ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ ಬಸ್ ಸ್ಟ್ಯಾಂಡೆನ್ನುವ ಮಾಯಾಲೋಕ ಚಲನೆ ಎನ್ನುವ ಪದದ ನಿಜವಾದ ಅರ್ಥವೇನೆಂದು ತಿಳಿಯಬೇಕಾದರೆ ಈ ಬಸ್ ಸ್ಟ್ಯಾಂಡಿನಲ್ಲಿ ಅರ್ಧ ಗಂಟೆ ಸುಮ್ಮನೆ ನಿಂತುಬಿಡಬೇಕು; ಅವಸರದಲ್ಲಿ ಅತ್ತಿತ್ತ ಓಡಾಡುತ್ತ ಬೋರ್ಡು ಹುಡುಕುವವರನ್ನು, ಕಂಟ್ರೋಲ್ ರೂಮಿನಿಂದ ಅಶರೀರವಾಣಿಯಂತೆ ಮೊಳಗುವ ಅನೌನ್ಸ್‌ಮೆಂಟಿಗೆ ಬ್ಯಾಗನ್ನೆತ್ತಿಕೊಂಡು ಬಸ್ಸಿನೆಡೆಗೆ ಓಡುವವರನ್ನು, ಒಂದು ನಿಮಿಷವೂ ಆಚೀಚೆಯಾಗದಂತೆ ಅದೆಲ್ಲಿಂದಲೋ ಓಡಿಬಂದು ಹೊರಡುತ್ತಿರುವ ಬಸ್ಸನ್ನು ಹತ್ತಿಕೊಳ್ಳುವವರನ್ನು ಸಹನೆಯಿಂದ ಗಮನಿಸಬೇಕು! ಬಸ್ಸಿನ ಹಾಗೂ ಅದರ ಚಲನೆಯ ಹೊರತಾಗಿ ಬೇರಾವ ವಿಷಯಗಳೂ ಆ ಕ್ಷಣದ ಅಲ್ಲಿನ ಬದುಕುಗಳ ಎಣಿಕೆಗೆ ಸಿಕ್ಕುವುದಿಲ್ಲ. ಭೂಮಿ ಸೂರ್ಯನನ್ನು ಪರಿಭ್ರಮಿಸುವ, ಇನ್ಯಾವುದೋ ಉಪಗ್ರಹವೊಂದು ಭೂಮಿಯನ್ನು ಸುತ್ತುತ್ತಿರುವ ಯಾವುದೇ ನಿರ್ಣಯಾತ್ಮಕ ತತ್ವಗಳಿಗೆ ಒಳಪಡದ ಸರಳವಾದ ಚಲನೆಯ ಸಿದ್ಧಾಂತವೊಂದು ಬಸ್ಸಿನ ಅಸ್ತಿತ್ವದೊಂದಿಗೆ ನಿರ್ಣಯಿಸಲ್ಪಡುತ್ತದೆ. ಬಸ್ಸು ಯಾವ ಸಮಯಕ್ಕೆ ಬಸ್ ಸ್ಟ್ಯಾಂಡನ್ನು ತಲುಪಿತು, ಅದರ ಬೋರ್ಡು ಯಾವಾಗ ಬದಲಾಯಿತು, ಅದರ ನಿರ್ಗಮನಕ್ಕೆ ನಿಗದಿಯಾದ ಅವಧಿಯೇನು ಹೀಗೆ ಸಮಯದ ಸುತ್ತ ಸುತ್ತುವ ಮಾಹಿತಿಗಳೇ ಅತ್ತಿತ್ತ ಸುಳಿದು ಚಲನೆಯ ದಿಕ್ಕುಗಳನ್ನು ನಿರ್ಧರಿಸುತ್ತಿರುತ್ತವೆ. ಅಂತಹ ನಿರ್ಣಾಯಕ ಹಂತದಲ್ಲಿ ಬಸ್ ಸ್ಟ್ಯಾಂಡೊಂದು ಪುಟ್ಟ ಗ್ರಹದಂತೆ ಗೋಚರವಾಗಿ, ತನ್ನ ನಿಯಮಗಳಿಗನುಸಾರವಾಗಿ ಬದುಕುಗಳ ಚಲನೆಯ ಬೋರ್ಡನ್ನು ಬದಲಾಯಿಸುತ್ತಿರುವಂತೆ ಭಾಸವಾಗುತ್ತದೆ.           ನಾನು ಬಸ್ಸಿಗಾಗಿ ಕಾಯುತ್ತ ನಿಂತಿರುತ್ತಿದ್ದ ಕಾಲದಲ್ಲಿ ಈ ಬಸ್ಸಿನ ಬೋರ್ಡುಗಳೆಡೆಗೆ ನನಗೊಂದು ವಿಚಿತ್ರವಾದ ಕುತೂಹಲವಿತ್ತು. ಬೋರ್ಡೇ ಇರದ ಬಸ್ಸೊಂದು ತುಂಬಾ ಸಮಯದಿಂದ ಸ್ಟ್ಯಾಂಡಿನಲ್ಲಿಯೇ ನಿಂತಿದೆಯೆಂದರೆ ಅದು ಡಿಪೋಗೆ ಹೋಗುವ ಬಸ್ಸು ಎಂದು ಅದ್ಹೇಗೋ ತೀರ್ಮಾನವಾಗಿ ಆ ಬಸ್ಸಿನ ನಂಬರನ್ನಾಗಲೀ, ಅದರ ಆಗುಹೋಗುಗಳನ್ನಾಗಲೀ ಯಾರೂ ಗಮನಿಸುತ್ತಲೇ ಇರಲಿಲ್ಲ; ಡ್ರೈವರೊಬ್ಬ ಆ ಬಸ್ಸಿನೆಡೆಗೆ ನಡೆದುಕೊಂಡು ಹೋಗುತ್ತಿದ್ದರೂ ಅಲ್ಲಿರುವ ಯಾರ ಗಮನವೂ ಅದರ ಕಡೆಗೆ ಹರಿಯುತ್ತಿರಲಿಲ್ಲ. ಅದೇ ಬೋರ್ಡು ಹಾಕುವವ ಬಸ್ಸಿನೆಡೆಗೆ ಚಲಿಸಿದಾಗ ಮಾತ್ರ ಅಲ್ಲಿರುವವರೆಲ್ಲರ ದೃಷ್ಟಿಯೂ ಅವನನ್ನೇ ಅನುಸರಿಸುತ್ತ ತೀಕ್ಷ್ಣವಾಗತೊಡಗುತ್ತಿತ್ತು. ಅಷ್ಟು ಹೊತ್ತು ಅಲ್ಲಿಯೇ ನಿಂತಿರುತ್ತಿದ್ದ ಬಸ್ಸಿನ ಅಸ್ತಿತ್ವಕ್ಕೊಂದು ಬೆಲೆಯೇ ಇಲ್ಲದಂತೆ ಭಾಸವಾಗಿ, ನಾಲ್ಕಾರು ಅಕ್ಷರಗಳ ಬೋರ್ಡೊಂದು ನಿಮಿಷಾರ್ಧದಲ್ಲಿ ಅದರ ಇರುವಿಕೆಯ ಸ್ವರೂಪವನ್ನು ಬದಲಾಯಿಸಿಬಿಡುವುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು. ಈ ಬೋರ್ಡುಗಳೆಲ್ಲ ಅದ್ಯಾವ ಫ್ಯಾಕ್ಟರಿಯಲ್ಲಿ ತಯಾರಾಗಬಹುದು, ಅದರ ಮೇಲೆ ಅಕ್ಷರಗಳನ್ನು ಬರೆಯುವವ ಯಾವ ಊರಿನವನಾಗಿರಬಹುದು, ತಾನೇ ಬರೆದ ಬೋರ್ಡನ್ನು ಹೊತ್ತು ಹೊರಡಲು ರೆಡಿಯಾದ ಬಸ್ಸನ್ನೇರುವಾಗ ಅವನ ಮನಸ್ಸಿನ ಭಾವನೆಗಳೇನಿರಬಹುದು ಎನ್ನುವಂತಹ ವಿಚಿತ್ರವಾದ ಆಲೋಚನೆಗಳೂ ಆಗಾಗ ಸುಳಿಯುತ್ತಿದ್ದವು. ಕಂಟ್ರೋಲ್ ರೂಮಿನ ಪಕ್ಕ ಒಂದಕ್ಕೊಂದು ಅಂಟಿಕೊಂಡು ನಿಂತಿರುತ್ತಿದ್ದ ಬೋರ್ಡುಗಳಲ್ಲಿ ತನಗೆ ಬೇಕಾಗಿದ್ದನ್ನು ಮಾತ್ರ ಎತ್ತಿಕೊಂಡು ವಿಚಿತ್ರವಾದ ಗತ್ತಿನಲ್ಲಿ ಓಡಾಡುತ್ತಿದ್ದ ಬೋರ್ಡು ಹಾಕುವವನೇ ಸ್ಟ್ಯಾಂಡಿನಲ್ಲಿ ಕಾಯುತ್ತಿರುವವರೆಲ್ಲರ ಬದುಕಿನ ಚಲನೆಯನ್ನು ನಿರ್ಧರಿಸುತ್ತಿರುವಂತೆ ಭಾಸವಾಗುತ್ತಿತ್ತು.           ಈ ಕಂಟ್ರೋಲ್ ರೂಮ್ ಎನ್ನುವುದೊಂದು ಮಾಯಾಲೋಕದ ಕಲ್ಪನೆಯನ್ನು ಕಣ್ಣೆದುರು ತೆರೆದಿಡುವ ಜಾಗ. ಅಸಾಧಾರಣವಾದ ಲವಲವಿಕೆಯ ಆ ಸ್ಥಳದಲ್ಲಿ ನಡೆಯುವ ಮಾತುಕತೆಗಳು, ಅದ್ಯಾವುದೋ ಗುರುತು-ಪರಿಚಯಗಳಿಲ್ಲದ ಊರಿನಲ್ಲಿ ಸಂಜೆಯ ಹೊತ್ತು ನಡೆದ ಘಟನೆಗಳನ್ನು ತಮ್ಮದಾಗಿಸಿಕೊಂಡ ಜೋಕುಗಳು, ಬಸ್ಸಿನ ಆಗಮನವನ್ನೇ ಕಾಯುತ್ತಿರುವಂತೆ ತೋರುವ ಬಾಯಿಪಾಠದಂತಹ ಅನೌನ್ಸ್‌ಮೆಂಟುಗಳು ಎಲ್ಲವೂ ಸೇರಿಕೊಂಡು ಅಲ್ಲೊಂದು ವಿಶಿಷ್ಟವಾದ ಜೀವಂತಿಕೆಯ ಸಂವಹನವೊಂದು ಪ್ರತಿನಿಮಿಷವೂ ಹುಟ್ಟಿಕೊಳ್ಳುತ್ತಿರುತ್ತದೆ. ರೂಮಿನ ಒಳಹೋಗುತ್ತಿರುವ ಡ್ರೈವರಿನೊಂದಿಗೆ ಹೊರಬರುತ್ತಿರುವ ಕಂಡಕ್ಟರ್ ಒಬ್ಬ ಮುಖಾಮುಖಿಯಾಗಿ, ಬಾಗಿಲಿನಲ್ಲಿ ನಗುವೊಂದರ ವಿನಿಮಯವಾಗಿ, ಯಾರೋ ನಿರ್ಧರಿಸಿದ ಚಲನೆಯೊಂದು ಪರಿಚಯವೇ ಇಲ್ಲದ ಇಬ್ಬರ ನಗುವಿನಲ್ಲಿ ಸಂಧಿಸುತ್ತಿರುವಂತೆ ಅನ್ನಿಸುತ್ತದೆ. ಬೆಂಚಿನ ಮೇಲೆ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದ ಶಾಲೆಗೆ ಹೋಗುವ ಮಗುವೊಂದು ಎದ್ದುಬಂದು, ಕಂಟ್ರೋಲ್ ರೂಮಿನ ಸರಳುಗಳನ್ನು ಹಿಡಿದುಕೊಂಡು ತಲೆ ಮೇಲೆತ್ತಿ ಬಸ್ಸಿನ ನಂಬರನ್ನು ವಿಚಾರಿಸುವಾಗಲೆಲ್ಲ ಕಾರಣವಿಲ್ಲದೆ ಆ ಮಗುವಿನ ಮೇಲೊಂದು ಪ್ರೀತಿ ಹುಟ್ಟಿಕೊಳ್ಳುತ್ತದೆ. ಪಡ್ಡೆ ಹುಡುಗರೆಡೆಗೆ ಒಂದು ಅಸಡ್ಡೆಯನ್ನು ತೋರಿಸುವ ಕಂಟ್ರೋಲ್ ರೂಮಿನ ಯಜಮಾನ ಮಗುವಿನ ಪ್ರಶ್ನೆಗೆ ನಗುನಗುತ್ತ ಉತ್ತರಿಸುವಾಗ, ಸರಳುಗಳ ಒಳಗೆ ಕುಳಿತೇ ಇರುವ ಮಾನವೀಯ ಧ್ವನಿಯೊಂದು ಸರಳುಗಳಾಚೆ ಹರಿದು ಕಾಯುವಿಕೆಯ ಅಸಹನೆಗಳೆಲ್ಲವನ್ನೂ ಕಡಿಮೆ ಮಾಡುತ್ತದೆ. ಬಾಗಿಲನ್ನೇ ಮುಚ್ಚದ ಕಂಟ್ರೋಲ್ ರೂಮಿನ ಗೋಡೆಯ ಮೇಲಿನ ದೊಡ್ಡ ಗಡಿಯಾರವೊಂದು ಬಾಗಿಲಿನಲ್ಲಿ, ಮೈಕಿನಲ್ಲಿ, ಸರಳುಗಳ ಸಂದಿಗಳಲ್ಲಿ ಸಂಧಿಸುವ ಸಂವಹನಗಳ ಸಮಯವನ್ನು ತನ್ನದಾಗಿಸಿಕೊಳ್ಳುತ್ತ ಚಲಿಸುತ್ತಲೇ ಇರುತ್ತದೆ.           ಬಸ್ ಸ್ಟ್ಯಾಂಡೊಂದು ತನ್ನೊಳಗಿನ ಚುರುಕುತನವನ್ನು ಕಂಪೌಂಡಿನಾಚೆಯೂ ವಿಸ್ತರಿಸಿಕೊಳ್ಳುವ ರೀತಿ ಅಚ್ಚರಿ ಹುಟ್ಟಿಸುವಂಥದ್ದು. ನಾಲ್ಕೇ ಅಡಿಗಳ ಜಾಗದಲ್ಲಿ ಅಕ್ಕಪಕ್ಕದವರಿಗೆ ಒಂದು ಹನಿಯೂ ಸಿಡಿಯದಂತೆ ಎಳನೀರು ಕತ್ತರಿಸುವವನ ಪಕ್ಕದ ಮೂರಡಿಯಲ್ಲಿ ಹೂ ಮಾರುವವನ ಬುಟ್ಟಿ, ಹಣ್ಣಿನ ಅಂಗಡಿಯೊಂದಿಗೆ ಅಂಟಿಕೊಂಡಂತೆ ಕಾಣುವ ಜ್ಯೂಸ್ ಪಾರ್ಲರು, ಜೊತೆಗೊಂದು ಬೀಡಾ ಅಂಗಡಿಯ ರೇಡಿಯೋ ಸೌಂಡು, ಸಂಜೆಯಾಗುತ್ತಿದ್ದಂತೆ ಬೇಕರಿಯ ಗಾಜಿನ ಬಾಕ್ಸುಗಳ ಮೇಲೆ ಹಾಜರಾಗುವ ಬೋಂಡಾ-ಬಜ್ಜಿಗಳೆಲ್ಲವೂ ಬಸ್ ಸ್ಟ್ಯಾಂಡಿನ ಲೋಕದೊಂದಿಗೆ ಒಂದಾಗಿಹೋಗಿ ಸೌಂದರ್ಯಪ್ರಜ್ಞೆಯ ಹೊಸದೊಂದು ಪರಿಕಲ್ಪನೆಯನ್ನು ಹುಟ್ಟುಹಾಕುತ್ತವೆ. ಬಸ್ಸಿನ ಓಡಾಟದಿಂದಾಗಿ ನೆಲಬಿಟ್ಟು ಮೇಲೆದ್ದ ಬೇಸಿಗೆಯ ಧೂಳಾಗಲೀ, ಮಳೆಗಾಲದ ರಾಡಿಯಾಗಲೀ, ಬೇಕರಿಯ ಚಹಾದ ಕಪ್ಪನ್ನು ಮುತ್ತಿಕೊಳ್ಳುವ ನೊಣಗಳಾಗಲೀ ಆ ಸೌಂದರ್ಯದ ಭಾವವನ್ನು ಕೊಂಚವೂ ಅಲ್ಲಾಡಿಸುವುದಿಲ್ಲ. ಬೇಕರಿಯೆದುರು ನಿಂತಿರುವ ಕಾಲೇಜು ಹುಡುಗರ ಗ್ಯಾಂಗೊಂದು ಜ್ಯೂಸು ಕುಡಿಯುತ್ತಿರುವ ಹುಡುಗಿಯರೆಡೆಗೆ ಕಳ್ಳದೃಷ್ಟಿ ಬೀರುವ ಅಪ್ರತಿಮ ನೋಟಕ್ಕೆ ಸಾಲುಸಾಲು ಅಂಗಡಿಗಳ ಪಕ್ಕದಲ್ಲಿ ನಿಧಾನವಾಗಿ ಚಲಿಸುವ ಬಸ್ಸು ಸಾಕ್ಷಿಯಾಗುತ್ತದೆ. ಆ ಸಾಲು ಅಂಗಡಿಗಳ ನಡುವೆಯೇ ಅಲ್ಲೊಂದು ಇಲ್ಲೊಂದು ಪ್ರೇಮವೂ ಮೊಳಕೆಯೊಡೆದು ಕಳ್ಳಹೆಜ್ಜೆಗಳನ್ನಿಡುತ್ತ ಬಸ್ ಸ್ಟ್ಯಾಂಡಿನೆಡೆಗೆ ಚಲಿಸುತ್ತದೆ. ಹಾಗೆ ಚಿಗುರಿದ ಒಲವೊಂದು ಅದೇ ಬಸ್ ಸ್ಟ್ಯಾಂಡಿನ ಬೆಂಚುಗಳ ಮೇಲೆ ಬೆಳೆದು, ಬದಲಾದ ಬೋರ್ಡಿನ ಬಸ್ಸನ್ನೇರಿ ತಂಟೆ-ತಕರಾರುಗಳಿಲ್ಲದೆ ಊರು ಸೇರಿ ಬೇರೂರುತ್ತದೆ.           ಈ ಬಸ್ ಸ್ಟ್ಯಾಂಡುಗಳಲ್ಲಿ ಹುಟ್ಟಿಕೊಳ್ಳುವ ಅನುಬಂಧಗಳ ಬಗ್ಗೆ ವಿಚಿತ್ರವಾದ ಆಸಕ್ತಿಯೊಂದು ನನ್ನಲ್ಲಿ ಈಗಲೂ ಉಳಿದುಕೊಂಡಿದೆ. ಸ್ಟ್ಯಾಂಡಿಗೆ ಬಂದ ಪ್ರತಿಯೊಂದು ವಿದ್ಯಾರ್ಥಿಯನ್ನೂ ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಿಸುವುದು ತಮ್ಮ ಗುರುತರವಾದ ಜವಾಬ್ದಾರಿಯೆನ್ನುವಂತೆ ಹಾಜರಾಗುತ್ತಿದ್ದ ಸಿಟಿ ಬಸ್ಸಿನ ಡ್ರೈವರು-ಕಂಡಕ್ಟರುಗಳನ್ನು ಕಂಡಾಗ ಆಗುತ್ತಿದ್ದ ನೆಮ್ಮದಿ-ಸಮಾಧಾನಗಳ ಅನುಭವವನ್ನು ಜಗತ್ತಿನ ಬೇರಾವ ಸಂಗತಿಯೂ ದೊರಕಿಸಿಕೊಟ್ಟ ನೆನಪಿಲ್ಲ. ಬಸ್ಸಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಡಿಪೋಗೆ ಹೋಗಲೆಂದು ನಿಂತಿರುತ್ತಿದ್ದ ಖಾಲಿ ಬಸ್ಸಿನೊಳಗೆ ಕುಳಿತು, ಬೇರೆ ಕಾಲೇಜಿನ ಹುಡುಗಿಯರೊಂದಿಗೆ ಮಾಡುತ್ತಿದ್ದ ಕಾಲಕ್ಷೇಪದ ಮಾತುಕತೆಯ ಭಾಗವಾಗುತ್ತಿದ್ದ ಹುಡುಗರ ಚಹರೆಗಳು ನೆನಪಿನಿಂದ ಮರೆಯಾಗುವುದಿಲ್ಲ. ಆ ಗ್ಯಾಂಗಿನಲ್ಲಿದ್ದ ಹುಡುಗನೊಬ್ಬನ ಮೇಲೆ ಚಿಕ್ಕದೊಂದು ಪ್ರೇಮವೂ ಹುಟ್ಟಿ, ಆತನ ಬಸ್ಸು ಹೊರಟುಹೋಗುವ ಸಮಯದಲ್ಲಿ ಕದ್ದುನೋಡುತ್ತಿದ್ದಾಗ, ಅಚಾನಕ್ಕಾಗಿ ಆತನೂ ತಿರುಗಿನೋಡಿ ಸೃಷ್ಟಿಯಾಗುತ್ತಿದ್ದ ನೈಜವಾದ ರೋಮಾಂಚಕ ದೃಶ್ಯವೊಂದು ಯಾವ ಸಿನೆಮಾದಲ್ಲಿಯೂ ಕಾಣಿಸಿಕೊಂಡಿಲ್ಲ. ಹೊಟೆಲಿನ  ಎಸಿ ರೂಮಿನಲ್ಲಿ ಕುಳಿತು ದೋಸೆ ತಿನ್ನುವಾಗಲೆಲ್ಲ ಬಸ್ ಸ್ಟ್ಯಾಂಡಿನ ಕ್ಯಾಂಟೀನಿನಲ್ಲಿ ಮಸಾಲೆದೋಸೆ ತಿನ್ನುವ ಆಸೆಯೊಂದು ಆಸೆಯಾಗಿಯೇ ಉಳಿದುಹೋದದ್ದು ನೆನಪಾಗಿ, ತಿನ್ನುತ್ತಿರುವ ದೋಸೆಯ ರುಚಿ ಹೆಚ್ಚಿದಂತೆ ಅನ್ನಿಸುವುದೂ ಸುಳ್ಳಲ್ಲ. ಪ್ರತಿದಿನ ಬೆಳಗ್ಗೆ ರಸ್ತೆಯಲ್ಲಿ ತರಕಾರಿ ಮಾರುವವನ ಧ್ವನಿವರ್ಧಕದಲ್ಲಿ ತರಕಾರಿಯ ಹೆಸರುಗಳನ್ನು ಕೇಳುವಾಗಲೆಲ್ಲ, ಕಂಟ್ರೋಲ್ ರೂಮಿನ ಮೈಕಿನಿಂದ ಹೊರಬರುತ್ತಿದ್ದ ಊರಿನ ಹೆಸರುಗಳೆಲ್ಲ ಒಂದೊಂದಾಗಿ ನೆನಪಾಗುತ್ತವೆ. ಆ ಹೆಸರುಗಳನ್ನು ಹೊತ್ತ ಬೋರ್ಡುಗಳೆಲ್ಲ ಡಿಪೋದಿಂದ ಸ್ಟ್ಯಾಂಡಿಗೆ ಬರುವ ಫಸ್ಟ್ ಬಸ್ಸುಗಳಿಗಾಗಿ ಕಾಯುತ್ತಿರಬಹುದು ಎನ್ನುವ ಯೋಚನೆಯೊಂದು ಹಾದುಹೋಗಿ, ಮಾಯಾಲೋಕದಂತಹ ಬಸ್ ಸ್ಟ್ಯಾಂಡಿನ ಸಹಜಸುಂದರ ನೆನಪನ್ನು ನನ್ನದಾಗಿಸಿಕೊಳ್ಳುತ್ತೇನೆ. ************************************************* ಇದು ಈಅಂಕಣದ ಕೊನೆಯ ಕಂತು – ಅಂಜನಾ ಹೆಗಡೆ ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ ರಾತ್ರಿಬಸ್ಸುಗಳೊಂದಿಗೆ ಮಾತುಕತೆ ರಾತ್ರಿಬಸ್ಸಿನಲ್ಲಿ ಎಷ್ಟೆಲ್ಲ ಕನಸುಗಳು ಪಯಣಿಸುತ್ತಿರುತ್ತವೆ; ತಲುಪಬೇಕಾದ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ಹವಾಮಾನಕ್ಕೆ ತಕ್ಕ ಬಟ್ಟೆ ತೊಟ್ಟು ಬೆಳಗೆನ್ನುವ ಬೆರಗಿಗೆ ಕಣ್ಣುಬಿಡಲು ತಯಾರಾಗಿ ಹೊರಟುನಿಂತಿರುತ್ತವೆ! ಬಗಲಲ್ಲೊಂದು ಹಗುರವಾದ ಪರ್ಸು, ಕೈಯಲ್ಲೊಂದು ಭಾರವಾದ ಬ್ಯಾಗು, ಕೂದಲನ್ನು ಮೇಲೆತ್ತಿ ಕಟ್ಟಿದ ರಬ್ಬರ್ ಬ್ಯಾಂಡು ಎಲ್ಲವೂ ಆ ಕನಸುಗಳೊಂದಿಗೆ ಹೆಜ್ಜೆಹಾಕುತ್ತಿರುತ್ತವೆ. ಅವಸರದಲ್ಲಿ ಮನೆಬಿಟ್ಟ ಕನಸುಗಳ ಕಣ್ಣಿನ ಕನ್ನಡಕ, ಕೈಗೊಂದು ವಾಚು, ಬಿಸಿನೀರಿನ ಬಾಟಲಿಗಳೆಲ್ಲವೂ ಆ ಪಯಣದ ಪಾತ್ರಧಾರಿಗಳಂತೆ ಪಾಲ್ಗೊಳ್ಳುತ್ತವೆ. ಅರಿವಿಗೇ ಬಾರದಂತೆ ಬದುಕಿನ ಅದ್ಯಾವುದೋ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಆ ಕನಸುಗಳನ್ನೆಲ್ಲ ಅಪರಿಚಿತ ರಾತ್ರಿಯೊಂದರ ಬೋರ್ಡಿಲ್ಲದ ಬಸ್ಸು ತನ್ನದಾಗಿಸಿಕೊಂಡು ಸಾಗಿಸುತ್ತಿರುತ್ತದೆ. ಒಂದೊಂದೇ ಬೀದಿದೀಪಗಳನ್ನು ದಾಟುತ್ತ ಚಲಿಸುತ್ತಲೇ ಇರುವ ಅವು ಆ ಸ್ಥಾನಪಲ್ಲಟದ ಮಾರ್ಗಮಧ್ಯದಲ್ಲಿ ಹುಟ್ಟು-ಕೊನೆಗಳ ಆಲೋಚನೆಯನ್ನು ಬದಿಗಿಟ್ಟು, ಬಸ್ಸಿನ ಚಲನೆಯನ್ನೇ ತಮ್ಮದಾಗಿಸಿಕೊಂಡು ಸೀಟಿಗೊರಗಿ ಸುಧಾರಿಸಿಕೊಳ್ಳುತ್ತವೆ. ಹಾಗೆ ದಣಿವಾರಿಸಿಕೊಳ್ಳುತ್ತಿರುವ ಕನಸುಗಳನ್ನು ಹೊತ್ತ ಬಸ್ಸು ಹಳೆ ಸಿನೆಮಾವೊಂದರ ರೊಮ್ಯಾಂಟಿಕ್ ಹಾಡಿನ ಟ್ಯೂನಿನಂತೆ ತನ್ನದೇ ಆದ ಗತಿಯಲ್ಲಿ ದಾರಿಯೆಡೆಗೆ ದೃಷ್ಟಿನೆಟ್ಟು ಓಡುತ್ತಿರುತ್ತದೆ. ಈ ರಾತ್ರಿಬಸ್ಸುಗಳೆಡೆಗಿನ ಮೋಹವೂ ಹಳೆಯ ಹಾಡುಗಳೆಡೆಗಿನ ಮೋಹದಂತೆ ತನ್ನಿಂತಾನೇ ಹುಟ್ಟಿಕೊಂಡಿತು. ಚಿಕ್ಕವಳಿದ್ದಾಗ ಜಾತ್ರೆಗೆ ಹೋದಾಗಲೋ ಅಥವಾ ಮಳೆಗಾಲದ ದಿನಗಳಲ್ಲಿ ಸಂಚಾರವ್ಯವಸ್ಥೆಗಳೆಲ್ಲ ಅಸ್ತವ್ಯಸ್ತವಾಗಿ ಬಸ್ಸುಗಳೆಲ್ಲ ಕ್ಯಾನ್ಸಲ್ ಆಗುತ್ತಿದ್ದ ಸಂದರ್ಭಗಳಲ್ಲೋ, ಲಾಸ್ಟ್ ಬಸ್ಸಿಗಾಗಿ ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದ ಸಮಯಗಳಲ್ಲಿ ಹೊರಊರುಗಳಿಗೆ ಸಂಚರಿಸುತ್ತಿದ್ದ ರಾತ್ರಿಬಸ್ಸುಗಳು ಬಂದು ನಿಲ್ಲುತ್ತಿದ್ದವು. ಹಾಗೆ ಬಸ್ಸು ಬಂದು ನಿಲ್ಲುತ್ತಿದ್ದಂತೆಯೇ ಒಂದು ಕೈಯ್ಯಲ್ಲಿ ಟಿಕೆಟ್ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಲಗೇಜು ಎತ್ತಿಕೊಂಡು ಗಡಿಬಿಡಿಯಲ್ಲಿ ಬಸ್ಸಿನೆಡೆಗೆ ಓಡುವವರನ್ನು ಕಂಡಾಗಲೆಲ್ಲ, ಈ ರಾತ್ರಿಯ ಸಮಯದಲ್ಲಿ ಇಷ್ಟೊಂದು ಜನರು ಊರು ಬಿಟ್ಟು ಅದೆಲ್ಲಿಗೆ ಹೋಗುತ್ತಿರಬಹುದು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು. ಪರ್ಸನ್ನು ಭದ್ರವಾಗಿ ಹಿಡಿದುಕೊಂಡು ಸ್ವೆಟರನ್ನು ಸರಿಪಡಿಸಿಕೊಳ್ಳುತ್ತ ಬಸ್ಸಿನಿಂದ ಇಳಿದು ಟಾಯ್ಲೆಟ್ಟಿನ ಬೋರ್ಡನ್ನು ಹುಡುಕುವವರನ್ನು ನೋಡುವಾಗಲೆಲ್ಲ, ಅವರೆಲ್ಲ ಅದ್ಯಾವುದೋ ಬೇರೆಯದೇ ಆದ ಲೋಕದೊಂದಿಗೆ ನನ್ನನ್ನು ಕನೆಕ್ಟ್ ಮಾಡುತ್ತಿರುವಂತೆ ಭಾಸವಾಗುತ್ತಿತ್ತು. ಹಾಗೆ ಒಂದೊಂದಾಗಿ ಸ್ಟ್ಯಾಂಡಿಗೆ ಬರುತ್ತಿದ್ದ ರಾತ್ರಿಬಸ್ಸುಗಳಿಂದಾಗಿ ಬಸ್ ಸ್ಟ್ಯಾಂಡಿನ ಬೇಕರಿಯ ಬ್ರೆಡ್ಡು-ಬಿಸ್ಕಿಟ್ಟುಗಳೂ ಒಂದೊಂದಾಗಿ ಖಾಲಿಯಾಗಿ ಅಂಗಡಿಯವನ ಮುಖದಲ್ಲೊಂದು ಸಮಾಧಾನ ಕಾಣಿಸಿಕೊಳ್ಳುತ್ತಿತ್ತು. ಆ ರೀತಿಯ ಹಗಲಲ್ಲಿ ಕಾಣಸಿಗದ ಒಂದು ವಿಚಿತ್ರವಾದ ಅವಸರದ, ಉಮೇದಿನ, ಸಮಾಧಾನದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದ ರಾತ್ರಿಬಸ್ಸುಗಳು ಒಂದನ್ನೊಂದು ರಿಪ್ಲೇಸ್ ಮಾಡುತ್ತಿರುವ ಸಮಯದಲ್ಲಿ ಲಾಸ್ಟ್ ಬಸ್ಸುಗಳು ಒಂದೊಂದಾಗಿ ಬಸ್ ಸ್ಟ್ಯಾಂಡಿನಿಂದ ಜಾಗ ಖಾಲಿಮಾಡುತ್ತಿದ್ದವು. ಹಾಗೆ ಲಾಸ್ಟ್ ಬಸ್ಸಿನಲ್ಲಿ ಕಿಟಕಿಪಕ್ಕದ ಸೀಟಿನಲ್ಲಿ ಕುಳಿತ ನಾನು ರಾತ್ರಿಬಸ್ಸಿನೊಳಗೆ ಕುಳಿತ ಜನರನ್ನು ಬೆರಗಿನಿಂದ ಇಣುಕಿ ನೋಡುತ್ತ, ಅವುಗಳ ಬಗ್ಗೆಯೇ ಯೋಚಿಸುತ್ತ ಬಸ್ಸಿನ ಸರಳಿಗೊರಗಿ ನಿದ್ರೆ ಮಾಡುತ್ತಿದ್ದೆ. ನಾನೂ ಅಂಥದ್ದೇ ರಾತ್ರಿಬಸ್ಸಿನೊಳಗೆ ಕುಳಿತು ಊರುಬಿಟ್ಟು ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಕ್ಯಾಬ್ ಗಳಿಗೆ ಎದುರಾಗುತ್ತಿದ್ದ ರಾತ್ರಿಬಸ್ಸುಗಳ ಬೋರ್ಡಿನೆಡೆಗೆ ದೃಷ್ಟಿ ಹಾಯಿಸುತ್ತಿದ್ದೆ; ಬೋರ್ಡುಗಳೇ ಇರದ ಬಸ್ಸುಗಳ ಡ್ರೈವರುಗಳೆಡೆಗೆ ಇಣುಕಿ ನೋಡುವ ಒಂದು ವಿಚಿತ್ರವಾದ ಚಟವೂ ಅಂಟಿಕೊಂಡಿತ್ತು. ಅವರ ಕಣ್ಣುಗಳಲ್ಲಿರುತ್ತಿದ್ದ ತೀಕ್ಷ್ಣತೆ-ಜಾಗರೂಕತೆಗಳೆಲ್ಲ ಕಂಪ್ಯೂಟರಿನೆದುರಿಗೆ ಕುಳಿತು ಮಂಜಾಗಿರುತ್ತಿದ್ದ ನನ್ನ ಕಣ್ಣುಗಳಲ್ಲೊಂದು ಹೊಸ ಚುರುಕನ್ನು ತುಂಬಿದಂತೆನ್ನಿಸಿ ಖುಷಿಯಾಗಿ, ಆ ಡ್ರೈವರುಗಳ ಮತ್ತು ನನ್ನ ಬದುಕಿನ ನಡುವಿನಲ್ಲೊಂದು ವಿಚಿತ್ರವಾದ ಹೋಲಿಕೆಯಿರುವಂತೆ ಭಾಸವಾಗುತ್ತಿತ್ತು. ಆ ಸಾಮ್ಯತೆಯೇ ಎಲ್ಲ ಬದುಕುಗಳ ನಿಜಸ್ಥಿತಿಯನ್ನು ಕಣ್ಣೆದುರು ತೆರೆದಿಟ್ಟಂತೆನ್ನಿಸಿ, ಹುಟ್ಟು-ಕೊನೆಗಳನ್ನು ಮರೆತು ಬಸ್ಸಿನಲ್ಲಿ ಚಲಿಸುತ್ತಿರುವ ಕನಸುಗಳು ಒಂದಿಲ್ಲೊಂದು ನಿಲುಗಡೆಯಲ್ಲಿ ಇನ್ನೊಂದು ಬಸ್ಸಿನ ಕನಸುಗಳೊಂದಿಗೆ ಸಂಧಿಸಿ ಎಲ್ಲರ ಬದುಕುಗಳನ್ನು ನಿರ್ಧರಿಸುತ್ತಿರುವಂತೆ ತೋರುತ್ತಿತ್ತು. ರಾತ್ರಿಬಸ್ಸಿನ ಮುಚ್ಚಿದ ಕಿಟಕಿಗಳ ಕರ್ಟನ್ನಿನ ಹಿಂದಿರುವ ಕನಸುಗಳೆಲ್ಲ ಬೆಳಗಾಗುವುದನ್ನೇ ಕಾಯುತ್ತಿರಬಹುದು, ಆ ಕಾಯುವಿಕೆಯ ಪ್ರಕ್ರಿಯೆಯೊಂದಿಗೇ ಅವುಗಳ ಸತ್ಯತೆಯೂ ಕೆಲಸ ಮಾಡುತ್ತಿರಬಹುದು ಎನ್ನುವಂತಹ ಯೋಚನೆಗಳೆಲ್ಲ ಪ್ರತಿದಿನವೂ ಬಸ್ಸಿನೊಂದಿಗೆ ಎದುರಾಗುತ್ತಿದ್ದವು. ಇಷ್ಟೆಲ್ಲ ಯೋಚನೆಗಳ ನಡುವೆಯೂ ಕೊನೆಯ ರಾತ್ರಿಬಸ್ಸು ಯಾವ ಸಮಯಕ್ಕೆ ಬಸ್ ಸ್ಟ್ಯಾಂಡನ್ನು ಬಿಡಬಹುದು, ಬಸ್ ಸ್ಟ್ಯಾಂಡಿನಲ್ಲಿರುವ ಬಿಸ್ಕಿಟಿನ ಅಂಗಡಿಯ ಬಾಗಿಲು ಯಾವಾಗ ಮುಚ್ಚಬಹುದು, ಬ್ಯಾಗಿನ ತುಂಬ ಕನಸುಗಳನ್ನು ತುಂಬಿಕೊಂಡು ರಾತ್ರಿಬಸ್ಸು ಹತ್ತಿರುವವರ ಕನಸುಗಳೆಲ್ಲ ಯಾವ ತಿರುವಿನಲ್ಲಿ ಚಲಿಸುತ್ತಿರಬಹುದು ಎನ್ನುವ ಪ್ರಶ್ನೆಗಳೆಲ್ಲ ಪ್ರಶ್ನೆಗಳಾಗಿಯೇ ಉಳಿದಿವೆ. ಈ ರಾತ್ರಿಬಸ್ಸಿಗಾಗಿ ಕಾಯುವವರೆಲ್ಲ ಸೇರಿ ಅಲ್ಲೊಂದು ಹಗಲುಗಳಿಂದ ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿ ಮಾಡಿರುತ್ತಾರೆ. ಸ್ಕರ್ಟು ತೊಟ್ಟು ಅದಕ್ಕೆ ತಕ್ಕ ಹೈ ಹೀಲ್ಸ್ ಧರಿಸಿ ಎಸಿ ರೂಮಿನಲ್ಲಿ ನಿರಂತರವಾಗಿ ಕ್ಲೈಂಟ್ ಮೀಟಿಂಗಿನಲ್ಲಿರುವ ಹುಡುಗಿಯೊಬ್ಬಳು ಸಾಧಾರಣವಾದ ಚಪ್ಪಲಿ ಕಾಟನ್ ಬಟ್ಟೆಯನ್ನು ಧರಿಸಿ ಮೆಟ್ಟಿಲುಗಳ ಮೇಲೆ ಕುಳಿತು, ಎಣ್ಣೆಹಾಕಿ ತಲೆಬಾಚಿ ಕನಕಾಂಬರ ಮುಡಿದ ಅಪರಿಚಿತ ಹೆಂಗಸಿನೊಂದಿಗೆ ತರಕಾರಿ ರೇಟಿನ ಬಗ್ಗೆ ಮಾತನಾಡುತ್ತಿರುತ್ತಾಳೆ; ಕೆಲಸದ ಒತ್ತಡದಲ್ಲಿ ತಮ್ಮವರೊಂದಿಗೆ ಮಾತನಾಡಲು ಸಮಯವೇ ಸಿಗದ ಹುಡುಗನೊಬ್ಬ ಬಸ್ಸು ತಡವಾಗಿ ಬರುತ್ತಿರುವುದಕ್ಕೆ ಕಾರಣವನ್ನೋ, ಆಫೀಸಿನ ಪ್ರಮೋಷನ್ ವಿಷಯವನ್ನೋ, ಸ್ನೇಹಿತನ ಮದುವೆಯ ಸಂಗತಿಯನ್ನೋ ಅಕ್ಕ-ತಂಗಿಯರೊಂದಿಗೆ ಹರಟುತ್ತ ಆಚೀಚೆ ಓಡಾಡುತ್ತಿರುತ್ತಾನೆ; ಹೆಂಡತಿಯನ್ನು ಬಸ್ ಹತ್ತಿಸಲು ಬಂದವನ ಕಾರಿನಲ್ಲಿ ಹಳೆಯ ಗಝಲ್ ಗಳು ಒಂದೊಂದಾಗಿ ಪ್ಲೇ ಆಗುತ್ತ ಹೊಸದೊಂದು ಸಂವಹನವನ್ನು ಹುಟ್ಟುಹಾಕುತ್ತವೆ; ಡಿಸ್ಕೌಂಟಿನಲ್ಲಿ ಖರೀದಿಸಿದ ರೇಷ್ಮೆ ಸೀರೆ, ಹೊಸ ಸಿನೆಮಾವೊಂದರ ನಾಯಕನ ಹೇರ್ ಸ್ಟೈಲ್, ಕ್ರಿಕೆಟ್ಟಿನ ಬೆಟ್ಟಿಂಗ್ ನಲ್ಲಿ ಕಳೆದುಕೊಂಡ ಹಣ, ಟ್ರೆಕ್ಕಿಂಗ್ ನಲ್ಲಿ ಸಿಕ್ಕಿದ ಹೊಸ ಗೆಳೆಯರು, ಅತ್ತೆ-ಸೊಸೆಯರ ಮನಸ್ತಾಪಗಳೆಲ್ಲವೂ ಮಾತಾಗಿ ಹೊರಬಂದು ಬಸ್ ಸ್ಟಾಪಿನ ಪ್ಲಾಟ್ ಫಾರ್ಮ್ ಮೇಲೆ ಒಂದರೊಳಗೊಂದು ಸೇರಿಹೋಗುತ್ತವೆ. ಹಾಗೆ ಸಂಧಿಸಿದ ಮಾತುಕತೆಗಳೆಲ್ಲವೂ ಆ ಕ್ಷಣದ ಬದುಕನ್ನು ತಮ್ಮದಾಗಿಸಿಕೊಂಡು ಬಸ್ಸನ್ನೇರಲು ರೆಡಿಯಾಗುತ್ತವೆ. ರಾತ್ರಿಬಸ್ಸಿನೊಳಗಿನ ಮಾತುಕತೆಗಳದ್ದೂ ಒಂದು ವಿಶಿಷ್ಟವಾದ ಪ್ರಪಂಚ. ಸ್ನೇಹವೊಂದು ಅದೆಷ್ಟು ಸುಲಭವಾಗಿ ಹುಟ್ಟಿಕೊಳ್ಳಬಹುದೆನ್ನುವ ಪ್ರಾಕ್ಟಿಕಲ್ ಎನ್ನಬಹುದಾದಂತಹ ಕಲ್ಪನೆ ಈ ಬಸ್ಸುಗಳೊಳಗೆ ಸಿದ್ಧಿಸುತ್ತದೆ. ಅಂಥದ್ದೊಂದು ಸ್ನೇಹ ಹುಟ್ಟಿಕೊಳ್ಳಲು ಒಂದೇ ರೀತಿಯ ಆಸಕ್ತಿಯಾಗಲೀ, ಹವ್ಯಾಸಗಳಾಗಲೀ, ಮನೋಭಾವಗಳಾಗಲೀ ಅಗತ್ಯವಿಲ್ಲ; ವಯಸ್ಸಿನ ಇತಿಮಿತಿಗಳಂತೂ ಮೊದಲೇ ಇಲ್ಲ! ಪಕ್ಕದಲ್ಲಿ ಕುಳಿತವರೆಲ್ಲ ಸಲೀಸಾಗಿ ಸ್ನೇಹಿತರಾಗಿ, ಕಷ್ಟ-ಸುಖಗಳ ವಿನಿಮಯವೂ ಆಗಿ, ಮಧ್ಯರಾತ್ರಿಯಲ್ಲಿ ಅದ್ಯಾವುದೋ ಊರಿನಲ್ಲಿ ಬಸ್ಸು ನಿಂತಾಗ ಒಟ್ಟಿಗೇ ಕೆಳಗಿಳಿದು ಜೊತೆಯಾಗಿ ಟೀ ಕುಡಿದು, ಬೆಳಗ್ಗೆ ಬಸ್ಸಿಳಿದ ನಂತರ ಸಂಪರ್ಕವೇ ಇಲ್ಲದಿದ್ದರೂ, ರಾತ್ರಿಬಸ್ಸಿನಲ್ಲಿ ಜೊತೆಯಾಗಿ ಪ್ರಯಾಣ ಮಾಡಿದವರ ಚಹರೆ-ಸಂಭಾಷಣೆಗಳೆಲ್ಲವೂ ಮನಸ್ಸಿನಲ್ಲಿ ಉಳಿದುಹೋಗಿರುತ್ತವೆ. ಆ ವ್ಯಕ್ತಿಯನ್ನು ಮತ್ತೆಂದೂ ಭೇಟಿಯಾಗದಿದ್ದರೂ ಅಲ್ಪಕಾಲದ ಆ ಸ್ನೇಹದ ತುಣುಕೊಂದು ನೆನಪಾಗಿ ಉಳಿದು, ಯಾವುದೋ ಸಂದರ್ಭದ ಯಾವುದೋ ಸಂಗತಿಗಳೊಂದಿಗೆ ತನ್ನನ್ನು ತಾನು ಜೋಡಿಸಿಕೊಂಡು ಸದಾಕಾಲ ಜೊತೆಗಿರುತ್ತದೆ. ಅಂತಹ ಚಿಕ್ಕಪುಟ್ಟ ಸ್ನೇಹಗಳೇ ಒಂದಾಗಿ ಮಾನವೀಯ ನೆಲೆಯಲ್ಲಿ ಅಂತರಂಗದೊಂದಿಗೆ ಮಾತುಕತೆ ನಡೆಸುತ್ತ ಚಾಕಲೇಟ್ ಬಾಕ್ಸಿನೊಳಗಿನ ಬೊಂಬೆಗಳಂತೆ ಬದುಕಿನ ಸವಿಯನ್ನು ಹೆಚ್ಚಿಸುತ್ತಿರುತ್ತವೆ. ಈ ರಾತ್ರಿಬಸ್ಸುಗಳನ್ನು ಏರುವಾಗಲೆಲ್ಲ ನನ್ನನ್ನೊಂದು ವಿಚಿತ್ರವಾದ ಭಯವೂ ಆವರಿಸಿಕೊಳ್ಳುತ್ತಿತ್ತು. ಚಿಕ್ಕವಳಿದ್ದಾಗ ವಿಧಿ-ಹಣೆಬರಹಗಳ ಕಥೆಗಳನ್ನೆಲ್ಲ ಕೇಳುತ್ತ ಬೆಳೆದಿದ್ದ ನನಗೆ ಈ ಬೋರ್ಡುಗಳಿಲ್ಲದ ಬಸ್ಸುಗಳನ್ನು ಏರುವಾಗಲೆಲ್ಲ, ಹಣೆಬರಹವನ್ನೇ ಬರೆದಿರದ ಬದುಕಿನೊಂದಿಗೆ ಓಡುತ್ತಿರುವ ಅನುಭವವಾಗಿ ವಿಚಿತ್ರವಾದ ತಳಮಳವಾಗುತ್ತಿತ್ತು. ಐದನೇ ಕ್ಲಾಸಿನಲ್ಲಿ ಕಲಿತ ಇಂಗ್ಲಿಷ್ ಅಕ್ಷರಮಾಲೆಯನ್ನು ಮತ್ತೊಮ್ಮೆ ಮನನ ಮಾಡಿಕೊಂಡು, ಬೋರ್ಡಿನ ಬದಲಾಗಿ ಗ್ಲಾಸಿನ ಮೇಲೆ ಬರೆದಿರುತ್ತಿದ್ದ ಅಕ್ಷರವನ್ನು ಮತ್ತೆಮತ್ತೆ ಓದಿಕೊಂಡು, ವಿಧಿಯ ಮೇಲೆ ಭಾರ ಹಾಕುತ್ತಿರುವ ಭಾವದಲ್ಲಿ ಬಸ್ಸಿನೊಳಗೆ ಲಗೇಜು ಇಳಿಸುತ್ತಿದ್ದೆ. ಲಗೇಜಿನಲ್ಲಿರುವ ಟೆಡ್ಡಿಬೇರ್-ಚಾಕಲೇಟುಗಳೆಲ್ಲ ಸುಸೂತ್ರವಾಗಿ ಮಕ್ಕಳ ಕೈಯನ್ನು ತಲುಪುವಂತಾಗಲಿ ಎಂದು ಪ್ರಾರ್ಥಿಸುತ್ತ ಡ್ರೈವರಿನ ಮುಖವನ್ನೊಮ್ಮೆ ನೋಡುತ್ತಿದ್ದೆ. ಎರಡು ತಿಂಗಳಿಗೊಮ್ಮೆಯಾದರೂ ರಾತ್ರಿಬಸ್ಸಿನೊಂದಿಗೆ ಒಡನಾಟವಿಟ್ಟುಕೊಂಡಿದ್ದ ನನಗೆ ಎಷ್ಟೋ ಸಲ ಮುಖಪರಿಚಯವಿರುವ ಡ್ರೈವರಿನ ದರ್ಶನವಾಗಿ, ವರುಷಗಳಿಂದ ಬದಲಾಗದೇ ಪೀಠದಲ್ಲಿ ಕುಳಿತಿರುವ ದೇವರನ್ನು ನೋಡಿದ ಸಮಾಧಾನವಾಗುತ್ತಿತ್ತು. ಆ ನೆಮ್ಮದಿಯ ಭಾವದಲ್ಲಿಯೇ ಸೀಟಿನ ನಂಬರನ್ನು ಹುಡುಕಿ ಕಾಲುಚಾಚಿದ ತಕ್ಷಣ, ಅದೇ ಲಾಸ್ಟ್ ಬಸ್ಸಿನ ಕಿಟಕಿಪಕ್ಕದ ಸೀಟು ತಪ್ಪದೇ ನೆನಪಾಗುತ್ತಿತ್ತು. ರಾತ್ರಿಬಸ್ಸೊಂದು ಕನಸಿನಂತೆ ಮನಸ್ಸನ್ನಾವರಿಸಿಕೊಂಡು, ನಿಧಾನವಾಗಿ ನೆನಪುಗಳೊಂದಿಗೆ ಒಡನಾಡುತ್ತಿರುವ ಸಮಯದಲ್ಲಿಯೂ ಅವುಗಳೆಡೆಗಿನ ಮೋಹ ಮಾತ್ರ ಟಿವಿ ಸ್ಟ್ಯಾಂಡಿನಲ್ಲಿರುವ ಹಳೆಯ ಹಾಡುಗಳ ಸಿಡಿಗಳಂತೆ ಹಳತಾಗದೇ ಉಳಿದುಕೊಂಡಿದೆ. ಮಾತುಕತೆಗಳೆಲ್ಲ ಮೊಬೈಲಿಗೆ ಸೀಮಿತವಾಗಿಹೋಗುತ್ತಿರುವ ಕಾಲದಲ್ಲಿಯೂ ರಾತ್ರಿಬಸ್ಸುಗಳಲ್ಲಿ ಸುಂದರವಾದ ಸಂಬಂಧವೊಂದು ಹುಟ್ಟಿಕೊಂಡು ಕಾಂಟ್ಯಾಕ್ಟ್ ನಂಬರುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರಬಹುದು; ನಿಲುಗಡೆಯ ಚಹಾದ ಅಂಗಡಿಯಲ್ಲೊಬ್ಬ ಬಿಸ್ಕಿಟ್ ಪ್ಯಾಕೆಟ್ಟುಗಳಲ್ಲಿ ಸ್ನೇಹವನ್ನು ಹಂಚುತ್ತಿರಬಹುದು; ಲಗೇಜಿನೊಳಗಿನ ಮಾರ್ಕ್ಸ್ ಕಾರ್ಡು, ಲಗ್ನಪತ್ರಿಕೆ, ನೆಲ್ಲಿಕಾಯಿ, ತುಳಸಿಬೀಜಗಳೆಲ್ಲವೂ ನಿಶ್ಚಿಂತೆಯಿಂದ ಕನಸುಕಾಣುತ್ತಿರಬಹುದು. *************************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಪಾಲಿಸೋ ಹೂವ ನಾನು ಚಿಕ್ಕವಳಿದ್ದಾಗ ಊರಿನ ಆಂಜನೇಯ ದೇವಸ್ಥಾನದ ದೇವರ ಪಲ್ಲಕ್ಕಿ ವರುಷಕ್ಕೊಮ್ಮೆ ನಮ್ಮ ಮನೆಗೆ ಬರುತ್ತಿತ್ತು. ಮನೆಯ ಹಿರಿಯರೆಲ್ಲರೂ ಭಯ-ಭಕ್ತಿಗಳಿಂದ ದೇವರನ್ನು ಸ್ವಾಗತಿಸಲು ಸಿದ್ಧರಾದರೆ, ನನ್ನ ಮನಸ್ಸಿನಲ್ಲೊಂದು ವಿಚಿತ್ರವಾದ ಸಡಗರ ತುಂಬಿಕೊಳ್ಳುತ್ತಿತ್ತು. ಕಲ್ಲು-ಮುಳ್ಳು ಬಿಸಿಲು ಯಾವುದನ್ನೂ ಲೆಕ್ಕಿಸದೆ ಮಡಿಬಟ್ಟೆಯಲ್ಲಿ ಪಲ್ಲಕ್ಕಿ ಹೊರುತ್ತಿದ್ದ ಗಂಡಸರು, ಅವರ ಕಾಲುಗಳನ್ನು ತಣ್ಣೀರಿನಿಂದ ತೊಳೆದು ಹಳೆಹಾಡುಗಳನ್ನು ಹಾಡುತ್ತ ಪಲ್ಲಕ್ಕಿಯನ್ನು ಸ್ವಾಗತಿಸುತ್ತಿದ್ದ ಹೆಂಗಸರು, ದೇವರು-ಶಾಸ್ತ್ರ ಯಾವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಯಿಲ್ಲದೆ ದೇವರ ಆಗಮನವನ್ನು ನೆಂಟರು ಬಂದಂತೆ ಸಂಭ್ರಮಿಸುತ್ತಿದ್ದ ಮಕ್ಕಳು ಹೀಗೆ ಬಿಡಿಬಿಡಿಯಾದ ಪ್ರಪಂಚಗಳನ್ನು ಜೋಡಿಸುವ ಕೆಲಸವನ್ನು ಪಲ್ಲಕ್ಕಿ ಮಾಡುತ್ತಿತ್ತು. ಅದು ನಮ್ಮನೆಯಲ್ಲಿದ್ದಷ್ಟೂ ದಿನ ಸೊಸೈಟಿಯ ಸಾಲವಾಗಲೀ, ವಯಸ್ಸಾದವರ ಸೊಂಟದ ನೋವಾಗಲೀ, ನ್ಯೂಸ್ ಪೇಪರಿನ ರಾಜಕೀಯವಾಗಲೀ ಮನೆಯ ಯಾವ ಚರ್ಚೆಯಲ್ಲೂ ಭಾಗವಹಿಸುತ್ತಿರಲಿಲ್ಲ. ಮನೆಯವರೆಲ್ಲರ ಗಮನ ಪಲ್ಲಕ್ಕಿಯ ಮೇಲೆ ಕೇಂದ್ರೀಕೃತವಾಗಿ, ಮನೆಯಲ್ಲೊಂದು ವಿಶಿಷ್ಟವಾದ ಸಂತೋಷ-ಸಮಾಧಾನಗಳ ವಾತಾವರಣ ಸೃಷ್ಟಿಯಾಗುತ್ತಿತ್ತು. ಅಂತಹ ಯಾವುದೋ ಒಂದು ಸಂದರ್ಭದಲ್ಲಿಯೇ ಈ ದೇವರು ಎನ್ನುವುದೊಂದು ಸಮಾಧಾನ ತರುವ ಸಂಗತಿಯೆನ್ನುವ ನಂಬಿಕೆ ನನ್ನಲ್ಲಿ ಹುಟ್ಟಿಕೊಂಡಿದ್ದಿರಬೇಕು!           ಈ ಸಮಾಧಾನ-ನೆಮ್ಮದಿಗಳ ವ್ಯಾಖ್ಯಾನ ಒಮ್ಮೆ ಆಧ್ಯಾತ್ಮದ ವಿವರಣೆಗೆ, ಇನ್ನೊಮ್ಮೆ ಸಂಬಂಧಗಳ ಕ್ಲಿಷ್ಟಕರವಾದ ನಿರೂಪಣೆಗೆ, ಒಮ್ಮೊಮ್ಮೆ ಮನೋವಿಜ್ಞಾನದ ಸಮಾಲೋಚನೆಗಳಿಗೂ ಸಿಲುಕಿ ಸಂಕೀರ್ಣವಾಗಿಹೋಗುವುದುಂಟು. ಸರಳವಾಗಿ ಯೋಚಿಸಿದರೆ ಸಮಾಧಾನವೆನ್ನುವುದು ಮೂಲಂಗಿ ಸೊಪ್ಪಿನ ಪಲ್ಯವಿದ್ದಂತೆ. ಮೂಲಂಗಿಯ ವಾಸನೆಗೆ ಮೂಗುಮುರಿಯುವವರಿಗೆ ಮೂಲಂಗಿಯೊಂದಿಗೆ ಮೂಲಂಗಿಯ ಸೊಪ್ಪನ್ನೂ ಸೇರಿಸಿ ಪಲ್ಯ ಮಾಡಿ ಬಡಿಸಿದರೆ, ವಾಸನೆಯನ್ನು ಮರೆತು ತಕರಾರಿಲ್ಲದೆ ಊಟ ಮಾಡಿ ಕೈ ತೊಳೆಯುತ್ತಾರೆ. ಮೂಲಂಗಿಯೆಡೆಗಿನ ನಿರಾಕರಣೆಯನ್ನು ಅದರದೇ ಭಾಗವಾದ ಎಲೆಗಳು ನಿರಾಯಾಸವಾಗಿ ದೂರ ಮಾಡುತ್ತವೆ. ಆ ಒಗ್ಗಿಕೊಳ್ಳುವಿಕೆಯ ಭಾಗವಾಗಿ ಸಮಾಧಾನದ ಹರಿವು ತನ್ನದೇ ಆದ ಜಾಗವನ್ನು ಗುರುತಿಸಿಕೊಳ್ಳುತ್ತ ಹೋಗುತ್ತದೆ. ಆ ಜಾಗದ ಮಧ್ಯದಲ್ಲಿಯೇ ಎಲ್ಲಿಯೋ ಒಂದು ಕಡೆ ದೇವರು ಎನ್ನುವ ಪರಿಕಲ್ಪನೆ ತನ್ನ ಅಸ್ತಿತ್ವವನ್ನು ಜೋಡಿಸಿಕೊಂಡು ಜೀವಜಗತ್ತಿನ ಪ್ರವಹಿಸುವಿಕೆಯ ಮೂಲವಾಗಿ ಹೊರಹೊಮ್ಮುತ್ತದೆ. ಹಾಗೆ ಒಡಮೂಡಿದ ಒರತೆಯೇ ಅಂಗಾಲುಗಳನ್ನು ಸೋಕಿ, ಹೊಸತನದ ಸಾಕ್ಷಾತ್ಕಾರದೊಂದಿಗೆ ಜೀವಜಲವಾಗಿ ಪ್ರವಹಿಸುತ್ತದೆ.           ಹೊಸತನದ ಅನುಭೂತಿಯೂ ದೇವರೊಂದಿಗೆ ಒಂದು ಅನುಪಮವಾದ ಸಾಮರಸ್ಯವನ್ನು ಬೆಳಸಿಕೊಂಡಿದೆ. ವರುಷಕ್ಕೊಮ್ಮೆ ಮಾತ್ರವೇ ಮನೆಗೆ ಆಗಮಿಸುತ್ತಿದ್ದ ಹೊಸಬಟ್ಟೆಯನ್ನು ತೊಟ್ಟು ದೇವರಿಗೆ ದೀಪ ಹಚ್ಚಿದ್ದು, ಹೈಸ್ಕೂಲಿಗೆ ಸೇರಿದ ಮೊದಲ ದಿನ ಹೆಡ್ ಮಾಷ್ಟ್ರ ಕಾಲಿಗೆ ನಮಸ್ಕಾರ ಮಾಡಿದ್ದು, ದೀಪಾವಳಿಯ ದಿನ ಹೊಸ ಚಿಗುರನ್ನು ತಂದು ಮನೆಯ ಹೊಸ್ತಿಲ ಮೇಲಿಟ್ಟು ನಮಸ್ಕರಿಸಿದ್ದು ಈ ಯಾವ ಕ್ರಿಯೆಗಳೂ ಆಧುನಿಕತೆಯ ಹೆಸರಿನಲ್ಲಿ ಹಳತಾಗುವುದಿಲ್ಲ. ಹೊಸಬಟ್ಟೆಯ ಸಂಭ್ರಮ ದೀಪವಾಗಿ ಉರಿದು ಮನಸ್ಸುಗಳನ್ನು ಬೆಸೆದು ನೆನಪಿನ ಟ್ರಂಕಿನಲ್ಲಿ ಸದಾಕಾಲ ಹೊಸದಾಗಿಯೇ ಉಳಿದುಕೊಳ್ಳುತ್ತದೆ; ಹೈಸ್ಕೂಲಿನ ಹೆಡ್ ಮಾಷ್ಟ್ರು ತೋರಿಸಿದ ದಾರಿಯಲ್ಲಿ ಉಸಿರು ಬಿಗಿಹಿಡಿದು ನಡೆದ ಬದುಕು ಮಾರ್ಕ್ಸ್ ಕಾರ್ಡಿನ ಹುಟ್ಟಿದದಿನದ ದಾಖಲೆಯಾಗಿ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತದೆ; ಬಾಗಿಲಪಟ್ಟಿಯ ಮೇಲಿನ ಹೊಸ ಚಿಗುರಿನ ಭತ್ತದ ಕಾಳು ಪ್ರತಿದಿನದ ಅನ್ನವಾಗಿ ಜೀವತುಂಬುತ್ತದೆ. ವಾರಾಂತ್ಯದ ಶಾಪಿಂಗುಗಳಲ್ಲಿ ಕ್ರೆಡಿಟ್ ಕಾರ್ಡಾಗಿ, ಹೊಸ ಕೆಲಸದ ಹುಡುಕಾಟದಲ್ಲಿ ಮಾರ್ಕ್ಸ್ ಕಾರ್ಡಾಗಿ, ಬಿರಿಯಾನಿಯ ಬಾಸುಮತಿ ಅಕ್ಕಿಯಾಗಿ ದೇವರೆನ್ನುವ ಸಾಂಗತ್ಯ ಹೊಸ ಸ್ವರೂಪಗಳಲ್ಲಿ ಕೈಹಿಡಿದು ನಡೆಸುತ್ತಲೇ ಇರುತ್ತದೆ.          ಆ ಸಹಜಸ್ಥಿತಿಯ ಇರುವಿಕೆಯಲ್ಲಿ ಶಾಪಿಂಗ್ ಮಾಲ್ ನ ಬಟ್ಟೆ ಅಂಗಡಿಯ ಕ್ಯಾಶ್ ಕೌಂಟರಿನಲ್ಲೊಬ್ಬ ಕಿವಿ ಕೇಳಿಸದ ಹುಡುಗ ತುಟಿಗಳ ಚಲನೆಯಿಂದಲೇ ಪ್ರಶ್ನೆಗಳನ್ನು ಅರಿತು ಹಣಕಾಸಿನ ವ್ಯವಹಾರಗಳನ್ನು ತಪ್ಪಿಲ್ಲದೇ ನಿರ್ವಹಿಸುತ್ತಾನೆ; ಬೀದಿಬದಿಯಲ್ಲೊಬ್ಬಳು ಹೂ ಮಾರುವ ಹುಡುಗಿ ಏರುದನಿಯಲ್ಲಿ ದರಗಳನ್ನು ಕಿವಿಗಳಿಗೆ ತಲುಪಿಸಿ, ಹೂವಿನ ಬದುಕನ್ನು ಮಾರುಗಳಲ್ಲಿ ಲೆಕ್ಕ ಹಾಕುತ್ತಾಳೆ; ರಿಸರ್ವ್ ಫಾರೆಸ್ಟಿನಲ್ಲೊಬ್ಬ ಜೀಪು ಚಲಿಸುವವ ನಿಶ್ಯಬ್ದದ ದಾರಿಯಲ್ಲಿ ಹುಲಿಯ ಹೆಜ್ಜೆಗಳನ್ನು ಹಿಂಬಾಲಿಸುತ್ತಾನೆ; ಏರ್ ಪೋರ್ಟಿನ ಕೆಂದುಟಿಯ ಚೆಲುವೆ ನಗುವನ್ನೇ ಬದುಕಾಗಿಸಿಕೊಂಡು ದೇಶಗಳ ನಡುವಿನ ಅಂತರವನ್ನು ಇಲ್ಲವಾಗಿಸುತ್ತಾಳೆ. ಹೀಗೆ ದೇವರೆನ್ನುವ ಅಸ್ತಿತ್ವ ಒಮ್ಮೆ ಮೌನವಾಗಿ, ಮತ್ತೊಮ್ಮೆ ಧ್ವನಿಯಾಗಿ, ನಿಶ್ಯಬ್ದವೂ ಆಗಿ ಬದುಕಿನ ಚಲನೆಯ ಉದ್ದೇಶಗಳನ್ನು ಕೆಡದಂತೆ ಕಾಪಾಡುತ್ತದೆ. ರೂಪ-ಆಕಾರಗಳ ಬಂಧನವನ್ನು ಮೀರಿದ ಆ ಅಸ್ತಿತ್ವವೇ ಆ ಕ್ಷಣದ ಬದುಕುಗಳ ಸಮಾಧಾನವನ್ನು ನಿರ್ಧರಿಸುತ್ತಿರುತ್ತದೆ. ಆ ಸಮಾಧಾನದ ಕ್ಷಣಗಳಲ್ಲಿ ಬ್ಯಾಂಕಿನೊಂದಿಗಿನ ನಂಬಿಕೆಯ ಸಂಬಂಧ ಕ್ಯಾಶ್ ಕೌಂಟರಿನಲ್ಲಿ ಬಲಗೊಂಡರೆ, ರೈತನೊಬ್ಬನ ಬೆವರಿನಲ್ಲಿ ಮೂಡಿದ ಮೊಗ್ಗು ರಸ್ತೆಬದಿಯಲ್ಲಿ ಹೂ ಮಾರುವವಳ ಧ್ವನಿಯಲ್ಲಿ ಅರಳುತ್ತದೆ; ಜೀಪಿನಲ್ಲಿ ಕುಳಿತವನ ಕ್ಯಾಮರಾ ಕಣ್ಣುಗಳು ಡ್ರೈವರಿನ ನಡೆಯನ್ನು ನಂಬಿಕೊಂಡರೆ, ನಗುಮೊಗದ ಚೆಲುವೆ ಒತ್ತುವ ಸೀಲು ದೇಶ ಬಿಡುವವನ ದುಗುಡವನ್ನು ಕಡಿಮೆ ಮಾಡುತ್ತದೆ. ಹಾಗೆ ಆ ಕ್ಷಣದಲ್ಲಿ ಹುಟ್ಟಿಕೊಂಡ ನಂಬಿಕೆಯೇ ದೇವರಾಗಿ ಸಕಲ ರೂಪಗಳಲ್ಲೂ ಸಂಧಿಸಿ, ಮಧ್ಯರಾತ್ರಿಯ ನೀರವತೆಯಲ್ಲಿ ದೂರದ ಹೈವೆಯಲ್ಲೆಲ್ಲೋ ಚಲಿಸುವ ಲಾರಿಗಳ ಸದ್ದಿನಂತೆ ದಿನಚರಿಯ ಭಾಗವಾಗಿ ಬೆರೆತುಹೋಗುತ್ತದೆ.           ಹಾಗೆ ಬದುಕಿನ ಚಲನೆಗಳೊಂದಿಗೆ ಅನುಸಂಧಾನಗೊಳ್ಳುವ ದೇವರೆನ್ನುವ ಪರಿಕಲ್ಪನೆಯ ಪರಿಧಿಯಲ್ಲಿ ಅಜ್ಜಿ ಮಾಡುತ್ತಿದ್ದ ಬಾಳೆಹಣ್ಣಿನ ರೊಟ್ಟಿಯ ಮೇಲಿನ ಗಟ್ಟಿತುಪ್ಪ ಪ್ರೀತಿಯ ಹನಿಯಾಗಿ ಕರಗಿ ನೆನಪಾಗಿ ಬೆರಳಿಗಂಟಿಕೊಳ್ಳುತ್ತದೆ; ದೂರದ ಹೊಳೆಯಿಂದ ನೀರು ತಂದು ಅಮ್ಮ ನೆಟ್ಟು ಬೆಳಸಿದ ಹಲಸಿನಮರದ ಬುಡದಲ್ಲಿ ಹಸುವೊಂದು ಮಲಗಿ ದಣಿವಾರಿಸಿಕೊಳ್ಳುತ್ತದೆ; ಅಪರಿಚಿತ ರಸ್ತೆಗಳ ಬೀದಿದೀಪಗಳನ್ನು ಒಂದೊಂದಾಗಿ ದಾಟುವ ರಾತ್ರಿಬಸ್ಸಿನ ಕನಸುಗಳು ನಿಶ್ಚಿಂತೆಯಿಂದ ಊರು ತಲುಪುತ್ತವೆ; ಹಸಿರು ಬಣ್ಣದ ಶರ್ಟು ತೊಟ್ಟ ಹುಡುಗನ ನಿಶ್ಚಲ ಕಣ್ಣುಗಳು ಮಳೆಗಾಲದ ಒಂದು ಸಂಜೆಯ ಏಕಾಂತಕ್ಕೆ ಜೊತೆಯಾಗುತ್ತವೆ. ಅಜ್ಜಿಯ ಪ್ರೇಮ, ಅಮ್ಮನ ನಂಬಿಕೆ, ಕಣ್ಣಂಚಿನ ಕನಸುಗಳು, ಹಸಿರಂಗಿಯ ಸಾಂಗತ್ಯಗಳೆಲ್ಲವೂ ಹೆಗಲನ್ನೇರಿ ಬದುಕಿನ ಪಲ್ಲಕ್ಕಿಯ ಭಾರವನ್ನು ಕಡಿಮೆ ಮಾಡುತ್ತವೆ. ಅಲ್ಲೊಂದು ಮೋಹ, ಇಲ್ಲೊಂದು ಸ್ನೇಹ, ಇನ್ನೆಲ್ಲೋ ಒಂದು ಪ್ರೀತಿಯ ಒರತೆ ಎಲ್ಲವೂ ಪೂರ್ವನಿರ್ಧರಿತವಾದಂತೆ ಭಾಸವಾಗುವ ಪಥಗಳಲ್ಲಿ ನಡೆದು ನೆಮ್ಮದಿಯ ನೆಲೆಯನ್ನು ಕಂಡುಕೊಳ್ಳುತ್ತವೆ. ಆ ನೆಲೆಯಂಗಳದಲ್ಲಿ ಅರಳುತ್ತಿರುವ ಹೂವಿನ ಗೊಂಚಲುಗಳು ಭರವಸೆಯ ಬೆಳಕಿನೆಡೆಗೆ ಹೊರಳುತ್ತವೆ. ****************************************************************** – ಅಂಜನಾ ಹೆಗಡೆ ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ ಅಂಜನಾ ಬರೆಯುತ್ತಾರೆ ಜಗಲಿಯೆನ್ನುವ ಮೊದಲಪ್ರೇಮ ಸೂರ್ಯ ಮೂಡುವ ಹೊತ್ತು ಬರಿಗಾಲಲ್ಲಿ ಒಮ್ಮೆ ಅಂಗಳಕ್ಕಿಳಿದು ನೋಡಿ. ಮಣ್ಣಿನೊಂದಿಗಿನ ಮೊದಲಪ್ರೇಮದ ಸ್ಪರ್ಶ ಅಂಗಾಲುಗಳನ್ನು ತಾಕಿ ಹೃದಯವನ್ನು ಸೋಕುತ್ತದೆ; ಬಾಗಿಲುಗಳಾಚೆ ಬಂದು ಸುರಿವ ಮಳೆಗೆ ಒಮ್ಮೆ ಮುಖವನ್ನೊಡ್ಡಿ ನೋಡಿ. ಮಳೆಯೊಂದಿಗಿನ ಮೊದಲಪ್ರೇಮದ ಸುಖ ಮುಂಗುರುಳನ್ನು ತೋಯಿಸಿ ಹನಿಹನಿಯಾಗಿ ನೆಲಕ್ಕಿಳಿಯುತ್ತದೆ; ಒಂದು ಏಕಾಂತದ ಸಂಜೆಯಲ್ಲಿ ಸದ್ದಿಲ್ಲದೆ ಅರಳುತ್ತಿರುವ ಜಾಜಿಯ ಮೊಗ್ಗುಗಳನ್ನು ಅಂಗೈಯಲ್ಲಿ ಹಿಡಿದು ನೋಡಿ. ಪರಿಮಳದೆಡೆಗಿನ ಮೊದಲಪ್ರೇಮದ ಭಾವ ಇಂದ್ರಿಯಗಳ ಹಂಗು ತೊರೆದು ಗಾಳಿಯೊಂದಿಗೆ ತೇಲಿ ಹಗುರಾಗುತ್ತದೆ. ಮೃದುವಾದ ಪುಟ್ಟಪುಟ್ಟ ಕಾಲುಗಳಿಗೆ ಅಮ್ಮ ತೊಡಿಸಿದ ಗೆಜ್ಜೆ, ದೀಪಾವಳಿಗೆಂದು ಅಪ್ಪ ಕೊಡಿಸಿದ ಉದ್ದತೋಳಿನ ಫ್ರಾಕು, ಶನಿವಾರದ ಕೊನೆಯ ಕ್ಲಾಸು ತಪ್ಪಿಸಿ ಹೊಟೆಲಿಗೆ ಹೋಗಿ ತಿಂದ ಮಸಾಲೆದೋಸೆ, ಸಿಟಿಬಸ್ಸಿನಲ್ಲಿ ಎದುರಾಗುತ್ತಿದ್ದ ಹುಡುಗನ ನೀಲಿಬಣ್ಣದ ಅಂಗಿ ಎಲ್ಲವೂ ಮೊದಲಪ್ರೇಮವೆನ್ನುವ ಸುಂದರ ಅನುಭೂತಿಯ ಭಾಗವಾಗಿ ಬದುಕನ್ನು ಆವರಿಸಿಕೊಳ್ಳುತ್ತವೆ. ಅಕ್ಕನ ಮದುವೆಯಲ್ಲಿ ಮುಡಿದ ಮಲ್ಲಿಗೆಮಾಲೆಯಿಂದ ಹಿಡಿದು ಸಂಧ್ಯಾವಂದನೆಯ ಧೂಪದಾರತಿಯವರೆಗೂ ಮೊದಲಪ್ರೇಮದ ನರುಗಂಪು ನೆನಪಿನ ಜಗಲಿಯಲ್ಲಿ ತೇಲುತ್ತಲೇ ಇರುತ್ತದೆ.           ಈ ಜಗಲಿಯೆಡೆಗಿನ ನನ್ನ ಪ್ರೇಮವೂ ನಿನ್ನೆ-ಮೊನ್ನೆಯದಲ್ಲ. ಪಕ್ಕದಮನೆಯ ಪುಟ್ಟ ಮಗುವೊಂದು ಅಂಬೆಗಾಲಿಡುತ್ತ ಜಗಲಿಯ ಕಂಬಗಳನ್ನು ಸುತ್ತುವಾಗಲೆಲ್ಲ, ನನ್ನ ಬಾಲ್ಯವೂ ಹೀಗೆ ಸ್ವಚ್ಛಂದವಾಗಿ ಜಗಲಿಯ ಮೇಲೆ ಹರಡಿಕೊಂಡಿದ್ದ ಗಳಿಗೆಯನ್ನು ನೆನೆದು ಪುಳಕಗೊಳ್ಳುತ್ತೇನೆ; ನೆನಪುಗಳಿಗೆ ದಕ್ಕಿರದ ಅವೆಷ್ಟೋ ಸಂಗತಿಗಳು ವಾಸ್ತವದಲ್ಲಿ ಕಣ್ಣೆದುರೇ ಕುಣಿದಾಡುತ್ತ, ಪುಟ್ಟಪುಟ್ಟ ಹೆಜ್ಜೆಗಳನ್ನಿಟ್ಟು ಅನುಭವಗಳಾಗಿ ಜಗಲಿಗಿಳಿಯುವ ವಿಸ್ಮಯಕ್ಕೆ ಚಕಿತಗೊಳ್ಳುತ್ತೇನೆ. ಹಾಗೆ ನಡೆದಾಡುವ ಅನುಭವಗಳ ಸ್ವರೂಪ ಕಾಲಕಾಲಕ್ಕೆ ಬದಲಾಗಿರಬಹುದಾದರೂ, ಅವುಗಳ ಸೌಂದರ್ಯ ಕಳೆಗುಂದಿದ್ದನ್ನು ಎಂದಿಗೂ ಕಂಡಿಲ್ಲ. ಜಗಲಿಯ ದಾಸ್ತಾನುಗಳ ಮಾಲೀಕನಂತಿರುವ ಮರದ ಟಿಪಾಯಿಯ ಮೇಲಿನ ದಿನಪತ್ರಿಕೆ-ವಾರಪತ್ರಿಕೆಗಳ ಜಾಗವನ್ನು ಮೊಬೈಲುಗಳು, ಟಿವಿ ರಿಮೋಟುಗಳು ಆಕ್ರಮಿಸಿಕೊಂಡಿರಬಹುದು; ಮಹಾರಾಜರ ಗತ್ತಿನಲ್ಲಿ ಕುಳಿತಿರುತ್ತಿದ್ದ ಆರಾಮಕುರ್ಚಿಗಳ ಜಾಗದಲ್ಲಿ ಅಂದದ ಮೈಕಟ್ಟಿನ ಸೋಫಾಸೆಟ್ಟುಗಳು ವಿರಾಜಿಸುತ್ತಿರಬಹುದು; ಲಾಟೀನುಗಳನ್ನು ಟ್ಯೂಬ್ ಲೈಟುಗಳು, ಮಣ್ಣಿನ ನೆಲವನ್ನು ಮಾರ್ಬಲ್ಲುಗಳು, ರೇಡಿಯೋಗಳನ್ನು ಲ್ಯಾಪ್ಟಾಪುಗಳು ರಿಪ್ಲೇಸ್ ಮಾಡಿರಬಹುದಾದರೂ, ಆ ಮಾರ್ಪಾಡಿನ ಪ್ರಕ್ರಿಯೆಯಲ್ಲಿ ಜಗಲಿಯೆಂದೂ ತನ್ನ ನೈಜತೆಯ ಖುಷಿಯನ್ನು ಕಳೆದುಕೊಳ್ಳುವುದಿಲ್ಲ. ಎಲ್ಲ ಬದಲಾವಣೆಗಳಿಗೂ ಭಯವಿಲ್ಲದೆ ತನ್ನನ್ನು ಒಡ್ಡಿಕೊಳ್ಳುವ ಜಗಲಿ ಮನೆಯೊಳಗಿಂದ ಹೊರಗೆ ಬಂದವರಿಗೊಂದು ಬಿಡುವಿನ ಸಡಗರ ಒದಗಿಸುತ್ತ, ಹೊರಗಿನಿಂದ ಒಳಬಂದವರನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತ ಒಳಗು-ಹೊರಗುಗಳ ಅನುಬಂಧವನ್ನು ಹಿಡಿದಿಡುವ ಬಂಧುವಿನಂತೆ ಭಾಸವಾಗುತ್ತದೆ.           ಎಲ್ಲ ಅನುಬಂಧಗಳ ಹುಟ್ಟು, ಬೆಳವಣಿಗೆಗಳು ಸಂಭವಿಸುವುದು ಜಗಲಿಯಲ್ಲಿಯೇ ಎನ್ನುವ ಬಲವಾದ ನಂಬಿಕೆಯಿದೆ ನನಗೆ. ಆರಾಮಕುರ್ಚಿಯಲ್ಲಿ ಪೇಪರ್ ಓದುತ್ತ ಕುಳಿತಿದ್ದ ಅಪ್ಪನ ಕಾಲನ್ನು ಹಿಡಿದುಕೊಂಡು ನಾನು ಮೊದಲಸಲ ನನ್ನ ಕಾಲುಗಳ ಮೇಲೆ ನಿಂತಿದ್ದಿರಬಹುದು; ದೊಡ್ಡಪ್ಪನ ಕಿರುಬೆರಳನ್ನು ಹಿಡಿದು ಜಗಲಿಯ ತುಂಬ ಓಡಾಡಿದ ಮೇಲೆಯೇ ಎತ್ತಿಡುವ ಹೆಜ್ಜೆಗಳಿಗೊಂದು ಧೈರ್ಯ ಬಂದಿರಬಹುದು; ಅದೇ ಜಗಲಿಯ ಕಂಬಗಳ ಸುತ್ತ ಕಟ್ಟಿಕೊಂಡ ಬಂಧನಗಳೇ ಜಗತ್ತನ್ನೆದುರಿಸುವ ಚೈತನ್ಯವನ್ನು ಒದಗಿಸಿರಬಹುದು. ಹೀಗೆ ಹೊರಗೆ ಎತ್ತಿಟ್ಟ ಪ್ರತಿ ಹೆಜ್ಜೆಯನ್ನೂ ಹಗುರಾಗಿಸಿಕೊಳ್ಳುವ ಪಾಠವೊಂದನ್ನು ಜಗಲಿ ಗುರುವಿನ ಜಾಗದಲ್ಲಿ ನಿಂತು ಕಲಿಸಿಕೊಡುತ್ತದೆ. ಆ ಕಲಿಕೆಯ ಭಾಗವಾಗಿ ನೆನಪುಗಳು, ಅನುಭವಗಳು, ಅನುಬಂಧಗಳೆಲ್ಲವೂ ಅವುಗಳ ಕರ್ತವ್ಯವನ್ನು ನಿಭಾಯಿಸುತ್ತಿರುತ್ತವೆ. ಜಗಲಿಯ ಬಾಗಿಲಿನಲ್ಲೊಂದು ರಂಗೋಲಿ ಒಮ್ಮೆ ಅಳಿದರೂ ಮತ್ತೆ ಕೈಗಂಟಿಕೊಳ್ಳುವ ಬದುಕಿನ ಚಿತ್ತಾರವಾಗಿ, ಅದರ ಮೇಲೊಂದು ಹೂವು ಬಾಡುವ ಸಂಗತಿಯನ್ನು ಸಹಜಕ್ರಿಯೆಯಾಗಿಸಿ ಮತ್ತೊಮ್ಮೆ ಅರಳುವ ಕನಸಾಗಿ, ಪಕ್ಕದಲ್ಲೊಂದು ನೀರಿನ ಗಿಂಡಿ ಆಗಾಗ ಬರಿದಾಗುತ್ತ ಮತ್ತೆ ತುಂಬಿಕೊಳ್ಳುವ ಪ್ರಕೃತಿಯಾಗಿ ಜಗಲಿಯ ಮೇಲೊಂದು ಸಹಜ-ಸುಂದರ ಬದುಕಿನ ಚಿತ್ರಣ ರೂಪುಗೊಳ್ಳುತ್ತದೆ. ಬಾಗಿಲ ಮೇಲೊಂದು ಅಜ್ಜನ ಭಾವಚಿತ್ರ ಕೊಲಾಜಿನಂತಹ ಜಗಲಿಯ ಬದುಕುಗಳನ್ನು ಸಹನೆಯಿಂದ ಕಾಯುತ್ತಿರುತ್ತದೆ. ಹೀಗೆ ಜಗಲಿಯ ಮೇಲೆ ದಿನ ಬೆಳಗಾದರೆ ತೆರೆದುಕೊಳ್ಳುವ ಚಿತ್ರಣವೇ ಬಯಲಿಗಿಳಿವ ಬದುಕುಗಳ ಬೆನ್ನಹಿಂದೆ ನಿಂತು, ಅಗತ್ಯ ಬಂದಾಗ ಆಚೀಚೆ ಚಲಿಸಿ ಬೆರಗಿನ ದರ್ಶನವನ್ನು ಮಾಡಿಸುತ್ತಿರುತ್ತದೆ.           ಈ ಜಗಲಿಯ ಬದುಕಿನೊಂದಿಗೆ ನಮ್ಮ ಬದುಕನ್ನು ಜೋಡಿಸಿಕೊಂಡಾಗಲೇ ಅದೊಂದು ಬೆರಗು ಎನ್ನುವ ಅರಿವು ಸಾಧ್ಯವಾದೀತು. ಶಾಲೆಗೆ ಹೋಗುವುದೊಂದು ಬೇಸರದ ಸಂಗತಿಯೆನ್ನಿಸಿದಾಗ ಜಗಲಿಯ ಮೂಲೆಯಲ್ಲಿ ಗೋಡೆಗೆ ಆತು ನಿಂತಿರುತ್ತಿದ್ದ ಕೇರಂ ಬೋರ್ಡು ಎಲ್ಲ ಬೇಸರಗಳನ್ನೂ ಹೋಗಲಾಡಿಸುತ್ತಿತ್ತು. ಸಂಜೆ ಶಾಲೆಯಿಂದ ಮನೆಗೆ ಹಾಜರಾಗುತ್ತಿದ್ದಂತೆಯೇ ಜಗಲಿಯ ಮೇಲೊಂದು ಕಂಬಳಿ ಹಾಸಿ, ಬೋರ್ಡಿನ ಮೇಲೆ ರಾಣಿಯನ್ನು ಪ್ರತಿಷ್ಠಾಪಿಸಿ ಆಟಕ್ಕೆ ಕುಳಿತರೆ ಪ್ರಪಂಚದ ಸಕಲ ಸಂತೋಷಗಳೂ ಜಗಲಿಗೆ ಹಾಜರಾಗುತ್ತಿದ್ದವು. ಗಣಿತದ ಮಾಸ್ತರು ಕಷ್ಟಪಟ್ಟು ಕಲಿಸಿದ ಲೆಕ್ಕಾಚಾರಗಳೆಲ್ಲ ಕಪ್ಪು-ಬಿಳಿ ಬಿಲ್ಲೆಗಳ ಮಧ್ಯದಲ್ಲಿ ಸಿಕ್ಕು ತಲೆಕೆಳಗಾಗಿ, ಮರುದಿನ ಮತ್ತೆ ಶಾಲೆಯ ಮೆಟ್ಟಿಲೇರಿದಾಗಲೇ ಲೆಕ್ಕಕ್ಕೆ ಸಿಗುತ್ತಿದ್ದವು. ಜಗಲಿಯ ಮೇಲಿನ ಮಕ್ಕಳ ಸಂಖ್ಯೆ ನಾಲ್ಕಕ್ಕಿಂತ ಜಾಸ್ತಿಯಾದಾಗ ರಾಣಿಯನ್ನು ಮರೆತು ಕತ್ತೆಯ ಸವಾರಿ ಶುರುವಾಗುತ್ತಿತ್ತು. ಹಿರಿಯರ ಕಣ್ಣು ತಪ್ಪಿಸಿ ಎತ್ತಿಟ್ಟುಕೊಂಡಿರುತ್ತಿದ್ದ ಹಳೆಯ ಇಸ್ಪೀಟು ಕಟ್ಟುಗಳನ್ನು ಹೊಸದಾಗಿ ಜೋಡಿಸಿಕೊಂಡು ಕತ್ತೆಯಾಗುವ, ಕತ್ತೆಯಾಗಿಸಿ ಖುಷಿಪಡುವ ಆಟವನ್ನು ಕಲಿಸಿಕೊಟ್ಟವರ ನೆನಪಿಲ್ಲ. ಅದೊಂದು ಪರಂಪರಾನುಗತ ಸಂಪ್ರದಾಯವೆನ್ನುವಂತೆ ಕಲಿತು, ಕಿರಿಯರಿಗೂ ಕಲಿಸಿ, ಜಗಲಿಯನ್ನೇ ಶಾಲೆಯನ್ನಾಗಿಸಿಕೊಳ್ಳುತ್ತಿದ್ದ ಬಾಲ್ಯದ ನೆನಪುಗಳನ್ನೆಲ್ಲ ಜಗಲಿ ಜಾಗರೂಕತೆಯಿಂದ ಜೋಪಾನ ಮಾಡುತ್ತದೆ.           ನೆನಪುಗಳೆಲ್ಲ ಚದುರಿಹೋಗಿ ಬದುಕು ತಲ್ಲಣಿಸುವ ಸಮಯದಲ್ಲೂ ಜಗಲಿಯಲ್ಲಿ ದೊರೆಯುವ ನೆಮ್ಮದಿ ಶಬ್ದಗಳಾಚೆ ನಿಲ್ಲುವಂಥದ್ದು. ಹೊರಬಾಗಿಲಿನಲ್ಲಿ ಚಪ್ಪಲಿ ಕಳಚಿ ಜಗಲಿಯ ತಣ್ಣನೆಯ ಸ್ಪರ್ಶವನ್ನು ನಮ್ಮದಾಗಿಸಿಕೊಂಡ ಮರುಕ್ಷಣವೇ, ಎಲ್ಲ ತಲ್ಲಣಗಳನ್ನು ತಣಿಸುವ ಜೀವಶಕ್ತಿಯಾಗಿ ಜಗಲಿ ನಮ್ಮನ್ನಾವರಿಸಿಕೊಳ್ಳುತ್ತದೆ. ಅಕ್ಕನ ಮದುವೆಯಲ್ಲಿ ಜಗಲಿಯ ಮೇಲೆ ಹಾಸಿದ್ದ ಜಮಖಾನದ ಮೇಲೆ ಕಾಲುಚಾಚಿ ಕುಳಿತಿದ್ದ ಕನಸಿನಂತಹ ಹುಡುಗ ಎದೆಯಲ್ಲೊಂದು ನವಿರಾದ ಭಾವವನ್ನು ಮೂಡಿಸಿ, ಮುಡಿದಿದ್ದ ಮಲ್ಲಿಗೆಮಾಲೆಯ ಪರಿಮಳದೊಂದಿಗೆ ಬೆರೆತುಹೋಗಿದ್ದ ನೆನಪು ಮತ್ತದೇ ಮೊದಲಪ್ರೇಮದ ಹಗುರಾದ ಅನುಭವವನ್ನು ಒದಗಿಸುತ್ತದೆ; ಮದುವೆಯಾಗಿ ದೂರದ ಊರಿಗೆ ಹೋದ ಅಕ್ಕ ವರುಷಕ್ಕೊಮ್ಮೆ ಭಾವನೊಂದಿಗೆ ಬಂದಾಗ, ನೀರು ತುಂಬಿದ ತಂಬಿಗೆಯನ್ನು ಅವರೆದುರಿಗಿಟ್ಟು ಬಗ್ಗಿ ನಮಸ್ಕಾರ ಮಾಡಿ ಸ್ವಾಗತಿಸುತ್ತಿದ್ದ ಸೊಗಸಾದ ಸಂಪ್ರದಾಯವೊಂದು ಜಗಲಿಯ ತುಂಬ ಸರಿದಾಡಿದಂತಾಗಿ ಹೊಸ ಹುರುಪೊಂದು ಹೃದಯವನ್ನಾವರಿಸುತ್ತದೆ; ಅಕ್ಕನ ಮಕ್ಕಳನ್ನು ಕೈಹಿಡಿದು ನಡೆಯಲು ಕಲಿಸಿದ, ಮಡಿಲಲ್ಲಿ ಕೂರಿಸಿಕೊಂಡು ದೇವರ ಭಜನೆಯನ್ನು ಹಾಡಿದ, ಪುಟ್ಟಪುಟ್ಟ ಕೈಗಳಿಗೆ ಮದರಂಗಿಯನ್ನು ಹಚ್ಚಿ ಸಂಭ್ರಮಿಸಿದ ನೆನಪುಗಳೆಲ್ಲವೂ ಅದೆಲ್ಲಿಂದಲೋ ಹಾಜರಾಗಿ, ಜಮಖಾನವೊಂದು ರತ್ನಗಂಬಳಿಯಾಗಿ ಬದಲಾಗಿ ಅರಮನೆಯಂತಹ ವೈಭವ ಜಗಲಿಗೆ ಪ್ರಾಪ್ತಿಯಾಗುತ್ತದೆ. ದೊಡ್ಡಮ್ಮ ಮಾಡುತ್ತಿದ್ದ ಬಿಸಿಬಿಸಿಯಾದ ಗೋಧಿಪಾಯಸ, ದೊಡ್ಡಪ್ಪನೊಂದಿಗೆ ಕುಳಿತು ಬೆರಗಾಗಿ ನೋಡುತ್ತಿದ್ದ ರಾಮಾಯಣ-ಮಹಾಭಾರತ, ಪಲ್ಲಕ್ಕಿಯೊಳಗೆ ಕುಳಿತಿರುತ್ತಿದ್ದ ಹನುಮಂತನಿಗೆಂದು ದೂರದ ಗದ್ದೆಯಿಂದ ಕೊಯ್ದು ತರುತ್ತಿದ್ದ ಗೆಂಟಿಗೆ ಹೂವು, ದೀಪಾವಳಿಯ ರಾತ್ರಿ ಜಗಲಿಯುದ್ದಕ್ಕೂ ಉರಿಯುತ್ತಿದ್ದ ಹಣತೆಯ ಸಾಲು ಎಲ್ಲವೂ ಆ ವೈಭವದ ಮೆರವಣಿಗೆಯಲ್ಲಿ ಭಾಗವಹಿಸಿದಂತೆ ಭಾಸವಾಗಿ ಹಸನಾದ ಹೊಸ ಬದುಕೊಂದು ನಮ್ಮದಾದ ಭಾವ ಬೆಚ್ಚಗಾಗಿಸುತ್ತದೆ.           ಹೀಗೆ ಅಗತ್ಯಬಿದ್ದಾಗ ತಲ್ಲಣಗಳನ್ನು ತಣಿಸುತ್ತ, ಇನ್ನೊಮ್ಮೆ ಬದುಕು ಬೆಚ್ಚಗಿರುವ ಭರವಸೆಯನ್ನು ತುಂಬುತ್ತ ಜಗಲಿಯೆನ್ನುವ ಮೊದಲಪ್ರೇಮ ಬದುಕಿನುದ್ದಕ್ಕೂ ಕೈಹಿಡಿದು ನಡೆಯುತ್ತದೆ. ಮಣ್ಣಿನ ಜಗಲಿಯಲ್ಲಿ ಮಡಿಲಮೇಲೆ ಕುಳಿತಿರುತ್ತಿದ್ದ ಅಕ್ಕನ ಮಗ ಗ್ರಾನೈಟ್ ನೆಲದ ಫ್ಲೋರ್ ಕುಷನ್ನಿನ ಮೇಲೆ ಕುಳಿತು ಹೊಸ ಸಿನೆಮಾದ ಬಗ್ಗೆ ಚರ್ಚಿಸುತ್ತಾನೆ; ದೊಡ್ಡಮ್ಮನ ಗೋಧಿಪಾಯಸದ ರೆಸಿಪಿ ಹಳೆಯ ಡೈರಿಯ ಪುಟಗಳಲ್ಲಿ ಆತ್ಮಬಂಧುವಿನಂತೆ ಕುಳಿತು ತನ್ನ ಪಾಡಿಗೆ ತಾನು ಕಾಲ ಕಳೆಯುತ್ತಿರುತ್ತದೆ; ಮಹಾಭಾರತದ ಶ್ರೀಕೃಷ್ಣ  ರಾಧೆಯೊಂದಿಗೆ ಆಗಾಗ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ; ದೀಪಾವಳಿಯ ಹಣತೆಗಳೆಲ್ಲ ಕ್ಯಾಂಡಲ್ ಲೈಟ್ ಡಿನ್ನರುಗಳಾಗಿ, ನಾಗರಪಂಚಮಿಯ ಮದರಂಗಿ ಪಾರ್ಲರುಗಳ ನೇಲ್ ಪಾಲಿಶ್ ಆಗಿ, ದೇವರ ಕಲ್ಪನೆಯೊಂದು ಸ್ನೇಹದಂಥ ಸುಮಧುರ ಸಾಂಗತ್ಯವಾಗಿ ಬದುಕುಗಳನ್ನು ಹೊಸತನದೆಡೆಗೆ ಹದಗೊಳಿಸುತ್ತವೆ. ಜಗಲಿಯಲ್ಲಿ ಕಾಲುಚಾಚಿ ಕುಳಿತಿದ್ದ ಹುಡುಗನ ನೆನಪು ಮಲ್ಲಿಗೆಮಾಲೆಯಾಗಿ ಬಾಗಿಲುಗಳ ಮೇಲೆ ತೂಗುತ್ತಿರುತ್ತದೆ. *********************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಶ್ವತ್ಥಮರದ ಮೇಲೊಂದು ಗುಬ್ಬಿಗೂಡು ಈ ಮರ-ಗಿಡಗಳದ್ದು ಒಂದು ವಿಸ್ಮಯದ ಲೋಕ. ಒಂದಿಂಚು ಕತ್ತರಿಸಿದರೆ ನಾಲ್ಕಾರು ಟಿಸಿಲೊಡೆದು ಚಿಗುರಿಕೊಳ್ಳುವ ಗಿಡ ಕಣ್ಣೆದುರೇ ಮರವಾಗಿ ಬೆಳೆದುಬಿಡುವ ಪ್ರಕ್ರಿಯೆಯೊಂದು ಅಚ್ಚರಿ ಮೂಡಿಸುತ್ತದೆ. ಆ ಬೆಳವಣಿಗೆಯ ಬೆರಗಿನ ಲೋಕದಲ್ಲಿ ದಿನಕ್ಕೊಂದು ಹೊಸ ನೋಟ, ನೋಟದಲೊಂದಿಷ್ಟು ಹೊಸ ಅನುಭವಗಳು ಅವಿತು ಕುಳಿತಿರುತ್ತವೆ. ಹಾಗೆ ಅಡಗಿ ಕುಳಿತ ಅನುಭವಗಳೆಲ್ಲ ಸಮಯ ಸಿಕ್ಕಾಗ ಗಾಳಿ-ಬೆಳಕು-ನೆರಳುಗಳೊಂದಿಗೆ ಮಾತುಕತೆ ನಡೆಸುತ್ತ, ಮಳೆಗೊಂದು ಕೊಡೆ ಹಿಡಿದು ಚಲಿಸುತ್ತ ತಮ್ಮ ಇರುವಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತವೆ. ಗಾಳಿಯೊಂದಿಗೆ ಹಾರಿಬಂದ ಧೂಳಿನ ಕಣವೊಂದು ಎಲೆಯನ್ನಾಶ್ರಯಿಸಿದರೆ, ಬೆಳಕಿನೊಂದಿಗೆ ಬಿಚ್ಚಿಕೊಳ್ಳುವ ಹೂವಿನ ಎಸಳುಗಳು ದುಂಬಿಯನ್ನು ಸೆಳೆಯುತ್ತವೆ; ನೆರಳ ಹುಡುಕಿ ಬಂದ ನಾಯಿಮರಿಯೊಂದು ಮರದ ಬುಡದಲ್ಲಿ ಕನಸ ಕಾಣುತ್ತ ನಿದ್ರಿಸಿದರೆ, ಎಲೆಗಳನ್ನು ತೋಯಿಸಿದ ಮಳೆ ಹನಿಗಳೆಲ್ಲ ಬೇರಿಗಿಳಿದು ನೆಮ್ಮದಿ ಕಾಣುತ್ತವೆ. ಎಲ್ಲ ಕ್ರಿಯೆಗಳನ್ನೂ ತನ್ನದಾಗಿಸಿಕೊಳ್ಳುವ ಮರದ ಆತ್ಮ ನೆಲದೊಂದಿಗೆ ನಂಟು ಬೆಳಸಿಕೊಂಡು ನಿರಾಳವಾಗಿ ಉಸಿರಾಡುತ್ತದೆ.           ಮರವೊಂದು ಬೆಳೆದುನಿಲ್ಲುವ ರೀತಿಯೇ ಹಾಗೆ! ಪ್ರಪಂಚವೇ ತನ್ನದೆನ್ನುವ ಗತ್ತಿನಲ್ಲಿ, ತುಂಡಾಗಿ ಕತ್ತರಿಸಿದರೂ ಮತ್ತೆ ಚಿಗುರುವ ಆತ್ಮವಿಶ್ವಾಸದಲ್ಲಿ, ನೀರೆರೆಯದಿದ್ದರೂ ಮಳೆಯೊಂದು ಬೀಳುವುದೆನ್ನುವ ಭರವಸೆಯಲ್ಲಿ ಬದುಕು ಕಟ್ಟಿಕೊಳ್ಳುವ ಮರ ಕಲಿಸಿಕೊಡುವ ಪಾಠಗಳು ಹಲವಾರು. ಸುತ್ತ ಬದುಕುವವರ ಉಸಿರಾಟಕ್ಕೆ ನೆರವಾಗುತ್ತ, ಕಾಲಕಾಲಕ್ಕೆ ಚಿಗುರಿ ಹೂವು-ಹಣ್ಣುಗಳಿಂದ ನಳನಳಿಸುತ್ತ, ಆಗಾಗ ಭೇಟಿ ನೀಡುವ ಪ್ರಾಣಿ-ಪಕ್ಷಿಗಳನ್ನು ಪ್ರೀತಿಸುತ್ತ, ಮೊಟ್ಟೆಯೊಂದು ಕಣ್ಣುತೆರೆವ ಕ್ಷಣಕ್ಕೆ ಸಾಕ್ಷಿಯಾಗುತ್ತ ತನ್ನದೇ ಜಗತ್ತನ್ನು ಸೃಷ್ಟಿಸಿಕೊಂಡು ಬಾಳಿಬದುಕುವ ಮರ ನಿಸ್ವಾರ್ಥ ಪ್ರಜ್ಞೆಯ ದೃಷ್ಟಾಂತವಾಗಿ ನಿಲ್ಲುತ್ತದೆ. ಮರದ ಸಂವೇದನೆಗೆ ಜಾಗ ನೀಡುವ ನೆಲ ತಾಯಿ ಬೇರಿನೊಂದಿಗೆ ಮಗುವಾಗಿ, ಮಕ್ಕಳನ್ನು ಸಲಹುವ ತಾಯಿಯೂ ಆಗಿ ತನ್ನ ಕರ್ತವ್ಯವನ್ನು ಪೂರೈಸುತ್ತದೆ. ಬೇರು ತನ್ನನ್ನು ಆಶ್ರಯಿಸಿದ ಅಹಂಭಾವದ ಮದ ನೆಲದ ತಲೆಗೇರುವುದಿಲ್ಲ; ಹೂವಾಗಿ ಅರಳುವ ಮೊಗ್ಗಿನ ಕನಸನ್ನು ಬೆಳಕು ತುಂಡರಿಸುವುದಿಲ್ಲ; ಉದುರಿಬಿದ್ದ ಎಸಳುಗಳು ಗಾಳಿಯನ್ನು ಶಪಿಸುವುದಿಲ್ಲ; ಸುರಿವ ಮಳೆ ಚಿಗುರಿಸಿದ ಎಲೆಗಳ ಲೆಕ್ಕವಿಡುವುದಿಲ್ಲ. ಹೀಗೆ ಎಲ್ಲ ಭೌತಿಕ ಲೆಕ್ಕಾಚಾರ, ವ್ಯವಹಾರಗಳಾಚೆ ನಿಲ್ಲುವ ಮರ-ಗಿಡಗಳ ಅನನ್ಯ ಲೋಕ ತರ್ಕಗಳನ್ನೆಲ್ಲ ತಲೆಕೆಳಗಾಗಿಸುತ್ತ ಅನಾವರಣಗೊಳ್ಳುತ್ತದೆ.           ನಮ್ಮ ಸುತ್ತಲಿನ ಪ್ರಪಂಚ ಅನನ್ಯವೆನ್ನುವ ಭಾವನೆ ಮೂಡುವುದು ಅಲ್ಲಿನ ಚಟುವಟಿಕೆಗಳ ನಿರಂತರ ಜೀವಂತಿಕೆಯಿಂದ. ಬರಿಯ ಮಾತಿಗೆ ನಿಲುಕದ, ಒಮ್ಮೊಮ್ಮೆ ವಿವೇಚನೆಗೂ ಎಟುಕದ ಅದೆಷ್ಟೋ ಸಂಗತಿಗಳು ಆವರಣಕ್ಕೊಂದು ವಿಶಿಷ್ಟವಾದ ಸೌಂದರ್ಯವನ್ನು ಒದಗಿಸುತ್ತವೆ. ಆ ಆವರಣದೊಳಗಿನ ಮಾಧುರ್ಯ ಬದುಕಿನ ಒಂದು ಭಾಗವಾಗಿ ನಮ್ಮೊಳಗೆ ಬೇರುಬಿಟ್ಟು, ಹೊಸಹೊಸ ರಾಗಗಳಾಗಿ ಚಿಗುರೊಡೆಯುತ್ತಿರುತ್ತದೆ. ಹಾಗೆ ಗುನುಗುನಿಸುವ ಅಮೂರ್ತ ಸ್ವರಗಳಲ್ಲಿ ಅಶ್ವತ್ಥಕಟ್ಟೆಯೂ ಒಂದು. ಅಜಾನುಬಾಹು ಶರೀರದ, ದೊಡ್ಡ ಕಿರೀಟ ತೊಟ್ಟ ಮಹಾರಾಜನಂತೆ ವಿರಾಜಿಸುವ ಅಶ್ವತ್ಥಮರದ ಕಟ್ಟೆಯೆಂದರೆ ಅದೊಂದು ಸುಭಿಕ್ಷತೆ-ಸಮೃದ್ಧಿಗಳ ಅರಮನೆಯಿದ್ದಂತೆ. ಅಲ್ಲೊಂದು ಮಣ್ಣಿನ ಹಣತೆ ಲಯಬದ್ಧವಾಗಿ ಉರಿಯುತ್ತ ಕತ್ತಲೆಯ ದುಗುಡವನ್ನು ಕಡಿಮೆ ಮಾಡುತ್ತಿರುತ್ತದೆ; ಕಟ್ಟೆಯನ್ನೇರುವ ಮೆಟ್ಟಿಲುಗಳ ಆಚೀಚೆ ಬಿಡಿಸಿದ ಪುಟ್ಟ ಹೂಗಳ ರಂಗೋಲಿಯ ಮೇಲಿನ ಅರಿಸಿನ-ಕುಂಕುಮಗಳು ಬೆಳಗಿನ ಸೂರ್ಯನ ಕಿರಣಗಳಿಗೆ ಹೊಳೆದು ಬಣ್ಣದ ಲೋಕವನ್ನು ತೆರೆದಿಡುತ್ತವೆ; ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಭಕ್ತಿಯಿಂದ ಮರವನ್ನು ಸುತ್ತುವ ತಾಯಿಯ ಹಿಂದೊಂದು ಪುಟ್ಟ ಮಗು ಕಾಲ್ಗೆಜ್ಜೆಯ ಸದ್ದು ಮಾಡುತ್ತ ನೆರಳಿನೊಂದಿಗೆ ಆಟವಾಡುತ್ತದೆ; ಮಾಗಿ ಉದುರಿದ ಹಣ್ಣುಗಳೆಲ್ಲ ಆಕಾಶದಿಂದ ಬಿದ್ದ ನಕ್ಷತ್ರಗಳಂತೆ ಭಾಸವಾಗಿ ಅಶ್ವತ್ಥಕಟ್ಟೆಗೊಂದು ದಿವ್ಯವಾದ ಸೌಂದರ್ಯ ಪ್ರಾಪ್ತಿಯಾಗುತ್ತದೆ.           ಹೀಗೆ ಸೌಂದರ್ಯವೆನ್ನುವುದು ಒಮ್ಮೆ ಮರದಡಿಯ ನೆರಳಾಗಿ, ಮತ್ತೊಮ್ಮೆ ಮರದ ಮೇಲಿನ ಹಣ್ಣಾಗಿ, ಸುಶ್ರಾವ್ಯ ಸ್ವರದಂತೆ ನೆಲಕ್ಕಿಳಿವ ಎಲೆಯಾಗಿ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತಿರುವವರ ಬೆಳಗಿನೊಂದಿಗೆ ಬೆರೆತು ನೆನಪಿನಲ್ಲಿ ನೆಲೆಗೊಳ್ಳುತ್ತದೆ. ಹಾಗೆ ಕಾಯುತ್ತಿರುವವರ ಪರ್ಸಿನಲ್ಲೊಂದು ಮರದ ತೊಟ್ಟಿಲಿನಲ್ಲಿ ಮಲಗಿ ಹಾಯಾಗಿ ನಿದ್ರಿಸುತ್ತಿರುವ ಪುಟ್ಟ ಮಗುವಿನ ಕಪ್ಪು-ಬಿಳುಪು ಭಾವಚಿತ್ರ ಬಣ್ಣದ ಕನಸುಗಳನ್ನು ಚಿತ್ರಿಸುತ್ತಿರಬಹುದು; ವೀಳ್ಯದೆಲೆ ಮಾರುವವನ ಗೋಣಿಚೀಲದೊಳಗೆ ಶಿಸ್ತಿನಿಂದ ಕುಳಿತ ಎಲೆಗಳು ಬಾಡಿಹೋಗುವ ಭಯವಿಲ್ಲದೇ ಒಂದಕ್ಕೊಂದು ಅಂಟಿಕೊಂಡಿರಬಹುದು; ಕಾಲೇಜು ಹುಡುಗಿಯ ಪುಸ್ತಕದೊಳಗಿನ ಒಣಗಿದ ಗುಲಾಬಿ ಎಲೆಗಳ ನೆನಪು ಸದಾ ಹಸಿರಾಗಿ ಚಿಗುರುತ್ತಿರಬಹುದು; ಹೈಸ್ಕೂಲು ಹುಡುಗನ ಡ್ರಾಯಿಂಗ್ ಹಾಳೆಯ ಮೇಲಿನ ಅಶ್ವತ್ಥಎಲೆಯೊಂದು ಬಣ್ಣ ತುಂಬುವ ಪೀರಿಯಡ್ಡಿಗಾಗಿ ಕಾಯುತ್ತಿರಬಹುದು; ಅಮ್ಮನಮನೆಯ ದೇವರಕಾರ್ಯಕ್ಕೆಂದು ಬಸ್ಸನ್ನೇರುತ್ತಿರುವ ಪ್ಲಾಸ್ಟಿಕ್ ಕವರಿನ ಮುಷ್ಟಿಮಣ್ಣಿನಲ್ಲಿ ನಾಗದಾಳಿಯ ಚಿಗುರೊಂದು ಬೇರುಬಿಡುತ್ತಿರಬಹುದು. ಹಾಗೆ ಪ್ರತಿದಿನವೂ ಚಲಿಸುವ ಬೆಳಗುಗಳಿಗೆ ಸಾಕ್ಷಿಯಾಗುವ ಬಸ್ ಸ್ಟಾಪಿನೆದುರಿಗಿನ ಮರ ಮಾತ್ರ ನಿಂತಲ್ಲಿಯೇ ಬೆಳೆಯುತ್ತ, ಹೊಸ ಗೂಡುಗಳಿಗೆ ಆಶ್ರಯ ನೀಡುತ್ತ ನೆನಪುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ.           ಈ ನೆನಪುಗಳು ಬೇರುಬಿಡುವ ವಿಧಾನವೂ ವಿಶಿಷ್ಟವಾದದ್ದು. ಮನದಾಳಕ್ಕೆ ಬೇರನ್ನಿಳಿಸದ ನೆನಪುಗಳು ಮುಗುಳ್ನಗೆಯ ಖಾಸಗಿ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳಲಾರವು. ನಗಣ್ಯವೆನ್ನಿಸುವ ಎಷ್ಟೋ ಸಂಗತಿಗಳು ಕಾಲಕಳೆದಂತೆ ಅತ್ಯಮೂಲ್ಯವೆನ್ನುವಂತಹ ನೆನಪುಗಳಾಗಿ ಬದಲಾಗುವುದುಂಟು; ಅಪರೂಪದ್ದೆನ್ನುವಂತಹ ಘಟನೆಗಳೂ ಕೆಲವೊಮ್ಮೆ ಕೇವಲ ಫೋಟೋ ಆಲ್ಬಮ್ಮುಗಳಲ್ಲೋ, ಮೊಬೈಲ್ ಗ್ಯಾಲರಿಯ ಯಾವುದೋ ಮೂಲೆಯಲ್ಲೋ ಉಳಿದುಹೋಗುವುದುಂಟು. ತೋಟದಂಚಿನ ಹೊಳೆಯಲ್ಲಿ ಸ್ನಾನದ ಟವೆಲ್ಲಿನಿಂದ ಹಿಡಿದ ಮೀನಿನ ಮರಿಗಳನ್ನು ಮನೆಯ ಪಕ್ಕದ ಕೆರೆಗೆ ತಂದು ಬಿಡುತ್ತಿದ್ದ ಕಾಲಹರಣದ ಕೆಲಸವೊಂದು ಎಂದೆಂದಿಗೂ ಮರೆಯಲಾಗದ ನೆನಪುಗಳ ಸಾಲಿನಲ್ಲಿ ಸೇರಿಕೊಳ್ಳಬಹುದೆಂಬ ಯೋಚನೆ ಕೂಡಾ ಬಾಲ್ಯಕ್ಕೆ ಇರಲಿಕ್ಕಿಲ್ಲ. ಸೂರ್ಯೋದಯದ ಫೋಟೋದ ಹಿಂದೆ ಮನೆ ಮಾಡಿಕೊಂಡಿದ್ದ ಗುಬ್ಬಚ್ಚಿಯ ಸಂಸಾರವೊಂದು ದಿನ ಬೆಳಗಾಗುವಷ್ಟರಲ್ಲಿ ಜಗುಲಿಯನ್ನು ತೊರೆದು ಹಾರಿಹೋಗುವುದಕ್ಕಿಂತ ಮುಂಚೆ, ಬದುಕಿನ ಅತಿ ಸುಂದರ-ರೋಮಾಂಚಕ ದೃಶ್ಯಗಳೆಲ್ಲ ಕ್ಷಣಾರ್ಧದಲ್ಲಿ ನೆನಪುಗಳಾಗಿ ರೂಪ ಬದಲಾಯಿಸಿಬಿಡಬಹುದೆನ್ನುವ ಕಲ್ಪನೆ ಯಾರ ಕಣ್ಣಳತೆಗೂ ದಕ್ಕಿರಲಿಕ್ಕಿಲ್ಲ. ಗೇರುಮರಕ್ಕೆ ಆತುಕೂತು ಇಂಗ್ಲಿಷ್ ಪದ್ಯವನ್ನು ಬಾಯಿಪಾಠ ಮಾಡಿದ್ದು, ಅತ್ತಿಮರದ ಬೇರಿನ ಮೇಲೆ ಕುಳಿತು ಹೊಳೆಯ ನೀರಿನಲ್ಲಿ ಕಾಲುಗಳನ್ನು ಇಳಿಬಿಟ್ಟು ಡೆಬಿಟ್ಟು-ಕ್ರೆಡಿಟ್ಟುಗಳನ್ನು ಬ್ಯಾಲೆನ್ಸ್ ಮಾಡಿದ್ದು ಹೀಗೆ ಎಲ್ಲ ನೆನಪುಗಳೂ ನೆಲದಾಳಕ್ಕೆ ಬೇರುಬಿಟ್ಟು ನೆಮ್ಮದಿಯ ಬದುಕು ಕಾಣುತ್ತವೆ.           ಹಾಗೆ ಬೇರುಬಿಟ್ಟ ಬದುಕು ನೆಲದುದ್ದಕ್ಕೂ ಹರಡಿಕೊಂಡು ಗಿಡವಾಗಿ ಚಿಗುರಿ, ಮರವಾಗಿ ಬೆಳೆದು ನಿಲ್ಲುತ್ತದೆ. ಹಾಗೆ ಬೆಳೆದು ನಿಂತ ಮರದ ರೆಂಬೆಯಲ್ಲೊಂದು ಕನಸುಗಳ ಜೋಕಾಲಿ ಕುಳಿತವರನ್ನೆಲ್ಲ ಜೀಕುತ್ತಿರುತ್ತದೆ; ಪೊಟರೆಯಲ್ಲೊಂದು ಪುಟ್ಟ ಹೃದಯ ಬಚ್ಚಿಟ್ಟ ಭಾವನೆಗಳೊಂದಿಗೆ ಬೆಚ್ಚಗೆ ಕುಳಿತಿರುತ್ತದೆ; ಜಗದ ಸದ್ದಿಗೆ ತಲ್ಲಣಗೊಳ್ಳದ ಎಲೆ ಆಗಸದೆಡೆಗೆ ಮುಖ ಮಾಡಿ ಭರವಸೆಯನ್ನು ಚಿಗುರಿಸುತ್ತದೆ; ಜೀವಶಕ್ತಿಯ ಮೋಹಕ ಕುಂಚ ಒಡಮೂಡಿದ ಮೊಗ್ಗಿನ ಮೇಲೆ ಬಣ್ಣದ ಎಳೆಗಳನ್ನೆಳೆಯುತ್ತದೆ; ಅರಳಿದ ಹೂವಿನ ಗಂಧ ಗಾಳಿಯೊಂದಿಗೆ ಬೆರೆತು ಹಗುರಾಗಿ ತೇಲುತ್ತ ಮೈಮರೆಯುತ್ತದೆ; ಬಲಿತ ಬೀಜ ಬಯಲ ಸೇರುವ ಹೊತ್ತು ಜಗುಲಿಯಿಂದ ಹಾರಿಬಂದ ಗುಬ್ಬಿಯ ಗೂಡು ಮರದ ಮಡಿಲು ಸೇರುತ್ತದೆ. ******************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಗೂಡಂಗಡಿಯ ತಿರುವು ಬದುಕು ಎನ್ನುವುದು ಕುದಿಯುತ್ತಿರುವ ಹಾಲಿನಂತೆ. ಚೆಲ್ಲಿಹೋಗದಂತೆ ಕಾಪಾಡುವುದು ಬೆಂಕಿಯ ಕರ್ತವ್ಯವೋ, ಪಾತ್ರೆಯ ಜವಾಬ್ದಾರಿಯೋ ಅಥವಾ ಮನೆಯೊಡತಿಯ ಉಸ್ತುವಾರಿಯೋ ಎಂದು ಯೋಚಿಸುವುದು ನಿರರ್ಥಕವಾದೀತು! ಕುದಿಯುವುದು ಹಾಲಿನ ಕರ್ತವ್ಯವಾದರೆ, ಆ ಕ್ರಿಯೆ ಅಪೂರ್ಣವಾಗದಂತೆ ಮುತುವರ್ಜಿ ವಹಿಸುವುದು ಮಹತ್ತರವೆನ್ನಬಹುದಾದಂತಹ ಕೆಲಸ. ಬದುಕು ಎನ್ನುವ ಕಾಯಕ ಪರಿಪೂರ್ಣವಾಗುವುದೇ ಅದಕ್ಕೆ ಸಂಬಂಧಪಟ್ಟ ಕ್ರಿಯೆ-ಪ್ರಕ್ರಿಯೆಗಳ ನಿರಂತರತೆಯಲ್ಲಿ. ಮಣ್ಣಿನ ಒಡಲಿನಲ್ಲಿ ಬೇರು ಬಿಡುವ ಬೀಜ ಬೆಳಕಿನಾಶ್ರಯದಲ್ಲಿ ಕುಡಿಯೊಡೆವ ಕ್ಷಣದಲ್ಲಿ ಸದ್ದಿಲ್ಲದೆ ಬಿದ್ದ ಮಳೆಹನಿಯೊಂದು ಜೀವಜಲವಾಗಿ ಹರಿದು ಚಂದದ ಹೂವನ್ನರಳಿಸುತ್ತದೆ; ಎಲ್ಲಿಂದಲೋ ಹಾರಿಬಂದ ಬಣ್ಣದ ರೆಕ್ಕೆಗಳ ಪಾತರಗಿತ್ತಿಯೊಂದು ಅರಳಿದ ಹೂವಿನ ಮೇಲೆ ಕುಳಿತು ಬಿಸಿಲುಕಾಯಿಸುತ್ತದೆ. ಹೀಗೆ ಬದುಕು ಎನ್ನುವುದು ಒಮ್ಮೆ ಕುದಿಯುತ್ತ, ಮರುಕ್ಷಣ ಚಿಗುರುತ್ತ, ಮತ್ತೊಮ್ಮೆ ಮುಕ್ತ ಛಂದಸ್ಸಿನ ಕವಿತೆಯಾಗಿ ನಮ್ಮೆದುರು ತೆರೆದುಕೊಳ್ಳುತ್ತದೆ.           ಬದುಕು ಚಿಗುರೊಡೆಯುವುದೇ ಅದು ಕಟ್ಟಿಕೊಡುತ್ತ ಹೋಗುವ ಚಿಕ್ಕಪುಟ್ಟ ಖುಷಿ-ನೆಮ್ಮದಿಗಳ ಕಾಂಪೌಂಡಿನ ಸಹಯೋಗದಲ್ಲಿ. ಬೆಳಗ್ಗೆ ಕಣ್ಣುಬಿಟ್ಟಾಗ ಅಡುಗೆಮನೆಯ ಪುಟ್ಟ ಡಬ್ಬದಲ್ಲಿ ಬೆಚ್ಚಗೆ ಕುಳಿತಿರುವ ಕಾಫಿಪುಡಿ-ಸಕ್ಕರೆಗಳೇ ಇಡೀದಿನದ ಸಂತೋಷವನ್ನು ಸಲಹಲು ಸಾಕಾಗಬಹುದು; ಮಧ್ಯಾಹ್ನದ ಬಿಸಿಲಿಗೊಂದು ತಣ್ಣನೆಯ ತಿಳಿಮಜ್ಜಿಗೆಯ ಗ್ಲಾಸು ದೊರಕಿ ನೆಮ್ಮದಿಯ ನಗುವನ್ನು ಅರಳಿಸಬಹುದು; ರಸ್ತೆಯಂಚಿನ ಹೊಂಗೆಮರದಲ್ಲೊಂದು ಹಕ್ಕಿ ಅದ್ಯಾವುದೋ ಅಪರಿಚಿತ ರಾಗದಲ್ಲಿ ಹಾಡುತ್ತ ಹೃದಯದಲ್ಲೊಂದು ಪ್ರೇಮರಾಗವನ್ನು ಹುಟ್ಟಿಸಿ ಮುದ ನೀಡಬಹುದು; ಪಕ್ಕದ ಮನೆಯ ಟೆರೇಸಿನಲ್ಲೊಬ್ಬಳು ಪುಟ್ಟ ಪೋರಿ ಕಷ್ಟಪಟ್ಟು ಗಾಳಿಪಟವನ್ನು ಹಾರಿಸುತ್ತ ಬಾಲ್ಯದ ನೆನಪುಗಳಿಗೊಂದು ರೆಕ್ಕೆ ಕಟ್ಟಿಕೊಡಬಹುದು; ಶಾಲೆ ಮುಗಿಯುತ್ತಿದ್ದಂತೆಯೇ  ತಳ್ಳುಗಾಡಿಯಲ್ಲಿ ನಗುನಗುತ್ತ ಕೊತ್ತಂಬರಿಸೊಪ್ಪು ಮಾರುವ ಪುಟ್ಟ ಹುಡುಗ ಸುಖ-ನೆಮ್ಮದಿಗಳ ಪರಿಕಲ್ಪನೆಯನ್ನೇ ಬದಲಾಯಿಸಬಹುದು. ಹೀಗೆ ನೋಟಕ್ಕೆ ದಕ್ಕುವ, ದಕ್ಕದೆಯೂ ತಾಕುವ ಸರಳವೆನ್ನಿಸುವ ಸಂಗತಿಗಳೇ ಒಟ್ಟಾಗಿ ಬದುಕು ಎನ್ನುವ ಬಹುದೊಡ್ಡ ಭಾರವನ್ನು ಹಗುರಗೊಳಿಸುತ್ತ, ಸಹ್ಯವಾಗಿಸುತ್ತ ಸಾಗುತ್ತವೆ.           ಬದುಕಿನ ಭಾರವನ್ನು ಇಳಿಸುತ್ತ ಹೋಗುವ ಕ್ರಿಯೆಯಲ್ಲಿ ಹುಟ್ಟಿಕೊಳ್ಳುವ ಅನುಭವಗಳೆಲ್ಲವೂ ಸುಂದರವೆನ್ನಿಸುವುದು ಅವು ನಮ್ಮದಾಗುತ್ತ ಹೋಗುವ ಗಳಿಗೆಗಳಲ್ಲಿ. ಚಳಿಗಾಲದ ಮುಂಜಾವಿನಲ್ಲಿ ರಸ್ತೆಬದಿಯ ಚಹದಂಗಡಿಯ ಎದುರು ನಿಂತು ಅಂಗೈಗಳನ್ನು ಉಜ್ಜಿಕೊಳ್ಳುತ್ತ, ಉಸಿರು ಬಿಗಿಹಿಡಿದು ಚಹಕ್ಕಾಗಿ ಕಾದು ನಿಂತವರನ್ನು ನೋಡುವುದೇ ಒಂದು ಸುಂದರವಾದ ಅನುಭವ. ಆ ಕ್ಷಣದ ಅವರೆಲ್ಲರ ಬದುಕು ಒಲೆಯ ಮೇಲಿನ ನೀರಿನ ಪಾತ್ರೆಯಲ್ಲಿ ಕುದಿಯುತ್ತಿರುವ ಟೀ ಪೌಡರಿನಂತೆ ಚಡಪಡಿಸುತ್ತದೆ. ರಾತ್ರಿ ಬಿದ್ದ ಕೆಟ್ಟ ಕನಸಾಗಲೀ, ಕ್ಲೈಂಟ್ ಮೀಟಿಂಗ್ ಶುರುವಾಗುವುದರೊಳಗೆ ಆಫೀಸು ಸೇರಬೇಕಾದ ಗಡಿಬಿಡಿಯಾಗಲೀ, ತಪ್ಪದೇ ತಪಾಸಣೆ ಬಯಸುವ ಸಕ್ಕರೆ ಕಾಯಿಲೆಯಾಗಲೀ, ಮಗನನ್ನು ಟ್ಯೂಷನ್ ಕ್ಲಾಸಿಗೆ ಮುಟ್ಟಿಸುವ ಧಾವಂತವಾಗಲೀ ಯಾವುದೂ ಅವರ ಆ ಕ್ಷಣದ ಬದುಕನ್ನು ಬಾಧಿಸುವುದಿಲ್ಲ. ಕದ್ದು ಸಿಗರೇಟು ಸೇದಲು ಕಲಿತ ಕಾಲೇಜು ಓದುತ್ತಿರುವ ಹುಡುಗನಿಂದ ಹಿಡಿದು ರಿಟೈರಮೆಂಟಿನ ಸುಖವನ್ನು ಅನುಭವಿಸುತ್ತಿರುವ ಗೆಳೆಯರ ಗುಂಪಿನವರೆಗೆ ಎಲ್ಲರ ದೃಷ್ಟಿಯೂ ಒಲೆಯ ಮೇಲಿನ ಪಾತ್ರೆಯ ಮೇಲೆ ಕೇಂದ್ರೀಕೃತವಾಗಿ, ಅವರೆಲ್ಲರ ಬದುಕು ಒಂದೇ ಆಗಿಬಿಡುವ ಅನುಭವವನ್ನು ಚಹಾದ ಪಾತ್ರೆ ಒದಗಿಸುತ್ತದೆ. ಆ ಗೂಡಂಗಡಿಯ ಬದುಕಿನ ವ್ಯಾಪಾರದಲ್ಲಿ ಅಪ್ಪ ಕೊಟ್ಟ ಪಾಕೆಟ್ ಮನಿಗೂ, ದಿನಗೂಲಿಯ ಮುದ್ದೆಯಾದ ನೋಟಿಗೂ, ನಾಲ್ಕಂತಸ್ತಿನ ಮನೆಯ ನೆಮ್ಮದಿಯ ಹಣಕಾಸಿನ ವ್ಯವಹಾರಕ್ಕೂ ಯಾವ ವ್ಯತ್ಯಾಸವೂ ಇರುವುದಿಲ್ಲ; ಕಾದು ನಿಂತವರೆಲ್ಲರಿಗೂ ಒಂದೇ ಬಣ್ಣ-ರುಚಿಗಳ ಚಹಾದ ಪೂರೈಕೆಯಾಗುತ್ತದೆ.           ಬದುಕಿನ ವ್ಯಾಪಾರಗಳೆಲ್ಲವೂ ಹಾಗೆಯೇ! ಬೆಳಗಾಗುತ್ತಿದ್ದಂತೆಯೇ ಬಾಗಿಲು ತೆರೆವ ಹೂವಿನಂಗಡಿಯ ಮಲ್ಲಿಗೆ ಮಾಲೆಯೊಂದು ಪಕ್ಕದಲ್ಲಿಯೇ ಇರುವ ದೇವರ ಮೂರ್ತಿಯ ಮುಡಿಗೇರಬಹುದು; ದೊಡ್ಡದೊಂದು ಪ್ಲಾಸ್ಟಿಕ್ ಕವರಿನಲ್ಲಿ ರಾಶಿಬಿದ್ದ ಸಂಪಿಗೆಹೂಗಳು ಮುಷ್ಟಿ ತುಂಬಿ ಕಾಗದದ ಪೊಟ್ಟಣದಲ್ಲಿ ಸ್ಕೂಟರನ್ನೇರಬಹುದು; ಕೆಂಪು ಗುಲಾಬಿಗಳ ಗುಚ್ಛವೊಂದು ಐಟಿ ಪಾರ್ಕಿನ ಹೂದಾನಿಯಲ್ಲಿ ಕುಳಿತು ಒಳಗೆ ಬಂದವರನ್ನು ಸ್ವಾಗತಿಸಬಹುದು; ರಾತ್ರಿಯಾಗುತ್ತಿದ್ದಂತೆ ಅಂಗಡಿಯಲ್ಲೇ ಉಳಿದುಹೋದ ಹೂಗಳೆಲ್ಲ ಮುಚ್ಚಿದ ಬಾಗಿಲುಗಳ ಹಿಂದೆ ಬಾಡಿಹೋಗುವ ಭಯದಲ್ಲಿ ಬದುಕಬಹುದು. ಒಮ್ಮೊಮ್ಮೆ ಎಲ್ಲವೂ ಪೂರ್ವನಿಶ್ಚಯವಾದಂತೆ ಭಾಸವಾಗಿ, ಮರುಕ್ಷಣವೇ ಎಲ್ಲ ಅನಿಶ್ಚಿತತೆಗಳ ಅಸ್ಪಷ್ಟ ನೆರಳುಗಳಂತೆ ಜಾಗ ಬದಲಾಯಿಸುವ ಬದುಕು ತನ್ನದೇ ಮಾರ್ಗ ಹಿಡಿದು ಮನಬಂದಂತೆ ಚಲಿಸುತ್ತದೆ. ಆ ಚಲನೆಯಲ್ಲೊಂದು ಹವಾಯಿ ಚಪ್ಪಲಿ ಸೂರ್ಯಾಸ್ತ ನೋಡಲೆಂದು ಬೆಟ್ಟದ ತುದಿಯನ್ನೇರಿ ಕುಳಿತಿರಬಹುದು; ಒಣಗಿದ ಎಲೆಯೊಂದು ಹೊಳೆಯ ಹರಿವಿನಲ್ಲಿ ಒಂದಾಗಿ ಇಳಿಜಾರಿನೆಡೆಗೆ ಚಲಿಸುತ್ತಿರಬಹುದು; ಸೈಕಲ್ಲಿನಲ್ಲೊಬ್ಬ ಐಸ್ ಕ್ರೀಮು ಮಾರುವವ ಬಾಲ್ಯದ ನೆನಪುಗಳಿಗೆ ತಣ್ಣನೆಯ ಸ್ಪರ್ಶ ನೀಡಬಹುದು; ಮುಗಿದುಹೋದ ಪ್ರೇಮದ ಹಾದಿಯ ಕವಲುದಾರಿಗಳುದ್ದಕ್ಕೂ ಗುಲ್ ಮೊಹರ್ ಗಿಡಗಳು ಮೈತುಂಬ ಹೂವರಳಿಸಿ ನಿಂತಿರಬಹುದು. ಹೀಗೆ ಎಲ್ಲ ಚಲನೆಗಳಿಗೂ ಹೊಸದೊಂದು ನೋಟವನ್ನು, ತಿರುವುಗಳನ್ನು ಒದಗಿಸುತ್ತ ಮುಂದೋಡುವ ಬದುಕು ನಿಂತಿದ್ದನ್ನು ಕಂಡವರಿಲ್ಲ.           ನೋಡುವ ಕಣ್ಣುಗಳಲ್ಲಿ ಹೊಸತನ-ಭರವಸೆಗಳನ್ನು ತುಂಬಿಕೊಳ್ಳಲು ಸಾಧ್ಯವಾದಾಗಲೆಲ್ಲ ಬದುಕು ಹೊಸಹೊಸ ನೋಟಗಳನ್ನು ಒದಗಿಸುತ್ತಲೇ ಇರುತ್ತದೆ. ಸಗಣಿ, ಒಣಹುಲ್ಲು, ತ್ಯಾಜ್ಯಗಳೇ ತುಂಬಿರುವ ಗೊಬ್ಬರಗುಂಡಿಯ ಅಂಚಿನಲ್ಲೊಂದು ಸೀತಾಫಲದ ಗಿಡ ಚಿಗುರುತ್ತಿರಬಹುದು; ಕಸದ ಗಾಡಿಯ ಹಸಿತ್ಯಾಜ್ಯಗಳ ರಾಶಿಯ ಮೇಲೊಂದು ಕಾಗೆ ಅನ್ನದ ಅಗುಳನ್ನು ಹೆಕ್ಕುತ್ತಿರಬಹುದು; ಪಾತ್ರೆಯ ತಳದಲ್ಲುಳಿದ ಚಹಾದ ಪುಡಿ ಗುಲಾಬಿ ಗಿಡದ ಬುಡವನ್ನು ಸೇರಿ ಹೊಸ ಹೂಗಳನ್ನರಳಿಸಬಹುದು; ಆಕ್ಸಿಡೆಂಟಿನಲ್ಲಿ ಮಗನನ್ನು ಕಳೆದುಕೊಂಡ ತಾಯಿಯೊಬ್ಬಳು ಸಾವಿನ ನೋವನ್ನು ಸಹಿಸಿಕೊಂಡು ನೈವೇದ್ಯಕ್ಕೆಂದು ಚಕ್ಕುಲಿ ಸುತ್ತುತ್ತಿರಬಹುದು. ಹೀಗೆ ಕುದಿವ ನೋವುಗಳು, ಒಣಗಿಹೋದ ಇರವುಗಳಿಗೆಲ್ಲ ಹೊಸ ಹೊಳಹುಗಳನ್ನು ಕರುಣಿಸುತ್ತ ಸಾಗುವ ಬದುಕಿನ ಪೆಟ್ಟಿಗೆಯಲ್ಲಿ ನೆನಪಿನ ಸುರುಳಿಯ ಕ್ಯಾಸೆಟ್ಟುಗಳು, ಸಂಬಂಧಗಳನ್ನು ಹಿಡಿದಿಟ್ಟ ಆಲ್ಬಮ್ಮುಗಳು, ಇತಿಹಾಸವನ್ನೇ ಕಟ್ಟಿಹಾಕುವಂತೆ ಕುಳಿತ ನಾಣ್ಯಗಳು ಎಲ್ಲವೂ ಸದ್ದುಮಾಡದೇ ಸ್ನೇಹ ಬೆಳಸಿಕೊಳ್ಳುತ್ತವೆ; ಗೋಡೆಯ ಮೇಲೊಂದು ಹಳೆಯ ಗಡಿಯಾರ ಸದ್ದುಮಾಡುತ್ತ ಚಲಿಸುತ್ತಿರುತ್ತದೆ.           ಹೀಗೆ ಬದುಕಿನ ಚಲನೆಗಳೆಲ್ಲವೂ ಒಮ್ಮೆ ಶಬ್ದ ಮಾಡುತ್ತ, ಮನಬಂದಾಗ ಮೌನವಾಗುತ್ತ, ನಗುನಗುತ್ತ ಹೆಜ್ಜೆಯಿಟ್ಟು ದಾರಿ ಸವೆಸುತ್ತವೆ. ಆ ದಾರಿಯ ಶುರುವಿನಲ್ಲೊಂದು ಬಾಣದ ಗುರುತಿನ ಬೋರ್ಡು ಎತ್ತಿಡುವ ಪ್ರತಿ ಹೆಜ್ಜೆಯನ್ನೂ ನಿರ್ಧರಿಸಬಹುದು; ದಾರಿಯ ಮಧ್ಯದಲ್ಲೊಂದು ತಿರುವು ಕಾಣಿಸಿಕೊಂಡು ಪೂರ್ವನಿಶ್ಚಿತ ಪಯಣವನ್ನೇ ಪ್ರಶ್ನಿಸಿಬಿಡಬಹುದು; ಇದ್ದಕ್ಕಿದ್ದಂತೆ ಎದುರಾದ ದಾರಿಹೋಕನೊಬ್ಬ ಆ ಕ್ಷಣದ ಎಲ್ಲ ಪ್ರಶ್ನೆಗಳ ಉತ್ತರವಾಗಿಬಿಡಬಹುದು; ಜೊತೆಗೆ ನಡೆದವರಲ್ಲೊಬ್ಬಿಬ್ಬರು ಮನಸಾರೆ ನಕ್ಕು ಕೈಹಿಡಿಯಬಹುದು; ಹಿಂತಿರುಗಿ ನೋಡಿದರೆ ಹಾದುಬಂದ ತಿರುವು ದೂರದಿಂದ ಕೈಬೀಸಿ ಬೀಳ್ಕೊಡಬಹುದು; ದಣಿವಾರಿಸಿಕೊಳ್ಳಲು ಕೊಂಚಹೊತ್ತು ಕಾಲುಚಾಚಿ ವಿರಮಿಸುವ ಹೊತ್ತು ಹಾದಿಬದಿಯ ಮರದ ಮೇಲೊಂದು ಮರಿಹಕ್ಕಿ ರೆಕ್ಕೆ ಬಲಿವ ಗಳಿಗೆಗಾಗಿ ಕಾಯುತ್ತಿರಬಹುದು; ಮುಂದಿನ ತಿರುವಿನಲ್ಲೊಂದು ಗೂಡಂಗಡಿಯ ಒಲೆಯ ಮೇಲೆ ಹಾಲು ಕುದಿಯುತ್ತಿರಬಹುದು! **************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ ಚಿತ್ರಕೃಪೆ: ಶ್ರೀನಿಧಿ ಡಿ.ಎಸ್.

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಬಾಗಿಲುಗಳ ಆಚೀಚೆ ಬಾಗಿಲುಗಳ ಆಚೀಚೆ ಏನೆಲ್ಲ ಇರಬಹುದು! ಹುಟ್ಟಿದ ಭಾವನೆಗಳನ್ನೆಲ್ಲ ಹುಷಾರಾಗಿ ನಿರ್ವಹಿಸುವ ಮನಸ್ಸಿನಂತೆಯೇ ಬಾಗಿಲುಗಳು ಕೂಡಾ. ಅಗತ್ಯಕ್ಕೆ, ಅವಶ್ಯಕತೆಗೆ ಅನುಗುಣವಾಗಿ ತೆರೆದುಕೊಳ್ಳುವ ಒಂದೊಂದು ಬಾಗಿಲಿಗೂ ಅದರದೇ ಆದ ಪುಟ್ಟ ಹೃದಯವೊಂದು ಇರಬಹುದು; ಆ ಹೃದಯದ ಬಡಿತಗಳೆಲ್ಲವೂ ಮನೆಯೊಳಗಿನ ಮೌನವನ್ನೋ, ಅಂಗಡಿಗಳ ವ್ಯವಹಾರವನ್ನೋ, ಸಿನೆಮಾ ಹಾಲ್ ನ ಕತ್ತಲೆಯನ್ನೋ, ರಸ್ತೆಯೊಂದರ ವಾಹನಗಳ ವೇಗವನ್ನೋ ತಮ್ಮದಾಗಿಸಿಕೊಳ್ಳುತ್ತ ಏರಿಳಿಯುತ್ತಿರಬಹುದು. ಹೀಗೆ ಎಲ್ಲ ಪ್ರಾಪಂಚಿಕ ನೋಟ-ಅನುಭವಗಳನ್ನು ತಮ್ಮದಾಗಿಸಿಕೊಳ್ಳುವ ಬಾಗಿಲುಗಳಿಗೆ ಒಮ್ಮೊಮ್ಮೆ ಕೃಷ್ಣ-ರಾಧೆಯರ, ಶಿವ-ಪಾರ್ವತಿಯರ ಹೃದಯಗಳೂ ಅಂಟಿಕೊಂಡು ಈ ಬಾಗಿಲು ಎನ್ನುವ ವಿಸ್ಮಯದ ಜಗತ್ತು ವಿಸ್ತರವಾಗುತ್ತ ಹೋಗುತ್ತದೆ. ಅವರವರ ಕಲ್ಪನೆಗಳಿಗನುಸಾರವಾಗಿ ತೆರೆದುಕೊಳ್ಳುವ ಆ ಜಗತ್ತಿನಲ್ಲಿ ವೆಲ್ ಕಮ್ ಎಂದು ಸ್ವಾಗತಿಸುವ ಡೋರ್ ಮ್ಯಾಟ್ ನಿಂದ ಹಿಡಿದು ನೀಳವಾದ ಬಳ್ಳಿಯ ನೇಯ್ಗೆಗಳ ಫ್ಲೋರ್ ಕುಷನ್ ಗಳವರೆಗೂ ಹೊಸಹೊಸ ಸ್ಪರ್ಶಗಳು ನಿಲುಕುತ್ತವೆ; ಚುಕ್ಕಿಯಿಟ್ಟು ಎಳೆದ ರಂಗೋಲಿಯ ಸಾಲುಗಳ ಮಧ್ಯೆ ಹುಟ್ಟಿದ ಹೂವೊಂದು ಡಿಸೈನರ್ ಬ್ಲೌಸ್ ಗಳನ್ನು ಅಲಂಕರಿಸುತ್ತದೆ; ತೋರಣದೊಂದಿಗೆ ತೂಗುವ ಮಲ್ಲಿಗೆ ಮಾಲೆಯ ಗಂಧ ಗಾಳಿ ಹರಿದಲ್ಲೆಲ್ಲ ಹರಿದು ಹೃದಯಗಳನ್ನು ಅರಳಿಸುತ್ತದೆ.           ಈ ಹೃದಯಗಳಿಗೂ ಬಾಗಿಲುಗಳಿಗೂ ಒಂದು ರೀತಿಯ ವಿಶಿಷ್ಟವಾದ ಸಂಬಂಧವಿರುವಂತೆ ಭಾಸವಾಗುತ್ತದೆ. ಈ ಸಂಬಂಧವನ್ನು ಮನುಷ್ಯ ಸಹಜವಾದ ರಾಗ-ದ್ವೇಷಗಳನ್ನೊಳಗೊಂಡ ಎಲ್ಲ ಭಾವನೆಗಳೂ ಒಂದಿಲ್ಲೊಂದು ರೂಪದಲ್ಲಿ ಸಲಹುತ್ತಿರುತ್ತವೆ. ಸಂಜೆಯ ಸಮಯದಲ್ಲೊಮ್ಮೆ ಬಾಲ್ಯವನ್ನು ಸುಂದರವಾಗಿ ರೂಪಿಸಿದ ಪ್ರೈಮರಿಯ ಅಥವಾ ಹೈಸ್ಕೂಲಿನ ಅಂಗಳದಲ್ಲಿ ಹೋಗಿ ನಿಂತರೆ ಮುಚ್ಚಿದ ಬಾಗಿಲುಗಳ ಹಿಂದಿರುವ ಅದೆಷ್ಟೋ ಬಗೆಬಗೆಯ ಭಾವನೆಗಳು ಹೃದಯವನ್ನು ತಾಕುತ್ತವೆ. ಮನೆಯಿಂದ ಶಾಲೆಯವರೆಗಿನ ದೂರವನ್ನು ಇದ್ದೂ ಇಲ್ಲದಂತಾಗಿಸಿದ ಗೆಳತಿಯರ ಗುಂಪು, ಪೇಪರಿನಲ್ಲಿ ಸುತ್ತಿ ಕಂಪಾಸು ಬಾಕ್ಸಿನಲ್ಲಿ ಭದ್ರವಾಗಿಟ್ಟಿದ್ದ ಎರಡೇ ಎರಡು ಪೆಪ್ಪರಮೆಂಟುಗಳನ್ನು ಶರ್ಟಿನ ಮಧ್ಯದಲ್ಲಿಟ್ಟು ಎಂಜಲು ತಾಗದಂತೆ ಚೂರು ಮಾಡಿ ಎಲ್ಲರಿಗೂ ಹಂಚುತ್ತಿದ್ದ ಎರಡನೇ ಕ್ಲಾಸಿನ ಹುಡುಗ, ಮಾರ್ಕ್ಸ್ ಕಾರ್ಡುಗಳಿಂದ ಹಿಡಿದು ಶಾಲೆಯ ಜಾತಕವನ್ನೆಲ್ಲ ಬಚ್ಚಿಟ್ಟುಕೊಂಡಿರುತ್ತಿದ್ದ ದೊಡ್ಡದೊಡ್ಡ ಕೀಗೊಂಚಲುಗಳ ಕಬ್ಬಿಣದ ಕಪಾಟು, ತೆರೆದ ಕಿಟಕಿಯ ಬಾಗಿಲುಗಳಿಂದ ನುಸುಳಿ ನೋಟ್ ಬುಕ್ ನ ಪುಟಗಳನ್ನು ನೆನೆಸುತ್ತಿದ್ದ ಮಳೆಹನಿಗಳು, ಹೀಗೆ ಮುಚ್ಚಿದ ಬಾಗಿಲಾಚೆಗಿನ ನೆನಪುಗಳೆಲ್ಲವೂ ವಿಧವಿಧದ ಭಾವನೆಗಳನ್ನು ಹೊತ್ತು ಅಂಗಳಕ್ಕಿಳಿಯುತ್ತವೆ. ಆ ಎಲ್ಲ ಭಾವನೆಗಳನ್ನು ಹೊತ್ತ ಹೃದಯ ಭಾರವಾಗುವುದು ಅಥವಾ ಹೃದಯದ ಭಾರವನ್ನೆಲ್ಲ ಅಂಗಳದಲ್ಲಿಳಿಸಿ ಹಗುರವಾಗುವುದು ಅವರವರ ಗ್ರಹಿಕೆಗಳನ್ನು ಅವಲಂಬಿಸಿರುವಂಥದ್ದು.           ಈ ಗ್ರಹಿಕೆ ಎನ್ನುವುದು ಕೆಲವೊಮ್ಮೆ ಯಾವ ತರ್ಕಕ್ಕೂ ನಿಲುಕದೆ ತನ್ನ ಪಾಡಿಗೆ ತಾನು ವಿಹರಿಸುತ್ತ, ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತದೆ. ದೇವರ ಕುರಿತಾಗಿ ಒಬ್ಬೊಬ್ಬರ ಗ್ರಹಿಕೆಯೂ ಒಂದೊಂದು ತೆರನಾದದ್ದು. ಭಕ್ತಿರಸವನ್ನೇ ಗ್ರಹಿಕೆಯ ಅಂತಸ್ಸಾರವನ್ನಾಗಿಸಿಕೊಂಡ ಭಕ್ತನೊಬ್ಬ ತನ್ನ ದೈನಂದಿನ ಚಟುವಟಿಕೆಗಳೆಲ್ಲವನ್ನೂ ಬೇಸರವಿಲ್ಲದೆ ದೇವರಿಗೆ ಅರ್ಪಿಸಬಹುದು; ತನ್ನೆಲ್ಲ ಗ್ರಹಿಕೆಗಳ ಮೇಲೆ ನಿಯಂತ್ರಣ ಸಾಧಿಸಿದವನಿಗೆ ದೇವರ ಪರಿಕಲ್ಪನೆ ಕೇವಲ ನೆಮ್ಮದಿಯ ವಿಷಯವಾಗಿರಬಹುದು; ನಾಸ್ತಿಕನಿಗೆ ದೇವರು ಎನ್ನುವುದೊಂದು ಮೂರ್ಖತನದ ಆಲೋಚನೆಯೆನ್ನಿಸಬಹುದು. ಆದರೆ ದೇವಸ್ಥಾನದ ಗರ್ಭಗುಡಿಯ ಮುಚ್ಚಿದ ಬಾಗಿಲುಗಳ ಎದುರು ನಿಂತು ಬಾಗಿಲುಗಳು ತೆರೆಯುವ ಸಮಯಕ್ಕಾಗಿ ಕಾದುನಿಂತಾಗ, ವಿಚಿತ್ರವಾದ ಭಯ-ಭಕ್ತಿಗಳೆರಡೂ ಕೂಡಿದ ಭಾವನೆಯೊಂದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಹಾಗೆ ಕಾದುನಿಂತ ಸಮೂಹದಲ್ಲಿ ಹೊಸದಾಗಿ ಮದುವೆಯಾದ ಜೋಡಿಯೊಂದು ನಸುನಾಚಿ ನಿಂತಿರುತ್ತದೆ; ಹರಕೆ ಹೊತ್ತು ಮಗುವನ್ನು ಪಡೆದ ತಾಯಿಯೊಬ್ಬಳು ಮಗುವಿನೊಂದಿಗೆ ಕೈ ಜೋಡಿಸಿ ನಿಂತಿರುತ್ತಾಳೆ; ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ತನ್ನ ಔಷಧಿಗಳ ಕೈಚೀಲದೊಂದಿಗೆ ಕಳವಳದಲ್ಲಿಯೇ ಕಾಯುತ್ತಿರುತ್ತಾನೆ; ನಾಸ್ತಿಕನಾದ ಪತ್ರಿಕಾ ವರದಿಗಾರನೊಬ್ಬ ದೇವಸ್ಥಾನದ ಬಗ್ಗೆ ವರದಿಯೊಂದನ್ನು ಬರೆಯಲು ದೇವರ ಮುಖದರ್ಶನಕ್ಕಾಗಿ ಅದೇ ಸಾಲಿನಲ್ಲಿ ನಿಂತಿರುತ್ತಾನೆ. ಎಲ್ಲ ನಿರೀಕ್ಷೆಗಳ ಏಕೈಕ ಉತ್ತರವೆನ್ನುವಂತೆ ತೆರೆದುಕೊಳ್ಳುವ ಬಾಗಿಲುಗಳು ಎಲ್ಲರಿಗೂ ಅವರವರಿಗೆ ಬೇಕಾದ ಸಮಾಧಾನವನ್ನು ಒದಗಿಸುತ್ತವೆ. ಮುಚ್ಚಿದ ಬಾಗಿಲುಗಳ ಹಿಂದೆ ಇದ್ದ ದೇವರು ಮುಂಭಾಗದಲ್ಲಿ ಕಾಯುತ್ತಿದ್ದವರೊಂದಿಗೆ ಮುಖಾಮುಖಿಯಾಗಿ ಎಲ್ಲರ ಮನಸ್ಸಿನ ತಲ್ಲಣಗಳನ್ನೂ ತನ್ನದಾಗಿಸಿಕೊಳ್ಳುತ್ತಾನೆ.           ಹೀಗೆ ಎಲ್ಲರ ತಲ್ಲಣಗಳನ್ನು ತಣಿಸುವ, ಕಳವಳಗಳನ್ನು ಕಡಿಮೆ ಮಾಡುವ, ಸಮಾಧಾನದ ಸಾಧನಗಳಾಗುವ ಬಾಗಿಲುಗಳು ತಮ್ಮ ಹೃದಯದ ಭಾರವನ್ನೆಂದೂ ಇನ್ನೊಬ್ಬರಿಗೆ ವರ್ಗಾಯಿಸುವುದಿಲ್ಲ. ಗಾಳಿಯೊಂದಿಗೆ ಬಾಗಿಲವರೆಗೂ ತಲುಪುವ ಮಳೆಯ ನೀರು ಒಳಗಿಳಿಯದಂತೆ ತನ್ನೆಲ್ಲ ಶಕ್ತಿಯನ್ನೂ ಬಳಸಿ ತಡೆಹಿಡಿಯುವ ಬಾಗಿಲು ಮನೆಯೊಳಗಿನ ಜೀವಗಳನ್ನು ಬೆಚ್ಚಗಿಡುತ್ತದೆ; ಕೊರೆವ ಚಳಿಯನ್ನು, ಬೇಸಿಗೆಯ ಸೆಕೆಯನ್ನು ತನ್ನದಾಗಿಸಿಕೊಂಡು ತನ್ನನ್ನು ನಂಬಿದವರ ನಂಬಿಕೆಯನ್ನು ಕಾಪಾಡುತ್ತ ದೇವನೊಬ್ಬನ ಇರುವಿಕೆಯ ಸಾಕ್ಷಾತ್ಕಾರವನ್ನು ಗಟ್ಟಿಗೊಳಿಸುತ್ತದೆ. ನಂಬಿಕೆಯ ಪರಿಕಲ್ಪನೆಯೂ ಬಾಗಿಲುಗಳೊಂದಿಗೆ ತನ್ನದೇ ಆದ ಸಂಬಂಧವನ್ನು ಬೆಳಸಿಕೊಂಡಿದೆ. ರಾತ್ರಿಯಾಯಿತೆಂದು ಕದ ಮುಚ್ಚುವ ಪ್ರತಿ ಮನಸ್ಸಿನಲ್ಲಿಯೂ ಬೆಳಗು ಮೂಡಿ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ ಕೆಲಸ ಮಾಡಿದರೆ, ನಗರದ ಬಾಡಿಗೆ ಮನೆಯಲ್ಲಿನ ಗೃಹಿಣಿಯೊಬ್ಬಳು ಗಂಡನನ್ನು ಕೆಲಸಕ್ಕೆ ಕಳುಹಿಸಿ ಬಾಗಿಲು ಮುಚ್ಚಿ ಸಂಜೆ ಆತ ಮನೆಗೆ ಬರುವ ನಂಬಿಕೆಯಲ್ಲಿಯೇ ತರಕಾರಿ ಹೆಚ್ಚುತ್ತಾಳೆ; ಮಗುವನ್ನು ಹತ್ತಿಸಿಕೊಂಡ ಸ್ಕೂಲ್ ವ್ಯಾನಿನ ಬಾಗಿಲಿನೊಂದಿಗೆ ಮಗುವಿನ ಭವಿಷ್ಯದ ನಂಬಿಕೆಯೊಂದು ಚಲಿಸಿದರೆ, ದಿನಸಿಯಂಗಡಿಯ ಬಾಗಿಲು ತೆರೆವ ಹುಡುಗನೊಬ್ಬ ಗಿರಾಕಿಗಳನ್ನು ನಂಬಿಕೊಂಡು ಅಗರಬತ್ತಿಯನ್ನು ಹಚ್ಚುತ್ತಾನೆ; ಮಲ್ಟಿಪ್ಲೆಕ್ಸ್ ನ ಎಸಿ ಥಿಯೇಟರಿನ ಬಾಗಿಲುಗಳು ಯಾರೋ ಸಮುದ್ರದಂಚಿಗೆ ಕೂತು ಬರೆದ ಕಥೆಯನ್ನು ನಂಬಿಕೊಂಡರೆ, ಬಂಗಾರದಂಗಡಿಯ ಬಾಗಿಲುಗಳು ಇನ್ಯಾರದೋ ಮದುವೆಯನ್ನು ನಂಬಿಕೊಂಡು ತೆರೆದುಕೊಳ್ಳುತ್ತವೆ. ಹೀಗೆ ನೇರ ಸಂಬಂಧವೂ ಇಲ್ಲದ, ಪರಿಚಯವೂ ಇಲ್ಲದ ಅದೆಷ್ಟೋ ನಂಬಿಕೆಗಳನ್ನು ಬಾಗಿಲುಗಳು ಅರಿವಿಲ್ಲದೆಯೇ ಸಲಹುತ್ತಿರುತ್ತವೆ.           ಸಂಬಂಧಗಳನ್ನು ಬಾಗಿಲುಗಳು ಪೊರೆಯುವ ರೀತಿಯೂ ವಿಶಿಷ್ಟವಾದದ್ದು. ಹೆರಿಗೆ ಆಸ್ಪತ್ರೆಯ ಮುಚ್ಚಿದ ಬಾಗಿಲುಗಳು ತೆರೆಯುತ್ತಿದ್ದಂತೆಯೇ, ಮಗುವಿನ ಅಳುವೊಂದು ಅಪ್ಪ-ಮಗುವಿನ ಸಂಬಂಧವನ್ನು ಹುಟ್ಟುಹಾಕುತ್ತದೆ. ಹಾಗೆ ಹುಟ್ಟಿದ ಸಂಬಂಧ ಮನೆಯ ಬಾಗಿಲನ್ನು ಹಾದು, ಶಾಲೆಯ ಬಾಗಿಲನ್ನು ತಲುಪಿ, ಕಾಲೇಜು-ಯೂನಿವರ್ಸಿಟಿಗಳ ಕದ ತಟ್ಟಿ, ಹೊಸಹೊಸ ಸಂಬಂಧಗಳೊಂದಿಗೆ ಬೆಸೆದುಕೊಳ್ಳುತ್ತ ಹೊಸತನವನ್ನು ಕಂಡುಕೊಳ್ಳುತ್ತದೆ. ಅಳುತ್ತಲೇ ಮಗಳನ್ನು ಗಂಡನ ಮನೆಯ ಬಾಗಿಲಿಗೆ ಕಳುಹಿಸಿಕೊಡುವ ಅಪ್ಪ, ನಗುನಗುತ್ತ ಸೊಸೆಯನ್ನು ತೆರೆದ ಬಾಗಿಲಿನಿಂದ ಸ್ವಾಗತಿಸುತ್ತಾನೆ. ಹೀಗೆ ಹೆರಿಗೆ ಆಸ್ಪತ್ರೆಯ ಬಾಗಿಲಿನಿಂದ ಹೊರಬಂದ ಮಗುವಿನ ಅಳು ಸಂತೋಷವನ್ನು ಹಂಚಿ, ಬೆಳವಣಿಗೆ-ಬದಲಾವಣೆಗಳನ್ನು ತನ್ನದಾಗಿಸಿಕೊಳ್ಳುತ್ತ, ಸಂಬಂಧಗಳಿಗೊಂದು ಹೊಸ ಸ್ವರೂಪವನ್ನು ಒದಗಿಸುತ್ತದೆ. ಆಫೀಸಿನ ಕೊಟೇಷನ್, ಪ್ರೊಜೆಕ್ಟ್ ಗಳ ಗೌಪ್ಯತೆಯನ್ನು ಕಾಪಾಡಲು ತಾವಾಗಿಯೇ ಮುಚ್ಚಿಕೊಳ್ಳುವ ಬಾಗಿಲುಗಳ ಆಚೀಚೆ ಅಕ್ಕ-ತಮ್ಮಂದಿರು, ಜೀವದ ಗೆಳತಿಯರು, ಸಿಗರೇಟಿಗೆ ಜೊತೆಯಾಗುವ ಸ್ನೇಹಿತರು ವಯಸ್ಸು ಮರೆತು ಒಂದಾಗುತ್ತಾರೆ; ಲಿವ್ ಇನ್ ಸಂಬಂಧಗಳು, ದಾಂಪತ್ಯಗಳು, ಭಗ್ನಪ್ರೇಮಗಳು ಎಲ್ಲವುಗಳಿಗೂ ಬಾಗಿಲುಗಳು ತೆರೆದ ಹೃದಯದಿಂದ ಸ್ಪಂದಿಸುತ್ತವೆ. ರೆಸ್ಟ್ ರೂಮಿನ ಮುಚ್ಚಿದ ಬಾಗಿಲುಗಳ ಹಿಂದೆ ಉದ್ದನೆಯ ಕನ್ನಡಿಯ ಮುಂದೆ ಲಿಪ್ ಸ್ಟಿಕ್ ಸರಿಮಾಡಿಕೊಳ್ಳುತ್ತ ನಿಂತ ಹುಡುಗಿಯೊಬ್ಬಳು ವೀಕೆಂಡ್ ಪಾರ್ಟಿಯ ಬಗ್ಗೆ ಯೋಚಿಸಿದರೆ, ಕ್ಯಾಂಟೀನಿನ ಅಡುಗೆಮನೆಯ ಬಾಗಿಲಿನ ಹಿಂದೆ ಮಸಾಲೆದೋಸೆ ರೆಡಿಯಾಗುತ್ತಿರುತ್ತದೆ. ಶಿಫ್ಟ್ ಮುಗಿದು ಫ್ಲೋರಿನ ಲೈಟುಗಳೆಲ್ಲ ತಾವಾಗಿಯೇ ಆರಿಹೋದ ಮೇಲೂ ಬಾಗಿಲುಗಳು ಮಾತ್ರ ಡ್ರಾದಲ್ಲಿನ ಡಾಕ್ಯುಮೆಂಟುಗಳನ್ನು, ಮೀಟಿಂಗ್ ರೂಮಿನ ಮಾತುಕತೆಗಳನ್ನು ಜತನದಿಂದ ಕಾಪಾಡುತ್ತ ಮುಂದಿನ ಪಾಳಿಗಾಗಿ ಕಾಯುತ್ತಿರುತ್ತವೆ. ಆಚೀಚೆ ಸರಿದಾಡುವ ಶಾಪಿಂಗ್ ಮಾಲ್ ನ ಗಾಜಿನ ಬಾಗಿಲುಗಳ ಹಿಂದೆ ಅತ್ತರಿನ ಬಾಟಲಿಯೊಂದು ಗಿಫ್ಟಾಗಿ ಸಂಬಂಧಗಳನ್ನು ಸಲಹಿದರೆ, ಬ್ರ್ಯಾಂಡೆಡ್ ಚಪ್ಪಲಿಯೊಂದು ಪಾದಗಳ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತದೆ; ವಿದೇಶದ ಕನಸು ಹೊತ್ತ ಕಾರ್ಪೊರೇಟ್ ಉದ್ಯೋಗಿಯೊಬ್ಬ ಟ್ರಾವೆಲ್ ಬ್ಯಾಗ್ ಖರೀದಿಸಿದರೆ, ನಿವೃತ್ತ ಪ್ರಾಧ್ಯಾಪಕರೊಬ್ಬರು ಪುಸ್ತಕದಂಗಡಿಯ ಬಾಗಿಲನ್ನು ತಲುಪುತ್ತಾರೆ. ಹೀಗೆ ಹೊಸ ಸಂಬಂಧಗಳಿಗೆ ತೆರೆದುಕೊಳ್ಳುತ್ತ, ಮುಗಿದುಹೋದ ಸಂಬಂಧಗಳ ನೆನಪುಗಳನ್ನು ನವೀಕರಿಸುತ್ತ, ಅಗತ್ಯಬಿದ್ದಾಗ ಗುಟ್ಟುಗಳನ್ನು ಕಾಪಾಡುತ್ತ, ತಮ್ಮ ಕರ್ತವ್ಯಗಳನ್ನೆಲ್ಲ ಚಾಚೂತಪ್ಪದೆ ನಿರ್ವಹಿಸುವ ಬಾಗಿಲುಗಳ ಆಚೀಚೆ ಬದುಕುಗಳು ನಿರಾಯಾಸವಾಗಿ ಕಾಲು ಚಾಚುತ್ತವೆ. ******************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಸಂಪ್ರೋಕ್ಷಣ

ಅಂಕಣ ಬರಹ ಹೂವು ಹೊರಳುವ ಹಾದಿ ಬಾಲ್ಕನಿ ಎಂದಾಗಲೆಲ್ಲ ನನಗೆ ಹೂವಿನ ಕುಂಡಗಳು ನೆನಪಾಗುತ್ತವೆ. ಪುಟ್ಟಪುಟ್ಟ ಕುಂಡಗಳ ಕೆಂಪು ಗುಲಾಬಿ, ಗುಲಾಬಿ ಬಣ್ಣದ ನುಣುಪಾದ ಕುಂಡಗಳಲ್ಲರಳಿದ ದುಂಡು ಮಲ್ಲಿಗೆ, ದುಂಡನೆಯ ಕುಂಡದಲ್ಲೊಂದು ಹಸುಗೂಸಿನಂಥ ಮೊಳಕೆ, ಮೊಳಕೆಯೊಂದು ಮೊಗ್ಗಾಗುವ ಪ್ರಕ್ರಿಯೆ ಹೀಗೆ ಹೂಗಳ ದೊಡ್ಡದೊಂದು ಪ್ರಪಂಚವೇ ಪುಟ್ಟ ಬಾಲ್ಕನಿಯಲ್ಲಿ ಎದುರಾಗುತ್ತದೆ. ಅರಳಿಯೂ ಅರಳದಂತಿರುವ ಕೆಂಪು ದಾಸವಾಳ ಬೆಳಗನ್ನು ಸ್ವಾಗತಿಸಿದರೆ, ಮುಳುಗುವ ಸೂರ್ಯನನ್ನು ಮಲ್ಲಿಗೆಯ ಪರಿಮಳ ಬೀಳ್ಕೊಡುತ್ತದೆ; ಮಧ್ಯರಾತ್ರಿಯಲ್ಲಿ ಅರಳಿದ ಬ್ರಹ್ಮಕಮಲಗಳೆಲ್ಲ ಚಂದಿರನಿಗೆ ಜೊತೆಯಾಗುತ್ತವೆ. ಸಮಯ ಸಿಕ್ಕಾಗ ಹೂಬಿಡುವ ನಾಗದಾಳಿ, ಡೇರೆಗಳೆಲ್ಲ ನಿತ್ಯವೂ ಅರಳುವ ನಿತ್ಯಪುಷ್ಪದೊಂದಿಗೆ ಸ್ನೇಹ ಬೆಳೆಸುತ್ತವೆ. ಹೀಗೆ ಎಲ್ಲೆಗಳನ್ನೆಲ್ಲ ಮೀರಿದ ಬಣ್ಣಬಣ್ಣದ ಸ್ನೇಹಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತದೆ.           ಸ್ನೇಹ ಎನ್ನುವುದೊಂದು ಸುಂದರ ಸಂಜೆಯಂಥ ಅನುಭವ. ಹಸಿರು ಹುಲ್ಲಿನ ಬೆಟ್ಟಗಳ ಅಂಚಿನಲ್ಲಿ, ಉದ್ದಗಲಕ್ಕೂ ಹರಡಿಕೊಂಡ ಸಮುದ್ರದ ಮಧ್ಯದಲ್ಲಿ, ಆಗಸಕ್ಕೆ ಅಂಟಿಕೊಂಡಂತಿರುವ ಅಪಾರ್ಟ್ಮೆಂಟಿನ ಹೆಲಿಪ್ಯಾಡ್ ಪಕ್ಕದಲ್ಲಿ, ಕಾಫಿಯ ಘಮಕ್ಕೆ ಜೊತೆಯಾಗುವ ಕಾದಂಬರಿಯ ಸಂಜೆಯ ವರ್ಣನೆಯಲ್ಲಿ, ಮೊಬೈಲಿನ ಗ್ಯಾಲರಿಯ ಸನ್ ಸೆಟ್ ವಿಡಿಯೋಗಳಲ್ಲಿ ಇಂಚಿಂಚೇ ಮರೆಯಾಗುವ ಸೂರ್ಯನ ಸೌಂದರ್ಯವೇ ಸ್ನೇಹಕ್ಕೂ ಲಭ್ಯವಾಗಿದೆ. ಸೂರ್ಯ ಹುಟ್ಟುವ, ಮುಳುಗುವ ಪ್ರಕ್ರಿಯೆಗಳೆಲ್ಲ ಕಲ್ಪನೆಗಳಲ್ಲಿ ಬಗೆಬಗೆಯ ರೂಪ ಪಡೆಯುವಂತೆ ಸ್ನೇಹದ ಭಾವನೆಯೂ ಅವರವರ ಕಲ್ಪನೆಗಳಿಗನುಸಾರವಾಗಿ ವಿಸ್ತರವಾಗುತ್ತ ಹೋಗುತ್ತದೆ. ಇಂಗುಗುಂಡಿಗಳ ನಿಂತ ನೀರಿನೊಂದಿಗೆ ಕಪ್ಪೆಯ ಸಂಸಾರ ಸ್ನೇಹ ಬೆಳಸಿಕೊಂಡರೆ, ಏಲಕ್ಕಿಯ ಸುಳಿಗಳ ನಡುವಿನಲ್ಲೊಂದು ಹಸಿರುಹಾವು ಸದ್ದುಮಾಡದೆ ಸರಿದಾಡುತ್ತದೆ; ನಂದಾದೀಪದ ಬತ್ತಿಯೊಂದು ಎಣ್ಣೆಯೊಂದಿಗೆ ಸ್ನೇಹವನ್ನು ಬೆಳಸಿದರೆ, ತೀರ್ಥದ ತಟ್ಟೆಯಲ್ಲೊಂದು ತುಳಸಿದಳ ತಣ್ಣಗೆ ತೇಲುತ್ತಿರುತ್ತದೆ; ಸ್ನೇಹದಿನದ ಮೆಸೇಜೊಂದು ಮೊಬೈಲ್ ತಲುಪುವ ವೇಳೆ, ನೆನಪಿನ್ನಲ್ಲಷ್ಟೇ ಉಳಿದುಹೋದ ಸ್ನೇಹವೊಂದು ಮುಗುಳ್ನಗೆಯನ್ನು ಅರಳಿಸುತ್ತದೆ; ಎರೆಹುಳುವಿನೊಂದಿಗಿನ ಹೂವಿನ ಸ್ನೇಹ ನೀರಿನ ಸಖ್ಯದಲ್ಲಿ ಜೀವಂತವಾಗಿರುತ್ತದೆ.           ಈ ಜೀವಂತಿಕೆಯ ಪರಿಕಲ್ಪನೆಯಲ್ಲಿ ಹೂವಿಗೊಂದು ವಿಶೇಷ ಮಹತ್ವ ಪ್ರಾಪ್ತಿಯಾಗಿದೆ. ದೇವರ ತಲೆಯಿಂದುದುರಿ ಪ್ರಸಾದದ ರೂಪ ಪಡೆದುಕೊಳ್ಳುವ ಹೂವಿನಿಂದ ಹಿಡಿದು ಪಬ್ಬಿನ ರಿಸೆಪ್ಷನ್ನಿನ ಹೂದಾನಿಗಳವರೆಗೂ ಬಗೆಬಗೆಯಾಗಿ ಹರಡಿಕೊಳ್ಳುವ ಹೂವುಗಳು ಸ್ನೇಹ ಪ್ರೇಮ ಸೌಂದರ್ಯಗಳ ಜೀವಂತಿಕೆಯಲ್ಲಿ, ಧಾರ್ಮಿಕತೆಯ ಭಾವನೆಗಳಲ್ಲಿ, ಆಧುನಿಕತೆಯ ಮನಸ್ಥಿತಿಯಲ್ಲಿ ತಮ್ಮದೇ ಮಹತ್ವವನ್ನು ಉಳಿಸಿಕೊಂಡಿವೆ. ಸ್ನೇಹಿತೆಯೊಬ್ಬಳು ತನ್ನ ಮನೆಯಂಗಳದಲ್ಲಿ ಅರಳಿದ ಹೂವಿನ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸುವ ಹೊತ್ತು, ಪ್ರೇಮಿಯ ಹೃದಯದಲ್ಲೊಂದು ಕೆಂಪು ಗುಲಾಬಿ ಅರಳುತ್ತದೆ; ಹೆಣ್ಣನ್ನು ವರ್ಣಿಸಲು ಪದಗಳೇ ಸಿಗದ ಕವಿಯೊಬ್ಬ ಹೂವಿನೊಂದಿಗೆ ಹೋಲಿಸಿ, ಅವರವರ ಭಾವಕ್ಕೆ ತಕ್ಕ ಸೌಂದರ್ಯದ ಪರಿಕಲ್ಪನೆಗಳನ್ನು ಹುಟ್ಟುಹಾಕುತ್ತಾನೆ; ಕೆಸರಿನಲ್ಲಿ ಅರಳಿದ ಕಮಲವೊಂದು ಸಾರ್ಥಕತೆಯ ಭಾವದಲ್ಲಿ ದೇವರ ಮುಡಿಗೇರುತ್ತದೆ; ಬರ್ಥ್ ಡೇ ಪಾರ್ಟಿಗಳ ಉಡುಗೊರೆಗಳೊಂದಿಗೆ ಹೂಗುಚ್ಛಗಳು ನಳನಳಿಸುತ್ತವೆ. ಹೀಗೆ ಹೂವು ಎನ್ನುವ ಸುಂದರ ಸೃಷ್ಟಿ ಎಲ್ಲರ ಭಾವ-ಭಕ್ತಿಗಳಿಗೆ ನಿಲುಕುತ್ತ, ಸಂಬಂಧಗಳಿಗೆ ಹೊಸ ಆಯಾಮವನ್ನು ಒದಗಿಸುತ್ತ, ಸುಂದರವಾದ ನೆನಪುಗಳನ್ನು ಹುಟ್ಟುಹಾಕುತ್ತದೆ.           ಆ ನೆನಪುಗಳಲ್ಲಿ ಕನ್ನಡ ಶಾಲೆಯ ಉದ್ದ ಜಡೆಯ ಅಕ್ಕೋರಿನ ನೆನಪೂ ಸೇರಿಕೊಂಡಿದೆ. ಪ್ರೈಮರಿ ಸ್ಕೂಲಿನ ಟೀಚರನ್ನು ಮಕ್ಕಳಷ್ಟೇ ಅಲ್ಲದೇ ಊರಿನವರೆಲ್ಲ ಅಕ್ಕೋರು ಎಂದೇ ಕರೆಯುತ್ತಿದ್ದರು. ಟೀಚರುಗಳ ಹೆಸರಿನ ಮುಂದೆ ಅಕ್ಕೋರು ಎಂದು ಸೇರಿಸಿದರೆ ಅವರು ಆ ಭಾಗದ ಪ್ರೈಮರಿ ಟೀಚರೆನ್ನುವುದು ಎಲ್ಲರಿಗೂ ಅರ್ಥವಾಗುತ್ತಿತ್ತು. ಶಾಲೆಯಿಂದ ಸ್ವಲ್ಪ ದೂರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಮ್ಮ ಉದ್ದ ಜಡೆಯ ಅಕ್ಕೋರು ಕಾಲ್ನಡಿಗೆಯಲ್ಲೇ ಶಾಲೆಗೆ ಬರುತ್ತಿದ್ದರು. ಅವರು ಬರುವ ಸಮಯಕ್ಕೆ ಸರಿಯಾಗಿ ಅವರನ್ನು ಸೇರಿಕೊಳ್ಳುತ್ತಿದ್ದ ನಾವೆಲ್ಲ ಜಡೆಯನ್ನು ನೋಡಲೆಂದೇ ಅವರಿಂದ ನಾಲ್ಕು ಹೆಜ್ಜೆ ಹಿಂದೆಯೇ ಉಳಿಯುತ್ತಿದ್ದೆವು. ಸೀರೆಯ ಬಣ್ಣಕ್ಕೆ ಹೊಂದುವಂತಹ ರಬ್ಬರ್ ಬ್ಯಾಂಡನ್ನೋ, ಲವ್ ಇನ್ ಟೋಕಿಯೋ ಹೇರ್ ಬ್ಯಾಂಡನ್ನೋ ಧರಿಸುತ್ತಿದ್ದ ಅವರ ಜಡೆಯ ಸೌಂದರ್ಯದ ಚರ್ಚೆ ಊರಿನ ಮನೆಮನೆಗಳಲ್ಲಿಯೂ ಆಗುತ್ತಿತ್ತು.           ಪ್ರತಿದಿನ ಬೆಳಿಗ್ಗೆ ಅಮ್ಮ ತೆಂಗಿನೆಣ್ಣೆಯನ್ನು ಹಚ್ಚಿ ತಲೆ ಬಾಚಿ ಎರಡೂ ಜಡೆಗಳನ್ನು ರಿಬ್ಬನ್ನಿನಿಂದ ಮಡಚಿ ಕಟ್ಟಿ, ಆಯಾ ಸೀಸನ್ನಿನಲ್ಲಿ ಅರಳುತ್ತಿದ್ದ ಹೂವನ್ನು ಮುಡಿಸುತ್ತಿದ್ದಳು. ಹಾಗೆ ಅಮ್ಮ ನನಗಾಗಿ ಹೂ ಕೊಯ್ಯುವಾಗಲೆಲ್ಲ ನಾನು ಅಕ್ಕೋರ ಸಲುವಾಗಿಯೂ ಹೂವೊಂದನ್ನು ಎತ್ತಿಟ್ಟುಕೊಳ್ಳುತ್ತಿದ್ದೆ. ಮಳೆಗಾಲದ ಡೇರೆ-ನಾಗದಾಳಿಗಳು, ಮಳೆಗಾಲ ಮುಗಿಯುತ್ತಿದ್ದಂತೆ ಅರಳಲು ಆರಂಭವಾಗುತ್ತಿದ್ದ ಗುಲಾಬಿ-ಸೇವಂತಿಗೆಗಳು ಹೀಗೆ ಎಲ್ಲ ಹೂವಿನ ಗಿಡಗಳ ಮೇಲೂ ಅಕ್ಕೋರ ಹೆಸರು ಕೂಡಾ ಬರೆದಿರುತ್ತಿತ್ತು. ಹಾಗೆ ಅಕ್ಕೋರ ಹೆಸರು ಹೊತ್ತ ಹೂವನ್ನು ಗಾಳಿ-ಮಳೆಗಳಿಂದ ಜೋಪಾನ ಮಾಡಿ, ಪ್ರೀತಿಯಿಂದ ಶಾಲೆಗೆ ಒಯ್ದು ಅವರ ಕೈಗೆ ಕೊಡುತ್ತಿದ್ದೆ. ನಗುನಗುತ್ತಾ ಅವರು ಅದನ್ನು ಸ್ವೀಕರಿಸುವ ಹೊತ್ತು ಒಂದು ರೀತಿಯ ವಿಚಿತ್ರವಾದ ಧನ್ಯತೆಯ ಭಾವ ಮನಸ್ಸನ್ನು ಆವರಿಸುತ್ತಿತ್ತು. ನನ್ನಂತೆಯೇ ದಿನಕ್ಕೆ ನಾಲ್ಕೈದು ಮಕ್ಕಳಾದರೂ ತಂದುಕೊಡುತ್ತಿದ್ದ ಹೂವುಗಳು ಅಕ್ಕೋರಿನ ಗುಂಗುರು ಕೂದಲ ಜಡೆಯನ್ನು ಅಲಂಕರಿಸುತ್ತಿದ್ದವು. ಮಳೆಗಾಲದಲ್ಲಂತೂ ಅವರ ಮೇಜಿನ ಮೇಲೆ ಬಣ್ಣಬಣ್ಣದ ಡೇರೆ ಹೂವುಗಳು ತುಂಬಿಹೋಗಿರುತ್ತಿದ್ದವು. ಸಂಜೆ ಶಾಲೆ ಮುಗಿದಮೇಲೆ ಅವರು ತಪ್ಪದೇ ಅವುಗಳನ್ನೆಲ್ಲ ನೀಟಾಗಿ ಜೋಡಿಸಿಕೊಂಡು ಪ್ರೀತಿಯಿಂದ ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈಗಲೂ ಬಾಲ್ಕನಿಯಲ್ಲಿ ಗುಲಾಬಿಯೊಂದು ಅರಳಿದರೆ ಅಕ್ಕೋರಿನ ನಗು, ಆ ನಗು ನನ್ನಲ್ಲಿ ಮೂಡಿಸುತ್ತಿದ್ದ ಧನ್ಯತೆಯ ಭಾವ, ಅವರು ಹೂಗಳನ್ನು ಕೈಯಲ್ಲಿ ಹಿಡಿದು ಮನೆಗೆ ಹೋಗುವಾಗ ಸೆರಗಿನೊಂದಿಗೆ ಸ್ಪರ್ಧೆಗಿಳಿದಂತೆ ತೂಗಾಡುತ್ತಿದ್ದ ಉದ್ದನೆಯ ಜಡೆ ಎಲ್ಲವೂ ನೆನಪಾಗುತ್ತವೆ. ಚಿಕ್ಕಪುಟ್ಟ ಸಂಗತಿಗಳಲ್ಲೂ ಸಂಭ್ರಮ-ಸಾರ್ಥಕತೆಗಳನ್ನು ಕಾಣುತ್ತಿದ್ದ ಬಾಲ್ಯದ ನೆನಪುಗಳನ್ನು ಬಾಲ್ಕನಿಯ ಹೂಗಿಡಗಳೊಂದಿಗೆ ಜೋಪಾನ ಮಾಡಿ ನೀರೆರೆಯುತ್ತೇನೆ.           ಹಾಗೆ ನೀರೆರೆದು ಪೋಷಿಸುವ ನೆನಪುಗಳಲ್ಲಿ ದಿನಕ್ಕೊಂದು ಹೊಸ ಬಗೆಯ ಹೂವುಗಳು ಅರಳುತ್ತಲೇ ಇರುತ್ತವೆ. ತಾನು ಪ್ರೀತಿಯಿಂದ ಬೆಳಸಿದ ಗುಲಾಬಿ ಗಿಡಗಳಲ್ಲಿ ಅರಳುತ್ತಿದ್ದ ಹೂವುಗಳನ್ನು ಕಿತ್ತು ನನ್ನ ಮುಡಿಗೆ ಮುಡಿಸುತ್ತಿದ್ದ ಪಕ್ಕದ ಮನೆಯ ಅಕ್ಕ, ತೋಟದಲ್ಲಿ ಹಬ್ಬಿದ್ದ ಮಲ್ಲಿಗೆ ಬಳ್ಳಿಯ ಸುತ್ತ ನೆರೆಯುತ್ತಿದ್ದ ಹೆಣ್ಣುಮಕ್ಕಳ ದೊಡ್ಡ ಗುಂಪು, ದೇವರ ಕಾರ್ಯದ ದಿನ ಬೆಳಿಗ್ಗೆ ಬೇಗ ಎದ್ದು ಹೂಮಾಲೆ ಕಟ್ಟುತ್ತ ಸುಪ್ರಭಾತ ಹಾಡುತ್ತಿದ್ದ ಅತ್ತೆ, ಕೇರಿಯ ಮಕ್ಕಳು-ಗಂಡಸರೆಲ್ಲ ಸೇರಿ ಬೆಟ್ಟ-ಗುಡ್ಡಗಳನ್ನು ಅಲೆದು ಗೌರಿ ಹೂವನ್ನು ತಂದು ಮಂಟಪ ಕಟ್ಟುತ್ತಿದ್ದ ಚೌತಿಹಬ್ಬದ ಸಂಭ್ರಮ ಹೀಗೆ ಹೂವಿನೊಂದಿಗೆ ಪರಿಮಳದಂತೆ ಬೆರೆತುಹೋದ ನೆನಪುಗಳು ಯಾವತ್ತಿಗೂ ಬಾಡುವುದಿಲ್ಲ. ಕಾಲೇಜಿನ ಹುಡುಗ ಕೊಟ್ಟಿದ್ದ ಕೆಂಪು ಗುಲಾಬಿಯ ಒಣಗಿದ ಎಸಳುಗಳು ಕೀರ್ತನೆಯ ಪುಸ್ತಕದೊಳಗೋ, ರಂಗೋಲಿ ಪಟ್ಟಿಯೊಳಗೋ ಈಗಲೂ ಇರಬಹುದು; ಮಲ್ಲಿಗೆಯ ಮಾಲೆ ಮುಡಿದಿದ್ದ ಉದ್ದ ಜಡೆಯ ಫೋಟೋಗಳು ಹಳೆಯ ಆಲ್ಬಮ್ ಗಳಲ್ಲಿ ಬೆಚ್ಚಗೆ ಕುಳಿತಿರಬಹುದು; ಮೈತುಂಬ ಹೂವಿರುವ ಸೀರೆ ಉಟ್ಟ ಹೂವಿನಂಥ ನಾಯಕಿಯ ಹಾಡೊಂದು ಹೈವೇ ಪಕ್ಕದ ಡಾಬಾದಲ್ಲಿ ಪ್ಲೇ ಆಗುತ್ತಿರಬಹುದು; ರಸ್ತೆಯಂಚಿನ ಸಂಪಿಗೆ ಮರದಲ್ಲಿ ಅರಳಿದ ಹೂಗಳ ಪರಿಮಳ ಮುಚ್ಚಿದ ಬಾಗಿಲುಗಳು ತೆರೆಯುವುದನ್ನೇ ಕಾಯುತ್ತಿರಬಹುದು. ******* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಬೆಳಗಾಗ ನಾನೆದ್ದು ಯಾರ್‍ಯಾರ ನೆನೆಯಲಿ ಅಂಕಣ ಬರಹ ಬೆಳಗು ಎನ್ನುವುದೊಂದು ಸುಂದರ ಅನುಭೂತಿ. ಮನೆಯ ಮಾಳಿಗೆಯ ಗಾಜಿನ ಹಂಚಿನಿಂದಲೋ, ಅಪಾರ್ಟ್ಮೆಂಟಿನ ಬಾಲ್ಕನಿಯ ಬಾಗಿಲಿನಿಂದಲೋ, ರಾತ್ರಿಪಾಳಿ ಮುಗಿಸಿ ಮರಳುತ್ತಿರುವ ಕ್ಯಾಬ್ ನ ಕಿಟಕಿಯಿಂದಲೋ ಸಿಕ್ಕಿದ ಅವಕಾಶಗಳನ್ನೆಲ್ಲ ಬಳಸಿಕೊಂಡು ಹುಟ್ಟುವ ಬೆಳಗು ಹೊಸದಿನವೆನ್ನುವ ಹೊಸ ಚೈತನ್ಯವನ್ನು ದೊರಕಿಸಿಕೊಡುತ್ತದೆ. ತುಳಸಿಕಟ್ಟೆಯ ಹೊಸಮಣ್ಣಿನಲ್ಲಿ ಉರಿಯುತ್ತಿರುವ ಅಗರಬತ್ತಿಯ ಪರಿಮಳ ರಸ್ತೆ ದಾಟಿದರೆ, ರಸ್ತೆಯ ತುದಿಯಲ್ಲಿರುವ ಟೀ ಅಂಗಡಿಯ ಘಮ ಮೇನ್ ರೋಡನ್ನು ತಲುಪುತ್ತದೆ; ಬಸ್ ಸ್ಟ್ಯಾಂಡ್ ನಿಂದ ಹೊರಡಲು ರೆಡಿಯಾದ ಬಸ್ಸಿನೊಳಗೆ ಮಲ್ಲಿಗೆಮಾಲೆ ಬಳುಕುವಾಗ, ತಳ್ಳುಗಾಡಿಯ ಮೇಲೆ ಕೆಂಪು-ಹಳದಿ ಸೇವಂತಿಗೆಗಳು ತೂಕಕ್ಕೆ ದೊರಕುತ್ತವೆ; ಪುಟ್ಟ ಮಗುವೊಂದು ಶೂಲೇಸ್ ಕಟ್ಟಿಕೊಳ್ಳಲು ಕಲಿಯುವ ಹೊತ್ತು, ಜಿಮ್ ನಲ್ಲೊಬ್ಬ ಹುಡುಗ ಮ್ಯೂಸಿಕ್ ಗೆ ತಕ್ಕಂತೆ ಹೆಜ್ಜೆ ಹಾಕುತ್ತಾನೆ; ರಾತ್ರಿ ಟ್ರೇನ್ ನಲ್ಲಿ ಅರೆಬರೆ ನಿದ್ರೆಯಲ್ಲಿಯೇ ಊರು ತಲುಪಿದ ಜೀನ್ಸ್ ತೊಟ್ಟ ಹುಡುಗಿ ತಾಮ್ರದ ಹಂಡೆಯ ಹದವಾದ ಬಿಸಿನೀರಿನಲ್ಲಿ ಫೇಷಿಯಲ್ ಮಾಡಿದ ಮುಖವನ್ನು ತೊಳೆದು, ಅಮ್ಮ ಹೊಲಿದ ಕೌದಿಯ ಮೇಲೆ ಮಲಗಿ ಸುಖವಾಗಿ ನಿದ್ರಿಸುತ್ತಾಳೆ; ಅಂಗಳದಲ್ಲೊಂದು ದಾಸವಾಳ ಸದ್ದಿಲ್ಲದೆ ಅರಳಿ, ಹುಟ್ಟಿದ ಪ್ರತಿ ಬೆಳಗಿಗೂ ಇನ್ನಷ್ಟು ಸೌಂದರ್ಯವನ್ನು ಒದಗಿಸುತ್ತದೆ.           ಈ ಸೌಂದರ್ಯದ ಪರಿಕಲ್ಪನೆಯೇ ವಿಶಿಷ್ಟವಾದದ್ದು. ಕಥೆ-ಕಾದಂಬರಿಗಳ ನಾಯಕಿಯ ಹೆರಳು, ಕವಿಯ ಕಲ್ಪನೆಯಲ್ಲಿ ತೂಗುವ ಮರ-ಗಿಡಗಳು, ಸಿನೆಮಾವೊಂದರ ಸುಖಾಂತ್ಯವಾಗುವ ಪ್ರೇಮ, ಪಾತ್ರೆ ತೊಳೆಯುತ್ತ ಅಮ್ಮ ಹಾಡುವ ಮಂಗಳಗೌರಿ ವ್ರತದ ಹಾಡು, ತೋಟದ ಅಂಚಿನಲ್ಲಿ ಹೂವರಳಿಸಿ ನಿಲ್ಲುವ ಸಂಪಿಗೆಮರ, ಶಾಪಿಂಗ್ ಮಾಲ್ ನ ಮೂಲೆಯ ಪುಟ್ಟ ಅಂಗಡಿಯ ಬಣ್ಣಬಣ್ಣದ ಐಸ್ ಕ್ರೀಮು ಎಲ್ಲವೂ ಸೇರಿ ಸೃಷ್ಟಿಯಾಗುವ ಸೌಂದರ್ಯದ ಪರಿಕಲ್ಪನೆ ಕಾಲಕ್ಕೆ ತಕ್ಕಂತೆ ಪೋಷಾಕು ಧರಿಸುತ್ತದೆ. ಕಪ್ಪು-ಬಿಳುಪು ಭಾವಚಿತ್ರದ ಉದ್ದ ಜಡೆಯೊಂದು ಸೆಲ್ಫಿಯ ಫ್ರೆಂಚ್ ಪ್ಲೇಟ್ ಆಗಿ ಬದಲಾದರೆ, ಹೆರಳಿನ ಸೌಂದರ್ಯವನ್ನು ಪರಿಪೂರ್ಣಗೊಳಿಸುತ್ತಿದ್ದ ಕೆಂಪುಗುಲಾಬಿಯ ಜಾಗವನ್ನು ರೆಡ್ ಸ್ಟ್ರೀಕ್ಸ್ ತನ್ನದಾಗಿಸಿಕೊಳ್ಳುತ್ತದೆ; ಜೋಕಾಲಿಯಾಗಿ ತೂಗುತ್ತಿದ್ದ ಮರ-ಗಿಡಗಳನ್ನು ಅಮ್ಯೂಸ್ಮೆಂಟ್ ಪಾರ್ಕಿನ ರೋಲರ್ ಕೋಸ್ಟರ್ ಗಳು ರಿಪ್ಲೇಸ್ ಮಾಡುತ್ತವೆ; ಪ್ರೇಮಕ್ಕೊಂದು ಹೊಸ ವ್ಯಾಖ್ಯಾನ ಬರೆಯುವಂತೆ ಲಿವಿನ್ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಆದರೂ ಪಾತ್ರೆಯೊಂದಿಗೆ ಸದ್ದುಮಾಡುವ ಹಸಿರು ಚಿಕ್ಕಿಬಳೆಯ ಅಂದವಾಗಲೀ, ಗಾಳಿಯೊಂದಿಗೆ ಮನೆಯಂಗಳವನ್ನು ತಲುಪುವ ಸಂಪಿಗೆಯ ಪರಿಮಳವಾಗಲೀ, ಎರಡೂ ಕೈಗಳಿಂದ ಕೋನ್ ಐಸ್ ಕ್ರೀಮ್ ಹಿಡಿದು ಪುಟ್ಟ ಅಂಗಡಿಯಿಂದ ಹೊರಬರುವ ಪುಟ್ಟ ಮಗುವಿನ ಮುಗ್ಧತೆಯಾಗಲೀ ಎಂದಿಗೂ ಮಾಸುವುದಿಲ್ಲ.           ಹೀಗೆ ಸೌಂದರ್ಯ ಎನ್ನುವುದು ಮುಗ್ಧತೆಯಾಗಿ, ಹೆಣ್ಣಾಗಿ, ಪ್ರೇಮವಾಗಿ, ಭಕ್ತಿಯಾಗಿ, ಪ್ರಕೃತಿಯಾಗಿ ಬೆಳಗು ಎನ್ನುವ ಬೆರಗಿನೊಂದಿಗೆ ನಮ್ಮೆದುರು ತೆರೆದುಕೊಳ್ಳುತ್ತದೆ. ಸಾಮಾನ್ಯವಾಗಿ ಮುಂಜಾವಿನ ಕ್ರಿಯೆ-ಪ್ರಕ್ರಿಯೆಗಳೆಲ್ಲ ಒಂದು ಅವಸರದ ದಿನಚರಿಯೊಂದಿಗೆ ಹಾಜರಾಗುತ್ತವೆ. ಶಾಲೆಗೆ ಹೋಗುವ ದಿನಗಳಲ್ಲಿ ತಿಂಡಿ ಮಾಡುವ ತರಾತುರಿಯಲ್ಲಿರುತ್ತಿದ್ದ ಅಮ್ಮ ಅಡುಗೆಮನೆಯಿಂದಲೇ ಶಾಲೆಯನ್ನು ನೆನಪಿಸಿದರೆ, ಬೆಚ್ಚಗೆ ಕಂಬಳಿ ಹೊದ್ದು ಮಲಗಿರುತ್ತಿದ್ದ ನಾನು ಶಾಲೆಯನ್ನೂ ಬೆಳಗನ್ನೂ ಬೈದುಕೊಳ್ಳುತ್ತಲೇ ಎದ್ದೇಳುತ್ತಿದ್ದೆ. ವರ್ಷದ ಏಳೆಂಟು ತಿಂಗಳುಗಳು ಚಳಿಯ ವಾತಾವರಣವಿರುತ್ತಿದ್ದ ಮಲೆನಾಡಿನ ಮುಂಜಾವಿಗೆ ಬಚ್ಚಲೊಲೆಯ ಬೆಂಕಿ ಒಂದು ಸಂಭ್ರಮದ ಸಂಗತಿಯಾಗಿತ್ತು. ಒಣಗಿದ ಅಡಕೆಯ ಹಾಳೆ, ತೆಂಗಿನಕಾಯಿಯ ಸಿಪ್ಪೆ, ಕರಟಗಳೆಲ್ಲ ಬೇಸರವಿಲ್ಲದೆ ಉರಿಯುತ್ತ ಬೆಳಗುಗಳನ್ನು ಬೆಚ್ಚಗಿಡುತ್ತಿದ್ದವು. ಜಗಲಿಯ ಮಂಚ, ಕಪಾಟು, ಆರಾಮಕುರ್ಚಿಗಳ ನಡುವೆ ಅಡಗಿರುತ್ತಿದ್ದ ಧೂಳನ್ನು ಗುಡಿಸಿ ತೆಗೆದು, ಬಕೆಟಿನ ಬಿಸಿನೀರಿನಲ್ಲಿ ಅದ್ದಿತೆಗೆದ ಬಟ್ಟೆಯಿಂದ ಅಳಿದುಳಿದ ಧೂಳನ್ನೂ ಒರೆಸಿದ ಮೇಲೆ ಬೆಳಗನ್ನು ಸ್ವಾಗತಿಸಲಿಕ್ಕೆ ಜಗಲಿ ರೆಡಿಯಾಗುತ್ತಿತ್ತು. ಸುಂದರವಾದ ಕೆತ್ತನೆಯ ಮರದ ಬಾಗಿಲು-ಕಂಬಗಳ ಸುತ್ತ ಪುಟ್ಟಪುಟ್ಟ ಹೂಗಳ ರಂಗೋಲಿಯನ್ನು ಬಿಡಿಸಿ, ಅದಕ್ಕೊಪ್ಪುವ ಕೆಂಪು ಹಳದಿ ಗುಲಾಬಿ ಬಣ್ಣಗಳನ್ನು ತುಂಬಿ, ನಡುನಡುವೆ ಆಗತಾನೇ ಅರಳಿದ ಮೋತಿಮಲ್ಲಿಗೆ ಶಂಖಪುಷ್ಪ ದಾಸವಾಳಗಳನ್ನಿಟ್ಟರೆ ಜಗಲಿಗೊಂದು ತನ್ನದೇ ಆದ ಸೌಂದರ್ಯ ಪ್ರಾಪ್ತಿಯಾಗುತ್ತಿತ್ತು. ಪಕ್ಕದಮನೆಯ ಮಗುವೊಂದು ಅಂಬೆಗಾಲಿಡುತ್ತ ಬಂದು ಹೂವಿನ ಎಸಳುಗಳನ್ನೆಲ್ಲ ಕೀಳುತ್ತ, ತನ್ನ ಪುಟ್ಟಪುಟ್ಟ ಬೆರಳುಗಳಿಂದ ರಂಗೋಲಿಯ ಹೂವುಗಳ ಆಕಾರಗಳನ್ನು ಬದಲಾಯಿಸುವ ಸುಂದರ ನೋಟಕ್ಕೆ ಬೆಳಗು ಸಾಕ್ಷಿಯಾಗುತ್ತಿತ್ತು.           ಹೀಗೆ ಬಚ್ಚಲೊಲೆಯ ಹದವಾದ ಬಿಸಿಯಂತೆ ಹರಡಿಕೊಳ್ಳುವ ಬೆಳಗು ಬಾಳೆಎಲೆಯ ಹಸಿರಾಗಿ, ತುಪ್ಪದ ತಿಳಿಹಳದಿಯಾಗಿ, ಜೋನಿಬೆಲ್ಲ-ಮಿಡಿಉಪ್ಪಿನಕಾಯಿಗಳ ಕೆಂಪು ಬಣ್ಣವಾಗಿ ಮುದ ನೀಡುತ್ತ ಯುನಿಫಾರ್ಮಿನ ನೀಲಿಯಾಗಿ ಶಾಲೆಯನ್ನು ತಲುಪುತ್ತಿತ್ತು. ಕಾಲ್ನಡಿಗೆಯ ಕಷ್ಟವನ್ನು ದೂರಗೊಳಿಸಲೆಂದೇ ಹುಟ್ಟಿದಂತೆ ಗೋಚರಿಸುತ್ತಿದ್ದ ಮಾವಿನಮರಗಳು ದಾರಿಯುದ್ದಕ್ಕೂ ಹಣ್ಣುಗಳನ್ನು ಉದುರಿಸುತ್ತಿದ್ದವು; ಬೆಟ್ಟದ ಮೇಲೊಂದಿಷ್ಟು ನೆಲ್ಲಿಕಾಯಿಗಳು ನಮಗಾಗಿಯೇ ಕಾದಿರುತ್ತಿದ್ದವು; ಕಾಸು ಕೊಟ್ಟು ಕೊಂಡುಕೊಳ್ಳಲಾಗದ ಅದೆಷ್ಟೋ ಬಗೆಯ ಹಣ್ಣು-ಕಾಯಿಗಳೆಲ್ಲ ವರ್ಷದುದ್ದಕ್ಕೂ ಪಾಟಿಚೀಲ ಸೇರುತ್ತಿದ್ದವು; ಮಳೆಗಾಲದಲ್ಲಿ ಹುಟ್ಟಿದ ಒರತೆಯೊಂದು ಮಳೆ ನಿಂತಮೇಲೂ ಚಿಮ್ಮುತ್ತ ಬೆಳಗಿನ ಪಯಣವನ್ನು ಸುಂದರವಾಗಿಸುತ್ತಿತ್ತು. ಈ ಎಲ್ಲ ದಿವ್ಯತೆಯ ಅನುಭೂತಿಗಳಿಗೆ ಎದುರಾಗುತ್ತಿದ್ದ ದಿನಗಳಲ್ಲಿ ಮಳೆಯ ನೀರು ಸ್ಕರ್ಟನ್ನು ಒದ್ದೆಯಾಗಿಸುವ ಕಷ್ಟವಾಗಲೀ, ಚಳಿಗಾಲದಲ್ಲಿ ಕೈ-ಕಾಲುಗಳು ಬಿರುಕುಬಿಡುವ ನೋವಾಗಲೀ, ಬಿಸಿಲುಗಾಲದ ಬಾಯಾರಿಕೆ ಸನ್ ಬರ್ನ್ ಗಳಾಗಲೀ, ಪಾಟಿಚೀಲದ ಭಾರವಾಗಲೀ ಯಾವುದೂ ಬಾಧಿಸಲೇ ಇಲ್ಲ. ಸೂರ್ಯ ಹುಟ್ಟುತ್ತಿದ್ದಂತೆಯೇ ತನ್ನ ಬಳಗವನ್ನೆಲ್ಲ ಕರೆದು ಪಾತ್ರೆ ತೊಳೆಯುವ ಜಾಗದಲ್ಲಿ ಅನ್ನದ ಕಾಳನ್ನು ಹೆಕ್ಕುತ್ತಿದ್ದ ಕಾಗೆ ಸಹಬಾಳ್ವೆಯ ಸೊಗಸನ್ನು ತೋರಿಸಿಕೊಟ್ಟರೆ, ಪಾತ್ರೆ ತುಂಬುವಷ್ಟು ಹಾಲು ಕೊಡುತ್ತಿದ್ದ ಹಸು ಪರೋಪಕಾರದ ಪಾಠವನ್ನು ಕಲಿಸಿತು; ದಿನ ಬೆಳಗಾದರೆ ಒಲೆಯಲ್ಲಿ ಉರಿಯುತ್ತಿದ್ದ ಕರಟದಲ್ಲಿ ತ್ಯಾಗದ ಭಾವನೆ ಕಾಣಿಸಿದರೆ, ಅಂಗಳದ ಕಂಬಕ್ಕೆ ಹಬ್ಬಿ ಹೂವರಳಿಸುತ್ತಿದ್ದ ಶಂಖಪುಷ್ಪದ ಬಳ್ಳಿ ಎಲ್ಲ ತೊಡಕುಗಳನ್ನು ಮೀರಿ ಬೆಳಕಿನೆಡೆಗೆ ಸಾಗುವ ದಾರಿಯನ್ನು ತೋರಿಸಿತು.           ಹೀಗೆ ಬದುಕಿನ ತೊಡಕುಗಳೆಲ್ಲವನ್ನೂ ಎದುರಿಸುವ ಶಕ್ತಿಯೊಂದನ್ನು ಬೆಳಗು ತನ್ನೆಲ್ಲ ಚಟುವಟಿಕೆಗಳಿಂದಲೇ ಕಲಿಸಿಕೊಟ್ಟಿತು. ಅಮ್ಮ ಅಡುಗೆಮನೆಯಿಂದಲೇ ವಿಶಿಷ್ಟವಾಗಿ ಗುಡ್ ಮಾರ್ನಿಂಗ್ ಹೇಳುತ್ತಿದ್ದ ರೀತಿ ಮೊಬೈಲ್ ನಲ್ಲಿರುವ ಅಲಾರ್ಮ್ ಗೆ ಶಿಫ್ಟ್ ಆಯಿತು; ಹದವಾದ ಬಿಸಿನೀರಿನೊಂದಿಗೆ ಬೆಳಗನ್ನು ಸ್ವಾಗತಿಸುತ್ತಿದ್ದ ತಾಮ್ರದ ಹಂಡೆಯನ್ನು ಗೀಸರ್ ರಿಪ್ಲೇಸ್ ಮಾಡಿತು; ಕಂಬವನ್ನು ತಬ್ಬಿ ಬೆಳೆಯುತ್ತಿದ್ದ ಶಂಖಪುಷ್ಪದ ಬಳ್ಳಿ ಬಾಲ್ಕನಿಯ ಸರಳುಗಳನ್ನು ಆಶ್ರಯಿಸಿತು. ಬೆಳಗಾದರೆ ತುಂಬುತ್ತಿದ್ದ ಹಾಲಿನ ಚೊಂಬಿನ ಜಾಗವನ್ನು ವಿವಿಧ ಬಣ್ಣ-ಸೈಜುಗಳ ಪ್ಯಾಕೆಟ್ಟುಗಳು ಆಕ್ರಮಿಸಿಕೊಂಡವು. ದಾರಿಯಂಚಿನ ಒರತೆ, ಬಚ್ಚಲೊಲೆಯ ಬೆಂಕಿ, ಪಾಟಿಚೀಲದ ಸಾಂಗತ್ಯ ಎಲ್ಲವೂ ಸಲೀಸಾಗಿ ರೂಪಾಂತರಗೊಂಡು ನೆನಪಿನ ಅಂಗಳಕ್ಕೂ ಬೆಳಗಿನ ಸೌಂದರ್ಯವನ್ನು ಒದಗಿಸಿಕೊಟ್ಟವು. ಕಾಲಕಾಲಕ್ಕೆ ಅಗತ್ಯಕ್ಕೆ ಅನುಗುಣವಾಗಿ ಸ್ವರೂಪ ಬದಲಾಯಿಸಿಕೊಂಡ ಬೆಳಗು ನೆನಪಾಗಿ, ಜೀವನಪಾಠವಾಗಿ, ಜೀವಂತಿಕೆಯ ಚಲನೆಯಾಗಿ, ಸುಂದರ ಅನುಭೂತಿಯಾಗಿ ಬದುಕುಗಳನ್ನು ಸಲಹುತ್ತಲೇ ಇರುತ್ತದೆ. ಬೆಟ್ಟದಲ್ಲಿ ಹುಟ್ಟಿದ ಒರತೆಯೊಂದು ಬಾಲ್ಕನಿಯ ಶಂಖಪುಷ್ಪದ ಬಳ್ಳಿಯೆಡೆಗೆ ಹರಿದು ಸುಂದರವಾದ ಹೂವುಗಳನ್ನು ಅರಳಿಸುತ್ತದೆ. **************************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಕರ್ಟನ್ನಿನ ಮೇಲೊಂದು ಕೇತಕಿ ಹೂವು

ಬದುಕಿನ ಬಗ್ಗೆ ಮಾತನಾಡುವಾಗಲೆಲ್ಲ ನನಗೆ ಕರ್ಟನ್ನುಗಳು ನೆನಪಾಗುತ್ತವೆ; ಬದುಕಿನ ಪ್ರತಿಯೊಂದು ಅಧ್ಯಾಯವೂ ಬೇರೆಬೇರೆ ಬಣ್ಣ-ವಿನ್ಯಾಸಗಳನ್ನು ಹೊತ್ತ ಸುಂದರವಾದ ಕರ್ಟನ್ನಿನಂತೆ ಭಾಸವಾಗುತ್ತದೆ. ಕಿಟಕಿಗಳೇ ಇಲ್ಲದ ಮನೆಯಲ್ಲಿ ಬೆಳಕಿಗೊಂದು ಅವಕಾಶವನ್ನು ಒದಗಿಸುವುದಾದರೂ ಹೇಗೆ; ಹಾಗೆ ಕಿಟಕಿಯೊಂದು ಒದಗಿಸಿದ ಅವಕಾಶವನ್ನು ಸ್ವಂತದ್ದಾಗಿಸಿಕೊಳ್ಳಲಿಕ್ಕೆ ಕರ್ಟನ್ನುಗಳ ಸೃಷ್ಟಿಯೂ ಆಗಿರಬೇಕು! ಬೆಳಕಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕಿಟಕಿ, ಕಿಟಕಿಯೊಂದಿಗೆ ಸಾಮರಸ್ಯವನ್ನು ಬೆಳೆಸಿಕೊಳ್ಳುವ ಕರ್ಟನ್ನು ಎಲ್ಲವೂ ಸೇರಿ ಬದುಕಿಗೊಂದು ಸ್ವಂತಿಕೆ, ಜೊತೆಗಿಷ್ಟು ಬಣ್ಣಗಳು ಲಭ್ಯವಾಗಿದ್ದಿರಬೇಕು. ದುಃಸ್ವಪ್ನಗಳನ್ನೆಲ್ಲ ದೂರವಾಗಿಸುವ ಬೆಳಕು ಕಿಟಕಿಯನ್ನು ಸ್ಪರ್ಶಿಸುವ ಸಮಯಕ್ಕೆ ಸರಿಯಾಗಿ ಕಣ್ತೆರೆವ ಕರ್ಟನ್ನಿನ ಎಲೆ, ಹೂವು, ಹಣ್ಣು, ಹಕ್ಕಿಗಳೆಲ್ಲವೂ ಮುಂಜಾವಿಗೊಂದು ಹೊಸ ಬಗೆಯ ಸೊಬಗನ್ನು ಒದಗಿಸುತ್ತವೆ. ಎಳೆಬಿಸಿಲಿಗೆ ತಿಳಿಹಸಿರು ಬಣ್ಣವನ್ನು ಮೈಗೆ ಮೆತ್ತಿಕೊಳ್ಳುವ ಎಲೆಯೊಂದು ಮುಸ್ಸಂಜೆಗೆ ಅಚ್ಚಹಸಿರಾಗಿ, ಬೀದಿದೀಪದ ಬೆಳಕಿಗೆ ಹಳದಿಯೂ ಆಗಿ ಬಣ್ಣಗಳ ಹೊಸ ಜಗತ್ತನ್ನೇ ನಮ್ಮೆದುರು ತೆರೆದಿಡುತ್ತದೆ; ಎಲೆಗಳ ಸಂದಿಯಲ್ಲಡಗಿರುವ ಪುಟ್ಟ ಹಕ್ಕಿಯೊಂದು ಬಣ್ಣದ ರೆಕ್ಕೆಗಳನ್ನು ತೊಟ್ಟು ಸದ್ದಿಲ್ಲದೇ ಮನೆತುಂಬ ಹಾರಾಡುವ ಸಂಭ್ರಮವನ್ನು ಕಟ್ಟಿಕೊಡುವ ಕರ್ಟನ್ನು ಪ್ರತಿದಿನದ ಬೆಳಗಿಗೊಂದು ಹೊಸತನದ ಅನುಭವವನ್ನು ಒದಗಿಸುತ್ತದೆ.  ಬದುಕು ತನ್ನದಾಗಿಸಿಕೊಳ್ಳುವ ಅನುಭವಗಳ ಪಟ್ಟಿಯಲ್ಲಿ ಬಾಲ್ಯವೆನ್ನುವುದೊಂದು ಸುಂದರ ಅನುಭವ. ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದ ಪಾಟಿಚೀಲದಿಂದ ಹಿಡಿದು ದೊಡ್ಡಪ್ಪ ಅಂಗಳದಲ್ಲಿ ಬಿಡಿಸುತ್ತಿದ್ದ ರಂಗೋಲಿಯವರೆಗೆ ಘಟಿಸಿದ ಎಲ್ಲ ಚಿಕ್ಕಪುಟ್ಟ ಸಂಗತಿಗಳೂ ಅದ್ಯಾವುದೋ ಕ್ಷಣದಲ್ಲಿ ಅಚ್ಚರಿಗಳಾಗಿ ರೂಪಾಂತರಗೊಂಡು ಬದುಕಿಗೊಂದು ಹೊಸತನವನ್ನು ದೊರಕಿಸಿಕೊಡುತ್ತವೆ. ಪಾಟಿಚೀಲದ ಜಿಪ್ ನೊಂದಿಗೆ ನೇತಾಡುತ್ತಿದ್ದ ಕೀಚೈನ್ ಮೇಲಿದ್ದ ಪುಟ್ಟ ನಾಯಿಮರಿಯೊಂದಿಗಿನ ಗೆಳೆತನ ಪ್ರೈಮರಿ, ಹೈಸ್ಕೂಲು ಎಲ್ಲ ಮುಗಿದಮೇಲೂ ಬಾಲ್ಯದ ನೆನಪುಗಳೊಂದಿಗೆ ನಂಟು ಬೆಳೆಸಿಕೊಳ್ಳುತ್ತದೆ. ಒಮ್ಮೆಯೂ ಸ್ನಾನಮಾಡಿಸಿ ಕೋಲ್ಡ್ ಕ್ರೀಮ್ ಹಚ್ಚದಿದ್ದರೂ ಚಳಿಗಾಲದಲ್ಲಿಯೂ ತನ್ನ ಸೌಂದರ್ಯವನ್ನು ಕಳೆದುಕೊಳ್ಳದ ನಾಯಿಮರಿ, ಸನ್ ಸ್ಕ್ರೀನ್ ಲೋಷನ್ ಇಲ್ಲದೇ ಬಣ್ಣವನ್ನೂ ಕಾಪಾಡಿಕೊಂಡು, ಮಳೆಗಾಲದಲ್ಲಿ ಪಾಟಿಚೀಲದೊಂದಿಗೆ ತಾನೂ ಮಳೆಯಲ್ಲಿ ನೆನೆಯುತ್ತ ಕೊಳೆಯನ್ನೆಲ್ಲ ತೊಳೆದುಕೊಳ್ಳುತ್ತಿತ್ತು. ಪಾರ್ಲರ್ ಶಾಂಪೂವಿನಿಂದ ತಲೆಗೂದಲನ್ನು ತೊಳೆದುಕೊಳ್ಳುವಾಗಲೆಲ್ಲ, ಅರ್ಥವಾಗದ ಗಣಿತದ ಲೆಕ್ಕಾಚಾರವನ್ನು ಸಹನೆಯಿಂದ ಸಹಿಸಿಕೊಂಡು ಪರೀಕ್ಷೆಯ ಭಯವನ್ನು ಕಡಿಮೆ ಮಾಡಿದ ನಾಯಿಮರಿಯ ಪ್ರೇಮವನ್ನು ನೆನೆದು ಅಚ್ಚರಿಗೊಳ್ಳುತ್ತಲೇ ಇರುತ್ತೇನೆ.  ಅಂತಹ ಸೋಜಿಗಗಳಲ್ಲಿ ದೊಡ್ಡಪ್ಪ ಅಂಗಳದಲ್ಲಿ ಬಿಡಿಸುತ್ತಿದ್ದ ರಂಗೋಲಿಯೂ ಸೇರಿಕೊಂಡಿದೆ. ಹಬ್ಬಗಳಲ್ಲೋ, ದೇವರಕಾರ್ಯಗಳಲ್ಲೋ ದೊಡ್ಡಪ್ಪ ತನ್ನ ರಂಗೋಲಿ ತಟ್ಟೆಯೊಂದಿಗೆ ಅಂಗಳಕ್ಕೆ ಹಾಜರಾದರೆ ಕೇರಿಯ ಮಕ್ಕಳೆಲ್ಲ ಅವನ ಸುತ್ತ ನೆರೆಯುತ್ತಿದ್ದೆವು. ಯಾವ ಪೂರ್ವತಯಾರಿ-ಯೋಜನೆಗಳೂ ಇಲ್ಲದೇ ಮನಸ್ಸಿಗೆ ತೋಚಿದ ರಂಗೋಲಿಯನ್ನು ಬಿಡಿಸುತ್ತಿದ್ದ ದೊಡ್ಡಪ್ಪ ಅಂಗಳದಲ್ಲೊಂದು ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದ. ಬೆಟ್ಟದ ತುದಿಯಲ್ಲಿ ತನ್ನಪಾಡಿಗೆ ತಾನು ಗರಿಬಿಚ್ಚಿ ನಿಂತಿರುತ್ತಿದ್ದ ನವಿಲು, ಅದರ ಪಕ್ಕದಲ್ಲೇ ಹುಲ್ಲು ತಿನ್ನುತ್ತಾ ಆಚೀಚೆ ಓಡುತ್ತಿದ್ದ ಮೊಲ, ಕೊಟ್ಟಿಗೆಯಿಂದ ತಪ್ಪಿಸಿಕೊಂಡು ಬಂದು ಅಂಗಳದ ತುಂಬಾ ಹೆಜ್ಜೆಗುರುತು ಮೂಡಿಸುತ್ತಿದ್ದ ಆಕಳಕರು, ಆಗಷ್ಟೇ ಅರಳಿದ ಕೆಂಪು ದಾಸವಾಳ, ಹೂವಿನ ಮೊಗದ ಮುದ್ದು ಬಾಲಕೃಷ್ಣ ಹೀಗೆ ಪ್ರಕೃತಿಯೇ ರಂಗೋಲಿಯಾಗಿ ಹೊಸಹೊಸ ರೂಪ-ಬಣ್ಣಗಳನ್ನು ಧರಿಸುತ್ತಿತ್ತು. ರಂಗೋಲಿಯ ಒಂದೊಂದು ಎಳೆಯೂ ಎಲ್ಲೋ ಆರಂಭವಾಗಿ ಇನ್ನೆಲ್ಲೋ ಮುಗಿಯುತ್ತ ನವಿಲುಗರಿಯಾಗಿ, ಮೊಲದ ಕಿವಿಯಾಗಿ, ಕರುವಿನ ಕುತ್ತಿಗೆಯ ಗಂಟೆಯಾಗಿ, ಕೊಳಲಾಗಿ ಅಂಗಳಕ್ಕಿಳಿಯುವುದೊಂದು ಸೋಜಿಗದ ಸಂಗತಿಯಾಗಿತ್ತು. ದೊಡ್ಡಪ್ಪನಿಗೆ ರಂಗೋಲಿ ಬಿಡಿಸುವುದನ್ನು ಕಲಿಸಿಕೊಟ್ಟವರಿರಲಿಲ್ಲ; ಇಷ್ಟೇ ಜಾಗವನ್ನು ರಂಗೋಲಿಗೆ ಮೀಸಲಾಗಿಡಬೇಕು ಎನ್ನುವ ಯಾವ ಇತಿಮಿತಿಗಳೂ ಅವನ ತಲೆಯಲ್ಲಿ ಇರುತ್ತಿರಲಿಲ್ಲ. ಸಿಕ್ಕಿದ ಅವಕಾಶವನ್ನೆಲ್ಲ ಮುಕ್ತ ಮನಸ್ಸಿನಿಂದ ಬಳಸಿಕೊಳ್ಳುತ್ತ, ಪ್ರಕೃತಿಯಿಂದಲೇ ಪಾಠ ಕಲಿತು ಜೀವನಪ್ರೀತಿಯನ್ನು ಚಿತ್ರಿಸುತ್ತ ಮಕ್ಕಳ ಬದುಕಿಗೊಂದಿಷ್ಟು ಬೆರಗು ಬೆರೆಸಿದ ದೊಡ್ಡಪ್ಪ ಪ್ರಕೃತಿ ಕರುಣಿಸಿದ ಅಚ್ಚರಿಗಳಲ್ಲಿ ಒಂದಾಗಿ ಉಳಿದುಕೊಂಡಿದ್ದಾನೆ.  ಪ್ರಕೃತಿ ತನ್ನ ಮಡಿಲಿನಲ್ಲಿ ಸಲಹುವ ವಿಸ್ಮಯಗಳನ್ನು, ಕ್ಲಾಸ್ ರೂಮು-ಫೀಸುಗಳಿಲ್ಲದೇ ಕಲಿಸಿಕೊಡುವ ಪಾಠಗಳನ್ನು ಥಿಯರಿಗಳನ್ನಾಗಿಸಿ ಪುಸ್ತಕಗಳಲ್ಲಿ ಹಿಡಿದಿಡಲಾಗದು. ಬೇಸಿಗೆಯ ದಿನಗಳಲ್ಲಿ ಎಲ್ಲೋ ನೆಲಕ್ಕೆ ಬಿದ್ದ ಬೀಜವೊಂದು ಗಾಳಿಯೊಂದಿಗೆ ಹಾರುತ್ತಾ ಇನ್ನೆಲ್ಲೋ ತಲುಪಿ, ಮೊದಲಮಳೆಗೆ ಮೊಳಕೆಯೊಡೆಯುವ ಸೃಷ್ಟಿಯ ವಿಸ್ಮಯ ಅನುಭವಕ್ಕೆ ಮಾತ್ರವೇ ದಕ್ಕುವಂಥದ್ದು. ಇಂತಹ ಅನನ್ಯ ಅನುಭವಗಳ ಸಾಲಿನಲ್ಲಿ ಕೇಸರಿಬಣ್ಣದ ಕೇತಕಿಯ ಕಣವೂ ಸೇರಿಕೊಂಡಿದೆ. ಚಳಿಗಾಲದ ಹೂವಿನ ಸೀಸನ್ ಮುಗಿದು ಬೀಜಗಳೆಲ್ಲ ನೆಲಕ್ಕೆ ಉದುರಿ ಗಿಡವೂ ಒಣಗಿಹೋದಮೇಲೆ ಮಲ್ಲಿಗೆಯನ್ನೋ, ಜಾಜಿಯನ್ನೋ ಅರಸುತ್ತ ಪ್ರಕೃತಿಸಹಜವೆಂಬ ಮನಸ್ಥಿತಿಯಲ್ಲಿ ನಾವೆಲ್ಲ ಕೇತಕಿಯನ್ನು  ಮರೆತುಹೋಗುತ್ತಿದ್ದೆವು. ಅಂಗಳದಲ್ಲೋ, ಭತ್ತದ ಕಣಗಳಲ್ಲೋ ಬಿದ್ದಿರುತ್ತಿದ್ದ ಬೀಜಗಳೂ ಬಿಸಿಲಿಗೆ ಒಣಗುತ್ತ, ಗಾಳಿಯಲ್ಲಿ ಹಾರುತ್ತಾ ಮಾಯವಾಗಿಬಿಡುತ್ತಿದ್ದವು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಅಷ್ಟೂ ದಿನ ಮಾಯವಾಗಿದ್ದ ಬೀಜಗಳೆಲ್ಲ ಮೊಳಕೆಯೊಡೆದು, ಹತ್ತಿಪ್ಪತ್ತು ದಿನಗಳಲ್ಲಿ ಮೈತುಂಬ ಎಲೆಗಳನ್ನು ಹೊತ್ತು ಚಿಗುರಿಬಿಡುತ್ತಿದ್ದವು. ಜಾಸ್ತಿ ಮಳೆಯಾದ ವರ್ಷಗಳಲ್ಲಿ ಕೊಳೆತುಹೋಗದೇ, ಕಡಿಮೆ ಮಳೆಗೆ ಬಾಡಿಹೋಗದೇ ಜೀವ ಕಾಪಾಡಿಕೊಳ್ಳುತ್ತಿದ್ದ ಕೇತಕಿಯ ಗಿಡಗಳು ಜೀವನಪ್ರೀತಿಯನ್ನು ಉಳಿಸಿ ಬೆಳಸಿಕೊಂಡು ಹೋಗುವ ಕ್ರಿಯೆಯೊಂದರ ಕಣ್ಣೆದುರಿಗಿನ ಉದಾಹರಣೆಗಳಂತಿದ್ದವು. ಗುಂಪುಗುಂಪಾಗಿ ಹುಟ್ಟಿ, ಜೊತೆಯಾಗಿ ಬೆಳೆದು, ಕಿತ್ತೆಸೆದರೂ ಬೇಸರಿಸದೇ ಬೇರುಬಿಟ್ಟು, ಮೈತುಂಬ ಹೂವರಳಿಸಿ ಕೇಸರಿ-ಹಳದಿ ಬಣ್ಣಗಳ ಕಣವೊಂದನ್ನು ಸೃಷ್ಟಿಮಾಡಿಬಿಡುತ್ತಿದ್ದವು. ನಾಜೂಕು ಎಸಳುಗಳ ಕೇತಕಿ ಹೂವನ್ನು ಸ್ಪರ್ಶಿಸಿದಾಗಲೆಲ್ಲ, ಪ್ರಕೃತಿ ತನ್ನೊಳಗೆ ಬಚ್ಚಿಟ್ಟುಕೊಂಡ ವಿಸ್ಮಯವೊಂದು ಅಂಗೈಯೊಳಗೆ ದೊರಕಿದ ರೋಮಾಂಚನ ನನ್ನದಾಗುತ್ತಿತ್ತು. ವರ್ಷದಲ್ಲಿ ಒಂದೇ ತಿಂಗಳು ಕೈಗೆ ಸಿಗುತ್ತಿದ್ದ ಕೇತಕಿಯ ಹೂಗಳು ಕರ್ಟನ್ನಿನ ಮೇಲೂ ಇರಬಾರದಿತ್ತೇ ಎಂದುಕೊಳ್ಳುತ್ತಿದ್ದೆ.  ಆಗೆಲ್ಲ ಕರ್ಟನ್ನುಗಳೆಂದರೆ ಅಮ್ಮನ ಹಳೆಯ ಸೀರೆಗಳು. ಹಳತಾದ ಸೀರೆಗಳಲ್ಲಿ ಇರುವುದರಲ್ಲೇ ಒಳ್ಳೆಯ ಸೀರೆಯೊಂದು ಕರ್ಟನ್ನಿನ ಅವತಾರ ತೊಟ್ಟು ಬಾಗಿಲುಗಳನ್ನೂ, ಕಿಟಕಿಗಳನ್ನೂ ಆವರಿಸಿಕೊಳ್ಳುತ್ತಿತ್ತು. ಬಾಳೆಹಣ್ಣನ್ನೋ, ಬಿಸ್ಕಿಟನ್ನೋ ತಿಂದಾದ ಮೇಲೆ ಅರ್ಜಂಟಿಗೆ ಕೈ ಒರೆಸಿಕೊಳ್ಳುವ ಟವೆಲ್ ಆಗಿಯೂ ಆಗಾಗ ಕರ್ಟನ್ನು ಬಳಕೆಯಾಗುತ್ತಿತ್ತು. ಸೀರೆಯೊಂದು ಕರ್ಟನ್ನಾಗಿ ರೂಪಾಂತರ ಹೊಂದಿದ ಸ್ವಲ್ಪ ದಿನಗಳಲ್ಲಿಯೇ ಅದರ ಮೇಲಿದ್ದ ಹೂವು, ಮಾವಿನಕಾಯಿ, ವೀಣೆ, ನವಿಲಿನ ಚಿತ್ರಗಳೆಲ್ಲ ಮಾಸಿಹೋಗುತ್ತಿದ್ದವು. ಆದರೂ ಈ ಸೀರೆಯ ಇದೇ ಜಾಗದಲ್ಲಿ ಇಂಥದ್ದೇ ಚಿತ್ರವಿತ್ತು ಎನ್ನುವ ವಿವರ ಮಾತ್ರ ಕರಾರುವಕ್ಕಾಗಿ ಎಲ್ಲರ ಜ್ಞಾಪಕದಲ್ಲೂ ಇರುತ್ತಿತ್ತು. ಹೀಗೆ ಬದುಕಿನ ಒಂದು ಬಹುಮುಖ್ಯ ಭಾಗವೇ ಆಗಿಹೋಗುತ್ತಿದ್ದ ಕರ್ಟನ್ನಿನ ಮೇಲಿನ ಮೋಹ ಎಷ್ಟಿತ್ತೆಂದರೆ, ಅಮ್ಮ ಹೊಸ ಸೀರೆ ಖರೀದಿಸಿದಾಗಲೆಲ್ಲ ಇದು ಕರ್ಟನ್ನಾಗಿ ಬದಲಾಗಲು ಸೂಕ್ತವೋ ಅಲ್ಲವೋ ಎನ್ನುವ ಚರ್ಚೆಗಳೂ ನಡೆಯುತ್ತಿದ್ದವು. ಸೀರೆಯ ಜಾಗವನ್ನು ಬ್ರ್ಯಾಂಡೆಡ್ ಕರ್ಟನ್ನುಗಳು ತಮ್ಮದಾಗಿಸಿಕೊಂಡಮೇಲೂ, ಅವುಗಳೆಡೆಗಿನ ಸೆಳೆತ ಮಾತ್ರ ಹಾಗೆಯೇ ಉಳಿದುಕೊಂಡಿದೆ. ದಿನ ಬೆಳಗಾದರೆ ಕರ್ಟನ್ನಿನ ಮೇಲೆ ಅರಳುವ ಬಣ್ಣಬಣ್ಣದ ಹೂಗಳ ನಡುವೆ ಕೇತಕಿಯ ಬೀಜವೂ ಮೊಳಕೆಯೊಡೆಯುತ್ತಿರಬಹುದೆನ್ನುವ ನಿರೀಕ್ಷೆಯೊಂದು ಪ್ರತೀ ಬೆಳಗನ್ನೂ ಸುಂದರವಾಗಿಸುತ್ತದೆ. *************************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಕರ್ಟನ್ನಿನ ಮೇಲೊಂದು ಕೇತಕಿ ಹೂವು Read Post »

You cannot copy content of this page

Scroll to Top