ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ–32

ನಮ್ಮ ಆಫೀಸಿನ ಮುಂದಿನ ರಸ್ತೆಯಲ್ಲಿಯೇ ಒಂದು ಎಂಟು ನಿಮಿಷ ನಡೆದರೆ ಸಂತೆ ನಡೆಯುವ ಸಂತೆ ಮಾಳ ಅಥವಾ ಬಯಲು. ನಾವು ಮಧ್ಯಾಹ್ನ ಭೋಜನ ವಿರಾಮ ವೇಳೆಯಲ್ಲಿ ಬೇಗ ಬೇಗ ಊಟ ಮುಗಿಸಿ ಸಂತೆಗೆ ಹೋಗುತ್ತಿದ್ದೆವು. ಸಾಮಾನ್ಯವಾಗಿ ನಾನು ಇಂದುಮತಿ ಮತ್ತು ಶಶಿಕಲಾ ಹೋಗುತ್ತಿದ್ದೆವು.. ನಂತರ ಗಂಗಾ ಮತ್ತು ಫಾತಿಮಾ ವರ್ಗವಾಗಿ ಬಂದಮೇಲೆ ಅವರೂ ಬರುತ್ತಿದ್ದರು.
ಮೊದಲಿಗೆ ಸಂತೆಯಲ್ಲಿದ್ದ ಮೂರು ನಾಲ್ಕು ಸಾಲುಗಳನ್ನು ಒಂದು ಬಾರಿ ಕಣ್ಣಾಡಿಸಿ ಬರುವುದು. ನಂತರ ಎಲ್ಲಿ ಚೆನ್ನಾಗಿದೆಯೋ ಹಾಗೂ ಬೆಲೆ ಕಡಿಮೆ ಇರುತ್ತದೆಯೋ ಅಲ್ಲಿ ತೆಗೆದುಕೊಳ್ಳುವುದು.. ನಾನು ಅಮ್ಮನ ಮನೆಗೂ ಸೇರಿಸಿ ತರಕಾರಿ ತೆಗೆದುಕೊಂಡು ಬರುತ್ತಿದ್ದೆ .ಸಾಮಾನ್ಯ ನನ್ನ ಬ್ಯಾಗ್ ತೂಕವಾಗಿ ಇರುತ್ತಿತ್ತು. ಈಗಾದರೆ ಅಷ್ಟು ಭಾರ ಹೊತ್ತು ಎಂಟು ನಿಮಿಷ ನಡೆಯಲು ಆಗುತ್ತಿತ್ತೋ ಇಲ್ಲವೋ ಹಾಗಂತು ನಿರಾಯಾಸವಾಗಿ ತೆಗೆದುಕೊಂಡು ಬರುತ್ತಿದ್ದೆವು. ಸಂಜೆ ಮಾತ್ರ ಆಟೋ ಹಿಡಿದು ಹೋಗುತ್ತಿದ್ದೆವು. ಸಾಮಾನ್ಯ ಅಲ್ಲಿ ತರಕಾರಿ ಬೆಳೆದವರೇ ತಂದು ಮಾರುತಿದ್ದುದರಿಂದ ತುಂಬಾ ತಾಜಾ ಆಗಿಯೂ ಇರುತ್ತಿತ್ತು ಅಲ್ಲದೆ ಮೈಸೂರಿಗಿಂತ ಬಹಳ ಕಡಿಮೆ ದರದಲ್ಲಿಯೇ ಸಿಗುತ್ತಿದ್ದುದಿ ಒಂದು ಕಾರಣ. ಸೊಪ್ಪಂತೂ ತುಂಬಾ ಚೆನ್ನಾಗಿರುತ್ತಿತ್ತು. ಆದರೆ ನಾವು ಸಂತೆಯಲ್ಲಿ ಸೊಪ್ಪನ್ನು ತೆಗೆದುಕೊಳ್ಳುತ್ತಿರಲಿಲ್ಲ. ಮಧ್ಯಾಹ್ನ ತೆಗೆದುಕೊಂಡು ಸಂಜೆಯ ವೇಳೆಗೆ ಬಾಡಿ ಹೋಗುತ್ತದೆ ಎನ್ನುವುದು ಒಂದು ಕಾರಣವಾದರೆ ರೈಲ್ವೆ ಸ್ಟೇಷನ್ ಪಕ್ಕದಲ್ಲಿಯೇ ಒಂದು ತರಕಾರಿ ಮಾರುಕಟ್ಟೆ ಇತ್ತು. ಅಲ್ಲಿ ತುದಿಯಲ್ಲಿಯೇ ಒಂದು ಅಜ್ಜಿ ಸೊಪ್ಪು ಮಾರುತ್ತಾ ಕುಳಿತಿರುತ್ತಿತ್ತು. ಸಾಮಾನ್ಯ ಆಕೆಯ ಬಳಿಯೇ ತೆಗೆದುಕೊಂಡು ರೈಲು ಹತ್ತುತ್ತಿದ್ದುದು. ಅದು ಶುಕ್ರವಾರ ಮಾತ್ರ ಸೊಪ್ಪು ತೆಗೆದುಕೊಳ್ಳದೆ ಬೇರೆ ದಿನಗಳಲ್ಲಿ ತೆಗೆದುಕೊಳ್ಳುತ್ತಿದ್ದೆವು.. ಕಸಿ ಮಾಡಿದ ದೊಡ್ಡ ಗಾತ್ರದ ಬದನೆಕಾಯಿ ಒಳಗೆ ಒಂದು ಬೀಜವು ಇರದೆ ಬೆಣ್ಣೆಯಂತೆ ಕರಗಿ ಹೋಗುತ್ತಿತ್ತು. ಎಳೆ ಹುರಳಿ ಕಾಯಿ ಗೋರಿಕಾಯಿ ಹೀರೆಕಾಯಿಗಳು ನೋಡಿದರೆ ತಿನ್ನುವಷ್ಟು ಆಸೆ ಆಗುತ್ತಿತ್ತು. ಕ್ಯಾರೆಟ್ ಸಹ ಚೆನ್ನಾಗಿಯೇ ಸಿಗುತ್ತಿತ್ತು. ಹೀಗಾಗಿ ಎಲ್ಲ ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಅವರೇ ಕಾಯಿ ಮತ್ತು ಸೊಪ್ಪು ಮಾತ್ರ ರೈಲ್ವೆ ಸ್ಟೇಷನ್ ಬಳಿಯಲ್ಲಿಯೇ ತೆಗೆದುಕೊಳ್ಳುತ್ತಿದ್ದು ಹೊತ್ತುಕೊಂಡು ಹೋಗಬೇಕಲ್ಲ ಎನ್ನುವುದು ಒಂದಾದರೆ ಅಲ್ಲೂ ಸಹ ಇದೇ ದರದಲ್ಲಿ ಸಿಗುತ್ತಿದ್ದುದು ಮತ್ತೊಂದು ವಿಶೇಷ.

ಮತ್ತೊಂದು ಬಾರಿ ವರ್ಗಾವಣೆ ಚಕ್ರ ಉರುಳಿತು. ಈ ಬಾರಿ ಸುಲೋಚನಾ ಅವರಿಗೆ ಚಾಮರಾಜನಗರದಿಂದ ನಂಜನಗೂಡಿಗೆ ವರ್ಗ ಸಿಕ್ಕಿತ್ತು .ಅದರ ಜೊತೆಯಲ್ಲಿ ಈ ಮೊದಲು ನನ್ನ ಜೊತೆ ವಿಭಾಗೀಯ ಕಚೇರಿಯಲ್ಲಿ ಇದ್ದ ಸುಮಾ ಸಹ ಕೆಆರ್ ಪೇಟೆಯಿಂದ ನಂಜನಗೂಡಿಗೆ ವರ್ಗವಾಗಿ ಬಂದಳು. ನಮ್ಮ ರೈಲಿನಲ್ಲಿ ಓಡಾಡುವ ಬಳಗಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಯಿತು. ಫಾತಿಮಾ ಹಾಗೂ ವೈದೇಹಿ ಅವರು ಅದರ ಮುಂದಿನ ಸುತ್ತಿನಲ್ಲಿ ವರ್ಗವಾಗಿ ಬಂದರು. ಅವರಿಬ್ಬರೂ ಬಸ್ ನಲ್ಲಿ ಓಡಾಡುತ್ತಿದ್ದರು.
ಸುಲೋಚನ ಬಂದದ್ದು ಒಂದು ಅನುಕೂಲ ಏನಾಯಿತೆಂದರೆ ಮೈಸೂರಿನಿಂದ ನೀರು ಹೊತ್ತುಕೊಂಡು ಹೋಗುವುದು ತಪ್ಪಿತು. ಅವರ ಮನೆಯಿಂದ ಆಟೋದಲ್ಲಿ ಬರುತ್ತಿದ್ದುದರಿಂದ ದಿನಾ ನಾನೇ ನೀರು ತರುತ್ತೇನೆ ಎಂದು ಹೇಳಿದ್ದರು. ರಜೆ ತೆಗೆದುಕೊಳ್ಳದ ಚಿಕ್ಕ ಪುಟ್ಟ ಹಬ್ಬಗಳು ನಂಜನಗೂಡಿನ ದೊಡ್ಡ ಜಾತ್ರೆ ಇಂತಹ ದಿನಗಳೆಲ್ಲ ಅವರ ಮನೆಗೆ ಆಟೋದಲ್ಲಿ ಹೋಗಿ ಊಟ ಮಾಡಿ ಬರುತ್ತಿದ್ದೆವು. ಅವರಿಗೆ ಕಚೇರಿ ಸೇವಾ ವಿಭಾಗವನ್ನು ಕೊಟ್ಟಿದ್ದರು. ಸುಮಾಗೆ ಲೆಕ್ಕ ಪತ್ರ ವಿಭಾಗ. ಈ ಸುತ್ತಿನಲ್ಲಿ ನನಗೆ ಮೊದಲೇ ಹೇಳಿದಂತೆ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಕೊಟ್ಟರು .ಅಲ್ಲಿ ನಾನು ಲೋನ್ಸ್ ಅಂದರೆ ಸಾಲ ವಿಭಾಗಕ್ಕೆ
ನಿಯುಕ್ತಳಾದೆ. ಅಲ್ಲಿ ಆಗ ನಾರಾಯಣಸ್ವಾಮಿ ಅವರು ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದರು. ಆಗೆಲ್ಲ ಒಂದೇ ಸಾವಿರದ ಒಳಗೆ ಸಾಲ ಇದ್ದಾಗ ಅದನ್ನು ನಗದು ರೂಪದಲ್ಲಿಯೇ ಕೊಡುತ್ತಿದ್ದರು .ಹಾಗಾಗಿ ಒಂದು ರೀತಿಯ ಒತ್ತಡದಲ್ಲಿಯೇ ಕೆಲಸ ಮಾಡಬೇಕಿತ್ತು ಆದರೂ ಖುಷಿ ಕೊಡುತ್ತಿತ್ತು. ತುಂಬಾ ಅನಿವಾರ್ಯ ಸ್ಥಿತಿಯಲ್ಲಿ ಸಾಲ ಬೇಕಾದವರಿಗೆ ತಕ್ಷಣ ಮಾಡಿಕೊಟ್ಟಾಗ ಅವರು ತೋರಿಸುತಿದ್ದ ಕೃತಜ್ಞತಾ ಭಾವ ಸಾರ್ಥಕ ಭಾವನೆ ಮೂಡಿಸುತ್ತಿತ್ತು.

ಹೋದ ಕೆಲವು ದಿನಗಳಲ್ಲೇ ಅಲ್ಲಿನ ನಿಯತಕಾಲಿಕೆಗಳ ವಿತರಣೆ ಕೆಲಸ ಮತ್ತೆ ಈ ಶಾಖೆಯಲ್ಲಿಯೂ ನನ್ನನ್ನೇ ಅರಸಿ ಬಂದಿತ್ತು ಅದು ತುಂಬಾ ಇಷ್ಟದ ಕೆಲಸವಾದ್ದರಿಂದ ಒಪ್ಪಿಕೊಳ್ಳಲು ನಿರಾಕರಿಸಲಿಲ್ಲ. ಆಗ ಪಾಲಿಸಿ ಸೇವಾ ವಿಭಾಗದಲ್ಲಿನ ನಮ್ಮ ತಂಡ ತುಂಬಾ ಚೆನ್ನಾಗಿತ್ತು ನಾಗಮಣಿ ಗಿರಿಜಾ ಮತ್ತು ನಾನು ಉನ್ನತ ದರ್ಜೆ ಸಹಾಯಕಿಯರು. ಈ ಸಮಯದಲ್ಲಿ ತುಂಬಾ ದುಃಖಕರ ಘಟನೆ ಒಂದು ನಡೆಯಿತು .ಹೊಸ ವ್ಯವಹಾರ ವಿಭಾಗದಲ್ಲಿ ನನ್ನ ಜೊತೆಗೆ ಸಹಾಯಕರಾಗಿ ಇದ್ದ ಮಹಾದೇವನ್ ಅವರ ಆಘಾತಕಾರಿ ಸಾವು. ಉತ್ತರ ಭಾರತಕ್ಕೆ ಪತ್ನಿಯೊಂದಿಗೆ ಪ್ರವಾಸ ಹೋಗಿದ್ದಾಗ ಗಂಗಾನದಿಯ ನೀರಿನ ಸೆಳೆತಕ್ಕೆ ಅವರ ಪತ್ನಿ ಕೊಚ್ಚಿ ಹೋದರು .ಅವರನ್ನು ಹಿಡಿಯಲು ಇವರು ಅವರ ಹಿಂದೆಯೇ ಧುಮುಕಿದರು. ಬೇರೆ ನುರಿತ ಈಜುಗಾರರು ಅವರಿಬ್ಬರನ್ನು ದಡಕ್ಕೆ ಎಳೆದು ತರುವಷ್ಟರ ಮಹದೇವನ್ ಅವರ ಪ್ರಾಣ ಹೋಗಿಬಿಟ್ಟಿತ್ತು. ನಂತರ ಅವರ ಪತ್ನಿಗೆ ಅವರ ಕೆಲಸ ಸಿಕ್ಕಿತು ಇತ್ತೀಚೆಗೆ ಅವರ ಮಗಳ ಮದುವೆಯೂ ಆಯಿತು. ಆದರೂ ಬಹಳ ದಿನಗಳ ಕಾಲ ಕಾಡಿದ ಸಾವು ಅದು.
ಮತ್ತೆ ಸಂತೆಯ ವಿಷಯಕ್ಕೆ ಬರುತ್ತೇನೆ. ಈ ಮೊದಲೇ ಹೇಳಿದಂತೆ ಹುಲ್ಲಹಳ್ಳಿ ಸರ್ಕಲ್ ನಿಂದ ಸಂತೆಗೆ ಹೋಗುವ ದಾರಿಯಲ್ಲಿ ಮಧ್ಯೆ ನಮ್ಮ ಆಫೀಸ್ ಇರುವುದು. ಸಂತೆ ನಡೆಯುತ್ತಿರುವುದು ಶುಕ್ರವಾರ. ನಮ್ಮ ಶಾಖೆಯಲ್ಲಿ ಮಹಿಳೆಯರ ಶೌಚಾಲಯ ಕ್ಯಾಶ್ ಕೌಂಟರ್ ನ ಎದುರಿಗೆ ಎಲ್ಲರ ಕಣ್ಣಿಗೆ ಬೀಳುವಂತೆಯೇ ಇತ್ತು .ಸಂತೆಯ ದಿನ ಸಂತೆಗೆ ಹೋಗುವ ಹೆಂಗಸರು ಸಂತೆಯ ಮಾರಾಟಗಾರ್ತಿ ಹೆಂಗಸರು ಎಲ್ಲರಿಗೂ ನಮ್ಮ ಶಾಖೆಯ ಶೌಚಾಲಯ ಒಂದು ಸಾರ್ವಜನಿಕ ಶೌಚಾಲಯದ ತರಹ ಆಗಿ ಹೋಗಿತ್ತು. ಸದಾ ತೆರೆದೇ ಇರುತ್ತಿದುದರಿಂದ ಮುಂಬಾಗಿಲಿನಿಂದ ಪ್ರವೇಶಿಸಿ ನೇರ ಅಲ್ಲಿಗೆ ಹೋಗಿ ಬಿಡುತ್ತಿದ್ದರು .ಪ್ರವೇಶ ನಿಷೇಧ ಎಂಬ ಬೋರ್ಡ್ ಹಾಕಿಸಿದರೂ ಪ್ರಯೋಜನವಾಗಲಿಲ್ಲ. ಮಕ್ಕಳನ್ನು ಕರೆದುಕೊಂಡು ಬಂದು ತುಂಬಾ ಗಲೀಜು ಮಾಡಿ ಇಡೀ ಮಧ್ಯಾಹ್ನ ನಮಗೂ ಅದನ್ನು ಉಪಯೋಗಿಸಲು ಸಾಧ್ಯವಾಗದೆ ಮಹಡಿಯ ಮೇಲಿದ್ದ ಬೇರೊಂದು ಶೌಚಾಲಯವನ್ನು ನಾವು ಸಿಬ್ಬಂದಿಯವರು ಉಪಯೋಗಿಸಿಬೇಕಾಗಿತ್ತು. ಮಾರನೆಯ ದಿನ ಬಂದ ಸ್ವಚ್ಛತಾ ಸಿಬ್ಬಂದಿಯವರು ಶಾಖಾಧಿಕಾರಿಗಳ ಬಳಿ ಅದನ್ನು ಹೇಳಿ ನಂತರದಲ್ಲಿ ಅಲ್ಲಿಗೆ ಬೀಗ ಹಾಕಿ ಬೀಗದ ಕೈ ಸಿಬ್ಬಂದಿಗಳಿಗೆ ಮಾತ್ರ ಗೊತ್ತಿರುವ ಜಾಗದಲ್ಲಿ ಇಡಿಸಲಾಯಿತು .ಒಂದೆರಡು ಮೂರು ವಾರ ಬಂದವರು ಮುಚ್ಚಿದ ಬಾಗಿಲನ್ನು ನೋಡಿ ನಮ್ಮನ್ನು ಕೇಳಿದರು .ಆದರೆ ಅದು ಎಲ್ಲರ ಉಪಯೋಗಕ್ಕೆ ಅಲ್ಲ ಎಂದು ತಿಳಿದ ಮೇಲೆ ನಂತರದಲ್ಲಿ ಜನ ಹಾಗೆ ಬರುವುದು ಕಡಿಮೆಯಾಯಿತು. ಆದರೆ ನಾನು ವಾಪಸ್ ಮೈಸೂರಿಗೆ ಬರುವವರೆಗೂ ಶುಕ್ರವಾರದ ದಿನ ಅದಕ್ಕೆ ಬೀಗ ಹಾಕಿಯೇ ಇಡುತ್ತಿದ್ದೆವು.
ಅದು ತಪ್ಪು ನಾವು ಹಾಗೆ ಮಾಡಬಾರದಿತ್ತು ಎಂದೆನಿಸಿದರೂ ಬಂದವರು ಕನಿಷ್ಠ ಸ್ವಚ್ಛತೆಯ ನಿಯಮಗಳನ್ನು ಪಾಲಿಸದೆ ತುಂಬಾ ಗಲೀಜು ಮಾಡಿ ಬಿಡುವುದರಿಂದಲೂ, ಮಧ್ಯಾಹ್ನದ ವೇಳೆ ನಾವು ಆ ಮಹಿಳಾ ಕೊಠಡಿಯಲ್ಲಿ ಊಟ ಮಾಡಬೇಕಾಗಿದ್ದರಿಂದ ಆ ಕೊಳಕನ್ನು ಸಹಿಸಲು ಸಾಧ್ಯವಾಗದಿದ್ದುದು ಈ ನಡೆಗೆ ಕಾರಣವಾಗಿತ್ತು .ನಂತರ ಸ್ವಚ್ಛತಾ ಸಿಬ್ಬಂದಿ ವಿರೋಧ ಬಂದ ಮೇಲಂತೂ ನಮ್ಮ ಅಪರಾಧಿ ಮನೋಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು.
ನಾವು ಮಹಿಳಾ ಬೋಗಿಯಲ್ಲೇ ದಿನ ಓಡಾಡುತ್ತಿದ್ದುದು ಎಂದು ಹೇಳಿದೆನಲ್ಲ ಅಲ್ಲಿ ನಮಗೆ ಬೇರೆ ಬ್ಯಾಂಕಿನ ಮತ್ತು ರಾಜ್ಯ ಸರ್ಕಾರಿ ನೌಕರಿಯ ಗೆಳತಿಯರು ಸಿಕ್ಕಿದರು. ಕೆನರಾ ಬ್ಯಾಂಕಿನ ನನ್ನದೇ ಹೆಸರಿನ ಸುಜಾತ ಎನ್ನುವವರು ಅಲ್ಲದೆ ಕಮರ್ಷಿಯಲ್ ಟ್ಯಾಕ್ಸ್ ಆಫೀಸಿನ ಗೀತಾ ಮತ್ತು ಸರಸ್ವತಿ ರಾಜ್ಯ ಸರ್ಕಾರದ ನೌಕರಿಯಲ್ಲಿದ್ದ ಉಮಾ ಮತ್ತು ಇನ್ನೊಬ್ಬರು ಹೆಸರು ಮರೆತು ಹೋಗಿದೆ. ಮತ್ತೆ ಕಡ ಕೊಳದ ಹಿಟ್ಟಿನ ಕಾರ್ಖಾನೆಯಲ್ಲಿ ಕೆಲಸದಲ್ಲಿದ್ದ ಪೂರ್ಣಿಮಾ ಮತ್ತು ಅನಿತಾ ನಾವೆಲ್ಲ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು. ಉಮಾ ಅವರ ಮನೆಯಲ್ಲಿ ಜಾಜಿ ಹೂ ಬಿಡುತ್ತಿದ್ದುದರಿಂದ ಅವರು ತರುತ್ತಿದ್ದರು. ಆದರೆ ಕಟ್ಟಲು ಸಮಯವಾಗುತ್ತಿರಲಿಲ್ಲ . ದಿನಾ ರೈಲಿನಲ್ಲಿ ನಾನೇ ಕಟ್ಟಿಕೊಡುತ್ತಿದ್ದೆ . ನನಗೂ ಅದರಲ್ಲಿ ಪಾಲು ಇರುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ನಾನು ಮನೆಯಲ್ಲಿ ತಿನ್ನಲು ಸಮಯವಾಗದಿದ್ದದರಿಂದ ಹಾಗೂ ಬೇಗ ಆಗುತ್ತಿದುದರಿಂದ ತಿಂಡಿಯನ್ನು ಸಹ ರೈಲಿನಲ್ಲಿ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದೆ. ಆ ಸಮಯದಲ್ಲಿ ಪೂರ್ಣಿಮಾ ಅವರು ಗರ್ಭಿಣಿಯಾಗಿದ್ದರು. ಅವರಿಗೆ ನಮ್ಮ ಮನೆಯ ಮೆಂತ್ಯದ ಹಿಟ್ಟಿನ ಗೊಜ್ಜು ಹಾಗೂ ಹುಳಿ ಅನ್ನ ತುಂಬಾ ಇಷ್ಟವಾಗುತ್ತಿತ್ತು. ಸಾಮಾನ್ಯ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅವರು ಹೆರಿಗೆ ರಜೆ ಹೋಗುವ ಮೊದಲು ನಾವು ನಮ್ಮ ಬೋಗಿಯಲ್ಲಿ ಅವರಿಗೆ ಒಂದು ಸೀರೆ ಬಳೆ ಮಲ್ಲಿಗೆ ಹೂವು ಕೊಟ್ಟು ಅಂದಿನ ದಿನ ಸಿಹಿ ತಿನಿಸು ಮಾಡಿ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು. ಆನಂತರದಲ್ಲಿ ಅವರು ನನ್ನ ತಂಗಿಯ ಪತಿ ಮುರಳಿ ಅವರ ಸಂಬಂಧಿ ಎಂದು ತಿಳಿಯಿತು. ಈಗಲೂ ಅವರ ಸಂಪರ್ಕ ಇದೆ ಸರಸ್ವತಿ ಅವರ ಮಗನ ಮದುವೆಗೆ ಆಹ್ವಾನಿಸಿದ್ದರು. ಅದಕ್ಕೂ ಹೋಗಿದ್ದೆ .ಈಗ ಅವರು ಎಲ್ಲ ನಿವೃತ್ತರಾಗಿರಬಹುದು. ಇತ್ತೀಚೆಗೆ ನನ್ನ ಗೆಳತಿ ಸಹೋದ್ಯೋಗಿ ಮಂಗಳಾಂಬ ಅವರ ಮಗನ ಮದುವೆಯಲ್ಲಿ ಉಮಾ ಮತ್ತು ಪರಮೇಶ್ವರ ಅವರು ಸಿಕ್ಕಿದ್ದರು. ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡೆವು ಈಗ ಅವರು ಸಹ ಸಂಪರ್ಕದಲ್ಲಿ ಇದ್ದಾರೆ.
ತುಂಬಾ ಚೆನ್ನಾಗಿ ಬಾಂಧವ್ಯ ಇತ್ತು. ರೈಲಿನಲ್ಲಿ ಓಡಾಡುವುದೆಂದರೆ ತುಂಬಾ ಸಂತೋಷವಾಗುತ್ತಿತ್ತು. ಗೆಳತಿಯರು ಅಷ್ಟೇ ಅನ್ಯೋನ್ಯವಾಗಿದ್ದೆವು. ಅದನ್ನೆಲ್ಲ ನೆನೆದರೆ ತುಟಿ ಅಂಚಿನಲ್ಲಿ ಮುಗುಳ್ನಗೆ ಬಿರಿಯುತ್ತದೆ. ಖುಷಿಯ ಕ್ಷಣಗಳು ನೆನಪಾಗುತ್ತದೆ.
ಸವಿ ನೆನಪುಗಳು ಬೇಕು ಸವಿಯಲೀ ಬದುಕು ಅಲ್ಲವೇ?(ಮುಂದುವರೆಯುವುದು)
ಸುಜಾತಾ ರವೀಶ್




