ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-33 ಆಸ್ಪತ್ರೆಯಲ್ಲಿ ಒಂದು ವಾರ ತೀವ್ರ ನಿಗಾಘಟಕದಲ್ಲಿ ನರಳಿದ ಶ್ರೀನಿವಾಸ ಕೊನೆಗೂ ಬದುಕುಳಿದ. ಆದರೆ ಈ ಘಟನೆಯಿಂದ ಪ್ರವೀಣನ ನಾಗದೋಷದ ಭೀತಿಯು ದುಪ್ಪಟ್ಟಾಗಿ ಪ್ರಜ್ವಲಿಸತೊಡಗಿತು. ತನ್ನ ಅನಾಚಾರದಿಂದಲೇ ಇವೆಲ್ಲ ಅನಾಹುತಗಳು ನಡೆಯುತ್ತಿರುವುದು! ಎಂದು ಭಾವಿಸಿದವನು ಇನ್ನು ತಡಮಾಡಬಾರದು. ತನ್ನ ಜೀವನ ಸರ್ವನಾಶ ಆಗುವುದಕ್ಕಿಂತ ಮುಂಚೆಯೇ ಎಚ್ಚೆತ್ತುಕೊಳ್ಳಬೇಕು ಎಂದು ನಿರ್ಧರಿಸಿದ. ಅದೇ ಸಂದರ್ಭದಲ್ಲಿ ಶಂಕರನ ಶೀಂಬ್ರಗುಡ್ಡೆಯ ನಾಗಬನ ಜೀರ್ಣೋದ್ಧಾರದ ಸಂಗತಿಯೂ ಅವನಿಗೆ ತಿಳಿಯಿತು. ಕೂಡಲೇ ಹಳೆಯ ಗೆಳೆಯನನ್ನು ಹೊಸ ಆತ್ಮೀಯತೆಯಿಂದ ಅರಸಿ ಹೋಗಿ ಭೇಟಿಯಾದ. ಶಂಕರನೂ ಪ್ರವೀಣನನ್ನು ಆಪ್ತತೆಯಿಂದ ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದ. ಆದರೆ ಅವನ ಮೂತ್ರ ಪ್ರಸಂಗ, ಚರ್ಮರೋಗ ಮತ್ತು ಹಾವಿನ ಕಡಿತದ ವಿಷಯವನ್ನು ಕೇಳಿದವನು ‘ಇದು ಖಂಡಿತಾ ನಾಗದೋಷದ ಪ್ರತಿಫಲವೇ ಮಾರಾಯಾ…! ಇಲ್ಲದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ!’ ಎಂದು ಆತಂಕ ವ್ಯಕ್ತಪಡಿಸಿದ. ‘ಅಲ್ವಾ ಅಲ್ವಾ ಶಂಕರಣ್ಣಾ…? ನನಗೆ ಆವತ್ತು ಸುರೇಶ ಹೇಳಿದಾಗಲೇ ಅದು ಗೊತ್ತಾಗಿತ್ತು. ಆದರೆ ನನ್ನ ಮನೆಯವಳೂ, ಆ ಚರ್ಮರೋಗದ ಡಾಕ್ಟ್ರೂ ಹೇಳುವುದು ನಾನು ಸರಿಯಾಗಿ ಸ್ನಾನನೇ ಮಾಡುವುದಿಲ್ಲವಂತೆ. ಅದರಿಂದ ಹುಳಕಜ್ಜಿ ಬಂದಿದೆಯಂತೆ! ಹಾಗಾದರೆ ನನ್ನ ಮೈದುನನಿಗೆ ಹಾವು ಯಾಕೆ ಕಚ್ಚಿತು? ಅದೂ ನನ್ನ ಅಂಗಡಿಯ ಒಳಗೆಯೇ ಬಂದು ಕಚ್ಚಬೇಕಿತ್ತಾ…!’ ಎಂದು ಭಯದಿಂದ ಕಣ್ಣುಬಾಯಿ ಬಿಟ್ಟುಕೊಂಡು ಅಂದವನು, ‘ನನಗೀಗ ನೀವು ಹೇಳಿದ ಮೇಲೆ ಧೈರ್ಯ ಬಂತು ಶಂಕರಣ್ಣಾ…ಆದ್ದರಿಂದ ನೀವೇ ಇದಕ್ಕೊಂದು ಪರಿಹಾರವನ್ನೂ ಸೂಚಿಸಬೇಕು!’ ಎಂದು ಕೇಳಿಕೊಂಡ. ‘ನೀನೇನೂ ಹೆದರಬೇಡ ಮಾರಾಯಾ ನಾನಿದ್ದೇನೆ. ಎಲ್ಲಾ ಸಮ ಮಾಡುವ ನಡೀ…!’ ಎಂದು ಶಂಕರ ಗತ್ತಿನಿಂದ ಹೇಳಿದವನು ಕೂಡಲೇ ಅವನನ್ನು ಏಕನಾಥ ಗುರೂಜಿಯವರ ಹತ್ತಿರ ಕರೆದೊಯ್ದ.    ಆ ಸಮಯದಲ್ಲಿ ಗುರೂಜಿಯವರು ತಮ್ಮ ಹಳೆಯ ಮನೆಯ ಒಂದು ಪಾಶ್ರ್ವವನ್ನು ಒಡೆದು, ಮುಂದೆ ತಮ್ಮಲ್ಲಿ ನಿರಂತರ ನಡೆಯಲಿರುವ ವಿವಿಧ ಪೂಜಾ ಕೈಂಕರ್ಯಗಳಿಗೆ ಸಹಾಯಕವಾಗುವಂಥ ವಿಶಾಲವಾದ ಆಧುನಿಕ ಪಡಸಾಲೆಯೊಂದನ್ನು ನಿರ್ಮಿಸತೊಡಗಿದ್ದರು. ಅತ್ತ ಶಂಕರನ ಕಾರು ಬಂದು ತಮ್ಮ ಮನೆಯೆದುರು ನಿಂತುದನ್ನೂ, ಅವನೊಂದಿಗೆ ಶ್ರೀಮಂತನೊಬ್ಬ ಇಳಿದು ಬರುತ್ತಿರುವುದನ್ನೂ ಮತ್ತು ಅವನ ಮುಖದಲ್ಲಿದ್ದ ಕಳವಳವನ್ನೂ ಗ್ರಹಿಸಿದವರಿಗೆ ತಮ್ಮ ಪಡಸಾಲೆಯ ಕೆಲಸವು ನಿರ್ವಿಘ್ನವಾಗಿ ಸಮಾಪ್ತಿಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದೆನಿಸಿತು. ಆದ್ದರಿಂದ ಮಂದಹಾಸ ಬೀರುತ್ತ ಇಬ್ಬರನ್ನೂ ಬರಮಾಡಿಕೊಂಡು ತಮ್ಮ ಜ್ಯೋತಿಷ್ಯದ ಕೋಣೆಗೆ ಕರೆದೊಯ್ದರು.    ಶಂಕರ ತನ್ನ ಗೆಳೆಯನ ವ್ಯವಹಾರ ಮತ್ತು ಅವನ ಪ್ರಸ್ತುತ ಸಮಸ್ಯೆಯನ್ನು ಗುರೂಜಿಗೆ ಹಳೆಯ ಸಲುಗೆಯಿಂದ ವಿವರಿಸಿದ. ಆದರೆ ಅವರು ಅವನ ಸ್ನೇಹದತ್ತ ಗಮನಕೊಡದೆ ಅವನ ಮಾತುಗಳನ್ನು ಮಾತ್ರವೇ ಗಂಭೀರರಾಗಿ ಕೇಳಿಸಿಕೊಂಡರು ಹಾಗೂ ಕ್ಷಣಹೊತ್ತು ಕಣ್ಣುಮುಚ್ಚಿ ಧ್ಯಾನಸ್ಥರಂತೆ ಕುಳಿತು ಪ್ರವೀಣನ ಸಮಸ್ಯೆಗಳನ್ನು ತಮ್ಮದೇ ದೃಷ್ಟಿಕೋನದಿಂದ ಮಥಿಸಿದರು. ಗುರೂಜಿಯ ಗಾಂಭೀರ್ಯವನ್ನೂ ಅವರು ತನಗಾಗಿ ಧ್ಯಾನಿಸುತ್ತಿದ್ದ ರೀತಿಯನ್ನೂ ಕಂಡ ಪ್ರವೀಣನಿಗೆ ಅರ್ಧಕ್ಕರ್ಧ ಭಯ ಹೋಗಿಬಿಟ್ಟಿತು. ಆದರೆ ಅತ್ತ ಗುರೂಜಿಯ ಯೋಚನಾಲಹರಿ ಈ ರೀತಿ ಸಾಗುತ್ತಿತ್ತು, ‘ಓ ಪರಮಾತ್ಮಾ… ಕೊನೆಗೂ ನೀನು ನಮ್ಮ ಜೀವನಕ್ಕೊಂದು ಭದ್ರ ನೆಲೆಯನ್ನು ಕರುಣಿಸಿಬಿಟ್ಟೆ. ಅದಕ್ಕಾಗಿ ಅನಂತಾನಂತ ಕೃತಜ್ಞತೆಗಳು ದೇವಾ! ಹಾಗೆಯೇ ಈಗ ನಮ್ಮಲ್ಲಿಗೆ ನೀನು ಕಳುಹಿಸಿರುವ ಈ ವ್ಯವಹಾರವೂ ಸಾಂಗವಾಗಿ ನೆರವೇರುವಂಥ ಶಕ್ತಿಯನ್ನು ದಯಪಾಲಿಸು ಪ್ರಭುವೇ!’ಎಂದು ಪ್ರಾರ್ಥಿಸಿದರು. ನಂತರ ನಿಧಾನವಾಗಿ ಕಣ್ಣು ತೆರೆದು ಪ್ರವೀಣನನ್ನು ದಿಟ್ಟಿಸಿದರು. ಆಗ ಅವನು ಅವರನ್ನು ದೈನ್ಯದಿಂದ ನೋಡಿದ. ‘ಹೌದು ಪ್ರವೀಣರೇ, ನೀವು ಮಾಡಿರುವುದು ಮಹಾ ಅಪರಾಧವೇ ಆಗಿದೆ! ಅದರಲ್ಲಿ ಎರಡು ಮಾತಿಲ್ಲ’ ಎನ್ನುತ್ತ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಪ್ರವೀಣ ಭಯದಿಂದ ಇನ್ನಷ್ಟು ಇಳಿದುಹೋದ. ಅದನ್ನು ಗಮನಿಸಿದ ಗುರೂಜಿ, ‘ಆದರೂ ನೀವಿನ್ನು ಹೆದರಬೇಕಾಗಿಲ್ಲ. ನಿಮ್ಮ ಆ ಪಾಪಕೃತ್ಯವನ್ನು ಸರಿಪಡಿಸುವ ಮಾರ್ಗ ನಮ್ಮಲ್ಲಿದೆ. ಆದರೆ ಅದಕ್ಕೆ ಸಂಬಂಧಿಸಿದ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸಿದ್ಧರಿದ್ದೀರಾ?’ ಎಂದು ಮುಖದಲ್ಲಿ ನಿರ್ಭಾವ ತೋರಿಸುತ್ತ ಕೇಳಿದರು. ಆದರೂ ಅವರ ಕೆಳದುಟಿಯು ಸಣ್ಣಗೆ ಕಂಪಿಸುತ್ತಿದ್ದುದು ಯಾರ ಗಮನಕ್ಕೂ ಬರಲಿಲ್ಲ. ‘ಆಯ್ತು ಗುರೂಜಿ. ತಾವು ಹೇಗೆ ಹೇಳುತ್ತೀರೋ ಹಾಗೆ ನಡೆದುಕೊಳ್ಳುತ್ತೇನೆ. ಒಟ್ಟಾರೆ ನನ್ನ ಸಮಸ್ಯೆಯನ್ನು ನಿವಾರಿಸಿಕೊಡಬೇಕು ತಾವು!’ ಎಂದ ಪ್ರವೀಣ ನಮ್ರನಾಗಿ ಕೇಳಿಕೊಂಡ. ಆಗ ಗುರೂಜಿಯ ಮುಖದಲ್ಲಿ ನಗು ಮೂಡಿತು.  ‘ಆಯ್ತು, ಸರಿಮಾಡಿ ಕೊಡುವ. ಆದರೆ ಅದಕ್ಕಿಂತ ಮೊದಲು ಆ ಜಾಗವನ್ನು ನಾವೊಮ್ಮೆ ನೋಡಬೇಕಲ್ಲಾ…?’ ‘ಆಯ್ತು ಗುರೂಜಿ. ನಿಮಗೆ ಪುರುಸೋತ್ತಿದ್ದರೆ ಈಗಲೇ ಹೋಗಿ ನೋಡಿ ಬರಬಹುದು!’ ಎಂದ ಪ್ರವೀಣನು, ಶಂಕರನ ಮುಖ ನೋಡುತ್ತ, ‘ಹೇಗೇ…ಹೋಗಿ ಬರುವ ಅಲ್ಲವಾ…?’ ಎಂದು ಕಣ್ಣಿನಲ್ಲೇ ಪ್ರಶ್ನಿಸಿದ.  ಆದರೆ ಅತ್ತ, ‘ಈಗಲೇ ಹೋಗುವುದಾ…?’ ಎಂದ ಗುರೂಜಿ ಬೇಕೆಂದೇ ಕೆಲವುಕ್ಷಣ ಯೋಚಿಸುವಂತೆ ನಟಿಸಿದವರು ನಂತರ, ‘ಸರಿ. ಹೊರಡುವ…!’ ಎಂದರು. ‘ನೋಡಮ್ಮಾ ದೇವಕೀ… ಎಲ್ಲಿದ್ದೀಯೇ?’ ಎಂದು ಹೆಂಡತಿಯನ್ನು ಕೂಗಿ ಕರೆದರು. ಅವಳು ಅಡುಗೆ ಕೋಣೆಯಿಂದಲೇ, ‘ಏನೂಂದ್ರೆ….?’ ಎಂದಳು. ‘ಪಡಸಾಲೆಯ ಕೆಲಸವನ್ನು ಸ್ವಲ್ಪ ಗಮನಿಸುತ್ತಿರು. ನಾವು ಹೊರಗೆ ಹೋಗಿ ಬರುತ್ತೇವೆ…’ ಎಂದು ಸೂಚಿಸಿದರು. ‘ಆಯ್ತು, ಹೋಗಿ ಬನ್ನಿ…!’ ಎಂಬ ಅವಳ ಉತ್ತರ ಸಿಗುತ್ತಲೇ ಎದ್ದು ಅವರೊಂದಿಗೆ ಹೊರಟರು.                                                                                    *** ಗುರೂಜಿ ಮತ್ತು ಶಂಕರನೊಂದಿಗೆ ಪ್ರವೀಣ ಮಸಣದಗುಡ್ಡೆಗೆ ಬಂದವನು ಅಲ್ಲಿಂದ ಸ್ವಲ್ಪ ದೂರವಿದ್ದ ಸುರೇಶನ ಸರಕಾರಿ ಕಾಲೋನಿಗೆ ಅವರನ್ನು ಕರೆದೊಯ್ದ. ಅಲ್ಲಿನ ಅಶ್ವತ್ಥ ಮರದ ಕಟ್ಟೆಯೊಂದಲ್ಲಿ ಗುರೂಜಿಯವರನ್ನು ಕುಳ್ಳಿರಿಸಿದವನು ಶಂಕರನನೊಂದಿಗೆ ಸುರೇಶನ ಮನೆಯತ್ತ ಹೋದ. ಸುರೇಶ ಆಹೊತ್ತು ತನ್ನ ಬಡಾವಣೆಯ ಕೊನೆಯ ಸಾಲಿನ ಹರಕು ಮುರುಕು ಮನೆಯೊಂದರಲ್ಲಿ ಕುಡಿದು ಮತ್ತನಾಗಿ ಮಲಗಿದ್ದ. ಪ್ರವೀಣ ಮತ್ತು ಶಂಕರನ ಚೆನ್ನಾಗಿ ಪರಿಚಯವಿದ್ದ ಅಲ್ಲಿನವರಲ್ಲಿ ಒಂದಿಬ್ಬರು ಗಂಡಸರು ಅವರನ್ನು ಕಂಡು ದಡಬಡನೆದ್ದು ಬಂದು ಅವರಿಂದ ವಿಷಯ ತಿಳಿದುಕೊಂಡವರು ಕೂಡಲೇ ಸುರೇಶನನ್ನು ಎಬ್ಬಿಸಲು ಅವನ ಮನೆಯೊಳಗೆ ನುಗ್ಗಿದರು. ಆದರೆ ಸುರೇಶ ಏಳುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಅವರಲ್ಲೊಬ್ಬ ಸುರೇಶನ ನೆತ್ತಿಗೆ ಒಂದು ಚೊಂಬು ತಣ್ಣೀರು ಸುರಿದು ಎಬ್ಬಿಸಬೇಕಾಯಿತು. ಅದರಿಂದ ಸುರೇಶ ಎಚ್ಚರಗೊಂಡು ಕೆಂಡಾಮಂಡಲನಾದವನು ಇಬ್ಬರಿಗೂ ಕೆಟ್ಟಕೆಟ್ಟ ಪದಗಳಿಂದ  ಬಯ್ಯುತ್ತ ಎದ್ದು ಕುಳಿತ. ಆದರೆ ಅವರು ಅವನ ಅಂಥ ಬೈಗುಳವನ್ನು ಕೇಳಿ ತಮಾಷೆಯಾಗಿ ನಗುತ್ತ ಪ್ರವೀಣ, ಶಂಕರರು ಬಂದಿರುವುದನ್ನು ಅವನಿಗೆ ತಿಳಿಸಿದರು. ಅವರ ಹೆಸರು ಕಿವಿಗೆ ಬೀಳುತ್ತಲೇ ಸುರೇಶ ತಟ್ಟನೆ ನೆಟ್ಟಗಾದ. ‘ಓಹೋ, ಆ ಬೇವರ್ಸಿ ಬಂದಿದ್ದಾನಾ…? ಅಂವ ನನ್ನನ್ನು ಹುಡುಕಿಕೊಂಡು ಬಂದೇ ಬರ್ತಾನೆ ಅಂತ ಗೊತ್ತಿತ್ತು ಬಿಡಿ!’ ಎಂದು ನಗುತ್ತ ಎದ್ದು ತೂರಾಡುತ್ತ ಹೊರಗೆ ಬಂದ. ಅಲ್ಲಿ ತನ್ನ ವಠಾರದವರೆಲ್ಲರೂ ತಂತಮ್ಮ ಹೊಸ್ತಿಲು, ಅಂಗಳದಲ್ಲಿ ನಿಂತುಕೊಂಡು ತನ್ನತ್ತ ಕುತೂಹಲದಿಂದ ನೋಡುತ್ತಿದ್ದುದನ್ನು ಕಂಡ ಸುರೇಶ ತನ್ನ ಮಹತ್ವವನ್ನು ಸಾರುವ ಉದ್ದೇಶದಲ್ಲಿ,‘ನಮಸ್ಕಾರ ಪ್ರವೀಣಣ್ಣ… ಏನು ವಿಷಯ ಮಾರಾಯ್ರೇ…?’ಎಂದು ಸಂಗತಿ ತನಗೆ ಗೊತ್ತಿದ್ದರೂ ಜೋರಿನಿಂದ ಪ್ರಶ್ನಿಸಿದ. ಅವನ ಅಹಂಕಾರದ ಮಾತುಗಳನ್ನು ಕೇಳಿದ ಪ್ರವೀಣ, ಶಂಕರರಿಬ್ಬರಿಗೂ ಕೆಟ್ಟ ಕೋಪ ಬಂತು. ಆದರೆ ಈ ಸಮಯದಲ್ಲಿ ತಾಳ್ಮೆಗೆಟ್ಟರೆ ಕೆಲಸ ಕೆಡುವುದೆಂದು ವಿವೇಕ ಎಚ್ಚರಿಸಿತು. ‘ಏನಿಲ್ಲ ಮಾರಾಯಾ ನಮ್ಮ ಗುರೂಜಿಯವರು ಬಂದಿದ್ದಾರೆ. ಮೊನ್ನೆ ನೀನು ತೋರಿಸಿದ ನಾಗನ ಕಲ್ಲಿದ್ದ ಆ ಜಾಗ ಮತ್ತು ಅದರ ಕಥೆಯನ್ನು ಸ್ವಲ್ಪ ಅವರಿಗೆ ಹೇಳಬೇಕಿತ್ತಲ್ಲವಾ…?’ ಎಂದು ಪ್ರವೀಣ, ‘ಈಗಲೇ ಹೊರಡು…!’ ಎಂಬಂಥ ಭಾವದಿಂದ ಆಜ್ಞಾಪಿಸಿದ. ‘ಅರೇ, ಅದಕ್ಕೇನಂತೆ ಹೋಗುವ. ನಡೆಯಿರಿ!’ ಎಂದು ಸುರೇಶ ಅವರಿಗಿಂತ ಮುಂದೆ ನಡೆದವನು ತಟ್ಟನೆ ನಿಂತು,‘ಆದರೆ ಪ್ರವೀಣಣ್ಣ ನನಗೀಗ ಸ್ವಲ್ಪ ಎದುರು ಹಾಕದೆ (ಸಾರಾಯಿ ಕುಡಿಯದೆ) ಕೈಕಾಲು ಅಲ್ಲಾಡುವುದಿಲ್ಲ ನೋಡಿ. ಆಗ ಸ್ವಲ್ಪ ಕುಡಿದು ಮಲಗಿದ್ದೆ. ಆದರೆ ಈ ದರ್ವೇಶಿಗಳಿದ್ದಾರಲ್ಲ…ಇವರು, ನೀವು ಬಂದ ಸುದ್ದಿಯನ್ನು ಹೇಳುವ ಗಡಿಬಿಡಿಯಲ್ಲಿ ನನ್ನ ಮಂಡೆಗೆ ಸಮಾ ನೀರು ಸುರಿದು ಎಬ್ಬಿಸಿ ಎಲ್ಲಾ ಹಾಳು ಮಾಡಿಬಿಟ್ಟರು!’ಎಂದು ಆ ಇಬ್ಬರತ್ತ ಕೋಪದಿಂದ ದಿಟ್ಟಿಸುತ್ತ ಹೇಳಿದ. ಆದರೆ ಅವರು ಆಗಲೂ ತಮಾಷೆಯಿಂದ ನಗುತ್ತ ನಿಂತಿದ್ದರು. ‘ಆಯ್ತು, ಆಯ್ತು ಮಾರಾಯಾ. ಸ್ವಲ್ಪವೇನು ಕೆಲಸವಾದ ಮೇಲೆ ಇಡೀ ಬಾಟಲಿಯನ್ನೇ ಕೊಡಿಸುತ್ತೇನೆ. ಕುಡಿದು ಬಿದ್ದು ಸಾಯಿ ಅತ್ಲಾಗೆ. ಈಗ ಮೊದಲು ನಡೆ!’ ಎಂದು ಪ್ರವೀಣ ತನ್ನ ಕೋಪವನ್ನು ತಮಾಷೆಯೊಂದಿಗೆ ಬೆರೆಸಿ ತೋರಿಸಿದ.‘ಹಾಗಾದರೆ ಸರಿ ಹೋಗುವ…!’ ಎಂದು ಸುರೇಶ ತಾಳತಪ್ಪಿದ ಹೆಜ್ಜೆಗಳನ್ನಿಡುತ್ತ ಮುಂದೆ ನಡೆದ.    ಸ್ವಲ್ಪಹೊತ್ತಿನಲ್ಲಿ ಸುರೇಶ ಗುರೂಜಿಯವರನ್ನು ಅಲ್ಲಿನ ಕುರುಚಲು ಹಾಡಿಯತ್ತ ಕರೆದುಕೊಂಡು ಹೋಗಿ ಆ ಪೊದೆಯನ್ನು ತೋರಿಸಿದ. ಪ್ರವೀಣನಿಗೆ ಮೂತ್ರ ಹುಯ್ಯಲು ಆ ಸ್ಥಳವು ಬಹಳ ಇಷ್ಟವಾಗಿದ್ದುದರಿಂದ ಆ ಪರಿಸರವಿಡೀ ಗಬ್ಬು ವಾಸನೆ ಬೀರುತ್ತಿತ್ತು. ಗುರೂಜಿಯವರು ಕುತೂಹಲದಿಂದ ಅದರತ್ತ ಹೋದವರಿಗೆ ಒಮ್ಮೆಲೇ ವಾಂತಿ ಬಂದಂತಾಯಿತು. ಆದರೂ ಮೂಗು ಮುಚ್ಚಿಕೊಂಡು ಆ ಜಾಗವನ್ನೂ ಅಲ್ಲಿನ ಕಲ್ಲುಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸತೊಡಗಿದರು. ಆದರೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದೆ ಉಸಿರುಗಟ್ಟಿತು. ತಟ್ಟನೆ ಈಚೆಗೆ ಧಾವಿಸಿ ಬಂದವರು, ‘ಛೇ, ಛೇ! ಎಂಥದಿದು ಪ್ರವೀಣರೇ… ಎಷ್ಟು ವರ್ಷಗಳಿಂದ ಇಲ್ಲಿ ಗಲೀಜು ಮಾಡುತ್ತಿದ್ದೀರಿ…? ಈ ಜಾಗವಿಡೀ ಸರ್ಕಾರಿ ಪಾಯಿಖಾನೆಯ ಥರಾ ನಾರುತ್ತಿದೆಯಲ್ಲ. ಅಪಚಾರ ಅಪಚಾರ…!’ ಎಂದು ಗೊಣಗಿದರು. ಅಷ್ಟು ಕೇಳಿದ ಪ್ರವೀಣನಿಗೆ ಭಯ, ಅವಮಾನವೆಲ್ಲವೂ ಒಟ್ಟೊಟ್ಟಿಗಾಯಿತು. ಪೆಚ್ಚು ನಗುತ್ತ ನಿಂತುಕೊಂಡ. ಗುರೂಜಿಯವರು ಆ ಪೊದೆಯ ಸುತ್ತಮುತ್ತ ದಟ್ಟ ಮರಗಳಿಂದ ತುಂಬಿದ ಪ್ರದೇಶವೊಂದನ್ನು ಮೂಗು ಮುಚ್ಚಿಕೊಂಡೇ ಪರೀಕ್ಷಿಸುತ್ತ ಸ್ವಲ್ಪಹೊತ್ತು ಸುತ್ತಾಡಿದರು. ಅಲ್ಲೊಂದು ಕಡೆ ವಿಶಾಲವಾದ ಮನೆಯಿದ್ದು ಈಗ ಅದರ ನಾಮಾಶೇಷ ಮಾತ್ರವೇ ಉಳಿದಿದ್ದುದು ಕಾಣಿಸುತ್ತಿತ್ತು. ಆದ್ದರಿಂದ ಈ ಬನವೂ ಅದಕ್ಕೆ ಸಂಬಂಧಿಸಿದ್ದು ಎನ್ನುವುದು ಅವರಿಗೆ ಸ್ಪಷ್ಟವಾಯಿತು. ಮತ್ತೊಮ್ಮೆ ಅವೆಲ್ಲವನ್ನೂ ಪರಿಶೀಲಿಸಿ ಮುಂದಿನ ಕಾರ್ಯಚರಣೆ ಏನೆಂಬುದರ ಕುರಿತು ಅಲ್ಲಿಯೇ ನಿರ್ಧರಿಸಿಬಿಟ್ಟರು. ಈಗ ಸುರೇಶ ಮಾತನಾಡಿ,‘ಆ ಜಾಗದ ವಾರಸುದಾರರು ಈಗ ಇಲ್ಲಿ ಸುತ್ತಮುತ್ತ ಯಾರು ಇಲ್ಲ. ಜಾಗವು ಸರಕಾರದ ಸ್ವಾಧೀನದಲ್ಲಿದೆ! ಎಂದ. ಗುರೂಜಿ ಅವನ ಹೇಳಿಕೆಯನ್ನು ಕೇಳಿಸಿಕೊಂಡರಾದರೂ ಅವರಿಗೆ ಅದರಲ್ಲಿ ವಿಶ್ವಾಸ ಬರಲಿಲ್ಲ. ಆದ್ದರಿಂದ ಆ ಕುರಿತು ಸತ್ಯವನ್ನು ತಿಳಿದುಕೊಳ್ಳುವ ಜವಾಬ್ದಾರಿಯನ್ನು ಪ್ರವೀಣ ಮತ್ತು ಶಂಕರನಿಗೆ ವಹಿಸಲಿಚ್ಛಿಸಿದವರು,‘ನೋಡಿ ಪ್ರವೀಣರೇ, ನೀವಿನ್ನು ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ಇಲ್ಲಿನ ಸಂಗತಿ ಏನೆಂಬುದು ನಮಗೆ ಸ್ಪಷ್ಟವಾಗಿದೆ. ಅವೆಲ್ಲವನ್ನೂ ಸುಸೂತ್ರವಾಗಿ ಪರಿಹರಿಸಿಕೊಡುವ ಜವಾಬ್ದಾರಿ ನಮ್ಮದು. ಆದರೆ ಸ್ವಲ್ಪ ದುಡ್ಡು ಖರ್ಚಾಗುತ್ತದೆ. ನೀವು ಕೂಡಲೇ ಆ ವ್ಯವಸ್ಥೆಯನ್ನು ಮಾಡಿಕೊಳ್ಳಿ ಮತ್ತು ಈ ಸ್ಥಳಕ್ಕೆ ಸಂಬಂಧಪಟ್ಟು ನಾವು ಹೇಳುವ ಕೆಲವು ಮುಖ್ಯ ವಿಚಾರಗಳನ್ನೂ ತಿಳಿದುಕೊಳ್ಳುವ ಕೆಲಸವನ್ನು ನೀವಿಬ್ಬರೂ ಮಾಡಬೇಕಾಗುತ್ತದೆ. ಎಷ್ಟು ಬೇಗ ಆ ಮಾಹಿತಿಯನ್ನು ತಂದು ನಮಗೆ ಒಪ್ಪಿಸುತ್ತೀರೋ ಅಷ್ಟೇ ಬೇಗ ನಿಮ್ಮ ಸಮಸ್ಯೆಯನ್ನೂ ನಿವಾರಿಸಿಕೊಡುತ್ತೇವೆ!’ ಎಂದರು ಗಂಭೀರವಾಗಿ. ‘ಹಣದ ವ್ಯವಸ್ಥೆ ಮಾಡಿಕೊಳ್ಳಿ…!’ಎಂದಾಕ್ಷಣ ಪ್ರವೀಣ ಸ್ವಲ್ಪ ಅಶಾಂತನಾದ. ಅದನ್ನು ಗಮನಿಸಿದ ಶಂಕರ,‘ಅದರ ಬಗ್ಗೆ ಈಗಲೇ ತಲೆಕೆಡಿಸಿಕೊಳ್ಳುವುದು ಮಾರಾಯಾ ಸುಮ್ಮನಿರು…!’ ಎಂದು ಕಣ್ಣಿನಲ್ಲೇ ಅವನನ್ನು ಸಮಾಧಾನಿಸಿದ.    ಗುರೂಜಿಯ ಆಜ್ಞೆಯಂತೆ ಗೆಳೆಯರಿಬ್ಬರು ಕೆಲವೇ ದಿನದೊಳಗೆ ಆ ಬನದ ಚರಿತ್ರೆಯನ್ನು ತಿಳಿದುಕೊಂಡು ಬಂದು ಅವರಿಗೊಪ್ಪಿಸಿದರು. ಆ ವರದಿಯ ಪ್ರಕಾರ, ‘ಸದ್ಯ ಬನದ ವಾರಸುದಾರರು ಈಶ್ವರಪುರದಲ್ಲಿ ಯಾರೂ ಇಲ್ಲ. ಅವರ ದೂರದ ಸಂಬಂಧಿಗಳಾದ ಒಂದೆರಡು ಕುಟುಂಬಗಳು ಇರುವುವಾದರೂ ಮೂಲ ಜಾಗಕ್ಕೆ ಸಂಬಂಧಿಸಿದವರ ಮಾಹಿತಿ ಮತ್ತು ವಿಳಾಸ ಅವರಿಗೂ ಗೊತ್ತಿಲ್ಲ ಹಾಗೂ ಬನದ ಜಾಗವೂ ಸರಕಾರಕ್ಕೆ ಸಂಬಂಧಿಸಿದ್ದಲ್ಲ. ಸ್ಮಶಾನವಿದ್ದ ಜಮೀನು ಮಾತ್ರ ಸರಕಾರದ್ದು. ಹಾಗಾಗಿ ಸ್ಮಶಾನದ ಸುತ್ತಮುತ್ತದ ಒಂದಷ್ಟು ಭೂಮಿ ಸಹಜವಾಗಿಯೇ ಪಾಳುಬಿದ್ದಿದೆ. ಅದರಲ್ಲಿ ಬನವೂ ಸೇರಿಬಿಟ್ಟಿದೆ!’ ಎಂದು ತಿಳಿದು ಬಂತು. ಅಷ್ಟು ವಿಷಯನ್ನು ತಿಳಿದ ಗುರೂಜಿಯವರು ಒಳಗೊಳಗೇ ಹರುಷಗೊಂಡರು.‘ಈಶ್ವರಪುರದ ಹೃದಯಭಾಗದಲ್ಲಿರುವ ನಾಗ ಬನವದು. ಅಲ್ಲಿ ಸುತ್ತಮುತ್ತಲ್ಲೆಲ್ಲೂ ಬೇರೊಂದು ಬನವೂ ಇಲ್ಲ. ಹಾಗಾಗಿ ಅದನ್ನು ತಮ್ಮಿಂದ ಊರ್ಜಿತಗೊಳಿಸುವುದೇ ನಾಗದೇವನಿಚ್ಛೆಯಿರಬೇಕು. ಅಷ್ಟಲ್ಲದೇ ತಮ್ಮ ಜೀವನದೇಳಿಗೆಯ ಕಾರ್ಯಸಾಧನೆಗೂ ಆ ಪರಿಸರವು ಹೇಳಿ ಮಾಡಿಸಿದಂತಿದೆ. ಆದಷ್ಟು ಬೇಗ ಅದನ್ನು ಜೀರ್ಣೋದ್ಧಾರ ಮಾಡಿ ತಮ್ಮದಾಗಿಸಿಕೊಳ್ಳಬೇಕು!’ ಎಂದು ನಿರ್ಧರಿಸಿದರು ಹಾಗೂ ಕೂಡಲೇ ಪ್ರವೀಣನನ್ನೂ ಶಂಕರನಿಗೂ ಮನೆಗೆ ಕರೆದು ತಮ್ಮ ಮನದಿಂಗಿತವನ್ನು ಅವರಿಗೆ ವಿವರಿಸಿದರು. ಜೊತೆಗೆ ಆ ಶುಭಕಾರ್ಯಕ್ಕೆ ತಗಲುವ ಖರ್ಚುವೆಚ್ಚವನ್ನೂ ಮತ್ತದನ್ನು ಹೊಂದಿಸುವ ಬಗೆಯನ್ನೂ ಹಾಗೂ ಆ ಕಾರ್ಯದಲ್ಲಿ ಪಾಲುಗೊಳ್ಳುವುದರಿಂದ ಅವರ ಜೀವನದಲ್ಲಾಗುವ ಸಮೃದ್ಧಿಗಳು ಯಾವ ಯಾವ ರೀತಿಯವು ಎಂಬುದನ್ನೆಲ್ಲ ಅಂದು ಶಂಕರನಿಗೆ ವಿವರಿಸಿದಂತೆಯೇ ಇಂದು ಪ್ರವೀಣನಿಗೂ ತಿಳಿಸಿ ಅವನನ್ನು ಸಜ್ಜುಗೊಳಿಸಿದರು.    ಗುರೂಜಿಯವರ ಮಾತು ಕೇಳಿದ ಪ್ರವೀಣ ಮತ್ತು ಶಂಕರ ಆ ಕಾರ್ಯದ ಕುರಿತು ಭಾರೀ ಉತ್ಸುಕರಾದರು. ಗುರೂಜಿಯ ಮಾರ್ಗದರ್ಶನದಂತೆ ಅವರ ಹೇಳಿಕೆಯನ್ನು ಆ ಬನದ ಸುತ್ತಮುತ್ತಲಿನ ಜನರಲ್ಲಿ ಪ್ರಚಾರ ಮಾಡುತ್ತ ಬಂದರು. ಬಳಿಕ ಜೀರ್ಣೋದ್ಧಾರದ ವಿಷಯಕ್ಕೆ ಸಂಬಂಧಿಸಿ ನಗರಸಭೆಯಿಂದಲೂ ಕೆಲವೇ ದಿನದಲ್ಲಿ ‘ನೋ ಅಬ್ಜಕ್ಷನ್!’ ಲೆಟರ್ ಕೂಡಾ ಪ್ರವೀಣನ ಕೈಸೇರಿತು. ಆದ್ದರಿಂದ ದಟ್ಟ ಹಸಿರಿನಿಂದ ತುಂಬಿ ಆರೋಗ್ಯಪೂರ್ಣವಾಗಿದ್ದ ಆ ಬನವನ್ನು ಕೂಡಲೇ‘ಕಾಂಕ್ರೀಟ್ ಭವನ’ವನ್ನಾಗಿ ಮಾರ್ಪಡಿಸಲು ಶುಭದಿನವೊಂದನ್ನು ಗೊತ್ತುಪಡಿಸಲಾಯಿತು. ಆದರೆ ಅದಕ್ಕಿನ್ನೂ ಒಂದೂವರೆ ತಿಂಗಳ ಗಡುವಿತ್ತು. ಈ ಎರಡನೆಯ ಜೀರ್ಣೋದ್ಧಾರದ ಮೂಲಕ ಗುರೂಜಿಯವರಿಗೆ ತಮ್ಮ ಧಾರ್ಮಿಕ ವರ್ಚಸ್ಸು ಮತ್ತು ಸಂಪಾದನೆಯನ್ನು ವೃದ್ಧಿಸಿಕೊಳ್ಳುವುದು ಬಹಳ ಮುಖ್ಯ ಉದ್ದೇಶವಾಗಿತ್ತು. ಹಾಗಾಗಿ ಬಹಳ ಹಿಂದೆಯೇ ಅವರೊಳಗೆ ಹೊಸ ವಿಚಾರವೊಂದು ಮೊಳೆತಿತ್ತು. ಆದ್ದರಿಂದ ಇದೇ ಕಾರ್ಯಕ್ರಮದಲ್ಲಿ ಅದನ್ನು ಕಾರ್ಯಗತಗೊಳಿಸಲು ಅವರು ಮನಸ್ಸು ಮಾಡಿದರು. (ಮುಂದುವರೆಯುವುದು) ********* ಗುರುರಾಜ್ ಸನಿಲ್ ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ. ********************************************

Read Post »

ಇತರೆ

ಮಿರಗಿನ ಮಳೆ

ಜಮೀನು ಕೆಲಸವೆಲ್ಲ ಅನುಭವಕ್ಕೆ ಇಲ್ಲದ್ದು .ಕೂಲಿ ಆಳಿಟ್ಟು ಕಳೆ ತೆಗೆದು ಹದ ಮಾಡೋಣವೆಂದರೆ ದಿನಗೂಲಿ ಮೂನ್ನುರು ರೂಪಾಯಿ,ಅದನ್ನ ಎಲ್ಲಿಂದ ಹುಟ್ಟು ಹಾಕೋದು? ನಾವೇ ಮಾಡಿದರಾಯಿತು…ಕಂದ್ಲಿ,ಸಲಿಕೆ,ಗುದ್ಲಿ,ಹಿಡಿದು ನಿಂತರೆ ಮುಂದೆ ಕಳೆ ತೆಗೆದು ಮುಗಿಸುವದರಲ್ಲಿ ಹಿಂದೆ ಬೆಳೆದು ನಿಲ್ಲುತ್ತೆ.ಇದ್ದಕ್ಕಿದ್ದಂತೆ ಕೃಷಿ ಕೆಲಸ ಬಾರದ್ದು,ಒಗ್ಗದ್ದು,ತಿಳಿಯದು…ಕಲಿತು ಕೃಷಿ ನೆಟ್ಟು ಬೆಳೆ ಕೊಯ್ದು ಉಂಬೋವರಿಗೂ ಈಗ ಹೊಟ್ಟೆಗೆ ಎನು ಉಂಬುವುದು? ಹಸಿವಾದ್ರು ಯಾಕೆ ಇಟ್ಟಿದ್ದಾನೆ ಆ ಭಗವಂತ!

ಮಿರಗಿನ ಮಳೆ Read Post »

ಇತರೆ

ಮರೆಯಲಾಗದ ದಲಿತ ನಾಯಕ: ಅಯ್ಯನ್ ಕಾಳಿ

500 ಕುಟುಂಬಗಳಿಗೆ ತಲಾ ಒಂದೊಂದು ಎಕರೆಯಂತೆ 500 ಎಕರೆಯನ್ನು ಹಂಚಿಸಿ ದಲಿತರಿಗೆ ಭೂ ಓಡೆತನ ಕೊಡಿಸಿದ ಅಯ್ಯನ್ ಕಾಳಿ ಅವರ ಹೋರಾಟ ಮತ್ತು ಪಾತ್ರ ಮಹತ್ವದ್ದಾಗಿತ್ತು. ಇಂದಿಗೂ ಕೂಡ ಕೇರಳಾದಲ್ಲಿ ಅಯ್ಯನ್ ಕಾಳಿ ಎಂದರೆ ಮನೆಮಾತು. ಅವರನ್ನು ಅಲ್ಲಿನ ಜನತೆ ಮಹಾತ್ಮ ಅಯ್ಯನ್ ಕಾಳಿ ಎಂದೇ ಕರೆಯುತ್ತಾರೆ. ಇಂದು ಅವರ 158ನೇ ಜನ್ಮದಿನದ ಸಂಭ್ರಮ. ಇಂತಹ ಸುದಿನದಲ್ಲಿ ಅವರ ವಿಚಾರ ಮತ್ತು ಕ್ರಾಂತಿಯನ್ನು ಮತ್ತಷ್ಟು ಮುನ್ನೆಲೆಗೆ ತರುವ ಹಾಗೂ ವಿಸ್ತರಿಸುವ ಅಗತ್ಯತೆಯಿಂದ ನಾವು ನೋಡಬೇಕಿದೆ

ಮರೆಯಲಾಗದ ದಲಿತ ನಾಯಕ: ಅಯ್ಯನ್ ಕಾಳಿ Read Post »

ಇತರೆ, ಪ್ರಬಂಧ

ಚಾಕು ಹೆಗಡೆ

ಇಂತಹ ಎಷ್ಟೋ ಘಟನೆಗಳಿಗೆ ಕುಮಾರ ಹೆಗಡೆ ಕಾರಣನಾದರೂ ಅವನು ಉದ್ದೇಶಪೂರ್ವಕವಾಗಿ ಹೀಗೆ ಮಾಡುವುದಿಲ್ಲ. ಅವನ ಮಟ್ಟಿಗೆ ಎಲ್ಲರಿಂದಲೂ ಪ್ರೀತಿ ಪಡೆಯಬೇಕು ಎನ್ನುವ ಆಸಕ್ತಿ. ಆದ್ದರಿಂದಲೇ ಎಲ್ಲರಿಗೂ ಅವನಲ್ಲಿ ವಿಶ್ವಾಸ. ಎಲ್ಲರಿಗೂ ಅವನ ಮಧ್ಯಸ್ತಿಕೆ ಬೇಕೇ ಬೇಕು. ಊರಿನಲ್ಲಿ ಯಾವ ಪಂಚಾಯ್ತಿಯಾದರೂ ಕುಮಾರ ಹೆಗಡೆಗೆ ಕರೆ ಹೋಗುತ್ತದೆ

ಚಾಕು ಹೆಗಡೆ Read Post »

ಇತರೆ

ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ

ಲೇಖನ ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ ವಿಶ್ವನಾಥ ಎನ್ ನೇರಳಕಟ್ಟೆ ಹಳಗನ್ನಡ ಸಾಹಿತ್ಯವನ್ನು ಅಭ್ಯಸಿಸುವ ನಿಟ್ಟಿನಲ್ಲಿ ಇಂದಿನ ಬಹುತೇಕ ವಿದ್ಯಾರ್ಥಿಗಳ ಮನೋಭಾವದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಒಂದು ಕಾಲಘಟ್ಟದಲ್ಲಿ ಅಧ್ಯಯನದ ಪ್ರಮುಖ ಭಾಗವಾಗಿದ್ದ ಹಳಗನ್ನಡ ಸಾಹಿತ್ಯ ಇಂದು ಬಹುತೇಕ ಸಂದರ್ಭಗಳಲ್ಲಿ ಪರೀಕ್ಷೆಯ ಉದ್ದೇಶಕ್ಕಾಗಿ ಮಾತ್ರವೇ ಅಧ್ಯಯನಕ್ಕೆ ಒಳಪಡುತ್ತಿದೆ. ಅದರ ಕುರಿತಾದ ಆಸಕ್ತಿಯನ್ನು ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಅದನ್ನು ಸಂಪೂರ್ಣವಾಗಿ ಮರೆತುಬಿಡುತ್ತಿದ್ದಾರೆ. ಇದು ಕೇವಲ ವಿದ್ಯಾರ್ಥಿ ವಲಯದ ಮನೋಭಾವವಲ್ಲ. ಕನ್ನಡ ಭಾಷೆ- ಸಾಹಿತ್ಯವನ್ನೇ ಜೀವನ ನಿರ್ವಹಣೆಯ ಆಧಾರಸ್ತಂಭಗಳಾಗಿಸಿಕೊಂಡ ಕೆಲವರಲ್ಲೂ ಅಪ್ರಜ್ಞಾಪೂರ್ವಕವಾದ ತಿರಸ್ಕಾರ ಇದ್ದೇ ಇದೆ. ಹಳಗನ್ನಡ ಸಾಹಿತ್ಯ ಇಂದಿನ ಸಮಾಜಕ್ಕೆ ಒದಗಿಸಿಕೊಡುವ ಮೌಲ್ಯಗಳನ್ನು ಗಮನಿಸಿಕೊಂಡಾಗ ಅದರ ಕುರಿತ ನಿರ್ಲಕ್ಷ್ಯ ಭಾವ ತಪ್ಪು ಎನ್ನುವುದು ಮನದಟ್ಟಾಗುತ್ತದೆ. ಯಾವುದೇ ಭಾಷೆಯ, ಯಾವುದೇ ತರಹದ ಸಾಹಿತ್ಯವಾದರೂ ಕಾಲದ ಅಗತ್ಯಕ್ಕೆ, ಬದಲಾವಣೆಗಳಿಗೆ ಸ್ಪಂದಿಸದೇ ಹೋದಾಗ ಸಮಾಜದಿಂದ ದೂರವಾಗುತ್ತದೆ, ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಇದು ಸಹಜವಾದ ಪ್ರಕ್ರಿಯೆ. ಅಚ್ಚರಿಯ ಸಂಗತಿಯೆಂದರೆ, ಇಂದಿನ ಕಾಲಘಟ್ಟಕ್ಕೆ ಚೆನ್ನಾಗಿ ಅನ್ವಯಿಸಬಲ್ಲ ಹಲವಾರು ಸಂಗತಿಗಳನ್ನು ಹೊಂದಿದ್ದೂ ಹಳಗನ್ನಡ ಸಾಹಿತ್ಯ ಜನರಿಂದ ದೂರವಾಗುತ್ತಿದೆ. ಇಂದಿನ ಕಾಲಘಟ್ಟದ ಹಲವು ಚರ್ಚಿತ ವಿಚಾರಗಳಿಗೆ ಹಳಗನ್ನಡ ಸಾಹಿತ್ಯದಲ್ಲಿ ಉತ್ತರವಿದೆ. ಈ ನೆಲೆಯಲ್ಲಿ ಹಲವು ಉದಾಹರಣೆಗಳನ್ನು ನೀಡಬಹುದು. ಸೂಚ್ಯವಾಗಿ ಒಂದೆರಡು ಕಾವ್ಯ ಸಂದರ್ಭಗಳನ್ನು ಗಮನಿಸಿಕೊಳ್ಳಬಹುದು. ಮೊದಲನೆಯದಾಗಿ, ಪಂಪಕವಿಯ ‘ವಿಕ್ರಮಾರ್ಜುನ ವಿಜಯ’ ಕಾವ್ಯದಲ್ಲಿ ಬರುವ ಭೀಷ್ಮನಿಗೆ ಸೇನಾಧಿಪತಿ ಪಟ್ಟವನ್ನು ಕಟ್ಟುವ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಕುಲದ ಕುರಿತಾದ ಚರ್ಚೆ. ‘ಕುಲಮನೆ ಮುನ್ನಮುಗ್ಗಡಿಪಿರೇಂಗಳ…’ ಪದ್ಯಭಾಗವು ಕುಲದ ಕುರಿತ ಹೊಸ ವ್ಯಾಖ್ಯಾನವನ್ನು ಒದಗಿಸಿಕೊಡುವ ಕಾರಣಕ್ಕೆ ಪ್ರಮುಖವೆನಿಸುತ್ತದೆ. ವಿವಾದಕ್ಕೆ ಎಡೆಮಾಡಿಕೊಡುತ್ತಿರುವ ಜಾತಿಪದ್ಧತಿಯನ್ನು ‘ಕುಲ’ದ ನೆಲೆಯಲ್ಲಿ ಪರಿಕಲ್ಪಿಸಿಕೊಂಡು, ಅವಲೋಕಿಸಿಕೊಳ್ಳಲಾಗಿದೆ. ಕುಲವು ಜನ್ಮದತ್ತವಾಗಿ ನಿರ್ಧರಿಸಲ್ಪಡುವುದಿಲ್ಲ ಎನ್ನುವುದನ್ನು ಈ ಪದ್ಯಭಾಗವು ಸ್ಪಷ್ಟಪಡಿಸುತ್ತದೆ. ವ್ಯಕ್ತಿಯ ವ್ಯಕ್ತಿತ್ವದ ಆಧಾರದಲ್ಲಿ ಕುಲವನ್ನು ನಿರ್ಧರಿಸಬೇಕೆಂಬ ಈ ವ್ಯಾಖ್ಯಾನವನ್ನು ಯಥಾವತ್ತಾಗಿ ಇಂದಿನ ಸಮಾಜಕ್ಕೆ ಅನ್ವಯಿಸಿಕೊಳ್ಳಬಹುದು. ಎರಡನೆಯದಾಗಿ, ರನ್ನನ ‘ಗದಾಯುದ್ಧ’ದಲ್ಲಿ ಬರುವ ಪದ್ಯಭಾಗವು ಯುದ್ಧವಿರೋಧಿ ನಿಲುವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. ‘ಅಂಧನೃಪಸುತನಯೋ ಜಾ| ತ್ಯಂಧನಯೋ ಮೆಟ್ಟದಗಲ್ದು ಪೋಗೆನುತುಂ ಕೋ| ಪಾಂಧರ್ ಜಡಿದರ್ ಪತಿಯ ಕ| ಬಂಧಮನೆಡಗಲಿಸಿ ಪೋಪ ದುರ್ಯೋಧನನಂ||’- ಈ ಪದ್ಯಭಾಗವು ಯುದ್ಧಕ್ಕೆ ಕಾರಣನಾದ ದುರ್ಯೋಧನ ಯುದ್ಧದ ನಂತರ ಎದುರಿಸಿದ ಪರಿಸ್ಥಿತಿಯನ್ನು ಹೇಳುತ್ತದೆ. ಆತನ ಆಜ್ಞೆಗೆ ತಲೆಬಾಗುತ್ತಿದ್ದ ಜನರೇ ಆತನನ್ನು ಹೀಗಳೆಯುವಂತಾಗುತ್ತದೆ. ಸಾಮಾನ್ಯರನ್ನು ನಿಂದಿಸಿದಂತೆ ಆತನನ್ನೂ ನಿಂದಿಸುವಂತಾಗುತ್ತದೆ. ಇದಕ್ಕೆ ದಿಟ್ಟತನದಿಂದ ಉತ್ತರಿಸಲೂ ಆತನಿಂದ ಸಾಧ್ಯವಾಗುವುದಿಲ್ಲ. ವ್ಯಕ್ತಿಗತ ಮೌಲ್ಯಗಳು ಅವನತಿ ಹೊಂದುತ್ತವೆ. ಸಾಮಾಜಿಕ ಸಂಬಂಧಗಳು ಛಿದ್ರಗೊಳ್ಳುವಂತಾಗುತ್ತವೆ. ಇವೆಲ್ಲವೂ ಯುದ್ಧದ ಪರಿಣಾಮವಾಗಿ ಉಂಟಾಗುವ ವೈಯಕ್ತಿಕ ಹಾಗೂ ಸಾಮಾಜಿಕ ಸ್ಥಿತ್ಯಂತರಗಳ ಚಿತ್ರಣಗಳೇ ಆಗಿವೆ. ಕುಲವು ಅತ್ಯಂತ ಪ್ರಬಲವಾಗಿದ್ದ ಕಾಲಘಟ್ಟದಲ್ಲಿಯೇ ಹಳಗನ್ನಡ ಸಾಹಿತ್ಯ ಅದನ್ನು ಹೊಸ ದೃಷ್ಟಿಕೋನದಲ್ಲಿ ನಿರ್ವಚಿಸಿಕೊಳ್ಳುತ್ತದೆ. ಯುದ್ಧವು ಸಾಹಸದ ಸಂಕೇತ ಎಂಬ ಮನೋಭಾವದಿಂದಲೇ ಕೂಡಿದ್ದ ಸಮಾಜದೆದುರು ಯುದ್ಧವಿರೋಧಿ ನಿಲುವನ್ನು ವ್ಯಕ್ತಪಡಿಸುತ್ತದೆ. ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಧೈರ್ಯ ತೋರಿದ ಹಳಗನ್ನಡ ಕವಿಗಳು ತನ್ಮೂಲಕ ಕಾಲದ ಮಿತಿಯನ್ನು ಮೀರಿದ ವಿಚಾರಗಳನ್ನು ಚರ್ಚಿಸಿದ್ದಾರೆ. 21ನೇ ಶತಮಾನದ ಸಮಾಜಕ್ಕೂ ಅನ್ವಯಿಸುವ ವಿಚಾರಗಳನ್ನು ಒದಗಿಸಿಕೊಟ್ಟಿದ್ದಾರೆ.      ಭಾರತದ ಭವಿಷ್ಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಡಾ. ಅಬ್ದುಲ್ ಕಲಾಂ ಅವರಲ್ಲಿದ್ದ ಬಹುಮುಖ್ಯ ಕನಸು- ತಾಳೆಗರಿಗಳಲ್ಲಿ ಹುದುಗಿರುವ ಜ್ಞಾನವನ್ನು ಡಿಜಿಟಲ್ ರೂಪದಲ್ಲಿ ಯುವಜನಾಂಗ ಪಡೆದುಕೊಳ್ಳುವಂತಾಗಬೇಕು. ವೈಜ್ಞಾನಿಕತೆಯ ಮೂಲಕ ಬದುಕು ಕಟ್ಟಿಕೊಂಡಿದ್ದ ಕಲಾಂ ಪರಂಪರೆಯಲ್ಲಿರುವ ಜ್ಞಾನವನ್ನು ಮುಂದಿನ ತಲೆಮಾರಿಗೆ ರವಾನಿಸುವಲ್ಲಿ ಆಸಕ್ತಿಯನ್ನು ಹೊಂದಿದ್ದರು. ಕಲಾಂ ಅವರ ಈ ಕನಸನ್ನು ನನಸು ಮಾಡುವಲ್ಲಿ ಕನ್ನಡ ವಿದ್ವಾಂಸರು ಪ್ರಯತ್ನಿಸುತ್ತಿದ್ದಾರೆ. ಹಳಗನ್ನಡ ಕಾವ್ಯಗಳ ವಾಚನ- ವ್ಯಾಖ್ಯಾನಗಳನ್ನು ತಂತ್ರಜ್ಞಾನದ ಮೂಲಕ ಇಂದಿನ ಜನರಿಗೆ ತಲುಪಿಸಲಾಗುತ್ತಿದೆ. ಈ ಮೂಲಕ ಇಂದಿನ ಜನರು ತಮಗೆ ಹೆಚ್ಚು ಹಿತಕರವಾದ ಮತ್ತು ಆಪ್ತವಾದ ರೀತಿಯಲ್ಲಿಯೇ ಹಳಗನ್ನಡ ಸಾಹಿತ್ಯವನ್ನು ಅರ್ಥೈಸಿಕೊಳ್ಳಲು ಅವಕಾಶ ಒದಗಿಸಿಕೊಟ್ಟಂತಾಗಿದೆ. ಮಾತ್ರವಲ್ಲ, ‘ಹಳಗನ್ನಡ ಎಂದರೆ ಕಬ್ಬಿಣದ ಕಡಲೆ’ ಎಂಬ ರೂಢೀಗತ ನಂಬಿಕೆಯನ್ನು ದೂರಮಾಡುವಲ್ಲಿ ಸಹಾಯಕವಾಗಿದೆ. ಆದರೆ ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಹೆಚ್ಚು ಜನ ತೊಡಗಿಕೊಳ್ಳುವುದು ಪರಿಣಾಮದ ದೃಷ್ಟಿಯಿಂದ ಮುಖ್ಯವಾಗುತ್ತದೆ. ಕಳೆದುಹೋಗುವ ಸಾಂಸ್ಕೃತಿಕ ವಿಚಾರಗಳು ಹಳಗನ್ನಡ ಸಾಹಿತ್ಯದ ಕುರಿತಾದ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವುದು ಸಾಂಸ್ಕೃತಿಕ ದೃಷ್ಟಿಯಿಂದ ಆತಂಕಕಾರಿಯಾದ ವಿಷಯವಾಗಿದೆ. ಭಾಷೆ- ಸಾಹಿತ್ಯಗಳು ಕೇವಲ ಅಭಿವ್ಯಕ್ತಿಯ ಮಾಧ್ಯಮಗಳು ಮಾತ್ರವಲ್ಲ. ಸಂಸ್ಕೃತಿ ವಾಹಕಗಳೂ ಹೌದು. ಒಂದು ನಿರ್ದಿಷ್ಟ ಕಾಲಘಟ್ಟದ ಸಂಸ್ಕೃತಿ, ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಹಳಗನ್ನಡ ಸಾಹಿತ್ಯ ನಮ್ಮ ಮುಂದಿಡುತ್ತದೆ. ಭವಿಷ್ಯದ ಸಾಂಸ್ಕೃತಿಕ ಸಂಚಲನೆಯ ಕುರಿತಾದ ಹೊಳಹುಗಳನ್ನು ಒದಗಿಸಿಕೊಡುತ್ತದೆ. ಆದ್ದರಿಂದ ಹಳಗನ್ನಡ ಸಾಹಿತ್ಯ ಪರಂಪರೆಯ ಕುರಿತ ತಿಳಿವಳಿಕೆಯನ್ನು ಮುಂದಿನ ತಲೆಮಾರು ಕಳೆದುಕೊಂಡಿತು ಎಂದಾದರೆ ಒಂದು ಕಾಲಘಟ್ಟದ ಹಲವು ಸಾಂಸ್ಕೃತಿಕ ವಿಚಾರಗಳನ್ನೂ ಕಳೆದುಕೊಂಡಂತಾಗುತ್ತದೆ. ಭವಿಷ್ಯಕ್ಕೆ ಮಾರ್ಗದರ್ಶಕವಾಗಬಲ್ಲ ಹಲವು ಸಂಗತಿಗಳು ನಶಿಸಿಹೋಗುತ್ತವೆ. ಆದ್ದರಿಂದ ಹಳಗನ್ನಡ ಸಾಹಿತ್ಯದ ಕುರಿತ ಆಸಕ್ತಿಯನ್ನು ಹೊಂದಿರುವ ತಲೆಮಾರನ್ನು ರೂಪಿಸಬೇಕಾದದ್ದು ಇಂದಿನ ಅಗತ್ಯವಾಗಿದೆ.   ವೈಚಾರಿಕತೆ ಎಂದಾಕ್ಷಣ ಪಾಶ್ಚಿಮಾತ್ಯ ಸಾಹಿತ್ಯದ ಕಡೆಗೆ ನೋಡುವ ಮನೋಭಾವ ಇಂದಿಗೂ ಹಲವರಲ್ಲಿದೆ. ಇಂಗ್ಲಿಷ್ ಭಾಷೆ- ಸಾಹಿತ್ಯಗಳ ಮೂಲಕವೇ ವಿಚಾರ ಶಕ್ತಿ ಭಾರತೀಯರಲ್ಲಿ ಬೆಳೆದಿದೆ ಎಂಬ ಅಭಿಪ್ರಾಯ ಗಾಢವಾಗಿದೆ. ವೈಚಾರಿಕತೆ ಉಗಮಗೊಂಡಿರುವುದೇ ಆಧುನಿಕ ಕಾಲಘಟ್ಟದಲ್ಲಿ ಎಂಬ ನಂಬಿಕೆ ಬಲವಾಗಿದೆ. ಇದು ಒಂದು ದೃಷ್ಟಿಕೋನದಿಂದ ನೀಡಿದಾಗ ನಿಜ. ನಾವು ಕಳೆದುಕೊಂಡಿದ್ದ ವೈಚಾರಿಕತೆಯನ್ನು ಆಧುನಿಕ ಕಾಲಘಟ್ಟ, ಇಂಗ್ಲಿಷ್ ನಮಗೆ ಮತ್ತೆ ಒದಗಿಸಿಕೊಟ್ಟಿತು ಎನ್ನುವುದು ಹೆಚ್ಚು ವಾಸ್ತವ. ವೈಚಾರಿಕ ಪ್ರಜ್ಞೆ ಎನ್ನುವುದು ಭಾರತೀಯ ಸಮಾಜದ ಬಹುಮುಖ್ಯ ಅಂಗವಾಗಿತ್ತು. ಆದರೆ ಕಾಲದ ಬದಲಾವಣೆಗೆ ತಕ್ಕಂತೆ ವೈಚಾರಿಕ ಪ್ರಜ್ಞೆಯನ್ನು ಕಳೆದುಕೊಂಡೆವು ಎನ್ನುವುದು ಗಮನಾರ್ಹ ಅಂಶ. ಸಾಮಾಜಿಕ ಸುಧಾರಣೆಯನ್ನು ಗಮನದಲ್ಲಿರಿಸಿಕೊಂಡು ದಯಾನಂದ ಸರಸ್ವತಿಯವರು ನೀಡಿದ ‘ವೇದಗಳಿಗೆ ಹಿಂತಿರುಗಿ’ ಕರೆಯು ಪುರಾತನ ಭಾರತೀಯ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಉತ್ತಮ ಅಂಶಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನೇ ಹೊಂದಿತ್ತು ಎನ್ನುವುದು ಸ್ಪಷ್ಟ. ಆದ್ದರಿಂದ ವೈಚಾರಿಕತೆ ಎನ್ನುವುದು ಭಾರತದ ಪಾಲಿಗೆ, ಭಾರತೀಯ ಸಾಹಿತ್ಯ ಪರಂಪರೆಗಳ ಪಾಲಿಗೆ ನೂತನ ಸಂಗತಿಯೇನೂ ಆಗಿರಲಿಲ್ಲ. ಹಳಗನ್ನಡ ಸಾಹಿತ್ಯದಲ್ಲಿರುವ ವೈಚಾರಿಕತೆ- ವೈಜ್ಞಾನಿಕತೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಇಂದಿನ ತಲೆಮಾರನ್ನು ಪ್ರಚೋದಿಸಬೇಕಿದೆ. ಪುರಾಣ- ಇತಿಹಾಸಗಳನ್ನು ಗಮನಿಸಿಕೊಳ್ಳುವ ದೃಷ್ಟಿಕೋನ ಬದಲಾಗಬೇಕಿದೆ. ಉಲ್ಲೇಖಿತ ಸಂಗತಿಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಗಮನಿಸಿಕೊಳ್ಳುವ ಪ್ರಜ್ಞೆಯನ್ನು ರೂಪುಗೊಳಿಸಬೇಕಿದೆ. ಇದರಿಂದ ಹಳಗನ್ನಡ ಸಾಹಿತ್ಯ ಮತ್ತಷ್ಟು ಆಪ್ತವಾಗುತ್ತದೆ. ಮಾತ್ರವಲ್ಲ, ಚಿಂತನೆಯ ಹೊಸ ಮಾದರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.    ಯಾವುದೇ ವಿಚಾರ ವ್ಯಾವಹಾರಿಕ ಉದ್ದೇಶವನ್ನು ಮಾತ್ರವೇ ಹೊಂದಿದ್ದಾಗ ಅದರ ಬೆಳವಣಿಗೆ ಸೀಮಿತಗೊಳ್ಳುತ್ತದೆ ಇಲ್ಲವೇ ನಿಂತುಹೋಗುತ್ತದೆ. ಹಳಗನ್ನಡ ಸಾಹಿತ್ಯ ಹೀಗಾಗಬಾರದು. ಕೇವಲ ಪರೀಕ್ಷೆ, ಉದ್ಯೋಗ, ವಾಣಿಜ್ಯ ಉದ್ದೇಶಗಳಿಗಾಗಿ ಅದನ್ನು ಕಲಿಯುವುದಲ್ಲ. ಅದರ ಮಹತ್ವವನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ. ನೈಜ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕಿದೆ. ಹಳಗನ್ನಡ ಸಾಹಿತ್ಯದಲ್ಲಿರುವ ಉತ್ತಮ ವಿಚಾರಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಇಂದಿನ ತಲೆಮಾರು ಪ್ರಯತ್ನಿಸಬೇಕಿದೆ. ಕನಿಷ್ಟ ಪಕ್ಷ ಹಳಗನ್ನಡ ಸಾಹಿತ್ಯವನ್ನು ಓದಿ, ಅರ್ಥೈಸಿಕೊಳ್ಳಬಲ್ಲಷ್ಟಾದರೂ ಹಿಡಿತವಿರುವ ಪೀಳಿಗೆಯನ್ನು ರೂಪಿಸಬೇಕಾದದ್ದು ಇಂದಿನ ಸಾಹಿತಿ, ಉಪನ್ಯಾಸಕ, ಚಿಂತಕರ ಮೇಲಿರುವ ಗುರುತರ ಜವಾಬ್ದಾರಿಯಾಗಿದೆ. ***

ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ Read Post »

ಇತರೆ, ದಾರಾವಾಹಿ

‘ಭಕ್ತಾದಿಗಳೇ, ನೀವೆಲ್ಲರೂ ಭಯಭಕ್ತಿಯಿಂದ ಹಮ್ಮಿಕೊಂಡಂಥ ಈ ವಿಶೇಷ ಪೂಜೆಯು ಸಂಪನ್ನವಾಗಿರುವುದನ್ನು ನೋಡಿದಿರಿ. ಹಾಗಾಗಿ ಈ ಮಹಾ ಧಾರ್ಮಿಕವಿಧಿಯನ್ನು ನೀವೆಲ್ಲ ಯಾಕೆ ಆಚರಿಸಬೇಕು? ಇದನ್ನು ನಡೆಸುವುದರಿಂದ ನಿಮ್ಮೆಲ್ಲರ ಯಾವ ಯಾವ ರೂಪದ ಮನೋಭೀಷ್ಟಗಳು ನೆರವೇರುತ್ತವೆ ಎಂಬುದನ್ನು ನಿಮಗೆಲ್ಲ ಅರ್ಥವಾಗುವಂತೆ ವಿವರಿಸುವುದು ನಮ್ಮ ಕರ್ತವ್ಯ!’ ಎಂದ ಗುರೂಜಿಯವರು ಒಮ್ಮೆ ನೆಟ್ಟಗೆ ದೃಢವಾಗಿ ಕುಳಿತು ತಮ್ಮ ಮಾತನ್ನು ಮುಂದುವರೆಸಿದರು.

Read Post »

ಇತರೆ

ನನ್ನ ಅಪ್ಪ …ಒಂದು ನೆನಪು

37 ವರ್ಷಗಳಾದರೂ ಪ್ರತಿದಿನ ಕನಸಿನಲ್ಲಿ ಬರುವ ಅಪ್ಪ ಇಂದಿಗೂ ನನ್ನೊಳಗೆ ಜೀವಂತ. 37 ವರ್ಷಗಳಾದರೂ ಇಂದಿಗೂ ಕಾಡುವ ಪಾಪಪ್ರಜ್ಞೆ.. ಆ ದಿನ ನೆರೆಯವರ ಬೇಜವಾಬ್ದಾರಿ ಸಲಹೆ ಕೇಳದೆ ಕಷ್ಟ ಪಟ್ಟಾದರೂ ಸರಿ 2 ಘಂಟೆ ಮುಂಚೆ ಅಪ್ಪನನ್ನು ಆಸ್ಪತ್ರೆ ಸೇರಿಸಿದ್ದಿದ್ದರೆ…ಅಣ್ಣನಿಗಾಗಿ ಕಾಯದೆ ಅಮ್ಮ ಸ್ವಲ್ಪ ಧೈರ್ಯ ಮಾಡಿ ನನ್ನನ್ನು ಕಳಿಸಿದ್ದರೆ

ನನ್ನ ಅಪ್ಪ …ಒಂದು ನೆನಪು Read Post »

You cannot copy content of this page

Scroll to Top