ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಫಿಸೀಷಿಯನ್ ಹಾಗೆ ಹೇಳಿದಾಗ ಬಹಳ ಮುಖ್ಯವಾದ ವಿಷಯವಿರಬೇಕೆಂದು ಮಗಳಿಗೆ ತಿಳಿಯಿತು… ಅದೇನೇ ಇದ್ದರೂ ನನಗೆ ಹೇಳಿ ಸರ್…. ನನ್ನ ಅಮ್ಮನಿಗೆ ಏನಾಗಿದೆ? ಎಂದು ಕೇಳಿದಾಗ, ವೈದ್ಯರು ಆ ಹುಡುಗಿಯ ಮುಖವನ್ನೇ ತದೇಕಚಿತ್ತವಾಗಿ ನೋಡುತ್ತಾ… ನಿನ್ನ ವಯಸ್ಸೆಷ್ಟು ಮಗು?… ನೀನು ಏನು ಓದುತ್ತಿರುವೆ? ಎಂದು ಕೇಳಿದರು.
ವೈದ್ಯರ ಪ್ರಶ್ನೆಗೆ… ನನಗೀಗ ಹದಿನೆಂಟು ವರ್ಷ ವಯಸ್ಸು…. ನಾನು ಬಿ.ಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವೆ…. ಎಂದು ಹೇಳಿದಳು. ಆ ಹುಡುಗಿಯ ಮಾತನ್ನು ಆಲಿಸಿದ ವೈದ್ಯರು…. “ಮಗೂ ನಿನ್ನನ್ನು ನೋಡಿದರೆ ತಿಳುವಳಿಕೆ ಇರುವ ಹಾಗೂ ವಯಸ್ಸಿಗಿಂತ ಹೆಚ್ಚು ಪ್ರಬುದ್ಧತೆ ಹೊಂದಿರುವ ಹುಡುಗಿಯ ಹಾಗೆ ತೋರುತ್ತೀಯ… ನಾನು ಹೇಳುವ ವಿಷಯವು ಬಹಳ ಗಂಭೀರವಾದದ್ದು…. ಅದನ್ನು ನೀನು ಹೇಗೆ ತೆಗೆದುಕೊಳ್ಳುತ್ತೀಯ ಎನ್ನುವುದು ನನಗೆ ತಿಳಿಯದು…. ಆದರೂ ಹೇಳಲೇಬೇಕಾದ ಅನಿವಾರ್ಯತೆ ಇದೆ…. ನೀನು ಹೇಳಿದೆ ಮನೆಯಲ್ಲಿ ದೊಡ್ಡವರು ಯಾರು ಇಲ್ಲ ಎಂದು…. ಸುಮತಿಯ ಯೋಗ ಕ್ಷೇಮವನ್ನು ನೀನು ಮತ್ತು ನಿನ್ನ ತಂಗಿ ಈಗ ನೋಡಿಕೊಳ್ಳುತ್ತಿರುವಿರಿ ಎನ್ನುವುದು ನನಗೆ ಅರ್ಥವಾಯಿತು…. ನೋಡು ಮಗು… ನಿನ್ನ ತಾಯಿಯ ಸ್ಥಿತಿ ಸ್ವಲ್ಪ ಹೆಚ್ಚೇ ಗಂಭೀರವಾಗಿದೆ….. ಆಕೆಯ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಕೋಶ, ಹೇಳಬೇಕೆಂದರೆ ನಿನ್ನ ತಾಯಿಯ ಶರೀರದ ಅಂತರಿಕ ಅಂಗಗಳಲ್ಲಿ ಊತ ಕಾಣಿಸಿಕೊಂಡಿದೆ…. ಬಹುತೇಕ ಎಲ್ಲಾ ಆಂತರಿಕ ಅಂಗಗಳು ವೈಫಲ್ಯವಾಗಿವೆ…. ತೀವ್ರವಾದ ಸಕ್ಕರೆ ಕಾಯಿಲೆಯ ಪರಿಣಾಮ ಹಾಗೂ ರಕ್ತದ ಒತ್ತಡಕ್ಕೆ ಚಿಕಿತ್ಸೆ ಪಡೆಯದೆ ಇರುವ ಕಾರಣದಿಂದ ನಿನ್ನ ತಾಯಿಯು ಈ ಸ್ಥಿತಿಗೆ ತಲುಪಿದ್ದಾರೆ….

ಇನ್ನು ನಾವು ಯಾವುದೇ ಚಿಕಿತ್ಸೆ ಕೊಟ್ಟರೂ ಅದು ಫಲಕಾರಿಯಾಗದು…. ಇಲ್ಲಿ ಈ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆ ದೊರಕಲಾರದು…. ಸ್ವಲ್ಪ ದಿನ ನಾವು ನಿನ್ನ ತಾಯಿಯ ಆರೈಕೆಯನ್ನು ಈ ಆಸ್ಪತ್ರೆಯಲ್ಲಿ ಮಾಡಬಹುದು…. ಹೆಚ್ಚಿನ ಚಿಕಿತ್ಸೆ ಬೇಕೆಂದರೆ ನೀನು ನಿನ್ನ ತಾಯಿಯನ್ನು ಬೆಂಗಳೂರಿನಲ್ಲಿರುವ ಕಿಡ್ನಿ ಫೌಂಡೇಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿದರೆ ಇನ್ನೂ ಸ್ವಲ್ಪ ಕಾಲ ನಿನ್ನ ತಾಯಿ ಬದುಕುಳಿಯಬಹುದು…. ಈಕೆ ಇದೇ ಸ್ಥಿತಿಯಲ್ಲಿದ್ದರೆ ಇನ್ನಾರು ತಿಂಗಳಷ್ಟೇ ಜೀವಂತವಾಗಿ ಬದುಕಿರಲು ಸಾಧ್ಯ…. ಆದರೆ ಮೊದಲಿನಂತೆ ಲವಲವಿಕೆಯಿಂದ ಎದ್ದು ಓಡಾಡಲು ಅವರಿಂದ ಸಾಧ್ಯವಿಲ್ಲ…. ಹಾಸಿಗೆಯಲ್ಲಿಯೇ ದಿನ ಕಳೆಯಬೇಕಾದ ಪರಿಸ್ಥಿತಿ…. ಅವರಿಂದ ಶಿಕ್ಷಕ ವೃತ್ತಿಯನ್ನು ಮುಂದುವರಿಸಲು ಸಾಧ್ಯವಿಲ್ಲ…. ನೀನು ಮತ್ತು ನಿನ್ನ ತಂಗಿ ಸುಮತಿಯ ಆರೈಕೆಯನ್ನು ಮಾಡಬೇಕಾಗುತ್ತದೆ…. ದಿನೇ ದಿನೇ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗುತ್ತಲೇ ಹೋಗುತ್ತದೆ…. ಯಾವುದೇ ಆಹಾರ ಪಥ್ಯದಿಂದಲೂ ಸುಮತಿಯ ಆರೋಗ್ಯ ಸುಧಾರಿಸುವುದಿಲ್ಲ…. ಆದರೂ ಅವರ ಆರೋಗ್ಯ ಸ್ಥಿತಿ ಇನ್ನೂ ಹದಗೆಡದಂತೆ ನೋಡಿಕೊಳ್ಳಲು ಪಥ್ಯದ ಆಹಾರವನ್ನು ಕೊಡುವುದು ಕೂಡ ಅನಿವಾರ್ಯ…. ನಾನು ಕೊಡುವ ವೈದ್ಯಕೀಯ ಚಿಕಿತ್ಸೆಯಿಂದ ಅವರ ಆರೋಗ್ಯ ಮೊದಲಿನಂತಾಗಲು ಸಾಧ್ಯವಿಲ್ಲ…. ಆದರೆ ತಾತ್ಕಾಲಿಕವಾಗಿ ಉಪಶಮನದ ಚಿಕಿತ್ಸೆಯನ್ನಷ್ಟೇ ನಾವು ಕೊಡಬಹುದು…. ನಿನ್ನ ತಾಯಿಯ ವಯಸ್ಸು ಕೂಡ ಬಹಳ ಚಿಕ್ಕದು…. ಕೇವಲ 54 ವರ್ಷವಷ್ಟೇ! ….

ಜೀವನದಲ್ಲಿ ಬಹಳಷ್ಟು ನೋವುಗಳನ್ನು ಉಂಡವಳು, ಏಳುಬೀಳುಗಳನ್ನು ಕಂಡವಳು ನಿನ್ನ ಅಮ್ಮ…. ಬಹಳ ಮಾನಸಿಕ ಸ್ಥೈರ್ಯ ಉಳ್ಳವಳು ಕೂಡಾ…. ಆದರೆ ಈ ಸಕ್ಕರೆ ಕಾಯಿಲೆ ಅವಳನ್ನು ಬಹಳಷ್ಟು ಹೈರಾಣಾಗಿ ಮಾಡಿದ್ದು ಸುಳ್ಳಲ್ಲ…. ಇನ್ನೊಂದು ಮುಖ್ಯವಾದ ವಿಷಯವನ್ನು ನಿನಗೆ ಹೇಳಬೇಕಿದೆ ಮಗು…. ವಯಸ್ಸಿನಲ್ಲಿ ಬಹಳ ಚಿಕ್ಕವಳಾದ ನಿನಗೆ ಈ ವಿಷಯವನ್ನು ಹೇಗೆ ಹೇಳಬೇಕೆಂಬುದು ನನಗೆ ತಿಳಿಯುತ್ತಿಲ್ಲ…. ಆದರೆ ನಾನು ಹೇಳಲೇಬೇಕಾಗಿದೆ”…. ಎಂದು ಅವಳ ಮುಖವನ್ನೇ ಸೂಕ್ಷ್ಮವಾಗಿ ಗಮನಿಸುತ್ತಾ ವೈದ್ಯರು ನುಡಿದರು. ವೈದ್ಯರು ಹೇಳಿದ ಎಲ್ಲಾ ಸಂಗತಿಗಳನ್ನು ಕೇಳಿ ಈಗಾಗಲೇ ಆಘಾತಕ್ಕೆ ಒಳಗಾಗಿದ್ದ ಹುಡುಗಿ ಇನ್ನೂ ಏನು ಹೇಳುವರೋ ಎನ್ನುವ ಭಯ ಹಾಗೂ ಆತಂಕದಿಂದ ವೈದ್ಯರಡೆಗೆ ನೋಡಿದಳು. ಅವಳ ಆ ನೋಟವನ್ನು ಕಂಡು ವೈದ್ಯರ ಮನಸ್ಸು ಮರುಗಿತು. ಆದರೆ ಹೇಳದೆ ಬೇರೆ ಮಾರ್ಗವಿರಲಿಲ್ಲ….. “ಮಗೂ ನಿನ್ನ ಅಮ್ಮ ಮರಣ ಹೊಂದಿದ ಬಳಿಕ ಆಕೆಯ ಶವ ಶರೀರವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳುವಂತೆ ಇಲ್ಲ…. ಆಂತರಿಕ ಅಂಗಗಳ ವೈಫಲ್ಯದಿಂದಾಗಿ ಸುಮತಿಯ ಶರೀರದಲ್ಲಿ ದಿನೇ ದಿನೇ ನೀರು ತುಂಬಿಕೊಂಡು ಊತಕ್ಕೆ ಒಳಗಾಗುತ್ತದೆ…. ಕೆಲವೊಮ್ಮೆ ಆಕೆ ಬದುಕಿರುವಾಗಲೇ ಶರೀರದ ಕೆಲವು ಭಾಗಗಳು ಒಡೆದು ನೀರು ಜಿನುಗುವ ಸಾಧ್ಯತೆ ಇರುತ್ತದೆ…. ಅದನ್ನು ತಡೆಯಲು ಕೆಲವು ಮಾತ್ರೆಗಳನ್ನು ನಾನು ಬರೆದುಕೊಡುತ್ತೇನೆ…. ಆದರೆ ಮರಣ ಹೊಂದಿದ ಕೆಲವು ಗಂಟೆಗಳ ಬಳಿಕ ಶರೀರವು ಪೂರ್ತಿ ಊದಿಕೊಂಡು ಅಲ್ಲಲ್ಲಿ ಒಡೆಯುವ ಸಾಧ್ಯತೆಗಳು ಇರುತ್ತದೆ…. ಸೂಕ್ಷ್ಮಾಣುಗಳು ದೇಹದ ಒಳಗೆ ಸೇರಿಕೊಂಡು ದೇಹವು ಬೇಗ ಕೊಳೆಯಲು ಶುರುವಾಗುತ್ತದೆ…. ದುರ್ವಾಸನೆ ಬರುತ್ತದೆ… ಹಾಗಾಗಿ ಸಾಧ್ಯವಾದಷ್ಟು ಬೇಗ ಶವಸಂಸ್ಕಾರ ಮಾಡಬೇಕಾಗುತ್ತದೆ…. ಎಂದರು.

ವೈದ್ಯರ ಮಾತನ್ನು ಕೇಳುತ್ತಾ ಕುಳಿತ ಹುಡುಗಿಯು ಕಣ್ಣಾಲಿಗಳು ತುಂಬಿ ಕೊಳಗಳಾದವು. ಗಂಟಲು ಬಿಗಿಯಿತು. ಕೇವಲ ಬಿಕ್ಕುಗಳಲ್ಲದೆ ಅವಳ ಬಾಯಿಂದ ಒಂದು ಪದವೂ ಆಚೆ ಬರಲಿಲ್ಲ. ಅಳುವನ್ನು ತಡೆದುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಳು. ಅವಳನ್ನು ಕಂಡ ವೈದ್ಯರ ಮನಸ್ಸು ಕರಗಿತು. ಕುಳಿತಲ್ಲಿಂದ ಎದ್ದು ಬಂದು ಅವಳ ತಲೆ ನೇವರಿಸುತ್ತಾ…. ನಿನಗೆ ಯಾವ ರೀತಿಯಲ್ಲಿ ಹೇಗೆ ಸಮಾಧಾನ ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ ಮಗುವೇ…. ವಿಧಿ ಎನ್ನುವುದು ಬಹಳ ಕ್ರೂರ…. ಇಂತಹಾ ಚಿಕ್ಕ ವಯಸ್ಸಿಗೇ ಅದೆಷ್ಟು ಘೋರವಾದ ಸಂಗತಿಗಳನ್ನು ನೀನು ಕೇಳಬೇಕಾಗಿ ಬಂತು…. ಸಮಾಧಾನ ಮಾಡಿಕೋ…. ನೀನು ಈ ಸ್ಥಿತಿಯಲ್ಲಿ ಸುಮತಿಯ ಬಳಿಗೆ ಹೋದರೆ ಅವಳು ಅಧೀರಳಾಗುವಳು…. ಧೈರ್ಯ ತಂದುಕೋ…. ಈ ಜಟಿಲ ಪರಿಸ್ಥಿತಿಯನ್ನು ಹೇಗಿದ್ದರೂ ನೀನು ಎದುರಿಸಲೇ ಬೇಕಾಗಿದೆ…. ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ ಮಗುವೇ”…. ಎಂದು ಆ ಹುಡುಗಿಯ ತಲೆ ಸವರುತ್ತಾ ಸಮಾಧಾನ ಮಾಡಿ…. “ಆದಷ್ಟು ಬೇಗ ನಿನ್ನ ತಾಯಿಯ ಸಂಬಂಧಿಕರಿಗೆ ವಿಷಯ ತಿಳಿಸು….. ಬರುವವರು ಯಾರಾದರೂ ಇದ್ದರೆ ಬಂದು ನೋಡಿಕೊಂಡು ಹೋಗಲಿ…. ಈಗ ಕೆಲವು ಔಷಧಿಗಳನ್ನು ಬರೆದುಕೊಡುತ್ತೇನೆ ಅದನ್ನು ಆದಷ್ಟು ಬೇಗ ತಂದು ವಾರ್ಡಿನ ನರ್ಸಿಗೆ ಕೊಡು”…ಎಂದು ಹೇಳಿ, ಸುಮತಿಗೆ ಕೊಡಬೇಕಾದ ಒಂದಿಷ್ಟು ಔಷಧಿಗಳ ಹೆಸರುಗಳನ್ನು ಚೀಟಿಯಲ್ಲಿ ಬರೆದು ಅವಳ ಕೈಗಿತ್ತರು. ಆ ಹುಡುಗಿ ಯಾಂತ್ರಿಕವಾಗಿ ಕುಳಿತಲ್ಲಿಂದ ಎದ್ದು ವೈದ್ಯರು ಕೊಟ್ಟ ಚೀಟಿಯನ್ನು ಪಡೆದುಕೊಂಡು ಅವರಿಗೆ ನಮಸ್ಕರಿಸಿ, ಕೊಠಡಿಯಿಂದ ಆಚೆ ಬಂದಳು. ತನ್ನ ಸುತ್ತಲಿರುವ ಪ್ರತಿಯೊಂದು ವಸ್ತುಗಳು ಅಪರಿಚಿತವಾಗಿ ಅವಳಿಗೆ ಕಂಡಿತು. ಸ್ವಲ್ಪ ಹೊತ್ತು ಅಲ್ಲಿಯೇ ಇದ್ದ ಬೆಂಚಿನ ಮೇಲೆ ಕುಳಿತುಕೊಂಡು ತನ್ನನ್ನು ತಾನು ಸಮಾಧಾನ ಪಡಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದಳು.


About The Author

Leave a Reply

You cannot copy content of this page

Scroll to Top