷಗಳಿಂದೀಚೆ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ತೊಡಗಿಸಿಕೊಂಡಾಗ ಸಾಹಿತ್ಯ ಚಟುವಟಿಕೆಗಳು ಮತ್ತೆ ಗರಿಗೆದರಿದವು. ಸುಪ್ತವಾದ ಕವಿತೆಯ ಬರವಣಿಗೆಗೆ ಮರುಚಾಲನೆ ದೊರೆಯಿತು. ಮನಸ್ಸಿನ ತೀರಕ್ಕೆ ಭಾವನೆಗಳ  ಅಲೆ ಅಪ್ಪಳಿಸಿದಾಗ ಹುಟ್ಟಿದ ಅಕ್ಷರದ ಸಾಲುಗಳೇ ಈ ಕವನ ಸಂಕಲನ ” ಎಂದಿರುವರು. ಹಳೆಯ ಬಟ್ಟೆಗಳ  ಸಣ್ಣ ಚೂರುಗಳಾಗಿ ಮಾಡಿ ಹೊಲೆಯುವ ಹಾಗೆ ಮೆತ್ತಗಿನ ಬೆಚ್ಚಗಿನ ಕೌದಿ ಎಂಬ ಮನದ ಸುಜಾತಾರವರು ಈ ಎಲ್ಲಾ ಕವಿತೆಗಳನ್ನೂ ಕೌದಿಯ ತೆರನಾಗೇ ವೈವಿಧ್ಯಮಯ ವಿಷಯಗಳಿಂದ ಹೆಣೆದಿರುತ್ತಾರೆ. ಇವರ ಕವಿತೆಗಳು” ಬೆಚ್ಚನೆಯ ಕೌದಿಯ ತುಂಡುಗಳು ” ಇದ್ದಂತೆ. ಕವಿತೆಗಳೆಂದರೆ ಪ್ರಾಸದಿಂದ , ಪ್ರಾಸಕ್ಕಾಗಿ ಬರೆಯುವ ಸಾಲುಗಳಲ್ಲ ಎಂಬುದನ್ನು ಮನಗೊಂಡು ,ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ,  ಕನ್ನಡ ಸಾಹಿತ್ಸವನ್ನು ಅಭ್ಯಸಿಸಿ , ಇದೇ ಹುರುಪಿನಿಂದ ಬರೆದರೆ ಇವರಿಂದ ಮುಂದಿನ ದಿನದಲ್ಲಿ ಇನ್ನೂ ಒಳ್ಳೆ ಕವಿತೆಗಳನ್ನು ನಿರೀಕ್ಷಿಸುವಾ ಎಂದು ಹಾರೈಸಿ , ಇವರ ಮೊದಲವೇ ಸಂಕಲನಕ್ಕಾಗಿ  ” ನಾಗಸುಧೆ ” ಯಿಂದ ಶುಭಕೋರಿ ಅಭಿನಂದಿಸುವೆ. ********************************************** ಪ್ರಕಾಶ ಕಡಮೆ

ಅಂತರಂಗದ ಆಲಾಪ ಕವಿತೆಗಳು Read Post »

ಪುಸ್ತಕ ಸಂಗಾತಿ

ಬುಡಬುಡಿಕೆ’ ಮಕ್ಕಳ ಕವನ ಸಂಕಲನ

ಪುಸ್ತಕ ಪರಿಚಯ ಬುಡಬುಡಿಕೆ’ ಮಕ್ಕಳ ಕವನ ಸಂಕಲನ `ಬುಡಬುಡಿಕೆ’ ಮಕ್ಕಳ ಕವನ ಸಂಕಲನ. ಈ ಕೃತಿಯ ಲೇಖಕರು ಅಕ್ಕಿಮಂಗಲ ಮಂಜುನಾಥ. ನುಡಿ ಪುಸ್ತಕ ಪ್ರಕಾಶನ ಶ್ರೀ ಅಕ್ಕಿಮಂಗಲ ಮಂಜುನಾಥ ಅವರು ಕೃಷಿಕರಾಗಿದ್ದು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಅಕ್ಕಿಮಂಗಲ ಎನ್ನುವ ಚಿಕ್ಕ ಹಳ್ಳಿಯವರು. ಕೃಷಿ ಸೇವೆಯನ್ನು ಮಾಡುತ್ತಲೇ ಸಾಹಿತ್ಯದ ಒಲವನ್ನು ಬಿಡದೆ ಹಲವಾರು ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ರವಿಕಾಣದ್ದನ್ನು ಕವಿಕಂಡ ಎಂಬAತೆ ಲೇಖಕರು ತಮ್ಮ ವೃತ್ತಿವಲಯದಲ್ಲಿ ಸುತ್ತಮುತ್ತಲೂ ಕಂಡ ಪರಿಸರದಲ್ಲಿ ಸಿಕ್ಕ ಕಾವ್ಯವಸ್ತುಗಳನ್ನು ಕಾಪಿಟ್ಟುಕೊಂಡು ಅವುಗಳಿಗೆ ಅಕ್ಷರ ರೂಪವನ್ನು ಕೊಟ್ಟು ಸಾಹಿತ್ಯ ಲೋಕಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುವ ಅವರ ಈ ಕಾಯಕ ನಿಜಕ್ಕೂ ಶ್ಲಾಘನೀಯ. ಅವರ ಇನ್ನಿತರ ಕೃತಿಗಳೆಂದರೆ `ಗುಮ್ಮ’, `ತುಂಟತಿಮ್ಮ’, `ಹೂವು ಮಾರುವವಳು’.      ಮಂಜುನಾಥ ಅವರ `ಬುಡಬುಡಿಕೆ’. ಸಂಕಲನದಲ್ಲಿ ನಲವತ್ತಕ್ಕೂ ಹೆಚ್ಚು ಮಕ್ಕಳ ಕವಿತೆಗಳಿವೆ. ಇವುಗಳಲ್ಲಿ ಮುಖ್ಯವಾದ ಕವಿತೆಗಳನ್ನು ನಾನು ಉಲ್ಲೇಖಿಸುವೆನು.  ಇದರಲ್ಲಿನ ಮೊದಲ ಕವಿತೆ `ರೈತನ ಬದುಕು’. ಹೆಸರೇ ಹೇಳುವಂತೆ ಈ ಕವಿತೆ ನಾವೆಲ್ಲಾ ಅನ್ನದಾತ’ನೆಂದು ಕರೆಯುವ ರೈತನ ಬದುಕಿನ ಕಷ್ಟಗಳನ್ನು ತಿಳಿಸಿಕೊಡುವ ಪದ್ಯವಾಗಿದೆ. ತಾಯಿ-ಮಗುವಿನ ನಡುವಿನ ಸಂಭಾಷಣೆಯ ಮೂಲಕ ಜಗತ್ತಿಗೂ ರೈತನ ಹಿರಿಮೆ ತ್ಯಾಗವನ್ನು ತಿಳಿಸುವ ಪದ್ಯ ಇದಾಗಿದೆ. ಇದನ್ನು ಓದುವಾಗ ನಮ್ಮ ಹೆಮ್ಮೆಯ ಕವಿ ಕುವೆಂಪುರವರ `ನೇಗಿಲಯೋಗಿ’ ಪದ್ಯ ನೆನಪಾಗದೆ ಇರದು. ಎರಡನೇ ಮತ್ತು ಪುಸ್ತಕದ ಶೀರ್ಷಿಕೆಯ ಕವಿತೆಯಾದ `ಬುಡಬುಡಿಕೆ’. ಇದು ಒಂದು ಜನಾಂಗದ ಕುಲಕಸುಬು ಅಥವಾ ವೃತ್ತಿಧರ್ಮವಾಗಿ ಬೆಳೆದು ಬಂದ ಒಂದು ಬಿಕ್ಷೆ ಬೇಡುವ ಪ್ರಾಕಾರ. ಕವಿ ಹೇಳಿರುವಂತೆ ಪದ್ಯದಲ್ಲಿ.. ಬೆಳದಿಂಗಳಿನಿAದ ಬೆಳಗುವ ಇರುಳು, ನೋಯಿಸಿಕೊಂಡು ಬಡಿಯುತ ಬೆರಳು, ಮನಸಿಗೆ ನೆಮ್ಮದಿ ನೀಡುತ ಕೊರಳು, ಬಿಚ್ಚಿಟ್ಟಿರುವನು ತನ್ನಯ ಕರಳು, ಇಲ್ಲದಿದ್ದರೂ ಏನೇ ತಿರುಳು, ಹೇಳುವನಿವ ಬುಡಮಟ್ಟದ ಸುಳ್ಳು…..’ ಎಂದಿದ್ದಾರೆ. ಕಲಿಗಾಲ ಹುಟ್ಟಿದಾಗಲೇ ಸುಳ್ಳು ಹುಟ್ಟಿಯಾಗಿದೆ. ಹೊಟ್ಟೆಗಾಗಿ ನಾನಾ ವೇಷ. ಉದರನಿಮಿತ್ತಮ್ ಬಹುಕೃತವೇಷಮ್ ಎಂಬAತಾಗಿದೆ. ನಮ್ಮ ನಾಡಿನ ದಾಸರಾದ ಕನಕದಾಸರೂ ಸಹ ಹೇಳಿಲ್ಲವೇ ` ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಎಂದು?      ಹಾವು ಮತ್ತು ನಾವು ೧-೨ ಭಾಗವಿರುವ ದೀರ್ಘ ಕವಿತೆಯಾಗಿದೆ. ಸೃಷ್ಠಿಯ ಸುಂದರ ಜೀವಿಗಳಲ್ಲೊಂದಾದ ಹಾವಿನ ಬಗೆಗೆ ಇಲ್ಲಸಲ್ಲದ ಊಹೆಗಳು ಮೂಢನಂಬಿಕೆಗಳು ನಮ್ಮ ಜನರಲ್ಲಿವೆ. ಕೆಲವು ಭಯ ಹುಟ್ಟಿಸುವ ನಂಬಿಕೆಗಳಿವೆ ಅವನ್ನು ಈ ಪದ್ಯದಲ್ಲಿ ಕವಿ ಸಾರಾಸಗಾಟಾಗಿ ತಳ್ಳಿಹಾಕಿ ಮಕ್ಕಳಲ್ಲಿ ವೈಜ್ಞಾನಿಕತೆಯನ್ನು ಬಿತ್ತುವ ಸಾಲುಗಳಿವೆ. ಈ ಪದ್ಯವು ವಚನಕಾರರಾದ ಬಸವಣ್ಣನವರ ವಚನ `ಕಲ್ಲನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ’ ಎಂದು ೧೨ನೆ ಶತಮಾನದಲ್ಲೇ ಹೇಳಿದ ವಿಷಯವನ್ನು ನೆನೆಯಬಹುದು.      ನಮ್ಮ ಯುವ ಜನತೆಯನ್ನು ಹಾಳುಮಾಡುತ್ತಿರುವ ಮಾರಕಚಟಗಳಾದ ತಂಬಾಕು, ಬೀಡಿ, ಸಿಗರೇಟು, ಗುಟ್ಕಾ, ಸೆರೆ, ಸಾರಾಯಿ, ನಶ್ಯದ ಚಟಗಳಿಗೆ ಚಟ್ಟವನ್ನು ಕಟ್ಟುವ ಹಠ ತೊಡಬೇಕು ಎಂದು ಗೀತೆಯ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸಿದ್ದಾರೆ. `ಅನ್ನ’ ಎಂಬ ಕವಿತೆ ಅನ್ನದ ರುಚಿರುಚಿ ಭಕ್ಷö್ಯಗಳು ಮತ್ತು ಅದನ್ನು ತಿಂದು ಹೆಸರುಗಳಿಸಿದ ಬಕಾಸುರ, ಭೀಮರನ್ನು ಪರಿಚಯ ಒಳಗೊಂಡ ಹಾಸ್ಯಗೀತೆಯಾಗಿದೆ.      ಮುಂದೆ `ಆಕಾಶ’, `ಹುಂಜ’, `ಅಂದಿನ ಮಗು-ಇಂದಿನ ಮಗು’ `ವೃಕ್ಷ ಮಾತೆ’, `ತಾಯಿ ಮತ್ತು ಮಗು’, ಪೊರಕೆಯ ಹರಕೆ, `ಜಿಪುಣರು’, ಬೆಳದಿಂಗಳ ಹಾಲು’, `ದಾರೀಲು ಹೋಗೋ ಮಾರಿ’, `ಕೂಗು ಮಾರಿ’, ರಾತ್ರಿ’ ಮುಂತಾದವು.  ಇವುಗಳಲ್ಲಿ ಹುಂಜ ಹಿಂದೆ ಜಗತ್ತಿನ ಅಲಾರಮ್ ಅದೇ ಆಗಿತ್ತು. ಆದರೆ ಈಗ ನಾಟಿ ಕೋಳಿಗಳು ಮಾಯವಾಗಿ ಫಾರಂ ಕೋಳಿಗಳು ಕೂಗದ ವಿಷಯ ಮತ್ತು ಗಡಿಯಾರದ ಅಲಾರಮ್ ಗೆ ಮನುಷ್ಯ ಹೊಂದಿಕೊAಡ ಬವಣೆ ವಿವರಿಸಿದ್ದಾರೆ. ಇವುಗಳಲ್ಲಿ ವಿಶೇಷವಾದದ್ದೆಂದರೆ `ಕೂಗು ಮಾರಿ’ ಮತ್ತು  `ದಾರೀಲಿ ಹೋಗೋ ಮಾರಿ’ ಎಂಬ ಕವಿತೆಗಳು ಕೂಗು ಮಾರಿಯಲ್ಲಿ `ನಾಳೇ ಬಾ’ ಎಂದು ಹಳ್ಳಿಗಳಲ್ಲಿ ಬಾಗಿಲ ಮೇಲೆ ಬರೆದು ರೋಗ ಅಥವಾ ಸಾವನ್ನು ತಡೆಯಲು ಈ ಮೂಢನಂಬಿಕೆಯನ್ನು ಹಳ್ಳಿಗರು ಕಂಡುಕೊAಡ ಉಪಾಯವಾಗಿತ್ತು. ಅದರ ಬಗ್ಗೆ ಯೋಚಿಸಿರುವ ಕವಿ ಇದಕ್ಕೆ ಯಾವುದೇ ಸಾಕ್ಷö್ಯಪುರಾವೆಗಳಿಲ್ಲ ಇದೊಂದು ಅವೈಜ್ಞಾನಿಕ ನಂಬಿಕೆ ಎಂದು ತಿಳಿಸಿದ್ದಾರೆ. ಮತ್ತು ಅದರ ಸವಾಲಿಗೆ ತಿರುಗೇಟಿನಂತೆ ಸ್ವಚ್ಛತೆಯನ್ನು ಕಾಪಾಡಿಕೊಂಡು ನಾವು ಆರೋಗ್ಯ ಕಾಪಾಡುವ ಜಾಗೃತಿಯನ್ನು `ದಾರೀಲಿ ಹೋಗೋ ಮಾರಿ’ ಎಂಬ ಕವಿತೆಯಲ್ಲಿ ಆರೋಗ್ಯಕ್ಕೆ ಹಾನಿಯುಂಟುಮಾಡುವ ಸೂಕ್ಷö್ಮ ಜೀವಿಗಳಾದ ಕೀಟಗಳಾದ ಸೊಳ್ಳೆ, ನೊಣ, ಇರುವೆ, ಗೊದ್ದಗಳಿಗೆ `ನಾಳೆ ಬಾ’ ಎಂಬ ಫಲಕ ಹಾಕೋಣ ಎಂದು ಮಕ್ಕಳ ಎಳೆ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ.      `ಮಂಗಳ ಗ್ರಹ’, ಗಾಳಿ ಆಲಿಕೆ’ ಇವು  ಪ್ರಕೃತಿಯ ಬಗ್ಗೆ ಮೂಡುವ ಕುತೂಹಲ ಮತ್ತು ಪ್ರಕೃತಿಯ ವೈಶಿಷ್ಟö್ಯಗಳನ್ನು ತಿಳಿಸುವ ಕವಿತೆಗಳಾಗಿವೆ.  ಮುಂದೆ ಉಪವಾಸ ಪದ್ಯವು ಹಾಸ್ಯಗವನವಾಗಿದೆ. ಈ ಕವಿತೆ ಬಿಆರ್ ಲಕ್ಷö್ಮಣರಾವ್ ಅವರು ಬರೆದ `ಆಚೆ ಮನೆಯ ಸುಬ್ಬಮ್ಮನಿಗೆ ಏಕಾದಶಿ ಉಪವಾಸ’ದಂತೆ ಓದುಗರನ್ನು ನಗೆಗಡಲಲಿ ತೇಲಿಸುತ್ತದೆ.  `ದುಡಿಮೆಯ ಸಂಪತ್ತು’ ಇದು ಎಲ್ಲಾ ಜೀವಿಗಳೂ ದುಡಿಯುವುದನ್ನು ನಿರೂಪಣೆಯ ಮೂಲಕ ಹೇಳುತ್ತಾ ತಾನು ಏನೂ ಮಾಡದೆ ಕಾಲ ಕಳೆದೆ.. ಕಾಲವೆಂಬುದು ಅಮೂಲ್ಯವಾದದ್ದು ಎಂದು ತಿಳಿಸುತ್ತದೆ. ಶುಚಿತ್ವದ ಪಾಠ’, ನಮ್ಮ ಮನೆಯ ಬೆಕ್ಕು, ತುಂಟ ಪುಟ್ಟ ಮಕ್ಕಳಿಗೆ ಹಿತವಾಗಿವೆ ಓದಲು. ಆಸೆಯೇ ದುಃಖಕ್ಕೆ ಮೂಲ ಎಂಬ ನಾಣ್ಣುಡಿಯನ್ನು `ಆಸೆ’ಎಂಬ ಕಥನಕಾವ್ಯ ತಿಳಿಸುತ್ತದೆ.       ಲೇಖಕರು ಇಲ್ಲಿನ ಕವಿತೆಗಳಲ್ಲಿ ಮಾವು, ಹಲಸು, ಬೆಕ್ಕು, ನಾಯಿ, ಇಲಿ,ದಿನಕರ, ಬಿಂಬ,ಕೋಳಿ,ಹುಲಿ, ಇರುವೆ, ಮರ , ಹಾವು ಇಂತಹವನ್ನೆಲ್ಲಾ ಆರಿಸಿಕೊಂಡು ಮಕ್ಕಳಿಗೆ ಇಷ್ಟವಾಗುವ ವಿಷಯಗಳ ಬಗ್ಗೆಯೇ ಬರೆದಿದ್ದಾರೆ.  ಇಂದು ಇಂಗ್ಲೀಷ್ ವಿದ್ಯಾಭ್ಯಾಸ ಪದ್ಧತಿಯಿಂದ ಮಕ್ಕಳಿಗೆ ಸಮಯದ ಅಭಾವವಿದೆ. ಮಕ್ಕಳು ನಿಜವಾಗಲೂ ಕನ್ನಡ ಪದ್ಯಗಳಿಂದ ಸಂಸ್ಕೃತಿಗಳಿAದ ದೂರವಾಗುತ್ತಿದ್ದಾರೆ. ಹಿಂದೆ ತಾಯಂದಿರು ಲಾಲಿ ಹಾಡುತ್ತಿದ್ದರು, ಅಜ್ಜ ಅಜ್ಜಿಯರು ಜಾನಪದ ಕಥೆ, ಕಥನಗೀತೆಗಳನ್ನು ಸಂಪ್ರದಾಯ ಹಾಡುಗಳನ್ನು ಹೇಳುತ್ತಿದ್ದರು. ಆದರೆ ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಇವುಗಳ ಜಾಗದಲ್ಲಿ ಇಂಗ್ಲೀಷ್ ರೈಮ್ಸ್, ಪದ್ಯಗಳ ಪುಸ್ತಕ, ಸಿ.ಡಿ.ಗಳು ಅರ್ಥವಾಗದ ಭಾಷೆಯು ಮಗು ಮಾತು ಕಲಿಯುವ ಮುನ್ನವೇ ಕೇಳಿಸಿಕೊಳ್ಳುವ ದುರ್ಗತಿಯಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವನ್ನು ಬರೆಯುವ ಹೆಜ್ಜೆಯನ್ನಿಟ್ಟಿರುವ ಯುವ ಲೇಖಕರು ಲೇಖಕಿಯರಿಗೆ ಗೆಲುವು ಸಿಗಬೇಕೆಂದರೆ ಸಾಹಿತ್ಯ ಲೋಕದಲ್ಲಿನ ಮಕ್ಕಳ ಸಾಹಿತ್ಯವು ಸಿ.ಡಿ. ರೂಪದಲ್ಲಿ ಸಂಗೀತದೊಡನೆ ಮನೆ ಮನೆಗೆ, ಮಕ್ಕಳಿಗೆ ತಲುಪಿಸುವ ಕೆಲಸವಾಗಬೇಕಿದೆ. `ಬುಡಬುಡಕೆ’ ಸಂಕಲನದ ಕವಿತೆಗಳು ಹಾಡಲು ಸುಲಭವಾಗಿವೆ. ಮಕ್ಕಳ ಸಾಹಿತ್ಯದ ಬಹು ಮುಖ್ಯ ಲಕ್ಷಣವೆಂದರೆ ಸರಳತೆ ಮತ್ತು ಪ್ರಾಸಬದ್ಧವಾಗಿರಬೇಕು. ಲೇಖಕರು ಬಹುಮಟ್ಟಿಗೆ ಆ ತತ್ವಕ್ಕೆ ಬದ್ಧರಾಗಿದ್ದಾರೆ ಎಂದು ನನ್ನ ಅನಿಸಿಕೆ. ****************************************** – ವಿಶಾಲಾ ಆರಾಧ್ಯ

ಬುಡಬುಡಿಕೆ’ ಮಕ್ಕಳ ಕವನ ಸಂಕಲನ Read Post »

ಇತರೆ, ಪುಸ್ತಕ ಸಂಗಾತಿ

ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..!

ಲೇಖನ ವಿಮರ್ಶಾ ಲೋಕದ ದಿಗ್ಗಜ ಜಿ.ಎಸ್. ಆಮೂರ..! ಜಿ.ಎಸ್. ಅಮೂರರು ನಮನಗಲಿದ್ದಾರೆ ಈಗ. ಆದರೆ ಅವರ ಸಾಹಿತ್ಯ ಕೃತಿಗಳು ಮತ್ತು ಮಾಡಿದ ಪಿ.ಎಚ್.ಡಿಯ ಸಾಹಿತ್ಯ ಸೌರಭ ನಮ್ಮ ಜೊತೆಯಲ್ಲಿ ಇದೆ. ಆಗಲಿ, ಜಿ.ಎಸ್.ಅಮೂರರಿಗೆ ಅನಂತಾನಂತ ನಮನಗಳು… ೦೮.೦೫.೧೯೨೫ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ೪-೫ ದಶಕಗಳಿಂದಲೂ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೧೯೨೫ ರ ಮೇ ೮ ರಂದು. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಮನೆಗೆ ತರುತ್ತಿದ್ದ ಸದ್ಭೋಧ ಚಂದ್ರಿಕಾ, ಕರ್ಮವೀರ ಮುಂತಾದ ಪತ್ರಿಕೆಗಳ ಸಂಗ್ರಹವೇ ಇದ್ದು ಇದನ್ನೂ ಓದುತ್ತಾ ಬಂದಂತೆಲ್ಲಾ ಆಮೂರರಿಗೆ ಸಾಹಿತ್ಯದಲ್ಲಿ ಆಸ್ಥೆ ಬೆಳೆಯ ತೊಡಗಿತು. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ ಆಯಿತು. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪಡೆದ ಬಿ.ಎ.ಆನರ್ಸ್ ಪದವಿ (೧೯೪೭) ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಎಂ.ಎ. ಪದವಿ (೧೯೪೯) ಪ್ರತಿ ವರ್ಷವೂ ರ‍್ಯಾಂಕ್‌ ಪಡೆದ ವಿದ್ಯಾರ್ಥಿ ಜಿ.ಎಸ್‌ ಅಮೂರರು. ೧೯೬೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ `THE CONCEPT OF COMEDY’ ಮಹಾ ಪ್ರಬಂಧ ಮಂಡಿಸಿ ಪಡೆದ ಪಿ.ಹೆಚ್‌.ಡಿ. ಪದವಿ ಪಡೆದರು. ಗದುಗಿನ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿ (೧೮೬೪-೬೮) ಸೇರಿ ನಂತರ ೧೯೬೮ರಲ್ಲಿ ಔರಂಗಾಬಾದ್‌ನ ಮರಾಠವಾಡ ವಿದ್ಯಾಪೀಠದಲ್ಲಿ ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿಯೂ ನಿವೃತ್ತರಾಗುವವರೆವಿಗೂ (೧೯೮೫) ಕಾರ್ಯ ನಿರ್ವಹಿಸಿದರು..! ಮುರಾಡವಾಡ ವಿದ್ಯಾಪೀಠದಲ್ಲಿದ್ದಾಗಲೇ ೧೯೭೨-೭೩ರಲ್ಲಿ ಫುಲ್‌ಬ್ರೈಟ್‌ ಫೆಲಿಶಿಪ್‌ ಪಡೆದು ಅಮೆರಿಕದ ಕೆಲಫೋರ್ನಿಯಾ (ಸಾಂಟಾಬಾರ್ಬರ) ಹಾಗೂ ಯೇಲ್ಸ್‌ ವಿಶ್ವವಿದ್ಯಾಲಯಗಳಲ್ಲಿ ಮತ್ತು ೧೯೭೩ರಲ್ಲಿ ಬ್ರಿಟಿಷ್‌ ಕೌನ್ಸಿಲ್‌ ಸಹಾಯದಿಂದ ಇಂಗ್ಲೆಂಡ್‌ನಲ್ಲಿ – ಹೀಗೆ ಎರಡುಬಾರಿ ಸಂಶೋಧನೆಯಲ್ಲಿ ನಿರತರಾಗಿದ್ದರು. ಇವರು ಪ್ರಾಧ್ಯಾಪಕರಾಗಿದ್ದಾಗ ೧೪ ವಿದ್ಯಾರ್ಥಿಗಳು ಪಿ.ಹೆಚ್‌.ಡಿ. ಹಾಗೂ ೩ ಎಂ.ಫಿಲ್‌. ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಿಂದ ಪದವಿ ಪಡೆದಿದ್ದಾರೆ. ಇವರ ಕನ್ನಡದ ಮೊದಲ ಕೃತಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾದುದು ಮಿಲ್ಟನ್‌ ಕವಿಯ ಮೇಲೆ ಬರೆದ ‘ಮಹಾಕವಿ ಮಿಲ್ಟನ್‌’ (೧೯೬೬). ನಂತರ ಮೊದಲ ವಿಮರ್ಶಾ ಪ್ರಬಂದಗಳ ಕೃತಿ ‘ಕೃತಿ ಪರೀಕ್ಷೆ’ಯಲ್ಲಿ ಕನ್ನಡದ ಪ್ರಮುಖ ಕಾದಂಬರಿಗಳಾದ ರಾವಬಹದ್ದೂರರ ‘ಗ್ರಾಮಾಯಣ’. ಅನಂತಮೂರ್ತಿಯವರ ಸಂಸ್ಕಾರ, ಶೌರಿ; ರಾಮಾನುಜನ್‌ರವರ ‘ಹಳದಿಮೀನು’, ಶಿವರಾಮ ಕಾರಂತರರ ಬೆಟ್ಟದ ಜೀವ ಮತ್ತು ಮರಳಿಮಣ್ಣಿಗೆ ಮುಂತಾದವುಗಳ ವಿಶ್ಲೇಶಣಾತ್ಮಾಕ ಲೇಖನಗಳಿಂದ ಕೂಡಿದೆ. ಇದಲ್ಲದೆ ಹಾಸನ ರಾಜಾರಾಯರು, ಶ್ರೀರಂಗರ ಕೃತಿಗಳ ಬಗ್ಗೆ, ಕೈಲಾಸಂರವರ ಇಂಗ್ಲಿಷ್‌ ನಾಟಕಗಳ ಬಗ್ಗೆಯೂ ಇದರಲ್ಲಿ ಲೇಖನಗಳಿವೆ. ಸಮಕಾಲೀನ ಕಥೆ-ಕಾದಂಬರಿ, ಕನ್ನಡ ಕಾದಂಬರಿಯ ಬೆಳವಣಿಗೆ, ಅ.ನ. ಕೃಷ್ಣರಾಯ, ಅರ್ಥಲೋಕ ಮುಂತಾದ ಕೃತಿಗಳಲ್ಲದೇ ಬೇಂದ್ರೆಯವರ ಗಂಗಾವತರಣವನ್ನೂ ಮಧ್ಯಬಿಂದುವಾಗಿಟ್ಟುಕೊಂಡು ಕಾವ್ಯ ಹಾಗೂ ಕಾವ್ಯೇತರ ಬರಹಗಳನ್ನೂ ವಿವೇಜಿಸುವ ‘ಭುವನದ ಭಾಗ್ಯ’ ಕೃತಿ, ವ್ಯವಸಾಯ, ಕನ್ನಡ ಕಥನ ಸಾಹಿತ್ಯ: ಕಾದಂಬರಿ, ವಿರಾಟಪುರುಷ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮುಂತಾದ ೩೯ ಕೃತಿಗಳಲ್ಲದೇ ಚಿತ್ತಾಲರ ಆಯ್ದ ಕಥೆಗಳು, ಕೆ ಸದಾಶಿವ ಅವರ ಕಥಾ ಸಾಹಿತ್ಯ, ಅವಳ ಕಥೆಗಳು, ಬೇಂದ್ರೆ ಕಾವ್ಯ, ಕನ್ನಡ ಕಥಾಲೋಕ, ಶ್ರೀರಂಗ ಸಾರಸ್ವತ, ಹುಯಿಲಗೋಳ ನಾರಾಯಣರಾಯರ ಸಮಗ್ರ ಸಾಹಿತ್ಯ ಮುಂತಾದವುಗಳನ್ನು ಸಂಪಾದಿಸಿದ್ದಾರೆ. ಇಂಗ್ಲಿಷ್‌ನಲ್ಲಿ ರಚಿಸಿರುವ ಕೃತಿಗಳು– ದಿ ಕಾನ್ಸೆಪ್ಟ್‌ ಆಫ್‌ ಕಾಮಿಡಿ, ಮನೋಹರ ಮಳಗಾಂವ್‌ಕರ್, ಆದ್ಯರಂಗಾಚಾಯ್, ದಿ ಕ್ರಿಟಿಕಲ್‌ ಸ್ಪೆಕ್ಟ್ರಮ್‌, ಇಮೇಜಸ್‌ ಅಂಡ್‌ ಇಂಪ್ರೆಷನ್ಸ್‌, ಎ.ಎನ್‌. ಕೃಷ್ಣರಾವ್‌, ಕ್ರಿಯೇಷನ್ಸ್‌ ಅಂಡ್‌ ಟ್ರಾನ್ಸ್‌ ಕ್ರಿಯೇಷನ್ಸ್‌, ದತ್ತಾತ್ರೇಯ ರಾಮಚಂದ್ರಬೇಂದ್ರೆ, ಪರ್ಸೆಷನ್ಸ್‌ ಆಫ್‌ ಮಾಡರ್ನ್ ಲಿಟರೇಚರ್, ಮೊದಲಾದ ೧೪ ಕೃತಿಗಳ ಜೊತೆಗೇ ಕ್ರಿಟಿಕಲ್‌ ಎಸ್ಸೆಸ್‌ ಹ್ಯಾನ್‌ ಇಂಡಿಯನ್‌ ರೈಟಿಂಗ್‌ ಇನ್‌ ಇಂಗ್ಲಿಷ್‌, ಕಾಲೊನಿಯಲ್‌ ಕೌನ್ಷಿಯಸ್ ನೆಸ್‌ ಇನ್‌ ಕಾಮನ್‌ವೆಲ್ತ್ ಲಿಟರೇಚರ್ ಮುಂತಾದ ಆರು ಕೃತಿಗಳನ್ನೂ ಸಂಪಾದಿಸಿದ್ದಾರೆ. ಹೀಗೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿರುವುದಲ್ಲದೇ ಬೆಂಗಳೂರು, ಕರ್ನಾಟಕ ವಿಶ್ವವಿದ್ಯಾಲಯ, ಬೆನಾರಸ್‌ ಹಿಂದೂ ವಿಶ್ವವಿದ್ಯಾಲಯ, ಮೈಸೂರಿನ ಧ್ವನ್ಯಾಲೋಕ ಮುಂತಾದೆಡೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ..! ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಗೌರವಗಳಿಸಿದ್ದಾರೆ. ಇವರ ‘ಅರ್ಥಲೋಕ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಸ.ಸ.ಮಾಳವಾಡ ಪ್ರಶಸ್ತಿ; ಭುವನದ ಭಾಗ್ಯ ಕೃತಿಗೆ ಭಾರತೀಯ ಭಾಷಾ ಪರಿಷತ್‌-ಕೊಲ್ಕತ್ತಾ, ಪ್ರೊ.ವಿ.ಎಂ. ಇನಾಂದಾರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ; ಕನ್ನಡ ಕಥನ ಸಾಹಿತ್ಯ: ಕಾದಂಬರಿ ಕೃತಿಗೆ ಬಿ.ಎಚ್‌. ಶ್ರೀಧರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಇವರಿಗೆ ಸಂದಿವೆ. ಇವಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ವಿಮರ್ಶಕ ರತ್ನ ಪ್ರಶಸ್ತಿ, ಅಖಿಲ ಭಾರತ ಮಾಧ್ವ ಮಹಾ ಮಂಡಲದಿಂದ ಕನ್ನಡ ಭಾಷಾ ಭೂಷಣ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ಸಂದೇಶ್‌ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಪಂಪ್ರಶಸ್ತಿ, ಮಾಸ್ತಿ ಪ್ರಶಸ್ತಿಗಳು ದೊರೆತಿವೆ. ಒಂದು ಕೃತಿಯನ್ನೂ ವಿಮರ್ಶಿಸುವಾಗ ಕೃತಿಯಲ್ಲಿ ಏನಿದೆ? ಏಕಿದೆ? ಎಂದು ವಿಮರ್ಶಿಸಬೇಕೇ ವಿನಃ ಏನಿಲ್ಲ, ಏನಿರಬೇಕಿತ್ತು ಎಂದು ಹುಡುಕುವುದು ವಿಮರ್ಶಕನ  ಕೆಲಸವಾಗಬಾರದು ಮತ್ತು ವಿಮರ್ಶಕನಾದವನು ಅಂತಃ ಚಕ್ಷುಗಳನ್ನೂ ತೆರೆದು ಪೂರ್ವಾಗ್ರಹ ಪೀಡಿತನಾಗದೇ ಕೃತಿಯೊಡನೆ ಅನುಸಂಧಾನ ಮಾಡಬೇಕೆನ್ನುವುದೇ ಇವರ ಖಚಿತ ಅಭಿಪ್ರಾಯವಾಗಿದ್ದು, ವಿಮರ್ಶೆಯ ಕ್ಷೇತ್ರದಲ್ಲಿ ಹೊಸಹೊಸ ಅನ್ವೇಷಣೆಗಳನ್ನು ಮಾಡಿ ಹೊಸಹೊಸ ವಿಸ್ತೃತ ವಿಮರ್ಶಾ ವಿಧಾನಗಳನ್ನೂ ರೂಪಿಸತೊಡಗಿದ್ದರು..! ಇಂತಹ ಜಿ.ಎಸ್. ಅಮೂರ ಈಗ ನಮ್ಮನ್ನು ಅಗಲಿದ್ದಾರೆ. ಅವರಿಗಿದೋ ‘ನಮನ’ಗಳು… ************************************* ಕೆ.ಶಿವು.ಲಕ್ಕಣ್ಣವರ ***************************************************

ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..! Read Post »

ಪುಸ್ತಕ ಸಂಗಾತಿ

ಬೊಗಸೆ ತುಂಬಾ ಕನಸು

ಪುಸ್ತಕ ಪರಿಚಯ ಬೊಗಸೆ ತುಂಬಾ ಕನಸು ಬೊಗಸೆ ತುಂಬಾ ಕನಸುಲೇಖಕರು: ಡಾ. ಬಿ. ಪ್ರಭಾಕರ ಶಿಶಿಲ ಸುಳ್ಯ)ಪ್ರಕಾಶಕರು: ರಾಜ್ ಪ್ರಕಾಶನ, ಮೈಸೂರುಪುಟಗಳು: 688ಬೆಲೆ: 650 ರೂಪಾಯಿಗಳು ಸ್ವಾತಂತ್ರ್ಯ ಎಂಬುದು ದೇವರಿಗಿಂತ ದೊಡ್ಡ ಮೌಲ್ಯ! –  ಡಾ| ಪ್ರಭಾಕರ ಶಿಶಿಲ ಒಂದಾನೊಂದು ಕಾಲದಲ್ಲಿ ಚಂದ್ರಾವತಿ. ಬಿ ಆಗಿ ಬದುಕುತ್ತಿದ್ದ ನನ್ನನ್ನು ಚಂದ್ರಾವತಿ ಬಡ್ಡಡ್ಕ ಆಗಿಸಿದ್ದು ನಮ್ಮ ಅರ್ಥಶಾಸ್ತ್ರ ಉಪನ್ಯಾಸಕರಾದ ಮಾನ್ಯ ಡಾ| ಪ್ರಭಾಕರ ಶಿಶಿಲ ಸರ್. ನಮ್ಮ ಕಾಲೇಜು ದಿನಗಳ ವೇಳೆಯಲ್ಲಿ, ಸ್ವಂತಿಕಾ ಪ್ರಕಾಶನದಿಂದ ಪುಸ್ತಕ ಪ್ರಕಟವಾಗುವ ವೇಳೆ, ಅದರ ಸದಸ್ಯರ ಪಟ್ಟಿಯಲ್ಲಿ ನಮ್ಮನ್ನೆಲ್ಲ ಸೇರಿಸಿದ್ದರು. ಅಲ್ಲಿ ನಾನು, ನನ್ನನ್ನೇ ನಾನು ಚಂದ್ರಾವತಿ ಬಡ್ಡಡ್ಕ ಅಂತ ಕಂಡು ಖುಷಿಗೊಂಡಿದ್ದೆ-ಪುಳಕಿತಳಾಗಿದ್ದೆ. ಅಲ್ಲಿಂದ ಖಾಯಂ ಆಗಿ ಬಡ್ಡಡ್ಕ ನಾನು ಹೋದಲ್ಲೆಲ್ಲ ನನ್ನ ಹೆಸರಿನ ಜೊತೆಗಿದೆ. * ಸದ್ರೀ ಶಿಶಿಲರ ಆತ್ಮ ಕಥನ ‘ಬೊಗಸೆ ತುಂಬಾ ಕನಸು’. ದಣಿವರಿಯದ, ದಣಿವಿಲ್ಲದ ಬರಹಗಾರರಾಗಿರುವ ಶ್ರೀಯುತರ ಈ ಕನಸನ್ನು ಇತ್ತೀಚೆಗೆ ಓದಿದಾಗ ಒಂದೆರಡು ಮಾತು ಬರಿಯೋ ತುಡಿತ ಒದ್ದುಕೊಂಡು ಬಂದಿತ್ತು. ಇನ್ನೇನೋ ಕೆಲಸಕಾರ್ಯಗಳಲ್ಲಿ ನಿರತಳಾಗಿ ಬಿದ್ದು ಹೋಗಿದ್ದರಿಂದ ಮೀನಾ-ಮೇಷಾವಾಗಿ ಇಂದಿಗೆ ಬಂದು ನಿಂತಿದೆ. ಪುಸ್ತಕ ಬಿಡುಗಡೆಯ ಬಳಿಕ ಸುಳ್ಯದ ಶ್ರೀದೇವಿ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಲಭ್ಯವಿದೆ ಎಂದು ಗೊತ್ತಾದ ತಕ್ಷಣ ಹೋಗಿ ಪುಸ್ತಕ ‘ಕೊಂಡು’ ತಂದಿದ್ದೆ (ಇದನ್ನು ಯಾಕೆ ಒತ್ತಿ ಹೇಳುತ್ತೇನೆಂದರೆ ಕಾಲೇಜು ದಿನಗಳಿಂದಲೇ ಅವರ ಧ್ಯೇಯವಾಕ್ಯ ‘ಪುಸ್ತಕ ಕೊಂಡು ಓದಿ’ ಕಿವಿಗೆ ಬೀಳುತ್ತಲೇ ಇತ್ತಲ್ಲ). ಹೀಗೆ ಕೊಂಡು ತಂದ ಬಳಿಕ, ಬೇರೆ ಕೆಲಸಗಳೊಂದಿಗೇ 688 ಪುಟಗಳ ಬೃಹತ್ ಪುಸ್ತಕವನ್ನು ನಾಲ್ಕೈದು ದಿನಗಳಲ್ಲಿ ಮಧ್ಯರಾತ್ರಿಯ ತನಕವೂ ಕುಳಿತು, ನಿಂತು, ಒರಗಿ, ಅಡ್ಡಬಿದ್ದು ಗಬಗಬ ಓದಿ ಮುಗಿಸಿದ್ದೆ. ಪುಸ್ತಕದಲ್ಲಿ ಬರುವ ಕೆಲವು ಪಾತ್ರಗಳನ್ನು, ಕ್ಷಣಗಳನ್ನು ನಾನು ಲೈವ್ ಆಗಿ ಕಂಡಿದ್ದೇನೆ ಮತ್ತು ಬೆರೆತಿದ್ದೇನೆ. ಇನ್ನು ಕೆಲವು ಚಿರಪರಿಚಿತ, ಮತ್ತೆ ಹಲವು ಅರೆ ಪರಿಚಿತ ಮತ್ತು ಬಹಳವು ಅಪರಿಚಿತ. ಅಗಾಧವಾದ ಈ ಪುಸ್ತಕವನ್ನು ಓದಿ ಕೆಳಗಿರಿಸಿದಾಗ ಮನದಲ್ಲಿ ನನಗೆ ಅಬ್ಬಾಬ್ಬಾ ಎಂಬ ಉದ್ಗಾರ ಹೊರಡಿಸದಿರಲಾಗಲಿಲ್ಲ. ಇದರಲ್ಲಿನ ಜೀವನ ಕಥನ ಹಾಗಿದೆ. ಕುಂಡಪ್ಪ, ಸುಬ್ಬಪ್ಪನಾಗದೆ ಪ್ರಭಾಕರನಾಗಿ ಪ್ರಭೆಯನ್ನು ಬೀರಬೇಕು ಎಂಬ ಅವರ ಅಮ್ಮನ ಕನಸನ್ನು ನನಸಾಗಿಸಿದ್ದಾರೆ. ಅಂತೆಯೇ ಆರಂಭದಲ್ಲೇ ಹೇಳುತ್ತಾರೆ, ಅಜ್ಜಿ ನನಗೆ ಕನಸು ಕಾಣಲು ಕಲಿಸಿದರು; ನಾನು ಕನಸು ಕಾಣತೊಡಗಿದೆ. ಕನಸುಗಳನ್ನು ಸಾಕ್ಷಾತ್ಕರಿಸಲು ಯತ್ನಿಸಿದೆ. ಕನಸುಗಳಲ್ಲೇ ಜೀವಿಸಿದೆ. ಈಗಲೂ ಕನಸು ಕಾಣುತ್ತಿದ್ದೇನೆ! ಅದನ್ನೇ ನಿಮಗೆ ಕೊಡುತ್ತಿದ್ದೇನೆ, ಬೊಗಸೆ ತುಂಬಾ ಕನಸು! ಅನ್ನುತ್ತಾ ತಮ್ಮ ಬಾಲ್ಯದಿಂದ ಹಿಡಿದು ಕಳೆದ ವರ್ಷ ಪುಸ್ತಕ ಪ್ರಕಟಗೊಳ್ಳುವ ತನಕದ ತಮ್ಮ ಅಗಾಧವಾದ ಜೀವನಾನುಭವಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಬಿಕಾಂ ವಿದ್ಯಾರ್ಥಿನಿಯಾಗಿ ನೆಹರೂ ಸ್ಮಾರಕ ಮಹಾವಿದ್ಯಾಲಯಕ್ಕೆ ಸೇರುವ ಮುನ್ನ ಶಿಶಿಲ ಸರ್ ಅವರನ್ನು ನಾನು ನೋಡಿರಲಿಲ್ಲ. ಆದರೆ, ಅವರ ಬಗ್ಗೆ ಕೇಳಿದ್ದೆವು. 80ರ ದಶಕದಲ್ಲಿ ಸುಳ್ಯದಂತ ಚಿಕ್ಕ ಊರಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದ ಅವರು ಹಲವರಿಗೆ ಹಲವು ಭಾವಗಳಲ್ಲಿ ಬಿಂಬಿತವಾಗಿದ್ದರು. ಹಲವಾರು ಕೃತಿಕರ್ತ, ಯಕ್ಷಗಾನ ಪಾತ್ರಧಾರಿ ಎಲ್ಲವೂ ಆಗಿದ್ದ ಅವರ ಬಗೆಗೆ ಎನ್ನೆಂಸಿ ಸೇರುವಾಗ ಒಂದು ಬೆರಗಿತ್ತು. ಅದಲ್ಲದೆ, ನಾನು ಅ..ಆ..ಇ..ಈ ಕಲಿತ ಬಡ್ಡಡ್ಕ ಶಾಲೆಯ ಸಂಸ್ಥಾಪಕರಾದ, ಅಪ್ರತಿಮ ಈಡುಗಾರರೂ ಆಗಿದ್ದ ದಿ| ಬಡ್ಡಡ್ಕ ಅಪ್ಪಯ್ಯಗೌಡರ ಬೇಟೆಯ ಅನುಭವದ ಕುರಿತ ‘ಶಿಕಾರಿಯ ಸೀಳುನೋಟ’ ಪುಸ್ತಕ ಬರೆದಿದ್ದರು. ಹಾಗಾಗಿ ಕುತೂಹಲವೂ ಹೆಚ್ಚೇ ಇತ್ತು. ಆದರೆ, ಅವರ ಸರಳ ವ್ಯಕ್ತಿತ್ವ, ಅಂತರ ಕಾಯ್ದುಕೊಳ್ಳದೆ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವರು ನಮಗೆ ಅಚ್ಚರಿ ಮೂಡಿಸಿದ್ದರು. ಮೇಲಿನಿಂದ ಸರಳವಾಗಿ ಕಂಡರೂ ಒಳಗಿನ ಅವರ ಗಟ್ಟಿತನ ಮತ್ತು ಕಾವು ನಿಜವಾಗಿಯೂ ಏನು ಎಂಬುದು ಪೂರ್ಣವಾಗಿ ತಿಳಿಯಬೇಕಿದ್ದರೆ ಬೊಗಸೆ ತುಂಬಾ ಕನಸನ್ನು ನಮ್ಮ ಬೊಗಸೆಯಲ್ಲಿ ಹಿಡಿದು ಓದಿಯೇ ತಿಳಿದುಕೊಳ್ಳಬೇಕು. ಬಡತನದಲ್ಲೇ ಹುಟ್ಟಿ ಬೆಳೆದರೂ, ಕಡುಕಷ್ಟದಿಂದಾಗಿ ಹೊಟ್ಟೆಗೆ ಸಾಕಷ್ಟು ಆಹಾರವಿಲ್ಲದಿದ್ದರೂ, ಉಡಲು-ತೊಡಲು ಸರಿಯಾದ ಬಟ್ಟೆ ಇಲ್ಲದಿದ್ದರೂ, ಇದಕ್ಕೂ ಪ್ರತಿಭೆಗೂ, ಯಶಸ್ಸಿಗೂ ತಾಳಮೇಳವಿಲ್ಲ ಎಂಬುದನ್ನು ಬುದುಕಿ ತೋರಿದವರು. ಅವರ ಬಾಲ್ಯದ ಜೀವನವನ್ನು ಓದುತ್ತಿದ್ದಾಗ ಕೆಲವೆಡೆ ಗಂಟಲುಬ್ಬಿ ಬಂದಿತ್ತು. ಅರಸಿನಮಕ್ಕಿ ಶಾಲೆಯಲ್ಲಿ ಏಳನೇ ಕ್ಲಾಸು ಕಲಿಯುತ್ತಿದ್ದಾಗ ರಾತ್ರಿಯ ಸ್ಪೆಷಲ್ ಕ್ಲಾಸಿಗಾಗಿ ಅಲ್ಲೇ ಉಳಿಯುವ ಸಂದರ್ಭದಲ್ಲಿ, ಮಾವ ತಂದು ಕೊಡುತ್ತಿದ್ದ ಬುತ್ತಿಯನ್ನು ಸಮ ಪಾಲುಮಾಡಿ ಮೂರು ಹೊತ್ತಿಗೆ ಭರಿಸಿಕೊಳ್ಳಬೇಕಿತ್ತು ಎಂದು ದಾಖಲಿಸುತ್ತಾ ಹೋಗುತ್ತಾರೆ ಇಂಥ ಘಟನೆಗಳು ಬೇಕಾದಷ್ಟಿವೆ. ಕಷ್ಟಾತಿಕಷ್ಟದಿಂದಾಗಿ ಇನ್ನೇನು ಶಾಲೆ ಕಲಿಕೆ ಕೊನೆಗೊಂಡಿತು, ಕೃಷಿ ಕಾರ್ಮಿಕನಾಗಿಯೋ ಇಲ್ಲ ಟೈಲರ್ ಆಗಿಯೋ ಮುಂದುವರಿಯುವುದೇ ಮುಂದಿನ ದಾರಿ ಎಂದಾಗ, ಮತ್ತೆಲ್ಲೋ ಇನ್ನಾವುದೋ ಎಳೆಸಿಕ್ಕಿ ವಿದ್ಯೆ ಮುಂದುವರಿದಿದೆ. ಒಂದು ಹಂತದಲ್ಲಿ ಹತ್ತನೇ ಕ್ಲಾಸು ಬಳಿಕ ಕಲಿಕೆ ನಿಂತೇ ಹೋಗಿ ಅಳಿಕೆಯಲ್ಲಿ ವಲಲನಾಗಿ ಮತ್ತೆ ಬ್ರೇಕ್ ತಗೊಂಡು ಮುಂದೆ ಸಾಗಿದ್ದು ಎಲ್ಲವೂ ಅನೂಹ್ಯ . ಅರಸಿನಮಕ್ಕಿ ಶಾಲೆಯ ಹೆಡ್ಮಾಸ್ಟ್ರು “ಇವನು ಮುಂದೊಂದು ದಿನ ಒಂದೋ ಒಳ್ಳೆಯ ಯಕ್ಷಗಾನ ಕಲಾವಿದನಾಗುತ್ತಾನೆ ಇಲ್ಲವೇ ಸಾಹಿತಿಯಾಗುತ್ತಾನೆ” ಅಂದಿದ್ದರಂತೆ. ಅವರಂದಂತೆ, ಒಬ್ಬ ಆದರ್ಶನೀಯ ಉಪನ್ಯಾಸಕ ಹಾಗೂ ಸಾಹಿತಿ, ಕಲಾವಿದ ಎಲ್ಲವೂ ಆಗಿದ್ದಾರೆ. ಅಂತೆಯೇ, ಹಾಸನ ಕಾಲೇಜಿನಲ್ಲಿ ಒಂದು ವರ್ಷ ಉಪನ್ಯಾಸಕರಾಗಿದ್ದು, ಬೀಳ್ಕೊಳ್ಳುವ ವೇಳೆ ಅವರ ವಿದ್ಯಾರ್ಥಿನಿ ನಿಶಾ ಎಂಬವರು, “ನೀವು ಎಲ್ಲಿ ಹೋದ್ರು ಸಕ್ಸಸ್ ಆಗ್ತೀರಿ. ನಿಮ್ಮಲ್ಲಿ ಪೊಟೆನ್ಷಿಯಲ್ ಇದೆ” ಅಂದಿದ್ದರಂತೆ. ಇದನ್ನು ಅವರ ಹೆಜ್ಜೆ ಗುರುತು ಮೂಡಿದಲ್ಲೆಲ್ಲ ಕಾಣಬಹುದು. ತರಗತಿಯಲ್ಲಿ ಅರ್ಥಶಾಸ್ತ್ರ ಹೇಳಲು ಹೊರಟರೆ ವಿದ್ಯಾರ್ಥಿಗಳನ್ನು ಸೆಳೆದು ಪಾಠಕೇಳಿಸುವ ಪರಿ ಆಕರ್ಷಣೀಯ. “ರೇಷ್ಮೆ ಹುಳು ಹಿಪ್ಪುನೇರಳೆ ಎಲೆಯನ್ನು ತಿಂದಂತೆ”. ಗ್ಯಾಪೇ ಇಲ್ಲದಂತೆ ನಿರರ್ಗಳವಾಗಿ ಪಠಿಸುತ್ತಿದ್ದರೆ, ಬೋರೇ ಆಗದಂತೆ ವಿದ್ಯಾರ್ಥಿಗಳು ಮಂತ್ರ ಮುಗ್ದರಾಗಿ ಕೇಳುತ್ತಿದ್ದರು. ಹಳ್ಳಿಗಾಡಿನ ಕನ್ನಡಶಾಲೆಗಳಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂಗ್ಳೀಷು ಬರುವುದಿಲ್ಲ ಎಂಬ ಅರಿಮೆಯನ್ನು ಹೋಗಲಾಡಿಸಲು ಅವರು ಕನ್ನಡದಲ್ಲಿ ಬರೆದ ಅರ್ಥಶಾಸ್ತ್ರ ಪುಸ್ತಕಗಳು ನೆರವಾಗಿವೆ. ಕನ್ನಡದಲ್ಲಿ ಅರ್ಥಶಾಸ್ತ್ರ ಪುಸ್ತಕಗಳನ್ನು ಬರೆದು ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಬರೆಯಲು ಪ್ರೇರೇಪಿಸಿದ್ದಾರೆ ಕೂಡ. ಒಬ್ಬ ಅಪ್ರತಿಮ ಸಂಘಟಕ. ಇದು ಅವರ ಬಾಲ್ಯದಿಂದಲೇ ಕಂಡು ಬರುತ್ತಿದೆ. ಪ್ರೈಮರಿ ಶಾಲಾ ದಿನಗಳಲ್ಲಿ ಲಾಗ ಹಾಕಿ ಬೊಬ್ಬೆ ಹೊಡೆಯುವಾಗ, ಹೋದಲ್ಲೆಲ್ಲ ಸಮವಯಸ್ಕರನ್ನು ಕೂಡಿಸಿ ಭಜನೆ ಮಾಡುವಾಗ, ಉಜಿರೆಯ ಸಿದ್ಧವನದಲ್ಲಿ ತರಲೆಗಳನ್ನು ಮಾಡಿದಾಗ, ಸುಳ್ಯದಲ್ಲಿ ಸ್ವಂತಿಕಾ ಪ್ರಕಾಶನ, ಅಭಿನಯ ಸುಳ್ಯ, ತೆಂಕುತಿಟ್ಟು ವೇದಿಕೆಗಳಲ್ಲಿ ತೊಡಗಿಕೊಂಡಾಗ, ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಚಾರಣ, ಜಲಪಾತ, ಸೈಕಲ್ ಜಾಥ ಎಂದು ತಿರುಗಾಡಿದಾಗ, ರೋಟರಿ ಅಧ್ಯಕ್ಷರಾಗಿ ಹತ್ತು ಹಲವುಕಾರ್ಯಕ್ರಮಗಳನ್ನು ನಡೆಸಿದಾಗ… ಅಲ್ಲಲ್ಲಿ ಅವರ ನಾಯಕತ್ವದ ಗುಣ ಅನಾವರಣ ಆಗುತ್ತಲೇ ಹೋಗುತ್ತದೆ. ಅವರು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದಾಗ ದೊಡ್ಡೇರಿಗೆ ಸಂಪರ್ಕ ಸಾಧಿಸಲು ಪಯಸ್ವಿನಿ ನದಿಗೆ ತೂಗು ಸೇತುವೆ ನಿರ್ಮಿಸಲು ಪಟ್ಟ ಬವಣೆಯನ್ನು ವಿವರಿಸಿದ್ದಾರೆ. ನದಿಗೆ ಮಾತ್ರವಲ್ಲ, ಅಂತೆಯೇ ಹಲವು ಹೃದಯಗಳಿಗೂ ಸೇತುವೆ ನಿರ್ಮಿಸಿದ ಉದಾಹರಣೆ ಇದೆ ಈ ಪುಸ್ತಕದಲ್ಲಿ. ಅವರ ಯೂರೋಪ್, ಥಾಯ್ಲೆಂಡ್ ಪ್ರವಾಸವನ್ನು ಕಣ್ಣಿಗೆ ಕಟ್ಟಿದಂತೆ ಛಾಪಿಸಿದ್ದಾರೆ. ವಿದೇಶಿ ಪ್ರವಾಸದುದ್ದಕ್ಕೂ ನಡೆದ ಘಟನೆಗಳು, ದೇಶದೇಶಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಮಾಹಿಯುಕ್ತ ಅಧ್ಯಾಯಗಳಾಗಿವೆ. ದೇವರು ಧರ್ಮದ ಬಗ್ಗೆ ಅಭಿಪ್ರಾಯಿಸುತ್ತಾ ಸ್ವಾತಂತ್ರ್ಯ ಎಂಬುದು ದೇವರಿಗಿಂತ ದೊಡ್ಡ ಮೌಲ್ಯ ಅಂದಿದ್ದಾರೆ. ಬದುಕಿನುದ್ದಕ್ಕೂ ವೈಚಾರಿಕತೆಯನ್ನು ಪ್ರತಿಪಾದಿಸುತ್ತಾ, ಸಂಘರ್ಷವನ್ನು ಎದುರಿಸುತ್ತಾ ಸ್ವಾಂತ್ರ್ಯವನ್ನು ಸವಿಯುತ್ತಾ ಮುಂದೆ ಸಾಗಿದ್ದಾರೆ.ಅನೇಕ ವಿವಾದಗಳೂ (ವಿವಾಹವೂ ಸೇರಿದಂತೆ) ಅವರನ್ನು ಸುತ್ತಿಕೊಂಡಿದೆ. ಅವುಗಳೆಲ್ಲವನ್ನೂ ಎದುರಿಸುತ್ತಾ ನಿಭಾಯಿಸುತ್ತಾ ಸಾಗಿದ್ದಾಗಿ ಬರೆದು ಕೊಂಡಿದ್ದಾರೆ. ಪ್ರೀತಿ ಪ್ರೇಮ, ನೋವು, ತಲ್ಲಣ, ತಳಮಳ, ವಿವಾದ, ವಿಷಾದ ಎಲ್ಲವೂ ಇರುವ ಈ ಪುಸ್ತಕ ಒಂದು ಸಿಹಿ, ಕಹಿ, ಉಪ್ಪು, ಹುಳಿ, ಕಾರ, ಒಗರು ಮಿಶ್ರಿತ ರಸಪಾಕದಂತಿದೆ. ಮೂಲತ ಉಪನ್ಯಾಸಕರಾದರೂ, ಯಕ್ಷಗಾನ ಕಲಾವಿದ, ನಟ, ಸಾಹಿತಿ, ಭಾಷಣಕಾರ ಹೀಗೆ ಹಲವು ರಂಗಗಳ ಪ್ರತಿಭಾಸಂಪನ್ನ ವ್ಯಕ್ತಿತ್ವ. ಅರ್ಥಶಾಸ್ತ್ರ ಮಾತ್ರವಲ್ಲ, ಯಕ್ಷಗಾನದಲ್ಲಿನ ಅರ್ಥಗಾರಿಕೆಯೂ ಅಷ್ಟೇ ಪ್ರಖರವಾದುದು. ಅರ್ಥಶಾಸ್ತ್ರದಲ್ಲಿ 180ಕ್ಕಿಂತಲೂ ಹೆಚ್ಚು ಅರ್ಥಶಾಸ್ತ್ರದ ಕೃತಿಗಳು ಮತ್ತು ಇತರ ಸಾಹಿತ್ಯ ಕೃತಿಗಳು ಹೀಗೇ ಸುಮಾರು 250 ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ಇವರಿಗಿದೆ. ತಮಗೆ ಎದುರಾದ ಸಂಕಷ್ಟ, ತೊಂದರೆ ತಾಪತ್ರಯ, ಕಷ್ಟ ಕೋಟಲೆಗಳನ್ನೆಲ್ಲಾ ಮೆಟ್ಟಿಲಾಗಿಸಿಕೊಂಡು ಬದುಕಿನ ಏಣಿಯಲ್ಲಿ ಇವರು ಏರುತ್ತಾ ಹೋಗಿರುವುದು ಒಂದು ರೋಚಕ ಕಥನ. ಸದಾಕ್ರಿಯಾಶೀಲರು. ಅಪಘಾತವಾಗಿ ಆಸ್ಪತ್ರೆ ವಾಸಿಯಾಗಿದ್ದಾಗಲೂ ಸುಮ್ಮನಿರದೆ ಪುಸ್ತಕ ಬರೆದು ಅಲ್ಲಿಯೇ ಬಿಡುಗಡೆಗೊಳಿಸಿ ಹುಬ್ಬೇರುವಂತೆ ಮಾಡಿದವರು. ಯಾವುದೇ ಸಂಘರ್ಷವಿರಲಿ, ಎಂಥಾ ಕಷ್ಟದ, ಸಂದಿಗ್ಧದ ಪರಿಸ್ಥಿತಿಗಳಿದ್ದರೂ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಅಡೆತಡೆಯನ್ನು ಮುರಿದು ಮುಂದೆ ಸಾಗಬಹುದು ಎಂಬುದನ್ನು ಈ ಪುಸ್ತಕ ನಿರೂಪಿಸುತ್ತದೆ. ಪುಸ್ತಕ ಓದಿ ಮುಗಿಸಿದಾಗ ಒಂದು ಲವಲವಿಕೆಯ ಅನುಭೂತಿ ನಮ್ಮದಾಗುತ್ತದೆ. ತಮ್ಮ ಏಳಿಗೆಗೆ ಕಾರಣರಾದವರನ್ನೆಲ್ಲ ಸ್ಮರಿಸುತ್ತಾರೆ. ಇವರ ಅಗಾಧವಾದ ಜ್ಞಾಪಕ ಶಕ್ತಿ ಅಚ್ಚರಿ ಹುಟ್ಟಿಸುತ್ತದೆ. ತೀರಾ ಪ್ರೈಮರಿ ಶಾಲೆಯಲ್ಲಿ ಕಲಿಯುತ್ತಿರುವಾಗ ಇದ್ದ ಸಹಪಾಠಿಗಳ ಹೆಸರೂ ಅವರ ಮಸ್ತಕದಲ್ಲಿದೆ. ಬಾಲ್ಯದಲ್ಲಿ ತಮ್ಮ ಭಾವತೀವ್ರತೆಗೆ ಸಹಭಾಗಿಯಾಗಿರುತ್ತಿದ್ದ ಕುಂಡಪ್ಪ ಎತ್ತಿನಿಂದ ಹಿಡಿದು ಅವರ ವಿದ್ಯಾರ್ಥಿಗಳ ತನಕ ಜೀವನದಲ್ಲಿ ಬಂದುಹೋದ ಎಲ್ಲರನ್ನು ಪ್ರಸ್ತಾಪಿಸಿ ಸ್ಮರಿಸಿಕೊಂಡಿದ್ದಾರೆ. ಕೊನೆಯಲ್ಲಿ ಒಂಚೂರು ತಮಾಷೆಯನ್ನು ಮಿಕ್ಸ್ ಮಾಡಿ ಲಘುದಾಟಿಯಿಂದ ಹೇಳುವುದಾದರೇ, ಪುಸ್ತಕವನ್ನು ಓದುತ್ತಾ ಓದುತ್ತಾ ಹೋದಂತೆ ನನಗೂ ಅವರಿಗೂ ತಂಬಾ ಸಾಮ್ಯತೆ ಮತ್ತು ಅಷ್ಟೇ ವ್ಯತ್ಯಾಸಗಳಿವೆ ಎಂದು ತಿಳಿಯಿತು. ಅವರು ಬಾಲ್ಯದಲ್ಲಿ ನನ್ನಂತೆ ಬಡವರಾಗಿದ್ದರು ಮತ್ತು ಪೆದ್ದರೂ ಆಗಿದ್ದರೂ. ಆದರೆ ನಾನು ನನ್ನ ಪೆದ್ದುತನವನ್ನು ಇನ್ನೂ ಜತನದಿಂದ ಕಾಯ್ದುಕೊಂಡಿದ್ದರೆ, ಅವರು ಇದಕ್ಕೆ ವ್ಯತಿರಿಕ್ತವಾಗಿ ಬುದ್ಧಿವಂತರಾಗಿ ಮಿಂಚು ಹರಿಸಿದ್ದಾರೆ. ಪುಸ್ತಕದುದ್ದಕ್ಕೂ, ಗಂಭೀರತೆಯೊಂದಿಗೆ, ಭಾವುಕತೆ, ತುಂಟತನ, ಪೋಲಿತನ, ಖಾಲಿತನ ಎಲ್ಲವೂ ಇದೆ. ಸರಳ ಭಾಷೆ, ಸುಲಲಿತ ನಿರೂಪಣೆಯೊಂದಿಗೆ ಓದಿಸಿಕೊಂಡು ಹೋಗುವ 29 ಅಧ್ಯಾಯಗಳನ್ನು ಹೊತ್ತ ಈ ಬೃಹತ್ ಸಂಚಿಕೆಯ ಅನುಬಂಧದಲ್ಲಿ ‘ಗುರುವುನು ಮಿಂಚಿನ ಶಿಷ್ಯುಡು’ ಎಂಬ ಅಧ್ಯಾಯವಿದೆ. ಅಲ್ಲಿ 71 ವಿದ್ಯಾರ್ಥಿಗಳ ಪ್ರಸ್ತಾಪ-ಪರಿಚಯವಿದೆ. ಇದನ್ನು ಓದಿದಾಗ ಇಲ್ಲಿ ನಾನೂ ಇರಬೇಕಿತ್ತು ಅಂತ ಅನ್ನಿಸಿದ್ದು ಸುಳ್ಳಲ್ಲ. ಅಲ್ಲಿ ಸೇರುವಂತ ಸಾಧನೆ ನನ್ನದೇನಿಲ್ಲ ಅನ್ನುವುದೂ ಅಷ್ಟೇ ಸತ್ಯ. ಆದರೂ, “ಈ ಅಧ್ಯಾಯದಲ್ಲಿ ಯಾರದಾದರೂ ನೆನಪು ಬಿಟ್ಟು ಹೋಗಿದ್ದರೆ ಅದಕ್ಕೆ ನನ್ನ ಮರೆಗುಳಿತನ ಕಾರಣ” ಎಂದಿದ್ದಾರೆ. ಅವರ ಮರೆಗುಳಿತಕ್ಕೆ ಒಂದಿಷ್ಟು ಬೆಂಕಿಹಾಕ ಅಂತ ಮನದಲ್ಲೇ ಗುರುವಿಗೇ ತಿರುಮಂತ್ರ ಹಾಕಿ ನಕ್ಕು ಸುಮ್ಮನಾದೆ (ಅವರ ವಿದ್ಯಾರ್ಥಿನಿಯಾಗಿದ್ದ ಕಾಲದ ಅಂದಿನ ಅದೇ ಸಲಿಗೆಯಲ್ಲಿ)! ********************************************* ಚಂದ್ರಾವತಿ ಬಡ್ಡಡ್ಕ

ಬೊಗಸೆ ತುಂಬಾ ಕನಸು Read Post »

ಪುಸ್ತಕ ಸಂಗಾತಿ

ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ – ಸಿ.ಎನ್. ರಾಮಚಂದ್ರನ್:

ಪುಸ್ತಕ ಪರಿಚಯ ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ – ಸಿ.ಎನ್. ರಾಮಚಂದ್ರನ್: ಒಂದು ಅವಲೋಕನ (ಅಂಕಿತ ಪುಸ್ತಕ, ಬೆಂಗಳೂರು: ೨೦೨೦; ಪು.೧೬೦  ಬೆಲೆ: ರೂ.೧೫೦/-) ಭಾರತೀಯ ಕಾನೂನುಗಳ – ಅದರಲ್ಲೂ ವಿಶೇಷವಾಗಿ ‘ಭಾರತೀಯ ದಂಡ ಸಂಹಿತೆ’ – ಕುರಿತು ಮಾತನಾಡುವಾಗ “ಮಹಿಳೆ” ಎನ್ನುವುದನ್ನು ಒತ್ತಿ ಹೇಳಬೇಕಾಗಿ ಬಂದಿರುವುದು ನಿಜಕ್ಕೂ ದುರದೃಷ್ಟಕರವಾದರೂ ಅದೊಂದು ನಿಷ್ಠುರ ಸಾಮಾಜಿಕ ಸತ್ಯ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ‘ಸರ್ವರ ಸಮಾನತೆ’ಯನ್ನು ನಮ್ಮ ಸಂವಿಧಾನ ಎತ್ತಿ ಹಿಡಿದಿದೆಯಾದರೂ ಅದೊಂದು ಅತೀ ಉದಾತ್ತ ಆಶಯವಾಗಿ ಮಾತ್ರ ಉಳಿದುಕೊಂಡಿದೆ; ವಾಸ್ತವದಲ್ಲಿ ಹಾಗಿಲ್ಲ ಎನ್ನುವುದಕ್ಕೆ ಯಾವ ದೊಡ್ಡ ಸಂಶೋಧನೆಯೂ ಬೇಕಾಗಿಲ್ಲ. ಪುರುಷ-ಪ್ರಧಾನ ಭಾರತೀಯ ಸಮಾಜದಲ್ಲಿ (ವಿಶ್ವದ ಎಲ್ಲೆಡೆಯೂ ಇದೊಂದು ಸಾಮಾಜಿಕ ಅಸಮತೋಲನದ ಅತ್ಯಂತ ಸಾಮಾನ್ಯ ಸಮಸ್ಯೆ – ತರ ತಮ ವ್ಯತ್ಯಾಸಗಳು ಇವೆ ಎನ್ನುವುದನ್ನು ಒಪ್ಪಿಕೊಂಡಾಗಲೂ!) ಮಹಿಳೆ ಲಿಂಗಾಧಾರಿತ ತಾರತಮ್ಯ ಹಾಗೂ ಅದರೊಂದಿಗೆ ಅನೂಚಾನವಾಗಿ ಬೆಸೆದುಕೊಂಡಿರುವ ಶೋಷಣೆಗೆ ತಲೆತಲಾಂತರಗಳಿಂದಲೂ  ಒಳಗಾಗುತ್ತಾಳೆ ಇದ್ದಾಳೆ. ಮಹಿಳೆಗೆ ನ್ಯಾಯ, ಸಾಮಾಜಿಕ ಭದ್ರತೆ ಹಾಗೂ ರಕ್ಷಣೆ   ಒದಗಿಸುವ ನಿಟ್ಟಿನಲ್ಲಿ ರಚಿಸಲ್ಪಟ್ಟ ಕಾನೂನುಗಳ ಮಾಹಿತಿ, ನಿರ್ವಚನ ಮತ್ತು ಅವುಗಳ ಮಿತಿಗಳನ್ನು ಈ ಪುಸ್ತಕ ಸಾಧಾರವಾಗಿ ಮಂಡಿಸುತ್ತದೆ. ಇಲ್ಲಿಯ ಭಾಷೆ ಕಾನೂನಿನ ಕ್ಲಿಷ್ಟತೆಯನ್ನು ನಿವಾರಿಸಿ ಅತ್ಯಂತ ಸರಳ ಹಾಗೂ ಸ್ಪಷ್ಟ ಮಾತುಗಳಲ್ಲಿ ವಿಷಯ ಮಂಡನೆ ಮಾಡುವುದರಿಂದ ಎಲ್ಲಾ ವರ್ಗದ ಓದುಗರಿಗೂ – ವಿಶೇಷತಃ ಸಾಮಾನ್ಯ ಮಹಿಳೆಯರಿಗೂ ಇದು “ನೀರಿಳಿಯದ ಗಂಟಲಲ್ಲಿ ಕಡುಬಂ ತುರುಕಿ”ದಂತಾಗದೆ ಇರುವುದು ಈ ಪುಸ್ತಕದ ಮೊದಲ ಹೆಗ್ಗಳಿಕೆ. ಈ ಪುಸ್ತಕದ ಅಧ್ಯಾಯಗಳ ಶೀರ್ಷಿಕೆಗಳೇ ಗಮನ ಸೆಳೆಯುವಂತಿವೆ: ಅಧ್ಯಾಯ ೧: ಮಹಿಳೆ ಮತ್ತು ವೈವಾಹಿಕ-ಕೌಟುಂಬಿಕ ವ್ಯವಸ್ಥೆ (ಪು.೧೮-೬೩) ಅಧ್ಯಾಯ ೨: ಮಹಿಳೆಯ ಮೇಲಾಗುವ ಲೈಂಗಿಕ ಅಪರಾಧಗಳು (ಪು.೬೪-೮೬) ಅಧ್ಯಾಯ ೩: ಮಹಿಳೆಯ ಘನತೆಗೆ ಕುಂದು ತರುವ ಅಪರಾಧಗಳು (ಪು.೮೭-೧೦೩) ಅಧ್ಯಾಯ ೪: ಮಹಿಳೆಯ ಹಕ್ಕುಗಳು (೧೦೪-೧೧೦) ಅಧ್ಯಾಯ ೫: ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಮಹಿಳೆಯರು (೧೧೧-೧೩೪) ಅಧ್ಯಾಯ ೬: ಉಪಸಂಹಾರವಿಲ್ಲದ ಕಥನ (ಪು.೧೩೫-೧೩೭)    ಸಿ.ಎನ್. ರಾಮಚಂದ್ರನ್ ಅವರು ಇಂಗ್ಲೀಷ್ ಪ್ರಾಧ್ಯಾಪಕರಾಗಿ, ತಮ್ಮ ವಿಸ್ತಾರವಾದ ಓದು, ಬರೆಹ, ಅಧ್ಯಯನಗಳಿಂದ   ಮಹತ್ವಪೂರ್ಣ ಒಳನೋಟಗಳನ್ನು ಕೊಡಬಲ್ಲ ಸಾಹಿತ್ಯ-ಸಂಸ್ಕೃತಿ ವಿಮರ್ಶಕರಾಗಿ, ಉತ್ತಮ ಲೇಖಕರಾಗಿ, ಅನುವಾದಕರಾಗಿ ಖ್ಯಾತನಾಮರು. ಅವರು ಕಾನೂನಿಗೆ ಸಂಬಂಧಪಟ್ಟ ಈ ಪುಸ್ತಕ ಬರೆಯಲು ಕಾರಣ, ಪ್ರೇರಣೆ ಏನು ಎನ್ನುವುದು ಒಂದು ಕುತೂಹಲಕ್ಕೆ ಕಾರಣವಾಗಬಹುದಾಗಿದೆ. ಇದಕ್ಕೆ ಉತ್ತರ ಹೀಗಿದೆ: ಸಾಹಿತ್ಯ ಎಂದರೆ ಜೀವನ ಪ್ರೀತಿ, ಜೀವಪರ ನೀತಿ ಎಂದೇ ಅರ್ಥ ಅಲ್ಲವೇ? ಅಂದ ಮೇಲೆ ಜೀವನವನ್ನು ಸಹ್ಯವಾಗಿಸುವ, ಬದುಕನ್ನು ಕಟ್ಟಿಕೊಡುವ ಎಲ್ಲಾ ಕ್ರಿಯೆಗಳೂ ಅದರ ವ್ಯಾಪ್ತಿಯೊಳಗೆ ಸಹಜವಾಗಿ ಬರುತ್ತವೆ. ಜೊತೆಗೆ ಅವರ ಕಾನೂನು ಆಧ್ಯಯನದ ಪದವಿ ಕೂಡಾ ಈ ಪುಸ್ತಕಕ್ಕೊಂದು ಅಧಿಕೃತ ಮುದ್ರೆಯನ್ನೂ ಒತ್ತಿದೆ ಎಂಬುದೂ ಸತ್ಯ. ಪದ್ಮರಾಜ ದಂಡಾವತಿಯವರು ಪುಸ್ತಕಕ್ಕೆ ಬರೆದ ತಮ್ಮ ಮುನ್ನುಡಿಯಲ್ಲಿ ಇದನ್ನು ಸರಿಯಾಗಿಯೇ ಗುರುತಿಸಿದ್ದಾರೆ: “ಸಾಹಿತ್ಯಕ್ಕೂ, ಕಾನೂನಿಗೂ ಎಲ್ಲಿಯೋ ಒಂದು ಆಳವಾದ ಸಂಬಂಧ ಇರುವಂತೆ ಕಾಣುತ್ತದೆ ಮತ್ತು ಸಾಹಿತ್ಯ ಕೊಡುವ ತಿಳುವಳಿಕೆ ಕಾನೂನಿನ ತಪ್ಪುಗಳ ಜೊತೆಗೆ ಸದಾ ಸಂಘರ್ಷ ಮಾಡುತ್ತಾ ಇರುವಂತೆಯೂ ಕಾಣುತ್ತದೆ… ಈ ಸಂಘರ್ಷದ ಮುಂದುವರಿಕೆಯಾಗಿಯೇ ರಾಮಚಂದ್ರನ್ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಅವರು ಕೇವಲ ಕಾನೂನಿನ ವಿದ್ಯಾರ್ಥಿಯಾಗಿದ್ದರೆ ಈ ಪುಸ್ತಕ ಈಗಿನ ಸ್ವರೂಪದಲ್ಲಿ ಇರುತ್ತಿರಲಿಲ್ಲ ಎಂದೂ ಧೈರ್ಯವಾಗಿ ಹೇಳಬಹುದು. ಅಂದರೆ ಪ್ರೊ. ಸಿ.ಎನ್.ಆರ್. ಅವರು ಸಾಹಿತ್ಯದ ವಿದ್ಯಾರ್ಥಿ ಎಂಬ ಕಾರಣಕ್ಕಾಗಿಯೇ ಈ ಪುಸ್ತಕದ ವಸ್ತು ಅವರನ್ನು ಹೆಚ್ಚು ಕಾಡಿದೆ ಎಂದೂ ನಾವು ಅರ್ಥೈಸಬಹುದು. ಏಕೆಂದರೆ ಸಾಹಿತ್ಯ ನಮಗೆ ಕಲಿಸುವುದು ಮನುಷ್ಯ ಪ್ರೀತಿಯನ್ನು ಮತ್ತು ಜೀವಪರತೆಯನ್ನು. ಬರೀ ಕಾನೂನಿನ ಜ್ಞಾನ ಇದನ್ನು ಕಲಿಸುವುದಿಲ್ಲ. ಶಾಸನ ರೂಪಿಸುವ ರಾಜಕಾರಣಿ ಸಾಹಿತ್ಯವನ್ನು ಓದಬೇಕಾದುದು ಈ ಕಾರಣಕ್ಕಾಗಿ, ಈ ಜೀವಪರತೆಯನ್ನು ಗಳಿಸಬೇಕಾದ ಅಗತ್ಯಕ್ಕಾಗಿ.”                             ಭಾರತೀಯ ದಂಡ ಸಂಹಿತೆ ಬ್ರಿಟಿಷರಿಂದ ನಮಗೆ ಬಂದ ಬಳುವಳಿ! ತಮ್ಮ ಸ್ವಾರ್ಥ-ಸಾಧನೆಗಾಗಿ ಇಲ್ಲಿ ಬಂದ ಬ್ರಿಟಿಷರು ಆಡಳಿತದ ಜೊತೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾನೂನುಗಳನ್ನು ರಚಿಸಿದ್ದು (ರೈಲ್ವೆ, ಪೋಸ್ಟಲ್ ವ್ಯವಸ್ಥೆಯನ್ನು ಸ್ಥಾಪಿಸಿದ್ದು ಇತ್ಯಾದಿ) ಮತ್ತು ನಮಗೆ ಅವು ಇಂದಿಗೂ ಪ್ರಮಾಣಗಳಾಗಿ ಉಳಿದಿವೆಯೆಂದರೆ ಅದು ನಮ್ಮ ಆತ್ಮವಿಮರ್ಶೆಗೆ ಒಡ್ಡಿದ ಸವಾಲು ಎಂದೇ ಅರ್ಥವಲ್ಲವೇ? ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೈದು ವರ್ಷಗಳಾದರೂ ಇಂದಿನ ಪರಿಸ್ಥಿತಿಗನುಗುಣವಾಗಿ ಈ ಕಾನೂನುಗಳ ಸಮಗ್ರ ಪರಿಷ್ಕರಣೆ ಆಗಬೇಕೆಂದು ಕಾನೂನು ಪಂಡಿತರಾದಿಯಾಗಿ ಪರಿಣಿತರೆಲ್ಲರೂ ಹೇಳುತ್ತಿದ್ದರೂ ಅದು ಈ ವರೆಗೂ ತೃಪ್ತಿಕರವಾಗಿ ಸಾಧ್ಯವಾಗಿಲ್ಲ ಎನ್ನುವುದು ಸತ್ಯ. ಈ ಕುರಿತು ಲೇಖಕರಿಗೂ ವಿಷಾದವಿದೆ. ನಮ್ಮ ಕೋರ್ಟು ಕಛೇರಿಗಳು ‘justice delayed is justice denied’ ಎನ್ನುವ ಮಾತಿಗೆ ಪುಷ್ಟೀಕರಣ ನೀಡುವ ತಾಣಗಳಾಗಿವೆ ಎಂಬುದಕ್ಕೆ ಬಾಕಿ ಉಳಿದಿರುವ ಖಟ್ಲೆಗಳ ಸಂಖ್ಯೆಯೇ ನಿರ್ವಿವಾದ ಪುರಾವೆ. ಒಂದು ಅಂದಾಜಿನ ಪ್ರಕಾರ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣಾಧೀನ ಕೈದಿಗಳಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರಿಗೆ ತಾವು ಮಾಡಿದ ಅಪರಾಧವೇನು ಎಂಬುದೇ ಗೊತ್ತಿಲ್ಲ, ಜೊತೆಗೆ ಅವರಲ್ಲಿ ಹೆಚ್ಚಿನವರು ಅತ್ಯಂತ ಕೆಳವರ್ಗದ ಬಡಜನರು ಎನ್ನುವ ವಿಡಂಬನೆಯೂ ಇರುವುದು ಕಹಿ ಸತ್ಯ. ದೇಶದ ಅತೀ ದೊಡ್ಡ ಕಾರಾಗ್ರಹ ದೆಹಲಿಯ ತಿಹಾರ್ ಜೈಲು ಇದಕ್ಕೆ ಸಾಕ್ಷಿ. ಕಿರಣ್ ಬೇಡಿಯವರು ಇಲ್ಲಿನ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಅವರು ಕೈಗೊಂಡ ಸುಧಾರಣೆಗಳ ಹೊರತು ಬೇರೇನೂ ಇಂದಿಗೂ ಆಗಿಲ್ಲ. ನಮ್ಮಲ್ಲಿ ಕಾನೂನುಗಳ ಕೊರತೆಗಿಂತ ಇರುವ ಅಸಂಖ್ಯಾತ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸದಿರುವುದೇ ಅತೀ ದೊಡ್ಡ ಸಮಸ್ಯೆ. ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಏನೆಂದರೆ ಈ ಹಿನ್ನೆಲೆಯ ಅರಿವಿಲ್ಲದೇ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಲಾಗಲಿ, ಅರ್ಥೈಸಿಕೊಳ್ಳಲಾಗಲಿ ಸಾಧ್ಯವಿಲ್ಲ. ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡ ನ್ಯಾಯದೇವತೆ justice without discrimination ಗೆ ಸಮರ್ಥ ರೂಪಕವಾಗಿದ್ದೂ –- ಮಹಾಭಾರತದ ಗಾಂಧಾರಿಯಂತೆ — ವಸ್ತುಸ್ಥಿತಿಗೂ ಅಷ್ಟೇ  ಕುರುಡಾಗಿರುವುದೂ ಒಂದು ವ್ಯಂಗ್ಯವಲ್ಲದೆ ಮತ್ತೇನು? ಮಹಿಳೆಯ ದುಸ್ಥಿತಿಗೆ ಎರಡು ಕಾರಣಗಳನ್ನು ಪ್ರೊ. ಸಿ.ಎನ್.ಆರ್. ನೀಡುತ್ತಾರೆ: “ಮೊದಲಿಗೆ ಮಹಿಳೆ ತನ್ನ ಆರ್ಥಿಕ ಸ್ವಾತಂತ್ರ್ಯವನ್ನು ಕಳೆದುಕೊಂಡಳು (ಕ್ರಿ.ಶ. ಮೂರನೆಯ ಶತಮಾನದಿಂದ); ನಂತರ, ಶಿಕ್ಷಣಾವಕಾಶಗಳಿಂದ ವಂಚಿತಳಾದಳು. ಪರಿಣಾಮತಃ ಸಮಾಜದಲ್ಲಿಯೂ ತನ್ನ ಸ್ಥಾನ-ಮಾನಗಳನ್ನು ಕಳೆದುಕೊಂಡು ಸಂಪೂರ್ಣವಾಗಿ ಪರಾವಲಂಬಿಯಾದಳು.” ಇವೆರಡೂ ಸಾಧನಗಳಿದ್ದೂ ಮಹಿಳೆ ಸುರಕ್ಷಿತಳಲ್ಲ ಎನ್ನುವುದಕ್ಕೆ ‘ರೂಪನ್ ಬಜಾಜ್ – ಕೆ.ಪಿ.ಎಸ್. ಗಿಲ್ ಪ್ರಕರಣ’ (ಪು.೯೦) ಮತ್ತು ‘ರೀನಾ ಮುಖರ್ಜಿ – ಸ್ಟೇಟ್ಸ್ ಮನ್ ಪತ್ರಿಕಾ ಸಂಸ್ಥೆ’ (ಪು.೦೩-೯೫) ಕೇಸ್-ಗಳೇ ಸಾಕ್ಷಿ. ಹಾಗಿದ್ದರೆ ಇದಕ್ಕೆ ಆತ್ಯಂತಿಕವಾದ ಕಾರಣವೇನೆಂದು ಹುಡುಕಿದರೆ ಅದು ಆಕೆ ‘ಮಹಿಳೆ’ಯಾಗಿರುವುದೇ, ಅಂದರೆ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ‘ಲೈಂಗಿಕತೆ – sexually desirable, and vulnerable too – ಭೋಗವಸ್ತು’ವಾಗಿ  ಎಂಬ ಸಾರ್ವಕಾಲಿಕ ಸತ್ಯ ಮುಖಕ್ಕೆ ರಾಚುವಂತೆ ಎದ್ದು ಕಾಣುತ್ತದೆ. ಇದು ಎಲ್ಲಾ ಕಾಲಕ್ಕೂ, ಎಲ್ಲಾ ಸಮಾಜಗಳಲ್ಲಿಯೂ ಇದ್ದಂತಹ, ಇರುವಂತಹ ಸಮಸ್ಯೆ. ಹಾಗಿದ್ದಾಗಲೂ ಕೂಡಾ ಮಹಿಳೆಯರ ಸಬಲೀಕರಣಕ್ಕೆ ಒತ್ತು ಕೊಡುವ, ಜೊತೆಗೆ ಅವರಿಗೆ ರಕ್ಷಣೆ ಕೊಡುವ ಕೆಲಸ ಜೊತೆ ಜೊತೆಯಾಗಿ ಸಾಮಾಜಿಕ-ನೈತಿಕ-ಕಾನೂನಾತ್ಮಕ ನೆಲೆಗಳಲ್ಲಿ ಸಾಗಬೇಕಾದ ಅನಿವಾರ್ಯತೆ ಎಲ್ಲಾ ನಾಗರೀಕ ಸಮಾಜದ ಜವಾಬ್ದಾರಿ ಎನ್ನುವುದನ್ನು ಮರೆಯಲಾಗದು. ಈ ನಿಟ್ಟಿನಲ್ಲಿ ರಚಿತವಾಗಿರುವ ಕಾನೂನುಗಳ ಪರಿಚಯ ಹಾಗೂ ಜ್ಞಾನ ಎಲ್ಲರಿಗೂ ಇರಬೇಕಾದ ಆವಶ್ಯಕತೆ ಇದೆ. ಹಾಗಾಗಿ ಈ ಪುಸ್ತಕದ ಪ್ರಸ್ತುತತೆ, ಮೌಲಿಕತೆ ಪ್ರಶ್ನಾತೀತ.  ಯಾಕೆಂದರೆ ignorance of law is not an excuse to violate law nor it is a license to commit any crime! ಕಾನೂನಿನ ಕುರಿತು ಅಜ್ಞಾನಿಯಾಗಿರುವುದು ಅಪಾಯಕ್ಕೆ ಆಹ್ವಾನವಿತ್ತಂತೇ ಸರಿ. ‘ಸೆಕ್ಷನ್ ೪೯೪ ಮತ್ತು ೪೯೮ ಎ’ – ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ಕಾನೂನುಗಳ ಉಪಯುಕ್ತತೆ ಹಾಗೂ ವ್ಯತಿರಿಕ್ತ ಪರಿಣಾಮಗಳ ಕುರಿತು ಸಾಕಷ್ಟು ಉದಾಹರಣೆಗಳ ಮೂಲಕ ವಿವರಿಸುತ್ತಾ ಸಿ.ಎನ್.ಆರ್. ಅವರು ಹೇಳುವ ಈ ಮಾತು ಮಾರ್ಮಿಕವಾಗಿದೆ: “ಈ ಜಗತ್ತಿನಲ್ಲಿ ಲೈಂಗಿಕ ಕಾಮದಂತೆಯೇ ಅರ್ಥ ಕಾಮವೂ ಕೂಡಾ ಎಂದಿಗೂ ಶಮನವಾಗದ ವ್ಯಸನವೆಂದು ಕಾಣುತ್ತದೆ.” ಲೈಂಗಿಕತೆ ಜೀವಿಯ ಆದಿಮ ಪ್ರವೃತ್ತಿಯಾಗಿಯೂ ಗುರುತಿಸಲ್ಪಟ್ಟಿದೆ ತಾನೇ? “ಆಹಾರ, ನಿದ್ರಾ, ಭಯ, ಮೈಥುನಂಚ ಸಾಮಾನ್ಯಮೇತತ್ ಪಶುಭಿಃ ನರಣಾಮ್ | ಧರ್ಮೋಹಿ ತೇಷಾಂ ಅಧಿಕೊ ವಿಶೇಷಃ ಧರ್ಮೇಣ ಹೀನಃ ಪಶುಭಿಃ ಸಮಾನಃ||” ಸಕಲ ಚರ ಜೀವಿಗಳಿಗೆ ಅನ್ವಯವಾಗುವ ‘ಪ್ರಕೃತಿ ಧರ್ಮ ಚತುಷ್ಟಯ’ಗಳೆಂದರೆ ಆಹಾರ, ನಿದ್ರಾ, ಭಯ, ಮತ್ತು ಮೈಥುನ. ಹಾಗಾದರೆ ಪ್ರಾಣಿಗಳನ್ನೂ ಮನುಷ್ಯರನ್ನೂ ಪ್ರತ್ಯೇಕವಾಗಿಸುವಂಥದ್ದು ಏನು? ಅದೇ ಧರ್ಮ = ವಿವೇಕ = ಸರಿ, ತಪ್ಪುಗಳ ವಿವೇಚನೆ; ಅದೊಂದಿಲ್ಲದಿದ್ದರೆ ಮನುಷ್ಯನೂ ಪಶುವೇ ಸರಿ.’ ಯಾವಾಗ ಮನುಷ್ಯ ವಿವೇಚನಾರಹಿತನಾಗುತ್ತಾನೋ ಆಗೆಲ್ಲಾ ಅವನನ್ನು ಕಾನೂನಿನ ಅಂಕುಶದಿಂದ ನಿಯಂತ್ರಿಸುವ ಕೆಲಸ ಆಗಬೇಕಾದದ್ದೇ.  ‘ಸೆಕ್ಷನ್ ೪೯೮ ಎ’ ಅಡಿಯಲ್ಲಿ ಮಹಿಳೆಗೆ ನೀಡಿದ ಸ್ವಾತಂತ್ರ್ಯದ ದುರುಪಯೋಗ ನಡೆದು “ಗಂಡನನ್ನು ಹಾಗೂ ಗಂಡನ ಮನೆಯಲ್ಲಿರುವ ಅವನ ತಂದೆ, ತಾಯಿ, ಅಣ್ಣ, ತಮ್ಮಂದಿರು, ಅಕ್ಕ, ತಂಗಿಯರು ಎಲ್ಲರನ್ನೂ ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಅವರ ಮೇಲೆ ಸುಳ್ಳು ದೂರು ಕೊಟ್ಟು ಅವರೆಲ್ಲರನ್ನೂ ಜೈಲಿಗೆ ಅಟ್ಟುವ ಘಟನೆಗಳು ಮರುಕಳಿಸಲಾರಂಭಿಸಿದುವು.” (ಪು.೪೩). ಇದು ಸತ್ಯಸ್ಯ ಸತ್ಯ. ಹೆಚ್ಚನ ವಿವರಗಳಿಗೆ ‘ನಿಶಾ ಶರ್ಮ ಮೊಕದ್ದಮೆ’ (ಪು.೪೩-೪೬) ಮತ್ತು ‘ಅರ್ಣೆಶ್ ಕುಮಾರ್ ವರ್ಸಸ್ ಸ್ಟೇಟ್ ಆಫ್ ಬಿಹಾರ್’ ಮತ್ತು ‘ರಾಜೇಶ್ ಶರ್ಮಾ ಮೊಕದ್ದಮೆ’ (ಪು.೪೬-೪೯) ನೋಡಿ.  ಆದರೆ ಈ ‘ಆತಿರೇಕ’ವನ್ನು ಶತಮಾನಗಳಿಂದ ಶೋಷಣೆಗೆ ಪರ್ಯಾಯ ಹೆಸರೇ ಆದ ‘ಮಹಿಳೆ’ ತನ್ನಲ್ಲಿ ಅಂತಸ್ಥವಾಗಿದ್ದ, ಮಡುಗಟ್ಟಿದ್ದ ನೋವನ್ನು ಹೊರಹಾಕಿದ ಒಂದು ಸಾಮಾಜಿಕ ಸಂಕಥನವಾಗಿ (ವೃಥಾ ಶೋಷಿತರನ್ನು ಹೊರತುಪಡಿಸಿ) ನೋಡಿದರೆ ಆ ನೋವಿನ ಆಳ, ಅಗಲ, ವಿಸ್ತಾರ ಮನವರಿಕೆಯಾದೀತು! ಇದು ಮಹಿಳೆಯರ ಅತಿರೇಕ ವರ್ತನೆಗೆ ಸಮಜಾಯಿಷಿಕೆ ಅಲ್ಲ ಎನ್ನುವುದನ್ನು ಒತ್ತಿ ಹೇಳುತ್ತಿದ್ದೇನೆ. ಇದನ್ನು ಸಿ.ಎನ್.ಆರ್. ಅವರು ಗುರುತಿಸುವುದು ಹೀಗೆ: “ಯಾವುದೇ ಅವಕಾಶವಾಗಲಿ ಕಾನೂನು ಆಗಲಿ ಅದರ ಉದ್ದೇಶವನ್ನು ಮರೆತು ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಮನುಷ್ಯ ಸ್ವಭಾವ. ಈ ಹೇಳಿಕೆ ಸ್ತ್ರೀ-ಪರ ಕಾನೂನುಗಳಿಗೂ – ವಿಶೇಷವಾಗಿ ೪೯೮-ಎ ಸೆಕ್ಷನ್ ಗೆ – ಅನ್ವಯಿಸುತ್ತದೆ. (ಪು.೪೩)” ಅಂತೆಯೇ “ಮಹಿಳೆಯನ್ನು ನೋಡುವ, ಸ್ವೀಕರಿಸುವ ಸ್ತ್ರೀ-ಪುರುಷರ ಮನೋಭಾವ ಬದಲಾಗದಿದ್ದರೆ ಯಾವ ಕಾನೂನೂ ಅಥವಾ ಯೋಜನೆಯೂ ಸಂಪೂರ್ಣವಾಗಿ ಯಶಸ್ವಿಯಾಗುವುದಿಲ್ಲ ಎಂಬ ಖೇದಕರ ಸತ್ಯ ಸ್ಪಷ್ಟವಾಗುತ್ತದೆ. (ಪು.೫೪)”. ಈ ಒಳನೋಟಗಳು ಕೇವಲ ಶುಷ್ಕ ಕಾನೂನು ಪಾಂಡಿತ್ಯದಿಂದ ಸಾಧಿತವಾಗಲಾರದು; ಅದು ಸಾಹಿತ್ಯಮೂಲದ ಸಂವೇದನೆ – ಮನುಷ್ಯ ಸ್ವಭಾವಕ್ಕೊಂದು ಭಾಷ್ಯ ಎನ್ನುವುದೇ ಸರಿಯಾದ ಮಾತು. ಮಹಿಳೆಯ ಮೇಲೆ ನಡೆಯುವ ಅತ್ಯಂತ ಹೀನಾಯ, ಹೇಯ, ಅಮಾನವೀಯ, ಬರ್ಬರ ಕೃತ್ಯವೆಂದರೆ ಅತ್ಯಾಚಾರ. ನಮ್ಮ ನ್ಯಾಯಿಕ ವ್ಯವಸ್ಥೆ ಸಾಕ್ಯಾಧಾರಿತವಾದದ್ದು – evidence-based. ಇದೊಂದೇ ಕಾರಣಕ್ಕೆ, ಅಂದರೆ ಸಾಕ್ಷಿಯ ಕೊರತೆಯಿಂದ  ಅತ್ಯಾಚಾರದ ಕೇಸುಗಳು ಹೆಚ್ಚಿನ ಸಂದರ್ಭಗಳಲ್ಲಿ ಬಿದ್ದು ಹೋಗುತ್ತವೆ. ಈ ಕೇಸುಗಳ ವಿಚಾರಣಾ ವಿಧಾನ, ವೈದ್ಯಕೀಯ ಪರೀಕ್ಷಾ ವಿಧಾನ (ಈಗ ನಿಷೇಧಿಸಲ್ಪಟ್ಟ ಕುಖ್ಯಾತ  two finger-test) ಎಲ್ಲವೂ ಆ ದುರ್ಘಟನೆಯನ್ನು ಮತ್ತೆ ಮತ್ತೆ ಮಾನಸಿಕವಾಗಿ ಪುನರಾವರ್ತಿಸುತ್ತ, ಮಹಿಳೆಯ ಆತ್ಮಾಭಿಮಾನವನ್ನೇ ನಾಶಮಾಡುತ್ತವೆ. ಕಾನೂನಿಗೆ ಆದ ಹಲವು ತಿದ್ದುಪಡಿಗಳಲ್ಲಿ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ನನಗೆ ಮಹತ್ವದ್ದೆಂದು ಕಂಡು ಬಂದದ್ದು ಇದು: ಸಾಕ್ಷ್ಯ ಶಾಸನ, ಸೆಕ್ಷನ್

ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ – ಸಿ.ಎನ್. ರಾಮಚಂದ್ರನ್: Read Post »

ಪುಸ್ತಕ ಸಂಗಾತಿ

ಜನ್ನತ್ ಮೊಹಲ್ಲಾ

ಕಥೆಗಾರ, ಕಾದಂಬರಿಕಾರ ಅಬ್ಬಾಸ ಮೇಲಿನಮನಿಯವರು ಇವತ್ತು ನಮ್ಮನ್ನಗಲಿದ್ದಾರೆ. ಅವರ ಜನ್ನತ್ ಮೊಹಲ್ಲಾ ಎಂಬ ಕಾದಂಬರಿ ಕುರಿತು ಸುನಂದಾ ಕಡಮೆ ಬರೆದಿದ್ದಾರೆ ಜನ್ನತ್ ಮೊಹಲ್ಲಾ ಸುನಂದಾ ಕಡಮೆ ಅಬ್ಬಾಸ ಮೇಲಿನಮನಿಯವರ ಹೆಂಗರುಳು ತುಂಬಿದ ‘ಜನ್ನತ್ ಮೊಹಲ್ಲಾ’     ಎರಡು ಓದಿನ ನಂತರ ಈ ಜನ್ನತ್ ಮೊಹಲ್ಲಾದಲ್ಲಿ ಎರಡು ದಿನ ಇದ್ದು ವಿಶ್ರಮಿಸಿ ಬಂದಂತೆ ಪಾತ್ರಗಳು ಸಂಭಾಷಣೆಗಳು ಘಟನೆಗಳು ಪುನಃ ಪುನಃ ಕಾಡತೊಡಗಿದವು. ಅಚ್ಚರಿಯೆಂದರೆ ಇಲ್ಲಿಯ ಹೆಣ್ಣು ಮಕ್ಕಳಿಗೆ ಹಿಂಸೆಯೆನಿಸದ ಸ್ವಾತಂತ್ರ್ಯವಿದೆ ಮತ್ತು ಕಕ್ಕುಲಾತಿಯ ಬಂಧನಗಳಿವೆ. ನಂಬಿಕೆಗಳಿಗೆ ಕಟ್ಟುಬೀಳದೇ ಸಹಜ ಬದುಕು ನಡೆಸುವಂತೆ ಹುಮ್ಮಸ್ಸು ನೀಡುವ ವಾತಾವರಣವಿದೆ. ಹೆಣ್ಣುಮಕ್ಕಳು ಅಪೇಕ್ಷೆ ಪಟ್ಟ ಬದುಕನ್ನು ಆಯುವ ಪ್ರಜ್ಞಾನೀತಿಯಿದೆ. ಇಲ್ಲಿ ಪ್ರೀತಿ ಪ್ರೇಮ ಹಟ ರೋಷ ದ್ವೇಷ ಅಸೂಯೆ ಅನುಕಂಪ ಅಂತಃಕರಣ ಮುಂತಾದ ಮನುಷ್ಯ ಸಹಜ ಸ್ಪಂದನೆಗಳೆಲ್ಲವೂ ಬಿಡಿಬಿಡಿಯಾದ ಆಕೃತಿಯಾಗಿ ಮೇಳೈಸಿವೆ. ನಮ್ಮ ಒಟ್ಟೂ ಸಮಾಜ ವ್ಯವಸ್ಥೆಯೇ ಪುರುಷ ಪ್ರಧಾನವಾಗಿರುವದರಿಂದ, ನಮ್ಮ ಶಿಕ್ಷಣ ನೀತಿ ಶಾಸ್ತç ಕಾನೂನು ಆಡಳಿತ ಉದ್ಯೋಗ ಈ ಎಲ್ಲ ಕ್ಷೇತ್ರಗಳಲ್ಲೂ ಗಂಡಿಗೊಂದು ಹೆಣ್ಣಿಗೊಂದು ಪ್ರತ್ಯೇಕ ಮಾನದಂಡ ಏರ್ಪಟ್ಟಿರುವದು ಕೃತ್ರಿಮ ಅನ್ನುವ ಗೋಜಿಗೇ ಹೋಗುವಂತಿಲ್ಲ ಎನ್ನುವಷ್ಟರ ಮಟ್ಟಿಗೆ ನಾವೂ ಹೊಂದಾಣಿಕೆ ಮಾಡಿಕೊಂಡುಬಿಟ್ಟಿದ್ದೇವೆ. ಎಲ್ಲ ಧರ್ಮಗಳಲ್ಲೂ ಹೆಣ್ಣಿನ ಪ್ರಜ್ಞೆಯನ್ನು ಸಾವಿರಾರು ವರ್ಷಗಳಿಂದ ಒಲೆ, ಅಡಿಗೆಮನೆ, ಕಸಬರಿಗೆ, ಕನ್ನಡಿ, ಮೆಹಂದಿ ಹೀಗೆ ಹೊಸ್ತಿಲೊಳಗೇ ಕಟ್ಟಿಹಾಕಿರುವದರಿಂದ ನಮಗೆ ವಿಕಾಸ ಎಂಬುದು ಒಂದು ವಿದೇಶೀ ಪರಿಕಲ್ಪನೆ. ಸ್ತ್ರೀಯರನ್ನು ಒಂದು ವಸ್ತು ಅಥವಾ ಒಂದು ಪದಾರ್ಥದಂತೆ ಭಾವಿಸಿರುವ ಈ ವ್ಯವಸ್ಥೆ, ಹೆಣ್ಣನ್ನು ಇಂದಿಗೂ ಎರಡನೇ ನಾಗರಿಕಳಾಗಿಯೇ ನೋಡುತ್ತ ಬಂದಿದೆ. ಆದರೆ ಈ ಕೃತಿಯಲ್ಲಿ ಅಲ್ಲಲ್ಲಿ ಅವಳಿಗೆ ತುಂಬಿದ ಚೈತನ್ಯದಾಯಕವಾಗಿ ಮಿಡಿಯುವ ಜೀವ, ಲೇಖಕರ ಔದಾರ್ಯವನ್ನೂ ಮೀರಿ ಬೆಳೆದು ನಿಂತಿರುವುದು ಒಂದು ಸೋಜಿಗವೇ ಸರಿ. ಇಲ್ಲಿಯ ಹೆಂಗರುಳು ತುಂಬಿದ ಜಗತ್ತು, ನನಗೆ ಈ ಕಾದಂಬರಿ ಇಷ್ಟವಾಗಲು ಕಾರಣ.      ಕಾದಂಬರಿಕಾರ ಅಬ್ಬಾಸ್ ಮೇಲಿನಮನಿಯವರು ಅತ್ಯಂತ ಸಹಜವಾದ ಸ್ತ್ರೀಪರ ದೃಷ್ಟಿಕೋನವನ್ನು ಹೊಂದಿರುವವರಾದ್ದರಿಂದ ಈ ಮೊಹಲ್ಲಾ ಪರಂಪರೆಯ ಜಾಡ್ಯವನ್ನು ನಿವಾರಿಸಿಕೊಳ್ಳುತ್ತಲೇ ಮನುಷ್ಯತ್ವದ ಉನ್ನತಿಯನ್ನು ಇಡಿಯಾಗಿ ತನ್ನೊಡಲಲ್ಲಿಟ್ಟಿಕೊಂಡು ಸಮೃದ್ಧವಾಗಿ ಮೂಡಿ ಬಂದ ಕೃತಿ. ಹೀಗೆ ಅಮಿನೂರಿನಲ್ಲಿ ಮೈತೆತ್ತ ಪ್ರತಿಯೊಬ್ಬ ಮಹಿಳೆಯೂ ಮಾನವೀಯ ಅಂತಃಕರಣವುಳ್ಳವಳು. ವ್ಯವಸ್ಥೆಯ ಕಾರಸ್ಥಾನಕ್ಕೆ ಬಲಿಪಶುವಾಗುವ ಹೆಣ್ಣುಗಳು ತಂತಮ್ಮ ಮನೋಸ್ತೈರ್ಯದಿಂದಲೇ ಈ ಕಾದಂಬರಿಯ ಅಂತಃಸತ್ವವಾಗಿ ಬೆಳೆದು ನಿಂತಿದ್ದಾರೆ. ಕೆಲವು ಪುರುಷರ ಸಣ್ಣತನ ದುಷ್ಟತನ ಧರ್ಮಾಂಧತೆಯ ನಡುವೆಯೇ ಬೆಂದು ಬಸವಳಿದು ತಲ್ಲಣಿಸುವ ಈ ಮೊಹಲ್ಲಾದಲ್ಲಿಯ ಪ್ರತಿಯೊಬ್ಬ ಸ್ತ್ರೀ ತನ್ನ ಹೆಜ್ಜೆ ಹೆಜ್ಜೆಗೂ ಗೆಲುವಿನ ದಾರಿಯನ್ನೇ ಹಿಡಿಯುತ್ತಾಳೆ. ಇಲ್ಲಿ ಜೀವಿಸುವ ಹನ್ನೆರಡು ಪ್ರಮುಖ ಹೆಣ್ಣು ಜೀವಗಳಲ್ಲಿ ಒಬ್ಬೊಬ್ಬರದೂ ಒಂದೊಂದು ದಾರಿ. ಒಂದೊAದು ನಡೆ. ಬೇರೆ ಬೇರೆ ನೋಟ. ವಿವಿಧ ತರ್ಕಗಳು, ಪ್ರತ್ಯೇಕ ಸಂವೇದನೆಗಳು, ಎಲ್ಲ ಮನೋಭೂಮಿಕೆಗಳೂ ಸೇರಿ ಈ ನೆಲದ ನೆಮ್ಮದಿಯ ಬದುಕಿನ ಮಹತ್ತರವಾದೊಂದು ಆಕಾಂಕ್ಷೆಯೊಂದಿಗೆ ಜನ್ನತ್ ಮೊಹಲ್ಲಾ ರೂಪಿತವಾಗಿದೆಯೇನೋ ಅನಿಸುತ್ತದೆ.       ಆರಂಭದಲ್ಲಿ ನಿರಪರಾಧಿ ಮೆಹರುನ್ನಿಸಾ ತನ್ನ ಸುರುಳೀತ ದಾರಿಯಲ್ಲಿ ಅಕಾರಣ ಒದಗಿ ಬಂದ ಅನೇಕ ಸಂಧಿಗ್ಧಗಳನ್ನು ಮೆಟ್ಟಿ ನಿಲ್ಲುತ್ತಾಳೆ. ಕೊನೆಯಲ್ಲಿ ಗಂಡ ಜಾವೇದನೇ ಕ್ಷಮೆ ಕೇಳಿದರೂ ಅವನ ಮಾತನ್ನು ಧಿಕ್ಕರಿಸಿ ‘ಸ್ವಂತ ಬುದ್ಧಿ ಮತ್ತು ಮನುಷ್ಯತ್ವ ಇಲ್ಲದವನೊಂದಿಗೆ ನಾನು ಜಿಂದಗಿ ಮಾಡುವುದಿಲ್ಲ’ ಎಂದು ತಾನು ಹುಟ್ಟಿದ ಮನೆಯ ದಾರಿ ಹಿಡಿಯುವ ಮೆಹರುನ್ನೀಸಾ ವ್ಯವಸ್ಥೆಯ ತುಳಿತದಿಂದಲೇ ಸ್ವತಂತ್ರ ಬಾಳಿಗೆ ಮುನ್ನುಡಿ ಬರೆದವಳು. ಮಗುವನ್ನು ಕಳೆದುಕೊಂಡ ಸಂಕಟದಲ್ಲೂ ತನ್ನ ದಾರಿಯನ್ನು ನೇರವಾಗಿ ಗುರುತಿಸಿಕೊಂಡವಳು. ಕಷ್ಟ ಸಹಿಷ್ಣುವಾಗಿ ಬಾಳಿದ ರೆಹಮಾನನ ತಾಯಿ ಅಮೀನಾ ಕೂಡ ಇಡೀ ಬದುಕನ್ನು ಒಳ್ಳೆಯದರ ನಿರೀಕ್ಷೆಯಲ್ಲೇ ಕಳೆದವಳು. ಸಣ್ಣ ವಯದಲ್ಲೇ ಗಂಡನನ್ನು ಕಳಕೊಂಡು ಮಗ ಕೆಲಕಾಲ ದೂರವಾದಾಗ್ಯೂ ಏಕಾಂಗಿ ಜೀವಿಸಿದವಳು. ಆ ಮೂಲಕ ಇಡೀ ಸಮಾಜವನ್ನು ಕ್ಷÄಲ್ಲಕವಲ್ಲದ ರೀತಿಯಲ್ಲಿ ಮುನ್ನಡೆಸಬೇಕೆನ್ನುವವಳು. ವಿಧವೆ ತಾಹಿರಾಳನ್ನು ಸೊಸೆ ಮಾಡಿಕೊಂಡು ಸಂಪ್ರದಾಯದ ವಿರುದ್ಧವೂ ಒಂದು ಕಲ್ಲು ಎಸೆದವಳು. ಸಮಾಜ ಕೊಡಮಾಡದ ನೆಮ್ಮದಿಯನ್ನು ತನ್ನ ವೈಚಾರಿಕ ಬೆಳಕಿನಲ್ಲೇ ಪಡಕೊಂಡವಳು.       ತಂದೆಯಿಲ್ಲದ ಬಡ ಹುಡುಗ ರೆಹಮಾನನನ್ನು ತನ್ನ ಮಗನಂತೆಯೇ ನೋಡಿಕೊಂಡ, ಪ್ರಭಯ್ಯ ಹಿರೇಮಠ ಮಾಸ್ತರರ ಹೆಂಡತಿ ಮಲ್ಲಮ್ಮ,, ನಿಸ್ವಾಥದಿಂದ ಓದುಗರ ಮನಸ್ಸಿನಲ್ಲಿ ನಿಲ್ಲುತ್ತಾಳೆ. ಅನ್ಯ ಧರ್ಮೀಯ ಹುಡುಗನನ್ನು ಮನೆ ಸೇರಿಸುವ ತಾಯ ಮಮತೆಯನ್ನು ತನಗೆ ಸಿಕ್ಕ ಅವಕಾಶದಲ್ಲೇ ಸಾರ್ಥಕಪಡಿಸಿಕೊಳ್ಳಲು ಮೂಡಿ ಬಂದಂತಿರುವವಳು. ಅಮಿನೂರಿನ ಶಾಲೆಗೆ ಕನ್ನಡ ಶಿಕ್ಷಕಿಯಾಗಿ ಹೊಸ ಕದಿರು ತಂದ ಚಿಕ್ಕೋಡಿಯ ಧ್ಯಾನಸ್ಥ ಮನಸ್ಸಿನ ಹುಡುಗಿ ತಾಹಿರಾ ಪಟೇಲ್ ಸಹ ಚಿಕ್ಕ ವಯದಲ್ಲೇ ವೈಧವ್ಯದ ನೋವು ಅನುಭವಿಸಿದವಳಾದರೂ ಹೃದಯವಂತ ಸ್ವಭಾವದವಳು, ಅನಕ್ಷರಸ್ಥ ಮಹಿಳೆಯರಿಗೆ ಹೊಲಿಗೆ ಕಸೂತಿ ಕಲಿಸಿ ಪಾರತಂತ್ರದಿಂದ ನೇರ ನಿಲ್ಲಲು ಛಲ ತುಂಬಿದವಳು. ವೈಚಾರಿಕ ಪ್ರಜ್ಞೆಯ ಬೆಳಕನ್ನು ಚೆಲ್ಲುತ್ತ, ನತದೃಷ್ಟ ನಜಮಾಗೆ ಅಕ್ಷರ ಕಲಿಸುವವಳು, ಒಂದು ಕಡೆಯಿಂದ ‘ಮೊಹಲ್ಲಾದ ಹೆಂಗಸರ ತಲೆಕೆಡಿಸಿ ಪುರುಷರ ಮೇಲೆ ಎತ್ತಿಕಟ್ಟಿ ಅವಾಂತರ ಉಂಟು ಮಾಡುತ್ತಿದ್ದಾಳೆ’ ಎಂದು ತಿವಿಸಿಕೊಂಡರೂ, ಇನ್ನೊಂದು ಕಡೆಯಿಂದ ‘ಬಸವನ ಹುಳದಂಗ ತೆವಳೂದ್ರಾಗ ತೃಪ್ತಿ ಐತಿ ಹೊರತು ಹಕ್ಕಿ ಹಂಗ ಮುಗಿಲು ತುಂಬಾ ಹಾರಾಕ ಬಯಸೂದಿಲ್ಲ ಇವರು’ ಅಂತ ತನ್ನ ಜನರ ದುಗುಡ ದುಮ್ಮಾನ ಸ್ವಂತದ್ದಾಗಿಸಿಕೊಳ್ಳುವ ತಾಹಿರಾಳೇ ಈ ಕಾದಂಬರಿಯ ನಾಯಕಿಯಂತೆ ಮೇಲ್ನೋಟಕ್ಕೆ ಸೃಷ್ಟಿಯಾಗಿದ್ದಾಳೆ. ಹೆಣ್ಣುಮಕ್ಕಳ ಹತಾಷೆಯ ಬಾಳನ್ನು ಹಿಡಿದೆತ್ತಿ ಆತ್ಮಸ್ತೈರ್ಯ ತುಂಬುವದೂ ಅದರಂತೆ ಬದುಕುವುದೂ ಸಾಮಾಜಿಕ ಕಳಕಳಿಯ ಮನಸ್ಸಿಗೆ ಹಿಡಿದ ಘನತೆಯ ಕನ್ನಡಿಯಾಗಿದೆ.         ‘ಇನ್ಮೇಲೆ ನಜಮಾ ಶಾಲೀಗ ಹೊಕ್ಕಾಳ, ನಾನು ದುಡಿದು ಆಕೀಗ ಕಲಿಸ್ತೀನಿ’ ಎನ್ನುವ ನೂರಜಾನ ಕೂಡ ಕೌಟುಂಬಿಕ ವಲಯದಲ್ಲೇ ದಿಟ್ಟೆಯಾಗಿ ವರ್ತಿಸಿದವಳು. ಕುಡುಕ ಗಂಡ ಶಾಲೆ ಬಿಡಿಸಿ ಕೂಲಿಗೆ ಹಚ್ಚಿದ ಮಗಳನ್ನು, ಪುನಃ ಕೂಲಿ ಬಿಡಿಸಿ ಶಾಲೆಗೆ ಸೇರಿಸಿ ‘ಅವಳ ಕೆಲಸಾ ನಾನು ಮಾಡ್ತೀನಿ, ನನ್ನ ಕೂಸು ಓದು ಬರಹ ಕಲೀಲಿ’ ಎನ್ನುತ್ತ ತನ್ನ ಗಂಡನನ್ನೇ ಎದುರು ಹಾಕಿಕೊಂಡು ತನ್ಮೂಲಕ ಸಾಕ್ಷರದ ಮಹತ್ವವನ್ನು ಸ್ತಿçà ಸಮೂದಾಯಕ್ಕೆ ಅರುಹಿ, ಬಡವರ ಅವಶ್ಯಕತೆಗಳು ಹೆಣ್ಣುಮಗಳೊಬ್ಬಳ ಶಿಕ್ಷಣಕ್ಕೆ ಶಾಪವಲ್ಲ ಎಂಬುದನ್ನು ಕಾಣಿಸಿದವಳು. ಮುಂಬೈಗೆ ಮದುವೆಯಾಗಿ ಹೋಗಿ ಅಲ್ಪ ಕಾಲಾವಧಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ರೂಬಿಯಾ, ಪ್ರೀತಿಸಿದ ರೆಹಮಾನನನ್ನು ಅವನ ಬಡತನವೇ ಕಾರಣವಾಗಿ ಅವಳ ತಂದೆ ಎಸಗಿದ ದುರ್ವಿಧಿಯಿಂದ ಅತ್ತ ಮೆಚ್ಚಿದವನನ್ನು ಪಡೆಯಲಾರದೇ ಇತ್ತ ಅನ್ಯಾಯವನ್ನೂ ಸಹಿಸಲಾರದೇ ಜೀವ ತೆತ್ತವಳು. ರೆಹಮಾನನ ಸಖಿಯಾಗಬೇಕಾದವಳು ಸಾವಿನ ಸಖಿಯಾಗಿ ಹೋದ ದಾರುಣತೆಗೆ ಈಡಾದ ರೂಬಿಯಾ ವ್ಯವಸ್ಥೆಯ ಶೋಷಣೆಗೆ ಸಿಕ್ಕಿಹಾಕಿಕೊಂಡು ಅಸಹಾಯಕಳಾಗಿ ನಲುಗಿದಳು.       ತಸ್ಲೀಮಾ, ಗಂಡ ಅಶ್ರಫ್ ನ ಸಂಶಯಕ್ಕೆ ಎಡೆ ಮಾಡಿಕೊಡುವಂತೆ ಕುಹಕಿಗಳ ವಂಚನೆಗೆ ಬಲಿಯಾಗಿ ಕಾಲೇಜು ವಿದ್ಯೆಗೆ ತೆರೆದುಕೊಂಡವಳು. ದೂರ ಇದ್ದ ಗಂಡನನ್ನೇ ಕಾಯುತ್ತ ಚಿಂತಿಸುತ್ತ, ಅಲ್ಲಿಂದ ಹರಿದು ಬರುವ ಕೇವಲ ಹಣದ ರಾಶಿಗಾಗಿಯೋ ಎಂಬ ಸಂಶಯಕ್ಕೆಡೆ ಮಾಡುವಂತೆ ತನ್ನ ಮನಸ್ಥಿತಿಯನ್ನು ಕಿಂಚಿತ್ತೂ ಸಡಿಲಿಸದೇ ಕೂತಿದ್ದಾಗ್ಯೂ ಮನೆಯಲ್ಲೇ ಇರುವ ಕಾಮುಕನ ಹಿಂಸೆಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿ, ಆ ಹಿನ್ನೆಲೆಯಲ್ಲೇ ಅಗ್ನಿ ಪರೀಕ್ಷೆ ಎದುರಿಸುವ ಸಧೃಡ ಮನಸ್ಸಿನವಳಾಗಿ ರೂಪಗೊಂಡವಳು. ಹೊಟೇಲ್ ಮಾಲಿಕ ಹುಸೇನ್ ಮೀಯ್ಯಾನ ಹೆಂಡತಿ ಸುರಯ್ಯಾ, ವೃದ್ಧ ಪತಿಯ ಅನಾಸಕ್ತಿಯಿಂದ ಬೇಸತ್ತು ಆತ್ಮವಂಚಿತಳಾಗಿ ಯಾವುದೋ ಕ್ಷಣದಲ್ಲಿ ರೆಹಮಾನನ ಆಸರೆ ಬಯಸಿ ಬಂದು, ನಂತರ ಪಶ್ಚಾತ್ತಾಪದಿಂದ ನೇರ ಮನಸ್ಥಿತಿಗೆ ಮರಳಿದವಳು, ರೆಹಮಾನನ ಒಡತಿಯಾದ ಇವಳು ಕೊನೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ಪುನಃ ತನ್ನ ಗೋಡೆ ತಾನೇ ನಿರ್ಮಿಸಿಕೊಂಡ ಹಾಗೆ ಅನಿಸುತ್ತ ಸುರಯ್ಯಾ ತನ್ನ ಮನಸ್ಸನ್ನೇ ತಾನು ಸಮಾಧಿಮಾಡಿಕೊಂಡವಳಂತೆ ಕಾದಂಬರಿಯಿAದಲೇ ದೂರವಾಗುತ್ತಾಳೆ. ರೆಹಮಾನನ್ನು ಒಂದರೆಕ್ಷಣ ಬಯಸಿದ ಅಭೀಪ್ಸೆಯೇ ಅವಳ ಅಂತರAಗದ ಬಿಡುಗಡೆಯಂತೆ ಇಲ್ಲಿ ಧ್ವನಿತವಾಗಿದೆ.       ಜಾಹೀರಾ, ಖತೀಜಾ ಬೀಬಿಯ ಮಗ ನೌಷಾದನನ್ನು ಪ್ರೇಮಿಸಿ ಮನೆ ಬಿಟ್ಟೇ ಬರುವ ಧೈರ್ಯ ತೋರಿದವಳು. ರಾತ್ರಿಯ ಕತ್ತಲನ್ನು ಸಹ ಹಿಮ್ಮೆಟಿಸಿ ಬೆಳಕಿಗೆ ಮುಖ ಮಾಡಿ ನಿಂತು ಬದುಕಿನ ಪಯಣದಲ್ಲಿ ಗಂಡಾಂತರವನ್ನೇ ಎದುರಿಸುವ ಛಾತಿಯುಳ್ಳವಳು. ಇಂಥ ಕತ್ತಲನ್ನು ಎದುರಿಸದ ರೂಬಿಯಾ ಪುನಃ ನೆನಪಾಗುತ್ತಾಳೆ. ಸೈರಾ, ಜಿಲಾನಿಯವರ ಒಳಕತ್ತಲನ್ನು ತೆರೆದು ತೋರಿದ್ದಷ್ಟೇ ಅಲ್ಲದೇ ಅವನ ನೆಚ್ಚಿನ ಹುಡುಗಿಯಾಗಿ ತನ್ನ ಒಂಟಿ ಬಾಳಿಗೆ ನಾಂದಿ ಹಾಡಲು ಹೊರಟಿರುವವಳು. ಸೈರಾಳ ಸೂಕ್ಷ್ಮಮತಿ ಬುದ್ಧಿವಂತಿಕೆ ಚಾಣಾಕ್ಷ್ಯತೆ ಧೈರ್ಯವಂತಿಕೆ ಗಮನಿಸಿದರೆ ಇವಳೇ ಈ ಕೃತಿಯ ನಿಜವಾದ ನಾಯಕಿಯಂತೆ ಮೂಡಿಬಂದಿದ್ದಾಳೆ. ಇವಳು ತಾನು ಅನುಭವಿಸಿದ ನೋವಿನ ಘರ್ಷಣೆಗಳಿಂದಲೇ ಪಾಕಗೊಂಡು ಬೆಳೆದ ಮನಸ್ಸುಳ್ಳವಳು. ಸೈರಾ ಮುಂದೊಂದು ದಿನ ತಾಹಿರಾಳಂತೆ ಜನ್ನತ್ ಮೊಹಲ್ಲಾವನ್ನಷ್ಟೇ ಅಲ್ಲ ಇಡೀ ಭೂಮಿಯನ್ನು ತಾಯಂತೆ ಪೊರೆಯುವ ಶಕ್ತಿಯುಳ್ಳವಳಂತೆ ಕಾಣುತ್ತಾಳೆ. ಕೌಸರ್ ಭಾನು, ತನ್ನ ಅನಾರೋಗ್ಯಕ್ಕೆ ಆಸ್ಪತ್ರೆಯ ವೈಜ್ಞಾನಿಕ ಔಷಧಿಯಿಂದಲೇ ಗುಣಪಡಿಸುವ ಶಕ್ತಿಯಿದೆಯೆಂದು ನಂಬಿದ್ದವಳು. ವೈಜ್ಞಾನಿಕ ದೃಷ್ಟಿಕೋನದಲ್ಲಿ ಯಾವ ಮಹಿಳೆ ಯೋಚಿಸಲು ತೊಡಗುತ್ತಾಳೋ ಅಂದಿನಿಂದಲೇ ಅವಳ ವಿಕಾಸದ ಮೆಟ್ಟಿಲುಗಳು ಆರಂಭಗೊಳ್ಳುತ್ತವೆ ಅಂದಿದ್ದರು ಲೋಹಿಯಾ. ಖತೀಜಾ ಬೀಬಿ, ಗಂಡನಿಗೆ ಒಂದು ಮಗುವನ್ನು ಹೆತ್ತುಕೊಡುವಲ್ಲಿ ಯಶಸ್ವಿಯಾಗಿ ಅವನ ಆಸ್ತಿಯಲ್ಲೇ ಸಂಸಾರ ನಡೆಸುವ ಪಯಣದಲ್ಲಿ ದಾಯಾದಿಗಳಿಂದ ಅನ್ಯಾಯವಾಗಿ ನೋವು ಅನುಭವಿಸುತ್ತಿರುವವಳು. ಖತೀಜಾ ಬೀಬಿಯ ನಂಬಿಕೆಗಳು ಕೂಡ ಅವೈಜ್ಞಾನಿಕವಾದುದಲ್ಲ. ಇದು ಸುರಯ್ಯಾಳ ಧಾರ್ಮಿಕ ನಂಬಿಕೆಗಳಿಗಿAತ ತೀವ್ರವಾದದ್ದು ಮತ್ತು ಅಷ್ಟೇ ಪ್ರಾಮಾಣಿಕವಾದದ್ದು.       ರಾಜಕೀಯ ಸ್ವಾರ್ಥ ವಂಚನೆ ತುಳಿತ ಹಿಂಸೆ ಏನೆಲ್ಲವುಗಳ ಮಧ್ಯೆಯೇ ಈ ಮೊಹಲ್ಲಾದಲ್ಲಿ ಹನ್ನೆರಡು ಸ್ತ್ರೀಪಾತ್ರಗಳು ಜೀವಂತಿಕೆಯಿಂದ ನಳನಳಿಸುತ್ತವೆ, ಸ್ತ್ರೀಯರನ್ನು ತಿಳಿವಳಿಕೆಯುಳ್ಳವರು ಸಂಸ್ಕಾರವಂತರು ಸುಸಂಸ್ಕೃತರು ಎಂಬುದನ್ನು ಒಪ್ಪಿಕೊಳ್ಳುತ್ತ ಸಾಗುವುದು ಕೂಡ ಕಾದಂಬರಿಕಾರ ಅಬ್ಬಾಸರ ದೊಡ್ಡತನವೇ ಆಗಿದೆ. ಈ ವಿಶಾಲ ಮನೋಭಾವ ಎಲ್ಲ ಲೇಖಕರಲ್ಲಿ ಇರುವುದಿಲ್ಲ. ಇಲ್ಲಿ ಹಣಕಿ ಹಾಕುವ ಮನುಷ್ಯ ಸಹಜ ಹಿಂಸೆಯಲ್ಲೇ ನಿಗೂಢವಾಗಿರುವ ಇನ್ನೊಂದು ಸ್ತರದಲ್ಲಿ ಅಹಿಂಸೆ ಮಾನವೀಯತೆಗಳು ಪ್ರತಿಬಿಂಬಿಸುತ್ತವೆ. ಮುಸ್ಲಿಂ ಸಮುದಾಯದ ನಿತ್ಯದ ಬದುಕನ್ನು ನಿರೂಪಿಸುತ್ತ ಅಬ್ಬಾಸರು ಈ ನೆಲದ ಕತೆಯನ್ನು ಆಪ್ತವಾಗಿ ಹೇಳುತ್ತಾ ಹೋಗುತ್ತಾರೆ. ಅಬ್ಬಾಸರ ದೃಷ್ಟಿಯಿರುವುದು ಸಾಮಾಜಿಕ ನ್ಯಾಯಗಳ ಬಗ್ಗೆ. ಮನುಷ್ಯ ಸಂಬಂಧಗಳನ್ನು ಸಮುದಾಯಿಕ ನೆಲೆಯಲ್ಲಿ ತಂದು ನಿಲ್ಲಿಸಿ ಪರಸ್ಪರ ಕೊಂಡಿ ಬೆಸೆಯಲು ಕಾದಂಬರಿಯುದ್ದಕ್ಕೂ ಯತ್ನಿಸುತ್ತಾರೆ.       ಪುರುಷರ ಬದುಕಿನಲ್ಲಿ ಸ್ತ್ರೀಯರ ಅಗತ್ಯವನ್ನು ಮನಗಂಡವರು ಅಬ್ಬಾಸರು. ಹಾಗೂ ಸ್ತಿçÃಯರ ದೈನಿಕಕ್ಕೆ ಇರುವ ಆತ್ಮವಿಶ್ವಾಸಗಳ ಕೊರತೆಯನ್ನು ಕಾಣಿಸುತ್ತಲೇ ಅಬ್ಬಾಸರು ಅದಕ್ಕೆ ಪರ್ಯಾಯವಾಗಿ ಕೆಲವು ಬಿಡುಗಡೆಯ ನೋಟಗಳನ್ನು ತೋರಿಸುತ್ತಾರೆ. ನೆಲದ ನೆಮ್ಮದಿಗೆಡದಂತೆ ಬದುಕು ನೀಡಬಹುದಾದ ಅನೇಕ ಎಚ್ಚರಗಳನ್ನು ಮೊಹಲ್ಲಾದ ಪಾತ್ರಗಳು ಸಾಧಿಸುತ್ತವೆ, ಮೊಹಲ್ಲಾದ ಲೋಕವು ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಗತ ಘನತೆಯನ್ನು ಎಲ್ಲೂ ಭಂಜಿಸದ ಹಾಗೆ ಕಾದುಕೊಳ್ಳುತ್ತದೆ. ಶ್ರಮಿಕ ವರ್ಗದ ಹಿತದ ದೃಷ್ಟಿಯಿಂದ ಇಲ್ಲಿಯ ಸಂದರ್ಭಗಳು ಘಟನೆಗಳು ಮೊನಚಾಗಿಯೂ ಹರಿತವಾಗಿಯೂ ಮೂಡಿ ಬಂದಿವೆ. ದುರ್ಬಲ ಮನಸ್ಥಿತಿಯ ಪ್ರಾಣಿ ಬುದ್ಧಿಯ ಬೆರಳೆಣಿಕೆಯಷ್ಟೇ ವ್ಯಕ್ತಿಗಳೂ ಹಂತಹಂತವಾಗಿ ಉನ್ನತಿಯ ಮಟ್ಟಕ್ಕೇರುವ ಸಕಾರಣ ಸನ್ನಿವೇಶಗಳ ಸರಪಳಿ ಆಪ್ಯಾಯಮಾನವಾಗಿದೆ.      ಪ್ರೇಮ, ಮದುವೆ, ಹೊಂದಾಣಿಕೆ ಇವನ್ನು ಮೀರಿದ ಲಾಕ್ಷಣಿಕ ಬದುಕು ದೊರೆತ ದಿನ, ಇಲ್ಲಿಯ ಹೆಣ್ಣು ಜೀವಗಳ ಆತಂಕಗಳು ತಲ್ಲಣಗಳು ತೋರತೊಡಗುವವು. ಬಡ ಮಧ್ಯಮ ವರ್ಗದ ಜಗತ್ತಿನ ಸಂಬಂಧಗಳ ವಿಪರೀತಗಳನ್ನು ಬೆಸೆಯಲು ಹೋಗದೇ ಅದರ ನಡುವಿನ ಅನಾಮಿಕತೆಯನ್ನು ಅದು ಇದ್ದಂತೆಯೇ ಬೆಳೆಯಲು ಬಿಟ್ಟು ನಿರೂಪಿಸಿದ ಕಾರಣದಿಂದ ಒಂದು ರೀತಿಯ ಲೋಕಾರೂಢಿಯ ದೃಶ್ಯ ವಿಸ್ತಾರ ಇಲ್ಲಿ ತಾನೇ ತಾನಾಗಿ ಒಲಿದು

ಜನ್ನತ್ ಮೊಹಲ್ಲಾ Read Post »

ಪುಸ್ತಕ ಸಂಗಾತಿ

ಸೌಗಂಧಿಕಾ

ಪುಸ್ತಕಪರಿಚಯ ಸೌಗಂಧಿಕಾ ನನಗೆ ಪ್ರವಾಸ ಮಾಡುವಾಗ ಪುಸ್ತಕದ ಪುಟಗಳನ್ನ ತೆರೆದು ಸವಿಯುವುದೆಂದರೇ ತಾಯಿ ತುತ್ತು ಮಾಡಿ ಬಾಯಿಗೆ ಹಾಕುವಾಗ ಸಿಗುವ ಸುಖದಷ್ಟೇ ನನಗೆ ಆನಂದ. “ಸೌಗಂಧಿಕಾ” ಕವನ ಸಂಕಲನ ನನ್ನ ಕೈ ಸೇರಿ ಸುಮಾರು ಆರೇಳು ತಿಂಗಳು ಕಳಿಯಿತೇನೋ ಆದರೆ ಎರಡು ಮೂರು ಬಾರಿ ಸವಿದರೂ ಕವನಸಂಕಲನದ ಜನಕಿಗೆ ನನ್ನ ಮನದಾಳದ ನುಡಿಗಳನ್ನ ಹೇಳಲು ಇಷ್ಟು ದಿನ ಬೇಕಾಯಿತು. ಎರಡು ದಿನದ ಹಿಂದೆ ಕೊಚ್ಚಿಗೆ ಪ್ರಯಾಣ ಮಾಡುವಾಗ ಮನದಲಿ ಬೇಸರದ ಛಾಯೆಯೇ ಆವರಿಸಿಕೊಂಡಿತು. ಈ ಬೇಸರವನ್ನ ದೂರಮಾಡಿದ್ದು ಮಾತ್ರ ಕವಯತ್ರಿ ವಿಶಾಲ ಆರಾಧ್ಯರವರಿಂದ ರಚಿತವಾದ “ಸೌಗಂಧಿಕಾ” ಕವನಸಂಕಲನ. ಹೌದು ಈ ಕವನಸಂಕಲನವನ್ನ ಪಕ್ಕದಲಿದ್ದ ನನ್ನ ಜೋಳಿಗೆಯಿಂದ ತೆಗೆದು ಮತ್ತೆ ಸವಿದೆ , ಸುಮಾರು ಐವತ್ತಾರು ಕವನಗಳನ್ನ ಒಳಗೊಂಡು ಓದುಗರಿಗೆ ಉತ್ತೇಜನಕಾರಿಯಾಗಿದೆ. ಕವಯಿತ್ರಿ ಯವರು ಇಂತಹ ಸಾಹಿತ್ಯ ರಚಿಸಿದ್ದಾರೆ ಎಂದರೇ ಇವರ ತಪಸ್ಸಿನ ಶಕ್ತಿಯೇ ಕಾರಣ. ಸ್ಪೂರ್ತಿ ತುಂಬುವ ಅಮೃತದ ಬಳ್ಳಿಗಳು ಪ್ರತಿ ಕವನಗಳಲ್ಲಿ ಇರುವುದನ್ನ ನಾ ಕಂಡು ಮೂಕನಾದೆ. ಯಾವುದೇ ಒಂದು ಕವನಸಂಕಲನವನ್ನ ಸವಿಯುವಾಗಓದುಗ ಮೊದಲು ನೋಡುವುದು ಕವಯತ್ರಿರವರು ಬಳಸಿರುವ ಪದಭಂಡಾರವನ್ನ , ಕವನಸಂಕಲನದೊಳಗಿನ ಸಂದೇಶಗಳನ್ನ , ಪ್ರತಿ ಕವನಗಳ ಶೀರ್ಷಿಕೆಯನ್ನ, ಇಷ್ಟೆಲ್ಲವನ್ನ ಮೆಲಕು ಹಾಕುತ್ತಲೇ ಕವಯತ್ರಿಯವರ ಚಿಂತನೆಗಳಡೆಗೆ ಓದುಗ ಒಂದು ಪಕ್ಷಿ ನೋಟವನ್ನ ಹರಿಸದೇ ಬಿಡಲಾರ . ಸಾಮಾನ್ಯ ಓದುಗನಾದ ನಾನು ಕೂಡ ಇದನ್ನ ಪಾಲಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ನನ್ನ ಭಾವನೆ . ವಿಶಾಲ ಆರಾಧ್ಯರವರು ಆದರ್ಶಶಿಕ್ಷಕಿ . ಬಾಲ್ಯದಿಂದಲೇ ಸಾಹಿತ್ಯದ ಗೀಳು ಅಂಟಿಸಿಕೊಂಡಿರುವ ಇವರು ಈ ಕರುನಾಡಿಗೆ ಅತ್ಯುನ್ನತ ಸಂದೇಶಗಳನ್ನ ರವಾನೆ ಮಾಡುವಂತಹ ಒಂದು ಕೃತಿಯನ್ನ ಹೊರತಂದಿರುವುದು ಇವರಿಗಿರುವ ಸಾಹಿತ್ಯ ಪ್ರೀತಿಯೇ ಕಾರಣ ಎನ್ನಬಹುದು. ಸಂಘಟಕಿ, ಸಾಹಿತ್ಯ ಆರಾಧಕಿ, ಗಾಯಕಿ, ಸರಳ ವ್ಯಕ್ತಿತ್ವದ ಆದರ್ಶ ಕವಯತ್ರಿಯ ಪುಸ್ತಕದ ಬಗ್ಗೆ ಎರಡು ಸಾಲು ಬರೆಯಲು ನಾ ಅರ್ಹನೋ ಅಥವಾ ಅನರ್ಹನೋ ಎಂಬ ಭಾವ ಇದೀಗ ನನ್ನನ್ನ ಕಾಡುತಿದೆ. ಕಾರಣ ಈ ಕವನಸಂಕಲನವನ್ನ ಭೇದಿಸುತ್ತ ಹೋದಂತೆ ಓದುಗನಿಗೆ ಹಲವು ರೀತಿಯ ಕಿರಣಗಳು ಗೋಚರಿಸುತ್ತವೆ . ಡಾ. ಮನು ಬಳಿಗಾರ್ ರವರ “ಹಾರೈಕೆ,” ಶೂದ್ರಶ್ರೀನಿವಾಸ್ ರವರ “ಮುನ್ನುಡಿ,” ಎಂ.ಜಿ.ದೇಶಪಾಂಡೆಯವರ “ನಲ್ನುಡಿ” , ಉದಯ್ ಧರ್ಮಸ್ಥಳರವರ “ಚೆನ್ನುಡಿ ” ಹಾಗೂ ಹಲವಾರು ಕವಿಗಳ ಅಭಿಪ್ರಾಯಗಳು , ಶುಭಕೋರಿರುವ ಆತ್ಮೀಯ ಬಳಗ ಹೀಗೆ ವಿಭಿನ್ನತೆಯಿಂದ ಈ ಪುಸ್ತಕ ಹೊರಬಂದಿರುವುದು ನೋಡಿದರೆ ಕವಯತ್ರಿಯವರಿಗೆ ಬೆನ್ನುಲುಬಾಗಿ ನಿಂತ ಬಳಗವನ್ನ ಮರೆತಿಲ್ಲ . ಇವರ ಈ ಆದರ್ಶ ನಡೆಯೇ ಇಂದು ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನ ಹೊಂದಲು ಕಾರಣವೂ ಇರಬಹುದು. ಪುಸ್ತಕದ ಬಿಡುಗಡೆಗೆ ನನಗೆ ಅಹ್ವಾನ ನೀಡಿದ್ದರು ಆದರೆ ಕಾರಣಾಂತರಗಳಿಂದ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಇದೀಗ ಕವನ ಸಂಕಲನದ ಒಳನೋಟದತ್ತ ಸಾಗುತಿದ್ದೇನೆ … ಕವಯತ್ರಿರವರ ಹೆಸರಿಗೆ ತಕ್ಕಂತೆ ಕವನಸಂಕಲನದ ಪ್ರತಿ ಕವನಗಳು ಕೂಡ ವಿಶಾಲವಾಗಿಯೇ ಇವೆ. ನಾನಾ ದೃಷ್ಟಿಕೋನಗಳಿಂದ ನೋಡಿದರೂ ಸ್ವಚ್ಚತೆ ಎದ್ದು ಕಾಣುತ್ತಿದೆ. ಪದಗಳ ಜಾಡಿನೊಳಗೆ ಹೋದರೆ ಚಿಂತನೆಯತ್ತ ಕೊಂಡೋಯ್ಯುವ ಶಕ್ತಿ ಪ್ರತಿ ಕವನಗಳಲ್ಲಿಯೂ ಇದೆ. ವಿಶಾಲ ಆರಾಧ್ಯರವರು ಪದಬ್ರಹ್ಮನಿಂದ ವರವಾಗಿ ಲೇಖನಿಯನ್ನ ಪಡೆದಿರಬಹುದೇ ? ಖಂಡಿತ ಹೌದು. . ಬಳಸಿರುವ ಪದಗಳಂತು ಮುಗಿಲು ಮುಟ್ಟಿವೆ. ಯಾವುದೇ ಕವನಗಳಲ್ಲಿ ಭಾವಗಳಿಗೆ ಕೊರತೆಯಿಲ್ಲ. ಸಂದೇಶ ಸಾರುವಲ್ಲಿ ಪ್ರತಿ ಪದ್ಯಗಳು ಸಫಲತೆ ಕಂಡಿವೆ. ನಾಡುನುಡಿ, ಹೆಣ್ಣಿನ ಆಕ್ರಂಧನ, ವಿರಹ, ಶೃಂಗಾರ , ಸಾಮಾಜಿಕ ,ಕೌಟುಂಬಿಕ, ಹಾಗೂ ಕೆಲವು ವಚನಗಳಂತೆಯೇ ಸಂದೇಶ ಬೀರುವ ಪದ್ಯಗಳು , ಮತ್ತೆ ಕೆಲವು ಪುರಾಣ ಕಾಲದ ಕವಿಗಳು ರಚಿಸುತ್ತಿದ್ದ ಸಾಹಿತ್ಯದಂತೆ, ಇನ್ನೂ ಕೆಲವೂ ಈ ಸಮಾಜದ ಆಗುಹೋಗುಗಳ ಬಗ್ಗೆ ,ಹಾಗೂ ಭವಿಷ್ಯದ ದೃಷ್ಟಿಯಿಂದ ರಂಜಕಾಂಶಗಳನ್ನೇ ಹೊತ್ತು ಸಂದೇಶ ಸಾರುತ್ತಿರುವ ಉತ್ತಮ ಶೀರ್ಷಿಕೆಯುಳ್ಳ ಪದ್ಯಗಳು …. ಇಷ್ಟೆಲ್ಲವನ್ನ ಒಂದೇ ಕವನಸಂಕಲನದೊಳಗೆ ತುಂಬಿರುವ ಚಾಣಾಕ್ಷತನಕ್ಕೆ ಕವಯತ್ರಿಯವರಿಗೆ ನಮನಗಳನ್ನ ಅರ್ಪಿಸಲೇ ಬೇಕು. ಹೃದಯದ ಗೂಡೊಳಗುಟ್ಟುವ…. ಚಿತ್ತದಲಿ ಚಿತ್ತಾಪಹಾರಕಗಳು…..ರವಿಜಾರಿ ಶಶಿ ಮೂಡಿ….ಕರಿ ಇರುಳ ಕತ್ತಲೆಯೊಳಗೆ …ಕರುಳ ಕಡಿವ ಕೊರತೆಗಳಿಗೆ ….ಗರ್ಭ ಗುಡಿಯಲ್ಲೇ ಪ್ರೀತಿ ಎರೆದವಳು ಹೆಣ್ಣು.ಉಬ್ಬಿದುದರವ ಸ್ಪರ್ಶಿಸಿ ಉಬ್ಬಿದವಳು…… . ಹೀಗೆ ಪ್ರತಿ ಪದ್ಯಗಳಲ್ಲಿ ಉನ್ನತ ಮಟ್ಟದ ಭಾವ ಝೇಂಕರಿಸುವ ಸಾಲುಗಳಿಗೆ ಜನ್ಮ ನೀಡಿ , ಕ್ರೋಡೀಕರಿಸಿ ಕವನ ಕಟ್ಟುವುದು ಸುಲಭದ ಕೆಲಸವಲ್ಲ.. ಈ ಕವನಸಂಕಲನವನ್ನ ಒಮ್ಮೆ ಸವಿದರೇ ಸವಿಯುತ್ತಿರಲೇ ಬೇಕೆನಿಸುತ್ತದೆ. ಓದುಗನಿಗೆ ಆರೋಗ್ಯಕರ ಔಷಧಿ ಈ ಕವನಸಂಕಲನ ಎಂದರೂ ತಪ್ಪಾಗಲಾರದು. ಇದೀಗ ವಿಶಾಲ ಆರಾಧ್ಯರವರು ಎರಡನೇ ಕೃತಿಯನ್ನ ಬಿಡುಗಡೆ ಗೊಳಿಸಲು ಸಜ್ಜಾಗಿದ್ದಾರೆ , ಇವರ ಈ ಕೃತಿಯೂ ಸೌಗಂಧಿಕಾ ಕೃತಿಯಂತೆ ರಾಜ್ಯಾದ್ಯಂತ ಹೆಸರುವಾಸಿಯಾಗಲಿ ಎಂದು ಮನದಾಳದಿಂದ ಹಾರೈಸುವೆ. ಒಟ್ಟಿನಲ್ಲಿ ಈ ಕವನಸಂಕಲನದೊಳಗೆ ಹಲವಾರು ಯುವ ಸಾಹಿತಿಗಳಿಗೆ ಅವಕಾಶ ನೀಡಿ ಮನದಲಿ ಯಾವುದೇ ರೀತಿಯ ಸ್ವಾರ್ಥ ಇಲ್ಲ ಎಂಬ ಸಂದೇಶವನ್ನ ಈ ಕರುನಾಡಿಗೆ ಸಾರಿದ್ದಾರೆ . ಮುಖಪುಟದ ನನ್ನ ಆತ್ಮೀಯ , ಲೇಖಕರಾದ, ವಿವೇಕಾನಂದ ಸರ್, ಕವಿಗಳಾದ ರಾಮಚಂದ್ರ ಸಾಗರ್, ಸರಸ್ವತಿ ಪುತ್ರಿ ಅಕ್ಕಮಹಾದೇವಿ ಹಾರೋಗೇರಿ ಇವರೆಲ್ಲರ ಅಭಿಪ್ರಾಯಗಳು ಪುಸ್ತಕದೊಳಗೆ ಮುದ್ರೆಯಾಗಿವೆ. ಪುಸ್ತಕದ ವಿನ್ಯಾಸವೂ ಕೂಡ ಅದ್ಬುತ. ವಿಶಾಲ ಆರಾಧ್ಯರವರು ಈ ನಾಡಿಗೆ ಸಿಕ್ಕಿರುವ ನಕ್ಷತ್ರ . ಸಾಹಿತ್ಯ ಲೋಕದಲ್ಲಿ ಇದೇ ರೀತಿ ಸರಳ ವ್ಯಕ್ತಿತ್ವವನ್ನ ರೂಡಿಸಿಕೊಂಡು ಸಾಗುವ ಯಾರೇ ಆಗಿರಲಿ ಸಾಹಿತ್ಯ ಲೋಕ ಬಹುಬೇಗ ಅಪ್ಪಿಬಿಡವುದು. ಇದಕ್ಕೆ ತಕ್ಕ ಉದಾಹರಣೆ ಎಂದರೇ ಸರಸ್ವತಿ ಪುತ್ರಿ, ಅಕ್ಷರ ಮಾಂತ್ರಕಿ, ಅಕ್ಷರ ರಾಕ್ಷಸಿ, ಚಿಂತಕಿ ,ವಿಶಾಲ ಆರಾಧ್ಯರವರು ಎಂದು ಹೇಳಲು ಇಚ್ಚಿಸುತ್ತೇನೆ . ********************************************** ಕಲಿರಾಜ್ ಹುಣಸೂರು.

ಸೌಗಂಧಿಕಾ Read Post »

ಪುಸ್ತಕ ಸಂಗಾತಿ

ನಾನು ದೀಪ ಹಚ್ಚ ಬೇಕೆಂದಿದ್ದೆ

ಪುಸ್ತಕ ವಿಮರ್ಶೆ ನಾನು ದೀಪ ಹಚ್ಚ ಬೇಕೆಂದಿದ್ದೆ ನಮ್ಮ ಕಣಿವೆಯ ಹುಡುಗಿ ಅಕ್ಷತಾ ಕೃಷ್ಣಮೂರ್ತಿ ಕಳಿಸಿದ “ನಾನು ದೀಪ ಹಚ್ಚ ಬೇಕೆಂದಿದ್ದೆ”ಕವನ ಸಂಕಲನ ತಲುಪಿದೆ. ಅಣಶಿ ಘಟ್ಟದ ಶಾಲೆಯೊಂದರಲ್ಲಿ ಕಷ್ಟದಲ್ಲಿ ಕಾರ್ಯ ನಿರ್ವಹಿಸುತ್ತಾ ಬರೆವ ಓದಿನ  ತನ್ನನ್ನೇ ಅರ್ಪಿಸಿಕೊಂಡ ಅವಳ ಜೀವನ ಪ್ರೀತಿಗೆ ಮನಸ್ಸು ಅರಳುತ್ತದೆ.                     ಈಗಿತ್ತಲಾಗಿ ಓದುವುದೇ ಕಡಿಮೆಯಾದ ನನ್ನ ಬದುಕಿನಲ್ಲಿ ಆಗಾಗ ಓದಿಗೆ ಹಚ್ಚಿ ಬರೆಸುವ ಅನೇಕ ಗೆಳತಿಯರಿದ್ದಾರೆ ಎನ್ನುವುದೇ ಖುಷಿಯ ಸಂಗತಿ ಅವರೆಲ್ಲರಿಗೂ ನನ್ನ ರಾಶಿರಾಶಿ ಪ್ರೀತಿ .                              ಅಕ್ಷತಾಳ “ನಾನು ದೀಪ ಹಚ್ಚ ಬೇಕೆಂದಿದ್ದೆ”  ಕವನಸಂಕಲನದಲ್ಲಿ ಅನೇಕ ಕವನಗಳು ಪ್ರೀತಿಯಲ್ಲಿ ಅದ್ದಿ ತೆಗೆದಂತವುಗಳು ಹಾಗೆ ಮನಸ್ಸಿನಾಳಕ್ಕೆ ಇಳಿದು ನೆಲೆಗೊಳ್ಳುವಂತವುಗಳು. ” ನೀ ಮಾತನಾಡಿಸದ ಮೇಲೆ “ಕವನದಲ್ಲಿ  “ನಿನ್ನ ನೆನಪಲ್ಲಿ ಹುಟ್ಟಿದ ಕವನಗಳಿಗೆ ನೇಣು ಹಾಕಿ ಗಲ್ಲಿಗೇರಿಸಬೇಕಿತ್ತು  ಕೊನೆ ಆಸೆ ಕೇಳದೆ … ” ವಿರಹದುರಿಯಲ್ಲಿ ಬೆಂದ ಸಾಲುಗಳು..ಇನ್ನೊಂದು ಕವನದಲ್ಲಿ “ನನಗೆ ಬೇಸರವಿದೆ ಒಂದೊಂದು ಮಧ್ಯಾಹ್ನ ಕಳೆದ ಹಾಗೆಲ್ಲ ಅರಳಿದ ಗುಲ್ಮೊಹರ್  ಉದುರುತ್ತದೆ ಸದ್ದಿಲ್ಲದೆ …”ಬೇಸರವನ್ನು ಹಾಸಿ ಹೊದ್ದ0ತ  ಸಾಲುಗಳು  ಎದೆಗೆ ತಾಕುತ್ತವೆ .ರಾಧಾ ಮಾಧವರ ಪ್ರೇಮಕವನಗಳಂತೂ  ವಿಶಿಷ್ಟವಾಗಿವೆ. “ತರಬೇತಿ ಯನ್ನಾದರೂ ನೀಡು ಕೃಷ್ಣನ ಕೊಳಲ ದನಿ ಯಾಗುವುದು ಹೇಗೆಂದು ?..” ಎಂದು ರಾಧೆಯಲ್ಲಿ ಅರಹುವ ಸಾಲುಗಳು ಕೃಷ್ಣನ ಕಾಡದೇ ಇರದು .            “ಮಸರಿಯಾಗಲೇ ಬಾರದು”   ಕವನದಲ್ಲಿ ಶೋಷಣೆಯ ವಿರುದ್ಧದ ದನಿಯಿದೆ. ಸೀರೆ ಮಸರಿಯ ಪ್ರತಿಮೆಗಳಲ್ಲಿ ಕವನ ಕಣ್ಸೆಳೆಯುತ್ತದೆ. ಹಾಗೆಯೇ”ಎಲ್ಲಿಯೂ  ಮಾತನಾಡಬಾರದು” ಕವನ ಕೂಡ ಇದನ್ನೇ ಮಾತನಾಡುತ್ತದೆ .            ‌‌‌‌‌                 ಕಣಿವೆಯ ಉಸಿರಾದ ಕಾಳಿ ನದಿಯ ದಂಡೆಯಲ್ಲೂ ಕವನಗಳರಳುತ್ತವೆ .ಅಣೆಕಟ್ಟು ಒಡೆದಿದೆ ಎಂಬ ಸುಳ್ಳುಸುದ್ದಿ ಮುಗ್ಧ ಜೀವಿಗಳ ಕಾಡಿದ ಪರಿಗೆ ಕಣ್ಣು ಆರ್ದ್ರವಾಗುತ್ತದೆ .ಕಾಯುವ ಕಾಳಿ ಕಾಡುವ ಕಾಳಿ ಯಾಗದಿರಲಿ ಮನಸ್ಸು ಬೇಡುತ್ತದೆ .ಕೊನೆಯ ಆರು ಮಕ್ಕಳ ಕವಿತೆಗಳು ಬಾಲ್ಯದ ಬೆರಳು ಹಿಡಿದು ನಡೆಸುತ್ತವೆ. ಈಗಾಗಲೇ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ಮಯೂರವರ್ಮ ಪ್ರಶಸ್ತಿ ತನ್ನದಾಗಿಸಿಕೊಂಡ ಹೆಮ್ಮೆ ಕವಯಿತ್ರಿಯ ಈ ಸಂಕಲನಕ್ಕಿದೆ.                   ಈ ಸಂಕಲನದ ಎಲ್ಲ ಕವನಗಳು ವಿಶಿಷ್ಟ ರೀತಿ ನೆಲೆಯಲ್ಲಿ ಎದೆಗೆ ಹತ್ತಿರವಾಗುತ್ತವೆ. ಥೇಟು  ಅಕ್ಷತಾಳ೦ತೆ. ತುಂಬು ಪ್ರೀತಿ ವಿಶ್ವಾಸ ಮೊಗೆ ಮೊಗೆದು ಮಡಿಲಲ್ಲಿ  ತುಂಬುತ್ತವೆ ಅವಳಂತೆ .ದೂರದಲ್ಲೆಲ್ಲೋ ಅರೆಬರೆ ಮಿಣುಕುವ ನಕ್ಷತ್ರವನ್ನು ದಿಟ್ಟಿಸುವ ಕಕ್ಕುಲತೆಯಿದೆ ಕಣಿವೆಯ ದಾರಿಯಲ್ಲಿ. ಅಕ್ಷತಾ ಬರೆದ ಅಕ್ಷರಗಳೆಲ್ಲ ಅಕ್ಷಯವಾಗಲಿ ….ಆ ಅಕ್ಷರಗಳೆಲ್ಲ ಕಣಿವೆಯ ದಾರಿಯಲ್ಲಿ ಹೂವಾಗಿ ಅರಳಿ ದಾರಿಹೋಕರ ದಣಿವಾರಿಸಲಿ ಎಂಬುದು ಮನದಾಳದ ಹಾರೈಕೆ. **************************************** ಪಿ .ಎಸ್. ಸಂಧ್ಯಾರಾಣಿ    #

ನಾನು ದೀಪ ಹಚ್ಚ ಬೇಕೆಂದಿದ್ದೆ Read Post »

You cannot copy content of this page

Scroll to Top