ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಬೊಗಸೆ ತುಂಬ ಕನಸು”

ಪುಸ್ತಕ ಪರಿಚಯ ಬೊಗಸೆ ತುಂಬ ಕನಸು ಪ್ರಪಂಚದಲ್ಲಿ ಎರಡು ರೀತಿಯ ಸಾಧಕರಿರುತ್ತಾರೆ. ಒಬ್ಬರು ಇದ್ದ ಹಾದಿಯಲ್ಲಿ ಶ್ರದ್ಧೆಯಿಂದ ಸಾಗಿ ಗುರಿ ತಲುಪುವವರು. ಮತ್ತೊಬ್ಬರು ತಾವೇ ಹಾದಿ ನಿರ್ಮಿಸಿಕೊಂಡು ಗುರಿ ಕಂಡುಕೊಳ್ಳುವವರು. ಹೀಗೆ ಎರಡನೇ ಸಾಲಿನ ಮುಂದಾಳುವಿನ ಹಾಗೆ ನಿಂತು ಯಶ ಬದುಕಿನ ಗಾಥೆ ಬರೆದವರು ಡಾ.ಪ್ರಭಾಕರ ಶಿಶಿಲರು. ಅವರ ಆತ್ಮಕತೆ “ಬೊಗಸೆ ತುಂಬ ಕನಸು” ಓದಿದ ತಕ್ಷಣಕ್ಕೆ ನನಗೆ ಅನ್ನಿಸಿದ್ದು ಹೀಗೆ. ಬಹುಶ: ಈ ಕೃತಿಯನ್ನು ಓದುವ ಎಲ್ಲರಿಗೂ ಹೀಗೊಂದು ಭಾವ ಮೂಡಿಯೇ ಮೂಡುತ್ತದೆ. ಅರ್ಥಶಾಸ್ತ್ರದ ಅಧ್ಯಾಪಕರಾಗಿ. ವಿದ್ಯಾರ್ಥಿ ಜೀವನದ ಉದ್ದಕ್ಕೂ ಕಷ್ಟ ಕಾರ್ಪಣ್ಯಗಳನ್ನೆ ಹೊದ್ದುಕೊಂಡು ಆ ಹರಕು ಆಗಸದ ನಡುವೆಯೂ ಬೆಳ್ಳಿ ಚುಕ್ಕಿಗಳ ಹುಡುಕಿ ಹೆಕ್ಕಿ ತಮ್ಮ ಬದುಕಿಗೆ ಕೌದಿಯಾಗಿಸಿಕೊಂಡವರು. ಅವರ ಆತ್ಮಕತೆಯ ಪುಟದಲ್ಲಿ ಲೇಖಕನ ಮಾತು ಆರಂಭವಾಗುವುದೇ ಹೀಗೆ “ತುಂಬಾ ಅಂದ್ರೆ ತುಂಬಾ ಬಡತನದಿಂದ ಬಂದ ನನಗೆ ಕನಸು ಕಾಣಲು ಕಲಿಸಿದ್ದು ನನ್ನ ತಾಯಿಯ ತಾಯಿ ಬರ್ಗುಳ ಕಾವೇರಮ್ಮ” ಈ ಒಂದು ಸಾಲು ಪ್ರಭಾಕರ ಈ ಪುಸ್ತಕದ ಬಹುತೇಕ ಪುಟಗಳನ್ನು ತನ್ನದಾಗಿಸಿಕೊಂಡಿದೆ. ಸಣ್ಣ ವಯಸ್ಸಿನಲಿ ಬಿಟ್ಟು ಹೋದ ಅಪ್ಪ. ಮತ್ಯಾರೊ ಅಪರಿಚಿತನ ಜೊತೆಗೆ ಶುರುವಾಗುವ ಅಮ್ಮನ ಬದುಕು. ಯಾವ ದೂಷಣೆಯೂ ಇಲ್ಲದೆ ಚಿಕ್ಕಪ್ಪನನ್ನೆ ಒಪ್ಪಿಕೊಳ್ಳುವ ಮುಗ್ಧ ಪುಟ್ಟ ಬಾಲಕ ಬದುಕಿನ ಬಹುತೇಕ ದಿನಗಳವರೆಗೆ ಅನಾಥ ಪ್ರಜ್ಞೆಯಲ್ಲಿಯೇ ಬಳಲುತ್ತಾನೆ. ದಿನಕ್ಕೊಂದು ಊರು ಬದಲಾಯಿಸುವ ಅವರುಗಳ ಜೊತೆ ಹೋಗಲಾಗದೆ ಅಜ್ಜಿ,ಮಾವಂದಿರ ಮನೆಯಲ್ಲಿ ಉಳಿದು ಅಸಹಾಯಕ ಸ್ಥಿತಿ ಎದುರಾದಾಗಲೆಲ್ಲ ಯಾರೊಂದಿಗೂ ಹಂಚಿಕೊಳ್ಳಲಾಗದ ಸಂಕಟದಲ್ಲಿ ಮನೆಯಲಿದ್ದ “ಕೊಂಡಪ್ಪ” ಎತ್ತಿನ ಕುತ್ತಿಗೆಗೆ ಜೋತು ಬಿದ್ದು ಮೌನದಲ್ಲಿ ರೋಧಿಸುವ ಜೀವ ಓದುವ ಹುಚ್ಚಿನ ಸಲುವಾಗಿ ವಯೋಸಹಜ ಭಾವನೆಗಳನ್ನು, ಕಾಮನೆಗಳನ್ನು ಹತ್ತಿಕ್ಕುತ್ತಲೇ ಹೋಗುತ್ತದೆ. ಫೀಸು ಮತ್ತು ಹೊಟ್ಟೆ ಪಾಡಿನ ಸಲುವಾಗಿ, ಬಾಣಸಿಗನಾಗುವ, ಆಳದ ಬಾವಿ ಇಳಿದು ಬಕೆಟ್ಟು ತಂಬಿಗೆ ತೆಗೆದುಕೊಡುವ ಕೆಲಸಗಳಿಗೆ ತನ್ನನ್ನು ತಾನು ಅಣಿಯಾಗಿಸಿಕೊಳ್ಳುವ ಶಿಶಿಲರು ಎಲ್ಲಿಯೂ ಕೂಡ ತಮ್ಮ ಅಂದಿನ ಪರಿಸ್ಥಿತಿಗಾಗಿ ಮರುಗುವುದಿಲ್ಲ. ಮತ್ತೊಬ್ಬರ ಕನಿಕರ ನಿರೀಕ್ಷಿಸುವುದಿಲ್ಲ. ಬದುಕನ್ನು ಬಂದಂತೆ ಎದುರಿಸುತ್ತ ಹೋಗುತ್ತಾರೆ. ತಮ್ಮ ಬಗ್ಗೆ ಕಿಂಚಿತ್ತು ಕಾಳಜಿಯನ್ನು ಮಾಡದಿರುವ ಅಪ್ಪ ಅಮ್ಮನ ಬಗ್ಗೆಯು ಅವರಿಗೆ ತಕರಾರುಗಳಿಲ್ಲ. ಆದರೆ ತಮ್ಮ ಸಲುವಾಗಿ ಒದ್ದಾಡುವ ತಮ್ಮ ಮಾವಂದಿರ ಕುರಿತಾಗಿ ಅವರಿಗೆ ಅಪಾರ ಗೌರವವಿದೆ. ಅವರ ಕಷ್ಟದ ನಡುವೆಯು ತಮಗೆ ಬೆಂಬಲವಾಗಿ ನಿಲ್ಲುವ ಅವರ ಕುರಿತು ವಿಶೇಷ ಅಕ್ಕರೆ ಇದೆ. ಅಲ್ಲದೆ ಅವರಿಗೆ ಹೊರೆಯಾಗಬಾರದು ಎನ್ನುವ ಕಾರಣಕ್ಕೆ ಕೆಲಸಕ್ಕೆ ಸೇರಿ ಒಂದು ವರ್ಷ ಓದನ್ನು ಮೊಟಕುಗೊಳಿಸಿ ತದನಂತರ ಮತ್ತದೆ ದಾರಿಗೆ ಮರಳಿದ ಪ್ರಸ್ತಾಪವು ನಮ್ಮನ್ನು ಶಿಶಿಲರೆಡೆಗೆ ಅಚ್ಚರಿಯಿಂದ ನೋಡುವಂತೆ ಮಾಡುತ್ತದೆ. ಓದಿನ ಹಸಿವು, ಹೊಟ್ಟೆಯ ಹಸಿವು. ಚಿಂತನೆಯ ಹಸಿವು, ಸಾಮಾಜಿಕ ಕಳಕಳಿಗಳ ಹಸಿವು. ಅವರನ್ನು ಮತ್ತೆ ಮತ್ತೆ ಒರೆಗೆ ಹಚ್ಚುತ್ತ ಹೋಗುತ್ತದೆ. ಬಂಗಾರದ ಪದಕ ಸಿಕ್ಕ ಮೇಲೆಯೂ ಕೆಲಸ ಸಿಗದೆ ಕೇವಲ ಒಂದು ವರ್ಷಕ್ಕಷ್ಟೆ ತಾತ್ಕಾಲಿಕ ಬೋಧಕರಾಗಿ ಸೇರಿಕೊಳ್ಳುವ ಶಿಶಿಲರು ಸಿಕ್ಕ ಕೆಲಸಕ್ಕೆ ಕಿಂಚಿತ್ತು ಧಕ್ಕೆ ತರದೆ ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುತ್ತಾರೆ. ಜೀವನದ ಪ್ರತಿಯೊಂದು ಘಟನೆಗಳನ್ನು ಹೆಕ್ಕಿ ಹೆಕ್ಕಿ ಸವಿವರವಾಗಿ ಓದುಗನ ಮುಂದಿರಿಸುತ್ತಾರೆ. ಕೆಲವೊಂದು ಸಂಗತಿಗಳನ್ನು ರಸವತ್ತಾಗಿ ಓದುಗರ ಮುಂದಿಡುತ್ತಾರೆ. ಅವುಗಳನ್ನು ಬಿಡಿ ಬಿಡಿಯಾಗಿ ಓದಿದರೆ ಲಲಿತ ಪ್ರಬಂಧದ ಹಾಗೆ  ಆವರಿಸಿಕೊಳ್ಳುತ್ತವೆ. “ಅತೀಂದ್ರಿಯದ ಅಮಲಿನಲ್ಲಿ” ಎನ್ನುವಲ್ಲಿ ನಿರುದ್ಯೋಗಿ ಲೇಖಕರು ಕೆಲಸ ಹುಡುಕಿ ಹೋಗಿ ಪಡುವ ಪರಿಪಾಡಲನ್ನು ಓದಿಯೇ ಅರಿಯಬೇಕು. ಅತ್ಯಂತ ವಿನೋದದ ಭಾಷೆಯ ಬಹಳಷ್ಟು ಸಂಗತಿಗಳು ಈ ಪುಸ್ತಕದಲ್ಲಿ ಮತ್ತೆ ಮತ್ತೆ ಬರುತ್ತವೆ. ಹೀಗಾಗಿ  ಪುಸ್ತಕದ ಮೊದಲನೆ ಪುಟದಲ್ಲಿ ವಿಷಾದ, ವಿನೋದ ವಿಚಾರಗಳ ತ್ರಿವೇಣಿ ಸಂಗಮ ಎಂದ ಮಾತು ಅಕ್ಷರಶ: ಸತ್ಯ ಎನ್ನಿಸುತ್ತದೆ.ಚಿಕ್ಕಂದಿನಲ್ಲಿ ಅಧ್ಯಾತ್ಮದ ಆಸಕ್ತಿ ಹೊಂದಿ ನಂತರದಲ್ಲಿ ಪ್ರಗತಿಪರ ಚಿಂತನೆಗಳ ಮೈಗೂಡಿಸಿಕೊಂಡು ನಂಬಿದ ಸಿದ್ದಾಂತದಂತೆ ಅಂತರಧರ್ಮಿಯ ವಿವಾಹವಾದವರು ಶಿಶಿಲರು. ಸುಮಾರು ೨೯ ಅನುಕ್ರಮಣಿಕೆಯಲ್ಲಿ ಲೇಖಕರ ಬದುಕಿನ ಒಂದೊಂದೆ ಮಜಲುಗಳನ್ನು ಎಳೆಎಳೆಯಾಗಿ ಹೆಕ್ಕಿ ಇಡುವ ಈ ಪುಸ್ತಕ ಸುದೀರ್ಘ ೬೮೮ ಪುಟಗಳನ್ನು ಹೊಂದಿದೆ. ಮೈಸೂರಿನ ರಾಜ್ ಪ್ರಕಾಶನ ಇದನ್ನು ಹೊರತಂದಿದೆ ಬೆಲೆ :೬೫೦ ರೂ ತಮ್ಮ ಪುಟ್ಟ ಊರಿನ ಹೆಸರನ್ನು ತಮ್ಮ ಹೆಸರಿನೊಂದಿಗೆ ಬೆಸೆದುಕೊಂಡು, ಆ ಮೂಲಕ ತನ್ನ ಪಾಡಿಗೆ ತಾನು ಇದ್ದ ಊರನ್ನು ನಾಡಿನ ಉದ್ದಗಲಕ್ಕು ಪರಿಚಯಿಸಿದವರು. ಯಕ್ಷಗಾನ, ತಾಳಮದ್ದಲೆ,ಸಾಹಿತ್ಯ ಹತ್ತಾರು ಪ್ರಕಾರಗಳು, ಸಾಮಾಜಿಕ ಚಟುವಟಿಕೆಗಳು ಶಿಶಿಲರ ಅಗಾಧ ಜ್ಞಾನವನ್ನು, ಅಪರಿಮಿತ ಶ್ರಮವನ್ನು, ಅವರಿಗೆ ಬದುಕಿನ ಕುರಿತಾಗಿ ಇರುವ ಜೀವನೋತ್ಸಾಹವನ್ನು ಪರಿಚಯ ಮಮಮಾಡಿಸುವ ಕೃತಿ *********************************** ದೀಪ್ತಿ ಭದ್ರಾವತಿ

ಬೊಗಸೆ ತುಂಬ ಕನಸು” Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ ಗಾಯದ ಹೂವುಗಳು  “ಗಾಯದ ಹೂವುಗಳು ”  2015 ರ  ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ” ಪಡೆದ ಕೊಡಗಿನ ಯುವಕವಿ  ಕಾಜೂರು ಸತೀಶ್ ರವರ ಮೊದಲ ಸಂಕಲನ ಎಂಬುದು ನಮ್ಮಲ್ಲರಿಗೂ ಹೆಮ್ಮೆಯ ವಿಷಯ.  ಫಲ್ಗುಣಿ ಪ್ರಕಾಶನದಲ್ಲಿ ಪ್ರಕಟಣೆಗೊಂಡು ಖ್ಯಾತ ಕವಿಗಳಾದ ಶ್ರೀ ವಾಸುದೇವ ನಾಡಿಗ್  ರವರ ಮುನ್ನುಡಿ ಬರೆಸಿಕೊಂಡು ಶ್ರೀ ಪ್ರವೀಣ ಕುಮಾರ ದೈವಜ್ಞಾಚಾರ್ಯ ರವರ ಭರವಸೆಯ ಬೆನ್ನುಡಿ ಲೇಪಿಸಿಕೊಂಡಿರುವ ಕವನ ಹೊತ್ತಿಗೆ.                                           ಕವಿತೆಯೆಂದರೇನೆಂದೇ                                                               ತಿಳಿಯದ,                           ನನ್ನನ್ನೇ ಉಸಿರಾಡಿಕೂಳ್ಳುತ್ತಿರುವ                                                    ಅಪ್ಪ -ಅಮ್ಮನಿಗೆ.                 ಎಂಬ ಕವಿಯ ಅರ್ಪಣಾಭಾವದಿಂದ ಅರ್ಪಿಸಿಕೊಳ್ಳುತ್ತ ಹೋಗುತ್ತದೆ.  “ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ, ಕವಿತೆಯ ತೆಕ್ಕೆಯೊಳಗೆ ಬಿದ್ದೆ “ಎಂದು  ಮುನ್ನುಡಿ ಬರೆದು ಕೊಳ್ಳುವ ಕವಿ, ಕವಿತೆಗಳನ್ನು ಹೆರುವ ಪರಿಯೇ ವಿಭಿನ್ನ.   ಇರುವೆ, ಒಂಟಿ, ಊದುಕೊಳವೆ, ಖಾಲಿಡಬ್ಬ, ಚಪ್ಪಲಿಗಳು, ಮಾತು, ಮೌನ ಮತ್ತು ಕವಿತೆ, ಮರಣದ ಹಾಡು, ಹಾವು, ಮೈಲಿಗೆ, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ನೆಲವಿಲ್ಲದವನ ಉಯಿಲು, ಬೇಲಿ, ನದಿ, ಕಾಡು ಕವಿತೆ, ಮಿಕ್ಕವರಾರನ್ನೂ ಹೀರಕೂಡದು, ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳು, ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ,ಒಲೆ ಮತ್ತು ಅವ್ವ, ಅರ್ಥವಾಗಿರಬಹುದು, ನೀನು ನನ್ನ  ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯ್ ಸ್ವಗತ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಅಸ್ವಸ್ಥ ಕವಿತೆಗಳು, ನೋಟೀಸು, ಸಲಾಮು, ನನ್ನ ಕವಿತೆ, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಇರಲಿ, ಅಪ್ಪ ಮತ್ತವನ ಹತ್ಯಾರಗಳು, ಎಲ್ಲ ಅಮಾವಾಸ್ಯೆಗಳಲ್ಲೂ ಪದ್ಯವೊಂದಿರಲಿ ಬೆಳಕಿಗೆ, ಸಾವು, ಗಾಯದ ಹೂವುಗಳು, ಆಲ್ಬಮ್, ಯಾರದಿದು? ಇನ್ನೂ ಬದುಕಿರುವ ಕವಿತೆಗಳು, ಮೊದಲ ರಾತ್ರಿಯಂದು, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ನಿನಗೆ, ಕೊಳದ ಬಳಿಯ ಮರ, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ, ಮಧ್ಯರಾತ್ರಿಯ ನಂತರದ ಮಳೆ, ಶಬ್ದ ಸಮರ, ಮರ, ಕಸದ ತೊಟ್ಟಿಯ ಕಾಗದದ ಲೋಟಗಳು, ಪರೀಕ್ಷೆ, ಉಯಿಲು.  ಈ ಮೇಲಿನ 53 ಹೂವುಗಳಿರುವ ಹೂಗುಚ್ಛ “ಗಾಯದಹೂವುಗಳು”.ಪ್ರತಿಯೊಂದು ಹೂವುಗಳೂ ಗಾಯದ ಹೂವುಗಳಾಗಿ ಅರಳಿ, ಸುತ್ತೆಲ್ಲಾ ಪರಿಮಳ ಸೂಸುತ್ತಾ ಎಲ್ಲರನ್ನು ಆಕರ್ಷಿಸಿ ಘಮಘಮಿಸುತ್ತಿರುವ ಪ್ರೀತಿಯ ಪಾರಿಜಾತಗಳಾಗಿವೆ. ಕೇಳಿಸಿಕೊಳ್ಳಿ  ಒಂದು ಇರುವೆ ಸತ್ತಿದೆ  ನನ್ನ ಕಾಲ ಬುಡದಲ್ಲಿ        ಎನ್ನುವ ಕವಿಯು ಸಮಾಜದ ವ್ಯವಸ್ಥೆ, ಶ್ರೀಮಂತವರ್ಗ,ಹತಾಶೆಗಳನ್ನು ಕಡಿಮೆ ಪದಗಳಲ್ಲಿ ಅತಿಸೂಕ್ಷ್ಮವಾಗಿ ಶಬ್ಧ ಸಂವೇದನೆಯಿಂದ  ಪ್ರಸವಿಸಿದ್ದಾರೆ.   ಸತೀಶ್  ರವರ ಕವಿತಗಳನ್ನು ಓದುತ್ತಾ ಹೋದರೆ ಅವು ಬರಿ ಕವಿತೆಗಳಾಗಿ ಅಭಿವ್ಯಕ್ತವಾಗುವುದಿಲ್ಲ. ಅವುಗಳು ಅವರು ಬದುಕಿಕೊಳ್ಳಲು ಹಡೆದ ಮಕ್ಕಳಾಗಿವೆ. ಕವಿಗೆ ಕವಿತೆಗಳೇ ಬದುಕಿನ ಭರವಸೆಯ ಮೌಲ್ಯಗಳು.  ಚಪ್ಪಲಿಗಳು ನಾವು ಎಂದೆಂದೂ ಬಹಿಷ್ಕ್ರತರು  ಮಸೀದಿ ಮಂದಿರ ಇಗರ್ಚಿಗಳಿಗೂ ಅಸ್ಪೃಶ್ಯರು  ಇತಿಹಾಸದ ಚರ್ಮ ಸುಲಿದು ಒಣಗಿಸಿ ನಮ್ಮ ಸೃಷ್ಟಿ      ಈ ಕವಿತೆಯಲ್ಲಿ ಮೌಢ್ಯ, ಜಾತೀಯತೆ, ಮೇಲು -ಕೀಳು ಮನೋಧೋರಣೆ, ಅಸಹಾಯಕತೆ, ಬಡತನ, ಅಸ್ಪೃಶ್ಯತೆ, ಸಮಾಜದ ವ್ಯವಸ್ಥೆಯ ಬಗ್ಗೆ ಇರುವ ಅತೃಪ್ತಿಯನ್ನು ಚಪ್ಪಲಿಗಳು ಕವಿತೆಯ ಮೂಲಕ ಧನ್ಯತಾ ಭಾವದಲ್ಲಿ ಕವಿತೆಯಾಗಿ ಹಡೆದಿದ್ದಾರೆ.  ಕಡಲಿನ ಆಚೆ ಬದಿಯಲ್ಲಿ  ನಿನ್ನದೊಂದು ತೊಟ್ಟು ರಕ್ತ  ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ  ಚೆಲ್ಲಿ ಬಿಡೋಣ  ಕವಿ ಕವಿತೆಗಳಲ್ಲಿ ಬಳಸಿರುವ ರೂಪಕಗಳು, ಪ್ರತಿಮೆ, ಸಾಂಕೇತಿಕ ಭಾಷೆ ಪ್ರತಿಯೊಂದು ಅವರು ಕವನ ಹೆರುವ ರೀತಿಗೆ ಉದಾಹರಣೆ.  ಹಸಿದ ಜಿಗಣೆಯೇ  ಬಾ ಹೀರು ನನ್ನನ್ನು  ಸ್ವಲ್ಪದರಲ್ಲೇ ನೀನು  ದ್ರಾಕ್ಷಿಯಾಗಿ ಉದುರುತ್ತೀ    ಕವಿಯ ಜಿಗಣೆಯೊಂದಿಗೆ ನಿಜಕ್ಕೂ ಸೋಜಿಗವೆನ್ನಿಸುತ್ತದೆ.ಮಿಕ್ಕವರಾರನ್ನೂ ಹೀರಕೂಡದು ಎಂದು ಹೇಳುವ ಪರಿ, ಕವಿಗೆ ಇತರರ ಮೇಲಿರುವ ಉದಾರತೆ, ಕಾಳಜಿ, ವಿಶಾಲ ಮನೋಭಾವವನ್ನು ಗೋಚರಿಸುತ್ತದೆ. ಸತೀಶ್ ರವರ ಕವಿತೆಗಳು ಹಸಿವು, ಬಡತನ, ಸಮಾಜದ ಅವ್ಯವಸ್ಥೆ, ಮೋಸ, ವಂಚನೆ, ಭ್ರಷ್ಟಾಚಾರ, ಹತಾಶೆ, ಜಾತೀಯತೆ, ಅಸಮಾನತೆ, ಪ್ರೀತಿ -ಪ್ರೇಮ, ಪ್ರಕೃತಿಯ ಬಗ್ಗೆ ಕಾಳಜಿ, ಪ್ರಕೃತಿ ವಿನಾಶದ ಬಗ್ಗೆ ಅಸಮಾಧಾನ ಹೀಗೆ ಸುಗಂಧ ಬೀರುತ್ತಾ ಒಂದೊಂದು ಕವಿತೆಯು ಸೂಕ್ಷ್ಮ ಸಂವೇದನೆಯೊಂದಿಗೆ ಮೊಗ್ಗಾಗಿ ಜೀವನದ ಆಳವಾದ ಅನುಭವದೊಂದಿಗೆ ಅರಳುತ್ತಾ ಹೋಗಿವೆ.  ಕವಿತೆಗಳು ರೋಷದಿಂದ ತಲ್ಲಣಿಸುವಂತೆ  ಭಾಸವಾದರೂ ಆರೋಗ್ಯಯುತ ಸಮಾಜ ರೂಪುಗೊಳ್ಳಲು ಬದಲಾವಣೆಗಳಿಗಾಗಿ ಮಿಡಿಯುವ ತುಮುಲವಿಸುತ್ತದೆ ನನಗೆ. ಕವಿತೆಗಳನ್ನು ವ್ಯಾಖ್ಯಾನಿಸುವುದಕ್ಕಿಂತ  ಅವುಗಳನ್ನು ಸವಿದರೆ ಅವುಗಳಲ್ಲಿನ ಕವಿಯ ಸಾಹಿತ್ಯ ಅಭಿವ್ಯಕ್ತಿಯ ಪರಿಚಯವಾಗುತ್ತದೆ.  ಮಲೆಯಾಳಂ,ಇಂಗ್ಲೀಷ್ ಭಾಷೆಗಳ ಸಾಹಿತ್ಯದ ರುಚಿವುಂಡು ಅನುವಾದಗಳಲ್ಲಿ  ತೊಡಗಿದ್ದರೂ(ಮಲಯಾಳಂ ಅನುವಾದಿತ ಕವಿತೆಗಳ ಸಂಕಲನ” ಕಡಲ ಕರೆ”ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿದೆ) ಕನ್ನಡವನ್ನು ಹೆಚ್ಚು ಪ್ರೀತಿಸಿ ಗುರುತಿಸಿಕೊಂಡಿರುವುದು ಸತೀಶ್ ರವರ ಹೆಚ್ಚುಗಾರಿಕೆ.    ‘ದೊಡ್ಡವರ ಶಿಫಾರಸ್ಸಿಲ್ಲದೆ ಬಹುಮಾನ ದಕ್ಕುವುದಿಲ್ಲ’  ಎಂಬ ಕವಿಯ ನಿಲುವನ್ನು ಹುಸಿಯಾಗಿಸಿ ಅವರ ಕವಿತ್ವ ಜ್ಞಾನಕ್ಕೆ ಪ್ರಶಸ್ತಿಯನ್ನು ದಕ್ಕಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಹೀಗೆ ಅವರ ಸಾಹಿತ್ಯದ ತೇರು ಗಾಯದ ಹೂವುಗಳಿಂದ ಅರಳಿ ದೊಡ್ಡ ಹೆಮ್ಮರವಾಗಿ ಹಲವರಿಗೆ ಆಶ್ರಯವಾಗುವ ದೀವಿಗೆಯಾಗಲಿ ಎಂಬುದೇ ಸಾಮಾನ್ಯ ಓದುಗರಾಗಿ ನಮ್ಮೆಲರ ಹೃದಯತುಂಬಿದ ಹಾರೈಕೆ ************************************************** ಕಾವ್ಯ ಎಸ್.

Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಪುಟ್ಟ ಗೌರಿ ಪುಟ್ಟ ಗೌರಿ : ಕುರಿತು ಕೆಲವು ಮಾತುಗಳು ಹೊಟ್ಟೆಯೊಳಗಡೆ ಗೋರಿ ಕಟ್ಟಿಕೊಂಡಿರುವವರೆ, ಹೊಡೆಯಲೆತ್ತಿರುವ ಕೈ ಹೊತ್ತಿ ಹೊಗೆಯುವೆದೆ, ವಿಷವುಗುಳಿ ನಗುವ ನಾಲಿಗೆ, ಎಲೆಲೇ, ತಡೆಯಿರಿ, ತಡೆಹಿಡಿಯಿರಿ: ಮಗು ನಗುತ್ತಿದೆ, ಮಗು ಆಡುತ್ತಿದೆ.               ( ಒಳ್ಳೆತನ ಸಹಜವೇನಲ್ಲ – ಎಂ ಗೋಪಾಲಕೃಷ್ಣ ಅಡಿಗ ) ಮೇಲಿನ ಸಾಲುಗಳು ಪ್ರತೀಕ್ಷಣವೂ ಎಚ್ಚರಿಸುವ, ಒಂದಷ್ಟು ಅಸಹಜ ಕಾರ್ಯಗಳನ್ನು ಒಳಗಿಂದ ತಡೆವಂತೆ ಮಾಡುವ ಕಾರ್ಯವನ್ನು ಮಾಡುತ್ತಾ ಜಾಗೃತವಾಗಿಟ್ಟಿದೆ. ದುಷ್ಟ ಮನಸ್ಥಿತಿ ಅಡಿಗರು ಬರೆದು ಹಾದಿ ಕಾಣಿಸಿಕೊಟ್ಟ ನಂತರೂ ಬದಲಾಗದಿರುವುದು ನಮ್ಮ ದುರಂತ, ಮಗುತ್ವದ ಆಸೆಯ ಮುಂಗಾಣ್ಕೆ ಅವರ ದೊಡ್ಡತನ. ‘ಮಗು ಆಡುತ್ತಿದೆ’ ‘ಮಗು ನಗುತ್ತಿದೆ’ ಎನ್ನುವುದು ಇಂದಿಗೆ ಇದೆಯೇ? ಬಹುದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಇಂದು ಮಗು ನಗಲು, ಆಡಲು ಒಂದಷ್ಟು ಅವಕಾಶ ಕೊಡಬೇಕಾಗಿದೆ. ಸಮಾಜವೊಂದು ನಿರಂತರವಾಗಿ ವಿಜ್ಞಾನ, ತಂತ್ರಜ್ಞಾನ, ಭಾಷೆ, ಸಂವಹನಗಳಿಂದ ಬೆಳೆಯುತ್ತಿರುವಾಗ, ಅದನ್ನನುಸರಿಸುವ ಮನುಷ್ಯನ ಅಭಿವ್ಯಕ್ತಿಯಲ್ಲಿ ಬದಲಾಗುತ್ತಾ ಬಹುದೊಡ್ಡ ಅವಕಾಶಗಳನ್ನು ಆಯಾ ಕಾಲದಲ್ಲಿ ಬದುಕುತ್ತಿರುವವರಿಗೆ ಮೇಲಿನ ಅಂಶಗಳು ಹಾದಿ ತೆರೆದು ಕೊಡುತ್ತದೆ. ಅವುಗಳ ಬಳಕೆ ನಮ್ಮ ಯೋಗ್ಯತೆಯ ಪ್ರತೀಕದಂತೆಯೆ; ನಮ್ಮ ಸಮಾಜದ ನಡೆ, ಇತಿ-ಮಿತಿಯನ್ನು ತಿಳಿಸುತ್ತದೆ. ನಮ್ಮೊಳಗಿನ “ಮಗು” ತನವನ್ನು ಆದಷ್ಟು ಕಾಪಿಟ್ಟುಕೊಂಡು ಬದುಕಬೇಕಾದ ಅಗತ್ಯ ತುರ್ತು ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನಗಳಲ್ಲಿನ ಆವಿಷ್ಕಾರಗಳು ಆರಂಬ ಮಾಡಿ, ಮಾಡಲು ಹೊರಟಿರುವ ದೊಡ್ಡ ಕೆಲಸವನ್ನು, ಅದು ಉಂಟುಮಾಡುವ ಪರಿಣಾಮವನ್ನು  ಬಿತ್ತನೆಮಾಡಿ ಪ್ರಯೋಗಿಸಿಯೇ ನೋಡಬೇಕಾದ ಅಗತ್ಯವಿಲ್ಲ. ಊಹಿಸುವ ಒಂದಷ್ಟು ಪ್ರಜ್ಞೆಯಿದ್ದರೆ, ಮುಂಗಾಣ್ಕೆ ಕೈ ಹಿಡಿದಿದ್ದರೆ, ಅಪಾಯಕಾರಿ ಪ್ರಯೋಗಗಳಿಂದ ದೂರ ಉಳಿವಂತೆ ಮಾಡುವಲ್ಲಿ ಬುದ್ದಿ ಭಾವಗಳು ಯಶಸ್ವಿಯಾಗಿ ಕೆಲಸ ಮಾಡುತ್ತವೆ. ಈ ಮುಂಗಾಣ್ಕೆಯ ಆಗಮನಕ್ಕೆ ಬದುಕನ್ನು ಸಹಜವಾಗಿ ಗಮನಿಸುತ್ತಲೇ, ಅದರ ಉಪೋತ್ಪನ್ನವಾದ ಬರಹಗಳ ರಾಶಿಯೂ ಕೈ ಹಿಡಿಯುತ್ತವೆ. ಜೊತೆಗೆ ಎಲ್ಲಾ ಲಲಿತಕಲಾ ಪ್ರಕಾರಗಳೂ ಬದುಕ ಹಸನಾಗಿಸುವ, ಸಹ್ಯಗೊಳಿಸುವ ಕಾರ್ಯಗಳನ್ನು ಮಾಡುತ್ತವೆ. ಅವುಗಳ ಗ್ರಹಿಕೆ ಮತ್ತು ಅಯ್ಕೆಗಳಲ್ಲಿ ಬಿದ್ದಿರುವ ಕಂದಕವೇ ಇಂದಿನ ತಲೆಮಾರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಮನುಷ್ಯ ಕೇವಲ ಹೊರ ಆಕಾರಗಳಿಂದ ಮನುಷ್ಯನಾಗಿದ್ದಾನೆ, ಒಳಗೆ ‘ಆ’ ಮನುಷ್ಯತ್ವ ಇದೆಯೇ? ಈ ಪ್ರಶ್ನೆ ಕಾಡುತ್ತಿರುವಾಗ ಕಣ್ಣ ಮುಂದಿನ ಎಳೆಯ ಮಕ್ಕಳಿಗೆ ನಾವು ಕೊಟ್ಟು-ಬಿಟ್ಟುಹೋಗುವುದಾದರೆ ಏನನ್ನು? ಮತ್ತು ಏಕೆ? ಈ ಪ್ರಶ್ನೆಗಳು ಬಹಳವಾಗಿ ಕಾಡುತ್ತದೆ. ಪುಟ್ಟಗೌರಿ ಸಂಕಲನ ‘ಆ’ ಬಿಟ್ಟು ಕೊಟ್ಟುಹೋಗಬೇಕಾದ ಅಂಶಗಳ ಕಡೆಗೆ ಗಮನ ಸೆಳೆಯುವುದರಿಂದಲೇ ಸದ್ಯದ ಒತ್ತಡದಲ್ಲಿ ಮುಖ್ಯ ಎನಿಸುತ್ತದೆ. ಬಾಲ್ಯದಲ್ಲಿ ಮಕ್ಕಳ ಶಿಕ್ಷಣ ಕುಟುಂಬದಿಂದ ಪ್ರಾರಂಭವಾಗಿ, ಶಾಲೆಯೆಂಬ ವ್ಯವಸ್ಥೆಯಲ್ಲಿ ಒಂದು ವ್ಯವಸ್ಥಿತ ಆಕಾರ ಪಡೆಯುತ್ತಿತ್ತು. ಇಂದಿನ ಶಿಕ್ಷಣ ರಜೆಯ ಮಜೆಯಾಗಿಯಷ್ಟೇ ಉಳಿದಿದೆ ಎನ್ನುವುದು ಮೊದಲ ಸಮಸ್ಯೆ. ಹಿಂದಿನ ತಲೆಮಾರು ತನ್ನ ಬಾಲ್ಯದ ಹೆಚ್ಚು ಸಮಯ ಕಳೆಯುತ್ತಿದ್ದುದು ಶಾಲೆಯ ವಾತಾವರಣದಲ್ಲಿ. ಇಂದು ಮನೆಯ ವಾತಾವರಣ ಬೇಸರವೆನಿಸಿದರೆ ಶಾಲೆಯ ಕಡೆ ಮುಖಮಾಡುವ, ಅದೂ ರಜೆಯಿಲ್ಲದಿದ್ದರೆ ಎನ್ನುವಷ್ಟು ಸಮಾಜ ಮತ್ತು ಶಿಕ್ಷಣ ವ್ಯವಸ್ಥೆ ಬದಲಾಗಿವೆ. ಒಂದೆಡೆ ಕೂರಲಾರದ, ನಿಂತಲ್ಲಿ ನಿಲ್ಲಲಾರದ, ಒಬ್ಬರನ್ನೊಬ್ಬರು ಸಹಿಸಲಾರದ, ಸದಾ ಅನುಮಾನಿಸುವ ಮಟ್ಟದ ಮನಸ್ಥಿತಿಗಳಲ್ಲಿರುವವರಲ್ಲಿ “ಸ್ವತಂತ್ರ”ವನ್ನು ಕುರಿತು ಅಪಾರ ಕಾಳಜಿಯಿದೆ, ಆದರೆ ತಮ್ಮದು “ಸ್ವೇಚ್ಛಾಚಾರ”ವೆಂಬ ಸಣ್ಣ ಗಮನವೂ ಇಲ್ಲ. ಇವುಗಳನ್ನು ಆಲೋಚಿಸವಷ್ಟೂ ನಮಲ್ಲಿ ವ್ಯವಧಾನವಿಲ್ಲ. ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಮಾತಾಡುವ ಕಣ್ಣಿಗೆ, ಕಣ್ಣೆದುರಿನ ಎಳೆಯ ಮಕ್ಕಳ ಬುದ್ದಿ ಭಾವಗಳ ಸಂಬಂಧದಲ್ಲಿ ಆಗಿರುವ ‘ವಿಘಟನೆ’ ಕಾಣುತ್ತಿದ್ದರೂ ಅದಕ್ಕೆ ಕಾರಣ, ಪರಿಹಾರ ಮಾರ್ಗೋಪಾಯಗಳ ಆಲೋಚನೆ ನಮ್ಮೊಳಗೆ ಬಂದೇ ಇಲ್ಲ. ಅಥವಾ ಎಲ್ಲವನ್ನು ಕಂಡೂಕಾಣದ ಜಾಣಕುರುಡರಂತೆ ವರ್ತಿಸುತ್ತಿದ್ದೇವೆ. ಈ ಜಾಣಕುರುಡುತನ ಕಳೆಯದೆ ಉಳಿದ ಹಾದಿ ಕ್ರಮಿಸಲಾರೆವು ಎಂಬುದು ಇನ್ನಾದರೂ ನಮಗೆ ಅರ್ಥವಾಗಬೇಕಿದೆ. “ಉತ್ತರೋತ್ತರ ವಾದ”ಗಳಲ್ಲಿ ಮಿಂದು ಬಂದಿರುವವರಿಗೆ, “ವಿಶ್ವಗುರು” ಪಟ್ಟದ ಕುರ್ಚಿಗೆ “ಟವಲ್” ಹಾಕುವ ಕಾರ್ಯದಲ್ಲಿ ಸದಾನಿರತರಾಗಿರುವ ನಮಗೆ ಮೇಲಿನ ಅಲೋಚನೆ ಮತ್ತು ಕಾಳಜಿಗಳು ಬಾಲಿಷವಾಗಿ ಕಂಡರೆ ಅಶ್ಚರ್ಯವಿಲ್ಲ. ಅದರೆ ಒಂದಂತೂ ಸತ್ಯ – ಆಂತರಿಕವಾಗಿ ಸದೃಢರಾಗದ ಹೊರತು, ಹೊರಗಿನ ಬಲಿಷ್ಟತೆ ಮಾತ್ರ ಜೀವಂತವಾಗಿ ಉಳಿಯುವ ಹಾದಿ ಎಂದು ನಂಬುವುದು, ‘ಕಲ್ಪನೆ’ಯಲ್ಲಿ ನಿಂತು ‘ಸದ್ಯ’ದ ಒತ್ತಡಕ್ಕೆ ಮಾಡುವ ಅಪಾರ ಪ್ರಮಾಣದ ಹಾನಿಗೆ ಹಾದಿ ಮಾಡಿಕೊಡುತ್ತಿದೆ. ಢಾಳಾಗಿ ಕಾಣಿಸುವಷ್ಟು ಸಮಸ್ಯೆ ಇರುವಾಗ, ಒಂದು ಭೂಭಾಗದ ಪರಿಸರ, ನಂಬಿಕೆ, ಆಚರಣೆ, ಅವುಗಳು ಕಟ್ಟಿಕೊಳ್ಳುವ ಕಲ್ಪನೆ ಮತ್ತು ಸೃಷ್ಟಿಸಿಕೊಂಡ ಭಾಷೆ, ಅವುಗಳ ಒಟ್ಟೂ ಮೊತ್ತವಾದ “ಸಂಸ್ಕೃತಿ”ಯ ಆಕಾರ ಇಂದು ಹೇಗಿದೆ? ಇದ್ದರೆ ಅದರ ಕೊಡುಗೆ ಎನು? ಪಲ್ಲಟವಾಗಿದ್ದರೆ ಏಕೆ? ಈ ಪ್ರಶ್ನೆಗಳು ಹೊಕ್ಕದ ಹೊರತು ಮುಂದಿನ ಎಳೆಯ ತಲೆಮಾರಿನ ಕುರಿತು ಸ್ವಲ್ಪವೂ ಯೋಚಿಸಲಾರೆವು. ಈ ಪ್ರಶ್ನೆಗಳು ಕಾಡಲ್ಪಟ್ಟಿರುವ ಕೆಲವರಾದರೂ ಒಂದಷ್ಟು ಆ ಕಡೆಗೆ ಗಮನ ಹರಿಸಿದ್ದಾರೆ. ಅಂತಹವರಲ್ಲಿ ಜಯಲಕ್ಷ್ಮೀ ಎನ್. ಎಸ್. ಕೋಳಗುಂದರೂ ಒಬ್ಬರು, ಅಂತಹಾ ಸಂಕಲನಗಳಲ್ಲಿ “ಪುಟ್ಟಗೌರಿ” ಯೂ ಒಂದು. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಕವಿತೆಗಳು ಹೇರಳವಾಗಿ ಬಂದಿದೆ. ರಾಜರತ್ನಂ ರಿಂದ ಹಿಡಿದು ಇತ್ತೀಚೆಗೆ ಮಕ್ಕಳ ಕವಿತೆಗಳ ಸಮಗ್ರದವರೆಗಿನ ಕವಿತೆಗಳು ವ್ಯಾಪ್ತಿ, ವಿಸ್ತಾರ ಮತ್ತೊಂದಷ್ಟು ಸಮಸ್ಯೆಗಳ ಕುರಿತು ಮಾತಾಡುತ್ತದೆ. ಮಕ್ಕಳಿಗಾಗಿ ಬರೆಯುವಾಗ ವಯಸ್ಸಿನ ಮಿತಿ ಇರುತ್ತದೆಯೇ? ಇದ್ದರೆ ಏಕೆ? ಈ ಪ್ರಶ್ನೆಗಳು ಬಹುಮುಖ್ಯವಾದದ್ದು. ಮಕ್ಕಳ ಕವಿತೆಗಳು ಕೇವಲ ಮಕ್ಕಳಿಗಲ್ಲ, “ಮಗು ಮನಸ್ಥಿತಿ” ಯನ್ನು ಕಾಪಿಟ್ಟುಕೊಳ್ಳುವ ಅಗತ್ಯವಿರುವ ಎಲ್ಲರಿಗೂ ಎನ್ನುವುದು ಸ್ಪಷ್ಟ ಉತ್ತರವಾದರೂ, ಆ ಕಾರ್ಯ ಎಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎನ್ನುವುದು ಬಹಳ ಮುಖ್ಯ. ಭಾಷೆ, ವಸ್ತು, ರೂಪಗಳು ಮೊದಲ ತಲೆಮಾರಿನಂತೆಯೇ ಇರುವ ‘ಪುಟ್ಟಗೌರಿ’ಯಲ್ಲಿ ಗಮನ ಸೆಳೆಯುವುದು ಕವಿತೆಗಳಲ್ಲಿನ “ಲಯ”. “ಲಯ” ಕಳೆದುಕೊಂಡು ಬದುಕುತ್ತಿರುವವರಿಗೆ “ಲಯ”ವಾಗದಂತೆ “ಲಯ”ದಲ್ಲಿಯೇ “ಬದುಕ ಲಯ”ದ ಕಡೆಗೆ ಗಮನಸೆಳೆಯುವಂತೆ ಈ ಸಂಕಲನವಿದೆ. ಮೇಲಿನ ವಾಕ್ಯದಲ್ಲಿ ಬಳಸಿರುವ “ಲಯ” ಪದವು ಕೇವಲ ವಾಕ್ಯರಚನೆಯ ಆಟಕ್ಕಾಗಿ ಆಲ್ಲ. ಒಮ್ಮೆ ಸಂಕಲನದ ಕವಿತೆಗಳನ್ನು ಗಟ್ಟಿಯಾಗಿ ಓದಿನೋಡಿ “ಲಯ” ಅನುಭವಕ್ಕೆ ಬರುತ್ತದೆ. ಮೇಲಿನ ಅಷ್ಟೆಲ್ಲಾ ‘ಲಯ ಕಾರಣ’ಗಳನ್ನು ಒಳಗಿಟ್ಟುಕೊಂಡು ಬದುಕುತ್ತಿರುವ ನಮಗೆ ಕಾವ್ಯದ ಲಯ ಕಾಣಿಸುವ ಸತ್ಯ ಏನನ್ನು? ಕವಿ ಏಕೆ ಲಯವಿಲ್ಲದ ಬದುಕಿನ ನಡುವೆ, ಮತ್ತೆ ಲಯದ ಕಡೆ ಮುಖಾಮುಖಿಯಾಗಿ ಕಲಾತ್ಮಕ ಅಭಿವ್ಯಕ್ತಿ ಮಾಡುತ್ತಾನೆ/ಳೆ? ಕವಿಯ ಈ ಮನಸ್ಥಿತಿ ಎಂತದ್ದು? ಮತ್ತು ಇದರ ಹಿಂದಿರುವ ಉದ್ದೇಶ ಏನು? ಮೇಲಿನ ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ ಈ ಸಂಕಲನ ತನ್ನ ಕಡೆಗೆ ಸೆಳೆದು ಬೆರಗಾಗಿಸಿ ಮುಖಮಾಡುವಂತೆ ಮಾಡುತ್ತದೆ. ‘ಪುಟ್ಟಗೌರಿ’ ಸಂಕಲನವು ನಲವತ್ತಮೂರು ಕವನಗಳ ಗುಚ್ಛ. ಹೆಸರಿನಲ್ಲಿ ಪುಟ್ಟ ಇದೆಯಷ್ಟೇ, ಸತ್ವದಲ್ಲಿ ಹಿರಿದಾಗಿಯೇ ಇದೆ. ಶಿಕ್ಷಕಿಯಾಗಿರುವ ಕಾರಣದಿಂದ ಕವಯತ್ರಿಗೆ ಮಕ್ಕಳೊಂದಿಗಿನ ಒಡನಾಟ ಮತ್ತು ಅವರ ಭಾಷೆಯ ಜಾಡನ್ನು ಹಿಡಿದು ಭಾವವನ್ನು ಅರ್ಥೈಸುವ ಮತ್ತು ಅಭಿವ್ಯಕ್ತಿಸುವ ಕಲೆ ಸಹಜವಾಗಿಯೇ ಸಿದ್ದಿಸಿದೆ. ಶಿಕ್ಷಕ ವೃತ್ತಿಯಲ್ಲಿ ಇರುವವರಿಗೆ ಇರಲೇಬೇಕಾದ ಜಾಗೃತಾವಸ್ಥೆ. ಸಂಕಲನದ ಪ್ರತಿಯೊಂದು ಕವನವು ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ವಿಶಿಷ್ಟತೆಯನ್ನು ಸಹಜವಾಗಿ ಪಡೆದಿರುವ ರಚನೆಯು, ಕವನಗಳ ಒಳ ಹೊರಗುಗಳ ಬಲ್ಲವರಾದ ಕವಯತ್ರಿಗೆ ಈ ರಚನೆಗಳು ಸವಾಲಿನ ಕೆಲಸ ಆಗಿರಲಾರದು. ಇಲ್ಲಿನ ಕವನಗಳು ಕಲಾತ್ಮಕ ಹೊದಿಕೆ ಹೊದ್ದಿರುವುದು ವಸ್ತು ಮತ್ತು ಭಾಷೆಯ ಮೇಲ್ನೋಟಕ್ಕೆ ತಿಳಿಯುತ್ತದೆ. ಕವನವೊಂದು ಹೀಗೆ ಅಖಂಡರೂಪ ಪಡೆಯಲು ಕವಿ ತನ್ನೆಲ್ಲಗಬಹುದಾದ ಕವನಗಳ ಆವಿರ್ಭಾವಕ್ಕೆ ನನ್ನ ಜೀವಮಾನದ ಕೊನೆಯ ಕವನವೇ ಇದೆಂದು ಭಾವಿಸಿದಾಗ ಮಾತ್ರ ಕುಸುರಿ ಕೆಲಸಗಳು ಸಾಧ್ಯವಾಗುತ್ತದೆ. ಅಂತಹಾ ರಚನೆಗಳು ಇಲ್ಲಿ ಕಣ್ಣಿಗೆ ಕಂಡಿವೆ. ಸಹಜವಾಗಿಯೇ ಮಕ್ಕಳ ಕವನಗಳು ಹಾಡುವ ಮಟ್ಟನ್ನು ಹೊಂದಿದ್ದಾಗ ಕಂಠಸ್ಥವಾಗುತ್ತವೆ. ನೆನಪಿನಲ್ಲಿ ಉಳಿವುದಕ್ಕೆ ಮುಖ್ಯ ಕಾರಣವೇ ಕವಿ ಬಳಸುವ ಭಾಷೆ. ಭಾಷೆಯೊಂದರಲ್ಲಿನ ವಾಕ್ಯ ರಚನೆಯ ನಿಯಮಗಳನ್ನು ಮುರಿಯುವಿಕೆ ಮತ್ತು ಬೇರೆಯದೇ ಆದ ಕ್ರಮದಲ್ಲಿ ಪದಗಳನ್ನು ಕೂಡಿಸುವಿಕೆ/ಜೋಡಿಸುವಿಕೆಯ ಮೂಲಕ  ಕವನವೊಂದು ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುತ್ತಾ ಸಾಗುತ್ತದೆ. ಈ ಮುರಿಯುವಿಕೆಯು ಆಂತರಿಕವಾಗಿ ಕವನವೊಂದರಲ್ಲಿ ಲಯದ ಆವಿರ್ಭಾವಕ್ಕೆ ಕಾರಣವಾಗುತ್ತದೆ. ‘ಲಯ’ ಒಮ್ಮೆ ಸಿದ್ದಿಸಿತೆಂದರೆ ಮಕ್ಕಳ ಮನಸ್ಸನ್ನು ಹೊಕ್ಕು ಕವನವೊಂದು ಸಾರ್ಥಕ್ಯ ಪಡೆದಂತೆ. ಸದ್ಯದಲ್ಲಿ ರಚನೆಯಾಗುತ್ತಿರುವ ಮಕ್ಕಳ ಕವನಗಳನ್ನು ಗಮನಿಸಿದ್ದೇನೆ ಅವು ವಿಸ್ತಾರವಾದ ಬೌದ್ಧಿಕಕ್ರಿಯೆಯ ಅಭಿವ್ಯಕ್ತಿ ಎಂದು ಕೆಲವು ರಚನೆಗಳು ಆಕಾಗ ಪತ್ರಿಕೆಗಳಲ್ಲಿ ಓದಿದಾಗ ಎನಿಸಿದ್ದಿದೆ. ಇದಕ್ಕೆ ಬಹುಮುಖ್ಯ ಕಾರಣವೇ ಮಕ್ಕಳ ಭಾಷಾ ರಚನೆಯನ್ನು ಗಮನಿಸದ ಮತ್ತು ಅವರ ಭಾವಕೋಶವನ್ನು ಪ್ರವೇಶಿದೆ ಇರುವುದೇ ಕಾರಣಗಳಾಗಿದೆ. ಇಲ್ಲಿನ ರಚನೆಗಳು ಆ ಸಮಸ್ಯೆಯಿಂದ ಹೊರಗೆ ಉಳಿದಿರುವುದೇ ವೃತ್ತಿ ಮತ್ತು ತಾಯೊಡಲ ತಲ್ಲಣಗಳು ಇರುವುದರಿಂದ. ಪುಕ್ಕವ ತಿರುವುತ ರೆಕ್ಕೆಯ ಬೀಸುತ ಎಲ್ಲಿಗೆ ಹೊರಟೆ ಎಲೆ ನವಿಲೆ ಗರಿಗಳ ಬಿಚ್ಚಿ ಕುಣಿಯಲು ನೀನು ಸ್ವರ್ಗವ ಕಾಣುವೆ ನಾನಿಲ್ಲೆ                                         ( ನವಿಲೇ ನವಿಲೆ ) ನಮ್ಮ ಮನೆಯ ನಾಯಿಮರಿ ಕದ್ದು ತಿಂತು ಕಾಯಿತುರಿ                                          ( ಕಳ್ಳ ನಾಯಿ ) ಕವನಗಳಿಂದ ಅಯ್ದ ಸಾಲುಗಳನ್ನೊಮ್ಮೆ ಗಮನಿಸಿ. ಮೊದಲ ಸಾಲಿನಲ್ಲಿ ಬರುವ ಪುಕ್ಕ, ರೆಕ್ಕೆ, ಎಲ್ಲಿಗೆ, ಎಲೆ ಪದಗಳು ಸೃಷ್ಟಿಸುವ ಪ್ರಾಸ ಬಹುಮುಖ್ಯವಾಗುತ್ತದೆ. ಎರಡನೆಯ ಸಾಲನ್ನು ಗಟ್ಟಿಯಾಗಿ ಓದಿದಾಗ ಪಡೆವ ನಿಲುಗಡೆಯು (ಯತಿ) ಸಹಾ ಇಲ್ಲಿ ಮುಖ್ಯವಾಗುತ್ತದೆ. ‘ಎಲ್ಲಿಗೆ ಹೊರಟೆ, ಎಲೆ ನವಿಲೆ’ ಎಂದು ಓದುವಾಗಲೆ ಪ್ರಶ್ನೆಯೊಂದು ಆರಂಭವಾಗಿ ಕಾವ್ಯ ತನ್ನ ಮುಂದಿನ ದಿಕ್ಕನು ಪಡೆಯುತ್ತದೆ. ಮೊದಲಿಗೆ ಈ ಪ್ರಶ್ನೆಯ ಮೂಲಕ ಉಂಟಾದ ಕುತೂಹಲ ಕವನವನ್ನು ಪೂರ್ಣವಾಗಿ ಓದುವಂತೆ ಪ್ರೇರೇಪಿಸಿಬಿಡುತ್ತದೆ. ಎರಡನೆಯ ಉದಾಹರಣೆಯಲ್ಲಿನ ನಾಯಿಮರಿ, ಕಾಯಿತುರಿ ಪದಗಳು ಪಡೆವ ವೇಗವಾದ ಓಟವನ್ನು ಗಮನಿಸಿ. ನಿಲುಗಡೆಯನ್ನು ಬಯಸದ ಸರಾಗ ಓಟ. ನಿಲ್ಲಿಸುವ ಮತ್ತು ವೇಗಪಡೆದುಕೊಳ್ಳುವ ಗುಣಗಳು ಮಕ್ಕಳನ್ನು ಬೇಗ ಗಮನಸೆಳೆದುಬಿಡುತ್ತದೆ. ‘ಕಳ್ಳ ನಾಯಿ’ ಕವನವನ್ನು ಕವಿ ಇನ್ನೊಂದಷ್ಟು ಬೆಳೆಸಬಹುದಾದ ಸಾಧ್ಯತೆಯಿದ್ದರು ಏಕೆ ಬೆಳೆಸಲಿಲ್ಲವೆನ್ನುವುದೇ ಕುತೂಹಲದ ವಿಷಯ. ಇಲ್ಲಿ ಬೆಳವಣಿಗೆ ಪಡೆದಿದ್ದರೆ ಯಶಸ್ವಿ ಕವನಗಳ ಪಟ್ಟಿಯಲ್ಲಿ ಇದೂ ಒಂದು ಸೇರುತ್ತಿತ್ತು. ಅಮ್ಮ ಅಮ್ಮ ಅಲ್ಲಿ ನೋಡು ಹಾರುತಿರುವ ಚಿಟ್ಟೆ ಅದರ ಹಾಗೆ ನನಗು ಕೂಡ ರೆಕ್ಕೆ ಎರಡು ಕಟ್ಟೆ                               ( ಅಲ್ಲಿ ನೋಡು ಚಿಟ್ಟೆ ) ಕವನದಲ್ಲಿನ ರಾಚನಿಕ ವಿನ್ಯಾಸವನ್ನು ಗಮನಿಸಿ. ನಾಲ್ಕು ಪಾದಗಳನ್ನು ಹೊಂದಿದ್ದು ಮೊದಲು, ಮೂರನೆಯ ಪಾದಗಳು ಸಮಾನ ಹನ್ನೆರಡು ಮಾತ್ರೆಗಳಿಂದ ಕೂಡಿದ್ದು, ಎರಡು, ನಾಲ್ಕನೆಯ ಸಾಲು ಒಂಭತ್ತು ಮಾತ್ರೆಗಳಿಂದ ಕೂಡಿದೆ. ಈ ರಚನೆಯಲ್ಲಿನ ಭಾಷೆ ಮತ್ತು ತೀವ್ರತಮ ಓಟಗಳು ಚಿಟ್ಟೆಯ ರೆಕ್ಕೆ ಬಡೆವಂತೆಯೇ ಭಾಸವಾಗುತ್ತದೆ. ಅನಂತರ ಈ ಲಯ ನಿಧಾನಗತಿ ಪಡೆದು ಕಥನಕ್ರಮದ ಕಡೆಗೆ ನಡೆದುಬಿಡುತ್ತದೆ. ಮಕ್ಕಳನ್ನು ಹತ್ತಿರದಿಂದ ಬಲ್ಲವರು ಮಾತ್ರ ಇಂತ ರಚನೆಗಳನ್ನು ಮಾಡಬಲ್ಲರು ಎನಿಸಿದೆ. ಮೊದಲು ಕುತೂಹಲ ಅಅನಂತರ ಬೋಧನೆ. ಈ ನಿಯಮದಲ್ಲಿ ಕವನ ಸಾಗುತ್ತದೆ. ಕಥನಕ್ರಮ ಮಕ್ಕಳ ಕವಿತೆಗಳ ಸಾಮಾನ್ಯ ರಚನಾಕ್ರಮ. ಮಕ್ಕಳ ಕವನಗಳ ಪರಂಪರೆಯಲ್ಲಿ ರಚನೆಯಾಗಿರುವ ಹಲವಾರು ಉದಾಹರಣೆಗಳನ್ನು ಇದಕ್ಕೆ ಸಾಕ್ಷಿಯಾಗಿ ಹೆಕ್ಕಿ ಕೊಡಬಹುದು. ‘ಆ’ ಕವನಗಳಲ್ಲಿ ಒಂದು ಸಾಯುಜ್ಯಸಂಬAಧ ಇರುವುದಕ್ಕೆ ‘ಆ’ ಸಮಾಜದಲ್ಲಿನ ಕುಟುಂಬಗಳಲ್ಲಿದ್ದ ಅವಿಭಜತ ವ್ಯವಸ್ಥೆ ಬಹುಮುಖ್ಯ ಕಾರಣ. ಬದಲಾದ ಕಾಲಮಾನದಲ್ಲಿ ಬದುಕುತ್ತಿರುವ, ಕಾವ್ಯರಚನೆ ಮಾಡುತ್ತಿರುವವರಲ್ಲಿ ಕಥನಕ್ರಮ ಸಹಜವಾಗಿ ಉಂಟಾಗದಿರಲು ವಿಭಜನೆಯಾಗಿರುವುದು ಮುಖ್ಯ ಕಾರಣ. ಇದಕ್ಕೆ ವಿವರಣೆಗಳನ್ನು ಕೊಡುವ ಅಗತ್ಯವಿಲ್ಲ. ಪ್ರತಿಯೊಂದು ವಿಭಜಿತ ಕುಟುಂಬಕ್ಕೆ ಅದರದೇ ಆದ ಕಾರಣಗಳಿವೆ. ಆದರೆ ಕವಿಯೊಬ್ಬನ ಗಮನ ಮತ್ತು ಎಳೆಯ ತಲೆಮಾರಿಗೆ ತಾನು ದಾಟಿಸಬೇಕಾದ ಮೌಲ್ಯ ಎಂತದ್ದೆನ್ನುವ ಪರಿವೆ ಇರಬೇಕಾದುದು ಬಹುಮುಖ್ಯವಾದದ್ದು. ಸಂಕಲನದಲ್ಲಿರುವ ಎರಡು ಕವನಗಳಾದ ‘ನನ್ನ ದಿನಚರಿ’ ಮತ್ತು ‘ಚಂದಾ ಮಾಮ ಬಾರೋ’ ಗಳಲ್ಲಿರುವ

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಲಂಕೇಶ್ ಮೋಹಕ ರೂಪಕಗಳ ನಡುವೆ

ಪುಸ್ತಕ ಪರಿಚಯ ಲಂಕೇಶ್ ಮೋಹಕ ರೂಪಕಗಳ ನಡುವೆ ಲೇಖಕರು:-ಶೂದ್ರ ಶ್ರೀನಿವಾಸ,ಪ್ರಕಟನೆ-ಪಲ್ಲವ ಪ್ರಕಾಶನ,೯೪೮೦೩೫೩೫೭,ಪುಟ-೨೮೨,ಬೆಲೆ-೨೫೦/- ..     ನಾನು ಪಿಯುನಲ್ಲಿ ಓದುವಾಗಲೇ ಲಂಕೇಶ್ ಪತ್ರಿಕೆ ಗುಂ ಬಂ ಎಂಬ ಹೊಸ ನುಡಿಗಟ್ಟಿನೊಂದಿಗೆ ಕನ್ನಡದ ಜಾಣ ಜಾಣೆಯರಿಗಾಗಿ ಎಂಬ ಟ್ಯಾಗ್ ಲೈನ್ ದೊಂದಿಗೆ ಅದೇ ಆರಂಭವಾಗಿತ್ತು.ಪ್ರಥಮ ಸಂಚಿಕೆಯಿಂದ ಆರಂಭಿಸಿ ಕೊನೆಯ ಸಂಚಿಕೆಯವರೆಗೂ ಬಿಟ್ಟು ಬಿಡದೇ ಓದಿದ ನನಗೆ ಅತ್ಯಂತ ಬೆಳೆಯುವ ವಯಸ್ಸಿನಲ್ಲಿ ಪ್ರಭಾವ ಬೀರಿದವರು ಲಂಕೇಶ್ ಹಾಗೂ ಅವರ ಪತ್ರಿಕೆಯ ಬಳಗದ ಆಗಿನ ಎಲ್ಲ ಲೇಖಕರು,ವರದಿಗಾರರು.ಇಡೀ ಪತ್ರಿಕೆಯ ಒಂದಕ್ಷರವು ಬಿಡದೇ ಓದುತ್ತಿದ್ದೆ.ಲಂಕೇಶ, ತೇಜಸ್ವಿ,ಚಂಪಾ, ಶೂದ್ರ, ರಾಮದಾಸ,ಎಂ ಡಿ ಎನ್, ಎಚ್,ಎಲ್, ಕೇಶವಮೂರ್ತಿ,ಪುಂಡಲೀಕ್ ಶೇಠ,ಬಿ.ಚಂದ್ರೆಗೌಡ, ರವಿಂದ್ರ ರೇಷ್ಮೆ,ಲಿಂಸ್, ರಾಮಚಂದ್ರ ಶರ್ಮಾ, ಚಂದ್ರಶೇಖರ ಆಲೂರು, ಸತ್ಯಮೂರ್ತಿ ಆನಂದೂರು, ಟಿ.ಕೆ.ತ್ಯಾಗರಾಜ್, ಡಿ.ಆರ್,ನಾಗರಾಜ್, ಡಾ.ಸಿದ್ದಲಿಂಗಯ್ಯ,ಹೀಗೆ ಕೊನೆಗೆ ಬಸವರಾಜುರವರೆಗೆ ಪತ್ರಿಕೆಯ ಎಲ್ಲ ಬರಹಗಾರರ ದಟ್ಟ ಪ್ರಭಾವ ಪರಿಚಯ ಅವರ್ಯಾರನ್ನು ಕಾಣದೇ ಸಹ ನನ್ನ ಮೇಲೆ ಆಗಿತ್ತು.   ಪತ್ರಿಕೆ ಇಡೀ ಕರ್ನಾಟಕಕ್ಕೆ ಹೊಸ ದೃಷ್ಟಿಕೋನ ಕೊಟ್ಟಿದ್ದು ಸುಳ್ಳಲ್ಲ.ಅಂತಹ ಲಂಕೇಶರ ಕುರಿತು ಈ ಕೃತಿ ರಚಿಸಿದ, ನಾನು ತುಂಬಾ ಗಾಢವಾಗಿ ಗಮನಿಸಿದಂತಹ ಸೂಕ್ಷ್ಮ ಸಂವೇದನೆಯ ಲೇಖಕರು ಈ ಶೂದ್ರ ಶ್ರೀನಿವಾಸ್ ಸರ್.ಅವರು ತಮ್ಮ ಒಡನಾಟದ ಮೂಲಕ ಪತ್ರಿಕೆಯ ಮುಖದ ಮೂಲಕ ಮಾತ್ರ ದಟ್ಟ ಪರಿಚಯವಿದ್ದ ಲಂಕೇಶರನ್ನು ಅವರ ಎಲ್ಲ ಕೋನಗಳಿಂದಲೂ ನಿರಂತರ ಒಡನಾಟದ ಕಾರಣವಾಗಿ, ಸೂಕ್ಷ್ಮವಾಗಿ ಅವಲೋಕನ ಮಾಡಿ ಈ ಕೃತಿಯಲ್ಲಿ ಅತ್ಯಂತ ವಸ್ತುನಿಷ್ಠವಾಗಿ, ಇದ್ದುದಿದ್ದಂತೆ ಎಲ್ಲ ಪ್ರೀತಿ ಅಭಿಮಾನ,ರಾಗ ದ್ವೇಷಗಳನು ಮೀರಿ ಒಬ್ಬ ಸಂತನ ಮನಸ್ಥಿತಿಯಿಂದ ಸುಂದರ ರೂಪಕವಾಗಿಸಿದ್ದಾರೆ. ಈ ಕೃತಿಯಲ್ಲಿ ಅತ್ಯಂತ ಕಲಾತ್ಮಕವಾಗಿ, ಓದಿದವರಿಗೆ ಬಹುಕಾಲ ಕಾಡುವಂತೆ ಕಟ್ಟಿಕೊಟ್ಟಿದ್ದಾರೆ. ಅವರ ಅನೇಕ ಮಾತುಗಳನ್ನು ಉಲ್ಲೇಖಿಸಿ ಓದುಗರು ಅವನ್ನೆಲ್ಲ ಅರ್ಥಮಾಡಿಕೊಳ್ಳುವಂತೆ ಲಂಕೇಶರನ್ನು ಬಹುದೊಡ್ಡ ಕ್ಯಾನ್ವಾಸ್ ನಲ್ಲಿ ಕಲಾಕೃತಿಯಾಗಿಸಿ ನಮ್ಮ ಮುಂದೆ ನಿಲ್ಲಿಸಿ ಈ ಕೃತಿ ಸಾರ್ಥಕತೆ ಪಡೆದಿದೆ.ಲಂಕೇಶರ ಒಳಗಿನ ಮೂರು ವ್ಯಕ್ತಿತ್ವಗಳನ್ನು ಬಹಳ ಚೆಂದ ನಿರೂಪಿಸಿದ್ದಾರೆ. ಮತ್ತೆ ಮತ್ತೆ ಓದಬಹುದೆನಿಸುವ ಕೃತಿ ಇದು. ೧೯೯೧ ರಲ್ಲಿ ಪ್ರಕಟವಾದ ಮೊಟ್ಟಮೊದಲ ನಮ್ಮ ಅಕ್ಕಾಳಿಗೊಂದು ಪ್ರಶ್ನೆ ಹಾಗೂ ಇತರ ಕವನಗಳು ಸಂಕಲನಕ್ಕೆ ಆ ಕಾಲದಲ್ಲಿ ಬೆನ್ನುಡಿ ಬರೆದು ಕೊಟ್ಟಿದ್ದರು ಈ ಶೂದ್ರ ಸರ್,ಹಲವು ವರ್ಷ ಶೂದ್ರ ಸಹ ನನಗೆ ಬರುತ್ತಿತ್ತು. ಲಂಕೇಶರ ದಟ್ಟ ಪ್ರೀತಿ, ವ್ಯಂಗ್ಯ,ವಿಡಂಬನೆ ಎಲ್ಲವೂ ಶೂದ್ರರ,ಹಾಗೂ ಇತರರ ಮೇಲಾಗುತ್ತಿದ್ದದ್ದು ಗಮನಿಸುತ್ತಾ ಬೆಳೆದಿದ್ದೇವೆ.ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಇವರ ದಟ್ಟ ಪರಿಚಯ, ಪ್ರಭಾವಕ್ಕೆ ಒಳಗಾದದ್ದು ಉಂಟು.ಲಂಕೇಶ ಬಳಗ ಅಂದ್ರೆ ಓದಲು ಖುಷಿ ಆಗುತ್ತಿದ್ದ ಕಾಲವದು.    ಈ ಕೃತಿ ಎಪ್ಪತ್ತರ ದಶಕದಿಂದ ಆರಂಭಿಸಿ ಒಟ್ಟು ನಾಲ್ಕು ದಶಕಗಳವರೆಗಿನ ಇಡೀ ಸಾಹಿತ್ಯಕ ವಾತಾವರಣ,ರೈತ ಚಳುವಳಿ, ಗೋಕಾಕ ಚಳುವಳಿ,ಬೂಸಾ ಚಳುವಳಿ, ರಾಜಕೀಯ ಸ್ಥಿತ್ಯಂತರಗಳು,ಒಕ್ಕೂಟ,ಹೀಗೆ ಎಲ್ಲವನ್ನು ಒಬ್ಬ ಸಾಕ್ಷಿಪ್ರಜ್ಞೆ ಯಾಗಿ ಅವಲೋಕಿಸಿ ಅತ್ಯಂತ ಮಾನವೀಯ ನೆಲೆಯಲ್ಲಿ ಒಳಗೊಂಡು, ಖುಷಿ ಪಟ್ಟು, ನೊಂದು ಬೆಂದು ಈ ಕೃತಿ ರಚಿಸುವ ಮೂಲಕ ಹಗುರವಾಗಿದ್ದಾರೆನಿಸುತ್ತದೆ.ಅಷ್ಟೇ ಮುಖ್ಯವಾಗಿ ಈ ಎಲ್ಲ ಸಂದರ್ಭಗಳಲ್ಲೂ ಅವರ ಪಾಲ್ಗೊಳ್ಳುವಿಕೆ ತುಂಬಾ ಮಹತ್ವದ್ದೆನ್ನುವದು ಸಹ ಅಷ್ಟೇ ಮುಖ್ಯವಾಗಿದೆ.ಶೂದ್ರ ಸರ್ ನಿಮಗೆ ನೂರು ನಮನ.ಪ್ರಕಟಿಸಿ ಓದಲು ಹಚ್ಚಿದ ನಾಡಿನ ಹೆಮ್ಮೆಯ ಪ್ರಕಾಶನದ ಶ್ರೀ ವೆಂಕಟೇಶ್ ಅವರಿಗೂ ಅಭಿನಂದನೆಗಳು.ಲಂಕೇಶರು ನಮ್ಮ ಪ್ರಜ್ಞೆಯ ಒಂದು ಭಾಗವಾಗಿ ಸದಾ ನಮ್ಮೊಳಗೆ ಮತ್ತೆ ಮತ್ತೆ ಮೆಲುಕು ಹಾಕಿಕೊಳ್ಳುವಂತಹ,ಲಂಕೇಶರ ಬಗ್ಗೆ ಪ್ರೀತಿಯುಳ್ಳ ಎಲ್ಲರೂ ಒಮ್ಮೆಯಾದರು ಓದಲೇಬೇಕಾದ ಕೃತಿ ಇದು. *******************************

ಲಂಕೇಶ್ ಮೋಹಕ ರೂಪಕಗಳ ನಡುವೆ Read Post »

ಪುಸ್ತಕ ಸಂಗಾತಿ

ಕನಸುಗಳು ಖಾಸಗಿ

ಪುಸ್ತಕ ಪರಿಚಯ ಕನಸುಗಳು ಖಾಸಗಿ ಕತ್ತಲದಾರಿಯ ಸಂದಿಗೊಂದಿಗಳಲ್ಲಿ ಕರೆದೊಯ್ಯುವ  ‘ಕನಸುಗಳು ಖಾಸಗಿ’          ಆಧುನಿಕ ಜಗತ್ತಿನ ಕರಾಳ ಮುಖಗಳನ್ನು ‘ಕನಸುಗಳು ಖಾಸಗಿ’ ಎಂಬ ತಮ್ಮ ಒಂಬತ್ತು ಕಥೆಗಳ ಸಂಕಲನದ ಮೂಲಕ   ನರೇಂದ್ರ ಪೈಯವರು  ಕಾಣಿಸಿಕೊಟ್ಟಿದ್ದಾರೆ.. ಇಲ್ಲಿರುವುದು ಕನಸುಗಳು ಅನ್ನುವುದಕ್ಕಿಂತ   ಕಥೆಗಳನ್ನು ಓದುತ್ತಿರುವಾಗ ಕಣ್ಣ ಮುಂದೆ ರುದ್ರ ನರ್ತನ ಮಾಡುವ ದುಸ್ವಪ್ನಗಳು ಅನ್ನುವುದು ಹೆಚ್ಚು ಸೂಕ್ತ .  ವೇಗದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳು ತ್ತಿರುವ ಇಂದಿನ ಜಗತ್ತಿನಲ್ಲಿ  ಸಂಬಂಧಗಳು  ಛಿದ್ರಗೊಂಡಿವೆ, ಸ್ವಾರ್ಥ ಮೇರೆ ಮೀರಿದೆ, ಹಿಂಸೆ ಹದ್ದು ಮೀರಿದೆ, ಮೌಲ್ಯಗಳು ಪಾತಾಳಕ್ಕೆ ಕುಸಿದಿವೆ. ಹಣ ಸಂಪಾದನೆ ಮತ್ತು ಭೌತಿಕ ಸುಖಾಪೇಕ್ಷೆಗಳಷ್ಟೇ ಜೀವನದ ಗುರಿಯಾಗಿ ಜನರು ಕತ್ತಲದಾರಿಗಳ ಸಂದಿಗೊಂದಿಗಳಲ್ಲಿ  ಕುರುಡರಂತೆ ನಡೆಯುತ್ತಿರುವ ಒಂದು ಸಂವೇದನಾಶೂನ್ಯ ಜಗತ್ತನ್ನು ನಮ್ಮ ಮುಂದಿಡುವ ಈ ಕಥಾಸಂಕಲನವು ಸದ್ದಿಲ್ಲದೆ   ಒಂದು ಹಾರರ್ ಚಿತ್ರವನ್ನು ನೋಡಿದ ಅನುಭವ ಕೊಡುತ್ತದೆ..   ಖಾಸಗಿ ಕನಸುಗಳು ಯಾವುದೋ ಕ್ಷಣದಲ್ಲಿ ನಿಯಂತ್ರಣ ತಪ್ಪಿ ಸಾರ್ವಜನಿಕವಾದಾಗ ಆಗುವ ಅನಾಹುತಗಳ ಚಿತ್ರಣವು   ‘ಕನಸುಗಳು  ಖಾಸಗಿ ‘ ಎಂಬ  ಮೊದಲ ಕಥೆಯಲ್ಲಿದೆ. ಹಳೆಯ ಕಾಲೇಜು ಸಹಪಾಠಿ ಕಳುಹಿಸಿದ ಇ- ಮೆಯಿಲ್ ನಲ್ಲಿ ಹಂಚಿಕೊಂಡ ನೆನಪಿನ ಮೆಲುಕುಗಳಲ್ಲಿ ಬಂದ ಚೆಲುವೆ ರಜನಿ..ಅಂದಿನ ಹುಡುಗಾಟದ ದಿನಗಳಲ್ಲಿ ಅವಳನ್ನು ಪ್ರೀತಿಸಿದ ಸಂದರ್ಭವು ಮರುಕಳಿಸುವಂತೆ ಮಾಡಿದ ಹುಕಿಯಲ್ಲಿ ಸುರೇಶ ಆ ಮೆಯಿಲ್ ನ್ನು ಯಾರು ಯಾರಿಗೋ ಫಾರ್ವರ್ಡ್ ಮಾಡುತ್ತ ಹೋಗುವಾಗ ಅದರ ಪರಿಣಾಮದ ಕಲ್ಪನೆ ಅವನಿಗಿರುವುದಿಲ್ಲ. ರಜನಿಯಲ್ಲಿ ಪ್ರೀತಿ ಹುಟ್ಟುವಂತೆ ಮಾಡಿ ತನ್ನ ಕನಸುಗಳನ್ನು ತನ್ನೊಳಗೇ ಇಟ್ಟುಕೊಂಡು ಕನಸು ಕಂಡ ಗಂಗು ಒಂದೆಡೆಯಾದರೆ ಅವನ ಪ್ರೀತಿಯ ಗುಂಗಿನಲ್ಲಿ ಗಂಡನನ್ನು ಪ್ರೀತಿಸುವಲ್ಲಿ ವಿಫಲಳಾದ ರಜನಿ ಇನ್ನೊಂದೆಡೆ. ಮೆಯಿಲ್ ಓದಿದ ಗಂಡ ಅವಳ ಕೊಲೆ ಮಾಡುವುದಂತೂ ಭೀಕರ ದುರಂತ. ಈ ಕ್ರೂರ ಕೃತ್ಯಕ್ಕೆ ಕಾರಣ ಗುಂಗನೇ, ಸುರೇಶನೇ  ಗಂಡನೇ ಅಥವಾ ಕೇವಲ ಬೆರಳೊತ್ತುವ ಮೂಲಕ ಖಾಸಗಿ ವಿಚಾರಗಳನ್ನು ಜಗಜ್ಜಾಹೀರು ಮಾಡುವಂಥ ಯಂತ್ರಯುಗವು ಕರುಣಿಸಿದ ಈ ಮೆಯಿಲ್ ಎಂಬ ಮಾಯಾಜಾಲವೇ? ಕಥೆಯು ಪ್ರಶ್ನೆಯನ್ನು ಹಾಗೆಯೇ ಉಳಿಸುತ್ತದೆ.      ಪ್ರಾಮಾಣಿಕವಾಗಿ ದುಡಿದು ಕಷ್ಟಪಟ್ಟು ಒದ್ದಾಡಿ ತನ್ನ ಮಗಳು ರುಕ್ಕುವನ್ನು ಒಂದು ಒಳ್ಳೆಯ ಸ್ಥಿತಿಗೆ ತಂದ ಅಪ್ಪಿಯಮ್ಮ (    ಕಥೆ : ರುಕ್ಕಮಣಿ) ಮಗಳು ಪಥಭ್ರಷ್ಟಳಾಗಿ ನಡೆದು ಬದುಕು ಒಡ್ಡಿದ ಚಕ್ರವ್ಯೂಹದಲ್ಲಿ ಸಿಲುಕಿ ದಿಕ್ಕುಗಾಣದೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಯಾರು? ಹಿರಿಯರ ಮಾತುಗಳಿಗೆ ಕಿಲುಬು ಕಾಸಿನ ಬೆಲೆಯನ್ನೂ ಕೊಡದೆ ತಾವು ಕಂಡ ದಾರಿಯಲ್ಲಿ ನಡೆದು ಅನಾಹುತಗಳಿಗೆ ಆಹ್ವಾನ ನೀಡುವ ಹಾದಿ ತಪ್ಪಿದ ಯುವ ಜನಾಂಗವೆ? ಅಥವಾ ಕೇಳಿದ್ದನ್ನೆಲ್ಲ ಕೊಡಿಸುವ ಹೆತ್ತವರೆ? ಅಥವಾ ವಿಜ್ಞಾನದ ಮುನ್ನಡೆಯಿಂದಾಗಿ ಸುಲಭ ಲಭ್ಯವಾಗಿರುವ ಸುಖ ಸಾಧನೆಗಳೆ?      ‘ಕೆಂಪು ಹಾಲು ‘ ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸುವ ಕಥೆ. ಲೋಕದ ರೀತಿ ನೀತಿಗಳು ಅರ್ಥವಾಗದ ಪುಟ್ಟ ಹುಡುಗನ ದೃಷ್ಟಿಯಿಂದ ಈ ಕಥೆ ನಿರೂಪಿತವಾಗುತ್ತದೆ. ಹುಡುಗನಿಗೆ ‘ ‘ಪಾಪದವನಂತೆ ‘ ಕಾಣಿಸುವ ಉನ್ನಿಕೃಷ್ಣನ ಭೂತ ಬಂಗಲೆಗೆ ದಿನಾ ಹಾಲು ತರಲು ಹೋಗುವ ಪುಟ್ಟ ಹುಡುಗನ ಅನುಭವಗಳು ಇಲ್ಲಿವೆ. ಪಕ್ಕದಲ್ಲೇ ಇರುವ ಪಾಳು ಬಿದ್ದ ಶಾಲೆಯಲ್ಲಿ ಉನ್ನಿಕೃಷ್ಣ ಮತ್ತು ಸದಾ ಬೀಡಿ ಸೇದುವ ಚೀಂಕ್ರ ಏನು ಮಾಡುತ್ತಾರೆಂದು ಅವನಿಗೆ ಅರ್ಥವಾಗುವುದಿಲ್ಲ.  ಒಂದೆಡೆ       ಅವನು ಉನ್ನಿಕೃಷ್ಣನ ಮಗಳು ಮುನ್ನಿಯೊಂದಿಗೆ ಸೇರಿ   ಅಮ್ಮನ ಹಾಲು ಕುಡಿದು ಸೊಕ್ಕಿನಿಂದ ಕುಣಿದಾಡುವ ಬೆಕ್ಕಿನ ಮರಿಗಳ ಬಗ್ಗೆ ಕಾಳಜಿ ಇಟ್ಟುಕೊಂಡ ಚಿತ್ರಣವಿದ್ದರೆ ಇನ್ನೊಂದೆಡೆ  ಅವನ ಕುಡುಕ ತಂದೆ ಮಾಡುವ ಅವಾಂತರಗಳಿಂದ ಆಗುವ ಅಪಮಾನದಿಂದ ಅವನು ಕುದಿಯುವ‌ ಚಿತ್ರಣವಿದೆ. ಮುಂದೆ ಉನ್ನಿಕೃಷ್ಣ ಮತ್ತು ಚೀಂಕ್ರರನ್ನು ಪೋಲೀಸರು ಅರೆಸ್ಟ್ ಮಾಡಿ ಕೊಂಡೊಯ್ಯುವ ಚಿತ್ರಣವಿದೆ.      ಕೆಲವು ದಿನಗಳ ನಂತರ ಚೀಂಕ್ರನ ಮಗ ಕೈಯಲ್ಲಿ ಕೋವಿಯೊಂದಿಗೆ ಪೋಲೀಸರ ಕೈಗೆ ಸಿಕ್ಕು ಅವರಿಂದ ಕೊಲ್ಲಲ್ಪಡುತ್ತಾನೆ. ಹೀಗೆ ಅಮಾಯಕರಂತೆ ಪೋಸು ಕೊಡುವವರು ಕಾನೂನು ಬಾಹಿರ ಸಮಾಜ ಘಾತಕ  ಹಿಂಸಾ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದರಿಂದ   ದೆವ್ವದ ಕಥೆಗಳಲ್ಲಗುವಂತೆ ಹಾಲು ಕೆಂಪಾಗಿದೆ. ದುಗ್ಗಪ್ಪನೆಂಬ ಬಡ ವೃದ್ಧನ ಕರುಣಕಥೆಯನ್ನು ನಿರೂಪಿಸುವ ಕಥೆ ‘ರಿಕವರಿ’. ಕೋಮಲ ಹೃದಯದ ದುಗ್ಗಪ್ಪ ತನ್ನ ನಿವೃತ್ತಿಯ ದಿನ ಸಿಕ್ಕಿದ ನಾಲ್ಕು ಸಾವಿರ ರೂಪಾಯಿಯಲ್ಲಿ  ಅರ್ಧದಷ್ಟನ್ನು ಅಸಹಾಯಕ ಸ್ಥಿತಿಯಲ್ಲಿದ್ದ ತನ್ನ ಕಿರಿಯ ಸಹೋದ್ಯೋಗಿಗೆ ಕೊಟ್ಟವನು. ಬಾಡಿಗೆ ಮನೆಯ ಮಾಲೀಕ ದುರಾಸೆಯಿಂದ ತನಗೆ ಹೆಚ್ಚು ಬಾಡಿಗೆ ಸಿಗುವ ಅವಕಾಶ ಬಂದಾಗ ಬಡ ದುಗ್ಗಪ್ಪನ ಕುಟುಂಬವನ್ನು ಅಲ್ಲಿಂದ ಎಬ್ಬಿಸುತ್ತಾನೆ.  ದುಗ್ಗಪ್ಪ ಹಿಂದೆ ಕೊಟ್ಟಿದ್ದ ಮುಂಗಡ ಹಣ ಮೂವತ್ತು ಸಾವಿರವನ್ನು ಹಿಂಪಡೆಯಲು  ಪಡುವ ಕಷ್ಟ, ಮನೆಯಲ್ಲಿ ಹೆಂಡತಿ ಮತ್ತು ಸೊಸೆ ಆ ಹಣಕ್ಕಾಗಿ ಬಾಯಿ ಬಿಡುವುದು- ಎಲ್ಲವೂ ಓದುಗನಿಗೆ ಕ್ರೂರವಾಗಿ ಕಾಣುತ್ತದೆ.       ತನ್ನ ಅಕ್ಕನ ಋಣದಲ್ಲಿರುವ ತಮ್ಮ,  ತಾನು ಸಂಸಾರಸ್ಥನಾದ ನಂತರ ಅಕ್ಕ ಮಾಡುತ್ತಿದ್ದ ಅಡ್ಡದಾರಿಯ ಕೆಲಸಗಳನ್ನು ಬೆಂಬಲಿಸಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದಾಗ ಹೆಂಡತಿಯ ಬೇಡಿಕೆಗಳನ್ನು ಪೂರೈಸಲಾರದೆ ತೊಳಲಾಡುತ್ತಾನೆ.ಡ್ರಗ್ಸ್ ಜಾಲದೊಳಗೆ ಸಿಕ್ಕಿಬಿದ್ದಿರುವ ಸುನಂದಕ್ಕ ತನ್ನ ಮೇಲೆ ಹಲ್ಲೆಯಾಗಿದೆ ಎಂದು  ಸುಳ್ಳು    ದೂರು ಕೊಟ್ಟಾಗ ಕೋರ್ಟಿಗೆ ಹೋಗುವ ಕೇಸಿಗೆ ಸಾಕ್ಷಿ ನೀಡಲು ತಮ್ಮ ಹೋಗಬೇಕಾಗುತ್ತದೆ. ಆದರೆ ಕೋರ್ಟಿನಲ್ಲಿ ಹಿಯರಿಂಗ್ ಗಾಗಿ ಕಾಯುತ್ತಿದ್ದಾಗ ಅಕ್ಕ ನಾಟಕ ಮಾಡುತ್ತಿರುವುದು ಗೊತ್ತಾಗಿ ಸಹಿಸಲಾರದೆ ಆತ ಪ್ರತಿಕೂಲವಾದ ಸಾಕ್ಷಿ ಹೇಳಿ ಬರುತ್ತಾನೆ.(ಕಥೆ : ಸಾಕ್ಷಿ).   ‘ ಹಿಂಸಾರೂಪೇಣ ‘ ಅನ್ನುವ      ಕಥೆ    ಸೃಷ್ಟಿಸುವ ವಾತಾವರಣ ಮನಸ್ಸಿಗೆ ಅಸಹನೀಯ ಹಿಂಸೆಯನ್ನುಂಟು ಮಾಡುತ್ತದೆ. ತಾನು  ವಾಸವಾಗಿದ್ದ ಅಪಾರ್ಟ್ ಮೆಂಟಿನ ಹೊರಗೆ ಅತಿ ಸಮೀಪವೇ ಇದ್ದ ದೇವಸ್ಥಾನದ ಧಾರ್ಮಿಕ ಆವರಣದೊಳಗೆ ನಡೆದ ಕುಡುಕನ ಕೊಲೆಯ ಬರ್ಬರ ಕೃತ್ಯದ  ಬಗ್ಗೆ ತಿಳಿದು, ಶವವನ್ನು ನೋಡಿದ ನಂತರ ಕಥಾನಾಯಕನಿಗೆ  ರಾತ್ರಿ ಯಾರೋ ಕಿವಿಯಲ್ಲಿ ಒಂದೇ ಸಮನೆ ಪಿಸುಗುಟ್ಟಿದಂತಾಗುತ್ತದೆ. ಹಲವು ದಿನಗಳಿಂದ ಹೀಗೇ ಪಿಸುಗುಟ್ಟಿದ ಅನುಭವ. ಹೊರಗೆ ನಿತ್ಯ ಗಲಾಟೆ. ತಾನಿರುವ ರೂಮಿನ ಗೊಡೆಯಾಚೆ ಈ ಕೊಲೆ ಸಂಭವಿಸಿತೇ ಎಂಬುದನ್ನೆಣಿಸುವಾಗ ಅವನು ಭಯದಿಂದ ಕಂಪಿಸುತ್ತಾನೆ. ಒಂದೆಡೆ    ದೇವಸ್ಥಾನದ ಪವಿತ್ರ ವಾತಾವರಣ, ಯೋಗ,  ಭಜನೆ,  ಶಾಂತಿಮಂತ್ರ  ಧ್ಯಾನಗಳು ಸೃಷ್ಟಿಸುವ ವಾಯಾವರಣವಾದರೆ ಇನ್ನೊಂದೆಡೆ ಕೊಲೆ, ಹಿಂಸೆ, ಡ್ರಗ್ಸ್ ವ್ಯವಹಾರ, ಸಾಲ ವಸೂಲಿ, ಫೈಟಿಂಗನ್ನೇ ವೃತ್ತಿಯಾಗಿ ಮಾಡಿಕೊಂಡವರ ಗುಂಪು, ಬ್ಯಾಂಕಿನಲ್ಲಿನ ಬಡ್ಡಿ ವ್ಯವಹಾರ– ಹೀಗೆ ನೂರಾರು ಗೊಂದಲಗಳು ಅವನೊಳಗೆ ತುಂಬಿ  ಅಪರಿಚಿತ ಧ್ವನಿಗಳು ಪಿಸುಗುಟ್ಟುತ್ತವೆ.       ನೋಟುಬ್ಯಾನ್ ಘೋಷಣೆಯಾದ ಸಮಯದಲ್ಲಿ ಕಥಾನಾಯಕನ ಅಜ್ಜಮ್ಮ ಜತನದಿಂದ ಸೇರಿಸಿಟ್ಟಿದ್ದ ದುಡ್ಡಿನ ಗಂಟಿನೊಳಗಣ ಐನೂರರ ನೋಟುಗಳ ಬಗ್ಗೆ ಕಾಳಜಿ ತೋರಿಸುವ ನೆಪದಲ್ಲಿ ಅದರ ಮೇಲೆ ಕಣ್ಣಿಟ್ಟವರು ಹಲವಾರು ಮಂದಿ. ಪಾಪ, ಆಕೆಗೆ ಅದರ ಲೆಕ್ಕ ತಿಳಿಯದು.  ನಿರೂಪಕ ಮೊದಲು ನೋಡಿದಾಗ ಅದರಲ್ಲಿ ೩೬ ಸಾವಿರ ರೂಪಾಯಿ ಇರುತ್ತದೆ.   ಅದೇ ಸಮಯ ಮನೆಯಲ್ಲಿ ಟಿ.ವಿ.ರಿಪೇರಿಗೆ ೬೦೦೦ ರೂಪಾಯಿ ಕೊಡಬೇಕಾಗಿದೆ.‌ ಟಿ.ವಿ.ನೋಡುವವರು ಮುಖ್ಯವಾಗಿ ಅಜ್ಜಮ್ಮ.  ಆದ್ದರಿಂದ ಆ ದುಡ್ಡನ್ನು ಟಿ.ವಿ.ಗಾಗಿ ಖರ್ಚು ಮಾಡುವುದೆಂದು ನಿರ್ಧರಿಸಿದ   ನಿರೂಪಕ ಅಜ್ಜಮ್ಮನ ಗಂಟಿನಲ್ಲಿದ್ದುದನ್ನು  ಕೊನೆಗೆ ಎಣಿಸಿ ನೋಡಿದರೆ ಅಲ್ಲಿ ಇದ್ದದ್ದೂ ಅಷ್ಟೇ ಹಣ. ಉಳಿದ ಹಣ ಎಲ್ಲಿ  ಹೋಯಿತು, ಅಜ್ಜಮ್ಮನನ್ನು ಕಾಣಲು ಬಂದವರು ತೆಗೆದಿರಬಹುದೇ ಎಂದು ಆತ ಅನುಮಾನಿಸುತ್ತಾನೆ.‌ ಆ ಮೊತ್ತವು ತನ್ನ ಹೆಂಡತಿಯ ಕೈಸೇರಿದ ಬಗ್ಗೆ ಅವನಿಗೆ ಗೊತ್ತಾಗುವುದು ಕೊನೆಗೆ. ಮಾನವೀಯ ಸಂಬಂಧಗಳಿಗಿಂತ ಹಣದ ಮಹತ್ವ ಹೆಚ್ಚಾಗಿ ಮೌಲ್ಯಗಳು ಕುಸಿದ ಚಿತ್ರಣ ಈ ಕಥೆಯಲ್ಲಿದೆ.   ‘ಭೇಟಿ’ ಇತರೆಲ್ಲ ಕಥೆಗಳಿಗಿಂತ ಭಿನ್ನವಾಗಿದೆ. ನಿಸರ್ಗದ ಗರ್ಭದಲ್ಲಿ ಅಡಗಿರುವ ನಿಗೂಢ ರಹಸ್ಯಗಳತ್ತ ಇದು ಬೊಟ್ಟು ಮಾಡಿ ತೋರಿಸುತ್ತದೆ. ಕಥಾನಾಯಕ ತನ್ನ ಅಮ್ಮ, ಅಕ್ಕ, ಮತ್ತು ಮಗಳನ್ನು ಯಾವುದೋ ಆಕಸ್ಮಿಕದಲ್ಲಿ ಕಳೆದುಕೊಂಡಿದ್ದಾನೆ. ಅವರ ಅಪರಕ್ರಿಯೆಗಳನ್ನು ಮಾಡಲು ಅವನ ದೊಡ್ಡಪ್ಪ ಕಾಡು ಪ್ರದೇಶದಲ್ಲಿ ಗದ್ದೆಯ ಮಧ್ಯೆ‌ಎತ್ತರದಲ್ಲಿದ್ದ ಗುಡಿಯೊಂದಕ್ಕೆ ಕಳುಹಿಸುತ್ತಾನೆ. ಭಟ್ಟರೊಂದಿಗೆ ಅಲ್ಲಿಗೆ ಹೋಗಿ ಎಲ್ಲ ಕ್ರಿಯೆಗಳನ್ನು ಮುಗಿಸಿ ಹೊರಗೆ ಬಂದ ನಂತರ ಸಂಪ್ರದಾಯದಂತೆ ‘ಯಾರಾದರೂ ಕರೆದಂತೆ ಅನ್ನಿಸಿದರೆ ತಿರುಗಿ ನೋಡಬೇಡ ಅಂದಿದ್ದರಿಂದ ಅವನಿಗೆ ಯಾರೋ ಹಿಂದಿನಿಂದ ಪಿಸುಗುಟ್ಟಿ ಕರೆದಂತೆ ಅನ್ನಿಸಿದರೂ, ಮುಂದಿನ ಜೀವನವನ್ನೆಣಿಸಿ ತಿರುಗಿ ನೋಡದೆ ಮನೆಗೆ ಬರುತ್ತಾನೆ.‌ಅವನ ಜತೆಗೆ ಬಂದ ಅಕ್ಕ ಆ ಬಗ್ಗೆ ಬೇಸರ ವ್ಯಕ್ತಪಡಿಸಿದಾಗ ಅವನನ್ನು ಅಪರಾಧ ಪ್ರಜ್ಞೆ ಕಾಡುತ್ತದೆ. ಅವನ ಕಿವಿಗೆ ಕೇಳಿಸಿದ್ದು ಭ್ರಮೆಯೋ ನಿಜವೋ ಎಂಬುದರ ಬಗೆಗಿನ ಜಿಜ್ಞಾಸೆಯನ್ನು ಕಥೆಗಾರರು ಓದುಗರಿಗೆ ಬಿಡುತ್ತಾರೆ. ಆರ್.ಕೆ.ನಾರಾಯಣ್ ಅವರ ಕೆಲವು ಕಥೆಗಳಿಗೆ ಈ ಗುಣವಿದೆ.     ‘ಕಥನ ಕುತೂಹಲ’ ವಸ್ತುವಿನ ದೃಷ್ಟಿಯಿಂದ ಹೊಸತಲ್ಲದಿದ್ದರೂ ತಂತ್ರ, ರಚನೆ, ವಿನ್ಯಾಸಗಳು ವಿಶಿಷ್ಟವಾಗಿವೆ. ವ್ಯೂಹದೊಳಗೆ ವ್ಯೂಹಗಳು ಸುತ್ತಿಕೊಂಡಿರುವ ಒಂದು ಚಕ್ರವ್ಯೂಹವೇ ಇಲ್ಲಿದೆ. ತಮ್ಮ ಸತ್ತ ನಂತರ ತಮ್ಮನ ಆಸ್ತಿಯನ್ನು ದೋಚಿಕೊಂಡ ಧರ್ಮಪ್ಪ ತಮ್ಮನ ಮಗಳು ಸತ್ಯಭಾಮಾಳನ್ನು ಗೌತಮ್ ರಾಜ್ ಎಂಬ ‘ ಏನೂ ಗೊತ್ತಿಲ್ಲ’ದವನಿಗೆ ಮೂರು ಲಕ್ಷ ವರದಕ್ಷಿಣೆಯ ‘ವಾಗ್ದಾನ’ ನೀಡಿ ಕಟ್ಟಿದರೆ ತನ್ನ ಮಗನಿಗೆ ಬಂದ ವರದಕ್ಷಿಣೆಯಲ್ಲಿ ಕೊನೆಯ ಮಗಳ ಮದುವೆ ಮಾಡುವ ಹವಣಿಕೆ ಗೌತಮನ ತಾಯಿಯದ್ದು. ಗಂಡ ತನ್ನ ಬಗ್ಗೆ ಆಸಕ್ತಿ ತೋರಿಸಲಿಲ್ಲವೆಂದು ಅವನನ್ನು ಬಿಟ್ಟು ಬಂದು ಬೇರೊಬ್ಬನೊಂದಿಗೆ ತಿರುಗಾಡುವ ಗೌತಮನ ಅಕ್ಕ ಊರ್ವಶಿ  ಇದ್ದಾಳೆ.‌ಬೊಂಬಾಯಿಯಲ್ಲಿ ‘ವ್ಯವಹಾರ’ನಡೆಸುತ್ತಿರುವ ಅವಳ ಅಕ್ಕನ ಬಳಿಗೆ ಕಳುಹಿಸಲೆಂದು ಅಣ್ಣ ದೇವಣ್ಣನಿಗೆ ಪತ್ರ ಬರೆದು ತಮ್ಮನ ಪತ್ನಿ ಚೆಲುವೆ ಸತ್ಯಭಾಮಾಳನ್ನು ಉಪಾಯ ಮಾಡಿ ಕರೆದೊಯ್ಯಲು ಅವಳೇ ಯೋಜನೆ ಹಾಕುತ್ತಾಳೆ. ಅದಕ್ಕಾಗಿ ತಮ್ಮನ ಹೆಸರಿನಲ್ಲಿ ‘ಹೆಂಡತಿ ಕಾಣೆಯಾಗಿದ್ದಾಳೆಂಬ ಕಂಪ್ಲೈಂಟೂ ಹೋಗುತ್ತದೆ. ಇತ್ತ ಧರ್ಮಪ್ಪನೂ ವರದಕ್ಷಿಣೆ ಕೇಸ್ ಎಂದು ಗೌತಮನ ತಾಯಿಯ ಕಡೆಯಿಂದ ದುಡ್ಡು ವಸೂಲಿ ಮಾಡುವ ಯೋಜನೆಯ ಮಧ್ಯೆ ಗೌತಮನ ಕೊಲೆ ಮಾಡಿಸುತ್ತಾನೆ. ಅಬ್ಬಾ!!ಈ ಸುಳಿಯಲ್ಲಿ ಸಿಕ್ಕು ಸತ್ಯಭಾಮಾ ಎಷ್ಟು ನರಳಬೇಕೋ ಗೊತ್ತಿಲ್ಲ..      ನರೇಂದ್ರ ಅವರ ಕಥೆಗಳ ವಸ್ತುಗಳಿಗಿಂತಲೂ ಅವರ ಕಥನ ಶೈಲಿ ಇಲ್ಲಿ ಮುಖ್ಯವಾದದ್ದು. ‘ಕಥೆಗಳಲ್ಲಿ ಹೇಳುವುದಕ್ಕಿಂತಲೂ ಕಾಣಿಸುವುದು ಮುಖ್ಯ’ ಎಂದು ಅವರ ಮೊದಲ ಕಥೆಗಳ ಸಂದರ್ಭದಲ್ಲಿ   ಉಪದೇಶ ನೀಡಿದ್ದ ಕಥೆಗಾರ ವಿವೇಕ ಶಾನುಭಾಗರನ್ನು ಅವರು ತಮ್ಮ ದೀರ್ಘ ಮುನ್ನುಡಿಯಲ್ಲಿ ನೆನಪಿಸಿಕೊಳ್ಳುತ್ತಾರೆ. ಅದನ್ನನುಸರಿಸಿಯೇ ಇರಬೇಕು ಇಲ್ಲಿ ಅವರ ಕಥೆಗಳ ಚಿತ್ರಕಶಕ್ತಿಯು ಅದ್ಭುತ ಆಳವನ್ನು ಮೈಗೂಡಿಸಿಕೊಂಡಿದೆ. ಆದ್ದರಿಂದಲೇ ಎಲ್ಲ ಕಥೆಗಳೂ ಒಂದು ರೀತಿಯಲ್ಲಿ   ಕಾಫ್ಕಾನ ಕಥೆಗಳಂತೆ    ಮಬ್ಬುಗತ್ತಲಿನ ವಾತಾವರಣವನ್ನು ಸೃಷ್ಟಿಸಿ ಕಥೆಗಾರರು ಹೇಳಬಯಸುವ ಆಧುನಿಕ ಜಗತ್ತಿನ ಒಂದು ನಿರಾಶಾದಾಯಕ  ಚಿತ್ರಣವನ್ನು ನೀಡುವಲ್ಲಿ ಯಶಸ್ವಿಯಾಗುತ್ತವೆ. ಕೆಲವು ಕಥೆಗಳಲ್ಲಿ ಒಂದೇ ಓದಿಗೆ ಅರ್ಥವಾಗದ ಅಸ್ಪಷ್ಟತೆ ಇದೆ. ಇದಕ್ಕೆ ಕಾರಣ ಸಾಲುಗಳ ನಡುವೆ ಅರ್ಥವನ್ನು ಅಡಗಿಸಿಡುವ ಕಾವ್ಯಾತ್ಮಕ ಗುಣ.  ಓದಿ ಅರ್ಥವಾದ ನಂತರ ಬಹಳಷ್ಟು ಕಾಡುವ ಕಥೆಗಳಿವು. ಕನ್ನಡ ಕಥಾಜಗತ್ತಿನಲ್ಲಿ ತಮ್ಮದೇ ಆದ ದೃಢ ಹೆಜ್ಜೆಗಳನ್ನೂರುವ ಕಥೆಗಾರರ ಲಕ್ಷಣವಿದು.     ಖಾಸಗಿ ಕನಸುಗಳನ್ನು ಸಾರ್ವತ್ರಿಕವಾಗಿಸಿದಂತೆಯೇ ಮಂ  ಗಳೂರು ಕನ್ನಡ, ಕುಂದಾಪುರ ಕನ್ನಡಗಳಂತಹ ಪ್ರಾದೇಶಿಕ ಭಾಷೆಗಳ ಸವಿಯನ್ನು ಎಲ್ಲರಿಗೂ ಉಣಬಡಿಸುವ ಪ್ರಯತ್ನವನ್ನು ನರೇಂದ್ರ ಪೈಯವರು ಇಲ್ಲಿ ಮಾಡಿದ್ದಾರೆ. ಜತೆಗೆ ಅಲ್ಲಲ್ಲಿ ಬರುವ ತಿಳಿಹಾಸ್ಯದ ತುಣುಕುಗಳು ಮತ್ತು ಬಾಲ್ಯದ ನೆನಪುಗಳು ಕಥೆಗಳನ್ನು ಆಪ್ತವಾಗಿಸುತ್ತವೆ. ********************************************************** –ಪಾರ್ವತಿ ಜಿ.ಐತಾಳ್.

ಕನಸುಗಳು ಖಾಸಗಿ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಬೌದ್ಧ ಮದ್ಯಮಮಾರ್ಗ ( ಬುದ್ಧ ನಡೆ-೧)             ಪ್ರಜ್ಞಾಪಾರಮಿತ ಹೃದಯ ಸೂತ್ರ(ಬುದ್ಧ ನಡೆ-೨)       ಲಾವ್ ತ್ಸು ದಾವ್ ದ ಜಿಂಗ್ ಸೂತ್ರಗಳು ( ಬುದ್ಧನಡೆ-೩)      ಮನಮಗ್ನತೆ( ಬುದ್ದನಡೆ -೪) ರೇಶ್ಮಾಗುಳೇದಗುಡ್ಡಾಕರ್  ಬೌದ್ಧ ಮದ್ಯಮಮಾರ್ಗ ( ಬುದ್ಧ ನಡೆ-೧)              ಪ್ರಜ್ಞಾಪಾರಮಿತ ಹೃದಯ ಸೂತ್ರ(ಬುದ್ಧ ನಡೆ-೨)             ಲಾವ್ ತ್ಸು ದಾವ್ ದ ಜಿಂಗ್ ಸೂತ್ರಗಳು ( ಬುದ್ಧನಡೆ-೩)       ಮನಮಗ್ನತೆ( ಬುದ್ದನಡೆ -೪) ಬೆಲೆ : 170 ರೂ. ನೆಮ್ಮದಿಯ ಆಗರ ಬುದ್ಧ ಗುರುವಿನ ಮಾತು ,ಬರಹಗಳು .ಇಂದಿನ ಅಂತರ್ಜಾಲದ ತಾಣದಲ್ಲಿ‌ಯೂ ಬುದ್ಧಗುರುವಿನ ಕೋಟ್ಗಳು ಒಂದು ಪವರ್ ಫುಲ್ tonic ನಂತೆ ಓದುಗರಿಗೆ ಎದುರಾಗುತ್ತದೆ . ಬದುಕಿನ ಒತ್ತಡ,ನಿರಾಸೆ ,ನೋವಿಗೆ  ಸಮಾಧಾನ ನೀಡುತ್ತವೆ, ಇಂತಹ ಬುದ್ಧಗುರುವಿನ ಅಂಗಳ ತಣ್ಣನೆಯ ತಂಪಿನದು ಇಲ್ಲಿ ಉನ್ಮಾದ,ಉದ್ವೇಗ ದ್ವಂದ್ವಗಳಿಗೆ ತಾವಿಲ್ಲ , ಏನಿದ್ದರೂ ಸದೃಢವಾದ ಸಮಚಿತ್ತ  ಮಾತ್ರ ಇಲ್ಲಿ‌ ವಿಹರಿಸುತ್ತದೆ ! ಅದು ಯಾವಕಾಲ ,ಯಾವ ಜಾಗವಾದರೂ ಸರಿಯೇ . ಇಲ್ಲಿ‌ ಯಾವುದೇ ಅಡ್ಡಿ ಆತಂಕ‌ಗಳು ಚಿಗುರೂಡೆಯುವದಿಲ್ಲ. ಬುದ್ಧ ಯುಗ ಯುಗಗಳ ಬೆಳಕು,  ಧ್ಯಾನದ  ಬುದ್ಧ ನೋಡುಗರನ್ನು ಸೆಳೆದರೆ, ಬರಹಗಳು ಓದುಗರನ್ನು ಸೆಳೆಯುತ್ತವೆ. ಹೊಸ ಆಲೋಚನೆಗೆ ಕೊಂಡ್ಯೊಯುತ್ತವೆ.     ಈ ಬುದ್ಧದೇವನ ಅಂಗಳಕ್ಕೆ ಬುದ್ಧ ಮಾರ್ಗದ ನಾಲ್ಕು ರೈನಾ ಪರಿಮಾಣ ಪುಸ್ತಕಗಳು ನಮ್ಮನ್ನು ನೇರ ಕರೆದೊಯ್ಯುತ್ತವೆ . ನಮ್ಮೊಳಗಿನ ಬುದ್ಧಗುರುವನ್ನು ಅನಾವರಣಗೊಳಿಸುವ ಮೂಲಕ ..! ನಮಗೆ ಹತ್ತಿರವಾದ ಭಾಷಾ ಶೈಲಿಯಲ್ಲಿ , ಇಲ್ಲಿ ಬರುವ ಉದಾಹರಣೆ ಪ್ರತಿಯೊಬ್ಬರಿಗೂ ಸರಳವಾಗಿ ಬುದ್ಧ ಗುರುವಿನ ಮಾರ್ಗವನ್ನು ಅರ್ಥೈಸಿಕೊಳ್ಳಲು ನೆರವಾಗುತ್ತವೆ . ಬುದ್ಧ ಗುರುವಿನ ಸಂದೇಶದ ಹೂರಣಕ್ಕೆ ಜೊತೆಯಾಗಿ ಈ ಹೊತ್ತಿಗೆಯಲ್ಲಿ  ಸಂಧರ್ಭಕ್ಕೆ ಅನುಗುಣವಾಗಿ ಬರುವ ಸರಹಪಾದರ ನುಡಿಗಟ್ಟು ,ಅಲ್ಲಮ ಪ್ರಭುಗಳ ವಚನಗಳು ಬುದ್ಧ ಗುರುವಿನ ತಾತ್ವಿಕ ಚಿಂತನೆ , ಬದುಕಿನ ಅರಿವನ್ನು ಮತ್ತಷ್ಟು ಆಳವಾಗಿ ಅರ್ಥೈಸಿಕೊಳ್ಳಲು ನೆರವಾಗುತ್ತವೆ. ಬೌದ್ಧ ಮದ್ಯಮ ಮಾರ್ಗ   ನಿರಂತರ ಬದಲಾಗುತ್ತಿರುವ ಬದುಕಿನ ಪ್ರವಾಹವನ್ನು ಗ್ರಹಿಸಲು ಮಿಥ್ಯದ ಪರದೆ ಕಳಚಲು ನಮಗೆ ಸಹಾಯ ಮಾಡುತ್ತದೆ . ಪೂರ್ವಾಗ್ರಹ ಪೀಡಿತ ದೃಷ್ಟಿ ಕೋನವನ್ನು ನಿವಾರಿಸಿಕೊಂಡು ಹೊಸ ಆಶಾಭಾವನೆಯ ಮುನ್ನೊಟ ಹೊಂದುವದು ,ಸಾಂಧರ್ಭಿಕ ಜಗತ್ತಿನ ಮಹತ್ವ ತಿಳಿಯುವದು ಪ್ರತಿ ಮನದ ಸವಾಲೇ ಸರಿ . ಇದನ್ನು ಬುದ್ಧಗುರುವಿನ ಸಂದೇಶಗಳು ನಮಗೆ ನೆನಪು ಮಾಡುತ್ತವೆ , ಬದಲಾಗುತ್ತಿರುವ ಜಗತ್ತಿನಲ್ಲಿ  ಕಾಡುವ ಆಡಚಣೆ ,ಒತ್ತಡ , ನಿರಾಶೆ ,ಹತಾಷೆ ಭಾವಗಳು ಒಂದೆಡೆಯಾದರೆ ನಮಗರಿವಿಲ್ಲದೆ ಮನದೂಳಗೆ ಹೆಮ್ಮರವಾಗಿರುವ ಈರ್ಷ್ಯೆ ಹಲವಾರು ಸಮಸ್ಯೆಗೆ ದಾರಿಯಿರುತ್ತದೆ ಈ  ಮರವನ್ನು ಬುಡಸಮೇತ ಕಿತ್ತೊಸೆಯಲು ಬುದ್ಧ ಗುರುವಿನ ಚಿಂತನೆಗಳು ನಮಗೆ ಅಗತ್ಯ . ಮೃಗತ್ವದ ಸೆರಗಲ್ಲಿಯು ಮಮತೆಯ ಮಡಿಲು ಇರುತ್ತದೆ ಆ ಮಡಿಲಿಗೂ ಹೃದಯದ ಅಗತ್ಯವಿದೆ ಎಂಬುದನ್ನು  ಹೇಳುವ  ಪ್ರಜ್ಞಾಪಾರಮಿತ ಹೃದಯ ಸೂತ್ರ , ಲೋಕವನ್ನು ಕರುಣೆ ,ವಾತ್ಸಲ್ಯದಿಂದ ಕಣ್ಣುಗಳಿಂದ ಕಾಣಿರಿ ಎಂಬುದನ್ನು ಮನವರಿಕೆ ಮಾಡುತ್ತದೆ ಬುದ್ಧ ಸೂತ್ರ ,ಪಠಣದ ವಿಷಯವಲ್ಲ ಪಾಲನೆಯಲ್ಲಿ ಮೇಳೈಸಿ ಬದುಕಿನಲ್ಲಿ ನೆಮ್ಮದಿಯ ಕಾಣಬೇಕು . ಎಚ್ಚರದ ಪ್ರಜ್ಞೆ ನಮ್ಮ ಮನೋಕೋಶವನ್ನು ತುಂಬಬೇಕು ಅದೃಶ್ಯ ಲೋಕದ ಹಂಬಲ , ಅದರ ಆರಾಧನೆ ವರ್ತಮಾನದ ಅಮೋಘ ಕ್ಷಣಗಳನ್ನು ಕಾಣದಂತೆ ಮಾಡುತ್ತದೆ .ಇಂತಹ ಮನದಿಂದ ಹಗುರಾಗುವ, ಭಾರಗಳನ್ನು ಇಳಿಸುವ ಕಾರ್ಯ ಸುಲಭವಲ್ಲ . ಇದನ್ನು ಬುದ್ಧ ಮಾರ್ಗ  ಓದುಗರ ಮುಂದೆ ಇಡುತ್ತದೆ ಪರ್ಯಾಯ ದಾರಿ ತೋರುತ್ತದೆ . ಭೂತ ,ಭವಿಷ್ಯದ ಚಿಂತೆಯಲ್ಲಿ ವರ್ತಮಾನ ಸದ್ದಿಲ್ಲದೆ ಸರಿದು ವ್ಯರ್ಥವಾಗಿ ಹರಿದು ಹೊಗುತ್ತದೆ ,ಮತ್ತೆ ಇದೇ ವರ್ತಮಾನ ಭೂತವಾಗಿ ಕಾಡುತ್ತದೆ ..! ಮನದ ಬಹುಪಾಲು ಶಕ್ತಿ ಹೀಗೆ  ಕಳೆದು ರಾಶಿ ರಾಶಿ ಚಿಂನೆಗಳನ್ನು ಒಟ್ಟುಮಾಡುವ ಮನಕ್ಕೆ ಮಗ್ನತೆಯಿಂದ ನಿರಂತರ ಚಲನಶೀಲವಾದ ಮನಕ್ಕೆ ಏಕಾಗ್ರತೆಯ ನಿರಾಳತೆನ್ನು ನೀಡಬೇಕಾಗಿದೆ . ಮನಮಗ್ನತೆಗೆ ಇರುವ ವಿವಿಧ ರೂಪಗಳು ಓದುಗರಿಗೆ ಹೊತ್ತಗೆಯಲ್ಲಿ ಸಿಗುತ್ತವೆ .ನಾಗಾಲೋಟದಲ್ಲಿ ಓಡುವ ಮನ ಅದರ ವೇಗ ವನ್ನು ನಿಂಯತ್ರಿಸಲು ಅದು ಹೋಗುತ್ತಿರುವ ದಾರಿಯನ್ನು  ಗಮನಿಸಿ ಸೂಕ್ತವಾದ ದಾರಿಗೆ ತರಲು ಮಾರ್ಗದರ್ಶನ ಅಗತ್ಯ ಈ ಮಾರ್ಗದರ್ಶನಗಳೇ ಬುದ್ಧ ಗುರುವಿನ ಸಂದೇಶಗಳು ಮನಮಗ್ನತೆ ಎಂಬುದು ಕಣ್ಣು ಮುಚ್ಚಿ ಅರಿಯುವದಲ್ಲ ಎಚ್ಚರದ ತಿಳಿವಿದು .ಜಗವನ್ನು ಇಲ್ಲಿರುವ ದೃಶ್ಯಗಳನ್ನು ಕಾಣಲು ದೃಷ್ಟಿ ಒಂದೇ ಸಾಲದು ಆ ದೃಷ್ಟಿಯಲ್ಲಿ ಎಚ್ಚರ ,ಪ್ರಜ್ಣೆ ಇರಲೇ ಬೇಕು .ನಿರಂತರ ಚಲಿಸುವ ಜಗದ ಪ್ರವಾಹದಲ್ಲಿ ನೋಡಿದ್ದು ಬದಲಾಗಿರುತ್ತದೆ ,ಅಥವಾ ಬದಲಾದದ್ದನ್ನೆ ನಾವು ಒಪ್ಪದೆ ಹಾಗೆ ಇದೆ ಎಂದು ನಾವು ಗ್ರಹಿಸುವಲ್ಲಿ ಎಡವಿ ಸಮಸ್ಯಯ ಸರಮಾಲೆಗ ತುತ್ತಾಗುತ್ತೇವೆ . ಈ ತೊಳಲಾಟ , ತಲ್ಲಣಗಳು ಸುದೀರ್ಘವಾಗಿ ಕಾಡಿ ಮನವನ್ನು ಸಂತಸದಿಂದ ದೂರ ಮಾಡುತ್ತವೆ . ಈ ಸಂದರ್ಭದಲ್ಲಿ ಬುದ್ಧಗುರುವಿನ  ತತ್ವಗಳು ನಿಜದ ಅರಿವನ್ನು ತಿಳಿಸುತ್ತವೆ . ಬುದ್ಧಗುರುವಿನ ಸಂದೇಶಗಳು ತಕ್ಷಣ ಬಂದುದಲ್ಲ ,ಅವು ತೋರಿಕೆ,ವೈಭವಕ್ಕೆ ಶರಣಾಗುವದಿಲ್ಲ ಶಾಂತ ಸದೃಢ ಚಿತ್ತ ಹೊಂದಲು ಸಹಕಾರಿಯಾಗುತ್ತವೆ  ಈ ಚಿತ್ತವೆ ನಮ್ಮೊಳಗಿನ ಬುದ್ಧನ ಕಾಣಲು ಸಾದ್ಯ ವಾಗುವಂತೆ ಮಾಡುತ್ತವೆ . ನಮ್ಮೂಳಗಿರು ಬುದ್ಧ ಗುರುವಿನ ದರ್ಶನಕ್ಕೆ ಮನಮಗ್ನತೆ ಅಗತ್ಯವಿದೆ , ನಮ್ಮ ಬದುಕಿಗೆ ನಮ್ಮೊಳಗಿರುವ ಬುದ್ಧನ ಅನಿವಾರ್ಯ ತೆ ಇದೆ , ಬುದ್ಧ ಗುರು ಸತ್ಯದ ಬೆಳಕು ಹೌದು ,ಪ್ರಜ್ಞೆಯ ಪ್ರತೀಕವು ಹೌದು , ದೀರ್ಘ ಕಾಲ ಕಾಡುವ ಋಣಾತ್ಮಕ ಚಿಂತನೆಗಳಿಂದ ಮುಕ್ತರಾಗಿ ಜ್ಞಾನದ ಬೆಳಕಾದ ನಮ್ಮೊಳಗಿನ‌ ಬುದ್ಧನನ್ನು ನಾವು ಆಹ್ವಾನಿಸ ಬೇಕಾಗಿದೆ ಈ ಪುಸ್ತಕಗಳು  ಶಾಂತ ಚಿಂನೆಗಳನ್ನು ಓದುಗರಲ್ಲಿ ಹರಿಸುತ್ತವೆ ಇಡಿಯಾದುದನ್ನು ಬಿಡಿಯಾಗಿ ನೀಡುತ್ತವೆ ಬಿಡಿಯಾದ ವಿಚಾರವನ್ನು ಇಡಿಯಾಗಿಸುತ್ತವೆ . ಈ ಜೀವನ ದುಃಖದ ಸರಮಾಲೆ ಎಂದು ಬುದ್ಧ ಗುರು ಎಲ್ಲಿಯೂ ಹೇಳಿಲ್ಲ , ಈ ಜಗದಲ್ಲಿ ಪ್ರತಿಯೊಂದು ಘಟನೆಗಳು ಕಾರಣವಿಲ್ಲದೆ ಜರುಗವದಿಲ್ಲ , ಮಾಯೆಇಲ್ಲ , ತಂತ್ರಗಳು ಇಲ್ಲ ನಮ್ಮ ನೋಟದ ವೈಫಲ್ಯತೆಯೇ ದುಃಖದ ಮಡುವಿಗೆ ಜಾರಿಸುತ್ತದೆ , ಮಮತೆಯನ್ನು ಮರೆಸಿ ರೋಷ ,ಆವೇಶ ಗಳನ್ನು ಮನ ತುಂಬಿಕೊಂಡು ಸಹಜ ಮಾನವ ಗುಣಗಳಾದ  ಪ್ರೀತಿ ,ಕರುಣೆ , ವಾತ್ಸಲ್ಯ ಸ್ನೇಹ , ಮಾಯವಾಗಿವೆ . ಎಂಬ ತಿಳಿವನ್ನು ಬುದ್ಧ ಗುರುವಿನ ಸಂದೇಶಗಳು  .ಓದುಗರಿಗೆ  ಎರಕಮಾಡುತ್ತವೆ . ಬುದ್ಧ ಗುರುವಿನ ಮಾರ್ಗವೇ ಒಂದು ಬೆಳಕು .ಮಿಥ್ಯದ ವೈಭವತೆಯನ್ನು ಓಡಿಸಿ ಸರಳ ಜೀವನಕೆ ದಾರಿ ಮಾಡುತ್ತದೆ . ದಾವ್ ದ ಜಿಂಗ್ ಸೂತ್ರಗಳು ತತ್ವ ರಸಾನುಭವದಂತೆ ಗೋಚರಿಸುತ್ತವೆ ಬುದ್ಧ ಗುರುವಿನ‌ ಸಂದೇಶದ ಅನುಭವಗಳ ಸಾರದಂತೆ ಓದುಗರ ಮನದಲ್ಲಿ .ಬುದ್ಧ ಮಾರ್ಗವು ಸರಕುಳನ್ನು ಇಳಿಸಿ ನಮ್ಮ ಪಯಣವನ್ನು ಸರಳಗೊಳಿಸುತ್ತದೆ . ಸದಾ ಚಲಿಸುವ ಜಗದಲ್ಲಿ ಬುದ್ಧಗುರುವಿನ ಅಗತ್ಯ ಒಂದು ದಿನಕ್ಕೆ ಸೀಮಿತವಾಗಲು ಸಾದ್ಯವಿಲ್ಲ .ಅದು ನಿರಂತರ ವನಿತ್ಯ ಜೀವನದ ಸಂಜೀವಿನಿ . **************************

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ

ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರ್ಗಿ ವಿಶ್ವವಿದ್ಯಾಲಯ ನೀಡುವ ಕಲ್ಯಾಣ ಕರ್ನಾಟಕ ಪ್ರದೇಶದ ಪುಸ್ತಕ ಬಹುಮಾನ ಹಾಗೂ ಲೇಖಕ/ ಪ್ರಕಾಶಕರ ಗೌರವ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. ಹಿರಿಯ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ ಎಂದು ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಎಚ್ ಟಿ ಪೋತೆ ಅವರು ತಿಳಿಸಿದರು. ಕಡಕೋಳ ಅವರೊಡನೆ ಅವಧಿ’ಯ ಲೇಖಕ ವಿಜಯಭಾಸ್ಕರ ರೆಡ್ಡಿ ಅವರ ‘ನೆನಪಿನ ಪಡಸಾಲೆ’ ಕವನ ಸಂಕಲನ, ಕಪಿಲ ಪಿ ಹುಮನಾಬಾದೆ ಅವರ ‘ಹಾಣಾದಿ’ ಕಾದಂಬರಿಯೂ ಕೂಡ ಪ್ರಶಸ್ತಿಗೆ ಅಯ್ಕೆ ಆಗಿದೆ ಎಂದು ಪೋತೆ ತಿಳಿಸಿದರು. ಕನ್ನಡ ಸೃಜನ, ಸೃಜನೇತರ ಲೇಖಕರ ಕೃತಿಗಳಿಗೆ, ಜೀವನ ಕಥನ ಹಾಗೂ ಕನ್ನಡ ಪುಸ್ತಕ ಪ್ರಕಾಶಕರಿಗೆ, ಅನುವಾದ ಲೇಖಕರ ಕೃತಿಗೆ, ಸಮಾಜ ವಿಜ್ಞಾನ, ಜನಪದ ಕಲಾವಿದರಿಗೆ, ಚಿತ್ರ/ಶಿಲ್ಪಕಲಾವಿದರಿಗೆ, ಹಿಂದಿ, ಮರಾಠಿ, ಇಂಗ್ಲಿಷ ಹಾಗೂ ಉರ್ದು ಭಾಷಾ ಲೇಖಕರಿಗೆ ಈ ಗೌರವ ನೀಡಲಾಗುತ್ತದೆ. ನವೆಂಬರ್ ಕೊನೆಯ ವಾರದಲ್ಲಿ ವಿಶ್ವವಿದ್ಯಾಲಯದ ಕಾರ್ಯಸೌಧದ ‘ಮಹಾತ್ಮಾಗಾಂಧಿ ಸಭಾಂಗಣದಲ್ಲಿ’ ಆಚರಿಸಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕುಲಪತಿಗಳಾದ ಪ್ರೊ. ಚಂದ್ರಕಾಂತ ಯಾತನೂರ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಪ್ರೊ ಪೋತೆ ಅವರು ತಿಳಿಸಿದರು **************************************

ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕಕ್ಕೆ ಕಲ್ಯಾಣ ಕರ್ನಾಟಕ ಪ್ರಶಸ್ತಿ Read Post »

ಪುಸ್ತಕ ಸಂಗಾತಿ

ಕಾಗೆ ಮುಟ್ಟಿದ ನೀರು

ಪುಸ್ತಕ ಪರಿಚಯ ಕಾಗೆ ಮುಟ್ಟಿದ ನೀರು ಪುಸ್ತಕ:- ಕಾಗೆ ಮುಟ್ಟಿದ ನೀರುಲೇಖಕರು:-ಡಾ.ಪುರುಷೋತ್ತಮ ಬಿಳಿಮಲೆಪ್ರಕಾಶನ:-ಅಹರ್ನಿಶಿ ಪ್ರಕಾಶನ,ಶಿವಮೊಗ್ಗ ಕಾಗೆ ಮುಟ್ಟಿದ ನೀರು ಪುಸ್ತಕ ಅನೇಕ ಓದುಗ ಪ್ರಭುಗಳ ಉತ್ತಮ ಅನಿಸಿಕೆಗಳ ಓದಿ ತೀರಾ ಮನಸ್ಸಾಗಿ ಓದಲು ಹಂಬಲ ಹೆಚ್ಚಾಗಿ,ತೀರಾ ಕಡಿಮೆ ರಿಯಾಯತಿಯಲ್ಲಿ ಪುಸ್ತಕ ಕೊಡುವುದಾದರೆ ಕಳಿಸಿ ಎಂದು ಪ್ರಕಾಶಕರಿಗೆ ಸಂದೇಶವನ್ನು ಕಳಿಸಿದ ಕೂಡಲೇ, ಆಯ್ತು ವಿಳಾಸ ಬರಲಿ ಎಂದು ಅತ್ತಕಡೆಯಿಂದ ಕಳುಹಿಸಿ ಕೊಟ್ಟರು.ಆತ್ಮಕತೆ ನನ್ನಿಷ್ಟದ ಒಂದು ಓದುವಿನ‌ ವಿಭಾಗ. ಪುಸ್ತಕವೂ ಕೈಸೇರಿತು, ಸಿಕ್ಕಗಳಿಗೆ ಮೊದಲು ಬೆನ್ನುಡಿ-ಮುನ್ನುಡಿ ಓದುವ ಹವ್ಯಾಸ ನನ್ನದಾಗಿದೆ. ಬಿಳಿಮಲೆರವರು ಒಬ್ಬ ಎಡಪಂಥೀಯರು, ಚಿಂತಕರೂ, JNU ಯಲ್ಲಿ ಪ್ರಾಧ್ಯಾಪಕರು ಅಂತ ಮಾತ್ರ ತಿಳಿದಿದ್ದ ನನಗೆ, ಕಾಗೆ ಮುಟ್ಟಿದ ನೀರಿನಿಂದ ಅವರೇನೂ ಅಂತ ಮತ್ತಷ್ಟು ಒಳಹೊಕ್ಕು ತಿಳಿಯಲು ಅನುಕೂಲವಾಯಿತು. ಬಂಟಮಲೆಯಿಂದ ದೆಹಲಿವರೆಗೆ ಬೆಳೆದು ದೇಶ-ವಿದೇಶ ಸುತ್ತಿ ಅನೇಕ ಕಾರ್ಯಗಳನ್ನು ಮಾಡಿದ ಇವರ ಎದೆಗಾರಿಕೆಗೆ ಮೆಚ್ಚಲೇಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪಳಗಿಸುತ್ತಿರುವುದು ಸಹ ವಿಶೇಷ. ಬಾಲ್ಯದ ನೆನಪನ್ನು ಹೆಕ್ಕಿ, ಪಿಯು ಫೇಲಾಗಿ ಶಿಕ್ಷಣ ಪೂರೈಸಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಾ, ಬದುಕು ಬಂದಂತೆ ಎದುರಿಸಿ, ಕೊನೆಗೆ ಬದುಕು ಕಟ್ಟಿಕೊಂಡ ಇವರ ಯಶೋಗಾಥೆ ನನಗೆ ಸ್ಪೂರ್ತಿ ಆಗಬಹುದೆಂದರೆ ತಪ್ಪಾಗಲಿಕ್ಕಿಲ್ಲ. ದೊಡ್ಡ-ದೊಡ್ಡ ಮನುಷ್ಯರೆನಿಸಿಕೊಂಡವರ ಮನಸ್ಥಿತಿ ಹೇಗಿರುತ್ತದೆಂದು ಕಂಬಾರರ ಕರಾಳ ಮುಖವನ್ನ ಎತ್ತಿ ಹಿಡಿದು, ಅಮೆರಿಕನ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿನ ಇವರ ಸೇವೆ, ಜೆ-ಎನ್-ಯುನಲ್ಲಿ ಕನ್ನಡ, ಕನ್ನಡಪೀಠ ಕಟ್ಟಿದ್ದು ಒಂದು ದಾಖಲೆ, ಇತಿಹಾಸ. ಮದುವೆ, ದೆಹಲಿಯಲ್ಲಿ ಮನೆ, ಪುನರ್ಜನ್ಮ, ಮಾಟಮಂತ್ರ, ಜಾತಿ, ರೋಗದಲ್ಲೂ ಗೆದ್ದಿದ್ದು ಮೇಲ್ನೊಟ್ಟಕ್ಕೆ ಕಟ್ಟುಕತೆಯಂತಿದ್ದರೂ ಇದೊಂದು ವಿಶೇಷ. ಹೋರಾಟದ ಬದುಕು ಆಪ್ತವಾಗಿ ಓದಿಸಿಕೊಂಡು ಹೋಗುವ ಪುಸ್ತಕ. ನೀರೇ ಗತಿಯಿಲ್ಲದ ಊರಲ್ಲಿ ಕಾಗೆ ಮುಟ್ಟಿದ ನೀರು ನಲ್ಲಿ, ಹಳ್ಳ-ಕೊಳ್ಳದಲ್ಲಿ ಬಂದಿದೆ ನೀವು ಮುಟ್ಟುತ್ತೀರೋ ಇಲ್ಲೋ ಕುಡಿತಿರೋ ಇಲ್ಲ, ಬಳಸುತ್ತಿರೋ ಇಲ್ಲೋ ಅಂತ ಗದ್ಗರ್ತೀತನಾಗಿ ಯಾರೋ ಗದರಿಸಿ ಹಾಡು ಹಾಡಿದಂತೆ ಕಿವಿಯಲ್ಲಿ ಇಂಪರಿಸುತಿದೆ. ಸಕಲ ರೋಗಗಳಿಂದಾನೆ ಬದುಕುತ್ತಿದ್ದಾರೋ ಏನೋ ಅನ್ನಿಸುತ್ತಿದೆ.ಇತ್ತೀಚಿಗೆ ನಿವೃತ್ತರಾಗಿರಬಹುದು ಯಕ್ಷಗಾನದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಕಲಾವಿದ, ಸಂಶೋಧಕ, ಜಾನಪದ ಸಂಶೋಧಕರು, ಕನ್ನಡವಾದಿ, ಮಹಿಳಾಪರರು ಅಪಾರ ಶಿಷ್ಯೋತ್ಸವವನ್ನು ಹೊಂದಿರುವ ನೇರ, ನಿಷ್ಠುರವಾದಿ ಇವರ ಅನುಭವಗಳನ್ನು ಓದುತ್ತಾ ಹೋದರೆ ನಾವೇ ಇದ್ದು ಅನುಭವಿಸುತ್ತಿದ್ದೇವೆನೋ ಅಂತ ಅನ್ನಿಸುವ ಮಟ್ಟಿಗೆ ಆಪ್ತತೆಯ ನಿರೂಪಣೆ ಮುನ್ನುಡಿಯಲ್ಲಿ ಅಚ್ಚುಕಟ್ಟಾಗಿ ಕನ್ನಡಿ ತೋರಿಸಿದ ದಿನೇಶ್ ಅಮಿನ್ ಮಟ್ಟುರವರು, ಒಂದು ರಾತ್ರಿಯಿಡೀ ಯಕ್ಷಗಾನ ನೋಡಿದಂತ ಅನುಭವವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. *********************************** ಶಿವರಾಜ್ ಮೋತಿ

ಕಾಗೆ ಮುಟ್ಟಿದ ನೀರು Read Post »

ಪುಸ್ತಕ ಸಂಗಾತಿ

ಗಿರಗಿಟ್ಟಿ

ಪುಸ್ತಕ ಪರಿಚಯ ಗಿರಗಿಟ್ಟಿ ಲೇಖಕರು: ತಮ್ಮಣ್ಣ ಬೀಗಾರ. ‌ಪ್ರಕಾಶನ: ಪ್ರೇಮ ಪ್ರಕಾಶನ ಮೈಸೂರು.ಮೊಬೈಲ ನಂ: ೯೮೮೬೦೨೬೦೮೫ಪುಟ: ೧೦೦.ಬೆಲೆ:೯೦ ರೂ.ಪ್ರಕಟಣೆ:೨೦೨೦ ಹಿರಿಯ ಕಿರಿಯರೆಲ್ಲ ಓದಬೇಕಾದ “ ಗಿರಗಿಟ್ಟಿ” ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಕತೆ, ಕವಿತೆ, ಪ್ರಬಂಧ, ಕಾದಂಬರಿಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಿರಿಯ ಸಾಹಿತಿಗಳು. ಕಿರಿಯರನ್ನೂ ಗೌರವಿಸುವ ಸೌಮ್ಯ ಸ್ವಭಾವದವರು. ಹೀಗೆ “ಪ್ರಾಗಿ” ಕತೆಯ ಸನ್ನಿವೇಶ ಕುರಿತು ಮಾತನಾಡುವಾಗ ‘ಹುಡುಗರು ಕಪ್ಪೆಗೆ ಹಿಂಸೆ ಮಾಡುವುದು ಸಹಜ. ಅದನ್ನು ನೀವೇಕೆ ಬರವಣಿಗೆಯಲ್ಲಿ ಕಾಣಿಸಲಿಲ್ಲ ?’ಎನ್ನುವ ಪ್ರಶ್ನೆಗೆ ಹಿಂಸೆಯ ಆಚೆಗೂ ಇರುವ ಬಹಳಷ್ಟು ವರ್ತನೆಗಳನ್ನು ಕಾಣಿಸುವುದು ಮುಖ್ಯವಾಗಿದೆ ಎನ್ನುವುದರ ಮೂಲಕ ನನಗೆ ತುಂಬಾ ಅಚ್ಚರಿ ಮೂಡಿಸಿದವರು. ಕಲೆ ಮತ್ತು ಸಾಹಿತ್ಯಗಳೆರಡನ್ನು ಸಮ ಸಮವಾಗಿ ದುಡಿಸಿಕೊಂಡ ಕ್ರಿಯಾಶೀಲ ಸ್ನೇಹ ಜೀವಿಗಳು. ಇತ್ತೀಚೆಗೆ ಪ್ರಕಟವಾದ ಉಲ್ಟಾ ಅಂಗಿಯ ನಂತರ ಇದೀಗ “ಗಿರಗಿಟ್ಟಿ” ಎನ್ನುವ ೧೫ ಕತೆಗಳನ್ನು ಹೊಂದಿರುವ ಸಂಕಲನದ ಮೂಲಕ ನಮ್ಮ ಮುಂದಿದ್ದಾರೆ. ಮಲೆನಾಡಿನ ಪ್ರಕೃತಿ ಸೌಂದರ್ಯ ಮತ್ತು ಜೀವ ವೈವಿಧ್ಯತೆ ಈ ಕತೆಗಳಲ್ಲಿ ಕಂಡುಬರುವ ಪ್ರಮುಖ ಅಂಶವಾಗಿದ್ದರೂ ಈ ಬಾರಿ ಭಾವನಾತ್ಮಕ ಅಂಶಗಳೊಂದಿಗೆ ಪುಳಕಿತಗೊಳಿಸುತ್ತಾರೆ. ಇದಕ್ಕೆ ‘ಹಸಿವಾಗಿಲ್ವಾ’ ಕತೆಯಲ್ಲಿ ಹಸಿವನ್ನು ಕುರಿತು ತಾಯಿ ಆಡುವ ಮಾತು ನಡೆದುಕೊಳ್ಳುವ ರೀತಿಯ ಮೂಲಕ ಮಕ್ಕಳಲ್ಲಿ ಹುಟ್ಟುವ ಪ್ರಶ್ನೆಗಳು ಅವರ ಮತ್ತು ಓದುಗರ ಅಂತರಂಗವನ್ನು ಕಲಕುತ್ತವೆ. ನನ್ನ ಒಂದು ಅವಲೋಕನದ ಮೂಲಕ ಕಪ್ಪೆ ಇವರ ಬರವಣಿಗೆಯಲ್ಲಿ ಬಹು ವೈವಿಧ್ಯಮಯವಾಗಿ ಅಭಿವ್ಯಕ್ತಿಗೊಳ್ಳುವ ಬತ್ತದ ಒರತೆಯಾಗಿದೆ. ಇದಕ್ಕೆ “ಕಪ್ಪೆಯ ಕಣ್ಣು” ಕಥೆ ಉದಾಹರಣೆಯಾಗಿದೆ. ಮಕ್ಕಳು ಮತ್ತು ದೊಡ್ಡವರ ನಡುವಿನ ವರ್ತನೆಗಳನ್ನು ಸೂಕ್ಷ್ಮವಾಗಿ ತೌಲನಿಕವೆಂಬಂತೆ “ಕತ್ತಲು” ಕತೆಯ ಮೂಲಕ ಚಿತ್ರಿಸುವ ಇವರು ಮಕ್ಕಳ ಬೆರಗುಗಣ್ಣನ್ನು ಅರವತ್ತೊಂದರ ಹರಯದಲ್ಲೂ ಉಳಿಸಿಕೊಂಡಿದ್ದಾರೆ. “ರೋಹನ ಗಣಪು ಮತ್ತು ನಾನು” ಕತೆ ಆಧುನಿಕತೆಯಿಂದ ದೂರ ಇರುವ ಮಕ್ಕಳಲ್ಲಿ ಪ್ರತಿಭೆ ಹುದುಗಿರುವುದನ್ನು ಅನಾವರಣ ಮಾಡಿದರೆ, “ದೆವ್ವದ ಮರ” ಕತೆಯ ಮೂಲಕ ಮಕ್ಕಳ ಕಲಿಕೆಯ ಹೊಸ ಬಗೆಯ ಪ್ರಯೋಗವನ್ನು ಸೂಚ್ಯವಾಗಿ ಹೇಳುತ್ತಾರೆ. ಅಜ್ಞಾನವು ಭಯ ಹುಟ್ಟಿಸಿದರೆ ವಿಜ್ಞಾನವು ಜ್ಞಾನವನ್ನು ಹೆಚ್ಚಿಸುವುದಲ್ಲದೆ ಧೈರ್ಯವನ್ನೂ ಹೆಚ್ಚಿಸುವುದೆಂಬುದಕ್ಕೆ ಸಾಕ್ಷಿಯಾಗಿದೆ. ಓಇತಿ ರಾಜತಿರಾಜ ಕತೆಯಲ್ಲಿ ಮಕ್ಕಳ ಕುತೂಹಲ ಸೊಗಸಾಗಿ ಚಿತ್ರಿತವಾಗಿದ್ದರೆ ಹಣ್ಣು ತಿನ್ನೋ ಆಸೆ ಕತೆಯಲ್ಲಿ ಮಕ್ಕಳ ಸ್ವಭಾವಗಳ ಬಣ್ಣಗಳು ಪರಿಚಯವಾಗುತ್ತವೆ. “ಅಲ್ಲಿ ಕಂಡಿದ್ದೇನು” ಕತೆಯಲ್ಲಿ ಮಕ್ಕಳ ತುಂಟತನದ ಜೊತೆಗೆ ಹಾವಿನ ಪ್ರಸಂಗದಿಂದ ವಿಚಲಿತರಾಗಿ ಮನೆಗೆ ಬಂದಾಗ ಮನೆಯವರ ಎಲ್ಲ ಮುಖಗಳಲ್ಲಿಯೂ ಹಾವನ್ನೇ ಕಾಣುವುದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಮಕ್ಕಳು ಸೂತ್ರ ಹರಿದ ಗಾಳಿ ಪಟದಂತೆ ಎಲ್ಲೆಂದರಲ್ಲಿ ಗಿರಕಿ ಹೊಡೆವ ಹುಮ್ಮಸ್ಸಿನ ಬುಗ್ಗೆಗಳಾಗಿರುತ್ತಾರೆ. ಇಂತಹ ಮುಕ್ತ ವಾತಾವರಣದ ಹಕ್ಕುದಾರರಿಗೆ ಪಾಲಕರು ಹಾಕುವ ಚೌಕಟ್ಟುಗಳು ವ್ಯಕ್ತಿತ್ವ ನಿರ್ಮಾಣದ ತೊಡಕುಗಳಾಗಬಲ್ಲವೆಂಬುದನ್ನು ಸೂಚ್ಯವಾಗಿ ಸೆರೆಹಿಡಿದಿದ್ದಾರೆ. ಮಣ್ಣಿನ ವಾಸನೆ ಕತೆಯಲ್ಲಿ ನಮ್ಮದಲ್ಲದ ವಸ್ತುವನ್ನು ನಮ್ಮದೆಂದುಕೊಂಡು ಬೀಗುವವರ ಗರ್ವ ಭಂಗ ನೈಜವಾಗಿ ನೈಸರ್ಗಿಕವಾಗಿಯೇ ಆಗುತ್ತದೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವಂತೆ ರಚಿಸಿದ್ದರೆ, ಹೆಗಲ ಮೇಲೆ ಕುಳಿತು ಕತೆಯ ಮೂಲಕ ಇಡೀ ಸಮಾಜದ ಚಿತ್ರಣವನ್ನೇ ಕಣ್ಣಿಗೆ ಕಟ್ಟುತ್ತಾರೆ. ಹೆಣ್ಣು ನಾಯಿ ಮರಿಯೊಂದು ಬೆಳೆದ ಮೇಲೆ ಸಾಕಷ್ಟು ಮರಿ ಹಾಕುತ್ತದೆ ಎಂಬ ಕಾರಣಕ್ಕೆ ತಾಯಿಯಿಂದ ಅಗಲಿಸುವುದು ಆ ಚಿಕ್ಕ ವಯಸ್ಸಿನಲ್ಲಿಯೇ ಆ ನಾಯಿ ಮರಿ ಹಸಿವೆಯಿಂದ ಬಳಲುವುದು ವೃದ್ಧರ ಮತ್ತು ಮಕ್ಕಳಲ್ಲಿ ಉಳಿದಿರುವ ಅಷ್ಟಿಷ್ಟು ಅಂತಃಕ್ಕರಣದಿಂದ ಜೀವ ಉಳಿಸಿಕೊಳ್ಳುವುದು ಕರುಣಾಜನಕವಾಗಿ ಮೂಡಿಬಂದಿದೆ. ಹೀಗೆ ಇಲ್ಲಿರುವ ಹದಿನೈದು ಕತೆಗಳೂ ವಸ್ತು ವೈವಿಧ್ಯತೆಯ ಮೂಲಕ ಗಮನ ಸೆಳೆಯುತ್ತವೆ . ಒಂದು ಚಂದದ ಮಕ್ಕಳ ಪುಸ್ತಕಕ್ಕೆ ಎಷ್ಟು ಹುಡಕಬೇಕೆಂದು ಪ್ರತಿಷ್ಟಿತ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟವರಿಗೇ ಗೊತ್ತು. ಇಂತಹ ಸೊಗಸಾದ ಪುಸ್ತಕವನ್ನು ಮನೆಗೆ ತಲುಪಿಸಿದ ತಮ್ಮಣ್ಣ ಬೀಗಾರ ಅವರು ಸಾಂಪ್ರದಾಯಕ ಚೌಕಟ್ಟನ್ನು ಮರಿದು ಸೊಗಸಾದ ಮಕ್ಕಳ ಕತೆ ಕಟ್ಟುವುದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು.ಮತ್ತು ಇದರಲ್ಲಿ ಯಶಸ್ಸನ್ನು ಕಂಡವರು. ನೀತಿಯನ್ನು ಹೇಳುವುದೇ ಮಕ್ಕಳ ಸಾಹಿತ್ಯವೆಂಬ ತುಂಬಾ ಬಾಲಿಶವಾದ ಹಾಗೂ ನೀರಸವಾದ ಬರವಣಿಗೆ ಕ್ರಮವನ್ನು ಅಲ್ಲಗಳೆದು ನೈಜತೆಯನ್ನು ಅಚ್ಚುಕಟ್ಟಾಗಿ ಸೆರೆಹಿಡಿಯಬಲ್ಲವರಾಗಿದ್ದಾರೆ. ಮತ್ತೊಂದು ಪುಸ್ತಕದ ನಿರೀಕ್ಷೆಯಲ್ಲಿ ಗಿರಿಗಿಟ್ಟಗೆ ಶುಭಕೋರುತ್ತೇನೆ. ಗಿರಿಗಿಟ್ಟಿ ಟೈಟಲ್ ಕತೆ ಅದ್ಭುತ ರಮ್ಯ ಸ್ವರೂಪದ್ದು ಅದನ್ನು ಓದುಗರು ಓದಿಯೇ ಆನಂದಿಸಬೇಕು. ಶುಭವಾಗಲಿ. *************************************** ವಿನಾಯಕ ಕಮತದ.

ಗಿರಗಿಟ್ಟಿ Read Post »

ಪುಸ್ತಕ ಸಂಗಾತಿ

ಇರುಳ ಹೆರಳು

ಪುಸ್ತಕ ಪರಿಚಯ ಮನ ಸೆಳೆವ ಇರುಳ ಹೆರಳು [11:15 am, 11/10/2020] YAKOLLY: ತಮ್ಮ‌ಮೊದಲ ಹನಿಗವನ ಸಂಕಲನ ಪಿರುತಿ ಹನಿಗಳು ಸಂಕಲನಕ್ಕೆ  ಅತ್ಯತ್ತಮ ಸಂಕಲನ ಪ್ರಶಸ್ತಿ ಪಡೆದ ಪ್ರತಿಭಾವಂತ ಕವಿ ನೀ ಶ್ರೀಶೈಲ ಅವರು ಕವಿಯಾಗಿ ಮಾತ್ರವಲ್ಲ,ಒಳ್ಳೆಯ ಗೆಳೆಯನಾಗಿ ಹೃದಯ ಗೆದ್ದವರು.ಅವರ ಭಾವದ ಪಲಕುಗಳನ್ನು ದಿನವೂ ಮುಖ ಪುಸ್ತಕದಲ್ಲಿ ಓದಿ ಮರುಳಾಗುತ್ತಿರುವವನು ನಾನು.ಹನಿಗವನ ಲೋಕದಲ್ಲಿ ತುಂಬ ಸುಂದರವಾದ ರಚನೆಗಳನ್ನೇ ಕೊಟ್ಟಿರುವ ಶ್ರೀಶೈಲ ಅವರ ಕವಿತೆಯ ತುಂಬ ತುಂಬಿದ ಪ್ರೀತಿಯ ಬೆಳಕನ್ನು ಬೊಗಸೆ ತುಂಬಿ ಹಿಡಿಯಲೂ ಆಗದೆ ನನ್ನ ಸುತ್ತಲೂ ಹರಡಿಕೊಂಡ ಆನಂದವೂ ನನಗಿದೆ. ಹನಿಗವನ ಗಳ ಪ್ರೇಮ ಮಾಯೆಯ ಕುರಿತು ಮತ್ತೊಮ್ಮೆ ಬರೆಯುವ ಅವಕಾಶ ದೊರೆಯಬಹುದೆಂಬ ಆಸೆಯಿದೆ. ಈಗ ನನ್ನ ಮುಂದಿರುವದು ೨೦೧೭ ರಲ್ಲಿ ಪ್ರಕಟವಾದ ಅವರ ಕವನ ಸಂಕಲನ ಇರುಳ ಹೆರಳು ನನ್ನ ಮುಂದಿದೆ.ಸಮಕಾಲೀನ ಕನ್ನಡದ ಪ್ರಮುಖ ಕವಿ ಸವದತ್ತಿಯ ನಾಗೇಶ ನಾಯಕರವರು ಸಂಕಲನದ ಅಂತರಂಗವನ್ನೇ ತೆರೆದಿಡುವಂತಹ ಚಂದದ ಬೆನ್ನುಡಿ ಬರೆದಿದ್ದಾರೆ.ಜೀವ ಮುಳ್ಳೂರ ಅವರ ಎದೆ ತೆರೆದ ಮಾತುಗಳು ಸಂಕಲನದ ಅಂದಕ್ಕೆ ಮುನ್ನುಡಿ ಬರೆದಿವೆ. ಇಲ್ಲಿಯವರೆಗೆ ಹನಿಗವಿತೆಗಳನ್ನೇ ಬರೆದ ಕವಿ ಕವನಸಂಕಲನ ಪ್ರಕಟಿಸುವ ಆಸೆ ವ್ಯಕ್ತ ಪಡಿಸುತ್ತಾ ತಮ್ಮ ಬದುಕಿನ ದುರಿತದ ಬಗೆಗು ಅದಕ್ಕಿಂತ ಮಿಗಿಲು ಕಾಣೆಯಾದ ಹಿರಿಯ ಜೀವ,ಸಾಹಿತ್ಯ ಪೋಷಕ ದಿವಂಗತ ಅರ್ಜುನ ಕೊರಟಕರ ಸರ್ ಬಗೆಗೆ ಬರೆದಿರುವ ಮಾತುಗಳು ಎದೆ ಹಿಂಡುತ್ತವೆ. ಇಲ್ಲಿನ ಕವಿತೆಗಳ ಅಂದ ವಿಮರ್ಶೆಯ ಮಾನದಂಡದಾಚೆಯೂ‌ ಮರುಳಾಗುವಷ್ಟು ಚಂದವಿವೆ.ತುಂಬ ಸರಳವಾಗಿ ಶ್ರೀಶೈಲ ಬದುಕಿನ ಆತಂಕಗಳನ್ನು ಅನಾವರಣಗೊಳಿಸುತ್ತಲೇ ಬಾಳನ್ನು ತುಂಬಿರುವ ಪ್ರೀತಿ‌ ಮಾಯೆಯ ಬಗೆಗೂ ಬರೆದಿರುವದು ಮನ ಹಿಡಿಸುವದೆಂದರೆ ಅತಿಶಯೋಕ್ತಿಯ  ಮಾತಲ್ಲ..ಇಲ್ಲಿನ‌ ಕವಿತೆಗಳು ಇನಿಯಳ ಹೆರಳಿನಷ್ಟೇ ಮೃದು ಮತ್ತು ವ್ಯಾಮೋಹ ಹುಟ್ಟಿಸುವಂತಿವೆ.ನವಿರೋನ್ಮಾದ ಕವಿತೆಯ ಈ ಸಾಲುಗಳನ್ನು ನೋಡಿ, ಬಿಸಿಯುಸಿರ ಸವಿ ಸೋಕಿ ದಾಗಲೆಲ್ಲ ರೋಮಾಂಚನ ಕಣ್ ಕೊಳದಲೆಲ್ಲ ತಣ್ ಗಿರಣಗಳ ತೂರುವ ಅಗ್ನಿದಿವ್ಯ ಎನ್ನುವ ಕವಿ ಇಲ್ಲವಾಗುವದಾದರೂ ಅಲ್ಲಿಯೂ‌ ಪ್ರೇಮವೇ ಇರಲಿ ಎನ್ನುವದಕ್ಕೆ ತೆರೆಯ ನಲಿವಿನ ನವಿಲ ಹರಿಗುಂಟ ಸಾಗೋಣ ಮುಳುಗಿದರೂ ಜೇಂಗಡಲಲಿ ಹೆಣವಾಗಿ ತೇಲೋಣ ಎನ್ನುವದು ನಿಜವಾದ ಪ್ರೇಮಿಯ ಬಾಳ ಉದ್ದೇಶವೇ ಆಗಿಸೆ.ಈ ಪ್ರೇಮ ಮಾಯೆಯ ಯಾರಾದರೂ ಎಂದಾದರೂ ಬರೆದು ಮುಗಿಸಿದ್ದಾರೆಯೇ,?ಅದಕ್ಕೆ ಕವಿ ಬಾನ ದಾರಿಗುಂಟ ನಡೆವೆ ನಿನ್ನ ತೋಳ‌ಮೇಳದಲ್ಲಿ ಚಂದ್ರ ತಾರೆ ಹಿಡಿದು ತರುವೆ ಕಣ್ಣ ಬಿಂಬದಾಳದಲ್ಲಿ ಕಣ್ಣ ಬಿಂಬದಾಳದ ಚಂದ್ರ ತಾರೆ ಹಿಡಿದು ತಂದವರೇ ಧನ್ಯರು .ಅದು ಆಸೆಯಷ್ಟೇ ! ಇಲ್ಲದಿರೆ ನಲ್ಲಳ ಇರುಳಿಡೀ   ಧಾರಾಕಾರವಾಗಿ ಸುರಿಸು ಗುಡುಗು ಮಿಂಚು  ಸಹಿತ ಬಿರುಮಳೆ! ಎಂಬ ಕೋರಿಕೆಯ ಅಗತ್ಯವಿರಲಿಲ್ಲ.’ಕಂಡಿಲ್ಲ ಯಾರೂ ಆಚೆಯ ದಂಡಿ’ ಎಂದು ಕವಿ ಸುಮ್ಮನೆ ಹಾಡಿಲ್ಲ.ಬ್ರಹ್ಮ‌ಕಮಲದ ಆಸೆ ಇದ್ದಷ್ಟೂ ಬದುಕಲ್ಲಿ ಸಂತಸದ ಪಸೆಯೊಸರುತ್ತದೆ.ಈ ಅರಕೆ ನಿರಂತರ ಇದ್ದರೇನೆ ಚಂದ .ತೃಪ್ತಿಯ ಮಾತೆಲ್ಲಿ? ಈ. ಎಲ್ಲ ಅರಕೆಯ ಪಲಕುಗಳ ಸಾಕ್ಷಿಯಾಗಿ ಸಂಕಲನದ ಹಲವು‌ ಕವಿತೆಗಳನ್ನು ಉದಾಹರಿಸುತ್ತಾ ಹೋಗಬಹುದು.ನನ್ನ ಆ ಆಸೆಯನ್ನು ಬೇಕೆಂತಲೇ ತಡೆ ಹಿಡಿದಿದ್ದೇನೆ .ಮೂಗಿಗಿಂತ‌ ಮೂಗುತಿ ಭಾರವಾಗದಿರಲೆಂದು. ಸಮಕಾಲಿನ ಕಾಳ ಕೂಟಗಳತ್ತಲೂ ಕವಿ ಗಮನ ಹರಿಸಿರುವದು ಅವರ‌ ಕವಿತೆ ಏಕಮುಖಿಯಲ್ಲ  ಎನ್ನುವದಕ್ಕೆ ಸಾಕ್ಷಿ .ರೈತನ ಬದುಕು ದುಃಖದ ಸರಪಳಿಯಲ್ಕಿ ಸಿಲುಕಿನಲ್ಲಿ ನಲುಗುವದನ್ನು ಬರೆಯುವ ಕವಿ ಇದಕ್ಕೆ ಎಲ್ಲೋ ಒಂದಿಷ್ಟು ನಾವೂ ಕಾರಣರಾಗಿರುವದನ್ನು ಸೂಚಿಸುತ್ತಾರಾದ್ದರಿಂದಲೇ ಅವರ ಕವಿತೆ ಇಷ್ಟವಾಗುತ್ತದೆ. ಕವಿಗೆ ಈ‌ ಪ್ರಾಮಾಣಿಕ‌ ಪ್ರಜ್ಞೆ ಇರದಿದ್ದರೆ ಬರೆಯುವ ಸಾಲುಗಳು ಈಟಿಯಾಗಿ ಚುಚ್ಚತೊಡಗುತ್ತವೆ. ಕುಟಿಲ‌ಕೂಟ  ಕವಿತೆಯಲ್ಲಿ ಬೆಳೆದು ಬಂದ ಹೊಲಗದ್ದೆ ಗುಡಿಸಲುಗಳ ಮರೆತಿರುವ ನಮ್ಮನ್ನು  ಚುಚ್ಚಲೆಂದೇ ಕವಿ ಕುಡಿವ ನೀರಲಿ ಮನಸೋ ಇಚ್ಛೆ ಈಜಾಡಿ ತುಚ್ಛತನದಿ ಆ ಸ್ವಚ್ಛ ನೀರಲೇ ಉಚ್ಛೆ ಹೊಯ್ವ ಕೊಚ್ಚೆ ಮನಸಿನ ಲುಚ್ಛಾ ಲಪಂಗರು ನಾವು ಆಕ್ರೋಶ ಪ್ರಾಮಾಣಿಕವಾದಾಗಲೇ ಇಷ್ಟು ತೀವ್ರ ಹರಿತ ಪದಗಳಿಗೆ ಬರುವದು.ಕವಿತಾ ಸಂಕಲನದ ಕೆಲವು ಸಮಾಜಮುಖಿ ಕವಿತೆಗಳು ತಮ್ಮ ಇರವನ್ನು ಸಾರ್ಥಕಗೊಳಿಸಿವೆ. ಮಲ್ಲಿಗೆಯ ಮನದ ಈ‌ ಕವಿಯ ಬತ್ತಳಿಕೆಯಲ್ಲೂ ಬಾಣ ಬಿರುಸಿಗಳಿರುವದಕ್ಕೆ ಸಾಕ್ಷಿಯಾಗಿವೆ.      ಕೊರಗುಗೊರಳು,ಹೇಳಿ ಬಿಡೊಮ್ಮೆ, ಭಾವ ಸ್ಪುರಣ ಮೊದಲಾದ ಕವಿತೆಗಳು ಹಾಡಾಗಿಯೂ ರಾಗ ಸಂಯೋಜನೆಯ ಸಂಗ ಬಯಸುವ ಗೀತಗಳಾಗಿವೆ. ಮನೆಯ ಮುಂದಿರುವ ಸಾಕು ನಾಯಿಯೂ ಕೂಡಾ ಮನೆಗೆ ಬರುವ ಅತಿಥಿಗಳನು ನಾದಸ್ವರದೆ ಸುಮ್ಮನಿರಿಸಿ ಒಡೆಯನನ್ನು ಕೂಗಿ ಕರೆವ ಪರಮಾಪ್ತ ಬಂಧುವೇ ! ಎಂಬಂತೆ  ಕಂಡ  ಕವಿಯ ಮನುಷ್ಯತ್ವದ ಪರಮಾವಧಿ ಭಾವಕ್ಕೆ  (ಕವಿತೆಯ ಹೆಸರೂ ನಾಯಿಯಲ್ಲ,ತಾಯಿ) ಶರಣಾಗಲೇಬೆಕೆನಿಸುತ್ತದೆ. ಅಪರೂಪಕ್ಕೊಮ್ನೆ ಒಂದು ಒಳ್ಳೆಯ ಕವನಸಂಕಲನ ಸಿಕ್ಕಾಗ ಬರೆಯುತ್ತಲೇ ಹೋಗಬೇಕೆನಿಸುತ್ತದೆ.ಪ್ರತಿ ಕವಿತೆ ಎತ್ತಿ ಹೇಳಿ ಓದುಗರ  ಸವಿಯ ರುಚಿ  ಕೆಡಿಸಬಾರದಲ್ಲವೇ? ನಾಕು ಸಾಲು ಬರೆವ ನಮಗಿಂತ ಇಡೀ ಸಂಕಲನ ಓದಿ ಸಂತಸ ಪಡುವ ಮನಸುಗಳು ಹಲವಿರುವಾಗ ನಡುವೆ ನಮ್ಮಂಥವರದು ಮಿತಿ ದಾಟುವ ಹುಚ್ಚುತನವೂ ಆಗಬಹುದು. ನೀ.ಶ್ರೀಶೈಲ ಅವರ ಸಮಗ್ರ ಹನಿಗಳ ಓದಿಗೆ,ಪ್ರಾಮಾಣಿಕ ಓದುಗನಾಗಿ ನಾನು ಕಾಯ್ದಿರುವೆ *****************************. ಡಾ.ವೈ.ಎಂ.ಯಾಕೊಳ್ಳಿ

ಇರುಳ ಹೆರಳು Read Post »

You cannot copy content of this page

Scroll to Top