ಹೊಸ ಅಂಕಣ ಧಮ್ಮಲಾಲ್ ಛೋಪ್ರಾ ತೆಲುಗು ಮೂಲ : ಮಧುರಾಂತಕಂ ನರೇಂದ್ರಕನ್ನಡಕ್ಕೆ : ಕುಂ. ವೀರಭದ್ರಪ್ಪಪ್ರ : ಆಕೃತಿ ಪುಸ್ತಕ, ಬೆಂಗಳೂರುಪ್ರಕಟಣೆಯ ರ್ಷ : ೨೦೧೭ಬೆಲೆ : ರೂ.೧೦೦ಪುಟಗಳು : ೧೧೨ ವಿಶಿಷ್ಟ ಕಥಾವಸ್ತು, ತಂತ್ರ ಮತ್ತು ವಿನ್ಯಾಸಗಳಿರುವ ಈ ಕಾದಂಬರಿಯಲ್ಲಿ ನಡೆಯುವ ಹೆಚ್ಚಿನೆಲ್ಲ ಘಟನೆಗಳು ಮತ್ತು ಪಾತ್ರಗಳು ಎದುರಾಗುವ ಸನ್ನಿವೇಶಗಳು ಆಮ್‌ಸ್ಟರ್‌ಡಾಂ ನಗರದ ವಿಮಾನ ನಿಲ್ದಾಣದಲ್ಲಿ ನಡೆಯುತ್ತವೆ . ಕಥೆಯ ನಿರೂಪಕ ವಿಚಿತ್ರ ಹೆಸರಿನ ಗರ‍್ರಂಕೊಂಡ ಗರ‍್ರಂ ಪುರೌತು. ಜೈಸಲ್ಮೇರ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ. ಆತ ಮೆಕ್ಸಿಕೋದಲ್ಲಿ ನಡೆಯುವ ಒಂದು ವಿಚಾರಸಂಕಿರಣದಲ್ಲಿ ಭಾಗವಹಿಸಲು ಹೊರಟಿದ್ದಾನೆ. ಮೊದಲ ಬಾರಿ ವಿದೇಶ ಪ್ರಯಾಣ ಮಾಡುತ್ತಿರುವುದರಿಂದ ತನಗೆ ಅಲ್ಲಿಗೆ ಹೋಗುವ ಯಾರಾದರೂ ಇನ್ನೊಬ್ಬರು ಪ್ರಯಾಣಿಕರ ಜತೆಗೆ ಟಿಕೆಟ್ ಮಾಡಿಸಬೇಕೆಂದು ಏಜೆಂಟರಲ್ಲಿ ಕೇಳಿಕೊಂಡ ಪ್ರಕಾರ ಆತನಿಗೆ ಸಿಗುವ ಜತೆಗಾರ ಅತಿ ವಿಚಿತ್ರ ಸ್ವಭಾವದ ಧಮ್ಮಲಾಲ್ ಛೋಪ್ರಾ. ಅವನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕನಲ್ಲ. ಒಬ್ಬ ವ್ಯಾಪಾರಿ. ಸ್ವಂತ ಆಸಕ್ತಿಯಿಂದ ಎಂ.ಬಿ.ಎ.ಕಲಿತು ಸಂಶೋಧನೆ ಮಾಡಿ ಪಿ.ಹೆಚ್.ಡಿ.ಪಡೆದವನು. ಆದರೆ ಆತ ಆರಂಭದಿಂದಲೂ ಬಹಳ ವಿಚಿತ್ರವಾಗಿ ಮಾತನಾಡುವುದನ್ನು ನಿರೂಪಕ ಗಮನಿಸುತ್ತಾನೆ. ಇಂಗ್ಲಿಷ್ ಸರಿಯಾಗಿ ಗೊತ್ತಿಲ್ಲದ ಅವನು ಹಿಂದಿಯಲ್ಲೇ ಸಂಭಾಷಿಸುತ್ತಾನೆ. ಹಿಂದಿ ಸರಿಯಾಗಿ ಮಾತನಾಡಲಾಗದ ತೆಲುಗಿನವನಾದ ನಿರೂಪಕ ಇಂಗ್ಲಿಷ್ ಮತ್ತು ಹಿಂದಿ ಬೆರೆಸಿ ಹೇಗೋ ನಿಭಾಯಿಸುತ್ತಾನೆ. ಆಮ್‌ಸ್ಟರ್‌ಡಾಂನಲ್ಲಿ ಅದ್ಭುತಗಳು ಸಂಭವಿಸುತ್ತವೆ, ನೋಡುತ್ತಿರಿ’ ಎನ್ನುವ ಧಮ್ಮಲಾಲ್ ಛೋಪ್ರಾ ತನಲ್ಲಿ ಇದೆಲ್ಲವನ್ನೂ ಮುಂದಾಗಿ ತಿಳಿಸುವ ಆರನೇ ಇಂದ್ರಿಯ ಸಕ್ರಿಯವಾಗಿದೆ ಎನ್ನುತ್ತಾನೆ. ಆಮ್‌ಸ್ಟರ್ ನದಿಗೆ ಕಟ್ಟಿದ ಅಣೆಕಟ್ಟಿನ ನಗರಿ ಆಮ್‌ಸ್ಟg ಡಾಂನಲ್ಲಿ ಜಲದಿಗ್ಭಂಧನದಲ್ಲಿ ನಾವು ಸಿಲುಕಲಿದ್ದೇವೆ’ ಅನ್ನುತ್ತಾನೆ . ಹುಚ್ಚನಂತೆ ಏನೇನೋ ಬಡಬಡಿಸುವ ಆತನ ಮಾತುಗಳು ನಿರೂಪಕನನ್ನು ಗೊಂದಲಕ್ಕೀಡು ಮಾಡುತ್ತವೆ. ಮೆಕ್ಸಿಕೋದಲ್ಲಿ ಎಂಟು ದಿನಗಳ ಕಾಲ ಕಳೆದು ದೆಹಲಿಗೆ ಮರಳಿ ಬರುತ್ತಾ ಆಮ್‌ಸ್ಟರ್‌ಡಾಂನಲ್ಲಿ ಅವರು ೨೪ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಗುತ್ತದೆ. ಅಲ್ಲಿ ಅವರಿಗೆ ವಿಚಿತ್ರ ಅನುಭವಗಳಾಗುತ್ತವೆ. ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕರು ಇಡುವ ಬಾಂಬುಗಳುಂಟು ಮಾಡಿದ ಅನಾಹುತಗಳಿಂದ ಆತಂಕಗೊಂಡ ಅಧಿಕಾರಿಗಳು ಪ್ರತಿಯೊಬ್ಬ ಪ್ರಯಾಣಿಕರನ್ನೂ ಅನುಮಾನದ ದೃಷ್ಟಿಯಿಂದಲೇ ನೋಡುತ್ತಾರೆ. ಸೆಕ್ಯೂರಿಟಿಗಳು ಭದ್ರತೆಯ ಬಿಗಿಯನ್ನು ಹೆಚ್ಚಿಸಿ ಅನಗತ್ಯ ಪ್ರಶ್ನೆಗಳಿಂದ ಅವರನ್ನು ಮಾನಸಿಕ ಹಿಂಸೆಗೆ ಗುರಿ ಪಡಿಸುತ್ತಾರೆ. ತಿನ್ನಲು ಸರಿಯಾದ ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಅವರು ಬಳಲುತ್ತಾರೆ. ಅವರನ್ನು ಸೇರಿಸಿಕೊಂಡ ಹೋಟೆಲಿನೊಳಗಿನ ವಾತಾವರಣ ಭಯಜನಕವಾಗಿರುತ್ತದೆ. ಅವರು ಹೊಕ್ಕು ಬರುವ ಕತ್ತಲ ಲೋಕ ಇಡಿಯ ಜಗತ್ತನ್ನು ತುಂಬಿರುವ ಸಂರ‍್ಷದ ಯಾತನೆಯನ್ನು ಪ್ರತಿಬಿಂಬಿಸುತ್ತದೆ. ಕೊನೆಯ ತನಕವೂ ಛೋಪ್ರಾ ತಾನೊಬ್ಬ ಆಧ್ಯಾತ್ಮಿಕ ಗುರು ಎಂಬಂತೆ ರ‍್ತಿಸುತ್ತಾನೆ. ಆದರೆ ನಿರೂಪಕ ಅದನ್ನು ನಂಬುವುದಿಲ್ಲ. ಈ ಕಾದಂಬರಿ ಆಧುನಿಕ ಜಗತ್ತಿನ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಅನುವಾದದ ಭಾಷೆ ಪ್ರಬುದ್ಧವಾಗಿದೆ ******************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ಅರಿತವರ ಮರೆತು ಸಾಗುವುದೆಂದರೆ … ನಮ್ಮನ್ನು ನಾವು ಹುಡುಕಿಕೊಳ್ಳುವುದು ಎಂದರೆ ಏನು? ನಮ್ಮೊಳಗೆ ನಾವು ಇಳಿಯುವುದು ಎಂದರೆ ಏನು? ನಮಗೇ ಕಾಣದ ನಮ್ಮನ್ನು ಕಂಡುಕೊಳ್ಳುವುದು ಎಂದರೆ ಏನು? ಮತ್ತೆ ಈ ಧಾವಂತದ ಬದುಕಲ್ಲಿ ಅದಕ್ಕೆ ತಗುಲುವ ಸಮಯವನ್ನು ಉಳಿಸಿಟ್ಟುಕೊಳ್ಳುವ ವ್ಯವಧಾನವಾದರೂ ನಮ್ಮಲ್ಲಿ ಉಳಿದಿದೆಯಾ… ಇಂತಹ ಹಲವಾರು ಉತ್ತರ ಸಿಗದ ಪ್ರಶ್ನೆಗಳು, ಗೊಂದಲಗಳು ನನ್ನನ್ನು ಸದಾ ಕಾಡುತ್ತಿರುತ್ತದೆ. ಇಂಥವಕ್ಕೆ ನಾನೇ ನಾನು ಉತ್ತರಿಸಿಕೊಳ್ಳಬೇಕಿರುತ್ತದೆ. ಆದರೆ ಕೆಲವೊಮ್ಮೆ ಎಂತಹ ಸಂದಿಗ್ಧತೆ ಒದಗಿಬರುತ್ತದೆ ಎಂದರೆ ಉತ್ತರಿಸುವುದಿರಲಿ ಪ್ರಶ್ನೆಯನ್ನು ಎದುರಿಸುವುದೂ ಕಷ್ಟವೇ… ಎಷ್ಟೋ ಪ್ರಶ್ನೆಗಳಿಗೆ ಉತ್ತರಗಳು ಇರುವುದಿಲ್ಲ. ಮತ್ತೊಂದಿಷ್ಟು ಪ್ರಶ್ನೆಗಳಿಗೆ ಉತ್ತರಗಳಿದ್ದರೂ ಅವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾವು ಇರುವುದಿಲ್ಲ. ನಾವು ಹಸುಗಳನ್ನ ಸಾಕ್ತೇವೆ, ಹೊತ್ತು ಹೊತ್ತಿಗೆ ಸರಿಯಾಗಿ ಹುಲ್ಲು ಮೇಯಿಸ್ತೇವೆ, ಅದು ಅಲ್ಲಿ ಹೋಗಬಾರದು, ಇಲ್ಲಿ ಮೇಯಬಾರದು ಹೀಗೆ ನಮಗೆ ಬೇಕಾದಂತೆ ಒಂದು ಚೌಕಟ್ಟಿನೊಳಗಿಟ್ಟು ಬೆಳೆಸ್ತೇವೆ. ನಮ್ಮ ಪ್ರಕಾರ ಅದು ಒಂದೂ ತಪ್ಪೇ ಮಾಡಿಲ್ಲ! ಆದರೆ ಬೀದಿಯ ದನ ಹಾಗಲ್ಲ, ಮನಸಿಗೆ ಬಂದ ಕಡೆ ಹೋಗ್ತದೆ, ಮನಸಿಗೆ ಬಂದದ್ದು ಮಾಡ್ತದೆ, ಮನಸಿಗೆ ಬಂದದ್ದನ್ನ ತಿನ್ತದೆ…. ಅದಕ್ಕೆ ಯಾವ ನಿರ್ಬಂಧಗಳಿಲ್ಲ. ಅದು ಗೋ ಮಾತೆ ಎಂದು ಪೂಜೆಗೆ ಸಲ್ಲುವ ಹೊತ್ತಲ್ಲೇ ಹೀನಾಮಾನವಾಗಿ ಒದೆ ಮತ್ತು ಬೈಗುಳಗಳನ್ನೂ ತಿಂದಿರುತ್ತದೆ. ಆದರೆ ಅದರ ಅನುಭವಗಳು ಎಷ್ಟು ಸಂಪದ್ಭರಿತ! ಅದರ ಬದುಕು ಅದೆಷ್ಟು ಸಂಪನ್ನ! ನಿಮಗೆ ಈ ಎರೆಡು ದನಗಳಲ್ಲಿ ಯಾವ ದನದ ಬದುಕು ಇಷ್ಟ ಎಂದು ಯಾರಾದರೂ ಒಂದು ವೇಳೆ ನಮ್ಮನ್ನು ಕೇಳಿದರೆ ನಮಗೆ ಬೀದಿ ದನದ ಬದುಕೇ ಇಷ್ಟ, ಆದರೆ ನಮ್ಮ ಆಯ್ಕೆ ಮಾತ್ರ ಸಾಕಿದ ದನ ಎಂದಾಗಿರುತ್ತದೆ. ಕಾರಣ ನಮಗೆ ಸಮಾಜವನ್ನು ಎದುರಿಸುದಾಗಲೀ, ಧಿಕ್ಕರಿಸುವುದಾಗಲೀ ಬೇಕಾಗೂ ಇಲ್ಲ, ಸಾಧ್ಯವೂ ಇಲ್ಲ ಹಾಗಾಗಿ. ಹಾಗಾಗಿಯೇ ನಾವು ಸಮಾಜದ ನಿರೀಕ್ಷೆಯ ಚಾಳೀಸು ತೊಟ್ಟು ಪ್ರತಿಯೊಂದನ್ನೂ ಪ್ರತಿಯೊಬ್ಬರನ್ನೂ ಅದು ನಿರ್ಮಿಸಿಕೊಟ್ಟ ಚೌಟ್ಟಿನ ಒಳಗೇ ನೋಡಲು ಬಯಸುತ್ತೇವೆ. ಒಂದು ವೇಳೆ ಯಾರಾದರೂ ಅದನ್ನು ಮೀರಲು ಪ್ರಯತ್ನಿಸಿದರೆ ನಾವೇ ಮೊದಲಾಗಿ ಅವರ ಕಾಲು ಹಿಡಿದು ಹಿಂಜಗ್ಗುತ್ತೇವೆ, ಅವರ ಆತ್ಮವಿಶ್ವಾಸ ಕುಗ್ಗಿಸುವ ಅಷ್ಟೂ ಮಾತನ್ನು ಒಂದೂ ಬಿಡದಂತೆ ಆಡುತ್ತೇವೆ. ನಮ್ಮ ಮನಃಸಾಕ್ಷಿಗೆ ನಾವು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಬಿದ್ದ ತೋಳಕ್ಕೆ ಕಲ್ಲು ಬೀಸುವುದರಲ್ಲಿ ಸಿಗುವ ಸುಖ, ಒಣ ಆತ್ಮಸಾಕ್ಷಿಯ ಗೊಡ್ಡು ಉಪದೇಶಕ್ಕೆ ಕಿವಿಯಾಗುವುದರಲ್ಲಿ ನಮಗೆ ಖಂಡಿತಾ ಸಿಗಲಾರದು . ನನಗೆ ಸ್ವಾತಂತ್ರ್ಯ ಎಂದರೆ ಯಾವುದು ಮನುಷ್ಯತ್ವವನ್ನ ಮೀರುವುದಿಲ್ಲವೋ, ಇನ್ನೊಬ್ಬರಿಗೆ ತೊಂದರೆ ಉಂಟು ಮಾಡುವುದಿಲ್ಲವೋ, ದುಷ್ಟ ಮತ್ತು ಕ್ರೂರ ಅಲ್ಲವೋ ಅದೆಲ್ಲವನ್ನೂ ನಾವು ಮಾಡಬಹುದು ಎಂದು. ಆದರೆ ಒಬ್ಬರ ರೆಕ್ಕೆಗಳನ್ನು ಕತ್ತರಿಸಿ ಹಾಕಿ ಅವರ ಹಾರುವ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವುದಕ್ಕಿಂತ ದೊಡ್ಡ ಕ್ರೂರತೆ ಮತ್ತೊಂದಿರಲಾರದು. ಆದಾಗ್ಯೂ ತಪ್ಪುಗಳು ಒಂದು ಹಂತದವರೆಗೆ ಮನುಷ್ಯನನ್ನು ಮಾಗಿಸುತ್ತವೆ. ತಪ್ಪು ಮಾಡಿದವನು ಒಳಗೊಳಗೆ ಗಟ್ಟಿಯಾಗುತ್ತಾ ಹೋಗುತ್ತಾನೆ. ಅವನ ಬದುಕಿನ ಪಾಠ ಅವನನ್ನು ವಜ್ರಕಠೋರವಾ ಗಿಸುತ್ತದೆ. ಅವನು ಎಂಥದ್ದೇ ಪರಿಸ್ಥಿತಿ ಬರಲಿ ಎದುರಿಸಲು ಸದಾ ತಯಾರಿರುತ್ತಾನೆ. ತಪ್ಪುಗಳು ನಮಗೆ ಬದುಕನ್ನು ನೋಡುವ ವಿಭಿನ್ನ ದೃಷ್ಟಿಕೋನವನ್ನು ತೋರಿಸಿಕೊಡುತ್ತವೆ, ನಮ್ಮ ಸರಿಗಳು ಬದುಕನ್ನು ಹೀಗೇ ನೋಡಬೇಕೆನ್ನುವ ದಾರಿಯ ನಿರ್ದಿಷ್ಟತೆಯನ್ನು ಮನಗಾಣಿಸುತ್ತವೆ. ನಮ್ಮ ತಪ್ಪುಗಳು ನಮಗಷ್ಟೇ ಅಲ್ಲದೆ ಇತರರಿಗೂ ಪಾಠವಾಗಬಲ್ಲವು. ಮತ್ತು ಇತರರ ತಪ್ಪುಗಳು ನಮ್ಮ ಪುಸ್ತಕದ ಪಾಠವೂ ಆಗಬೇಕು. ಆದರೆ ಕೆಲವೊಮ್ಮೆ ಅಮೂಲ್ಯ ಕ್ಷಣಗಳನ್ನು, ಅಮೂಲ್ಯ ವ್ಯಕ್ತಿಗಳನ್ನು ಸುಮಧುರ ಬಾಂಧವ್ಯವನ್ನು ನಮ್ಮ ಸ್ವಯಂಕೃತ ಅಪರಾಧದಿಂದ ಕಳೆದುಕೊಂಡುಬಿಡುತ್ತೇವಲ್ಲ ಅದು ಪರಮ ಯಾತನಾಮಯ… ಅದು ಯಾರಲ್ಲೂ ಹಂಚಿಕೊಂಡು ಹಗುರಾಗುವಂಥದ್ದಲ್ಲ. ನಮ್ಮಿಂದ ಅಪಾರವಾದದ್ದನ್ನು ನೀರೀಕ್ಷಿಸುವ, ನಮ್ಮನ್ನು ತಮ್ಮ ಬದುಕಿನ ಪರಮಾರ್ಥ ಎಂದು ತಿಳಿದವರನ್ನು ಧಿಕ್ಕರಿಸಿ ಹೊರಡುತ್ತೇವಲ್ಲ… ಆ ಕ್ಷಣದ ಬಗ್ಗೆ ನಿಜಕ್ಕೂ ಧಿಕ್ಕಾರವಿದೆ ನನಗೆ. ಒಂದು ಪ್ರೀತಿ, ಅಸಖ್ಖಲಿತ ಪ್ರೇಮ, ಪವಿತ್ರ ಸ್ನೇಹ, ಮಮತೆ ಅಂತಃಕರಣವೆಲ್ಲವನ್ನು ತಿರಸ್ಕರಿಸಿಬಿಡುತ್ತೇವಲ್ಲ… ಬಹುಶಃ ಆ ಒಂದು ಕ್ಷಣ ನಾವು ನಮ್ಮ ಹೃದಯದ ಮಾತುಗಳಿಗೆ ಕಿವುಡರಾಗಿಬಿಟ್ಟಿರುತ್ತೇವೆ. ಅದರಲ್ಲೂ ಆಯ್ಕೆಗಳಿದ್ದು ಒಂದನ್ನು ಮಾತ್ರ ಆರಿಸಬೇಕಾದ ಶರತ್ತಿದ್ದಾಗಲಂತೂ ಆರಿಸಿಕೊಂಡದ್ದರ ಸುಖವೇ ಅನುಭವಕ್ಕೆ ನಿಲುಕದಷ್ಟು ಕಳೆದುಕೊಂಡದ್ದರ ದುಃಖ ಆವರಿಸಿಬಿಟ್ಟಿರುತ್ತದೆ. ಆದರೆ ಬದುಕಿನ ನಿಯಮವೇ ಹಾಗಿದೆ. ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳಲೇಬೇಕು! ಆದರೆ ನಂಬಿಕೆಯನ್ನು ಕಳೆದುಕೊಳ್ಳುವುದಿದೆಯಲ್ಲ… ಅದು ನಮ್ಮ ಬದುಕಿನ ಬೇರನ್ನೇ ಅಲುಗಾಡಿಸಿಬಿಡುತ್ತದೆ. ಸರಿ ನಮ್ಮವರನ್ನು ಬಿಟ್ಟು ಹೊರಟಾದ ಮೇಲೆ ಏನಾದೆವು ಎಂದೊಮ್ಮೆ ಹಿಂತಿರುಗಿ ನೋಡಿದರೆ ನಮ್ಮ ಹೆಜ್ಜೆಗಳಷ್ಟೂ ಅವರೇ ಕಲಿಸಿದ ಸಂಸ್ಕಾರದಚ್ಚಿನಲ್ಲಿ… ಇವತ್ತು ನಾವೇನಾಗಿರುತ್ತೇವೋ ಅದಷ್ಟೂ ಅವರು ನೀಡಿದ ಶಿಕ್ಷಣ. ನಮ್ಮ ಬದುಕು ಮುನ್ನಡೆದದ್ದೇ ಅದರ ಸೂಚಕ. ಬಿಟ್ಟುಬಂದೆವೆಂದುಕೊಂಡದ್ದು ಸದಾ ಹಿಂಬಾಲಿಸುತ್ತಲೇ ಬಂದಿರುವುದು ಅರಿವಾಗಿಲ್ಲದ ಸತ್ಯ. ನಮ್ಮ ಪ್ರತಿ ಕೆಲಸದಲ್ಲೂ ಅವರು ನೆನಪಾಗುತ್ತಾರೆ. ನಮ್ಮ ಪ್ರತಿ ನಡೆ ನುಡಿಯಲ್ಲೂ ಅವರೇ ಅವರು ಕಾಣಿಸಿಕೊಂಡು ಹನಿ ನೀರಾಗಿ ಉರುಳುತ್ತಾರೆ. ಅವರೊಂದಿಗಿನ ಒಂದೊಂದು ಕ್ಷಣವೂ ಮುತ್ತುಗಳಾಗುತ್ತವೆ. ಹೊಳೆಯುತ್ತವೆ. ಕರೆಯುತ್ತವೆ. ನೆನಪಾಗಿ ತಬ್ಬುತ್ತವೆ. ಸಂತೈಸಿ ತಲೆ ನೇವರಿಸಿ ಹಣೆಯ ಮೇಲೊಂದು ಮುತ್ತಿಡುವರಿಲ್ಲದೆ ಖಾಲಿ ಎದೆಯ ಮೀಂಟುವ ನೋವನ್ನು ಸಹಿಸಲಾಗದೆ ನರಳುವಾಗ ತಾವೂ ಮರುಗುತ್ತವೆ. ಅರಿತವರ ಮರೆತು ಸಾಗುವುದೆಂದರೆ ಸಳುಕು ಹಿಡಿದ ಎದೆಯನ್ನು ಅಬ್ಬೊತ್ತಿಕೊಂಡು, ಬಾಯಿಗೆ ಬಟ್ಟೆ ತುರುಕಿ, ನಿಶ್ಯಬ್ಧವಾಗಿ ಬಿಕ್ಕುವುದು… ಇದರಿಂದ ಯಾರಿಗೆ ತಾನೆ ಮುಕ್ತಿ ಇದೆ… ನಾವೆಲ್ಲ ಪಕ್ಕಾ ವ್ಯಾಪಾರಿಗಳು. ಲೇವಾದೇವಿ ನಮಗೆ ಬಹಳ ಚನ್ನಾಗಿ ಗೊತ್ತು. ನಮಗೆ ಪ್ರೀತಿಗಿಂತಲೂ ಭೌತಿಕ ವಸ್ತುಗಳೇ ಬದುಕಿನ ಅನಿವಾರ್ಯ ಎನಿಸುತ್ತವೆ. ಅತ್ಯಂತ ಹೆಚ್ಚು ಪ್ರೀತಿಸುವ ಜೀವ ಪಕ್ಕದಲ್ಲಿ ಇರುವಾಗಲೂ ಹಣ ಐಶ್ವರ್ಯ ಆಸ್ತಿ ಅಂತಸ್ತು ದೊಡ್ಡದು ಎನಿಸುತ್ತದೆ ನಮಗೆ. ಮತ್ತೀ ಸಮಾಜವಾದರೂ ಅದನ್ನೇ ಅನಿವಾರ್ಯವೆನ್ನಿಸಿಬಿಡುವಂತೆ ಮಾಡಿಬಿಡುತ್ತದೆ. ನಾವು ನಮ್ಮ ಆಂತರ್ಯಕ್ಕೆ ಪ್ರಿಯವಾಗುವ ಬದಲು, ದುಡ್ಡಿನ ಬಾಲ ಹಿಡಿಯಲು ಹೊರಟುಬಿಡುತ್ತೇವೆ. ಈಗ ನಮ್ಮಲ್ಲಿ ಬಹಳ ಒಳ್ಳೆಯ ಗಾದೆ ಮಾತುಗಳು ಹುಟ್ಟಿಕೊಳ್ಳುತ್ತವೆ, penny saved is a penny gained, ನಾವು ಉಳಿಸಿಟ್ಟ ಹಣವೇ ನಮ್ಮ ನಿಜವಾದ ಮಿತ್ರ, ತಾಮ್ರದ ಕಾಸು ಅಣ್ಣ ತಮ್ಮಂದಿರನ್ನೇ ಅಗಲಿಸಿತಂತೆ (ಅದಕ್ಕೆ, ಮೊದಲೇ ಅಣ್ಣ ತಮ್ಮಂದಿರು ದೂರ ದೂರ ಇದ್ದು ಬಿಡಬೇಕು!), ದುಡ್ಡಿದ್ದವನೇ ದೊಡ್ಡಪ್ಪ… ಇವೆಲ್ಲ ನಮ್ಮ ಬದುಕಿನ ಮೊಟ್ಟೋಗಳಾಗುವ ಹೊತ್ತಿನಲ್ಲಿ ದುಡ್ಡನ್ನು ಮೀರಿದ ಅನುಭೂತಿಯೊಂದು ಇದೆ ಮತ್ತು ಅದು ನಮ್ಮ ಬದುಕಿನ ಕೇಂದ್ರವಾಗಬೇಕಿದೆ ಎನ್ನುವ ದನಿ ಕೀರಲಾಗಿ ಭೌತಿಕದ ಧ್ವನಿವರ್ಧಕದ ಅಬ್ಬರದ ನಡುವೆ ಇಲ್ಲವೇ ಆಗಿಬಿಡುತ್ತಿರುವುದು ಸಂಕಟ ಉಂಟು ಮಾಡುತ್ತದೆ… ************************************* ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಕಗ್ಗಗಳ ಲೋಕ ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ ದಿವ್ಯಚೇತನ ನಮ್ಮ ಗುಂಡಪ್ಪನವರು. ಹೊಸ ಪೀಳಿಗೆಯ ಓದುಗರಿಗೆ ಡಿ.ವಿ.ಜಿ.ಯವರ ಕಗ್ಗಗಳ ಪರಿಚಯಿಸುವುದು ನನ್ನೀ ಬರಹಗಳ ಉದ್ದೇಶವಾಗಿದೆ. ಮುಕ್ತಕ- 239 ಸಮವಿಲ್ಲ ಸೃಷ್ಟಿಯಲಿ ನರನಂತೆ ನರನಿಲ್ಲ I ಕ್ಷಮೆಯುಮವಳೊಳಗಿಲ್ಲ , ಕರ್ಮದಂತೆ ಫಲII ಕ್ರಮವೊಂದ ನೀಮಾಗಿಸಿರಿ ನೋಳ್ಪೆನಾನೆನುತI ನಮಗವಳ್ ಪ್ರಸ್ಪರ್ಧಿ ಮಂಕುತಿಮ್ಮII ಭಾವಾರ್ಥ: ಈ ಸೃಷ್ಟಿಯನ್ನೊಮ್ಮೆ ಗಮನಿಸಿ. ಎಷ್ಟೊಂದು ಭಿನ್ನತೆಗಳಿವೆ ಇಲ್ಲಿ!! ಒಬ್ಬ ಮನುಷ್ಯನಂತೆ ಇನ್ನೊಬ್ಬನಿಲ್ಲ. ಪ್ರತಿಯೊಂದು ಪ್ರಾಣಿ, ಪಕ್ಷಿ, ವಸ್ತುವಿನ ರೂಪ, ಯೋಚನೆ, ಗುಣ ಸ್ವಭಾವ – ಇವೆಲ್ಲಾ ಒಂದಕ್ಕಿಂತ ಒಂದು ಭಿನ್ನವಾಗಿವೆ. ಈ ಅಸಮತೆ ಭಗವಂತನ ಲೀಲೆ! ‘ಏಕ’ನಾಗಿದ್ದ ಭಗವಂತನು ಪ್ರಾಣಿ, ಪಕ್ಷಿ , ಗಿಡಮರಗಳು ಹೀಗೆ ಎಲ್ಲದರ ರೂಪ ಪಡೆದು ‘ಅನೇಕ’ ನಾಗಿದ್ದಾನೆ. ಅವನದೇ ಆದ ನಿಯಮವನ್ನು ಅವನು ರೂಪಿಸಿಕೊಂಡಿದ್ದಾನೆ. ಪ್ರಕೃತಿಯ ಆ ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲಿಸಲೇ ಬೇಕು. ನಾವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಕರ್ಮಫಲವನ್ನು ಅನುಭವಿಸಲೇ ಬೇಕು. ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಹೋದರೆ , ಪ್ರಕೃತಿಯೇ ನಮಗೆ ಬುದ್ದಿ ಕಲಿಸುತ್ತದೆ ಎನ್ನುವುದು ಈ ಮುಕ್ತಕದ ಆಶಯವಾಗಿದೆ. ಮುಕ್ತಕ – 241 ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು I ಅಸಮಂಜಸದಿ ಸಮನ್ವಯ ಸೂತ್ರನಯವ II ವೆಸನಮಯ ಸಂಸಾರದಲಿ ವಿನೋದವ ಕಾಣ್ಬ I ರಸಿಕತೆಯೇ ಯೋಗವೆಲೋ ಮಂಕುತಿಮ್ಮ II ಭಾವಾರ್ಥ: ಈ ಮುಕ್ತಕದಲ್ಲಿ ನಿಜವಾದ ಯೋಗಿ ಎಂದರೆ ಯಾರು ಎಂದು ಪೂಜ್ಯ ಗುಂಡಪ್ಪನವರು ತಿಳಿಸಿದ್ದಾರೆ. ಯೋಗಿಯಾಗಲು ಪಾಲಿಸಬೇಕಾದ ಆ ನಾಲ್ಕು ಯೋಗಗಳು ಹೀಗಿವೆ: ೧) ಮೊದಲನೆಯದಾಗಿ , ಅಸಮದಲಿ ಸಮತೆಯನು ಕಾಣುವುದು. ಭಗವಂತನ ಈ ಸೃಷ್ಟಿಯಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ . ಎಲ್ಲಾ ಮನುಷ್ಯರು, ಪ್ರಾಣಿ, ಪಕ್ಷಿ, ಹೂ, ಹಣ್ಣುಗಳು ಒಂದೇ ರೀತಿ ಇದ್ದಿದ್ದರೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಭಗವಂತನು ಸೃಷ್ಟಿಸಿದ ಈ ವೈವಿಧ್ಯತೆಯನ್ನು ಗೌರವಿಸಿ ಆನಂದಿಸಬೇಕು ಎನ್ನುವುದು ಇದರ ಅರ್ಥ. ೨) ಎರಡನೆಯದು, ವಿಷಮದಲಿ ಮೈತ್ರಿಯನು ಕಾಣುವುದು. ಅಂದರೆ ನಮ್ಮ ಶತ್ರುಗಳನ್ನು ಕೂಡ ದ್ವೇಷಿಸದೆ ಅವರನ್ನು ಸ್ನೇಹದಿಂದ ಕಾಣುವುದು. ೩) ಒಂದಕ್ಕೊಂದು ಹೊಂದಿಕೊಳ್ಳದ ವಿಷಯಗಳನ್ನು ತಮ್ಮ ಭಿನ್ನತೆ ಮರೆತು ಹೊಂದಿಕೊಂಡು ಹೋಗುವಂತೆ ಮಾಡುವುದು. ೪) ನಾಲ್ಕನೆಯದು: ನಮ್ಮ ಕಷ್ಟ ನೋವುಗಳನ್ನು ನಮ್ಮ ಮನಸ್ಸಿನಲ್ಲಿಯೇ ಇರಿಸಿ ಇತರರೊಂದಿಗೆ ನಗುನಗುತ್ತಾ ಬಾಳುವುದು. ಈ ನಾಲ್ಕು ಗುಣಗಳನ್ನು ಹೊಂದಿದವನೇ ನಿಜವಾದ ಯೋಗಿ. ಎಲ್ಲರಲ್ಲೂ , ಎಲ್ಲದರಲ್ಲೂ ಒಳ್ಳೆಯದನ್ನೇ ನೋಡುವ ಪ್ರಯತ್ನ ಮಾಡಬೇಕು ಎನ್ನುವುದು ಈ ಮುಕ್ತಕದ ಆಶಯ. **************************************** ವಾಣಿ ಸುರೇಶ್ ಕಾಮತ್ ವಾಣಿ ಸುರೇಶ್ ಕಾಮತ್ , ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಬೆಂಗಳೂರು ವಾಸಿ. ಓದು ಮತ್ತು ತೋಟಗಾರಿಕೆ ಇವರ ಹವ್ಯಾಸ.
ಅಂಕಣ ಬರಹ ನಾಗರಾಜ ಎಂ ಹುಡೇದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಂಗೋಡ ಹುಟ್ಟೂರು. ಬಡತನದಲ್ಲಿ ಬೆಳೆದು, ಪರಿಶ್ರಮದಿಂದ ಶಿಕ್ಷಣವನ್ನು ಪಡೆದು ೨೦೦೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೈಲಂದೂರು ಗೌಳಿವಾಡದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹದಿನೇಳು ವರ್ಷಗಳಿಂದ ಅದೇ ಕುಗ್ರಾಮದಲ್ಲಿ ಅಚ್ಚುಮೆಚ್ಚಿನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುಣಮಟ್ಟದ ಉತ್ತಮ ಶಾಲೆಯನ್ನಾಗಿಸಿದ್ದಾರೆ. ಬೋಧನೆಯನ್ನು ವೃತ್ತಿಯಾಗಿಸಿಕೊಂಡು ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ನಿರಂತರ ಅಭ್ಯಾಸ, ಸಾಹಿತ್ಯಿಕ ಕಾರ್ಯಕ್ರಮಗಳ ಸಂಘಟನೆ ಮಾಡುವ ಮೂಲಕ ಹಿಂದುಳಿದ ಪ್ರದೇಶದಲ್ಲಿಯೂ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿದ್ದಾರೆ. ಮಕ್ಕಳಿಗಾಗಿ ‘ಅರಳುವ ಮೊಗ್ಗು’ ದೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ. ಶಿಕ್ಷಕರ ತಂಡವನ್ನು ಕಟ್ಟಿಕೊಂಡು ಉತ್ಸವ, ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಹಲವಾರು ಸಂಘಟನೆಗಳ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿ, ಪುರಸ್ಕಾರ: • ವಾ.ಕ.ರ.ಸಾ ಸಂಸ್ಥೆ ಯಲ್ಲಾಪುರ ಘಟಕದ ಕನ್ನಡ ಕ್ರಿಯಾ ಸಮಿತಿಯವರ ಅಭಿನಂದನಾ ಸನ್ಮಾನ. • ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ ನೀಡುವ ‘ರಾಜ್ಯೋತ್ಸವ ಯುವ ಕೃತಿ’ ಪುರಸ್ಕಾರ. • ಜಿಲ್ಲಾ, ರಾಜ್ಯಮಟ್ಟದ ಹಲವಾರು ಕವಿಗೋಷ್ಠಿ, ಕಾವ್ಯ ಕಮ್ಮಟಗಳಲ್ಲಿ ಭಾಗವಹಿಸಿ ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದಾರೆ. ಪ್ರಕಟಿತ ಕೃತಿಗಳು: • ನಗುವ ತುಟಿಗಳಲ್ಲಿ – ಕವನ ಸಂಕಲನ • ಸುವರ್ಣ ಜ್ಞಾನ – ಕರ್ನಾಟಕ ಸಂಬAಧಿತ ರಸಪ್ರಶ್ನೆಗಳು. • ಕಿರುಗೊಂಚಲು – ಸಂಪಾದಿತ. • ಸೇಡಿನ ಹುಲಿಗಳು – ಸಾಮಾಜಿಕ ನಾಟಕ. • ಭರವಸೆ – ಕವನ ಸಂಕಲನ. • ಶಬ್ದಕೋಶ – ಕನ್ನಡ, ಗೌಳಿ,ಇಂಗ್ಲೀಷ ಭಾಷೆಯಲ್ಲಿ. • ಅವತಾರ್ ಮತ್ತು ಹಾರುವ ಕುದುರೆ – ಮಕ್ಕಳ ಕಥಾ ಸಂಕಲನ ಈ ವಾರದ ಮುಖಾಮುಖಿಯಲ್ಲಿ ಶಿಕ್ಷಕ, ಕವಿ ನಾಗರಾಜ ಹುಡೇದ ಅವರನ್ನು ಮಾತಾಡಿಸಿದ್ದಾರೆ ನಾಗರಾಜ ಹರಪನಹಳ್ಳಿ ” ದೇವರನ್ನು ಪೂಜಿಸಲು ಯಾರೂ ಯಾರ ಮೇಲೂ ಒತ್ತಡ ಹೇರಬಾರದು “ ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಮನದ ಭಾವನೆಗಳನ್ನು ಮಲ್ಲಿಗೆಯಾಗಿಸಿ ನನಗೆ ನಾನು ಹಗುರಾಗಲು ಬರೆಯುವುದು ಒಂದು ಕಾರಣವಾದರೆ, ಸಮಾಜದ ಸಂಕಟ, ಸಮಸ್ಯೆಗಳಿಗೆ ಸ್ಪಂಧಿಸುವ ಒಬ್ಬ ಜವಾಬ್ಧಾರಿಯುತ ವ್ಯಕ್ತಿಯಾಗಿ ಕವನಗಳನ್ನು ಬರೆಯುತ್ತೇನೆ. ಕವಿತೆ ಹುಟ್ಟುವುದು ಯಾವಾಗ? ಯಾವುದೋ ಒಂದು ವಿಷಯ ಮನಸ್ಸಿಗೆ ತಾಗಿ ಸಂತೋಷ, ಸಂಕಟ, ದುಃಖ ದುಮ್ಮಾನ, ಪ್ರೀತಿ , ಪ್ರಕೃತಿ ಸೌಂದರ್ಯ ಮುಂತಾದ ವಿಷಯಗಳ ಮನಸ್ಸಿನಲ್ಲಿ ಒಂದು ರೀತಿಯ ತುಡಿತ ಹೆಚ್ಚಾಗಿ ಕವಿತೆ ಹುಟ್ಟುತ್ತದೆ. ಆ ಸಮಯದಲ್ಲಿ ಏಕಾಂತ ಮತ್ತು ಪ್ರಶಾಂತವಾದ ಸ್ಥಳ ಬೇಕೆನಿಸುತ್ತದೆ. ನಿಮ್ಮ ಕವಿತೆಗಳಲ್ಲಿ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಪ್ರೀತಿ ಮತ್ತು ಪ್ರಕೃತಿ, ಸೌಂದರ್ಯ ಗಳಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ. ವಯೋ ಸಹಜವಾಗಿ ಮತ್ತು ಸರ್ವಕಾಲಕ್ಕೂ ಪ್ರೀತಿ- ಪ್ರೇಮ ಎವರ್ ಗ್ರೀನ್. ಈ ಮಲೆನಾಡಿನ ಮಳೆ – ಹಸಿರ ಕಾಡು ಹೆಚ್ಚು ಪ್ರಭಾವಿಸಿವೆ ಮತ್ತು ಕವನವಾಗಿವೆ. ದೇಶಪ್ರೇಮ, ನಾಡು-ನುಡಿ ಬಗ್ಗೆಯೂ ಅಗಾಧ ಪ್ರೀತಿ ಇದೆ. ನಾನು ನಮ್ಮ ವ್ಯಕ್ತಿಗಳ ಸ್ವಭಾವಗಳನ್ನು ಬಹಳ ಕುತೂಹಲದಿಂದ ನೋಡುತ್ತೇನೆ. ಕೆಲವರಿಗೆ ನಿಜ-ಸುಳ್ಳುಗಳನ್ನು ನಿರ್ಧರಿಸುವಷ್ಟು ಬುದ್ಧಿವಂತರಿಲ್ಲದೆ ಇರೋದು. ದ್ವೇಷ , ಸ್ವಾರ್ಥ, ಭ್ರಷ್ಟಾಚಾರಗಳಂಥ ವಿಷಯಗಳು ಬಹಳ ಕಾಡುವಂತವುಗಳಾಗಿವೆ. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಬಾಲ್ಯ ಎಲ್ಲರ ಜೀವನದಲ್ಲಿಯೂ ಬಹಳ ಪ್ರಭಾವ ಬೀರುವಂತದು. ಆ ಬಾಲ್ಯದ ಘಟನೆಗಳು ನೆನಪಾದಾಗ ಮತ್ತೆ ಮತ್ತೆ ಬಾಲ್ಯಕ್ಕೀಳಿಯುತ್ತೇವೆ. ಗೆಳೆಯರೆಲ್ಲ ಕೂಡಿ ಆಡಂಭರವಿಲ್ಲದ ಅಂದಿನ ಆಟಗಳು ಈಗಲೂ ನೆನಪಾಗುತ್ತವೆ. ನಾನು ಸಾಕಿದ್ದ ಪಾರಿವಾಳಗಳನ್ನು ಬೆಕ್ಕೊಂದು ಕದ್ದೊಯ್ದಿತ್ತು. ಆಗ ನಾನು ಅತ್ತಿದ್ದೇನೆ. ಅದೇ ಕವನವೂ ಆಯಿತು. “ಪ್ರೀತಿಯ ಹಕ್ಕಿ ನನ್ನೆದೆಯ ಕುಕ್ಕಿ ಅಳುತಿದೆ ಬಿಕ್ಕಿ.” ನಾನು ನನ್ನ ಗೆಳೆಯ ಸುಮ್ಮನೆ ಮಾತು ಬಿಟ್ಟಾಗಿನ ಸಂದರ್ಭವನ್ನು ಪಾಕಿಸ್ತಾನ ಮತ್ತು ಭಾರತದ ಬಾಂಧವ್ಯ ವೃದ್ಧಿಸುವಂತೆ ಬರೆದೆ. ಅದೊಂದು ಪ್ರಸಿದ್ಧ ಕವನವೂ ಆಯಿತು. ಬಾಲ್ಯದ ಕ್ಷಣಗಳನ್ನು ನೆನಪಿಸಿ ಅನೇಕ ಮಕ್ಕಳ ಕವನಗಳನ್ನೂ ರಚಿಸಿದ್ದೇನೆ. ಹರೆಯವಂತೂ ಕಲ್ಪನೆ, ಕನಸುಗಳಿಂದ ತುಂಬಿರುತ್ತದೆ. ಯಾವಾಗಬೇಕಾದರೂ ಕವನವಾಗಿ ಬಿಡುತ್ತೆ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಮಹಾಕವಿ ಪಂಪ ಅವರ ಹೇಳಿಕೆಯಂತೆ ‘ಮಾನವ ಕುಲಂ ತಾನೊಂದೇ ವಲಂ’ ಎಂಬ ನಿಲುವು ನನ್ನದು. ಅವರವರ ಧರ್ಮ, ದೇವರನ್ನು ಪೂಜಿಸಲು ಯಾರೂ ಯಾರ ಮೇಲೂ ಒತ್ತಡ ಹೇರಬಾರದು. ಒಬ್ಬರನ್ನೊಬ್ಬರು ಪ್ರೀತಿ ಗೌರವಿಸಬೇಕು. ಅದು ಎಲ್ಲ ಧರ್ಮ ,ಜಾತಿಗಳಿಂದಲೂ ಆಗಬೇಕು. ನಮ್ಮ ನಮ್ಮ ಜಾತಿ, ಧರ್ಮದಲ್ಲಿ ನಂಬಿಕೆ, ಅಭಿಮಾನವಿರಲಿ. ಅಂಧಾನುಕರಣೆ, ದುರಭಿಮಾನ ಬೇಡ ಎಂಬುದು ನನ್ನ ವಿಚಾರ. ದಯವೇ ಧರ್ಮದ ಮೂಲ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ? ಕಲೆ, ಸಾಹಿತ್ಯ, ಜನಪದ ಕಲೆಗಳು ಆಧುನಿಕ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಬರುತ್ತಿರುವುದು ಖುಷಿಯ ವಿಚಾರ. ಅವಕಾಶಗಳು ಸಾಕಷ್ಟಿವೆ. ಭರಾಟೆಯ ಮಧ್ಯ ಜೊಳ್ಳು ಹೆಚ್ಚು ವಿಜೃಂಭಿಸುವ ಸಾಧ್ಯತೆಯಿದೆ. ಸತ್ವಯುತವಾದ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಬೇಕಿದೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಪ್ರದೇಶವಾರು ಬೇಧಭಾವವನ್ನು ನಮ್ಮ ಸಾಹಿತಿಗಳು ಮಾಡತ್ತಾರೆ. ಮೊದಲು ನಮ್ಮ ಹಿರಿಯರು ನಾಡು-ನುಡಿ ಮೇಲಿನ ಅಭಿಮಾನದಿಂದ ಸಾಹಿತ್ಯ ರಚಿಸಿ ತಲೆಮೇಲೆ ಹೊತ್ತು ಮಾರುತ್ತಿದ್ದರು. ಸರ್ಕಾರಗಳು ಅನುದಾನ ನೀಡೊದು ಶುರುಮಾಡಿದಾಗಿನಿಂದ ಏನೂ ಗಂಧವಿಲ್ಲದವರು, ರಾಜಕಾರಣ ಬಳಸಿ ಚುಕ್ಕಾಣಿ ಹಿಡಿಯಲಿಕ್ಕೆ ಬರುತ್ತಿದ್ದಾರೆ. ಅವರಿಗೆ ಸಾಹಿತ್ಯ ತಿಳಿದಿಲ್ಲ, ಸಾಹಿತಿಗಳ ಮೇಲಂತೂ ಗೌರವವೇ ಇಲ್ಲ. ಹಣ ಚೆಲ್ಲಿ ಹಣ ಮಾಡೋ ಕಾಯಕಕ್ಕಿಳಿದಿದ್ದಾರೆ. ಬಂಡಾಯ ಸಾಹಿತ್ಯ ಪ್ರಾರಂಭವಾದಾಗಿನಿಂದ ಎಲ್ಲ ಜನಾಂಗದವರಿಗೂ ಅವಕಾಶಗಳು ದೊರೆಯುತ್ತಿರುವುದು ಸಮಾಧಾನ ತಂದಿದೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ದೇಶ ಅಂದ್ರೆ ನಾವೂ. ಪ್ರತಿಯೊಬ್ಬ ಪ್ರಜೆಯ ಮನಸ್ಥಿತಿಯೂ ಬದಲಾಗಬೇಕಿದೆ. ಪ್ರಾಮಾಣಿಕತೆ, ಮಾನವೀಯತೆಯತ್ತ ನಮ್ಮ ಮನಸ್ಸು ತುಡಿಯಬೇಕಿದೆ. ತುಳಿತಕ್ಕೊಳಗಾದ, ಹಿಂದುಳಿದವರನ್ನು ಮೇಲೆತ್ತುವ ಕಾರ್ಯಯೋಜನೆಗಳು ಜಾರಿಯಾಗಬೇಕಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಕನ್ನಡ ಹಾಗೂ ಆಂಗ್ಲಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ ಯಾರು? ಸಾಹಿತ್ಯ ಪ್ರತಿ ಭಾಷೆಗೂ ಜೀವ ಇದ್ದಂತೆ. ಆ ಭಾಷೆಯ ಮೌಲ್ಯವು ಹೆಚ್ಚಾಗಬೇಕಾದರೆ ಭಾಷೆಯಲ್ಲಿ ವಿಭಿನ್ನ ಪ್ರಯೋಗವುಳ್ಳ ಸಾಹಿತ್ಯ ಕೃಷಿಯಾಗಬೇಕು. ನಮ್ಮ ಕನ್ನಡ ಭಾಷೆಯೂ ಸಹಿತ ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾಷೆಯಾಗಿದೆ. ಸಂಪದ್ಭರಿತವಾದ ಭಾಷೆಯಾಗಿರುವುದು ನಾವೆಲ್ಲ ಹೆಮ್ಮೆಪಡುವಂತೆ ಮಾಡಿದೆ. ಕನ್ನಡದಲ್ಲಿ ಕಾವ್ಯಕ್ಕೆ ದ.ರಾ.ಬೇಂದ್ರೆಯವರು ನನ್ನಿಷ್ಟದ ಕವಿ. ಕಾವ್ಯವು ಎಷ್ಟು ಸಾರಿ ಓದಿದರೂ ಹೊಸ ಹೊಳಹನ್ನುಂಟು ಮಾಡುತ್ತದೆ. ಹಾಗೆಯೇ ಕುವೆಂಪು, ದಿನಕರ ದೇಸಾಯಿ, ಬರಗೂರು ರಾಮಚಂದ್ರಪ್ಪ ಅವರು ಇಷ್ಟವಾಗುತ್ತಾರೆ. ಈಚೆಗೆ ಓದಿದ ಕೃತಿಗಳು ಯಾವುವು? ಗಂಗಾಧರ ನಾಯ್ಕ ಅವರ ‘ಡೋಂಟ್ ಗಿವ್ ಅಫ್ ಮುಂದಕ್ಕೆ ಸಾಗೋಣ’, ನಾಗರಾಜ ಹರಪನಹಳ್ಳಿಯವರ ‘ವಿರಹಿ ದಂಡೆ’, ಗಂಗಾಧರ ಎಸ್.ಎಲ್ ಅವರ ‘ನಮ್ಮ ಪಯಣ’ ನಿಮಗೆ ಇಷ್ಟವಾದ ಕೆಲಸ ಯಾವುದು? ಮಕ್ಕಳಿಗೆ ಪಾಠ ಹೇಳಿಕೊಡೋದು ನನಗೆ ಬಹಳ ಇಷ್ಟ. ನಿಮ್ಮ ಪ್ರೀತಿಯ , ತುಂಬಾ ಇಷ್ಟಪಡುವ ಸಿನೇಮಾ ಯಾವುದು? ನಾನು ವಿಷ್ಣುವರ್ಧನ್ ಅವರ ಅಭಿಮಾನಿ. ‘ಅವರ ಯಜಮಾನ’ ಸಿನೆಮಾ ನನಗೆ ಬಹಳ ಇಷ್ಟ. ನೀವು ಮರೆಯಲಾರದ ಘಟನೆ ಯಾವುದು? ಮರೆಯಲಾರದ ಅನೇಕ ಘಟನೆಗಳಿವೆ. ಅದರಲ್ಲಿ ಸಿಹಿ-ಕಹಿಗಳಿವೆ. ಬಡತನದಲ್ಲಿ ಬೆಳೆದು ಕವನ ಸಂಕಲನ ಬಿಡುಗಡೆಯ ಕ್ಷಣ. ರಾಜ್ಯಮಟ್ಟದ ಉತ್ತಮ ಪ್ರಶಸ್ತಿ ಪಡೆದು ನಮ್ಮ ಗೌಳಿವಾಡದ ಜನ ಸನ್ಮಾನಿಸಿದ್ದು, ಮತ್ತು ನನ್ನ ತಾಯಿ ತೀರಿಕೊಂಡಾಗಿನ ದುಃಖದ ಘಟನೆ ಮರೆಯಲಾಗದು. ತೀರಾ ಕಡು ಬಡತನದಲ್ಲಿ ನಮ್ಮನ್ನು ಓದಿಸಿ ಬೆಳೆಸಿದ ನನ್ನ ತಂದೆ-ತಾಯಿಗಳನ್ನು, ನನ್ನ ಸಹೋದರರನ್ನು ಸ್ಮರಿಸುವೆ. ******************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ಕರುಳು ಹಿಂಡುವ ಬಡಪಾಯಿಯೊಬ್ಬನ ಕರುಣ ಕಥೆ ‘ಆಡು ಜೀವನ’ ‘ಆಡು ಜೀವನ’ಮೂಲ : ಬೆನ್ಯಾಮಿನ್ಕನ್ನಡಕ್ಕೆ : ಡಾ.ಅಶೋಕ ಕುಮಾರ್ಪ್ರಕಾಶಕರು : ಹೇಮಂತ ಸಾಹಿತ್ಯಪ್ರಕಟಣೆಯ ವರ್ಷ: ೨೦೧೨ಬೆಲೆ : ರೂ.೧೦೦ಪುಟಗಳು : ೧೮೪ ಬಡತನದ ಬೇಗೆಯನ್ನು ತಾಳಲಾರದೆ ಉತ್ತಮ ಭವಿಷ್ಯದ ಕನಸು ಕಾಣುತ್ತ ಕೊಲ್ಲಿ ರಾಷ್ಟçಕ್ಕೆ ಹೋಗಿ ಅಲ್ಲೂ ದುರಾದೃಷ್ಟದ ಅನಿರೀಕ್ಷಿತ ಹೊಡೆತದಿಂದ ಅಸಹನೀಯ ವೇದನೆಯನ್ನನುಭವಿಸಿದ ಬಡಪಾಯಿಯ ಕರುಣ ಕತೆ ‘ಆಡು ಜೀವನ’. ಅಶಿಕ್ಷಿತನಾದ ಆತನ ಬಾಯಿಯಿಂದ ಕೇಳಿದ ಕತೆಗೆ ಲೇಖಕ ಬೆನ್ಯಾಮಿನ್ ಅವರು ಕಾದಂಬರಿಯ ರೂಪ ಕೊಟ್ಟಿದ್ದಾರೆ. ಈ ಕಾದಂಬರಿಯು ಬೆನ್ಯಾಮಿನ್ ಅವರಿಗೆ ಅಪಾರ ಜನಪ್ರಿಯತೆ – ಕೀರ್ತಿಗಳನ್ನು ತಂದು ಕೊಟ್ಟಿದೆ. ಕೇರಳದಲ್ಲಿ ಮರಳುಗಾರಿಕೆಯ ಕಾರ‍್ಮಿಕನಾಗಿ ದುಡಿಯುತ್ತಿದ್ದ ನಜೀಬ್ ಎಂಬ ಬಡ ಯುವಕ, ತನ್ನ ಸ್ನೇಹಿತನ ಸಂಬಂಧಿಯ ಮೂಲಕ ಸಿಕ್ಕಿದ ವೀಸಾದ ಸಹಾಯದಿಂದ ಸಂಪಾದನೆ ಮಾಡುವ ಕನಸು ಕಾಣುತ್ತ ಸೌದಿ ಅರೇಬಿಯಕ್ಕೆ ಹೊಗುತ್ತಾನೆ. ಅವನ ಜತೆಗೆ ಅಲ್ಲಿಗೆ ಹೋಗಲು ಆಗಲೇ ವೀಸಾ ಪಡೆದುಕೊಂಡಿದ್ದ ಹಕೀಮ್ ಎಂಬ ಜತೆಗಾರನೂ ಸಿಗುತ್ತಾನೆ. ರಿಯಾದ್‌ನಲ್ಲಿ ವಿಮಾನದಿಂದಿಳಿದ ಅವರಿಬ್ಬರೂ ವಿಮಾನ ನಿಲ್ದಾಣದಲ್ಲಿ ಯಾರಿಗಾಗಿಯೋ ಕಾಯುತ್ತಿರುವಂತೆ ಕಂಡ ಅರಬಿಯನ್ನು ಕಂಡು ಆತನೇ ತಮ್ಮನ್ನು ಸ್ಪಾನ್ಸರ್ ಮಾಡಿದ ವ್ಯಕ್ತಿಯೆಂದು ತಪ್ಪಾಗಿ ತಿಳಿಯುತ್ತಾರೆ. ಭಾಷೆ ಗೊತ್ತಿಲ್ಲದ್ದರಿಂದ ಸಂವಹನ ಮಾಡಲಾಗದೆ ಇಬ್ಬರೂ ಆ ಅರಾಬ್ ( ಸಾಹುಕಾರ) ಜತೆಗೆ ಹೋಗಿಯೇ ಬಿಡುತ್ತಾರೆ. ಆದರೆ ಅವರು ಹೋಗಿ ತಲುಪಿದ್ದು ಎರಡು ಭಿನ್ನ ‘ಮಸ್ರಾ’( ತೋಟ) ಗಳಿಗಾಗಿತ್ತು. ತೀರಾ ದುರ್ಗಂಧಗಳಿಂದ ತುಂಬಿದ್ದ ಕೊಳಕು ಪರಿಸರದಲ್ಲಿ ಅವರಿಬ್ಬರೂ ಬೇರೆ ಬೇರೆ ಪ್ರದೇಶಗಳಲ್ಲಿ ಆಡುಗಳನ್ನೂ ಒಂಟೆಗಳನ್ನೂ ನೋಡಿಕೊಳ್ಳುವ ಕೆಲಸ ಮಾಡ ಬೇಕಾಗಿತ್ತು. ಕ್ರೂರ ಅರಬಾಬ್ ಅವರನ್ನು ಕತ್ತೆಗಳಂತೆ ದುಡಿಸಿಕೊಂಡು, ವಿರೋಧಿಸಿದರೆ ಹೊಡೆದು ಬಡಿದು ಮಾಡಿ ಶೋಷಿಸುತ್ತಾನೆ. ನಜೀಬ್ ಅಲ್ಲಿಗೆ ಹೋದಾಗ ಅಲ್ಲಿ ಇನ್ನೊಬ್ಬ ಕೆಲಸಗಾರನೂ ಇದ್ದ. ವರ್ಷಗಟ್ಟಲೆ ಧೀರ್ಘ ಕಾಲದ ಗುಲಾಮಗಿರಿಯು ಅವನನ್ನು ಒಂದು ಭೀಕರ ರೂಪಿಯನ್ನಾಗಿ ಮಾಡಿತ್ತು. ನಜೀಬ್ ಬಂದು ಕೆಲವು ಕಾಲವಾದ ನಂತರ ಅವನು ಕಾಣದಾದ. ಮುಂದೆ ಮಸ್ರಾದ ಎಲ್ಲ ಕೆಲಸಗಳೂ ನಜೀಬ್‌ನ ಮೇಲೆ ಬಿದ್ದವು. ಭಾಷೆಯೂ ಗೊತ್ತಿಲ್ಲದೆ ಅವನು ಏಕಾಂಗಿಯಾಗಿ ದಿನಗಳನ್ನು ಕಷ್ಟದಿಂದ ಕಳೆಯುತ್ತಾನೆ. ಹಸಿಹಾಲು ಮತ್ತು ಕುಬೂಸ್ ಅನ್ನುವ ಅರಬಿ ರೊಟ್ಟಿಯೂ ಸ್ವಲ್ಪವೇ ಸ್ವಲ್ಪ ನೀರೂ ಆಗಿದ್ದವು ಅವನಿಗೆ ಸಿಕ್ಕುತ್ತಿದ್ದ ಆಹಾರ.. ವಾಸಿಸಲು ಕೋಣೆಯಾಗಲಿ, ಸ್ನಾನಕ್ಕಾಗಲಿ, ಬದಲಿಸಲು ಬಟ್ಟೆಯಾಗಲಿ ಏನೂ ಸಿಗದ ಪರಿಸ್ಥಿತಿಯಲ್ಲಿ ಅವನ ಸ್ಥಿತಿ ಮೃಗಗಳಿಗಿಂತ ಕಡೆಯಾಗಿತ್ತು. ಹೆಚ್ಚು ದೂರವಿಲ್ಲದ ಇನ್ನೊಂದು ಮಸ್ರಾದಲ್ಲಿ ಅಂಥದೇ ಸ್ಥಿತಿಯಲ್ಲಿದ್ದ ಹಕೀಮನನ್ನು ನಜೀಬ್ ಕೆಲವೊಮ್ಮೆ ಭೇಟಿಯಾಗಲು ಹೋಗುವುದನ್ನು ಅರಬಾಬ್ ಯಾವಾಗಲೂ ತಡೆಯುತ್ತಿದ್ದ. ಆಡುಗಳಿಗೆ ಊರಿನ ಕಥಾಪಾತ್ರಗಳನ್ನೂ ತನ್ನವರ ಹೆಸರುಗಳನ್ನೂ ಇಟ್ಟು ಅವುಗಳೊಂದಿಗೆ ಮಾತನಾಡುತ್ತ ನಜೀಬ್ ತನ್ನ ಒಂಟಿತನದ ನೋವಿಗೆ ಸಮಾಧಾನ ಹೇಳಿಕೊಳ್ಳುತ್ತಾನೆ. ಈ ನಡುವೆ ಹಕೀಮ್ ಕೆಲಸ ಮಾಡುತ್ತಿದ್ದ ಮಸ್ರಾದಲ್ಲಿ ಇಬ್ರಾಹಿಮ್ ಖಾದರಿ ಎಂಬ ಸೋಮಾಲಿಯದ ಒಬ್ಬ ಪ್ರಜೆ ಕೂಡಾ ಕೆಲಸಕ್ಕೆ ಸೇರುತ್ತಾನೆ. ಹೇಗಾದರೂ ತಪ್ಪಿಸಿಕೊಂಡು ಹೋಗಬೇಕೆಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಹಕೀಮ್ , ಖಾದರಿ ಮತ್ತು ನಜೀಬರಿಗೆ ಒಂದು ಸಣ್ಣ ಸಂಧರ‍್ಭವೊದಗಿ ಬರುತ್ತದೆ. ಮಸ್ರಾದ ಅರಬಾಬ್ ತನ್ನ ಸಂಬಂಧಿಕರ ಮಗಳ ಮದುವೆಯ ಕೆಲಸಗಳಿಗೆ ಹೋಗುತ್ತಿದ್ದ ಅವಕಾಶವನ್ನು ಬಳಸಿಕೊಂಡು ಅವರು ತಪ್ಪಿಸಿಕೊಂಡು ಓಡತೊಡಗುತ್ತಾರೆ. ಮರುಭೂಮಿಯಲ್ಲಿ ಧೀರ್ಘ ದೂರದ ತನಕ ಓಡಿ ಓಡಿ, ಹಸಿವು ನೀರಡಿಕೆಗಳಿಂದ ಹೈರಾಣಾದ ಅವರಿಗೆ ಒಂದೆಡೆ ದಾರಿಯೂ ತಪ್ಪಿ ಹೋಗುತ್ತದೆ. ಓಟದ ನಡುವೆ ಹಕೀಮ್ ದಾಹ ತಡೆಯಲಾರದೆ ಸಾಯುತ್ತಾನೆ. ಮುಂದೆ ಖಾದರ್-ನಜೀಬರಿಗೆ ಒಂದು ಓಯಸಿಸ್ ಕಾಣಸಿಕ್ಕಿ ಅಲ್ಲಿ ದಾಹ ತೀರಿಸಿಕೊಂಡು ಅವರು ಓಟ ಮುಂದುವರೆಸುತ್ತಾರೆ. ಕೊನೆಗೆ ಒಂದು ಹೈವೇಗೆ ಬಂದು ತಲುಪುವಷ್ಟರಲ್ಲಿ ಇಬ್ರಾಹಿಮ್ ಕೂಡಾ ಕಾಣೆಯಾಗಿರುತ್ತಾನೆ. ಹೈವೇಯಲ್ಲಿ ಒಬ್ಬ ಸಭ್ಯ ಅರಬಿ ನಜೀಬ್‌ನನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಮುಂದಿನ ಪಟ್ಟಣವಾದ ರಿಯಾದ್‌ನ ಬತ್‌ಹಕ್ಕೆ ತಲುಪಿಸುತ್ತಾನೆ. ಬತ್‌ಹ ತಲುಪಿದ ನಜೀಬ್ ಕುಞಕ್ಕ ಎಂಬವನಲ್ಲಿ ಚಾಕರಿಗೆ ನಿಂತು ಧೀರ್ಘ ಕಾಲದ ಬಳಿಕ ತನ್ನ ಹಿಂದಿನ ಮನುಷ್ಯರೂಪ ಮತ್ತು ಆರೋಗ್ಯವನ್ನು ಮರಳಿ ಪಡೆಯುತ್ತಾನೆ. ಊರಿಗೆ ಹಿಂದಿರುಗಲು ಪೋಲಿಸರಿಗೆ ವಿಷಯ ತಿಳಿಸಲಾಗುತ್ತದೆ. ಹಾಗೆ ಷುಮೇಸಿಯ ಸೆರೆಮನೆಯಲ್ಲಿ ಕೆಲವು ತಿಂಗಳುಗಳು ಕಳೆದ ನಂತರ ಒಂದು ದಿನ ನಜೀಬನ ಅರಬಾಬ್ ಕಳೆದು ಹೋದ ತನ್ನ ಗುಲಾಮರನ್ನು ಅರಸಿಕೊಂಡು ಬರುತ್ತಾನಾದರೂ ನಜೀಬನನ್ನು ಹಿಡಿದೊಯ್ಯುವುದಿಲ್ಲ, ಯಾಕೆಂದರೆ ಅವನ ವೀಸಾದಲ್ಲಿದ್ದ ವ್ಯಕ್ತಿ ನಜೀಬ್ ಆಗಿರಲಿಲ್ಲ. ಮುಂದೆ ಭಾರತೀಯ ದೂತಾವಾಸವು ಕೊಟ್ಟ ಔಟ್ ಪಾಸಿನ ಮೂಲಕ ನಜೀಬ ಊರಿಗೆ ತಲುಪುತ್ತಾನೆ. ವ್ಯಕ್ತಿಯೊಬ್ಬನ ನಿಜ ಅನುಭವವನ್ನು ಆಧರಿಸಿ ಬರೆದದ್ದಾದರೂ ಇದು ಬರೇ ಒಂದು ಜೀವನ ಕಥೆಯಲ್ಲ. ಕಾದಂಬರಿಯ ನಜೀಬ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕನ್ನು ಮುಂದುವರಿಸಬೇಕೆಂಬ ಇಚ್ಛಾಶಕ್ತಿ ಇದ್ದವನಾಗಿದ್ದರೆ ನಿಜ ಬದುಕಿನ ನಜೀಬ್ ಮರುಭೂಮಿಯಲ್ಲಿದ್ದಾಗ ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದವನೇ ಆಗಿದ್ದ. ಬದುಕಿನ ಬಗ್ಗೆ ಜುಗುಪ್ಸೆ ಹೊಂದಿದ್ದ. ರಿಯಾದಿನಲ್ಲಿ ಕಾಲೂರಿದ ದಿವಸದಿಂದ ಕಾದಂಬರಿಯಲ್ಲಿ ನಮೂದಿಸಿರುವ ೧೯೯೨ ಏಪ್ರಿಲ್ ೪ರಂದೇ ತಾನು ಅಲ್ಲಿಗೆ ಹೋಗಿ ತನ್ನ ವಲಸೆ ಬದುಕನ್ನು ಆರಂಭಿಸಿದ್ದೆಂದೂ ಲೇಖಕರು ಹೇಳುತ್ತಾರೆ. ಸೊಗಸಾದ ನಿರೂಪಣೆ, ಓದುಗರ ಕಣ್ಣುಗಳನ್ನು ಹನಿಗೂಡಿಸುವ ಸಂಕಟ ಮತ್ತು ಸಂಕಷ್ಟಗಳ ವಿವರಗಳು, ಅನುಭವ ಸಾಂದ್ರವಾದ ಕಥಾವಸ್ತು, ತನಿಮಲೆಯಾಳದ ಸೊಗಡುಗಳು ಮೇಳೈಸಿ ನಿಂತ ಕಾದಂಬರಿ ಇದು. ಡಾ.ಅಶೋಕ ಕುಮಾರ್ ಅವರ ಅನುವಾದ ಮೂಲಕ್ಕೆ ನಿಷ್ಠವಾಗಿದೆ. ******************************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ಅಂಕಣ ಬರಹ ಒಂದು ಸಲ, ರೈತರ ಕಮ್ಮಟದಲ್ಲಿ ಮಾತಾಡುವ ಅವಕಾಶ ಒದಗಿತು. ನನ್ನ ಮಾತಿನ ಸಾರವನ್ನು ಹೀಗೆ ಹಿಡಿದಿಡಬಹುದು: “ಯಾವುದೇ ಚಳುವಳಿಗೆ ರಾಜಕೀಯ, ಆರ್ಥಿಕ ಸಾಂಸ್ಕೃತಿಕ ಆಯಾಮಗಳಿರುತ್ತವೆ. ಸದ್ಯದ ಮಾರುಕಟ್ಟೆ ಆರ್ಥಿಕತೆಯ ಸನ್ನಿವೇಶವು ರೈತರನ್ನು ದಲಿತರ ಹಾಗೂ ಮಹಿಳೆಯರ ಹಾಗೆ ದಮನಿತ ವರ್ಗಕ್ಕೆ ಇಳಿಸಿದೆ. ಇದಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸಂಭವಿಸಿರುವ ಅವರ ಸಾವುಗಳೇ ಸಾಕ್ಷಿ. ರೈತರ ಮುಖ್ಯ ಬೇಡಿಕೆಗಳೆಂದರೆ, ಜಮೀನನ್ನು ತಮ್ಮಿಚ್ಛೆಗೆ ವಿರುದ್ಧವಾಗಿ ಕಿತ್ತು ಉದ್ಯಮಿಗಳಿಗೆ ಕೊಡುವುದರಿಂದ ರಕ್ಷಿಸಿಕೊಳ್ಳುವುದು; ಬೀಜ ಗೊಬ್ಬರ ಕೊಳ್ಳಲು ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯುವುದು, ಬೆಳೆದ ಫಸಲಿಗೆ ಸೂಕ್ತಬೆಲೆ ಪಡೆಯುವುದು. ಆದರೆ ಮಾರುಕಟ್ಟೆ ಮತ್ತು ಹಣಕಾಸು ಅವರ ನಿಯಂತ್ರಣದಲ್ಲಿಲ್ಲ. ಆ ಸಮಸ್ಯೆಗೆ ಕಾರಣವಾಗಿರುವುದು ಪ್ರಭುತ್ವಗಳು ಅನುಸರಿಸುತ್ತಿರುವ ಮಾರುಕಟ್ಟೆಪರ ನೀತಿ. ಜನರಿಂದ ಆಯ್ಕೆಯಾದ ಪ್ರಭುತ್ವಗಳನ್ನು ನಿಯಂತ್ರಿಸುತ್ತಿರುವುದು ಮಾರುಕಟ್ಟೆ ಶಕ್ತಿಗಳು ಅರ್ಥಾತ್ ಉದ್ಯಮಪತಿಗಳು. ಆದ್ದರಿಂದ ಪ್ರಭುತ್ವದ ನೀತಿಗಳನ್ನು ಟೀಕಿಸುವ, ತಿದ್ದುವ, ಚುನಾವಣೆಗಳಲ್ಲಿ ಬದಲಿಸುವ ಕೆಲಸವನ್ನೂ ರೈತಚಳುವಳಿ ಮಾಡಬೇಕಿದೆ. ಸಾಧ್ಯವಾದರೆ ತಾನೇ ಅಧಿಕಾರ ಹಿಡಿಯುವತ್ತ ಚಲಿಸಬೇಕಿದೆ. ಚಳುವಳಿಯ ಈ ರಾಜಕೀಯ-ಆರ್ಥಿಕ ಆಯಾಮದ ಬಗ್ಗೆ ಚಿಂತಕರು ಈಗಾಗಲೇ ಸಾಕಷ್ಟು ಚರ್ಚಿಸಿದ್ದಾರೆ. ಲೇಖಕನಾಗಿ ನಾನು ಅದರ ಬಗ್ಗೆ ಹೇಳಲಾರೆ. ಯಾವುದೇ ಆರ್ಥಿಕ ರಾಜಕೀಯ ಚಳುವಳಿಗಳಿಗೆ ಇರಬೇಕಾದ ಸಾಂಸ್ಕೃತಿಕ ಆಯಾಮದ ಬಗ್ಗೆ ನನ್ನ ಆಲೋಚನೆ ಹಂಚಿಕೊಳ್ಳುತ್ತೇನೆ. ಸಾಂಸ್ಕೃತಿಕ ಆಯಾಮವು ನಮ್ಮ ಆಲೋಚನ ಕ್ರಮಕ್ಕೆ ಸಂಬಂಧಿಸಿದ್ದು; ಸಮಾಜದ ಮೌಲ್ಯಾದರ್ಶಗಳಿಗೆ, ನಾವು ನಿತ್ಯ ಬಳಸುವ ಭಾಷೆಗೆ ಸಂಬಂಧಿಸಿದ್ದು. ವ್ಯವಸ್ಥೆಯನ್ನು ಆರೋಗ್ಯಕರ ದಿಸೆಯಲ್ಲಿ ಬದಲಿಸಲು ತೊಡಗಿರುವ ಚಳುವಳಿಗಾರರು, ವೈಯಕ್ತಿಕ ಜೀವನದಲ್ಲಿ ಹೇಗೆ ಚಿಂತಿಸುತ್ತಾರೆ ಮತ್ತು ಬದುಕುತ್ತಾರೆ ಎನ್ನುವುದಕ್ಕೂ ಸಂಬಂಧಿಸಿದ್ದು. ಅನೇಕ ಚಳುವಳಿಗಾರರು, ಪುರುಷವಾದ, ಕೋಮುವಾದ, ಜಾತಿವಾದ, ನೈತಿಕ ಭ್ರಷ್ಟತೆಗೆ ಒಳಗಾಗಿರುವುದುಂಟು. ಮನೆಯಲ್ಲಿ, ಅಥವಾ ಸಾರ್ವಜನಿಕ ಪರಿಸರದಲ್ಲಿ, ಅಪ್ರಜಾಪ್ರಭುತ್ವವಾದಿ ಆಗಿರಬಹುದು. ಆದ್ದರಿಂದ ಚಳುವಳಿಗೆ ದೃಷ್ಟಿಕೋನವನ್ನು ಪ್ರಭಾವಿಸುವ ಸಾಂಸ್ಕøತಿಕ ನೀತಿಯೂ ಮುಖ್ಯವಾದುದು. ಈ ಹೊತ್ತಲ್ಲಿ ನೆನಪಾಗುವುದು ಪ್ರೊ. ನಂಜುಂಡಸ್ವಾಮಿ ಹಾಗು ಕಡಿದಾಳು ಶಾಮಣ್ಣ. ಇಬ್ಬರೂ ಕೇವಲ ರೈತರ ಆರ್ಥಿಕ ಬೇಡಿಕೆಗಾಗಿ ಚಳುವಳಿ ಕಟ್ಟಿದವರಲ್ಲ. ಸಮಾಜದ ಮೌಲ್ಯಗಳ ಬದಲಾವಣೆಗೂ ಯತ್ನಿಸಿದವರು. ಇಬ್ಬರೂ ಮಾರ್ಕ್ಸ್ ಕುವೆಂಪು ಲೋಹಿಯಾ ಓದಿಕೊಂಡಿದ್ದವರು. ಶಾಮಣ್ಣನವರು ಸರೋದ್ವಾದನ, ಫೋಟೊಗ್ರಫಿ, ರೈತಚಳುವಳಿ, ಕನ್ನಡ ಚಳುವಳಿ ನಡುವೆ ವ್ಯತ್ಯಾಸವನ್ನೇ ಮಾಡಿದವರಲ್ಲ. ಲೋಹಿಯಾ ಸಮಾಜವಾದಿ ಹಿನ್ನೆಲೆಯಿಂದ ಬಂದ ರೈತಸಂಘಟನೆಯ ಮೊದಲ ತಲೆಮಾರಿನ ನಾಯಕರ ರಾಜಕೀಯ ಕ್ರಿಯೆಗೆ ಆಳವಾದ ಸಾಂಸ್ಕೃತಿಕ ಬೇರುಗಳಿದ್ದವು. ಅವರು ಕನ್ನಡದ ವಿಚಾರ ಸಾಹಿತ್ಯದಿಂದ ಪ್ರೇರಣೆ ಪಡೆಯುತ್ತಿದ್ದವರು. ಕುವೆಂಪು ಅವರ `ಸಾಲದಮಗು’ `ಧನ್ವಂತರಿಯ ಚಿಕಿತ್ಸೆ’ `ನೇಗಿಲಯೋಗಿ’ ಮುಂತಾದ ಕೃತಿಗಳು ರೈತಚಳುವಳಿಗೆ ಇಂಬಾಗಿದ್ದುದನ್ನು ಬಲ್ಲವರು. ಆದರೆ ಹೊಸತಲೆಮಾರಿನ ಎಷ್ಟು ರೈತ ಕಾರ್ಯಕರ್ತರು ಕುವೆಂಪು ಸಾಹಿತ್ಯವನ್ನು ಎಷ್ಟು ಓದಿದ್ದಾರೆಯೊ ತಿಳಿಯದು. ಕುವೆಂಪು ಮಾತ್ರವಲ್ಲ, ತೇಜಸ್ವಿ ಲಂಕೇಶ್ ಅನಂತಮೂರ್ತಿ ಬೆಸಗರಹಳ್ಳಿ ದೇವನೂರು ಅವರ ಕತೆ ಕಾದಂಬರಿ ಲೇಖನಗಳೂ ರೈತ ಕಾರ್ಯಕರ್ತರ ಪಠ್ಯಗಳೇ. ಯಾಕೆಂದರೆ, ಇವರ ಸಾಹಿತ್ಯದಲ್ಲಿ ರೈತಾಪಿ ಹಳ್ಳಿಗಳ ಸಂಭ್ರಮ ಮತ್ತು ಕ್ರೌರ್ಯಗಳ ಚಿತ್ರಣವಿದೆ; ಗೋವಿನ ರಾಜಕಾರಣ ಮತ್ತು ಹಸುವಿನ ವಾಸ್ತವತೆಯ ಬಗ್ಗೆ ಚಿಂತನೆಯಿದೆ. ಕೋಮುವಾದ ಕೇವಲ ಮುಸ್ಲಿಮರ ಹಗೆಯಲ್ಲ, ರೈತರ ವಿರೋಧಿ ಕೂಡ ಎಂಬ ತಿಳುವಳಿಕೆಯಿದೆ. ಪ್ರತಿ ಜನಪರ ಚಳುವಳಿಗಳಿಗೂ ಅದರದ್ದೇ ಆದ ಅಜೆಂಡಾ ಇರುತ್ತದೆ, ಇರಬೇಕು ಕೂಡ. ಇದರ ಜತೆಗೆ ಅದು ನಾಡಿನ ಉಳಿದ ಸಮಸ್ಯೆಗಳ ಬಗ್ಗೆ ಯಾವ ದೃಷ್ಟಿಕೋನ ಇರಿಸಿಕೊಂಡಿದೆ ಎಂಬ ಅಂಶವೂ ಮುಖ್ಯ. ಇದಕ್ಕಾಗಿ ಪ್ರತಿ ಚಳುವಳಿಗೂ ಇನ್ನೊಂದು ಜನಪರ ಚಳುವಳಿಯ ಜತೆ ಬೆರೆಯುವ ಕೊಂಡಿ ಇರಬೇಕು. ನಂಜುಂಡಸ್ವಾಮಿ, ಶಾಮಣ್ಣ ಅವರಿಗೆ ನಾಡಿನ ಪ್ರಜಾಪ್ರಭುತ್ವವಾದಿ ವಿಚಾರವಾದಿ ದಲಿತ ಮತ್ತು ಭಾಷಾ ಚಳುವಳಿಗಳ ಜತೆ ನಂಟಿತ್ತು. ಮಹಿಳಾ ಚಳುವಳಿಗಳ ಜತೆ ಅಷ್ಟು ಸಕೀಲ ಸಂಬಂಧವಿರಲಿಲ್ಲ. ಹೊಸತಲೆಮಾರಿನ ರೈತಚಳುವಳಿಗಾರರಿಗೆ ಕರ್ನಾಟಕವನ್ನು ಆರೋಗ್ಯಕರವಾಗಿ ಕಟ್ಟಬೇಕೆಂದು ಯತ್ನಿಸುತ್ತಿರುವ ಎಲ್ಲ ಜನಪರ ಚಳುವಳಿಗಳ ಸಹವಾಸ ಬೇಕಾಗಿದೆ. ಚಳುವಳಿಯ ಸಭೆಗಳಲ್ಲಿ ರೈತನೊಬ್ಬ ಗಂಡಸು ಎಂಬ ಗ್ರಹಿಕೆಯಲ್ಲೇ ಚರ್ಚೆ ನಡೆಯುತ್ತಿರುತ್ತದೆ. `ರೈತ’ ಶಬ್ದದಲ್ಲಿ ರೈತಮಹಿಳೆಯೇ ಇದ್ದಂತಿಲ್ಲ. ಇದು ಕೇವಲ ಪದರಚನೆಗೆ ಸಂಬಂಧಿಸಿದ ಮಾತಲ್ಲ. ಆಲೋಚನೆಗೂ ಕ್ರಿಯೆಗೂ ಸಂಬಂಧಿಸಿದ್ದು. ರೈತಸಂಘಟನೆಯಲ್ಲಿ ರೈತಾಪಿ ಚಟುವಟಿಕೆಯ ಬೆನ್ನುಲುಬಾದ ಮಹಿಳೆಯರ ಸಂಖ್ಯೆ ಯಾಕಿಷ್ಟು ಕಡಿಮೆ? ರೈತ ಸಂಘಟನೆಗಳಲ್ಲಿ ದಲಿತರು ಯಾಕೆ ಕಡಿಮೆ? ಇದಕ್ಕೆ ನಮ್ಮ ಸಮಾಜದಲ್ಲೇ ಸಾಮಾಜಿಕ ಆರ್ಥಿಕ ಕಾರಣಗಳಿರಬಹುದು. ಮಹಿಳೆಯರನ್ನು ದಲಿತರನ್ನು ರೈತಕೂಲಿಗಳನ್ನು ಒಳಗೊಳ್ಳದ ತನಕ ರೈತ ಚಳುವಳಿ ಪೂರ್ಣಗೊಳ್ಳುವುದು ಸಾಧ್ಯವೇ? ದಲಿತರ ಸಮಸ್ಯೆಗೆ ರೈತರು ತುಡಿಯದೆ ಹೋದರೆ, ರೈತರ ಸಮಸ್ಯೆಗೆ ದಲಿತರು ಮಿಡಿಯದೆ ಹೋದರೆ, ಹೊಸ ಸಂಚಲನ ಸಾಧ್ಯವಿಲ್ಲ. ಮಹಿಳೆಯರ ಮತ್ತು ದಲಿತರ ಭಾಗವಹಿಸುವಿಕೆ, ರೈತ ಚಳುವಳಿಗೆ ಬೇರೊಂದೇ ಸಂವೇದನೆಯನ್ನು ಹಾಯಿಸಬಲ್ಲದು. ಚಳುವಳಿಗಳಿಗೆ ಲೇಖಕರ ಬುದ್ಧಿಜೀವಿಗಳ ಜತೆ ಒಡನಾಟವಿದ್ದರೆ ಹೊಸ ವಿಚಾರಗಳು ಹಾಯುತ್ತವೆ. ಬುದ್ಧಿಜೀವಿಗಳಿಗೆ ಜನಪರ ಚಳುವಳಿಗಳ ಲಗತ್ತಿಲ್ಲದೆ ಹೋದರೆ, ಚಿಂತನೆಗೆ ಸಿಗಬೇಕಾದ ತೀಕ್ಷ್ಣತೆ ಮತ್ತು ನೈತಿಕತೆ ಸಿಗದೆ ಹೋಗುತ್ತದೆ. ರಾಜಕೀಯ-ಆರ್ಥಿಕ ಚಳುವಳಿಗಳಿಗೆ ಸಾಂಸ್ಕೃತಿಕ ವಿವೇಕ ಒದಗಿಸುವ ಕೆಲಸವನ್ನು ಉದ್ದಕ್ಕೂ ಕಲೆ ಮತ್ತು ಸಾಹಿತ್ಯಲೋಕಗಳು ಮಾಡಿಕೊಂಡು ಬಂದಿವೆ.ಕನ್ನಡ ಲೇಖಕರಿಂದ ಆಧುನಿಕ ಕಾಲದ ಚಳುವಳಿಗಳು ಶಕ್ತಿ ಪಡೆದಿವೆ. ಕನ್ನಡದಲ್ಲಿ ದಲಿತರನ್ನು ಮಾಂಸಾಹಾರಿಗಳನ್ನು ಮಹಿಳೆಯರನ್ನು ಹೀಯಾಳಿಸುವ ನುಡಿಗಟ್ಟು ಗಾದೆಗಳಿವೆ. ಈ ವಿಷಯದಲ್ಲಿ ರೈತ ಚಳುವಳಿ ಎಷ್ಟು ಸೂಕ್ಷ್ಮವಾಗಿದೆಯೊ ಕಾಣೆ. ಕರ್ನಾಟದಲ್ಲಿ ಮಾಂಸಾಹಾರದ ಮೇಲೆ ನಿರಂತರ ಹಲ್ಲೆಗಳಾದವು. ಉಚ್ಚಜಾತಿಗಳ ಆಹಾರಕ್ರಮವನ್ನು ಎಲ್ಲರ ಮೇಲೆ ಹೇರಲು ಯತ್ನಿಸಲಾಯಿತು. ಮಧ್ಯಾಹ್ನ ಶಾಲಾಮಕ್ಕಳಿಗೆ ಮೊಟ್ಟೆಕೊಡುವ ಯೋಜನೆಗೆ ಕೆಲವರು ವಿರೋಧಿಸಿದರು. ಇದೆಲ್ಲ ರೈತ ಚಳುವಳಿಯ ವಿಷಯಗಳಲ್ಲವೆ? ವಾಸ್ತವವಾಗಿ ಕೋಳಿ ಆಹಾರದಲ್ಲಿ ಬಳಕೆಯಾಗುವ ಮೆಕ್ಕೆಜೋಳವು ಕೋಳಿಸಾಕಣೆಯ ಹಿಂದಿದೆ. ಮೊಟ್ಟೆ ಮಾಂಸ ಮೀನು ಹಾಲು ಒಳಗೊಂಡಂತೆ ಎಲ್ಲ ಆಹಾರದ ಹಿಂದೆ ರೈತಾಪಿತನವಿದೆ. ಆಹಾರ ಸಂಸ್ಕøತಿ ಮೇಲಿನ ಹಲ್ಲೆಗಳು ರೈತಚಳುವಳಿಯ ಭಾಗವಾಗದೆ ಹೋದರೆ, ಅದಕ್ಕೆ ಹೊಸವಿಸ್ತರಣೆ ಹೇಗೆ ಸಿಗುತ್ತದೆ? ಅಧಿಕಾರಿಗಳು ರಾಜಕಾರಣಿಗಳು ಬುದ್ಧಿಜೀವಿಗಳು ಪೋಲೀಸರು ಜನಸಾಮಾನ್ಯರ ಆಶೋತ್ತರಕ್ಕೆ ಮಿಡಿಯುವಂತೆ ಸಂವೇದನಶೀಲರಾಗಬೇಕು ಎಂದು ಚಳುವಳಿಗಳು ಅಪೇಕ್ಷಿಸುತ್ತವೆ. ಆದರೆ ಹೀಗೆ ಅಪೇಕ್ಷಿಸುವ ಚಳುವಳಿಗಳಿಗೂ ಇತರರ ನೋವಿಗೆ ಮಿಡಿಯುವ ಸಂವೇದನಶೀಲತೆಯ ಅಗತ್ಯವಿದೆಯಲ್ಲವೇ? ಸಾಂಸ್ಕøತಿಕ ಎಚ್ಚರ ಮತ್ತು ವಿವೇಕಗಳು ವ್ಯಕ್ತಿಗೆ, ಸಮಾಜಕ್ಕೆ ಮಾತ್ರವಲ್ಲ, ಸಮಾಜ ಬದಲಿಸಬೇಕೆನ್ನುವ ಚಳುವಳಿಗಳಿಗೂ ತೀಕ್ಷ್ಣತೆಯನ್ನು ಒದಗಿಸುತ್ತವೆ. ಪ್ರಜಾಪ್ರಭುತ್ವೀಯ ವಿಸ್ತರಣೆ ನೀಡುತ್ತವೆ. ಒಮ್ಮೆ ಕೇರಳ ಪ್ರವಾಸದಲ್ಲಿದ್ದಾಗ ಕಲ್ಲಿಕೋಟೆಯ ಹತ್ತಿರ, ಎಳೆಯ ತೆಂಗಿನಗರಿಗಳಿಂದ ಮಾಡಿದ ದೊಡ್ಡದೊಡ್ಡ ಕೋಳಿಯ ಪ್ರತಿಕೃತಿಗಳನ್ನು ಹೊತ್ತುಕೊಂಡು ಕುಣಿವ ಕೋಳಿಯಾಟ್ಟಂ ಮೆರವಣಿಗೆಯನ್ನು ನೋಡುವ ಅವಕಾಶವೊದಗಿತು. ಕೇರಳದ ಜನಪರ ಚಳುವಳಿಗಾರರು ಈ ಆಚರಣೆಗಳಲ್ಲಿ ತಮ್ಮದೇ `ಕೋಳಿ’ಗಳ ಜತೆ ಭಾಗವಹಿಸಿದ್ದರು. ಅವರ ಕೋಳಿಪ್ರತಿಮೆಗಳ ಮೇಲೆ ಎಲ್ಲ ಧರ್ಮಗಳ ಚಿಹ್ನೆಗಳೂ ಇದ್ದವು. ಇದು ಚಳುವಳಿಗಳು ಜನರ ಭಾವನಾತ್ಮಕ ಲೋಕದೊಳಗೆ ವೈಚಾರಿಕತೆ ಬಿಟ್ಟುಕೊಡದೆಯೂ ಸಂಬಂಧ ಇರಿಸಿಕೊಳ್ಳುವ ಸೂಕ್ಷ್ಮವಾದ ಪರಿ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರೈತಚಳುವಳಿಯ ಸಾಂಸ್ಕøತಿಕ ಸಂಬಂಧಗಳು ಕ್ಷೀಣವೆನಿಸುತ್ತವೆ. ಕುಟ್ಟುವ ಬೀಸುವ ಹಂತಿಯ ರಾಶಿಪೂಜೆಯ ಹಾಡುಗಳ ಹಿಂದೆ ರೈತಾಪಿಗಳಿದ್ದಾರೆ. ರೈತರೇ ರಿವಾಯತ್ ಹಾಡುಗಳನ್ನು ಹಾಡುವುದು; ಸಂತರ ಉರುಸು ಇಲ್ಲವೇ ಆರೂಢರ ಜಾತ್ರೆ ಮಾಡುವುದು. ರೈತ ಚಳುವಳಿಗೆ ಈ ಸಾಂಸ್ಕøತಿಕ ಲೋಕದ ಜತೆಗೆ ಯಾವ ಬಗೆಯ ನಂಟಿದೆಯೊ ನಾನರಿಯೆ. ಚಳುವಳಿಗಳ ಕಾರ್ಯಕರ್ತರು ಕರೆ ಬಂದಾಗ ಮುಷ್ಕರ ಮಾಡುವ ಸೈನಿಕರಾಗಿ ಮಾತ್ರ ಇರುವುದು ಯಾಂತ್ರಿಕ ಸಂವೇದನೆ ಅನಿಸುತ್ತದೆ. ಸಿದ್ಧಾಂತಗಳ ಪಕ್ಷಗಳ ಸಂಘಟನೆಗಳ ಜತೆ ಯಾಂತ್ರಿಕ ಮತ್ತು ಗುಲಾಮೀ ಸಂಬಂಧ ಇರಿಸಿಕೊಂಡ ಎಲ್ಲರೂ ಕುಬ್ಜರಾಗುವುದು ಮಾತ್ರವಲ್ಲ, ತಮ್ಮ ಸಿದ್ಧಾಂತ ಸಂಘಟನೆಗಳನ್ನೂ ಕುಬ್ಚಗೊಳಿಸುವರು. ಸಂಸ್ಕøತಿ ಧರ್ಮಗಳ ರಕ್ಷಣೆ ಮಾಡುವುದಕ್ಕೆಂದೇ ತಯಾರಿಸಲಾಗಿರುವ ಮತಾಭಿಮಾನಿಗಳನ್ನು ಗಮನಿಸಿ. ಅವರ ವ್ಯಕ್ತಿತ್ವವನ್ನು ಒಳ್ಳೆಯ ಸಂಗೀತ ಆಸ್ವಾದಿಸುವ, ಅತ್ಯುತ್ತಮ ಸಾಹಿತ್ಯ ಓದುವ, ಸಿನಿಮಾ ನೋಡುವ-ಒಟ್ಟಿನಲ್ಲಿ ವ್ಯಕ್ತಿತ್ವ ವಿಸ್ತರಣೆ ಮಾಡಬಲ್ಲ ಯಾವ ಹವ್ಯಾಸಗಳೂ ಇರದಂತೆ ಬಿರುಸಾಗಿ ರೂಪಿಸಲಾಗಿರುತ್ತದೆ. ನಾಯಕರು ಹೇಳಿದ್ದನ್ನು ಪಾಲಿಸುವಂತೆ ಗುಲಾಮೀಕರಣ ಅಲ್ಲಿರುತ್ತದೆ. ಅವರಲ್ಲಿ ಕೆಲವು ಓದುಗ ಹವ್ಯಾಸವುಳ್ಳವರು ಇರಬಹುದು. ಆದರೆ ಅವರನ್ನು ಪಕ್ಷದ ಸಿದ್ಧಾಂತಕ್ಕೆ ಪೂರಕವಾಗಿರುವ ಲೇಖಕರನ್ನು ಬಿಟ್ಟು ಬೇರೆಯವರು ಬರೆದದ್ದರ ಕಡೆ ಕಣ್ಣುಹಾಯಿಸದಂತೆ ಮಾಡಲಾಗಿರುತ್ತದೆ. ಸಂವೇದನೆಯನ್ನು ಹೀಗೆ ಒಣಗಿಸಿದ ನೆಲದ ಮೇಲೆ ಕ್ರೌರ್ಯ ಅಸಹನೆ ಅಸೂಕ್ಷ್ಮತೆಗಳು ಸುಲಭವಾಗಿ ಹುಟ್ಟುತ್ತವೆ. ಚಳುವಳಿಗಳು ತಮ್ಮನ್ನು ಸಾಂಸ್ಕೃತಿಕ ಅಭಿರುಚಿಗಳಿಂದ ಸಮೃದ್ಧಗೊಳಿಸಿಕೊಳ್ಳದೆ ಹೋದರೆ, ಅವುಗಳ ಆರ್ಥಿಕ ಸಾಮಾಜಿಕ ರಾಜಕೀಯ ಚಿಂತನೆ ಮತ್ತು ಕ್ರಿಯೆಗಳು ಮುಕ್ಕಾಗಬಹುದು; ಏಕಮುಖಿಯಾಗಿ ಬೇಗನೆ ದಣಿಯಬಹುದು. ಅವಕ್ಕೆ ರಾಜಕೀಯ ಸ್ಪಷ್ಟತೆಯಷ್ಟೆ ಮುಖ್ಯವಾಗಿ ಮನಸ್ಸನ್ನು ಆರ್ದ್ರವಾಗಿಡುವ ಸಾಂಸ್ಕೃತಿಕ ಅಭಿರುಚಿಗಳೂ ಇರಬೇಕು. ರೈತರು ಕಾರ್ಮಿಕ ದಲಿತರು ಆಸ್ಥೆ ತೋರುವುದರಿಂದ ಮಧ್ಯಮವರ್ಗದ ಚಟುವಟಿಕೆಗಳಾಗಿ ಮಾರ್ಪಟ್ಟಿರುವ ಸಾಂಸ್ಕೃತಿಕ ಲೋಕಗಳಿಗೂ ಮರುಜೀವ ಬರುತ್ತದೆ. ಇದು ಜೀವಂತಿಕೆಯನ್ನು ಕೊಟ್ಟು ಪಡೆಯುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಎಂಬ ಭೇದಗಳು ಅಂತಿಮವಾಗಿ ಇಲ್ಲವಾಗುತ್ತವೆ; ಶಿಷ್ಟ-ಜಾನಪದಗಳು ಏಕೀಭವಿಸುತ್ತವೆ. ಅಂತಹ ಚಳುವಳಿಯ ಸಂಗ ಮಾಡಿದ ಲೇಖಕರು-ಕಲಾವಿದರು ತಮ್ಮ ಮಂಕುತನ ಕಳೆದುಕೊಂಡು ಹೊಸಹುಟ್ಟನ್ನು ಪಡೆಯಬಲ್ಲರು. ಇದು ಚಿಂತಕರು ಹಾಗೂ ಚಳುವಳಿಗಳು ಪರಸ್ಪರರನ್ನು ಕೊಂದುಕೊಂಡು ಬದುಕಿಕೊಳ್ಳುವ ಸೃಜನಶೀಲ ಉಪಾಯ.’’ ***************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ ಕಬ್ಬಿಗರ ಅಬ್ಬಿ ಕ್ಯಾನುವಾಸು ಮತ್ತು ಕಾವ್ಯ ರಾತ್ರೆ ಆಗಷ್ಟೇ ಲಂಗದಾವಣಿ ತೊಟ್ಟು ಕುಳಿತಿತ್ತು. ಆ ಹೊತ್ತಿಗೆ ಆ ಪುಟ್ಟ ಮನೆಯೊಳಗೆ ಬಡಕಲು ಕ್ಯಾಂಡಲ್ ಮಾತ್ರ ಉರಿಯುತ್ತಿದೆ. ನಸುಗೆನ್ನೆಯ ಹೊಳೆವ ಕಣ್ಣುಗಳ ಬಾಲಕ ಮತ್ತು ಆತನ ಉಬ್ಬುಗೆನ್ನೆಯ ಕನಸುನೇತ್ರದ ತಂಗಿಗೆ ತಿನ್ನಲು ಬರೇ ಎರಡು ಸ್ಲೈಸ್ ಬ್ರೆಡ್ ಮಾತ್ರ ಉಳಿದಿದೆ. ಆ ಮಕ್ಕಳ ಅಮ್ಮ ಬ್ರೆಡ್ ಬಿಸಿ ಮಾಡಿಕೊಡಲು ವಿದ್ಯುತ್ ಪೂರೈಕೆ ಇಲ್ಲದೇ, ಆ ಛಳಿಯಲ್ಲೂ ತಣ್ಣಗಿನ ಬ್ರೆಡ್ ಮಕ್ಕಳಿಗೆ ತಿನ್ನಲು ಕೊಡುತ್ತಾಳೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ಆಗಸದಲ್ಲಿ ರಾತ್ರೆ ಬ್ರಿಟನ್,ಅಮೆರಿಕಾ ಇತ್ಯಾದಿ ರಾಷ್ಟ್ರ ಗಳ ಯುದ್ಧವಿಮಾನಗಳು ಬಾಂಬು ಸುರಿಯುತ್ತಿದ್ದವು. ಸಾಧಾರಣವಾಗಿ ಯುದ್ಧಕಾಲದಲ್ಲಿ ರಾತ್ರಿಯಿಡೀ ಪೇಟೆ ಪಟ್ಟಣಗಳನ್ನು ಬ್ಲಾಕ್ ಔಟ್ ಮಾಡುತ್ತಾರೆ. ಜರ್ಮನಿಯ ವೈರಿಪಡೆಗಳೂ ಅಮವಾಸ್ಯೆಯಂತಹ ಕಗ್ಗತ್ತಲ ರಾತ್ರೆಯನ್ನೇ ವೈಮಾನಿಕ ದಾಳಿಗೆ ಉಪಯೋಗಿಸುತ್ತಾರೆ. ಹಾರಿ ಬರುವ ಯುದ್ಧವಿಮಾನಗಳನ್ನು ಹೊಡೆದುರುಳಿಸಲು ನೆಲಸೇನೆಯ ಗನ್ ಗಳು ಆಗಸಕ್ಕೆ ಮುಖಮಾಡಿ ಬೆಂಕಿಯುಗುಳಲು ಕಾಯುತ್ತವೆ. ಅದೋ ಸ್ಪೋಟದ ಸದ್ದುಗಳು ಕೇಳುತ್ತಿದೆ. ಮಕ್ಕಳು ಹೆದರಿ ಅಮ್ಮನ ಕೋಟಿನ ಬೆಚ್ಚಗಿನ ಅಪ್ಪುಗೆಯಲ್ಲಿ ಥರಗುಟ್ಟುತ್ತಿವೆ. ಜಗ್ಗನೆ ಬೆಳಕು, ಅಮೇಲೆ ಬಾಂಬಿನ ಸ್ಪೋಟದ ಸದ್ದು. ಅವರ ಮನೆಯಿಂದ ತುಸು ದೂರದಲ್ಲಿ ಇರುವ ಮನೆಗಳ ಸಮುಚ್ಛಯದ ಮೇಲೆ ಬಾಂಬು ಬಿದ್ದು ಉರಿಯುವುದು ಕಿಟಿಕಿಯ ಮೂಲಕ ಕಾಣಿಸುತ್ತಿದೆ. ಆ ಸಮುಚ್ಛಯದಲ್ಲಿಯೇ, ಈ ಮಕ್ಕಳ ಗೆಳೆಯ ಗೆಳತಿಯರ ವಾಸ. ಮರಣಾಕ್ರಂದನ ಒಡೆದ ಗಾಜುಗಳ ಕಿಟಿಕಿಯನ್ನ ದಾಟಿ ಈ ಮಕ್ಕಳಿಗೂ ಕೇಳಿಸುತ್ತೆ. ಅವರು ಅಮ್ಮನನ್ನು ಬಿಗಿ ಹಿಡಿದು ಸಣ್ಣಗೆ ಅಳುತ್ತವೆ. ಇಂತಹ ನಾಲ್ಕಾರು ವರ್ಷ, ಜರ್ಮನಿ,ಬ್ರಿಟನ್, ಫ್ರಾನ್ಸ್, ಇಟಲಿ ಇತ್ಯಾದಿ ದೇಶಗಳಲ್ಲಿ ಪರಸ್ಪರ ದಾಳಿ ನಡೆದು, ಅಲ್ಲಿ ಬದುಕುಳಿದ ಮಕ್ಕಳ ಮನೋ ಸ್ಥಿತಿ ಹೇಗಿದ್ದಿರಬಹುದು?. ಎರಡನೇ ಮಹಾಯುದ್ಧದ ನಂತರ ಸುಮಾರು ಮೂರು ದಶಕಗಳಷ್ಟು ಕಾಲ, ಈ ದೇಶಗಳಲ್ಲಿ ರಚಿತವಾದ ಕವಿತೆ, ಕತೆ ಕಾದಂಬರಿಗಳಲ್ಲಿ, ಈ ನೋವು, ಅನೂಹ್ಯ ಭಯ, ಅಸ್ಥಿರತೆ, ಬಡತನ ಎಲ್ಲದರ ಚಿತ್ರಣ ಒಂದಲ್ಲ ಒಂದು ರೀತಿಯಲ್ಲಿ ಧ್ವನಿಯಾಗಿ ಹರಿದಿತ್ತು. ಹಾಗಿದ್ದರೆ ಕಾವ್ಯದ ಮೂಲ ಸೆಲೆ ಸೃಜಿಸುವುದು ಎಲ್ಲಿಂದ?. ಕಾವ್ಯಬ್ರಹ್ಮ ಕುಳಿತ ತಾವರೆಯ ದಂಟಿನ ಬುಡ ಯಾವ ಕೆರೆಯ ಕೆಸರಲ್ಲಿ ಹುದುಗಿದೆ?. ಒಂದು ಬಿಳಿ ಬಣ್ಣದ ಬಟ್ಟೆಯ ಕ್ಯಾನುವಾಸು ಮೇಲೆ ಬಣ್ಣದ ದ್ರಾವಣ ಎರೆಯೋಣ. ಬಟ್ಟೆಯ ಮಧ್ಯದಲ್ಲಿ ಬಿದ್ದ ಬಣ್ಣದ ಬಿಂದು ನಿಧಾನವಾಗಿ ನೂಲೆಳೆಯ ಎಳೆಹಿಡಿದು ವರ್ತುಲ ವರ್ತುಲವಾಗಿ ಹರಡುತ್ತೆ. ಹಾಗೆ ಹರಡಿದ ಬಣ್ಣಹೀರಿದ ಬಟ್ಟೆಯ ಮೇಲೆ ಮತ್ತೊಂದು ಬಣ್ಣದ ನೀರನ್ನು ಎರೆಯೋಣ. ಈಗ ಮೊದಲು ಹರಡಿದ ಬಣ್ಣ ಮತ್ತು ಈ ಬಣ್ಣ ಒಂದಕ್ಕೊಂದು ಕಲೆತು ಹರಡಿ ಚಿತ್ತಾರವಾಗುತ್ತವೆ. ಮತ್ತೆ ಇವುಗಳ ಮೇಲೆ ಇನ್ನೊಂದು ಬಣ್ಣ, ಅದು ಹರಡಿ ಮಿಳಿತವಾದಂತೆ ಮಗುದೊಂದು ಬಣ್ಣದ ದ್ರಾವಣಗಳನ್ನು ಎರೆಯುತ್ತಾ ಹೋದರೆ, ಕ್ಯಾನುವಾಸು ಮೇಲೆ ಸುಂದರವಾದ ವರ್ಣ ಚಿತ್ತಾರ ಮೂಡುತ್ತೆ. ಆ ಬಣ್ಣಗಳು ಒಂದರೊಡನೊಂದು ಕಲೆಯುವ ರೀತಿ, ಕಲೆಯುವ ಅನುಪಾತ, ಇವುಗಳು ಚಿತ್ರಕ್ಕೆ ಹಲವು ಶೇಡ್ ಗಳನ್ನು ಕೊಡುತ್ತವೆ. ಆ ಚಿತ್ರದ ಅಂಚುಗಳು ಬಣ್ಣಗಳೇ ಸ್ವತಂತ್ರವಾಗಿ ವಿಕಸನಕೊಂಡ ವಿಸ್ತಾರದ ಕೊನೆ ಗೆರೆಗಳು. ಈ ವರ್ಣ ವಿಕಸನಕ್ಕೆ ಒಂದು ಕೇಂದ್ರಬಿಂದು ಇರುತ್ತೆ. ಆ ಕೇಂದ್ರದ ಸುತ್ತ ನಿರ್ದಿಷ್ಟ ರೀತಿಯ ಸಿಮ್ಮೆಟ್ರಿ, ಆ ಪ್ಯಾಟರ್ನ್ ಗೆ ಇರುತ್ತೆ. ಬಣ್ಣಗಳ ಕಾಂಟ್ರಾಸ್ಟ್ಗಳನ್ನು, ಮಬ್ಬು ಛಾಯೆಗಳನ್ನು ಚಿತ್ರದ ಪೂರ್ಣತ್ವದಿಂದ ಭಿನ್ನವಾಗಿಸಿ ತುಂಡಾಗಿಸಿ ನೋಡಲಾಗದು. ಒಮ್ಮೆ ಹರಡಿ, ಬೆರೆತ ಬಣ್ಣಗಳನ್ನು ಮೊದಲಿನಂತೆಯೇ ಪುನಃ ಬಿಡಿಸಿ ಹಿಂಪಡೆಯಲೂ ಆಗಲ್ಲ. ಕಲೆಸಿದ ಬಣ್ಣ ಕಲೆತೇ ಇರುತ್ತೆ. ಬಾಲ್ಯದಿಂದಲೂ ಕಾಣುವ ದೃಶ್ಯಗಳು ನಮ್ಮ ಮನಸ್ಸಿನ ಹಾಳೆಯ ಮೇಲೆ ಹೀಗೆಯೇ ಬಣ್ಣದ ದ್ರಾವಣವಾಗಿ ಎರೆಯಲ್ಪಡುತ್ತವೆ. ದಿನ ದಿನವೂ ಹೊಸ ದೃಶ್ಯ, ಹೊಸ ಬಣ್ಣ. ಮನಸ್ಸಿನಲ್ಲಿ ಅದು ಹರಡುತ್ತದೆ, ಪದರ ಪದರವಾಗಿ ಒಂದು ಕೇಂದ್ರದ ಸುತ್ತ. ನಾವು ಕರೆದುಕೊಳ್ಳುವ, ಅನುಭವ, ನೆನಪು ಇವುಗಳೆಲ್ಲ ನಮ್ಮ ಮನಸ್ಸಿನ ಕ್ಯಾನುವಾಸಿನ ಮೇಲೆ ಮೂಡಿದ ವರ್ಣಚಿತ್ರಗಳು. ಪ್ರತೀ ಮನಸ್ಸನ್ನೂ ನೋವು, ಆಘಾತಗಳು, ಕಾಡಿದಷ್ಟು ಬೇರೆ ಭಾವಗಳು ಕಾಡಲ್ಲ. ಮನಸ್ಸಿನ ಚಿತ್ರಪಟಲದಲ್ಲಿ ಅಂತಹ ಘಟನೆಗಳು ತುಂಬಾ ಆಳವಾದ ಅಚ್ಚೊತ್ತು ಆಗುತ್ತೆ. ಅಮೂರ್ತ ವರ್ಣಚಿತ್ರಕಾರ ಹೆಚ್ಚೆಂದರೆ ಒಂದು ವರ್ಣ ಚಿತ್ರ ಬರೆಯಲು ಕೆಲವು ತಿಂಗಳ ಸಮಯ ತಗೋಬಹುದು. ಹಾಗೆ ಆತ, ತನ್ನ ಜೀವನದಲ್ಲಿ ಹತ್ತಾರು ವರ್ಣಚಿತ್ರಗಳನ್ನು ಬರೆಯುತ್ತಾನೆ. ಆದರೆ ಈ ಮನಸ್ಸಿನಲ್ಲಿ ಮೂಡುವ ವರ್ಣ ಚಿತ್ರ ಒಂದೇ. ಅದು ಶುರುವಾಗುವುದು, ಹೆರಿಗೆ ಕೋಣೆಯಲ್ಲಿ, ಅದರ ಚಿತ್ರಣ ಮುಗಿಯುವುದು ಸ್ಮಶಾನದಲ್ಲಿ. ಚೆಲ್ಲಿದ ಬಣ್ಣ ಅಳಿಸಲಾಗದೇ ಚಿತ್ರದ ಹಂದರವೇ ಆಗುತ್ತಾ ಚಿತ್ರ ವಿಕಸಿತವಾಗುತ್ತೆ. ದಿನ ದಿನವೂ ವಿಕಸಿತವಾಗುವ ಈ ಚಿತ್ರದಲ್ಲಿ ಎಷ್ಟೊಂದು ಪದರಗಳು, ಗೆರೆಗಳು,ಅಂಚುಗಳು, ಮೂಲೆಗಳು,ಛಾಯೆಗಳು ವರ್ತುಲಗಳು, ಶೃಂಗಗಳು, ಶೃಂಗಾರಗಳು. ಒಂದು ವಿಸ್ತಾರವಾದ ಖಾಲಿ ಗುಡ್ಡವಿದೆ, ಅಂದುಕೊಳ್ಳೋಣ. ತುಂಬಾ ಮಳೆಸುರಿದು ಗಿಡಗಳು ಮೊಳಕೆಯೊಡೆಯುತ್ತವೆ. ಕೆಲವು ವರ್ಷಗಳ ನಂತರ ಗಿಡಗಳು ಮರಗಳಾಗುತ್ತವೆ. ಮರಗಳ ಸುತ್ತ ಬಳ್ಳಿಗಳು, ಕೆಲವು ಮುಳ್ಳಿನ ಗಿಡ ಪೊದೆಗಳು, ಒಂದಕ್ಕೊಂದು ಅವಲಂಬಿತವಾಗಿ ಒಟ್ಟಾಗಿ, ಅದನ್ನು ನಾವು ಕಾಡು ಎಂದು ಕರೆಯ ತೊಡಗುತ್ತೇವೆ. ಕಾಡೊಳಗೆ ಕ್ರಿಮಿ ಕೀಟಗಳು, ಪ್ರಾಣಿ ಪಕ್ಷಿಗಳು ರಂಗೋಲಿಯ ಚುಕ್ಕಿಗಳಾಗುತ್ತವೆ. ಜೇಡ ಬಲೆ ಹೆಣೆಯುತ್ತೆ. ಹಲವು ವರ್ಷಗಳ ನಂತರ, ಹಳೆಯ ಮರಗಳು ಬೀಳುತ್ತವೆ,ಹೊಸ ಮರ ಬೆಳೆಯುತ್ತದೆ. ಭೂಕಂಪವಾದಾಗ, ಗುಡ್ಡದ ಅಂಚಿನಲ್ಲಿ ಮಣ್ಣು ಜರಿದು ಇಳಿಜಾರಿನ ಹೊಸ ಚಿತ್ರ ಬರೆಯುತ್ತೆ. ಮನಸ್ಸಿನೊಳಗೂ ಹಾಗೆ!. ಚಿತ್ರ ನಿಧಾನವಾಗಿ ವಿಕಸಿತವಾಗುತ್ತೆ. ಅದಕ್ಕೊಂದು ಮೂರು ಆಯಾಮ ಕೊಡುತ್ತೆ. ನಾವು ಯಾವುದೇ ವಸ್ತುವಿನ ಸ್ವರೂಪವನ್ನು ನೋಡುವಾಗ, ಆ ವಸ್ತುವಿನ ಹಿಂದೆ ಯಾವ ಹಿನ್ನೆಲೆಯಿದೆಯೋ ಅದಕ್ಕೆ ಸಾಪೇಕ್ಷವಾಗಿ ಆ ಸ್ವರೂಪ ಕಾಣುತ್ತೆ. ಮನಶ್ಶಾಸ್ತ್ರದಲ್ಲಿ, ಇದಕ್ಕೆ ಫಿಗರ್- ಗ್ರೌಂಡ್ ರಿಲೇಶನ್ ಶಿಪ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಂದು ಕೆಂಪು ಬಣ್ಣದ ಚೆಂಡನ್ನು, ಕೆಂಪು ಬಣ್ಣದ ಪರದೆಯ ಮುಂದಿಟ್ಟರೆ ಗುರುತಿಸಲು ಕಷ್ಟ. ಅದೇ ಚೆಂಡನ್ನು, ಕಪ್ಪು ಬಣ್ಣದ ಅಥವಾ ಬಿಳಿ ಇನ್ನಿತರ ಬಣ್ಣದ ಪರದೆಯ ಮುಂದೆ ಇಟ್ಟರೆ ಸುಲಭವಾಗಿ ಕಾಣಿಸುತ್ತದೆ. ನಿಜ ಜೀವನದಲ್ಲಿ ನಾವು ಯಾವುದೇ ಘಟನೆಯನ್ನು ನೋಡುವಾಗ, ನಮ್ಮ ಅದುವರೆಗಿನ ಬದುಕಿನ ಅನುಭವದ ವರ್ಣ ಚಿತ್ರದ ಹಿನ್ನೆಲೆಯಲ್ಲಿ ಆ ಘಟನೆ ಬಿಂಬ ಪಡೆದು, ಹಿನ್ನೆಲೆಗೆ ಸಾಪೇಕ್ಷವಾಗಿ ನಮಗೆ ಕಾಣಿಸುತ್ತೆ. ಈ ಹೊಸ ಅನುಭೂತಿಯೂ ನಮ್ಮ ಮನಸ್ಸಿನ ಕ್ಯಾನುವಾಸಿನ ಚಿತ್ರದಲ್ಲಿ ಹೊಸ ಚುಕ್ಕಿಯಾಗಿ ಛಾಪೊತ್ತುತ್ತೆ. ಹೀಗೆ ನಮ್ಮ ವರ್ತಮಾನದ ಘಟನೆಗಳ ಗ್ರಹಿಕೆ ನಮ್ಮ ಭೂತಕಾಲದ ಅಷ್ಟೂ ಅನುಭವದ ಮನಃಚಿತ್ರದ ಮೇಲೆ ಅವಲಂಬಿಸಿರುತ್ತದೆ. ಇದರ ಜತೆಗೆ, ನಾವು ನೋಡುವ ಚಿತ್ರದ ಅನುಭೂತಿ, ನೋಟದ ಕೋನದ ಮೇಲೂ ಅವಲಂಬಿತ ತಾನೇ. ಅದನ್ನೇ ನಾವು ದೃಷ್ಟಿಕೋನ ಎನ್ನುತ್ತೇವೆ. ವಿಮಾನದಿಂದ ಕೆಳಗೆ ನೋಡುವಾಗ ನಿಮಗೆ ಕಾಣುವ ಪಟ್ಟಣದ ಚಿತ್ರ, ನೆಲದಲ್ಲಿ ಚಲಿಸುತ್ತಾ ನೋಡುವಾಗಿನ ಚಿತ್ರದಿಂದ ಎಷ್ಟೊಂದು ಭಿನ್ನ ಅಲ್ಲವೇ. ಇಂತಹಾ ಜಿಗಿಹಲಗೆಯ ಮೇಲೆ ನಿಂತು ಮೇಲಕ್ಕೆ ಜಿಗಿದರೆ!. ಹೌದು, ಅದೇ ಕಲ್ಪನೆ, ಕನಸು, ಭಾವೋತ್ಕರ್ಷ,ಚಿಂತನೆ ಮಂಥನೆಗಳು. ಕವಿ ತಾನು ನೋಡಿದ್ದನ್ನು, ಅನುಭವಿಸಿದ್ದನ್ನು ಬಣ್ಣದ ಕಾಗದದಲ್ಲಿ ಚಿತ್ರಿಸಿ, ಗಾಳಿ ಪಟ ಮಾಡಿ ಹಾರಿ ಬಿಡುತ್ತಾನಲ್ಲ!. ಕಾಫಿ ಕಾಯಿಯನ್ನು ಹಾಗೆಯೇ ತಿಂದರೆ ರುಚಿ ಸಿಗುತ್ತದೆಯೇ?. ಅದನ್ನು ಒಣಗಿಸಿ, ಹದವಾಗಿ ಹುರಿದು ಸರಿಮಾತ್ರೆಯಲ್ಲಿ ಚಿಕೋರಿ ಸೇರಿಸಿ, ಸರಿಗಾತ್ರದ ಹುಡಿ ಮಾಡಿ, ಡಿಕಾಕ್ಷನ್ ಪಾತ್ರೆಯ ಉಗಿಯಲ್ಲಿ ಬೇಯಿಸಿ, ತಯಾರಾದ ಸಾಂದ್ರದ್ರವವನ್ನು ಬಿಂದು ಬಿಂದಾಗಿ ತೊಟ್ಟಿಕ್ಕಿಸಿ, ರಾತ್ರಿಯಿಡೀ ಸಂಗ್ರಹಿಸಿ, ಮೊದಲ ಸೂರ್ಯನ ಕಿರಣದ ಬೆಚ್ಚಗಿನ ಸಾನ್ನಿಧ್ಯದಲ್ಲಿ ಕುದಿಸಿದ ಹಾಲು ಸಕ್ಕರೆಗೆ ಬೆರೆಸಿ ಹಬೆಯಾಡುತ್ತಾ ಇರುವ ಕಾಫಿಯನ್ನು ಹೀರಿದರೆ ರುಚಿ!. ಸೃಜನಶೀಲತೆ ತಂದು ಕೊಡುವ ಅನನ್ಯ ಅವಕಾಶವೇ ಹಾಗೆ!. ಹೀಗೆ ಕವಿಕಂಡ ವಸ್ತು, ಕವಿತೆಯಾಗಿ ಬಿಂದುವಿನಿಂದ ಮೂರು ಆಯಾಮದ ಸುಂದರ ಬಿಂಬವಾಗಿ ಹೊರ ಬರಲು, ಕವಿಯ ಅನುಭವ ಮತ್ತು ಸೃಜನಶೀಲತೆ ಎರಡೂ ಶಿಲ್ಪಿಯ ಉಳಿಯಂತೆ ಕೆಲಸ ಮಾಡುತ್ತೆ. ಗೋಪಾಲಕೃಷ್ಣ ಅಡಿಗರ ಈ ಸಾಲುಗಳನ್ನು ನೋಡಿ. ” ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ ಉತ್ಸಾಹಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು” ಮಾಂತ್ರಿಕನ ಮಾಟದ ಚಿತ್ರಣ, ಉಕ್ಕುವ ಕಡಲಿನ ಚಿತ್ರಣ ಬಾಲ್ಯದ ಮನಸ್ಸಲ್ಲಿ ವರ್ಣ ಚಿತ್ರವಾಗಿ, ಈ ಕವಿತೆಯಲ್ಲಿ ಪ್ರತಿಮೆಗಳಾಗಿ ಹೊರಬಂದಿವೆ. ಕಡಲನ್ನು ನೋಡದೇ ಬೆಳೆದ ಮನಸ್ಸಿಗೆ, ಈ ಕ್ಷುಬ್ಧ ಸಾಗರ ಅಂತ ಬರೆಯಲು ಬರಬಹುದೇ?. ” ಇರುಳಿರಳಳಿದು ದಿನದಿನ ಬೆಳಗೆ ಸುತ್ತಮುತ್ತಲೂ ಮೇಲಕೆ ಕೆಳಗೆ ಗಾವುದ ಗಾವುದ ಗಾವುದ ಮುಂದಕೆ ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ? ಕರಿನೆರೆ ಬಣ್ಣದ ಪುಚ್ಚಗಳುಂಟು ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು ಕೆನ್ನನ ಹೊನ್ನನ ಬಣ್ಣಬಣ್ಣಗಳ ರೆಕ್ಕೆಗಳೆರಡೂ ಪಕ್ಕದಲುಂಟು ಹಕ್ಕಿ ಹಾರುತಿದೆ ನೋಡಿದಿರಾ? ನೀಲಮೇಘಮಂಡಲ-ಸಮ ಬಣ್ಣ ! ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ ! ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ ಹಕ್ಕಿ ಹಾರುತಿದೆ ನೋಡಿದಿರಾ? “ ಹಾರುವ ಹಕ್ಕಿಯನ್ನು ತನ್ಮಯತೆಯಿಂದ ನೋಡುತ್ತಾ, ದಿನಗಳು,ರಾತ್ರಿಗಳು, ಕಳೆದಾಗ ಬೇಂದ್ರೆ ಅಜ್ಜನ ಕಲ್ಪನಾ ವಿಲಾಸ ಹಕ್ಕಿ ಹಾರುತಿದೆ ನೋಡಿದಿರಾ ಕವನವಾಗುತ್ತೆ. ಹಕ್ಕಿ ಅಮೂರ್ತ ವರ್ಣಚಿತ್ರ ಬರೆಯುವ ಕುಂಚವಾಗುತ್ತೆ. ಹಕ್ಕಿಗಳನ್ನು ಕಾಣಸಿಗದ ಮರುಭೂಮಿ ಪ್ರದೇಶದಲ್ಲಿ ಬೇಂದ್ರೆ ಜೀವಿಸಿದ್ದರೆ,ಈ ಕವಿತೆ ಬರಲು ಅಸಾಧ್ಯ. ಆ ಸನ್ನಿವೇಶದಲ್ಲಿ ಅವರ ಸೃಜನಶೀಲ ಮನಸ್ಸು, ಮರುಭೂಮಿಯ ಬೇರೇನೋ ಅನುಭವದ ಕವಿತೆ ಚಿಲುಮಿಸುತ್ತಿತ್ತು. ” ನನ್ನವ್ವ ಫಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ; ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ” ಬಾಲ್ಯದಲ್ಲಿ ಅಮ್ಮನನ್ನು ಅತ್ಯಂತ ಸಮೀಪದಿಂದ ಕಂಡು ಪ್ರೀತಿಸಿದ ಬಾಲಕನಿಗೆ, ಸೃಷ್ಟಿಯ ಅಷ್ಟಲ್ಲೂ ಅಮ್ಮನನ್ನೇ ಕಾಣುವ ದೃಷ್ಟಿ ಪ್ರಾಪ್ತವಾಗುವ ವರ್ಣ ಚಿತ್ರದ ಮನಸ್ಸು ಲಂಕೇಶ್ ಅವರದ್ದು. ಅಲ್ಲವಾದರೆ ಇಂತಹ ಕವನ ಸಾಧ್ಯವೇ?. ********************************************* ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ರಾಮಕೃಷ್ಣ ಗುಂದಿ ಆತ್ಮಕತೆ–02 ಗುಂದಿ ಹಿತ್ತಲದಲ್ಲಿ ಕಡ್ಲೆ ಬೇಸಾಯ ಗಂಗಾವಳಿ ನದಿಯ ದಕ್ಷಿಣ ತೀರದಿಂದ ನದಿಯ ಶಾಖೆಯಾಗಿ ಚಿಕ್ಕ ಹಳ್ಳವೊಂದು ಅಗ್ಗರಗೋಣ ಗ್ರಾಮದ ಅಂಚಿನಿಂದ ಹೆಗ್ರೆ ಗ್ರಾಮದವರೆಗೆ ಹರಿದು ಅಗ್ರಗೋಣ ಮತ್ತು ನಾಡುಮಾಸ್ಕೇರಿ ಗ್ರಾಮಗಳ ನಡುವೆ ಗಡಿರೇಖೆಯೊಂದನ್ನು ನಿರ್ಮಿಸಿದೆ. ಹಳ್ಳದ ಇಕ್ಕೆಲದಲ್ಲೂ ವಿಸ್ತಾರವಾದ ಗದ್ದೆಬಯಲು ಹನೇಹಳ್ಳಿಯ ಅಂಚಿನವರೆಗೂ ವ್ಯಾಪಿಸಿದೆ. ಹಳ್ಳದ ಪೂರ್ವ ದಂಡೆಯ ಅಗ್ಗರಗೋಣ ಗ್ರಾಮ ವ್ಯಾಪ್ತಿಯ ಬಯಲಲ್ಲಿ ಒಂದು ಪುಟ್ಟ ದಿನ್ನೆಯಿದೆ. ಹಳ್ಳಕ್ಕೆ ಹತ್ತಿರವಾಗಿ ಎರಡು-ಮೂರು ಗುಂಟೆಯ ಅಳತೆಯಲ್ಲಿ ವಿಸ್ತರಿಸಿಕೊಂಡಿರುವ ಈ ಗುಂದವನ್ನು ಜನರು ವಾಡಿಕೆಯಲ್ಲಿ “ಗುಂದಿಹಿತ್ತಲ” ಎಂದೇ ಗುರುತಿಸುತ್ತಿದ್ದರು. ನನಗೆ ಬುದ್ದಿ ಬಲಿತ ಸಂದರ್ಭದಲ್ಲಿ ನಾನು ಗುಂದಿಹಿತ್ತಲವನ್ನು ನೋಡಿದಾಗ ಎಂಟತ್ತು ತೆಂಗಿನ ಮರಗಳು ಗೊನೆಬಿಟ್ಟು ನಿಂತಿದ್ದವು. ಉಳಿದಂತೆ ಒಂದು ಅಮಟೆ ಮರ, ಎರಡು ಕರವೀರ ಹೂವಿನ ಗಿಡಗಳು, ಬೇಲಿಗುಂಟಿ ಹಾಲುಗಳ್ಳಿಯ ಗಿಡಗಳು ಇದ್ದವು. ತಲೆತಲಾಂತರದಿಂದ ಬಂದ ಮೂರು ಕುಟುಂಬಗಳಲ್ಲಿ ನಾನು ನನ್ನ ವಂಶವಾಹಿನಿಯ ಮೂಲವನ್ನು ಶೋಧಿಸಬೇಕಿತ್ತು… ನಾನು ಮೊದಲ ಬಾರಿಗೆ ನೋಡಿದಾಗ ಗುಂದಿಹಿತ್ತಲಿನಲ್ಲಿ ಸುಕ್ರು , ವತ್ತು, ಬೇಡು ಎಂಬ ಹಿರಿಯ ಸಹೋದರರು ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಎರಡು ಪ್ರತ್ಯೇಕ ಮನೆಗಳಲ್ಲಿ ಅಲ್ಲಿ ನೆಲೆಸಿದ್ದರು. ಈ ಕುಟುಂಬಗಳಿಗೆ ಕಡ್ಲೆಮನೆತನ’ ಎಂಬ ಹೆಸರಿತ್ತು. ಬಹುಶಃ ಇವರ ಕುಟುಂಬದ ಹಿರಿಯರಲ್ಲಿ ಯಾರೋ ಕಡ್ಲೆ ಎಂಬ ಹೆಸರಿನವರಿದ್ದಿರಬೇಕು. ಅವನ ವಂಶಸ್ಥರೆಲ್ಲ ಕಡ್ಲೆಮನೆಮಂದಿ’ ಎಂದೇ ಗುರುತಿಸಿಕೊಂಡಿರಬಹುದು. ಎರಡೂ ಕುಟುಂಬಗಳಲ್ಲಿ ನಾಲ್ಕು ನಾಲ್ಕು ಗಂಡು ಮತ್ತು ಹೆಣ್ಣು ಮಕ್ಕಳಿದ್ದು ತುಂಬಿದ ಮನೆತನವಾಗಿತ್ತು. ಗುಂದಿಹಿತ್ತಲ’ ಪಿತ್ರಾರ್ಜಿತ ಆಸ್ತಿಯೆಂಬುದನ್ನು ಬಿಟ್ಟರೆ ಈ ಕುಟುಂಬಗಳಿಗೆ ಆದಾಯದ ಮೂಲವೇನೂ ಇರಲಿಲ್ಲ. ಎರಡೂ ಕುಟುಂಬಗಳ ಗಂಡಸರು ಹೆಂಗಸರೆಲ್ಲ ಉಪ್ಪಿನಾಗರದಲ್ಲಿ ಉಪ್ಪು ತೆಗೆಯುವುದು, ಕಲ್ಲುಗಣಿಗಳಲ್ಲಿ ಕಲ್ಲು ತೆಗೆಯುವುದು, ನಾಡವರ ಮನೆಗಳಲ್ಲಿ ಕೃಷಿಕೂಲಿ ಇತ್ಯಾದಿ ಕೆಲಸಗಳಿಂದ ಹೊಟ್ಟೆ ಹೊರೆಯುತ್ತಿದ್ದರು. ಕುಚ್ಚಿಗೆ ಅಕ್ಕಿಯ ಗಂಜಿ ಇಲ್ಲವೆ ರಾಗಿ ಅಂಬಲಿ ಅವರ ಮುಖ್ಯ ಆಹಾರವಾಗಿತ್ತು. ಪಕ್ಕದಲ್ಲಿಯೇ ಇದ್ದ ಹಳ್ಳದಲ್ಲಿ ಗಾಳ ಹಾಕಿ ಅಥವಾ ಬಲೆ ಬೀಸಿ ಬಂದರೆ ಬುಟ್ಟಿ ಬುಟ್ಟಿ ತುಂಬ ಶಾಡಿ, ಕರ್ಶಿ, ಮಡ್ಲೆ, ಗರಗಟ್ಲೆ, ಏಡಿ, ಶೆಟ್ಲಿ ಇತ್ಯಾದಿ ಮೀನುಗಳನ್ನು ಹಿಡಿದು ತರುತ್ತಿದ್ದರು. ಮಳೆಗಾಲದಲ್ಲಿ ಗದ್ದೆ ಬಯಲಲ್ಲೂ ಗದ್ದೆ ಬೆಲಗುಗಳಲ್ಲಿ ಕೂಳಿ ಹಾಕಿ ಕೈಂಜಬ್ಬು’ಗಳನ್ನು ಹಿಡಿದು ತರುತ್ತಿದ್ದರು. ಹೀಗಾಗಿ ಮೀನು ಇತ್ಯಾದಿ ಹಣಕೊಟ್ಟು ಖರೀದಿಸುವ ತಾಪತ್ರಯ ಇರಲಿಲ್ಲ. ಶನಿವಾರ ಪನಿವಾರಗಳಲ್ಲಿ ನಾಡವರ ಹಿತ್ತಲಲ್ಲಿ ಅಥವಾ ಬೇರೆಲ್ಲಾದರೂ ಬೆಳೆದ ಕೆಸುವಿನ ಸೊಪ್ಪು, ನುಗ್ಗೆ ಸೊಪ್ಪುಗಳನ್ನು ತಂದು ಪುಡಿ ಹಾಕಿ ಗಂಜಿಯೊಟ್ಟಿಗೆ ಉಣ್ಣುತ್ತಿದ್ದರು. ಮೂರು ಗುಂಟೆಯಷ್ಟಾದರೂ ಸ್ವಂತ ಆಸ್ತಿ ಹೊಂದಿದ ಕಡ್ಲೆಮನೆತನ ಎಂಬ ಬಿಂಕ ಒಂದುಕಡೆಯಾದರೆ ಕುಟುಂಬದ ಸದಸ್ಯರ ಸಂಖ್ಯೆಯ ಹೆಚ್ಚುಗಾರಿಕೆ ಇನ್ನೊಂದುಕಡೆ. ಒಟ್ಟಾರೆಯಾಗಿ ಸುತ್ತಲ ಗ್ರಾಮಗಳ ಇತರ ಆಗೇರರು ಕಡ್ಲೆಮನೆತನದ ಕುರಿತು ಹಗುರವಾಗಿ ಮಾತನಾಡಲು ಅಂಜುತ್ತಿದ್ದರು. ಇದರೊಡನೆ ಈ ಮನೆತನದ ಕುರಿತು ಒಂದಿಷ್ಟು ಭಯವೂ ಸೇರಿಕೊಳ್ಳಲು ಇನ್ನೊಂದು ಪ್ರಬಲ ಕಾರಣವೂ ಇತ್ತು. ಅದು ಕೋಳಿ ಅಂಕ. ಕಡ್ಲೆ ಮನೆತನದ ಸುಕ್ರು ಮತ್ತು ಬೇಡು ಎಂಬ ಇಬ್ಬರೂ ಹಿರಿಯರಿಗೆ ಕೋಳಿ ಅಂಕದ ಹವ್ಯಾಸವಾಗಿತ್ತು. ಅಲ್ಲದೆ ಈ ಇಬ್ಬರೂ ಕೋಳಿಗಳ ಬಣ್ಣ ಮತ್ತು ಆಕಾರಗಳಿಂದಲೇ ಅವುಗಳ ಸಾಮರ್ಥ್ಯವನ್ನು ಅಳೆಯಬಲ್ಲ ಪ್ರತಿಭೆಯುಳ್ಳವರಾಗಿದ್ದರು. ಅವುಗಳಿಗಾಗಿ ಪ್ರತ್ಯೇಕ ಗೂಡುಗಳನ್ನು ಮಾಡದೆ ತಮ್ಮ ಮಲಗುವ ಅಥವಾ ಅಡಿಗೆ ಕೋಣೆಯ ಒಂದು ಮೂಲೆಯಲ್ಲಿಯೆ ಅಂಕದ ಕೋಳಿಗಳನ್ನು ಕಟ್ಟಿ ಸಾಕುತ್ತಿದ್ದರು. ಹದವಾಗಿ ಬೆಳೆದ ಅಂಕದ ಕೋಳಿಗಳಿಗೆ ಹೋರಾಟದ ತರಬೇತಿ ನೀಡುವುದರಲ್ಲಿ ಅವುಗಳ ಕಾಲಿಗೆ ಕತ್ತಿಕಟ್ಟಿ ಬಿಡುವುದರಲ್ಲಿ, ಗಾಯಗೊಂಡ ಕೋಳಿಗಳ ಗಾಯಕ್ಕೆ ಹೊಲಿಗೆ ಹಾಕಿ ಉಪಚರಿಸುವುದರಲ್ಲಿ ಇಬ್ಬರೂ ನಿಪುಣರಾಗಿದ್ದರು. ಹೀಗಾಗಿ ಸುತ್ತಮುತ್ತ ಎಲ್ಲಿಯೇ ಅಂಕಗಳು ನಡೆಯಲಿ ಸುಕ್ರು ಮತ್ತು ಬೇಡು ಸಹೋದರರು ಅನಿವಾರ್ಯವಾಗಿದ್ದರು. ಅನ್ಯರು ತಮ್ಮ ಕೋಳಿಗಳನ್ನು ಅಂಕಕ್ಕೆ ಒಡ್ಡುವಾಗಲೂ ಇವರನ್ನೆ ಅವಲಂಬಿಸುತ್ತಿದ್ದರು. ಈ ಸಹೋದರರಲ್ಲಿ ಯಾರಾದರೊಬ್ಬರು ತಮ್ಮ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಬೆನ್ನು ನೇವರಿಸಿ ಬಿಟ್ಟರೆ ಅವು ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತವೆ ಎಂಬ ನಂಬಿಕೆ ಅವರದ್ದಾಗಿತ್ತು. ಅವರ ಈ ಬಗೆಯ ನಂಬಿಕೆಗೆ ಇನ್ನೂ ಒಂದು ಪ್ರಬಲ ಕಾರಣವೂ ಇತ್ತು. ಅದು ಏನೆಂದರೆ, ಇಬ್ಬರಿಗೂ ಇರುವ ಭೂತ ಬೆಂಬಲ: ಸುಕ್ರು ಮತ್ತು ಬೇಡು ಸಹೋದರರು ಅಂಕದಲ್ಲಿ ಕೋಳಿಗಳನ್ನು ಒಡ್ಡುವ ಮುನ್ನ ಸ್ಮಶಾನದಲ್ಲಿ ಬಂಧಿಯಾಗಿರುವ ತಮ್ಮ ಮನೆತನದ ಹಿರಿಯರ ಪ್ರೇತಾತ್ಮಗಳನ್ನು ಜಾಗೃತಗೊಳಿಸಿ ಬರುತ್ತಿದ್ದರಂತೆ: ಕೋಳಿ ಅಂಕದ ಸೀಸನ್ ಆರಂಭವಾಗುವುದೇ ಗದ್ದೆ ಕೊಯ್ಲಿನ ಬಳಿಕ. ಇಷ್ಟು ಹೊತ್ತಿಗೆ ಅಂಕದ ಕೋಳಿಗಳೂ ಬೆಳೆದು ಯುದ್ಧಕ್ಕೆ ಸಜ್ಜಾದ ಯೊಧರಂತೆ ನಿಗುರಿ ನಿಂತಿರುತ್ತಿದ್ದವು. ಅಂಥ ಸಮಯದಲ್ಲಿ ಸುಕ್ರು ಮತ್ತು ಬೇಡು ಸಹೋದರರು ಅಗ್ರಗೋಣದ ಹೊಲೆವಟ್ರ ಎಂಬ ಗ್ರಾಮ ದೇವತೆಯಲ್ಲಿ ಬಾಗಿಲುಕಟ್ಟಿ’ ಹರಕೆ ಮಾಡಿಕೊಂಡು ಸ್ಮಶಾನದಲ್ಲಿರುವ ತಮ್ಮ ಹಿರಿಯರ ಪ್ರೇತಾತ್ಮಗಳಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಂಕದಲ್ಲಿ ಕೋಳಿ ಗೆದ್ದು ಬಂದರೆ, ಸೋತ ಕೋಳಿಯ ಮಾಂಸವನ್ನು ಬಂಧು ಬಳಗದೊಂದಿಗೆ ಹಂಚಿ ತಿನ್ನುವ ಮುನ್ನ ಭಯ ಭಕ್ತಿಯಿಂದ ಪ್ರೇತಾತ್ಮಗಳಿಗೆ ಮೀಸಲು ನೀಡುತ್ತಿದ್ದರು. ಈ ರಹಸ್ಯವನ್ನು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಹೇಗೋ ತಿಳಿದುಕೊಂಡಿದ್ದರು. ಹೀಗಾಗಿ ಜಾತಿಬಾಂಧವರಾದ ಆಗೇರರು ಮಾತ್ರವಲ್ಲದೆ ಕೋಳಿ ಅಂಕದಲ್ಲಿ ಆಸಕ್ತಿಯಿರುವ ಹಾಲಕ್ಕಿಗಳು, ನಾಮಧಾರಿಗಳು, ನಾಡವರೆಲ್ಲಾ ಕಡ್ಲೆ ಮನೆತನದ ಈ ಸಹೋದರರನ್ನು ಪರಿಣತ “ಜೂಂಜುಕಾರ” ರೆಂದು ವಿಶಿಷ್ಟವಾದ ಗೌರವದಿಂದ ಗುರುತಿಸುತ್ತಿದ್ದರು. ಬೇಡು ಮತ್ತು ಸುಕ್ರು ಇಬ್ಬರಿಗೂ ಕೋಳಿ ಅಂಕದ ಕಾರಣದಿಂದ ಸಿಕ್ಕ ಸಾಮಾಜಿಕ ಗೌರವ ಮತ್ತು ಪಿತ್ರಪ್ರೇತಾತ್ಮದ ಬೆಂಬಲದ ನಂಬಿಕೆ ಯಿಂದಾಗಿ ನಮ್ಮ ಆಗೇರ ಜಾತಿಯಲ್ಲಿ ನಮ್ಮ ಕಡ್ಲೆಮನೆತನಕ್ಕೆ ಒಂದಿಂಚು ಹೆಚ್ಚಿನ ಗೌರವವಿತ್ತು. ಅಗ್ರಗೋಣ, ಹೆಗ್ರೆ, ನಾಡುಮಾಸ್ಕೇರಿ ಮೂರು ಗ್ರಾಮಗಳ ಆಗೇರರೊಡನೆ ಗದ್ದೆ ಬಯಲ ನಡುವಿನ ಗುಂದಿಹಿತ್ತಲದ ಕಡ್ಲೆಮನೆ’ ಕುಟುಂಬದ ಸಂಬಂಧ ಸಹಜವಾಗಿಯೇ ಸೌಹಾರ್ದದಿಂದ ಕೂಡಿತ್ತು. ಜಾತಿ ಕೂಟಗಳು, ಹಬ್ಬ ಹರಿದಿನಗಳು, ಯಕ್ಷಗಾನ ಪ್ರಸಂಗಗಳು (ಬೈಟಕ್) ನಡೆಯುವಾಗ ಮೂರು ಗ್ರಾಮಗಳು ಒಟ್ಟಾಗಿ ಸೇರಿ ಆಚರಿಸಿ ಆನಂದಿಸುತ್ತಿದ್ದವು. ಪರಸ್ಪರ ಕಷ್ಟಸುಖ ಏನೇ ಇದ್ದರೂ ಈ ಮೇಲಿನ ಮೂರೂ ಗ್ರಾಮಗಳ ಆಗೇರರಲ್ಲಿ ಭೇದ ಭಾವವಿಲ್ಲದ ಅನೋನ್ಯತೆ ಸಾಧ್ಯವಾಗಿತ್ತು. ಹಲವಾರು ಬಾರಿ ಗುಂದಿಹಿತ್ತಲಿನ ಕಡ್ಲೆಮನೆ ಸಂಕಷ್ಟಕ್ಕೆ ಸಿಲುಕಿದಾಗ ನೆರೆಯ ಈ ಮೂರು ಗ್ರಾಮದವರೆ ನೆರವಿಗೆ ಬಂದು ನಿಲ್ಲುತ್ತಿದ್ದರು. ಗದ್ದೆ ಬಯಲಿನ ನಟ್ಟನಡುವೆ ಇರುವ ಗುಂದಿಹಿತ್ತಲ ಪ್ರಚಂಡ ಮಳೆಗಾಲದಲ್ಲಿ ಒಂದು ಪುಟ್ಟ ದ್ವೀಪದಂತೆ ಗೋಚರಿಸುತ್ತಿತ್ತು. ಹಳ್ಲದಲ್ಲಿ ನೆರೆ ಬಂದರೆ ಗುಂದಿಹಿತ್ತಲವಿಡೀ ಮುಳುಗಿ ಮರೆಯಾಗಿಬಿಡುವ ಸಂದರ್ಭಗಳೂ ಇರುತ್ತಿದ್ದವು. ಇಂಥ ಸಮಯದಲ್ಲಿ ಅಗ್ಗರಗೋಣ, ಹೆಗ್ರೆ ಅಥವಾ ನಾಡುಮಾಸ್ಕೇರಿಯ ಜಾತಿ ಜನರು ಗುಂದಿಹಿತ್ತಲಿನ ಎರಡೂ ಕುಟುಂಬಗಳನ್ನು ತಮ್ಮಲ್ಲಿಗೆ ಕರೆದೊಯ್ದು ಆಶ್ರಯ ನೀಡುತ್ತಿದ್ದರು. ಹೀಗೆ ನೆರವಾಗುವ ಸಂದರ್ಭದಲ್ಲೂ ಈ ಕುಟುಂಬದ ಘನತೆಗೆ ಕುಂದು ಬಾರದಂತೆ ಗೌರವದಿಂದ ನಡೆಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಜೋಡಿ ಸಹೋದರರಲ್ಲಿ ಕಿರಿಯವನು ಬೇಡು. ಮೂವರು ಗಂಡುಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳ ತಂದೆ. ಮಕ್ಕಳಲ್ಲಿ ಯಾರೂ ಅಕ್ಷರ ಕಲಿಕೆಯಲ್ಲಿ ಆಸಕ್ತಿ ತೋರಿಸಲಿಲ್ಲ. ಮೂಲ ಕಸುಬುಗಳನ್ನು ಆಶ್ರಯಿಸಿ ಮದುವೆ ಮಾಡಿಕೊಂಡು ಬೇರೆ ಬೇರೆ ಊರುಗಳಿಗೆ ಹೋದರು. ಹಿರಿಯವನಾದ ಸುಕ್ರುವಿಗೆ ಇಬ್ಬರು ಹೆಂಡಿರು. ಮೊದಲ ಹೆಂಡತಿ ನಡುವಯಸ್ಸಿನಲ್ಲಿ ತೀರಿಕೊಂಡಳಾದರೂ ಅದಾಗಲೇ ಅವಳಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಎರಡನೆಯ ಹೆಂಡತಿ ಸುಕ್ರುವಿನಿಂದ ಓರ್ವ ಗಂಡುಮಗುವನ್ನು ಪಡೆದಳಾದರೂ ಸಂಸಾರ ನಡೆಸಲಾಗದೇ ಗಂಡ ನಿಂದ ಬೇರೆಯಾಗಿ ತನ್ನ ತವರೂರು ಅಂಕೋಲೆಗೆ ಹೊರಟವಳು ಅಲ್ಲಿಯೇ ನೆಲೆಸಿದ್ದಳು. ಕಡ್ಲೆ ಮನೆತನದ ಸಂಬಂಧದಿಂದ ಹೊರಗೇ ಉಳಿದುಬಿಟ್ಟಳು. ಸುಕ್ರುವಿನ ಹಿರಿಯ ಹೆಂಡತಿಯ ಇಬ್ಬರು ಗಂಡುಮಕ್ಕಳು ಮುರ್ಕುಂಡಿ ಮತ್ತು ಗಣಪು ಹೆಣ್ಣು ಮಕ್ಕಳು ದೇವಿ ಮತ್ತು ನಾಗಮ್ಮ. ಸುಕ್ರುವಿನ ಎರಡನೆಯ ಗಂಡುಮಗ ಗಣಪುವಿನ ಹೊರತಾಗಿ ಉಳಿದ ಮೂವರು ಶಾಲೆ ಕಲಿಯಲು ಆಸಕ್ತಿ ತೋರಿಸಲಿಲ್ಲ. ಆದರೆ ಗಣಪು ಎಂಬ ಹುಡುಗ ಶಾಲೆ ಕಲಿಯಲು ಹಠ ಮಾಡಿದ್ದೇ ಅಪರಾಧವಾಗಿತ್ತು. ಕೂಲಿ ಮಾಡಿದರೆ ತುತ್ತು ಅನ್ನ ಸಿಗುತ್ತದೆ, ಶಾಲೆ ಕಲಿತರೆ ಉಪವಾಸವೇ ಗತಿ ಎಂದು ನಂಬಿದ ಪಾಕಲರ ನಡುವೆ ಅಕ್ಷರದ ಬೆನ್ನು ಹತ್ತಿದ ಗಣಪು ಪಟ್ಟ ಕಷ್ಟ ನಡೆಸಿದ ಹೋರಾಟ ಅಷ್ಟಿಷ್ಟಲ್ಲ! ಅಂದು ಆತ ಆ ಬಗೆಯ ಹೋರಾಟ ನಡೆಸಿ ನಾಲ್ಕು ಕಾಳಿನಷ್ಟಾದರೂ ಅಕ್ಷರಗಳನ್ನು ಆಯ್ದು ತನ್ನ ಜೋಳಿಗೆಯಲ್ಲಿ ತುಂಬಿಕೊಳ್ಳದಿದ್ದರೆ ಇಂದು ನಾನು ಹೀಗಿರುತ್ತಿರಲಿಲ್ಲ. ಏಕೆಂದರೆ ಅಂದು ಅಕ್ಷರ ಪ್ರೀತಿಯಲ್ಲಿ ಅರೆಹೊಟ್ಟೆ ಉಂಡು ಮನೆಯನ್ನೇ ಬಿಟ್ಟು ಹೊರ ನಡೆದ ಛಲಗಾರ ಬೇರೆ ಯಾರೂ ಅಲ್ಲ, ನನ್ನ ತಂದೆ ಗಣಪು ಮಾಸ್ತರ! ಡಾ.ರಾಮಕೃಷ್ಣ ಗುಂದಿಯವರ ಹಳೆಯ ಪೋಟೊಗಳು ********************************************************* ಡಾ.ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ…
ಅಂಕಣ ಬರಹ ರಂಗ ರಂಗೋಲಿ -೨ ‘ಸಿರಿ’ ತುಂಬಿದ ಬಾಲ್ಯ ಒಂದು ಭಾವನಾ ಲೋಕದ ಹೊಸಿಲಿನ ಒಳಗೆ ರಂಗು ರಂಗಾದ ಕಲ್ಪನಾಲೋಕ ಶೃಂಗಾರಗೊಂಡು ಕೂತಿತ್ತು. ಅಲ್ಲಿ ನಿತ್ಯ ನರ್ತನ ವಿಲಾಸ. ನನ್ನಲೊಳಗೆ ” ಸಿರಿ” ಎಂಬ ಪ್ರೀತಿ ಅರಳಿದ ಪ್ರಕ್ರಿಯೆಗೆ ಮೂಲ ಬಿತ್ತನೆಯಿದು. ಹಾಂ..ಸಿರಿ!. ಹೌದು..ಸ್ತ್ರೀ ಕುಲಕ್ಕೆ ಪ್ರತಿಭಟನೆಯ ದಾರಿಯನ್ನು ತೋರಿಸಿಕೊಟ್ಟ, ಪುರುಷ ಪ್ರಧಾನ ಸಮಾಜದ ವಿರುದ್ಧ ಬಂಡಾಯ ಸಾರಿದ ಹಳ್ಳಿಯ ಹೆಣ್ಣಿನ ಆತ್ಮವಿಶ್ವಾಸದ ಪ್ರತೀಕ. ಸ್ತ್ರೀತ್ವವನ್ನು ಅರಿವಿನ ನೆಲೆಯಲ್ಲಿ ಗ್ರಹಿಸಬೇಕಾದ ಒತ್ತಾಯವನ್ನು ತಿಳಿಸಿದ ಇಲ್ಲಿನ ಮಣ್ಣಿನಲ್ಲಿ ಮೂಡಿಬಂದ ಶಕ್ತಿ ಸ್ವರೂಪಿಣಿ. ಮನವು ಮತ್ತೆ ಅಲ್ಲಿಗೆ ಓಡುತ್ತಿದೆ. ಅದು ಹುಚ್ಚು ಅಮಲಿನ ಹೊಳೆ…ಆ ಸಿರಿಯ ಪಾದದ ಬಳಿಗೆ. ಬನ್ನಿ! ,ಹೀಗೆ ಬನ್ನಿ!! ಇದೋ ನೋಡಿ ನನ್ನೂರಿನ ಜಾತ್ರೆ, ಉತ್ಸವ. ನಿಮಗೆ ನಾನು ಸಿರಿಯನ್ನು ತೋರಿಸುವೆ. ನಾನು ಸಿರಿಯನ್ನು ಮೊದಲು ಕಂಡದ್ದೂ ಅಲ್ಲೇ. ಆಗ ನನ್ನದು ಬಾಲ್ಯ ಸಹಜ ಆಟದ ಉತ್ಸಾಹ, ಕುತೂಹಲ, ಅಚ್ಚರಿಗಳು ಬೆರೆತುಕೊಂಡ ವಯಸ್ಸು. ನಮ್ಮೂರಲ್ಲಿ ಚಂದ್ರನ ಹುಣ್ಣಿಮೆ ಸಂಭ್ರಮವೂ ಸಿರಿ ಜಾತ್ರೆಯೂ ಜತೆ ಜತೆಗೆ. ಊರಿನ ದೇವರ ಉತ್ಸವ ಜನಜೀವನ ತುಂಬಾ ಬಣ್ಣವೋ ಬಣ್ಣ. ಆ ಹುಣ್ಣಿಮೆಯ ರಾತ್ರಿ ವರ್ಷದ ಬೇರೆ ಹುಣ್ಣಿಮೆ ಇರುಳಿನಂತಲ್ಲ. ಊರ ಮಣ್ಣಿನ ಕಣಕಣದಲ್ಲಿ ಮೊಳಕೆಗೊಳ್ಳುತ್ತವೆ ಹೆಣ್ಣು ಹೃದಯಗಳು. ಬಲಿಯುತ್ತದೆ ಆತ್ಮಸಮ್ಮಾನದ ಕೂಗು. ಅನಾವರಣಗೊಳ್ಳತ್ತಲೇ ಹೋಗುತ್ತದೆ ಆ ಸುಪ್ತ ಮನಸ್ಸು. ಮನಸ್ಸಿನ ಒಳಪದರದಲ್ಲಿ ಹುಗಿದಿಟ್ಟ ದುಗುಡ ದುಮ್ಮಾನ, ನಿರಾಸೆ, ಹತಾಶೆ, ಆಸೆ, ಈಡೇರದ ಕನಸು, ಆ ಬೆಳದಿಂಗಳ ಸ್ಪರ್ಶಕ್ಕೆ ಬುಳಬುಳ ಎಂದು ಮನಸ್ಸಿನಾಚೆ ಆ ದೇವಾಲಯದ ಎದುರಿನ ಬಯಲು ಗದ್ದೆಗೆ ಹರಿದು ಬಗೆಬಗೆಯ ಆಕಾರ ತಾಳುತ್ತದೆ. ರೋಷ, ಸಿಟ್ಟು,ಆರ್ಭಟ, ಹೂಂಕಾರ, ನಿರ್ವಿಕಾರತೆ ಬಗೆಬಗೆಯಾಗಿ ನವರಸ ಪಾಕ ಹೊಯ್ದಂತೆ. ಹೆಂಗಸರು ಸಿರಿಯಾಗಿ ಅರಳುತ್ತಾರೆ. ಆಗೆಲ್ಲ ಹೆಂಗಸರ ಈ ನಡೆ, ಅದಕ್ಕೆ ಕಾರಣಗಳು ಅರ್ಥ ಆಗುವ, ಅಥವಾ ಆಲೋಚನೆಗಳು ಆ ದಿಕ್ಕಿನತ್ತ ಒಂದಿಷ್ಟೂ ತಿರುಗುವಷ್ಟು ಬುದ್ಧಿ ಬಲಿತಿರಲಿಲ್ಲ. ಹುಣ್ಣಿಮೆಯ ಮುನ್ನ ದಿನವೇ ನಾವು ಮಕ್ಕಳು ಸಂಭ್ರಮವನ್ನು ಮೈ ಮನಸ್ಸಿಗೆ ಹೊಯ್ದುಕೊಂಡಂತೆ ಓಡಾಟ ಆರಂಭಿಸುತ್ತಿದ್ದೆವು. ಹೊಸ ಅಂಗಿ, ಅದರ ಹೊಸತನದ ಪರಿಮಳ ಮೂಸಿ ಮೂಸಿ ನೋಡಿ ಗೆಳತಿಯರ ಮನೆಗೆ ಓಡುವುದು. ಅಲ್ಲಿ ಅವಳ ಫ್ರಾಕ್,ಅದರ ಬಣ್ಣವನ್ನು ಹೀರಿಕೊಂಡ ಮನಸ್ಸು ಮತ್ತೆ ಓಟವನ್ನು ಮುಂದುವರೆಸುತ್ತದೆ. ಕೊನೆಗೆ ನಾಲ್ಕೈದು ಮಂದಿ ಒಂದೆಡೆ ಸೇರಿ ಹೊಸ ಜಂಭದಲ್ಲಿ ದೇವಾಲಯದ ಸಮೀಪ ಹೋಗುವುದು. ದೇವಾಲಯದ ಎದುರಿನ ಗದ್ದೆ, ಆ ರಸ್ತೆಗಳಲ್ಲಿ ಗಸ್ತು ತಿರುಗುವ ಕಾಯಕ. ಜಾತ್ರೆಗೆ ಎರಡು ದಿನ ಇದೆ ಎನ್ನುವಾಗ ರಾಶಿರಾಶಿ ಗೊರಬುಗಳು ಮಾರಾಟಕ್ಕೆ ಬರುತ್ತಿದ್ದವು. ರೈತರು ಮಳೆ ಬಿಸಿಲಲ್ಲಿ ತೋಟ-ಗದ್ದೆಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಇದನ್ನು ತಲೆಗೆ ಧರಿಸಿ ಬೆನ್ನಿಗೆ ಇಳಿಬಿಡುವ ತೆರೆದ ಜನಪದ ಜಾಕೆಟ್ಟು ಇದು. ಉತ್ಸವದ ಸಮಯದಲ್ಲಿ ಲಾರಿ ಲಾರಿಗಳಲ್ಲಿ ಈ ಗೊರಬುಗಳು ಬರುತ್ತಿದ್ದವು. ನಮಗೆ ಈ ಲಾರಿಗಳನ್ನು ಹಾಗೂ ತುಂಬಿಕೊಳ್ಳುವ ಗೊರಬುಗಳ ರಾಶಿ ಇವನ್ನು ಎಣಿಕೆ ಮಾಡುವುದೇ ಅತ್ಯಂತ ಖುಷಿ ಕೊಡುವ ಸಂಗಾತಿಯಾಗಿತ್ತು. ಮತ್ತೆ ಹೊಸ ಲಾರಿ ಬಂದರೆ ಮೊದಲಿನಿಂದ ಲೆಕ್ಕ ಶುರು. ಗೊರಬುಗಳ ಲೆಕ್ಕಾಚಾರದಿಂದ ಮುಂದೆ ಬಂದರೆ ನಮಗೆ ಕಾಣುವುದು ನಿರ್ಮಾಣ ಹಂತದ ಸಂತೆ ಅಂಗಡಿಗಳು, ಜಾತ್ರೆಗೆ ಬಂದ ಸರ್ಕಸ್ ನ ಇನ್ನೂ ಜೋಡಣೆಯಾಗದ ಉಪಕರಣಗಳು, ಬೋನಿನೊಳಗಿನ ಪ್ರಾಣಿಗಳು, ಸೊಂಟ ಕೈ ಕಾಲು ಬಿಡಿ ಬಿಡಿಯಾಗಿ ಬಿದ್ದ ವಿವಿಧ ಬಗೆಯ ಆಟದ ಯಂತ್ರಗಳು, ಮಕ್ಕಳಾಟದ ಸಾಮಾನುಗಳು. ಡೇರೆಯೊಳಗೆ ಕೂತಿರುವ ಬೆಂಚು, ಟೇಬಲ್. ಮರುದಿನ ರಾತ್ರಿ ಆ ಜಾಗ ಮಸಾಲೆ ದೋಸೆ ಪರಿಮಳ ಬರುವ ಹೋಟೇಲ್ ಆಗಿರುತ್ತದೆ. ಗೋಣಿ ಚೀಲದಲ್ಲಿ ಕೂತ ಪ್ಲಾಸ್ಟಿಕ್, ಸ್ಟೀಲ್ ಪಾತ್ರೆಗಳು. ಮುಚ್ಚಿದ ದೊಡ್ಡ ಪ್ಲಾಸ್ಟಿಕ್ ಹೊದಿಕೆಯೊಳಗೆ ಮುಸುಗುಡುವ ಅಪರಿಚಿತ ವಸ್ತುಗಳು. ಅವುಗಳ ಬಗ್ಗೆ ಅತೀವ ಕುತೂಹಲ, ಚರ್ಚೆಯಾಗುತ್ತ ಎಲ್ಲವನ್ನೂ ಕಣ್ಣು,ಬಾಯಿ ಬಿಟ್ಟು ನೋಡುತ್ತಾ, ಕತ್ತಲು ನಮ್ಮ ಸುತ್ತಲೂ ಆವರಿಸುವುದನ್ನು ನೋಡಿ ಮನೆಗೆ ಓಡುತ್ತಿದ್ದೆವು. ಹುಣ್ಣಿಮೆಯ ದಿನ ಎಳೆಯ ಮನಸ್ಸುಗಳಿಗೆ ಸಂಭ್ರಮ, ಕುತೂಹಲ, ಆಸಕ್ತಿ. ದೊಡ್ಡವರಲ್ಲಿ ಮಕ್ಕಳ ಪ್ರಶ್ನೆ! “ಎಷ್ಟು ಹೊತ್ತಿಗೆ ಜಾತ್ರೆ ಶುರು?”. ಉತ್ತರ ಸಿಕ್ಕರೂ ಮತ್ತದೇ ಪ್ರಶ್ನೆ. ಸಂಜೆ ಅವಸರದಲ್ಲಿ ಸಿಕ್ಕಿದ್ದು ಒಂದಷ್ಟು ಮುಕ್ಕಿ ಜಾತ್ರೆಗೆ ಜಾಗವಾದ ಗದ್ದೆಗೆ ಹಾಜಾರಾತಿ ಕೊಡುತ್ತಿದ್ದೆವು. ಆಗಲೇ ವಾದ್ಯಗಳು, ಪಾಡ್ದನದ ನಾದ ಕಿವಿ ತುಂಬುತ್ತಿತ್ತು. ” ನಾರಾಯಣ ಓ ನಾರಾಯಿಣೋ ಓ..ಓ..ಆ..ಆ.. ಇನಿ ಯೆನ್ನ ಪಡಿಸಂಪಗೆ ಓ ಈರ್ ಪತ್ತಲೆ ಬೆರಮ್ಮಣಂದ್ ಪನ್ಪೋಲ್ ಆಲ್ ದಾರು ಆಲ್..ಓ….ಓ…” ಜನ ತುಂಬುತ್ತಿದ್ದರು. ಅದು ಸಿರಿ ಜಾತ್ರೆ. ಎಲ್ಲಿ ನೋಡಿದರೂ ಹೆಂಗಳೆಯರು. ಒತ್ತೊತ್ತಾಗಿ ಕೂತು, ನಿಂತು, ಮುಡಿ ಕೆದರಿ ಏನನ್ನೋ ಮೆಲು ಧ್ವನಿಯಲ್ಲಿ ಮಣಮಣಿಸುತ್ತಿದ್ದರು. ಸಣ್ಣನೆಯ ಆಲಾಪದಂತೆ ಪಾಡ್ದನ ಆರಂಭಗೊಳ್ಳುತ್ತಿತ್ತು. “ಡೆನ್ನ ಡೆನ್ನ ಡೆನ್ನನಾ…ಓ..ಓ..” ಆ ಎಳೆ ಹಿಡಿಯುವುದೇ ಖುಷಿ. “ನಾರಾಯಿಣ ಓ ನಾರಾಯಿಣೋ… ಓ..ಓ…ಓ..ಆ… ಆಹ್ಹ..ಹ್ಃ..ಹ್ಹ..ಓ..ಓ..ಸ್ಹ್ ಉ…” ನಾವು ಜನರ ಗುಂಪಿನಲ್ಲಿ ತೂರಿಕೊಳ್ಳುತ್ತ ಒಬ್ಬಬ್ಬ ಸಿರಿಯ ಬಳಿಗೂ ಹೋಗಿ ನಿಂತಿರುತ್ತಿದ್ದೆವು. ಚಂದ್ರನ ಒಡೆತನ ತುಂಬಿದಂತೆ, ಬೆಳದಿಂಗಳು ಚೆಲ್ಲಿದ ನಶೆಗೆ, ಮನಕಡಲು ಅಲೆಯೆದ್ದು ಹೆಂಗಳೆಯರ ಕೊರಳಿಗೆ ಶಕ್ತಿ ತುಂಬಿಕೊಳ್ಳುತ್ತದೆ. ಉಸಿರಿಗೆ ಹೊಸ ಆಯಾಮ..ಕಣ್ಣು ಸಹಜತೆಯ ಮಿತಿಯಾಚೆಗೆ ಚಾಚಿ ಯಾವುದೋ ಉನ್ಮಾದ, ನಿಂತಲ್ಲಿ ಭಾರವಾಗುವ ಹೆಜ್ಜೆ, ತೇಲುವ ದೇಹ. ಪಿಸು ನುಡಿಯಂತೆ ,ನಿಧಾನವಾಗಿ ನಾಭಿಯಾಳದಿಂದ ಹೊರಬರುವ ಧ್ವನಿ ಕ್ರಮೇಣ ತನ್ನ ಮೃದುತ್ವ ಕಳಕೊಂಡು ಏರುಧ್ವನಿಯಾಗುತ್ತದೆ. ಕಣ್ಣಲ್ಲಿ ಉನ್ಮಾದ , ಶಾಂತ ವಾಗಿರುವ ಸ್ವರ ಅದರಾಚೆಗೆ ನಡೆದು ಯಾವುದೋ ಅನಾಮಿಕ ಭಾವ. ನಾವು ಹೊಟ್ಟೆಯೊಳಗೆ ಭೀತಿ ಅದುಮಿಟ್ಟು ಅದನ್ನೂ ಮೀರಿದ ಕುತೂಹಲದಿಂದ ಇಣುಕುತ್ತಿದ್ದೆವು. “ನಾರಾಯಿಣೊ..ನಾರಾಯಿಣೋ “ ಅವರ ಪ್ರತೀ ಹಾವ ಭಾವ ನನ್ನೊಳಗೆ ಅಚ್ಚಾಗುತ್ತಿತ್ತು. ಕೈಯಲ್ಲಿ ಆಯುಧದಂತೆ ಹಿಡಿದಿರುವ ಹಿಂಗಾರ ಹೂ. ಮುಖದ ಇಕ್ಕಡೆ, ಹಿಂದುಗಡೆ ಕೆದರಿ ಹರಡಿಕೊಂಡ ಮುಡಿ, ಉಸಿರಿನ ಏರಿಳಿತಕ್ಕೆ ಸರಿಯಾಗಿ ಧ್ವನಿಸುವ ಆ ಆಳದ ಸ್ವರ, ಆಗಾಗ ತಲೆಗೂದಲನ್ನೇ ಕಣ್ಣಿಗೆ ಮುಖಕ್ಕೆ ಅಡ್ಡವಾಗಿ ಹಿಡಿದು ಬಿಕ್ಕುವ ಪರಿ, ಹಿಂಗಾರವನ್ನು ಆಗಾಗ ಸಮಾಧಾನದಿಂದ,ಮತ್ತೆ ರೋಷದಿಂದ ಮುಖದ ಮೇಲೆಯೇ ಬಡಿಯುತ್ತ ಕೈಗಳನ್ನು ಅದೇ ರಭಸದಲ್ಲಿ ಹಿಂದೆ ಮುಂದೆ ಆಡಿಸುತ್ತ ಸಣ್ಣನೆ ಹೆಜ್ಹೆ ಹಾಕಿ ಕುಣಿವ, ಆವೇ ಶದಲ್ಲಿ ಹಿಂಗಾರ ಹೂವಿನೊಂದಿಗೆ ಮೇಲಕ್ಕೆ ಹಾರುವ, ನವ ನಶೆಯು ಮೈಯ ಕೋಶ ಕೋಶಗಳಲ್ಲೂ ತುಂಬಿಕೊಂಡು ಎದೆಯನ್ನು ಆಲಾಪದೊಂದಿಗೆ ಪ್ರಾಣದ ಜೊತೆಗೆ ಆಟವಾಡುವಂತೆ ಆಡಿಸುವ ಅವರ ಆ ಪರಿ. ಎದುರುಗಡೆ ದೀನರಾಗಿ ನಿಲ್ಲುವ ಆ ‘ಸಿರಿ’ ರೂಪೀ ಹೆಂಗಳೆಯರ ಮನೆಯವರು. ಅವರ ಕಣ್ಣಿನಾಳದ ಭಯದ ಜೊತೆಜೊತೆಗೆ ತುಂಬಿಕೊಂಡ ಭಕ್ತಿ. ಎಲ್ಲವನ್ನೂ ಬಹಳ ಆಸಕ್ತಿಯಿಂದ ಗಮನಿಸುವ ನನ್ನೊಳಗೂ ಅಂತಹುದೇ ಅದಾವುದೋ ಅಪರಿಚಿತ ಭಾವ ಶಕ್ತಿ ಸಂಚಯಿಸುತ್ತಿತ್ತು. ಎಲ್ಲಿ ಎದುರಿನ ಸಿರಿ ಜೋರಾಗಿ ಒಮ್ಮೆ ಕಿರುಚಿದಳೋ ಡವಗುಡುವ ಎದೆಯನ್ನು ಅಂಗೈಯಲ್ಲಿ ಒತ್ತಿ ಹಿಡಿದು ನಿಂತ, ದಪ್ಪ ದಪ್ಪ ಕಾಲುಗಳ ಸಂದಿಯಲಿ ನೂರಿಕೊಳ್ಳುತ್ತ ಮತ್ತೊಬ್ಬ ‘ಸಿರಿ’ಯ ಕಡೆ ಓಡುತ್ತಿದ್ದೆ. ಅಲ್ಲಿ ಒಬ್ಬೊಬ್ಬ ‘ಸಿರಿ’ಯ ಬಳಿಯೂ ಒಂದು ಕಥೆ ತೆರೆದುಕೊಂಡು ಆ ಮಣ್ಣಿಗೆ ಬಿದ್ದು ಆವಿಯಾಗುತ್ತಿತ್ತು. ಹೆಣ್ಣು ತನ್ನ ಕಥೆಯನ್ನು ಒಳ ಚಿಪ್ಪಿನಿಂದ ಹರಿದು ತೆಗೆದು ತಾನು ಕಳಚಿಕೊಂಡಂತಹ ನಿರಾಳತೆಗೆ ಒಳಗಾಗುತ್ತಿದ್ದಳೇನೋ. ಮತ್ತೆ ನಾಳೆಗಳು ಅದೇ ಕಥೆಗಳ ಮುನ್ನುಡಿ ಬರೆಯಲಾರದೇ?. ಈ ಯೋಚನೆ ಆಗ ಬರುವುದು ಸಾಧ್ಯವೇ ಇರಲಿಲ್ಲ. ಅದು ಮಕ್ಕಳ ಮನಸ್ಸು. ಸ್ವಚ್ಛ ಖಾಲಿ ಕಾಗದ. ಏನು ಕಂಡೆನೋ ಅಷ್ಟೇ ಅಚ್ಚಾಗುತ್ತಿತ್ತು. ಹೊಸದನ್ನು ಕಾಣುವ ಸಂಭ್ರಮಕ್ಕೆ ಇಲ್ಲಿ ಹಸಿವು. ಬಲು ಆಸಕ್ತಿ, ಕುತೂಹಲ, ಅಚ್ಚರಿಯಿಂದ ಆ ಕಥೆಗಳನ್ನು ನನ್ನೊಳಗೆ ಬರಮಾಡಿಕೊಳ್ಳುತ್ತಿದ್ದೆ. ಎಲ್ಲವೂ ಕೆಳವರ್ಗದ, ಬಡವರ, ಹಳ್ಳಿಯಲ್ಲಿ ಗದ್ದೆ, ತೋಟಗಳಲ್ಲಿ ದುಡಿವ ಹೆಣ್ಣುಮಕ್ಕಳ, ಹೆಂಗಸರ ಹರಳುಗಟ್ಟಿದ ನೋವುಗಳು, ‘ಸಿರಿ’ರೂಪದಲ್ಲಿ ಕರಗುತ್ತಿತ್ತು. ಒಳಗಿರುವ ಭಗವಂತ ಅವರಿಗೆ ಮೂರ್ತ,ಅಮೂರ್ತ ಸಾಕ್ಷಿ. ಪ್ರತಿ ಹೆಣ್ಣು ಮನಸ್ಸೂ ಅಂತರಂಗದ ಭಾವ ಹೊರತೆಗೆದು ಆಟವಾಡಿದಂತೆ. ಆಕೆ ತನಗಾಗುತ್ತಿರುವ ಅನ್ಯಾಯಕ್ಕೆ ಹಾವಿನಂತೆ ಭುಸುಗುಡುತ್ತಾಳೆ, ಕಣ್ಣನ್ನು ಉರುಟುರುಟಾಗಿ ರಪರಪನೆ ತಿರುಗಿಸಿ ಎದುರಿನವರ ಬಲವನ್ನೇ ಉಡುಗಿಸುತ್ತಾಳೆ. ಆಕ್ರೋಶದಲ್ಲಿ ಒಮ್ಮೆಲೆ ಕಿಟಾರನೆ ಕಿರುಚುತ್ತಾಳೆ. ಒಳಕೋಪಕ್ಕೆ ಕೈಯಲ್ಲಿ ಹಿಡಿದ ಹಿಂಗಾರ ಪರಪರ ಹೊಡೆದುಕೊಳ್ಳುತ್ತಾಳೆ. ಪ್ರಶ್ನಿಸುತ್ತಾಳೆ. ಸಹಜ ಬದುಕಿನ ಪಾತ್ರಗಳು ಇಲ್ಲಿ ಅದಲು ಬದಲಾದಂತೆ. ಎಲ್ಲ ಬಗೆಯ ಭಾವಾಭಿವ್ಯಕ್ತಿಗೆ ಇಲ್ಲಿ ಮುಕ್ತ ವೇದಿಕೆ. ಮುಂದೆ ಹೋದರೆ ಸುಸ್ತಾಗಿ ಒರಗಿರುವ ‘ಸಿರಿ’ಯರು. ಅಕ್ಷತೆ ಚೆಲ್ಲಿದಂತೆ ಎಲ್ಲೆಡೆ ಬಿದ್ದಿರುವ ಹಿಂಗಾರದ ಹೂಗಳು. ದೇಗುಲದ ಪ್ರಾಂಗಣದೊಳಗೆ ಬರಬೇಕು. ಅಲ್ಲಿ ಸುತ್ತ ಚಾವಡಿಯಲ್ಲಿ ಸಿಂಗಾರಗೊಂಡು ಬಿಳಿ ಝರಿ ಲಂಗ ಮಲ್ಲಿಗೆ ಹೂ ಮುಡಿದು ಅಲಂಕರಿಸಿ ಕೂತ ಹೆಣ್ಣು ಮಕ್ಕಳು. ಗರ್ಭಗುಡಿಗೆ ಒಂದು ಪ್ರದಕ್ಷಿಣೆಗೊಂಡು ಎದುರು ಬಂದರೆ ಸೇವಂತಿಗೆ, ಮಲ್ಲಿಗೆ, ಕೇಪುಳ ರಾಶಿ ರಾಶಿ ಹೂಗಳು, ಕುಂಕುಮ, ಊದುಬತ್ತಿ, ಅರಶಿನ ಗುಪ್ಪೆ ಗುಪ್ಪೆಯಾಗಿ ಕೂತಿರುತ್ತಿದ್ದವು. ಒಳಗಡೆ ಅಲಂಕಾರಗೊಂಡ ಊರ ದೇವರು ವೀರಭದ್ರ. ಉರಿಯುತ್ತಿರುವ ಹಣತೆಗಳು. ಅರೆಬರೆ ನಮಿಸಿ. ಮತ್ತೆ ಹೊರಗೆ ಓಟ. ಅಲ್ಲಿ ಸುತ್ತ ವಿವಿಧ ದೈವದೇವರುಗಳು. ವ್ಯಾಘ್ರಮುಖೀ ಚಾಮುಂಡಿ. ಇಲ್ಲಿ ನೋಡಬೇಕು ಥೇಟು ಹುಲಿಯ ಹಾವಭಾವ ತೋರುವ ಗಂಡು ಸಿರಿ. ಹುಲಿ ಆರ್ಭಟದಲ್ಲಿ ಆವೇಶಗೊಳ್ಳುವ ಗಂಡಸರು. ಅಂದು ಕಾಣುತ್ತಿದ್ದುದೇ ಸಿರಿ ಲೋಕ. ಅದು ಬಾಲಕಿಯ ಮನಸ್ಸಿನ ಪುಟ್ಟ ಕಣ್ಣೊಳಗೆ ಹಲವು ಪಾತ್ರ ರೂಪ,ಸ್ವರ, ಅಚ್ಚಾಗಿ ರಂಗ ‘ಸಿರಿ’ ಪ್ರಪಂಚ ಬೀಡು ಬಿಟ್ಟಿತ್ತು. ************************************************************ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.
ಗಾಯಗೊಂಡ ಹೃದಯದ ಸ್ವಗತ
ಪುಸ್ತಕ ಸಂಗಾತಿ ಗಾಯಗೊಂಡ ಹೃದಯದ ಸ್ವಗತ ಗಾಯಗೊಂಡ ಹೃದಯದ ಸ್ವಗತತೆಲುಗು ಮೂಲ : ಅಯಿನಂಪೂಡಿ ಶ್ರೀಲಕ್ಷ್ಮಿ ಕನ್ನಡಕ್ಕೆ : ರೋಹಿಣಿ ಸತ್ಯಪ್ರ : ಸ್ನೇಹ ಬುಕ್ ಹೌಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೭೦ಪುಟಗಳು : ೬೪ ಇದು ಒಂದು ನೀಳ್ಗವನ. ತನ್ನ ಗೃಹಕೃತ್ಯದ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ನೆರವೇರಿಸುತ್ತಿದ್ದ ಗೃಹಿಣಿಯೊಬ್ಬಳು ಸ್ತನದ ಕ್ಯಾನ್ಸರಿನಿಂದ ಬಳಲಿ ಚಿಕಿತ್ಸೆಯ ಅನೇಕ ಯಾತನಾಪೂರ್ಣ ಹಂತಗಳನ್ನು ದಾಟಿ, ಧೈರ್ಯ ಮತ್ತು ಆತ್ಮವಿಶ್ವಾಸಗಳಿಂದ ಸಾವನ್ನು ಗೆಲ್ಲುವುದು ಈ ಕವಿತೆಯ ವಸ್ತು. ಇದು ಕವಯಿತ್ರಿ ಅಯಿನಂಪೂಡಿ ಶ್ರೀಲಕ್ಷ್ಮಿಯವರ ನಿಜ ಕಥೆಯೂ ಹೌದು. ಕವನದ ಉದ್ದಕ್ಕೂ ನಾವು ನಿರೂಪಕಿಯ ಬದುಕು ಹಾಗೂ ಆಕೆಯ ವ್ಯಕ್ತಿತ್ವದ ವಿವಿಧ ಮುಖಗಳನ್ನು ನೋಡುತ್ತ ಹೋಗುತ್ತೇವೆ. ಒಟ್ಟಿನಲ್ಲಿ ಇದು ಓದುಗನ ಮನಸ್ಸನ್ನು ಶುದ್ಧೀಕರಣಕ್ಕೊಳಗಾಗಿಸುವ ಕೆಥಾರ್ಸಿಸ್ ಪರಿಣಾಮವಿರುವ ಕಾವ್ಯ. ಇದು ಒಂದು ಸ್ವಗತದ ನಿರೂಪಣೆಯಾದರೂ ಸ್ತ್ರೀಯ ಅಗಾಧವಾದ ಜೀವ ಚೈತನ್ಯ ಮತ್ತು ಧಾರಣ ಶಕ್ತಿಗಳಿಗೆ ಬರೆದ ಭಾಷ್ಯವೇ ಆಗಿದೆ ಅನ್ನಬಹುದು. ಕ್ಯಾನ್ಸರ್ ಅನ್ನುವುದು ಎಲ್ಲರೂ ಹೆದರಿ ನಡುಗುವ ಒಂದು ಭಯಾನಕ ಕಾಯಿಲೆ. ಬದುಕಿನ ಬಗೆಗಿನ ಭರವಸೆಗಳನ್ನೆಲ್ಲ ಬುಡಮೇಲು ಮಾಡಿ ವ್ಯಕ್ತಿಯನ್ನು ಭಯ-ತಲ್ಲಣಗಳ ಅಂಚಿಗೆ ದೂಡುವ ಒಂದು ಮಹಾಮಾರಿ. ಆದರೆ ಇಲ್ಲಿನ ಕಥಾನಾಯಕಿ ಸಾಮಾನ್ಯಳಲ್ಲ. ಇಂಥ ಒಂದು ಗದಗುಟ್ಟಿಸುವ ಸನ್ನಿವೇಶ ಎದುರಾದಾಗಲೂ ಅದನ್ನು ಆಕೆ ಲೀಲಾಜಾಲವಾಗಿ ಮುಗುಳ್ನಗೆಯೊಂದಿಗೆ ಅತ್ಯಂತ ಸಹಜವಾಗಿ ನಿಭಾಯಿಸುತ್ತಾಳೆ. ಮನಸ್ಸಿನ ತುಂಬಾ ಕೋಲಾಹಲವೇ ಆದರೂ ಅದನ್ನು ತನ್ನೊಳಗೇ ಪರಿಹರಿಸಿಕೊಳ್ಳುತ್ತ, ಹೊರಗೆ ತೋರಗೊಡದೇ ಇರುವುದರಲ್ಲಿ ಆಕೆ ಯಶಸ್ವಿಯಾಗುತ್ತಾಳೆ. ಯಾಕೆಂದರೆ ಇದೆಲ್ಲವನ್ನೂ ತಾನು ಒಂದು ದಿನ ಗೆದ್ದೇ ಗೆಲ್ಲುತ್ತೇನೆಂಬ ದೃಢವಾದ ನಂಬಿಕೆ ಅವಳಲ್ಲಿದೆ. ಈ ನೀಳ್ಗವನವನ್ನು ಪ್ರೋಲಾಗ್, ಇಂಟ್ರೋ, ಸ್ಟೇಜ್ ೧, ಸ್ಟೇಜ್ ೨, ಸ್ಟೇಜ್ ೩, ಫ್ಲಾಷ್ಬಾಕ್, ಫ್ಲಾಷ್ ಪ್ರೆಸೆಂಟ್, ಇನ್ ದ ಥಿಯೇಟರ್, ಪಿಂಕ್ ಹೋಪ್, ಮರಣಾಮರಣ-ಎಂದು ಒಂದು ಪಾಶ್ಚಾತ್ಯ ಪ್ರಾಚೀನ ನಾಟಕದ ರೂಪದಲ್ಲಿ ವಿಭಾಗಿಸಲಾಗಿದೆ. ಪ್ರಾಯಶಃ ಬದುಕು ಆಕಸ್ಮಿಕ ಸನ್ನಿವೇಶಗಳ ನಾಟಕವೆಂಬ ಕವಯಿತ್ರಿಯ ಧೋರಣೆ ಇದಕ್ಕೆ ಕಾರಣವಾಗಿರಬಹುದು. ಕವಯಿತ್ರಿ ತನ್ನ ನೋವುಗಳನ್ನೂ ಭಾವನಾತ್ಮಕ ಸಂವೇದನೆಗಳನ್ನೂ ತಾತ್ವಿಕ ಚಿಂತನೆಗಳನ್ನೂ ಇಲ್ಲಿ ಸುಂದರವಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅನುವಾದದ ಶೈಲಿಯೂ ಅಷ್ಟೇ ಕಾವ್ಯಾತ್ಮಕವಾಗಿದ್ದು ಸಹಜವಾಗಿ ಓದಿಸಿಕೊಂಡು ಹೋಗುತ್ತದೆ. ಆರಂಭದಲ್ಲಿ ಎಂ.ಎಸ್.ಆಶಾದೇವಿಯವರ ಸೊಗಸಾದ ವಿಮರ್ಶಾತ್ಮಕ ಮುನ್ನುಡಿಯೊಂದಿಗೆ ಕಾವ್ಯವೇ ಒಂದು ಚಿಕಿತ್ಸೆ ಎಂಬ ಅರ್ಥದಲ್ಲಿ ಮಾಮಿಡಿ ಹರಿಕೃಷ್ಣ ಅವರು ಬರೆದ ‘ಪೋಯಟ್ರಿ ಒಂದು ಫೀಲಿಂಗ್, ಒಂದು ಕೆಥಾರ್ಸಿಸ್ ಒಂದು ಥೆರಪಿ’ ಎಂಬ ಲೇಖನ, ಈ ಕಾವ್ಯದ ಹಿನ್ನೆಲೆಯನ್ನು ವಿವರಿಸಿ ಮೂಲ ಲೇಖಕಿ- ಅನುವಾದಕಿಯರ ಮಾತುಗಳಿವೆ. ************************************************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಗಾಯಗೊಂಡ ಹೃದಯದ ಸ್ವಗತ Read Post »









