ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬೆಂಗಳೂರಿನಿಂದ ಹೊರಟ ಸುಮತಿ ಮತ್ತು ಮಗಳು ಹಾಗೂ ಹಿರಿಯ ಅಳಿಯ ಸಕಲೇಶಪುರವನ್ನು ತಲುಪಿದರು. ಮೂವರೂ ಆಶ್ರಮ ತಲುಪಿದರು. ತನ್ನ ಕೋಣೆಯೊಳಗೆ ಆಯಾಸಗೊಂಡಿದ್ದ ಅಮ್ಮನನ್ನು ಮಲಗಿಸಿ, ಬಾವನಿಗೆ ಧನ್ಯವಾದ ಹಾಗೂ ಕೃತಜ್ಞತೆಗಳನ್ನು ತಿಳಿಸಿ….. “ನೀವು ಮನೆಗೆ ಹೋಗಿ ಬಾವ…. ಅಕ್ಕ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮನೆಯಲ್ಲಿದ್ದಾರೆ…. ಮಕ್ಕಳು ನಿಮ್ಮನ್ನು ಬಿಟ್ಟು ಇರುವುದಿಲ್ಲ….. ಅಮ್ಮನನ್ನು ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಾನು ದಾಖಲು ಮಾಡುತ್ತೇನೆ”…. ಎಂದಳು. ನಾದಿನಿಯ ಜವಾಬ್ದಾರಿಯುತ ನಡೆಯ ಸಾಮರ್ಥ್ಯವನ್ನು ಅರಿತಿದ್ದ ಬಾವ…. ಹಾಗೆಯೇ ಆಗಲಿ…. ಆದರೆ ಇನ್ನೇನಾದರೂ ಸಹಾಯ ಬೇಕಿದ್ದರೆ ತಡ ಮಾಡದೇ ತಪ್ಪದೇ ನನಗೆ ತಿಳಿಸು…. ನಾನು ಖಂಡಿತ ಬರುತ್ತೇನೆ”…. ಎಂದು ನಾದಿನಿಗೆ ಹೇಳಿ, ಆಯಾಸದಿಂದ ಮಲಗಿದ್ದ ಅತ್ತೆಯ ಬಳಿಗೆ ಹೋಗಿ…. “ಅತ್ತೇ…. ನಿಮ್ಮ ಮಗಳು ಒಬ್ಬಳೇ ಇಬ್ಬರು ಪುಟ್ಟ ಮಕ್ಕಳನ್ನು ಸಂಭಾಳಿಸುತ್ತಾ ಮನೆಯಲ್ಲಿದ್ದಾಳೆ…. ಅದೂ ಅಲ್ಲದೇ ನಾನು ಕೆಲಸಕ್ಕೆ ಕೂಡ ಹೋಗಬೇಕಾಗಿದೆ…. ನಾದಿನಿ ನಿಮ್ಮನ್ನು ಆಸ್ಪತ್ರೆಗೆ ದಾಖಲು ಮಾಡಿಸುತ್ತೇನೆ ಎಂದು ಹೇಳಿದ್ದಾಳೆ…. ನಾನು ಮತ್ತು ನಿಮ್ಮ ಮಗಳು ಆಗಾಗ ಬಂದು ನಿಮ್ಮನ್ನು ಭೇಟಿ ಮಾಡುತ್ತೇವೆ….. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಿ ಕೊರಗಬೇಡಿ…. ಆದಷ್ಟು ಬೇಗ ಗುಣಮುಖರಾಗಿ ನಿಮ್ಮ ಮೊಮ್ಮಕ್ಕಳ ಜೊತೆ ಕಾಲ ಕಳೆಯುವಿರಂತೆ…. ನಾನಿನ್ನು ಹೊರಡಲೇ?”…ಎಂದು ಹೇಳುತ್ತಾ ಅತ್ತೆಯ ಅನುಮತಿಗಾಗಿ ಅಲ್ಲಿಯೇ ನಿಂತನು.

ಅಳಿಯನ ಮಾತುಗಳನ್ನು ಆಲಿಸಿದ ಸುಮತಿ….”ಹೌದು ಅಳಿಯಂದಿರೇ…. ನೀವೀಗ ಮನೆಗೆ ಹೋಗಲೇಬೇಕು…. ನನ್ನ ಮುದ್ದು ಮೊಮ್ಮಕ್ಕಳು ನಿಮಗಾಗಿ ಕಾಯುತ್ತಿರುತ್ತಾರೆ…. ನೀವು ಕೆಲಸಕ್ಕೂ ಹೋಗಬೇಕಿದೆ….. ಇಲ್ಲಿ ಮಗಳು ಇದ್ದಾಳಲ್ಲವೇ ಅವಳು ಎಲ್ಲವನ್ನೂ ನೋಡಿಕೊಳ್ಳುತ್ತಾಳೆ….. ನೀವು ನಿಶ್ಚಿಂತರಾಗಿರಿ…. ನನ್ನ ಮೊಮ್ಮಕ್ಕಳನ್ನು ನೋಡುವ ಬಯಕೆಯಾಗಿದೆ ನೀವು ಬರುವಾಗ ಅವರನ್ನು ಕರೆದುಕೊಂಡು ಬನ್ನಿ”…. ಎಂದು ಹೇಳಿ ಸುಮತಿ ಅಳಿಯನನ್ನು ಬೀಳ್ಕೊಟ್ಟಳು. ಅನಾರೋಗ್ಯದ ತೀವ್ರತೆಯ ಕಾರಣ ಸುಮತಿಗೆ ಕಣ್ಣುಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ. ಯಾರ ಮುಖವೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಬರಿಯ ಆಕೃತಿ ಮಾತ್ರ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ಧ್ವನಿಯಿಂದ ಎಲ್ಲರನ್ನೂ ಗುರುತು ಹಿಡಿಯುತ್ತಿದ್ದಳು. ಸುಮತಿಯ ಎರಡನೇ ಮಗಳಿಗೆ ಆಶ್ರಮದಲ್ಲಿದ್ದ ಗೆಳತಿಯ ಸಹಾಯ ಬಹುದೊಡ್ಡ ಆಧಾರವಾಗಿತ್ತು. ತಡ ಮಾಡದೇ ತಾಯಿಯನ್ನು ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೊರಟಳು. ಆಶ್ರಮದ ಮಕ್ಕಳಿಗೆ ರಜೆ ಇದ್ದ ಕಾರಣ ಎಲ್ಲರೂ ಅವರವರ ಮನೆಗಳಿಗೆ ತರಳಿದ್ದರು. ಹಾಗಾಗಿ ಆಶ್ರಮದಲ್ಲಿದ್ದ ಗೆಳತಿಯು ಸ್ವಲ್ಪ ದಿನದ ಮಟ್ಟಿಗೆ ತಾನು ಮನೆಗೆ ಹೋಗಿ ಬರುತ್ತೇನೆ ಎಂದು ಹೊರಟಳು….”ಆಶ್ರಮದ ಬೀಗದ ಕೀಲಿಯನ್ನು ಸೆಕ್ರೆಟರಿ ಅವರಿಗೆ ಕೊಟ್ಟಿರುತ್ತೇನೆ…. ನೀನು ಆಸ್ಪತ್ರೆಯಿಂದ ಬರುವಾಗ ಅವರಿಂದ ಕೀಲಿಯನ್ನು ಪಡೆದುಕೋ…. ನಿನಗೆ ಪರೀಕ್ಷೆ ಇದೆಯಲ್ಲವೇ?…. ನಿನಗೆ ಏನಾದರೂ ಅಗತ್ಯಗಳು ಇರುತ್ತವೆ”… ಎಂದು ಹೇಳಿ ತನ್ನ ಊರಿನ ಕಡೆಗೆ ಹೊರಟಳು. 

ಸುಮತಿಯ ಎರಡನೇ ಮಗಳು ತನ್ನ ತಾಯಿಯೊಂದಿಗೆ ಹಾಸನಕ್ಕೆ ಹೊರಡುವ ಮುನ್ನ ಆಶ್ರಮದ ಬಳಿ ಇದ್ದ ಮೆಡಿಕಲ್ ಸ್ಟೋರ್ ಒಂದರ ಟೆಲಿಫೋನ್ ಬೂತಿಗೆ ಹೋಗಿ, ತೋಟದ ಆಫೀಸಿನಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿದಳು. ಕರೆಗೆ ಪ್ರತ್ಯುತ್ತರ ನೀಡಿದ್ದು ತೋಟದ ಮ್ಯಾನೇಜರ್ ಆದುದರಿಂದ ಅವರಿಗೆ ಎಲ್ಲ ವಿಷಯವನ್ನು ತಿಳಿಸಿದಳು. ತೋಟದ ಸಾಹುಕಾರಮ್ಮನವರು ವಿದೇಶಕ್ಕೆ ಹೋಗಿರುವುದಾಗಿ ಮ್ಯಾನೇಜರ್ ತಿಳಿಸಿದರು. ಹಾಗಾಗಿ ವಿಷಯವನ್ನೆಲ್ಲ ತನ್ನ ತಂಗಿಗೆ ತಿಳಿಸಲು ವಿನಂತಿಸಿಕೊಂಡಳು. ತಾಯಿಗೆ ಆಯಾಸವಿದ್ದ ಕಾರಣ ನಡೆಯಲು ಆಗುತ್ತಿರಲಿಲ್ಲ. ಹಾಗಾಗಿ ಆಟೋದಲ್ಲಿ ಬಸ್ಟ್ಯಾಂಡಿಗೆ ಕರೆದುಕೊಂಡು ಬಂದಳು. ಅಲ್ಲಿ ಹಾಸನಕ್ಕೆ ಹೋಗುವ ಬಸ್ ನಿಂತಿತ್ತು. ಮೊದಲು ತಾಯಿಯನ್ನು ಬಸ್ಸಿನಲ್ಲಿ ನಿಧಾನವಾಗಿ ಜಾಗರೂಕತೆಯಿಂದ ಹತ್ತಿಸಿ ಕಿಟಕಿಯ ಬಳಿಯ ಸೀಟಿನಲ್ಲಿ ಕುಳ್ಳಿರಿಸಿ, ತಾನು ಕೆಳಗಿಳಿದು ಬಟ್ಟೆಬರೆ ಇರುವ ಬ್ಯಾಗನ್ನು ಎತ್ತಿಕೊಂಡು ಬಂದು ಮೇಲಿನ ಸ್ಟ್ಯಾಂಡ್ ನಲ್ಲಿ ಇರಿಸಿ ಸುಮತಿಯ ಬಳಿ ಕುಳಿತುಕೊಂಡಳು. ಬಸ್ ಹಾಸನದ ಕಡೆಗೆ ಹೊರಟಿತು. ಹಾಸನ ಬಸ್ ಸ್ಟ್ಯಾಂಡ್ ತಲುಪಿದ ನಂತರ ಅಲ್ಲಿಂದ ಮತ್ತೊಂದು ಆಟೋದಲ್ಲಿ ತಾಯಿಯನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಯ ಕಡೆಗೆ ಹೊರಟಳು. ಜಿಲ್ಲಾ ಆಸ್ಪತ್ರೆ ತಲುಪಿದಾಗ ಡಾಕ್ಟರ್ ಬರುವ ಸಮಯವಾಗಿತ್ತು. 

ನಿಧಾನವಾಗಿ ತಾಯಿಯನ್ನು ಆಟೋದಿಂದ ಇಳಿಸಿ, ಮೆಲ್ಲನೆ ನಡೆಸಿಕೊಂಡು ಹೋಗಿ ಹೊರರೋಗಿಗಳ ವಿಭಾಗದ ಹತ್ತಿರ ಇದ್ದ ಬೆಂಚಿನಲ್ಲಿ ಕುಳ್ಳಿಸಿದಳು. ಸರತಿಯ ಸಾಲಿನಲ್ಲಿ ಹೆಚ್ಚು ಜನರಿರದ ಕಾರಣ ಸ್ವಲ್ಪ ಹೊತ್ತಿನಲ್ಲಿ ಡಾಕ್ಟರನ್ನು ನೋಡುವ ಅವಕಾಶ ದೊರೆಯಿತು.

ತಾಯಿಗೆ ಅಲ್ಲೇ ಕುಳಿತುಕೊಳ್ಳಲು ಹೇಳಿ ಮಗಳು ಮೊದಲು ತಾನು ಒಬ್ಬಳೇ ಡಾಕ್ಟರ್ ಕೊಠಡಿಯನ್ನು ಪ್ರವೇಶಿಸಿದಳು. ಅಲ್ಲಿನ ಡಾಕ್ಟರ್ (ಫಿಜ಼ಷಿಯನ್) ಮೊದಲು ಸಕಲೇಶಪುರದಲ್ಲಿದ್ದವರಾಗಿದ್ದರು. ಅವರು ಆಸ್ಪತ್ರೆಯ ಮೇಲಾಧಿಕಾರಿಯಾಗಿ ಭಡ್ತಿ ಹೊಂದಿ ಇಲ್ಲಿಗೆ ವರ್ಗಾವಣೆಗೊಂಡಿದ್ದರು. ಸುಮತಿಗೆ ಹಲವು ವರ್ಷಗಳಿಂದ ಈ ವೈದ್ಯರೇ ಚಿಕಿತ್ಸೆ ಕೊಡುತ್ತಿದ್ದ ಕಾರಣ ಮಗಳ ಪರಿಚಯವು ಅವರಿಗಿತ್ತು…. “ಏನಮ್ಮಾ ಹುಡುಗಿ…. ನಿನ್ನ ತಾಯಿ ಹೇಗಿದ್ದಾರೆ”… ಎಂದು ಕೇಳಿದರು. ಅದಕ್ಕುತ್ತರವಾಗಿ ವೈದ್ಯರಿಗೆ ವಂದಿಸಿದ ಅವಳು… “ಸರ್ ನಿಮ್ಮ ಬಳಿ ಒಂದು ಮುಖ್ಯವಾದ ವಿಷಯವನ್ನು ನಾನು ಪ್ರಸ್ತಾಪಿಸಬೇಕಿದೆ…. ದಯವಿಟ್ಟು ನನಗೆ ನೀವು ಸಹಾಯ ಮಾಡಬೇಕು”…. ಎಂದಳು….. “ಅದೇನು ಹೇಳಮ್ಮಾ”…. ಎಂದು ವೈದ್ಯರು ಕೇಳಿದಾಗ ಬೆಂಗಳೂರಿನಲ್ಲಿ ನಡೆದ ಅಷ್ಟೂ ಘಟನೆಯನ್ನು ವಿವರಿಸಿದಳು. ವೈದ್ಯರಿಗೆ ಸುಮತಿಯ ಬಗ್ಗೆ ತಿಳಿದು ಬಹಳ ಬೇಸರ ಮತ್ತು ಸಂಕಟವಾಯಿತು. ಆಕೆಯ ಪರಿಸ್ಥಿತಿಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು…. “ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಯಿತು…. ನನ್ನಿಂದ ನಿಮಗೇನು ಸಹಾಯವಾಗಬೇಕು ತಿಳಿಸು ಮಗು”…. ಎಂದರು…. “ಸರ್…. ಬೆಂಗಳೂರಿನಲ್ಲಿ ದೊರಕುವ ಚಿಕಿತ್ಸೆ ಈ ಆಸ್ಪತ್ರೆಯಲ್ಲಿ ದೊರೆಯುತ್ತದೆ ಎಂದು ಅಮ್ಮನಿಗೆ ಸುಳ್ಳು ಹೇಳಿ ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ…. ಅವರಿಗೆ ಸತ್ಯ ಸಂಗತಿಯನ್ನು ನಾನು ತಿಳಿಸಿಲ್ಲ….. ತಿಳಿಸುವ ಮನಶಕ್ತಿಯೂ ನನ್ನಲಿಲ್ಲ…. ದಯವಿಟ್ಟು ತಾವು ಈ ಆಸ್ಪತ್ರೆಯಲ್ಲಿ ನನ್ನ ತಾಯಿಯನ್ನು ದಾಖಲು ಮಾಡಿ ಸ್ವಲ್ಪ ದಿನ ಚಿಕಿತ್ಸೆ ಕೊಡುವಿರಾ?” ….. ಎಂದು ಅಂಗಲಾಚುವಂತೆ ಬೇಡಿಕೊಂಡಳು.


About The Author

Leave a Reply

You cannot copy content of this page

Scroll to Top