ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಸಾಧನೆಯ ಹಾದಿಯಲ್ಲಿ

ಎಂಭತ್ತರ ದಶ ಕದಲ್ಲಿ ಇನ್ನು ಗ್ರಾಮೀಣ ಭಾಗದ ಮಹಿಳೆಯರು ಅಕ್ಷರ ಲೋಕಕ್ಕೆ ಅಂಬೆಗಾಲಿಡುತ್ತ ಸಾಗುತ್ತಿದ್ದ ದಿನಗಳಲ್ಲಿ ಇವರು ಉನ್ನತ ಶಿಕ್ಷಣ ಪಡೆದು ಮಹಿಳಾ ಅಧಿಕಾರಿಯಾಗಿ ಆಯ್ಕೆ ಯಾಗಿ ಬೀದರ್ ನಂತಹ ಹಲವಾರು ಸಮಸ್ಯೆ ಇರುವ ಜಿಲ್ಲೆಗೆ ಅಧಿಕಾರಿಯಾಗಿ ವೃತ್ತಿ ಆರಂಭಿಸಿರುವುದು ಗುರುತ್ತ ರವಾದ ಹೆಜ್ಜೆ

ಸಾಧನೆಯ ಹಾದಿಯಲ್ಲಿ Read Post »

ಪುಸ್ತಕ ಸಂಗಾತಿ

ಊದ್ಗಳಿ ಊದುತ್ತಾ.

ಪುಸ್ತಕ ಸಂಗಾತಿ ಊದ್ಗಳಿ ಊದುತ್ತಾ.   ಬದುಕಿನ ಜೀವಂತಿಕೆ ಇರುವುದು ಬದಲಾವಣೆಗಳಲ್ಲಿ. ಕಾಲದ ಜೊತೆ ಜೊತೆಗೆ ಹೆಜ್ಜೆ ಹಾಕಲೆ ಬೇಕು, ಇಲ್ಲದಿದ್ದರೆ ನಾವು ಹಿಂದುಳಿದು ಬಿಡುತ್ತವೆ, ಸ್ಮೃತಿ ಪಟಲದಿಂದ ಮರೆಯಾಗುತ್ತೇವೆ. ಹಳೆಯದು ಹೊಸದಕ್ಕೆ ಎಡೆಮಾಡಿಕೊಡುತ್ತದೆ. ಅತೃಪ್ತಿ ಬದುಕಿನಲ್ಲಿ ಹೊಸದನ್ನು ತರುತ್ತದೆ. ಇದು ಸಾರಸ್ವತ ಲೋಕಕ್ಕೂ ಅನ್ವಯಿಸುತ್ತದೆ. ಸಾಹಿತ್ಯದಲ್ಲೂ ಕಾಲಕಾಲಕ್ಕೆ ಬದಲಾವಣೆಗಳು ನಡೆಯುತ್ತಿರುತ್ತವೆ. ಆ ಪರಿಧಿಯಲ್ಲಿ ‘Those who create nothing now, destroy” ಎಂಬ ಮಾತನ್ನು ಇಲ್ಲಿ ಸ್ಮರಿಸಬಹುದು. ನಮ್ಮ ಕನ್ನಡ ವಾಙ್ಮಯ ಇತಿಹಾಸವನ್ನು ಗಮನಿಸಿದಾಗ ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ… ಮುಂತಾದ ಹತ್ತು ಹಲವು ರೀತಿಗಳ ಮೂಲಕ ಸಾಹಿತ್ಯವು ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಸಾಹಿತ್ಯ ಕಾಲಕಾಲಕ್ಕೆ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ ತತ್ಕಾಲೀನತೆಗೆ ಸ್ಪಂದಿಸಿ, ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ರೂಪುಗೊಳ್ಳುತ್ತ ಸಾಗುತ್ತದೆ. ಸಾಹಿತ್ಯವೆಂದರೆ ಅದೊಂದು ಉತ್ತಮವಾದ ಜೀವನಮಾರ್ಗದ ದೀವಿಗೆ. ಅದು ಜೀವನದ ಅವಿಭಾಜ್ಯ ಅಂಗ. ಈ ನೆಲೆಯಲ್ಲಿ ಕಾವ್ಯವು ಹೃದಯದ ಪಿಸುಮಾತು. ಅಲ್ಲಿ ಪದಗಳನ್ನು ಕೇವಲ ಅರ್ಥಕ್ಕಾಗಿಯೇ ಬಳಸದೆ ಅಂತರ್ಭಾವಕ್ಕಾಗಿ ಬಳಸಲಾಗುತ್ತದೆ. ಈ ಜಾಡಿನಲ್ಲಿ ಸಾಹಿತ್ಯವು ಜನಜೀವನಕ್ಕೆ ಕನ್ನಡಿಯಾಗಿರುತ್ತದೆ. ಇಲ್ಲಿ ಡಿ. ವಿ. ಗುಂಡಪ್ಪನವರ ಈ ಹೇಳಿಕೆಯನ್ನು ಸ್ಮರಿಸಬಹುದು. “ಕಾವ್ಯವು ಜೀವನದ ಮುಖ್ಯ ಲಕ್ಷಣಗಳನ್ನು ಪ್ರತಿಬಿಂಬಿಸತಕ್ಕುದಾಗಿದೆ. ಒಳ್ಳೆಯ ಸಜೀವ ಕಾವ್ಯಗಳು ಹುಟ್ಟಬೇಕಾದರೆ ಅವುಗಳನ್ನು ಬರೆಯುವವರ ಸುತ್ತ ಮುತ್ತ ಹೊಸ ಹೊಸ ಭಾವನೆಗಳ ಪರಸ್ಪರ ಸಂಘರ್ಷಣೆ ಇರಬೇಕು.”       ಊದ್ಗಳಿ ತನ್ನ ಒಡಲಲ್ಲಿ ಮನುಕುಲದ ವಿಕಾಸ ಪ್ರಕ್ರಿಯೆಯನ್ನು ಇರಿಸಿಕೊಂಡು, ತಲೆ ತಲಾಂತರದ  ತನ್ನ ನೋವು-ನಲಿವುಗಳನ್ನು ಮೌನವಾಗಿ ಅರಹುತ್ತಿದೆ.‌ ಕೇಳುವ, ಅರ್ಥೈಸಿಕೊಳ್ಳುವ ಮನಸ್ಸುಗಳು ಮಾತ್ರ ಇಂದು ಮರೀಚಿಕೆಯಾಗಿವೆಯಷ್ಟೇ. ಊದ್ಗಳಿ ಕವನ ಸಂಕಲನದ ಶೀರ್ಷಿಕೆ ನೋಡುತ್ತಲೇ ನನ್ನ ಕಣ್ಮುಂದೆ ಬಂದದ್ದು ಅಮ್ಮನ ಚಿತ್ರಣ.. ! ಒಲೆಯ ಮುಂದೆ ಕುಳಿತು ಆಹಾರವನ್ನು ಬೇಯಿಸುತ್ತಿರುವ, ಒಳಗೊಳಗೆ ತಾನೇ ಬೇಯುತ್ತಿರುವ ಸ್ತ್ರೀ ಸಂಕುಲವೇ ಸ್ಮೃತಿ ಪಟಲದ ಮೇಲೆ ಹಾದು ಹೋಗುತ್ತದೆ. ಗಂಡ-ಮಕ್ಕಳು-ಕುಟುಂಬದ ಒಡಲ ಹಸಿವನ್ನು ನೀಗಿಸುವ ‘ಅನ್ನಪೂರ್ಣೆ’ ದಿಟವಾಗಿಯೂ ಸ್ತುತ್ಯರ್ಹಳು..!! ನಾವು ೨೧ ನೇ ಶತಮಾನದಲ್ಲಿ, ವೈಜ್ಞಾನಿಕ ಯುಗದಲ್ಲಿ ಉಸಿರಾಡುತ್ತಿದ್ದೇವೆಯಾದರೂ ಪಳೆಯುಳಿಕೆಯಂತೆ ಈ ಅಸಹಾಯಕತೆ, ಶೋಷಣೆ, ಮಾನಸಿಕ ತುಮುಲ…. ಇವು ಯಾವುವೂ ಹೆಣ್ಣನ್ನೂ ತೊರೆದು ದೂರ ಹೋಗಿಲ್ಲ. ಇವತ್ತಿಗೂ ಅವಳ ಸುತ್ತವೇ ಪ್ರದಕ್ಷಿಣೆ ಹಾಕುತ್ತಿವೆ. ಎದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಸ್ತ್ರೀ ಸಂವೇದನೆಯು ಮಾತ್ರ ಅಲ್ಪ-ಸ್ವಲ್ಪ ಬದಲಾವಣೆಗಳೊಂದಿಗೆ ಇಂದಿಗೂ ಯಥಾವತ್ತಾಗಿ ಚಲಿಸುತ್ತಿದೆ. ಕೆಲವು ಸಮಸ್ಯೆಗಳ ರೂಪಗಳು ಬದಲಾಗಿವೆಯೇ ಹೊರತು ಸಮಸ್ಯೆಗಳಲ್ಲ. ಬೆಂಕಿಯ ಸುತ್ತ ಸುತ್ತುವ ಹೆಣ್ಣಿನ ಜೀವನದಲ್ಲಿ ‘ಒಲೆ’ ಯ ರೂಪ ತುಸು ಬದಲಾದರೂ ಅದರೊಳಗಿನ ಜ್ವಾಲೆ ಇನ್ನಿತರ ರೂಪಗಳಲ್ಲಿ ಹೆಣ್ಣನ್ನು ಚುಂಬಿಸುವಲ್ಲಿ ಯಶಸ್ವಿಯಾಗುತ್ತಿದೆ…!! ಈ ನೆಲೆಯಲ್ಲಿ ಊದ್ಗಳಿ ಸ್ತ್ರೀ ಸಂವೇದನೆಯ ಆಪ್ತ ಉದ್ಯಾನವನ…!! ಮಗದೊಂದು ನೆಲೆಯಲ್ಲಿ ಈ ಊದ್ಗಳಿ ಕವನ ಸಂಕಲನವು ಊದುವ, ಊದಿಸಿಕೊಳ್ಳುವ ಪ್ರಕ್ರಿಯೆಯ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಬೆತ್ತೆಲುಗೊಳಿಸುತ್ತದೆ.        ಕವಯಿತ್ರಿ ದಾಕ್ಷಾಯಣಿ ನಾಗರಾಜ್ ಮಸೂತಿಯವರು ಬಿಸಿಲೂರು ಬಳ್ಳಾರಿ ಜಿಲ್ಲೆಯ ಮುದ್ದಟನೂರು ಹಳ್ಳಿಯ ಅಪ್ಪಟ ದೇಸಿ ಪ್ರತಿಭೆ. ಕೃಷಿ ಹಿನ್ನೆಲೆಯ ಪರಿವಾರದಲ್ಲಿ ಬೆಳೆದ ಶ್ರೀಯುತರು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಮಕ್ಕಳ ಮನದಂಗಳದಲ್ಲಿ ನೆಲೆಯೂರಿದ್ದಾರೆ. ಮಕ್ಕಳ ಒಡನಾಟದೊಂದಿಗೆ ಸಮಾಜದೊಂದಿಗೆ ಮುಖಾಮುಖಿಯಾಗುತ್ತ ತಮ್ಮ ಅನುಭವವನ್ನು ಹಿಗ್ಗಿಸಿಕೊಂಡ ಇವರು ತಮ್ಮ ಭಾವನೆಗಳನ್ನು ಕಾವ್ಯಧಾರೆಯಲ್ಲಿ ಹರಿಸಿದ್ದಾರೆ.       ಊದ್ಗಳಿ ಯು ೪೦ ಭಾವನೆಗಳ ಭಾವಂತರಂಗ. ಇಲ್ಲಿ ಪ್ರೀತಿ, ಪ್ರೇಮ, ಪ್ರಣಯ, ನಿವೇದನೆ, ವಿರಹ, ಮಾನಸಿಕ ತೊಳಲಾಟ, ಜೀವನದ ಸಾಕ್ಷಾತ್ಕಾರ, ತಾತ್ವಿಕ ಚಿಂತನೆ, ರಾಜಕೀಯ ಜಿಜ್ಞಾಸೆ, ವಿಡಂಬನೆ, ವೈಚಾರಿಕತೆ, ಸಮಾಜದ ಸೂಕ್ಷ್ಮ ಚಿತ್ರಣ ಹಾಗೂ ಪ್ರಧಾನವಾಗಿ ಸ್ತ್ರೀ ಸಂವೇದನೆಯನ್ನು (ತಾಯಿ) ಗುರುತಿಸಬಹುದು. ಪ್ರೀತಿ, ಪ್ರೇಮದಲ್ಲೂ ಸಂವೇದನೆಯ ಹಂದರವಿದೆ. ಮೊದಲ ಕವನ ನಾನು ಅವಳು ಮತ್ತು ವರ್ತುಲ ದಲ್ಲಿ ಸ್ತ್ರೀಯ ಆತ್ಮಾವಲೋಕನವಿದೆ. “ಅದ್ಯಾಕೆ ಈ ಹೆಣ್ಣು ಅಲ್ಲಿಂದಿಲ್ಲಿಗೆ ಹಾರುವ ದುಂಬಿಯ ಮೇಲೆ ಕನಸು ಕಟ್ಟುತ್ತಾಳೋ ತಾನು ಉರಿದರೂ” ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯ ವ್ಯಾಪ್ತಿ, ಹರಹು ಮನುಕುಲದ ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿದೆ. ನಿಸರ್ಗದ ಯಾವುದೋ ವಿಪರೀತದ ವ್ಯಾಪಾರದಿಂದಾಗಿ ಹೆಣ್ಣು ಸಂಭಾವಿತರಿಗಿಂತ ಹೆಚ್ಚಾಗಿ ವಾಚಾಳರಿಗೆ, ಬೇಜವಾಬ್ದಾರಿ ಸಾಹಸಿಗಳಿಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾಳೆ ಇಲ್ಲಿ ಪ್ರಶ್ನೆ ನೇರ ಮತ್ತು ಸರಳವಾಗಿ ಇದೆಯಾದರೂ ಉತ್ತರ ಮಾತ್ರ ಇನ್ನೂ ಬಿಸಿಲುಗುದುರೆಯೇ….!! ಇದು ಹೆಣ್ಣಿನ ಮಾನಸಿಕ ಸ್ಥಿತಿಯನ್ನು ಒರೆಗಲ್ಲಿಗೆ ಹಚ್ಚುವ ಕೆಲಸವನ್ನು ಮಾಡುತ್ತದೆ.‌        ಸಮಾಜಕ್ಕೆ ಯಾವಾಗಲೂ ತನ್ನದಲ್ಲದ ವಸ್ತು, ವಿಷಯ ಹಾಗೂ ವ್ಯಕ್ತಿಯ ಬಗ್ಗೆ ವಿಪರೀತ ಮೋಹ. ಅದರಲ್ಲಂತೂ ಹೆಣ್ಣು ಮಕ್ಕಳ ಜೀವನದ ಬಗೆಗೆ ವಿಶೇಷ ಕಾಳಜಿ..! ಎಷ್ಟರಮಟ್ಟಿಗೆ ಎಂದರೆ ಅವರನ್ನು ನೆಮ್ಮದಿಯಾಗಿ ಬದುಕಲು ಬಿಡದಿರುವಷ್ಟರ ಮಟ್ಟಿಗೆ. ಇಂತಹ ವ್ಯವಸ್ಥೆಯು ಆ ಮಹಿಳೆಯರಲ್ಲಿ ಒಂದು ವಿಚಿತ್ರವಾದ ಪ್ರತಿಭಟನೆಯನ್ನು ಹುಟ್ಟಿಸುತ್ತದೆ. “ಮತ್ತೆ ಮತ್ತೆ ಕೂಗಿ ಹೇಳಬೇಕಿನಿಸುತ್ತದೆ ಇದು ನನ್ನ ಬದುಕು -ನನ್ನ ಆಯ್ಕೆ ಎಂದು” ತಮ್ಮ ಮನದಾಳದ ನೋವು, ಆತಂಕ, ಭಾವನೆಗಳನ್ನು ಕೆಲವೊಬ್ಬರು ಧೈರ್ಯದಿಂದ ಹೇಳಲು ಪ್ರಯತ್ನಿಸಿದರೆ, ಮತ್ತೇ ಕೆಲವರು ಅಸಹಾಯಕತೆಯಿಂದ ಎಲ್ಲವನ್ನೂ ಮೌನವಾಗಿಯೇ ಸಹಿಸಿಕೊಳ್ಳುತ್ತಾರೆ. ಇನ್ನೂ ಹಲವರು ಮಾನಸಿಕ ತೊಳಲಾಟದಲ್ಲಿ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ. ಈ ಮೇಲಿನ ಚರಣಗಳು ಕವಯಿತ್ರಿಯ ಸಾಮಾಜಿಕ ಸಂವೇದನೆಯ ಸೂಕ್ಷ್ಮತೆಯನ್ನು ಪ್ರತಿನಿಧಿಸುತ್ತವೆ.        ಕವನ ಸಂಕಲನದ ಶೀರ್ಷಿಕೆಯ ಕವನ ಊದ್ಗಳಿ ಯು ಹೆಣ್ಣಿನ ಅಂತರಂಗವನ್ನು ಬಿಚ್ಚಿಡುವಲ್ಲಿ ಯಶಸ್ವಿಯಾಗಿದೆ. (ವಿಶೇಷವಾಗಿ ತಾಯಿ) ಊದ್ಗಳಿಯು ಉದ್ದನೆಯ ನುಣುಪಾದ ಸುರುಳಿಯಾಗಿ ಕಾಲವನ್ನು ಪ್ರತಿಬಿಂಬಿಸುತ್ತಿದೆ. ಇದು ಮಹಿಳೆಯರ ಆಂತರಿಕ ತುಮುಲದ ಸಂಕೇತವಾಗಿ ಬಳಕೆಯಾಗಿದೆ. “ಕೆಂಪೇರಿದ ಮೂಗನ್ನು ತಿಕ್ಕುತ್ತಾ… ಕಟ್ಟಿಗೆ ಹಸಿಯೊಂದಿಗೆ ಸೆಣೆಸುತ್ತಾ ಬಿಕ್ಕುತ್ತಲೇ… ಜಜ್ಜುತಿದ್ದಳು..” ಈ ಸಾಲುಗಳನ್ನು ಓದುತ್ತಿದ್ದಂತೆಯೇ ಪ್ರತಿಯೊಬ್ಬ ಸಹೃದಯ ಓದುಗರ ಕಣ್ಮುಂದೆ (ತಾಯಿ) ಸ್ತ್ರೀ ಸಂಕುಲವೆ ಬಂದು ನಿಲ್ಲುತ್ತದೆ..!!           ಕುಟುಂಬದಲ್ಲಿನ ಸಣ್ಣ ಸಣ್ಣ ವಿಷಯಗಳನ್ನೂ ತುಂಬಾ ಮುತುವರ್ಜಿಯಿಂದ ಗಮನಿಸಿ ಕಾವ್ಯದ ರೂಪವನ್ನು ನೀಡಿದ್ದಾರೆ. ಮನೆಗಳಲ್ಲಿ ಪಾತ್ರೆಗಳ ಸದ್ದು ಆದಾಗ ಅದು ಹೆಣ್ಣಿನ ಸಿಟ್ಟು, ಸೆಡವಿನ ಸಂಕೇತವೆಂದು ಅಂದುಕೊಳ್ಳುತ್ತೇವೆಯೇ ಹೊರತೂ ಅದರಲ್ಲಿ ಅಡಗಿರುವ ಅವಳ ಏಕತಾನತೆಯನ್ನು ನಾವು ಗುರುತಿಸುವುದೇ ಇಲ್ಲ. ಇದನ್ನು ಸದ್ದುಗಳು ಕವನವು ಸಶಕ್ತವಾಗಿ ಹಿಡಿದಿಟ್ಟಿದೆ.       ಸಾಮಾನ್ಯವಾಗಿ ಹೆಣ್ಣನ್ನು ಚಂಚಲೆಯೆಂದು ಕರೆಯುವುದು ಗಂಡಿಗೆ ಅಭ್ಯಾಸವಾಗಿ ಬಿಟ್ಟಿದೆ. ಆದರೆ ಚಂಚಲತೆ ಗಂಡಿನಲ್ಲಿಯೂ ಇರುವುದನ್ನು ದಾಕ್ಷಾಯಣಿಯವರು ಗುರುತಿಸಿದ್ದಾರೆ.‌ ಚಂಚಲ ಚಿತ್ತ ಕವನವು ಪುರುಷನನ್ನು ಪ್ರಶ್ನಿಸುವ ಬಗೆ ಈ ರೀತಿಯಲ್ಲಿದೆ. “…… ಮತ್ತೇಕೆ ? ನಿನ್ನೊಲವು ಹೂವಿಂದ ಹೂವಿಗೆ ಹಾರುವ ದುಂಬಿಯಂತೆ…” ಉತ್ತರ ಮಾತ್ರ ನಿರುತ್ತರ… !!          ಬಾವಿ ಅಂತರಂಗ ಕವನವು ಬಾವಿಯ ಮನದಾಳದ ಮಾತುಗಳನ್ನು ಸ್ವಗತದ ಮಾದರಿಯಲ್ಲಿ ಹೇಳುವ ಪರಿ ಅನನ್ಯ ಮತ್ತು ಅನುಪಮ. ಇದು ಹೆಣ್ಣು ಮಕ್ಕಳ ಅಂತರಂಗದ ಕದವನ್ನು ತೆರೆಯುವಲ್ಲಿ ಯಶಸ್ವಿಯಾಗಿದೆ. “ಮೊನ್ನೆ ಮೊನ್ನೆ ಮದುವೆಯಾದ ಖುಷಿಯಲ್ಲಿ ನೀರು ಸೇದಲು ಬಂದ ಗೌರಿ ನನ್ನೊಳಗೆ ಹೆಣವಾದಳು….”          ಈ ಭೂಮಿಯ ಮೇಲೆ ಅನ್ನವಿಲ್ಲದೆ ಬದುಕಬಹುದು, ಆದರೆ ಪ್ರೀತಿಯಿಲ್ಲದೆ ಬದುಕಲು ಸಾಧ್ಯವಿಲ್ಲ. ಅಂತೆಯೇ ಪ್ರೀತಿಯೇ ನಮ್ಮ ಜೀವನದ ತಳಹದಿ. ಬದುಕಿನ ಪಡಿಯಚ್ಚಾಗಿರುವ ಸಾಹಿತ್ಯದ ಮೂಲ ದ್ರವ್ಯವೇ ಈ ಪ್ರೀತಿ. ಇದು ಯಾರನ್ನೂ ಬಿಟ್ಟಿಲ್ಲ, ಬಿಡುವುದು ಇಲ್ಲ. ಈ ಸಂಕಲನದಲ್ಲಿಯೂ ಹಲವಾರು ಕವನಗಳು ಪ್ರೀತಿ, ಪ್ರೇಮ, ವಿರಹ…. ಮುಂತಾದವುಗಳ ಮೇಲೆ ಬೆಳಕು ಚೆಲ್ಲುತ್ತವೆ. ‘ಇರಿದ ಕೈ’, ‘ಉಳಿದ ಮಾತು’, ‘ತಪ್ಪಿದ ವಿರಹ’, ‘ನೆನಪುಗಳ ಬಿಕ್ಕಳಿಕೆ’,.’ಕದ ಇಕ್ಕಿರುವೆ’, ‘ದಣಿದಿದ್ದೇನೆ’, ‘ಹುಚ್ಚು ಹಂಬಲ’, ‘ಬಿಡಲಾರದ ಮಾಯೆ’, ‘ಇರಲಾರೆ ಗೆಳೆಯ’, ‘ಜಾರಿದ ಕಣ್ಣ ಹನಿ’, .., ಇಂತಹ ಹಲವಾರು ಕವನಗಳು ಪ್ರೇಮಲೋಕದ ಮಾಯೆಯನ್ನು, ಒಂಟಿತನದ ಕಹಿಯನ್ನು, ಒಡೆದ ಹೃದಯದ ಚೂರುಗಳನ್ನು ಸಹೃದಯ ಓದುಗರ ಅನುಭೂತಿಗೆ ದಕ್ಕಿಸುವಲ್ಲಿ ಫಲ ಕಂಡಿವೆ. ಅದಕ್ಕಾಗಿ ಕೆಲವೊಂದು ಚರಣಗಳು…. “ನೀನಿಲ್ಲದ ಘಳಿಗೆಯಲಿ ನೆನಪುಗಳ ಜಗಳ” “ಮತ್ತೊಮ್ಮೆ ಹೇಳುತ್ತೇನೆ ಹೃದಯಕ್ಕೆ ಕದ ಇಕ್ಕಿರುವೆ ಬಡಿಯದಿರು, ತಾಗಿಸದಿರು ಹಾಯದಿರು… ದಫನ್ ಆದ ಭಾವಗಳ ಕೆದುಕದಿರು..” “ಮತ್ತಷ್ಟು ಪ್ರಶ್ನೆಗಳ ಹಡೆಯುತ್ತಾ ಮತ್ತೊಂದು ಕಂಬನಿ ಮಿಡಿಯುವ ರಾತ್ರಿಗೆ ಮುನ್ನುಡಿಯಾಗಿ…” “ಉಸಿರುಗಟ್ಟಿದ ಭಾವಗಳ ಅಲೆಯಲ್ಲಿ ನಿನ್ನ ನೆನಪಿನ ಕಳೇಬರಗಳ ತೇಲಾಟ ಈ ದಿನ” “ಹೆಗಲಿಗೆ ಹೆಗಲು ಕೊಟ್ಟಾದರೂ ಇಲ್ಲವೇ ರೈಲಿನ ಹಳಿಗಳಾಗಿ ಆದರೂ ಸರಿಯೇ ಸುಮ್ಮನೆ ತುಸು ದೂರ ಸಾಗೋಣ”       ಮೇಲಿನ ಈ ಸಾಲುಗಳು ಪ್ರತಿಯೊಬ್ಬ ಪ್ರೇಮಿಯ ನಾಡಿಮಿಡಿತಗಳಾಗಿವೆ. ಇವುಗಳ ಮಧ್ಯೆ ಓದುಗ ಕಳೆದುಹೋಗುತ್ತಾನೆ, ತನ್ನ ಗತ ಬದುಕಿನ ಕವಲು ದಾರಿಯಲ್ಲಿ..!! ಇವುಗಳ ಜೊತೆಗೆ ಹಲವು ಕವನಗಳು ವೈಚಾರಿಕ ಸಂದೇಶ, ತಾತ್ವಿಕ ಚಿಂತನೆ, ಜೀವನದ ಜೋಕಾಲಿಯ ಏರಿಳಿತವು ನಮ್ಮನ್ನು ತಟ್ಟುತ್ತವೆ. ಕೋಲು ಎನ್ನುವ ಕವನವು ರಾಜಕೀಯ ವಿಡಂಬನೆಯ ಚಿತ್ರವನ್ನು ಒಳಗೊಂಡರೆ, ಮರೆತೆವೇಕೆ ನಾವು? ಕವನವು ಕೋಮು ಸೌಹಾರ್ದತೆಯ ನೆಲೆಯಲ್ಲಿ ಮಾನವನ ಪ್ರವೃತ್ತಿ ಹೇಗೆ ದಾರಿ ತಪ್ಪುತ್ತಿದೆ ಎಂಬುದನ್ನು ನವೀರಾಗಿ ಚಿತ್ರಿಸುತ್ತದೆ. ಹೀಗೇಕೆ ಕವನವು ನಮ್ಮ ಆಧುನಿಕ ಬದುಕಿಗೆ ಕನ್ನಡಿ ಹಿಡಿದಂತಿದೆ. ಬುದ್ಧ-ಬಸವರನ್ನು ಮರೆತು ನಾವು ಅನಾಗರಿಕರಂತೆ ಬಾಳುತ್ತಿರುವುದು ದುರಂತವೇ ಸರಿ. “ಮನುಜನೇಕೆ ತನ್ನ ಸುತ್ತ ತಾನೇ ಅಂತರಗಳ ಜೇಡರಬಲೆಯ ಹೆಣೆದು ಸಿಲುಕಿ ಒದ್ದಾಡುತ್ತಾನೆ ?” ಎಂದು ಕವಿಮನವು ಆತಂಕವನ್ನು ವ್ಯಕ್ತಪಡಿಸಿದೆ.       ‘ಮೌನ’, ‘ಸಂತೆ’, ‘ದಿಂಬು’, ಕವನಗಳು ಆಯಾ ವಿಷಯಗಳನ್ನು ಮನಕ್ಕೆ ಮುದ ನೀಡುವಂತೆ ಅನುಸಂಧಾನಗೈಯುವಲ್ಲಿ ನಿರತವಾಗಿವೆ.         ಇಲ್ಲಿಯ ಹೆಚ್ಚಿನ ಕವನಗಳು ನವ್ಯ ಸಾಹಿತ್ಯದ ಪ್ರಭಾವದಲ್ಲಿ ಉದಯಿಸಿವೆ. ಭಾಷೆಯ ದೃಷ್ಟಿಯಿಂದ ಹಲವು ಕಡೆ ಪ್ರಾದೇಶಿಕತೆ ಆಪ್ತವೆನಿಸುತ್ತದೆ. ಇಲ್ಲಿಯ ಕವನಗಳು ‌ವೈಯಕ್ತಿಕ ನೆಲೆಯಲ್ಲೇ ಉಳಿಯದೆ ಸಾರ್ವತ್ರಿಕ ಅನುಭವವನ್ನು ನೀಡುವಲ್ಲಿ ಯಶಸ್ವಿಯಾಗಿವೆ. ಆದರೆ ಕಾವ್ಯದ ಸಂವೇದನೆಗೆ ಯಾವ ವಿಷಯದ ಸೀಮೆ, ಎಲ್ಲೆ ಇಲ್ಲ.. ಅದು ಕಾಲಾತೀತ, ಸರ್ವವ್ಯಾಪಿ..! ಇಲ್ಲಿಯ ಕವನಗಳ ವ್ಯಾಪ್ತಿಯು ವಿಶಾಲವಾಗಿರದೆ ತುಂಬಾ ಸೀಮಿತವೆನಿಸುತ್ತದೆ. ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪುರುಷ ಸಂವೇದನೆ ಮರೆಯಾಗಿದೆ. ಮನುಕುಲದ ಎಲ್ಲ ಸಂಬಂಧಗಳಿಗೂ ಹೆಣ್ಣೇ ಮೂಲ. ಆ ನೆಲೆಯಲ್ಲಿ ಸ್ತ್ರೀ ಸಂವೇದನೆಯನ್ನು ವಿವಿಧ ಆಯಾಮಗಳಲ್ಲಿ ಅವಲೋಕನ ಮಾಡಬಹುದಾಗಿತ್ತು. ಇದರೊಂದಿಗೆ ಸಮಾಜದ ಹಲವು ಮುಖಗಳು ಇಲ್ಲಿ ಕಣ್ಮರೆಯಾಗಿವೆ. ಎಲ್ಲ ವಿಷಯಗಳು ಕಾವ್ಯದ ರೂಪ ತೊಡಬೇಕಾದರೆ ಕವಿಮನವು ಎಲ್ಲವನ್ನೂ ಸೂಕ್ಷ್ಮ ಸಂವೇದನೆಯಿಂದ ನೋಡುವ, ಪರಿಪಕ್ವತೆಯಿಂದ ಅರ್ಥೈಸಿಕೊಳ್ಳುವ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲ ಓರೆ ಕೋರೆಗಳು ಮರೆಯಾಗಿ ಸರ್ವಾಂತರ್ಯಾಮಿ ರೂಪದ ಕವನ ಸಂಕಲನಗಳು ಹಾಗೂ ಇನ್ನಿತರ ಸಾಹಿತ್ಯ ರೂಪಗಳು ಮೂಡಿಬರಲಿ ಎಂದು ಹೃನ್ಮನದಿ ಹಾರೈಸುವೆ…!! ************************************* ಡಾ. ಮಲ್ಲಿನಾಥ ಎಸ್. ತಳವಾರ

ಊದ್ಗಳಿ ಊದುತ್ತಾ. Read Post »

ಪುಸ್ತಕ ಸಂಗಾತಿ

ಸಂದಾಯಿಯೆಂಬ ರಾಜಕೀಯ ಬದುಕಿನ ಸಹಜ ಚಿತ್ರಣ

ಪುಸ್ತಕ ಸಂಗಾತಿ ಸಂದಾಯಿಯೆಂಬ ರಾಜಕೀಯ ಬದುಕಿನ ಸಹಜ ಚಿತ್ರಣ ಸದ್ದುಗದ್ದಲವಿಲ್ಲದೆ ಈಗಾಗಲೇ ಸಾಕಷ್ಟು ಕೃತಿಗಳನ್ನು ಬರೆದೂ ಸಾಹಿತ್ಯದ ಜನಜಂಗುಳಿಯಿಂದ ದೂರವೇ ಇದ್ದು, ತನ್ನ ಪಾಡಿಗೆ ತಾನು ಬರೆಯುವುದರಲ್ಲಿಯೇ ಸುಖ ಕಾಣುವ ಕಣಿವೆ ಭಾರದ್ವಾಜ ಕೊಡಗಿನ ಕುಶಾಲನಗರದವರು. ಅವರ ಬರೆಯುವ ಓಘ ನಿಜಕ್ಕೂ ನನ್ನನ್ನು ಚಕಿತಳನ್ನಾಗಿಸುತ್ತದೆ. ಈ ಕೊರೋನೋ ಲಾಕ್ ಡೌನ್ ಸಮಯದ ಕೆಲವೇ ತಿಂಗಳುಗಳಲ್ಲಿ ವಿಭಿನ್ನ ಕಥಾ ಹಂದರದ ಎರಡು ಕಾದಂಬರಿಗಳನ್ನು ನಮ್ಮ ಮುಂದೆ ತಂದು ಇಟ್ಟಿದ್ದಾರೆ. ಅವರ ಕಥನ ಕುಶಲತೆಗೆ ಶರಣೆನ್ನುತ್ತಾ, ಈಗಷ್ಟೇ ಓದಿ ಮುಗಿಸಿದ             ‘ ಸಂದಾಯಿಯ ’ ಕುರಿತು ಹೇಳದಿದ್ದರೆ ನನ್ನ ಓದು ಅಪೂರ್ಣ ಅನ್ನಿಸುತ್ತದೆ.   ಮುಖ್ಯವಾಗಿ ‘ ಸಂದಾಯಿ ‘ ಮೇಲ್ನೋಟಕ್ಕೆ ಒಂದು ರಾಜಕೀಯ ಚಿತ್ರಣವನ್ನು ಕಟ್ಟಿಕೊಡುವಂತೆ ಭಾಸವಾದರೂ ಅದರೊಳಗೆ ಸಾಮನ್ಯರ ಬದುಕಿನ ಒಳತೋಟಿಗಳನ್ನ ಆ ಮೂಲಕ ಸಶಕ್ತವಾಗಿ ಕಟ್ಟಿಕೊಡುವಲ್ಲಿ ಲೇಖಕರು ಸಫಲರಾಗಿದ್ದಾರೆ. ಬದುಕಲು ಮಾಡಬೇಕಾದ ಯಾವುದೇ ಕೆಲಸ ಆಗಲಿ ಅಲ್ಲಿ  ನಿಷ್ಠೆ ಅನ್ನುವಂತದ್ದು ಬಲು ಮುಖ್ಯ ಅನ್ನುವಂತದ್ದನ್ನ ಇಲ್ಲಿಯ ಕಾದಂಬರಿಯ ಪಾತ್ರಗಳು ಪ್ರಾಮಾಣೀಕರಿಸುತ್ತವೆ. ಹಣ ಯಾವೊತ್ತೂ ಇಲ್ಲಿ ಮುಖ್ಯ ಅನ್ನಿಸುವುದಿಲ್ಲ. ನಂಬಿಕೆ ಮತ್ತು ನಿಷ್ಠೆಯೊಳಗೆ ಹೇಗೆ ಬದುಕಿನಲ್ಲಿ ತೃಪ್ತಿ ಕಾಣಬಹುದು ಅನ್ನುವಂತದ್ದು ಒಂದು ಕಡೆಯಾದರೆ, ಅದೇ ನಂಬಿಕೆ ಮತ್ತು ನಿಷ್ಠೆಗೆ ಹೇಗೆ ತನ್ನ ಬದುಕನ್ನು ಗಂಧದAತೆ ತೇಯಬೇಕು, ಜೀವ ಪಣಕ್ಕಿಟ್ಟು ಸವಾಲುಗಳನ್ನು ಎದುರಿಸ ಬೇಕೆಂಬುದು ನಿಚ್ಚಳವಾಗುತ್ತದೆ. ಇದಕ್ಕೆ ಇಲ್ಲಿನ ಯಾವ ಪಾತ್ರಗಳೂ ಹೊರತಲ್ಲ. ಅದರಲ್ಲೂ ಮುಖ್ಯವಾಗಿ ಭದ್ರಪ್ಪ ಮತ್ತು ಕುಬೇರ.   ತನ್ನ ಬದುಕಿಡೀ ಅಕ್ಕಿ ಗಿರಣಿಯಲ್ಲಿಯೇ ಕಳೆದರೂ, ಅಲ್ಲಿ ಸಿಗುವ ೪-೫ ಕೆ,ಜಿ ಅಕ್ಕಿಯಲ್ಲಷ್ಟೇ ನೆಮ್ಮದಿಯನ್ನು ಕಾಣುವ ಮುಗ್ಧ ಮನಸು ಭದ್ರಪ್ಪನದ್ದಾದರೂ ಅವನ ಪೆದ್ದು ತನವನ್ನು  ಧಣಿಗಳು ಎಲ್ಲೂ ದುರುಪಯೋಗ ಮಾಡಿಕೊಳ್ಳಲಿಲ್ಲವೆಂಬುದು ಶೋಷಣೆ ರಹಿತ ಸಮಾಜದ, ವ್ಯವಸ್ಥೆಯ ಕುರಿತು ಆಶಾಭಾವನೆಯನ್ನು ಹೊಂದುವಂತೆ ಮಾಡುತ್ತದೆ.  ಯಾಕೆಂದರೆ ಭೋಳೆ ಸ್ವಭಾವದ ಭದ್ರಪ್ಪನ ಸಂಬಳದಲ್ಲಿ ಒಂದಷ್ಟು ಎತ್ತಿಟ್ಟು, ಅದರಲ್ಲೇ ಅವನ ಮಗಳ ಮದುವೆಗೆ ಬೇಕಾದ ಚಿನ್ನಬಣ್ಣದ ವ್ಯವಸ್ಥೆಯನ್ನು ಮಾಡುವುದು.  ತಾನೇನೂ ಹೆಚ್ಚಿಗೆ ಕೊಡುವುದಲ್ಲ, ನಿಮ್ಮದೇ  ದುಡಿದ ಹಣ ಅಂತ ಹೇಳುವ ಮಾಲಿಕ ರಮೇಶ್ ಗೌಡರ ಔದಾರ್ಯ ಕೂಡ  ಅಷ್ಟೇ ದೊಡ್ಡದ್ದು.  ಇತ್ತ ಮಗ ಕುಬೇರನ ಬದುಕಿನ ಕಡೆಗೆ ಬಂದರೆ ಆಕಸ್ಮಿಕ ಆಕ್ಸಿಡೇಂಟ್ ಗೆ ತುತ್ತಾದ  ಸದಾಶಿವ ಅವರನ್ನು ಆಸ್ಪತ್ರೆಗೆ ಸಾಗಿಸಿ ಅವರನ್ನು ಬದುಕಿಸಿದ ಮೇಲೆ , ಕುಬೇರನ ಹೆಸರಿಗೆ ಅನ್ವರ್ಥಕದಂತೆ ಅವನ ಬದುಕು ತೆರೆದುಕೊಂಡದ್ದು ಮತ್ತೊಂದು ಅಚ್ಚರಿ.   ಈ ಮೇಲಿನ ಎರಡೂ ಸಂದರ್ಭಗಳಲ್ಲಿ ಹೆಂಡತಿಯರೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಅವರ ಒಳಿತಿಗಾಗಿ ಶ್ರಮಿಸುವುದು, ಈ ಮೂಲಕ ಈ ಕಾದಂಬರಿಯಲ್ಲಿ ಹೆಣ್ಣು ಕೂಡ ಮುಖ್ಯ ಭೂಮಿಕೆಯಲ್ಲಿ ಇರುವುದು ಮಹಿಳಾ ಸ್ವಾತಂತ್ರವೆಂಬುದು ನಿಜಕ್ಕೂ ಇದೆ ಅನ್ನುವ ಸಮಾಧಾನದ ಉಸಿರೊಂದು ಹೊಮ್ಮಿ ಬಿಡುತ್ತದೆ. ಇಲ್ಲಿನ ಎಲ್ಲಾ ಪಾತ್ರಗಳು ಒಂದಕ್ಕೊಂದು ಬೆಸೆದು ಕೊಂಡೇ ಇದೆ.  ಯಾರು ಯಾರ ಸ್ವಾತಂತ್ರ÷್ಯವನ್ನು ಕಸಿದು ಕೊಳ್ಳುವುದಾಗಲಿ, ದಬ್ಭಾಳಿಕೆ ಮಾಡುವುದಾಗಲಿ , ಸವಾರಿ ಮಾಡುವುದಾಗಲಿ ತೋರಿ ಬರುವುದಿಲ್ಲ. ಒಮ್ಮೆ ನಂಬಿದರೆ ಮುಗಿಯಿತು, ಮತ್ತೆ ನಂಬಿಕೆಯನ್ನು ಉಳಿಸಿಕೊಳ್ಳಲೇ ಇಲ್ಲಿಯ ಪಾತ್ರಗಳು ಬದುಕುವುದು. ಇಷ್ಟೆಲ್ಲದರ ನಡುವೆಯೂ ಈ ಕಾದಂಬರಿ ಏನು ಹೇಳ ಹೊರಟಿದೆ ಅನ್ನುವಂತ ಗೊಂದಲ  ಸಣ್ಣ ಮಟ್ಟಿಗೆ ನನ್ನ ಕಾಡಿದ್ದು ಸುಳ್ಳಲ್ಲ.   ಈ ನಡುವಿನಲ್ಲಿ ಕುಬೇರನಿಗೆ ಒಂದು ಪ್ರಶ್ನೆ ಹುಟ್ಟುತ್ತದೆ, ಅಪಘಾತಕ್ಕೀಡಾದ ಚಿಕ್ಕ ಯಜಮಾನ ಸದಾಶಿವರು ಯಾಕೆ ಪೈಸಾರಿ ಗುಡ್ಡಕ್ಕೆ ಬಂದರು ಅನ್ನುವಂತದ್ದು. ಇದೊಂದು ಕುತೂಹಲ ಓದುಗನ ಎದೆಯೊಳಗೆ ತಣಿಯದೆ ಹಾಗೇ ಉಳಿದುಕೊಳ್ಳುತ್ತದೆ. ಕುಬೇರನ ಮಾತಿನಲ್ಲಿ ಸದಾಶಿವರಾಯರ ಇಡೀ ಕುಟುಂಬದ ಚಿತ್ರಣವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಆ ಮನೆಯೊಳಗಿನ ಎಲ್ಲಾ ಮನುಷ್ಯರೂ ಮೇಲ್ನೋಟಕ್ಕೆ ಸುಖಿಗಳು ಮತ್ತು ಎಲ್ಲವರೂ ಒಳ್ಳೆಯವರೆ.  ತಮ್ಮ ತಮ್ಮ ಕೆಲಸಕ್ಕೆ ಬದ್ಧರಾಗುವ, ಬದುಕನ್ನು ಯಶಸ್ವಿಗೊಳಿಸುವುದರಲ್ಲಿ ನಿಸ್ಸೀಮರು. ಆದರೆ ಆಳದಲ್ಲಿ ಎಲ್ಲರೂ ಒಂಟಿಗಳು ಮತ್ತು ಅಸುಖಿಗಳು. ಆ ಪಾಡು ಯಾರಿಗೂ ಬೇಡ ಅನ್ನುವಂತದ್ದು. ಬಹುಶ: ಇದು ಸದಾಶಿವ ಅವರ  ಕುಟುಂಬದ ಕತೆ ಮಾತ್ರ ಅಲ್ಲ, ಬದುಕುವ ಎಲ್ಲಾ ಜೀವಿಗಳ ತಹತಹಿಕೆಯಂತಿದೆ.   ಈ ಕಾದಂಬರಿಯಲ್ಲಿಮೆಚ್ಚಿಕೊಳ್ಳುವ ಪ್ರಮುಖ ಅಂಶ, ಸಮನ್ವಯತೆ ಮತ್ತು ಸಮಾನತೆ ಮತ್ತು ಬಡತನವನ್ನು ಮೆಟ್ಟಿನಿಲ್ಲುವ ಛಲಗಾರಿಕೆ.  ಸದಾಶಿವ ಅವರಿಗೆ ಮೊದಲೇ ಕ್ರಿಶ್ಚಿಯನ್ ಹೆಣ್ಣು ಮಗಳೊಬ್ಬಳ ಜೊತೆ ಮದುವೆಯಾಗಿರುತ್ತದೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಭವಾನಿಯವರೊಂದಿಗೆ ಮದುವೆಯಾಗುತ್ತದೆ. ಒಳಗೊಳಗೆ ಹೆಣ್ಣೊಬ್ಬಳು ಅನುಭವಿಸ ಬಹುದಾದ ಸಂಕಟಗಳನ್ನು ಭವಾನಿ ಅನುಭವಿಸಿದರೂ, ಇಲ್ಲಿ ಯಾರೂ ಯಾರಿಗೂ ಮೋಸ ಮಾಡುವುದಿಲ್ಲ, ತೊಂದರೆ ಕೊಡುವುದಿಲ್ಲ. ಯಾವ ಸಂಸಾರಕ್ಕೂ ಅಡ್ಡಗಾಲಗದಂತ, ಎಲ್ಲೆ ಮೀರದ, ನೈತಿಕ ಚೌಕಟ್ಟಿನೊಳಗೇ ಇರುವಂತಹ ಸಾಂಸಾರಿಕ ಚಿತ್ರಣವನ್ನು  ಲೇಖಕರು ಕಟ್ಟಿಕೊಡುತ್ತಾರೆ.  ಸದಾಶಿವರ ಮೊದಲ ಹೆಂಡತಿಗೆ ಅಪ್ಪ ತೋಟ, ಮನೆ ಮಾಡಿಕೊಟ್ಟರೂ ಆಕೆ ಅದೇ ಋಣದಲ್ಲಿ ಇರಬಯಸದೆ, ಅದಲ್ಲೆವನ್ನು ಭವಾನಿಗೆ ಒಪ್ಪಿಸಿ, ಎಲ್ಲರಿಂದಲೂ ದೂರ ಆಗಿ ಬೇರೆಯದೇ ರಾಜ್ಯಕ್ಕೆ ಹೋಗಿ ನೆಲೆ ನಿಂತು ಬಿಡುತ್ತಾಳೆ. ಸದಾಶಿವ ಚುನಾವಣೆಗೆ ನಿಂತಂತಹ ಸಂದರ್ಭದಲ್ಲಿ, ಅವರ ಎರಡು ಮದುವೆಯ ಕುರಿತು ಗುಲ್ಲಾದಾಗ ಮೊದಲನೆ ಹೆಂಡತಿ ತಾನೇ ಎದುರು ನಿಂತು ವಾತವರಣವನ್ನು ತಿಳಿಗೊಳಿಸಿ, ಭವಾನಿಯೇ ಅವರ ಪತ್ನಿ ಎಂಬುದನ್ನು ಸಾಬೀತು ಪಡಿಸಿದ್ದು ಎಲ್ಲವೂ ಉದ್ಧಾತ ಗುಣಗಳೇ.   ಕಾದಂಬರಿಯ ಕೊನೇಯಲ್ಲಿ, ಸದಾಶಿವರವರ ಮಗಳು ದಿವ್ಯ, ಸಾಬರ ಹುಡುಗರನ್ನು ಪ್ರೀತಿಸುವುದು, ಮಗಳು ಅಪ್ಪನಂತೆ ಆದಳೆಂದು ಭವಾನಿ ಮರಗುವುದು, ಮೇಲ್ನೋಟಕ್ಕೆ ಸದಾಶಿವರವರು ಮಗಳ ಈ ಸಂಬAಧಕ್ಕೆ ಒಪ್ಪಿಗೆ ಮುದ್ರೆ ಕೊಟ್ಟಂತೆ ಅನ್ನಿಸುವುದು ಅವರ ನಿಜದ ಮನಸೋ , ರಾಜಕೀಯದ ಮತ್ತೊಂದು ಮುಖವೋ ಅನ್ನುವುದು ಕಾದಂಬರಿ ಅಂತ್ಯದಲ್ಲಿ ಸಣ್ಣ ಅನುಮಾನವೊಂದನ್ನ ಹುಟ್ಟಿ ಕಾಕಿ ಬಿಡುತ್ತದೆ.  ಭವಾನಿಯವರ ನಿರಾಕರಣೆ ಇರುವುದು, ಜಾತಿ ಧರ್ಮಕ್ಕಿಂತಲ್ಲೂ ಮಿಗಿಲಾಗಿ ಜನ ಈ ಸಂಬಂಧವನ್ನು ಹೇಗೆ ಸ್ವೀಕರಿಸುತ್ತಾರೆ ಮತ್ತು ಅವರಿಗೆ ಸಹಜವಾಗಿ ಎಲ್ಲರಂತೆ ಬದುಕಲು ಸಾಧ್ಯವಾ?  ಅನ್ನುವಂತದ್ದು.  ಕುಬೇರ ಭವಾನಿಯವರನ್ನು ಸಮಾಧಾನ ಪಡಿಸಿದಂತೆ ಈ ಮದುವೆಯನ್ನು ತಪ್ಪಿಸಲು ಪಣ ತೊಡುತ್ತಾನೆ. ಅಜಂಖಾನ್ ನ ಮುಗಿಸಲು ಬೇರೆಯೇ ರೀತಿಯಲ್ಲಿ ಹವಣಿಸುತ್ತಾನೆ. ಆದರೆ ಕುಬೇರನ ವ್ಯಕ್ತಿತ್ವ ಇದಕ್ಕೆ ಒಪುö್ಪವಂತದ್ದಲ್ಲ ಅನ್ನುವ ಒಂದು ಅಸಮಾಧಾನ, ಅಸಹನೆ ಓದುಗನ ಎದೆಯೊಳಗೆ ಹುಟ್ಟಿಕೊಳ್ಳುತ್ತದೆ. ಆದರೆ ಅವನ ಮನಸ್ಥಿತಿ ಅಂತದ್ದಕ್ಕೆ ಒಪುö್ಪವುದಿಲ್ಲ ಅನ್ನುವುದಕ್ಕೆ ಅವನೊಳಗೆ ಉಂಟಾದ ಒಂದು ಮಾನಸಿಕ ಕ್ಷೋಭೆಯಿಂದ ಇದು ವ್ಯಕ್ತವಾಗುತ್ತದೆ. ಕೊನೇಗೆ ಅಜಂಖಾನ್, ಕುಬೇರನ ಇಚ್ಚೆಯಂತೆಯೇ ಆಕಸ್ಮಿಕವಾಗಿ ಅಪಘಾತದಲ್ಲಿ ಮರಣವನ್ನಪ್ಪುತ್ತಾನೆ.. ಜನ ಅಪಘಾತ ಮರಣ ಅಂತ ಶರ ಬರೆಯುತ್ತಾರೆ. ಇದು ಸಹಜ ಸಾವಲ್ಲ ಅಂತ ದಿವ್ಯ ಅಮ್ಮನ ಮೇಲೇ ರೇಗಾಡುತ್ತಾಳೆ. ಅಪ್ಪ ಸದಾಶಿವ ಅದೇ ಸಮಯದಲ್ಲಿ ಕೆಲಸದ ಮೇಲೆ ನಾಕು ದಿನದ ಮಟ್ಟಿಗೆ ದೆಹಲಿಯಲ್ಲಿಯೇ ಉಳಿಯುತ್ತಾನೆ.  ಈ ಸಂಗತಿ ಅನೇಕ ಪ್ರಶ್ನೆಗಳನ್ನು ಬಿಟ್ಟು ಕೊಟ್ಟರೂ ಬಿಡದಂತೆ ನಮ್ಮನ್ನು ಕಾಡುತ್ತದೆ. ಆದರೆ ಮಾನಸಿಕವಾಗಿ ಕುಬೇರ ಕೊಲೆಗಾರನ ಪಟ್ಟವನ್ನು ಹೊರುವ ಒಂದು ಮಾನಸಿಕ ವೇದನೆಯ ಮುಳ್ಳು ನಮ್ಮ ಎದೆಯೊಳಗೂ ಛಳ್ಳೆಂದು ಹಾದು ಹೋಗುತ್ತದೆ. ದೇವರು ಉದರದಿಂದ ಮಾತ್ರ ಸಂಬಂಧಗಳನ್ನು ಸೃಷ್ಟಿ ಮಾಡುವುದಿಲ್ಲ, ಆಕಸ್ಮಿಕಗಳಿಂದನೂ ಸಂಬಂಧಗಳನ್ನು ಸೃಷ್ಟಿ ಮಾಡುತ್ತಾನೆ ಅಂತ ಭಾವಿಸಿಕೊಂಡಿದ್ದ  ಕುಬೇರ , ಅಂತೆಯೇ ಬದುಕಿದ್ದ ಕೂಡ. ಇಲ್ಲದಿದ್ದರೆ, ಜೋಗಿ ಗುಡ್ಡದ ಪೈಸಾರಿಯ ಬರೇ ಡಿಗ್ರಿ ಓದಿಕೊಂಡ ಹುಡುಗನಿಗೆ ಇಷ್ಟೆಲ್ಲಾ ಬದುಕಿನ ತಿರುವುಗಳಿಗೆ ಒಡ್ಡಿಕೊಳ್ಳಲು ಸಾಧ್ಯವಿತ್ತೇ?  ಸಹಜವಾಗಿ ಓದಿಸಿಕೊಂಡು ಹೋಗುವ ಇಲ್ಲಿಯ ಕಾದಂಬರಿಯ ಪಾತ್ರಗಳು ಭಾರದ್ವಾಜರ ಹೆಚ್ಚಿನ ಕಾದಂಬರಿಗಳಂತೆ ಇದುವೂ ಹೆಚ್ಚು ಮಾತನಾಡದೆ ಹೇಳ ಬೇಕಾದನ್ನಷ್ಟೇ ಹೇಳಿ ಮುಗಿಸುತ್ತದೆ.  ಒಂದು ಘಟನೆಯ ಚಿತ್ರಣವನ್ನಷ್ಟೇ ನಮ್ಮ ಮುಂದೆ ತಂದು ನಿಲ್ಲಿಸುತ್ತಾರೆ. ನಮ್ಮ ಮನಸಿನೊಳಗೆ ಅದಕ್ಕೆ ನೂರೆಂಟು ಬಣ್ಣಗಳು ತುಂಬಿ ಕೊಳ್ಳುತ್ತಾ ಹೋಗುತ್ತವೆ.  ‘ಸಂದಾಯಿ’ ಯೆಂಬ ಒಳ್ಳೆಯು ಕಾದಂಬರಿಗಾಗಿ  ಕಣಿವೆ ಭಾರದ್ವಾಜರವರಿಗೆ ಅಭಿನಂದನೆಗಳು.  ಕನ್ನಡ ಸಾರಸ್ವತ ಲೋಕ ಈ ಕಾದಂಬರಿಯನ್ನು ಮೆಚ್ಚಿಕೊಳ್ಳುತ್ತದೆ ಎನ್ನುವ ಭರವಸೆಯಿದೆ. *****************************************   –ಸ್ಮಿತಾ ಅಮೃತರಾಜ್. ಸಂಪಾಜೆ

ಸಂದಾಯಿಯೆಂಬ ರಾಜಕೀಯ ಬದುಕಿನ ಸಹಜ ಚಿತ್ರಣ Read Post »

ಪುಸ್ತಕ ಸಂಗಾತಿ

ಮೌನದಲ್ಲಿ ಮಾತುಗಳ ಮೆರವಣಿಗೆ…

ಪುಸ್ತಕ ಪರಿಚಯ ಮಾತು ಮೌನದ ನಡುವೆ ಸಾಹಿತ್ಯ ಎನ್ನುವುದು ಮಾನವನ ಪಾರದರ್ಶಕ ಅನುಭವಗಳ ಅನುಪಮ ಅಭಿವ್ಯಕ್ತಿ. ಈ ಅನುಭವ ಅನುಭೂತಿಯ ಮೂಲ ಆಕರವೇ ನಮ್ಮ ಸುಂದರ ಸಮಾಜ. ನಮ್ಮ ಸುತ್ತ ಮುತ್ತಲಿನ ಪರಿಸರ, ಪ್ರಕೃತಿ, ಸನ್ನಿವೇಶ, ಘಟನೆಗಳು ಹಾಗೂ ಮಾನವರ ವ್ಯಕ್ತಿತ್ವವು ಪರಸ್ಪರ ವ್ಯಕ್ತಿಗಳ ಅನುಭವವನ್ನು ರೂಪಿಸುತ್ತವೆ. ವ್ಯಕ್ತಿಯ ಈ ಅನನ್ಯ ಅನುಭವಕ್ಕೆ ರೂಪ ಕೊಡುವ ಸಾಧನವೇ ಭಾಷೆ. ಇದು ನಮ್ಮ ಸಾಮಾಜಿಕ ವ್ಯವಸ್ಥೆಯ ಕೂಸು. ಇದನ್ನು ಬಳಸಿಕೊಂಡೆ ಕವಿಯು ತನ್ನ ಅನುಭವಕ್ಕೆ ಚಿತ್ರ ಬಿಡಿಸುವುದು. ಈ ನೆಲೆಯಲ್ಲಿ ಸಾಹಿತ್ಯವು ಬದುಕಿನಂತೆಯೇ ಅಪರಿಮಿತ ಹಾಗೂ ವಿಶಾಲ. ಇದರ ಜಾಡು ಹಿಡಿದು ಹೊರಟಾಗ ಸಾಹಿತ್ಯಕ್ಕೆ ತೀಕ್ಷ್ಣವಾದ ಸಾಮಾಜಿಕ ಸ್ಪಂದನೆ ಹಾಗೂ ಹೃದಯದ ಕದ ತಟ್ಟಲು ಪ್ರಸ್ತುತ ಪಡಿಸುವ ಮಾರ್ಗ ತುಂಬಾ ಮುಖ್ಯವಾಗುತ್ತದೆ. ಸಾಹಿತ್ಯದ ಬಹುದೊಡ್ಡ ಕೊಂಬೆ ಕಾವ್ಯ ಆ ಕಾವ್ಯ ಹಚ್ಚ ಹಸಿರಾಗಿಸಲು ಕವಿಗೆ ಸಾಮಾಜಿಕ ವ್ಯವಸ್ಥೆ, ಸಂಬಂಧಗಳ ಹೂರಣ ಹಾಗೂ ಮಾನಸಿಕ ತಳಮಳಗಳು ಕಾಡಬೇಕು. ಅಂದಾಗ ಮಾತ್ರ ಆ ಕಾವ್ಯ ಸಾರ್ವತ್ರಿಕ ಪೋಷಾಕು ತೊಡಲು ಸಾಧ್ಯ. ಕೂಸು ಹುಟ್ಟಿದ ಮೇಲೆಯೇ ಹೆಣ್ಣಿಗೆ ಹೆಣ್ತನದ ಅನುಭವ ಆಗುವಂತೆ, ಕವಿತೆಗೊಂದು ರೂಪ ಬಂದ ಮೇಲೆಯೇ ವ್ಯಕ್ತಿಯು ಕವಿಯೆನಿಸಿಕೊಳ್ಳಲು ಸಾಧ್ಯ           ಮೇಲಿನ ಈ ಎಲ್ಲ ಅಂಶಗಳನ್ನು ಶಿಲ್ಪಾ ಮ್ಯಾಗೇರಿಯವರ ಮಾತು ಮೌನದ ನಡುವೆ ಕವನ ಸಂಕಲನದಲ್ಲಿ ಕಾಣಬಹುದು. ಇದು ಅವರ ತೃತೀಯ ಕವನ ಸಂಕಲನ. ಸಮಾಜವನ್ನು ಪ್ರೀತಿಸುವ ಕವಯಿತ್ರಿ ಸಮಾಜದಿಂದ ಪಡೆದುಕೊಂಡದ್ದನ್ನು ಪುನಃ ಸಮಾಜಕ್ಕೆ ಹಿಂತಿರುಗಿಸಲು ಬಳಸಿಕೊಂಡಿರುವುದು ಸರಸ್ವತಿಯ ಮಡಿಲನ್ನು….!!           ಈ ಕವನ ಗುಚ್ಛವು  ೬೬+೦೧ ಕವನಗಳನ್ನು ಹೊಂದಿದೆ. ಕವಯಿತ್ರಿ ಅವರಿಗೆ ಸಾಮಾಜಿಕ ವ್ಯವಸ್ಥೆಗಿಂತಲೂ ಆ ವ್ಯವಸ್ಥೆಯ ಪ್ರಮುಖ ಭಾಗವಾದ ಸ್ತ್ರೀ ಸಂವೇದನೆಯು ಹೆಚ್ಚು ಕಾಡಿದೆ. ಎಲ್ಲದರಲ್ಲಿಯೂ ಸ್ತ್ರೀ ಸಂವೇದನೆಯು ಇಣುಕಿರುವುದನ್ನು ಗಮನಿಸಬಹುದು.‌ ಅದು ಹೆತ್ತವರ ಪ್ರೀತಿಯಾಗಿರಬಹುದು ಅಥವಾ ಮನದರಸನ ಪ್ರೀತಿಯಾಗಿರಬಹುದು… ಅಲ್ಲಿ ಸ್ತ್ರೀ ಸಂವೇದನೆಯೇ ಮುನ್ನೆಲೆಗೆ ಬಂದು ನಿಲ್ಲುತ್ತದೆ. ‘ಹೆಣ್ಣು’, ‘ಯಾರಿಗೂ ಕಾಣಲಿಲ್ಲ’, ‘ಸವಾಲು’, ‘ನನ್ನವನಿಗಾಗಿ’, ‘ಭ್ರಮೆ ವಾಸ್ತವ’, ‘ಪುರುಷೋತ್ತಮ’, ‘ಪುತ್ರ ವ್ಯಾಮೋಹ’, …. ಮುಂತಾದ ಕವನಗಳ ತಿರುಳೆ ಹೆಣ್ಣಿನ ಮನಸ್ಸಿನಲ್ಲಿರುವ ಮಾನಸಿಕ ತುಮುಲಗಳು.  “ಅಮ್ಮನ ಗರ್ಭದಿಂದಲೆ ಕಂಡಿರುವೆ ಅಡೆತಡೆಯ ನಂಟು”       ಈ ಅಡೆತಡೆ ಅನ್ನುವುದು ಹೆಣ್ಣಿಗೆ ನಮ್ಮ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ನೀಡಿರುವ ಮರೆಯಲಾಗದಂತಹ ಸುಂದರ ಬಳುವಳಿ. ಗಂಡು ಮಗುವಿನ ಮೋಹದಲ್ಲಿ ಹೆಣ್ಣನ್ನು ಬಲಿ ಕೊಡುವ ಅಮಾನುಷ ಪದ್ಧತಿಗೆ ನಾಂದಿ ಹಾಡಿದವನೆ ಈ ಬುದ್ಧಿವಂತ ಮತಿಹೀನ ಮಾನವ. ಈ ಅತಿಯಾದ ಬುದ್ಧಿವಂತಿಕೆಯ ಫಲವಾಗಿಯೇ ಹೆಣ್ಣು ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಸಾವಿನೊಂದಿಗಿನ ಹೋರಾಟಕ್ಕೆ ಅಣಿಯಾಗುತ್ತಾಳೆ.‌ ಇಲ್ಲಿ ಗಮನಿಸಬಹುದಾದ ಮತ್ತೊಂದು ವಿಷಯವೆಂದರೆ ಸ್ತ್ರೀಯು ತನಗೆ ಅರಿವಿದ್ದೋ, ಅರಿವಿಲ್ಲದೆಯೋ ಪುರುಷ ಪ್ರಧಾನ ಸಮಾಜದ ನಿಲುವುಗಳನ್ನು ಬೆಳೆಸಿಕೊಂಡು ಹೋಗುತ್ತಿರುವುದು. ಹೆಣ್ಣಾದ ತಾಯಿಯೇ ತನ್ನ ಮಕ್ಕಳಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಇಲ್ಲಿಯ ಕವನವೊಂದು ಪ್ರತಿನಿಧಿಸುತ್ತದೆ. “ಅಮ್ಮ ನಿನ್ನ ತೋಳೆಂದು ಆಗಲೆ ಇಲ್ಲ ನನಗೆ ದಿಂಬು ನಿನ್ನ ಮಡಿಲು ಹಾಸಿಗೆಯಾದದ್ದು ನನಗೆ ನೆನಪಿಗಿಲ್ಲ….!” ಇದು‌ ತಾಯಿಯ ಪ್ರೀತಿಯಿಂದ ವಂಚಿತವಾದ‌ ಹೆಣ್ಣು ಮಗುವಿನ ಮಾನಸಿಕ ತೋಳಲಾಟ…!          ನನ್ನವನಿಗಾಗಿ ಕವನದ ಶೀರ್ಷಿಕೆಯು ಪ್ರೀತಿ, ಪ್ರೇಮವನ್ನು ಸೂಚಿಸಿದರೂ ತನ್ನೊಡಲೊಳಗೆ ಹೆಣ್ಣಿನ ಅಸಹಾಯಕತೆ, ನೋವು, ಅವಮಾನಗಳನ್ನು ಬಚ್ಚಿಟ್ಟುಕೊಂಡಿದೆ. “ನಾನು ಬರೆಯುತ್ತೇನೆ ಕವನ  ನನ್ನವನಿಗಾಗಿ ಹಸುವಂತೆ ತೋರಿದ ಹುಲಿಯಂತ ಕ್ರೌರ್ಯಕ್ಕಾಗಿ ಆಸರೆಯಾಗ ಬೇಕಾದವನಲ್ಲಿ ನಾ ಸೆರೆಯಾಗಿದ್ದಕ್ಕಾಗಿ  !”      ಇಲ್ಲಿ ಹೆಣ್ಣಿನ ತಣ್ಣನೆಯ ಪ್ರತಿಭಟನೆ ಇದೆ. ಪ್ರತಿಯೊಂದು ಹೆಣ್ಣು ನೂರಾರು ಕನಸುಗಳೊಂದಿಗೆ ಗಂಡನ ಮನೆಯನ್ನು ಪ್ರವೇಶಿಸುತ್ತಾಳೆ. ಆದರೆ ತಾನು ಬಂದದ್ದು ಪ್ರೇಮಿಯ ಮನೆಗಲ್ಲ, ಗಂಡಿನ ಸೆರೆಮನೆಗೆ ಎಂದು ಅನುಭವವಾಗುತ್ತಲೇ ಕುಸಿದು ಬೀಳುತ್ತಾಳೆ.         ಹೆತ್ತವರು.. ಹೃದಯದ ಬಂಧ. ಸಂಬಂಧಗಳ ತವರೂರು. ಆದರೆ ಅದೆಕೋ ಅಮ್ಮನ ಮಮತೆಯಲ್ಲಿ ಅಪ್ಪನನ್ನು ನಾವು ಮರೆಯುತ್ತಿರುವುದೆ ಹೆಚ್ಚು…!! ಸಮಾಜದ ಪ್ರತಿಬಿಂಬವಾದ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಯಾರಿಗೂ ಕಾಣಲಿಲ್ಲ ಶೀರ್ಷಿಕೆಯ ಕವನವು ತಾಯಿಯ ವೇದನೆಯನ್ನು ಸಾರುತ್ತ ಹೋಗುತ್ತದೆ. ” ಜಗತ್ತಿಗೆ ಒಂದು ದಾರಿಯಾದರೆ ತನ್ನದೇ ರಾಜಮಾರ್ಗ ಎನ್ನುವ ಒಂದೊಮ್ಮೆ ಕುಡಿತದ ನಶೆಯಲ್ಲಿ ಮಗದೊಮ್ಮೆ ಸ್ವಯಾರ್ಜಿತ ಭ್ರಮೆಯ ಅಮಲಿನಲ್ಲಿ ಇದ್ದ ಅಪ್ಪನ ಬಿಟ್ಟಂತೆ ಹಿಡಿಯುತ ಹಿಡಿದಂತೆ ಬಿಡುತ ಗಂಟು ನಂಟಿನಾಟದಲಿ ಅವ್ವ ಜರ್ಜರಿತವಾದದ್ದು ಯಾರಿಗೂ ಕಾಣಲೇ ಇಲ್ಲ” ‌ ಇಲ್ಲಿ ಅಚ್ಚೊತ್ತಿರುವ ಭಾವ ಸಮಾಜದೆಲ್ಲೆಡೆ, ಕುಟುಂಬದೆಲ್ಲೆಡೆ ಕಾಣುತ್ತೇವೆ. ಮಕ್ಕಳೊಂದಿಗಿನ ತಾಯಿಯ ನಂಟೆ ಅವಳನ್ನು ಕುಟುಂಬದಲ್ಲಿ ಇರುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಹೆಣ್ಣಿಗೆ ಕುಟುಂಬ ಮುಖ್ಯವಾದಷ್ಟು ಗಂಡಿಗೆ ಮುಖ್ಯವಾಗಲೇ ಇಲ್ಲ ಎಂಬುದಕ್ಕೆ ನಮ್ಮ ಸಮಾಜವೇ ಸಾಕ್ಷಿ…!!       ಕುಟುಂಬವನ್ನು ಪ್ರೀತಿಸುವ ಶಿಲ್ಪಾ ಮ್ಯಾಗೇರಿಯವರ ಕವನ ಸಂಕಲನದಲ್ಲಿ ಹಲವು ಕವನಗಳು ಕೌಟುಂಬಿಕ ಆಪ್ತತೆಯ ಮುದವನ್ನು ನೀಡುತ್ತವೆ. ತಂದೆ, ತಾಯಿ, ಗಂಡ, ಮಕ್ಕಳು, ಗೆಳತಿ… ಎನ್ನುವ ಹಲವು ಸಂಬಂಧಗಳ ಕುರಿತು ಕವನಗಳು ಆಪ್ತ ಸಮಾಲೋಚನೆ ಮಾಡುತ್ತವೆ. ಸಂಕಲನದ ಮೊದಲ ಕವನವೇ ಅಪ್ಪ ಅಪ್ಪನ ಗುಣಗಾನ ಮಾಡುತ್ತ, ಅಪ್ಪ ನಡೆದು ಬಂದ ರೀತಿ, ಮಕ್ಕಳನ್ನು ಬೆಳೆಸಿದ ಕ್ರಮ, ಕುಟುಂಬವನ್ನು ಮುನ್ನಡೆಸಿದ ಬಗೆ… ಎಲ್ಲವೂ ಕಣ್ಣಿಗೆ ರಾಚುವಂತೆ ವರ್ಣಗಳಲ್ಲಿ ಸೆರೆ ಹಿಡಿದು ನಿಲ್ಲಿಸಿದ್ದಾರೆ. ಆದರೆ ಅಪ್ಪನ ಹೀರೋಯಿಸಂ ನ ಹಿಂದಿರುವ ನೋವು, ತೊಳಲಾಟ, ದುಗುಡಗಳು ಮರೆಯಾಗಿವೆ. ಮೌಲ್ಯಗಳ ಪಾಲನೆ ಸರಳವಾದುದಲ್ಲ. ಆ ದಾರಿಯು ಬರೀ ಕಲ್ಲು ಮುಳ್ಳುಗಳನ್ನೇ ಹೊಂದಿರುತ್ತದೆ. ಆ ಹಾದಿಯಲ್ಲಿ ಸಾಗುವಾಗಿನ ಗಾಯಕ್ಕೆ ಸಾಹಿತ್ಯ ಸಾಕ್ಷಿಯಾಗಬೇಕಿದೆ…! ” ಕಾಯಕವೇ ಕೈಲಾಸವೆಂದು. ಎಂದೂ ಹೇಳದೆ  ಆಚರಣೆಗೆ ತಂದವ”     ಕಣ್ಣಿಗೆ ಕಂಡ ದೃಶ್ಯಗಳಿಗಿಂತಲೂ ಕಾಣದೇ ಇರುವ ಚಿತ್ರಣವನ್ನು ಬಿಡಿಸುವುದೆ ಕವಿ/ಕವಯಿತ್ರಿಗೊಂದು ಸವಾಲು. ಅದು ಇಲ್ಲಿ ಮರೆಯಾಗಿದೆ. ಯಾವ ಗುಣವೂ ಉದ್ಭವಮೂರ್ತಿಯಲ್ಲ. ಗುಣಗಳಿಗಿಂತ ಗುಣಗಳ ಅನುಷ್ಠಾನದ ದಾರಿಯ ಮೇಲೆ ಬೆಳಕು ಚೆಲ್ಲುವ ಅವಶ್ಯಕತೆ ಇದೆ.     ತಾಯಿ, ಮಗುವನ್ನು ಬೆಳೆಸುವ ರೀತಿ ಅನ್ಯೋನ್ಯ. ತಾಯಿಯೇ ಮೊದಲ ಗುರು. ಈ ಕಾರಣಕ್ಕಾಗಿಯೇ ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅವಿಸ್ಮರಣೀಯ.. ! ಈ ನೆಲೆಯಲ್ಲಿ ತಾಯಿಯ ಹರಕೆ ಕವನವು ಓದುಗರ ಗಮನವನ್ನು ಸೆಳೆಯುತ್ತದೆ. ಅವಳು ಹೇಳುವ ಬುದ್ಧಿವಾದವು ಸಾರ್ವತ್ರಿಕ ಅನಿಸುವಷ್ಟು ಆಪ್ತವಾಗಿ ಮೂಡಿಬಂದಿವೆ. ” ಹಾಲು ಕುಡಿದರೂ ಬದುಕದ ಕಾಲವಿದು ವಿಷದ ನಶೆಯ ಮಾಡಬೇಡ ಕಂದ ಬದುಕಲಾಗದು ಜಯವ ಗಳಿಸಲಾಗದು  !” ವಾಸ್ತವ ಸಮಾಜದ ಚಿತ್ರಣದೊಂದಿಗೆ ಆತಂಕವನ್ನು ವ್ಯಕ್ತಪಡಿಸುತ್ತಿದೆ ಈ ಕವನವು.       ಈ ಸಂಕಲನದ ಕೊನೆಯ ಕಾವ್ಯ ಕರುಳ ಬಳ್ಳಿ ಆಪ್ತವೆನಿಸುತ್ತದೆ. ಇದು ಕವಯಿತ್ರಿ ಶಿಲ್ಪಾ ರವರ ಮಗ ಚಿ‌. ತುಷಾರ್ ಬರೆದಿರುವುದು..! ತಾಯಿ-ಮಗುವಿನ ಬಾಂಧವ್ಯ ಮನಸ್ಸಿಗೆ ಮುದ ನೀಡುತ್ತದೆ. ಇದರೊಂದಿಗೆ ವಿಶೇಷ ಗಮನ ಸೆಳೆಯುವ ಮತ್ತೊಂದು ಕಾವ್ಯವೆಂದರೆ ಎರಡು ನಕ್ಷತ್ರಗಳು ಇಲ್ಲಿ ತಂದೆಯ ಭಾವ ತನ್ನ ತಾಯಿ ಮತ್ತು ಮಗಳ ರೂಪದಲ್ಲಿ ಅನಾವರಣಗೊಂಡಿದೆ.        ಪ್ರೀತಿ… ಜೀವನದ ಸ್ಥಾಯಿ ಭಾವ. ಸಾಹಿತ್ಯದ ಎಲ್ಲ ಪ್ರಕಾರಗಳ ಮೂಲ ಆಕರವೆ ಈ ನವಿರಾದ ಪ್ರೀತಿ. ಈ ಸಂಕಲನದಲ್ಲಿ ಹಲವು ಕವನಗಳು ಪ್ರೀತಿ, ಪ್ರೇಮ, ಪ್ರಣಯ, ವಿರಹ…. ವನ್ನು ಹೃದಯದ ಕ್ಯಾನ್ವಾಸ್ ನಲ್ಲಿ ಸ್ಥಿರವಾಗಿ ಎರಕಹೊಯ್ಯುವಲ್ಲಿ ಯಶಸ್ವಿಯಾಗಿವೆ. “ನೂರೊಂದನೆಯ ನೋವು ನೀನು” ಎನ್ನುವ ಚರಣವು ಪ್ರೀತಿಯ ಆಳ, ಹರವನ್ನು ಪ್ರತಿಬಿಂಬಿಸುತ್ತದೆ.  “ಗೆಳೆಯ ಎದೆ ಭಾರವಾಗಿದೆ ನಿನ್ನ ಹೆಗಲು ಬೇಕು ಬಿಕ್ಕಳಿಸಿ ಹಗುರಾಗಲು” ಎನ್ನುವ ಪಂಕ್ತಿಗಳು‌ ಪ್ರೀತಿಯ ನಿವೇದನೆಯನ್ನು ಸಿಂಪಡಿಸುತ್ತವೆ. ಪ್ರೀತಿಯೊಂದಿದ್ದರೆ ಸಾಕು ಮನುಷ್ಯ ಏನನ್ನಾದರೂ ಗೆಲ್ಲಬಹುದು ಎಂಬುದನ್ನು ಸಾರುತ್ತದೆ. ‘ತುಂಬಿಕೊಂಡಿತು’, ‘ಒಲವ ಸುಳಿ’, ‘ನಾನು ನನ್ನವನು ಮತ್ತು ಚಂದ್ರ’, ‘ಆತ್ಮ ಸಖ’, ‘ನಿವೇದನೆ’, ‘ಅನುರಣನ’, ಕವನಗಳು ಮೆದುವಾದ ಪ್ರೇಮಲೋಕದಲ್ಲಿ ಓದುಗರನ್ನು ವಿಹರಿಸಲು ಪ್ರೇರೇಪಿಸುತ್ತವೆ. “ವೀಣೆಯಂತೆ ನುಡಿಸಿಬಿಡು ಸಪ್ತ ಸ್ವರವು ಮೇಳೈಸುವಂತೆ” ಈ ಸಾಲುಗಳು ಪ್ರೇಮದ ನಾಕವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಪ್ರೇಮ ರಾಗವನ್ನು ಮೈ ಮನಗಳಲ್ಲಿ ನುಡಿಸುತ್ತದೆ.  ಇದರೊಂದಿಗೆ ಹಲವು ಕವನಗಳು ಜೀವನ ಶ್ರದ್ಧೆಯನ್ನು ಮೂಡಿಸುತ್ತವೆ. ಈ ನೆಲೆಯಲ್ಲಿ ಹಲವು ಸಾಲುಗಳು ಬದುಕಿಗೆ ಪ್ರೇರಣೆ ನೀಡುವಂತೆ ಸಕಾರಾತ್ಮಕವಾಗಿ ಮೂಡಿ ಬಂದಿವೆ. ಕವನಗಳನ್ನು ಓದಿದಾಗ ಸುಭಾಷಿತ, ಸೂಕ್ತಿಗಳ ಅನುಭೂತಿಯನ್ನು ನೀಡುತ್ತವೆ. “ಸುಲಭದಲ್ಲಿ ಗೆಲುವನ್ನು ಎಂದಿಗೂ ಕೊಡಬೇಡ ! ಗೆದ್ದು ಬೀಗುವತನಕ ಉಸಿರು ನಿಲ್ಲಿಸಬೇಡ” “ಸಂಪೂರ್ಣ ಸೋಲಲಾರದ ಮೇಲೆ ಪರಸ್ಪರ ಗೆಲ್ಲುವುದು ಹೇಗೆ” “ಆಮಿಷಗಳಿಂದ ಹೊರಗುಳಿದು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡು”      ಬಾಳು ಸ್ಥಾವರವಾಗಬಾರದು, ಜಂಗಮವಾಗಬೇಕು. ಆದರೆ ಬದಲಾವಣೆಯ ಬಿರುಗಾಳಿಯಲ್ಲಿ ಅಸ್ಮಿತೆಯನ್ನು ತೊರೆಯಬಾರದು. ದುರಂತವೆಂದರೆ ಇಂದು ನಾವು ಆಧುನಿಕತೆಯ ಒಡ್ಡೋಲಗದಲ್ಲಿ ನಮ್ಮ ಮೂಲವನ್ನೇ ಮರೆಯುತ್ತಿದ್ದೇವೆ. ಜಾಗತಿಕರಣದ ಜಾಲದಲ್ಲಿ ಮನುಕುಲ ಸಿಲುಕಿಕೊಂಡ ಪರಿಯನ್ನು ಧಾವಂತದ ಬದುಕು ಕವನವು ಮನಮುಟ್ಟುವಂತೆ ಅಭಿವ್ಯಕ್ತಿಸಿದೆ. ದಿನನಿತ್ಯದ ಓಡಾಟ, ಮುಖವಾಡದ ಜೀವನ, ಮಾನಸಿಕ ತಳಮಳ, ಬಿಸಿಲುಕುದುರೆ ಶಾಂತಿಗಾಗಿ ಪರದಾಟ…. ಇವೆಲ್ಲವನ್ನು ಈ ಸಾಲುಗಳು ತುಂಬಾ ಸಶಕ್ತವಾಗಿ ಹಿಡಿದಿಟ್ಟುಕೊಂಡಿವೆ. “ಎಲ್ಲರೊಟ್ಟಾಗಿ ಕುಳಿತು ಹರಟಿದ್ದ ಕಟ್ಟೆ ಈಗ ಖಾಲಿ ಖಾಲಿಯಾಗಿದೆ”       ಸಾಮಾಜಿಕ ಸ್ಪಂದನೆಯ ನೆಲೆಯಲ್ಲಿ ‘ರೈತ’, ‘ಅಸ್ಪೃಶ್ಯರು’, ಕವನಗಳು ಓದಿಸಿಕೊಂಡು ಹೋಗುತ್ತವೆ.        ಇಲ್ಲಿಯ ಕವನಗಳ ವಿಷಯ, ಭಾಷೆ ಹಾಗೂ ಶೈಲಿಯನ್ನು ಗಮನಿಸಿದಾಗ ನವೋದಯದ ವಿಷಯ, ಭಾಷೆ ಹಾಗೂ ನವ್ಯದ ಶೈಲಿಯನ್ನು ಕಾಣುತ್ತೇವೆ. ಕಾವ್ಯ ಮನೆಯಂಗಳದಿಂದ ಸಮಾಜದ ಮೂಲೆ ಮೂಲೆಗಳನ್ನು ಸ್ಪರ್ಶಿಸಿದಾಗ ಅದು ಪರಿಪೂರ್ಣ ಎನಿಸಿಕೊಳ್ಳುತ್ತದೆ. ಕಾವ್ಯವನ್ನು ಪೂರ್ವಾಗ್ರಹ ಪೀಡಿತರಾಗದೆ ಓದಿದಾಗ ಮಾತ್ರ ರಸಸ್ವಾದ ಸಾಧ್ಯವಾಗುತ್ತದೆ, ಇಲ್ಲದಿದ್ದರೆ ರಸಭಂಗವಾಗುತ್ತದೆ ಎಂಬುದನ್ನು ಇಲ್ಲಿಯ ಹಲವು ಕವನಗಳು ಸಾರಿ ತೋರಿಸುತ್ತವೆ. ಈ ಮಾತು ಮೌನದ ನಡುವೆ ಕಲಾಕೃತಿಯು ಪ್ರತಿಯೊಬ್ಬ ಸಹೃದಯ ಓದುಗನ ಮೌನದೊಂದಿಗೆ ಮಾತಾಡಲಿ ಎಂದು ಹಾರೈಸುತ್ತೇನೆ. ************************************************* ಡಾ. ಮಲ್ಲಿನಾಥ ಎಸ್. ತಳವಾರ

ಮೌನದಲ್ಲಿ ಮಾತುಗಳ ಮೆರವಣಿಗೆ… Read Post »

ಪುಸ್ತಕ ಸಂಗಾತಿ

ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ

ಪುಸ್ತಕ ಸಂಗಾತಿ ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ             ಶಿವಪುತ್ರ ಅಜಮನಿಯವರು ಕಾವ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಳ್ಳುತ್ತಲೇ ಸಮಾಜ ಚಿಂತಕರಾಗಿ ಹೊರಹೊಮ್ಮಿದವರು. ಕ್ರಿಯಾಶೀಲ ಬರಹಗಾರರು. ಸಿಂಗಾಪುರ,ಅಬುದಾಬಿಗಳಂತಹ  ವಿಶ್ವಕನ್ನಡ ಸಮ್ಮೇಳನ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನವನ್ನು ವಾಚನ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಯಾವುದೇ ಕೀರ್ತಿ.  ಸನ್ಮಾನಕ್ಕೆ ಎಂದು ಆಸೆ ಪಟ್ಟವರಲ್ಲ ತುಂಬ ಸರಳ ಜೀವಿ. ಬಡತನದಲ್ಲೆ ಬೆಳೆದರೂ ಅವರ ಸಾಧನೆಗೆ ಅವರ ವಿದ್ವತ್ತಿಗೆ ಬಡತನ ಎಂದು ಅಡ್ಡಿಯಾಗಿಲ್ಲದಂತೆ ಸಾಹಿತ್ಯ ಲೋಕಕ್ಕೆ ತಮ್ಮ ಕೊಡುಗೆಯನ್ನು ನೀಡಿದವರು ಶಿವಪುತ್ರ ಅಜಮನಿ. ವಿಜಯಪುರ ಜಿಲ್ಲೆ ಮುದ್ದೇಬಿಹಾಳದವರು. ಕಾವ್ಯ, ಕತೆ, ನಾಟಕಗಳನ್ನು ಬರೆದಿದ್ದಾರೆ. ಕೆಲವು ತಮ್ಮ ಬರಹಗಳನ್ನೇ ಕಿರುಚಿತ್ರವನ್ನಾಗಿಸಿ  ಸ್ವತಃ ತಾವೇ ಅಭಿನಯಿಸಿದ್ದಾರೆ. ಇಂತಹ ಚಿತ್ರಗಳು ಯಶಸ್ಸನ್ನು ಕೂಡಾ ಪಡೆದುಕೊಂಡಿವೆ. ಅಪರೂಪದಲ್ಲಿ ಅಪರೂಪವಾಗಿ ಕಾಣಿಸಿಕೊಂಡ ಬರಹ ಅವರ ಆತ್ಮಕಥೆ “ ಹೊಲಗೇರಿಯಿಂದ ಹೊರದೇಶಕ್ಕೆ” ಕಥನದ ಶಿರ್ಷಿಕೆಯೇ ಹೇಳುವ ಹಾಗೆ ಇಲ್ಲಿ ದಲಿತ ಸಂವೇದನೆಯನ್ನು ಅನಾವರಣಗೊಳಿಸಿದ್ದಾರೆ. ಕಾವ್ಯ ಬರಹದಿಂದ ಗದ್ಯದ ಕಡೆ ತಮ್ಮ ಒಲವನ್ನು ತೋರಿಸಿ ಆತ್ಮ ಕಥನ ಲೋಕಕ್ಕೆ ಪ್ರವೇಶ ಪಡೆದುಕೊಂಡ ಲೇಖಕ ಶಿವಪುತ್ರ ಅಜಮನಿ. ಹೊಲಗೇರಿಯಿಂದ ಹೊರದೇಶಕ್ಕೆ ಕೃತಿಯು ತುಂಬ ವಿಶಿಷ್ಟ ಮತ್ತು ಮಹತ್ವದ ಕೃತಿಯಾಗಿದೆ. ಶಿವಪುತ್ರ ಅಜಮನಿಯವರ ಇಡೀ ಜೀವನ ವೃತ್ತಾಂತವನ್ನೇ ತೆರೆದಿಟ್ಟಿದ್ದಾರೆ. ಇಂತಹ ಕೃತಿ ಒಬ್ಬ ಲೇಖಕನದ್ದು ಮಾತ್ರವಾಗದೇ ಎಲ್ಲ ದಲಿತರ ಜೀವನವೇ ಆಗಿದೆ. ಮರಾಠಿ ಮೂಲದಿಂದ ಬಂದ ದಲಿತ ಆತ್ಮಕಥನ ಪರಂಪರೆಯನ್ನು ಕನ್ನಡ ಸಾಹಿತ್ಯದ ಪರಪಂಪರೆಯಲ್ಲಿ ಕಂಡಾಗ, ಮರಾಠಿ ಮೂಲವೇ ಇಲ್ಲಿ ಪ್ರಭಾವನ್ನು ಬೀರಿದ್ದು ಎಂದರೆ ಸುಳ್ಳಲ್ಲ. ಅಲ್ಲಿನ ದಲಿತ ಸಂವೇದನೆ, ನೋವು, ನಲಿವು, ಹತಾಶೆ, ಅವಮಾನ, ಕಿತ್ತು ತಿನ್ನುವ ಬಡತನ, ತುತ್ತು ಕೂಳಿಗಾಗಿ ಸಹಿಸಿದ ಅವಮಾನಗಳೆಲ್ಲವೂ ಕೂಡಾ ಇಂದು ನಿನ್ನೆಯದಲ್ಲಾ. ಅರವತ್ತು ಎಪ್ಪತ್ತರ ದಶಕದಿಂದ ಇಲ್ಲಿಯ ವರೆಗೆ ಅದೇ ಹತಾಶೆ ಬದುಕು ಕಣ್ಣೆದುರಿಗೆ ಹಾಗೇ ಇದೆ. ಅದನ್ನು ಶಿವಪುತ್ರ ಅಜಮನಿಯವರ ಆತ್ಮಕತೆ ಮತ್ತೆ ಅನಾವರಣಗೊಳಿಸುತ್ತದೆ. ತನ್ನೊಳಗೆ ತಾನು ಇಣುಕಿನೊಡಿಕೊಳ್ಳುವ ತನ್ನ ಆತ್ಮಸಾಕ್ಷಿ ಪ್ರಜ್ಞೆಯನ್ನು ಸದಾ ಜಾಗೃತಗೊಳಿಸಿಕೊಳ್ಳುತ್ತಲೇ, ಏನಾದರೂ ಸಾಧಿಸಬೇಕೆಂಬ ಛಲ ಹೊತ್ತ ನಾಯಕನನ್ನು ಈ ಆತ್ಮಕಥನದಲ್ಲಿ ಕಾಣುತ್ತೇವೆ. ಶಿವಪುತ್ರ ಅಜಮನಿಯವರು ಹೇಳುವ ಹಾಗೇ ತಮ್ಮ ಜೀವನದಲ್ಲಿ ನಡೆದ ಸತ್ಯಘಟನೆಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ಯಾವುದೇ ಒಂದು ಕೃತಿ ಹೊರಬರಬೇಕಾದರೆ ಆ ಲೇಖಕನಿಗೆ ಸತ್ಯ ಹೇಳುವ ದೈರ್ಯ ಮುಖ್ಯವಾಗುತ್ತದೆ. ಯಾರ ಮುಲಾಜಿಗೂ ಒಳಗಾಗದೇ, ತಮ್ಮ ಮೇಲೆ ಹಾಗೂ ಇಡೀ ಸಮುದಾಯದ ಮೇಲೆ ಆದಂತಹ ಅಸ್ಪ್ರಷ್ಯತೆ,   ನಿಂದನೆ, ಅವಮಾನವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಶಿವಪುತ್ರ ಅಜಮನಿ ಅವರಿಗೆ ತುಡಿತವಿದೆ. ಅವಮಾನದ ವಿರುದ್ಧ ಸಿಟ್ಟು ಸೆಡವು ಇದೆ.ಅಂತೆಲೇ ಅವರು ಬಂಡಾಯ ಏಳುತ್ತಾರೆ. ದಲಿತ ಕೇರಿಯ ಚಿತ್ರಣವು ಇಲ್ಲಿ ಹಾಸುಹೊಕ್ಕಾಗಿದೆ. ಒಂದು ಕಡೆ ಸೂರು ಇಲ್ಲದ ದಲಿತ ಜನಾಂಗಕ್ಕೆ ಶಾಲೆ, ಬೀದಿ ಪಕ್ಕದ ರಸ್ತೆ ,ಗುಡಿ ಗೋಪುರಗಳೇ  ಗತಿ. ಇಂತಹ ಸೂರಿಲ್ಲದ ಅವರ ಬದುಕಿನ ಚಿತ್ರಣವನ್ನು ಹೇಳುತ್ತಾರೆ. ಮಳೆಗಾಲದ ಸಂಧರ್ಭದಲ್ಲಿ ಪಟ್ಟ ಪಾಡನ್ನು ಅನಾವರಣಗೋಳಿಸುತ್ತಲೆ ಆತ್ಮ ಕಥೆ ಪ್ರವೇಶವನ್ನು ಪಡೆದುಕೊಳ್ಳುತ್ತದೆ. ಶಾಲೆಯಲ್ಲಿಯೇ ಅವರ ತಾಯಿ ಮತ್ತು ಇನ್ನಿತರೆ ಮಕ್ಕಳೊಂದಿಗೆ ಬದುಕು ಸಾಗಿಸುವದು ಎಂತವರನ್ನಾದರು ಘಾಸಿಗೊಳಿಸುತ್ತದೆ. ಹಸಿದ ಹೊಟ್ಟೆಗೆ ಹಿಡಿ ಹಿಟ್ಟು ಹುಡುಕುವದು ಕೂಡಾ ಕಡು ಕಷ್ಟವೇ ಆದಂತಹ ಸಂದರ್ಭವನ್ನು “ಸತ್ತ ದನದ ಮಾಂಸಕ್ಕಾಗಿ ಹಗಲಿರುಳು ಕಾಯುವದು, ಸಿಕ್ಕ ಸತ್ತ ದನದ ಮಾಂಸವನ್ನು ಮೃಷ್ಟಾನ್ನವನ್ನಾಗಿ ಹೊಟ್ಟೆ ತುಂಬಿಸಿಕೊಳ್ಳುವ ದಾರುಣ ಚಿತ್ರಣವನ್ನು ಎಂತಹ ಗಟ್ಟಿಗರನ್ನಾದರೂ ಘಾಸಿಗೊಳಿಸದೆ ಇರಲಾರದು. ಒಂದು ಹೊಸ ಬಟ್ಟೆ ಗೊಸ್ಕರ ಸತ್ತ ದನದ ಎಲುಬು(ಮೂಳೆ)ಯನ್ನು ಆಯ್ದು, ಮಾರಾಟ ಮಾಡಿ ಹೊಸ ಬಟ್ಟೆ ಹಾಕಿಕೊಂಡು ತನ್ನ ಆಶೆಯನ್ನು ತೀರಿಸಿಕೊಳ್ಳುವ ಬಗೆ ಮನಸ್ಸನ್ನು ಕಲಕಿ ಬಿಡುತ್ತದೆ. ರಮಜಾನ ಹಬ್ಬದ ಸಂಧರ್ಭದಲ್ಲಿ ಬಿರಿಯಾನಿ ತಿನ್ನಲೇಬೇಕು ಎಂದು ಮಸೀದಿ ಮುಂದೆ ಚಪ್ಪಲಿಗಳನ್ನು ಕಾಯ್ದು ಬಿರಿಯಾನಿ ತಿಂದದ್ದು, ಊರಲ್ಲಿ ಯಾರಾದರೂ ಸತ್ತರೇ ಖುಷಿ ಇಮ್ಮಡಿಯಾಗುವ ಪ್ರಸಂಗ, ಗೋರಿ ಮೇಲಿನ ಗೋಧಿ ಮತ್ತು ಉಪ್ಪು ಸ್ವಲ್ಪ ದಿನಗಳಾದರೂ ಹಸಿವನ್ನು ಹೋಗಲಾಡಿಸಬಲ್ಲದು ಎಂಬ ಇರಾದೆಯಲ್ಲಿಯೇ ಸತ್ತ ಸುದ್ದಿಗಾಗಿ ಕಾಯುವದು, ಹೊಲಗೇರಿಯಿಂದ ಹೊರದೇಶಕ್ಕೆ ಆತ್ಮಕಥೆಯಲ್ಲಿ ಹೇಳಲೇಬೇಕಾದ ಮಹತ್ವದ ವಿಷಯವೆಂದರೆ, ಲೇಖಕನ ತಾಯಿ ನಿಂಬೆವ್ವನ ಪಾತ್ರ ತುಂಬಾ ಗಮನ ಸೆಳೆಯುತ್ತದೆ. ಎಂತಹ ಕಷ್ಟ ಬಂದರು ಮಕ್ಕಳಿಗೆ ಅದರ ಗಾಢ ಅರಿವು ಆಗದಂತೆ, ತನ್ನ ಕುಟುಂಬದ ಜವಾಬ್ದಾರಿ ಹೊತ್ತ ನಿಂಬೆವ್ವಾ ಇಲ್ಲಿ ಮುಖ್ಯವಾಗುತ್ತಾಳೆ. ತಪ್ಪಾದಾಗ ತಿದ್ದುವ ಕಷ್ಟಕ್ಕೆ ಎದೆಗುಂದದ ದಿಟ್ಟ ಮಹಿಳೆಯಾಗಿದ್ದಾಳೆ. ಕೇರಿಯಲ್ಲಿ ಬದುಕನ್ನು ಸಾಗಿಸುವ, ದೇವದಾಸಿಯರೆಂದು ಹಣೆಪಟ್ಟಿ ಕಟ್ಟಿಕೊಂಡು ಅವಮಾನಿತರಾದ ದೇವದಾಸಿಯರ ಮನಸ್ಸನ್ನು ಪರಿವರ್ತಿಸಿ ಅವರನ್ನು ಸರಿದಾರಿಗೆ ತಂದು ಸಮಾಜದಲ್ಲಿ ಒಂದಾಗಿ ಬದುಕುವಂತೆ ಮಾಡಿದ್ದು ಹೀಗೆ ಅನೇಕ ಘಟನೆಗಳನ್ನು ಒಡಮೂಡಿಸಿದ್ದಾರೆ. ಹೊಲಗೇರಿಯಿಂದ ಹೊರದೇಶಕ್ಕೆ ಆತ್ಮಕಥೆಯಲ್ಲಿ ಇಪ್ಪತ್ತಮೂರು ಅಧ್ಯಾಯಗಳನ್ನು ಒಳಗೊಂಡ ಆತ್ಮಚರಿತ್ರೆಯಾಗಿದೆ. ಶಿವಪುತ್ರ ಅಜಮನಿ ಅವರು ಸಮಾಜದಲ್ಲಿ ನಡೆಯುವ ಜಾತಿ ಪಿಡುಗಿನ ಬಗ್ಗೆ ದ್ವನಿ ಎತ್ತಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯ, ಅಚಾತುರ್ಯ, ಅವಮಾನಗಳ ವಿರುದ್ಧ ಧ್ವನಿಯಾಗಿ ಸಮಾಜದಲ್ಲಿ ಎಲ್ಲರೂ ಒಂದೇ ಎಂದು ಹೇಳುವ ಉದ್ದೇಶ ಇಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಶಿವಪುತ್ರ ಅಜಮನಿಯವರು ದಲಿತ ಸಂವೇದನೆಯನ್ನು ಬಿಡಿ ಬಿಡಿಯಾಗಿ ಅಕ್ಷರಗಳ ಮೂಲಕ ಉಣಬಡಿಸುತ್ತಾರೆ. ಇಡೀ ಆತ್ಮಕಥನದ ಉದ್ದಕ್ಕೂ, ಶಿವಪುತ್ರ ಅಜಮನಿಯವರು ನಿರೂಪಕರಾಗಿ ತಮ್ಮದೇ ಶೈಲಿಯ ಉತ್ತರ ಕರ್ನಾಟಕದ ದೇಶಿಯ ಭಾಷೆಯ ಸೊಗಡನ್ನು ಕಟ್ಟಿಕೊಡುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ನೇರಾ ನೇರವಾಗಿ ಬಳಸಿಕೊಂಡು ಓದುಗರಿಗೆ ಹತ್ತಿರವಾಗುತ್ತಾರೆ. ಇಲ್ಲಿನ ಬರಹ ಲೋಹದ ಹಕ್ಕಿಯೊಳಗೆ ತಣ್ಣಗೆ ಪ್ರವೇಶ ಬಯಸಿ ಅಂತರ್ಯದ ಒಳಬೇಗುದಿಗೆ ತಂಪೆರೆಯುವ ಕೆಲಸ ಮಾಡುತ್ತದೆ. ********************************************** ಡಾ.ಸುಜಾತಾ ಸಿ.

ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ Read Post »

ಪುಸ್ತಕ ಸಂಗಾತಿ

‌ಬಾಲಂಗೋಚಿ

ಪುಸ್ತಕ ಸಂಗಾತಿ ‌ಬಾಲಂಗೋಚಿ ಮಕ್ಕಳ ಕವನ ಸಂಕಲನ ‘ಬಾಲಂಗೋಚಿ’ ಮಕ್ಕಳ ಕವನ ಸಂಕಲನ.ಪ್ರಕಟಣೆ: 2019ಪುಟಗಳು: 96ಬೆಲೆ: 90ರೂ.ಪ್ರಕಾಶಕರು: ಗೋಮಿನಿ ಪ್ರಕಾಶನಶಾಂತಿ ನಗರ, ತುಮಕೂರು-2 ದೂರವಾಣಿ: 9986692342 ಮಕ್ಕಳ ಮನವನ್ನು ಅರಳಿಸುವ ಪದ್ಯಗಳು ಅರಳ ಬೇಕು ಚಿಣ್ಣರ ಮನಸು ಮೊಲ್ಲೆ ಹೂವಿನಂತಯೇ ಸಲ್ಲಬೇಕು ಮನುಜ ಕುಲಕೆ ಅದರ ಸೇವೆಯಂತೆಯೇ ಬಾಲ್ಯದ ನೆನಪುಗಳೇ ಎಲ್ಲರಿಗೂ ಒಂದು ರೀತಿಯ ಪ್ರೀತಿ ಹಾಗೂ ಚೈತನ್ಯ ಬಾಲ್ಯ ನೆನಪಾಗುತ್ತಲೇ ನಮ್ಮ ಬದುಕಿನ ಬಹುದೂರದ ಪಯಣವೆಲ್ಲ ಮರೆತಂತಾಗಿ ನಾವೂ ಒಂದು ರೀತಿಯ ಬಾಲ್ಯದ ಖುಷಿಯಲ್ಲಿ ತೇಲತೊಡಗುತ್ತೇವೆ. ಆಗ ಅಲ್ಲಿ ಆಡಿದ ಆಟಗಳು, ಸುತ್ತಾಡಿದ ಜಾಗಗಳು, ಗುಡ್ಡ ಬಯಲುಗಳು, ಹಳ್ಳ ಪ್ರಪಾತಗಳು, ಎತ್ತರದ ಬಂಡೆ, ಕ್ರಿಕೆಟ್ ಚಂಡು, ಪ್ರೀತಿಯ ನಾಯಿಮರಿ, ಬೆಕ್ಕಿನ ಮರಿಗಳಿದ್ದ ಬುಟ್ಟಿ, ಬೀಳುವ ಮಳೆ, ನೀರಿನ ಆಟ, ಶಿಕ್ಷಕರ ಪಾಠ, ಅಮ್ಮನ ಪ್ರೀತಿ ಹಾಗೂ ಸಿಟ್ಟು ಹೀಗೆ ಏನೇನೋ ಕಾಣಲು ತೊಡಗುತ್ತದೆ. ಆಗ ನಾವು ನಮ್ಮ ವಯಸ್ಸನ್ನು ಮರೆತು ಅಲ್ಲಿಯ ದೃಶ್ಯ ಚಿತ್ರಗಳಲ್ಲಿ ಒಂದಾಗುತ್ತ ಆ ಭಾವಕ್ಕೆ ಇಳಿಯಲು ಸಾಧ್ಯವಾಗುವುದು. ಇದನ್ನು ಬಳಸಿಕೊಂಡು ನಾವು ಅಭ್ಯಸಿಸಿದ, ಓದಿದ, ಕಂಡ, ಉಂಡ ಇತರ ಸಂಗತಿಗಳನ್ನು ಸೇರಿಸಿ ಮಕ್ಕಳ ಪ್ರೀತಿಗಾಗಿ ಅವರ ಖುಷಿಗಾಗಿ ಬರೆಯುವುದು  ಮಕ್ಕಳ ಒಲುಮೆಯ ಸಾಹಿತ್ಯವಾಗಿ ರೂಪುಗೊಳ್ಳುತ್ತದೆ. ಇದೆಲ್ಲವನ್ನು ನಮ್ಮಲ್ಲಿರುವ ಬರೆಯುವ ತುಡಿತ ಹಾಗೂ ಶೃದ್ಧೆ ಆಗುಮಾಡುತ್ತದೆ. ಅಂತಹ ತುಡಿತ ಹಾಗೂ ಶೃದ್ಧೆ ಇರದಿದ್ದಲ್ಲಿ ಬಾಲ್ಯಕ್ಕೆ ಮರಳುವ ಭಾವವೇ ಬರದು. ಆದರೂ ತಾನು ಮಕ್ಕಳಿಗೆ ಬರೆಯಬೇಕೆಂಬ ಒತ್ತಡದಲ್ಲಿ ಹೊರಟರೆ ಅದು ನೈಸರ್ಗಿಕ ಕಲಾತ್ಮಕ ರಚನೆ ಆಗದು. ಮೇಲಿನ ಪದ್ಯದ ಸಾಲುಗಳು ಡಾ.ಕೆ.ಬಿ. ರಂಗಸ್ವಾಮಿಯವರದು. ಅವರು “ಬಾಲಂಗೋಚಿ” ಎನ್ನುವ ಮಕ್ಕಳ ಕವನಸಂಕಲನ ರೂಪಿಸಿದ್ದಾರೆ. ವೃತ್ತಿಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿದ್ದಾರೆ. ರಂಗಸ್ವಾಮಿಯವರಲ್ಲಿ ಇರುವ ಬಾಲ್ಯ ಉಳಿಸಿಕೊಳ್ಳುವ ಹಂಬಲ ಪ್ರೀತಿ ಶೃದ್ಧೆಗಳೇ ಈ ಸಂಕಲನ ರೂಪಿಸಲು ಪ್ರೇರಣೆ ಹಾಗೂ ಯಶಸ್ಸು ಆಗಿದೆ. ‘ಅರಳ ಬೇಕು ಚಿಣ್ಣರ ಮನಸು ಮೊಲ್ಲೆ ಹೂವಿನಂತಯೇ’ ಎನ್ನುವ ಇವರ ಸಾಲು ಎಲ್ಲರ ಆಶಯವೂ ಆಗುತ್ತದೆ. ಮಕ್ಕಳ ಪ್ರೀತಿಯಲ್ಲಿ ನಾವು ಸಮಾಜದ ಒಳಿತನ್ನು ಕಾಣುತ್ತೇವೆ. ಕಾಣ ಬೇಕು. ಅವರ ಮನಸ್ಸು ಅರಳುವುದು ಬಹಳ ಮುಖ್ಯ ಅಂತಹ ಅರಳುವಿಕೆ ನೈಸರ್ಗಿಕವಾಗಿರುವಂತಹ ಪರಿಸರ ನಾವು ಉಂಟುಮಾಡಬೇಕು.  ನಾವೆಲ್ಲ ಮಕ್ಕಳಾಗಿದ್ದಾಗ ಹಾವಾಡಿಗನ ಬೆನ್ನು ಹತ್ತಿದವರೇ. ಸುಡುಗಾಡು ಸಿದ್ಧನ ಜಾದು, ತಂಬೂರಿಯೊಂದಿಗೆ ಪದ ಹೇಳುವವನ ಪದ್ಯ, ಸುಗ್ಗಿಯ ಕುಣಿತ ಎಲ್ಲದರಲ್ಲೂ ಖುಷಿಪಡುತ್ತ ಅವರೊಂದಿಗೆ ಮನೆಯಿಂದ ಮನೆಗೆ ಸುತ್ತಾಡಿದ್ದೂ ಇದೆ. ಈ ರೀತಿಯ ಭಾವ ಎಲ್ಲ ಮಕ್ಕಳಲ್ಲೂ ಇರುತ್ತದೆ. ಆದರೆ ಚಿತ್ರ ಬದಲಾಗಬಹುದು ಅಷ್ಟೇ. ಇಲ್ಲಿ ರಂಗಸ್ವಾಮಿಯವರು ಬರೆದುದನ್ನು ನೋಡಿ. ಬೀದಿಗೆ ಬಂದಿತು ದೊಡ್ಡದೊಂದು ಒಂಟೆ ಓಡಿದ ಸುಬ್ಬನು ನಿಲ್ಲಿಸಿ ತಂಟೆ ಮೇಲಿನ ಸಾಲು ಸಹಜವಾಗಿ ಬಂದಿದೆ. ಅದೇ ಪದ್ಯ ಮುಂದುವರಿದು ಕುಳಿತನು ಸುಬ್ಬ ಓಂಟೆಯ ಮೇಲೆ ತೇಲುವ ಅನುಭವ ಅಂಬರದಲ್ಲೇ ಎನ್ನುವ ಸಾಲೂ ಇದೆ. ಹೌದು ಮಕ್ಕಳ ಕಲ್ಪನಾ ವಿಸ್ತಾರ ಅಧಿಕವಾಗಿರುತ್ತದೆ. ದೊಡ್ಡವರಾದ ನಾವು ಬಹಳಸಾರಿ ನಮ್ಮ ಕಲ್ಪನೆಯನ್ನು ತರ್ಕದಿಂದ ಕಟ್ಟಿಹಾಕುತ್ತೇವೆ ಅನಿಸುತ್ತದೆ. ಮಕ್ಕಳು ಅಂಬರದಲ್ಲಿ ತೇಲುತ್ತಾರೆ, ಸಮುದ್ರದಲ್ಲು ಮುಳುಗುತ್ತಾರೆ ಹಾಗೂ ನಕ್ಷತ್ರಗಳನ್ನು ಚೀಲದಲ್ಲಿ ತುಂಬುತ್ತಾರೆ. ಇದೆಲ್ಲಾ ಅವರ ಕಲ್ಪನಾ ವಿಸ್ತಾರ. ಇಂತಹುದೇ ಕಲ್ಪನೆ ಇದೇ ಪುಸ್ತಕದ ಪ್ರಾಣಿ ಪಕ್ಷಿಗಳ ಸಂಗೀತ, ತರಕಾರಿ ಮದುವೆ,  ಮುಂತಾದ ಪದ್ಯಗಳಲ್ಲೂ ಇದೆ.  ‘ಬದನೆ ತಂದೆ ಸೋರೆ ಕಾಯಿ ತೋರಣ ಕಟ್ಟಿತು ತುಪ್ಪೀರೆ’ ಎಂದೆಲ್ಲ ಬರೆದುದು ಸೊಗಸಾಗಿದೆ. ‘ಪುಟ್ಟೇನಳ್ಳಿ ಪುಟ್ಟ ಭಾರೀ ಭಾರೀ ತುಂಟ ಕುದಿಯುವ ಹಾಲು ಕುಡಿಕೇಲಿಟ್ಟು ಬೆಕ್ಕಿನ ಮೂತಿ ಸುಟ್ಟ.’ ಮಕ್ಕಳು ತುಂಟರೆನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವರ ತುಂಟತನವನ್ನು, ಮಕ್ಕಳಿಗೆ ಖುಷಿಯ ಓದನ್ನು ಒಟ್ಟಿಗೆ ತಂದಿರುವ ಸಾಲು ಎಲ್ಲಕರಿಗೂ ಹಿತವಾಗುತ್ತದೆ. ಇರುವೆಯನ್ನು ಕಾಣದೇ ತುಳಿದು ಅದನ್ನು ಅಳಬೇಡ ಎಂದು ಸಂತೈಸುವ ಮಕ್ಕಳ ನಿರ್ಮಲ ಜೀವ ಪ್ರೀತಿ, ಸುಮತಿ ಪದ್ಯದಲ್ಲಿ ಮಕ್ಕಳದೇ ಉದಾಹರಣೆಯ ಮೂಲಕ ಒಳಗಿನ ಸೌಂದರ್ಯವೇ ಬಹಳ ಮುಖ್ಯ ಎಂದು ಹೇಳುವ ರೀತಿ ಎಲ್ಲ ಚಿಂತನೆಗೆ ಹಚ್ಚುವಂತಿವೆ. ಹಸು ಕರು, ಹೊಟ್ಟೆಬಾಕ, ಕಂಬಳಿ ಹುಳು, ಹಕ್ಕಿ ಮತ್ತು ಮರ, ಬೆಳ್ಳಕ್ಕಿ ಮುಂತಾದ ಪದ್ಯಗಳೆಲ್ಲ ತುಂಬಾ ಇಷ್ಟವಾಗುವಂತಿವೆ. ಕುಕ್ಕರಳ್ಳಿ ಕೆರೆಯ ತುಂಬಾ ಸಾಲು ಸಾಲು ಕೊಕ್ಕರೆ ಒಂದೇ ಒಂದು ಹಲ್ಲು ಇಲ್ಲ ಬಾಯಿ ತೆರೆದು ನಕ್ಕರೆ ಕೆರೆಯಲ್ಲಿರುವ ಪಕ್ಷಿಗಳನ್ನು ನೋಡುತ್ತ ನಾವು ಮೈಮರೆತು ಬಿಡುತ್ತೇವೆ. ಅವುಗಳ ಈಜು, ನೀರಲ್ಲಿ ಮುಳುಗುವ ರೀತಿ, ದೋಣಿಯಂತಹ ಚಲನೆ, ಎಷ್ಟೇ ಈಜಿದರೂ ಅವುಗಳ ಮೈ ಒದ್ದೆ ಆಗದೇ ಇರುವುದು, ಅವು ಮೀನು ಮುಂತಾದವನ್ನು ಬೇಟೆಯಾಡುವ ರೀತಿ ಎಲ್ಲ ಮಕ್ಕಳಿಗೆ ಬೆರಗೆ. ಅದೇ ರೀತಿಯ ಬೆರಗನ್ನೇ ಇಲ್ಲಿ ಒಂದು ಹೊಸ ನೋಟದೊಂದಿಗೆ ರಂಗಸ್ವಾಮಿಯವರು ಪದ್ಯವಾಗಿಸಿದ ರೀತಿ ಖುಷಿಕೊಡುತ್ತದೆ. ಒಂದೇ ಒಂದು ಹಲ್ಲು ಇಲ್ಲ ಬಾಯಿತೆರೆದು ನಕ್ಕರೆ ಇದು ಸಹಜವಾದರೂ ಅದು ಉಂಟುಮಾಡುವ ಆನಂದ ಬಹಳ ಮಹತ್ವದ್ದು. ‘ಕೊಕ್ಕರೆ ಇರುವ ಕೆರೆಯ ನೋಟ ತಂಪು ತಂಪು ಕಣ್ಣಿಗೆ ನೀರಿನಲ್ಲಿ ಪುತ ಪುತನೆ ಅರಳಿದಂತೆ ಮಲ್ಲಿಗೆ’ ಹೌದು ಮಲ್ಲಿಗೆ ಅರಳಿದ ನೋಟಕ್ಕಿಂತಲೂ ಮಿಗಿಲಾದ ಸಂತಸ ಕೆರೆಯ ತುಂಬಾ ಕೊಕ್ಕರೆಗಳನ್ನು ನೋಡಿದಾಗ ಅಗದೇ ಇರದು. ಮನಕೆ ಮುದ ನೀಡುವ ಮುದ್ದು ಮುದ್ದು ಕೊಕ್ಕರೆ ಅಮ್ಮನಂತೆ ಮುದ್ದಿಸುವೆ ನೀನು ಕೈಗೆ ಸಿಕ್ಕರೆ. ಅಮ್ಮನನ್ನು ಹೇಗೆ ಪ್ರೀತಿಯಿಂದ ಮುದ್ದಿಸುವೆನೋ ಹಾಗೆ ಮುದ್ದಿಸುವೆ ಎನ್ನುತ್ತ ಮಕ್ಕಳನ್ನು ಖುಷಿಯಲ್ಲಿ ಮೀಯಿಸಿದ್ದಾರೆ. ಇಂತಹ ಗೆಲುವಾದ ಪದ್ಯಗಳ ಸಂಕಲನದ ಮೂಲಕ ರಂಗಸ್ವಾಮಿಯವರು ಮಕ್ಕಳ ಮನಸ್ಸನ್ನು ಅರಳಿಸಲು ಪ್ರಯತ್ನಿಸಿದ್ದಾರೆ. ಅವರೇ ಹೇಳಿರುವಂತೆ ಅವರು ತಮ್ಮ ಅನುಭವದ ಮೂಲಕ ಇದನ್ನು ರೂಪಿಸಿದ್ದಾರೆ. ಇನ್ನಷ್ಟು ಹೊಸ ಓದು ಹಾಗೂ ಒಳ್ಳೆಯ ಪದ್ಯಗಳ ಮಾದರಿಗಳನ್ನು ಕಣ್ಣ ಮುಂದೆ ತಂದುಕೊಂಡು ಅವರು ಮತ್ತಷ್ಟು ಗೆಲುವಿನ ಪದ್ಯಗಳೊಂದಿಗೆ ಬರುತ್ತಾರೆ ಎನ್ನುವುದು ನನ್ನ ಆತ್ಮೀಯ ಅನಿಸಿಕೆ. ಈ ಪದ್ಯಗಳನ್ನು ಕನ್ನಡದ ಮಕ್ಕಳು ಓದಬೇಕು, ಅದಕ್ಕೆ ಹಿರಿಯರು ಸಹಕರಿಸಬೇಕು ಎನ್ನುತ್ತ ಉತ್ತಮ ಕೃತಿಗಾಗಿ ರಂಗಸ್ವಾಮಿಯವರನ್ನು ಅಭಿನಂದಿಸುತ್ತೇನೆ. ************************************************************************     ತಮ್ಮಣ್ಣ ಬೀಗಾರ.

‌ಬಾಲಂಗೋಚಿ Read Post »

ಪುಸ್ತಕ ಸಂಗಾತಿ

ಡಾ.ಅಂಬೇಡ್ಕರ್ ವಾದದ ಆಚರಣೆ

ಪುಸ್ತಕ ಸಂಗಾತಿ ಡಾ.ಅಂಬೇಡ್ಕರ್ ವಾದದ ಆಚರಣೆ ಡಾ.ಅಂಬೇಡ್ಕರ್ ವಾದದ ಆಚರಣೆಲೇಖಕರು– ಡಾ.ಸಿ.ಜಿ.ಲಕ್ಷ್ಮೀಪತಿಪುಟಗಳು– 104ಪುಸ್ತಕದ ಬೆಲೆ– 68 ರೂಪಾಯಿಗಳುಪ್ರಕಾಶನ– ಚಾರು ಪ್ರಕಾಶನಅಡ್ರೆಸ್– # 83, ಪ್ರೈಡ್ ಪ್ಲಾಜಾ ಕಾಂಪ್ಲೆಕ್ಸ್, ಆದರ್ಶ ಕಾಲೇಜ್ ಹತ್ತಿರ, 5 ನೇ ಮುಖ್ಯ ರಸ್ತೆ. ಬೆಂಗಳೂರು. ‘ಡಾ.ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕವು,  ಮತ್ತು ಆ ಪುಸ್ತಕ ಬರೆದ ಡಾ.ಸಿ.ಜಿ.ಲಕ್ಷೀಪತಿ ಅವರ ಬಗೆಗೆ ಒಂದಿಷ್ಟು..! ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ವಿ.ಎಚ್.ಸಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು. ಕನಕಪುರದ ರೂರಲ್ ಕಾಲೇಜು, ಕನ್ನಡ ವಿಶ್ವವಿದ್ಯಾಲಯ ಹಾಗೂ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನಾನುಭವವಿದೆ. ತುಮಕೂರು ಜಿಲ್ಲೆಯ ಮಧುಗಿರಿಯ ಟಿ.ವಿ.ವಿ. ಕಾಲೇಜಿನಲ್ಲಿ ಪದವಿ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಂತರ್ ಶಿಸ್ತೀಯ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಮುಗಿಸಿದರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ‌ ಪಡೆದರು. ಅವರ ಕೃತಿಗಳೆಂದರೆ ಕ್ಯಾಸ್ಟ್ ಕೆಮಿಸ್ಟ್ರಿ, ಚಿತ್ರಲೆ ವೃಕ್ಷ (ಭಾರತದ ಲೈಂಗಿಕತೆಯ ಸಾಂಸ್ಕೃತಿಕ ಕಥನ), ಥಾಯ್  ಲ್ಯಾಂಡ್ ಎಂಬ ಮುಗುಳ್ನಗೆ (ಪ್ರವಾಸ ಕಥನ), ನಿಜ ಭ್ರಮೆಗಳ ರೂಪಕ (ಲೇಖನಗಳ ಸಂಗ್ರಹ), ಮತಾಂತರ ಸತ್ಯಾನ್ವೇಷಣೆ  (ಸಂಪಾದನೆ), ಕರ್ನಾಟಕದ ಸಮಾಜಶಾಸ್ತ್ರ (ಪಿಎಚ್ ಡಿ ಮಹಾಪ್ರಬಂಧದ ಪುಸ್ತಕ ರೂಪ), ಅಂಬೇಡ್ಕರ್ ವಾದದ ಆಚರಣೆ, ಆಧುನಿಕೋತ್ತರ ಮತ್ತು ಮಾರ್ಕ್ಸ್ ವಾದೋತ್ತರ. ಹೀಗೆಯೇ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಸಾಹಿತ್ಯದ ಕೆಲಸದ ಜೊತೆಗೇಗೆನೇ ಜೀವನ ಹೋರಾಟ ಸಾಗಿದೆ..! # ಈಗ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಕುರಿತು ಚರ್ಚಿಸೋಣ…– ದಮನಿತರ ಬಿಡುಗಡೆ ಮಾರ್ಗ ಈ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’..! ಪಾರಂಪರಿಕ ಸಮಾಜಶಾಸ್ತ್ರಜ್ಞರಿಗಿಂತ ವಿಭಿನ್ನವಾದ ಲೋಕದೃಷ್ಟಿಯಲ್ಲಿ ಆಲೋಚಿಸುವ ಚಿಂತಕರಲ್ಲಿ ಒಬ್ಬರಾದ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕ. ಮೊದಲಿಗೇ ವಿಶಿಷ್ಟವಾದ ಕೃತಿ ನೀಡುತ್ತಿರುವ ಡಾ.ಸಿ.ಜಿ.ಲಕ್ಷ್ಮೀಪತಿಯವರು ಮೊದಲಿಗೆ ಪ್ರಸಂಸಾರ್ಹರು. ಚರಿತ್ರೆಯುದ್ದಕ್ಕೂ ಮತ್ತು ಪ್ರಸ್ತುತ ಸಂದರ್ಭದಲ್ಲೂ ಶೋಷಕರ ಕಬಂಧ ಬಾಹುವಿನಲ್ಲಿ ಸಿಲುಕಿ ನಲಗುತ್ತಿರುವ ದಲಿತರು ಒಂದು ಕಡೆ. ಇನ್ನೊಂದು ಕಡೆ ಹಿಂದುಳಿದ ವರ್ಗದವರು. ಅಲ್ಲದೇ ಮಹಿಳೆಯರು, ದಮನಿತರನ್ನು ಬಿಡುಗಡೆಗೊಳಿಸಲು ಇರುವ ಏಕೈಕ ಮಾರ್ಗ ‘ಅಂಬೇಡ್ಕರ್ ವಾದದ ಕ್ರಿಯಾಚರಣೆ’ಯಾಗಿದೆ. ************************************** ಆದರೆ ಅಂಬೇಡ್ಕರ್ ವಾದದ ಆಚರಣೆಯನ್ನು ಜನರು ತಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಅನುಸರಿಸಬೇಕು ಎನ್ನುವುದಕ್ಕೆ ವಾರ್ಗಸೂಚಿಯಾಗಿಯೂ ಆಗಿದೆ ಈ ಪುಸ್ತಕ. ಅಂಬೇಡ್ಕರ್ ವಾದವು ತಾಂತ್ರಿಕವಾಗಿ ಪಠಣದ ಆಚರಣೆ ಮಾತ್ರವಾಗದೇ ಶೋಷಕರ ಅಂದರೆ ಬ್ರಾಮಣ್ಯ ಪ್ರಜ್ಞೆಯ ವಿರುದ್ಧ ಸತತವಾಗಿ ಸೆಣಸಾಡುವ ಮೂಲಕ ದಮನಿತರ ಪರವಾದ ಆಶಯಗಳನ್ನು ಈಡೇರಿಸುವಲ್ಲಿ ಮತ್ತು ಶೋಷಣೆಯಿಂದ ಬಿಡುಗಡೆಗೊಳಿಸುವಲ್ಲಿ ಅಂಬೇಡ್ಕರ್ ವಾದದ ತಿಳಿವು ಈ ಪುಸ್ತಕದಲಿದೆ ಅದರ ತಿಳುವು. ಅರವು ಮತ್ತು ಕ್ರಿಯಾಶೀಲತೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುವ ಪ್ರಣಾಳಿಕೆಯಂತಿದೆ ಈ ಅಂಬೇಡ್ಕರ್ ವಾದದ ಪುಸ್ತಕವು. ಕಿರಿದರಲ್ಲಿ ಹಿರಿದನ್ನು ಹೇಳುವ ಈ ಹೊತ್ತಿಗೆಯನ್ನು ಪ್ರತಿಯೊಬ್ಬರೂ ಓದಲೇಬೇಕಾದ ಮಹತ್ವದ ಸಂಗತಿಗಳನ್ನು ಒಳಗೊಂಡಿದೆ ಈ ಪುಸ್ತಕ. ಮನುವಾದ ಸಂಸ್ಕೃತಿಯ ಪ್ರಣೀತ ಬ್ರಾಹ್ಮಣ್ಯಶಾಹಿಯ ಆಕ್ರಮಣಕಾರಿತನವನ್ನು ಹಿಮ್ಮೆಟ್ಟಿಸುವ, ಅದರಿಂದ ಬಿಡುಗಡೆಗೊಳ್ಳುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಾದ ಒಂದು ಅಸ್ತ್ರವಾಗಬಲ್ಲದು ಎನ್ನುವುದು ಇಲ್ಲಿನ ಬರಹಗಳೆಲ್ಲವೂ ವಿವರಿಸುತ್ತವೆ. ಅಷ್ಟೇ ಅಲ್ಲದೇ ಡಾ.ಸಿ.ಜಿ.ಲಕ್ಷ್ಮೀಪತಿಯವರು ‘ಅಂಬೇಡ್ಕರ್ ವಾದದ ಆಚರಣೆ’ಯು ಮಾರ್ಷಲ್ ಆರ್ಟ್ಸ್ ಇದ್ದಹಾಗೆ. ಎದುರಾಳಿಯನ್ನು ಮಣಿಸುವಾಗ ಒಂದೇ ಒಂದು ತಂತ್ರ ಬಳಸುದಿಲ್ಲ ಅಂಬೇಡ್ಕರ್ ವಾದವು ಎಂದು ವಿವರಿಸುತ್ತಾರೆ ಡಾ.ಸಿ.ಜಿ.ಲಕ್ಷ್ಮೀಪತಿ ಅವರು. ಮೂರು ಭಾಗಗಳಲ್ಲಿ ಹರಡಿಕೊಂಡಿರುವ ಈ ಕೃತಿಯ ಮೂದಲ ಭಾಗದಲ್ಲಿ ಅಂಬೇಡ್ಕರ್ ವಾದದ ವಿವರಣೆ. ಸೈದ್ಧಾಂತಿಕತೆಯನ್ನು ವಿವರಿಸಿದರೆ ಎರಡನೇ ಭಾಗದಲ್ಲಿ ಹೆಸರಾಂತ ಚಿಂತಕರಾದ ಪಾರ್ವತೀಶ್ ಬಿಳಿದಾಳೆ ಅವರ ಹಿನ್ನುಡಿ ಇದೆ. ಸುದೀರ್ಘವಾದ ಹಿನ್ನುಡಿಯು ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಈ ಬರಹದ ಆಳ-ಅಗಲ ಮತ್ತು ವೈಶಿಷ್ಟ್ಯವನ್ನು ಬಹಳ ಗಂಭೀರವಾಗಿ ಬರೆದ ಭಾಷ್ಯವಾಗಿದೆ. ಮತ್ತೂ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಆಲೋಚನೆಯ ಮುಂದುವರಿಕೆಯೂ ಆಗಿದೆ. ಹಾಗಾಗಿ ಕೃತಿಯನ್ನು ಪ್ರತಿಯೊಬ್ಬರೂ, ಅದರಲ್ಲೂ ಯುವಜನತೆ ಓದಲೇಬೇಕಾದ ಕೃತಿಯಾಗಿದೆ. ಮೂರನೇ ಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಆಕಾಶದೆತ್ತರಕ್ಕೆ ಬೆಳೆದ, ಆಲದ ಮರದಂತೆ ಆವರಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಭವ, ಅಧ್ಯಯನದ ಅಘಾದತೆ, ಗಂಭೀರತೆ, ವಿಸ್ತಾರ, ಓದಿನ ವ್ಯಾಪಕತೆಯ ಹರವು ಎಂಥದ್ದು ಎನ್ನುವುದನ್ನು ತಿಳಿಯಪಡಿಸುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ತಮ್ಮ ಬರಹದಲ್ಲಿ ದಾಖಲಿಸಿದ ಉಲ್ಲೇಖಗಳ ಮಾಹಿತಿಯನ್ನು ನೀಡಿರುವುದು ಅವರ ಘನತೆಯನ್ನೂ ಮತ್ತಷ್ಟೂ ಹೆಚ್ಚಿಸುತ್ತದೆ..! ಎಲ್ಲರೂ ಕೊಂಡು ಓದಿ ಕ್ರಿಯಾಶೀಲ ಆಚರಣೆಗೆ ಕಿಂಚಿತ್ತಾದರೂ ತೊಡಗಿಸಿಕೊಂಡರೆ ಆ ಮೂಲಕ ಮೂಲಕ ಅಂಬೇಡ್ಕರ್ ಅವರ ತಿಳಿವಿಗೂ, ಕೃತಿಕಾರರ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಬರಹಕ್ಕೂ ಗೌರವ ತಂದಂತಾಗುತ್ತದೆ ಅಂತ ಹೇಳುತ್ತಾ ಈ ವಿಮರ್ಶಾ ಬರಹ ಮುಗಿಸುತ್ತೇನೆ… ****************************** ಕೆ.ಶಿವು.ಲಕ್ಕಣ್ಣವರ

ಡಾ.ಅಂಬೇಡ್ಕರ್ ವಾದದ ಆಚರಣೆ Read Post »

ಪುಸ್ತಕ ಸಂಗಾತಿ

ವಸುಂಧರಾ

ವಸುಂಧರಾ ಕಾದಂಬರಿ ಕುರಿತು ಬಾಳೆಯ ಹಣ್ಣನ್ನು ತಿಂದವರೆಸೆವರು, ಸಿಪ್ಪೆಯ ಬೀದಿಯ ಕೊನೆಗೆ ಕಾಣದೆ ಕಾಲಿಟ್ಟು ಜಾರುವರು ಅನ್ಯರು,_ ಕಷ್ಟವು ಬರುವುದೇ ಹೀಗೆ. ಎನ್ನುವುದೊಂದು , ಅನುಭವದ ನುಡಿಮುತ್ತು. ನಂಬಿಕೆ ಮತ್ತು ಮೂಡ ನಂಬಿಕೆಯ ನಡುವೆ ಅಪಾರ ವ್ಯತ್ಯಾಸವಿದೆ ಹಿಂದಿನಿಂದಲೂ ಈಗಲೂ ಜನ ಸಮುದಾಯದೊಳಗೆ ಮೂಢನಂಬಿಕೆಯ ಕಾರಣದಿಂದಾಗಿ ಆಗಿ ಹೋಗಿರುವ ಅನಾಹುತಗಳೇನೂ , ಕಡಿಮೆ ಇಲ್ಲ. ಮೊನ್ನೆ ಮೊನ್ನೆ ತಾನೆ ಕೇಳಿದ್ದು , ದೆವ್ವ ಬಿಡಿಸುವೆನೆಂದು  ಹೆಣ್ಣುಮಗಳೊಬ್ಬಳ  ಪ್ರಾಣವನ್ನೇ ಬಲಿತೆಗೆದುಕೊಂಡ ಜ್ವಲಂತ ಉದಾಹರಣೆ ನಮ್ಮ ಕಣ್ಣಮುಂದಿದೆ. ಹೀಗಿರುವಾಗ ಜಯಂತಿ ರವರ ವಸುಂದರ ಕಾದಂಬರಿ ಮೂಢನಂಬಿಕೆಗೆ ಬೆಳಕು ಚೆಲ್ಲಿ ಇಡೀ ಸಮುದಾಯ ಕಲಂಕಿನಿ ಎಂದು ಅಪಮಾನ ತೇಜೋವಧೆ ಮಾಡಿ ನಿರ್ಲಕ್ಷ ಗೊಳಿಸಿ ಮಾತಿನಿಂದಲೇ ಕೊಂದು  ಜೀವಂತ ಹೆಣವನ್ನಾಗಿ ಮಾಡಿದಂತಹ ಸಂದರ್ಭದಲ್ಲಿ ನೊಂದ ಮನಕ್ಕೆ  ಸಾಂತ್ವನವಷ್ಟೇ  ಅಲ್ಲ ಎಲ್ಲಾ ಸಂಕೊಲೆಗಳಿಂದ ಬಿಡಿಸುವುದು ಅಷ್ಟೇ ಅಲ್ಲ ಇಡೀ ಸಮುದಾಯವನ್ನು  ಬದಲಾಯಿಸಿ ಮೂಢನಂಬಿಕೆಯಿಂದ ಹೊರಬರುವಂತೆ ಮಾಡಿ ಅವರೆಲ್ಲರೂ ಅವಳನ್ನು ಗೌರವದಿಂದ ಕಂಡು ಪಶ್ಚಾತ್ತಾಪ ಪಡುವಂತೆ  ಮಾಡುವ ಅಪೂರ್ವ ಅಸಾಧಾರಣ ನಿರೂಪಣಾ ಶೈಲಿ ಯ ಸುಂದರ ಕೃತಿಯೇ ” ವಸುಂಧರಾ”-ಕಾದಂಬರಿ ಎಂದು ಹೇಳಬಹುದು. ಬಸವಣ್ಣನವರ ಒಂದು ಮಾತಿದೆ  ಕೈಲಾಸ ದೊಡ್ಡದಲ್ಲ/ ಕಾಯಕ ದೊಡ್ಡದು ಧರ್ಮ ದೊಡ್ಡದಲ್ಲ/ ದಯೆ ದೊಡ್ಡದು. ಅರಿವು ದೊಡ್ಡದಲ್ಲ / ಆಚಾರ ದೊಡ್ಡದು ಅಧಿಕಾರ ದೊಡ್ಡದಲ್ಲ  /ಅಭಿಮಾನ ದೊಡ್ಡದು ಆಸ್ತಿ ದೊಡ್ಡದಲ್ಲ  / ಆರೋಗ್ಯ ದೊಡ್ಡದು ಸನ್ಮಾನ ದೊಡ್ಡದಲ್ಲ / ಸಂಸ್ಕಾರ ದೊಡ್ಡದು ಹಣ ದೊಡ್ಡದಲ್ಲ / ಗುಣ ದೊಡ್ಡದು ವಿದ್ಯೆ ದೊಡ್ಡದಲ್ಲ  /ವಿನಯ ದೊಡ್ಡದು ಅನುಭವ ದೊಡ್ಡದು ಎಂಬ ಮಾತುಗಳಂತೆ ಒಂದೊಂದು ಅಧ್ಯಾಯಗಳಲ್ಲೂ , ಸ್ನೇಹ ಪ್ರೀತಿ ಆಚಾರ ನಡವಳಿಕೆ ಸಂಪ್ರದಾಯ ಸಂಭ್ರಮ ಎಲ್ಲವನ್ನು ಸುಮಧುರ ಹದದಲ್ಲಿ ಹಾಕಿ  ಪಾಕಗೊಳಿಸಿ  ಅಚ್ಚಿಗೆ ಹಾಕಿ  ಎರಕಹೊಯ್ದ ಅಪೂರ್ವ ಕೃತಿಯೇ   ವಸುಂಧರ ಅನ್ನುವುದು ಕೈಗೆತ್ತಿಕೊಂಡ ಕೆಲವೇ  ನಿಮಿಷಗಳಲ್ಲಿ  ನಮಗೆ ಗೋಚರಿಸುತ್ತದೆ.  ಅಂತಹ ಅಸಾಧಾರಣವಾದ ಸಂಭಾಷಣೆ ವಿವರಣೆ ಅದರಲ್ಲಿ ಅಡಕವಾಗಿದೆ ಒಂದೇ ಗುಕ್ಕಿಗೆ ವಿರಾಮ ನೀಡದೆ ಓದಿಸಿಕೊಳ್ಳುವ ಅಯಸ್ಕಾಂತೀಯ ಶಕ್ತಿ ಇದರಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಪಾತ್ರಪೋಷಣೆ ಯ ಅಭಿವ್ಯಕ್ತಿಯ ಮಹಾಪೂರವೇ , ವಿಶೇಷ ತಿರುವುಗಳ ಚೈತನ್ಯವೇ ವಸುಂದರ ಕಾದಂಬರಿಯ ವಿಶೇಷ ಶಕ್ತಿಯಾಗಿದೆ ತಮ್ಮ ಅಸಾಧಾರಣ ಪ್ರತಿಭೆಯಿಂದ ಒಂದೊಂದು ಪಾತ್ರಕ್ಕೂ ಜೀವ ತುಂಬುತ್ತ ಕಣ್ಮುಂದೆಯೇ ನಡೆದಿದೆ ಎನ್ನುವಂತೆ ಎಷ್ಟೋ ಘಟನೆಗಳನ್ನು ಕಾಕತಾಳಿಯ ಎನ್ನಬಹುದಾದ ಸನ್ನಿವೇಶಸಂಗತಿಗಳನ್ನು, ಸೂಕ್ಷ್ಮಾತಿ  ಸೂಕ್ಷ್ಮವಾಗಿ , ವಿವರಿಸುತ್ತಾ ನಡೆದಿರುವ ರೀತಿ  ವಿಭಿನ್ನವಾಗಿದ್ದು , ಸೋಜಿಗವೆನಿಸುತ್ತದೆ. ಇಲ್ಲಿ ಬರುವ ಮುಖ್ಯ ಪಾತ್ರಗಳೆಂದರೆ ಕಥಾನಾಯಕಿ ವಸುಂದರ ಕಥಾನಾಯಕ ದಿನಕರ್ ಅವನ  ಊರು ಗುರಪುರ  ಇವನ ಸಹೋದರ ಸುಧಾಕರ , ಸಹೋದರಿ ,ತಾಯಿ , ದಿನಕರನ ಸ್ನೇಹಿತ ರಮಾನಾಥ ತಾಯಿ ಸುಂದರಮ್ಮ ಅಜ್ಜಿ ,ಹೆಂಡತಿ ಜಲಜ ,ಮಕ್ಕಳಾದ ಸರಿತ ಸವಿತಾ ಸಹೋದರ ಸೂರ್ಯ ಗಿರಿಜಾ ಮನೆಕೆಲಸದ ಹುಡುಗಿ ರಮಾನಾಥ ನ ಅತ್ತಿಗೆಯೇ ವಸುಂಧರಾ . ಜ್ಞಾನಮೂರ್ತಿ ಅರ್ಚಕರು ಮತ್ತು ಅವರ ಸಂಸಾರ ಊರ ಗೌಡ ರು ಹಾಗೂ ಊರಿನ ಗ್ರಾಮಸ್ಥರು , ಬಂಧು ಬಳಗದವರು .    ಹೀಗೆ ಇವುಗಳ ನಡುವೆ ಹೆಣೆದುಕೊಂಡ ಕರುಳುಬಳ್ಳಿ ಸಂಬಂಧಿತ  ಪಾತ್ರಗಳೆಂಬ  ದಾರಕ್ಕೆ ಅಕ್ಷರಗಳನ್ನು, ಭಾವನೆಗಳನ್ನು ,ಪೋಣಿಸುತ್ತ ಸಾಗಿದ ಬರವಣಿಗೆಯು ನಗುವಿನ ಅಳುವಿನ ನೋವಿನ ಏಳಿಗೆಯ ಕಾನೂನಿನ ಆಡಳಿತದ ಹಳ್ಳಿಯ ಹಟ್ಟಿಯ ಆಡಳಿತದ ಭಾವನೆಗಳನ್ನು ತಿರುವುಗಳ ನೋಟವನ್ನು ನಯ ನಡತೆ ವಂಚನೆ ದುರಾಸೆ ಬಾಯಾಳಿತನ   ಬೈಗುಳ ಎಲ್ಲವನ್ನೂ ಪ್ರಬುದ್ಧವಾಗಿ ಲಯಬದ್ಧವಾಗಿ ಕಟ್ಟುತ್ತಾ ಮನಮುಟ್ಟಿ  ತಟ್ಟಿ ಅಬ್ಬಾ ಶಬ್ಬಾಸ್ ಎಂದು ಉದ್ಗಾರ ತೆಗೆಯುವಂತೆ ಇದ್ದು , ಒಂದೇ ಗುಕ್ಕಿಗೆ ಓದಿಸಿಕೊಳ್ಳುವ ಆಕರ್ಷಣೆಯನ್ನು ಕೊನೆಯವರೆಗೂ ಕಾಪಾಡಿಕೊಂಡಿದೆ. ಪರಂಪರೆ ಮತ್ತು ವರ್ತಮಾನ ಎರಡನ್ನು ಬಳಸಿಕೊಳ್ಳುತ್ತಾ ಇಂದಿನ ಸಂವೇದನೆಗೆ ಹಿಂದಿನದನ್ನು ಬೆರೆಸಿ ಸಮಕಾಲೀನ ಸ್ಪಂದನೆಗೆ ಹಾಗೂ ಅಕಾಡೆಮಿಕ್ ಶಿಸ್ತಗೆ , ಒಳಗೊಂಡು ವಿಷಯವನ್ನು ಹೆಣೆಯುವಾಗ ಪಾತ್ರಗಳಿಗೆ ಸೊಗಸಾದ ಸನ್ನಿವೇಶದ ಬೆಳಕನ್ನು ನೀಡುತ್ತಾ ಪಾತ್ರಗಳಿಗೆ ,ಕೃತಿಗೆ ,ಓದುಗರಿಗೆ ,ಆಕರ್ಷಣೀಯ ಹಿಡಿತವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸ್ತ್ರೀಪಾತ್ರಗಳು ಸಮುದಾಯದಲ್ಲಿ ಸಾಮಾಜಿಕವಾಗಿ ಕೌಟುಂಬಿಕವಾಗಿ ಸಾಂಸ್ಕೃತಿಕವಾಗಿ ಅನುಭವಿಸುವ ಅಪಮಾನ ನಿರ್ಲಕ್ಷ ದೌರ್ಜನ್ಯ ಹಾಗೂ ಮೂಢನಂಬಿಕೆಗಳಿಗೆ ಸಿಲುಕಿ ನರಳುವ, ನೋಯುವ,ಬೇಯುವ,  ಜೀವ ಪರಿಯನ್ನು  ದೃಶ್ಯಗಳು ಕಣ್ಣೆದುರೇ ಮೂಡಿರುವಂತೆ ಚಿತ್ರಿಸುವುದರ , ಜೊತೆಗೆ ಜಾತ್ಯಾತೀತ ಧರ್ಮನಿರಪೇಕ್ಷವಾ ದ ಬಾಂಧವ್ಯವನ್ನು ಕಟ್ಟುವ ತುಡಿತ ಇವರಲ್ಲಿ ಇದ್ದು ಅದು ಪರೋಕ್ಷವಾಗಿ ಇವರ ರಚನೆಯಲ್ಲಿ ಕಾಣಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇಡೀ ಕೃತಿಯ ಉದ್ದಕ್ಕೂ ಸಮಕಾಲೀನ ತೊಡಕು ನಂಬಿಕೆಗಳೊಂದಿಗೆ ಜೀವದ್ರವ್ಯ ಆದರ್ಶ, ಸತ್ಯ ,ಪ್ರಾಮಾಣಿಕತೆ ಪ್ರೀತಿ ಮಾನವೀಯ ಸಂಬಂಧಗಳ ಚೌಕಟ್ಟನ್ನು ಎಲ್ಲಿಯೂ ಸಡಿಲಗೊಳಿಸ ದಂತೆ ಮುನ್ನಡೆಸಿಕೊಂಡು ಸಾಗಿರುವ ವಿಶಿಷ್ಟ ಹಿಡಿತ ಈ ಕಾದಂಬರಿಯಲ್ಲಿದೆ ಅಪಕ್ವ ಮನಸ್ಸುಗಳಿಗೆ ತಿಳಿವಳಿಕೆ ಹೇಳುತ್ತಾ ಪ್ರತಿಯೊಂದು ಸನ್ನಿವೇಶದಲ್ಲೂ ಸಮಕಾಲೀನ ಸಂಬಂಧವನ್ನು ಅರ್ಥವಿಲ್ಲದ ಆಚರಣೆಯನ್ನು, ಟೀಕಿಸುತ್ತಾ ಕಾರಣ ಪರಿಣಾಮಗಳನ್ನು ತಿಳಿಸುತ್ತಾ ವಿಮರ್ಶಿಸುತ್ತಾ, ಅದರೊಂದಿಗೆ ಬೆರೆಯುತ್ತಾ ಹರಿಯುತ್ತಾ ಸಾಗಿ ನಿನ್ನೆಯ ಮೂಲಕವೇ ಇಂದಿನ ನಾಳಿನ ಬದುಕನ್ನು ಹೆಣೆದಿದ್ದಾರೆ.  ಈ ಕಲೆ ಅತ್ಯಂತ ಆಕರ್ಷಣೀಯವಾಗಿ ಯೂ ಸೋಜಿಗವಾಗಿ ಯೂ ಇದೆಯೆಂದರೆ ಅತಿಶಯೋಕ್ತಿಯಾಗಲಾರದು. ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಾ  ನಾವು ಮೌನವೇ ಶ್ರೇಷ್ಠ ಎಂದು ವ್ಯಾಖ್ಯಾನ ಮಾಡುತ್ತೇವೆ . ಆದರೆ ಕೆಲವೊಮ್ಮೆ ಕೆಲವು  ಸನ್ನಿವೇಶಗಳಲ್ಲಿ  ಉತ್ತಮ ,ಉತ್ತರ, ಸಾಧನವು ಆದರೆ   ಕೆಲವೊಮ್ಮೆ ಅದೇ ಮೌನ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನಿಸುತ್ತಿದೆ .ಕೋಪವನ್ನು ತರಿಸುತ್ತದೆ . ಕೆಲವರ ಮೌನ ಎಷ್ಟು ಕೋಪವನ್ನು ಉಂಟುಮಾಡಿ ವಿರಸಕ್ಕೂ ಸಂಬಂಧಗಳ ಕಳಚುವಿಕೆಗೂ ದಾರಿಮಾಡಿಕೊಡುತ್ತದೆ ಎಂದ.ನಮ್ಮನಿಮ್ಮೆಲ್ಲರ ಅನುಭವಕ್ಕೂ ಬಂದಿರಬಹುದು. ಇಲ್ಲಿಯೂ  ಸುಧಾಕರ ಮತ್ತು ಜ್ಞಾನಮೂರ್ತಿ ಅವರ ಎದುರು ಮನೆಯವರೊಂದಿಗೆ ಮಾತನಾಡದೆ ಮೌನವಾಗಿದ್ದು ಮುಂದಿನ ಈ ಎಲ್ಲಾ ಘಟನೆಗಳಿಗೆ  ಕಾರಣವಾಗುತ್ತದೆ ಎಂಬುದನ್ನು ಕಾದಂಬರಿಯನ್ನು ಓದಿದಾಗ ಕಂಡುಬರುತ್ತದೆ . ಇನ್ನು ಕಾದಂಬರಿಯುದ್ದಕ್ಕೂ ಬಳಸಿರುವ ಪರಂಪರೆಯ ಕೊಂಡಿಗಳ ಬಗ್ಗೆ ಹೇಳಲೇಬೇಕು ಉದ್ದಕ್ಕೂ ಉತ್ತಮವಾದ ಬದುಕಿನ ಮಾರ್ಗದರ್ಶಕ ಸೂತ್ರಗಳನ್ನು ಇವರದೇ ಆದ ಶೈಲಿಯಲ್ಲಿ ಹೇಳುತ್ತಾ ಹೇಳುತ್ತಾ ಪರಂಪರೆ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿಕೊಳ್ಳಬೇಕು ಎಂಬ ಆದರ್ಶದ ನುಡಿಗಳನ್ನು ಕಥಾನಾಯಕನ ಬಾಯಿಯಲ್ಲಿ ಹೇಳಿಸುತ್ತಾ ಸಾಗಿರುವುದು  ಅತ್ಯಂತ  ಸುಂದರವಾಗಿದ್ದು ಕಿರಿಯರಿಗೆ , ಮಾರ್ಗದರ್ಶಕವಾಗಿ, ಅನುಕರಣೀಯವೂ  ಆಗಿದೆ. ಉದಾ, ನಾವು ಬದುಕನ್ನ ಬದಲಾಯಿಸಬೇಕು           ಬದುಕು ನಮ್ಮನ್ನು ಬದಲಾಯಿಸಬಾರದು. ಪುಟ 62 ನಾವು ಎಷ್ಟೇ ಸಾಧನೆ ಮಾಡಿದರೂ ನಮ್ಮ ಉತ್ತಮ ನಡವಳಿಕೆಗಳು ಆಚರಣೆಗಳು ಗೌರವ ಪ್ರೀತಿ ಆಧಾರಗಳು ಉಳಿಯಬೇಕು ಆಗಲೇ ನಾವು ನಾವು. ಎಷ್ಟೇ ಅಡೆತಡೆಗಳು ಬಂದರೂ ಭಾವನೆಗಳು ಬದಲಾಗಬಾರದು ಎಂದು ಹೇಳುವಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಆದರ್ಶದ ನಡೆನುಡಿಗಳು ಸಮಾಜಕ್ಕೆ ಮಾರ್ಗದರ್ಶಕವೂ ಪ್ರೇರಕವಾಗಿವೆ ಎಂದರೆ ತಪ್ಪಿಲ್ಲ ಜೊತೆಗೆ ರಥೋತ್ಸವದ ಸನ್ನಿವೇಶ, ಬಂಧುಗಳ ಆಗಮನ ಸಂತೋಷ ಸಂಭ್ರಮ ಕೆಲಸಗಳ ಒತ್ತಡ ಎಲ್ಲವನ್ನೂ ಎಳೆಎಳೆಯಾಗಿ ನಾಜೂಕಾಗಿ ಪೋಷಿಸಿರುವ ಪೋಷಣೆ ಅಸಾಧಾರಣವಾಗಿದೆ.  ವಿವಾಹವಾಗಿ ಪತಿಯ ಮನೆಗೆ ತನ್ನ ಹೆತ್ತವರನ್ನು ಬಂಧುಬಳಗವನ್ನು ತನ್ನ ಒಡನಾಡಿಯಾದ ಸ್ನೇಹಿತರನ್ನು ಸಕಲ ಪರಿಸರಕ್ಕೂ ವಿದಾಯ ಹೇಳಿ ಹೋಗುವ ಸಂದರ್ಭದಲ್ಲಿ, ಹೆಣ್ಣುಮಕ್ಕಳು ಬಾಣಂತಿ ಆರೈಕೆಯನ್ನು ಮುಗಿಸಿ  ಗಂಡನ ಮನೆಗೆ  ಹೊರಟು ನಿಂತಾಗ ಊರಿಗೆ ಊರೇ ಕರೆದು ಮಡಿಲಕ್ಕಿ ಹುಯ್ಯುವುದು ಹಣೆಗೆ ತಿಲಕವಿಟ್ಟು ನೆತ್ತಿಗೆ ಎಣ್ಣೆ ಹಾಕಿ ತವರಿನ ನೆನಪು ಸದಾ ಇರಲಿ ತವರಿಗೆ ಶುಭ ಹಾರೈಕೆಯಿಂದ ತೆರಳಲಿ ತನ್ನ ಕೊಟ್ಟಮನೆಯಲ್ಲಿ ಕೀರ್ತಿಯನ್ನು ತರಲಿ , ಎಂದು ಶುಭ ಹಾರೈಸಿ ಕಳಿಸಿ ಕೊಡುವುದು ಈ ನಾಡ ,ಪರಂಪರೆ  ಸಂಪ್ರದಾಯ . ಆದರೆ  ಇತ್ತೀಚಿಗೆ ಇದು  ಕಡಿಮೆಯಾಗುತ್ತಿದೆ ಮರೆಯಾಗುತ್ತಿದೆ..ಈ ಒಂದು ಆಚರಣೆಯ  ಆಪ್ತತೆ  ,ಅನುಬಂಧ ಅವರ್ಣನೀಯ .    ಅಂತಹ ಒಂದು ಉತ್ತಮ ಪರಂಪರೆಯನ್ನು  ಇಲ್ಲಿ  ತಲೆತಲಾಂತರಕ್ಕೂ ಉಳಿಯುವಂತೆ ಮಾಡಲಾಗಿದೆ..       ಇಲ್ಲಿ ಯಾವ ಸಮುದಾಯದಿಂದ ಕಳಂಕಿತ ಎಂದು ಘೋಷಿಸಲ್ಪಟ್ಟಿದ್ದಳೋ ಅದೇ ಸಮುದಾಯ ಅವಳನ್ನು ಆಧರಿಸಿ ಪಶ್ಚಾತಾಪದಿಂದ ನೊಂದು   ಮನೆಗೆ ಆಹ್ವಾನಿಸಿ ಮಡ್ಲಕ್ಕಿ ಹುಯ್ದು , ತಿಲಕವಿಟ್ಟು , ನೆತ್ತಿಗೆ ಎಣ್ಣೆ ಹಾಕಿ ,ಅರಿಯದ ತಮ್ಮ ತಪ್ಪಿಗೆ  ಕ್ಷಮೆಯಾಚಿಸಿ ಬೀಳ್ಕೊಡುವುದು . ಆ ಸಂದರ್ಭದಲ್ಲಿ  ನಿಮ್ಮ ಪ್ರೀತಿಗೆ ನಾನೇನು ಕೊಡಲಿ ಎಂದು ಎಲ್ಲರಿಗೂ ಒಂದೊಂದು ರೂಪಾಯಿ ನಾಣ್ಯ ಕೊಡ್ತಾಳೆ ಹೆಣ್ಣುಮಕ್ಕಳು ಗೆಳತಿಯರು ಅದನ್ನು ಕೆಲವರು ಸೆರಗಿಗೆ ಕಟ್ಟಿಕೊಂಡರು ಕೆಲವರು ಅರಿಶಿನ ಜೀರಿಗೆ ಡಬ್ಬಿಗಳಿಗೆ ಹಾಕಿದರು ಇನ್ನು ಕೆಲವರು ಚೀಲಕ್ಕೆ ಹಾಕಿಕೊಂಡರು, ದಿನನಿತ್ಯ ಅರಿಶಿಣ ಜೀರಿಗೆ ಡಬ್ಬಿಗಳನ್ನು ಉಪಯೋಗಿಸುವಾಗ ಹಾಗೂ ಚೀಲದಲ್ಲಿ ಎಲೆಯಡಿಕೆ ಮೆಲ್ಲುವಾಗ ಅದನ್ನು ನೋಡುತ್ತ ಅವರನ್ನು ನೆನೆಸಿಕೊಳ್ಳಲು ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ ಇದೊಂದು ಅಪೂರ್ವ ವಾದಂತಹ  ವಿವರಣೆಯಾಗಿದೆ. ಹಾಗೆಯೇ ಮರೆಯಾಗುತ್ತಿರುವ ಅಜ್ಜಿಯರ ಎಲೆ ಅಡಿಕೆ ಚೀಲ ಅದರೊಳಗಿನ 2/3 ಕಂಪಾರ್ಟ್ಮೆಂಟ್ ಗಳು ಅದರೊಳಗೆ ಒಂದು ಹಣ ಇಡುವ ಗುಪ್ತ ಪ್ಯಾಕೆಟ್ ನಾಣ್ಯಗಳನ್ನು ಇಡುತ್ತಿದ್ದ ಕಿರು ಪತ್ರ ಇವೆಲ್ಲವೂ ನನಗೆ ನೆನಪಿಸಿ ನನಗೆ ನನ್ನ ಅಜ್ಜಿ ಅವರ  ಪ್ರೀತಿ  ಅನುಭೂತಿ  ನನ್ನ ಕಣ್ಣನ್ನು  ತೇವಗೊಳಿಸಿದವು ನಾನು ಶಾಲೆಗೆಂದು ಹೋಗುತ್ತಿದ್ದಾಗ ನನ್ನಜ್ಜಿ  ನನ್ನನ್ನು  ಹೇ ಮಗಾ ಬಾ ಇಲ್ಲಿ ನನ್ನ ಎಲೆ ಅಡಿಕೆ ಚೀಲದ ಕಿರು ಪತ್ರದಲ್ಲಿ ಎಂಟಾಣೆ ಇದೆ ಅದನ್ ತಗೊಂಡು ನಾಕಾಣೆ ಕಾಚು ಇನ್ ನಾಲ್ಕಾಣೆ ನೀನೇನಾದ್ರೂ ತಗೋ ಎಂದು ಕೈಯಲ್ಲಿ ಕೊಟ್ಟು  ಕಳುಹಿಸುತ್ತಿದ್ದುದು ನೆನಪಾಗಿ ಕ್ಷಣ ಮನಸ್ಸು ಎಲ್ಲಿಗೂ ಹೋದಂತಾಯಿತು. ಹೀಗೆ ಕಾದಂಬರಿ ಹಲವು ಮರೆತ ಬಾಂಧವ್ಯಗಳನ್ನು ಮತ್ತೊಮ್ಮೆ ನೆನಪಿಸಿಕೊಡವಂತಿದೆ . ಎಂದು ನನಗನ್ನಿಸಿತು . ಈ ಚೀಲದ ಸಂಬಂಧ ಸನ್ನಿವೇಶ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂಬುದು ಸಂತೋಷದ ಸಂಗತಿಯಾಗಿದೆ ಇನ್ನು ಕಾದಂಬರಿಯ ತುಂಬಾ ಉಪಯೋಗಿಸಿ ರುವಂತಹ ಸಾಂಪ್ರದಾಯಿಕ ಅಡುಗೆಗಳು ಹೆಸರುಕಾಳು ಮೆಂತ್ಯ ಸೊಪ್ಪಿನ ತೊವೆ ರಾಗಿಕೀಲ್ಸ  ಕಡುಬು ನಿಂಬೆ ಹುಳಿ ಚಿತ್ರಾನ್ನ,  ಹುಳಿಯನ್ನ  ಇವುಗಳ ಸೊಗಸಾದ ನಿರೂಪಣೆ ಇದೆ  ಕೂಡುಕುಟುಂಬದ ಸಾಮರಸ್ಯ ಕಣ್ಮರೆಯಾಗಿರುವ ಕಾಲಘಟ್ಟದಲ್ಲಿ ನಾವಿದ್ದು ಇಂದು ಯಾರು ಯಾರ ಮನೆಯಲ್ಲಿ ಉಳಿಯುವ ಪರಿಪಾಠವೇ ಇಲ್ಲವಾಗಿದೆ ಹಾಗೂ ಕಡಿಮೆಯಾಗಿದೆ ಹಿಂದೆ ಊರ ಜಾತ್ರೆ ಮದುವೆ ರಥೋತ್ಸವ ಸಮಾರಂಭಗಳಲ್ಲಿ ನಾಲ್ಕೈದು ದಿನ ವಾರದವರೆಗೂ ಉಳಿದುಕೊಂಡಿದ್ದ ಸಾಮರಸ್ಯ ಈಗ ಮರೆಯಾಗಿದೆ ಆನಂದವು ಮರೆಯಾಗಿದೆ ಈಗ ನಾನು ನನ್ನ ಸಂಬಂಧ ಕೇವಲ ಮೊಬೈಲಿಗೆ ಅಥವಾ ನಾನು ನನ್ನ ಕುಟುಂಬ ಅಷ್ಟೇ ಆಗುತ್ತಿದೆ ಎಂಬುದು ವಿಷಾದಕರ .  ರಥೋತ್ಸವದ ಸಮಾರಂಭಕ್ಕೆ ಬಂಧುಗಳು ಚಿಕ್ಕಮ್ಮ-ಚಿಕ್ಕಪ್ಪ ದೊಡ್ಡಮ್ಮ ದೊಡ್ಡಪ್ಪ ಅಜ್ಜಿ ,ಭಾವ ಮೈದುನ ಅತ್ತಿಗೆ ಮಕ್ಕಳು ಸ್ನೇಹಿತರು ಹೀಗೆ ಎಲ್ಲರೂ ಒಂದೆಡೆ ಸೇರಿಕೊಂಡು ಸಂಭ್ರಮಿಸುವ ಸಾಮರಸ್ಯದ ಸಂಬಂಧಕ್ಕೆ ಮಾದರಿಯಾಗಿದೆ ಇನ್ನು ಕಾದಂಬರಿಯಲ್ಲಿ ಬರುವ ಆಡಳಿತಾತ್ಮಕ ಚಾಣಕ್ಯನ ನಡಿಗೆಗಳು ಬಹಳ ನಯವಾಗಿ ನಾಜೂಕಿನಿಂದ ಬೆಣ್ಣೆಯ ಮೇಲಿನ ಕೂದಲು ತೆಗೆದಂತೆ ತೊಡಕುಗಳನ್ನು ಸಿಕ್ಕುಗಳನ್ನು ಬಿಡಿಸಿಕೊಳ್ಳುತ್ತಾ ಸಾಗುವ ತಂತ್ರಗಾರಿಕೆ ಅತ್ಯಂತ ಸೂಕ್ಷ್ಮ ಹಾಗೂ ಉದಾರವಾಗಿದೆ . ತೊಂದರೆ ಮಾಡಿದ ಯಾವ ಪಾತ್ರವೂ ಸೆಟೆದು ನಿಂತು ಕೋಪಿಸಿಕೊಳ್ಳದಂತೆ ಅವರೇ ಪಶ್ಚಾತ್ತಾಪವಾಗುವಂತೆ  ಮಾಡಿ ಅವರಿಗೂ ಒಂದೊಂದು ಬದುಕಿನ ಹೊಸ ತಿರುವನ್ನು ಕೊಟ್ಟು ,ಆ ಆಯ್ಕೆಯಲ್ಲಿಯೇಅವರೂ ಖುಷಿಯಾಗ ಇವರನ್ನು ಸಂತೋಷದಿಂದ ಹಾರೈಸುವಂತೆ ಮಾಡಿರುವುದು ಕಾದಂಬರಿಕಾರರ ಹಿರಿಮೆಯಿಂದೇ ಹೇಳಬೇಕ ಅಂತಹ ಅಮೋಘ ನೈಪುಣ್ಯತೆ,  ವಸುಂಧರಾ ಕಾದಂಬರಿಯಲ್ಲಿ ಬಿಂಬಿತವಾಗಿದ್ದು , ಇವರೊಬ್ಬ ಉತ್ತಮ ನೀತಿಶಾಸ್ತ್ರ ವಿಶಾರದೆ ಎಂಬುದಕ್ಕೆ

ವಸುಂಧರಾ Read Post »

ಪುಸ್ತಕ ಸಂಗಾತಿ

ನೋವೂ ಒಂದು ಹೃದ್ಯ ಕಾವ್ಯ

ಪುಸ್ತಕ ಸಂಗಾತಿ ನೋವೂ ಒಂದು ಹೃದ್ಯ ಕಾವ್ಯ ಕವಯತ್ರಿ ರಂಗಮ್ಮ ಹೊದೇಕಲ್ ತಮ್ಮ ಚೆಂದದ ಕೈ ಬರಹದ ಮೂಲಕ  ಈಗಾಗಲೇ ನಾಡಿನಾದ್ಯಂತ  ಚಿರಪರಿಚಿತ ಹೆಸರು. ಇವತ್ತು ಇಡೀ ಜಗತ್ತು ಕೀಲಿಮಣೆಯ ಮುಂದೆ ಪವಡಿಸಿಕೊಂಡು ಬೆರಳ ತುದಿಯಲ್ಲಿ ಕುಟು ಕುಟು ಕುಟ್ಟುತ್ತಾ ಅಕ್ಷರವ ಅರಳಿಸುತ್ತಿರುವಾಗ, ಗಣಕ ಯಂತ್ರ ಇಲ್ಲದಿದ್ದರೆ ನಾನು ಖಂಡಿತಾ ಇಷ್ಟೂ ಬರೆಯುತ್ತಿರಲಿಲ್ಲವೇನೋ ಅಂತ ಬಡಬಡಿಸುತ್ತಿರುವ ಹೊತ್ತಿನಲ್ಲಿ ಇದಕ್ಕೆಲ್ಲ ಉತ್ತರವೆಂಬಂತೆ ಹಲವಾರು ವರುಷಗಳಿಂದ  ಬರಹಗಾರ್ತಿ ಶೈಲಾ ನಾಗರಾಜ್ ಅವರ ಸಂಪಾದಕತ್ವದಲ್ಲಿ  ರಂಗಮ್ಮ ಹೊದೇಕಲ್ ರವರ  ಕೈ ಬರಹದಲ್ಲಿಯೇ ಸ್ಫುಟ ಮತ್ತು ಸುಂದರವಾಗಿ ’ ಶೈನಾ’ ಎಂಬ ಕೈ ಬರಹದ ಪತ್ರಿಕೆ ಇವತ್ತೂ ತನ್ನ ಮಾನ್ಯತೆಯನ್ನು ಉಳಿಸಿಕೊಂಡಿದೆ.  ಬೆರಳ ತುದಿಯಲ್ಲಿ ಹೂವಂತೆ ಅರಳಿಕೊಳ್ಳುವ ಅವರ ಅಕ್ಷರಗಳಿಗೆ ಮಾರು ಹೋದವರಿಲ್ಲ. ಅವರ ಕೈ ಬರಹವೇ  ಒಂದು  ಜೀವಂತ ಕವಿತೆ.  ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ರಂಗಮ್ಮಹೊದೇಕಲ್ ಒಳ್ಳೆಯ ಕವಯತ್ರಿಯೂ.  ಮಾರುದ್ದ ಕವಿತೆಗಳ ಖಾಲಿತನದ ಮುಂದೆ  ರಂಗಮ್ಮನವರ ಮೂರೇ ಸಾಲು ಪದ್ಯಗಳು ಅದೆಷ್ಟೋ ಅರ್ಥಗಳನ್ನ ಸ್ಫುರಿಸಬಲ್ಲವು.  ಬದುಕಿನ ಇಡೀ ಸಾರವನ್ನು  ಪುಟ್ಟ ಕವಿತೆಯ ಹೃದಯದಲ್ಲಿ ತಂದಿಡಬಲ್ಲರು.  ಸಣ್ಣ ಸಣ್ಣ ಸಾಲುಗಳಲ್ಲಿ ಬದುಕಿನ ಅಚ್ಚರಿಗಳನ್ನ ಹಿಡಿದಿಡಬಲ್ಲಂತಹ ಪ್ರತಿಭಾನ್ವಿತೆ ಈಕೆ. ಅವರೇ ಹೇಳುತ್ತಾರೆ ಬರೆಯದೇ ಉಳಿದ ಸಾಲುಗಳಲ್ಲಿದೆ ಬದುಕು ಅಂತ. ಎಷ್ಟು ಹೇಳಿದರೂ ಹೇಳದೇ ಉಳಿಯುತ್ತದೆ ಬದುಕಿನೊಳಗಿನ ಕವಿತೆ.  ಈ ಅತೄಪ್ತಿಯೇ ಮತ್ತೊಂದು ಕವಿತೆಯ ಮರು ಹುಟ್ಟಿಗೆ ಕಾರಣವಾಗಿಬಿಡಲ್ಲದು.   ಒಂದು ಮಾತಿದೆ,  ’ಅಸುಖಿಯಾಗದವ ಕವಿಯಾಗಲಾರ ’ ಅಂತ. ಆದರೆ  ಸಂಕಟವನ್ನೂ ಸೃಜನಶೀಲ ಕಲೆಯಾಗಿಸುವ  ಛಾತಿ ನಮಗಿರ ಬೇಕು ಅಷ್ಟೆ.  ರಂಗಮ್ಮ ಹೊದೇಕಲ್ ಅವರ ಪದ್ಯಗಳೂ ಕೂಡ ಅಷ್ಟೇ , ಇದೇ ಸತ್ಯವನ್ನು ಹೇಳುತ್ತವೆ.  ಬದುಕಿನ ದು:ಖ,ದುಗುಡ, ದುಮ್ಮಾನ.. ಇವುಗಳ ಬಗ್ಗೆ ಕವಯತ್ರಿ ಯಾವುದೇ  ತಕರಾರು ತೋರುವುದಿಲ್ಲ. ಎಲ್ಲಾ ನೋವುಗಳೂ ಹೃದ್ಯ ಕಾವ್ಯ ಅನ್ನುವ  ಅವರ ಅಂತರಾಳದ ಮಾತುಗಳು ನಮ್ಮನ್ನು ತಟ್ಟದೇ ಇದ್ದೀತೇ?  ಅಂತಹ ಕಾವ್ಯವೇ ಅವರ ಸಂಗಾತಿ ಆದ ಮೇಲೆ , ಕವಿತೆ ಎಲ್ಲ ನೋವುಗಳಿಗೂ ಸಾಂತ್ವಾನ  ಒದಗಿಸುವಂತಹ, ಹೆಗಲು ಕೊಡುವಂತಹ  ಆಪ್ತ ಸಖಿಯಂತೆ ಇಲ್ಲಿ ಗೋಚರಿಸುತ್ತದೆ.   ನೋವೂ ಹೃದ್ಯ ಕಾವ್ಯ .. ಅಂತ ಹೇಳುವುದು ಅಷ್ಟು ಸಲೀಸಾ?  ಪಕ್ವ , ಮಾಗಿದ ಮನಸ್ಥಿತಿಗಷ್ಟೇ  ನೋವಲ್ಲೂ ಸುಸ್ವರ ಕೇಳಿಸ ಬಲ್ಲದು. ಇಂತಹ ಒಂದು ಪರಿಪಕ್ವ ಚಿಂತನೆಯನ್ನು ರಂಗಮ್ಮ ನವರ ಕವಿತೆಗಳಲ್ಲಿ ಕಾಣಬಹುದು.   ಕವಯತ್ರಿ ಹೇಳುತ್ತಾರೆ, ಎಲ್ಲ ’ ಇಲ್ಲ ’ ಗಳ ನಡುವೆಯೂ ಬದುಕಿನ ಹಕ್ಕಿ ಹಾಡುತ್ತದೆ ಅಂತ.  ಬದುಕಿನ ಎಲ್ಲಾ ಭಾವಗಳು  ಹಾಡೇ ಅನ್ನುವ ಭಾವ  ಮಾತ್ರ ನಮ್ಮ ಬದುಕನ್ನು ನಾದಮಯವಾಗಿಸಬಲ್ಲದು. ನೋವು, ಅವಮಾನ, ದ್ವೇಷ, ಇವುಗಳಿಗೆ ಅವೇ ಪ್ರತ್ತ್ಯುತ್ತರ ಅಲ್ಲ, ಖಡ್ಗಕ್ಕೆ ನೆತ್ತರೇ ಉತ್ತರವಾಗಿದ್ದರೆ ಈ ನೆಲದಲ್ಲಿ ಯಾವ ಹೂವೂ ಅರಳುತ್ತಿರಲಿಲ್ಲ.. ಅನ್ನುವ ಅವರ ಕವಿತೆಯ ಸಾಲುಗಳು ನೋವೇ ಇಲ್ಲದಿದ್ದರೆ ಕವಿತೆಗೆಲ್ಲಿ ಜಾಗ ಅಂತ ಹೇಳುವ ಮರುದನಿಯಂತಿದೆ. ಇನ್ನೂ ಮುಂದಕ್ಕೆ ಹೋಗಿ, ಬದುಕನ್ನು ಪ್ರೀತಿಸುವುದೆಂದರೆ ನೋವುಗಳನ್ನು ದಾಟುವುದಷ್ಟೇ .. ಅನ್ನುತ್ತಾರೆ. ಈ ಸಾಲುಗಳಿಗೆ ಬೇರಾವ ವ್ಯಾಖ್ಯಾನಗಳ ಭಾರ ಬೇಡ ಅನ್ನಿಸುತ್ತದೆ. ರಂಗಮ್ಮ ಅವರ ಕವಿತೆಗಳ ತುಂಬಾ ಅಲೆದಾಡುವುದು  ನೋವು ಮತ್ತು ಅದನ್ನು ಮೀರುವ ಭಾವ. ನೋವು ಹಾಡಾಗುವುದು, ನೋವು ಕವಿತೆಯಾಗುವುದು , ಇಲ್ಲಿಯ ಕವಿತೆಗಳ ಮಾಂತ್ರಿಕ ಶಕ್ತಿ.  ಪುಟ್ಟ ಪುಟ್ಟ ಕವಿತೆಗಳು  ಇಡೀ ಬದುಕಿನ ಹೃದ್ಯ ಚಿತ್ರಣವನ್ನು  ಬಿಡಿಸಿಡುವ ಪರಿಗೆ ಮನಸು ಮೂಕಾಗುತ್ತದೆ. ಯಾಕೆಂದರೆ ಎಲ್ಲರ ಎದೆಯೊಳಗಿನ ಭಾವಗಳು ಇಲ್ಲಿ ಕವಿತೆಯಾಗಿ ಅರಳಿಕೊಂಡಿವೆ.  ಓದುತ್ತಾ ನಮ್ಮ ಮನಸೂ ಹಕ್ಕಿಯಂತಾಗಿ ಹಾರುತ್ತದೆ ಹೊಸ ಚಿಂತನೆಯ ದಿಕ್ಕಿನೆಡೆಗೆ. ಒಳ್ಳೆಯ ಕವಿತೆಯ ಉದ್ದೇಶ ಇದುವೇ ತಾನೇ? ಎಲ್ಲಾ ಸಂಕಟಗಳು ದಾಖಲಾಗುವುದಿಲ್ಲ ದಾಖಲೆಗಳೆಲ್ಲಾ  ಮಾನ್ಯವಾಗುವುದಿಲ್ಲ.. ಅನ್ನುವ ಅವರ ಸಾಲುಗಳು ನಮ್ಮೆದೆಯ ಬಡಿತದ ಪ್ರತಿಧ್ವನಿಯಂತಿದೆ.  ಎಲ್ಲಾ ಬೆಂದ ಹೃದಯಗಳಿಗೆ ಮುಲಾಮು ಆಗುವಂತಿದೆ ಇಲ್ಲಿಯ ಕವಿತೆಗಳು. ರಂಗಮ್ಮನವರ ಕವಿತೆಗಳೂ ಔಷಧವೇ. ನಮ ಪಾಲಿನ ಆಕಾಶದಲ್ಲಿ ನಾವು ಹಾಡುತ್ತಿರಬೇಕಷ್ಟೇ ಕೊರಳಿದ್ದಲ್ಲಿ ಹಾಡುಗಳು ಅರಳುತ್ತಿರುತ್ತವೆ.. ಎಂದು ಬರೆಯುವ ಕವಯತ್ರಿ, ಮಿತಿಯೊಳಗೇ ಮೀರಿ  ಬೆಳೆಯುವುದು ಹೇಗೆ? ನಮ್ಮ ಕಣ್ಣಳತೆಗೆ ದಕ್ಕಿದ್ದನ್ನೇ ಆಕಾಶವಾಗಿಸುವುದು ಹೇಗೆ ಎನ್ನುವುದಕ್ಕೆ ಉತ್ತರದಂತಿದೆ.  ಮಿತ ಪದಗಳಲ್ಲಿ ಅರ್ಥ ಅನಂತವಿದೆ. ಮನುಷ್ಯರೇ ಇರದೆಡೆ ದೇವರಿರಬಹುದಾ? ಎನ್ನುವ ಪ್ರಶ್ನೆ ನಮ್ಮೊಳಗೂ ತಡಕಾಡುವಂತೆ ಮಾಡಿ ಬಿಡುತ್ತದೆ.  ಮಾನವೀಯತೆಯೇ ದೈವತ್ವ ಎನ್ನುವ ಕಲ್ಪನೆಯೇ ಎಷ್ಟು ಸುಂದರವಾದದ್ದು. ಗಾಯಗಳನ್ನು ಯಾವೊತ್ತೂ ತೋರಿಸಬಾರದು, ಗಾಯ ಎಷ್ಟೇ ಇರಲಿ ಬದುಕು ಕವಿತೆಯನ್ನು ದಯಪಾಲಿಸಿದರಷ್ಟೇ ಸಾಕು ಅನ್ನುವುದು ಅವರ ವಿನಮ್ರ ಪ್ರಾರ್ಥನೆ.  ಕವಿತೆ ಮಾತ್ರ ನೋವು ಮೀರುವ ಹಾದಿಯಾಗಬಲ್ಲದು ಅನ್ನುವಂತದ್ದು ಇಲ್ಲಿಯ ಕವಿತೆಗಳ ಹೂರಣ.   ನೋವೂ ಒಂದು ಹೃದ್ಯ ಕಾವ್ಯ ಅನ್ನುವ ರಂಗಮ್ಮ ಹೊದೇಕಲ್ ರವರ ಕವನ ಸಂಕಲನ ಅವರ  ಸುಂದರ ಕೈಬರಹದಲ್ಲಿಯೇ  ಪ್ರಕಟಗೊಂಡಿರುವ ಕಾರಣ, ಇಲ್ಲಿಯ ಕವಿತೆಗಳು ಮತ್ತಷ್ಟು ಆಪ್ತವಾಗುತ್ತವೆ.  ಪುಟ್ಟ ಪುಟ್ಟ ಹನಿಯೊಳಗೆ ಇಡಿಯ ಬದುಕೇ ಅಡಕಗೊಂಡಿದೆ. ನೋವನ್ನೆಲ್ಲಾ ಹೃದ್ಯ ಕಾವ್ಯವಾಗಿಸುವ ಕಲೆಗಾರಿಕೆ ಎಲ್ಲರಿಗೂ ದಕ್ಕಲಿ. ಒಳ್ಳೆಯ ಸಂಕಲನಕ್ಕಾಗಿ ಕವಯತ್ರಿ ರಂಗಮ್ಮ ಹೊದೇಕಲ್ ರವರಿಗೆ ಅಭಿನಂದನೆಗಳು. ***************************************     ಸ್ಮಿತಾ ಅಮೃತರಾಜ್. ಸಂಪಾಜೆ     

ನೋವೂ ಒಂದು ಹೃದ್ಯ ಕಾವ್ಯ Read Post »

ಪುಸ್ತಕ ಸಂಗಾತಿ

ಕಾದಂಬರಿ ಕುರಿತು ಸು ನಾನು ಪ್ರತಿ ಪುಸ್ತಕ ಓದಿದಾಗಲೂ ಅದರಲ್ಲಿ ಬರುವ ಒಂದು ಪಾತ್ರ ನಾನೇ ಎನ್ನಿಸಿಬಿಡುವಷ್ಟು ಕೆಲವೊಂದು ಪಾತ್ರಗಳು ಕಾಡುತ್ತವೆ. ಇಲ್ಲಿ ಸು ಕಥಾನಾಯಕನಾದರೂ ನನಗ್ಯಾಕೊ ಪ್ರಕಾಶ್ ಪಾತ್ರ ಬಹಳ ಹಿಡಿಸಿತು. ಇಡೀ ಸು ಕಾದಂಬರಿ ಪ್ರಕಾಶ್ ಪಾತ್ರವೇ ನಿರೂಪಣೆ ಮಾಡಿದ್ದು ಅಂತ ನನಗೆ ಭಾಸವಾಯಿತು. ಇದನ್ನ ಕಾದಂಬರಿ ಅನ್ನೋದಕ್ಕಿಂತ ಒಂದು ಅನುಭವ ಕಥನ ಅಂತ ಕರೆಯೋದು ಹೆಚ್ಚು ಸೂಕ್ತ ಅನ್ನಿಸಿತು ನನಗೆ. ಕಡೆಯ ಎರಡು ಅಧ್ಯಾಯಗಳಲ್ಲಿ ಸು ಮತ್ತು ಪ್ರಕಾಶ್ ಮನಸ್ಸಿನ ತಳಮಳಗಳು ಬಹಳ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಸು, ಪ್ರಕಾಶ್, ಮಾರಡೂರಿ,ಸು ನ ಸಂಗಾತಿ ಇವೆಲ್ಲ ಪಾತ್ರಗಳು ಆಪ್ತವೆನಿಸುತ್ತವೆ. ಹೇಲಾಳ ಜೀವಕೋಶಗಳು ಮತ್ತವಳ ಸಮಾಧಿಯ ಬಗೆಗಿನ ಸನ್ನಿವೇಶಗಳು, ಪ್ರಕಾಶ್ ಸು ನ ಸಮಾಧಿಯ ಬಳಿಯ ಸನ್ನಿವೇಶಗಳು ಭಾವುಕವಾಗಿವೆ‌. ಮೆಟಾಸ್ಟಾಸಿಸ್, ಆಫ್ಲಾಟಾಕ್ಸಿನ್, ಹಸಿ ಕಾಳುಗಳ ಮೇಲೆ ಬೆಳೆಯುವ ಯಾಸ್ಪರ್ಜಿಲ್ಲುಸ್ ಫ್ಲಾವುಸ್ ಎಂಬ ಶಿಲೀಂಧ್ರ (ಕ್ಯಾನ್ಸರ್ ಕಾರಕ ವಿಷವಾದ ಆಫ್ಲಾಟಾಕ್ಸಿನ್ ಉತ್ಪತ್ತಿಸುವುದು), ಸು ನ ಕ್ಯಾನ್ಸರ್ ಗೆ ಕಾರಣ ಇವೆಲ್ಲವೂ ಕ್ಯಾನ್ಸರ್ ನ ಬಗೆಗಿನ ಬಹಳಷ್ಟು ವೈಜ್ಞಾನಿಕ ವಿಷಯಗಳನ್ನ ತಿಳಿಸುತ್ತವೆ ಮತ್ತಷ್ಟು ಕುತೂಹಲವನ್ನೂ ಹೆಚ್ಚಿಸಿದೆ. ಸು ಬಹಳ ಇಷ್ಟ ಪಟ್ಟು ಹೆಚ್ಚಾಗಿ ತಿನ್ನುತ್ತಿದ್ದ ನೆಲಗಡಲೆಯೇ ಅವನ ಜೀವಕ್ಕೆ ಕುತ್ತು ತಂದಿದ್ದು ಖೇದಕರ. ಅದು ಹೇಗೆ ಎಂದು ತಿಳಿಯಲು ಪುಸ್ತಕ ಓದಲೇಬೇಕು. ಟಿಬೆಟ್ ನೆಲದ ಸಂಸ್ಕೃತಿಯ ಸಣ್ಣ ಪರಿಚಯದೊಂದಿಗೆ ಅಲ್ಲಿಯ ಶವಸಂಸ್ಕಾರದ ರೀತಿ ಭೀಭತ್ಸ ಹುಟ್ಟಿಸುವಂತಿತ್ತು.  ಅಲೆಕ್ಸಾಂಡರ್ ರೀತಿ ಸು ನ ಎರಡೂ ಕಣ್ಣುಗಳು ಬೇರೆ ಬೇರೆ ಬಣ್ಣಗಳು ಮತ್ತು ಕಾಕತಾಳೀಯವೆಂಬಂತೆ ಅಂತಹದೇ ಬೆಕ್ಕು ಸು ಗೆ ಹತ್ತಿರವಾಗುವುದು ಮತ್ತದು ಅವನನ್ನ ಬಹಳವಾಗಿ ಹಚ್ಚಿಕೊಳ್ಳುವುದು ಯಾವುದೋ ಜನ್ಮದ ಸಂಬಂಧದಂತೆ ತೋರುತ್ತೆ. ಎಷ್ಟೇ ಸಂಶೋಧನೆಗಳನ್ನು ಮಾಡಿದರೂ ಸು ಗೆ ಯಾವುದೇ ರೀತಿಯ ಪ್ರಶಸ್ತಿಗಳು, ಹೆಸರಿನ ಆಸೆ ಇಲ್ಲದೆ ಕೇವಲ ಕ್ಯಾನ್ಸರ್ ನನ್ನು ಸೋಲಿಸಲು ಸಂಶೋಧನೆ ಮಾಡುವನು. ಕೊನೆಗೆ ಸು ಸೋತು ಕ್ಯಾನ್ಸರ್ ಗೆಲ್ಲುವುದು. ಇಲ್ಲಿ ಸು ಮತ್ತು ಅಲೆಕ್ಸಾಂಡರ್ ಗೂ ಹೋಲಿಕೆ ಮಾಡಿರುವುದು ಪರಿಣಾಮಕಾರಿಯಾಗಿದೆ. ಸು ನ ಆತ್ಮವೃತ್ತಾಂತದಂತಹ ಕಥನ, ಸರಾಗವಾಗಿ ಓದಿಸಿಕೊಳ್ಳುವ ಒಂದು ಚಂದದ ಓದು. ********************************************** ಚೈತ್ರಾ ಶಿವಯೋಗಿಮಠ

Read Post »

You cannot copy content of this page

Scroll to Top